ಅನಾದಿ ಕಾಲದಿಂದ ವಿಶ್ವದಾದ್ಯಂತ ಜನರು ತಮ್ಮದೇ ಆದ ಧಾರ್ಮಿಕ ತತ್ವಗಳನ್ನು ವಿಧೇಯರಾಗಿ ಪರಿಪಾಲಿಸುತ್ತಿದ್ದಾರೆ. ಆದರೆ ಪರಿಣಾಮ ಮಾತ್ರ ನಮ್ಮಲ್ಲಿ ಸ್ವಾರ್ಥತೆ, ಪಕ್ಷಪಾತ, ಅಹಂಕಾರ, ಸಂಕುಚಿತ ಮನೋಭಾವ ಹಾಗೂ ಪ್ರಾಪಂಚಿಕ ಲಾಭ ಮತ್ತು ಸೌಖ್ಯತೆಗಳಲ್ಲಿ ಪರ್ಯವಸನವಾದುದನ್ನು ಕಾಣುತ್ತೇವೆ. ನಮ್ಮ ಜಗತ್ತಿನ ಹಿಂದಿನ ಸಂತರ ತತ್ವಗಳ ಅನುಸರಣೆಯ ಉದ್ದೇಶ ಇದೇ ಆಗಿತ್ತೇ?. ಆ ತತ್ವಗಳ ಅನುಸರಣೆಯು ಆಪೇಕ್ಷಿತ ಪರಿಣಾಮ ಬೀರದಿದ್ದಾಗ ಎಲ್ಲಿಯೋ ಏನೋ ಲೋಪವಿದೆಯೆಂದೆನಿಸುವದು. ಇದನ್ನು ಮನಗಂಡು ಮತ್ತು ಕಾಲದ ಅವಶ್ಯಕತೆಗನುಸಾರವಾಗಿ ನಮ್ಮ ಸದ್ಗುರುಗಳಾದ ಶಹಜಾನಪುರ (ಉ.ಪುದ ನಿವಾಸಿಗಳಾದ ಶ್ರೀ ರಾಮಚಂದ್ರಜಿ ಮಹರಾಜರು 1945 ನೇ ಇಸ್ವಿಯಲ್ಲಿ ತಮ್ಮ ಸದ್ಗುರು ಶ್ರೀ ಲಾಲಾಜಿ ಮಹರಾಜರ ಹೆಸರಿನಲ್ಲಿ ಆಧ್ಯಾತ್ಮಿಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಮಾನವ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದು ಕ್ರಾಂತಿಕಾರಕ ವಿಚಾರ ಜನ್ಮ ತಾಳಿತು. ಗುರುಗಳು ವಿಶ್ವದಾದ್ಯಂತ ಸಂದೇಶವನ್ನು ತಮ್ಮದೇ ಆದ ರೀತಿಯಲ್ಲಿ ಬಿತ್ತರಿಸಲು ವಿಸ್ಕೃತವಾಗಿ ಪಯಣಿಸಿದರು. ನಮ್ಮ ಸಾಹಿತ್ಯದ ಗಾತ್ರ ಕ್ರಮೇಣ ವಿಸ್ತಾರಗೊಂಡಿತು. ಕಾಲ ಕಳೆದಂತೆ ಅನುಯಾಯಿಗಳ ಸಂಖ್ಯೆ ಹೆಚ್ಚಾಗಿ ಗತಿಶೀಲತೆಯನ್ನು ಪಡೆಯಿತು. ಅನೇಕ ತರಬೇತಿ ಕೇಂದ್ರಗಳು ನೆಲೆಗೊಂಡವು. ವಿವಿಧ ಕಡೆ ಆಶ್ರಮಗಳಾದವು. ಅನೇಕರು ಸಾಧನೆಯನ್ನು ಕೈಗೊಂಡರು. ಜೀವನದ ಗುರಿಯತ್ತ ವ್ಯಕ್ತಿಗತ ಸಾಧನೆಯು ಸಕ್ರಿಯವಾಗಿ ನಿರ್ದೇಶಿಸಲ್ಪಟ್ಟಿತು. ಪ್ರಸಿದ್ಧ ಸಿದ್ದಾಂತ “ಗುರು, ಧೈಯ ಮತ್ತು ಪದ್ಧತಿ” ಆಳವಾಗಿ ಬೇರೂರಲು ಆರಂಭಿಸಿತು. ತರಬೇತಿಯು ಸುಗಮವಾಗಿ ಸಾಗಿತು. ಪರಿಸ್ಥಿತಿಯು ಎಲ್ಲ ರೀತಿಯಿಂದಲೂ ಸುಧಾರಿಸಿತು. ಗುರುಗಳ ದೇಹಾವಸನದ ನಂತರ ವ್ಯವಸ್ಥೆಯಲ್ಲಿ ಅನೇಕ ತೊಡಕುಗಳ ಪರಿಣಾಮವಾಗಿ ಕವಲೊಡೆಯಿತು.

