ಹುಟ್ಟಿದ ತಕ್ಷಣ ಮಗು ಅಳುತ್ತದೆ. ಇದು ಪ್ರಾಣ(ಚೈತನ್ಯ)ದ ಮೊದಲ ಸಂಕೇತವಾಗಿದೆ. ಅದು ಬೇಳವಣಿಗೆ ಹಾಗು ಚಲನೆಯನ್ನು ಪ್ರಚೋದಿಸುತ್ತದೆ. ಮಗು ಸ್ವಾಭಾವಿಕವಾಗಿ ಪರಿಸರವನ್ನು ಅನ್ವೇಷಣೆ(ಅಧ್ಯಯನ) ಮಾಡತೊಡಗುತ್ತದೆ. ಸ್ವಾದ (ರುಚಿ)ದಿಂದ ಆರಂಭವಾಗಿ ದೃಷ್ಟಿ, ಶ್ರವಣ, ಸ್ಪರ್ಶ ಇತ್ಯಾದಿಗಳ ಕಡೆಗೆ ಮುಂದುವರೆಯುತ್ತದೆ. ತಾನು ಏನನ್ನು ಅಧ್ಯಯನ ಮಾಡುತ್ತಿದ್ದೇನೆಂಬುದರ ಅರಿವು ಮಗುವಿಗೆ ಇರುವದಿಲ್ಲ. ಅನ್ವೇಷಣಾ ಕಾರ್ಯ ಪ್ರಬುದ್ಧಾವಸ್ಥೆಯಲ್ಲಿಯೂ ಮುಂದುವರೆಯುತ್ತದೆ. ಆಗ ಅದರ ದಿಶೆಯು ಬದಲಾವಣೆಯಾಗಿ ಹೆಸರು, ಪ್ರಸಿದ್ಧಿ, ಆರೋಗ್ಯ, ಸಂಪತ್ತು, ಸುಖ-ಸೌಖ್ಯತೆ ಇತ್ಯಾದಿಗಳ ರೂಪ ಪಡೆಯುತ್ತದೆ. ಈ ಪ್ರವೃತ್ತಿಯು ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನಗಳಂತಹ ವಿವಿಧ ವಿಭಾಗಗಳಿಗೆ ಕಾರಣೀಭೂತವಾಗುತ್ತದೆ. ಇವ್ಯಾವುಗಳಿಂದಲೂ ಸಂತುಷ್ಟನಾಗದೇ ಅವನು ಧರ್ಮ, ಮಾದಕ ಪಧಾರ್ಥ, ಹಠಯೋಗ, ಪ್ರಾಣಾಯಾಮಗಳಂತಹ ಅನ್ಯ ವಿಷಯಗಳೆಡೆಗೆ ತಿರುಗುತ್ತಾನೆ. ಪ್ರತಿಯೊಂದು ಪ್ರಯತ್ನ ತನ್ನದೇ ಆದ ವಿಶಿಷ್ಟತೆಯನ್ನು ತಂದು ಮೊದಲಿನವುಗಳ ಗೊಂದಲಕ್ಕೆ ಕೂಡಿಕೊಳ್ಳುತ್ತದೆ.

ತನ್ನೆಲ್ಲ ಹವ್ಯಾಸ(ವೃತ್ತಿ)ಗಳಿಗೆ ಇಂದ್ರಿಯಗಳನ್ನು ಉಪಯೋಗಿಸುತ್ತಾನೆ ಮತ್ತು ಬಾಹ್ಯ ವಸ್ತುಗಳನ್ನು ಬಳಸಿಕೊಳ್ಳುತ್ತಾನೆ. ಅವನಿಗೆ ಮಾರ್ಗದರ್ಶನದ ಕೊರತೆಯಿದೆ. ಅದಕ್ಕಾಗಿ ಅವನು ಹುಡುಕಬೇಕಾಗುತ್ತದೆ. ಅವನಿಗೆ ಯೋಗ್ಯ ಮತ್ತು ಪರಿಪೂರ್ಣನಾದವನು ದೊರೆತಾಗ, ಅವನ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ಪರಿಶೀಲಿಸಿ ಹಾಗು ಪರೀಕ್ಷಿಸಿ ಜಾಗರೂಕತೆಯಿಂದ ಮುಂದುವರಿಯಬೇಕಾಗುತ್ತದೆ. ಆತ್ಮಸ್ತುತಿ ಮಾಡಿಕೊಳ್ಳುವವರಿಂದ ಮತ್ತು ಆಷಾಢಭೂತಿಗಳಿಂದ ರಕ್ಷಿಸಿಕೊಳ್ಳಬೇಕಾಗುವದು. ಪರಿಪೂರ್ಣ ವ್ಯಕ್ತಿಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ವಿಧಾನಗಳು ಮನುಷ್ಯ ಆನ್ವೇಷಕ ಪ್ರವೃತ್ತಿಗೆ ಸೂಕ್ತವಾದ ಪರಿಹಾರವಾಗಿರುತ್ತದೆ. ಅದೃಷ್ಟವಶಾತ್ ನಮ್ಮ ಪದ್ಧತಿಯು ಅಂತಿಮ ಸ್ಥಿತಿಯಿಂದ ಬಂದಿರುತ್ತದೆ. ಅದಕ್ಕೆ ಯೋಗಿಕ ಪ್ರಾಣಾಹುತಿಯು ಸಹಕಾರಿಯಾಗಿರುವದು. ಭಾರತದಲ್ಲಿ ಪುರಾತನ ಋಷಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅದರ ಸಾಧನೆ ಮಾಡಿದರು. ಮಹಾಭಾರತ ಯುದ್ಧದಲ್ಲಿ ಕೃಷ್ಣ ಪರಮಾತ್ಮನು ಅರ್ಜುನನ ಹೃದಯ ಪರಿವರ್ತನೆಗಾಗಿ ಅದೇ ಪದ್ಧತಿಯನ್ನು ಉಪಯೋಗಿಸಿದನು.

