“ನಾವೆಲ್ಲರೂ ಬೌದ್ಧಿಕವಾಗಿ, ನೈತಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಾನವ ಜೀವನದ ಮುಖ್ಯ ಗುರಿಯೊಂದಿಗೆ ಜೋಡಿಸಿದ(ಹೊಂದಿಸಿದ) ಸಹೋದರರಾಗಿದ್ದೇವೆ. ಅದನ್ನು ಹೊರತು ಪಡಿಸಿ ಬೇರೇನೂ ಉಳಿದಿಲ್ಲ. ಆತನ ಕಾರ್ಯ ಮತ್ತು ಪರಿಸರಗಳಲ್ಲಿ ಪರಿಶುದ್ಧತೆ ಮಾತ್ರ ಉಳಿದಿದೆ. ಅದುವೇ ಜನರ ಆಧ್ಯಾತ್ಮಿಕ ಅದೃಷ್ಟವನ್ನು ಅಂತಿಮ ಸತ್ಯದೊಂದಿಗೆ ಹೆಣೆದಿರುತ್ತದೆ”. (ಗುರುಮಹರಾಜರ ಸಂದೇಶ)

ಮೇಲಿನ ಸಂದೇಶದ ಅನುಗುಣವಾಗಿ ಶುದ್ಧತೆ, ವಿಧಿ ಮತ್ತು ಮಾನವ ಜೀವನದ ಗುರಿಗಳು ಒಂದಕ್ಕೊಂದು ಸಂಬಂಧಿಸಿವೆ ಎಂಬುದು ಸ್ಪಷ್ಟವಾಗುವದು. ಮಾನವ ಜನಾಂಗದ ಭವಿಷ್ಯವು ಸಂದಿಗ್ಧ ಸ್ಥಿತಿಯಲ್ಲಿದೆ. ಪುರಾತನ ಸಂಪ್ರದಾಯಗಳು ನವೀನ ಆಧ್ಯಾತ್ಮಿಕ ಆದ್ಯತೆಗಳಿಗೆ ದಾರಿ ಮಾಡಿ ಕೊಡುತ್ತವೆ. ಮನುಷ್ಯನು ಬದಲಾವಣೆಯ ಸಂಕೇತಗಳನ್ನು ಸ್ವೀಕರಿಸುವದರಲ್ಲಿ ಕುರುಡನಾಗಿದ್ದಾನೆ, ವ್ಯಕ್ತಿಗತ ಶುದ್ಧತೆಗೆ ಮಾತ್ರ ಅಂತಿಮ ಅಧಿಕಾರದ ವಾಣಿ ಇರುತ್ತದೆ. ಮೇಲು ನೋಟಕ್ಕೆ ಇದು ಸುಲಭಗ್ರಾಹ್ಯ ಮತ್ತು ಸ್ವಯಂ ವೇದ್ಯವೆನಿಸುವದು, ಹಾಗೂ ಅರ್ಥವಾದಂತೆಯೂ ಅನಿಸಬಹುದು. ನಿಸ್ಸಂದೇಹವಾಗಿ ಶುದ್ಧತೆಯ ಮತ್ತು ಗಂತವ್ಯದ(ಗುರಿ) ಶಬ್ದಗಳನ್ನು ಗಾಂಭೀರ್ಯರಹಿತವಾಗಿ ಹಾಗೂ ಪ್ರಾಪಂಚಿಕ ಅರ್ಥದಲ್ಲಿ ಬಳಕೆ ಮಾಡುವ ವಾಡಿಕೆ ಇರುವದರಿಂದ ಅವು ಅರ್ಥವಾದಂತೆ ಅನಿಸುವದು. ಈ ಸಂದರ್ಬದಲ್ಲಿ ಘಟನೆಯೊಂದನ್ನು ಉದಾಹರಿಸುವೆ.

