1. ಅಭ್ಯಾಸಿಯು ಮಾಡಬೇಕಾದ ಕೆಲ ಅನಿವಾರ್ಯ ಅಂಶಗಳೂ ಇವೆ. ಮೊದಲನೆಯದಾಗಿ, ಆತ ಗುರುವನ್ನು ಸಂಪೂರ್ಣವಾಗಿ ನಂಬಿ ಪ್ರತಿಯೊಂದು ವಿಷಯದಲ್ಲಿಯೂ ಆತನೊಡನೆ ಸಹಕರಿಸಬೇಕು. ಹೀಗಾದಲ್ಲಿ ಆತ ದಿನದಿನಕ್ಕೆ ನಿಸ್ಸಂದೇಹವಾಗಿ ಪ್ರಗತಿಹೊಂದುತ್ತ ಹೋಗಿ ತಾನು ಬದಲಾವಣೆ ಹಾಗೂ ರೂಪಾಂತರ ಹೊಂದಿದ್ದನ್ನು ಅನುಭವಿಸಲಾರಂಭಿಸುತ್ತಾನೆ. ನಿಮ್ಮ ಸ್ತರದ ಜಾಗೃತ ಚೇತನವು ರೂಪಾಂತರ ಹೊಂದಿ ಉನ್ನತೋನ್ನತ ವಿಧದ ಪ್ರಜ್ಞೆಯನ್ನು ಪ್ರವೇಶಿಸಿಸುವ ಮೂಲಕ ಆತನ ಪ್ರಯಾಣವು ಆರಂಭವಾಗುತ್ತದೆ. ಸಾಮಾನ್ಯವಾಗಿ ಪ್ರಜ್ಞೆಯ ಮೂರುಅವಸ್ಥೆಗಳನ್ನು ಹೇಳಲಾಗುತ್ತದೆ. ಜಾಗೃತಾವಸ್ಥೆ, ಸುಪ್ತಾವಸ್ಥೆ ಮತ್ತು ಅತಿಜಾಗೃತಾವಸ್ಥೆ. ಹೇಗಿದ್ದರೂ ಇವು ವಿಶಾಲ ಭಾಗಗಳಾಗಿದ್ದು ಪ್ರತಿಯೊಂದು ಭಾಗವೂ ಇನ್ನೂ ಅಗಣಿತ ಸ್ತರಗಳನ್ನು ಹೊಂದಿದೆ. ನಿಮ್ಮ ಪ್ರಜ್ಞೆಯ ಕ್ರಿಯಾ ಪರಿಣಾಮವು ಸುಪ್ತಪ್ರಜ್ಞೆಯ ಮೇಲೆ ನೆಲೆಸಿ ಪ್ರಾರಬ್ದವನ್ನು ರೂಪಿಸುತ್ತದೆ. ಅದ್ದರಿಂದ ನಾವು ಕೈಕೊಳ್ಳಬೇಕಾದ ಮೊದಲ ಕಾರ್ಯವೆಂದರೆ, ನಿಮ್ಮ ಪ್ರಜ್ಞೆಯು ಶಕ್ತಿಯಾಗಿ ರೂಪಾಂತರಗೊಂಡು ಸುಪ್ತಚೇತನವನ್ನು ಉಜ್ವಲಾವಸ್ಥೆಗೆ ತರುವಂತೆ ಸರಿಯಾದ ಆಚಾರ-ವಿಚಾರಗಳಿಂದ ಅದನ್ನು ತಿದ್ದುವುದು. ಇದು ನಮ್ಮನ್ನು ಪರಾಪ್ರಜ್ಞೆಯ ಸ್ಥಿತಿಗೆ ತರುತ್ತದೆ.VR II41
  2. ನನ್ನ ಗುರುಗಳಂತೆ, ಧ್ಯಾನದ ಹೊರತಾಗಿ ಉಳಿದ ಯಾವ ವಿಷಯದ ಬಗೆಗೂ ಒತ್ತಾಯಪಡಿಸುವುದಿಲ್ಲ. ಆದರೆ, ಅವರು ತಾವು ಇದನ್ನು ಅನುಸರಿಸುವುದು ಅವಶ್ಯಕವೆಂದು ಭಾವಿಸುವುದಿಲ್ಲ ಎಂಬ ಮಾತನ್ನು ನಾನು ಹೇಳಲೇಬೇಕಾಗಿದೆ. ನಾನು ಇದನ್ನು ಏಕೆ ಮಾಡುತ್ತೇನೆ ? ಒಂದು ವೇಳೆ ನಾನು ಯಾವುದನ್ನಾದರೂ ಬೇಡವೆಂದಾಗ ಅವರು ಅದನ್ನು ಮಾಡಿದರೆ, ಅವರು ಕರ್ತವ್ಯ ಭ್ರಷ್ಟರೆಂದು ಸಿದ್ಧವಾಗಿ ಪಾಪವೆನಿಸುತ್ತದೆ. ಬೋಧನೆಯ ನಿಜವಾದ ಅರ್ಥವನ್ನು ಸೂಕ್ಷವಾಗಿ ನೋಡಿದರೆ ಇದು ನಿಮಗೆ ತಿಳಿಯುವುದು. ಅವರು ಯಾವ ರೀತಿಯಲ್ಲಿಯೂ ಪಾಪಕರ್ಮಗಳಲ್ಲಿ ತೊಡಗ ಕೂಡದೆಂದು ನನ್ನ ಇಚ್ಚೆ. ಅಭ್ಯಾಸಿಗಳು ನನ್ನ ಆಶಯವನ್ನು ತಿಳಿದುಕೊಳ್ಳುತ್ತಾರೆ. ಆದರೆ ಅದನ್ನು ಅನುಸರಿಸುವುದಿಲ್ಲ. VR II 140
  3. “ನಿನ್ನೊಳಗೆ ಶೋಧಿಸು; ಸ್ವತ: ನಿನ್ನಲ್ಲಿಯೆ ನೀನು ಪಡೆಯುವಿ”. ಸ್ವಾಮಿಯು ಅಲ್ಲಿದ್ದಾನೆ, ಯಾವಾಗ? ನೀನು ಅಲ್ಲಿಲ್ಲದಾಗ ಮಾತ್ರ.VR II 161
  4. ಆದರೆ ಧ್ಯೇಯಕ್ಕಾಗಿ ತಳಮಳವೊಂದೇ ಸಾಲದು. ತುಂಬ ಉನ್ನತ ಮಟ್ಟಕ್ಕೇರಿದ ಜೀವಿಗಳ ನಿಕಟ ಸಂಬಂಧವೂ ಅತ್ಯಗತ್ಯ. ಇದೂ ದೊರೆಯಿತೆನ್ನಿರಿ. ಆದರೂ ಒಂದು ವಿಷಯದ ಕೊರತೆ ಉಳಿದೇ ಉಳಿಯುವುದು. ಅದೇ ಅಭ್ಯಾಸ ಅಥವಾ ಸಾಧನೆ. ಹೀಗೆ ,ಈ ಎಲ್ಲ ಸಂಗತಿಗಳು ಕೂಡಿದಾಗಲೇ ಅಂತಿಮ ಗುರಿಯ ಸಾಕ್ಷಾತ್ಕಾರಕ್ಕೆ ಸಹಾಯವಾಗುವುದು.VR I 14
  5. ಅಭ್ಯಾಸಿಯು ತನ್ನ ಉತ್ಕಂಠತೆಯನ್ನು ತೀವ್ರಗೊಳಿಸುವುದರ ಜೊತೆಗೆ, ಶಾಲೆಯ ವಿದ್ತಾರ್ಥಿಯು ತನ್ನ ಉಪಾಧ್ಯಾಯನಿಗೆ ವಿಧೇಯನಾಗಿರುವಂತೆ, ತಾನು ಮಾರ್ಗದರ್ಶಿಯ ಆಜ್ಞಾಧಾರಕನಾಗಿರಬೇಕು. VR I 24
  6. ತನಗಾಗಲಿ ತಾನು ಸೇರಿದ ಸಂಸ್ಥೆಗಾಗಲಿ ಕೆಟ್ಟ  ಹೆಸರನ್ನು ತರುವ ಯಾವ ಕೆಲಸವನ್ನೂ ಮಾಡಬಾರದು. ಆತನ ಜೀವನ ಕ್ರಮವೂ ಪರರೊಂದಿಗಿನ ವ್ಯವಹಾರವೂ ಸರಳವಾಗಿದ್ದು ವಿನಯದಿಂದಲೂ ಸೌಜನ್ಯದಿಂದಲೂ ಕೂಡಿರಬೇಕು; ಪರರ ಬಗೆಗಿನ ಅನುಕಂಪ ಹಾಗೂ ಪ್ರೇಮದ ಭಾವನೆಗಳಿಂದ ಪ್ರೇರಿತವಾಗಿರಬೇಕು. ಇದರಿಂದ ತನಗೂ ಶಾಂತಿ –ಸಮಾಧಾನಗಳು ದೊರೆಯುವವು. ನಿರಂತರವಾದ ದೈವೀಪ್ರಜ್ಞೆಯಲ್ಲಿ ಲೀನವಾದ ಸರಳ ಹಾಗೂ ಪವಿತ್ರ ಜೀವನವನ್ನು ನಡೆಸಬೇಕು. ಜೊತೆಗೆ ಎಲ್ಲ ಸಾಂಸಾರಿಕ ಹೊಣೆಗಳನ್ನೂ ಕರ್ತವ್ಯಗಳನ್ನೂ ನಿರ್ವಹಿಸಬೇಕು.VR I 78.
