1. ಮಾನವನು ಪ್ರಕೃತಿಯ ಉಪಕರಣ ಆತನು ಪ್ರಚಂಡ ಶಕ್ತಿಯನ್ನು ಪಡೆದಿದ್ದು ಆ ಶಕ್ತಿಯ ಉಪಯೋಗಕ್ಕಾಗಿ ಅವಶ್ಯಕವಾಗಿರುವ ಸಲಕರಣೆಗಳನ್ನು ಹೊಂದಿದ್ದಾನೆ ಮನಸ್ಸು: ಹಾಗೂ ಇದು ಕೇವಲ ಮಾನವನಿಗೆ ಮಾತ್ರ ದೊರೆತ  ಬಳುವಳಿಯಾಗಿದೆ  ಪೂಜಾಸ್ಪದರೆಂದು ಭಾವಿಸಲಾದ ದೇವತೆಗಳು ಮನಸ್ಸನ್ನು ಹೊಂದಿಲ್ಲ. ಪ್ರಾಣಿಗಳಿಗೆ ಮನಸ್ಸಿದೆಯೆಂದು ಹೇಳಲಾಗದಿದ್ದರೂ ಅದು ಬೇರೆ ಸ್ವಭಾವದ್ದಾಗಿದೆ ಮಾನವನ ಕ್ರಿಯಾಶೀಲ ಹಾಗೂ ಚೈತನ್ಯಪೂರ್ಣ ಮನಸ್ಸಿನೊಡನೆ ಹೋಲಿಸಿದಾಗ ಅದನ್ನು ಜಡವೆಂದು ಹೇಳಬೇಕು ಸೃಷ್ಟಿಯನ್ನು ಅಸ್ತಿತ್ವದಲ್ಲಿ ತರಲು ದೇವರ ಸಂಕಲ್ಪ ಶಕ್ತಿಯ ಪರಿಣಾಮದಿಂದ ಉಂಟಾದ ಪ್ರಥಮ ಕ್ಷೋಭೆಯೆ ಮನಸ್ಸಿನ ಮೂಲ. ಮಾನವ ಮನಸ್ಸಿನ ನೈಜ ಸ್ವಭಾವ ಹೀಗಿರುವಾಗ , ಅದು ಮಾನವನ ದುಷ್ಟತಮ ಶತ್ರುವೆಂದು ಸಾರುತ್ತ  ಕಪಟ ಮಹಾತ್ಮರು ಅದನ್ನು ಕಟುವಾದ ಶಬ್ದಗಳಲ್ಲಿ ನಿಂದಿಸುತ್ತಿರುವುದು ತೀರ ಕಳಂಕಪ್ರಾಯವಾಗಿದೆ ಅದರ ನಿಜವಾದ ಬೆಲೆ ಹಾಗೂ ಯೋಗ್ಯತೆಗಳನ್ನು ಅವರು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ.

    ವಾಸ್ತವವಾಗಿ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಕೇವಲ ಇದೊಂದೇ ಸಾಧನವಾಗಿದೆ.  ಅದು ಕ್ಷೋಭೆಯ  ರೂಪದಲ್ಲಿ ಅವತರಣಗೊಂಡ ದೈವೀ ಶಕ್ತಿಯೇ ಆಗಿದೆ.  ಸೂಕ್ಷ್ಮ ರೂಪದಲ್ಲಿ  ಅದೇ ಶಕ್ತಿಯೇ ಈಗ ಮಾನವನ ಪುಟ್ಟ ಸೃಷ್ಟಿಯನ್ನು ಅಸ್ತಿತ್ವಕ್ಕೆ  ತಂದಿದೆ.  ಎಲ್ಲದರ ಮೂಲದಲ್ಲಿ ಕ್ರಿಯಾಶೀಲವಾಗಿರುವ ಶಕ್ತಿ ಅದೇ ಈಗ ಅದು ಯಾರ ಶಕ್ತಿ?   ದೇವರದೋ ಅಥವಾ ಮನುಷ್ಯನದೋ  ? ಉತ್ತರವು ಸುಲಭ. ಅದು ನಿಶ್ಚಿತವಾಗಿಯೂ ಮಾನವನದೇ ಏಕೆಂದರೆ ದೇವರು ಮನಸ್ಸನ್ನು ಹೊಂದಿಲ್ಲ.VR II P 115

  2. ದೈವೀ ಆಜ್ಞೆಗಳನ್ನು ಪಡೆಯಲು ಮನುಷ್ಯನಿಗೂ ಸಾಧ್ಯವಿದೆ. ಆದರೆ, ಆತನು ಆ ಉನ್ನತ ಮಟ್ಟದ ಸ್ಥಿತಿಯನ್ನು ಹೊಂದಿರಬೇಕು. ಸೃಷ್ಟಿಯ ಮೂಲದಂತೆ ಮನುಷ್ಯನ ಮೂಲವಿದೆ. ಚಲನ ಹಾಗೂ ಕ್ರಿಯೆಗಳಿಗೆ ಪ್ರೇರಣೆ ಕೊಟ್ಟುದು ಪ್ರಥಮ ಕ್ಷೋಭವೇ. ಮನುಷ್ಯನಲ್ಲಿಯೂ ಇತರ ಪ್ರಾಣಿಗಳಲ್ಲಿಯೂ ಆ ಕ್ಷೋಭದ ಪ್ರತಿಬಿಂಬವಿದೆ. ಒಂದು ವೇಳೆ ಅದು ಇಲ್ಲದಿದ್ದರೆ ಚಟುವಟಿಕೆಯೆ ಸಾಧ್ಯವಿರಲಿಲ್ಲ . ಕ್ಷೋಭದ ಈ ಪ್ರತಿಬಿಂಬವು ಮನುಷ್ಯನಲ್ಲಿ ಮನಸ್ಸೆಂದು ಸಂಜ್ಞೆ ಪಡೆದು ಅಸ್ತಿತ್ವದ ಅನಿವಾರ್ಯ ಅಂಗವಾಗಿದೆ. VR I 247
