ಇಂದಿನ ಜೀವನವು ಬಿಡುವಿಲ್ಲದ್ದು, ಶೀಘ್ರ ಮತ್ತು ಸ್ಪರ್ಧಾತ್ಮಕ ಹೋರಾಟದಿಂದ ಕೂಡಿದೆ. ಸ್ವಾರ್ಥತೆ, ಪ್ರಾಪಂಚಿಕತೆ, ಭೋಗಾಸಕ್ತ ಪ್ರವೃತ್ತಿಗಳು (ಭೌತಿಕ, ಮಾನಸಿಕ, ಲೈಂಗಿಕ) ಮುಂಚೂಣಿಯಲ್ಲಿವೆ. ಜೀವನವು ಆತಂಕ, ಒತ್ತಡ, ಅಸೂಯೆ, ಆಯಾಸ, ಚಿಂತೆ ಮತ್ತು ಕೋಭೆಗಳಿಂದ ದುಃಖಮಯವಾಗಿ ಅದು ಮಧುಮೇಹ, ರಕ್ತದ ಒತ್ತಡ, ಅಸ್ತಮಾ ಹಾಗು ಕ್ಯಾನ್ಸರ್‌ಗಳಂತಹ ರೋಗಗಳಿಗೆ ಬಲಿಪಶುವಾಗಿದೆ. ಇದರಿಂದಾಗಿ ಮನುಷ್ಯನ ಆಯುಷ್ಯವು ಗಮನಾರ್ಹವಾಗಿ ಕುಸಿದಿದೆ. ಸಾಮಾನ್ಯವಾಗಿ ಮಾನವನು ಶತಾಯು ಎಂಬುದಕ್ಕೆ ನಮ್ಮ ಪುರಾಣಗಳು ಪುಷ್ಠಿ ಕೊಡುತ್ತವೆ. ನಮ್ಮ ಅಸಹಜ ಜೀವನ ವಿಧಾನದಿಂದಾಗಿ ನೂರು ವರುಷಗಳ ಮುಂಚಿನ ಸಾವಿಗೆ ನಾವೇ ಕಾರಣೀಭೂತರಾಗಿದ್ದೇವೆ. ಇದು ಆತ್ಮಹತ್ಯೆಯಲ್ಲದೆ ಮತ್ತೇನು? ಆತ್ಮಾವಲೋಕನದಿಂದ ನಮ್ಮ ಅಸಹಜ ಜೀವನವೇ ಇದಕ್ಕೆ ಕಾರಣವೆಂಬ ಉತ್ತರ ಸಿಗುವದು. ಮೇಲೆ ವಿವರಿಸಿದಂತೆ ಸಹಜ ಜೀವನವನ್ನು ಅದರ ವಿರುದ್ಧಾರ್ಥಗಳ ಗಮನದಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ವಿರುದ್ಧಾಂಶಗಳನ್ನು ನಿರ್ಧಿಷ್ಟ ಗುರಿಯಿಂದ ನಿಯಮಿತಗೊಳಿಸಿ ಸಮತೋಲನಕ್ಕೆ ತಂದರೆ ಆ ಜೀವನಕ್ಕೆ ಸರಳ ಜೀವನವೆಂದು ಕರೆಯಬಹುದು.