ಸೃಷ್ಟಿಯ ಉತ್ಪತ್ತಿ:-

ಸೃಷ್ಟಿಯು ಅಸ್ಥಿತ್ವಕ್ಕೆ ಬರುವ ಮೊದಲು, ಕೇವಲ ಬಯಲು ಮಾತ್ರ ಇದ್ದಿತು. ಸೃಷ್ಟಿಕರ್ತನ ಇಚ್ಛೆಯ ಮೇರೆಗೆ, ಸೃಷ್ಟಿಯ ನಿರ್ಮಾಣದ ಸಮಯದಲ್ಲಿ ದೈವಿ ಪ್ರವಾಹವು ಪ್ರವಹಿಸತೊಡಗಿತು. ಅದರ ಶಕ್ತಿಯ ಕೆಲವು ಭಾಗ ಸುಪ್ತಾವಸ್ಥೆಯಿಂದಾಗಿ ಹೆಪ್ಪುಗಟ್ಟಿದರೂ, ಅದು ಕ್ರಿಯಾತ್ಮಕವಾಯಿತು. ಶಕ್ತಿ ಮತ್ತು (ಹೆಪ್ಪುಗಟ್ಟಿದ ಶಕ್ತಿಯ) ದ್ರವ್ಯಗಳ ನಡುವೆ ಪ್ರತಿಕ್ರಿಯೆಯುಂಟಾಗಿ ಸುಪ್ತ ವಿಚಾರದ ರೂಪ ತಾಳಿತು. ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಚಲನೆ ಮತ್ತು ಉಷ್ಣತೆಗಳು ಅನುಸರಿಸಿದವು. ತೀವ್ರತೆ ಅಧಿಕಗೊಂಡಿತು. ಶಕ್ತಿಯು ಕ್ರಿಯಾಶೀಲವಾದುದ್ದರಿಂದ ಅದರ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿತು. ಇದರ ಪರಿಣಾಮವಾಗಿ ಅದು ನಿರ್ದೇಶಿತ ಶಕ್ತಿಯಾಗಿ ಪರಿವರ್ತನೆಗೊಂಡಿತು ಮತ್ತು ಪೂಜ್ಯ ಭಾಯಿ ಸಾಹೇಬರು ವಿವರಿಸಿದಂತೆ ಒಂದೇ ಕಿರಣ ಮತ್ತು ವಿವಿಧ ತರಂಗ’ವಾಗಿ ಕೇಂದ್ರಿಕೃತವಾಯಿತು. ತರಂಗಗಳು ಅಗಣಿತವಾಗಿದ್ದರೂ ಅವು ವಿಭಿನ್ನವಾಗಿದ್ದವು. ಎರಡು ಭಿನ್ನ ಉಚ್ಚ (Higher) ಮತ್ತು ನಿಮ್ಮ (Lower) ಎಂಪ್ಲಿಟ್ಯೂಡ್ (Amplitude) ತರಂಗಗಳ ಸಂಯೋಜನೆಯಾದಾಗ ಹುಟ್ಟು ಮತ್ತು ಸಾವುಗಳಿಗೆ ಕಾರಣೀಭೂತವಾಗುತ್ತವೆ. ಹೀಗೆ ಸೃಷ್ಟಿಯ ನಿರ್ಮಾಣದ ಕಟ್ಟಡದ ಇಟ್ಟಿಗೆಗಳನ್ನು (Building blocks) ಇಡಲಾಯಿತು. ಕಾಲಕ್ರಮದಲ್ಲಿ ನಿರ್ದೇಶಿತ ಶಕ್ತಿ ಮತ್ತು ಘನೀಭೂತ ಶಕ್ತಿ (ದ್ರವ್ಯಗಳ ನಡುವಿನ ಪ್ರತಿಕ್ರಿಯೆ ಚರಮ ಸ್ಥಿತಿ (ಪರಕಾಷ್ಟೆ)ಯಲ್ಲಿ ಕೋಭೆಯಾಗಿ ಪರಿವರ್ತನಗೊಂಡಿತು. ಪ್ರಥಮ ಮನಸ್ಸೇ ಇದಕ್ಕೆ ಕಾರಣವೆಂದು ಹೇಳಲಾಯಿತು.