  3. ಸೃಷ್ಟಿಪೂರ್ವದಲ್ಲಿ’ ವ್ಯೋಮ'(Space) (ಆಕಾಶ)ವೊಂದೇ ತಾನೇ ತಾನಾಗಿತ್ತು. ದೇವರ(ಈಶ್ವರನ )ಅಭಿವ್ಯಕ್ತಿಯು ಅನಂತರದ ಬೆಳವಣಿಗೆ ಮತ್ತು ಅದರ (ಈಶ್ವರನ) ಪ್ರಕಟೀಕರಣಕ್ಕೆ ಸ್ವಲ್ಪ ಅವಧಿ ಹಿಡಿಯಿತು. ಆಕಾಶ ಅನಂತವೆಂದೂ ಸನಾತನವೆಂದೂ ನಮಗೆ ತೋರುತ್ತದೆ. ಹಾಗಿರುವದರಿಂದ ದೇವರೂ ಕೂಡ ಸನಾತನನೆಂದು ನಾವು ನಿಷ್ಕರ್ಷೆಗೆ ಬರುತ್ತೇವೆ. ದೇವರು ಅಸ್ಥಿತ್ವಕ್ಕೆ ಬಂದ ಮೇಲೆ ಕಾಲ ಅನುಸರಿಸಿ ಬಂದಿತು. ಹೀಗೆ ಆಕಾಶವು ದೇವರ ಸೃಷ್ಟಿಗೆ ಜನನಿಯಾಗಿ ಸಂದಿತು ಮತ್ತು ‘ಕಾಲ’ ಅದರ ಅಭಾವಾತ್ಮಕ (Negative) ಸ್ಥಿತಿಯಾಗಿತ್ತು. ಎಲ್ಲವೂ ಅನಂತತೆಯಲ್ಲಿ ಅಂತ್ಯಗೊಳ್ಳಬೇಕು. ಎಲ್ಲ ವಸ್ತುಗಳಲ್ಲಿಯೂ ಚಲನೆಕೂಡ, ಅದೆಷ್ಟೇ ಸೂಕ್ಷ್ಮವೂ, ಅದ್ರಶ್ಯವೂ ಆಗಿದ್ದರೂ ಸರಿಯೆ, ಇದ್ದೇ ಇತ್ತು ಹಾಗಿದ್ದರೆ, ಆಕಾಶವನ್ನು ಯಾರು ಸೃಷ್ಟಿಸಿದವರು ಎಂದು ಯಾರಾದರೂ ಪ್ರಶ್ನಿಸಬಹುದು. ದೇವರ ಮತ್ತು ವಿಶ್ವದ ಸೃಷ್ಟಿಯ ಅವಶ್ಯಕತೆಯೇ ಆಕಾಶದ ಅಸ್ತಿತ್ವಕ್ಕೆ ಕಾರಣ ಎಂದು ಹೇಳುವದೊಂದೇ ಸಂಭಾವ್ಯ ಉತ್ತರವಾಗಬಹುದು. ಅದು ಈಗಲೂ ಇದೆ ,ಎಂದೆಂದಿಗೂ ಇರುವುದು; ಆದ ಕಾರಣ ಅದು ಸನಾತನ. ಹಾಗಾದರೆ ದೇವರನ್ನು ಪೂಜಿಸುವ ಬದಲಾಗಿ ಆಕಾಶವನ್ನೇ ಏಕೆ ಪೂಜಿಸಬಾರದು? ಋಗ್ವೇದದಲ್ಲಿ ಇದರ ಬಗ್ಗೆ ನಿರ್ದಿಷ್ವವಾಗಿ ಒಂದು ಸುಳುಹು ಇದೆ. ಆದರೆ ಸರಿಯಾದ ಅರ್ಥ ವಿವರಣೆಯಿಲ್ಲದೆ ಈ ರಹಸ್ಯ ಪರಿಹಾರ ಕಾಣದೆ ಅಸ್ಪಷ್ಟವಾಗಿ ಉಳಿದಿದೆ .ಯಾರಾದರೂ ತನ್ನಲ್ಲಿ ಆಕಾಶದ ಸ್ಥಿತಿಯನ್ನು ಉಂಟುಮಾಡಿಕೊಂಡರೆ ಆಗ ಅವನು ಅತ್ಯುನ್ನತ ಸ್ಥಿತಿಯನ್ನು ಮುಟ್ಟಿದಂತೆಯೇ ಸರಿ. ಆ ಸ್ಥಿತಿಯು ಪ್ರತಿಯೊಬ್ಬನೂ ಯೋಗ್ಯವಾಗಿ ಅಭೀಪ್ಸೆಪಡಲೇ ಬೇಕಾದ ಆತ್ಮ ನಿರಸನದ ಅಂತಿಮಸ್ಥಿತಿಗೆ ಸದೃಶವಾಗಿರುತ್ತದೆ. ಈ ಪರಿಹಾರ ನಿಜಕ್ಕೂ ಅದ್ಭುತವಾದುದೆಂಬುದು ನಿಃಸಂಶಯ; ಮತ್ತು ಸಂಗಡವೇ, ಸಂಪೂರ್ಣ ವಿಶುದ್ದವೂ (ದೋಷರಹಿತವೂ) ಆಗಿದೆ. ಆಕಾಶ ಅಥವಾ ಬಯಲೇ ‘ಕೈವಲ್ಯ'(Absolute) ಅದು ಪರಮಾಣು(ಕಣ) ಸಂಘಾತದಿಂದ ಉಂಟಾದುದಲ್ಲ; ಅದರಲ್ಲಿ ಯಾವ ಕ್ರಿಯೆಯೂ ಇಲ್ಲ. ಅದು ಪರಿಪೂರ್ಣ ಶುದ್ಧವೂ,ಅಮಿಶ್ರಿತವೂ ಆಗಿದೆ.