ಸರಳ ಜೀವನವು ಎರಡು ಶಬ್ದಗಳಿಂದ ಕೂಡಿದೆ. ಸರಳ ಮತ್ತು ಜೀವನ. ಇವೆರಡೂ ಶಬ್ದಗಳ ಬಗ್ಗೆ ನಾವು ಆಳವಾಗಿ ಚಿಂತನೆ ಮಾಡಿದಾಗ, ಅರ್ಥ ಮಾಡಿಕೊಳ್ಳಲು ಸರಳವೆನಿಸುವ ಆ ಶಬ್ದಗಳು ಬೇರೆ ಬೇರೆಯಾಗಿದ್ದು ಭಿನ್ನ ಅರ್ಥವನ್ನೇ ಕೊಡುತ್ತವೆ. ಜೀವ ಎಂಬ ಶಬ್ದದಿಂದ ‘ಜೀವನ’ ಎಂಬುದನ್ನು ಪಡೆಯಲಾಗಿದ್ದು ಅದು ಹುಟ್ಟು ಮತ್ತು ಸಾವುಗಳ ನಡುವಿನ ಸ್ಥಿತಿಯಾಗಿದೆ. ಈಗ ಜೀವನವೆಂದರೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾಮಾನ್ಯವಾಗಿ ಸುಖ, ಸಮೃದ್ಧಿಗಳನ್ನೊಳಗೊಂಡ ಭೋಗ ಜೀವನಕ್ಕೆ ಜೀವನವೆಂದು ನಂಬಲಾಗಿದೆ. ಅಂತಿಮ ಚೇತನವು ದೇಹದಲ್ಲಿರುವವರೆಗೆ ಜೀವನವೆಂದು ಕರೆಯುತ್ತೇವೆ. ಯಾವ ಉದ್ದೇಶಕ್ಕಾಗಿ ಜೀವನವೆನ್ನುವದು ಅವರ ಜೀವನ ವಿಧಾನದಲ್ಲಿ ಉದ್ಭವಿಸುವದೇ ಇಲ್ಲ.

ಜೀವಕ್ಕೆ ವಿಭಿನ್ನ ಜೀವನಗಳಿವೆ; ಪ್ರಾಣಿ ಮತ್ತು ಮನುಷ್ಯ ಜೀವನ. ಎರಡನೇಯದು ಮಾನಸಿಕವಾಗಿ ವಿಕಾಸಗೊಂಡಿದ್ದರಿಂದ ಮೊದಲನೇಯದಕ್ಕಿಂತ ವಿಭಿನ್ನವಾಗಿರುತ್ತದೆ. ವಿಕಾಸಗೊಂಡ ಈ ಮಾನವ ಜೀವನವನ್ನು ಸಹಜ ಪ್ರವೃತ್ತಿ (Instinctive) ಜೀವನ ಹಾಗು ಪ್ರೇರಣಾತ್ಮಕ (Intuitive) ಜೀವನವೆಂದು ವರ್ಗೀಕರಿಸಲಾಗಿದೆ. (ಸಹಜ ಪ್ರವೃತ್ತಿಯೊಂದೆ ಇರುವ ಮಾನವ ಜೀವನವು ಪ್ರಾಣಿ ಜೀವನ ಸಮಾನವೆ) ಪ್ರೇರಣಾ ವಿಚಾರವಾದಿಗಳು ಪ್ರಾಪಂಚಿಕ ದೃಷ್ಟಿಯುಳ್ಳವರಾಗಿದ್ದು ಯಾವಾಗಲೂ ಮನೋರಂಜನೆ, ಸಂತೋಷ, ಸೌಖ್ಯತೆ, ಸೌಕರ್ಯ, ತೃಪ್ತಿ ಮತ್ತು ಶಾಂತಿ ಇತ್ಯಾದಿಗಳ ಬಗ್ಗೆ ಯೋಚಿಸುತ್ತಾರೆ. ಇವರಲ್ಲಿ ಕೆಲವರು ಅರ್ಥ ಗೊತ್ತಿರದೆ ಜನರ ಕಲ್ಯಾಣದ ಬಗ್ಗೆ ಯೋಚಿಸುತ್ತಾರೆ. ವಿಜ್ಞಾನಿಗಳು, ಸಂಶೋಧಕರು, ತತ್ವಜ್ಞಾನಿಗಳು, ತಂತ್ರಜ್ಞರು ಮುಂತಾದವರು