ಅಧ್ಯಾತ್ಮಿಕ ಜೀವನದಲ್ಲಿ ಸಮಾರಂಭಗಳು ಒಂದು ವಿಶೇಷವಾದ ಮಹತ್ವವನ್ನು ಪಡೆದಿವೆ. ಇವು ಸಾಮಾನ್ಯವಾಗಿ ಆಚರಿಸುವ ಹಬ್ಬ ಅಥವಾ ಉತ್ಸವಗಳಾಗಿರದೆ ನಮ್ಮ ಜೀವನ ಮತ್ತು ಇರುವಿಕೆಯನ್ನು ಮಾರ್ಪಾಡಿಸುವದಕ್ಕೆ ನಮ್ಮ ಗುರುಗಳು ಮಾಡಿಕೊಟ್ಟಿರುವ ಒಂದು ಸದಾವಕಾಶದ ತರಬೇತಿಯ ದಿನಗಳು. ನಿಜವಾದ ಅರ್ಥದಲ್ಲಿ ಇವು ಹಬ್ಬಗಳಂತೆ ಇದ್ದು ಉದ್ದೇಶ ಬಹಳ ಉಚ್ಚತಮವಾಗಿರುತ್ತದೆ. ಇಲ್ಲಿ ಕೇವಲ ಶಾಂತತೆ, ಮೌನ ಮತ್ತು ಸರಳತೆ ಕಂಡುಬರುತ್ತದೆ. ಸೇರಿರುವ ಎಲ್ಲ ಸಾಧಕರು ಏನೂ ಮಾಡದೆ ಕಾರ್ಯನಿರತರಾಗಿರುವಂತೆ ಕಾಣುವರು. ಇದಕ್ಕೆ ಯೇ ನಾವು ಸತ್ಸಂಗವೆಂದು ಕರೆಯುತ್ತೇವೆ. ಇಂತಹ ಸಮಾರಂಭಕ್ಕೆ ಭಾಗವಹಿಸುವಂತೆ ಎಲ್ಲರಿಗೂ ಆಹ್ವಾನ ಪತ್ರಗಳನ್ನು ನಮ್ಮ ಸದ್ಗುರುಗಳು ಕಳುಹಿಸುವ ರೂಢಿ ಇರುತ್ತಿತ್ತು. ಇದರ ವಿಶೇಷತೆ ಮತ್ತು ಮಹತ್ವದ ಬಗ್ಗೆ ನನ್ನ ವೈಯುಕ್ತಿಕ ಘಟನೆಗಳಿಗಿಂತ ಮುಂಚೆ ಸಮಾರಂಭದ ಬಗ್ಗೆ ಹಿನ್ನೆಲೆ ಗೊತ್ತಾಯಿತೆಂದರೆ ಎಲ್ಲವೂ ಸ್ಪಷ್ಟವಾಗುವದು.

ಶ್ರೀ ರಾಘವೇಂದ್ರರಾಯರು ಸಹಜ ಮಾರ್ಗವೆಂಬ ಹೊಸ ಸಾಧನಾ ಪದ್ಧತಿಯನ್ನು ಮಾನವನ ಉತ್ಥಾನ ಮತ್ತು ಉದ್ಧಾರಕ್ಕಾಗಿ ದಕ್ಷಿಣ ಭಾರತಕ್ಕೆ ಮೊಟ್ಟ ಮೊದಲಿಗೆ ತಂದ ಭಗೀರಥ. 1955ರಲ್ಲಿ ಸುಮಾರು ಎಂಟು ತಿಂಗಳು ಶ್ರೀ ಬಾಬೂಜಿ ಮಹರಾಜರನ್ನು ಎಲ್ಲ ರೀತಿಯಿಂದ ಪರೀಕ್ಷಿಸಿ ಮತ್ತು ಪೂರ್ಣ ವಿಶ್ವಾಸವಾದ ಮೇಲೆಯೇ ಸಾಧನೆಯನ್ನು ಪ್ರಾರಂಭಿಸಿದರು. ಇವರೇ ದಕ್ಷಿಣ ಭಾರತದ ಮೊದಲನೆಯ ಪ್ರಶಿಕ್ಷಕರು. ಇವರಿಂದಲೇ ಗುಲ್ಬರ್ಗದಲ್ಲಿ ಶ್ರೀ ರಾಮಚಂದ್ರ ಮಿಷನಿನ ಮೊಟ್ಟ ಮೊದಲನೆಯ ತರಬೇತಿ ಕೇಂದ್ರ ಪ್ರಾರಂಭವಾಯಿತು. ಇವರಿಂದಲೇ

ಮುಂದೆ ಸಹಜಮಾರ್ಗ ಸಾಧನಾ ಪದ್ಧತಿಯು ಪ್ರಚಲಿತಗೊಂಡು ಬಹಳಷ್ಟು ಜನರು ಪೂಜೆಯನ್ನು ಪ್ರಾರಂಭಿಸುವದರಿಂದಾಗಿ ಬಹಳ ಕೇಂದ್ರಗಳಾದವು. ಪ್ರತಿಯೊಂದು ಕೇಂದ್ರದಲ್ಲಿ ಶ್ರೀ ಬಾಬೂಜಿ ಮಹರಾಜರು ಪ್ರಶಿಕ್ಷಕರನ್ನು ತಯಾರು ಮಾಡಿ ನೇಮಿಸಿದರು. ಅವರು ಯಾರಾದರೂ ಜಿಜ್ಞಾಸುಗಳು ಸಾಧನೆ ಮಾಡಲು ಬಂದರೆ ಗುರುಗಳ ನಿರ್ದೇಶದಂತೆ ತರಬೇತಿಯನ್ನು ಕೊಟ್ಟು ಅಭ್ಯಾಸಿಗಳನ್ನು ತಯಾರು ಮಾಡಿದರು. ಆ ವೇಳೆ ಸಂಖ್ಯೆಗೆ ಹೆಚ್ಚು ಮಹತ್ವ ಕೊಡದೆ ಗುಣಮಟ್ಟದ (quality) ಕಡೆಗೆ ಗಮನ ಕೊಟ್ಟು ಅಭ್ಯಾಸಿಗಳನ್ನು ಸೇರಿಸುವ ರೂಢಿಯಾಗಿದ್ದಿತು. ಆದುದರಿಂದ ನಮ್ಮ ಗುರುಮಹರಾಜರು ಗುಲ್ಬರ್ಗ ಕೇಂದ್ರಕ್ಕೆ ಮತ್ತು ಅಲ್ಲಿಯ ಅಭ್ಯಾಸಿಗಳಿಗೆ ಸಾಕಷ್ಟು ಮೆಚ್ಚುಗೆ ತೋರಿಸಿದ್ದಾರೆ. ಇದಕ್ಕೆ ಕಾರಣೀ ಭೂತರೆಂದರೆ ಶ್ರೀ ರಾಘವೇಂದ್ರ ರಾಯರು ಮತ್ತು ಶ್ರೀ ಸರ್ನಾಡರು. ಯಾರಾದರೂ ನಮ್ಮ ಸಾಧನೆಯ ಬಗ್ಗೆ ಅಭಿರುಚಿ ತೋರಿಸುತ್ತಾ ನಮ್ಮ ಕಡೆಗೆ ಬಂದಾಗ ಅವರಿಗೆ ನಮ್ಮ ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಿ ಮಾಹಿತಿ ಪಡೆಯಲು ಹೇಳಿ 2-3 ವಾರದ ನಂತರ ಪುನಃ ಬರಲು ಹೇಳುವದು ಒಂದು ರೂಢಿಯಾಗಿತ್ತು. ಒಂದು ವೇಳೆ ಆ ಮನುಷ್ಯ ಬಂದರೆ ಸಾಕಷ್ಟು ಪ್ರಶೋತ್ತರಗಳಾಗಿ ಭಗವಂತನ ಸಾಕ್ಷಾತ್ಕಾರದಲ್ಲಿ ಎಷ್ಟು ಜಿಜ್ಞಾಸೆ ಹೊಂದಿದ್ದಾನೆಂದು ಕಂಡು ಪ್ರಶಿಕ್ಷಕನ ಮನಸ್ಸಾದರೆ ಮಾತ್ರ ಅವನಿಗೆ ಧ್ಯಾನದಲ್ಲಿ ಕೂಡಿಸುವರು. ಎರಡು ಬೈಠಕುಗಳಲ್ಲಿ ಅವನ ಹೃದಯವನ್ನು ಶುದ್ದೀಕರಿಸಿ ಅಧ್ಯಾತ್ಮದ ಬೀಜವನ್ನು ಬಿತ್ತಲು ತಯಾರು ಮಾಡಲಾಗುತ್ತಿತ್ತು. ಆನಂತರ 2-3 ದಿನಗಳ ನಂತರ ಮೂರನೇಯ ಬೈಠಕಿನಲ್ಲಿ ಅವನ ಹೃದಯದಲ್ಲಿ ಪರಮ ಸತ್ಯದ ಬೀಜವನ್ನು ಬಿತ್ತಿ ಮುಂದೆ ದಿನಾಲು ತಪ್ಪದೆ ಸರಿಯಾಗಿ ಹೇಳಿಕೊಟ್ಟ ಸಾಧನೆಯನ್ನು ಕೈಗೊಂಡು ಒಂದು ಅಥವಾ ಎರಡು ವಾರದ ನಂತರ ಬಂದು ಆದ ಪರಿವರ್ತನೆಯ ಬಗ್ಗೆ ತಿಳಿಸಲು ಹೇಳುತ್ತಿದ್ದರು. ಇದಾದ ಮೇಲೆಯೇ ಸಾಮಾನ್ಯ ಸತ್ಸಂಗದಲ್ಲಿ ಕೂಡುವದಕ್ಕೆ ಪರವಾನಗಿ ಸಿಗುತ್ತಿತ್ತು.

