ಇಂದು ಈ ಮಹತ್ವವಾದ ಸಮ್ಮೇಳನ (ಸಭೆ) ನಮ್ಮ ಗುರುಗಳ ಜನ್ಮದಿನವನ್ನು ಆಚರಿಸುತ್ತಿದೆ. ನೀವು ನಮ್ಮ ಆಹ್ವಾನಕ್ಕೆ ಸಮಂಜಸವಾದ ರೀತಿಯಲ್ಲಿ ಪ್ರತಿಕ್ರಿಯೆ ತೋರಿದ್ದರಿಂದ ನಾವು ಪುರಸ್ಕೃತರೆಂದು ಭಾವಿಸುತ್ತೇವೆ. ನಮ್ಮ ಆಹ್ವಾನವು ನೈಜ ಅಭ್ಯಾಸಿಗಳಿಗಾಗಿ ಎಂಬುದಾಗಿತ್ತೆಂಬುದನ್ನು ನಿಮ್ಮ ನೆನಪಿಗೆ ತರುವ ಸಲುಗೆಯನ್ನು ನಾನು ತೆಗೆದುಕೊಳ್ಳಲೇ? ನಮ್ಮ ಗುರುಗಳ ಜೀವನ ಮತ್ತು ಕಾರ್ಯವೈಖರಿಯ ಬಗ್ಗೆ ಈಗ ತಿಳಿಸಲಾಗುತ್ತದೆ. ನೈಜ ಅಭ್ಯಾಸಿಗಳಿಗೆ ಇದು ಪ್ರೋತ್ಸಾಹ ನೀಡುವದೆಂದು ವ್ಯವಸ್ಥಾಪಕರ ಅನಿಸಿಕೆ ಅಷ್ಟೇ ಅಲ್ಲ ಭರವಸೆಯೂ ಆಗಿದೆ. ನಾವು ಈ ಸಭೆಯನ್ನು ವರ್ಗೀಕರಿಸುತ್ತಿಲ್ಲ. ಇದು ನಿಮ್ಮ ತೀರ್ಮಾನಕ್ಕೆ ಬಿಟ್ಟದ್ದು. ಇದು ನಿಮ್ಮ ಆಯ್ಕೆ ಇದನ್ನು ನೀವು ಮಾಹಿತಿಯ ಒಂದು ಅಂಶವೆಂದು ಪರಿಗಣಿಸಬಾರದು ಎಂದು ಬೇಡಿಕೊಳ್ಳುತ್ತೇವೆ. ನೀವು ಇದನ್ನು ವೈಯಕ್ತಿಕ ಅಭ್ಯಾಸ ಅಥವಾ ಸಾಧನೆಯ ದೃಷ್ಟಿಯಿಂದ ನೋಡಬೇಕೆಂದು ನಾವು ಅಪೇಕ್ಷಿಸುತ್ತೇವೆ. ಇದು ಒಂದು ಅಳತೆಗೋಲು ಆಗದಿರಲಿ; ಇದು ನಿಮ್ಮನ್ನು ವಿಚಾರ ಮಾಡಲು, ವಿಶ್ಲೇಷಿಸಲು, ನಿಮ್ಮದೇ ಆದ ಅಭಿಪ್ರಾಯವನ್ನು ಹೊಂದಬೇಕೆಂಬುದಾಗಿದೆ.

ನಮ್ಮ ಗುರುಗಳ ಜೀವನ ಮತ್ತು ಕಾರ್ಯವಿಧಾನವು ವೈಯಕ್ತಿಕವಾಗಿ ನಮ್ಮ ಎರಡೂ ಜೀವನಗಳಿಗೆ ಸೂಕ್ತವಾಗಿ ಅನ್ವಯಿಸುವದು. ಅಂದರೆ ಐಹಿಕ ಮತ್ತು ಆಧ್ಯಾತ್ಮಿಕ. ಇಂದು ನಾವು ಇಲ್ಲಿ ಅವರ ಜನ್ಮದಿನವನ್ನು ತಕ್ಕುದಾದ ರೀತಿಯಲ್ಲಿ ಆಚರಿಸಲು ನೆರೆದಿದ್ದೇವೆ. ನಾವು ಮಾನವ ಜೀವಿಗಳಾದುದರಿಂದ ನಮ್ಮ ಗೌರವಾದರಗಳನ್ನು ಗುರುಗಳಿಗೆ (ಮಾಲಿಕ್-ಎ-ಕುಲ್), ಎಲ್ಲದರ ಪ್ರಭು(ಖಾದರ್-ಎ-ಮುತಲಖ್), ಕೇವಲ ಒಬ್ಬನೇ ಆದ ಪೂರ್ಣ ಬ್ರಹ್ಮಾಂಡದ ಪ್ರಭು, ಒಬ್ಬನೇ ಒಬ್ಬನು, ಪ್ರಾರ್ಥನಾ ಯೋಗ್ಯ, ಪೂಜಾರ್ಹನಾದವನಿಗೆ (ಮಾಬೂದ್) ಅರ್ಪಿಸಲು ಕರ್ತವ್ಯಬದ್ಧರಾಗಿದ್ದೇವೆ. ಅವನ ಕೃಪೆ ಮತ್ತು ಪ್ರೀತಿ ಇಲ್ಲದೇ ಮಾನವೀಯ ಜೀವನಕ್ಕೆ ಅರ್ಥವೇ ಇಲ್ಲ. ಅವನ ಕರುಣಾಪೂರಿತ ಸಹಾಯವಿಲ್ಲದೇ ಉನ್ನತ ಮಟ್ಟಕ್ಕೆ ಒಯ್ಯುವ ಮತ್ತು ಮುಕ್ತಿಯನ್ನು ಕೊಡುವ ಸ್ಥಿತಿ ಹಾಗು ಮಾನವನನ್ನು ದೈವತ್ವಕ್ಕೆ ಪರಿವರ್ತಿಸುವ ಕೃಪೆಯನ್ನು ಪಡೆಯಲು ಅಸಾಧ್ಯ.