ಒಮ್ಮೆ ರಾಯಚೂರಿನಲ್ಲಿ ನಮ್ಮ ಸಂಸ್ಥೆಯಲ್ಲಿನ ಏರಿಳಿತ, ಗುಂಪುಗಾರಿಕೆ, ವಿರೋಧಾಭಾಸತೆ, ಕಾನೂನಿನ ಸಮಸ್ಯೆ, ವಾರಸುದಾರಿಕೆ ಇತ್ಯಾದಿಗಳ ಬಗ್ಗೆ ಚರ್ಚೆಯಾಯಿತು. ಇವೆಲ್ಲವುಗಳ ನಿವಾರಣೆ ಹಾಗೂ ಗುರುಮಹರಾಜರ ಉದ್ದೇಶವನ್ನು ಸಫಲಗೊಳಿಸುವ ಬಗೆ ಹೇಗೆ? ಎಂಬುದರ ಬಗ್ಗೆ ವಿಚಾರ ಎತ್ತಲಾಯಿತು. ಪೂಜ್ಯ ಶ್ರೀ ಭಾಯಿಸಾಹೇಬರು ಶಾಂತವಾಗಿ ಇದು “ಗುರುಗಳ ಉದ್ದೇಶ, ಅದರ ಚಿಂತೆ ಅವನಿಗೆ ಸೇರಿದ್ದು” ಎಂದರು. ಇದೇ ತರಹ ಇನ್ನೊಂದು ಸಂಧರ್ಬದಲ್ಲಿ ಸಾಧನೆ ಮತ್ತು ಪದ್ಧತಿಯ ಭವಿಷ್ಯದ ಮಾತು ಬಂದಾಗ ಸಂಕ್ಷೇಪವಾಗಿ “ಕಾದು ನೋಡು” ಎಂದರು. ಆಗಿನ ಅವರ ಉತ್ತರಗಳು ತೃಪ್ತಿಕರ ಹಾಗೂ ಸಮರ್ಪಕವೆಂದೆನಿಸಿದವು. ಆದಾಗ್ಯೂ ಅದರ ತಾತ್ಪರ್ಯ ನಮ್ಮ ಅರಿವಿಗೆ ಮೀರಿದಾಗಿದ್ದವು. ಸುಧೀರ್ಘ ಸಮಯದವರೆಗೆ ನೆನೆಗುದಿಗೆ ಬಿದ್ದು ಅದೊಂದು ರಹಸ್ಯದಂತೆ ಉಳಿಯಿತು.

ಗುರುಗಳು:

ಪ್ರಕೃತಿಯು ಒಂದು ತೆರೆದ ಪುಸ್ತಕದಂತೆ. ಅದರಲ್ಲಿ ರಹಸ್ಯವೆಂಬುದು ಏನೂ ಇಲ್ಲವೆಂದು ನಮ್ಮ ಗುರುಮಹರಾಜರು ಸ್ಪಷ್ಟಪಡಿಸಿದ್ದಾರೆ. ವಸ್ತುಗಳನ್ನು ವಾಸ್ತವಿಕ ದೃಷ್ಠಿಯಿಂದ ಅರ್ಥಾತ್ ಅವು ಇರುವಂತೆ ನೋಡಲು ಹಾಗೂ ಗ್ರಹಿಸಲು ಅಂತಃ ಚಕ್ಷು ಬೇಕಾಗುವದು. ವಿಶ್ವ ನಿರ್ಮಾಣ ಹಾಗೂ ಅದರಾಚೆ ಸಂಶೋಧಿಸಲು ಇದೊಂದು ಆಹ್ವಾನ ಮತ್ತು ಸವಾಲಾಗಿದೆ. ಯಾವಾಗ ನಮ್ಮ ತಿಳುವಳಿಕೆ ವಿಫಲವಾಗುವದೋ ಆಗ ಅದಕ್ಕೆ ರಹಸ್ಯದ ಪಟ್ಟಿ ಹಚ್ಚುತ್ತೇವೆ. ಮನಸ್ಸಿಲ್ಲದ ಮನಸ್ಸಿನಿಂದ ಸೋಲನ್ನು ಒಪ್ಪುತ್ತೇವೆ. ಇದು ಮಾನವನ ನಿಲುಕಿಗೆ ಮೀರಿದ್ದೆಂದು ಕರೆಯಬಹುದು. ಸಾಮಾನ್ಯ ಸ್ಥಿತಿಯಲ್ಲಿ ಇದು ಸ್ವಾಭಾವಿಕವೂ ಹೌದು. ಈಗ ನಾವು ಇಂದಿನ ವಿಶಿಷ್ಟ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸೋಣ. ನಮಗೆ ಆ ‘ಮಹಾ ಚೈತನ್ಯದ ಬೆಂಬಲವಂತೂ ಇದ್ದೇ ಇದೆ. ಇದು ಸ್ವಯಂ ವಿದಿತ ಊಹೆಯಲ್ಲ. ನಮ್ಮ ಗುರುಗಳು ಯತಾರ್ಥವಾದುದನ್ನೇ ಹೇಳಿದ್ದಾರೆ ಹಾಗೂ ಪ್ರಾಯೋಗಿಕವಾಗಿ ಸಿದ್ಧಪಡಿಸಿ ತೋರಿಸಿದ್ದಾರೆ. ಪೂಜ್ಯ ಭಾಯಿ ಸಾಹೇಬರು ಜ್ವಲಂತ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ. ಪರಿಪೂರ್ಣತೆಯ ದ್ಯೋತಕ ಹೆಸರೇ ಶ್ರೀ ರಾಘವೇಂದ್ರರಾಯರದು. ಬೇರೆ ಬೇರೆ ಸ್ಥರಗಳಲ್ಲಿ ಇನ್ನೂ ಅನೇಕ ದೃಷ್ಟಾಂತಗಳು ಇರುತ್ತವೆ. ಶ್ರೀ ಬಾಬೂಜಿ ಮಹರಾಜರ ಹೇಳಿಕೆಯಂತೆ “ನಾನು ಗುರುಗಳನ್ನು ತಯಾರಿಸುತ್ತೇನೆ, ಶಿಷ್ಯರನ್ನಲ್ಲ” ಎಂಬುದನ್ನು ಪುಷ್ಟಿಕರಿಸುವದಾಗಿದೆ. ಆದ್ದರಿಂದ ಈ ಕೆಳಗಿನ ಹೇಳಿಕೆಯು ಸಂಧರ್ಭೋಚಿತವಾಗಿದೆ.

