1. ಸೇವೆ ಹಾಗೂ ತ್ಯಾಗಗಳು ಆಧ್ಯಾತ್ಮಿಕ ದೇಗುವನ್ನು ಕಟ್ಟುವ ಎರಡು ಸಾಧನಗಳಾಗಿವೆ. ಪ್ರೇಮವಂತೂ ಅದರ ಅಡಿಗಲ್ಲು.VR II 62
    2. ವಾಸ್ತವಿಕವಾಗಿ ಪುಸ್ತಕ ಅಥವಾ ಧರ್ಮಗ್ರಂಥಗಳಿಂದ ಆಯ್ದುಕೊಂಡ ಜ್ಞಾನವು ನಿಜಾರ್ಥದಲ್ಲಿ ಜ್ಞಾನವೇ ಅಲ್ಲ.  ಅದು ಬೇರೆಯವರ  ಅನುಭವಗಳನ್ನಾಧರಿಸಿದ ಪ್ರೌಢಿಮೆ ಮಾತ್ರವಾಗಿದ್ದು ಕೇವಲ ಬೌದ್ಧಿಕ ಸಿದ್ಧಿಯಾಗಿದೆಯೆ ಹೊರತು ಹೃದ್ಗತವಾದ ಸ್ವಾನುಭವವನ್ನಾಧರಿಸಿದ ಪ್ರಾಯೋಗಿಕ ಜ್ಞಾನವಲ್ಲ. ವಾಸ್ತವಿಕವಾಗಿ ಜ್ಞಾನವನ್ನು ಹುಡುಕುವ ನಿಜವಾದ ಜಿಜ್ಙಾಸುಗಳಿಗೆ ಇದು ದಾರಿದೀಪವಾಗಲಿ. VR II 92
    3. ಅನಂತಸಾಗರದ ಅಂಚನ್ನು ಮುಟ್ಟಿದಾಗ ಆಧ್ಯಾತ್ಮದ ವಲಯವು ಆರಂಭವಾಗುವುದು. ಆ ಬಿಂದುವಿಗಿಂತ ಈಚೆಗೆ ಇರುವುದೆಲ್ಲ ಆಧ್ಯಾತ್ಮದ ಪ್ರತಿಬಿಂಬಮಾತ್ರವೆಂದು ಭಾವಿಸಬೇಕು.VR I 120
       
    4. ವಸ್ತುತ: ಆಧ್ಯಾತ್ಮದ ಕ್ಷೇತ್ರವು ಇಂದ್ರಿಯಗಳ ವಲಯದ ಆಚೆಯಿಂದ ಆರಂಭವಾಗುತ್ತದೆ. ಮತ್ತು ಸ್ಪಷ್ಟವಾಗಿ ಹೇಳುವುದಾದರೆ, ಇಂದ್ರಿಯಗಳ ವಲಯವನ್ನು ದಾಟಿ ಹೋಗಲಾರದ ಯಾವ ಗುರುವೂ ನಿಜಾರ್ಥದಲ್ಲಿ ಗುರುವೇ ಅಲ್ಲ.VR I 112
    5. ಅಸಮಾಧಾನವು ಪರಮಾವಧಿಯನ್ನು ಮುಟ್ಟಿದಾಗ ಶಾಂತಿಯ ಆರಂಭ ಚಿನ್ಹೆಗಳು ಕಂಡುಬರಲೂಬಹುದು. ತಾವು ಆದ್ಯಾತ್ಮಿಕ ಕ್ಷೇತ್ರದಲ್ಲಿ ಕಾಲಿಟ್ಟುದುದು ಶಾಂತಿ  ಸಮಾಧಾನಗಳನ್ನು ಹೊಂದಲೆಂದೇ ಹೊರತು ಅತೃಪ್ತಿ-ವ್ಯಥೆಗಳನ್ನು ಪಡೆಯಲಿ ಅಲ್ಲವೆಂದು  ಯಾರಾದರೂ ಮುಂದೆಬಂದು ಹೇಳಬಹುದು.VR I 5.