ಈ ವರ್ಗದಲ್ಲಿ ಬರುತ್ತಾರೆ. ಅಕಲ್ಪಿತವಾಗಿ ಕೆಲವರು ನಿರ್ಧಿಷ್ಟ ಜೀವನ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಮನಃಪೂರ್ವಕವಾಗಿ ತಮ್ಮ ಜೀವನವನ್ನು ಅರ್ಪಿಸುತ್ತಾರೆ. ಇದು ಅವರ ಜೀವನ ವಿಧಾನವನ್ನೇ ಬದಲಾವಣೆ ಮಾಡುತ್ತದೆ. ಆಗ ಅದು ಸರಳ ಜೀವನವಾಗುತ್ತದೆ. ಒಂದು ವೇಳೆ ಜೀವನದ ಗುರಿಯು ಭಗವತ್ ಸಾಕ್ಷಾತ್ಕಾರ ಅಥವಾ ಅಂತಿಮ ಸತ್ಯದ ಸಾಕ್ಷಾತ್ಕಾರದಂತಹ ಉನ್ನತ ಗುರಿಯಾಗಿದ್ದರೆ, ಅಂತಹ ಜೀವನವು ನಿಜವಾದ ಸರಳ ಜೀವನವಾಗುತ್ತದೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಪ್ರಾಪಂಚಿಕ ಹಾಗು ಆಧ್ಯಾತ್ಮಿಕ ಜೀವನಗಳನ್ನು ಜೊತೆ ಜೊತೆಯಾಗಿ ಸಾಗಿಸಿದರೆ ನಿಸ್ಸಂದೇಹವಾಗಿ ಅದಕ್ಕೆ ಸರಳ ಜೀವನವೆಂದು ಕರೆಯಲಾಗುವದು. ಕೇವಲ ಆಧ್ಯಾತ್ಮಿಕ ಜೀವನವನ್ನಷ್ಟೇ ಗುರಿಯಾಗಿದ್ದರೆ, ನಿಜವಾದ ಸರಳ ಜೀವನವೆಂದು ಕರೆಯಲಾಗುವದು. ಅಂತಹ ವ್ಯಕ್ತಿಯ ಜೀವನವೆಂದೂ ಬಿಡುವಿಲ್ಲದ ಶೀಘ್ರವಾದ ಜೀವನವಾಗಿರುವದಷ್ಟೇ ಅಲ್ಲ, ಅವರು ಜಗತ್ತಿನ ಥಳಕು-ಬೆಳಕಿನಿಂದ ಆಕರ್ಷಿತವಾಗಿರುವದಿಲ್ಲ. ಸರಳ ಜೀವನದ ವಿರುದ್ಧವಾದವುಗಳು ಅವರ ಜೀವನದಲ್ಲಿ ಎಂದೂ ಪ್ರವೇಶಿಸುವದಿಲ್ಲ. ಇಂತಹ ನಿಜವಾದ ವಿಚಾರವಂತರು ಅದೃಷ್ಟವಶಾತ್ ಉಚ್ಚತಮ ಅವಸ್ಥೆಯನ್ನು ಹೊಂದಿದ, ಅಂತಿಮ ಸತ್ಯದಲ್ಲಿ ಲಯವಾದಂತಹವನ ಸಂಪರ್ಕದಲ್ಲಿ ಬಂದರೆ ಅಂತಹವನ ಜೀವನ ವಿಧಾನವು ಅನುಸರಣೀಯ ಮತ್ತು ಅವನು ಆದರ್ಶ ವ್ಯಕ್ತಿಯಾಗುವನು. ಅದಕ್ಕಾಗಿ ಅಂತಹ ಪುರುಷನನ್ನು ಹುಡುಕಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ ಅಂತಹ ಪುರುಷನು ಸರಳ ಹಾಗು ಮೃದು ಜೀವನ ಹೊಂದಿದ ನಮ್ಮ ಸದ್ಗುರುಗಳೇ ಆಗಿದ್ದಾರೆ.