  7. ಅದ್ಭುತ ಪರಿಣಾಮಗಳನ್ನು ಪಡೆಯಲು ಇಂದು ಅತ್ಯಲ್ಪ ತ್ಯಾಗವೇ ಸಾಕಾಗಬಹುದು.VR I 31.
  8. ತನ್ನ ಅಂತರಾತ್ಮದ ಕಡೆಗೆ ದೃಷ್ಟಿ ಹೊರಳಿದಾಗಲೇ ಮನುಷ್ಯನು ನಿಜವಾದ ಮನುಷ್ಯನಾಗುವನು. ಅದರಲ್ಲಿಯೆ ಸತ್ಯದ ಬಗೆಗಿನ ನಿಜವಾದ ಶೋಧವಿರುವುದು.VR I 82
  9. ಯಾರು ತಮ್ಮಲ್ಲಿ  ಅವನತಿಯ ಸ್ಥಿತಿಯನ್ನು ಅನುಭವಿಸುವರೋ ಅವರೇ ಉನ್ನತಿಯ ಮೆಟ್ಟಿಲುಗಳನ್ನು ಏರ ಬಲ್ಲರು. VR 181
  10. ನಾವು ಎಲ್ಲಿಯವರೆಗೆ ನಾವು ಉತ್ಕೃಷ್ಟ ಹಾಗೂ ಹೆಚ್ಚಿನ ಶಕ್ತಿಯುಳ್ಳ ಒಂದು ವಸ್ತುವನ್ನು ನಮ್ಮ ದೃಷ್ಟಿಯಲ್ಲಿರಿಸಿ ಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಹಂಭಾವದಿಂದ ಮೇಲಕ್ಕೇರಲಾರೆವು.VR I 275
  11. ಯೋಗ್ಯ ಉಪಾಯಗಳು ಸಿಗುವವರೆಗೆ ದೇವತೆಗಳ ಪೂಜೆಯನ್ನು ಅನುಸರಿಸಬಹುದು. ಆದರೆ , ಪರತತ್ತ್ವದ ಸಾಕ್ಷಾತ್ಕಾರಕ್ಕಾಗಿ ಸರಿಯಾದ ದಾರಿ ಸಿಕ್ಕ ಮೇಲೆ ಮೊದಲಿನದನ್ನು ಬಿಟ್ಟುಕೊಟ್ಟು ಆ ಉತ್ತಮ ಹಾಗೂ ಉನ್ನತವಾದ ನೇರ ಮಾರ್ಗವನ್ನು ಅನುಸರಿಸಬೇಕು.VR I 236
  12. ಸಾಧಕನು ತನ್ನ ಇಛ್ಛಾಶಕ್ತಿಯಿಂದ ಖಂಡಿತವಾಗಿಯೂ ಈ ಜಾಲವನ್ನು ಛೇದಿಸುವೆನೆಂದು ಸಂಕಲ್ಪ ಮಾಡಬೇಕು ಮತ್ತು ಪ್ರಯತ್ನದಲ್ಲಿ ನಿರತನಾಗಿರಬೇಕು.TM 40
  13. ನಮ್ಮ ಕಲ್ಪನೆಯಿಂದಲೇ ಎಲ್ಲ ಬಂಧು ಭಗಿನಿಯರೂ ಪರಿಕೀಯರಾಗಿ ಕಾಣುತ್ತಿರುವರು. ನಮ್ಮ ಸ್ವಾರ್ಥ ಭಾವನೆಯಿಂದಾಗಿ ಅವರೆಲ್ಲರೂ ಬೇರೆಯೆಂಬಂತಾದರು.TM 45
  14. ಈಗ, ಒಬ್ಬ ಸಹೋದರನನ್ನು ಸಹೋದರನಾಗಿ ತಿಳಿದುಕೊಳ್ಳುವುದು ಎಂದರೆ ವೈಯಕ್ತಿಕ ಜಾಲವನ್ನು ಛೇದಿಸಿದಂತೆಯೆ. ಈ ಅಭ್ಯಾಸದಿಂದಲೇ ಭ್ರಾತೃಭಾವ ಮೂಡಿ ಬಂದು ನಾವೆಲ್ಲರೂ ಒಬ್ಬರಿಗೊಬ್ಬರು ಸಮೀಪ ಬರುವೆವು.TM 46
  15. ಈ ಕಾರ್ಯಕ್ಕೆ ಬೇಕಾದ ಮಟ್ಟಕ್ಕೆ ಯಾವನು ಏರಿಬರುವನೋ ಅವನಿಗೆ ಮಾತ್ರ ನಿಜವಾದ ಜೀವನ ಸುಧೆ ಲಭಿಸಬಲ್ಲುದು.RD 11
  16. ನಮ್ಮ ಮನಸ್ಸು ಸಮತೋಲಸ್ಥಿತಿಯನ್ನು ಹೊಂದಿದರೆ ಪರಿಸ್ಥಿತಿ ಮತ್ತು ವಾತಾವರಣಗಳು ಅದರ ಮೇಲೆ ಪರಿಣಾಮ ಮಾಡಲಾರವು.RD 23.
  17. ಪ್ರಥಮ ಸೋಪಾನದಲ್ಲಿಯೇ ಕೈಕೊಳ್ಳಲಾದ ದೃಢ ಸಂಕಲ್ಪವನ್ನು ಕೊನೆಯವರೆಗೂ ಇರಿಸಿಕೊಂಡರೆ ಪೂರ್ಣ ಯಶವು ದೊರಯದಿರದು.RD 31
  18. ಮನುಷ್ಯನು ದೃಢವಾದ ಮನಸ್ಸಿನಿಂದ ಈ ಕ್ಷೇತ್ರದಲ್ಲಿ ಕಾಲಿಟ್ಟರೆ ಅರ್ಧ ದಾರಿಯನ್ನು ನಡೆದಂತೆಯೆ.RD 31
  19. ನಾವು ಸಾಕ್ಷಾತ್ಕಾರದ ಮಾರ್ಗದಲ್ಲಿ ಧೀರಯೋಧನಂತೆ ಅಡೆತಡೆಗಳನ್ನು ಲೆಕ್ಕಿಸದೆ ಪೂರ್ಣ ವಿಶ್ವಾಸ ಶ್ರದ್ಧೆಗಳಿಂದ ಮುನ್ನಡೆಯಬೇಕು. ಖಿನ್ನತೆ- ನಿರಾಶೆಗಳು ನಮ್ಮ ಸಂಕಲ್ಪವನ್ನು ದೃಢತೆಯನ್ನು ನಾಶಗೊಳಿಸುತ್ತವೆ. ನಾವು ಆತಂಕಗಳನ್ನು ಧೈರ್ಯದಿಂದ ಎದುರಿಸಬೇಕಲ್ಲದೆ ನಿರಾಶೆಗೆ ಎಡಗೊಡಬಾರದು. ನಿರಾಶೆಯು ಬಹು ದೊಡ್ಡ ದೋಷವೂ ಆಧ್ಯಾತ್ಮಿಕ ಜೀವನಕ್ಕೆ ಬಲುಘಾತಕವಾದ ವಿಷವೂ ಆಗಿದೆ.RD 33
  20. ಸಮತೆಯನ್ನು ಬೆಳೆಸಿಕೊಳ್ಳಲು ನಮ್ಮ ಜೀವನದ ಬಾಹ್ಯ ರೀತಿಗಳ ಕಡೆಗೂ ನಾವು ವಿಶೇಷ ಲಕ್ಷಕೊಡಬೇಕು. ಉದಾಹರಣೆಗೆ, ಮೃದುವಾದ ನಮ್ರವಾದ ಭಾಷೆ, ಸಭ್ಯವ್ಯವಹಾರ, ಜೊತೆಗಾರರೊಂದಿಗೆ ಪ್ರೇಮ-ಸಹಾನುಭೂತಿಗಳು, ಹಿರಿಯರಿಗೆ ಗೌರವ ಪ್ರತೀಕಾರರಹಿತ ಸ್ವಭಾವ ಮುಂತಾದವು.RD 34
  21. ಅಯೋಗ್ಯ ಗುರುವಿನ ಮಾರ್ಗದರ್ಶನಕ್ಕೊಗಾಗುವುದಕ್ಕಿಂತ ಇಡೀ ಜೀವನ ಗುರುವಿಲ್ಲದೇ ಇರುವುದು ಲೇಸು.RD 52
  22. ನಮಗಾಗಿ ಆತನು ವೃಥಾ ಶ್ರಮವಹಿಸದಂತೆ ನೋಡಿಕೊಂಡು ನಮ್ಮ ಪ್ರಗತಿಗಾಗಿ ಶಕ್ಯವಿದ್ದಷ್ಟು ದುಡಿಯ ತಕ್ಕುದಲ್ಲದೆ ನಮಗೆ ಸೇರಿದ ಈ ಕರ್ತವ್ಯವನ್ನು ಎಂದಿಗೂ ಕಡೆಗಣಿಸಬಾರದು.