ಕೋಭೆಯ ಪರಿಣಾಮವಾಗಿ ಅಗಣಿತ ಕಣಗಳು ಪಸರಿಸಿದವು. ಆ ಕಣಗಳು ಕೋಭೆಯ ಪೂರ್ವದಲ್ಲಿಯ ವಸ್ತು ಸ್ಥಿತಿಯಂತೆ ಇದ್ದವು, ಅರ್ಥಾತ್ ಅವು ಹೆಚ್ಚು ಕಡಿಮೆ ಮೊದಲಿನಂತೆಯೇ ಇದ್ದವು. ಒಂದೇ ಒಂದು ವ್ಯತ್ಯಾಸವೆಂದರೆ ಮೂಲದಿಂದ ಅವುಗಳ ಸಾಪೇಕ್ಷ ಅಂತರ. ಬಹುಶಃ ಈ ಅಂತರವು ಆವಿರ್ಭಾವದ (Manifestation) ವೇಳೆಯಲ್ಲಿ ವೈವಿಧ್ಯತೆಗಾಗಿ ಯೋಜಿಸಲಾಗಿತ್ತು. ಈಗ ಕಾಣುವಂತೆ ಸೃಷ್ಟಿಯು ‘ಅರಸನಿಂದ ಅರಿಷಿಣ’ದ ವರೆಗೆ ಎಲ್ಲವನ್ನೂ ಒಳಗೊಂಡಿತ್ತು. ಉದಾಹರಣೆಗೆ ಮಾನವ ಜನಾಂಗ, ಪ್ರಾಣಿ ಮತ್ತು ಸಸ್ಯ ಸಾಮ್ರಾಜ್ಯ, ಗ್ರಹಗಳ ಸಂಗ್ರಹಾಲಯ, ಮೂಲ ವಸ್ತುಗಳ ಭಂಡಾರ ಇತ್ಯಾದಿ. ಅವಿರ್ಭಾವದ ದೃಷ್ಟಿಯಿಂದ ಅವು ಭಿನ್ನ ಮತ್ತು ವೈವಿದ್ಯಮಯವಾಗಿವೆ. ಆದರೂ ಅವೆಲ್ಲವುಗಳ ಮೂಲ ಒಂದೆ. ಪ್ರತಿಯೊಂದರಲ್ಲಿ ಸತ್ವ ಸಮವಾಗಿದ್ದು, ವಿನ್ಯಾಸಕ್ಕೆ ತಕ್ಕಂತೆ ಆವಿರ್ಭಾವವು ಮುಂದುವರೆಯುತ್ತದೆ. ಉದಾಹರಣೆಗಾಗಿ ಪ್ರಾಣವು ಮನುಷ್ಯನಲ್ಲಿಯೂ, ಪ್ರಾಣಿಗಳಲ್ಲಿಯೂ, ಸಸ್ಯಗಳಲ್ಲಿಯೂ ಇದೆಯೆಂದು ಹೇಳುತ್ತೇವೆ. ಜೀವನದ ಸ್ವರೂಪವು ಮನುಷ್ಯನಿಂದ ಪ್ರಾಣಿಗಳಿಗೆ ಹಾಗು ಪ್ರಾಣಿಗಳಿಂದ ಸಸ್ಯಗಳಿಗೆ ವ್ಯತ್ಯಾಸವಿರುತ್ತದೆ. ಆದರೆ ಅವೆಲ್ಲವುಗಳ ಜೀವನಾಧಾರವಾದ ಪ್ರಾಣಶಕ್ತಿ (ಅಂತಿಮ ಚೇತನ) ಒಂದೇ ಆಗಿದೆ. ಅದರಂತೆಯೇ ಮೂಲ ವಸ್ತುಗಳಲ್ಲಿಯೂ ಸಹ ಜೀವವಿರಬಹುದು. ಅದರ ಬಗ್ಗೆ ಮನುಷ್ಯನಿಗೆ ಏನೂ ತಿಳುವಳಿಕೆ ಇಲ್ಲ. ಹೀಗೆ ನಿಸರ್ಗವು ಸೃಷ್ಟಿಯ ರೂಪದಲ್ಲಿ ವಿಸ್ಮಯಕಾರಕ ಧಿಗ್ದಮೆಯನ್ನುಂಟುಮಾಡಿದೆ.

ಇಂದಿನ ವೈಜ್ಞಾನಿಕ ಮನಸ್ಸು ರಹಸ್ಯವನ್ನು ಬಯಲುಗೊಳಿಸಲು ವಿಫ ಲವಾದಂತೆ ಎನಿಸುವದು, ಮತ್ತು ನಿರೀಕ್ಷಣೆ ಹಾಗು ಶೋಧನೆಗಳಲ್ಲಿಯ ತನ್ನ ಇತಿ ಮಿತಿಗಳಲ್ಲಿ ಅನ್ವೇಷಣೆಯನ್ನು ಛಲದಿಂದ ಮುಂದುವರೆಸುತ್ತಿದೆ. ಸಮಾಜವು ತನ್ನ ಮನೋಧರ್ಮ ಮತ್ತು ಕಾರ್ಯವಿಧಾನದ ಶೈಲಿಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುವ ದಿನಗಳು ಬಹುಶಃ ಬಹಳ ದೂರವಿಲ್ಲ. ನಿಸರ್ಗವು ಮನುಷ್ಯನ ದೇಹ ರಚನೆಯನ್ನು ಸುಂದರವಾಗಿ ವಿನ್ಯಾಸಗೊಳಿಸಿದೆ. ಅದು ವಿಶ್ವದ ಚಿಕ್ಕ ಪ್ರತಿರೂಪವೇ ಆಗಿದೆ. ದಿವ್ಯದರ್ಶನಕ್ಕಾಗಿ ದೃಷ್ಟಿಯನ್ನು ಬಹಿರಂಗದ ಬದಲಾಗಿ ಅಂತರಂಗದೆಡೆಗೆ ತಿರುಗಿಸಿಕೊಳ್ಳಬೇಕಾಗುತ್ತದೆ.