ಕಾಲ ಕಳೆದಂತೆ ಪ್ರತಿ ಕೇಂದ್ರದ ಪ್ರಶಿಕ್ಷಕರು ಅಲ್ಲಿಯ ಅಭ್ಯಾಸಿಗಳನ್ನು ಗಮನಿಸಿ ಅವರಲ್ಲಿ ಗುರಿಯ ಬಗ್ಗೆ ಹಂಬಲ ಮತ್ತು ಸದ್ಗುರುಗಳ ಮೇಲಿನ ಪ್ರೇಮ, ಭಕ್ತಿ, ಮತ್ತು ಶ್ರದ್ಧೆಯನ್ನು ನೋಡಿ ಅವರವರ ಪ್ರಗತಿಯ ಕುರಿತು ಶ್ರೀ ಬಾಬೂಜಿ ಮಹರಾಜರ ಮುಂದೆ ಪ್ರಸ್ತಾವನೆಯನ್ನು ಅಭ್ಯಾಸಿಗಳಿಗೆ ತಿಳಿಸದೆ ಇಡುತ್ತಿದ್ದರು. ಇಂತಹ ಯಾಚಿಕೆ ಮತ್ತು ಪ್ರಸ್ತಾವನೆಗಳನ್ನು ವಿಶೇಷವಾಗಿ ಸಮಾರಂಭಗಳಲ್ಲಿ ಅಥವಾ ಶ್ರೀ ಬಾಬೂಜಿ ಯವರು ದಕ್ಷಿಣ ಭಾರತದ ಪ್ರವಾಸದಲ್ಲಿದ್ದಾಗ ಅವರ ಮುಂದೆ ಇಡಲಾಗುತ್ತಿತ್ತು. ಅದಕ್ಕೆಯೇ ಸಮಾರಂಭಗಳ ಮಹತ್ವವಿತ್ತು. ಇದಕ್ಕಾಗಿಯೇ ಅಭ್ಯಾಸಿಗಳು ಮತ್ತು ಪ್ರಶಿಕ್ಷಕರು ಸಮಾರಂಭಗಳಿಗೆ ಹೋಗಿ ಪಾಲ್ಗೊಳ್ಳಲು ಕಾತುರರಾಗಿರುತ್ತಿದ್ದರು. ಆಗ ಅವರಿಬ್ಬರ ಸಾಧನೆ ಮತ್ತು ಮಾಡಿದ ಕೆಲಸದ ಬಗ್ಗೆ ಮೌಲ್ಯಮಾಪನೆ(Evaluation) ಆಗುತ್ತಿತ್ತು. ಆಗ ಶ್ರೀ ಬಾಬೂಜಿ ಯವರು ಸಂತೋಷದಿಂದ ಅಭ್ಯಾಸಿಗಳಿಗೆ ಮತ್ತು ಪ್ರಶಿಕ್ಷಕರಿಗೆ ಅಧ್ಯಾತ್ಮ ಕ್ಷೇತ್ರದಲ್ಲಿ ಪ್ರಗತಿಯನ್ನು ದಯಪಾಲಿಸುತ್ತಿದ್ದರು. ಸಮಾರಂಭಗಳಲ್ಲಿಯೇ ನಮ್ಮ ಗುರುಗಳು ಪ್ರತಿ ನೆಚ್ಚಿನ ಅಭ್ಯಾಸಿಗೆ ಹೆಚ್ಚಿನ ಮಟ್ಟದ ತರಬೇತಿ (Intensive Training) ಕೊಡುತ್ತಿದ್ದರು. ವಿಶೇಷವಾಗಿ ಪ್ರಶಿಕ್ಷಕರ ಒಂದು ಸಭೆಯನ್ನು ಕರೆದು ಸ್ವತಃ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಿ ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟು ಎಲ್ಲ ಶಂಕೆಗಳಿಗೆ ಸಮಾಧಾನ ಕೊಡುತ್ತಿದ್ದರು. ಹೆಚ್ಚಾಗಿ ಗುರು, ಉದ್ದೇಶ ಮತ್ತು ಪದ್ಧತಿಯ (Master, Mission, Method) ಬಗ್ಗೆಯೇ ಚರ್ಚೆಯಾಗುತ್ತಿದ್ದು ಎಲ್ಲರಿಗೂ ಒಂದು ಸ್ಫೂರ್ತಿ ಸಿಗುತ್ತಿತ್ತು.

ಆಗಿನ ಸಮಾರಂಭಗಳಲ್ಲಿ ಪಾಲ್ಗೊಳ್ಳುವವರ ಮುಖದ ಮೇಲೆ ಒಂದು ತರಹದ ಬೆಳಕು(ಕಳೆ) ಕಾಣುತ್ತಿತ್ತು. ಮನಸ್ಸಿನಲ್ಲಿ ಶಾಂತಿ, ಹೃದಯದಲ್ಲಿ ಉಲ್ಲಾಸ ತುಂಬಿದ ಪ್ರೇಮ, ಎಲ್ಲರಲ್ಲಿಯೂ ಬಂಧುತ್ವ ಮತ್ತು ಆನಂದವೇ ಇದ್ದು ದೊಡ್ಡ ಪ್ರೋತ್ಸಾಹನದ ವಾತಾವರಣವಿರುತ್ತಿತ್ತು.

1966ರಲ್ಲಿ ಶ್ರೀ ಗುರುಗಳು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವದನ್ನು ನಿಲ್ಲಿಸಿದರು. 1974ರ ವರೆಗೆ ಬಾಬೂಜಿ ಮಹರಾಜರು ಕೇವಲ ತಮ್ಮ ಗುರುಗಳ ಜನ್ಮದಿನ ಬಸಂತ ಪಂಚಮಿ ಉತ್ಸವ ಒಂದೇ ಆಚರಿಸುತ್ತಿದ್ದರು ಮತ್ತು ನಾವೆಲ್ಲರೂ ಅವರ ಆಮಂತ್ರಣದ ಮೇರೆಗೆ ಪಾಲ್ಗೊಳ್ಳುತ್ತಿದ್ದೆವು.

ಆ ನಂತರ ಎಲ್ಲ ಅಭ್ಯಾಸಿಗಳ ಪ್ರೇಮದ ಮತ್ತು ಕಳಕಳಿಕೆಯ ಬೇಡಿಕೆಯಿಂದಾಗಿ ಶ್ರೀಗಳು ತಮ್ಮ ಜನ್ಮ ದಿನವನ್ನು 30ನೇಯ ಎಪ್ರಿಲ್ ಪ್ರತಿ ವರ್ಷ ಆಚರಿಸಲು ಅನುಮತಿ ಕೊಟ್ಟರು. ಆಗಿನಿಂದಲೇ ಅಂದರೆ 30-4-1974ರಿಂದ ಅವರ ಜನ್ಮ ದಿನಾಚರಣೆ ಪ್ರಾರಂಭವಾಯಿತು.

ಆಮೇಲೆ ರಾಯಚೂರಿನ ನಮ್ಮ ಆಶ್ರಮದ ಕಟ್ಟಡ ಪೂರ್ತಿಯಾದ ಮೇಲೆ ಪ್ರತಿ ವರ್ಷ October ತಿಂಗಳಲ್ಲಿ ಅಲ್ಲಿಯೂ ಕೂಡ ಸಂಸ್ಥಾಪಕರ ದಿನಾಚರಣೆ (Founders Day) ಆಚರಿಸುವ ಕ್ರಮ ಪ್ರಾರಂಭವಾಯಿತು. ನಾವೆಲ್ಲರೂ ಬಹಳ ಆನಂದ ಪಟ್ಟೆವು. ಏಕೆಂದರೆ ಎಲ್ಲರೂ ನಮ್ಮ ನಮ್ಮ ಕೇಂದ್ರಗಳಲ್ಲಿ ತರಬೇತಿ ಪಡೆದು, ಮೇಲೆ ಹೇಳಿದ ಸಮಾರಂಭಗಳಿಗೆ ಹೋಗಿ ಉನ್ನತ ಮಟ್ಟದ ತರಬೇತಿಗಾಗಿ ಮತ್ತು ನಮ್ಮ ಅಧ್ಯಾತ್ಮಿಕ ಪ್ರಗತಿಗಾಗಿ ಕಾಯುತ್ತಿದ್ದೆವು. ಬರಬರುತ್ತಾ ಕೇಂದ್ರಗಳಲ್ಲಿ ತರಬೇತಿ ಎಂಬುದು ನಿಂತು ಹೋಗಿ ಕೇವಲ ಬೈಠಕುಗಳೇ ನಡೆಯಹತ್ತಿದ ಕಾರಣ ಉಚ್ಚ ಮಟ್ಟದ ತರಬೇತಿ ಮತ್ತು ಪ್ರಗತಿಯ ವಿಚಾರಗಳು ಸಮಾರಂಭಗಳಲ್ಲಿ ನಿಂತು ಹೋದವು. ಕೇವಲ ಸಮಾರಂಭಗಳಾಗಿಯೇ ಉಳಿದಿವೆ.

