ನಾವೆಲ್ಲರೂ ನಮ್ಮ ಜೀವನದ ಗುರಿಯನ್ನು ನಿರ್ಧರಿಸಿಕೊಂಡು ಶ್ರೀ ಬಾಬೂಜಿ ಮಹಾರಾಜರು ಹೇಳಿಕೊಟ್ಟ ಪದ್ಧತಿಯ ಪ್ರಕಾರ ಸುಮಾರು ವರ್ಷಗಳಿಂದ ಸಾಧನೆಯನ್ನು ಸರಿಯಾಗಿಯೇ ಮಾಡುತ್ತಲಿದ್ದೇವೆ. ಬೆಳಿಗ್ಗೆ ಧ್ಯಾನ, ಸಾಯಂಕಾಲ ಶುದ್ದೀಕರಣ ಮತ್ತು ರಾತ್ರಿ ಪ್ರಾರ್ಥನೆಯನ್ನು ತಪ್ಪದೆ ನಿಯಮಿತವಾಗಿ ಮಾಡುತ್ತಿದ್ದೇವೆ. ವಾರಕ್ಕೆ ಸರಿಯಾಗಿ ಸತ್ಸಂಗಕ್ಕೆ ಕೂಡ ಹೋಗುತ್ತಾ ಇದ್ದೇವೆ. ಇದಲ್ಲದೆ ಎಲ್ಲೆಲ್ಲಿ ಸಮಾರಂಭಗಳನ್ನು ಏರ್ಪಡಿಸುವರೋ ಅಂದರೆ ಬಸಂತ ಉತ್ಸವ, ನಮ್ಮ ಗುರುಗಳ ಜನ್ಮ ದಿವಸ ಮತ್ತು ಸಂಸ್ಥಾಪಕರ ದಿನಾಚರಣೆ ಇತ್ಯಾದಿ, ಅಲ್ಲಿ ಕೂಡ ತಪ್ಪದೆ ಪಾಲ್ಗೊಳ್ಳುತ್ತೇವೆ. ಇವೆಲ್ಲವುಗಳು, ಸಾಧನೆಯಲ್ಲಿರುವ ನಮ್ಮ ಅಭಿರುಚಿಯನ್ನು ತೋರಿಸುವವು. ಹೆಚ್ಚಿನದಾಗಿ ನಮ್ಮ ಅನುಕೂಲದ ಪ್ರಕಾರ ನಿರಂತರ ಸ್ಮರಣೆ ಕೂಡ ಆದಷ್ಟು ಮಾಡುತ್ತಿದ್ದೇವೆ.

ನಮ್ಮ ಗುರುಗಳು ಹೇಳಿಕೊಟ್ಟಿರುವ ನಿರಂತರ ಸ್ಮರಣೆಯ ಕಡೆಗೆ ಹೆಚ್ಚು ಗಮನ ಕೊಡುವುದರ ಬಗ್ಗೆ ಸಾಕಷ್ಟು ಸಲ ವಿಚಾರ ಮಾಡಿದಾಗ್ಯೂ ನಮ್ಮ ಅನಿಸಿಕೆಯಲ್ಲಿ ಅದರ ಗಂಭೀರತೆ ಇನ್ನೂ ಬಂದಿಲ್ಲ ಮತ್ತು ಅದರ ಬಗ್ಗೆ ಹೆಚ್ಚು ತಿಳುವಳಿಕೆ ಹುಟ್ಟಿಲ್ಲ. ನಮ್ಮಲ್ಲಿ ಕೆಲವು ಹಿರಿಯ ಜನ ಶ್ರೀ ಬಾಬುಜಿಯವರನ್ನು ಭೌತಿಕ ಶರೀರದಲ್ಲಿ ನೋಡಿದ್ದಾರೆ. ನಮ್ಮದೇ ಆದ ಕಲ್ಪನೆಯ ಪ್ರಕಾರ ಸ್ಮರಣೆ ಮಾಡುತ್ತಿದ್ದೇವೆ.