“ಮಹಾಪುರುಷರು ಆಕಸ್ಮಿಕವಾಗಿ ಜನ್ಮ ತಾಳುವದಿಲ್ಲ. ಹಾಗೂ ಅವರ ಜೀವನ ಧೈಯವು ಸುಲಭವಾಗಿ ಪರಿಪೂರ್ಣಗೊಳ್ಳುವದಿಲ್ಲ”. ನಮ್ಮ ಶ್ರೇಷ್ಠ ಗುರುಗಳು ಕಾಲದ ಅವಶ್ಯತೆಗನುಗುಣವಾಗಿ ಜೀವನಾದರ್ಶವನ್ನು ಸಫಲಗೊಳಿಸಲು ನಮಗೆ ಒಪ್ಪಿಸಿದ್ದಾರೆ. ನಾವು ಅವರ ಕಾರ್ಯವನ್ನು ಸಫಲಗೊಳಿಸುವ ಅದೃಷ್ಟಶಾಲಿಗಳಾಗಿದ್ದು ಅದರೊಂದಿಗೆ ಒಂದು ದೊಡ್ಡ ಜವಾಬ್ದಾರಿಯು ನಮ್ಮ ಪಾಲಿಗೆ ಬಂದಿದೆ. ಚಿಂತನೆಯ ಮತ್ತು ಕಾರ್ಯ ನಿರ್ವಹಣೆಯ ಸ್ವಾತಂತ್ರವನ್ನು ನಮಗೆ ನೀಡಿ, ಗುರುಗಳು ನಮ್ಮ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದ್ದಾರೆ.(ಸಹಪಥಿಕನ ಕರೆ, ಪುಟ-1) ಇದು ಸ್ಪಷ್ಟ ಹಾಗೂ ಛದ್ಮವೇಷ ಧರಿಸಿದ ಮುನ್ನೆಚ್ಚರಿಕೆಯಾಗಿದೆ. ಮಹಾತ್ಮರು ಹಾಗೂ ಅವರ ಉದ್ದೇಶದ ಬಗ್ಗೆ ಹೇಳುವಾಗ ಲೇಖಕರು “ನಮ್ಮ ಮಹಾನ್ ಗುರುಗಳು” ಎಂಬ ವಿಶಿಷ್ಟ ಸಂಭೋಧನೆಯನ್ನು ಮಾಡಿದ್ದಾರೆ. ಈ ಶಬ್ದದಲ್ಲಿ ಅನಂತತೆಯೇ ಅಡಗಿದೆ. ಅವರ ಉದ್ದೇಶ ಕಾಲದ ಅಗತ್ಯಕನುಸಾರವಾಗಿದೆ. ಹಾಗಾದರೆ ಕಾಲದ ಅಗತ್ಯತೆ ಏನು? ಅದನ್ನು ಹೀಗೆಯೇ ಎಂದು ಹೇಳುವದು ಕಷ್ಟಕರ. ಆದಾಗ್ಯೂ ಈ ಕೆಳಗಿನ ಅಂಶಗಳಲ್ಲಿ ಪ್ರಸ್ತುತಪಡಿಸಲಾಗಿದೆ.

  1. ಮಾನವನು ತನ್ನ ಮೂಲ ಸ್ಥಿತಿಯನ್ನು ಮರೆತಿದ್ದಾನೆ.
  2. ಅವನು ಜೀವನದ ಗುರಿ ಮತ್ತು ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದಾನೆ.
  3. ಅವನ ವಿಚಾರ ಶಕ್ತಿಗೆ ಪ್ರಾಪಂಚಿಕ ಮತ್ತು ಇಂದ್ರಿಯಗಳ ಪರಿಣಾಮದಿಂದ ಗ್ರಹಣ ಆವರಿಸಿದೆ.

ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಇಂದಿನ ಅವಶ್ಯಕತೆಗೆ ತಕ್ಕಂತೆ ಮೂಲಭೂತ ಬದಲಾವಣೆಯ ಅಗತ್ಯವಿದೆ. ಮುಂದುವರೆದು ಲೇಖಕರು ವಯಕ್ತಿಕ ಜವಾಬ್ದಾರಿ ಹಾಗು ವಿಚಾರ ಮತ್ತು ಕಾರ್ಯಾಚರಣೆಯ ಸ್ವಾತಂತ್ರದ ಬಗ್ಗೆ ಹೇಳಿದ್ದಾರೆ. ಜವಾಬ್ದಾರಿ ಹಾಗೂ ಸ್ವಾತಂತ್ರ್ಯಗಳೆರಡೂ ಜೊತೆಜೊತೆಯಾಗಿಯೇ ಇರುವಂತಹವು. ಒಂದು ವೇಳೆ ಸ್ವಾತಂತ್ರ್ಯವು ಜವಾಬ್ದಾರಿಯೊಂದಿಗೆ ಸಹಕರಿಸಿದರೆ ಪರಿಣಾಮವು ಸಾಮರಸ್ಯತೆ ಇಲ್ಲವಾದರೆ ವಿರಸತೆ. ಬದಲಾವಣೆ ಮತ್ತು ಸಾಮರಸ್ಯತೆಗಳು ಕೇಂದ್ರಸ್ಥಾನವನ್ನು ಆಕ್ರಮಿಸುತ್ತವೆ. ಸಮಾಜವು ಅವುಗಳ ಮುಖಾಂತರವೇ ಕಾಲದ ಅಗತ್ಯಗಳನ್ನು ಮನಗಾಣುತ್ತದೆ. ಆಗ ಹೇಳಿಕೆಯು ಅರ್ಥಗರ್ಭಿತವಾಗುತ್ತದೆ. ಪ್ರತಿಯೊಬ್ಬರೂ ಇದನ್ನು ಆಳವಾಗಿ ಯೋಚಿಸಬೇಕು.