ಆಧ್ಯಾತ್ಮಿಕ ದೇಹ ರಚನೆ :-

ಮಾನವನ ರಚನೆಯು ಪುಟ್ಟ ವಿಶ್ವವನ್ನೇ ಪ್ರತಿನಿಧಿಸುತ್ತದೆ. ಇದನ್ನು ಆಧ್ಯಾತ್ಮಿಕ ಅರ್ಥದಲ್ಲಿ ಹೇಳಲಾಗುತ್ತಿದೆ ವಿನಃ ಜೈವಿಕ ದೃಷ್ಟಿಯಿಂದಲ್ಲ. ಮಾಂಸದ ಮುದ್ದೆಯಂತಿರುವ ಮನುಷ್ಯನ ಹೃದಯವು ಎಲುವಿನ ಹಂದರದ ಎಡಭಾಗದಲ್ಲಿದ್ದರೆ ಆಧ್ಯಾತ್ಮಿಕ ಹೃದಯವು ಅಡಿಯಿಂದ ಮುಡಿಯವರೆಗೆ ಹರಡಿದೆ. ಅದರಂತೆಯೇ ಮನಸ್ಸು ಹಾಗು ಆತ್ಮಗಳ ವಿಷಯವು ಹೀಗೆಯೇ ಇದೆ. ಸೃಷ್ಟಿಯಲ್ಲಿನ ವಸ್ತುಗಳ ವ್ಯವಸ್ಥೆಯಲ್ಲಿ ಯಾವದೂ ಆಕಸ್ಮಿಕವಾಗಿಲ್ಲ. ಪ್ರತಿಯೊಂದನ್ನೂ ನಿರ್ಧಿಷ್ಟ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

ಮನುಷ್ಯನಲ್ಲಿ ದೈವಿ ಪ್ರವಾಹ ಒಂದು ಹಂತದವರೆಗೆ ಕೆಳಮುಖವಾಗಿ ಹರಿಯುತ್ತದೆ. ಅಲ್ಲಿಂದ ಅದು ಎರಡು ಕವಲಾಗಿ ಒಂದರ ಪಥವು ಹೃದಯದ ಎಡಗಡೆಯಾದರೆ ಮತ್ತೊಂದರ ಪಥವು ಬಲಗಡೆಯಾಗಿರುತ್ತದೆ. ಅವು ಒಂದರ ಪಕ್ಕದಲ್ಲಿ ಇನ್ನೊಂದು ಇದ್ದೇ ಹರಿಯುತ್ತವೆ. ಅವು ಎಂದೂ ಒಂದನ್ನೊಂದು ಛೇದಿಸುವದಿಲ್ಲ. ಅವುಗಳ ಪ್ರವಾಹವು ವಿರುದ್ಧ ದಿಶೆಯಲ್ಲಿರುತ್ತವೆ. ಆರಂಭದ ದಿನಗಳಿಂದಲೂ ಅವು ಸಮವಾಗಿಯೇ ಸೂಕ್ಷ್ಮ (ಶಕ್ತಿಶಾಲಿ)ಯಾಗಿರುತ್ತವೆ. ಕಾಲ ಕಳೆದಂತೆ ಅಸಮತೋ- ಲನವುಂಟಾಯಿತು. ಏಕೆಂದರೆ ಸೃಷ್ಟಿ ಮತ್ತು ಅದರ ಆವಿರ್ಭಾವತೆಯನ್ನು ನಿರ್ವಹಣೆ ಮಾಡುವದಾಗಿತ್ತು. ಎಡಗಡೆಯ ಕವಲು ಪ್ರಾಪಂಚಿಕ ಉದ್ದೇಶ ಮತ್ತು ಬಲಗಡೆಯದು ಆಧ್ಯಾತ್ಮಿಕ ಉದ್ದೇಶ ನೆರವೇರಿಸುವದಾಗಿದೆ. ಎಡಗಡೆಯ ಶಾಖೆ ಮನುಷ್ಯನ ಪ್ರಾಪಂಚಿಕ ವಿಷಯ ಮತ್ತು ಅವನ ವಿಚಾರ ಹಾಗು ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಬಲಗಡೆಯದು ಅವನ ಆಧ್ಯಾತ್ಮಿಕತೆಯನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಸಮಾಜ ಹಾಗು ವಾತಾವರಣದ ಪ್ರಭಾವದಿಂದಾಗಿ ಈ ಜಗತ್ತು ಸಾಧಾರಣ ಮನುಷ್ಯನಿಗೆ ಅತಿಯಾಗಿ ಅಂಟಿಕೊಂಡಿದೆ. ಆದ ಕಾರಣ ಎಡಗಡೆಯ ಶಾಖೆ ಪ್ರಾಧಾನ್ಯತೆ ಪಡೆದು ಅವನ ಪ್ರಾಪಂಚಿಕ ಹಿತಾಸಕ್ತಿ ಮತ್ತು ಅದೃಷ್ಟವನ್ನು ನಿರ್ಧರಿಸುತ್ತದೆ. ಇದಕ್ಕೆ ಭಾಗ್ಯದ ಹಾದಿಯಂತಲೂ ಕರೆಯಬಹುದು. ವ್ಯಕ್ತಿಯು ಆಧ್ಯಾತ್ಮಿಕ ಒಲವುಳ್ಳವನಾಗಿದ್ದರೆ ಕೆಲವು ವಿರಳವಾದ ಸನ್ನಿವೇಶಗಳಲ್ಲಿ ಬಲಗಡೆಯ ಶಾಖೆಯು ಗಂತವ್ಯದ ಮಾರ್ಗವಾಗಿ ಪರಿಣಮಿಸುವದು. ನಮ್ಮ ಸದ್ಗುರುಗಳು ಅವುಗಳಿಗೆ ಮಾನವೀಯ ರೇಖೆ ಹಾಗು ದೈವಿ ರೇಖೆಯೆಂದು ಕರೆದಿದ್ದಾರೆ (Line of Humanity and Line of Divinity). ಅವು ಸಹಾ ಅಸ್ತಿತ್ವವನ್ನು ಹೊಂದಿದ್ದು ಒಂದು ತರಹದ ಸ್ನೇಹಪರ ಪ್ರತಿಸ್ಪರ್ಧೆಯನ್ನು ತೋರಡಿಸುತ್ತವೆ. ಈ ಕಾರಣದಿಂದಾಗಿಯೇ ಇಂದಿನ ಸಮಾಜವು ದಿನದಿಂದ ದಿನಕ್ಕೆ ಬೌತಿಕ ವಾದಕ್ಕೆ ಒಲಿದು ಹೆಚ್ಚೆಚ್ಚು ಅಧೋಗತಿಗಿಳಿಯತೊಡಗಿದೆ. ಮನುಷ್ಯನು ಆಧ್ಯಾತ್ಮಿಕದೆಡೆ ಒಲಿಯಬೇಕಾದರೆ ಎಡಗಡೆಯ ಶಾಖೆಯನ್ನು (ಭಾಗ್ಯದ ಹಾದಿ) ಬಲಗಡೆಯ ಶಾಖೆ (ಗಂತವ್ಯದ ಹಾದಿ)ಯೊಂದಿಗೆ ಜೋಡಿಸಬೇಕಾಗುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಅವೆರಡರ ನಡುವಿನ ಜೋಡಣೆ ಸಾಧ್ಯವಾಗುವದಿಲ್ಲ. ಆ ಉದ್ದೇಶಕ್ಕಾಗಿಯೇ ಅವನಿಗೆ ಹೊರಗಿನ ಸಹಾಯ ಬೇಕಾಗುತ್ತದೆ. ಭೌತಿಕ ಪ್ರವಾಹವನ್ನು ತಡೆಯಬೇಕಾದುದ್ದರಿಂದ ಹೊರಗಿನ ಸಹಾಯವು ಸಮಬಲದ್ದೂ ಮತ್ತು ಸೂಕ್ಷ್ಮವೂ ಆಗಿರುವದು ಅವಶ್ಯಕ. ನಂತರ ಅದರ ದಿಶೆಯನ್ನು ಬದಲಿಸಿ ಜೋಡಣೆ ಮಾಡಲಾಗುವದು. ಸಹಾಯವು ಮೂರನೇಯ ಶಕ್ತಿರೂಪದಲ್ಲಿ ಬರುತ್ತದೆ.