ಯಾವುದಾದರೊಂದು ಕೇಂದ್ರದ ಸಾಧಕರು ಇಂತಹ ಒಂದು ಸಮಾರಂಭವನ್ನು ತಮ್ಮಲ್ಲಿ ಇಟ್ಟುಕೊಳ್ಳಬೇಕೆಂದಾಗ ಹಿರಿಯರನ್ನು ವಿಚಾರಿಸಿ ಎಲ್ಲರ ಸಹಮತಿಯಿಂದ ನಿರ್ಧರಿಸುವರು ಮತ್ತು ಎಲ್ಲ ಕೇಂದ್ರಗಳಿಗೆ ಸೂಚಿಸುವರು. ಸಮಾರಂಭಕ್ಕೆ ಬರಲು ಇಚ್ಛಿಸುವವರ ಸಂಖ್ಯೆಯನ್ನು ತಿಳಿಸಲು ಕೇಳಿಕೊಳ್ಳುವರು. ಏಕೆಂದರೆ ಅವರ ಊಟ ಮತ್ತು ವಸತಿಯ ವ್ಯವಸ್ಥೆ ಮಾಡಲು ಅನುಕೂಲವಾಗುವದು. ಇದಲ್ಲದೆ ಬರುವ ಜನರಿಗಾಗಿ Railway station ಮತ್ತು Bus stand ಗಳಿಂದ ಸಮಾರಂಭದ ಸ್ಥಳಕ್ಕೆ ಬರು ಹೋಗುವ ವ್ಯವಸ್ಥೆ ಕೂಡಾ ಅವರೇ ಮಾಡುವರು. ಒಂದು ನಿರ್ಧಿಷ್ಟವಾದ ಸ್ಥಳವನ್ನು ಗುರುತಿಸಿ (ನಮ್ಮ ಆಶ್ರಮಗಳು ಇಲ್ಲದಿದ್ದರೆ ಒಂದು ದಿನ ಮುಂಚೆ ಅದನ್ನು ಸ್ವಚ್ಛಗೊಳಿಸುವರು. ಅಲ್ಲಿಯೇ ಧ್ಯಾನ ಮಾಡುವ ಸ್ಥಳ, ಅಡುಗೆಯ ಸ್ಥಳ, ಊಟದ ಸ್ಥಳಗಳನ್ನು ಗುರತುಪಡಿಸಿ ಅಲ್ಲಿಯ ಕಲುಷಿತಗೊಂಡ ವಾತಾವರಣವನ್ನು ಶುದ್ದೀಕರಿಸುವರು. ಇದು ಕೇವಲ ನಮ್ಮ ಸಂಸ್ಥೆಯಲ್ಲಿಯೇ ಆಗುವ ಕೆಲಸ. ಇಲ್ಲಿ ಒಂದು ವಿಶೇಷವಾದ ವಾತಾವರಣ ನಿರ್ಮಾಣವಾಗುವದು. ಅಂದರೆ ಅಲ್ಲಿರುವ ಸ್ವಾರ್ಥತೆ, ಸ್ವಪ್ರತಿಷ್ಠೆ, ಧರ್ಮಾಂಧತೆ, ಭೌತಿಕತೆ ಮತ್ತು ಇಂದ್ರಿಯಗಳ ಮನೋರಂಜನೆಯ ವಿಚಾರ ಇತ್ಯಾದಿಗಳನ್ನು ಪರಿಸರದಿಂದ ತೆಗೆದು ಹಾಕಿ ಶುದ್ಧಗೊಳಿಸುವರು. ಕೆಲವೊಮ್ಮೆ ಇಡೀ ನಗರವನ್ನೇ ಶುದ್ಧಗೊಳಿಸುವರು. ಸಾಮಾನ್ಯವಾಗಿ ಇದು ಜನರಿಗೆ ತಿಳಿದು ಬರುವದಿಲ್ಲ. ಆದರೆ ಯಾರು ಸೂಕ ವಾಗಿ ಪರಿಶೀಲಿಸುವರೋ ಅವರಿಗೆ ತಿಳಿಯುವದು.

ಸಾಮಾನ್ಯವಾಗಿ ಇಂತಹ ಶುದ್ದೀಕರಣದ ಕೆಲಸವನ್ನು ನಿಸರ್ಗದಲ್ಲಿ ವಸುಗಳು ಮತ್ತು ಮುನಿಗಳು ಮಾಡುತ್ತಾರೆ. ನಿರ್ಧರಿಸಿದ ಸ್ಥಳವನ್ನು ಶುದ್ದೀಕರಿಸಲು ಅವರಿಗೆಯೇ ಪ್ರಾರ್ಥಿಸಬೇಕು. ಒಂದು ವೇಳೆ ಆ ಕೆಲಸ ಸರಿಯಾಗಿ ಆಗಿಲ್ಲವೆಂದೆನಿಸಿದರೆ ಅವರುಗಳಿಗಿಂತ ಮೇಲಿನವರಾದ ಧ್ರುವಗಳು ಮತ್ತು ಧ್ರುವಾಧಿಪತಿಗಳಿಂದ ಈ ಕೆಲಸವನ್ನು ಮಾಡಿಸಬಹುದು. ಇವರೆಲ್ಲರಿಗೆ ಕೇವಲ ಅವರ ಒಡೆಯ-ನಾಥನಾದ ಶ್ರೀ ಬಾಬೂಜಿ ಮಹರಾಜರೇ ಆಜ್ಞೆ ಮಾಡುವರು ಏಕೆಂದರೆ ಎಲ್ಲರೂ ಅವರ ಆಜ್ಞೆಯನ್ನು ಮನ್ನಿಸುವರು. ಅದಕೋಸ್ಕರ ಇಂತಹ ಕೆಲಸಗಳನ್ನು ಅವರ ವತಿಯಿಂದಲೇ ಮಾಡಿಸುವರು.

ಮುಖ್ಯವಾಗಿ ಧ್ಯಾನ ಮಾಡುವ ಸ್ಥಳಕ್ಕೆ ಹೆಚ್ಚು ಗಮನ ಕೊಡುವರು. ಧ್ಯಾನ ಮಂದಿರದಲ್ಲಿ ಎಲ್ಲರೂ ಜೀವನದ ಗುರಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಎನ್ನುವ ತರಂಗಗಳನ್ನು ವಾತಾವರಣದಲ್ಲಿ ನಿರ್ಮಿಸಿ ಪ್ರತಿಯೊಬ್ಬ ಸಾಧಕನ ಹೃದಯಕ್ಕೆ ತಲುಪುವಂತೆ ಮಾಡಲಾಗುವದು. ಎರಡನೇಯದಾಗಿ ಸಾಧನೆಯಲ್ಲಿ ಬರುವ ಅಡ್ಡಿ ಆತಂಕಗಳನ್ನು ಹೋಗಲಾಡಿಸಲು ಕೂಡಾ ಶ್ರೀ ಬಾಬೂಜಿಯವರ ವತಿಯಿಂದ ಅವರ ಕೃಪಾ ಧಾರೆಗಳನ್ನು ಸಮಾರಂಭದ ಪ್ರಾರಂಭದಿಂದ ಮುಗಿಯುವವರೆಗೆ ಸುರಿಯುತ್ತಿರುವಂತೆ ಮಾಡಲಾಗುವದು.

ಮುಂಜಾನೆ ಮತ್ತು ಸಂಜೆಯ ಧ್ಯಾನವನ್ನು ಪ್ರಶಿಕ್ಷಕನು ಇಚ್ಛಿತ ಸಲಹೆಯಿಂದ ತನ್ನ ಯೋಗ್ಯತಾನುಸಾರ ಪ್ರಾಣಾಹುತಿಯನ್ನು ಕೊಡುವನು.

ಕರ್ತವ್ಯಗಳು

ಸಮಾರಂಭಕ್ಕೆ ಹೋದ ಎಲ್ಲ ಸಾಧಕರು ಈ ಕೆಳಗಿನ ವಿಷಯದ ಬಗ್ಗೆ ಯೋಚಿಸಿ ಸ್ವತಃ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದರು.