ಆಗ ಇಂತಹ ಒಂದು ಸಮಯವಿತ್ತು. ಸ್ವಾರ್ಥತೆ, ಪರಸ್ಪರ ಪ್ರೇಮ ಭಾವನೆಯ ಕೊರತೆ, ಪ್ರಾಪಂಚಿಕ ಪ್ರವೃತ್ತಿಗಳು ತಮ್ಮ ಏರಿಕೆಯ ಮಟ್ಟದಲ್ಲಿದ್ದವು. ಮಾನವೀಯ ಜಾಗ್ರತಾವಸ್ಥೆಗೆ, ಪ್ರಚಲಿತ ಸ್ಥಿತಿಯ ಗ್ರಹಣ ಹಿಡಿದಂತಿತ್ತು. ವಿಶಿಷ್ಟ ವ್ಯಕ್ತಿಯ ದೈವತ್ವದಿಂದ/ಅಂತಿಮ ಸತ್ಯದಿಂದ ಉದ್ಭವಿಸಿದ ಮಾನವ ರೂಪೀ ವ್ಯಕ್ತಿಗಾಗಿ ಕಾಲದ ಅವಶ್ಯಕತೆಯಾಯಿತು. ಆ ವಿಶಿಷ್ಟ ವ್ಯಕ್ತಿ (ಯಾರಿಗೆ ಅಂತಿಮ ಸತ್ಯದ ಹಾಗೂ ಅದರ ಶಕ್ತಿಯ ಮೇಲೆ ಪ್ರಭುತ್ವವಿದ್ದಿತೋ) ಬೇರೆ ಯಾರೂ ಅಲ್ಲ, ಅವರೇ ನಮ್ಮ ಶ್ರೀ ಬಾಬೂಜಿ ಮಹರಾಜರು.

ನಮ್ಮ ಪ್ರೀತಿ ಪಾತ್ರರಾದ ಶ್ರೀ ಬಾಬೂಜಿ ಮಹರಾಜರು ಶ್ರೀ ರಾಮಚಂದ್ರಜಿಯವರು ಮರ್ಯಾದಸ್ಥ ಕಾಯಸ್ಥ ಕುಟುಂಬ- ವೊಂದರಲ್ಲಿ, ಉತ್ತರ ಪ್ರದೇಶದ ಶಹಜಾನ್‌ರ್‌ದಲ್ಲಿ, ವಿಕ್ರಮ ಸಂವತ್ಸರ 1856, ದಿನಾಂಕ 30ನೇ ಏಪ್ರಿಲ್ 189) ವೈಶಾಖ ಬಹುಳ ಪಂಚಮಿ, ಭಾನುವಾರ ಬೆಳಿಗ್ಗೆ 7:26ಕ್ಕೆ ಜನ್ಮ ತಾಳಿದರು. ಅವರ ತಂದೆಯವರು ರಾಯಬಹದ್ದೂರ್ ಶ್ರೀ ಬದ್ರಿಪ್ರಸಾದ್‌ಜೀಯವರು ಶಹಜಾನ್‌ರ್‌

(ಉ.ಪ) ಹೆಸರಾಂತ ವಕೀಲರು, ಮಹಾನ್ ಇತಿಹಾಸ ತಜ್ಞರು, ಸಂಸ್ಕೃತ, ಉರ್ದು, ಪರ್ಷಿಯನ್ ಮತ್ತು ಇಂಗ್ಲಿಷ್ ಭಾಷಾ ಪ್ರವೀಣರು, ಗೌರವಾನ್ವಿತ ಜೀವಾವಧಿ ಮೊದಲನೇಯ ವರ್ಗದ ವಿಶೇಷ ನ್ಯಾಯಾಧೀಶರಾಗಿದ್ದರು. ಶ್ರೀ ಬಾಬೂಜಿಯವರ ಬಾಲ್ಯದಲ್ಲಿ ತಾಯಿಯವರ ಪ್ರಭಾವವು ಅವರ ಮೇಲಿತ್ತು. ಅವರು ಪಾರಂಪರಿಕ ಪೂಜಾ ಪದ್ಧತಿಗಳನ್ನು ಕೈಕೊಂಡರು ಮತ್ತು ಅವು ತೃಪ್ತಿಕರವೂ ಅಲ್ಲ, ಯಾವ ಲಾಭವೂ ಇಲ್ಲದೆಂಬುದನ್ನು ಕಂಡುಕೊಂಡರು. ಅವರ ದಾಹವು, ಉನ್ನತ ಹಾಗು ಶ್ರೇಷ್ಠವಾದುದಕ್ಕಾಗಿ ಹಾಗೆಯೇ ಉಳಿಯಿತು ಮತ್ತು ಅನೇಕ ವರ್ಷಗಳವರೆಗೆ ಮುಂದುವರೆಯಿತು. ಅವರು ಸಮರ್ಥ ಮಾರ್ಗದರ್ಶಿಗಾಗಿ, ಈ ಎಲ್ಲಾ ಸಮಯದಲ್ಲಿ ಪ್ರಾರ್ಥಿಸುತ್ತಿದ್ದರು.