  4. ಸೃಷ್ಟಿಯ ಉತ್ಪತ್ತಿಯಾಗುವುದರ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಏಕೈಕ ವಸ್ತುವೆಂದರೆ ದೈವತ್ವ. ಪ್ರತಿಯೊಂದು ವಸ್ತುವೂ ಅದರಲ್ಲಿ ಸಾರರೂಪದಲ್ಲಿ ಲೀನವಾಗಿತ್ತು. ಸೃಷ್ಟಿ ಪ್ರಕಟೀಕರಣದ ಪ್ರಕ್ರಿಯೆ ಕ್ಷೋಭದೊಂದಿಗೆ ಪ್ರಾರಂಭವಾಯಿತು. ಕ್ಷೋಭವು ಸುಪ್ತಸ್ಪಂದನದ ಮಂಡಲದಲ್ಲಿ ಮಂಥನದ ಚಲನೆಯನ್ನು ಪ್ರಚೋದಿಸಿತು. ಕ್ರಿಯೆ ಪುನರಾರಂಭಗೊಂಡಿತು. ಮತ್ತು ಅದರೊಂದಿಗೆ ಶಕ್ತಿಯು ಜಾಗ್ರತಗೊಂಡು(ಸೃಷ್ಟಿಯ) ಪ್ರಕಟೀಕರಣದತ್ತ ತನ್ನ ಕಾರ್ಯವನ್ನು ಪ್ರಾರಂಭಿಸಿತು. ಈ ಕ್ರಿಯಾ ಪಥವು ದೈವತ್ವದೊಂದಿಗೆ ಸಂಪೂರ್ಣ ಸಾಂಗತ್ಯವುಳ್ಳದ್ದಾದರೂ ತನ್ನ ಹೊರ ಮುಖಗಳಲ್ಲಿ(ಅಂಶಗಳಲ್ಲಿ) ಅಲ್ಪ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡಿತು. ಯಾಕೆಂದರೆ ಪ್ರಕಟೀಕರಣವನ್ನು ಗುರಿಯನ್ನಾಗಿಟ್ಟು ಕೊಂಡು ಅದು ಮತ್ತೊಂದು ದಾರಿಯನ್ನು ಹಿಡಿದಿತ್ತು. ಆ ಕಾರಣ ಅದು ಮಾನವನ ರೂಪುಗೊಳ್ಳುವಿಕೆಯೊಂದಿಗೆ ಸಂಬಂಧಿಸಿದುದಾಗಿರುವದರಿಂದ ಅದನ್ನು ‘ಮಾನವಪಥ’ ಎಂದುಸಂಕೇತಿಸಬಹುದು. ಈಗ ದೈವತ್ವ ಮತ್ತು ಮಾನವತೆ ಪರಸ್ಪರ ಸಮಾನಂತರವಾಗಿ ಪಕ್ಕ-ಪಕ್ಕದಲ್ಲಿಯೇ ನಡೆಯುತ್ತಿದ್ದು, ಅವೆರಡೂ ಕ್ರಿಯೋದ್ಯುಕ್ತವಾಗಿ ಇವೆ.ಆದರೆ ಮೂಲದಲ್ಲಿ ಸೃಷ್ಟಿ ರಚನೆಯೇ ಪ್ರಥಮೋದ್ದೇಶವಾಗಿತ್ತಾದ್ದರಿಂದ ‘ಮಾನವಪಥ’ ವು ಪ್ರಾಮುಖ್ಯ ಪಡೆಯಲಾರಂಭಿಸಿತು ಮತ್ತು ಮಾನವನನ್ನೊಳಗೊಂಡು ಸಕಲ ವಸ್ತುವೂ ಆ ಹಂತದಲ್ಲಿ ಅತಿಸೂಕ್ಷ್ಮವಾಗಿದ್ದರೂ ಮೂರ್ತರೂಪವನ್ನು ಪಡೆಯತೊಡಗಿದವು. ಬೇರೆ ಮಾತುಗಳಲ್ಲಿ ಹೇಳುವದಾದರೆ, ಅದರ ಕ್ರಿಯೆಯು ಅದಕ್ಕೆ ಸಮಾನಾಂತರದಲ್ಲಿರುವ ದೈವತ್ವದ ಪಥದ ಗುಪ್ತಕ್ರಿಯೆಗಳಿಗೆ ಅಧೀನವಾಗಿ ಉಳಿಯಿತು.ಹೀಗೆ ಶಕ್ತಿಯ ಸಮರ್ಪಕ ಕಾರ್ಯವು ಆಕಾರ ಮತ್ತು ರೂಪಗಳನ್ನು ಉಂಟು ಮಾಡುತ್ತ ಮುಂದುವರಿಯಿತು.