  1. ಶ್ರೀ ಬಾಬೂಜಿ ಮಹಾರಾಜರ ಆಕಾರ, ಮುಖ, ದೇಹ ಇಲ್ಲವೆ ಅವರ ಗಡ್ಡ, ಮೀಸೆ, ಮಾತಾಡುವ ಧ್ವನಿ ಅವರ ಟೋಪಿ ಅವರು ಸೇದುವ ಹುಕ್ಕಾ ಮತ್ತು ಅವರ ಹಾವ-ಭಾವ ಇತ್ಯಾದಿಗಳನ್ನು ಪದೇ ಪದೇ ಸ್ಮರಿಸುವುದೇ ಸತತ ಸ್ಮರಣೆಯೆಂಬ ತಿಳುವಳಿಕೆ ಇದೆ.
  1. ಶ್ರೀ ಬಾಬೂಜಿಯವರ ಮಹಾಸಮಾಧಿಯ ನಂತರ ಅವರ ಮಾತುಗಳು, ಹೇಳಿಕೆಗಳು, ಕೆಲವು ವಾಕ್ಯಗಳು ಮತ್ತು ಸಂದರ್ಭಗಳನ್ನು, ಕೆಲವು ಕಥೆಗಳನ್ನು ನೆನೆಸುವದೇ ಸತತ ಸ್ಮರಣೆ ಎಂದು ತಿಳಿಯಲಾಗಿದೆ.
  1. ಶ್ರೀ ಬಾಬೂಜಿಯವರು ಬರೆದ ಪುಸ್ತಕಗಳನ್ನು, ನಿಬಂಧಗಳನ್ನು ಮತ್ತು ನುಡಿಮುತ್ತುಗಳು ಇತ್ಯಾದಿಗಳನ್ನು ನೆನೆಸುತ್ತಾ ಕೂಡುವುದೇ ನಿರಂತರ ಸ್ಮರಣೆ ಎಂದು ತಿಳಿದಿದ್ದೇವೆ.
  1. ವಿಶೇಷವಾಗಿ ಸತ್ಸಂಗಕ್ಕೆ ಹೋಗುವದು ಕೂಡ ಸ್ಮರಣೆ ಎಂದು ತಿಳಿದು ಬರುತ್ತದೆ.
  1. ಶ್ರೀ ಬಾಬೂಜಿಯವರು ಹೇಳಿದಂತೆ ನಾವು ಮಾಡುವ ಎಲ್ಲ ಕೆಲಸ ಕಾರ್ಯಗಳನ್ನು ಆತನೇ ಮಾಡುತ್ತಿರುವನು ಮತ್ತು ಎಲ್ಲವೂ ಆತನದೆ. ನಾನು ಕೇವಲ ನಾಮ ಮಾತ್ರಕ್ಕೆ ಮೇಲ್ವಿಚಾರಕ ಎಂದು ತಿಳಿಯುವದು ಒಂದು ಸ್ಮರಣೆ. ಇದು ಬಹಳ ಕಷ್ಟದ್ದು ಮತ್ತು ಸೂಕ್ಷ್ಮದ್ದಾಗಿದೆ. ಆದಾಗ್ಯೂ ಪ್ರಯತ್ನ ಸಾಗಿದೆ. ಇದು ಕೂಡ ಒಂದು ರೀತಿಯ ಸತತ ಸ್ಮರಣೆ ಎಂದು ತಿಳಿದಿದ್ದೇವೆ.

ಯಾರು ಶ್ರೀ ಬಾಬೂಜಿ ಮಹಾರಾಜರನ್ನು ನೋಡಿಲ್ಲವೋ ಅವರು ನಿರಂತರ ಸ್ಮರಣೆಗಾಗಿ ಈಶ್ವರೀಯ ಪ್ರಕಾಶದ ಮೇಲೆ ಧ್ಯಾನ ಮಾಡುತ್ತಾ ಹೋದಂತೆ ಕೆಲ ಕಾಲದ ನಂತರ ಅಲ್ಲಿ ಉಂಟಾದ ಸ್ಥಿತಿಯನ್ನು ಸ್ಮರಿಸುವ ವಿಧಾನವೇ ಸತತ ಸ್ಮರಣೆಯಾಗುವದು ಎಂಬುದೂ ಸರಿ. ಕೆಲವರು ಧ್ಯಾನದಲ್ಲಿ ಬರುವ ಬಾಬೂಜಿ ಮಹಾರಾಜರ ಸ್ವರೂಪವನ್ನು ಪದೇ ಪದೇ ಗಮನದಲ್ಲಿ ತರುವುದೇ ಸತತ ಸ್ಮರಣೆ ಎಂದು ತಿಳಿದಿದ್ದೇವೆ. ಈ ಸಂದರ್ಭದಲ್ಲಿ ಅಭ್ಯಾಸಿಗಳು ಶ್ರೀ ಬಾಬೂಜಿಯವರು ಕೊಟ್ಟ ಸಂದೇಶವನ್ನು ಗಮನವಿಟ್ಟು ವಿಚಾರಿಸಿ ಸರಿಯಾಗಿ ಅರ್ಥಮಾಡಿಕೊಂಡರೆ ಒಳ್ಳೆಯದು

