ಅಭ್ಯಾಸ ಎಂದರೆ ಒಂದು ಉದ್ದೇಶವನ್ನು ಸಾಧಿಸಲು ತಿಳಿದು ಮಾಡುವ ಪ್ರಯತ್ನ. ಯಾರು ತನ್ನ ನಿರ್ಧಿಷ್ಟವಾದ ಗುರಿಯನ್ನು ಸಾಧಿಸಲು ಪ್ರಯತ್ನದಲ್ಲಿದ್ದು ಅದರಲ್ಲಿಯೇ ಮುಳುಗಿರುವನೋ ಅವನೇ ಅಭ್ಯಾಸಿ. ಅಭ್ಯಾಸವೆಂಬುವ ಶಬ್ದವನ್ನು ನಾವು ಚಿಕ್ಕಂದಿನಿಂದಲೇ ಕೇಳುತ್ತಾ ಬಂದಿರುವೆವು. ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ಓದುವಾಗ ಇದರ ಬಳಕೆ ಆಗುತ್ತಿತ್ತು. ಆಗ ನಮ್ಮೆದುರಿಗೆ ಉತ್ತೀರ್ಣ ಹೊಂದುವ ಉದ್ದೇಶವಿರುತ್ತಿತ್ತು. ಒಂದು ವೇಳೆ ನಾವು ನಮ್ಮ ಪರೀಕ್ಷೆಯಲ್ಲಿ ಸರಿಯಾಗಿ ಅಂಕುಗಳನ್ನು ತೆಗೆದುಕೊಳ್ಳದಿದ್ದರೆ ನಮ್ಮ ಹಿರಿಯರು ಸರಿಯಾಗಿ ಅಭ್ಯಾಸ ಮಾಡಿಲ್ಲವೆಂದು ಹೇಳಿದ್ದು ಕೇಳಿದ್ದೇವೆ. ಇದರ ಬಗ್ಗೆ ವಿಚಾರ ಮಾಡಿದಾಗ ಕೆಲವು ವರ್ಷಗಳ ನಂತರ ತಿಳಿದಿದ್ದೇನೆಂದರೆ ಕೇವಲ ಓದುವದೇ ಅಭ್ಯಾಸ ಅಲ್ಲ. ಅಭ್ಯಾಸವೆಂದರೆ ವಿಷಯವನ್ನು ಸರಿಯಾಗಿ ತಿಳಿದು ಪೂರ್ತಿಯಾಗಿ ಅಳವಡಿಸಿಕೊಂಡು ಯಾವ ಸಮಯದಲ್ಲಿಯೂ ತಿಳಿದಿದ್ದನ್ನು ಪ್ರಸ್ತುತಪಡಿಸುವದು. ಇಂತಹ ಅಭ್ಯಾಸದ ಕ್ರಮವನ್ನು ನಾವು ಇಂದಿನ ಲೌಕಿಕ ಕ್ಷೇತ್ರದಲ್ಲಿ ನೋಡುತ್ತೇವೆ. ಇದರಿಂದಾಗಿ ಒಂದು ಒಳ್ಳೆಯ ಉದ್ಯೋಗ ಅಥವಾ ಇನ್ನಿತರ ಸೌಲಭ್ಯಗಳು ದೊರೆಯುವವು ಮತ್ತು ಮುಂದೆ ನಮ್ಮ ಜೀವನ ಆನಂದಮಯವಾಗುವದೆಂದು ಭಾವಿಸುವೆವು. ಆದರೆ ಪರಿಣಾಮ ನಮ್ಮೆಲ್ಲರ ಮುಂದೆ ಇದೆ. ಸಾಮಾನ್ಯ ಜೀವನದಲ್ಲಿ ಅಭ್ಯಾಸದ ಮಹತ್ವವನ್ನು ಅರಿತ ಮೇಲೆ ಅಧ್ಯಾತ್ಮಿಕ ಜೀವನದಲ್ಲಿಯ ಅಭ್ಯಾಸದ ಬಗ್ಗೆ ಈಗ ಪರಿಶೀಲಿಸೋಣ.

ನಮ್ಮ ಸಮಾಜದಲ್ಲಿ ವಿಶೇಷವಾಗಿ ಹೆಚ್ಚಿನ ಜನರು ಆಸ್ತಿಕರಾಗಿದ್ದು ಭಗವಂತನ ಇರುವಿಕೆಯಲ್ಲಿ ವಿಶ್ವಾಸವಿಡುವವರಾಗಿದ್ದಾರೆ. ಒಂದಿಲ್ಲೊಂದು ಕಾರಣದಿಂದ ಭಗವಂತನನ್ನು ನೆನೆಸುತ್ತಾರೆ. ಹೆಚ್ಚಾಗಿ, ಕಷ್ಟಕಾರ್ಪಣ್ಯ- ಗಳಿದ್ದಾಗಲೇ ಮಾತ್ರ. ನಮ್ಮ ದೇಶದಲ್ಲಿ ಸಾಕಷ್ಟು ದೇವ ದೇವತೆಗಳಿದ್ದು ಅವುಗಳಲ್ಲೊಬ್ಬರನ್ನು ಆರಾಧ್ಯ ದೇವತೆಯನ್ನಾಗಿ ಅವನೇ ಭಗವಂತನೆಂದು ನಂಬಿ ಪೂಜಿಸುತ್ತಾರೆ. ಚಿಕ್ಕ ಮಕ್ಕಳು ದೇವರಿಗೆ ವಿದ್ಯೆ ಬುದ್ಧಿಗಾಗಿ ಮತ್ತು ಮುಂದೆ ದೊಡ್ಡವರಾದ ಹಾಗೆ ಅವರವರ ಉದ್ದೇಶಗಳು ಬೇರೆಯಾಗುತ್ತಾ ಹೋಗಿ ಪಾಸು, ನೌಕರಿ, ಸಂಪಾದನೆ, ಮದುವೆ, ಮಕ್ಕಳ ಸಲುವಾಗಿ ಪೂಜೆ ಸಲ್ಲಿಸುವರು. ಹೀಗೆಯೆ ಪೂಜೆ ಮಾಡುತ್ತಾ ಒಂದು ದಿನ ದೇಹ ಬಿಡುವರು. ಇದೇ ನಮ್ಮ ಜೀವನದ ಶೈಲಿಯಾಗಿದ್ದು ಇದಕ್ಕೆ ಧಾರ್ಮಿಕ ಜೀವನವೆಂದು ಕರೆಯುತ್ತಾರೆ. ಇಂತಹ ಜನರಿಗೆ ನಮ್ಮ ಸಮಾಜದಲ್ಲಿ ಬಹಳ ಗೌರವ ಕೊಡಲಾಗುತ್ತದೆ. ಈ ಜನರು ತಾವು ಒಳ್ಳೆಯ ಭಕ್ತರು ಮತ್ತು ಧಾರ್ಮಿಕರು ಎಂದು ತೋರಿಸಿಕೊಳ್ಳಲು ಕೆಲವು ಚಿಹ್ನೆಗಳನ್ನು ಧರಿಸಿ ಅಂದರೆ ಕುಂಕುಮ, ವಿಭೂತಿ, ಗಂಧ, ನಾಮ, ರುದ್ರಾಕ್ಷಿಯ ಮಾಲೆ ಮತ್ತು ಕಾವಿ ವಸ್ತ್ರ ಇತ್ಯಾದಿಗಳಿಂದ ಪ್ರದರ್ಶಿಸುವರು. ಇಂತಹ ಜನರು ತಾವೂ ಉದ್ದಾರವಾಗುವದಿಲ್ಲ ಮತ್ತು ಬೇರೆಯವರಿಗೂ ಅದಕ್ಕೆ ಆಸ್ಪದ ಕೊಡುವದಿಲ್ಲ. ಆಗಾಗ್ಗೆ ಅವರು ತಮಗೆ ತಿಳಿದಂತೆ ಧರ್ಮವನ್ನು ಮತ್ತು ಅದರ ನಿಯಮಗಳನ್ನು ಹೇಳಿ ಅದರಂತೆ ನಡೆದುಕೊಳ್ಳಲು ಒತ್ತಾಯಿಸುವರು.

ನಮ್ಮ ಸಮಾಜದ ಬಗ್ಗೆ Albert Einstein say :

The essence of human nature is its perpetually evolving desire for pleasure. To realize this desire we feel compelled to discover, invent and improve our reality. The gradual intensification of desire for pleasure has been the force behind human evolution throughout history. The desire evolves through several stages. Firstly it manifests in need for sustenance such as food, sex and family. Secondly the desire for wealth. Thirdly craving for name, fame, honour and power. Development of these three stages had led to major changes in the society. The fourth one signifies our yearning for learning, knowledge and wisdom. This developed science, culture and education system.

To understand the present state of humanity and its prospects, we must build a bridge connecting several milestones in the evolution of science. These milestones have significantly affected our approach to life.

ಭಾವಾರ್ಥ (ಅನುವಾದವಲ್ಲ)

ನಿರಂತರವಾಗಿ ವಿಕಸಿತವಾಗುತ್ತಿರುವ ಇಚ್ಛೆಗಳ ಸುಖವನ್ನು ಭೋಗಿಸುವದೆ ಮನುಷ್ಯ ಸ್ವಭಾವದ ಸಾರ. ಈ ಇಚ್ಛೆಯ ಪೂರೈಕೆಗಾಗಿ ನಾನಾ ಪ್ರಕಾರದ ಶೋಧ, ಅನ್ವೇಷಣೆಗಳಿಗಾಗಿ ನಮ್ಮನ್ನು ನಾವೇ ಮತ್ತು ನಮ್ಮ ಜೀವನದ ಶೈಲಿಯನ್ನು ಉತ್ತಮಪಡಿಸಿಕೊಳ್ಳುವದಕ್ಕೋಸ್ಕರ ಅಧಿನಪಡಿಸುತ್ತೇವೆ. ಆ ಸುಖದ ಇಚ್ಛೆ ಕ್ರಮೇಣ ತೀವ್ರತೆ ಪಡೆದಾಗ ಅದೇ ಒಂದು ಶಕ್ತಿಯಾಗಿ ಇತಿಹಾಸದಿಂದ ಮಾನವನ ವಿಕಾಸಕ್ಕೆ ಕಾರಣವಾಗಿದೆ. ಈ ಇಚ್ಛೆಯು ಅನೇಕ ಮಜಲುಗಳಿಂದ ವಿಕಸಿತಗೊಂಡಿದೆ. ಮೊದಲನೇಯದಾಗಿ ಇದು ಆಹಾರ, ಕಾಮ ಮತ್ತು ಕುಟುಂಬದ ಅವಶ್ಯಕತೆಗಳಿಗೋಸ್ಕರ ಪ್ರತ್ಯಕ್ಷವಾಗುತ್ತದೆ. ಎರಡನೇಯದು ಐಶ್ವರ್ಯದ ಆಸೆಗಾಗಿ, ಮೂರನೇಯದಾಗಿ ಹೆಸರು, ವರ್ಚಸ್ಸು, ಗೌರವ ಮತ್ತು ಶಕ್ತಿ ಪ್ರದರ್ಶನಕ್ಕೋಸ್ಕರ. ಈ ಮೂರು ಘಟ್ಟಗಳಲ್ಲಾದ ಅಭಿವೃದ್ಧಿಯೆ ಸಮಾಜದ ಮಹಾ ಪರಿವರ್ತನೆಗೆ ಕಾರಣವಾಯಿತು. ನಾಲ್ಕನೇಯದು ಕಲಿಯುವಿಕೆ, ಜ್ಞಾನ ಮತ್ತು ಜಾಣತನದ ಕಳಕಳೀಯ ಸಂಕೇತವಾಗಿದೆ. ಇದರಿಂದಾಗಿ ವೈಜ್ಞಾನಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪದ್ಧತಿಯ ಅಭಿವೃದ್ಧಿಯಾಗಿದೆ.