  5. ಏಕೆಂದರೆ ಪ್ರಥಮ ಕ್ಷೋಭದಲ್ಲಿದ್ದ ಎಲ್ಲ ಕಣಗಳೂ ಆತನ ಕಲ್ಪನಾಶಕ್ತಿಯಲ್ಲಿದ್ದವು. ಆದರೆ ಇದರಲ್ಲಿ ಅಧೋಮುಖತೆ ಇದ್ದುದರಿಂದ ಇದರ ಕಾರ್ಯಗಳು ವೈಪರೀತ್ಯ ಹೊಂದಿ ಶಕ್ತಿಗಳ ಉಪಯೋಗವು ವಿರುದ್ಧ ದಿಶೆಯಲ್ಲಾಯಿತು. ಇವೆಲ್ಲವೂ ಕೂಡಿ ಜಟಿಲತೆಯ ಬೆಳವಣಿಗೆಗೆ ಕಾರಣವಾದುವು. ಅದರ ಪ್ರತಿಯೊಂದು ಕಣವೂ ಈಶಸೃಷ್ಡಿಯಿಂದ ಶಕ್ತಿಯುತವಾಯಿತು. TM 36-37
  6. ಇದು ಅವುಗಳಿಗೆ ತಮ್ಮ ಅಸ್ತಿತ್ವದ ಎಲ್ಲ ಕಾಲದಲ್ಲಿಯೂ ಸಂಸ್ಕಾರಗಳ ಪರಿಣಾಮವನ್ನು ಕಾಯ್ದಿಟ್ಟುಕೊಳ್ಳುವದರಲ್ಲಿ ಸಹಾಯ ಮಾಡಿತು.ಪ್ರಾಯ: ಸೃಷ್ಟಿಯ ಆರಂಭದಿಂದ ಹೀಗಾಗುತ್ತ ಬಂದಿರಬಹುದು.ಈ ಅವಧಿಯಲ್ಲಿ ಅವು ತಮ್ಮ ಸ್ಥೂಲತೆಯನ್ನು ಕಳೆದುಕೊಂಡಿದ್ದುವೆಂಬುದು ಮಾತ್ರ ನಿಜ. ಆದರೆ ಪರಿಣಾಮವಿದ್ದೇ ಇದ್ದಿತು. ಆ ಪರಿಣಾಮದೊಂದಿಗೆ ಅವು ಅದರಲ್ಲಿ ಸಮಾವಿಷ್ಟವಾದವು. ಅವು ಹೀರಿಕೊಂಡ ಪರಿಣಾಮವಾವುದು? ಅದು ಮೂಲ ಮಹಾಶಕ್ತಿಯ ಆಘಾತದಿಂದುಂಟಾದ ಚಲನವೇ ಆಗಿದ್ದಿತು. ಈ ಚಲನವು ಪರಿಣಾಮದಿಂದ ತುಂಬಿ ತುಳುಕುತ್ತಿದ್ದಾದ ಕಾರಣ ಅದರಲ್ಲಿ ಸಾವಕಾಶವಾಗಿ ಗತಿಯನ್ನುಂಟು ಮಾಡಿತು. ಕೇವಲ ಅನುಭವದಿಂದ ಮಾತ್ರ ಗೋಚರವಾಗುವ ಈ ಗತಿಯು ಸ್ವಾಭಾವಿಕವಾಗಿಯೆ ಆ ಮೂಲ ಶಕ್ತಿಯಲ್ಲಿ ಒಂದಿಲ್ಲೊಂದು ರೂಪದಿಂದ ಉಳಿದುಕೊಂಡಿತು. ಈ ರೀತಿ ಅನಂತ ಕಾಲದವರೆಗೆ ಒಳಗೋಳಗೆ ಕುದಿಯತೊಡಗಿತು. ಇದನ್ನು ಕೇಂದ್ರದಲ್ಲಿಯ ಗುಪ್ತ ಚಲನ ವೆಂದು ಕರೆಯಲಾಗಿದೆ.TM -9
  7. ಅತ್ಯಂತ ಸೂಕ್ಷದಿಂದ ಅತ್ಯಂತ ಸ್ಥೂಲದವರೆಗಿನ ಇಡೀ ವಿಶ್ವದ ಮೂಲ ಕಾರಣವು-ಆಧಾರ ಅಥವಾ ಬಿಂದುವು-ಅದರ ಅತ್ಯಂತರ್ಭೂತವಾದ ಕೇಂದ್ರವಾಗಿದೆ. ನಾವದನ್ನು ದೇವರೆಂದೋ ಬ್ರಹ್ಮವೆಂದೋ ಕರೆಯಬಹುದು. RD 87
  8. ಸೃಷ್ಟಿಯ ಕಾಲವೊದಗಿದಾಗ ಕೇಂದ್ರದ ಅಡಿಯಲ್ಲಿರುವ ಗುಪ್ತ ಚಲನವು ಬಲಪಟ್ಟು ಕ್ಷೋಭವನ್ನುಂಟುಮಾಡಿತು. ಅನಂತರ ಅದೇ ವಿಶ್ವದ ರಚನೆಗೆ ದಾರಿ ಮಾಡಿಕೊಟ್ಟಿತು. ಅದನ್ನು ಆ ಸರ್ವಶಕ್ತನ ಆದಿಮನಸ್ಸೆಂದಾಗಲಿ ಪರಾಮನಸ್ಸೆಂದಾಗಲಿ ಹೇಳಬಹುದು. ನಾವು ನಮ್ಮ ಅಸ್ತಿತ್ವಕ್ಕಾಗಿ ಆ ಪರಾ ಮನಸ್ಸಿಗೇ ಋಣಿಯಾಗಿರುವೆವು. ಆ ಆದಿಮನದ ಹಿಂದುಗಡೆ ಕೇಂದ್ರ ಅಥವಾ ‘ತಮ’ದ ಅವಸ್ಥೆಯಿದೆ. ಇದನ್ನು ನಾನು ನನ್ನ ‘ಸಹಜಮಾರ್ಗದ ಹತ್ತುನಿಯಮಗಳ ವ್ಯಾಖ್ಯಾನ’ವೆಂಬ ಪುಸ್ತಕದಲ್ಲಿ ವಿಶದವಾಗಿ ವಿವರಿಸಿದ್ದೇನೆ. ನೀವು ನಿಮ್ಮ ವ್ಯಷ್ಟಿ ಮನಸ್ಸನ್ನು ಪರಾ ಮನಸ್ಸಿನ ಮಟ್ಟಕ್ಕೆ ತಂದುದಾದರೆ, ಮುಂದೆ, ಅದರ ಮೇಲಿರುವ ಕೇಂದ್ರದೆಡೆಗೆ ಅಥವಾ ಸರ್ವಶಕ್ತನೆಡೆಗೆ ಜಿಗಿಯುವುದಷ್ಟೇ ಉಳಿಯುವುದು. ಆ ಸ್ಥಿತಿಯೊಂದಿಗೆ ನೀವು ಸಾಮರಸ್ಯವನ್ನನುಭವಿಸಿದಾಗ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಂತೆ.ERY-11-12 sahaj marg
  9. ಮುಖ್ಯ ಧಮನಿಯಿಂದ ಅದೃಶ್ಯ ಚಲನಗಳು ವಿಶ್ವದ ರಚನೆಗಾಗಿ ಅವತರಣ ಮಾಡಿ ವಿಶಾಲ ವೃತ್ತದಲ್ಲಿ ಮಳೆಯ ಧಾರೆಗಳಂತೆ ಹರಡಿಕೊಂಡುವು. ನಿಸ್ಸಂದೇಹವಾಗಿ, ಪರಿಭ್ರಮಿಸುವ ಈ ಚಲನಗಳು ಜಗತ್ತನ್ನು ನಿರ್ಮಿಸಿದುವು; ಮತ್ತು ಸರ್ವಶಕ್ತನಿಂದ ಅದ್ರಶ್ಯ ಚಲನಗಳ ಮೂಲಕ ರಚಿತವಾದರೂಪಗಳೆಲ್ಲವೂ ದುಂಡಾಗಿರುವುದನ್ನೇ ಕಾಣುವೆವು. ಜಗತ್ತಿನಲ್ಲಿ ಕಾಣುತ್ತಿರುವ ಹಾಗೆ ಅದ್ಭುತ ಪರಿಣಾಮಗಳನ್ನುಂಟು ಮಾಡಿದ ಶಕ್ತಿಯೊಂದಿಗೆ ನಮ್ಮ ಸಂಬಂಧವಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಸಿದ್ಧವಾಗುವುದು‌ ಹೀಗೆ, ಎಲ್ಲ ವಸ್ತುಗಳೂ ವಿವಿಧ ರೀತಿಯಲ್ಲಿ ಪರಸ್ಪರವಾಗಿ ಸಂಬಂಧಪಟ್ಟಿದ್ದರೂ ಕೊನೆಗೆ ಒಂದೇ ವಸ್ತುವಿಗೆ ಹೊಂದಿಕೊಂಡಿವೆ.ERY 25. Heart region
  10. ಎಲ್ಲ ಧರ್ಮ ಗ್ರಂಥಗಳಲ್ಲಿ ಕಾಮದ ಬಗೆಗೆ ವಿವಿಧ ರೀತಿಯಲ್ಲಿ ಹೇಳಲಾಗಿದೆ. ನೈಜ ಚಿತ್ರ ಬೇರೆಯೆ ಆಗಿದೆ. ಶಕ್ತಿಯ ಮೊದಲ ಆಘಾತವೇ ಕಾಮ. ಸೃಷ್ಟಿಗೆ ಬೇಕಾದ ಎಲ್ಲ ಶಕ್ತಿಗಳೂ ಅದರಲ್ಲಿ ತುಂಬಿದವು. ಅದು ಅತ್ಯುನ್ನತ ಬುದ್ಧಿಶಕ್ತಿಯಿಂದ ಬಂದಿತು. ಕಾರಣವೇನೆಂದರೆ, ಭಗವಂತನ ಇಚ್ಛೆಗೆ ಚಾಲನೆ ಕೊಡಲು ಸಹಾಯಕವಾದ ಘಟಕವು ಅದೇ ಆಗಿದ್ದಿತು. ಅದು ಕೂಡ ನಮ್ಮ ಪಾಲಿಗೆ ಬಂದಿತು. ಆದರೆ ಅದರ ಸೌಂದರ್ಯ ಮಾಯವಾಯಿತು.