  1. ಸುಮಾರು ಒಂದು ತಿಂಗಳ ಮುಂಚೆಯೇ ಸಮಾರಂಭದ ಸೂಚನೆ ಬಂದೊಡನೆಯೇ ಕೇಂದ್ರಗಳಲ್ಲಿ ಹೋಗುವ ತಯಾರಿಗಳು ಪ್ರಾರಂಭಗೊಳ್ಳುತ್ತಿದ್ದವು. ಪ್ರತಿ ಅಭ್ಯಾಸಿಯು ಆದಷ್ಟು ಶುದ್ಧವಾಗಿರಲು ಪ್ರಯತ್ನಿಸುವದು (ಮನಸ್ಸು-ಹೃದಯ) ಆದಷ್ಟು ಸಮಯ ಆತನ ಕವಿ ಸ್ಮರಣೆಯಲ್ಲಿ ಕಳೆಯುವದು ಮತ್ತು ಸಮಾರಂಭಕ್ಕೆ ಹೋಗುವದರಿಂದ ಆಗುವ ಲಾಭ ಮತ್ತು ಪ್ರಗತಿಯ ಬಗ್ಗೆ ವಿಚಾರದಲ್ಲಿ ತನ್ಮಯರಾಗುತ್ತಿದ್ದರು.
  2. ಸಮಾರಂಭದಲ್ಲಿ ಬೇರೆ ವಿಷಯಗಳ ಬಗ್ಗೆ ಮಾತುಗಳಿರಲಿಲ್ಲ. ಯಾವಾಗಲೂ ಶಾಂತವಾಗಿರುತ್ತಿದ್ದರು.
  3. ಧ್ಯಾನದ ಸಮಯ ಪೂರ್ತಿಯಾಗಿ ಹೃದಯದ ಕಡೆಯೇ ಲಕ್ಷ್ಯವಿಟ್ಟು ಅಲ್ಲಿಯ ಆಗು ಹೋಗುಗಳ ಬಗ್ಗೆ ಗಮನವಿಡುವರು. ಧ್ಯಾನದ ನಂತರ ಕನಿಷ್ಟ 10-15 ನಿಮಿಷ ಏನೂ ಮಾತನಾಡದೆ ಶಾಂತಿಯಿಂದ ಮನಸ್ಸನ್ನು ಪರಿಶೀಲಿಸಿ ಆತ್ಮವಿಶ್ಲೇಷಣೆಯಅಭ್ಯಾಸವನ್ನು ಹಾಕಿಕೊಳ್ಳುವದು. ಬಹಿರ್ಮುಖತೆಯಿಂದ ಅಂತರ್ಮುಖಿಯಾಗುವ ವೃತ್ತಿಯನ್ನು ಬೆಳೆಸಲು ಅನು- ಕೂಲವಾಗುತ್ತಿತ್ತು. ಇದರಿಂದಾಗಿ ಎಲ್ಲದರ ಬಗ್ಗೆ ತಿಳಿದು ಸಾಧನೆಯಲ್ಲಿ ಅಭಿರುಚಿ ಹೆಚ್ಚುವದಲ್ಲದೆ ಶ್ರೀ ಗುರುಗಳ ಶಕ್ತಿ ಮತ್ತು ಅವರ ಯೋಗ್ಯತೆಯ ಬಗ್ಗೆ ವಿಶ್ವಾಸ ವೃದ್ಧಿಯಾಗುತ್ತಿತ್ತು. ಹೀಗೆ ಶ್ರೀ ಬಾಬೂಜಿಯವರ ದೈವೀ ಕೃಪಾಧಾರೆಯಲ್ಲಿ ಈಜಿ. ಮುಳುಗಿ ಗುರಿ ತಲುಪುವ ಹಂಬಲದಲ್ಲಿರುವಾಗ ಬೇರೆಯವರು Sitting ಕೊಡುವ ಮತ್ತು ತೆಗೆದುಕೊಳ್ಳುವ ಸಂದರ್ಭವೇ ಬರುತ್ತಿರಲಿಲ್ಲ.
  4. ಧ್ಯಾನ ಮಂದಿರದಲ್ಲಿ ಧ್ಯಾನ ಮಾಡುವಾಗ, ಭಾಷಣಗಳು ನಡೆದಾಗ ಆಥವಾ ಪ್ರಶೋತ್ತರ ನಡೆದಾಗ ಗದ್ದಲೆ ಅಥವಾ ಸಪ್ಪಳ ಯಾರಾದರೂ ಮಾಡಿದರೆ ತಕ್ಷಣ ಅವರನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಕಳಿಸಬೇಕು. ನಮ್ಮದು ಅಧ್ಯಾತ್ಮಿಕ ಸಮಾರಂಭ ಹೊರತು ಸಾಮಾಜಿಕ ಅಥವಾ ರಾಜಕೀಯದಲ್ಲ. ಯಾರ ಮರ್ಜಿ ಕಾಯುವ ಅವಶ್ಯಕತೆವಿರುವದಿಲ್ಲವಾದ ಕಾರಣ ಎಲ್ಲರಿಗೂ ಲಾಭವಾಗುವದನ್ನು ಗಮನದಲ್ಲಿಟ್ಟು ಇಂತಹ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು.
  5. ಸಮಾರಂಭಕ್ಕೆ ಹೋಗುವದು ಕೇವಲ ಆತೋನ್ನತಿಗಾಗಿ, ಅಲ್ಲಿಯ ಸಂಚಾಲಕರು ಇದನ್ನು ತಿಳಿದು ನಮ್ಮೆಲ್ಲರಿಗೆ ಅಧ್ಯಾತ್ಮಿಕ ಲಾಭವಾಗಲೆಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಾಗಿರುತ್ತಿತ್ತು. ಆದುದರಿಂದ ಅವೆಲ್ಲವುಗಳಲ್ಲಿ ಪಾಲ್ಗೊಳ್ಳುವದು ನಮ್ಮೆಲ್ಲರ ಮುಖ್ಯ ಪಾತ್ರವಾಗಿರುತ್ತಿತ್ತು. ಆಗ ನಮ್ಮೊಳಗೆ ಮಾತನಾಡುತ್ತಾ ಕುಳಿತುಕೊಳ್ಳುವದರಿಂದಾಗಿ ಅಲ್ಲಿಯವರು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ವ್ಯರ್ಥವಾಗಿ ಇಂತಹ ಸದಾವಕಾಶವನ್ನು ದುರುಪಯೋಗಿಸಿಕೊಳ್ಳುವಂತೆ ಆಗುವದು.
  6. ಶ್ರೀ ಬಾಬೂಜಿ ಮಹರಾಜರ ನಿರ್ದೇಶನದಂತೆ ಮಕ್ಕಳನ್ನು ಮತ್ತು ಹುಡುಗರನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಒಂದು ವೇಳೆ ಕರೆದುಕೊಂಡು ಹೋದರೆ ನಮ್ಮ ಮನಸ್ಸು ಆ ಕಡೆಗೆ ತಿರುಗುವದರಿಂದಾಗಿ ನಾವು ಬಂದ ಉದ್ದೇಶ ನೆರವೇರುವದಿಲ್ಲ. ಎರಡನೆಯದಾಗಿ ನಾವು ಧ್ಯಾನ ಮಾಡುವಾಗ ಮಕ್ಕಳು ಅಲ್ಲಿದ್ದರೆ ನಮ್ಮ ಸದ್ಗುರುಗಳು ಬಯಸಿದ ರೀತಿಯಲ್ಲಿ ಶಕ್ತಿಯುತವಾದ ಪ್ರಾಣಾಹುತಿಯನ್ನು ಕೊಟ್ಟರೆ ಮಕ್ಕಳಿಗೆ ಹಾನಿಯಾಗುವ ಸಂಭವವಿದೆ ಎಂದು ಹೇಳುತ್ತಿದ್ದರು ಮತ್ತು ಕೆಲವೊಂದು ಸಲ ಪ್ರಾಣಕ್ಕೂ ಅಪಾಯವಿರುವ ಸಂಭವ ಎಂದು ಕೇಳಿದ್ದೇವೆ. ಆದುದರಿಂದಾಗಿ ಮಕ್ಕಳನ್ನು ಕರೆದುಕೊಂಡು ಹೋಗುವ ಅನುಮತಿ ಇರಲಿಲ್ಲ.
  1. ಬೇರೆಯವರ ಜೊತೆ ನಮ್ಮ ಸಾಧನೆ, ಅನುಭವ, ಅನಿಸಿಕೆ ಮತ್ತು ಬರುವ ಅಡ್ಡಿ ಆತಂಕಗಳನ್ನು ಬಿಟ್ಟು ಅನಾವಶ್ಯಕ ವಿಷಯಗಳ ಬಗ್ಗೆ ಮಾತನಾಡುವದರಿಂದ ನಾವು ಹೋದ ಉದ್ದೇಶ ಫಲಿಸುವದಿಲ್ಲ. ಅದಕ್ಕಾಗಿ ಯಾವಾಗಲೂ ಮೌನವಾಗಿರಬೇಕು. ಅಲ್ಲಿಯ ವಾತಾವರಣವನ್ನು ಕಲುಷಿತಗೊಳ್ಳದಂತೆ ಇರುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಯುತ್ತಿದ್ದರು.
  2. ಈ ಹಿಂದೆ ಭಾಷಣಗಳು, ಪ್ರಶೋತ್ತರ ಸರಣೆ, ಸೆಮಿನಾರುಗಳು ಕಾರ್ಯಾಗಾರಗಳಾಗುತ್ತಿದ್ದವು. ಅವುಗಳಿಂದ ಪ್ರಯೋಜನವಾಗಲಿಲ್ಲ ಮತ್ತು ಅವುಗಳ ಮರು ವಿಶ್ಲೇಷಣೆ (Follow up) ಕೂಡಾ ಆಗದಿದ್ದ ಕಾರಣ ಮತ್ತು ಹೋದ ಜನರು ಪಾಲ್ಗೊಳ್ಳದಿರುವದರಿಂದ ಶ್ರೀ ರಾಘವೇಂದ್ರರಾಯರು ಅವೆಲ್ಲವು ಕೇವಲ ಸಪ್ಪಳ ಎಂದು ನಿಲ್ಲಿಸಿದರು.
  1. ಶ್ರೀ ಬಾಬೂಜಿಯವರ ಕಾಲದಲ್ಲಿ ನಮ್ಮ ಸಮಾರಂಭಗಳಲ್ಲಿ ಸಾರ್ವಜನಿಕ ಸಭೆಯೊಂದನ್ನು ಇಡಲಾಗುತ್ತಿತ್ತು. ಇದರ ಮುಖ್ಯ ಉದ್ದೇಶವೇನಿತ್ತೆಂದರೆ ನಮ್ಮ ಸಾಧನೆಯಲ್ಲಿ ಯಾರಿಗಾದರೂ ಅಭಿರುಚಿಯಿದ್ದರೆ ನಮ್ಮ ತರಬೇತಿ ಮತ್ತು ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡುವದಾಗಿತ್ತು. ಬರಬರುತ್ತಾ ಯಾರೂ ಬರಲಾರದ ಕಾರಣದಿಂದಾಗಿ ಅದನ್ನು ನಿಲ್ಲಿಸಬೇಕಾಯಿತು. ಇದರರ್ಥವಿಷ್ಟೆ, ನಾವು ಇಷ್ಟು ವರ್ಷ ಸಾಧನೆಯನ್ನು ಮಾಡಿದಾಗ್ಯೂ ಯಾರನ್ನೂ ಕೂಡಾ ಆಕರ್ಷಿಸದೇ ಇರುವದು. ಇಂತಹ ಸನ್ನಿವೇಶಗಳು ನಮ್ಮಲ್ಲಿ ಆದ ಪರಿವರ್ತನೆಗಳನ್ನು ಸಮಾಜದಲ್ಲಿ ಎತ್ತಿ ತೋರಿಸುವವು. ನಮ್ಮ ಜೀವನದ ಗುರಿ ಅತ್ಯುಚ್ಛವಾದುದು ಎಂದು ಕೇವಲ ವೇದಿಕೆಯ ಮೇಲೆ ಹೇಳುವದಕ್ಕಲ್ಲ ಅದನ್ನು ಸಾಧಿಸಲಿಕ್ಕೆ ಮತ್ತು ಜನರನ್ನು ಆಕರ್ಶಿಸಲಿಕ್ಕೆ ಎಂಬುದು ಪೂರ್ಣ ಮರೆತುಬಿಟ್ಟಿದ್ದೇವೆ. ಬೇರೆಯವರು ಏಕೆ? ನಮ್ಮ ಮಕ್ಕಳು ಕೂಡಾ ನಮ್ಮ ಜೀವನದ ಗುರಿಯ ಕಡೆಗೆ ಲಕ್ಷ ಕೊಟ್ಟಿಲ್ಲ. ಏಕೆಂದರೆ ನಮ್ಮ ಮಾತು ಮತ್ತು ಇರುವಿಕೆಯ ಅಂತರ ಅವರಿಗೆ ಸ್ಪಷ್ಟ ಕಾಣಿಸಿ ಒಂದು ತಿರಸ್ಕಾರ ದೃಷ್ಟಿಯಿಂದ ನೋಡದಿದ್ದರೂ ಅದನ್ನು ಬಯಸುವದಿಲ್ಲ. ಆ ಕಡೆಗೆ ಒಲವನ್ನೂ ತೋರಿಸುತ್ತಿಲ್ಲ. ಇದೊಂದು ಗಂಭೀರವಾಗಿ ವಿಚಾರ ಮಾಡಬೇಕಿರುವ ವಿಷಯ.
  2. ಹೊಸದಾಗಿ ಇನ್ನೊಂದು ವಿಷಯ ತಲೆ ಎತ್ತಿದೆ. ಅದೇನೆಂದರೆ ಶ್ರೀ ಬಾಬೂಜಿಯವರ ಅಥವಾ ಶ್ರೀ ಲಾಲಾಜಿಯವರ ಹುಟ್ಟು ಹಬ್ಬದ ದಿವಸ ತಲೆಯ ಸ್ನಾನ ಮಾಡಿ ಹೊಸ ಉಡುಪುಗಳನ್ನು ಧರಿಸುವರು. ಅದಕ್ಕಾಗಿ ನಮ್ಮ ಜನರು ತಮ್ಮ ಬಂಧು ಭಗಿನಿಯರಿಗೆ ಕಷ್ಟವಾಗಬಾರದೆಂದು ಅಲ್ಲಿಯೇ ಬಟ್ಟೆಗಳನ್ನು ಮಾರಾಟಕ್ಕೆ ತಂದು ಮುಂಜಾನೆಯಿಂದ ಸಂಜೆಯವರೆಗೆ ಜನರು ಅದರಲ್ಲಿಯೇ ಕಾಲ ಕಳೆಯುತ್ತಾರೆ. ಇಂತಹ ಜನರಿಗೆ ಅಧ್ಯಾತ್ಮ ಹೇಗೆ ಹತ್ತುವದು? ಎಂದು ವಿಚಾರ ಮಾಡಬೇಕಾಗಿದೆ.
  3. ಶ್ರೀ ಬಾಬೂಜಿ ಮಹರಾಜರ ಕಾಲದಲ್ಲಿ, ವರ್ಷದಲ್ಲಿ ಕೇವಲ ಮೂರು ಸಮಾರಂಭಗಳನ್ನು ಆಚರಿಸುವ ನಿಯಮವಿತ್ತು ಅಂದರೆ
  • ಪೂಜ್ಯ ಲಾಲಾಜಿಯವರ ಜನ್ಮದಿನ
  • ಪೂಜ್ಯ ಬಾಬೂಜಿಯವರ ಜನ್ಮದಿನ
  • ಸಂಸ್ಥಾಪಕರ ದಿನ.