    6. ವಸ್ತುತ: ಆಧ್ಯಾತ್ಮಿಕತೆಯು ಮನಸ್ಸಿನ ಅತಿ ಸೂಕ್ಷ್ಮವಾದ ಸ್ಥಿತಿಯಾಗಿದ್ದು ಉಳಿದೆಲ್ಲವೂ ಅದಕ್ಕಿಂತ ಸ್ಥೂಲವಾಗಿಯೆ ಕಾಣುವುದು . ಇಂದ್ರಿಯಗಳಿಗಾಗುವ ಗುಲಾಬಿ ಹೂವಿನ ಸೂಕ್ಷ್ಮ ಸುಗಂಧದ ಅನುಭವವು ಕೂಡ ಅದರ ಮುಂದೆ ಬಹಳ ಸ್ಥೂಲವೆನಿಸುವುದು. ಪೂರ್ಣ ಸಮಾಧಾನವೂ ಮಿತತ್ವವೂ ಉಳ್ಳ ಹಾಗೂ ನಿಸರ್ಗದೊಂದಿಗೆ ಪೂರ್ಣ ಸಮರಸವಾದ ಸ್ಥಿತಿಯೆಂದು ಅದನ್ನು ಹೇಳಬಹುದು. ಮನಸ್ಸಿನ ಈ ಸ್ಥಿತಿಯಲ್ಲಿ ಎಲ್ಲ ಇಂದ್ರಿಯಗಳೂ ಶಕ್ತಿಗಳೂ ಸುಪ್ತವಾಗಿರುತ್ತವೆ. ಅವುಗಳ ಕಾರ್ಯವು ತಾನಾಗಿಯೆ ನಡೆದು ಮನಸ್ಸಿನ ಮೇಲೆ ಅದರ ಪರಿಣಾಮ ಸ್ವಲ್ಪವೂ ಆಗುವುದಿಲ್ಲ.RD 46
    7. ಜಡತ್ವದ ಸ್ಥಿತಿಯು ಆಧ್ಯತ್ಮದ ಒಂದು ಆರಂಭಾವಸ್ಥೆ. ಈ ಅವಸ್ಥೆಯಲ್ಲಿ ಅಭ್ಯಾಸಿಗೆ ತಾನು ಮೃತನೆಂಬ ಅನುಭವವಾಗುತ್ತದೆ. ಜನರು ಅದನ್ನು ಕೊನೆಯ ಸ್ಥಿತಿಯೆಂದು ತಪ್ಪಾಗಿ ಭಾವಿಸುವರು.VR I 146
    8. ಕಲುಷಿತ ಮನೋವೃತ್ತಿಯು ಎಲ್ಲಕ್ಕೂ ದೊಡ್ಡ ಅನಿಷ್ಟ-ಅದೇಕೆ, ಆಧ್ಯಾತ್ಮಿಕ ಜೀವನಕ್ಕೆ ಮಾರಕವಾದ ವಿಷವಾಗಿದೆ. ಅದು ಮನುಷ್ಯನ ವಿಶಾಲ ದೃಷ್ಟಿಯನ್ನು ಲೋಪಗೊಳಿಸಿ ಆತನನ್ನು ತನ್ನ ಮಟ್ಟಿಗೇ ಬಂಧಿತನನ್ನಾಗಿಡುತ್ತದೆ. ಅದಕ್ಕೆ ಅಂಟಿಕೊಂಡವರಲ್ಲಿ ಸಂಕುಚಿತ ಮನಸ್ಸನ್ನು ಹುಟ್ಟಿಸಿ ಅವರ ಪ್ರಗತಿಯ ಎಲ್ಲ ಪ್ರತ್ಯಾಶೆಯನ್ನೇ ಕಳೆದುಬಿಡುತ್ತದೆ. ಕಲುಷಿತ ಮನೋವೃತ್ತಿಯು ಅನ್ಯರ ಬಗ್ಗೆ ದ್ವೇಷವನ್ನು ಬೆಳೆಸುವುದಲ್ಲದೆ ಅದು ಪ್ರಚ್ಛನ್ನ ರೀತಿಯಲ್ಲಿ ಅತ್ಮ ಪ್ರತಿಷ್ಠೆಯ ಸುಳ್ಳು ಭಾವನೆಯೇ ಆಗಿದೆ.RD 3
    9. ಹಿಂದುಗಳ ಆಧ್ಯಾತ್ಮಿಕತೆಗೂ ಮಸಲ್ಮಾನ ಸೂಫಿಗಳ ಆಧ್ಯಾತ್ಮಿಕತೆಗೂ ಬಹಳ ಅಂತರವಿದೆ. ಸೂಫಿಗಳದು ಭೌತಿಕತೆಗೆ ಹಾಗು ಆಧ್ಯಾತ್ಮಿಕತೆಯ ಸಮ್ಮಿಲನವಾಗಿದ್ದರೆ ಹಿಂದುಗಳ ಆಧ್ಯಾತ್ಮಿಕತೆಯು ಪರಮತತ್ತ್ವಕ್ಕೆ ತೀರ ಸಮೀಪವಾಗಿದೆ.VR I 271.
