(ವಿಜಯವಾಡದ ಧ್ಯಾನ ಮಂದಿರದ ಉದ್ಘಾಟನಾ ಸಂದರ್ಭ, ೫-೫-೧೯೬೭

‘ಸತ್ಸಂಗ’ ನಡೆಸಲೋಸುಗ ಒಂದು ಕೊಠಡಿಯನ್ನು ಕಟ್ಟಿಸಿದ್ದಕ್ಕಾಗಿ, ಡಾ. ವಿ. ಪಾರ್ಥಸಾರಥಿಯವರ ಬಗ್ಗೆ ಕೃತಜ್ಞತೆಯ ಭಾವನೆಯೊಂದಿಗೆ, ಇಂದು ನಾನು ನಿಮ್ಮನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ. ಇದೊಂದು ಉತ್ತಮ ಮಟ್ಟದ ಕೆಲಸವೆಂದು ನನ್ನ ಭಾವನೆ. ಅವರು ಇದುವರೆಗೂ ಮಾಡುತ್ತ ಬಂದಿರುವ ಕಾರ್ಯವು ಸುಲಭವಾಗಿ ಪ್ರಗತಿಯನ್ನು ಹೊಂದುವುದು.

ನಮ್ಮ ಪೂರ್ವಜರು ತಮ್ಮ ಸಹಬಾಂಧವರ ಮತ್ತು ಇತರರೊಂದಿಗಿನ ಎಲ್ಲ ಲೌಕಿಕ ಬಂಧನಗಳನ್ನು ತ್ಯಜಿಸಿ, ಸಾಕ್ಷಾತ್ಕಾರದ ಮಾರ್ಗಗಳನ್ನು ಸಾಂಸಾರಿಕ ಕೆಲಸ ಕಾರ್ಯಗಳಿಂದ ದೂರವಿರುವ ಅಡವಿಗಳಲ್ಲಿ ಅರಸುತ್ತಿದ್ದರು. ಅಡವಿಗಳು ಯಾವ ಉದ್ದೇಶಕ್ಕೆ ಸಲ್ಲುತ್ತಿದ್ದವೋ, ಆ ಉದ್ದೇಶವನ್ನು ನಮ್ಮ ಮನೆಯಲ್ಲಿಯೇ, ನಮ್ಮ ಸುತ್ತಮುತ್ತ ನಿರ್ಮಿಸಲು ನಾವು ಸಹಜಮಾರ್ಗಪದ್ದತಿಯಲ್ಲಿ ಪ್ರಯತ್ನಿಸುತ್ತೇವೆ. ಅದಕ್ಕಾಗಿ ನಾವು ಮಾಡುವುದೇನೆಂದರೆ, ಭಗವಂನಲ್ಲಿ ಹೆಚ್ಚು ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತ ಹೋಗುತ್ತೇವೆ. ಅದರ ಉಪೋತ್ಪನ್ನವೆಂಬಂತೆ, ನಿಸ್ಸ೦ಗತ್ವವು ತ್ಪರಿಣಾಮವಾಗಿ ತಂತಾನೇ ಹಿಂಬಾಲಿಸುತ್ತದೆ. ಹೀಗೆ, ನಾವು ನಮ್ಮ ಕಡೆಯಿಂದ ವಿಶೇಷ ಪ್ರಯತ್ನವಿಲ್ಲದೆಯೇ ವೈರಾಗ್ಯದ ಸ್ಥಿತಿಗೆ ಸ್ವಾಭಾವಿಕವಾದ ರೀತಿಯಲ್ಲಿ ಮುಟ್ಟುತ್ತೇವೆ.

ನಮ್ಮ ಮುಂದೆ ಗುರಿಯೊಂದಿರಲೇಬೇಕು ಮತ್ತು ಅದನ್ನು ತಲುಪಲು ಅತ್ಯಂತ ಸಹಜ ರೀತಿಯಲ್ಲಿ ನಾವು ಪ್ರಯತ್ನಿಸಬೇಕು. ಸತ್ಯಸಾಕ್ಷಾತ್ಕಾರಕ್ಕೆ ವಿಧಾನಗಳು ಹಲವಾರು ; ಮತ್ತು ಪ್ರತಿಯೊಂದೂ ತನ್ನ ಸಾಮರ್ಥ್ಯವನ್ನು ಕುರಿತು ಪ್ರತಿಪಾದಿಸುತ್ತದೆ. ಆದರೆ ಯಾವುದಾದರೊಂದು ಪದ್ಧತಿಯನ್ನು ಅನುಸರಿಸುವ ಮೊದಲು, ಯಾವುದು ಅತ್ಯಂತ ಉತ್ತಮವಾದುದು ಎಂದು ನಾವು ಕಂಡುಕೊಳ್ಳಲೇಬೇಕಾದುದು ನಮ್ಮ ಕರ್ತವ್ಯ. ಜೀವನದ ರಹಸ್ಯವನ್ನು ಬಿಡಿಸಲು ನಿಜವಾದ ಪದ್ಧತಿಯು ಲಭಿಸುವುದು, ನಮ್ಮ ವೈಯಕ್ತಿಕ ವಿವೇಚನೆ ಹಾಗೂ ಪರಮಾತ್ಮನ ಅನುಗ್ರಹ ಇವುಗಳ ಮೇಲೆ ಅವಲಂಬಿತವಾಗಿವೆ.