“ವಸ್ತುತಃ ನಿಜವಾದ ಗುರುವು ಆತನ ಅಂತರಾತ್ಮವೇ ವಿನಃ * ಬಾಹ್ಯ ಸ್ವರೂಪವಲ್ಲ. ಆದರೂ ರೂಪವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವದು ಸಾಧ್ಯವಿಲ್ಲ, ಆದರೆ ಯಾರು ಭೌತಿಕ ರೂಪವೇ ಗುರುವೆಂಬ ಕಲ್ಪನೆಗೆ ಅಂಟಿಕೊಳ್ಳುವರೋ ಅವರು ಸ್ಕೂಲತೆಯ ಜಾಲದಲ್ಲಿ ಸಿಕ್ಕು ಗೊಂದಲದಲ್ಲಿ ಬೀಳುವರು. ಕಬೀರ ದಾಸನು ಇಂಥವರನ್ನು ‘ಗುರುಪಶು’ ಎಂದು ಸರಿಯಾಗಿಯೇ ಕರೆದಿದ್ದಾನೆ”. (ಸತ್ಯೋದಯ-82 )

ಈ ಕಥೆ ಇಷ್ಟಕ್ಕೆ ಮುಗಿಯುವದಿಲ್ಲ. ಒಂದು ವೇಳೆ 10-15 ಅಭ್ಯಾಸಿಗಳು ಒಟ್ಟುಗೂಡಿದಾಗ ನಿರಂತರ ಸ್ಮರಣೆ ಅಂದರೇನು ಎಂದು ಪ್ರಶ್ನೆ ಕೇಳಿದಾಗ ಬರುವ ಉತ್ತರಗಳು, ಪ್ರತಿಯೊಬ್ಬರದು ಬೇರೆ ಬೇರೆಯಾಗಿರುತ್ತದೆ. ಈ ಉತ್ತರಗಳು ಅವರವರ ವೈಯುಕ್ತಿಕ ಅನಿಸಿಕೆಯ ಮೇಲೆ ಅವಲಂಬಿಸಿರುತ್ತವೆ. ಅವುಗಳ ಮೇಲೆ ವಿಚಾರ ಮಾಡಿದಾಗ ಈ ಕೆಳಕಂಡ ಅಂಶಗಳು ಹೊರಬೀಳುತ್ತವೆ.

  1. ಗುರುಗಳ ಭೌತಿಕ ಇರುವಿಕೆಯ ಬಗ್ಗೆ ವಿಚಾರ ಮಾಡುವದೇ ಸತತ ಸ್ಮರಣೆ.
  1. ಸತತ ಸ್ಮರಣೆಯೆಂದರೆ ಒಂದು ಭೌತಿಕ ಕ್ರಿಯೆ.

ಬಹು ಕಾಲದಿಂದ ನಮ್ಮ ಸಾಧನೆಯು ಇದೇ ಪ್ರಕಾರ ಸಾಗಿದೆ ನಿರಂತರ ಸ್ಮರಣೆಯ ಬಗ್ಗೆ ಎಷ್ಟೋ ಭಾಷಣಗಳಾದವು. ಚರ್ಚೆಗಳು ಮತು ಕಾರ್ಯಗಾರಗಳಾದವು. ಸಾಕಷ್ಟು ಸಮಧಾನವನ್ನು ಕೊಟ್ಟರೂ ಪರಿಣಾಮ ಫಲಕಾರಿಯಾಗಲಿಲ್ಲ. ಕಾರಣ ನಾವು ಯಾರೂ ಇದರ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಒಂದು ವೇಳೆ ಇದೇ ತರಹ ನಮ್ಮ ಸಾಧನೆ ಮುಂದುವರಿದರೆ ನಾವು ಎಲ್ಲಿಗೆ ಮುಟ್ಟುವೆವು ಮತ್ತು ನಮ್ಮ ಗತಿ ಏನಾಗುವುದು? ಯೋಚಿಸಿದರೆ ಮನಸ್ಸಿಗೆ ಒಂದು ತರಹದ ಆಘಾತವಾಗುವುದು.

ಶ್ರೀ ಬಾಬೂಜಿ ಮಹಾರಾಜರು ನಮಗೆ ಬೇಗ ಗುರಿಯನ್ನು ತಲುಪಲು ಕೊಟ್ಟ ಸಾಧನಾ ಪದ್ಧತಿಯು ಬಹಳ ಪ್ರಭಾವಶಾಲಿ ಮತ್ತು ಕ್ರಿಯಾತ್ಮಕವಾಗಿದೆ. ಅದರಿಂದಾಗಿ ನಾವು ಮಾಡುವ ಸಾಧನೆ ಕೂಡ ಕ್ರಿಯಾತ್ಮಕವಾಗಲೇ ಬೇಕು. ಇಲ್ಲಿ ಭೌತಿಕತೆಯ ಪ್ರಶ್ನೆಯೇ ಇಲ್ಲ. ಎಲ್ಲವೂ ನಮ್ಮ ವಿಚಾರ ಶಕ್ತಿಯನ್ನು ಕಾರ್ಯಗತಗೊಳಿಸಿದರೆ ಮಾತ್ರ ಸಾಧ್ಯ. ತಪ್ಪು ಕಲ್ಪನೆ ಮತ್ತು ತಪ್ಪು ವಿಚಾರಗಳು ನಮ್ಮನ್ನು ಪ್ರಗತಿಯ ಕಡೆಗೆ ಒಯ್ಯುವದರ ಬದಲು ಅಧೋಗತಿಯ ಕಡೆಗೆ ತಳ್ಳುವವು. ಈಗಲಾದರು ನಮ್ಮ ಮನಸ್ಸನ್ನು ನಮ್ಮ ಪ್ರಯತ್ನ ಮತ್ತು ಗುರುಗಳ ಕೃಪೆಯಿಂದ ಊರ್ಧ್ವಮುಖಗೊಳಿಸಬೇಕು.