ಏಕೆಂದರೆ , ‘ಅಹಂ’ ಎಂಬುದು ಅದನ್ನು ವಿವಿಧ ಪಾರ್ಶ್ವಗಳಿಂದ ಕ ಡಿತು. ಅತ್ಯುನ್ನತ ಬುದ್ಧಿಯ ಕೇಂದ್ರವೂ ಕಾಮದ ಕೇಂದ್ರ ಬಿಂದುವೂ ಒಂದೇ ಆಗಿದೆ. ಅದನ್ನು ಯಾವದೇ ರೀತಿಯಿಂದಾಗಲಿ ಉಪಾಯದಿಂದಾಗಲಿ ನಾಶಗೊಳಿಸಲು ಸಾಧ್ಯವಿಲ್ಲ. ಕೆಂದರೆ ಮನುಷ್ಯನಿಗೆ, ಅಗತ್ಯವಾದುದನ್ನು ಕಾರ್ಯಗತಗೊಳಿಸಲು ಪ್ರಚೋದಿಸುವುದು ಅದೇ. ಮನುಷ್ಯನು ಶಕ್ತಿಯಿಂದ ಪ್ರಚೋದಿತನಾಗದೇ ಆಧ್ಯಾತ್ಮಿಕ ಜೀವನವನ್ನು ಪ್ರವೇಶೀಸಲು ಸಾಧ್ಯವಿಲ್ಲ.AB I P 28-29 6th april 1928
  11. ಮಾನವನ ಶರೀರದಲ್ಲಿ ಆತ್ಮದ ಪ್ರವೇಶದಿಂದ ಎಲ್ಲ ಗುಣಗಳೂ, ಗ್ರಹಣಸಾಮರ್ಥ್ಯವೂ , ಇಂದ್ರಿಯ ಬೋಧಗಳೂ ಅತ್ಯಂತ ಪರಿಪೂರ್ಣಾವಸ್ಥೆಯಲ್ಲಿ ಸ್ವಾಭಾವಿಕವಾಗಿಯೆ ನಿಹಿತವಾದುವು. ವಿಶ್ವರಚನೆಯ ಸಂಬಂಧದಿಂದಾಗಿ ಭಾವಾವೇಶಗಳು ಕಾಣಿಸಿಕೊಂಡುವು. ಅತ್ಮದ ಅವಧಾನಾಪಕರ್ಷಣಗಳು ಭೌತಿಕತೆಯ ಕಡೆಗೇ ಹರಿಯುತ್ತ ಹೋದುವು. ಸಮತ್ವಕ್ಕೆ ಭಂಗ ಬಂದಿತು. ಸಹಜಾವಸ್ಥೆಗಳಲ್ಲಿ ಮಿತತ್ವವು ಇಲ್ಲದಂತಾಗಿ ಎಲ್ಲ ಭಾವಾವೇಶಗಳೂ ಗತಪ್ರಾಣವಾದುವು.AB I P 143 letter dated 10th march 1931
  12. ಇದೇ ಆಧ್ಯಾತ್ಮಿಕತೆಯ ಚರಮಾವಸ್ಥೆ. ಆರಂಭದಲ್ಲಿ ಮಾನವ ಹೃದಯಗಳಲ್ಲಿ ಹಾಗೂ ಆತ್ಮಗಳಲ್ಲಿ ನೆಲೆಸಿದ್ದ ಮಿತತ್ವದ ಸ್ಥಿತಿಯೆ ಈಗ ಮತ್ತೆ ಬರುವುದು. ಮಧ್ಯದ ಅವಸ್ಥೆಗಳೂ, ಘಟ್ಟಗಳೂ ತರಂಗಗಳು ಮಾತ್ರ. ಅವುಗಳಿಂದ ಶಾಂತಿ ಎಂದರೇನೆಂಬುದಾಗಲಿ, ಅದು ಎಲ್ಲಿ ನೆಲೆಸಿದೆ ಎಂಬುದಾಗಲಿ ತಿಳಿದುಬರುವುದಿಲ್ಲ. ಈಗ, ವಾಸ್ತವಿಕವಾಗಿ ಮನಿಷ್ಯನು ಮನುಷ್ಯ ರೂಪದಲ್ಲಿರುವನು. ಇದಕ್ಕಿಂತ ಮುಂಚೆ ಅವನು ಮನುಷ್ಯ ರೂಪದಲ್ಲಿ ಪಶುವಾಗಿದ್ದ. ತರಂಗಗಳಲ್ಲಿ ಸತ್ ತತ್ವ ಯಾವಾಗ ಕಾಣಿಸುವುದು? ಇಲ್ಲಿ ಹೊರಡುವ ಮತ್ತು ತಲುಪುವ ಪ್ರಶ್ನೆಯೇ ಇಲ್ಲ. ಏನಿದೆಯೋ ಇದೆ. ದೌರ್ಬಲ್ಯ, ಕಾಮವಿಕಾರ ಮತ್ತು ಭಾವಾವೇಶಗಳು ಅಪೂರ್ಣತೆಯ ಲಕ್ಷಣಗಳೇ. ಪರಿಪೂರ್ಣತೆಯಲ್ಲಿ ವಿಕಾರಗಳ ಮತ್ತು ಸುಳಿವೇ ಇರುವುದಿಲ್ಲ. ಎಲ್ಲ ಗುಣಗಳೂ ಮಿತತ್ವ ಪಡೆದಾಗ ಶಾಂತಿ ನೆಲೆಸುವುದು. ಇಚ್ಛೆಗಳಿದ್ದರೂ ನಿರಿಚ್ಛೆಯ ಸ್ಥಿತಿಯಿದು.AB I P 144 10th march 1931.