    10. ಭಾರತದಲ್ಲಾದರೋ ಋಷಿಗಳು ಮೊದಲು ತಮ್ಮ ಜೀವನದಲ್ಲಿ ಪ್ರಯೋಗ ಮಾಡಿ ಅನಂತರ ತತ್ವ ವಿವೇಚನೆ ಮಾಡಿದ್ದಾರೆ*. ತತ್ವ ಶಾಸ್ತ್ರದಲ್ಲಿ ವಿವೇಚಿಸಲಾದ ಮಟ್ಟಕ್ಕೆ ಅವರು ಬರದಿದ್ದರೂ ಚಿಂತೆಯಿಲ್ಲ; ಅಸ್ತಿತ್ವದಲ್ಲಿರುವ ಪದಾರ್ಥಗಳ ರಹಸ್ಯವನ್ನು ಭೇದಿಸಲು ತಮಗೆ ಶಕ್ಯವಿದ್ದ ಮಟ್ಟಿಗೆ ತಮ್ಮ ಪ್ರಗತಿಯ ಮಟ್ಟಕ್ಕನುಸಾರವಾಗಿ ಅವರು ಪ್ರಯತ್ನ ಮಾಡಿದ್ದಾರೆ. ಅದರ ಫಲಸ್ವರೂಪವಾಗಿಯೇ ವಿವಿಧ ವರ್ಣಗಳಲ್ಲಿ ಕಾಣುತ್ತಿರುವ ಷಡ್ದರ್ಶನಗಳು ಹುಟ್ಟಿಕೊಂಡಿವೆ. ನಾವು ಯಾವಾಗಲೂ ನಮ್ಮ ಅಭ್ಯಾಸವು ಮುಗಿದಾಗಲೇ ವಿಷಯ ವಿವೇಚನೆಗೆ ಕೈಹಾಕಬೇಕು.ERY 4-5
    11. ನಿಮ್ಮ ಮನಸ್ಸು ಈಗ ಒಂದು ರೀತಿಯಿಂದ ಶಾಶ್ವತವಾದ  ಸುಖ-ಶಾಂತಿಗಳ ಕ್ಷೇತ್ರಕ್ಕೆ ಹೊಂದಿಕೊಂಡಿದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ನೀವು ನಿಮ್ಮ ವ್ಯಷ್ಟಿ ಮನಸ್ಸಿನಿಂದ ಉನ್ನತ ಕ್ಷೇತ್ರದೆಡೆಗೆ ದಾರಿ ಮಾಡಿರುವಿರಿ. ಸರ್ವ ಶಕ್ತನ ರಾಜ್ಯದಲ್ಲಿಯ ಶಾಂತಿಯ ಸೌಮ್ಯ ತೆರೆಗಳು ವ್ಯಷ್ಟಿ ಮನಸ್ಸಿನ ಕಡೆಗೆ ನೇರವಾಗಿ ಹರಿದು ಬರುವುದರಿಂದ ಕಾಲಕ್ರಮದಲ್ಲಿ ನೀವು ಆ ಶಾಂತಿಯೊಂದಿಗೆ ಬೆರೆತು ಹೋಗುವಿರಿ. ERY 9-10.