ಮಾನವನ ಸಂಕಲ್ಪ ಶಕ್ತಿಯು ಭಗವಂತನಿಗೆ ತೀರ ಸಮೀಪವಾದದ್ದು ಎಂಬುದು ಸರ್ವಮಾನ್ಯ ವಿಷಯ.

`ನಮ್ಮ ಸದ್ಯದ ಅವನತಸ್ಥಿತಿಯು ನಮ್ಮ ಆಲೋಚನೆಗಳ ಪ್ರತಿಫಲ ; ಮತ್ತು, ನಮ್ಮ ಆಲೋಚನೆಗಳ ನೆರವಿನಿಂದಲೇ ನಮ್ಮನ್ನು ನಾವು ವಿಕಸನಗೊಳಿಸಿಕೊಳ್ಳುವುದು ಸಾಧ್ಯ. ದೈವಿಕತೆಯ ಅನ್ವೇಷಣೆಯಲ್ಲಿ ನಾವು ಅದನ್ನು ಬಳಸಿಕೊಂಡರೆ, ಅದು ನಮ್ಮನ್ನು ಕಟ್ಟಕಡೆಗೆ ನಮ್ಮ ಗುರಿಯ ಸಾಮೀಪ್ಯಕ್ಕೆ ಒಯ್ಯುತ್ತದೆ. ಗುರಿಯು ನಿಮ್ಮ ಕಣ್ಣೆದುರಿಗಿದೆಯೆಂದರೆ, ನೀವು ಪರಿಶುದ್ಧತೆಯ ಗಾಳಿಯನ್ನು ಪಡೆಯುತ್ತಿರುವಿರಿ ಎಂದರ್ಥ. ಇದು ನಿಮ್ಮಲ್ಲಿ ಲವಲವಿಕೆಯನ್ನು ಉಂಟುಮಾಡಿ, ಮುಂದಿನ ಪ್ರಗತಿಗೆ ಅಣಿಗೊಳಿಸುತ್ತದೆ. ಗುರಿಯ ಸಾಧನೆಗೆ ಮನುಷ್ಯನು ಕಾತರನಾಗಿದ್ದರೆ, ಒಂದು ಸಲ ಆರಂಭದ ಹೆಜ್ಜೆಯನ್ನು ಮುಂದಿಟ್ಟನೆಂದರೆ, ಉಳಿದವು ತಾವೇ ತಾವಾಗಿ ಅನುಸರಿಸಿಬರುತ್ತವೆ. ಸಾಧಕನು ವಿವಿಧ ಗುರಿಗಳಿಗೋಸ್ಕರ ವಿವಿಧ ತೋಡುಗಳನ್ನುಂಟು ಮಾಡಿಕೊಳ್ಳದಂತೆ, ಕೇವಲ ಒಂದೇ ಒಂದು ಗುರಿಯನ್ನು ಹೊಂದಿರಬೇಕು. “ತನ್ನ ಕರ್ತವ್ಯವನ್ನು ಮಾಡುತ್ತ ಹೋಗಬೇಕೇ ಹೊರತು, ಅದರ ಫಲಾಫಲಗಳನ್ನು ಕುರಿತು ಚಿಂತಿಸಬಾರದು” ಎಂದು ಶ್ರೀಕೃಷ್ಣನು ಒತ್ತಿ ಹೇಳಿದ್ದಾನೆ. ಅವನು ನಿಷ್ಕಾಮ ಕರ್ಮವನ್ನು ಪದೇಶಿಸಿದ ಕಾರಣವೇನು ? ದು ಹೀಗಿದೆ : ಫಲಾಫಲಗಳನ್ನು ಕುರಿತು ಚಿಂತಿಸುತ್ತಹೋದರೆ, ನೀವು ಅದರಲ್ಲಿಯೇ ಮುಳುಗಿಬಿಡುವಿರಿ. ಮತ್ತು ನಿಮ್ಮನ್ನು ಗುರಿಯತ್ತ ಪ್ರೇರೇಪಿಸಿ ಮುಂದೊತ್ತುವ ಶಕ್ತಿಯು ಕವಲೊಡೆದುಹೋಗುತ್ತದೆ. ಹೀಗೆ, ಶಕ್ತಿಯ ಪ್ರವಾಹವನ್ನು ಬತ್ತಿಸಿ ಬರಿದುಗೊಳಿಸುವ ವಿವಿಧ ಕವಲು ನಾಲೆಗಳನ್ನು ನಿರ್ಮಿಸಿಕೊಂಡಂತಾಗುತ್ತದೆ. ಹಾಗಾಗಿ, ಕೇವಲ ಒಂದೇ ಒಂದಾದ ಗುರಿಯನ್ನು ಪಡೆಯಲು ಸರ್ವ ಪ್ರಯತ್ನವಿರಬೇಕು, ಮತ್ತು ಫಲಾಫಲಗಳ ಚಿಂತೆಯಿರಬಾರದು. ಅದಿಲ್ಲದಿದ್ದರೆ ನಿಮ್ಮ ಶಕ್ತಿಧಾರೆಯು ವಿವಿಧ ಕಾಲುವೆಗಳಲ್ಲಿ ಹರಿದು ಬಹಳಷ್ಟು ಕ್ಷೀಣಗೊಳ್ಳುತ್ತದೆ.