  13. ಸೃಷ್ಟಿ ಪೂರ್ವದಲ್ಲಿ ಕೇಂದ್ರ ಅಥವಾ ಅಂತಿಮ ತತ್ವವು ತಿಳುವಳಿಕೆಗಾಗಿ  ಒಂದು ಚೆಂಡಿನ ರೂಪದಲ್ಲಿದ್ದಿತೆಂದು ವರ್ಣಿಸಬಹುದು. ಸೃಷ್ಟಿಯ ಸಮಯವು ಸನ್ನಿಹಿತವಾಗಿ ಒಂದು ಚಲನೆಯು ಉಂಟಾಯಿತು. ಅದರಲ್ಲಿ ಒಂದು ಬಗೆಯ ಇಚ್ಛೆಯಿದ್ದಿತು. ಚಲನೆಯುಂಟಾದ ಕೂಡಲೇ ಅಣುಗಳ ಮತ್ತು ಪರಮಾಣುಗಳ ರೂಪದಲ್ಲಿ ಶಕ್ತಿಯು ಕಾಣಿಸಿಕೊಂಡಿತು. ಖನಿಜಗಳು, ಸಸ್ಯಗಳು ಮತ್ತು ಸಜೀವ ಪ್ರಾಣಿಗಳೆಲ್ಲ ಜಪಮಾಲೆಯ ಮಣಿಗಳಂತೆ ಅದರೊಂದಿಗೆ ಹೆಣೆದು ಕೊಂಡವು. ಅರ್ಥಾತ್‌, ಇವುಗಳನ್ನು ಇಚ್ಛಿಸಿದಾಗ ಈ ಎಲ್ಲ ವಸ್ತುಗಳು ಕೇಂದ್ರದಿಂದ ತೀರ ಸಮೀಪದಲ್ಲಿದ್ದ ಭಾಂಡಾಗಾರದಿಂದ ಹೊರಕ್ಕೆ ಎಸೆಯಲ್ಪಟ್ಟು ತಮ್ಮೊಡನೆ ಶಕ್ತಿಯನ್ನು ತಂದವು ಮತ್ತು ಧಾರೆಯಲ್ಲಿ ಗಂಟಿನಂತಿದ್ದ ಆ ಸ್ವಭಾವ ಅಥವಾ ಗುಣಲಕ್ಷಣವು ಶಕ್ತಿಯಿಂದ ತುಂಬಿದ್ದಿತು. ಕೇಂದ್ರಕ್ಕೆ ತೀರ ಸಮೀಪವರ್ತಿಯಾಗಿದ್ದ ತಿರುವುಗಳು ಹೆಚ್ಚು ಶಕ್ತಿಯನ್ನು ಹೀರಿಕೊಂಡವು ಮತ್ತು ಅವುಗಳಲ್ಲಿ ಕೇಂದ್ರದ ಸೂಕ್ಷಮತೆಯು ಹೆಚ್ಚಿನ ಪ್ರಮಾಣದಲ್ಲಿದ್ದಿತು ಈಗ ಪರಿಮಿತಿಯನ್ನುಂಟು ಮಾಡಿದ ಧಾರೆಗಳಿಂದ ಒಳಗಡೆ ಸಂಪರ್ಕ ಹೊಂದಿರುವ ಮನುಷ್ಯನು ತನ್ನೊಡನೆ ಆ ಶಕ್ತಿಯನ್ನು ಧಾರೆಗಳಿಳಿದ ಪ್ರಮಾಣದಲ್ಲಿಯೆ ತಂದನು. ಅದೇ ಧಾರೆಯೇ ಅನುಕೂಲಕ್ಕಾಗಿ ಸೂಕ್ಷ್ಮ,ಸೂಕ್ಷ್ಮತರ ಮತ್ತು ಸೂಕ್ಷ್ಮತಮ ಎಂದು ವರ್ಗೀಕರಿಸಲ್ಪಟ್ಟಿತು ಮನುಷ್ಯನೊಡನೆ ಇಳಿದು ಬಂದಿರುವ ಈ ಧಾರೆಯು ಈಗ ಊರ್ಧ್ವ ಮುಖವಾಗಿ ಹರಿಯುವುದು. ಅರ್ಥಾತ್‌ ವಿಲೋಮ ರೀತಿಯಲ್ಲಿ ಆರೋಹಣ ಮಾಡುತ್ತ ಆತನು ಕೇಂದ್ರಕ್ಕೆ ಅತಿ ಸಮೀಪವಾಗಿರುವ ಸೂಕ್ಷ್ಮತಮ ಅವಸ್ಥೆಯನ್ನು ತಲುಪುವನು ಮತ್ತು ಆತನು ಮೇಲೆ ಮೇಲಕ್ಕೆ ಹೋದಂತೆಲ್ಲ ಆತನ ಶಕ್ತಿಯು ಹೆಚ್ಚುತ್ತಾ ಹೋಗುವುದು. AB II VOL II P 140.