    12. ಹೆಚ್ಚು ಹೆಚ್ಚು ಸೂಕ್ಷವಾದ ಅಸಂಖ್ಯ ವಿಶ್ವಗಳಿರುವಂತೆ ಮನುಷ್ಯನ  ಸ್ಥೂಲವಾದ ಭೌತಿಕ ರೂಪದ ಹಿಂದೆ ಅಸ್ತಿತ್ವದ ಅನೇಕ ಸೂಕ್ಷ ರೂಪಗಳಿರುವವು. ಪೂರ್ಣ ಹೊರಗಿನ ರೂಪವೇ ಈ ಸ್ಥೂಲ ಶರೀರ. ಇದರ ಹಿಂದೆ ಸೂಕ್ಷ ಶರೀರ ಹಾಗೂ ಕಾರಣ ಶರೀರಗಳಿವೆ. ಹೊರಗಿನ ಈ ಮೂರು ರೂಪಗಳ ಹಿಂದೆ ಅನೇಕಾನೇಕ ಸೂಕ್ಷ ರೂಪಗಳಿವೆ. ಅವು ಎಷ್ಟು ಸೂಕ್ಷವಾಗಿವೆಯೆಂದರೆ ತತ್ವಜ್ಞರು ಅವನ್ನು ಶರೀರಗಳೆಂದು ಕರೆಯದೆ ಆತ್ಮದ ಸುತ್ತಲಿನ ಸೂಕ್ಷ ಆವರಣಗಳೆಂದು ಕರೆದಿದ್ದಾರೆ.RD 87
    13. ಹೃದಯ ಮಂಡಲವು ಹೆಚ್ಚು ಕಡಿಮೆ ಅಡಿಯಿಂದ ಮುಡಿಯವರೆಗೂ ಹಬ್ಬಿದೆ. ಸರ್ವಶಕ್ತನ ಸೃಷ್ಟಿಯೆಲ್ಲವೂ ಈ ವೃತ್ತದಲ್ಲಿಯೇ ಇದೆ. ಕಾರ್ಯವು ಮಾತ್ರ ವಿಭಕ್ತವಾಗಿದ್ದು ಬೇರೆ ಬೇರೆ ಇಂದ್ರಿಯಗಳ ಮೂಲಕ ನೆರವೇರುವುದು. ನಾವು ಹೃದಯ ಮಂಡಲದ ಮಧ್ಯಬಿಂದುವಿನ ಅಡಿಯಲ್ಲಿ ಹೋದರೆ ಬೇರೆ ಬೇರೆ ನಿಯೋಗಿಗಳು ತಮಗೊಪ್ಪಿಸಲಾದಂತೆ ಕೆಲಸ ಮಾಡುತ್ತಿರುವುದನ್ನು ಕಾಣುವೆವು. ಇದಕ್ಕೆ ಬೇಕಾಗುವ ಭಗವತ್ ಶಕ್ತಿಯೂ ಅವರಲ್ಲಿದೆ. ಈ ಪ್ರಕಾರ ಹೃದಯ ಮಂಡಲವು ನಿಸರ್ಗದ ದೊಡ್ಡ ಯಂತ್ರೋಪಕರಣವಾಗಿದೆ.ERY 31.
    14. ಹೃದಯ ಮಂಡಲವನ್ನು ದಾಟಿದ ನಂತರ ನಾವು ಭಗವಂತನ ಆದಿಮನವನ್ನು ಅಥವಾ ಪರಾಮನಸ್ಸನ್ನು ಪ್ರವೇಶಿಸುವವು. ಇಲ್ಲಿ ಅನುಭವಕ್ಕೆ ಬರುವ ಸ್ಥಿತಿಯನ್ನು ಯಾವ ಶಬ್ದಗಳಿಂದಲೂ ವರ್ಣಿಸಲಾಗದು. ಈ ವಿಸ್ತ್ರತವಾದ ಕ್ಷೇತ್ರದ ಕಲ್ಪನೆಯನ್ನು ತಂದುಕೊಡುವ ಹಲವು ಲಕ್ಷಣಗಳು ಮಾತ್ರ ಉಂಟು. ಹೃದಯ ಮಂಡಲದಲ್ಲಿ ನಾವು ಪಡೆದುಕೊಂಡುದು ಕಲ್ಪನೆಗೆ ನಿಲುಕಲಾರದು. ಈಗ ನಾವು ಉಚ್ಚತರ ಸ್ಥಿತಿಯನ್ನು