ಮೂರನೇಯ ಶಕ್ತಿ :-

ಪ್ರಾಣಾಹುತಿ (ಯೋಗಿಕ ಪ್ರಾಣಾಹುತಿ) ಯು ಮೂರನೇಯ ಶಕ್ತಿಯಾಗಿದೆ. ಎರಡು ಪರಸ್ಪರ ವಿರುದ್ದವಾದ ಸಮಬಲದ ಒತ್ತಡಗಳನ್ನು ನಿಶ್ಚಿತಪಡಿಸಿ ನಿರ್ಧಿಷ್ಟ ಪರಿಣಾಮವನ್ನುಂಟು ಮಾಡುವ ಶಕ್ತಿ ಇರುವದರಿಂದ ಇದಕ್ಕೆ ಮೂರನೇಯ ಶಕ್ತಿಯೆಂದು ಕರೆಯಲಾಗಿದೆ. ಅದು ಮೊದಲಿನ ಎರಡು ಶಕ್ತಿಗಳಿಗಿಂತಲೂ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಅದು ಯಾವಾಗಲೂ ನಮ್ಮ ಸದ್ಗುರುಗಳಿಂದ ಮಾತ್ರ ದೊರೆಯುವಂತಹದ್ದು. ಆತನು ಮಾತ್ರ ಅದರ ಉಗಮದ ಮೇಲೆ ಪ್ರಭುತ್ವವನ್ನು ಹೊಂದಿದವನಾಗಿದ್ದಾನೆ. ಪ್ರಾಣಾಹುತಿ ಅಥವಾ ಮೂರನೇಯ ದೈವಿ ಶಕ್ತಿಯಾಗಿದ್ದು ಪರಿಶುದ್ಧ ಮನಸ್ಸಿನ ಮೂಲಕ ಕೆಲಸ ಮಾಡುತ್ತದೆ. ವಿಚಾರವನ್ನು ಈಶ್ವರನೊಂದಿಗೆ ಶಾಶ್ವತವಾಗಿ ಸಂಬಂಧ ಹೊಂದಿದಾಗ ಮಾತ್ರ ಇದು ಸಾಧ್ಯ.