ಇದು ಹೇಗೆ ಸಾಧ್ಯ ?

ನಮ್ಮ ಸಾಧನೆಯಲ್ಲಿ ಮುಖ್ಯ ಪಾತ್ರ ಮನಸ್ಸಿನದಾಗಿದೆ. ಎಲ್ಲವುದಕ್ಕೂ ನಮ್ಮ ಮನಸ್ಸೇ ಕಾರಣ. ಅದರಿಂದಲೇ ನಾವು ಈ ಸ್ಥಿತಿಗೆ ಬಂದಿದ್ದೇವೆ ಮತ್ತು ಅದೇ ಮನಸ್ಸು ನಮ್ಮನ್ನು ನಮ್ಮ ಗುರಿಯ ಕಡೆಗೆ ಒಯ್ಯುವದು. ಮನಸ್ಸು ಬಹಳ ಚಂಚಲ. ಒಂದು ಕಡೆ ನಿಲ್ಲುವುದಿಲ್ಲ. ಅದನ್ನು ಒಂದು ಕಡೆ ಅಥವಾ ಒಂದೇ ವಿಚಾರದ ಮೇಲೆ ನೆಲೆಸಿರುವಂತೆ ಮಾಡುವ ಪ್ರಕ್ರಿಯವೇ ಧ್ಯಾನ. ಆ ನಮ್ಮ ವಿಚಾರ ಕೂಡ ಉಚ್ಚತಮವಾಗಿರಬೇಕು. ಅದೇ ನಮ್ಮ ಉದ್ದೇಶ. ನಾವು ಆ ಅಂತಿಮ ಸ್ಥಿತಿಯನ್ನು ಪಡೆದು ಅದರಲ್ಲಿ ಲಯ ಹೊಂದುವುದೇ ನಮ್ಮ ಗುರಿ.

ನಿಜವಾಗಿ ಹೇಳಬೇಕೆಂದರೆ ನಾವು ಮೊದಲು ನೆನಪಿನಲ್ಲಿ ಇರುವುದನ್ನು ಪುನಃ ಮನಸ್ಸಿನಲ್ಲಿ ತರುವುದೇ ಸ್ಮರಣೆ. ಮುಖ್ಯವಾಗಿ ಇಂದ್ರಿಯಗಳಿಗೆ ಗೋಚರವಾಗುವ ಹೆಸರು, ಸ್ಥಳ, ವಸ್ತು, ಮಾತು ಸಂದರ್ಭ ಇತ್ಯಾದಿಗಳನ್ನು ನಾವು ಸ್ಮರಿಸುತ್ತೇವೆ. ಏಕೆಂದರೆ ಅವೇ ನಮ್ಮ ಮನಸ್ಸಿನಲ್ಲಿ ಮುದ್ರಿತಗೊಂಡಿರುತ್ತವೆ. ಆದರೆ ಇಂದ್ರಿಯಗಳಿಗೆ ಗೋಚರವಾಗದಿರುವಂತಹ ಯಾವ ವಿಷಯಗಳನ್ನೂ ನಾವು ನೆನಪಿನಲ್ಲಿಡಲು ಸಾಧ್ಯವಿಲ್ಲ ಆದುದರಿಂದ ಅವುಗಳನ್ನು ಸ್ಮರಿಸುವ ಪ್ರಶ್ನೆಯೇ ಬರುವದಿಲ್ಲ. ಆಗ ನಾವು ನೆನಿಸಬೇಕಾದದ್ದು ಏನು?