ಇಂದಿನ ಮಾನವೀಯತೆ ಹಾಗೂ ಅದರ ಮೌಲ್ಯವನ್ನು (ದೂರ ದೃಷ್ಟಿಯನ್ನು) ತಿಳಿಯಲು ವೈಜ್ಞಾನಿಕ ವಿಕಾಸದ ಬಹಳಷ್ಟು ಮೈಲುಗಲ್ಲುಗಳನ್ನು ಜೋಡಿಸಬೇಕಾಗುತ್ತದೆ. ಇಂದಿನ ಜೀವನಶೈಲಿ ಈ ಮೈಲುಗಲ್ಲುಗಳಿಂದ ಸಾಕಷ್ಟು ಪ್ರಭಾವಿತಗೊಂಡಿದೆ.

ನಮ್ಮ ಸಮಾಜದಲ್ಲಿ ಕೆಲ ಜನರು ಭಗವಂತನ ಪೂಜೆ, ಶಾಸ್ತ್ರಗಳ ಪಠಣ ತಮ್ಮ ಧರ್ಮದ ಪ್ರಕಾರ ಸದಾಚಾರಿಯಾಗಿ ನಡೆದುಕೊಂಡು ಬಂದಿದ್ದಾರೆ. ಇಂತಹವರಲ್ಲಿ ಕೆಲವರು ಕೇವಲ ಭಕ್ತಿಯ ಸಲುವಾಗಿ ಭಗವಂತನಿಂದ ಏನೂ ಇಚ್ಛಿಸದೇ ಆತನ ಸಾಕ್ಷಾತ್ಕಾರಕ್ಕಾಗಿ, ಮನಃ ಶಾಂತಿಗಾಗಿ ಅಥವಾ ಆನಂದಮಯ ಜೀವನಕ್ಕಾಗಿ ಪೂಜೆಯನ್ನು ಕೈಗೊಂಡಿರುವದು ನಾವು ಆಗಾಗ ಕಾಣುತ್ತೇವೆ. ಬಹಳಷ್ಟು ಕಾಲ ಉಪಾಸನೆಯನ್ನು ಮಾಡಿದರೂ ಏನೂ ಲಾಭ ದೊರಕದ ಕಾರಣ ಅವರು ನಿರಾಶರಾಗಿ ಅಲ್ಲಲ್ಲಿ ತಿರುಗಾಡುವರು. ಆಗ ಅವರಿಗೆ ಒಬ್ಬ ಮಾರ್ಗದರ್ಶಕನ ನೆನೆಪು ಬಂದು ಹುಡುಕಾಟದಲ್ಲಿ ನಿರತರಾಗುವರು. ಅಂತಹ ಜನರು ಈಗಿನ ಕಾಲದ ಯಾವುದಾದರೊಬ್ಬ ಜಗದ್ಗುರುವನ್ನು ಕಂಡು ಅವರ ಆಶ್ವಾಸನೆಗಳನ್ನು, ಪಾಂಡಿತ್ಯ ಪ್ರದರ್ಶನವನ್ನು ಅಥವಾ ಇಂದ್ರಜಾಲ ತೋರಿಸುವದನ್ನು ನೋಡಿ ಮೋಸದಲ್ಲಿ ಬಿದ್ದು ತಮ್ಮ ಇಡಿ ಜೀವನವನ್ನೇ ಹಾಳು ಮಾಡಿಕೊಳ್ಳುವರು. ಅದಕ್ಕಾಗಿ ಜಿಜ್ಞಾಸುಗಳು ಅಂತಹವರ ಬಲೆಗೆ ಬೀಳದೆ ಕೆಲ ಕಾಲ ಆ ಮಾರ್ಗದರ್ಶಕನನ್ನು ಎಲ್ಲ ರೀತಿಯಿಂದ ಪರೀಕ್ಷಿಸುವದು ಒಳ್ಳೆಯದು.

ಪರೀಕ್ಷೆಯ ಅಂಶಗಳು :

  1. ಆತನ ಸಾನಿಧ್ಯ ಮಾತ್ರದಿಂದ ಮನಸ್ಸಿನಲ್ಲಿ ಒಂದು ತರಹದ ಶಾಂತಿ ಅನುಭವಿಸಬೇಕು.
  1. ಅಲ್ಲಿಯ ವಾತವರಣ ಶುದ್ಧವಾಗಿದ್ದು ನಮ್ಮ ಮನಸ್ಸಿನಲ್ಲಿ ವಿಚಾರದ ಸುರಿಮಳೆ ಇಲ್ಲದಿರುವುದು.
  1. ಯಾವ ಪ್ರದರ್ಶನವಿಲ್ಲದವನಾಗಿರಬೇಕು.
  1. ಅವನ ಮಾತಿನಲ್ಲಿ ಸತ್ಯತೆಯ ಅನುಭವ ಆಗಬೇಕು.
  1. ಅವನು ಒಬ್ಬ ಸಾಮಾನ್ಯ ಮನುಷ್ಯನಂತಿದ್ದು ಏನೂ ಆಡಂಬರವಿರದವನಾಗಿರಬೇಕು.
  1. ಯಾವುದೇ ರೀತಿಯ ಭೌತಿಕ ಆಸೆಗಳಿರಬಾರದು.
  2. ನಮ್ಮಿಂದ ಏನೂ ಇಚ್ಛಿಸದೇ ಅಧ್ಯಾತ್ಮದ ತರಬೇತಿ ನೀಡಲು ಸಿದ್ಧನಾಗಿರಬೇಕು.
  1. ನೋಡಿದ ತಕ್ಷಣವೇ ನಮ್ಮ ಅಂತರಾತ್ಮ ಅವನೊಬ್ಬ ಒಳ್ಳೆಯ ಮಾರ್ಗದರ್ಶಕನೆಂದು ಒಪ್ಪಿಕೊಂಡು ಸಂಕೇತ ಸೂಚಿಸಬೇಕು.
  2. ಆ ಮಾರ್ಗದರ್ಶಕನ ಸಾಧಕರನ್ನು ಭೇಟಿಯಾಗಿ ಪರೀಕ್ಷಿಸಬೇಕು.

ಆ ಮಾರ್ಗದರ್ಶಕನು ನಮ್ಮೆಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣನಾದಾಗಲೇ ಆತನನ್ನು ಮಾರ್ಗದರ್ಶಕನೆಂದು ನಿರ್ಧಾರ ಮಾಡಿ ತರಬೇತಿ ಪಡೆಯಲು ಸಿದ್ಧರಾಗಬೇಕು. ಇಲ್ಲಿ ಒಂದು ಮಹತ್ವದ ಹೇಳಿಕೆಯನ್ನು ಕೊಡಲು ಬಯಸುತ್ತೇನೆ. ಅದೇನೆಂದರೆ, ಮೊದಲು ನಾವು ಆರಿಸಿಕೊಂಡ ಮಾರ್ಗದರ್ಶಕನು ನಮಗೆ ತಿಳಿದಂತೆ ನಮಗೆ ಬೇಕಾದ ಅಥವಾ ಉದ್ದೇಶಿತ ಗುರಿಯನ್ನು ತಲುಪಲು ಎಲ್ಲ ರೀತಿಯ ಸಹಾಯ ಮಾಡಿ ತರಬೇತಿ ಕೊಡಲು ಯೋಗ್ಯನೆಂದು ಪೂರ್ಣ ಮನವರಿಕೆ ಮಾಡಿಕೊಂಡು ಅವನಲ್ಲಿ ಪೂರ್ಣ ವಿಶ್ವಾಸವಿಡಬೇಕು. ಎರಡನೇಯದ್ದು ಅಂತಹ ಮಾರ್ಗದರ್ಶಕನಿಂದ ತರಬೇತಿ ಪಡೆಯುವ ಮನಸಾರೆ ಸಂಕಲ್ಪ ಮಾಡಬೇಕು. ಆತನು ಏನು ಹೇಳಿದರೂ ಮಾಡಬೇಕು. ಆತನು ಹೇಳಿದ್ದು ನಮ್ಮ ಮನಸ್ಸಿಗೆ ಹಿಡಿಸಲಿ ಅಥವಾ ಹಿಡಿಸದೇ ಇರಲಿ ಅವುಗಳನ್ನು ನಾವು ಪಾಲಿಸಿ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಅದರಲ್ಲಿ ಯಾವ ಸಂಶಯ ಮಾಡಕೂಡದು. ಇದಕ್ಕೆಯೇ ಸ್ವೀಕೃತಿ/ಒಪ್ಪಿಗೆ (Acceptence) ಮತ್ತು ಸಮ್ಮತಿ/ಬಯಸುವಿಕೆ (willingness) ಎನ್ನುವರು. ಸಾಧಕರು ಮುಖ್ಯವಾಗಿ ನೆನೆಪಿನಲ್ಲಿಡತಕ್ಕ ವಿಷಯವೆಂದರೆ, ಅವನು ಮೊದಲಿನಿಂದ ಕೊನೆಯವರೆಗೂ ಅಭ್ಯಾಸಿಯೇ ಆಗಿರಬೇಕು. ಇಲ್ಲಿ ಎಲ್ಲ ಸ್ಥರ ಮತ್ತು ಮಜಲುಗಳನ್ನು ದಾಟಿಸುವವನು ಒಬ್ಬನೇ ವ್ಯಕ್ತಿಯಾದ ಕಾರಣ ಪ್ರತಿಯೊಂದು ಮಜಲಿಗೆ ತಕ್ಕಂತೆ ಅವನ ತರಬೇತಿ ಇರುವದು. ಆತನ ಹೇಳಿಕೆಗಳು, ವ್ಯಕ್ತಿ, ಸಂದರ್ಭ ಮತ್ತು ಸ್ಥಿತಿಗಳಿಗೆ ಅನುಸಾರವಾಗಿರುವವು. ಆದುದರಿಂದ ವೈಯಕ್ತಿಕವಾಗಿ ಹೇಳಿದ ಮಾತುಗಳು ಎಲ್ಲರಿಗೂ ಅನ್ವಯಿಸುವದಿಲ್ಲ. ಪ್ರತಿ ಸಲ ಹೇಳಿರುವ ವಾಕ್ಯ ಒಂದೇ ಆದರೂ ಪ್ರಗತಿಯಲ್ಲಿರುವ ಸಾಧಕನಿಗೆ ಅರ್ಥಗಳು ಬೇರೆ ಬೇರೆಯಾಗುವವು. ಹೀಗೆ ನಾವು ಅನುಸರಿಸಿದರೆ ಕಾಲಕ್ರಮೇಣ ಗುರುಗಳ ಯೋಗ್ಯತೆ ಮತ್ತು ಸಾಮರ್ಥ್ಯದ ಬಗ್ಗೆ ಮನವರಿಕೆಯಾಗುವದು.