ಪ್ರತಿ ಕೇಂದ್ರದಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲು ಪರವಾನಗಿ ಇತ್ತಾದರೂ ಅದು ಕೇವಲ ಆಯಾ ಕೇಂದ್ರದ ಅಭ್ಯಾಸಿಗಳಿಗೆ ಮಾತ್ರ ಸೀಮಿತವಾಗಿತ್ತು. ಒಂದು ವೇಳೆ ಅಲ್ಲಿ ಪ್ರಶಿಕ್ಷಕರು ಇಲ್ಲದಿದ್ದರೆ ಸಮೀಪದ ಬೇರೆ ಕೇಂದ್ರದ ಪ್ರಶಿಕ್ಷಕರಿಗೆ ಕರೆಸುವ ಸಮ್ಮತಿ ಇತ್ತು. ಶ್ರೀ ಬಾಬೂಜಿಯವರ ಮಹಾ ಸಮಾಧಿಯ ನಂತರ ರಾಯಚೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಪ್ರತಿ ವರ್ಷ ಈ ಸಮಾರಂಭವನ್ನು ಏರ್ಪಡಿಸಲಾಗುತ್ತಿತ್ತು. ಅಲ್ಲಿ ನಮ್ಮ ಆಶ್ರಮವಿದ್ದ ಕಾರಣ ಎಲ್ಲ ಅನುಕೂಲತೆಗಳಿದ್ದವು. ಶ್ರೀ ಬಾಬೂಜಿ ಮಹರಾಜರ ಜನ್ಮಶತಾಬ್ದಯ ವರುಷ ಎಪ್ರಿಲ್ 1999ರಿಂದ ಮಾರ್ಚ 2000ರ ವರೆಗೆ ಎಲ್ಲ ಕೇಂದ್ರಗಳಲ್ಲಿ ಆಚರಿಸುವಂತೆ ಪೂಜ್ಯ ರಾಘವೇಂದ್ರರಾಯರು ಹೇಳಿದ ಪ್ರಯುಕ್ತ ಎಲ್ಲ ಕಡೆಗೆ ನಡೆದವು ಮತ್ತು ಅವುಗಳಲ್ಲಿ ಅವರು ಸ್ವತಃ ಪಾಲ್ಗೊಂಡರು. ಅದು ಆ ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಶತಾಬಿ ಮುಗಿದ ಬಳಿಕ ಕೂಡಾ ಇನ್ನೂ ನಡೆದಿವೆ. ಇಂತಹ ಸಮಾರಂಭಗಳು ನಡೆದರೆ ಎಷ್ಟರ ಮಟ್ಟಿಗೆ ಲಾಭವಾಗುವದೆಂಬುದರ ಬಗ್ಗೆ ಪ್ರಾಯೋಗಿಕವಾಗಿ ವಿಚಾರ ಮಾಡಬೇಕಾಗಿದೆ.

  1. ಭಾವಚಿತ್ರಗಳು:- ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ನಾವು ನೋಡುವದೇನೆಂದರೆ ಒಬ್ಬ ಮನುಷ್ಯ ಸತ್ತು ಹೋದ ಮೇಲೆ ಅವನ ಭಾವ ಚಿತ್ರಕ್ಕೆ ಹಾರ (ಪುಷ್ಪಮಾಲೆ) ಹಾಕಿ ಗೌರವ ಸೂಚಿಸುವದು ಒಂದು ಸಂಪ್ರದಾಯವಾಗಿದೆ. ಅಂದರೆ ಸತ್ತ ಮೇಲೆಯೇ ಮಾಡುವ ಇದೊಂದು ಕ್ರಮವಾಗಿದೆ. ಒಂದು ವೇಳೆ ಇಂತಹ ಸಂಪ್ರದಾಯವನ್ನು ಮುಂದುವರಿಸಿದರೆ ಜನ ಸಾಮಾನ್ಯರಿಗೆ ತಿಳಿಯಪಡಿಸುವದೇನೆಂದರೆ ನಮ್ಮ ಪೂಜ್ಯರು ಸತ್ತು ಹೋಗಿದ್ದಾರೆಂದು. ಆದರೆ ನಮ್ಮ ಭಾಷಣಗಳಲ್ಲಿ ಅವರು ಇನ್ನೂ ನಮ್ಮಲ್ಲಿಯೇ ಇದ್ದು ನಮಗೆ ಸಹಾಯ ಮಾಡುತ್ತಿದ್ದಾರೆ ಎಂಬ ಹೇಳಿಕೆಯು ಹಾಸ್ಯಾಸ್ಪದವಾಗುವದು.

