1. ಒಂದು ವೇಳೆ ಒಬ್ಬನು ತನ್ನ ಲಕ್ಷ್ಯವನ್ನು ಸಾಕ್ಷಾತ್ಕಾರದತ್ತ ಹೊರಳಿಸುವುದಾದರೆ ಅದು ಬಹಳ ಸುಲಭವೆಂದು ನಾನು ಬೇರೊಂದೆಡೆ ಹೇಳಿದ್ದೇನೆ. ಅರ್ಥಾತ್ ಆತ ತನ್ನ ಹೃದಯದಲ್ಲಿ ಅದರ ಆಳವಾದ ಪ್ರಭಾವವನ್ನು ಹೊಂದಿರಬೇಕು. ಪ್ರಭಾವ ಆಳವಾದಷ್ಟು ಯಶಸ್ಸು ಸುಲಭ ಹಾಗೂ ತೀವ್ರವಾಗುತ್ತದೆ. ಇಷ್ಟನ್ನು ಮಾಡಿದವನಿಗೆ ಮುಂದೆ ಬಹಳ ಮಾಡುವುದು ಉಳಿಯುವದಿಲ್ಲ. ಈ ಪ್ರಭಾವವನ್ನು ಒಳತೆಗೆದುಕೊಳ್ಳುವುದೆಂದರೆ ತಾನು ಬಯಸುವ ವಸ್ತುವನ್ನೇ ತನ್ನಲ್ಲಿ ಅಂತರ್ಗತ ಮಾಡಿಕೊಳ್ಳುತ್ತಿದ್ದಾನೆ ಎಂದರ್ಥ ಆ ಸ್ಥಿತಿಯಲ್ಲಿ ಆತನ ಹೃದಯದಲ್ಲಿ ದೈವಿ ವಿಚಾರವು ಸತತ ಜಾಗೃತವಾಗಿದ್ದು ಯಾವಾಗಲೂ ಅದರತ್ತ ಆಕರ್ಷಿತನಾಗುತ್ತಾನೆ. ಇದುವೆ ನಿರಂತರ ಸ್ಮರಣೆಯ ಸರಿಯಾದ ಅರ್ಥ
  2. ಸ್ಮರಣೆಯು ಸೃಷ್ಟಿಯ ಸಮಯದಲ್ಲಿ ಅಸ್ತಿತ್ವವನ್ನು ಬೆಳಕಿಗೆ ತರಲು ಬೆಳೆದ ಸ್ಪಂದನಕ್ಕೆ ತೀರ ಸಮೀಪವರ್ತಿಯಾದುದು.
  3. ಈ ಜಗತ್ತಿನಲ್ಲಿ ನಾವು ಹೊಂದಿರುವ ಪ್ರತಿಯೊಂದು ವಸ್ತುವು ದೈವದತ್ತವಾದುದು ಎಂಬುದನ್ನು ಜ್ಞಾಪಕದಲ್ಲಿಡಬೇಕು. ನಮ್ಮ ಸಹಚರರು ಸಹ ಆತನ ಸೃಷ್ಟಿಯೆ. ಆತನು ಸರ್ವೇಶ್ವರನಾಗಿದ್ದು ನಾವೆಲ್ಲರೂ ಆತನ ಮಕ್ಕಳು. ಅವರಲ್ಲಿ ಕೆಲವರ ಭಾರವನ್ನು ನಮಗೆ ಒಪ್ಪಿಸಲಾಗಿದ್ದರೆ ಅದರಲ್ಲಿ ಯಾವ ವಿಷೇಶವೂ ಅಲ್ಲ. ಈ ರೀತಿಯಲ್ಲಿ ನಾವು ಅನುಚಿತ ಮೋಹದಿಂದ ಮುಕ್ತರಾಗುತ್ತೇವೆ. ಈ ಭಾವನೆಯು ಆಳವಾಗಿ ಬೇರೂರಿದ್ದಾದರೆ ಒಬ್ಬನು ಕರ್ತವ್ಯ ದೃಷ್ಟಿಯಿಂದ ಅವರ ಸೇವೆಯನ್ನು ಮಾಡುತ್ತಲೇ ಶ್ರೇಷ್ಠ ಗುರುವಾದ ದೇವರ ಸ್ಮರಣೆಯಲ್ಲಿರುತ್ತಾನೆ. ಇದು ಕೊನೆಗೆ ನಿರಂತರ ಸ್ಮರಣೆಯ ಅಭ್ಯಾಸವಾಗಿ ಬೆಳೆಯುತ್ತದೆ.