ಹೊಂದುವೆವು. ಹೃದಯ ಮಂಡಲದ ಸಾರಸರ್ವಸ್ವವೂ ಇಲ್ಲಿದೆ. ವಿಶ್ವದ ಸದ್ಯದ ಸ್ವರೂಪವು ಆ ಮಹಾ ಮನಸ್ಸಿನ ಕಾರ್ಯಗಳ ಮೂಲಕವೇ ಆಗಿದೆ. ಆ ಕಾರ್ಯಗಳೆಲ್ಲ ಯಾವ ಸಂಮ್ಮಿಶ್ರಣವೂ ಇಲ್ಲದ, ಬೆಳಕೂ ಇಲ್ಲದ ಶುದ್ಧಶಕ್ತಿಗಳು. ಹೃದಯ ಮಂಡಲವು ಮೂಲರೂಪದಲ್ಲಿ ಬಂದಾಗ ಅದು ಶಾಂತಿಯಿಂದ ತುಂಬಿ ತುಳುಕುತ್ತಿರುವುದೆಂದು ನಾವು ಆಗಲೇ ಹೇಳಿದ್ದೇವೆ. ಅದು ಎಂಥ ಶಾಂತಿಯೆಂಬುದು ಮಾತ್ರ ಕಲ್ಪನಾತೀತವಾಗಿದೆ. ಆದರೆ ಹೇಗಾದರೂ ಅದನ್ನು ವ್ಯಕ್ತಗೊಳಿಸಬೇಕೆಂಬ ದೃಷ್ಟಿಯಿಂದ ಹೇಳುವುದಾದರೆ, ಹೃದಯಮಂಡಲದಲ್ಲಿಯ ಶಾಂತಿಗಿಂತ ಅದು ನಯವುಳ್ಳುದ್ದಾಗಿರುತ್ತದೆಂದು ಸ್ಥೂಲವಾಗಿ ಹೇಳಬಹುದು. ಈಗ ಅಲ್ಲಿ ಉಳಿದಿರುವುದು ಶಾಂತಿಯ ಕಲ್ಪನೆ ಮಾತ್ರ ಬೇರೆ ಶಬ್ದಗಳಲ್ಲಿ ಹೇಳುವದಾದರೆ, ಶಾಂತಿಯನ್ನಷ್ಟೇ ಪಡೆಯುವುದು ನಮ್ಮ ಗುರಿಯಲ್ಲವಾದ್ದರಿಂದ ಶಾಂತಿಯ ಮರೆವಿನ ಸ್ಥಿತಿಯು ಅಲ್ಲಿ ಗಾಢವಾಗಿರುವುದು. ಈ ಮಜಲನ್ನು ಪ್ರವೇಶಿಸಿದಾಗ ನಮ್ಮ ಅನುಭವ ಶಕ್ತಿಯು ಬಹುಮಟ್ಟಿಗೆ ಹೆಚ್ಚುವುದು. ಈಗ, ಅನುಭವ ಪಡೆಯುವುದೊಂದೇ ಉಳಿಯುವುದು. ಇಲ್ಲಿಂದಲೇ ಪದಾರ್ಥಗಳು ರೂಪುಗೊಂಡು ಬೆಳಕಿಗೆ ಬರುವವು. ಇಲ್ಲಿ ಚಲನವಿದೆ. ಸೃಷ್ಟಿ ರಚನೆಯ ಉದ್ದೇಶದಿಂದ ಅವ್ಯಕ್ತ ಚಲನಗಳು ವೃದ್ಧಿ ಹೊಂದಿ ಕೆಳಗಡೆ ಒತ್ತಡವನ್ನು ಹೆಚ್ಚಿಸುವವು. ತತ್ಪಪರಿಣಾಮವಾಗಿ ನಾವು ಸೃಷ್ಟಿಯಲ್ಲಿ ಅಸಂಖ್ಯ ವೈವಿಧ್ಯಗಳನ್ನು ಕಾಣುವೆವು. ಈ ಮಂಡಲವು ಆಕಾಶದ ಒತ್ತಡವನ್ನು ಮೀರಿದೆಯಾದ್ದರಿಂದ ಅಲ್ಲಿ ಗಾಳಿಯು ಬೀಸುವುದಿಲ್ಲ. ಇದು ಭಗವಂತನ ಅತ್ಯಂತ ಪ್ರಬಲವಾದ ಕ್ಷೇತ್ರ. ನಿಮ್ಮ ತಿಳುವಳಿಕೆಗಾಗಿ. ನೀವದನ್ನು ದೈವೀ ಯಂತ್ರವನ್ನು ನಡೆಸುವ ಶಕ್ತಿ. ಕೇಂದ್ರವೆಂದು ಕರೆಯಬಹುದು.  