  23. ಸಂಕಲ್ಪ, ಶ್ರದ್ಧೆ ಹಾಗೂ ವಿಶ್ವಾಸ ಇವು ಮೂರು ಸಾಕ್ಷಾತ್ಕಾರದ ದಾರಿಯಲ್ಲಿ ಯಶಸ್ಸನ್ನು ಸುಗಮಗೊಳಿಸಲು ಸಹಾಯಕ ಮಾಡುವ ಪ್ರಾರ್ಥಮಿಕ ಸಂಗತಿಗಳು.RD 66
  24. ಮಾರ್ಗದರ್ಶಿಯ ನಿಜವಾದ ಯೊಗ್ಯತೆಯನ್ನು ಕಂಡುಹಿಡಿಯಲುನಾವು ಆತನೊಂದಿಗೆ ಕೆಲಕಾಲವಿದ್ದು ನಮ್ಮ ಅಳವಿನೊಳಗಿನ ಎಲ್ಲ ಸಾಧನಗಳಿಂದಲೂ ಆತನನ್ನು ಪರೀಕ್ಷಿಸಬೇಕು. ಬುದ್ಧಿ ಹಾಗೂ ಅನುಭವಗಳಿಂದ ಆತನ ಸಾಮರ್ಥ್ಯಗಳ ಬಗ್ಗೆ ನಮಗೆ ಮನವರಿಕೆಯಾದ ಮೇಲೆ ಆತನನ್ನು ಗುರುವೆಂದು ಸ್ವೀಕರಿಸಿ ಆತನ ಮಾರ್ಗದರ್ಶನಕ್ಕೊಳಗಾಗಬೇಕು.
  25. ನಾವು ನಮ್ಮ ಲಕ್ಷವನ್ನು ಭಗವಂತನ ಕಡೆಗೆ ಹೊರಳಿಸಿ ಸಾಕ್ಷಾತ್ಕಾರವನ್ನೇ ಜೀವನದ ಮುಖ್ಯ ಗುರಿಯನ್ನಾಗಿ ಭಾವಿಸಿದರೆ ಸ್ವಾಭಾವಿಕವಾಗಿಯೆ ನಾವು ಪ್ರಪಂಚದ ಎಲ್ಲ ವಸ್ತುಗಳಿಗಿಂತ ಅದಕ್ಕೆ ಪ್ರಮುಖ ಸ್ಥಾನವನ್ನು ಕೊಡಲಾರಂಭಿಸುವೆವು.RD 72.
  26. ಆಧ್ಯಾತ್ಮದ ದೇಗುಲವನ್ನು ಕಟ್ಟುವುದಕ್ಕೆ ಸೇವೆ ಮತ್ತು ತ್ಯಾಗ – ಇವೆರಡು ಮುಖ್ಯ ಸಾಧನಗಳಾಗಿವೆ. ಪ್ರೇಮವಂತು ಅಡಿಗಲ್ಲಿನಂತೆ ಇದ್ದೇ ಇರಬೇಕು. ಯಾವ ಸೇವೆಯನ್ನೇ ಆಗಲಿ, ಸ್ವಾರ್ಥವಿಲ್ಲದೇ ಮಾಡಿದರೆ ಅದು ಸಹಾಯಕವಾಗುವುದು. ಸೇವೆಯಲ್ಲಿ ಪೂಜೆಯ ಭಾವ ಅಡಕವಾಗಿದೆ. ಸಹಬಾಂಧವವನಿಗೆ ಮಾಡಿದ ಸೇವೆಯು, ಸ್ವಾರ್ಥದಿಂದ ಪ್ರೇರಿತವಾಗಿರದಿದ್ದರೆ, ನಿಜವಾದ ಅರ್ಥದಲ್ಲಿ ದೇವರ ಸೇವೆಯೆ.
  27. ಶಿಷ್ಯನು ತನ್ನ ಸರ್ವಸ್ವವನ್ನೂ ಗುರುವಿಗೆ ಸಮರ್ಪಿಸಿ ಆತನ ಮಾನಸಿಕವಲಯವನ್ನು ಪ್ರವೇಶಿಸಿದ್ದಾದರೆ ಅವನಿಗೆ ದಿವ್ಯಲೋಕದಲ್ಲಿ ಜನ್ಮನೀಡಲು ಗುರುವಿಗೆ ಕೇವಲ ಏಳುತಿಂಗಳುಗಳು ಬೇಕಾಗುವವು. ಆದರೆ ಗುರುವಿನ ಮಾನಸಿಕ ಕ್ಷೇತ್ರದಲ್ಲಿದ್ದಾಗ ಶಿಷ್ಯನಿಗೆ ತನ್ನ ವಿಚಾರಗಳ ಮತ್ತು ಅನುಭವಗಳ ಅರಿವು ಇನ್ನೂ ಇರುವುದರಿಂದ ಸಾಮಾನ್ಯವಾಗಿ ಈ ಕ್ರಮವು ಬಹುಕಾಲದವರೆಗೆ ತಡೆಹಿಡಿಯಲ್ಪಡುತ್ತದೆ.RD 81
  28. ಕೆಲ ಕಾಲ ಪದೇಪದೇ ಆತನ ಸಹವಾಸವು ನಮ್ಮನ್ನು ಆ ಮಹಾತ್ಮನೊಂದಿಗೆ ತೀರ ಹತ್ತಿರದ ಸಂಬಂಧವನ್ನುಂಟು ಮಾಡುವುದು ಆಗ ನಮ್ಮ ಹೃದಯದಲ್ಲಿ ಆತನ ಶ್ರೇಷ್ಠತೆಯು ನೆಲೆಸಲಾರಂಭಿಸುವುದು.RD 82
  29. ನಮಗೆ ಆತನ ಶ್ರೇಷ್ಠ ಸಾಮರ್ಥ್ಯಗಳ ಬಗ್ಗೆ ಸಂಪೂರ್ಣ ಮನವರಿಕೆಯಾದಾಗಲೇ ನಿಜವಾದ ಅರ್ಥದಲ್ಲಿ ನಮ್ಮ ಅಧೀನತೆಯು ಆರಂಭವಾಗುವುದು.RD 82
  30. ಅಭ್ಯಾಸಿಗೆ ತನ್ನಲ್ಲಿಯೇ ಇರುವ ಲಕ್ಷವನ್ನು ಶೋಧಿಸುವುದೊಂದೇ ಮುಖ್ಯ ವಿಷಯವಾಗಿರುತ್ತದೆ. ವೈರಾಗ್ಯವನ್ನು ಸಂಪಾದಿಸಲು ಅನೇಕ ಜನರು ಅತ್ಯಂತ ಪ್ರಯಾಸಪಡುತ್ತಿರುವರು. ಅದರ ಪ್ರಾಪ್ತಿಯು ಎಷ್ಟು ಸುಲಭ! ಆತನಿಗೆ ತನ್ನ ಲಕ್ಷವನ್ನುಳಿದು ಬೇರೆ ಯಾವ ವಿಚಾರವೂ ಇಲ್ಲವಾದುದರಿಂದ ಇಟ್ಟುಕೊಳ್ಳಲು ಅಯೋಗ್ಯವಾದುದೆಲ್ಲವನ್ನೂ ಆತನು ಕಳೆದುಕೊಂಡಿದ್ದಾನೆ ರಾಜಯೋಗದ ಆರಂಭದ ಅಭ್ಯಾಸದಿಂದಲೇ ನೀವು ವೈರಾಗ್ಯವನ್ನು ಸಂಪಾದಿಸಿದಿರಿERY 9
  31. ಯಾರು ಪ್ರಾಣಾಹುತಿಯ ಮೂಲಕ ಅಭ್ಯಾಸಿಯನ್ನು ಪೂರ್ಣ ಮಾರ್ಪಡಿಸಬಲ್ಲರೋ ಆತನೇ ಸಮರ್ಥಗುರು. ಗುರು ತಾನು ಸ್ವತ:  ದೈವಿಕತೆಯಲ್ಲಿ ಮುಳುಗಿರಬೇಕು. ಅಂಥವನೇ ನಿಜವಾಗಿಯೂ ಗುರು. ಇಂಥ ಗುರು ನಮಗೆ ದೊರೆತರೆ ವರ್ಷಗಟ್ಟಲೆಯ ಕಾಲ ಉಳಿತಾಯವಾಗುವುದು. ಇಂಥ ಗುರು ದೊರೆಯುವುದು ಬಹಳ ಕಠಿಣವೆಂದು ಜನರು ಹೇಳುವರು. ಆದರೆ ಯೊಗ್ಯ ಶಿಷ್ಯನು ದೊರೆಯುವುದೂ ಅಷ್ಟೇ ಕಠಿಣವೆಂದು ನಾನು ಹೇಳಬಲ್ಲೆ.AB I P24.