ನಮ್ಮ ಗುರುಗಳನ್ನು ಎಲ್ಲ ದೃಷ್ಟಿ ಕೋನಗಳಿಂದ ಸೂಕ್ಷ್ಮವಾಗಿ ಅವಲೋಕಿಸಿದರೆ ಅವರು (ಗುರುಗಳು) ಸಹಜ ಮತ್ತು ಪರಿಪೂರ್ಣ ಜೀವನವನ್ನು ನಡೆಸುತ್ತಿರುವರೆಂದು ಧೃಡವಾಗಿ ಹೇಳಬಹುದು. ಆದ್ದರಿಂದ ನಮ್ಮ ಎಲ್ಲಾ ಪ್ರಯತ್ನಗಳು ಅವನನ್ನು ಅನುಕರಿಸುವದು ಮತ್ತು ಆತನಂತೆ ಪರಿಪೂರ್ಣತೆ ಹೊಂದುವುದೇ ಆಗಿರುತ್ತದೆ. ಅದೇ ನಮ್ಮ ಜೀವನದ ಗುರಿ.

‘ಸಹಜತೆಯೇ ಸರಳತೆ’ ಎಂದು ನಮ್ಮ ಗುರುಗಳು ಸಹಜಮಾರ್ಗದ ನಾಲ್ಕನೇಯ ನಿಯಮದಲ್ಲಿ ತಿಳಿಸಿದ್ದಾರೆ. ಇದು ಭಗವಂತನ ಸಾರತತ್ವವೇ ಆಗಿದೆ. ಇದು ನಿಜಕ್ಕೂ ನಿಸರ್ಗದ ಜೀವ ಸತ್ವವೇ ಆಗಿದೆ. ಎಲ್ಲಾ ವಿಧದ ಕ್ರಿಯೆಗಳು ಮತ್ತು ಚಲನೆ ಇಲ್ಲಿಂದಲೇ ಪ್ರಾರಂಭವಾಗುತ್ತವೆ. ಇದೊಂದೆ ಸಂಪೂರ್ಣ ಸತ್ಯ ಮತ್ತು ಉಳಿದೆಲ್ಲವುಗಳು ‘ಮಾಯೆ’. ಯಾರೂ ನಿಜವಾದ ಸರಳತೆಯನ್ನು ಹೊಂದಬಯಸುವರೋ ನಮ್ಮ ಸದ್ಗುರುಗಳು ಹೇಳಿದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಜಿಜ್ಞಾಸುಗಳನ್ನು ಆ ಮಟ್ಟಕ್ಕೆ ತರಲು ಗುರುಗಳ ಸಹಾಯವಿರುತ್ತದೆ. ಸಹಜ ಮಾರ್ಗ ಪದ್ಧತಿಯ ಸಾಧನೆಯಲ್ಲಿ ಉಚ್ಚತಮ ಸ್ಥಿತಿಯನ್ನು ತಲುಪಬಯಸುವ ಪ್ರತಿಯೊಬ್ಬ ಅಭ್ಯಾಸಿಯು ಗುರುಗಳ ಸಮರ್ಥ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಾನೆ. ಶುದ್ಧತೆ, ಸರಳತೆ ಮತ್ತು ಸ್ಥಿರತೆಗಳನ್ನು ಬೆಳೆಸಿಕೊಳ್ಳಲು ಕೆಲವು ನಿರ್ದೇಶನಗಳನ್ನು ಕೊಡಲಾಗಿದೆ. ಇದರಿಂದಾಗಿ ಅಭ್ಯಾಸಿಯು ಅಂತಿಮ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಅರ್ಹನಾಗುವನಲ್ಲದೆ, ಅದರಲ್ಲಿ ಲಯಹೊಂದಿ ಶಾಶ್ವತವಾಗಿ ನೆಲೆಗೊಳ್ಳುವನು.

ನಿಯಮಗಳು :-

1) ಬೆಳಗಿನ ಧ್ಯಾನ

2) ಸಂಜೆಯ ಶುದ್ದೀಕರಣ

3) ಮಲಗುವಾಗ ಪ್ರಾರ್ಥನೆ

4) ಗುರಿ-ಅಂತಿಮ ಸತ್ಯ-ಗುರುಗಳ ನಿರಂತರ ಸ್ಮರಣೆ.

ಭಗವಂತನಲ್ಲಿ ಒಂದಾಗುವ ಉಚ್ಚತಮ ಧೈಯವನ್ನು ನಿರ್ಧಿಷ್ಟಪಡಿಸಿಕೊಂಡಾಗ ಈ ನಿಯಮಗಳ ಪಾಲನೆ ಅತಿ ಮುಖ್ಯ.ಜೀವನದ ಗುರಿಯನ್ನು ಹೊರತು ಪಡಿಸಿ ಬೇರೆ ಯಾವುದಕ್ಕೂ ಗಮನ ಹರಿಸಬಾರದು ಹಾಗು ವಿಶ್ರಮಿಸಬಾರದು. ಅಂದಾಗ ಮಾತ್ರ ನಮ್ಮ ವಿಚಾರ ಶಕ್ತಿ ಹಾಗು ಸಂಕಲ್ಪಗಳು ದಾರಿಯನ್ನು ಸುಗಮಗೊಳಿಸುತ್ತವೆ. ದಿವ್ಯ ಗುರುಗಳ ಸಹಾಯವಿಲ್ಲದೆ ಈ ಮಾರ್ಗವನ್ನು ಕ್ರಮಿಸಲು ಸಾಧ್ಯವೇ ಇಲ್ಲ. ಈ ವಿಧಾನವು ಸಹಜವಾಗಿ ಮತ್ತು ಪೂರ್ವ ನಿರ್ಧಾರದಂತೆ ಕೆಳಗಿನ ರೀತಿಯಲ್ಲಿ ನಡೆಯುತ್ತದೆ.