  4. ಅಭ್ಯಾಸಿಯು ಕೇವಲ ಬಾಹ್ಯ ವಿಧಿ-ವಿಧಾನಗಳನ್ನು ಮಾತ್ರ ಗಮನಿಸಿ ನಿಜವಾದ ತಾತ್ಪರ್ಯವನ್ನು ಕಡೆಗಣಿಸುತ್ತಾರೆ. ಈ ಪದ್ಧತಿಯಲ್ಲಿ ಪ್ರಾಣಾಹುತಿಯ ಮೂಲಕ ತರಬೇತಿಯನ್ನು ಕೊಡಲಾಗುತ್ತಿದ್ದರೂ ಅತ್ಯಂತ ಮಹತ್ವದ ಹಾಗೂ ಅಗತ್ಯದ ಅಂಶವನ್ನು ಅಭ್ಯಾಸಿಯು ತಾನೇ ತನ್ನಲ್ಲಿ ಬೆಳೆಸಿಕೊಳ್ಳಬೇಕು. ಅದೆಂದರೆ ಅಭ್ಯಾಸಕ್ಕೆ ಪೂರಕವಾದ ಪ್ರೇಮ ಮತ್ತು ಭಕ್ತಿ. ಈ ಅಂಶವನ್ನು ಶ್ರೀ ಕೃಷ್ಣನು ರಾಜಯೋಗದಲ್ಲಿ ಅಭ್ಯಾಸಿಗಳ ಶೀಘ್ರ ಪ್ರಗತಿಗಾಗಿ ಅಳವಡಿಸಿದ್ದನು. ಪ್ರೀಮವನ್ನು ಬೆಳೆಸಿಕೊಳ್ಳುವ ಒಂದೇ ಒಂದು ಮಾರ್ಗವೆಂದರೆ ನಿರಂತರ ಸ್ಮರಣೆ. ನಿಮ್ಮ ದೈನಂದಿನ ಕೆಲಸಗಳನ್ನು ಮಾಡುವಾಗ , ದೇವರ ಆಜ್ಞೆಗನುಸಾರವಾಗಿ ನಿಮ್ಮ ಕರ್ತವ್ಯದ ಒಂದು ಅಂಗವೆಂಬಂತೆ ಭಾವಿಸಿ ಮಾಡಬೇಕು. ಸರಳವಾದ ಈ ಕ್ರಮವನ್ನು ಸರಿಯಾದ ಭಾವದಿಂದ ಅನುಸರಿಸಿದುದಾದರೆ ನೀವು ಅನಂತದ ಸಂಪರ್ಕದಲ್ಲಿಯೆ ಇರುವಿರಿ. ಅದರ ಇನ್ನೊಂದು ಲಾಭವೆಂದರೆ ಮುಂದಿನ ಸಂಸ್ಕಾರಗಳ ರಚನೆ ನಿಂತುಹೋಗುವುದು. ನಿರಂತರ ಸ್ಮರಣೆಯು ದೇವರೊಡನೆ ಸಂಪರ್ಕವನ್ನು ಸಾಧಿಸಿ ಬರಬರುತ್ತ ಭಕ್ತಿಯಾಗಿ ಬೆಳೆಯುವದು. ಏಕೆಂದರೆ, ಭಾವನೆಯಲ್ಲಿಯ ಕಾವು ಭಾವಪರವಶತೆಯನ್ನು ಬಲಪಡಿಸಿ ಭಕ್ತಿಯ ರೂಪವನ್ನು ತಾಳುತ್ತದೆ.
  5. ನಾವು ಗುಣದಿಂದ ಗುಣಿಯ ಕಡೆಗೂ ಅಲ್ಲಿಂದ ಮುಂದೆ ಅದರ ಮೂಲಕ್ಕೂ ಸಾಗುವೆವು. ಆದುದರಿಂದ ನಿರಂತರ ಸ್ಮರಣೆಗಾಗಿ ನಾವು ಗುಣವನ್ನು ತೆಗೆದುಕೊಂಡು ನಮ್ಮ ಚಿಂತನವನ್ನು ಅದಕ್ಕೆ ಜೋಡಿಸುವೆವು. ಅದರಿಂದ ಗುಣವುಳ್ಳವನ ಕಡೆಗೆ ಸಾಗಿ ಅದರಾಚೆಗೆ ಅನಂತದ ಕಡೆಗೆ ನಡೆಯುವೆವು. ಇದು ಸಹಜವಾದ ಹಾಗೂ ಅತ್ಯಂತ ಪರಿಣಾಮಕರವಾದ ಮಾರ್ಗ.