ಈಗ ನಾವು ನಮ್ಮ ಸಾಧನೆಯ ಕಡೆಗೆ ಬರೋಣ. ಜಗತ್ತಿನಲ್ಲಿ ಅಧರ್ಮದ ಕೈ ಮೇಲಾದಾಗ ಸ್ವಾರ್ಥತೆ, ಸ್ವಪ್ರತಿಷ್ಠೆ, ಧರ್ಮಾಂಧತೆ ಮತ್ತು ಭೌತಿಕತೆ ಇಡೀ ವಾತಾವರಣ ಮತ್ತು ಪರಿಸರ ಪೂರ್ಣ ರೂಪದಿಂದ ಕಲುಷಿತಗೊಂಡಾಗ, ಸೂರ್ಯನಂತೆ ಅಂಧಕಾರವನ್ನು ಹೋಗಲಾಡಿಸಲು ಮತ್ತು ಆ ಕ್ಷೇತ್ರವನ್ನು ಬೆಳಗಿಸಲು ಸಮಯಕ್ಕೆ ತಕ್ಕಂತೆ ಮಾನವ ಜೀವನಕ್ಕೆ ಅವಶ್ಯವಿರುವ ಪರಮಗುರಿಯನ್ನು ತೋರಿಸಲು ಒಬ್ಬ ವಿಭೂತಿ ಪುರುಷನು ಮಾನವನ ರೂಪವನ್ನು ಧರಿಸಿ ಈ ಧರೆಗೆ ಬಂದಿಳಿದಿರುವನು. ಆತನು ಜೀವನದ ಗುರಿಯನ್ನು ಪಡೆಯಲು ಎಲ್ಲ ರೀತಿಯ ಸಹಾಯಕ್ಕೆ ಉತ್ಕಟ ಇಚ್ಛೆಯಿಂದ ಮತ್ತು ಪೂರ್ಣ ಪ್ರೇಮದಿಂದ ಜಿಜ್ಞಾಸುಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಲು ಒಬ್ಬ ಸಾಧಾರಣ, ಸಂಸಾರಿಕ, ಮಾನವ ರೂಪದಲ್ಲಿಯ ಭಗವಂತನೇ ಆಗಿರುವನು. ಈ ಪುರುಷನು ಜಗತ್ತಿನ ಯಾವ ಧರ್ಮವನ್ನು ಎತ್ತಿ ಹಿಡಿಯದೆ, ಎಲ್ಲ ಧರ್ಮ ಗ್ರಂಥಗಳನ್ನು ಬದಿಗಿಟ್ಟು, ವೇದೋಪನಿಷತ್ತುಗಳನ್ನು ಮತ್ತು ಯಾವ ಶಾಸ್ತ್ರಗಳನ್ನು ಬಳಸದೆ ತನ್ನದೇ ಆದ ಅನುಭವ-ಅನಿಸಿಕೆಗಳಿಂದಾಗಿ ಆ ಪೂರ್ಣ ಸತ್ಯದ ಅರಿವನ್ನು ಅರಿತು ಮತ್ತು ಅದರ ಮೇಲೆ ಪೂರ್ಣ ಪ್ರಭುತ್ವವನ್ನು ಪಡೆದು ತನ್ನ ನಿಜ ವ್ಯಕ್ತಿತ್ವವನ್ನು ಪೂರ್ಣ ರೂಪದಿಂದ ಪ್ರಳಯ ಮಾಡಿ ಪ್ರತಿಯೊಬ್ಬ ಜಿಜ್ಞಾಸುವಿನ ಸಹಾಯಕ್ಕೆ ಮುಂದಾಗಿರುವನು. ಆತನ ವಿಶೇಷತೆಯೆಂದರೆ ಎಲ್ಲವನ್ನೂ ಬಲ್ಲವನೆಂದು ಯಾರಿಗೂ ತೋರಿಸಿಕೊಡದೇ ಕೇವಲ ಒಬ್ಬ ಸೇವಕನಂತೆ ಜಿಜ್ಞಾಸುಗಳಿಗೆ ಅನುಭವ ಮತ್ತು ಅನಿಸಿಕೆಗಳನ್ನು ದಯಪಾಲಿಸಿ, ಪ್ರತಿಯೊಂದು ಮಜಲಿನ ಸ್ಥಿತಿಯನ್ನು ಕೊಡುತ್ತಾ ಎಲ್ಲರ ಮನಸ್ಸನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡು ಅವರವರ ಹೃದಯವನ್ನು ತನ್ನ ಬಿಡಾರವನ್ನಾಗಿ ಮಾಡಿ ತನ್ನಂತೆಯೇ ಮಾಡುವನು. ಕಾಲಕ್ರಮೇಣ ಆತನ ಆಡಳಿತವೇ ಜೀವನದಲ್ಲಿಯ ನಿಯಮಗಳೆಂದು ಅನುಭವಕ್ಕೆ ಬರುವವು. ಆ ಮಹಾಪುರುಷನೇ ನಮ್ಮ ಸದ್ಗುರುಗಳಾದ ಪೂಜ್ಯ ಶ್ರೀ ಬಾಬೂಜಿ ಶ್ರೀ ಮಹರಾಜರು-ನಾಥ-ಒಡೆಯ.

ಯಾವುದೇ ಸಾಧನೆಯನ್ನು ಕೈಗೊಳ್ಳಬೇಕಾದರೆ ಮೊಟ್ಟ ಮೊದಲು ಅದರ ಉದ್ದೇಶವನ್ನು ಸರಿಯಾಗಿ ಯೋಚಿಸಿ ನಿರ್ಧರಿಸಬೇಕು. ನಂತರ ನಮ್ಮ ಗುರುಗಳು ಬರೆದ ಪುಸ್ತಕಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ತೋರಿಸಿರುವ ಜೀವನದ ಗುರಿ ಮತ್ತು ನಾವು ನಿರ್ಧರಿಸಿದ ಗುರಿಯೊಂದಿಗೆ ಹೋಲಿಸಿ ನೋಡಬೇಕು. ಒಂದು ವೇಳೆ ಎರಡೂ ಸರಿ ಹೊಂದಿದ ಮೇಲೆ ನಮ್ಮಲ್ಲಿರುವ ಎಲ್ಲ ಸಂಶಯಗಳನ್ನು ಖುದ್ದಾಗಿ ಭೇಟಿಯಾಗಿ ನಿವಾರಣೆ ಮಾಡಿಕೊಳ್ಳಬೇಕು. ಆನಂತರವೇ ಅದನ್ನು ಜೀವನದ ಗುರಿಯನ್ನಾಗಿ ಅಂದರೆ ಪರಮ ಸತ್ಯವನ್ನು ಸತ್ಯವೆಂದು ತಿಳಿದು ಅದರ ಸ್ಥಿತಿಯನ್ನು ಅನುಭವಿಸಿ ಅದರಲ್ಲಿಯೇ ಶಾಶ್ವತವಾಗಿ ನೆಲೆಸುವದು. ಅದಕ್ಕೆ ನಮ್ಮ ಜೀವನದಲ್ಲಿ ಬರುವ ಮತ್ತು ಕೈಗೊಳ್ಳುವ ಕೆಲಸ- ಕಾರ್ಯಕ್ರಮಗಳಲ್ಲಿ, ಬೇರೆ ಒತ್ತಡಗಳನ್ನು ಯೋಚಿಸಿ ಯಾವುದಕ್ಕೆ ಹೆಚ್ಚು ಪ್ರಾಧಾನ್ಯ ಕೊಡಬೇಕು ಎಂಬುದನ್ನು ನಿರ್ಧರಿಸಿ ಸಾಧನೆಯನ್ನು ಕೈಗೊಳ್ಳಬೇಕು.

ನಾವೆಲ್ಲರೂ ಸುದೈವಿಗಳು. ನಮಗೆ ಅದೃಷ್ಟದಿಂದ ಒಬ್ಬ ಸಮರ್ಥ ಸದ್ಗುರು ದೊರಕಿದ್ದಾನೆ. ಅವನು ಹೇಳಿಕೊಟ್ಟ ಸಾಧನಾ ಪದ್ಧತಿಯು ಬಹಳ ಸರಳ, ಪ್ರಭಾವಕಾರಿ ಮತ್ತು ಪರಿಣಾಮ ನೀಡುವದಾಗಿದೆ. ಸಹಜ ಮಾರ್ಗದ ಸಾಧನಾ ಪದ್ಧತಿಯ ಬಗ್ಗೆ ಹೇಳಬೇಕೆಂದರೆ ಇದು ಒಂದು ಅತ್ಯುಚ್ಚ ಮಟ್ಟದ ಪದ್ಧತಿಯಾಗಿದ್ದು ನಮ್ಮ ಶುದ್ಧಿಕರಣದ ವಿಧಾನವನ್ನು ತೋರಿಸಿ ಅದಕ್ಕೆ ವಿಶೇಷವಾಗಿ ಮಹತ್ವ ಕೊಡಲಾಗಿದೆ. ಬೇರೆ ಯಾವ ಪದ್ಧತಿಯಲ್ಲಿಯೂ ಇದರ ಮಹತ್ವ ಅಷ್ಟು ಇಲ್ಲವೆಂಬುದು ಕಂಡುಬರುವದು.

ಧಾರ್ಮಿಕ ಪದ್ಧತಿಯಲ್ಲಿ ಉಪವಾಸ, ಉಪದೇಶ ಮತ್ತು ಉಪನಿಷತ್‌ವೆಂಬ ಶಬ್ದಗಳನ್ನು ಕೇಳುತ್ತೇವೆ. ಇವುಗಳ ಅರ್ಥ ಕ್ರಮವಾಗಿ ಸಮೀಪದ ಇರುವಿಕೆ, ಸಮೀಪದ ಕೇಳುವಿಕೆ ಮತ್ತು ಸಮೀಪದ ಕೂಡುವಿಕೆ. ಇಲ್ಲಿ ಯಾರ ಸಮೀಪವೆಂಬ ಶಬ್ದಕ್ಕೆ ಸರಿಯಾದ ಅರ್ಥವೆಂದರೆ-ಭಗವಂತನ ಸಮೀಪ. ಆದರೆ ಈಗಿನ ಧಾರ್ಮಿಕರು ಮಾಡಿರುವ ನಿರಾಹಾರದಂತಹ ಅರ್ಥವಲ್ಲ. ಈ ಮೂರು ಶಬ್ದಗಳಿಗಿಂತಲೂ ಮೇಲ್ಪಟ್ಟ ಅರ್ಥವನ್ನು ಕೊಟ್ಟು ನಮ್ಮ ಸದ್ಗುರುಗಳು ಒಂದು ಅತೀ ಹೊಸದಾದ ಶಬ್ದದ ಬಳಕೆಯನ್ನು ಮಾಡಿದ್ದಾರೆ. ಅದು “Sitting”. ಈ ಶಬ್ದದ ಮೂರು ಅರ್ಥಗಳು ಇರುವಿಕೆಯ ಸಂಬಂಧವಾಗಿವೆ.

  1. ಭಗವಂತನ ಜೊತೆಯಲ್ಲಿರುವದು.
  2. ಭಗವಂತನಲ್ಲಿರುವದು.
  3. ಭಗವಂತನನ್ನು ನಮ್ಮಲ್ಲಿರುವಂತೆ ಮಾಡುವದು.

ನಮ್ಮ ಸಾಧನೆಯಲ್ಲಿ ಪ್ರಶಿಕ್ಷಕರ ಮುಂದೆ ಕುಳಿತಾಗ ಧ್ಯಾನದಲ್ಲಿ ಕ್ರಮೇಣ ಈ ಮೂರು ಸ್ಥಿತಿಗಳು ಬರುವದನ್ನು ಅಭ್ಯಾಸಿಗಳು ಅನುಭವಿಸುವರು.

ಕೆಲವು ಅಭ್ಯಾಸಿಗಳಿಗೆ ಅವರವರ ಯೋಗ್ಯತೆಯನ್ನು ನೋಡಿ ನಮ್ಮ ಸದ್ಗುರುಗಳು ತಮ್ಮ ಕೆಲಸ ಸ್ವಲ್ಪ ಮಟ್ಟಿಗಾದರೂ ಹಗುರವಾಗಲೆಂದು ತರಬೇತಿ ಕೊಡುವ ಅನುಮತಿಯನ್ನು ನೀಡುತ್ತಾರೆ. ಈ ಅನುಮತಿಯು ಎರಡು ಪ್ರಕಾರದ್ದಾಗಿರುತ್ತದೆ.