ಕೊನೆಗೆ, ಅವರ 23ನೇ ವಯಸ್ಸಿನಲ್ಲಿ ಅವರ ಅನ್ವೇಷಣೆಯು ಫಲಿಸಿತು. ದಿನಾಂಕ 3ನೇ ಜೂನ್ 1922ರಂದು ಅವರು ಗುರುಗಳಾದ ಶ್ರೀ ರಾಮಚಂದ್ರಜಿ ಮಹರಾಜ (ಲಾಲಾಜಿ ಮಹರಾಜ್) ಫತೇಘಡ್ ಅವರ ಪವಿತ್ರ ಪಾದಕ್ಕೆ ಬಂದರು. ಲಾಲಾಜಿ ಸಾಹೇಬರೊಂದಿಗೆ ಅವರ ಭೇಟಿಯ ತಕ್ಷಣದ ಪರಿಣಾಮವು ಇವರೇ ಸಮರ್ಥ ಗುರು/ಮಾರ್ಗದರ್ಶಿ ಎಂದು ನಿರ್ಧರಿಸುವಂತೆ ಮಾಡಿತು. ಆ ಕ್ಷಣದಿಂದ ಮತ್ತು ನಂತರ ಶ್ರೀ ಲಾಲಾಜಿ ಮಹರಾಜರ ಹೊರತಾಗಿ ಪ್ರಪಂಚದ ಬೇರೆ ಎಲ್ಲದಕ್ಕೂ ಅವರು ಕುರುಡರಾದರು. ಇದು ನಮ್ಮೆಲ್ಲರಿಗೂ ಗೊತ್ತಿದೆ. ನಾನು ಹೊಸದಾಗಿ ಏನೂ ಹೇಳುತ್ತಿಲ್ಲ. ಆದರೆ, ಒಂದು ಕ್ಷಣ ತಡೆದು ಇದರ ಬಗ್ಗೆ ಯೋಚಿಸಿ. ಈ ಸಭೆಯಲ್ಲಿ, ನಮ್ಮಲ್ಲಿ ಅನೇಕರಿಗೆ ಇಂತಹದೇ ಸದಾವಕಾಶ ಒದಗಿದೆಯೆಂದು ನಂಬುವೆ. ನಾವು ಆ ಸದಾವಕಾಶವನ್ನು ನಮ್ಮ ವಿಧಿಯ ನಿರ್ಧಾರಕ್ಕೆ ಉಪಯೋಗಿಸಿದ್ದೇವೆಯೇ? ಗುರುಗಳ ಈ ಕ್ರಿಯೆಯು ನಮಗೆ ಸಂದೇಶ ನೀಡುವ ಪ್ರಯತ್ನವಾಗಿದೆ. ನಾವು ಒಂದೆಡೆ ಕುಳಿತು, ಈ ಬಗ್ಗೆ ನಮ್ಮನ್ನು ನಾವು ಆತ್ಮಶೋಧ ಅಥವಾ ವಿಶ್ಲೇಷಣೆ ಮಾಡಿಕೊಳ್ಳೋಣ. ಈಗಲಾದರೂ ಅಂತಹ ಪ್ರಯತ್ನ ಮಾಡಲು, ಇನ್ನೂ ಕಾಲ ಮಿಂಚಿಲ್ಲ.

ಸದ್ಗುರುಗಳು 1925ನೇ ಇಸ್ವಿಯಲ್ಲಿ ನ್ಯಾಯಾಂಗ ಸೇವೆಯನ್ನು ಸೇರಿದರು. ಅವರು ಆದರ್ಶ, ಸದ್‌ಗೃಹಸ್ಥ ಜೀವನವನ್ನು ಸಾಗಿಸಿದರು. 1949ರಲ್ಲಿ ಅವರ ಪತ್ನಿಯ ದೇಹಾವಸಾನದ ನಂತರ, ಚಿಕ್ಕ ಮಕ್ಕಳನ್ನು ಬೆಳೆಸುವ ಅವರ ಜವಾಬ್ದಾರಿಯು ಹೆಚ್ಚಿತು. ಅವರು ಮಾದರಿ ತಂದೆಯಾಗಿ ತಕ್ಕುದಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸಿದರು ಹಾಗೂ ಆ ಮೂಲಕ ನಮಗೆ ಉದಾಹರಣೆಯನ್ನು ನೀಡಿದ್ದಾರೆ.

ಸಭ್ಯ ಗೃಹಸ್ಥನಾಗಿ, ಸಮಾಜದಲ್ಲಿ ಜವಾಬ್ದಾರಿಯುತ ಸದಸ್ಯನಾಗಿ ಬಂಧು-ವರ್ಗದವರೊಂದಿಗೆ, ತಮ್ಮ ಸಹಬಾಂಧವರೊಂದಿಗೆ, ಸಮಾಜದ ಕಟ್ಟು ಪಾಡುಗಳನ್ನು, ವ್ಯವಹಾರ ರೀತ್ಯದಲ್ಲಿ ಆಚರಿಸಿದರು. ಸರಳ ಜೀವನವು ಅವರ ಎರಡನೇಯ ಗುಣವಾಗಿತ್ತು. ದುಂದುವೆಚ್ಚವನ್ನು ದೂರಿ- ಕರಿಸುತ್ತಿದ್ದರು. ಅವರು ಜೀವನಾವಶ್ಯವಾದ ಬೇಡಿಕೆಗಳಿಗಾಗಿ ಖರ್ಚು ಮಾಡುತ್ತಿದ್ದರಲ್ಲದೇ, ಐಷಾರಾಮಿಗಲ್ಲ. ಶ್ರೀ ಬಾಬೂಜಿ ಮಹರಾಜರ ಗೃಹಸ್ಥ ಜೀವನದಿಂದ ಅವರ ಪ್ರಾಪಂಚಿಕ ವ್ಯವಹಾರದ ರೀತಿಯನ್ನು ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಶ್ರೀ ಬಾಬೂಜಿ ಮಹರಾಜರು ಪರಿಪೂರ್ಣ, ಸಾಮಾನ್ಯ ಗೃಹಸ್ಥ ಜೀವನವನ್ನು ನಡೆಸುತ್ತಿದ್ದಾಗಲೂ, ತಮ್ಮ ಗುರುಗಳಾದ ಶ್ರೀ ಲಾಲಾಜಿ ಮಹರಾಜರನ್ನು ಯಾವಾಗಲೂ ತಮ್ಮ ವಿಚಾರ ಮತ್ತು ದೃಷ್ಟಿಯಲ್ಲಿಟ್ಟುಕೊಂಡಿದ್ದರೆಂಬುದು ಗಮನಾರ್ಹ ಸಂಗತಿ. ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಜೀವನಗಳು ಒಂದು ಚಕ್ಕಡಿಯ ಎರಡು ಗಾಲಿಗಳಿದ್ದಂತೆ ಹಾಗೂ ಅವು ಒಂದಕ್ಕೊಂದು ಹೊಂದಿಕೊಂಡೇ ಸಾಗಬೇಕೆಂಬ ಅಂಶವನ್ನು ದೃಷ್ಟಾಂತದ ಮೂಲಕ ತೋರಿದರು.