ಭಗವಂತನು ಅತ್ಯಂತ ಸೂಕ್ಷ್ಮತಮ ಸತ್ತೆ, ಹೇಗಾದರೂ ನಾವು ಅವನಿರುವಂತೆ ಸೂಕ್ಷ್ಮತೆಯನ್ನು ಹೊಂದಿದೆವಾದರೆ, ‘ಸಾಯುಜ್ಯ’ವನ್ನು ಹೊಂದಿದೆವೆಂದೇ ಅರ್ಥ. ‘ಸಹಜಮಾರ್ಗ’ದಲ್ಲಿ ನಾವು ಆರಂಭದಿಂದಲೇ ಸೂಕ್ಷ್ಮರಾಗಿ ಬೆಳೆಯಲು ಪ್ರಯತ್ನಿಸುತ್ತೇವೆ ಮತ್ತು ಗುರುವು ಕೂಅದಕ್ಕೋಸ್ಕರವೇ ಶ್ರಮಿಸುತ್ತಾನೆ. ನಾವು ಕರ್ತವ್ಯವನ್ನು ಪೂಜೆಯೆಂದು ತಿಳಿಯುತ್ತೇವೆ ; ಅದೇ ನಮ್ಮನ್ನು ಸೂಕ್ಷ್ಮತರವಾದ ಸ್ಥಿತಿಗೆ ಒಯ್ಯಬಹುದಾದಂಥದು. ನಾನು ಬೇರೆಡೆಯಲ್ಲಿ ಹೇಳಿದಂತೆ, ನಾವು ಈಗಾಗಲೇ ಉಂಟಾದ ಕೃತಕ ಸ್ಪಂದನಗಳನ್ನು ತಡೆಗಟ್ಟಿ, ದೈವೀ ಸ್ಪಂದನಗಳನ್ನು ಹೊಂದಲು ಪ್ರಯತ್ನಿಸುತ್ತೇವೆ. ಈ ಪದ್ಧತಿಯಲ್ಲಿ ಸೂಕ್ಷ್ಮತೆಯತ್ತವೇ ನಮ್ಮ ಸಂಪೂರ್ಣ ಲಕ್ಷವು ನಿರ್ದೇಶಿಸಲ್ಪಡುತ್ತದೆ. ಹೀಗೆ, ಯೋಗಶಾಸ್ತ್ರದ ಪ್ರಕಾರ ಯಾವುದು ನಮ್ಮ ಶರೀರ ಮಂಡಲದಲ್ಲಿ ಸ್ಕೂಲತೆಯನ್ನು ಹೆಚ್ಚಿಸುವುದೋ ಅವೆಲ್ಲವನ್ನೂ ಪರಿತ್ಯಜಿಸುತ್ತೇವೆ. ಹೀಗೆ ಮುಂದುವರಿದು, ಸ್ಕೂತೆಯೆಲ್ಲವೂ ತೊಲಗಿಹೋಗುವ ಸಮಯ ಬರುತ್ತದೆ ; ಮತ್ತೆ, ಸೂಕ್ಷ್ಮತೆಯೂ ತನ್ನ ಕರ್ಷಣೆಯನ್ನು ಕಳೆದುಕೊಳ್ಳುವುದು. ಅದರ ನಂತರ ಬರುವುದೇನು ? – ಅದು, ನಾವು ಅಪೇಕ್ಷಿಸಿ ಅರಸುತ್ತಿದ್ದ ವಸ್ತುವಿಗಿಂತ ಕಿಂಚಿತ್ತೂ ಕಡಿಮೆಯದಲ್ಲ. ನೀವೆಲ್ಲರೂ ಆ ಸ್ಥಿತಿರಹಿತ ಸ್ಥಿತಿಯನ್ನು ಪಡೆಯುವಂತಾಗಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

***