ನಿಜವಾದ ಗುರಿಯ ಮೇಲೆ ನಮ್ಮ ವಿಚಾರವನ್ನು ನೆಲೆಸುವಂತೆ ಮಾಡುವುದು.ಸಂಕಲ್ಪ ಶಕ್ತಿ-> ಪ್ರಾಮಾಣಿಕ ಪ್ರಯತ್ನ-> ಆಸಕ್ತಿ-> ಪುನರಾವರ್ತನೆ (ಪುನಃ ಪುನಃ ಮಾಡುವದು)-> ಸ್ವಭಾವ-> ಉತ್ಕಟ ಸಾಧನೆ-> ಅಭ್ಯಾಸ ಬಲ> ಜೀವನ ಕ್ರಮ -> ತಳಮಳ -> ಸೃಷ್ಟಿಕರ್ತನಲ್ಲಿ ಶೋಭೆಯ ಉತ್ಪನ್ನವಾಗುವಿಕೆ->ದೈವಿ ಕೃಪೆ.

ನಿರಂತರ ಸ್ಮರಣೆಯು ಪ್ರೇಮ, ಭಕ್ತಿ ಮತ್ತು ಶ್ರದ್ಧೆಗಳನ್ನು ವೃದ್ಧಿಗೊಳಿಸುವುದು. ನಮ್ಮ ಜೀವನವು ಸಾಧ್ಯವಾದಷ್ಟು ಸಹಜವಾಗಲು ಹತ್ತು ಆದರ್ಶಗಳನ್ನು ಕೊಡಲಾಗಿದೆ. ಅವುಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಗುರು-ಗುರಿಯ ವಿಚಾರದಲ್ಲಿ ನಿರಂತರವಾಗಿ ತಲ್ಲೀನವಾದರೆ ಕೇವಲ ಸಣ್ಣ ಪ್ರಯತ್ನ ಮತ್ತು ಸ್ವಲ್ಪ ತ್ಯಾಗದಿಂದ ಎಲ್ಲವೂ ಸುಗಮವಾಗುತ್ತದೆ ಎನ್ನುವದಕ್ಕಿಂತಲೂ ಎಲ್ಲಾ ಆದರ್ಶಗಳು ಜೀವನದ ಅವಿಭಾಜ್ಯ ಅಂಗವಾಗುತ್ತವೆನ್ನಬಹುದು.