ಶ್ರೀ ಬಾಬೂಜಿ ಮಹರಾಜರಂತಹ ಉನ್ನತ ಸಾಮರ್ಥ್ಯವುಳ್ಳ ಸದ್ಗುರುಗಳಿಂದ ಪ್ರಯೋಗಿಸಲ್ಪಡುತ್ತದೆ. ಸಂಕಲ್ಪ ಶಕ್ತಿಯ ಮೂಲಕವಾಗಿರುವದರಿಂದ ಅದು ಯಾವಾಗಲೂ ಪರಿಣಾಮ-ಕಾರಿಯಾಗಿರುತ್ತದೆ. ಪ್ರಾಣಾಹುತಿಯಿಂದ ಮನಸ್ಸಿನ ಬಹಿರ್ಮುಖ ಹಾಗು ನಿಮ್ಮ ಪ್ರವೃತ್ತಿಗಳನ್ನು ನಿಶಕ್ತಗೊಳಿಸಲಾಗುವದು. ಅಭ್ಯಾಸಿಯ ಹೃದಯಾಂತರಾಳದಲ್ಲಿ ದೈವಿ ಬೀಜವನ್ನು ಬಿತ್ತಲಾಗುವದು. ನಮ್ಮ ಪದ್ಧತಿಯಲ್ಲಿ ಇದು ಲಭ್ಯವಿರುವದರಿಂದ ನಾವು ಅದೃಷ್ಟಶಾಲಿಗಳಾಗಿದ್ದೇವೆ. ನಿಜಕ್ಕೂ ನಮ್ಮ ಪದ್ಧತಿಯಲ್ಲಿ ಇದು ಅದ್ವಿತೀಯ ವೈಶಿಷ್ಟ್ಯವಾಗಿದೆ. ಪ್ರಾಣಾಹುತಿಯು ಸ್ವೀಕರಿಸುವವನಲ್ಲಿ ದೈವಿ ಪ್ರಭೆಯನ್ನು ತುಂಬುತ್ತದೆ. ಇದು ಅತ್ಯಂತ ವಿಶಿಷ್ಟವಾದದ್ದು ಮತ್ತು ನಿಖರವಾದದ್ದು. ಅದು ಯಾವಾಗಲೂ ಆಧ್ಯಾತ್ಮಿಕವೂ ಉದ್ದೇಶಪೂರಿತವೂ ಹಾಗು ಪರಿಣಾಮಕಾರಿಯೂ ಆಗಿರುತ್ತದೆ. ಇಲ್ಲಿ ತಪ್ಪಿದರೆ ಬೇರೆ ಪ್ರಯತ್ನವೆನ್ನುವಂತೆಯೇ ಇಲ್ಲ. ಇದನ್ನು ಯಾವಾಗಲೂ ಮಾನವ ಮಾಧ್ಯಮದಿಂದಲೇ ಕಾರ್ಯಗತಗೊಳಿಸಲಾಗುತ್ತದೆ. ಯಾರೂ ಇದಕ್ಕಾಗಿ ಗುರುತಿಸಲ್ಪಟ್ಟಿರುವರೋ ಮತ್ತು ಅಂಗೀಕರಿಸಲ್ಪಟ್ಟಿರುವರೋ ಅವರಿಂದ ಮಾತ್ರ ನೆರವೇರಿಸಲ್ಪಡುವದು. ನಮ್ಮ ಪದ್ಧತಿಯಲ್ಲಿ ಆಧ್ಯಾತ್ಮಿಕ ತರಬೇತಿಯ ಆಧಾರದ ತತ್ವ ಅದ್ವಿತೀಯವಾದುದು. ಆಭ್ಯಾಸಿಯು ತನ್ನ ಆಧ್ಯಾತ್ಮಿಕ ಮುನ್ನಡೆಯಲ್ಲಿ ಅನೇಕ ಅಡೆ- ತಡೆ ಮತ್ತು ಅಡ್ಡಿ ಆತಂಕಗಳನ್ನು ಎದುರಿಸುತ್ತಾನೆ. ಇವು ವಾಸ್ತವಿಕವಾಗಿ ಅತ್ಯಧಿಕ ಶಕ್ತಿ ಸಂಚಿತಗೊಂಡ ಸೂಕ್ಷ್ಮ ಕೇಂದ್ರಗಳಾಗಿರುತ್ತವೆ. ಅವು ಪ್ರತಿಯೊಂದು ಹಂತದಲ್ಲಿ ಉಪಸ್ಥಿತವಾಗಿರುತ್ತವೆ. ಉದಾಹರಣೆಗಾಗಿ ಹೃದಯದಿಂದ ಪಿಂಡ ದೇಶದವರೆಗೆ, ಪಿಂಡ ದೇಶದಿಂದ ಬ್ರಹ್ಮಾಂಡದವರೆಗೆ, ಬ್ರಹ್ಮಾಂಡದಿಂದ ಪರ ಬ್ರಹ್ಮಾಂಡದವರೆಗೆ…… ಪ್ರಾಣಾಹುತಿಯು ಅವುಗಳನ್ನು ದಾಟಲು ಸಹಾಯ ಮಾಡುವದಲ್ಲದೆ ಸಂಚಿತಗೊಂಡ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇಲ್ಲಿ ಸ್ವಪ್ರಯತ್ನವು ಹೀನಾಯ ಸೋಲನ್ನನುಭವಿಸುವದು. ಹಾಗೆಂದ ಮಾತ್ರಕ್ಕೆ ಸ್ವಪ್ರಯತ್ನವನ್ನು ಕಡೆಗಣಿಸಬೇಕೆಂಬುದಲ್ಲ, ಅದು ಅತ್ಯಾವಶ್ಯಕವಾದದ್ದು. ಮೂರನೇಯ ಶಕ್ತಿಯ ಸಹಾಯವಿಲ್ಲದೆ ಸ್ವಪ್ರಯತ್ನಕ್ಕೆ ಅರ್ಥವೇ ಇಲ್ಲ. ಪ್ರಾಮಾಣಿಕ ಪ್ರಯತ್ನ ಹಾಗು ಗಾಂಭೀರ್ಯತೆಗಳು ಸ್ವೀಕಾರ ಮತ್ತು ಸಮ್ಮತಿಯನ್ನು ಸೂಚಿಸುತ್ತವೆಯಷ್ಟೆ. ಅದು ಗುರಿ ಮತ್ತು ಮಾರ್ಗದರ್ಶಿಯೊಡನೆ ಸಂಪರ್ಕದಲ್ಲಿರಲು ಸಹಾಯಕಾರಿಯಾಗುತ್ತದೆ. ಆಧ್ಯಾತ್ಮಿಕ ತರಬೇತಿಗೆ ಆಯ್ಕೆಗೊಂಡವನ ಸಾಧನೆಯ ಉಳಿದ ಭಾಗವೆಲ್ಲವೂ ಪ್ರಾಣಾಹುತಿಯ ಕೆಲಸವೇ ಆಗಿರುತ್ತದೆ. ನಮ್ಮ ಪದ್ಧತಿಯಲ್ಲಿ ತರಬೇತಿಯ ಧೈಯವು ಮಾನವ ಜೀವನದ ನಿಜವಾದ ಗುರಿಯನ್ನು ಹೊಂದಲು ವೈಯಕ್ತಿಕ ಪರಿವರ್ತನೆ ಮತ್ತು ವಿಕಾಸಗೊಳಿಸುವದಾಗಿದೆ. ತರಬೇತಿಯು ಸೂಕ್ಷ್ಮವಾಗಿ ಮುಂದುವರೆದಂತೆ ವಿಚಾರ ಶಕ್ತಿಯ ಪೂರ್ಣ ಪ್ರಯೋಜನ ಪಡೆಯಬೇಕಾಗುತ್ತದೆ. ಸಾಧನೆಯ ಪ್ರಾರಂಭದಿಂದಲೇ ಇದರ ಅವಶ್ಯಕತೆಯಿರುವದು. ಮಾನವನ ವಿಚಾರವು ನಮ್ಮ ಪದ್ಧತಿಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

ಮಾನವನ ವಿಚಾರ:-

ಪ್ರತಿಯೊಂದು ಘಟನೆಯಲ್ಲಿ ಇದು ಪ್ರಮುಖ ಅಸ್ತ್ರವಾಗಿದೆ. ಸ್ವತಃ ಕೋಭೆಯ ಕಾರಣವೇ ವಿಚಾರ. ಮಾನವನ ಪುಟ್ಟ ಸೃಷ್ಟಿಯೂ ಸಹ ವಿಚಾರದ ಫಲವೇ ಆಗಿದೆ.

ಪ್ರಾಣಾಹುತಿಯು ವಿಚಾರದಿಂದಲೇ ನಿರ್ದೇಶಿತವಾದುದ್ದು. ಪರಿವರ್ತನೆಯು ವಿಚಾರದಿಂದಲೇ ಉಂಟಾದದ್ದು. ನಮ್ಮ ಪದ್ಧತಿಯು ಕೆಲವು ಬದಲಾವಣೆಗಳೊಂದಿಗೆ ರಾಜಯೋಗದ ತತ್ವದ ಮೇಲೆ ಆಧಾರಗೊಂಡಿದೆ. ಪ್ರತಿಯೊಂದು ಕ್ರಿಯೆ ಹಾಗು ಘಟನೆ ಮಾನವನ ಯೋಚನೆಯೇ ನಿರ್ಧರಿಸುತ್ತದೆ ಮತ್ತು ನಿರ್ದೇಶಿಸುತ್ತದೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಸ್ವಾರಸ್ಯವೆಂದರೆ ಅದೊಂದು ಎರಡೂ ಕಡೆಗೆ ಹರಿತವಾದ ಆಯುಧ, ಎರಡೂ ಕಡೆಗಳಿಂದಲೂ ಕತ್ತರಿಸುತ್ತದೆ. ಆದ್ದರಿಂದ ಅದರ ರಚನೆಯನ್ನು ಕೆಳಗಿನಂತೆ ಸಂಕ್ಷೇಪಿಸಬಹುದು.

ಶಕ್ತಿಯಿಂದ ದ್ರವ್ಯಕ್ಕೆ ಪರಿವರ್ತನೆ –>= ಭೌತಿಕತೆ ದ್ರವ್ಯದಿಂದ ಶಕ್ತಿಗೆ ಪರಿವರ್ತನೆ ->= ಆಧ್ಯಾತ್ಮಿಕತೆ,

ನಿಸರ್ಗದ ಉದಾರತೆ ಅಪಾರವಾದುದು. ಮಾನವನ ಮನಸ್ಸು ಅದ್ವಿತೀಯವಾದದ್ದು. ಪ್ರತಿಯೊಬ್ಬನೂ ವಿಚಾರ ಸಾಮರ್ಥ್ಯ ಪಡೆದುಕೊಂಡು ಬಂದಿದ್ದಾನೆ. ತನ್ನ ಇಚ್ಛೆಯಂತೆ ಅದನ್ನು ಉಪಯೋಗಿಸುವ ಸ್ವಾತಂತ್ರ ಹೊಂದಿದ್ದಾನೆ. ಆಯ್ಕೆ ವ್ಯಕ್ತಿಗೆ ಬಿಟ್ಟುಕೊಡಲಾಗಿದೆ.