  6. ವಸ್ತುತ: ನಿಜವಾದ ಗುರುವು ಆತನ ಅಂತರಾತ್ಮವೇ ವಿನಾ ಬಾಹ್ಯಸ್ವರೂಪವಲ್ಲ. ಆದರೂ ರೂಪವನ್ನು ಸಂಪೂರ್ಣವಾಗಿ ದುರ್ಲಕ್ಷಿಸುವುದು ಸಾಧ್ಯವಿಲ್ಲ. ಆದರೆ ಯಾರು ಭೌತಿಕ ರೂಪವೇ ಗುರುವೆಂಬ ಕಲ್ಪನೆಗೆ ಅಂಟಿಕೊಳ್ಳುವರೋ ಸ್ಥೂಲತೆಯ ಜಾಲದಲ್ಲಿ ಸಿಕ್ಕು ಗೊಂದಲದಲ್ಲಿ ಬೀಳುವರು. ಕಬೀರದಾಸರು ಇಂಥವರನ್ನು ‘ಗುರುಪಶು’ವೆಂದು ಸರಿಯಾಗಿಯೆ ಕರೆದಿದ್ದಾರೆ.
  7. ನಿರಂತರ ಸ್ಮರಣೆಯ ಉದ್ದೇಶದಿಂದಾಗಿ. ಒಡೆಯನ ಸ್ವಾಮಿತ್ವವನ್ನೂ ತನ್ನ ದಾಸ್ಯವನ್ನೂ ಆತನು ಅರಿತುಕೊಂಡು ಭಕ್ತಿಯ ಸಂಬಂಧವನ್ನು ಗಾಢವಾಗಿ ಸ್ಥಾಪಿಸಿದ್ದಾನೆ. ಆತನು ಭಕ್ತನ ಶಿಷ್ಟಾಚಾರ ಪಾಲಿಸುತ್ತ ಒಡೆಯನನ್ನು ದೇವರೆಂದು ಅರಿತುಕೊಂಡಿದ್ದಾನೆ.
  8. ಪ್ರತಿಯೊಂದರ ಸ್ಮರಣೆಯೂ ಆ ಒಂದು ಸ್ಮರಣೆಯಲ್ಲಿ ಸಮಾವೇಶವಾಗಬೇಕು. ರೋಮ ರೋಮದಲ್ಲಿ ಆತನ ನೆನಪೇ ಉಳಿದುಕೊಂಡಿರಬೇಕು. ಇದನ್ನು ಪೂರ್ಣಲಯವೆನ್ನುವರು.
  9. ‘ಸ್ಮರಣೆ’ಯೊಂದಿದ್ದರೆ, ಸ್ಮರಿಸಲ್ಪಟ್ಟವನೂ ನಿಮ್ಮ ಹತ್ತಿರದಲ್ಲಿಯೇ ನಿಸ್ಸಂದೇಹವಾಗಿ ಇರುತ್ತಾನೆ. ಸ್ಮರಣೆಯ ಉತ್ಕರ್ಷದಿಂದುಂಟಾದ ಕಾವಿನಲ್ಲಿ, ‘ಅವನ’ ಸಾಮಿಪ್ಯಾನುಭವವೂ ವರ್ಧಿಸಲಿ- ಆಗ ನೋಡಿ , ಎಂಥ ಆನಂದ ಮತ್ತು ಭಾವೋನ್ಮತ್ತತೆಯುಂಟಾಗುತ್ತದೆಂದು ! ಅಷ್ಟೇ ಅಲ್ಲ , ನೀವು ಎಷ್ಟು ಕ್ಷಿಪ್ರದಲ್ಲಿಯೇ ಗುರಿಯವರೆಗೆ ತಲುಪುವಿರೆಂಬುದನ್ನು ನೀವೇ ನೋಡುವಿರಿ.