  32. ಯಾವಾಗಲೂ ಶಿಷ್ಯನ ಸಾಮರ್ಥ್ಯವೇ ಗುರುವನ್ನು ತನ್ನೆಡೆ ಆಕರ್ಷಿಸುತ್ತದೆ ಮತ್ತು ಈ ಸಾಮರ್ಥ್ಯವು ಮೊದಲು ಅನೇಕ ಘಟ್ಟಗಳನ್ನು ದಾಟಿದಾತನಲ್ಲಿಯೇ ಉಂಟಾಗುವುದು. ಇಲ್ಲಿ ಗುರು ಅದೆಷ್ಟು ವಿವಶನಾಗುವನೆಂದರೆ ಆತನನ್ನು ಬದಿಗಿರಿಸಿ ತಾನು ಇಚ್ಛೆಪಟ್ಟರೂ ಇತರರಿಗೆ ಆಧ್ಯಾತ್ಮಿಕ ಉನ್ನತಿಯನ್ನು ಕೊಡಲಾರ. ಇದು ಭಗವಂತನ ವರದಾನ ಇದರ ಮೇಲೆ ಒಬ್ಬನ(ಗುರುವಿನ) ನಿಯಂತ್ರಣವಿಲ್ಲ.AB II VOL I P 54.
  33. ಗುರುವು ಯಾರಲ್ಲಿಯೂ ಆಸಕ್ತನಾಗಿರುವುದಿಲ್ಲ. ಯಾರನ್ನೂ ದ್ವೇಷಿಸುವುದೂ ಇಲ್ಲ. ಆತನನ್ನು (ಗುರುವನ್ನು) ತನ್ನವನನ್ನಾಗಿ ಮಾಡಿಕೊಳ್ಳುವುದು ಶಿಷ್ಯನ ಸಾಮರ್ಥ್ಯವನ್ನವಲಂಬಿಸಿದೆ.ABII VOL I P 98
  34. ಭಾರತ ದೇಶದಲ್ಲಿ ಅನೇಕಾನೇಕ ವಿಧಾನಗಳು ಪ್ರಚಲಿತವಿವೆ. ಮತ್ತು ಅವು ಸರಿಯಿರಲೂಬಹುದು. ಆದರೆ ‘ಸರಿ’ ಎಂದರೇನು ? ಯಾವುದು ನಿಮ್ಮನ್ನು ನಿರ್ವಿಕಾರ ಸ್ಥಿತಿಯಲ್ಲಿಡಬಹುದೋ ಅಂಥದು. ಸ್ಪಂದನಗಳೆಲ್ಲ ದೈವಮಯವಾಗಬೇಕು. ಅದಾಗುವುದೆಂತು ? ಜಡತ್ವವು ತೊಲಗಿ ಹೋದಾಗ ಮಾತ್ರ ದೃಶ್ಯದ ಹಿಂದಿರುವ ‘ವಸ್ತು’ವು ಗೋಚರವಾಗುತ್ತದೆ. ಯಾವುದಾದರೊಂದು ಪದ್ಧತಿಯು ಇಚ್ಛಿತ ಫಲಿತಾಂಶವನ್ನು ನೀಡುವುದಾದರೆ, ಅದು ಅಪ್ಪಟ, ಯೋಗ್ಯ ಮತ್ತು ಸಹಜವಾದುದು (ಇರಬೇಕು). ಅಷ್ಟೊಂದು ಪದ್ಧತಿಗಳಲ್ಲಿ ಅಂತಹ ಸ್ಥಿತಿಯನ್ನುಂಟುಮಾಡಬಹುದಾದ ಒಂದನ್ನು ನೀವೇ ಹುಡುಕಿಕೊಳ್ಳಬೇಕು. ನೀವು ಅದಕ್ಕೋಸ್ಕರ ನಿಜವಾಗಿ ಪ್ರಯತ್ನಿಸುವವರಾಗಿದ್ದು, ನಿಮಗೊಬ್ಬ ನಿಜವಾದ ಗುರುವು ದೊರೆತರೆ, ಕೆಲಸವು ಅತ್ಯಂತ ಸುಲಭವಾಗುವುದಲ್ಲದೆ, ಬಹಳಷ್ಟು ಸಮಯವೂ ಉಳಿಯುತ್ತದೆ ; ಪರಿಶ್ರಮವೂ ತಪ್ಪುತ್ತದೆ. ಅಂತಹ ಗುರುವನ್ನು ಪಡೆಯುವುದು ಹೇಗೆ ?” ಎಂದು ಜನರು ಕೇಳಬಹುದು. ಅದಕ್ಕುತ್ತರವಾಗಿ, ಮೇಲೆ ಹೇಳಿದುದನ್ನು ತಪ್ಪದೆ ಪಾಲಿಸುವ ಶಿಷ್ಯನನ್ನು ಪಡೆಯುವುದು ಹೇಗೆ ?” ಎಂದು ಕೇಳಿಯೇನು. ವಿಸ್ತಾರವಾದ ಸಮುದ್ರವನ್ನು ಪ್ರವೇಶಿಸಲು ಈಜುಗಾರರೂ ಬೇಕು, ಈಜುವುದೂ ಬೇಕು – ಎಂದು ನಾನು ಹೇಳಲೇಬೇಕು. ಹೀಗೆ, ಈಜುವುದು ಈಜುಗಾರನ ಕೆಲಸ ಮತ್ತು ಈಜು ಕಲಿಸುವುದು ಗುರುವಿನ ಕೆಲಸ,ME P 69
  35. ನಾವೆಲ್ಲರೂ ಸಾಕ್ಷಾತ್ಕಾರವನ್ನು ಬಯಸುತ್ತೇವೆ ಆದರೆ ಅದಕ್ಕೋಸ್ಕರ ಉತ್ಕಟ ಹಂಬಲ ನಮ್ಮಲ್ಲಿಲ್ಲ. ನಾವೆಲ್ಲರೂ ನಮ್ಮ ಮೂಲಸ್ಥಿತಿಗೆ ಮರಳುವಂತಾಗಲಿ ಮತ್ತು ಪ್ರಾಪಂಚಿಕ ಹಾಗೂ ದೈವೀಜೀವನದಲ್ಲಿರುವ ಅಂತರವನ್ನು ಮನಗಾಣುವಂತಾಗಲೆಂದೂ ಪ್ರಾರ್ಥಿಸುತ್ತೇನೆ.ME P 70
  36. ವಿಕಸನದ ಚರಮಾವಸ್ಥೆಗೆ ತಮ್ಮನ್ನು ಕೊಂಡೊಯ್ಯಲು, ಅವರಿಗೆ ಬೋಧಿಸಲಾದ ಅಭ್ಯಾಸದ ಅನುಷ್ಠಾನದ ಅಂಗಗಳಷ್ಟೇ ಸಾಕೆಂಬುದು ಅಭ್ಯಾಸಿಗಳಲ್ಲಿ ತುಂಬಿರುವ ಸಾಮಾನ್ಯ ಕಲ್ಪನೆ. ಅವರ ಚಿಂತನೆಯು ಅದರಿಂದಾಚೆಗೆ ಹೋಗಲೊಲ್ಲದು. ರಾಜಯೋಗವು ನಮ್ಮ ಪದ್ದತಿಯ ಬುನಾದಿಯೆಂದು ನಾವು ಸೂಚಿಸುತ್ತೇವೆ. ಅದು ಸರಿ. ಆದರೆ ಅವರ ಕಲ್ಪನಾ ಲಹರಿಯು ಅದರ ಆಳವನ್ನು ತಲುಪದೆ, ಕೇವಲ ವಿಧಿನಿಯಮಗಳ ಅನುಷ್ಠಾನಕ್ಕಷ್ಟೆ ನಿಂತುಬಿಡುತ್ತದೆ. ಸಹಜಮಾರ್ಗದಲ್ಲಿ ಪ್ರಾಣಾಹುತಿಯ ಕಂಪು ಅಂತರಾಳದಲ್ಲಿ ನೆಲಸುವುದೆಂಬುದಂತೂ ಖಂಡಿತ. ಆದಾಗ್ಯೂ, ಇನ್ನೂ, ಹಿಂದೆ ಉಳಿಯುವ ಅಂಶಗಳೆಂದರೆ ಪ್ರೇಮ ಮತ್ತು ಭಕ್ತಿ, ಧ್ಯಾನದ ಕ್ರಿಯೆಯೊಂದಿಗೇ ಇವೂ ಅಂತರ್ಗತವಾಗಿರಬೇಕಾದುದು ಅತ್ಯಾವಶ್ಯಕ. (ಸಾಧನೆಯ) ಈ ಎರಡೂ ಮುಖಗಳು (ಧ್ಯಾನ, ಹಾಗೂ ಪ್ರೇಮ ಮತ್ತು ಭಕ್ತಿ) ಒಂದಾಗಿ ಬೆರೆಯಬೇಕೆಂಬುದನ್ನು ನಾನು ಒತ್ತಿ ಹೇಳಲೇಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಸಾಧಕನು ತನ್ನ ಗುರಿಯನ್ನು ಶೀಘ್ರವಾಗಿ ತಲುಪಲು ಶಕ್ತನಾಗುವನು. ಈ ಅಂಶಗಳನ್ನು ನಿಮ್ಮೊಳಗೆ ಉಂಟು ಮಾಡಿಕೊಳ್ಳಬೇಕಾದುದು ನಿಮ್ಮ ಹೊಣೆ.ME P 80