1  ತಾತ್ಕಾಲಿಕ ಅನುಮತಿ (Provisional Permission). ಅವರುಗಳಿಗೆ Prefect ಅನ್ನುತ್ತಾರೆ.

2. ಪೂರ್ತಿ ಅಥವಾ ಶಾಶ್ವತ ಅನುಮತಿ (Full Permission). ಅವರುಗಳಿಗೆ Preceptor ಎಂದು ಎನ್ನುತ್ತಾರೆ.

ಇಲ್ಲಿ ಶ್ರೀ ಬಾಬೂಜಿ ಮಹರಾಜರ ಒಂದು ವಾಕ್ಯವನ್ನು ಸ್ಮರಿಸಬಹುದು. “ಬ್ರಹ್ಮಾಂಡ ಮಂಡಲದವರೆಗೆ ಮುಟ್ಟದೆ ತಾನು ಸಾಮಾನ್ಯವಾಗಿ ಅನ್ಯರಿಗೆ ತರಬೇತಿಯನ್ನು ಕೊಡಲು ಯೋಗ್ಯನೆಂದು ತಿಳಿಯಬಾರದು”. (ಸತ್ಯೋದಯ ಪುಟ ಸಂ-52).

ಈ ಇಬ್ಬರೂ ಒಂದೇ ರೀತಿಯ ತರಬೇತಿ ಕೊಡುವವರಾಗಿದ್ದರೂ ಪ್ರಾಣಾಹುತಿಯನ್ನು ಕೊಡುವ ಯೋಗ್ಯತೆ ಬೇರೆ ಬೇರೆಯದ್ದಾಗಿರುತ್ತದೆ. ಮುಖ್ಯವಾಗಿ ಇವರಿಬ್ಬರ ಕೆಲಸವು ಶುದ್ದೀಕರಣದ್ದೇ ಆಗಿದ್ದರೂ Preceptorನು ಅಭ್ಯಾಸಿಯ ಪ್ರಗತಿಯ ಸಲುವಾಗಿ ಕೆಲಸ ಮಾಡುತ್ತಿರುತ್ತಾನೆ, ಮತ್ತು ಸದ್ಗುರುಗಳನ್ನು ಪ್ರಾರ್ಥಿಸಿ ಯಾಚಿಸುತ್ತಾನೆ. ಪ್ರಶಿಕ್ಷಕನು ಯಾವ ಪ್ರಕಾರದ ಪ್ರಗತಿ ಅಥವಾ ಸ್ಥರಗಳನ್ನು ಕೊಡಲು ಸಾಧ್ಯವಿಲ್ಲ. ಒಂದು ವೇಳೆ ಪ್ರಶಿಕ್ಷಕನೇ ಅಭ್ಯಾಸಿಗಳಿಗೆ ಪ್ರಗತಿಯ ಸ್ಥರಗಳನ್ನು ಕೊಡಲು ಆರಂಭಿಸಿದರೆ ಆತನಲ್ಲಿ ಮತ್ತು ಸದ್ಗುರುಗಳಲ್ಲಿ ಭೇದವೇನಿರುವದು? ಆದುದರಿಂದಲೇ ಇಂತಹ ಕೆಲಸಗಳನ್ನು ಹೆಚ್ಚಾಗಿ ನಾವು ಆಚರಿಸುವ ಸಮಾರಂಭಗಳಲ್ಲಿಯೇ ನಡೆಯುವಂತಹವು. ಅಭ್ಯಾಸಿ- ಪ್ರಶಿಕ್ಷಕರ ಸಾಧನೆ ಮತ್ತು ಕೆಲಸವನ್ನು ಪರಿಶೀಲಿಸಿ ಅವರವರಿಗೆ ತಕ್ಕಂತೆ ಶ್ರೀ ಬಾಬೂಜಿ ಮಹರಾಜರು ಪ್ರಗತಿಯ ಸ್ಥರಗಳನ್ನು ದಯಪಾಲಿಸುವರು.

ಸಾಧಕನು ಧ್ಯಾನದಲ್ಲಿ ಹೇಗೆ ಕೂಡಬೇಕೆಂದರೆ, ಎರಡು ಅಥವಾ ಮೂರು ದಿವಸದಿಂದ ಹಸಿದ ಬೆಕ್ಕು ಒಂದು ಇಲಿಯನ್ನು ದೂರದ ಒಂದು ರಂಧ್ರದಲ್ಲಿ ಹೋದುದ್ದನ್ನು ನೋಡಿದರೆ ತಕ್ಷಣ ಆ ಬೆಕ್ಕು ರಂಧ್ರದ ಸಮೀಪ ಕುಳಿತು ಆ ಇಲಿಯ ನಿರೀಕ್ಷೆಯಲ್ಲಿ ಕುಳಿತಂತೆ

ಕೂಡಬೇಕು. ಇದಕ್ಕೆ ಉರ್ದುವಿನಲ್ಲಿ ‘ಮರಾಖಬಾ’ ಎಂದು ನಮ್ಮ ಗುರುಗಳು ವರ್ಣಿಸಿದ್ದಾರೆ. ದೈವಿ ಪ್ರಕಾಶದ ಕಲ್ಪನೆಯು ಮೇಲೆ ಹೇಳಿದ ಪ್ರಕಾರ ಸ್ಥಾಯಿಯಾದ ಮೇಲೆ ಕೆಲ ಕಾಲದ ನಂತರ ಸಾಧಕನ ಲಕ್ಷವು ಹೃದಯದಲ್ಲಿಯ ಆಗು ಹೋಗುಗಳನ್ನು ಗಮನಿಸುವನು. ಆನಂತರ ಅದರ ಮಿಡಿತದ ಕಡೆಗೆ ಲಕ್ಷ್ಯ ಹೋಗಿ ಅದರ ಶಬ್ದವನ್ನು ಗಮನಿಸುತ್ತಿದ್ದಂತೆ ಆ ಕಡೆಯ ಲಕ್ಷ ಕಡಿಮೆಯಾಗಿ ಏನೋ ಒಂದು ಕಾಲ್ಪನಿಕ ಪ್ರಕಾಶದ ಕಡೆಗೆ ಹೋಗುವದು. ಆಮೇಲೆ ಸುಮಾರು ಕಾಲದ ನಂತರ ಆ ಪರಮ ಶಕ್ತಿಯ ಬಗ್ಗೆ ಒಂದು ಅನಿಸಿಕೆ ಅನುಭವಕ್ಕೆ ಬರುವದು. ಆಗ ಪ್ರಾಣಾಹುತಿ ಮತ್ತು ಅದರ ಪರಿಣಾಮ ತಿಳಿದಂತೆ ಅನಿಸುವದು. ಇವೆಲ್ಲವೂ ಒಂದು ರೀತಿಯ ಭ್ರಮೆಯೇ ಸರಿ, ಮುಂದೆ ಹೋದಂತೆ ಇಂತಹ ಅನಿಸಿಕೆಗಳು ಕೂಡಾ ಮಾಯವಾಗಿ ಇವೆಲ್ಲ ಸತ್ಯವೋ ಅಥವಾ ಅಸತ್ಯವೋ ಎಂದು ತಿಳಿಯಲು ಸಾಧ್ಯವಾಗುವದಿಲ್ಲ. ಧ್ಯಾನ ಮುಗಿದ ಮೇಲೆ ಯಾವವೂ ಪೂರ್ಣವಾಗಿ ನೆನಪಿಗೆ ಬರುವದಿಲ್ಲ. ಇದೇ ಇಂದ್ರಿಯಾತೀತದ ವಿಷಯ.

  1. ಮುಂಜಾನೆ ಸೂರ್ಯೋದಯಕ್ಕೆ ಮುಂಚೆ ಧ್ಯಾನ. ಒಂದು ಗಂಟೆ
  2. ಸಂಜೆಯ ಶುದ್ದೀಕರಣ ಅರ್ಧ ಗಂಟೆ.
  3. ಮಲಗುವ ಮುಂಚೆ ಪ್ರಾರ್ಥನೆ
  4. ಗುರಿಯ ನಿರಂತರ ಸ್ಮರಣೆ.
  5. ಸಹಜಮಾರ್ಗದ ಹತ್ತು ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ.

ಇವೆಲ್ಲ ನಿಯಮಗಳನ್ನು ಸಾಧಕರು ತಮ್ಮ ಗೃಹಸ್ಥ ಜೀವನದಲ್ಲಿದ್ದರೂ ಕೈಗೊಂಡು ತಾವು ಮಾಡುವ ಎಲ್ಲ ಕೆಲಸಗಳನ್ನು ಭಗವಂತನ ಕೆಲಸವೆಂದು ತಿಳಿಯಬೇಕು. ಇವೆಲ್ಲವೂ ನಮ್ಮ ಅಭ್ಯಾಸಕ್ಕೆ ಪೂರಕವಾಗಿರುವವು. ಈ ಎಲ್ಲವುಗಳನ್ನು ಚಾಚೂ ತಪ್ಪದೆ ನಿರ್ಧಾರಿತ ಸಮಯಕ್ಕೆ ಪ್ರೇಮ, ಭಕ್ತಿ, ಶ್ರದ್ಧೆಯಿಂದ ನಮ್ಮ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿನಿತ್ಯ ಒಂದೇ ಸ್ಥಳ ಮತ್ತು ಒಂದೇ ಆಸನದಲ್ಲಿ ಕುಳಿತು ಮಾಡಬೇಕು. ಯಾವಾಗಲೂ ನಾವು ನಮ್ಮ ಗುರಿಯನ್ನು ಪಡೆಯಲು ಪ್ರಾರ್ಥಿಸುತ್ತಾ ನಮ್ಮಲ್ಲಿ ಪ್ರಾರ್ಥನಾ ಸ್ಥಿತಿಯನ್ನು ಕಲ್ಪಿಸಬೇಕು. ಭಗವಂತನಲ್ಲಿ ಒಂದಾಗುವದೇ ನಮ್ಮ ಗುರಿಯಾಗಿರುವದರಿಂದ ಸಾಧನೆ ಮಾಡುತ್ತಾ ಹೋದ ಹಾಗೆ ಕೆಲವು ವಿಚಾರಗಳು ಆಗಾಗ್ಗೆ ನಮ್ಮ ಮನಸ್ಸಿನಲ್ಲಿ ಬರುವ ಸಾಧ್ಯತೆಗಳಿವೆ.

  1. ಭಗವಂತನನ್ನು ತಿಳಿಯುವದು.
  2. ಭಗವಂತನನ್ನು ನೋಡುವದು.
  3. ಭಗವಂತನ್ನು ಅನುಭವಿಸುವದು.
  4. ಭಗವಂತನನ್ನು ಅನಿಸಿಕೆಯಲ್ಲಿ ತರುವದು.
  5. ಆತನಲ್ಲಿ ಒಂದಾಗುವದು.
  6. ಆತನಂತೆ ಆಗುವದು.
  7. ಆತನಲ್ಲಿ ಇರುವದು.
  8. ಆತನಂತೆ ಜೀವಿಸುವದು.
  9. ಆತನ ಮಾನಸಿಕ ಸ್ಥಿತಿಯನ್ನು ಪಡೆಯುವದು. ಇಂತಹ ಸ್ಥಿತಿಯು ಕ್ಷಣಿಕವೋ ಶಾಶ್ವತವೋ,
  10. ಇಂದ್ರಿಯಗಳಿಗೆ ಗೋಚರವಾಗುವಂತಹದ್ದೋ ಅಥವಾ ಆಗದೆ ಇರುವದೋ.