  10. ಎಲ್ಲ ಚಟುವಟಿಕೆಗಳಲ್ಲಿಯೂ ಆ ಸರ್ವಶ್ರೇಷ್ಠ ಶಕ್ತಿಯೊಂದಿಗೆ ಅವ್ಯಾಹತ ವಿಚಾರಧಾರೆಯಿಂದ ಪ್ರತಿಕ್ಷಣವೂ ಸಂಬಂಧವನ್ನನುಭವಿಸಬೇಕು, ನಮ್ಮ ಎಲ್ಲ ಕರ್ಮಗಳನ್ನೂ ನಾವು ಸಾಧ್ಯವಿದ್ದಷ್ಟು ಉತ್ತಮ ರೀತಿಯಿಂದ ಸೇವ್ಯನಾಗಿರುವ ಶ್ರೇಷ್ಠ ಗುರುವಿನಿಂದ ನಮಗೆ ನಿರ್ವಹಿಸಲಾದ ದಿವ್ಯ ಕರ್ತವ್ಯವೆಂದು ಭಾವಿಸಿದರೆ ಇದು ಸುಲಭವಾಗಿ ಸಾಧಿಸಲ್ಪಡುವುದು.
  11. ಇದಕ್ಕೆ ವಿಪರೀತವಾಗಿ, ಒಬ್ಬನು ಧ್ಯಾನದಲ್ಲಿ ಲಭಿಸಿದ ಪರಿಣಾಮವನ್ನು ದಿನದ ಬಹುಭಾಗ ಇಟ್ಟುಕೊಳ್ಳಲು ಪ್ರಯತ್ನಿಸಿ ಆ ಸ್ಥಿತಿಯಲ್ಲಿ ಹೆಚ್ಚು ವೇಳೆ ಇರುವನೆಂದು ಕಲ್ಪಿಸೋಣ. ಆತನು ಒಂದು ರೀತಿಯಲ್ಲಿ ದೇವರ ಸತತ ಸ್ಮರಣೆಯಲ್ಲಿರುವದನಾದುದರಿಂದ ಆತನ ಪ್ರಗತಿಯು ಸುಲಭವೂ ಶೀಘ್ರವೂ ಆಗುವುದು.
  12. ನೀವು ಈ ಭಾವನೆಯನ್ನು ಬೆಳೆಸಿ ಕೊಂಡು, ನಿಮ್ಮ ಬದಲಾಗಿ ನಿಮ್ಮ ಗುರುವೇ ಪ್ರತಿಯೊಂದು ಕೆಲಸವನ್ನು ಮಾಡುವನೆಂಬ ದೃಷ್ಟಿಯನ್ನಿಟ್ಟುಕೊಂಡುದಾದರೆ ಎಲ್ಲ ಕಾಲದಲ್ಲಿಯೂ ನೀವು ನಿರಂತರ ಸ್ಮರಣೆಯಲ್ಲಿರುವಿರಿ. ಇಷ್ಟೇ ಅಲ್ಲ, ನೀವು ನಿಮ್ಮ ಕಾರ್ಯಗಳು ಯಾವ ಪರಿಣಾಮವನ್ನೂ ಉಂಟು ಮಾಡದೆ ಮುಂದಿನ ಸಂಸ್ಕಾರಗಳು ಕಟ್ಟಾಗುವುವು.
  13. ನಮ್ಮ ಮನಸ್ಸು ಭಗವಂತನ ಕಡೆಗೆ ತಿರುಗಿದಾಗ ಸ್ವಾಭಾವಿಕವಾಗಿಯೆ ನಾವು ನಮ್ಮ ಎಲ್ಲ ಕಾರ್ಯಗಳಲ್ಲಿಯೂ ಆ ಶ್ರೇಷ್ಠ ಶಕ್ತಿಯೊಡನೆ ಸಂಪರ್ಕವನ್ನನುಭವಿಸತೊಡಗುತ್ತೇವೆ. ಈ ಮಾನಸಿಕ ಸ್ಥಿತಿಯು ಅಂತರ್ಯದಲ್ಲಿ ನಿರಂತರವಾಗಿ ಸ್ಥಾಪಿತವಾದಾಗ ನಾವು ಮಾಡುವ ಪ್ರತಿಯೊಂದು ಕಾರ್ಯವು ಭಕ್ತಿಯ ಅಂಗವಾಗಿ, ಇಲ್ಲವೆ ದೈವೀ ಸಮರ್ಪಣೆಯಾಗಿ ತೋರಿ ತಾವು ಎಲ್ಲ ಕಾಲದಲ್ಲಿಯೂ ದೇವರ ಸತತ ಸ್ಮರಣೆಯಲ್ಲಿರುವೆವು. ಶೀಘ್ರದಲ್ಲಿಯೆ ಸಾಧಕನು ಹೃದಯದಲ್ಲಿ ಆಂತರಿಕ ಕಂಪನಗಳನ್ನು ಅನುಭವಿಸತೊಡಗುವನು. ಇದು ‘ಶಬ್ದ’ ಅಥವಾ ‘ಅಜಪಾ’ ಎಂಬ ಆಧ್ಯಾತ್ಮಿಕ ಸ್ಥಿತಿಯ ಆರಂಭ. ನಾವು ಯೋಗ್ಯ ಮಾರ್ಗದರ್ಶನದಲ್ಲಿ ಸರಿಯಾದ ದಾರಿಯಿಂದ ಸಾಗಿದಂತೆಲ್ಲ ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತ ಹೋಗುವುದು.