ಅದಕ್ಕಾಗಿ ಶ್ರೀ ರಾಘವೇಂದ್ರರಾಯರು ಒಮ್ಮೆ ರಾಯಚೂರಿನ ಆಶ್ರಮದಲ್ಲಿ ಶ್ರೀ ಬಾಬೂಜಿ ಮಹರಾಜರ ಭಾವಚಿತ್ರವನ್ನು ತೆಗೆದು ಹಾಕಿದರಲ್ಲದೇ ಅದನ್ನು ತಿರುಗಿಸಿ ಕೂಡ ಇಡಿಸಿದರು. ಇನ್ನೊಂದು ಸಲ ಸುರಪುರದಲ್ಲಿ ಭಾವಚಿತ್ರ ತೆಗೆಯದಿದ್ದರೆ ನಾನು ಈ ಹಾಲಿನಲ್ಲಿ ಕಾಲೇ ಇಡುವದಿಲ್ಲವೆಂದು ಹೇಳಿರುವದನ್ನು ನಾವು ಇನ್ನೂ ಮರೆತಿಲ್ಲ. ಇದರ ಮುಖ್ಯ ಉದ್ದೇಶವೇನೆಂದರೆ ನಾವು ಅಧ್ಯಾತ್ಮಿಕ ಸಾಧಕರಾಗಿದ್ದು ಒಂದು ಉಚ್ಚತ್ತಮ ಗುರಿಯನ್ನು ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಇದು ಮೂರ್ತಿ ಪೂಜೆಯಾಗಿ ನಮ್ಮ ವಿಚಾರ ಕುಂಠಿತಗೊಳ್ಳುವದನ್ನು ನಿಲ್ಲಿಸುವದಕ್ಕಾಗಿ ಮತ್ತು ನಾವು ಹಿಡಿದ ದಾರಿಯನ್ನು ತಪ್ಪದಂತೆ ಸುಗಮ ಮಾಡಲು ಇರುತ್ತದೆ.

ಪ್ರಸಾದ:

ನಾವು ನಮ್ಮ ಸಮಾಜದಲ್ಲಿ ಯಾವುದೇ ಒಂದು ಧಾರ್ಮಿಕ ಪೂಜೆ ಅಥವಾ ಕಾರ್ಯವನ್ನು ಕೈಗೊಂಡಾಗ ಕೆಲವು ಸಂಗತಿಗಳನ್ನು ನೋಡುವೆವು. ಸಮಾರಂಭಕ್ಕೆ ಮುಂಚೆ ನಾವು ಕೈಗೊಂಡಿರುವ ಪೂಜೆ ನಿರ್ವಿಘ್ನವಾಗಿ ನಡೆಯಲು ವಿಶ್ಲೇಶ್ವರನ ಪೂಜೆ ಮಾಡುತ್ತೇವೆ. ಅದಕ್ಕಾಗಿ ಒಂದು ಅಡಿಕೆ ಅಥವಾ ಅರಿಶಿಣದ ಬೇರು ಅಥವಾ ಒಂದು ನಾಣ್ಯವನ್ನು ತೆಗೆದುಕೊಂಡು ಅದರಲ್ಲಿ ಗಣೇಶನ ಶಕ್ತಿಯನ್ನು ಆಹ್ವಾನಿಸುವರು. ಅದಕ್ಕೆ ಪೂಜೆ ಸಲ್ಲಿಸಿ ವಕ್ರತುಂಡ ಮಾಹಾಕಾಯ ಸೂರ್ಯಕೋಟಿ ಸಮಪ್ರಭಃ ನಿರ್ವಿಘ್ನಂ ಕುರುಮೇ ದೇವಃ ಸರ್ವಕಾರ್ಯೇಷು ಸರ್ವದ ಎಂದು ಪ್ರಾರ್ಥಿಸಿ ಅನಂತರವೇ ಮುಖ್ಯ ನಿರ್ಧರಿಸಿದ ಪೂಜೆಯನ್ನು ಮಾಡುತ್ತೇವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಒಬ್ಬನು ಗಣೇಶನ ಶಕ್ತಿಯನ್ನು ಬೇಕಾದಾಗ ಕರೆಸುವನು ಮತ್ತು ಪೂಜೆ ಮುಗಿದ ನಂತರ ಮರು ಕಳುಹಿಸುವನು. ಈ ಕಾರ್ಯಕ್ಕೆ ಉತ್ತರ ಪೂಜೆ ಎನ್ನುವರು. ಇದು ಬಹಳಕಾಲದಿಂದ ಬಂದ ವಿಷಯ. ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆ ಎಂದರೆ ಇಲ್ಲಿ ಗಣೇಶನ ಶಕ್ತಿ ದೊಡ್ಡದೋ ಅಥವಾ ಆಹ್ವಾನಿಸುವ ವ್ಯಕ್ತಿ ದೋಡ್ಡವನೋ?

ಇನ್ನೊಂದು ವಿಷಯಕ್ಕೆ ಬರೋಣ. ನಮ್ಮ ಜೀವನದಲ್ಲಿ ಸಾಕಷ್ಟು ಗುಡಿ ಅಥವಾ ದೇವಸ್ಥಾನಗಳನ್ನು ಹೊಸದಾಗಿ ನಿರ್ಮಿಸುವದನ್ನು ನೋಡಿದ್ದೇವೆ. ಇಲ್ಲಿ ಕೂಡಾ ಒಂದು ವಿಶೇಷ ಕಾರ್ಯಕ್ರಮ ನಡೆಯುವದು ತಂದ ಮೂರ್ತಿಯಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುವದು. ಆ ದೇವಸ್ಥಾನಕ್ಕೆ ತಂದ ಮೂರ್ತಿಯಲ್ಲಿ ಆಯಾ ದೇವರು/ದೇವತೆಗಳ ಪ್ರಾಣವನ್ನು ಆಹ್ವಾನಿಸಿ ಅದರಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸುವದು. ಆದರೆ ಈಗ ಪ್ರಾಣ ಪ್ರತಿಷ್ಠಾಪನೆ ಎಂಬುವ ಪದವನ್ನು ಬದಲಿಸಿ ಮೂರ್ತಿ ಪ್ರತಿಷ್ಠಾಪನೆ ಎಂದಾಗಿದೆ. ಏಕೆಂದರೆ ಅದರಲ್ಲಿ ಪ್ರಾಣವನ್ನು ತುಂಬುವ ಯೋಗ್ಯತೆಯು ನಮ್ಮ ಜನರಲ್ಲಿ ಉಳಿದಿಲ್ಲ. ಇದೊಂದು ಕೇವಲ ಯಾಂತ್ರಿಕ ಕಾರ್ಯವಾಗಿದೆ. ಇಂತಹ ಗುಡಿಗಳಿಗೆ ಭಕ್ತರು ಪೂಜೆಗಾಗಿ ಹೋದರೆ ಏನು ಲಾಭ ದೊರಕುವದು ಎಂಬುದರ ಬಗ್ಗೆ ವಿಚಾರಿಸಬೇಕಾಗಿದೆ.

ನಮ್ಮ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲರಿಗೂ ಲಾಭವಾಗಲೆಂದು ಪ್ರಸಾದವನ್ನು ಹಂಚುತ್ತಾರೆ. ಅದರಿಂದಾಗಿ ಎಲ್ಲರೂ ಬಹಳ ಆನಂದದಿಂದ, ಆದರ, ಆಭಿಮಾನಗಳಿಂದ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದೆವು ಎಂದು ತಿಳಿಯುತ್ತಾರೆ. ಇಲ್ಲಿಯೂ ಕೂಡಾ ಒಂದು ವಿಷಯ ತಿಳಿಯುವದಿದೆ. ಸಾಮಾನ್ಯವಾಗಿ ಜನರು ತಿನ್ನುವ ವಸ್ತುವನ್ನು ಭಗವಂತನಿಗೆ ಅರ್ಪಿಸುವರು. ಇದಕ್ಕೆ ಭೋಗ ಅಥವಾ ನೈವೇದ್ಯ ಏರಿಸುವದು ಎನ್ನುತ್ತಾರೆ. ಈ ಕ್ರಿಯೆಯು ಮುಗಿದ ಬಳಿಕ ಅರ್ಪಿಸಿರುವ ತಿನ್ನುವ ಪಧಾರ್ಥಕ್ಕೆ ಪ್ರಸಾದವೆನ್ನುತ್ತಾರೆ. ಈ ಪ್ರಸಾದವು ಭಗವಂತನ ಎಂಜಲೋ ಅಥವಾ ಭಗವಂತನು ಮುಟ್ಟಿದ ವಸ್ತುವೋ ಅಥವಾ ಭಗವಂತನು ಸ್ವೀಕರಿಸಿದೆ ಎಂದು ಹೇಳಲ್ಪಟ್ಟ ವಸ್ತುವೋ ಇದನ್ನು ತಿಳಿಯುವದು ಮುಖ್ಯ.

ನಿಜವಾದ ಅರ್ಥದಲ್ಲಿ ಪ್ರಸಾದ ಅರ್ಪಿಸುವ ಕ್ರಿಯೆ ಕೂಡ ಪ್ರಾಣ ಪ್ರತಿಷ್ಠಾಪನೆಯಂತಹ ಕ್ರಿಯೆ. ಇದು ಅರ್ಪಿಸುವವನ ಯೋಗ್ಯತೆಗೆ ಸಂಬಂಧಪಟ್ಟದ್ದು ಆಗಿದೆ. ತಿನ್ನುವ ಪಧಾರ್ಥವನ್ನು ಪೂರ್ತಿಯಾಗಿ ಶುದ್ದೀಕರಿಸಿ ಅದರ ಮೂಲ ಸ್ಥಿತಿಗೆ ತಂದು ಅದನ್ನು ಶಕ್ತಿಯ ರೂಪದಲ್ಲಿ ಮಾರ್ಪಾಡು ಮಾಡಿ ದೈವತ್ವವನ್ನು ತುಂಬಿ ಪುನಃ ಪಧಾರ್ಥದ ರೂಪಕ್ಕೆ ತರುವದಾಗಿದೆ. ಇದಕ್ಕೆಯೇ ಪ್ರಸಾದವನ್ನು ಏರಿಸುವದು ಎನ್ನುವರು. ಆನಂತರವೇ ಆ ತಿನ್ನುವ ಪಧಾರ್ಥವು ಪ್ರಸಾದವಾಗುವದು. ಈ ಕ್ರಿಯೆ ಆಗದಿದ್ದರೆ ಅದು ಪ್ರಸಾದವೇ ಅಲ್ಲ ಅಂದರೆ ಪ್ರಾಣ ಪ್ರತಿಷ್ಠಾಪನೆಯಾಗದ ಮೂರ್ತಿಯಂತೆ.