ಮನುಷ್ಯನು ಯಾವಾಗಲೂ ಪ್ರಾಪಂಚಿಕ ಹಾಗು ಇಂದ್ರಿಯಾಧಾರಿತ ತುಚ್ಛ ವಿಷಯಗಳ ಬಗ್ಗೆ ಯೋಚನೆಗಳ ಮತ್ತು ಅಂತಹ ಜನರ ಸಂಪರ್ಕದ ಅಭ್ಯಾಸ ಬಲದಿಂದ ಗೊಂದಲಮಯ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾನೆ. ಇವೆಲ್ಲದರ ಅರಿವು ಬಂದಾಗ್ಯೂ ತನ್ನ ಸ್ವಂತ ಪ್ರಯತ್ನದಿಂದ ಹೊರ ಬರಲಾರದವನಾಗಿದ್ದಾನೆ. ಇವೆಲ್ಲವುಗಳಿಂದ ಹೊರ ಬರಬೇಕಾದರೆ, ಯಾರು ತನ್ನೆಲ್ಲಾ ತೊಡಕುಗಳನ್ನು ಪರಿಹರಿಸಿಕೊಂಡು ಸಮತೋಲನ ಸ್ಥಿತಿಯಲ್ಲಿರುವನೋ ಅಂತಹ ಸಹಬಾಂಧವನೊಂದಿಗೆ ತನ್ನ ನ್ನು ಜೋಡಿಸಿಕೊಳ್ಳಬೇಕು. ಅಂತಹ ಸಹಬಾಂಧವನ ಜೀವನವು ಸಹಜವೂ, ಸರಳವೂ ಮತ್ತು ಅದೇ ಅವನ ಜೀವನ ಕ್ರಮವಾಗಿರಬೇಕು. ತಮ್ಮ ಬಂಧನವನ್ನು ಅವನ ಪ್ರಭಾವದಿಂದ ಕಳೆದುಕೊಳ್ಳಲಿಚ್ಛಿಸುವವರಿಗೆ ಆತನು ಸಹಾಯ ಮಾಡಲು ಸದಾ ಕಾತರನಾಗಿರುತ್ತಾನೆ. ಅವನು ಜಿಜ್ಞಾಸುವಿನಲ್ಲಿ ಪ್ರಯತ್ನಕ್ಕೆ ಪೂರಕವಾದ ಸ್ಥಿತಿಯನ್ನು ಹುಟ್ಟಿಸಿ ಗುರಿಯ (ಏಕತತ್ವ ಚಿಂತನೆ) ಮೇಲೆಯೇ ಮನಸ್ಸನ್ನು ಸ್ಥಿರಗೊಳಿಸಲು ಬಾಧಕವಾದ ವಿಚಾರಗಳಿಂದ ಜಿಜ್ಞಾಸುವನ್ನು ಮುಕ್ತಗೊಳಿಸುತ್ತಾನೆ. ಸ್ವಭಾವತಃ ಮನುಷ್ಯನು ಆಶಾಢಭೂತಿ ಅಥವಾ ದ್ವಂದ್ವ ಜೀವನ ಸಾಗಿಸುತ್ತಾನೆ. ವಾಸ್ತವಿಕವಾಗಿ ತಾನೇನು ಇಲ್ಲವೋ ಅದನ್ನೇ ಪ್ರದರ್ಶಿಸುತ್ತಾನೆ, ವಿನಹ ತಾನಿರುವದನ್ನು ತೋರಿಸುವದಿಲ್ಲ. ಅದಕ್ಕಾಗಿ ಅವನು ಇಂತಹ ಪ್ರತಿಯೊಂದು ವಿದ್ರೂಪಗೊಂಡ ಗ್ರಹಿಕೆಗಳಿಂದ ದೂರವಿರಬೇಕು. ಇದು ಯೋಗ್ಯ ಆಚರಣೆ, ಸದ್ವರ್ತನೆಗಳ ಸಾಧನೆ ಮತ್ತು ಗುರುಗಳ ಸಹಾಯದಿಂದ ಮಾತ್ರ ಬರುತ್ತವೆ. ಯಾವಾಗ ಸದ್ಗುರುಗಳ ವಿಚಾರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿದಾಗ ಅನ್ಯರ ಕ್ರಿಯೆ, ಮಾತು ಅಷ್ಟೇಕೆ ಬೈಗಳೂ ಸಹ ಅವನಿಗೆ ಸ್ನೇಹಪರವೆನಿಸುತ್ತವೆ. ಕಾಲಕ್ರಮೇಣ ಅವನಿಗೆ ಅರುವಿಲ್ಲದೆಯೇ ಎರಡನೇಯ ಸ್ವಭಾವವಾಗುತ್ತದೆ. ಅದರಂತೆ ಸಮಗ್ರ ಸೃಷ್ಟಿಯು ಯಾವುದು ತನ್ನ ಜೀವನದ ಗುರಿಯೋ ಆ ಅಂತಿಮ ಸತ್ಯದಿಂದ ಇಳಿದು ಬಂದಿದ್ದಾಗಿದೆಂದು ಅರ್ಥವಾಗತೊಡಗುತ್ತದೆ.ಅವನು ತನ್ನ ಮತ್ತು ಇತರರ ಸಂಬಂಧವನ್ನು ಅರಿಯುತ್ತಾನೆ. ಮುಂದುವರೆದು ಪ್ರತಿಯೊಬ್ಬನಲ್ಲೂ ತನ್ನಲ್ಲಿರುವ ಪ್ರಾಣ ಶಕ್ತಿಯೇ ಇದೆಯೆಂಬ ತಿಳುವಳಿಕೆ- ಯುಂಟಾಗಿ ಎಲ್ಲರನ್ನು ಪ್ರೀತಿಸತೊಡಗುತ್ತಾನೆ. ಸ್ವಂತ ಪರಿಶ್ರಮ ಹಾಗು ಗುರುಗಳ ಕೃಪೆಯಿಂದ ತಾನೇ ನಿರ್ಮಿಸಿಕೊಂಡ ಜಾಲವನ್ನು ಕತ್ತರಿಸಿಕೊಂಡಾಗ ಇದು ಸಾಧ್ಯವಾಗುತ್ತದೆ. ಈ ಸ್ಥಿತಿಯುಂಟಾದಾಗ ಸ್ವಾರ್ಥತೆ ಮತ್ತು ಇತರ ಪ್ರವೃತ್ತಿಗಳು ಇಲ್ಲದಂತಾಗಿ ವಿಶ್ವ ಭ್ರಾತೃತ್ವ ಮತ್ತು ಪ್ರೇಮ ಅಭಿವೃದ್ಧಿ ಹೊಂದುತ್ತವೆ.