ನಮ್ಮ ಸಾಧನೆಯಲ್ಲಿ ಧ್ಯಾನ ಮಾಡುವಾಗ ನಮ್ಮ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೃದಯದಲ್ಲಿ ಈಶ್ವರೀಯ ಪ್ರಕಾಶದ ಬಗ್ಗೆ ಕಲ್ಪಿಸಿ ಅದರ ಮೇಲೆಯೇ ನಮ್ಮ ವಿಚಾರವನ್ನು ನೆಲೆಸಿರುವಂತೆ ಪ್ರಯತ್ನ ಮಾಡುತ್ತೇವೆ. ಈ ಪ್ರಕಾಶವು ಕೇವಲ ಕಲ್ಪನೆ ಮಾತ್ರ ವಾಸ್ತವಿಕವಾದುದಲ್ಲ. ನಾವು ನಮ್ಮ ಮನಸ್ಸನ್ನು ಇಂದ್ರಿಯಾತೀತವಾಗಿಡಲು ಪ್ರಯತ್ನಿಸುತ್ತೇವೆ. ಇದರ ವೈಶಿಷ್ಟ್ಯವೆಂದರೆ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಲು ಒಂದು ಉಚ್ಚ ಗುರಿಯನ್ನು (ಇಂದ್ರೀಯಾತೀತ) ಪಡೆಯುವ ಸಂಕಲ್ಪದಿಂದ ಧ್ಯಾನದಲ್ಲಿ ಕುಳಿತಾಗ ಬೇರೆ ವಿಚಾರಗಳಿಗೆ ಆಸ್ಪದ ಕೊಡದೆ ಹೆಚ್ಚೆಚ್ಚು ಸಮಯದವರೆಗೆ ಅಂತಹ ವಿಚಾರದಲ್ಲಿದ್ದು ಮನಸನ್ನು ಸ್ಥಿತಿಯಲ್ಲಿ ಸ್ಥಿರಗೊಳಿಸಿದ ನಂತರ ಬಾಬೂಜಿ ಮಹಾರಾಜರು ತಮ್ಮ ಕೃಪೆಯಿಂದ ನಾವು ಪಡೆಯಬೇಕಾದ ಸ್ಥಿತಿಯ ಪರಿಚಯವನ್ನು ಆಗಾಗ ನಮ್ಮ ಅನುಭವ ಮತ್ತು ಅನಿಸಿಕೆಯ ರೂಪದಲ್ಲಿ ಪ್ರಕಟ ಮಾಡುತ್ತಾರೆ. ಮೊದಮೊದಲು ನಮಗೆ ಅದರ ಅರಿವು ಕ್ಷಣಿಕವಾಗಿ ಅನುಭವಕ್ಕೆ ಬಂದು ಆಮೇಲೆ ಸಾಕಷ್ಟು ಸಮಯದವರೆಗೆ ಇರುವದು. ಇಂತಹ ಅನಿಸಿಕೆ ಮತ್ತು ಅನುಭವಗಳನ್ನು ಬಹಳ ಜಾಗರೂಕತೆಯಿಂದ ಗುರುತಿಸಿ, ಆ ಸ್ಥಿತಿಯಲ್ಲಿ ಇರುವುದೇ ನಮ್ಮ ಸಾಧನೆ ಮತ್ತು ಅದೇ ನಮ್ಮನ್ನು ಗುರಿಯ ಕಡೆಗೆ ಒಯ್ಯುತ್ತದೆ. ಅಂತಹ ಸ್ಥಿತಿಯನ್ನು ಯಾವಾಗಲೂ ನಾವು ಸ್ಮರಿಸುವ ಕ್ರಿಯೆವೇ ನಿರಂತರ ಸ್ಮರಣೆಯಾಗುವುದು. ಇದರಂತೆಯೇ ಪ್ರತಿ ಸಲ ಶ್ರೀ ಗುರುಗಳು ಒಂದೊಂದು ಸ್ವರೂಪವನ್ನು ಪ್ರಕಟಗೊಳಿಸುವರು. ಹೀಗೆ ನಮ್ಮ ಸತತ ಸ್ಮರಣೆ ಕೂಡ ಬದಲಾಗುತ್ತ ಹೋಗುವದು.