ನಮ್ಮಲ್ಲಿ ಪ್ರಸಾದದ ಮಹತ್ವ ಬಹಳ ವಿಶೇಷದ್ದಾಗಿದೆ. ನಿಜವಾಗಿ ಭಕ್ತನು ತಮ್ಮ ಸದ್ಗುರುವಿಗೆ ಪ್ರಾರ್ಥಿಸಿ ಅವರಿಂದ ಅದರಲ್ಲಿ ಪ್ರಾಣ ಹಾಕುವದಾಗಿದೆ. ಇದು ಅವರಿಬ್ಬರ ನಡುವಿನ ಒಂದು ಗೌಪ್ಯ ವಿಷಯ. ಇದರಿಂದಾಗಿ ಆ ತಿನ್ನುವ ಪಧಾರ್ಥದಲ್ಲಿ ಒಂದು ತರಹದ ಕ್ರಿಯೆ- ಪ್ರಕ್ರಿಯೆ ನಡೆಯುವದು. ಭಕ್ತನ ಭಕ್ತಿಯ ಮೇರೆಗೆ ಅದರಲ್ಲಿ ಪರಿಣಾಮವಾಗುವದು. ಅದರಲ್ಲಿ ಶ್ರೀ ಬಾಬೂಜಿಯವರ ಶಕ್ತಿ ಸೇರಿರುವದರಿಂದ ಪ್ರಭಾವಕಾರಿಯಾಗಿರುವದು. ಪೂಜೆಯೆನ್ನುವದು ಕೇವಲ ಭಕ್ತ ಮತ್ತು ಭಗವಂತನ ನಡುವಿನ ಪ್ರೇಮ ವ್ಯವಹಾರ. ಇದು ಬಹಳ ಗೌಪ್ಯವಾದ ವಿಷಯವಾದುದರಿಂದ ಎಲ್ಲರಿಗೂ ತಿಳಿಯುವದಿಲ್ಲ. ಇಂತಹ ಒಬ್ಬ ಭಕ್ತನಲ್ಲಿ ನಮ್ಮ ಸದ್ಗುರುಗಳ ಕೃಪೆ ದೊರಕಿ ಎಲ್ಲರ ಆತ್ರೋನ್ನತಿಗೋಸ್ಕರ ಸರ್ವೇ ಜನಃ ಸುಖಿನೋಭವಂತು ಎನ್ನುವ ವಿಚಾರದಿಂದ ಆತನು ತುಂಬು ಮನಸ್ಸಿನಿಂದ ಮತ್ತು ನಿಶ್ಚಲ ಪ್ರೇಮದಿಂದ ಪ್ರಸಾದವನ್ನು ಅರ್ಪಿಸುವನು. ಇಂತಹ ಪ್ರಸಾದದಿಂದ ಎಲ್ಲರಿಗೂ ಅಧ್ಯಾತ್ಮಿಕ ಲಾಭವಾಗುವದರಲ್ಲಿ ಸಂದೇಹವೇ ಇಲ್ಲ. ಅದಕ್ಕಾಗಿ ಶ್ರೀ ಬಾಬೂಜಿ ಮಹರಾಜರು ಹೇಳಿದ ಒಂದು ವಾಕ್ಯವನ್ನು ನಾವು ಇಲ್ಲಿ ಸ್ಮರಿಸಬಹುದು. ಪ್ರಸಾದವನ್ನು ಅರ್ಪಿಸುವ ಯೋಗ್ಯತೆ ಎಲ್ಲರಲ್ಲಿ ಮತ್ತು ಎಲ್ಲ ಪ್ರಶಿಕ್ಷಕರಲ್ಲಿ ಇರುವದು ವಿರಳ.

Conversion of matter into its original state of purity and converting it further into its Original energy and sublimating it into Divine Power and again infusing it into the matter. This reconditioned matter is -Prasad.

ಅನುವಾದ (ಭಾವಾರ್ಥವಲ್ಲ)

ಪದಾರ್ಥವನ್ನು ಅದರ ಮೂಲ ಸ್ಥಿತಿಯ ಶುದ್ಧತೆಗೆ ಪರಿವರ್ತನೆ ಮಾಡಿ ಮತ್ತು ಅದನ್ನು ಅದರ ಮೂಲ ಶಕ್ತಿಯಾಗಿ ಪರಿವರ್ತಿಸಿ ಮತ್ತು ಆ ಮೂಲ ಶಕ್ತಿಯನ್ನು ದೈವೀ ಶಕ್ತಿಯಾಗಿ ಶ್ರೇಷ್ಠತೆಗೊಳಿಸಿ ಮತ್ತು ಮನಃ ಅದನ್ನು ಪಧಾರ್ಥದೊಳಗೆ ಸಂಚಲನಗೊಳಿಸುವದು. ಈ ಮರು ಪರಿವರ್ತಿತ ಪಧಾರ್ಥಕ್ಕೆ ಪ್ರಸಾದ ಎನ್ನುವರು.

ಇಂತಹ ಪ್ರಸಾದವನ್ನು ಸೇವಿಸುವದರಿಂದ ಆ ಪರಮ ಶಕ್ತಿಯು ದೇಹದ ಎಲ್ಲ ಭಾಗಗಳಲ್ಲಿ ಪಸರಿಸಿ ಮತ್ತು ಪ್ರತಿ ಜೀವಕೋಶಕ್ಕೆ ಹೋಗಿ ಅದರ ಪರಿಣಾಮವನ್ನು ಭೌತಿಕ, ಜೈವಿಕ ಮತ್ತು ಅಧ್ಯಾತ್ಮಿಕ ರೂಪದಲ್ಲಿ, ಬದಲಾವಣೆ ಹೊಂದಿದ ಜೀವನ ಶೈಲಿಯ ರೂಪದಲ್ಲಿ ಮತ್ತು ವೈಚಾರಿಕ ರೂಪದಲ್ಲಿ ವಿಕಸಿತ ಹೊಂದಿದ್ದನ್ನು ನಾವು ಕಾಣುವೆವು. ಆದುದರಿಂದ ನಮ್ಮಲ್ಲಿಯ ಪ್ರಸಾದ ಬಹಳ ಮಹತ್ವವುಳ್ಳದ್ದಾಗಿದೆ.

ಇಂತಹ ಪ್ರಸಾದದ ಮೂಲಕ ನಮ್ಮ ಸದ್ಗುರುಗಳು ಆ ಪರಮ ಶಕ್ತಿಯನ್ನು ಎಲ್ಲರಿಗೂ ದಯಪಾಲಿಸಿ ವಿಶ್ವದಲ್ಲಿ ಅಧ್ಯಾತ್ಮದ ಒಂದು ಹೊಸ ಕ್ರಾಂತಿಯನ್ನೇ ತಂದು ಜನರಲ್ಲಿ (ಜಿಜ್ಞಾಸುಗಳಲ್ಲಿ) ತಮ್ಮ ಜೀವನದ ಗುರಿಯ ಬಗ್ಗೆ ಅರಿವು ಮೂಡಿಸಿ ಅದನ್ನು ಸಾಧಿಸುವದಕ್ಕಾಗಿ ಒಂದು ಹೊಸ ಚೈತನ್ಯ ತುಂಬಿ ಹುರಿದುಂಬಿಸುತ್ತಿದ್ದಾರೆ. ಅದಕ್ಕೆಯೇ ಈ ಪ್ರಸಾದವನ್ನು ಚಿಕ್ಕ ಮಕ್ಕಳಿಗೆ ಮೊದಲು ಕೊಡಲು ನಮ್ಮ ಶ್ರೀ ಬಾಬೂಜಿ ಮಹರಾಜರು ಹೇಳುತ್ತಾರೆ.

ಕೊನೆಯದಾಗಿ ನಮ್ಮ ಸಮಾರಂಭವು ಶ್ರೀ ಲಾಲಾಜಿಯವರಿಗೆ ಸಂಬಂಧವಾಗಿ ಬರೆದ ಒಂದು ಕವನದೊಂದಿಗೆ ಸಮಾಪ್ತಗೊಳ್ಳುವದು. ಈ ಕಾರ್ಯಕ್ರಮವು ಹಿಂದೆ ಸಾಮೂಹಿಕವಾಗಿ ಹಾಡುತ್ತಾ ಅದರ ಭಾವದಲ್ಲಿ ತಲ್ಲೀನರಾಗುತ್ತಿದ್ದರು. ಈಗ ಅದನ್ನು ಹಾಡುವದು ಪುಸ್ತಕವನ್ನು ನೋಡಿಯೇ 5-6 ಜನ ಭಗಿನಿಯರು ಹಾಡುತ್ತಾರೆ. ಇದು ಮೂಲತಃ ಉರ್ದು ಭಾಷೆಯಲ್ಲಿದೆ.