ಇವೆಲ್ಲವುಗಳನ್ನು ಯೋಚಿಸಿ ಆಗಾಗ ಆತನನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಬೇಕು. ಅಭ್ಯಾಸಿಯು ತನ್ನ ಅಭ್ಯಾಸವನ್ನು ಗುರುಗಳ ಮೇಲೆ, ಆತನ ಸಾಮರ್ಥ್ಯ ಮತ್ತು ಯೋಗ್ಯತೆಯ ಮೇಲೆ ಪೂರ್ಣ ವಿಶ್ವಾಸವಿಟ್ಟು ಮಾಡಬೇಕು. ಅಭ್ಯಾಸದಲ್ಲಿ ಯಾವ ಅಡ್ಡಿ ಆತಂಕಗಳಿಗೆ ಮತ್ತು ಕ್ಷುಲ್ಲಕ ಕಾರಣಗಳಿಂದಾಗಿ ಅಭ್ಯಾಸವನ್ನು ಬಿಡಬಾರದು. ಅಭ್ಯಾಸ ಪ್ರಾರಂಭ ಮಾಡಿದ ಮೇಲೆ ಕೆಲವೊಂದು ಸಮಯ ಏನೂ ಅನುಭವಗಳು ಆಗದಿದ್ದರೂ ಬೇಜಾರು ಬಂದರೂ ಬಿಡಬಾರದು. ಕೆಲ ಕಾಲದ ನಂತರ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬರಬಹುದು. ಅವು ಈ ಹೊಸ ಅಭ್ಯಾಸ ಮಾಡುವದರಿಂದಾಗಲಿ ಅಥವಾ ನಾವು ಈ ಹಿಂದೆ ಮಾಡುತ್ತಿರುವ ಧಾರ್ಮಿಕ ಪೂಜೆಗಳನ್ನು ಬಿಟ್ಟಿರುವದರಿಂದಾಗಲಿ ಎಂದು ತಿಳಿಯಬಾರದು.ಅಭ್ಯಾಸ ಪ್ರಾರಂಭ ಮಾಡಿದ ಮೇಲೆ ಆನಂದ, ಸುಖ, ಮನೋರಂಜನೆಗಳ ಬಗ್ಗೆ ಇಚ್ಛೆ ಕಡಿಮೆಯಾಗುತ್ತಾ ಹೋಗುವವು. ಅಭ್ಯಾಸ ಕೇವಲ ನಮ್ಮ ಗುರಿಯನ್ನು ಸಾಧಿಸಲು ಮಾತ್ರ ಇದ್ದು, ಆರೋಗ್ಯ, ಆಯುಷ್ಯ, ಸಂಪತ್ತು ಮತ್ತು ಸಮೃದ್ಧಿಗೋಸ್ಕರವಲ್ಲ.

ಪ್ರಯತ್ನ, ಸಹಕಾರ ಮತ್ತು ವಿರೋಧ.

ಪ್ರಯತ್ನ :

  1. ಸಾಮಾನ್ಯ ನಿಯಮಗಳು: ಧ್ಯಾನ, ಶುದ್ದೀಕರಣ, ಪ್ರಾರ್ಥನೆ, ನಿರಂತರ ಸ್ಮರಣೆ ಮತ್ತು ಹತ್ತು ನಿಯಮಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ.
  2. ಜೀವನದ ಗುರಿಯ ಬಗ್ಗೆ ಹೆಚ್ಚಿನ ತಿಳಿವಳಿಕೆ, ಸದ್ಗುರುಗಳು ಬರೆದ ಪುಸ್ತಕಗಳ ಅಧ್ಯಯನ.
  1. ಪ್ರಶಿಕ್ಷಕರ ಜೊತೆ ಸಂಪರ್ಕ ಮತ್ತು ಗುರಿ, ಸಾಧನೆ, ಅಡ್ಡಿ ಆತಂಕಗಳ ಬಗ್ಗೆ ಚರ್ಚೆ.
  1. ಸಮರ್ಥ ಗುರುವಿನೊಡನೆ ಒಂದು ಸಂಬಂಧ ಬೆಳೆಸಿ ಅದನ್ನು ಯಾವ ಪರಿಸ್ಥಿತಿಯಲ್ಲಿಯೂ ಚ್ಯುತಿ ಬರದಂತೆ ನಿಭಾಯಿಸುವದು. ಅಂದರೆ ಒಡೆಯ-ದಾಸ, ತಂದೆ-ಮಗ, ಅಣ್ಣ-ತಮ್ಮ, ಪ್ರಿಯ- ಪ್ರಿಯತಮ.
  2. ಶ್ರೀ ಬಾಬೂಜಿ ಮಹರಾಜರ ಮಹಾ ಸಮಾಧಿಯ ನಂತರ ಅವರು ತಯಾರಿಸಿದ ಒಬ್ಬ ಅಭ್ಯಾಸಿಯನ್ನು ಗುರುತಿಸಿ ಅವನಲ್ಲಿ ಗುರುಗಳ ಕೆಲವಾದರೂ ಲಕ್ಷಣಗಳನ್ನು ನೋಡಿ ಆತನಲ್ಲಿ ತರಬೇತಿ ಕೊಡುವ ಯೋಗ್ಯತೆಯನ್ನು ಕಂಡು, ಪೂರ್ಣ ಪರೀಕ್ಷಿಸಿ ಮನಸ್ಸು ಒಪ್ಪಿದ ಮೇಲೆಯೇ ಆತನನ್ನು ಮಾರ್ಗದರ್ಶಕನನ್ನಾಗಿ ಸ್ವೀಕರಿಸುವದು ಉತ್ತಮ. ಅಂತಹವನಲ್ಲಿ ಭೌತಿಕ ಆಪೇಕ್ಷೆಗಳು ಇರಬಾರದು. ಬೂಟಾಟಿಕೆಯ ಮಾತಾಡುವವರಲ್ಲಿ ಮತ್ತು ಸ್ತುತಿ ಮಾಡುವಂತಹವರಲ್ಲಿ ನಂಬಿಕೆ ಇಡಬಾರದು.
  1. ಒಮ್ಮೆ ಅಂತಹವನನ್ನು ಮನಸ್ಸಾರೆ ಒಪ್ಪಿಕೊಂಡ ಮೇಲೆ ಆತನು ಹೇಳಿದ ಎಲ್ಲ ಮಾತುಗಳನ್ನು ವಿಚಾರ ಮಾಡಿ ನಿಷ್ಕರ್ಷಕ್ಕೆ ಬಂದು ಅಳವಡಿಸಿಕೊಳ್ಳಬೇಕು. ಎಲ್ಲವೂ ನಮ್ಮ ಒಳಿತಿಗಾಗಿದೆ ಎಂದು ಭಾವಿಸಬೇಕು. ಆತನಿಂದ ಯಾವ ಭೌತಿಕ ಇಚ್ಛೆಗಳ ಆಗುವಿಕೆಯನ್ನು ಬಯಸಬಾರದು. ಕೇವಲ ಅಧ್ಯಾತ್ಮದ ಸಾಧನೆಯನ್ನು ಸುಧಾರಿಸುವದಕ್ಕಾಗಿ ಮತ್ತು ಬೇಗ ಗುರಿಯನ್ನು ತಲುಪುವದಕ್ಕಾಗಿಯೇ ಚರ್ಚಿಸಬೇಕು. ಆತನ ವೈಯುಕ್ತಿಕ ಲೋಪ ದೋಷಗಳ ಕಡೆಗೆ ನಮ್ಮ ಗಮನ ಹರಿಸಬಾರದು.
  2. ಪ್ರತಿ ವಾರಕ್ಕೊಮ್ಮೆ ಅಥವಾ 15 ದಿವಸಕ್ಕೊಮ್ಮೆಯಾದರೂ ನಮ್ಮ ಸ್ಥಿತಿಯ ಬಗ್ಗೆ ಅಂದರೆ ವಿಚಾರಗಳ, ಅನಿಸಿಕೆಗಳ, ಇರುವಿಕೆಯ, ಬೇರೆಯವರ ಬಗ್ಗೆ ಪ್ರೇಮ, ತಾತ್ಸಾರ, ಸಿಟ್ಟು, ವೈರತ್ವ ಮತ್ತು ಮಾರ್ಪಾಡುಗಳ ಬಗ್ಗೆ ಆತನಿಗೆ ವರದಿಯನ್ನು ಒಪ್ಪಿಸಬೇಕು. ಅವನು ನಮ್ಮ ಸಾಧನೆಯಲ್ಲಿ ಬರುವ ಎಲ್ಲ ಸಮಸ್ಯೆಗಳ ಬಗ್ಗೆ ತಿಳಿದರೆ ಮಾತ್ರ ಶ್ರೀ ಬಾಬೂಜಿಯವರ ಪ್ರಾಣಾಹುತಿಯ ಶಕ್ತಿಯ ಪ್ರಭಾವದಿಂದ ನಿವಾರಿಸುವನು. ಇದರಿಂದಾಗಿ ಇಬ್ಬರ ನಡುವೆ ಪ್ರೇಮದ ಭಾವ ಉಂಟಾಗಿ ಆ ಭಾವದಿಂದ ಶಾಶ್ವತವಾಗಿ ಇಬ್ಬರಿಗೂ ಲಾಭವಾಗುವದು. ಹೀಗಾದಾಗ ಆತನು ಗುರುಗಳ ಮುಂದೆ ಸಾಧಕನ ಬಗ್ಗೆ ಮತ್ತು ಅವನ ಸ್ಥಿತಿಯ ಬಗ್ಗೆ ಮಾಹಿತಿಯನ್ನು * ಕೊಟ್ಟು ಪ್ರಗತಿಗೋಸ್ಕರ ಯಾಚಿಸುವನು. ಇಲ್ಲಿ ಬಹು ಮುಖ್ಯವಾದ ವಿಷಯವೇನೆಂದರೆ ಎರಡನೇಯ ಪ್ರಶಿಕ್ಷಕರ ಬಗ್ಗೆ ಯಾವ ಪ್ರಕಾರದ ಜಿಗುಪ್ಪೆ, ತಾತ್ಸಾರ, ಅಗೌರವದಿಂದ ವರ್ತಿಸಬಾರದು.

ಸಹಕಾರ :

  1. ಎಲ್ಲ ನಿಯಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು.
  2. ಗುರುಗಳ ಮೇಲಿಟ್ಟಿರುವ ಪ್ರೇಮ, ಭಕ್ತಿ, ಶ್ರದ್ಧೆ ಮತ್ತು ಸಮರ್ಪಪಣೆಯ ಬಗ್ಗೆ ಆಗಾಗ್ಗೆ ಪರಿಶೀಲಿಸಬೇಕು.
  3. ಜೀವನದಲ್ಲಿ ಬರುವ ಎಲ್ಲ ಘಟನೆಗಳ ಸಂಬಂಧವಾಗಿ ಬರುವ ಪರಿಣಾಮವನ್ನು ಗಮನಿಸಿ ಅವುಗಳನ್ನು ದಕ್ಷತೆಯಿಂದ ಎದುರಿಸಬೇಕು. ನಮ್ಮಲ್ಲಿ ಬಂದ ವಿವೇಕ, ವೈರಾಗ್ಯಗಳ ಕಡೆಗೆ * ಗಮನವಿಟ್ಟು ಸಾಧನೆಯಲ್ಲಿ ಹೆಚ್ಚೆಚ್ಚು ಅಭಿರುಚಿಯನ್ನು ಬೆಳೆಸಬೇಕು.
  4. ಗುರಿಯನ್ನು ಸಾಧಿಸಲು ತಳಮಳವನ್ನು ಹೆಚ್ಚಿಸಬೇಕು.
  5. ನಮ್ಮ ಎಲ್ಲ ಇಚ್ಛೆಗಳನ್ನು ಬದಿಗಿಟ್ಟು ಕೇವಲ ಗುರಿಯನ್ನು ಪಡೆಯುವ ಹಂಬಲಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು.
  6. ನಾನು ಮತ್ತು ನನ್ನದು ಎಂಬುದರ ಬಗ್ಗೆ ಆಸಕ್ತಿಯನ್ನು ಕಡಿಮೆ ಮಾಡಿ ಆತ ಮತ್ತು ಆತನದು ಎಂಬುದರ ಬಗ್ಗೆ ವಿಚಾರ ಮಾಡಿ ಸ್ವಪ್ರತಿಷ್ಠೆಯನ್ನು ಬೆಳೆಸಬಾರದು.