  37. ದೇವರಿಗೆ ಮನಸ್ಸೆಂಬುದು ಇಲ್ಲವಾದ ಕಾರಣ, ಪರತತ್ತ್ವದೊಂದಿಗೆ ಸಂಬಂಧ ಸ್ಥಾಪಿಸಲು ವಿಕಾಸ ಹೊಂದಿರುವ ಮಾನವ ಮನಸ್ಸಿನ ಅವಶ್ಯಕತೆಯಿದೆ. ಈ ವಿಷಯದಲ್ಲಿ ಇನ್ನೂ ಸ್ವಲ್ಪ ಹೇಳಬಯಸುತ್ತೇನೆ. ಒಂದು ವೇಳೆ , ದೇವರು ಅಥವಾ ಬ್ರಹ್ಮಕ್ಕೆ ಮನಸ್ಸಿದೆ ಎಂದು ಭಾವಿಸಿದರೆ, ಅಲ್ಲಿ ಮನಸ್ಸಿನ ಕಾರ್ಯವೂ ನಡೆಯಲೇಬೇಕು. ಆಗ ಆತನೂ ಕೂಡ ತನ್ನ ಕರ್ಮಫಲಗಳನ್ನು ಅನುಭವಿಸಬೇಕಾಗುವುದು. ಆದರೆ ಅವನು ಇಂತಹ ಪರಿಣಾಮಗಳಿಂದ ಮುಕ್ತನೆಂದು ಎಲ್ಲರೂ ಒಪ್ಪುತ್ತಾರೆ. ಇದರ ಅರ್ಥ ಅಲ್ಲಿ ಮನಸ್ಸಿನ ಕಾರ್ಯ ಇಲ್ಲವೆಂದಾಯಿತು. ಎಂದರೆ , ಕೊನೆಗೂ ಅಲ್ಲಿ ಮನಸ್ಸೂ ಇಲ್ಲ ಎಂದಾಯಿತು. ನನ್ನ ಅಭಿಪ್ರಾಯದಲ್ಲಿ ಈ ವೈಚಾರಿಕ ಗೊಂದಲ ದೇವರ ಬಗೆಗಿನ ನಾನಾ ಕಲ್ಪನೆಗಳಿಂದಲೇ ಉಂಟಾಗಿರಬೇಕು. ಈ ಕಲ್ಪನೆಯಂತೆ ದೇವರ ಬಗೆಗೆ ಮಾತನಾಡುವಾಗ ದೇವರು ಎಂದರೆ, ತನ್ನ ಮೂಲ ಅವಸ್ಥೆಯಲ್ಲಿ ಎಲ್ಲದರ ಆಚೆಗೆ, ಶಕ್ತಿ, ಕ್ರಿಯೆ, ಅಥವಾ ಪ್ರಜ್ಞೆಗಿಂತಲೂ ಆಚೆಗಿರುವ ಬ್ರಹ್ಮ ಎಂದು ನನ್ನ ಇಂಗಿತ. ಇನ್ನು ಮನಸ್ಸಿನ ವಿಷಯವಂತೂ ಹೇಳುವುದೇ ಬೇಡಾ. ಈಗ ಅದು ತನ್ನ ಕಾರ್ಯಸಾಧನವನ್ನಾಗಿ ಮಾಡಿಕೊಂಡ ಮಾನವ ಮನಸ್ಸು ಸಂಪೂರ್ಣವಾಗಿ ನಿರಸನ ಹೊಂದಿದ್ದು ತನ್ನದೇ ಆದ ವೈಯಕ್ತಿಕ ಕಾರ್ಯವನ್ನು ಹೊಂದಿರದೆ ಅದರ ಮೂಲಕ ಬರುವುದೆಲ್ಲವೂ ದೈವಿಕವೇ ಆಗಿದೆ. ಆದ್ದರಿಂದ ಅದು ದೇವರ ಉಪಕರಣದಂತೆ ಕಾರ್ಯಮಾಡುತ್ತದೆ.VR II 216.
  38. ಇಂತಹ ಉನ್ನತ ಸಾಮರ್ಥ್ಯವನ್ನು ಹೊಂದಿದ ವ್ಯಕ್ತಿಗಳು ಬಹಳ ವಿರಳವಾದರೂ ಅವರು ಎಲ್ಲ ಕಾಲಗಳಲ್ಲಿ ಅಸ್ತಿತ್ವದಲ್ಲಿ ಇದ್ದೇ ಇರುತ್ತಾರೆ. ಆದರೆ ಅವರನ್ನು ಗುರುತಿಸುವುದು ನಿಜವಾದ ಕಷ್ಟದ ಕಾರ್ಯವಾಗಿದ್ದು. ಅದು ಕೆಲಮಟ್ಟಿಗೆ ಒಬ್ಬನ ಪೂರ್ವ ಸಂಸ್ಕಾರಗಳನ್ನು ಕೂಡ ಅವಲಂಬಿಸಿದೆ. ಅಲ್ಲಿ ಇನ್ನೂ ಒಂದು ತೊಂದರೆಯಿದೆ. ಒಂದು ವೇಳೆ ಇಂತಹ ದಿವ್ಯಾತ್ಮನ ಸಂಪರ್ಕದಲ್ಲಿ ಹೇಗೋ ಬಂದರೂ ಆತನ್ನಲ್ಲಿ ಯಾವ ಆಕರ್ಷಣೆಯೂ ಇಲ್ಲದಿರುವುದರಿಂದ ನಮ್ಮಲ್ಲಿಯ ಬಹುತೇಕ ಜನ ಆತನನ್ನು ಸುಲಭವಾಗಿ ಒಪ್ಪಲಾರರು. ಇದೆಲ್ಲವೂ ಅವರನ್ನು ಸುತ್ತುವರೆದ ಹಾಗೂ ತನ್ನಂತೆಯೆ ನಶ್ವರವಾಗಿರುವ ವಸ್ತುಗಳಲ್ಲಿಯೆರಮಿಸುವಂತೆ ಮಾಡುವ ಮಾಯೆಯ ಪರಿಣಾಮ.VR II 16
  39. ಆಲಸ್ಯವು ಅರ್ಬುದರೋಗವನ್ನು ಬೆಳೆಸಬಲ್ಲದೆಂದು ನನ್ನ ವಿಚಿತ್ರ ಅನುಭವ. ತಾನೇ ತನಗೆ ಶರಣಾಗುವುದು ಎಂಬ ಅಭಿಪ್ರಾಯಕ್ಕೆ ನಾನು ಬಂದಿದ್ದೇನೆ.  ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಒಬ್ಬ ಆಲಸಿಯು ತನಗೇ ತಾನೇ ಶರಣಾಗುತ್ತಾನೆ. ಇದು ಆಧ್ಯಾತ್ಮ ಜೀವನಕ್ಕೆ ಆತ್ಮಘಾತುಕವಾದುದು.VR II 215
  40. ನಾವೇ ತಪ್ಪಿತಸ್ಥರೆಂಬ ಭಾವನೆಯಿಂದ ಎರಡನೆಯವರ ನಿಂದೆ ಹಾಗೂ ಕಟುಟೀಕೆಗಳನ್ನು ಶಾಂತವಾಗಿ ಸೈರಿಸಿ ಸಹನೆ ಹಾಗೂ ತಾಳ್ಮೆಯ ಸ್ವಭಾವವನ್ನು ಬೆಳೆಸಿಕೊಳ್ಳಬೇಕು.VR II 201
  41. ನೀವು ಸದಾ ಸಂತೋಷವಾಗಿರಬೇಕೆಂಬುದೇ ನನ್ನ ಇಛ್ಛೆ. ಆದರೆ ಮನುಷ್ಯ ತನ್ನ ಕರ್ತವ್ಯಗಳನ್ನು ನಿರ್ವಹಿಸುವುದರಲ್ಲಿಯೇ ಸಂತೋಷವಿದೆ. ವಾಸ್ತವವಾಗಿ ಇದು ಆಧ್ಯಾತ್ಮಿಕತೆಯ ಜೀವ ಹಾಗೂ ಆತ್ಮವೇಆಗಿದೆ.VR II 200
  42. ಸ್ವತ: ನನ್ನನ್ನುಮಾರಿಕೊಳ್ಳುವುದೇ ನನ್ನ ನಿಜವಾದ ಬಯಕೆಯಾಗಿದೆ.ಆದರೆ ಅದನ್ನು ಕೊಳ್ಳುವ ಗಿರಾಕಿ ಯಾರೂ ಮುಂದೆ ಬರುವಂತೆ ಕಾಣುತ್ತಿಲ್ಲ. ಏಕೆಂದರೆ, ನಾನು ನನಗಾಗಿ ಯಾವ ಬೆಲೆಯನ್ನೂ ನಿಗದಿಪಡಿಸಿಲ್ಲ. ನನ್ನನ್ನು ಪುಕ್ಕಟೆಯಾಗಿಯೂ ಕೊಳ್ಳಲು ಬಯಸದಂತಹಕಾಲವಿದು.VR II 239