ಶ್ರೀ ಬಾಬೂಜಿ ಮಹರಾಜರು, ಸುಂದರ, ಒಪ್ಪವಾದ, ಬಡಕಲು ವ್ಯಕ್ತಿಯಾಗಿದ್ದರು. ಅವರು ಮೃದು ಭಾಷಿಯೂ, ಉತ್ಸಾಹಿಗಳೂ ಆಗಿದ್ದರು. ಸಭ್ಯ ಗೃಹಸ್ಥನಂತೆ ಅವರ ನನ್ನತೆ ಮತ್ತು ಅವರು ತೋರುವ ಅಂತಃಕರಣಗಳಿಂದ ಸಂದರ್ಶಿಸುವ ಅಭ್ಯಾಸಿಗಳು ಮಾರುಹೋ- ಗುತ್ತಿದ್ದರಲ್ಲದೇ, ತಮ್ಮ ಅಹಂಕಾರವನ್ನು ಹೊರಹಾಕುತ್ತಿದ್ದರು. ಅನೇಕ ಅಭ್ಯಾಸಿಗಳು ಪ್ರತಿ ದಿನ ಶಹಜಾನ್‌ಪೂರ್‌ದಲ್ಲಿ ಶ್ರೀ ಬಾಬೂಜಿ ಮಹರಾಜರನ್ನು ಸಂದರ್ಶಿಸುತ್ತಿದ್ದರು. ಶ್ರೀ ಬಾಬೂಜಿ ಮಹರಾಜರು ತಮ್ಮನ್ನು ಭೇಟಿಯಾಗಲು ಬಂದ ಎಲ್ಲ ಅಭ್ಯಾಸಿಗಳಿಗೆ ಯೋಗ್ಯ ವಸತಿ ಮತ್ತು ಒಳ್ಳೆಯ ಆಹಾರವನ್ನೂ ಒದಗಿಸುತ್ತಿದ್ದರು. ಅವರೊಬ್ಬರೇ ಅಲ್ಲದೇ ಅವರ ಕುಟುಂಬದವರೆಲ್ಲ ಅದೇ ರೀತಿ ವರ್ತಿಸುತ್ತಿದ್ದರು. ಅವರ ಮನೆಯಿಂದ ಹೊರಡುವಾಗ ಅವರ ಕುಟುಂಬದ ಸದಸ್ಯರಿಂದ ಬೀಳ್ಕೊಡಲ್ಪಟ್ಟಾಗ ಆಗುವ ಭಾವಾವೇಶವನ್ನು ನೀವು ಪ್ರತಿಯೊಬ್ಬರು ಅನುಭವಿಸಿರುವಿರೆಂದು ನಾನು ಭಾವಿಸುವೆ. ಇರಲಿ, ನಮ್ಮೆಡೆಗೆ ನಾವು ನೊಡೋಣ. ನಮ್ಮ ಕುಟುಂಬಗಳಲ್ಲಿ ನಾವು ಆ ತರಹದ ಸನ್ನಿವೇಶವನ್ನು ನಿರೀಕ್ಷಿಸಬಹುದೇ? ಅವರ ಪ್ರತಿಯೊಂದು ಹಾವ ಭಾವ, ಮಾತು ಮತ್ತು ಅವರ ಕ್ರಿಯೆಗಳು ಅಷ್ಟೇ ಸ್ವಾಭಾವಿಕವೂ, ಆಕರ್ಷಕವೂ ಆಗಿದ್ದು “ಇತರರಿಗೆ ಬೋಧಿಸುವ ಮೊದಲು ಆಚರಿಸು” ಎಂಬ ನಾಡ ನುಡಿಗೆ ತಕ್ಕುದುದು ಮತ್ತು ಅರ್ಥಗರ್ಭಿತವೂ ಆಗಿದೆ.

ದಿನಾಂಕ 15ನೇ ಅಗಸ್ಟ್ 1931ರ ಬೆಳಿಗ್ಗೆ ಒಂದು ಮಹಾನ್ ಶಕ್ತಿ ಅವರ ಅಂತ‌ ಮತ್ತು ಬಾಹ್ಯದಲ್ಲಿ ಆವೃತವಾದಂತೆ ಭಾಸವಾಗಿ ಅವರ ಅಂತರ್ ಧ್ವನಿಯು ಇದು ಗುರುಗಳ ಕೃಪಾ ಕಟಾಕ್ಷವೆಂಬುದು ಕಂಡುಕೊಂಡಿತು. ಅವರ ಗುರುಗಳಾದ ಶ್ರೀ ಲಾಲಾಜಿ ಮಹರಾಜರು 14ನೇ ಅಗಸ್ಟ್ 1931ರ ರಾತ್ರಿ ಮಹಾಸಮಾಧಿಯನ್ನು ಹೊಂದಿ ತಮ್ಮ ಶಕ್ತಿಯನ್ನು ವರ್ಗಾಯಿಸಿದರು. ನಿಜಕ್ಕೂ ಅಂದು ಅವರ ಸದ್ಗುರುಗಳು ಅವರಲ್ಲಿ ಲಯ ಹೊಂದಿದರು.