ನಮ್ಮ ಸಾಧನೆಯಲ್ಲಿ ‘ನಾನು ಮತ್ತು ನನ್ನದು’ ಎಂಬುದರ ಬಗ್ಗೆ ವಿಚಾರ ಮಾಡಿದಾಗ ಒಂದು ಹೊಸ ವಿಚಾರ ಗೋಚರಿಸುವದು. ಅಭ್ಯಾಸಿಯು ತನ್ನನ್ನು ಬಿಟ್ಟು ಎಲ್ಲವನ್ನು ಸ್ಮರಿಸಬಹುದು. ತನ್ನನ್ನು ತಾನು ಏಕೆ ಸ್ಮರಿಸಲು ಸಾಧ್ಯವಿಲ್ಲ? ಕಾರಣ ಇಷ್ಟೇ, ತಾನು ತನ್ನನ್ನು ಅರಿತಿಲ್ಲ ಮತ್ತು ಆ ವಿಚಾರ ಮನಸ್ಸಿನಲ್ಲಿರುವದಿಲ್ಲ, ಇದರ ಅರ್ಥವೇನೆಂದರೆ ನಾವು ನಮ್ಮಿಂದ ಬೇರೆಯಾದಾಗ ಮಾತ್ರ ನೆನಸಬಹುದು ಇಲ್ಲದಿದ್ದರೆ ಇಲ್ಲ. ನಾವು ಸಾಧಿಸಬೇಕಾದ ಗುರಿಯೆಂಬುದು ನಮ್ಮಲ್ಲಿ ಅಡಗಿದ ಶುದ್ಧ, ಸರಳ, ಸೂಕ್ಷ್ಮ ಮತ್ತು ಸ್ಥಿರವಾದ ಸ್ಥಿತಿಯಲ್ಲಿರುವ ಮನಸ್ಸು ಅದೇ “ನಾನು” ಎಂಬುವದು. ಆದರೆ ಅದನ್ನು ನಾವು ಪೂರ್ಣವಾಗಿ ಮರೆತು “ನನ್ನದು” ಎಂಬುದರ ಬಗ್ಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿದ್ದೇವೆ. ಎಲ್ಲಿಯವರೆಗೆ “ನನ್ನದು” ಎಂಬುವದನ್ನು ಪೂರ್ಣವಾಗಿ ಪ್ರಳಯ ಮಾಡುವದಿಲ್ಲವೋ ಅಲ್ಲಿಯವರೆಗೆ “ನಾನು” ಎಂಬುದರ ಅರಿವು ಆಗಲಾರದು. ಈ ಸ್ಥಿತಿಯನ್ನು ತಂದುಕೊಳ್ಳಬೇಕಾದರೆ ನಾವು ಈ “ನನ್ನದು” ಎಂಬುದನ್ನು ಯಾರು “ತನ್ನದನ್ನು” ಪೂರ್ತಿಯಾಗಿ ಕಳೆದುಕೊಂಡಿದ್ದಾನೆಯೋ “ಆತನೊಡನೆ ಜೋಡಿಸತಕ್ಕದ್ದು. ಅದರಿಂದಾಗಿ ನನ್ನದು ಎಲ್ಲವೂ ಹೋಗಿ “ಆತನದಾಗುತ್ತದೆ ಮತ್ತು “ನಾನು” ಹೋಗಿ ಆತನ ಅರಿವು ಕೂಡ ಹೋಗಿ “ಆತನ” ಮನಸ್ಸಿನ ಸ್ಥಿತಿ ಬರುತ್ತದೆ. ಈ ನಿರಂತರ ನಮ್ಮ ಮನಸ್ಸಿನ ಪ್ರಯತ್ನಕ್ಕೆಯೇ ನಿರಂತರ ಸ್ಮರಣೆ ಎನ್ನುವರು.

ಮನಸ್ಸಿನ ಇನ್ನೊಂದು ವಿಶೇಷತೆ ಏನೆಂದರೆ ಅದರಲ್ಲಿ ಎರಡು ಪ್ರಕಾರದ ಸ್ಮರಣೆಗಳಿರುತ್ತವೆ. ಒಂದು ಸಕ್ರಿಯ (Active) ಇನ್ನೊಂದು ಅಕ್ರಿಯ (Passive) ಸ್ಮರಣೆ. ಬಹಳ ಕಾಲದ ನಂತರ ನಾವು ಒಬ್ಬ ಮನುಷ್ಯನನ್ನು ಗುರುತಿಸಿ ಅವನ ಪರಿಚಯ ಮಾಡಿ ಅವನ ಹೆಸರು ನೆನಪಿಗೆ ಬಂದರೆ ಅದು ಸಕ್ರಿಯ ಸ್ಮರಣೆ ಮತ್ತು ಆತನ ಹೆಸರು ನಮ್ಮ ನೆನಪಿಗೆ ಬಾರದೆ ಇದ್ದಾಗ, ಬೇರೆ ಎರಡನೆಯವರು ಹೇಳಿದ ಮೇಲೆ ನಮಗೆ ನೆನಪು ಬಂದರೆ ಅದನ್ನು ಅಕ್ರಿಯ ಸ್ಮರಣೆ ಎಂದು ಹೇಳುವರು. ಸಕ್ರಿಯ ಸ್ಮರಣೆಯು ಮುಂದುವರೆದು ಮಾಡುವದೆಲ್ಲವು ಆತನೆ ಮತ್ತು ಆಗುತ್ತಿರುವದೆಲ್ಲ ಆತನಿಂದಲೇ ಎಂಬ ಅರಿವು ಮೂಡಿದಾಗ ಆತನ ನೆನಪನ್ನು ಪ್ರಜ್ಞೆಯ ಹಿಂದಿರುವ ಇರುವಿಕೆಯಾಗಿ ಅದು ಅಕ್ರಿಯ ಸ್ಮರಣೆಯುಂಟಾಗುತ್ತದೆ. ಸಕ್ರಿಯ ಸ್ಮರಣೆಯು ಅಕ್ರಿಯ ಸ್ಮರಣೆಯಾಗಿ ತಾನೆ ತಾನಾಗಿ ಪ್ರಕಟಗೊಳ್ಳುತ್ತದೆ. ನಮ್ಮ ಸಾಧನೆಯಲ್ಲಿ ನಮ್ಮ ಗುರಿಯು ಕೂಡ ಅಕ್ರಿಯ ಸ್ಮರಣೆಯಲ್ಲಿರುವಂತೆ ಮಾಡಬೇಕು. ಅಂದರೆ ಅದು ನಮ್ಮ ಅರ್ಧಪ್ರಜ್ಞೆ ಅಥವಾ ಸುಪ್ತ ಮನಸ್ಸಿನಲ್ಲಿ(Sub Conscious Mind) ಪೂರ್ತಿಯಾಗಿ ಮುದ್ರಿತಗೊಳ್ಳಬೇಕು. ಬಹುಶಃ ಇದಕ್ಕೆಯೇ ಶ್ರೀ ಬಾಬೂಜಿ ಮಹರಾಜರು ಸ್ಮರಣೆ ಇಲ್ಲದ ಸ್ಮರಣೆ ಎಂದು ಒತ್ತಿ ಹೇಳಿದ್ದಾರೆ. ಇದು ನಮ್ಮ ನಿರಂತರ ಸ್ಮರಣೆಯಿಂದಲೇ ಸಾಧ್ಯ ಮತ್ತು ಇಂತಹ ಸ್ಮರಣೆ ಇಂದ್ರಿಯಾತೀತವಾಗಿರುತ್ತದೆ.