ಪ್ರತಿರೋಧ

  1. ಆಲಸ್ಯ :- ಆಲಸ್ಯವು ನಮ್ಮ ಸಾಧನೆಯಲ್ಲಿ ವಿಷಕಾರಿಯ ಲಕ್ಷಣವಾಗಿದೆ. ನಮ್ಮ ಮನಸ್ಸು ಯಾವುದೇ ಒಂದು ವಿಚಾರದ ಮೇಲೆ ನೆಲೆಸಿರುವಂತೆ ಮಾಡಲು ಸಾಮಾನ್ಯವಾಗಿ ಸಾಧ್ಯವಾಗುವದಿಲ್ಲ. ನಾವು ನಮ್ಮ ಜೀವನದ ಗುರಿಯನ್ನಾಗಿ ತೆಗೆದುಕೊಂಡಿರುವ ವಿಚಾರವು ಇಂದ್ರಿಯಗಳ ಆಚೆ ಇದೆ. ಇಂದ್ರಿಯಾತೀತ ವಿಚಾರ ಮಾಡುವ ಹವ್ಯಾಸ ಇಲ್ಲದ ಕಾರಣ ಮತ್ತು ಅದರ ಬಗ್ಗೆ ಅಭಿರುಚಿ ತೆಗೆದುಕೊಳ್ಳಲಾರದುದರ ಪರಿಣಾಮವೇ ಆಲಸ್ಯ, ಈ ಆಲಸ್ಯತನಕ್ಕೆ ನಾವು ಆಸ್ಪದ ಕೊಡಬಾರದು. ಒಮ್ಮೆ ಅದಕ್ಕೆ ಎಡೆ ಮಾಡಿ ಕೊಟ್ಟರೆ ಅದು ನಮ್ಮನ್ನು ಬಿಡದು. ಉದಾ :-ಸಾಮಾನ್ಯವಾಗಿ ನಾವು ಸಂಜೆ ಶುದೀಕರಣದ ಸಮಯಕ್ಕೆ ಯಾರಾದರೂ ಅತಿಥಿಗಳು ಮನೆಗೆ ಬಂದರೆ ಅವರ ಜೊತೆ ಮಾತಾಡುವದರಲ್ಲಿ ಸಮಯದ ಅರಿವೇ ಇರದು ಮತ್ತು ನಾವು ಮಾಡಬೇಕಾದ ಶುದ್ದೀಕರಣವು ಜ್ಞಾಪಕಕ್ಕೆ ಬಂದರೂ ಕೂಡ ಅದರ ಕಡೆಗೆ ಗಮನ ಕೊಡುವದಿಲ್ಲ. ಅದೇ ಸಮಯ ನಮಗೆ ಬಾತರೂಂಗೆ ಹೋಗುವದಿದ್ದರೆ ಆಗ ನಾವು ಯಾರ ಕಡೆಗೂ ಲಕ್ಷ ಕೊಡದೇ ನಮ್ಮ ಕೆಲಸವನ್ನು ಮುಗಿಸಿ ಬರುತ್ತೇವೆ. ಅಂದರೆ ನಾವು ಮಾಡಬೇಕಾದ ಶುದ್ದೀಕರಣವು ಬಾತರೂಂಮಿಗೆ ಹೋಗುವ ಕ್ರಮಕ್ಕಿಂತ ಕನಿಷ್ಟವಾಯಿತೇ? ಒಂದು ಅಥವಾ ಎರಡು ಸಲ ಸತ್ಸಂಗಕ್ಕೆ ಏನೋ ಕಾರಣದಿಂದಾಗಿ ಹೋಗದಿದ್ದರೆ ಮೂರನೇಯ ಸಲ ಹೋಗುವ ಮನಸ್ಸಾಗುವದಿಲ್ಲ. ಆದುದರಿಂದ ನಮ್ಮ ಸಾಧನೆಯನ್ನು ಮಾಡುವದರಲ್ಲಿ ಸಂಕಲ್ಪ ಬದ್ಧರಾಗಿರಬೇಕು.
  2. ಸಾಧನೆಗೆ ಅವಶ್ಯಕನುಸಾರ ವೈಯುಕ್ತಿಕ ಕ್ಷಮಾಪಣೆ ಕೇಳುವುದನ್ನು ತ್ಯಜಿಸಬೇಕು.
  3. ತಪ್ಪು ಕಲ್ಪನೆಗಳಿಂದ, ಒಳ್ಳೆಯದು-ಕೆಟ್ಟದ್ದು, ಬೇಕು-ಬೇಡ, ಕೆಲವರ ಬಗ್ಗೆ ತಾತ್ಸಾರ, ಜಿಗುಪ್ಪೆ ವೈರತ್ವ ಇವುಗಳು ಸಾಧನೆಯಲ್ಲಿ ವಿಷಕಾರ,
  4. ಸ್ವಪ್ರತಿಷ್ಠೆ ಮತ್ತು ವೈಯುಕ್ತಿಕ ಪ್ರಾಧಾನ್ಯತೆಯನ್ನು ಪೂರ್ಣವಾಗಿ ತ್ಯಜಿಸಬೇಕು.
  5. ಪರಿವರ್ತನೆಯನ್ನು ಬಯಸದೇ ಇರುವದು ಮತ್ತು ಎಲ್ಲವನ್ನು ಗುರುಗಳ ಮೇಲೆ ಬಿಡುವದು, ಏನನ್ನು ಮಾಡದೆ ತನ್ನದೇ ಆದ ರೀತಿಯಲ್ಲಿ ನಡೆದುಕೊಂಡು ಅದೇ ಸರಿಯೆಂದು ಸಮರ್ಥಿಸಿ- ಕೊಳ್ಳುವದು.
  6. ಸಂಶಯಾಸ್ಪದ ರೀತಿಯಲ್ಲಿ ನಡೆದುಕೊಳ್ಳುವದು, ಒಳಗೊಂದು ಹೊರಗೊಂದು ಮನಸ್ಸಿನಿಂದ ಇರುವದು.
  7. ಜವಾಬ್ದಾರಿಯಿಂದ ದೂರ ಸರಿದು ಕೈಗೊಂಡ ಕೆಲಸದಿಂದ ವಿಮುಖರಾಗುವದು.

ಆಭ್ಯಾಸಿ ಎಂದರೆ ಯಾರು ? ಸುಮಾರು ಮೂರು ವರ್ಷಗಳ ಹಿಂದೆ ಸೋಲಾಪುರಿನ ಸಮಾರಂಭದ ಕಾಲಕ್ಕೆ ಒಂದು ದಿನ ಶ್ರೀ ರಾಘವೇಂದ್ರರಾಯರು ಈ ಪ್ರಶ್ನೆಯನ್ನು ಎತ್ತಿದರು. ಕೆಲವರು 6 ತಿಂಗಳಿನಿಂದ ಕೆಲವರು 5 ವರ್ಷಗಳಿಂದ ಕೆಲವರು 10 ವರ್ಷಗಳಿಂದ ಮತ್ತು ಕೆಲವರು 20, 30, 40 ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಇವರಲ್ಲಿ ಅಭ್ಯಾಸಿ ಯಾರು? ಆಗ ನಮ್ಮಿಬ್ಬರ ನಡುವೆ ಸಾಕಷ್ಟು ಚರ್ಚೆಯಾಯಿತು. ಅದರಲ್ಲಿ ಶ್ರೀ ಬಾಬೂಜಿಯವರ ಹೇಳಿಕೆಗಳ ಮೇಲೂ ವಿಚಾರ ಮಾಡಲಾಯಿತು.