ಕೆಲ ಕಾಲದ ಸಾಧನೆಯ ನಂತರ ಪ್ರಕೃತಿಯು ಸೃಷ್ಟಿಯ ಆರಂಭದಲ್ಲಿದ್ದಂತೆಯೇ ಪ್ರತಿಯೊಂದನ್ನು ಶುದ್ಧ ಹಾಗು ನಿರ್ಮಲವಾಗಿಡಲು ಬಯಸುತ್ತದೆಂದು ಜಿಜ್ಞಾಸು ಅರ್ಥಮಾಡಿಕೊಳ್ಳುತ್ತಾನೆ. ಅವನು ತನಗೆ ನೋವು ಹಾಗು ನಲಿವು, ಸುಖ-ದುಖಃಗಳು ಶುದ್ದೀಕರಣ ವಿಧಾನದಲ್ಲಿ ಭೋಗಕ್ಕಾಗಿ ಬಂದಂತಹವುಗಳು ಎಂದು ಭಾವಿಸುತ್ತಾನೆ. ತತ್ಪರಿಣಾಮವಾಗಿ ಅವನು ತಾಳ್ಮೆ, ಶಾಂತಿ ಮತ್ತು ಸಹಿಷ್ಣುತೆಗಳನ್ನು ತನ್ನ ಜೀವನದಲ್ಲಿ ಬೆಳೆಸಿಕೊಂಡು ಸರಳ ಮತ್ತು ನೇರ ವ್ಯಕ್ತಿತ್ವವುಳ್ಳವನಾಗುತ್ತಾನೆ. ಗುರುವಿನ ಸ್ಮರಣೆಯಲ್ಲಿದ್ದಾಗ ಅವನು ಗುರುವಿನ ಇರುವಿಕೆಯನ್ನು ಅನುಭವಿಸತೊಡಗುತ್ತಾನೆ. ತಾನು ಸೇವಿಸುವದೆಲ್ಲವೂ ಪ್ರಸಾದವೆಂದು ಭಾವಿಸತೊಡಗುತ್ತಾನೆ. ಆಗ ಆಹಾರ ಮತ್ತು ಅದರ ರುಚಿಯ ತಾರತಮ್ಯಗಳು ವಿದಾಯ ಹೇಳತೊಡಗುತ್ತವೆ. ದೇಹದ ಪ್ರತಿಯೊಂದು ಕಣವು ಶುದ್ದೀಕರಣಗೊಂಡು ತನ್ನನ್ನು ಪವಿತ್ರ ಹಾಗು ಪ್ರಮಾಣಿಕತೆಗಳ ಮೂಲಕ ಗುರಿಯತ್ತ ನಡೆಸುತ್ತವೆಂಬ ಬಾವನೆಗಳ ರೂಪದಲ್ಲಿ ಅವನ ಆಧ್ಯಾತ್ಮಿಕ ಪ್ರಗತಿ ವೃದ್ಧಿಯಾಗುತ್ತದೆ.