ಧೈಯ:

ಇತಿಹಾಸವು ನಮಗೆ ಕೆಲವು ಪಾಠಗಳನ್ನು ಕಲಿಸಿದೆ. ಅವತಾರಗಳ ಉದಾಹರಣೆಗಳು ನಮ್ಮೆದುರಿಗಿವೆ. ಶ್ರೀ ರಾಮನು ಅಸುರ ರಾಜನಾದ ರಾವಣನ ವಿರುದ್ಧ ಯುದ್ಧ ಹೂಡಿದನು. ಲಂಕೆಯಲ್ಲಿ ಭೀಕರ ಅನಾಹುತವಾಯಿತು. ಶ್ರೀ ಕೃಷ್ಣನು ಮಹಾಭಾರತ ಯುದ್ಧವನ್ನು ಯೋಜಿಸಿದನು. ಇದು ಕಲ್ಪನಾತೀತ ವಿನಾಶಕಾರಿಯಾಗಿ ಪರಿಣಮಿಸಿತು. ಪವಿತ್ರ ಗ್ರಂಥಗಳಾದ “ರಾಮಾಯಣ ಮತ್ತು ಮಹಾಭಾರತ” ಅವುಗಳ ಸಮಗ್ರ ವರ್ಣನೆಯನ್ನು ಕೊಡುತ್ತವೆ. ಸೀತೆಯ ಅಪಹರಣ ದೌಪದಿಯ ಮಾನಭಂಗಗಳು ಆ ಯುದ್ಧಗಳಿಗೆ ಪ್ರಚೋದಕವಾದವು. ಅಂದಿನ ಪರಿಸ್ಥಿತಿಗೆ ಯುದ್ಧವೊಂದೇ ಸೂಕ್ತವಾದ ಮಾರ್ಗವೆಂದು ತೀರ್ಮಾನಿಸಲಾಯಿತು. ದಿಗ್ದಮೆಗೊಳಿಸುವ ಶ್ರೇಷ್ಠ ಶಕ್ತಿಗಳು (ಭೀಷ್ಮ, ದ್ರೋಣ ಮತ್ತು ಕರ್ಣ)ಮತ್ತು ಕೀರ್ತಿವೆತ್ತ ಬೆಂಬಲಿಗರು ಇದ್ದಾಗ್ಯೂ ಧರ್ಮವಿರೋಧಕರು ಅಪ- ಜಯವನ್ನನುಭವಿಸ ಬೇಕಾಯಿತು. ಅಧರ್ಮದ ಎದುರಾಳಿಗಳು ಜಯಗಳಿಸಿದರು. ಇದು ಧರ್ಮ-ಅಧರ್ಮಗಳ ನಡುವಿನ ಹೋರಾಟವಾಯಿತು. ಈಗ ಉದ್ಭವಿಸುವ ಪ್ರಶ್ನೆಯೆಂದರೆ ಪ್ರಚೋದಿತ ಘಟನೆಯು ಆಕಸ್ಮಿಕವೋ, ಪ್ರಾಸಂಗಿಕವೊ ಅಥವಾ ಪೂರ್ವಯೋಜಿತವೋ? ವಾದ-ಪ್ರತಿವಾದಗಳು ಅವರವರ ಇಷ್ಟಕ್ಕೆ ಬಿಟ್ಟದ್ದು. ಆದರೆ ಸತ್ಯವು ಹಾಗೆಯೇ ಉಳಿಯುವದು. ಇದು ನಿಯೋಜಿತವಾದುದು. ಬ್ರಹ್ಮಾಂಡದಲ್ಲಿ ಇದರ ಯೋಜನೆ ನಿಗದಿತವಾಗಿತ್ತು. ಮಾನವ ರೂಪದಲ್ಲಿದ್ದ ಅವತಾರಿ ಪುರುಷರು ಈ ಯೋಜನೆಯನ್ನು ಕಾರ್ಯಗತಗೊಳಿಸಿದರು. ಅವರ ಉದ್ದೇಶವು ಘೋಷಿಸಲ್ಪಟ್ಟಿರಲಿ ಅಥವಾ ಘೋಷಿಸಲ್ಪಡದೆಯೇ ಇರಲಿ ಸಮಾಜದಲ್ಲಿ ಒಂದು ವ್ಯವಸ್ಥೆಯನ್ನು ತರುವದೇ ಆಗಿತ್ತು. ನಮ್ಮ ಗುರುಗಳು ಮಾನವ ರೂಪದಲ್ಲಿ ಕಾಣಿಸಿಕೊಂಡ ವಿಭೂತಿ ಪುರುಷರು.ಅವರ ದಿಟ್ಟತನದ ಘೋಷಣೆಯು ನಮ್ಮ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿದೆ (ಭವಿಷ್ಯವಾಣಿ- ಸತ್ಯೋದಯ), ಇದು ವಿಶ್ವದಲ್ಲಿ ಒಂದು ವ್ಯವಸ್ಥೆಯನ್ನು ಸ್ಥಾಪಿಸುವದಾಗಿದೆ. ಅದುವೇ “ಆಧ್ಯಾತ್ಮಿಕ ಮೌಲ್ಯಾಧಾರಿತ ನಾಗರಿಕತೆ”. ಅವರ ಮಿಷನ್ನಿನ ಉದ್ದೇಶವೂ ಇದೇ ಆಗಿರುತ್ತದೆ. ಸಾಮಾನ್ಯವಾಗಿ ಅವರ ಉದ್ದೇಶದ ಕಾರ್ಯಾಚರಣೆಯ ವಿಧಾನವು ಮಾನವನ ತಿಳುವಳಿಕೆಗೆ ಅತೀತವಾದುದು. ಇದು ಶುದ್ಧ ಪ್ರಾಯೋಗಿಕವಾಗಿದೆ. ಇದು ವಯಕ್ತಿಕ ಅನಿಸಿಕೆಗೆ ಸಂಬಂಧಿಸಿದ್ದುದು. ಇಲ್ಲಿ ತರ್ಕಕ್ಕೆ ಅವಕಾಶವಿಲ್ಲ. ಅಂತೆಯೇ ಇದು ವಿಶಿಷ್ಟವಾದದ್ದು. ಈ ಕೆಳಗಿನ ಉದಾರಣೆಯು ಅದರ ವೈಶಿಷ್ಟ್ಯವನ್ನು ಉಪಮೆಯೊಂದಿಗೆ ಸ್ಪಷ್ಟಪಡಿಸಲಾಗಿದೆ.