  43. ತಮಗೆ ತಾವು ಸಹಾಯಮಾಡಿಕೊಳ್ಳುವವರಿಗೆ ದೇವರು ನೆರವನ್ನು ನೀಡುವನೆಂಬುದು ಸಾಮಾನ್ಯ ಗಾದೆಯಿದೆ.RD 85
  44. ಒಂದು ವೇಳೆ ಪ್ರತಿಯೊಬ್ಬ ಅಭ್ಯಾಸಿಯು ಈ ಸಂಸ್ಥೆ ತನ್ನದೇ ಎಂದು ಭಾವಿಸಿದರೆ, ಮಿಷನ್ನು ಈಗ ಅನುಭವಿಸುತ್ತಿರುವ ತೊಂದರೆಗಳು ಇಲ್ಲವಾದಾವು. ನಮ್ಮ ಮಕ್ಕಳನ್ನು ಸ್ವತ: ನಮ್ಮವೆಂದು ತಿಳಿದಾಗ ಅವರ ಸುಖಸಂತೋಷಗಳಿಗೆ ಎಂತಹ ಕಷ್ಟಗಳನ್ನಾದರೂ ಅನುಭವಿಸಲು ಸಿದ್ಧರಾಗುವೆವು.VR II 273
  45. ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡಿದ ಯಾವುದೇ ಕಾರ್ಯವು ಸಮಂಜಸವಾಗಿಯೆ ಇರುತ್ತದೆ. ನಿಮ್ಮ ಶಬ್ದಗಳಲ್ಲಿ ಹೇಳುವುದಾದರೆ ‘ಆತ್ಮ’ ಸಂಪೂರ್ಣ ಮರೆಯಾಗಬೇಕು.VR II 262
  46. ಒಂದು ತಪ್ಪಿಗಾಗಿ ಮನುಷ್ಯನಿಗೆ ನಾಲ್ಕು ಶಿಕ್ಷೆಗಳನ್ನು ಕೊಡಲಾಗುವುದು? ಮಾನವನು ತೊಡಕುಳ್ಳಜೀವಿ. ಆತನು ಒಳ್ಳೆಯದನ್ನು ಕೆಟ್ಟದನ್ನು ಮಾಡಿದಾಗಲೆಲ್ಲ ಆತನ ಮನಸ್ಸು ವಿಚಾರಮಾಡುತ್ತದೆ.; ಹೃದಯವು ನಿರ್ಧರಿಸುತ್ತದೆ ಹಾಗೂ ಇಂದ್ರಿಯಗಳು ತಮ್ಮ ಕಾರ್ಯವನ್ನು ಪ್ರಾರಂಬಿಸುತ್ತವೆ. ಈ ಎರಡರಲ್ಲಿಯೂ ಮನಸ್ಸು ಮತ್ತು ಹೃದಯದ ಸಹಾಯ ಇದ್ದೇ ಇರುತ್ತದೆ. ಕೆಲಸ ಮಾಡಿದಾಗ ಜ್ಞಾನೇಂದ್ರಿಯಗಳು ಸಹ ತಪ್ಪಿತಸ್ಥವಾಗಿ ಉಳಿಯುವವು. ಇದು ದೇಹದ ಭಾಗವಾಗಿದ್ದರಿಂದ ದೇಹದ ಮೇಲೆಯೂ ಇದರ ಹೊಣೆಯಿದೆ. ನಾವು ಕೆಟ್ಟ ವಿಷಯಗಳನ್ನು ಕುರಿತು ವಿಚಾರಮಾಡಿದಾಗಲೆಲ್ಲ ವಾತಾವರಣದಲ್ಲಿ ಕೆಟ್ಟ ಪ್ರಭಾವ ಮುದ್ರೆಗಳನ್ನು ಬಿಡುತ್ತೇವೆ. ನಿಸರ್ಗವು ಇದಕ್ಕಾಗಿ ಪ್ರತೇಕ ಶಿಕ್ಷೆ ವಿಧಿಸುತ್ತದೆ. ಒಬ್ಬನು ತಾನು ಮಾಡಿದ ತಪ್ಪುಗಳಿಗನುಗುಣವಾಗಿ ಕೆಟ್ಟ ಜೀವನ ಅಥವಾ ನರಕವನ್ನು ಪಡೆಯುತ್ತಾನೆ. ನರಕದಲ್ಲಿ ಆತನಿಗೆ ತಕ್ಕ ಪ್ರಮಾಣದ ಶಿಕ್ಷೆ ದೊರೆಯುತ್ತದೆ. ಉಳಿದುವುಗಳನ್ನು ಈ ಜಗತ್ತಿನಲ್ಲಿ ಜನ್ಮತಾಳಿ ಭೋಗಿಸಬೇಕಾಗುವುದು. ಕರ್ಮವು ಕೆಟ್ಟುದ್ದೆಂದು ಅನುಭವಿಸಿದ ಮನಸ್ಸು ಶಿಕ್ಷೆಗೊಳಗಾಯಿತು. ಅದರ ಪರಿಣಾಮವು ಕೆಟ್ಟದಿದ್ದು ಇದು ಹೃದಯಕ್ಕೂ ಶಿಕ್ಷೆಯಾಗಿದ್ದಿತು. ಸಮಾಜವು ಆತನ್ನು ಹೀಯಾಳಿಸಿತು. ಪರಿಸರವನ್ನು ಕೆಡಿಸಿದ್ದಕ್ಕೆ ಆತನಿಗೆ ನರಕಪ್ರಾಪ್ತಿಯಾಯಿತು. ದೇಹ ಹಾಗೂ ಅದರ ಸಹಚರರು ಪಡೆದದ್ದು ಮೂರನೆಯ ಶಿಕ್ಷೆ. ಈ ರೀತಿ ತಪ್ಪು ಮಾಡುವುದರಲ್ಲಿ ಸಹಾಯಕರಾದ ಎಲ್ಲರೂ ಶಿಕ್ಷೆಪಡೆದರು.VR II 262-263
  47. ಆಂತರಿಕ ಶಕ್ತಿಗಳನ್ನು ನಿಸರ್ಗದೊಂದಿಗೆ ಸಮರಸಗೊಳಿಸಲು ಶ್ರಮಿಸಬೇಕಾಗುವುದು. ಇದನ್ನೇ ನಾವು ‘ರೂಪಣ’ ಎನ್ನುತ್ತೇವೆ. ಇದು ಬಹು ಪರಿಶ್ರಮದ ಕಾರ್ಯ.VR II 251.
  48. ಸಾಧ್ಯವಾದಷ್ಟು ಮಿತವ್ಯಯಿಯಾಗಿರಲು ಪ್ರಯತ್ನಿಸಿರಿ. ಮಿತವ್ಯಯದ ಅರ್ಥ ಮಕ್ಕಳಿಗೆ ಅನನುಕೂಲವಾಗುವಷ್ಟು ಜಿಪುಣನಾಗುವುದಲ್ಲ.VR II 249
  49. ಒಂದು ವೇಳೆ ನಿಜವಾದ ಪ್ರೀತಿಯಿರುವುದಾದರೆ ದೇಹದ ಪ್ರತಿಯೊಂದು ಕಣವು ಏಳುವರ್ಷಗಳಲ್ಲಿ ಪೂರ್ಣ ರೂಪಾಂತರಗೊಳ್ಳಬೇಕು.VR II 249
  50. ದ್ಧೆಯ ಅರ್ಥ ಒಬ್ಬನು ದೃಢವಾಗಿ ತನ್ನ ವಿಚಾರದಲ್ಲಿ ಗುರುವಿನ ಧೈರ್ಯದೊಂದಿಗೆ ಜೋಡಿಸುವುದು.VR II 248