ನಾವೆಲ್ಲರೂ ದಿನಾಲು ಯಾವುದಾದರೊಂದು ವಿಚಾರದಲ್ಲಿಯೇ ಕಾಲ ಕಳೆಯುತ್ತೇವೆ. ಆ ವಿಚಾರವು ಭೂತಕಾಲದ ಘಟನೆ/ವ್ಯವಹಾರ- ದ್ದಾಗಿರಬಹುದು ಅಥವಾ ಭವಿಷ್ಯತ್ತಿನ ಸಂಬಂಧವಾಗಿರಬಹುದು. ಆದರೆ ವರ್ತಮಾನ ಕಾಲದ್ದಾಗಿರುವದಿಲ್ಲ. ಆದುದರಿಂದ ಆಧ್ಯಾತ್ಮಿಕ ಸಾಧಕರು ಯಾವಾಗಲೂ ವರ್ತಮಾನ ಸ್ಥಿತಿಯಲ್ಲಿದ್ದು ಯಾವದೂ ಇಚ್ಛೆ ಮನಸಿನಲ್ಲಿ ಬಾರದಂತೆ ಕೇವಲ ನಮ್ಮ ಅಂತರಾತ್ಮದ ಕಡೆಗೆ ಲಕ್ಷ ಕೊಟ್ಟು ಆ ಅಂತಿಮ ನಮ್ಮ ಇರುವಿಕೆಯ ಸ್ಥಿತಿಯ ಬಗ್ಗೆ ಯೋಚಿಸುತ್ತಿರಬೇಕು. ಕಾಲಕ್ರಮೇಣ ಅದರ ಅರಿವು ಮಾಡಿಕೊಳ್ಳುವದರಲ್ಲಿ ಸದ್ಗುರುಗಳ ಸಹಾಯ ಬಂದೇ ಬರುವದು ಅದನ್ನು ತಿಳಿಯುವದರಲ್ಲಿ ಸಂದೇಹವೇ ಇರುವದಿಲ್ಲ. ಇದೇ ನಿರಂತರ ಸ್ಮರಣೆ.

ಅಭ್ಯಾಸಿಗಳಿಗೆ ಆ ಪರಮ ಸತ್ಯದ ಸ್ಥಿತಿಯ ಬಗ್ಗೆ ಸ್ಪಷ್ಟ ತಿಳಿವಳಿಕೆ/ಕಲ್ಪನೆ ಇಲ್ಲದ ಕಾರಣ ನಮ್ಮ ಮನಸ್ಸು ಸಾಧನೆ ಮುಂದುವರಿದಂತೆ ಆತನನ್ನು ಅರಿವ ಹಂಬಲದಿಂದಾಗಿ ಇನ್ನೂ ವಿಕಸಿತಗೊಳ್ಳುತ್ತಾ ಹೋಗುವದು. ಇದಕ್ಕೆಯೇ ನಾವು ಕೈಗೊಂಡಿರುವ ಸಾಧನಾ ಪದ್ಧತಿ ಶ್ರೀ. ಬಾಬೂಜಿ ಮಹಾರಾಜರು ಹೇಳಿಕೊಟ್ಟಂತೆ ಕ್ರಿಯಾತ್ಮಕ ಮತ್ತು ಪ್ರಭಾವಶಾಲಿಯಾಗಿದೆ ಎಂದು ತಿಳಿಯುವೆವು, ಇದೇ ನಮ್ಮ ಸಾಧನೆಯ ಸರಿಯಾದ ಲಕ್ಷಣ.