ಮೇಲ್ಕಾಣಿಸಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡುವದರಿಂದ ಮತ್ತು ಸದ್ಗುರುಗಳ ಕೃಪೆಯಿಂದ ಅವನು ತಾನು ನಿರ್ಮಿಸಿಕೊಂಡ ಹಾಗೂ ದೈವಿ ನಿರ್ಮಾಣದ ವಸ್ತುಗಳಲ್ಲಿ ಸಾಮರಸ್ಯತೆಯನ್ನು ಬೆಳೆಸಿಕೊಳ್ಳುತ್ತಾನೆ. ಇದರಿಂದಾಗಿ ಸಮಾಜದಲ್ಲಿಯ ವ್ಯವಹಾರಗಳು ಸಮತೋಲನವಾಗಿರುತ್ತವೆ. ಸದ್ಗುರುಗಳ ದೃಷ್ಟಿಯನ್ನು ಆಕರ್ಶಿಸುವ ರೀತಿಯಲ್ಲಿ ತನ್ನನ್ನು ರೂಪಿಸಿಕೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಅರ್ಹವಾದ ಗೌರವ ಮತ್ತು ಅವರಿಗೆ ಸಲ್ಲಬೇಕಾದುದ್ದನ್ನು ಕೊಡಲಾರಂಭಿಸುತ್ತಾನೆ. ತತ್ಪರಿಣಾಮವಾಗಿ ಜನರು ಅವನೆಡೆಗೆ ಆಕರ್ಷಿತರಾಗುತ್ತಾರೆ, ಮತ್ತು ಪ್ರತಿಯೊಬ್ಬರ ಹೃದಯದಲ್ಲಿ ಪವಿತ್ರತೆ ಮತ್ತು ಪ್ರೇಮ ಭಾವನೆಗಳನ್ನು ಅವನು ಹುಟ್ಟಿಸುತ್ತಾನೆ.

ಕೊನೆಯದಾಗಿ, ಅವನು ಸದ್ಗುರುಗಳನ್ನು ನಿಜಾರ್ಥದಲ್ಲಿ ಗುರುವೆಂದು ಸಾಕ್ಷಾತ್ಕಾರ ಹೊಂದಿ ತನ್ನನ್ನು ಅವನಿಗೆ ಅವಲಂಬಿತ ಗುಲಾಮನಾಗಿ ಅರ್ಪಿಸಿಕೊಳ್ಳುತ್ತಾನೆ. ಇದರಿಂದ ಅವನಲ್ಲಿ ಅಸ್ತಿತ್ವರಹಿತ ಸ್ಥಿತಿಯುಂಟಾಗಿ ಗುರುವಿನ ಲಕ್ಷ್ಯವನ್ನು ತನ್ನೆಡೆಗೆ ಆಕರ್ಷಿಸಿ ಆತನೊಡನೆ ಸಂಬಂಧ ಸ್ಥಾಪಿಸುತ್ತಾನೆ. ಜೀವನದ ಈ ಸಂದರ್ಭದಲ್ಲಿ ಅವನು ಶುದ್ಧ, ಸರಳ, ಸ್ಥಿರ, ಸಂಪೂರ್ಣ ಅಜ್ಞಾನಿ ಹಾಗು ನಿಕೃಷ್ಟ ಸ್ಥಿತಿಯಲ್ಲಿರುವವನು (ಜೀವನ್ಮತ)ಎಂದು ಕರೆಯಬಹುದು. ವಾಸ್ತವಿಕತೆಯಲ್ಲಿ ಇದಕ್ಕೆಯೇ ಸರಳ ಜೀವನವೆಂದು ಕರೆಯಬಹುದು. ಸಹಜ ಮಾರ್ಗ ಸಾಧನಾ ಪದ್ಧತಿಯು ಸದ್ಗುರುಗಳ ಸಹಾಯದಿಂದ ಇಂತಹ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ.

ನಮಗೆಲ್ಲಾ ಇಂತಹ ನಿಜವಾದ ಸರಳ ಜೀವನವನ್ನು ದಯಪಾಲಿಸಲೆಂದು ನಾನು ಪೂಜ್ಯ ಗುರುಗಳನ್ನು ಪ್ರಾರ್ಥಿಸುತ್ತೇನೆ.