ಶ್ರೀ ಗುರುಗಳು ನೀಡಿರುವ ಅವರ ಕೃತಿಗಳು ಅಗಣಿತವೂ ಮತ್ತು ವಿಫುಲವೂ ಆಗಿದ್ದು ನಮ್ಮ ಗ್ರಹಿಕೆಗೆ ಮೀರಿದುದು ಆಗಿವೆ. ಕೇವಲ ಗ್ರಹಿಕೆಗೆ ಬಂದ ಕೃತಿಗಳನ್ನು ಕೆಳಗಿನಂತೆ ಹೇಳಲಾಗಿದೆ.

1945ನೇ ಮಾರ್ಚಿನಲ್ಲಿ ಶ್ರೀ ಬಾಬೂಜಿ ಮಹರಾಜರು ಒಂದು ಆಧ್ಯಾತ್ಮಿಕ ಸಂಸ್ಥೆಯನ್ನು, ಅವರ ಸದ್ಗುರುಗಳ ಹೆಸರಿನಲ್ಲಿ ಸ್ಥಾಪಿಸಿದರು. ಶಹಜಾನ್‌‌ (ಉ.ಪ್ರ), ಭಾರತ ಅವರ ಮುಖ್ಯ ಕೇಂದ್ರವಾಯಿತು. ಅವರು ಅದರ ಸಂಸ್ಥಾಪನಾ ಅಧ್ಯಕ್ಷರಾದರು. ಅವರು ಏಕಾಂಗಿಯಾಗಿ ಅದರ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯನ್ನು, ಮಿತವ್ಯಯಿಯಾಗಿ, ಸರಾಗವಾಗಿ ನಿರ್ವಹಿಸಿದರು. ಅವರ ಉದ್ದೇಶವು ಆಧ್ಯಾತ್ಮಿಕ ಸಂದೇಶವನ್ನು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಸಾರುವದು, ಜಿಜ್ಞಾಸುಗಳನ್ನು ಮಾನವೀಯ ಜಾಗೃತಾ ಸ್ಥಿತಿಯಿಂದ ದೈವತ್ವದೆಡೆಗೆ, ಹಾಗೂ ಹತಾಶರಿಗೆ ಜೀವನದ ಗುರಿಯನ್ನು ಪಡೆಯಲು ಉತ್ತೇಜಿಸುವದು ಆಗಿತ್ತು.

ಆಧ್ಯಾತ್ಮಿಕ ಸಾಧನೆಯ ವಿಧಾನವನ್ನು ಸಹಜ ಮಾರ್ಗ’ವೆಂದು ಕರೆದರು. ಅದೆಂದರೆ ಸಹಜ ರೀತಿಯಲ್ಲಿ ಭಗವಂತನ ಸಾಕ್ಷಾತ್ಕಾರ. ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆಯಾಗುವಂತೆ ಸುಧಾರಿತ ರಾಜಯೋಗದ ಪದ್ಧತಿಯೇ ಇದಾಗಿದೆ. ಉಚ್ಚತಮ ಸ್ಥಿತಿ ಅಂದರೆ ಅಂತಿಮ ಸತ್ಯದ ಸಾಕ್ಷಾತ್ಕಾರಕ್ಕಾಗಿ ಜಿಜ್ಞಾಸುಗಳ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವದಕ್ಕಾಗಿಯೇ ಇದು ಇರುತ್ತದೆ. ಗೃಹಸ್ಥ ಜೀವನವು ಅವರ ಪದ್ಧತಿಯನ್ನು ಅನುಸರಿಸಲು ಮಾದರಿಯದಾಗಿದೆ. ಇಚ್ಛೆ ಮತ್ತು ಸಹಕಾರಗಳು ಈ ಪದ್ಧತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಇದು ಸಿಂಹ ಹೃದಯಿಗಳಿಗಾಗಿದೆ. ಅಂಜುಬುರುಕರಿಗೆ ಅಲ್ಲ. ಈ ಪದ್ಧತಿಯಲ್ಲಿ ಜಿಜ್ಞಾಸುವಿನ ಚಿಂತನಾ ಕ್ರಿಯೆಯೇ ಸಾಧನೆಯ ಮೂಲವಾಗಿದೆ. ಇಲ್ಲಿ ಕೇಂದ್ರ ವ್ಯಕ್ತಿಯು ಗುರು, ಯಾರು ಜೀವನದ ಗುರಿಯಾಗಿರುವನೋ, ಭಗವಂತ ಮತ್ತು ಶಕ್ತಿಯಾಗಿರುವನೋ, ಪ್ರಾರ್ಥನೆಯಲ್ಲಿ ಇದನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಅಭ್ಯಾಸಿಯು ಪ್ರತಿಯೊಂದು ಶಬ್ದದ ಮೇಲೆ ವಿಚಾರ ಮಾಡತಕ್ಕದ್ದು. ಇದು ಕಡ್ಡಾಯವಾಗಿದೆ. ಈ ಪದ್ಧತಿಯ ಅದ್ವಿತೀಯ ಅಂಶವೆಂದರೆ ಗುರುವಿನ ಸಹಾಯ ಮತ್ತು ಪ್ರಾಣಾಹುತಿ, ಪ್ರಾಣಾಹುತಿಯು ಗುರುಗಳಿಂದ ಹೊಮ್ಮಿದ ಚೇತನಾ ಶಕ್ತಿ /ದೈವಿ ಪ್ರಭೆ, ಸಹಜ ಮಾರ್ಗವು ಪ್ರಾಣಾಹುತಿಯ ಕಾರಣದಿಂದಾಗಿ ನಿಜವಾದ ಯೋಗಿಕ ಪದ್ಧತಿಯಾಗಿದೆ.