ನಿರಂತರ ಸ್ಮರಣೆಯ ಮಹತ್ವ :

  1. ನಿರಂತರ ಸ್ಮರಣೆ ಮಾಡುವದರಿಂದ ಸಾಧಕನು ಯಾವಾಗಲೂ ತನ್ನ ಪರಮ ಗುರಿ ಮತ್ತು ಗುರುಗಳ ಸಂಪರ್ಕದಲ್ಲಿರುವನು. ಇದು ಕೇವಲ ಆತ್ಮದ ಹಂಬಲ ಮತ್ತು ಮಾನಸಿಕ ಕ್ರಿಯೆ ಮಾತ್ರ, ಭೌತಿಕವಾದುದಲ್ಲ.
  2. ನಿರಂತರ ಸ್ಮರಣೆ ಮಾಡುವದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗಿ ವಸ್ತುನಿಷ್ಠ ಸ್ಥಿತಿಗೆ ಬರುವದು.
  3. ನಿರಂತರ ಸ್ಮರಣೆಯಿಂದ ಮನಸ್ಸು ಬೇರೆ ವಿಷಯಗಳ ಬಗ್ಗೆ ತೊಳಲಾಡದೆ ಯಾವ ತರಹದ ಸ್ಕೂಲತೆಗೆ ಆಸ್ಪದ ಕೊಡುವುದಿಲ್ಲ.
  4. ನಿರಂತರ ಸ್ಮರಣೆಯಿಂದ ಮನಸ್ಸು ಶುದ್ಧಗೊಳ್ಳುವದಲ್ಲದೆ ವಿಕಸಿತವಾಗುತ್ತ ಹೋಗುವದು ಮತ್ತು ಅಂತಿಮ ಸ್ಥಿತಿ (ಗುರಿ)ಯ ಬಗ್ಗೆ ಚಿಂತನ ಮಾಡುವ ಪ್ರವೃತ್ತಿ ಬೆಳೆಯುವದು. ಇದೇ ಏಕತತ್ವ ಚಿಂತನೆ.
  1. ಇವೆಲ್ಲ ಸಾಧನಾ ಪ್ರಕ್ರಿಯೆಗಳಲ್ಲಿ, ಒಂದು ವೇಳೆ ಆ ಪರಮ ಗುರುವಿನ ಕೃಪೆ ಮತ್ತು ಸಹಾಯವಾದರೆ ನಮ್ಮ ಜೀವನದ ಗುರಿ ತಲುಪಿ ಆತನಲ್ಲಿ ಲಯ ಹೊಂದುವುದರಲ್ಲಿ ಸಂದೇಹವೇ ಇಲ್ಲ.

ಇದನ್ನೆ ಶ್ರೀ ಬಾಬೂಜಿ ಮಹಾರಾಜರು ಪದೇ ಪದೇ ಹೇಳುತ್ತಿದ್ದರು. ಇದರಿಂದಾಗಿ ನಮ್ಮ ಸಾಧನೆಯು ನೈಜವಾಗುವದು ಮತ್ತು ಯಾಂತ್ರಿಕತೆಯ ಪ್ರಶ್ನೆಯೇ ಬರುವದಿಲ್ಲ.

  1. ಪ್ರತಿ ವಾರಕ್ಕೊಂದು ಸಲ ಆತ್ಮವಿಶ್ಲೇಷಣೆ ಮಾಡಿದಾಗ ಸಾಧಕನಿಗೆ ತನ್ನ ಪ್ರಗತಿ, ಮನಸ್ಸಿನ ವಿಕಾಸ ಮತ್ತು ವಿಚಾರಗಳನ್ನು ಪರಿಶೀಲಿಸಬಹುದು.
  2. ಸಾಧಕನು ಹತ್ತು ನಿಯಮಗಳನ್ನು ಎಷ್ಟರಮಟ್ಟಿಗೆ ಅಳವಡಿಸಿ- ಕೊಂಡಿದ್ದಾನೆ ಎಂಬುದು ತಿಳಿಯುತ್ತದೆ. ಇದರ ಜೊತೆಗೆ ತನಗೆ ಅನಿಸುವ ಮತ್ತು ಬೇರೆಯವರಿಗೆ ಕಾಣೆಸುವ ಜೀವನ ಶೈಲಿಯಲ್ಲಿಯ ಬದಲಾವಣೆ ಸ್ಪಷ್ಟವಾಗುತ್ತದೆ.
  1. ಇಂತಹ ಸಾಧಕನ ಜೀವನವೇ ಎರಡನೇಯವರಿಗೆ ಒಂದು ಉದಾಹರಣೆಯಾಗಿ ಅವರನ್ನು ಜೀವನದ ಗುರಿಯ ಕಡೆಗೆ ಆಕರ್ಷಿಸುವದು. ಇದರಿಂದಾಗಿ ಗುರುಗಳ ಸಂದೇಶ ನಿಜವಾಗಿಯೂ ಪ್ರಚಾರವಾಗುವದು.