ಕಂಪನಗಳನ್ನು ಉದ್ರೇಕಿಸುವ ಅದ್ಬುತ ಶಕ್ತಿಯುಳ್ಳ ಅಚಲ ವಸ್ತುಗಳು ಅಲ್ಲಿರುವವು. ಈ ಕಲ್ಪನೆಯನ್ನು ಸ್ಪಷ್ಟಪಡಿಸುವುದು ಬಹಳ ಕಠಿಣ. ಅದನ್ನು ಅನುಭವಿಸಿಯೇ ತಿಳಿಯಬೇಕು. ಅವ್ಯಕ್ತವಾಗಿದ್ದರೂ,  ಚಲನವಿರುವಾಗ ಅಲ್ಲಿ ಶಾಂತಿಯು ಹೇಗಿರುವುದೆಂದು ಜನರು ಸಂದೇಹಪಡಬಹುದು. ಸೃಷ್ಟಿಯ ಕಲ್ಪನೆಯನ್ನು ಅಗೋಚರವೆಂದು ಹೇಳಿದಂತೆ ಶಾಂತಿಯಾದರೂ ಅತಿಸೂಕ್ಷ್ಮವೂ ಅಗೋಚರವೂ ಆಗಿದೆಯೆಂದು ಹೇಳಬಹುದು. ಎಷ್ಟಾದರೂ ಅದು ಏನಾದರೊಂದು ವಿಷಯವೇ ಆಯಿತು .’ಅಸತ್’ ಅಥವಾ ‘ಶೂನ್ಯ’ ವೆಂದು ಹೇಳಲಾದ ಬಿಂದುವಿಗೆ. ನಾವಿನ್ನೂ ಬಂದಿಲ್ಲ. ಹಾಗಾದರೆ ಆ ಸ್ಥಿತಿಯನ್ನು ನಾವು ಯಾವಾಗ ಮುಟ್ಟುವೆವು? ನಾವು ನಮ್ಮನ್ನು ಶೂನ್ಯರನ್ನಾಗಿ ಮಾಡಿಕೊಂಡಾಗ ಮಾತ್ರ ಆ ಸ್ಥಿತಿಯನ್ನು ಹೊಂದುವೆವು. ಆ ಶೂನ್ಯಸ್ಥಿತಿಯನ್ನು ಹೊಂದಲು ನಾವು ಪರಾಮನಸ್ಸಿನಿಂದ ಬಲವನ್ನು ಪಡೆಯುವೆವು. ಈ ಸ್ಥಿತಿಯನ್ನು ಹೊಂದಲು ದೇವತೆಗಳು ಸಹ ಹಂಬಲಿಸುವರು. ಆದರೆ ಯಾರು ಎಲ್ಲ ಸಂಸ್ಕಾರಗಳಿಂದ ಮುಕ್ತರಾಗಿ. ‘ಜೀವನ್ಮ್ರತ’ ರಾಗಿರುವರೋ ಅವರಿಗೆ ಮಾತ್ರ ಈ ಸ್ಥಿತಿಯ ಸ್ಪರ್ಶವುಂಟಾಗುವುದು.ERY 40-41-42
    15. ಮಾನವ ಮಾತ್ರರೆಲ್ಲರ ವಿಷಯದಲ್ಲಿಯೂ ನಾವು ಸಹೃದಯರಾಗಿರಬೇಕು. ಆಗ ಶಕ್ತಿಯು ತಂತಾನೇ ಅವರತ್ತ ಧಾವಿಸುವುದು. ಆಧ್ಯಾತ್ಮಿಕ ಪುನರುಜ್ಜೀವನಕ್ಕೆ ಇದೇ ಮೊದಲ ಹೆಜ್ಜೆಯೆಂದು ನನ್ನ ಭಾವನೆ. ಈ ತಳಹದಿಯ ಮೇಲೆಯೇ ಆಧ್ಯಾತ್ಮಿಕ ಸೌಧವನ್ನು ಕಟ್ಟಿ ನಿಲ್ಲಿಸಬೇಕಿದೆ.ME P 87