ಒಬ್ಬ ಹೈಸ್ಕೂಲ್ ವಿದ್ಯಾರ್ಥಿಯು ಡಾಕ್ಟರನಾಗಲು ಹಂಬಲಿಸುವನೆಂದು ಭಾವಿಸಿರಿ. ಅವನು ಹೆಚ್ಚಿನ ಅಂಕಗಳನ್ನು ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾನೆ. ಅವನು ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುತ್ತಾನೆ. ಅವನು ವಿಧ್ಯಾಭ್ಯಾಸವನ್ನು ಪೂರೈಸಿ ಡಾಕ್ಟರನಾಗಿ ಹೊರಬರುತ್ತಾನೆ. ಅವನು ತನ್ನ ಅಭ್ಯಾಸವನ್ನು ಪೂರ್ಣಗೊಳಿಸುವವರೆಗೆ ಅವನ ಧೈಯವು ಒಂದೇ ಆಗಿರುತ್ತದೆ. ಅವನಿಗೆ ಮುಂದೇನು ಮಾಡಬೇಕೆಂಬ ವಿಚಾರ ಇರಬಹುದು. ಇರದೇ ಇರಬಹುದು. ಅವನು MBBSನಾದ ನಂತರವೇ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸುವ ಹಂತದಲ್ಲಿರುವನು. ವೈದ್ಯವೃತ್ತಿಯನ್ನು ಕೈಗೊಳ್ಳುವದೋ, ಹೆಚ್ಚಿನ ಅಭ್ಯಾಸವನ್ನು ಮುಂದುವರಿಸುವದೋ ಅಥವಾ ಯಾವುದಾದರೊಂದು ವಿಷಯದಲ್ಲಿ ವಿಶೇಷ ವ್ಯಾಸಂಗ ಮಾಡುವದೋ? ಆಗಿನ ಅವನ ನಿರ್ಧಾರವು ಹಲವು ಕಾರಣಗಳನ್ನು ಅವಲಂಭಿಸಿರುತ್ತದೆ. ಅವೆಂದರೆ ಆಸಕ್ತಿ, ಯೋಗ್ಯತೆ, ಪರಿಸ್ಥಿತಿ ಮುಂತಾದವುಗಳು. ಇದೇ ಪ್ರಕಾರ ನಮ್ಮ ಶ್ರೀ ಗುರುಗಳು ಮೂಲಭೂತ ಬದಲಾವಣೆಗಾಗಿ ಬಂದರು. ಬಹುಶಃ ತಮ್ಮ ಯೋಜನೆಯ ಪ್ರಕಾರ ಕಾರ್ಯಗತಗೊಳಿಸಿದ್ದಾರೆ. ಅದೇ ಅವರ ಉದ್ದೇಶವಾಗಿದೆ. ಅವನು ಮತ್ತು ಅವನ ಧೈಯ ಒಂದೇ ಆಗಿದ್ದು ಒಂದನ್ನು ಇನ್ನೊಂದರಿಂದ ಬೇರ್ಪಡಿಸಲಾಗದು. ಆತನ ಉದ್ದೇಶದ ಒಂದು ಸ್ಪಷ್ಟ ನೋಟ ನಮ್ಮೆದುರಿಗಿದೆ. ಅವನು ಪ್ರಶಿಕ್ಷಕರನ್ನು ತಯಾರು ಮಾಡಿ ವಿವಿಧೆಡೆ ನಿಯಮಿಸಿರುವನು. ಅವರು ಜಿಜ್ಞಾಸುಗಳಿಗೆ ಆಧ್ಯಾತ್ಮಿಕ ತರಬೇತಿಯನ್ನು ಕೊಡುತ್ತಾರೆ. ಆತನ ಈ ಕೆಲಸ ಮುಂದುವರಿಯುತ್ತಲೇ ಇದೆ. ಇದು ಗುಣಧರ್ಮದಲ್ಲಿ ರಚನಾತ್ಮಕವಾಗಿದೆ. ಇದು ಕೇವಲ ಒಂದು ದಿಶೆಯ ನೋಟ ಮಾತ್ರ. ಇದು ನಮಗೆ ಗೋಚರವಾಗಬಹುದಾದ ಒಂದು ಸಣ್ಣ ಭಾಗ (Tip of iceberg). ನಮ್ಮ ಗುರುಗಳ ಉದ್ದೇಶವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ವ್ಯಕ್ತಿಯು ತನ್ನ ಜೀವನದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಅಂದರೆ ಜೀವನದ ಗುರಿಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಮುಂದಿನ ಪಯಣಕ್ಕೆ ಇದು ಮೂಲಭೂತ ಅರ್ಹತೆಯಾಗುವದು. ಆಗ ಮಾತ್ರ ಧೈಯದ ಇಣುಕುನೋಟ ಗೋಚರಿಸುವದು. ಸಾಮಾನ್ಯವಾಗಿ ಸಮಾಜವು, ಅದರಲ್ಲಿಯೂ ವ್ಯಕ್ತಿಯು ಇದನ್ನು ಎದುರಿಸಬೇಕಾಗುವದು. ಅವನಿಗೆ ಬೇಕಾಗಲಿ ಬಿಡಲಿ ಇದನ್ನು ಅನುಭವಿಸಲೇಬೇಕು. ಅದರಿಂದ ತಪ್ಪಿಸಿಕೊಳ್ಳುವ ಸಂಭವವೇ ಇಲ್ಲ. ಸಾಮಾನ್ಯ ಮನುಷ್ಯನಿಗೆ ಇದೊಂದು ಗಡುತರ ವಿಷಯ (ಜೀವನದ ಗುರಿ). ದಾಟಲು ಅಶಕ್ಯವಾದ ವಿಘ್ನವೆಂದೇ ಕರೆಯಬಹುದು. ಹೀಗಾದಾಗ ಗುರುವಿನ ಉದ್ದೇಶವು ಗೋಚರಿಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ. ಇದೇ ಕಾರಣಕ್ಕಾಗಿ ಗುರು ಮಹರಾಜರು ಪರಿಹಾರವನ್ನು ಸಹ ಕೊಟ್ಟಿದ್ದಾರೆ.