  51. ಸಂಕಲ್ಪ ಹಾಗೂ ಇಛ್ಛೆಯನ್ನು ವಿವರಿಸಲು ನಾನು ಕೆಳಗಿನಂತೆ ವಿಭಾಗಗಳನ್ನು ಮಾಡಬೇಕಾಗುವುದು. 1) ಪ್ರಾಣಿಗಳ ಸ್ತರ 2) ಮಾನಸಿಕ ಸ್ತರ 3) ಆಧ್ಯಾತ್ಮಿಕ ಸ್ತರ – ಇವು ಇಚ್ಛೆಯ ವಿಧಗಳಾಗಿವೆ. ಇಚ್ಛೆಗಳು ಒಳ್ಳೆಯವು ಹಾಗೂ ಕೆಟ್ಟವೂ ಆಗಿವೆ. ಕೆಟ್ಟ ಇಚ್ಛೆಗಳು ಮನೋವಿಕಾರ ಲೈಂಗಿಕತೆ ಇತ್ಯಾದಿಗಳಿಗೆ ಸಂಬಂಧಿಸಿವೆ. ಆಶೆ ಮುಂತಾದವುಗಳನ್ನು ಇದೇ ವಿಧದಲ್ಲಿ ಸೇರಿಸಬಹುದು. ಮಾನಸಿಕ ಸ್ತರದ ಇಚ್ಛೆಗಳಲ್ಲಿ ಸ್ವಪ್ರತಿಷ್ಠೆ, ಸ್ವಂತದ ಪ್ರಗತಿ, ಸ್ವಂತದ ಸಾಮರ್ಥ್ಯ ಇತ್ಯಾದಿ ರಹಸ್ಯಗಳು ಅಡಗಿವೆ. ಇವುಗಳನ್ನೇ ಆಧ್ಯಾತ್ಮಿಕಸ್ತರಕ್ಕೆ ತೆಗೆದುಕೊಂಡು ಹೋದಾಗ ಮನುಷ್ಯನಿಗೆ ತನ್ನ ಕರ್ತವ್ಯದ ನೆನಪಾಗುತ್ತದೆ. ಹಾಗೂ ಈ ಪಾಶದಿಂದ ಪಾರಾಗಲು ಚಿಂತಿಸುತ್ತಾನೆ. ಆತನ ಒಲವು ದೇವರ ಸಾಕ್ಷಾತ್ಕಾರದತ್ತ ತಿರುಗುತ್ತದೆ. ಹಿಂದೊಮ್ಮೆ ಪ್ರಾಣಿಗಳ ಸ್ತರಕ್ಕೆ ಸಂಬಂಧಿಸಿದ್ದ ಅದೇ ಒಲವಿನೊಂದಿಗೆ, ಈಗ ಕರ್ತವ್ಯ ಸೇರಿ ಕೊಂಡಿರುವುದರಿಂದ ಅದನ್ನು ಇಚ್ಛೆ ಎಂದು ಕರೆಯುವುದು ತಪ್ಪು. ಸಂಕಲ್ಪವು ಮಾನಸಿಕ ಸ್ತರದೊಂದಿಗೆ ಸಂಬಂಧಿಸಿದೆ. ಏಕೆಂದರೆ ಗುರಿಯನ್ನು ನಿಮ್ಮ ದೃಷ್ಟಿಯಲ್ಲಿಟ್ಟು ಕೊಂಡು ನೀವು ಮಾನಸಿಕವಾಗಿ ಕಾರ್ಯ ಮಾಡಲು ಪ್ರಾರಂಭಿಸುವಿರಿ. ಇದು ಕೊನೆಯವರೆಗೂ ನಡೆದೇ ಇರುತ್ತದೆ. ಅದು ಪ್ರತಿಯೊಂದು ವಲಯದಲ್ಲಿಯೂ ಹೊಸಜೀವನವನ್ನು ಪಡೆಯುತ್ತದೆ. ತನ್ನ ಶುದ್ಧತೆಯ ಮಟ್ಟಕ್ಕನುಗುಣವಾಗಿ ಅದು ಚುರುಕಾಗಿವರ್ತಿಸಿ ಸಂಶಯಗಳಿಂದ ಮುಕ್ತವಾಗುತ್ತದೆ. ಅರ್ಥಾತ್ಅದರ ಬಲವು ಹೆಚ್ಚುತ್ತಲೇ ಹೋಗುತ್ತದೆ. ಮಾಹಾಮಾಯೆ ಎಂದು ಕರೆಯಲ್ಪಡುವ ಯಾವದೇ ಪ್ರಾಪಂಚಿಕ ವಲಯದಲ್ಲಿ ಅದರ ಕಾರ್ಯಗಳು ಪರಿಣಾಮಕಾರಿಯಾಗುತ್ತವೆ. ಅನಂತರ ಅದು ಶುದ್ಧ ಮೂಲರೂಪಕ್ಕೆ ನಿಜವಾದ ರತ್ನರೂಪಕ್ಕೆ ಪರಿವರ್ತಿತವಾಗುತ್ತದೆ. ಈ ಸ್ತರವನ್ನು ಮುಟ್ಟಿದ ಬಳಿಕ ಒಂದು ಆಧ್ಯಾತ್ಮಿಕಸ್ತರದಿಂದನ್ನೊಂದುಆಧ್ಯಾತ್ಮಿಕಸ್ತರಕಕೆ. ಯಾರನ್ನು ಬೇಕಾದರೂ ಕ್ಷಣಾರ್ಧದಲ್ಲಿ ಒಯ್ಯಲು ಬಹುಸುಲಭವಾಗುತ್ತದೆ. ಮನುಷ್ಯನೊಬ್ಬನು ಬ್ರಹ್ಮನಿಷ್ಠನಾದಾಗ ಅರ್ಥಾತ್ಬ್ರ ಹ್ಮನಲ್ಲಿ ಆಳವಾಗಿಮುಳುಗಿದಾಗ ತನ ಸಂಕ್ಪವು ಅಮೋಘವಾಗುತ್ತದೆ.
  52. ಒಬ್ಬನು ಆತ್ಮಸಮರ್ಪಣೆಯ ಸ್ಥಿತಿಯಲ್ಲಿ ನಿಜವಾದ ಭಕ್ತನಂತೆ; ಎಲ್ಲರಿಗೂ ಗುರುವಾದ ದೇವರ ಇಚ್ಛೆಗೆ ತನ್ನನ್ನು ಸಮರ್ಪಿಸಿಕೊಂಡು ಆತನ ಕೃಪೆಯ ಹೊಂಬಿಸಿಲಿನಲ್ಲಿ ಮಿಯುತ್ತ ಕೂಢ್ರುವನು. ಗುರು ಮತ್ತು ಭಕ್ತನ ಸಂಬಂಧ ಇದೇ ಆಗಿದ್ದು ಅದನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗಬೇಕು. ಏಕೆಂದರೆ ಈ ಸಂಬಂದವೊಂದೆ ನಮ್ಮನ್ನು ಪರಾಪಜ್ಞೆಯ ಕೊನೆಯ ಹಂತದವರೆಗೂ ಕರೆದುಕೊಂಡು ಬಂದಿದೆ. ಕೇವಲಲ್ಲಿ ಮಾತ್ರ ನಮ್ಮ ಅಸ್ತಿತ್ವದ ನಿಜವಾದ ಗುಣಧರ್ಮ ಗೋಚರಿಸುತ್ತದೆ.VR II 43
  53. ಮನುಷ್ಯನ ನಿಜವಾದ ಹಂಬಲವು ಆತನನ್ನು ಸತತ ಅವಿಶ್ರಾಂತ ಸ್ಥಿತಿಯಲ್ಲಿಡುವುದಲ್ಲದೇ ಆತನು ಕೇವಲ ತನ್ನ ಗುರಿಯನ್ನು ಮುಟ್ಟುಲು ಮಾತ್ರ ಶ್ರಮಿಸುತ್ತಾನೆ.VR II 130
  54. ‘ವರ’ ಗಳೆಂದು ಕರೆಯಬಹುದಾದ ಈ ಕಷ್ಟಗಳು ಅದೆಷ್ಟು ಅಮೂಲ್ಯವಾಗಿದೆಯೆಂಬುದನ್ನು ಗಮನಿಸಿ. ಇದರಿಂದ ಸಂತುಷ್ಟನಾದವನು ಧನ್ಯತೆಯ ಭಾವಗಳನ್ನಲ್ಲದೆ ಏನು ತಾನೆ ವ್ಯಕ್ತಮಾಡ ಬಲ್ಲನು?
  55. ಪ್ರತಿಯೊಂದು ವಸ್ತುವೂ ಅದರದರ ಯೋಗ್ಯತೆಗೆ ತಕ್ಕಂತೆ ಪಾಲುಗೊಳ್ಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದೊಂದು ವಸ್ತುವಿನ ವಿಷಯದಲ್ಲಿ ಅದರ ವ್ಯವಹಾರ ಬೇರೆ ಬೇರೆಯಾಗಿರುತ್ತದೆ. ಇದನ್ನು ಲಕ್ಷಿಸಿ ನಾವಾದರೂ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರ ಹಕ್ಕು ಬಾಧ್ಯತೆಗಳನ್ನೂ ಗಮನಕ್ಕೆ ತಂದುಕೊಂಡು ಅವರೊಂದಿಗೆ ವ್ಯವಹರಿಸುತ್ತ ದೈವೀ ವ್ಯವಹಾರಕ್ಕೆ ಸಮೀಪವಾಗುತ್ತ ಹೋಗಬೇಕು. ಇದರಿಂದ ನಮ್ಮ ಜೀವನದಲ್ಲಿ ಒಂದು ಪ್ರಭಾವವುಂಟಾಗಿ ಅದು ಸಹಜವಾಗಿಯೆ ಜನರನ್ನು ಆಕರ್ಷಿಸುವುದು.