ಆವ ಇದರ ಭಾಷಾಂತರ ಬೇರೆ ಬೇರೆ ಭಾಷೆಗಳಲ್ಲಿ ಆದರೂ ಉರ್ದುವಿನಷ್ಟು ಪ್ರಭಾವಕಾರಿಯಾಗಿಲ್ಲ. ಉರ್ದು ಕವನವನ್ನು ಶ್ರೀ ಗುರುಗಳು ಬಹಳ ಶಕ್ತಿಯತವನ್ನಾಗಿ ಮಾಡಿದ್ದಾರೆ. ಯಾರಿಗೂ ಇದು ಕಂಠಪಾಠವಾಗಿಲ್ಲ. ಆದರೂ ಈ ಹಾಡಿನ ಪ್ರತಿಯೊಂದು ಶಬ್ದದ ಅರ್ಥವನ್ನು ತಿಳಿದು ಅದರ ಭಾವದಲ್ಲಿ ಹೋಗಿ ಅದರಲ್ಲಿರುವ ಸ್ಥಿತಿಯನ್ನು ಪಡೆಯಲು ಪ್ರಯತ್ನಿಸಬೇಕು. ಇಲ್ಲವಾದರೆ ಇದೂ ಕೂಡಾ ಬೇರೆ ಹಾಡಿನಂತಾಗಿ ಮಹತ್ವ ಕಳೆದುಕೊಳ್ಳುವದು. ಹೀಗೆ ಹಾಡುವದರಿಂದ ಅದು ಒಂದು ಯಾಂತ್ರಿಕ ಕ್ರಿಯೆಯಾಗುವದು ಮತ್ತು ಯಾವ ಲಾಭ ಕೂಡಾ ಸಿಗದು. ಇದಕ್ಕಾಗಿ ಇದನ್ನು ಪ್ರಾಯೋಗಿಕವಾಗಿ ಮಾಡಬೇಕು.

ಉಪಸಂಹಾರ:

ಮುಖ್ಯವಾಗಿ ನಾವು ನಮ್ಮನ್ನು ಶ್ರೀ ಬಾಬೂಜಿ ಮಹರಾಜರ ಜೊತೆ ತುಲನೆ ಮಾಡುವದು ಮಾಹಾ ತಪ್ಪು. ನಮ್ಮ ಸಂಬಂಧ ಅವರೊಡನೆ ಒಡೆಯ ಮತ್ತು ಸೇವಕನಂತಿದೆ. ಆದಕಾರಣ ಅವರ ಅನುಕರಣೆ ಮಾಡುವದು ಸರಿಯಲ್ಲ. ಅಂದರೆ ಅವರು ಮಾಡುವ ಕೆಲಸ ಕಾರ್ಯಗಳ ಉದ್ದೇಶವನ್ನು ಅರಿತು ಅವನ್ನೇ ಆಚರಿಸಬೇಕು. ನನ್ನ 38 ವರ್ಷದ ಸಾಧನೆಯಲ್ಲಿ ಕಂಡಿದ್ದು ತಿಳಿದದ್ದು ಮತ್ತು ಅನುಭವಿಸಿದ್ದನ್ನು ನಾನು ಓದುಗರ ಮುಂದೆ ತರಲು ಪ್ರಯತ್ನಿಸಿರುವೆನು ಒಂದು ವೇಳೆ ಯಾವುದಾದರೂ ತಪ್ಪು ಎನಿಸಿದರೆ ಕ್ಷಮಿಸಿ. ಒಂದು ವೇಳೆ ಸರಿ ಎನಿಸಿದರೆ ಅದನ್ನು ಅಳವಡಿಸಿರಿ.

  1. ಬಸಂತ ಪಂಚಮಿಯ ದಿವಸ ನಮ್ಮ ಸದ್ಗುರುಗಳು ಹವನವನ್ನು ಮಾಡುತ್ತಿದ್ದರು. ಅದರ ಉದ್ದೇಶ ತಿಳಿಯದ ಕಾರಣ ನಾವು  ಅದನ್ನು ಬಿಟ್ಟುಕೊಟ್ಟೆವು.
  2. ಬಸಂತ ಪಂಚಮಿಯ ದಿವಸವೇ ಅವರು 24 ಗಂಟೆಗಳ ಕಾಲ ಶಾಂತಿ ಪಾಠವನ್ನು ಮಾಡಿಸುತ್ತಿದ್ದರು. ಅದನ್ನು ಕೂಡಾ ಮರೆತೆವು.
  3. ಶ್ರೀ ಬಾಬೂಜಿ ಮಹರಾಜರು 5 ಜನರಿಗೆ ನಮ್ಮ ಸಂಸ್ಥೆಯ ಸದಸ್ಯರುಗಳೆಂದು ಪೂಜ್ಯರುಗಳಾದ ಶ್ರೀಕೃಷ್ಣ, ಶ್ರೀ ಲಾಲಾಜಿಯವರು, ಸ್ವಾಮಿ ವಿವೇಕಾನಂದ ರವರು, ಶ್ರೀ ಗೌತಮ ಬುದ್ಧರು ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳು ಇವರಿಗೆ ಪ್ರಸಾದವನ್ನು ಅರ್ಪಿಸುತ್ತಿದ್ದರೆಂದು ಕೇಳಿದ್ದೇವೆ. ಉದ್ದೇಶ ಗೊತ್ತಿಲ್ಲ. ಈಗಲೂ ಕೂಡಾ ಕೆಲವರು ಅದೇ ಕ್ರಮವನ್ನು ಅನುಸರಿಸುತ್ತಿದ್ದಾರೆ. ಇದರ ಬಗ್ಗೆ ನಮಗೆ ತಿಳಿಯಲು ಸಾಧ್ಯವಿಲ್ಲ. ಆದರೆ ನಮಗೆ ಏಕಮಾತ್ರ ಸ್ವಾಮಿ ಮತ್ತು ಇಷ್ಟದೈವ ನಾಥನೆಂದರೆ ಕೇವಲ ಶ್ರೀ ಬಾಬೂಜಿ ಮಹರಾಜರು, ಅನ್ಯರಲ್ಲ. ಆದ್ದರಿಂದ ಪ್ರಸಾದ ಯಾರಿಗೆ ಅರ್ಪಿಸಬೇಕು ಎಂಬುದು ಯಾರಿಗೂ ಹೇಳಬೇಕಾಗಿಲ್ಲ.
  4. ಶ್ರೀ ಬಾಬೂಜಿ ಮಹರಾಜರು ಯಾವಾಗಲೂ ಬೆಳಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಅಂದರೆ 6:30ಕ್ಕೆ ಮತ್ತು ಸಾಯಂಕಾಲದ ಅದೇ ಸಮಯಕ್ಕೆ ಧ್ಯಾನವನ್ನು ಮಾಡಿಸುತ್ತಿದ್ದರು. ಈಗ ಏಕೆ ಅದನ್ನು ಅನುಸರಿಸುತ್ತಿಲ್ಲ?
  5. ಪ್ರತಿ ಸಮಾರಂಭದಲ್ಲಿ ಸಂಚಾಲಕರು ಒಂದು Reportನ್ನು ತಯಾರು ಮಾಡಿ ಉದ್ದೇಶದ ಪರಿಣಾಮವನ್ನು ತೋರಿಸುವ ಪದ್ಧತಿಯನ್ನು ಇಟ್ಟುಕೊಳ್ಳುವದು ಉತ್ತಮ. ಅದರಲ್ಲಿ
  • ಬಂದ ಜನರ ಸಂಖ್ಯೆ.
  • ಮಕ್ಕಳ ಸಂಖ್ಯೆ.
  • ಭಾಷಣಕಾರರ ಹೆಸರು ಮತ್ತು ಅವರು ಮಂಡಿಸಿದ ವಿಷಯ,
  • ಬಂದವರ ಅನಿಸಿಕೆ ಮತ್ತು ಅನುಭವಗಳು. ಅದರಿಂದಾಗಿ ವಿಶೇಷವಾಗಿ ಗಮನಿಸಿದ ವಿಷಯ. ಅವುಗಳಿಂದಾದ ಅಧ್ಯಾತ್ಮಿಕ ಉನ್ನತಿ.
  • ಸಮಾರಂಭದಲ್ಲಿ ಆದ ಆದಾಯ, ಖರ್ಚು ಮತ್ತು ಉಳಿದ ಹಣ.

ಆದುದರಿಂದ ಮೇಲ್ಕಂಡ ವಿಷಯದ ಬಗ್ಗೆ ಗಮನವಿರಿಸಿ ನಾವು ಕೈಗೊಳ್ಳುವ ಸಮಾರಂಭಗಳು ಕೇವಲ ಮೂರು. ಅವು ನೈಜವಾಗುವವು ಮತ್ತು ಎಲ್ಲರಿಗೂ ಲಾಭದಾಯಕವಾಗುವವು. ಇವುಗಳಲ್ಲಿ ನಮ್ಮ ಅಭಿರುಚಿಯ ಮೇರೆಗೆ ಏನಾದರೂ ಮಾರ್ಪಾಡು ಮಾಡಿದರೆ ಅವು ಯಾಂತ್ರಿಕವಾಗಿ ಬೆಲೆ ಇಲ್ಲದಂತಾಗುವವು. ನಾವೆಲ್ಲರೂ ಕೂಡಿ ಅಂತಹ ಯಾಂತ್ರಿಕತೆಗೆ ಯಾವ ಆಸ್ಪದವನ್ನು ಕೊಡದೆ ಪ್ರೇಮ ಭಕ್ತಿಗಳಿಂದ ಆಚರಿಸಿದರೆ ಎಲ್ಲರಿಗೂ ಲಾಭ.