ಪದ್ಧತಿ:

ಮುಂದೆ ಬರುವ ಆಗು ಹೋಗುಗಳನ್ನು ಗಮನದಲ್ಲಿರಿಸಿಕೊಂಡು ಒಂದು ಸುವ್ಯವಸ್ಥಿತ ಪದ್ಧತಿಯನ್ನು ನಮಗೆ ಕೊಡಲ್ಪಟ್ಟಿದೆ. ಇದು ಗುಣಧರ್ಮದಲ್ಲಿ ಆಧ್ಯಾತ್ಮಿಕವೂ ಆಚರಣೆಯಲ್ಲಿ ಪ್ರಾಯೋಗಿಕವೂ ಆಗಿದೆ. ಸಾಮಾನ್ಯವಾಗಿ ಇದು ನಿರ್ಧಾರಿತ ಉದ್ದೇಶವನ್ನು ಪೂರೈಸುತ್ತದೆ. ಒಂದೆಡೆ ಈ ಪದ್ಧತಿಯು ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಮಾನವ ಜನಾಂಗಕ್ಕೆ ಆಧ್ಯಾತ್ಮದ ಮೌಲ್ಯಗಳನ್ನು ಈಗಲಾದರೂ ಅಳವಡಿಸಿಕೊಳ್ಳುವದೇ ಅಥವಾ ಬೇಡವೆ ಎಂಬುದನ್ನು ನಿರ್ಧರಿಸಲು ಆಹ್ವಾನಿಸುತ್ತದೆ. ಮತ್ತೊಂದೆಡೆ ಈ ಪದ್ಧತಿಯು ಅವಶ್ಯಕ ಮಾಧ್ಯಮವಾದ ಮಾನವನ ಮುಖಾಂತರ ಮಿಶನ್ನಿನ ಧೈಯೋದ್ದೇಶಗಳ ಈಡೇರುವಿಕೆಯನ್ನು ಖಚಿತಪಡಿಸುತ್ತದೆ. ಪದ್ಧತಿಯು ಜೀವನದ ಗುರಿಯಾಗಲಾರದು. ಅದನ್ನು ಪಡೆಯಲು ಇದು ಒಂದು ಸಾಧನೆ ಮಾತ್ರ ನಮ್ಮ ಪದ್ಧತಿಯು ವೈಯಕ್ತಿಕ ಪ್ರಯತ್ನಕ್ಕೆ ಪೂರಕವಾಗಿ ಗುರುವಿನ ಸಹಾಯವನ್ನು ಹೊಂದಿರುತ್ತದೆ. ಈ ಸಹಾಯವು ಪ್ರಾಣಾಹುತಿಯ ಮೂಲಕ ಆಗುತ್ತದೆ. ಈ ಪದ್ಧತಿಯು ವೈಜ್ಞಾನಿಕವಾಗಿದ್ದು ವ್ಯಕ್ತಿಗೆ ಮಾತ್ರ ಅನ್ವಯಿಸುತ್ತದೆ. ಅದು ಸ್ವಯಂ ಪ್ರೇರಕವೂ ಅಲ್ಲ, ಸ್ವಯಂಚಾಲಿತವೂ ಅಲ್ಲ. ಇದು ತರಬೇತಿಯಿಲ್ಲದೆ ಸಾಧ್ಯವಿಲ್ಲ. ಅದೇ ಕಾರಣದಿಂದಾಗಿ ನಮ್ಮ ಪದ್ಧತಿಯಲ್ಲಿ ತರಬೇತಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಡಲಾಗಿದೆ. ಆಧ್ಯಾತ್ಮದ ಮಾರ್ಗವನ್ನು ಪೂರ್ಣವಾಗಿ ಕ್ರಮಿಸಿದವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಕೊಡಲಾಗುತ್ತದೆ. ಸಾಧಕನನ್ನು ಸಾಕಷ್ಟು ಶುದ್ದೀಕರಣದಿಂದ ಸಿದ್ಧಗೊಳಿಸಿದ ನಂತರವೇ ತರಬೇತಿಯನ್ನು ಕೈಗೆತ್ತಿಕೊಳ್ಳಲಾಗುವದು. ಅವನು ಒಂದಾದ ನಂತರ ಒಂದು ಅಡೆ- ತಡೆಗಳನ್ನು ದಾಟುವನು. ಹಂತ ಹಂತವಾಗಿ ಅವನು ಪ್ರತಿಬಂಧಗಳನ್ನು ದಾಟುವಂತೆ ನೋಡಿಕೊಳ್ಳಲಾಗುವದು. ಗುರುಮಹರಾಜರ ಕೃಪೆಗನು- ಗುಣವಾಗಿ ವಿಕಾಸ ಪ್ರಾರಂಭವಾಗುತ್ತದೆ. ಅವನು ತನ್ನ ಜೀವನದ ಗುರಿಯತ್ತ ಹೆಜ್ಜೆ ಹಾಕತೊಡಗುವನು. ವೈಯಕ್ತಿಕ ಸಾಧನೆಯು ನಿಶ್ಚಿತವಾಗಿ ಜೀವನದ ಸಮಸ್ಯೆ ಪರಿಹರಿಸುವದು. ಇದು ನಮ್ಮ ಪದ್ಧತಿಯ ತತ್ವದ ಅನುಗುಣವಾಗಿಯೇ ಇರುವದು. ಉನ್ನತ ಸ್ಥಿತಿಯ ಹಂಬಲವಿಲ್ಲದಿದ್ದರೆ, ಸಾಧಕನು ಬೀಳುವ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಇರುವದು. ಅರ್ಥಾತ್ ವಿಶ್ವಡೈನಮೋವನ್ನು ವೈಯಕ್ತಿಕ ಡೈನಮೋದಿಂದ ಅರಿಯುವದಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ನಾಣ್ಣುಡಿಯಂತೆ ಇದೆ. ಇದೇ ಅರ್ಥದಲ್ಲಿ ಪ್ರತಿಯೊಬ್ಬನೂ ತನ್ನ ಸಾಧನೆಯನ್ನು ಸಂಯೋಜಿತ ರೀತಿಯಲ್ಲಿ ಕೈಗೊಳ್ಳುತ್ತಾನೆ. ಬಹುಶಃ ಇದುವೇ ನಮ್ಮ ಪದ್ಧತಿಯಲ್ಲಿ ಅಡಕವಾದ ಬೇಡಿಕೆ” ಪೂಜ್ಯ ಭಾಯಿ ಸಾಹೇಬರ ಈ ಕೆಳಗಿನ ಶಬ್ದಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುಗಳು ನಮಗೆ ಧ್ಯಾನ, ಶುದ್ಧಿಕರಣ, ಪ್ರಾರ್ಥನೆಯ ಪದ್ಧತಿಗಳನ್ನು ಕೊಟ್ಟಿದ್ದಾರೆ. ಅದೇ ಕಾಲಕ್ಕೆ ಅವರು ಹತ್ತು ನಿಯಮಗಳನ್ನೂ ಸಹ ಕೊಟ್ಟಿದ್ದಾರೆ. ನಾವು ಪೂಜೆ ಮಾಡುತ್ತಿದ್ದೇವೆ ಹಾಗು ಅದರ ಬಗ್ಗೆ ಸಂತುಷ್ಟರಾಗಿದ್ದೇವೆ. ಆದರೆ ಬಹಳಷ್ಟು ಸಲ ಹತ್ತು ನಿಯಮಗಳನ್ನು ಮರೆತು ಬಿಡುವೆವು, ಹಾಗೂ ಆಂತರಿಕವಾಗಿ ದುಃಖಕ್ಕೀಡಾಗುತ್ತೇವೆ. ಹೀಗಾಗುವದು ಸ್ವಾಭಾವಿಕವೇ ಏಕೆಂದರೆ ನಮ್ಮ ದೃಷ್ಟಿಯು ದೈವಿಕತೆಯ ಮೇಲೆ ನೆಲೆಗೊಂಡಿದೆಯೇ ಹೊರತು ಸ್ವಾರ್ಥದ ಮೇಲಲ್ಲ, ಅನಂತತೆಯ ಮೇಲಲ್ಲದೆ ಸೀಮಿತವಾದ ಅಹಂಕಾರದ ಮೇಲಲ್ಲ. (ಸಹಪಥಿಕನ ಕರೆ ಪುಟ 47) ಯಾರಿಗೆ ಅವನ ಉದ್ದೇಶದ ಅರಿವು ಹಾಗೂ ಅದನ್ನು ಪೂರೈಸುವ ಇಚ್ಛೆ ಇದೆಯೋ ಅವರಿಗೆ ಇದು ಅನ್ವಯಿಸುತ್ತದೆ. ಅವರು ಅದರಾಚೆಯ ಪಯಣಕ್ಕೆ ಸಿದ್ಧರಾಗಿರುತ್ತಾರೆ. ಇಂತಹ ಮಾನವ ಮಾಧ್ಯಮದ ಮೂಲಕ ಗುರುಗಳು ತಮ್ಮ ಮಿಷನ್ನಿನ ಕೆಲಸ ತೆಗೆದುಕೊಳ್ಳುತ್ತಾರೆ. ಅನುಭವ ಮತ್ತು ದಕ್ಷತೆಗನುಸಾರವಾಗಿ ಈ ಕೆಲಸವನ್ನು ತೆಗೆದುಕೊಳ್ಳಲಾಗುತ್ತದೆ. ಆತ್ಮವಿಶ್ವಾಸ ಮತ್ತು ಗುರುವಿನ ಮೇಲೆ ಅವಲಂಬನೆ ಹೆಚ್ಚಾದಂತೆ ಕೆಲಸದ ಗಾತ್ರ ಹೆಚ್ಚುತ್ತಾ ಹೋಗುವದು. ಸಾಧಕನು ಮುಂದುವರೆದಂತೆ ಹೆಚ್ಚಿನ ಬದಲಾವಣೆ ಬರುತ್ತ ಹೋಗುವದು. ವ್ಯಕ್ತಿತ್ವ ಇಲ್ಲದಂತಾಗುತ್ತದೆ. ಮನಸ್ಸು ಗುರುವಿನಲ್ಲಿ ಒತ್ತಿ(ಅಡವಿ)ಟ್ಟಂತಾಗುತ್ತದೆ. ವಿಚಾರ ಶಕ್ತಿಯು ಗುರುಗಳೊಬ್ಬರಿಗೇ ಸಮರ್ಪಿತವಾಗಿರುತ್ತದೆ. ಅಸ್ತಿತ್ವವನ್ನು ಹೊರತುಪಡಿಸಿ ತನ್ನದೆನ್ನುವದೇನೂ ಉಳಿಯುವದಿಲ್ಲ. ನಮ್ಮ ಗುರುಗಳು ಈ ಸ್ಥಿತಿಯನ್ನು “ಜೀವನ್ಮತ” ಸ್ಥಿತಿಯೆಂದಿದ್ದಾರೆ. ಸಂಪೂರ್ಣ ಅವಲಂಬಿತ ದಾಸನೆಂದು ಕರೆಯಲು ಯೋಗ್ಯವಾಗಿರುತ್ತಾನೆ. ಗುರುಗಳು ತಮ್ಮ ಇಚ್ಛೆಯಂತೆ ಉಪಯೋಗಿಸಬಹುದಾದ ಉಪಕರಣವಾಗುತ್ತಾನೆ. ಇದೇ ಪ್ರಕಾರ ಗುರು ಮಹರಾಜರ ಉದ್ದೇಶವನ್ನು ಕಾರ್ಯಗತ ವಾಗುವದನ್ನು ಖಚಿತಪಡಿಸಲಾಗುತ್ತದೆ. ಇಲ್ಲವಾದಲ್ಲಿ ಅವರು 1946ರಲ್ಲಿಯೇ ದೇಹ ತ್ಯಜಿಸಬಹುದಾಗಿತ್ತು. ಇದೇ ಸ್ಫೂರ್ತಿಯೊಂದಿಗೆಯೇ ನಮ್ಮ ಪದ್ಧತಿಯು ಮುಂದುವರೆಯುವದು. ಇಂದಿಗೂ ಅದೇ ಸ್ಫೂರ್ತಿಯನ್ನು ಕಾಯ್ದುಕೊಳ್ಳಲಾಗಿದೆ. ಇದರ ಪೂರ್ಣ ಶ್ರೇಯಸ್ಸು ಪೂಜ್ಯ ಭಾಯಿ ಸಾಹೇಬರಿಗೆ ಸಲ್ಲುತ್ತದೆ.

ಆಯ್ಕೆ:

ಈಗ ಪರಂಪರೆಯನ್ನು ನಮಗೆ ಬಿಟ್ಟುಕೊಡಲಾಗಿದೆ. ಇದನ್ನು ನಾವು ಅದೇ ಸ್ಫೂರ್ತಿ ಮತ್ತು ಉತ್ಸಾಹಗಳಿಂದ ಮುಂದುವರಿಸಬೇಕಾಗಿದೆ. ಪೂಜ್ಯ ಭಾಯಿ ಸಾಹೇಬರ ದೇಹಾವಸನದ ನಂತರ ನಾವೆಲ್ಲ ಒಟ್ಟಾಗಿ ಮತ್ತು ಸಹಕಾರದ ಭಾವನೆಯಿಂದ ಮುನ್ನಡೆಯಬೇಕಾಗಿದೆ. ಮೂಲ ಮಾರ್ಗದಿಂದ ನಾವು ವಿಚಲಿತರಾಗಬಾರದು, ಇರುವದೊಂದೇ ಮಾರ್ಗ, ಒಂದೇ ಗುರಿ ಮತ್ತು ಒಬ್ಬನೇ ಗುರು. ಇದು ನಮ್ಮ ತ್ರಿವಳಿ ಮಂತ್ರ. ನಮ್ಮ ಜವಾಬ್ದಾರಿಯಿಂದ ನಾವು ದೂರ ಸರಿಯುವದು ಬೇಡ. ತಿಳಿದೊ ಅಥವಾ ತಿಳಿಯದೆಯೋ ಒಂದಿಲ್ಲೊಂದು ಸಮಯದಲ್ಲಿ ನಾವು ನಮ್ಮ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿರಬಹುದು. ತಪ್ಪು ಮಾಡುವದು ಮಾನವೀಯ ಸಹಜ ಗುಣ. “ಒಬ್ಬನು ಮುಂಜಾನೆ ದಾರಿ ತಪ್ಪಿ, ಸಂಜೆಗೆ ಮನೆಗೆ ಹಿಂದಿರುಗಿದರೆ ಅವನನ್ನು ದಾರಿ ತಪ್ಪಿದವನೆಂದು ಕರೆಯಲಾಗದು” ಎಂಬುದು ನಮ್ಮ ಗುರುಗಳ ಹೇಳಿಕೆ. ನಮ್ಮ ಸಾಧನೆಯಲ್ಲಿಯ ಯಾಂತ್ರಿಕತೆಯನ್ನು ಸರಿಪಡಿಸಿಕೊಳ್ಳಲು ತಕ್ಕ ಸಮಯ ಇದಾಗಿದೆ. ನಮ್ಮ ಎಲ್ಲಾ ಕೇಂದ್ರಗಳು ಬೈಠಕ್ SITTING ಕೇಂದ್ರಗಳಾಗದೆ ತರಬೇತಿಯ ಕೇಂದ್ರಗಳಾಗಬೇಕು. ಇದರಲ್ಲಿಯೇ ನಮ್ಮ ಹಿತವಿದೆ. “ತಿದ್ದಿಕೊಳ್ಳಬೇಕು ಇಲ್ಲವೆ ಅವಸಾನವಾಗಬೇಕು”. ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಷ್ಟೆ.

ಸೂಚನೆ : ಇದು ನಮ್ಮ ತತ್ವದ ಯಥಾಗತ ವಿವರಣೆಯ ಪ್ರಯತ್ನ. ಇದರಲ್ಲಿ ಪ್ರಸ್ತುತ ಪಡಿಸಿದ ವಿಷಯಗಳ ಬಗ್ಗೆ ಮುಕ್ತ ಚರ್ಚೆಗೆ ಆಹ್ವಾನವಿದೆ.