    16. ಯಾವಾಗ ದಿವ್ಯ ಚಕ್ಷುವು (divine eye i.e pineal eye) ತೆರೆಯಲ್ಪಡುವುದೋ ಆಗ ಆಧ್ಯಾತ್ಮಿಕತೆಯ ಕ್ಷೇತ್ರ ಪ್ರಾರಂಭವಾಗುತ್ತದೆ. ಈ ಸ್ಥಳವು ಶುಕ್ರಗ್ರಹದೊಂದಿಗೆ ಸಂಬಂಧ ಪಟ್ಟಿದ್ದು ಇದರ ಮೇಲೆ ನಿಯಂತ್ರಣ ಪಡೆದ ಯಾರೇ ಆಗಲಿ ಶುಕ್ರ ಗ್ರಹದ ಮೇಲೆ ಸಂಪೂರ್ಣ ಪ್ರಭುತ್ವ ಪಡೆಯುತ್ತಾರೆ . ಈ ಸ್ಥಳವು ಸಂಪೂರ್ಣವಾಗಿ ವಿಕಾಸಗೊಂಡು ಅದರ ಅಧೀನವಾಗಿವ ಎಲ್ಲ ಚಕ್ರಗಳು ಶುದ್ಧಗೊಳಿಸಲ್ಪಟ್ಟಾಗ ದೈವೀ ಪ್ರಜ್ಞೆ ಉದಿಸಲಾರಂಭಿಸುತ್ತದೆ. ಆಗ ಒಬ್ಬನು ವಾಯು ಮಂಡಲದಲ್ಲಿ ತೇಲಾವ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳನ್ನು ಸಹ ಅನುಭವಿಸಲು ಹಾಗೂ ತಿಳಿಯಲು ಬಲ್ಲವನಾಗುತ್ತಾನೆ.VR II N103-104.
    17. ದೈವೀ ಶಕ್ತಿಯನ್ನು ಉಪಯೋಗಿಸಲು ಸಮರ್ಥನಲ್ಲದ ಮನುಷ್ಯನು ದೈವತ್ವದಲ್ಲಿ ಇಣುಕಿಯೂ ನೋಡಿರಲಾರ  ಎಂಬುದು ನನ್ನ ಅಭಿಮತ.VR II 75
    18. ಕೆಲ ವೇಳೆ ಅದು ಮಾಯೆಕೊನೆಗೊಂಡಾಗ, ಅರ್ಥಾತ್ ಸಂಕಲ್ಪವು ಮಾಯಾವಲಯದಿಂದ ಮುಕ್ತವಾದಾಗ ಆಧ್ಯಾತ್ಮದ ಆರಂಭವೆಂದು ಭಾವಿಸುವಂತೆ ಹೇಳುತ್ತದೆ. ಇದುವರೆಗಿನ ಸಂಗತಿಗಳೆಲ್ಲ ಻ನುಷಂಗಿಕ ವಿಷಯಗಳು. ಆಧ್ಯಾತ್ಮದ ಆರಂಭ ಇನ್ನೂ ತುಂಬ ದೂರವಿದೆ.AB I VOL I 169.
    19. ಈಗ “ತಿಳಿವಳಿಕೆ ಅಥವಾ ಕಲ್ಪನೆಯು ಭಗವಂತನ ವಲಯವನ್ನು ಪ್ರವೇಶೀಸಿದಾಗಲೇ ಆಧ್ಯಾತ್ಮದ ಆರಂಭವೆಂದು ತಿಳಿಯಬೇಕು”AB I VOL I 174.
    20. ಧರ್ಮದ ಕೊನೆಯೇ ಆಧ್ಯಾತ್ಮದ ಆರಂಭ; ಆಧ್ಯಾತ್ಮದ ಕೊನೆಯೇ ಸತ್ಯದ ಆರಂಭ; ಹಾಗೂ ಸತ್ಯದ ಕೊನೆಯೇ ನಿಜವಾದ ಆನಂದ ಅದೂ ಹೊರಟು ಹೋದಾಗ ನಾವು ಗುರಿಯನ್ನು ಮುಟ್ಟುವೆವು.ಅದೇ ಶಬ್ದಗಳಿಗೆ ನಿಲುಕದ ಅತ್ಯುನ್ನತ ಗುರಿಯಾಗಿದೆ.RD 5.