ಅಭ್ಯಾಸಿಗಳ ಪ್ರಯೋಜನಕ್ಕಾಗಿ ಅವರಿರುವ ದೂರದ ಸ್ಥಳಗಳಲ್ಲಿ ಭಾರತದಾದ್ಯಂತ ಮತ್ತು ವಿಶ್ವದಾದ್ಯಂತದ ಅಭ್ಯಾಸಿಗಳಿಗೆ ಪ್ರಾಣಾಹುತಿಯ ಮೂಲಕ ಅವರಿಗೆ ಆಧ್ಯಾತ್ಮಿಕ ತರಬೇತಿಯನ್ನು ನೀಡಲು ನಮ್ಮ ಗುರುಗಳು, ಪ್ರಶಿಕ್ಷಕರನ್ನು ನೇಮಿಸಿದ್ದಾರೆ. ಇದರಿಂದಾಗಿ ತರಬೇತಿ ನೀಡುವ ವ್ಯವಸ್ಥೆಯು ವಿಸ್ತಾರಗೊಂಡಿತು. ಮೇಲಿಂದ ಮೇಲೆ ಸತ್ಸಂಗಗಳನ್ನು ನಡೆಸಿ ಆಧ್ಯಾತ್ಮಿಕ ತರಬೇತಿಯೊಂದೇ ಅಲ್ಲದೇ ಪರಸ್ಪರ ಸೌಹಾರ್ಧತೆ ಮತ್ತು ಆದರಗಳನ್ನು ಬೆಳೆಸುವದಾಗಿದೆ.

ಆಶ್ರಮದ ಕಟ್ಟಡವು ಇಲ್ಲದಿದ್ದಾಗ, ಗುರುಗಳು ತಮ್ಮ ಮನೆಯಲ್ಲೇ ಅಭ್ಯಾಸಿಗಳಿಗೆ ಆಶ್ರಯ ನೀಡಿ, ತರಬೇತಿಯ ಉದಾಹರಣೆಯೇ ಅವರಾಗಿದ್ದರು. ಇದು ನಮ್ಮೆಲ್ಲರಿಗೂ ಕಣ್ಣೆರೆಸುವ ವಿಷಯ. ಅವರ ತರಬೇತಿಯು ಆಧ್ಯಾತ್ಮಿಕ ಸ್ಥಿತಿಯ ಅನುಭವಗಳನ್ನು ಕೊಡುವದಲ್ಲದೇ, ಮೃದು ಭಾಷೆ, ಮೆದು ಸಲಹೆಗಳಿಂದ ಸಮ್ಮಿಳಿತವಾಗಿತ್ತು. ಅವರು ಸದಾ ಅಭ್ಯಾಸಿಗಳನ್ನು ಮೆಚ್ಚಿಕೊಳ್ಳುತ್ತಿದ್ದರು ಮತ್ತು ಪ್ರೋತ್ಸಾಹಿಸುತ್ತಿದ್ದರು. ಈ ಘಟನೆಯು ಅದನ್ನು ಸ್ಪಷ್ಟಪಡಿಸುವದು ಮತ್ತು ಅರ್ಥೈಸುವದು.

ಒಮ್ಮೆ ಶಹಜಾನ್‌ಪೂರ್‌ದಲ್ಲಿ ಗುರುಗಳ ಸಮ್ಮುಖದಲ್ಲಿ ಒಂದು ಚರ್ಚೆ ನಡೆಯಿತು. ಅಲ್ಲಿರುವವರಲ್ಲಿ, ಒಬ್ಬ ಅಭ್ಯಾಸಿಯು ವಾರದ ಸತ್ಸಂಗಗಳಲ್ಲಿ ಹಾಜರಾತಿಯ ಪುಸ್ತಕವನ್ನು ಇಡಬೇಕೆಂದು ಸಲಹೆ ಮಾಡಿದ. ಅದಕ್ಕೆ ಶ್ರೀ ಬಾಬೂಜಿ ಮಹರಾಜರು ಖುದ್ದಾಗಿ ಅವರ ಸಲಹೆಯನ್ನು ಮೆಚ್ಚಿದರು ಹಾಗೂ ನಿಮ್ಮ ಯೋಜನೆಯು ಚೆನ್ನಾಗಿದೆಯೆಂದರು. “ದಯಮಾಡಿ ನನ್ನ ಹಾಜರಾತಿಯನ್ನೂ ಸಹ ತೆಗೆದುಕೊಳ್ಳಿ. ನಾನು ಸದಾ ಹಾಜರಿರುತ್ತೇನೆಂಬುದನ್ನು ಕಂಡುಕೊಳ್ಳುವಿರಿ” ಎಂದರು. ಅವರು ತಮ್ಮ ಸಂದೇಶವನ್ನು ಬಿತ್ತರಿಸಲು ಅದ್ದೂರಿ ಹಾಗು ವಿಜೃಂಭಣೆಯ ಪ್ರಚಾರದ ಸಾಧನೆಗಳನ್ನು ಉಪಯೋಗಿಸಲಿಲ್ಲ ಬದಲಾಗಿ ಪ್ರತಿಯೊಬ್ಬ ಅಭ್ಯಾಸಿಯು ತಮ್ಮ ಧೈಯವನ್ನು ಸಾರುವ ಜ್ವಲಂತ

ಉದಾಹರಣೆಯಾಗುವನೆಂದು ನಂಬಿದರು. ಅವರು ಅನೇಕ ಬಾರಿ ಭಾರತದಲ್ಲಿ ಮತ್ತು ವಿಶ್ವದಾದ್ಯಂತ, ಅಭ್ಯಾಸಿ ಸಹೋದರ ಸಹೋದರಿಯರಿಗೆ ತರಬೇತಿ ನೀಡಲು ವಿಸ್ಕೃತವಾಗಿ ಪಯಣಿಸಿದರು.