ಧರ್ಮದ ಕೊನೆಯೇ ಅಧ್ಯಾತ್ಮದ ಆರಂಭ. ಅಂದರೆ ಎಲ್ಲಿಯವರೆಗೆ ನಾವು ಧರ್ಮದ ಕಟ್ಟಳೆಗಳನ್ನು ಕಳಚಿ ಹೊರ ಬರದೆ, ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವದು, ನಮ್ಮ ಧರ್ಮ ಹೇಳಿಕೊಟ್ಟ ನಿಯಮಗಳನ್ನು ಪಾಲಿಸುವದು, ಯಾವುದೇ ಕರ್ಮವನ್ನು ಅರ್ಥ ತಿಳಿಯದೇ ಮಾಡುವದು, ಎಲ್ಲಾ ರೀತಿಯ ನಡುವಳಿಕೆಗಳನ್ನು ಪಾಲಿಸುವದು ಮತ್ತು ಅವುಗಳನ್ನು ಬಿಟ್ಟರೆ ಎಲ್ಲಿ ಅನರ್ಥವಾಗುವದೆಂಬ ಭಯ, ಹಬ್ಬ-ಹುಣ್ಣಿಮೆ, ಸಂಸ್ಕಾರಗಳು, ದಿನಾಚರಣೆಗಳು, ಇವು ನಮ್ಮ ದಿನನಿತ್ಯದ ಜೀವನವನ್ನಾಗಿ ಮಾಡಿದ್ದೇವೆ. ಅವುಗಳನ್ನು ಬಿಟ್ಟರೆ ಯಾವ ನಷ್ಟವಿಲ್ಲ ಮತ್ತು ಮಾಡಿದರೆ ಯಾವ ಲಾಭವೂ ಕೂಡ ಇಲ್ಲ. ನಿತ್ಯ ಮತ್ತು ನೈಮಿತ್ಯ ಕರ್ಮಗಳ ಕಡೆಗೆ ಗಮನವಿಲ್ಲದಿರುವಿಕೆ ಮತ್ತು ಅವು ಕೇವಲ ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಮಾಡುತ್ತಾ ಬಂದಿರುತ್ತಾರೆಂಬುದನ್ನು ಬಿಟ್ಟು ಮತ್ತೆ ಏನೂ ಇಲ್ಲ. ಹೀಗೆ ಅನುಸರಿಸುವದರಿಂದ ಏನೂ ಲಾಭವಿಲ್ಲವೆಂದು ತಿಳಿಯುವದು. ನಾವು ಇಲ್ಲಿ ಒಂದು ಬಹು ಉಚ್ಚತ್ತಮವಾದ ಗುರಿಯನ್ನು ಇಟ್ಟುಕೊಂಡಿದ್ದೇವೆ. ಅದನ್ನು ಪಡೆಯುವದೇ ನಮ್ಮ ಆದ್ಯ ಕರ್ತವ್ಯವಾಗಿದೆ. ಎಲ್ಲಿಯವರೆಗೆ ನಾವು ಈ ಕಟ್ಟಳೆಗಳಿಂದ ಹೊರಬರುವದಿಲ್ಲವೋ ಅಲ್ಲಿಯವರೆಗೆ ನಮಗೆ ಅಧ್ಯಾತ್ಮ ಕ್ಷೇತ್ರದಲ್ಲಿ ಪೂರ್ಣ ಪ್ರವೇಶ ದೊರಕಲಾರದು. ಈ ವಂಶ ಪಾರಂಪರ್ಯದಿಂದ ಬಂದುದನ್ನು ಬಿಡಬೇಕೆಂದರೆ ಕಾಲ ಹಿಡಿಯುವದು. ಏಕೆಂದರೆ ನಮ್ಮ ಹೃದಯದ ಮೇಲೆ ಮತ್ತು ಮನಸ್ಸಿನ ಮೇಲೆ ಅವುಗಳ ಪ್ರಭಾವ ಬಿದ್ದು ನಂಬಲಾರದಷ್ಟು ಅವುಗಳ ಪರಿಣಾಮದ ಗೆರೆಗಳು ಬಿದ್ದ ಕಾರಣ ಯಾವುದೂ ಹೊಸದನ್ನು ಅಲ್ಲಿ ಹಾಕಲಿಕ್ಕೆ ಸಾಧ್ಯವಿಲ್ಲ. ಆದ ಕಾರಣ ಮೊದಲು ಅವುಗಳನ್ನು ಅಳಿಸಿ ಹಾಕುವದು ಮುಖ್ಯವಾಗಿದೆ. ಅದಕ್ಕೋಸ್ಕರ ನಮ್ಮ ಗುರುಮಹರಾಜರು ಸಾಕಷ್ಟು ಸಹಾಯ ಮಾಡುವರು. ಅಂದರೆ ನಮ್ಮ ಹೃದಯದ ಸ್ಟೇಟಿನ ಮೇಲೆ ಬಿದ್ದ ಗೀಚುಗಳನ್ನು ತೆಗೆದು ಹಾಕಿ ಪೂರ್ಣ ಸ್ವಚ್ಛ ಮಾಡಿದ ಮೇಲೆಯೇ ಹೊಸದಾಗಿ ಬರೆಯುವದಾಗಿದೆ. ಅದಕ್ಕೆಯೇ ಯಾರಾದರೂ ಹೊಸದಾಗಿ ಸಾಧನೆಯನ್ನು ಪ್ರಾರಂಭ ಮಾಡಿದಾಗ ಅವರಿಗೆ ಧ್ಯಾನದಲ್ಲಿ ವಿಚಾರಗಳು ಬರುವವು ಮತ್ತು ಸಾಕಷ್ಟು ದಿನ ಆ ಗೊಂದಲದಲ್ಲಿಯೇ ಬಿದ್ದು ತೊಳಲಾಡುವರು. ನಮ್ಮ ಸಾಧನೆಯಲ್ಲಿ ಅಂತಹ ಗೊಂದಲದ ವಿಚಾರಗಳು ಬರುವವರೆಗೆ ಮುಖ್ಯ ಅಭ್ಯಾಸ ಪ್ರಾರಂಭವಾಗಲು ಸಾಧ್ಯವಿಲ್ಲ. ಅಂದರೆ ಧ್ಯಾನದಲ್ಲಿ ಕುಳಿತಾಗ ವಿಚಾರಗಳು ಬರದ ಸ್ಥಿತಿ ನಿರ್ಮಾಣವಾದಾಗ ಮಾತ್ರ ನಮ್ಮ ಅಧ್ಯಾತ್ಮಿಕ ತರಬೇತಿ ಪ್ರಾರಂಭವಾಗುವದು. ಆಗಲೇ ಅವನು ಅಭ್ಯಾಸಿಯಾಗುವನು. ಇದನ್ನು ಅವನೇ ನಿರ್ಧರಿಸಬೇಕು. ಅಭ್ಯಾಸಿಯಾದ ಮೇಲೆ ಹೃದಯದಲ್ಲಿ ಎಲ್ಲ ಆಗು ಹೋಗುಗಳ ಬಗ್ಗೆ ತಿಳುವಳಿಕೆ ಹುಟ್ಟಿ ಅವು ಹೇಗೆ ಆಗುವವು ಎಂಬುದರ ಬಗ್ಗೆ ತಿಳಿಯುವದು. ಆಗಲೇ ಪ್ರಾಣಾಹುತಿಯ ಮಹತ್ವ ಮತ್ತು ಅದರ ಅರಿವಾಗಿ ಅದರ ಪರಿಣಾಮವನ್ನು ಗಮನಿಸುವನು.

ಪ್ರಾಣಾಹುತಿಯನ್ನು ನಾಲ್ಕು ರೀತಿಯಿಂದ ಕೊಡಲಾಗುವದು. :-

  1. ಪರ :- ವಿಚಾರ ಶಕ್ತಿಯಿಂದ (ವೈಚಾರಿಕವಾಗಿ) ಯಾವಾಗಲೂ ಸತ್ಸಂಗದಲ್ಲಿ ಆಗುವ ಕ್ರಿಯೆ.
  2. ಪಶ್ಯಂತಿ :- ದೃಷ್ಟಿಯಿಂದ (ನೋಡುವದರಿಂದ)
  3. ಮಾಧ್ಯಮ :- ಸ್ಪರ್ಷ ಅಥವಾ ಮುಟ್ಟುವದರಿಂದ
  4. ವೈಖರಿ :-ಶಬ್ದ-ಮಾತುಗಳಿಂದ.

ಇವೆಲ್ಲ ರೀತಿಯಿಂದ ಕೊಡುವ ಪ್ರಾಣಾಹುತಿಯ ಅನುಭವವನ್ನು ಪ್ರತಿಯೊಬ್ಬ ಅಭ್ಯಾಸಿಯು ಮಾಡಬೇಕು ಮತ್ತು ಅದರಿಂದಾದ ಪರಿಣಾಮಗಳನ್ನು ಗಮನಿಸಬೇಕು. ಇದರಿಂದಾಗಿ ಅಭ್ಯಾಸಿಯಲ್ಲಿ ಹೆಚ್ಚೆಚ್ಚು ಅಭಿರುಚಿ ಹುಟ್ಟಿ ಗುರುಮಹರಾಜರ ಕೃಪೆಯಿಂದ ಬೇಗ ಬೇಗ ಪ್ರಗತಿಯ ಮಜಲುಗಳನ್ನು ದಾಟುವನು. ಇವೆಲ್ಲವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದರೆ ಸತತ ಸ್ಮರಣೆಯೊಂದೇ ಉಪಾಯ.

ಅನುಭವದಿಂದಾಗಿ ಅಭ್ಯಾಸಿಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಬಹುದು.

Preparatory phase : ಇದರಲ್ಲಿ ಸಾಧಕರನ್ನು ಅಭ್ಯಾಸಿಯನ್ನಾಗಿ ಮಾಡುವದು. ಇದು ನಮ್ಮ ಸಾಧನೆಯಲ್ಲಿ ಬರುವ ಬಹು ಮುಖ್ಯವಾದ ಮಜಲು. ಇದು ಸಾಕಷ್ಟು ತೆಗೆದುಕೊಳ್ಳುವದಾಗಿದೆ.

Training phase : ಇದರಲ್ಲಿ ಅಭ್ಯಾಸಿಗೆ ತರಬೇತಿ ಕೊಡಲಾಗುವದು. ಇದರಲ್ಲಿ ಸಾಧಕನು ಅಭ್ಯಾಸಿಯಾದ ನ೦ತರ ಅವನ ಯೋಗ್ಯತಾನುಸಾರವಾಗಿ ತರಬೇತಿಯನ್ನು ಕೊಡಲಾಗುವದು.

Evolutionary phase : ಇದರಲ್ಲಿ ತರಬೇತಿ ಪಡೆಯುವವರನ್ನು ಪರೀಕ್ಷಿಸಿ ಆವರವರ ಯೋಗ್ಯತಾನುಸಾರ ಪ್ರಗತಿಯನ್ನು ದಯಪಾಲಿಸಲಾಗುವದು.

ಮುಖ್ಯವಾಗಿ ಗಮನಿಸಬೇಕಾದ ವಿಷಯಗಳು : –

  1. ಅಧ್ಯಾತ್ಮಿಕ ಕ್ಷೇತ್ರದಲ್ಲಿ ಅಭ್ಯಾಸಿಯು ಕೊನೆಯವರೆಗೂ ತನ್ನ ವಿಧ್ಯಾರ್ಥಿತನವನ್ನು ಕಾಯ್ದಿರಿಸಬೇಕು. ನಮ್ಮ ಗುರಿಯು ಅನಂತತೆಯನ್ನು ಪಡೆದು ಆ ಸ್ಥಿತಿಯಲ್ಲಿ ನೆಲೆಸಿರುವದಾಗಿದೆ. ಯಾವಾಗಲೂ ಭಗವಂತನೇ ನಮ್ಮ ಗುರುಗಳ ರೂಪದಲ್ಲಿದ್ದ ಕಾರಣ ದಾಸನಾಗಿಯೇ ಇರುವದು ಮಾನವನ ಧರ್ಮ ಮತ್ತು ಕರ್ತವ್ಯ.
  2. ಪ್ರತಿಯೊಂದು ಕೇಂದ್ರವು ಅಧ್ಯಾತ್ಮದ ತರಬೇತಿಯ ಕೇಂದ್ರವಾಗಿದ್ದು ಅಲ್ಲಿ ತರಬೇತಿ ಪಡೆಯದೆ ಸುಮ್ಮನೆ ಕುಳಿತು ಧ್ಯಾನ ಮಾಡಿದುದಾದರೆ ಬಯಸಿದ ಲಾಭ ದೊರೆಯುವದಿಲ್ಲ. ಏಕೆಂದರೆ ನಮ್ಮ ತರಬೇತಿ ಕ್ಲಾಸ್‌ರೂಂ ತರಹದ್ದಲ್ಲ. ಇದು ಒಬ್ಬನಿಂದ ಒಬ್ಬನಿಗೆ ತರಬೇತಿ ಕೊಡುವದಾಗಿದೆ.
  3. ಕೇವಲ ಓದುವದರಿಂದ ಅಥವಾ ಸ್ವಂತ ಧ್ಯಾನ ಮಾಡುವದರಿಂದ ಮಾತ್ರಕ್ಕೆ ಏನೂ ಲಾಭ ದೊರೆಯಲಾರದು ಎಂದು ಶ್ರೀ ಬಾಬೂಜಿ ಮಹರಾಜರು ಹೇಳಿದ್ದಾರೆ.
  4. ಪ್ರಗತಿಯಲ್ಲಿ ಪರಿವರ್ತನೆಗಳನ್ನು “ಧ್ಯಾನ” ಎಂಬ ನಿಬಂಧದಲ್ಲಿ ತೋರಿಸಲಾಗಿದೆ.

ಅಭ್ಯಾಸಿಯಲ್ಲಿರಬೇಕಾದ ಮುಖ್ಯ ಗುಣಗಳು : –

  1. ಮೊದಮೊದಲು ಪ್ರತಿಯೊಬ್ಬ ಜಿಜ್ಞಾಸುವಿಗೆ ಭಗವಂತನ ಸಾಕ್ಷಾತ್ಕಾರವೇ ತನ್ನ ಜೀವನದ ಗುರಿಯನ್ನಾಗಿ ನಿರ್ಧರಿಸಿ ಸಾಧನೆಯನ್ನು ಕೈಗೊಳ್ಳುತ್ತಾನೆ. ಕೆಲ ಕಾಲದ ನಂತರ ಒಂದು ವೇಳೆ ಅವನಿಗೆ ಒಬ್ಬ ಸಮರ್ಥ ಗುರುವಿನ ಪ್ರಾಪ್ತಿಯಾದರೆ ಗುರಿಯ ಬಗ್ಗೆ ಸರಿಯಾದ ಕಲ್ಪನೆ ಬರಲಾರಂಭಿಸುವದು. ಆತನ ಗುರಿಯು ಬದಲಾಗುತ್ತ ಹೋಗಿ ಭಗವಂತನ ಸಾಕ್ಷಾತ್ಕಾರವೆಂದರೆ ಧರ್ಮಗಳಲ್ಲಿ ತಿಳಿಸಿರುವ ದೇವರ ಸಾಕ್ಷಾತ್ಕಾರವಲ್ಲ ಅಥವಾ ಇನ್ನಿತರ ದೇವ, ದೇವತೆಗಳ ದರ್ಶನವಲ್ಲವೆಂಬುದನ್ನು ಅರಿತು ಕೇವಲ ಗುರುವೇ ಆತನ ಗುರಿಯಾಗುತ್ತಾನೆ. ನಂತರ ಆತನ (ಗುರುಗಳ) ಮಾರ್ಗದರ್ಶನ ಮತ್ತು ಕೃಪೆಯಾದರೆ ಮಾತ್ರ ಅವನಿಗೆ ತಿಳಿಯುವದೇನೆಂದರೆ ಆತನು ದೇಹದಿಂದ ಕೂಡಿದ ಒಬ್ಬ ಭೌತಿಕ ಗುರುವಲ್ಲ. ಅದೊಂದು ತತ್ವ, ಸಿದ್ಧಾಂತವೆಂದು ತಿಳಿದು ಮುಂದುವರೆಯುತ್ತಾನೆ. ಅಭ್ಯಾಸದಲ್ಲಿ ಇನ ಮುಂದುವರಿದುದಾದರೆ ಗುರಿಯೆಂದರೆ ಅದೊಂದು ಪರಮ ಸತ್ಯದ ಇರುವಿಕೆಯ ಅರಿವಿಕೆ (Ultimate Reality of one’s existance and its awareness or consciousness) ತಿಳಿಯುವನು. ಅದೇ ನಮ್ಮ ಜೀವನದ ಗುರಿ. ಆ ಪರಮ ಸತ್ಯದ ಸ್ಥಿತಿಯನ್ನು ತಿಳಿದು ಅದರಲ್ಲಿಯೇ ಶಾಶ್ವತವಾಗಿ ಅದರ ಅರಿವಿಕೆಯಲ್ಲಿದ್ದು ಅದರ ಒಂದು ಉಪಕರಣವಾಗಿರುವದೇ ನಮ್ಮ ಜೀವನದ ಗುರಿ. ಇದು ಕೇವಲ ವೈಚಾರಿಕ ಸಾಧನೆ ಮತ್ತು ಸದ್ಗುರುಗಳ ಕೃಪೆಯಿಂದ ಮಾತ್ರ ಸಾಧ್ಯ. ಇದೇ ಜೀವನದಲ್ಲಿ ಸಾಧಿಸಬಹುದೆಂದು ನಮ್ಮ ಗುರುಗಳು ಸ್ಪಷ್ಟ ಮಾಡಿ ತೋರಿಸಿದ್ದಾರೆ.
  2. ನಮ್ಮ ಗುರಿಯನ್ನು ಈ ಜನ್ಮದಲ್ಲಿಯೇ ಸಾಧಿಸುವ ಛಲ : -ಒಮ್ಮೆ ನಮ್ಮ ಜೀವನದ ಗುರಿಯನ್ನು ನಿರ್ಧರಿಸಿದ ಮೇಲೆ ಸರಿಯಾದ ಆದ್ಯತೆಯನ್ನು ಕೊಟ್ಟು ಈ ಜನ್ಮದಲ್ಲಿಯೇ ಅದನ್ನು ಸಾಧಿಸಿಯೇ ತೀರುವೆನೆಂಬ ಸಂಕಲ್ಪ ಮಾಡಬೇಕು. ಸಂಕಲ್ಪ, ಪ್ರಯತ್ನ, ಸತತ ಸ್ಮರಣೆ, ವಿವೇಕ, ವೈರಾಗ್ಯ, ಆತ್ಮವಿಶ್ಲೇಷಣೆಯಿಂದ ಈ ಆಗಾಗ್ಗೆ ನಿಯಮಿತ ತರಬೇತಿ ಪ್ರಕಾರ ಮುಂದೆ ಸಾಗುವ ನಿರಂತರ ಪ್ರಯತ್ನದಲ್ಲಿರಬೇಕು. ಇಂತಹ ಪ್ರಯತ್ನದಲ್ಲಿ ಹಸಿವು, ನೀರಡಿಕೆ- ಅಲ್ಲ-ಇರುವಿಕೆಯ ಅರಿವೇ ಮರೆತಂತಾಗಬೇಕು. ಅಂದರೆ ಯಾವಾಗಲೂ ಅಂತರ್ಮುಖಿಯಾಗಿ ಗುರುಗಳ ನಿಜ ಸ್ವರೂಪವನ್ನು ನೋಡುವ ಪ್ರಯತ್ನದಲ್ಲಿರುವದೇ ನೈಜ ಅಭ್ಯಾಸಿಯ ಲಕ್ಷಣ.
  3. ಸಾಕಷ್ಟು ಜನ ಪ್ರಶಿಕ್ಷಕರಿದ್ದಾಗ್ಯೂ ಅವರಲ್ಲಿ ಯಾರಾದರೊಬ್ಬರನ್ನು ಖುದ್ದಾಗಿ ಎಲ್ಲ ರೀತಿಯಿಂದ ಪರೀಕ್ಷಿಸಿ ಮತ್ತು ಆತನಿಂದ ಸಹಾಯ ಪಡೆದು ಗುರಿಯನ್ನು ತಲುಪಲು ಸಾಧ್ಯವೆಂದು ಮನದಟ್ಟಾದ ಮೇಲೆಯೇ ಅವನನ್ನು ಮಾರ್ಗದರ್ಶಕನೆಂದು ಮನಸಾರೆ ಒಪ್ಪಿ ಆತನಿಂದ ತರಬೇತಿಯನ್ನು ಪಡೆಯಲು ನಿರ್ಧರಿಸಬೇಕು. ಒಮ್ಮೆ ಒಪ್ಪಿಕೊಂಡ ಮೇಲೆ ಅವನು ಹೇಳಿದುದೆಲ್ಲವನ್ನು ಅಕ್ಷರಶಃ ಒಪ್ಪಿ ಪಾಲಿಸಬೇಕು. ಅವನ ಹೇಳಿಕೆಯಲ್ಲಿ ಯಾವ ತರಹದ ಆಸೆ, ಅಭಿಲಾಶೆಗಳಿರಬಾರದು.
  4. ಮಾರ್ಗದರ್ಶಕನ ಜೊತೆ ಒಂದು ತರಹದ ಸಂಬಂಧ ಬೆಳೆಸಿಕೊಂಡು ಯಾವದೂ ಗೌಪ್ಯ/ರಹಸ್ಯ ಇಡದೆ ಸಾಧನೆ ಮತ್ತು ಗುರಿಯನ್ನು ಸಾಧಿಸುವ ವಿಧಾನಗಳ ಬಗ್ಗೆ ಮತ್ತು ಸಾಧನೆಯಲ್ಲಿ ಬರುವ ಅಡ್ಡಿ ಆತಂಕಗಳ ಬಗ್ಗೆ ಸರಿಯಾಗಿ ತಿಳಿಯುವವರೆಗೆ ಚರ್ಚಿಸಿ ಸಮಾಧಾನ ಪಡೆದು ಹೋಗಲಾಡಿಸಬೇಕು.
  5. ವಾರಕ್ಕೆ ಒಮ್ಮೆಯಾದರೂ ಆತನನ್ನು ಭೇಟಿ ಮಾಡಿ ವಿಷಯ ಮತ್ತು ಸ್ಥಿತಿಗಳ ಬಗ್ಗೆ ಚರ್ಚಿಸಬೇಕು. ಆದುದರಿಂದ ಆದಷ್ಟು ಸಮೀಪವಿರುವ ವಿಶ್ವಾಸವುಳ್ಳ ಪ್ರಶಿಕ್ಷಕನನ್ನೇ ಮಾರ್ಗದರ್ಶಿಯಾಗಿ ಆರಿಸಿಕೊಳ್ಳಬೇಕು.
  6. ಧೈರ್ಯ : ಗುರಿಯನ್ನು ಹೊಂದಲು ಎಲ್ಲ ಪ್ರಯತ್ನಗಳನ್ನು ಧೈರ್ಯದಿಂದ ಮಾಡಬೇಕು. ಸಾಂಪ್ರದಾಯಕ ಮತ್ತು ಅರ್ಥಹೀನ ಧರ್ಮದ ಕಟ್ಟಳೆಗಳಿಂದ ದೂರವಿರಬೇಕು. ಇಂತಹ ಧೈರ್ಯವುಳ್ಳ ಜಿಜ್ಞಾಸುಗಳಿಗೆ ಸ್ವಾಮಿ ವಿವೇಕಾನಂದರು ಸಿಂಹ ಹೃದಯದವರೆಂದು ಕರೆದಿದ್ದಾರೆ.
  7. ಸ್ವಾರ್ಥತೆ ಮತ್ತು ಸ್ವಪ್ರತಿಷ್ಠೆಯ ಕಡೆಗೆ ಮನ ಓಡಿಸಬಾರದು.
  8. ಮೋಹ, ಲೋಭ, ಮದ, ಮತ್ತು ಮತ್ಸರಗಳನ್ನು ತ್ಯಜಿಸುವ ಪ್ರಯತ್ನದಲ್ಲಿರಬೇಕು ಮತ್ತು ಯಾರ ಬಗ್ಗೆಯೂ ವೈಮನಸ್ಸು ಆಗದಂತೆ ಜಾಗರೂಕರಾಗಬೇಕು.
  9. ಬೇರೆಯವರ ವಿಷಯಗಳಲ್ಲಿ ತಲೆ ಹಾಕಬಾರದು. ಒಂದು ವೇಳೆ ವಿಷಯ ತಿಳಿದಿದ್ದರೂ, ಕೇಳುವವರೆಗೆ ಬಾಯಿ ಬಿಡಬಾರದು.
  10. ಪ್ರತಿಯೊಬ್ಬನೂ ಯಾವಾಗಲೂ ಎರಡನೆಯವರ ಒಳ್ಳೆಯದನ್ನೇ ಬಯಸಬೇಕು ಮತ್ತು ಯೋಚಿಸಬೇಕು. ಒಳ್ಳೆಯದೆಂದರೆ ಪ್ರತಿಯೊಬ್ಬನೂ ತನ್ನ ಜೀವನದ ಗುರಿಯನ್ನು ಅರಿತು ಆಕರ್ಷಿತನಾಗಿ ಆನಂದಮಯ ಜೀವನದತ್ತ ಸಾಗುತ್ತಿದ್ದಾನೆಂದು. ಇದರಿಂದಾಗಿ ಬೇರೆಯವರಿಗೆ ಒಳ್ಳೆಯದಾಗುವದಲ್ಲದೇ ಅಂತಹ ವಿಚಾರಗಳ ತರಂಗಗಳು ವಾತಾವರಣದಲ್ಲಿ ಯಾವಾಗಲೂ ಉಳಿದು ಜನರನ್ನು ಸನ್ಮಾರ್ಗದ ಕಡೆಗೆ ತರುವವು. ನಾವು ಇರಲಿ ಅಥವಾ ಇರದೇ ಇರಲಿ ತರಂಗಗಳು ಇದ್ದು ತಮ್ಮ ಕೆಲಸ ಮಾಡುತ್ತಿರುತ್ತವೆ.