  14. ಈ ರೀತಿಯ ಅಶಾಂತಿಯನ್ನು ಉಂಟು ಮಾಡಿಕೊಳ್ಳುವಲು, ನಾವು ದಿನದಲ್ಲಿ ಬಹುವೇಳೆ ದೇವರನ್ನು ಬಾರಿಬಾರಿಗೆ ಸ್ಮರಿಸಿದರೆ ಆತನಲ್ಲಿ ತಾನಾಗಿಯೆ ನಮ್ಮ ಪ್ರೇಮವು ಬೆಳೆದು ಅದನ್ನು ಮನ:ಪೂರ್ವ ಮುಂದುವರಿಸಿದರೆ ಆತನೊಂದಿಗೆ ತೀವ್ರ ಕೂಡಿಕೊಳ್ಳುವ ಹಂಬಲವುಂಟಾಗುವುದು.
  15. ಹೀಗೆ ನಾವು ನಮ್ಮ ಕರ್ತವ್ಯಭಾವನೆಯ ಬಗ್ಗೆ ಜಾಗ್ರತರಾಗಿ ಭಗವತ್ ವಿಚಾರವು ನಮ್ಮ ಹೃದಯದಲ್ಲಿ ಪ್ರಾಮುಖ್ಯವನ್ನು ಹೊಂದಿದಾಗ, ನಾವು ಸಾಕ್ಷಾತ್ಕಾರವನ್ನು ಜೀವನದ ಪ್ರಧಾನೋದ್ದೇಶವೆಂದು ಗಣಿಸತೊಡಗುವೆವು. ಸಹಜವಾಗಿಯೆ ಅದರ ಬಗೆಗಿನ ನಮ್ಮ ಹಂಬಲವು ಬಲವಾಗಿ ಬೆಳೆಯುತ್ತ ಹೋಗುವುದು. ಈ ಪ್ರಕಾರ, ನಮ್ಮ , ದೈನಂದಿನ ಕೆಲಸದಲ್ಲಿ ಹಾಗೂ ತೊಂದರೆಗಳ ಮಧ್ಯದಲ್ಲಿ ಸಹ ನಾವು ಮತ್ತೆ ಮತ್ತೆ ಭಗವತ್ ಸ್ಮರಣೆಯ ಪ್ರೇರಣೆಯನ್ನು ಪಡೆಯುವೆವು.
  16. ಭಗವಂತನ ಕೇವಲ ಅರಿವೂ ಕೂಡ ಮನಸ್ಸಿನ ಅನೇಕ ಕೆಡುಕುಗಳನ್ನು ಗುಣಪಡಿಸಿ ನಮ್ಮ ದಾರಿಯಲ್ಲಿಯ ತೊಡಕುಗಳನ್ನು ನಿವಾರಿಸುವುದು.
  17. ಆದರೆ ಗುರುವು ಪರಮಾತ್ಮನಲ್ಲಿ ಲಯ ಹೊಂದಿದ ಮಹಾದಿವ್ಯಾತ್ಮನಾಗಿದ್ದರೆ ಆತನ ರೂಪದ ಧ್ಯಾನವು ಶಿಷ್ಯರಿಗೆ ಅತ್ಯಂತ ಲಾಭದಾಯಕವಾಗುವುದು.
  18. ನೀವು ದೃಷ್ಟಿಯಲ್ಲಿರಿಸಿಕೊಂಡ ರೂಪವು ಕೆಲಕಾಲದ ಮೇಲೆ ಅದೃಶ್ಯವಾಗಿ ಕ್ರಮೇಣ ನೀವು ಶುದ್ಧಸತ್ಯದ ಹಂತಕ್ಕೆ ಏರುವಿರಿ.