ಅವರು ಸಹಜ ಮಾರ್ಗವೆಂಬ ದೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿ, ಅನೇಕ ಪ್ರಬಂಧಗಳನ್ನೂ ಬರೆದರು ಮತ್ತು ಅಭ್ಯಾಸಿಗಳಿಗೆ ತಮ್ಮ ಅನುಭವ ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಪ್ರೋತ್ಸಾಹಿಸಿದರು. ಅವರು ತಮ್ಮ ಮನೆಯಲ್ಲಿಯೇ ಸ್ವಂತ ಮುದ್ರಣಾಲಯವನ್ನೂ ಸ್ಥಾಪಿಸಿದರು.

ಕಾರ್ಯ ಒತ್ತಡದ ನಡುವಿನಲ್ಲೂ ಅವರು ಇಂಗ್ಲೀಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಆಧ್ಯಾತ್ಮಿಕ ತರಬೇತಿಯ ಅನೇಕ ಪುಸ್ತಕಗಳನ್ನು ಬರೆದರು. ಹತ್ತು ನಿಯಮಗಳ ವ್ಯಾಖ್ಯಾನ, ಸತ್ಯೋದಯ, ಸಹಜ ಮಾರ್ಗಾನುಸಾರ ರಾಜಯೋಗದ ಪ್ರಭಾವ, ಅನಂತದೆಡೆಗೆ, ಋತುವಾಣಿ, ಸಹಜ ಮಾರ್ಗದರ್ಶನ ಮತ್ತು ಅವರ ಆತ್ಮ ಚರಿತ್ರೆ ಅವುಗಳಲ್ಲಿ ಕೆಲವಾಗಿವೆ. ಪ್ರತಿಸಾರಿ ಅಭ್ಯಾಸಿಯು ಓದುವಾಗ ಒಂದು ಹೊಸ ಒಳನೋಟ, ಉತ್ತೇಜನ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಾನೆ. ಅವರು ತಮ್ಮ ಅನುಯಾಯಿಗಳನ್ನು ಬರೆಯುವಂತೆ ಪ್ರೋತ್ಸಾಹಿಸುತ್ತಿದ್ದರು.

ಗುರುಗಳು ಕೆಲವು ನಿರ್ಧಿಷ್ಟ ಕ್ರಾಂತಿಕಾರಕ ತತ್ವಗಳನ್ನು ಅಳವಡಿಸಿದರು. ಅವುಗಳಲ್ಲಿ ಕೆಲವು ಹೀಗಿವೆ:

  1. ಮಾನವ ಜೀವನದ ನಿಜವಾದ ಗುರಿಯನ್ನು ನಿಶ್ಚಿತಗೊಳಿಸುವದು.
  2. ಸಮರ್ಥ ಮಾರ್ಗದರ್ಶಿ/ಗುರುವಿನ ಆಯ್ಕೆ, ಮಾನವನಲ್ಲಿ ತಾನು ಗುರುವೆಂಬ ವಿಚಾರವು ಕ್ಷಣಕಾಲವೂ ಬರಬಾರದು.
  3. ಸರಳತೆ ಮತ್ತು ನೈಸರ್ಗಿಕ ವಿಧಾನಗಳು, ದಿನ ನಿತ್ಯದ ಸಾಧನೆಗಾಗಿ,
  4. ಆಧ್ಯಾತ್ಮಿಕತೆ ಕುರಿತಂತೆ ಮೂಢನಂಬಿಕೆ ಮತ್ತು ಪೌರಾಣಿಕ ಕಲ್ಪನೆಗಳನ್ನು, ಭಯವನ್ನು ಹೋಗಲಾಡಿಸುವುದು.
  5. ಜಗತ್ತಿಗೆ ಅವರು ನೀಡಿರುವ ಅತಿ ಕ್ರಾಂತಿಕಾರಕ ವಿಚಾರವೆಂದರೆ ‘ಧರ್ಮದ ಕೊನೆಯೇ ಆಧ್ಯಾತ್ಮದ ಆರಂಭ, ಆಧ್ಯಾತ್ಮದ ಕೊನೆಯೇ ಸತ್ಯದ ಆರಂಭ……..
  6. ಅಭ್ಯಾಸಿಗಳಿಗೆ ಸಹಾಯ ಮಾಡಲು ಸೇವೆಗೈಯಲು ಸದಾ ಸಿದ್ಧತೆ.
  7. ಅವರು ಅಭ್ಯಾಸಿಗಳನ್ನು ತಮ್ಮ ಶಿಷ್ಯರೆಂದು ಉಪಚರಿಸಲಿಲ್ಲ. ಅವರು ತಮ್ಮ ಸಂಗಾತಿಗಳೆಂದೇ ಬಗೆಯುತ್ತಿದ್ದರು.
  8. ಗೃಹಸ್ಥ ಜೀವನದಲ್ಲಿದ್ದರೂ, ಹಂಬಲವಿದ್ದರೆ ಮನುಷ್ಯನೊಬ್ಬನೇ ಉಚ್ಛಮಟ್ಟಕ್ಕೆ ಏರಬಲ್ಲನೆಂದು ನಮ್ಮ ಗುರುಮಹರಾಜರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಈ ಅಂಶವು ಅತ್ಯಗತ್ಯವಾಗಿದೆ.