ಅವಕಾಶ :-

‘ತಾನೊಂದು ಬಗೆದರೆ ದೈವವೊಂದು ಬಗೆಯಿತು’ಎಂಬ ಹಳೆಯ ಗಾದೆ ಮಾತಿದೆ. ಮಾನವನು ತನ್ನ ಬುದ್ಧಿ ಮತ್ತು ಅನುಭವಗಳಿಗನುಸಾರ ತನ್ನ ವ್ಯವಹಾರ ಸಾಗಿಸುವದಾಗಿ ಪ್ರತಿಪಾದಿಸುವನು ಎಂಬ ಅರ್ಥವನ್ನು ಇದು ಕೊಡುತ್ತದೆ. ಈ ಕ್ರಮದಲ್ಲಿ ಅವನು ಪ್ರಲೋಭನೆ ಮತ್ತು ಚಂಚಲತೆಗಳಿಗೆ ಬಲೆಯಾಗುತ್ತಾನೆ. ಸಾಮಾನ್ಯವಾಗಿ ಅವನು ವಿಫಲನಾಗುತ್ತಾನೆ. ಅದಕ್ಕಾಗಿ ತನ್ನನ್ನು ತಾನು ದೂರಿಕೊಳ್ಳುವದಿಲ್ಲ. ಬೇರೆ ಕಡೆ ಬೆರಳು ತೋರಿಸುತ್ತಾನೆ. ಹೀಗೆ ಮಾಡುವಲ್ಲಿ ಅವನು ಸರಿ ಇರಬಹುದು. ಬಹುಶಃ ಇದು ನಿಸರ್ಗದ ನಿರ್ವಹಣ ತಂತ್ರದ ಪ್ರತಿಕ್ರಿಯೆವಿರಬಹುದು (ರಹಸ್ಯಾತ್ಮಕ ಆಡಳಿತ ತಂತ್ರ), ಕೊನೆಯ ನಿರ್ಣಯ ಅದರದ್ದೇ ಆಗಿರುತ್ತದೆ. ಆದರೆ ಇವೆರಡನ್ನೂ ನಿಶ್ಚಿತಗೊಳಿಸಬಲ್ಲ ಮೂರನೇಯ ಶಕ್ತಿಗೆ ಹಸ್ತಕ್ಷೇಪ ಮಾಡುವ ಸಾಮರ್ಥ್ಯವಿರುತ್ತದೆ. ಆದ್ದರಿಂದ ಮನುಷ್ಯ, ನಿಸರ್ಗ ಮತ್ತು ಮೂರನೇಯ ಶಕ್ತಿಗಳ ನಡುವಿನ ಸ್ಥಿತಿ-ಸಂಬಂಧಗಳನ್ನು ಅಂತರ್ದೃಷ್ಟಿಯಿಂದ ವೀಕ್ಷಣೆ ಮಾಡಬಹುದೆಂದು ಆಶಿಸಲಾಗಿದೆ. ನಮ್ಮ ಪದ್ಧತಿಯ ಶ್ರೇಷ್ಠತೆ ಮತ್ತು ಪ್ರಾಣಾಹುತಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇದೊಂದು ಮಾನವೀಯತೆಗೆ ನಮ್ಮ ಸದ್ಗುರುಗಳು ಕೊಟ್ಟ ಕಾಣಿಕೆ. ನಾವು ಸ್ವಯಂ ಪ್ರೇರಣೆಯಿಂದ ನಿಯಮಗಳ ಪಾಲನೆಯನ್ನು ನಿಶ್ಚಯಿಸುವುದು ನಮ್ಮ ಅದೃಷ್ಟವೇ. ನಾವು ಈ ಪದ್ಧತಿ ಮತ್ತು ಗುರುಗಳ ಸಾನಿಧ್ಯ ಹೊಂದಿದ್ದೇವೆ. ಸಾದ್ಯವಿದ್ದ ಎಲ್ಲ ಪ್ರಯತ್ನಗಳನ್ನು ಮಾಡೋಣ. ಗುರುಗಳ ಕೃಪೆಯಿಂದ ನಾವು ನಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುವ ನಿರ್ಧಾರ ಕೈಗೊಳ್ಳೋಣ. ನಮ್ಮ ಅವಿಧೇಯತೆ ಮತ್ತು ಅಲಕ್ಷ್ಯತೆಗಳು ನಿಸರ್ಗದ ತೀವ್ರ ಪ್ರತಿಕ್ರಿಯೆಗೆ ಗುರಿಯಾಗಬಹುದಾಗಿದೆ. ಅಂತಹದಕ್ಕೆ ನಾವು ಅವಕಾಶ ಮಾಡಿಕೊಡುವದು ಬೇಡ. ಇದು ಎಚ್ಚರಿಕೆಯ ಘಂಟೆಯಲ್ಲ. ಜಾಗೃತಗೊಳಿಸುವ ಕರೆ, ಅರ್ಥಾತ್ ಮಗುವಿನ ಆಕ್ರಂದನವು “ಆನಂದ ಮತ್ತು ಅದರಾಚೆಯ” ಜೀವನವನ್ನು ಪ್ರಾಯಶಃ ಬೇಡುತ್ತದೆ.