  14. ಸೃಷ್ಟಿ ನಿರ್ಮಾಣದ ಸಮಯ ಬಂದಾಗ ಸಿದ್ಧ ತೆಗಳಾಗತೊಡಗಿದವು . ಧಾರೆಗಳು ಪ್ರವಹಿಸಿದುವು . ಕಂಪನ ಹುಟ್ಟಿತು; ತೊಡಕುಗಳು ಬೀಳತೊಡಗಿದುವು. ವೇಗವು ಹುಟ್ಟಿಕೊಂಡಿತು . ಮಂಥನ ಕಾರ್ಯವು ಆರಂಭವಾಯಿತು, ಕ್ರಿಯೆ ಪ್ರತಿಕ್ರಿಯೆಗಳಾಗತೊಡಗಿದವು. ಈ ಕ್ರಮವು ಬಹುದಿನಗಳವರೆಗೆ ನಡೆಯಲು , ವಸ್ತುಗಳು ವ್ಯಕ್ತವಾಗಲಾರಂಭಿಸಿದುವು. ಸೃಷ್ಟಿಯು ರಚನೆಯಾಗತೊಡಗಿತು. ಜಡ – ಚೇತನ ಸಮುದಾಯವು ಉತ್ಪನ್ನವಾಗ ತೊಡಗಿತು . ಮೆಲ್ಲ ಮೆಲ್ಲನೆ ಎಲ್ಲ ವಸ್ತುಗಳೂ ಪ್ರಕಾಶಕ್ಕೆ ಬಂದವು.ಪ್ರಪಂಚವು ರಚಿತವಾಯಿತು. ಗತಿಶೀಲತೆಯು ಆರಂಭವಾಗಿ ಎಲ್ಲಿಯವರೆಗೆ ಮುಂದುವರಿಯಿತೆಂದರೆ , ಅದರ ಮೂಲದಲ್ಲಿದ್ದ ಗತಿಹೀನತೆಯ ವಿಚಾರವು ತರಂಗಿತವಾಗತೊಡಗಿತು . ಇದೇ ದರ್ಶನ ಶಾಸ್ತ್ರದ ಆಧಾರವಾಯಿತು. ಬುದ್ಧಿಯ ಓಡಾಟವು ಇಲ್ಲಿಂದಲೇ ಆರಂಭವಾಗುವುದು . ತನಗಿಂತ ಮೇಲಿನ ವಸ್ತುವಿನ ಶೋಧವು ಇಲ್ಲಿಯೇ ಆರಂಭವಾಯಿತು ಅರ್ಥಾತ್ , ಧರ್ಮದ ತಳಪಾಯ ಬಿದ್ದಿ ತು . TI P1
  15. ಸೃಷ್ಟಿಯ ಆರಂಭದಲ್ಲಿ ಪ್ರತಿಯೊಂದು ಪದಾರ್ಥವೂ ಹೆಚ್ಚು ಕಡಮೆ ಸಂಪೂರ್ಣ ನಿಶ್ಚಲ ಸ್ಥಿತಿಯಲ್ಲಿದ್ದು ತನ್ನ ಮೂಲದಲ್ಲಿ ಸಮಾವೇಶ ಹೊಂದಿದ್ದಿತು. ಪದಾರ್ಥಗಳು ತಮ್ಮದೆಂಬ ಸ್ಥಿತಿಯನ್ನು ಕಳೆದುಕೊಂಡಿದ್ದರೂ ಅವುಗಳಲ್ಲಿ ತಮ್ಮ ಪರಿಣಾಮಗಳು ಉಳಿದಿದ್ದವು . ಏಕೆಂದರೆ ಮೂಲತತ್ವದ ಪ್ರತಿಚ್ಛಾಯೆ ಅವುಗಳ ಮೇಲೆ ಸಾಕಷ್ಟು ಸಮಯದವರೆಗೆ ಎಂದರೆ ಪ್ರಳಯಕಾಲದವರೆಗೆ ಇದ್ದಿತು. ಇದು ಅವುಗಳಿಗೆ ತಮ್ಮ ಅಸ್ತಿತ್ವದ ಎಲ್ಲ ಕಾಲದಲ್ಲಿಯೂ ಸಂಸ್ಕಾರಗಳ ಪರಿಣಾಮಗಳನ್ನು ಕಾಯ್ದಿಟ್ಟುಕೊಳ್ಳುವುದರಲ್ಲಿ ಸಹಾಯ ಮಾಡಿತು.TM 9. Fifth maxim
  16. ಆತ್ಮದ ಅಸ್ತಿತ್ವವನ್ನು ಕಂಡುಹಿಡಿಯಲು ಬಹಳ ಹಿಂದೆ, ಸೃಷ್ಟಿಯ ಆರಂಭಕಾಲದವರೆಗೂ ಹೋಗಬೇಕಾಗುವುದು. ಆಗ ಆತ್ಮವು ತನ್ನ ನೈಜ ಸ್ಥಿತಿಯಲ್ಲಿ ಪ್ರತ್ಯೇಕ ಸತ್ತೆಯಾಗಿದ್ದಿತು. ಆತ್ಮದ ಅಸ್ತಿತ್ವದ ಅತಿ ಸೂಕ್ಷವಾದ ಆ ಮೂಲ ಸ್ಥಿತಿಯಿಂದ ನಾವು ಬರಬರುತ್ತಾ ಸ್ಥೂಲ ರೂಪಗಳ ಕಡೆಗೆ ಹೊರಟೆವು. RD 13