    ಅವರು ತಮ್ಮನ್ನೆ ಉದಾಹರಣೆಯನ್ನಾಗಿ ಮತ್ತು ಪ್ರಾಯೋಗಿಕವಾಗಿ ತೋರಿಸಿದ್ದಾರೆ. ಇದೇ ಜೀವನದಲ್ಲಿ, ಸ್ವಲ್ಪ ಸಮಯದಲ್ಲಿಯೇ ಅತ್ಯುಚ್ಚ ಮಟ್ಟವನ್ನು ಮುಟ್ಟಲು ಸಾಧ್ಯವೆಂಬುವದನ್ನು ತೋರಿಸಿದ್ದಾರೆ.

    ಪರಿಪೂರ್ಣ ಗುರುಗಳನ್ನು ಪಡೆದ ನಾವು ಭಾಗ್ಯಶಾಲಿಗಳು, ನಾನು ‘ಪರಿಪೂರ್ಣ ಗುರು’ ಎಂದು ಹೇಳಿದುದರ ಅರ್ಥ ಸ್ಪಷ್ಟವಾಯಿತೇ? ನಾವು ಇದಕ್ಕೆ ಗಮನ ಕೊಡೋಣ, ಜನನ ಮತ್ತು ಮರಣ ಚಕ್ರದ ಆಚೆಗಿರುವ ಅಂತಿಮ ಸತ್ಯವೆಂಬುದೇ ಪರಿಪೂರ್ಣ ಗುರುವಿನ ಸ್ಥಿತಿಯನ್ನು ತೋರುತ್ತದೆ. ಇದೇ ತತ್ವವನ್ನು ನಾವು ಅರಿತು, ಸಾಕ್ಷಾತ್ಕರಿಸಿಕೊಳ್ಳಬೇಕಾಗಿದೆ. ನಮ್ಮ ಗುರುಗಳು ಇನ್ನಿಲ್ಲ ಎಂಬ ಭ್ರಮಾತ್ಮಕ ಕಲ್ಪನೆಯನ್ನು ಬಿಡಿ. ಅವರು ನಮ್ಮ ಹೃದಯದಲ್ಲಿಯೇ ಇದ್ದಾರೆ ಇದಕ್ಕೆ ಪ್ರಾಣಾಹುತಿಯೇ ಒಂದು ಪುರಾವೆ. ಅವರು ನಮಗೆ ಪರಿಪೂರ್ಣವಾದ ಪದ್ಧತಿಯನ್ನು ಕೊಟ್ಟಿದ್ದಾರೆ. ಈ ಪದ್ಧತಿಯು ಮಾನವ ಜೀವನದ ವಿವಿಧ ಮುಖಗಳಿಗೆ, ಐಹಿಕ ಮತ್ತು ಆಧ್ಯಾತ್ಮಿಕಗಳಿಗೆ ಸಂಬಂಧಿಸಿದೆ. ಇದರ ನವೀನತೆಯು ಅಂದರೆ ಬೆಳಗಿನ ಧ್ಯಾನ, ಸಾಯಂಕಾಲದ ಶುದ್ದೀಕರಣ, ಮಲಗುವ ಮುಂಚೆ ಪ್ರಾರ್ಥನೆ, ನಿರಂತರ ಸ್ಮರಣೆ ಮತ್ತು ಹತ್ತು ನಿಯಮಗಳ ಪಾಲನೆಯಲ್ಲಿ ಅಡಕವಾಗಿದೆ. ಈಗ ಏಳುವ ಪ್ರಶ್ನೆಯೆಂದರೆ ಕೊರತೆ ಎಲ್ಲಿದೆ? ನಾವು ಅದನ್ನು ಕಂಡು ಹಿಡಿಯಬಲ್ಲೆವೆ? ಇಲ್ಲಿಯವರೆಗೆ ಉತ್ತರ ಕಾಣದ ಇವೇ ಸಮಸ್ಯೆಗಳು ನಮಗೆ ಎದುರಾಗುತ್ತಿವೆ.ಈಗಲಾದರೂ, ಎಚ್ಚೆತ್ತು ಅದಕ್ಕೆ ಉತ್ತರ ಕಂಡುಹಿಡಿಯಲು ಸಮಯವು ಇನ್ನೂ ಮಿಂಚಿಲ್ಲ.

    ನಮ್ಮ ಪ್ರೀತಿಯ ಪಾತ್ರರಾದ ನಮ್ಮ ಸದ್ಗುರುಗಳು, ಶ್ರೀ ಬಾಬೂಜಿ ಮಹರಾಜರನ್ನು ಸ್ಮರಿಸುವ ಇಂದಿನ ದಿನ ನಮ್ಮೆಲ್ಲರಿಗೂ ಶುಭದಿನವಾಗಿದೆ. ನಾವು ವಿನಮ್ರವಾಗಿ ನಮ್ಮ ಜೀವನವನ್ನು ರೂಪಿಸಿಕೊಂಡು ಅವನ ನಿರೀಕ್ಷೆಯಂತೆ ನಮ್ಮ ಜೀವನವನ್ನು ಪೂರ್ತಿಯಾಗಿ ಅವರ ಇಚ್ಛೆಗೆ ಒಳಪಡಿಸಿ ಅವರ ಧೈಯವನ್ನು ಪೂರೈಸಲು ಸದ್ಗುರುಗಳಾದ ಅವರೇ ಶಕ್ತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸೋಣ.

    (30 ನೇ ಏಪ್ರಿಲ್ 2001ರಂದು ಗುಲಬರ್ಗಾ ಸಮಾರಂಬದಲ್ಲಿ ಮಾಡಿದ ಭಾಷಣ.)