  56. ಯಾವುದನ್ನು ನಾನು ಅಸಹಾಯಕ ಸ್ಥಿತಿಯೆಂದು ಕರೆದಿರುವೆನೋ ಅದನ್ನುಂಟುಮಾಡಿಕೊಳ್ಳುವುದು ದೀನತೆಯ ಸ್ಥಿತಿಯೆನಿಸುವುದು. ಇದನ್ನು ಹೊಂದಿದವನು ಸರ್ವಸ್ವವನ್ನೂ ಹೊಂದಿದಂತೆಯೆ. ಹೊರಗೆ ಹಾಗೆ ಕಾಣದಿದ್ದರೂ ಈ ಸ್ಥಿತಿಯು ಪಾಪರಹಿತವೂ ಮುಗ್ಧವೂ ಆಗಿದೆ. ಇಷ್ಟಾದರೆ ಆ ಅಪರಾಧವೂ ನಿಜಕ್ಕೂ ಅಪರಾಧವಾಗಿ ಉಳಿಯುವದಿಲ್ಲ. ಏಕೆಂದರೆ ಅವನು ಅದನ್ನು ಸಂಪೂರ್ಣವಾಗಿ ತೊಳೆದು ಬಿಟ್ಟಿದ್ದಾನೆ. ಭಕ್ತಿಯ ಮುಂದಿನ ಘಟ್ಟವೆಂದರೆ ಒಮ್ಮೆ ಮಾಡಿದ ತಪ್ಪನ್ನು ತಿರುಗಿ ಮಾಡದಂತೆ ನೋಡಿಕೊಳ್ಳುವುದು.TM 58
  57. ನಾವು ಪ್ರಗತಿಯನ್ನು ಹೊಂದುತ್ತ ಉಚ್ಚ ಸ್ಥಿತಿಯನ್ನು ಪಡೆಯುತ್ತ ಹೋದಂತೆಲ್ಲ ಗುರುವಿನ ಅಗತ್ಯ ಹೆಚ್ಚಾಗುತ್ತಾ ಹೋಗುವುದು.RD 36
  58. ಮಲ, ವಿಕ್ಷೇಪ, ಆವರಣಾದಿ ಕವಚಗಳನ್ನು ತೆಗೆದು ಹಾಕಿ ಮನಸ್ಸನ್ನು ಸಂಪೂರ್ಣ ಸಾಮ್ಯಾವಸ್ಥೆ ಮತ್ತು ಮಿತತ್ವಕ್ಕೆ ತರುವವರೆಗೆ ಅಂತರ್ವಾಣಿಯ ಪ್ರೇರಣೆಯನ್ನಾಗಲಿ ಮಾರ್ಗದರ್ಶನವನ್ನಾಗಲಿ ಅನುಸರಿಸುವುದು ನಿರರ್ಥಕವಾಗಿದೆ.RD 57
  59. ಆಧ್ಯಾತ್ಮದಲ್ಲಿ ಉನ್ನತ ಸಿಧ್ಧಿಗಳುಳ್ಳ ಗುರುವಿನ ಶ್ರೇಷ್ಠಶಕ್ತಿಗಳಿಂದ ನಾವು ಅತ್ಯಂತ ಪ್ರಭಾವಿತರಾದಾಗ ಆತನ ಆಜ್ಞೆಗಳನ್ನನುಸರಿಸಬೇಕೆಂಬ ಆಂತರಿಕ ಒಲವನ್ನನುಭವಿಸುವೆವು.RD 82
  60. ಅಭ್ಯಾಸಿಗಳು ಸುಲಭವಾದ ವಸ್ತುವನ್ನು ಪಡೆಯಲು ಕ್ಲೇಶಕರ ಸಾಧನಗಳನ್ನು ಅನುಸರಿಸುವರಾದ ಕಾರಣ ಈ ಮಾರ್ಗದಲ್ಲಿ ಅದೊಂದು ಮುಖ್ಯ ತೊಂದರೆಯಾಗಿದೆ.ERY 30
  61. ಜನರಿಗೆ ದೇವರಲ್ಲಿ ನಂಬಿಕೆ ಇಲ್ಲ ನನಗೆ ನನ್ನ ಆರೋಗ್ಯದಲ್ಲಿ ನಂಬುಗೆ ಇಲ್ಲ ತನ್ನ ಆರೋಗ್ಯದ ಮೇಲೆ ವಿಶ್ವಾಸ ಇಲ್ಲದಿರುವುದು ದುರ್ಬಲತೆಯ ಲಕ್ಷಣ ಹಾಗೂ ದೇವರಲ್ಲಿ ವಿಶ್ವಾಸ ಇಲ್ಲದಿರುವುದು ಆಧ್ಯಾತ್ಮಿಕ ಆತ್ಮಹತ್ಯೆಯ ಲಕ್ಷಣ ಇತ್ತೀಚೆಗಿನ ದಿನಗಳಲ್ಲಿ ಬೆಳೆ ಚೆನ್ನಾಗಿ ಬರುವುದಿಲ್ಲವೆಂದು ಹೇಳುತ್ತಾರೆ ಅದರ ಅರ್ಥ, ದೇವರಿಗೆ ಮುಪ್ಪಡರಿ ಕೆಲ ವಿಷಯಗಳು ಆತನ ನೆನಪಿನಲ್ಲಿರುವುದಿಲ್ಲವೆಂದಾಯಿತು. ಆದರೆ, ಜನರು ಆತನು ಕೊಟ್ಟ ಶಕ್ತಿಯಿಂದಲೇ ಆತನ ಕಾರ್ಯಗಳಲ್ಲಿ ಎಂತಹ ತೊಡಕನ್ನು ಹುಟ್ಟಿಸಿರುವರೆಂಬುದು ಅವರಿಗೆ ತಿಳಿಯಲೊಲ್ಲದು. ಕಾರ್ಯಗಳು ಅದೇ ಪ್ರಮಾಣದಲ್ಲಿ ಮುಂದುವರೆಯುತ್ತವೆ ಈಗ ನಮ್ಮ ಕಾರ್ಯಗಳು ನಿಸರ್ಗದ ವಿರುದ್ಧವಾಗಿ ನಡೆದು ಪರಿಸರದಲ್ಲಿ ಒಂದು ಅವ್ಯವಸ್ಥೆಯನ್ನು ಹುಟ್ಟಿಸಿವೆ. ಅದರಿಂದಾಗಿ ನಮ್ಮ  ಕತ್ತುಗಳ ಕತ್ತರಿಸಿ ಹೋಗುತ್ತಿದೆ ಈಗ ಇವುಗಳನ್ನು ಶುದ್ದೀಕರಿಸುವುದು ಅವಶ್ಯಕವಾಗಿದೆ. ಕೆಲ ಮಟ್ಟಿಗೆ ಅದನ್ನು ಮಾಡಲಾಗುತ್ತಿದೆ ಅದನ್ನು ಹಾಗೆಯೇ ಮುಂದುವರಿಸಲಾಗುವುದು. ಇದೆಲ್ಲವೂ ನಿಮ್ಮಿಂದಲೇ ಆಗಬೇಕಾಗಿದೆ. ಹಾಗೂ ಪ್ರತಿಯೊಬ್ಬ ಸಂತನು ತನಗರಿವಿಲ್ಲದಂತೆ ಕೆಲ ಮಟ್ಟಿಗೆ ಇದನ್ನು ಮಾಡುತ್ತಾನೆ. ನನಗೆ ಧೈರ್ಯವಿದೆ ಹಾಗೂ ಗುರುವಿನ ಕೃಪೆಯಿಂದ ಯಾವುದಕ್ಕೂ ಕೊರತೆ ಇಲ್ಲ. ಇದನ್ನು ಮಾಡಲು  ಇನ್ನೊಂದು ಕ್ಷಣ ಸಹ ಬೇಕಾಗಿಲ್ಲ . ನಿಮ್ಮಲ್ಲಿಯೂ ಇಂತಹ ನಿಹಾಸವನ್ನು ನೀವು ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಈ ಎಲ್ಲ ವಿಷಯಗಳನ್ನು ಬರೆದಿದ್ದೇನೆ. ಆದರೆ ನಾನು ಇದನ್ನು ಮಾಡುವುದಿಲ್ಲ ಏಕೆಂದರೆ ತಮ್ಮ ಶಕ್ತಿಯ ದುರುಪಯೋಗದಿಂದ ಈ ವ್ಯವಸ್ಥೆಯನ್ನು ಹುಟ್ಟಿಸಿದ ಜನರು ತಮ್ಮ ಕೃತಿಗಳ ಫಲವನ್ನು ಭೋಗಿಸಲಿ. ನಿಸರ್ಗವೂ ಸಹ ಇದನ್ನೇ ಬಯಸುತ್ತಿದೆ. ವಿನಾಶವು ಕಟ್ಟಿಟ್ಟದ್ದು ಮತ್ತು ಅದು ಈಗಾಗಲೇ ಪ್ರಾರಂಭವೂ ಆಗಿದೆ.  ಅದಕ್ಕೆ ಇವೇ ಕಾರಣಗಳು.VR II 267-268.
  62. ಪರಮಾತ್ಮನ ಚಿಂತನೆಯಿಂದ ದೈವಿಕ ಪ್ರೇಮ ಮತ್ತು ಭಕ್ತಿಗಳು ವರ್ಧಿಸುತ್ತವೆ. ಈ ಪ್ರೇಮವನ್ನು ಬೆಳೆಯಿಸಿಕೊಳ್ಳುವುದು ನಿಮ್ಮ ಕೆಲಸ. ಅಲ್ಲದೆ, ನಿಮ್ಮ ಬಹು ಮುಖ್ಯವಾದ ಕರ್ತವ್ಯವೆಂದು ನಾನು ಖಂಡಿತವಾಗಿ ಹೇಳುತ್ತೇನೆ. ನೀವು ಇದನ್ನು ಮಾಡದಿದ್ದರೆ, ಸೇವಾ ಮನೋಧರ್ಮವುಳ್ಳ ಪ್ರತಿಯೋರ್ವ ಅಭ್ಯಾಸಿಗೂ ವಿಧಿಸಲಾದ ಕರ್ತವ್ಯವನ್ನು ನಿರ್ವಹಿಸಿದಂತಾಗುವುದಿಲ್ಲ. ಅಲ್ಲದೆ, ನಿಮ್ಮ ಕರ್ತವ್ಯ ನಿರ್ವಹಣೆಯು ಸಂಪೂರ್ಣವಾಗುವಂತೆ ನೋಡಿಕೊಳ್ಳುದು ಓರ್ವ ಸಂತನ, ಅಷ್ಟೇಕೆ, ಒರ್ವ ಮನುಷ್ಯನೆನಿಸಿಕೊಂಡವನ ಗುಣವಿಶೇಷ.ME P 80