ಒಮ್ಮೆ ಹೊಸಪೇಟೆಯ ಸಂಸ್ಥಾಪಕರ ದಿನಾಚರಣೆಯ ಸಂದರ್ಬದಲ್ಲಿ ಅಭ್ಯಾಸಿಯೊಬ್ಬರು ‘ಶುದ್ಧತೆ’ ಎಂದರೇನು ಎಂಬ ಪ್ರಶ್ನೆಯನ್ನು ಪೂಜ್ಯ ಭಾಯಿ ಸಾಹೇಬ (ಶ್ರೀ ರಾಘವೇಂದ್ರ ರಾಯರು)ರಿಗೆ ಕೇಳಿದರು. ಶುದ್ಧತೆಯನ್ನು ನಿರ್ಧಿಷ್ಟವಾಗಿ ವಿವರಿಸುವದು ಕಷ್ಟಕರ. ಆದರೆ ಅದರ ವಿರುದ್ಧ ಶಬ್ದವನ್ನು ವಿವರಿಸುವದು ಸುಲಭವೆಂದು ಅವರು ಉತ್ತರಿಸಿದರು. ಈ ಘಟನೆ ನಮ್ಮ ಕಣ್ಣು ತೆರೆಸುವಂತಹದ್ದು. ‘ಅದು ಶುದ್ಧತೆ’ಯ ಅರ್ಥದ ಬಗೆಗೆ ಚಿಂತನಾಶೀಲರನ್ನಾಗಿ ಮಾಡುತ್ತದೆ. ಒಮ್ಮೆ ಈ ನಿಟ್ಟಿನಲ್ಲಿ ಯೋಚನೆ ಮಾಡಲು ಪ್ರಾರಂಭಿಸಿದಾಗ ಅನೇಕ ಪ್ರಶ್ನೆಗಳು ತಲೆದೋರುತ್ತವೆ. ಶುದ್ಧತೆಯೆಂದರೇನು? ಅದರ ಗುಣಧರ್ಮ ಹಾಗೂ ಮೂಲ ಯಾವದು? ಕಂಡುಕೊಳ್ಳುವದು ಹೇಗೆ ? ಎಷ್ಟು ಜನರೋ ಅಷ್ಟು ಉತ್ತರಗಳು. ಆ ಉತ್ತರಗಳು ಸಮಂಜಸ ಮತ್ತು ಸೂಕ್ತವೆನಿಸಲೂಬಹುದು. ಅವೆಲ್ಲವು ತಾತ್ವಿಕ ಮತ್ತು ವೈಜ್ಞಾನಿಕವೆಂದೆನಿಸಿದರೂ ಅವುಗಳಲ್ಲಿ ಯಾವದೂ ಶುದ್ಧತೆಯ ಸಮೀಪದ ವಿವರಣೆಗಳಾಗಲಾರವು.

ಶುದ್ಧತೆಯ ಕಲ್ಪನೆ:-

ಅಂತಿಮ ತತ್ವವು ಶುದ್ಧತೆಯ ಆದರ್ಶವಾಗಿರುತ್ತದೆ. ಅದು ದಿವ್ಯತೆಯ ಅರ್ಹತೆಯನ್ನು ಸೂಚಿಸುತ್ತದೆ. ಶುದ್ಧತೆಯು ‘ದೈವತ್ವದ’ ಸಹವರ್ತಿಯಾಗಿದ್ದು ಅದು ಅನ್ನೋನ್ಯತೆಯ ಭಾವನೆಯಾಗಿದೆ. ಅದು ವೈಯಕ್ತಿಕವಾಗಿ ಅನುಭವಿಸುವಂತಹದ್ದು, ಶುದ್ಧತೆಯನ್ನು ಸಾಧಿಸುವದಕ್ಕೆಂದೇ ಯಾರೂ ಸಾಧನೆಯನ್ನು ಕೈಗೊಳ್ಳುವದಿಲ್ಲ. ಜೀವನದ ಗುರಿಯನ್ನು ತಲುಪಬೇಕೆಂದು ಸಾಧನೆಯನ್ನು ಮಾಡುತ್ತಾರೆ. ಸಾಧನೆಯಲ್ಲಿ ಶುದ್ಧತೆಯು ಅನುಪಂಗವಾಗಿ (ಉಪಪ್ರಯೋಜನೆ) ಬರುವಂತಹದ್ದು. ವಿಭಿನ್ನತೆ ಅಥವಾ ವಿರೋಧಾಭಾಸದಿಂದ ಮಾತ್ರ ಅದನ್ನು ಗ್ರಹಿಸಲು ಸಾಧ್ಯವಾಗುವದು. ಅರ್ಥಾತ್ ಅಶುದ್ಧತೆಯನ್ನು (ಸಂಗ್ರಹಿಸಿದ ಸಂಸ್ಕಾರಗಳನ್ನು ತೆಗೆದು ಹಾಕಿದ, ಪ್ರಮಾಣಕ್ಕನುಸಾರವಾಗಿ ಶುದ್ಧತೆಯ ಗೋಚರವಾಗುತ್ತದೆ. ಕನ್ನಡಿಯ ಮೇಲೆ ಸಂಗ್ರಹವಾದ ಧೂಳು ಪ್ರತಿಬಿಂಬದ ಪ್ರತಿರೋಧಕವಾದಂತೆ, ಅಶುದ್ಧತೆಯು ಶುದ್ಧತೆಯ ಸ್ಪಷ್ಟತೆಯಲ್ಲಿ ಅಡ್ಡಿಯಾಗುವದು. ಅಶುದ್ಧತೆಯ ಮೂಲ ಕಾರಣ ಇಚ್ಛೆಗಳು, ಈ ಇಚ್ಛೆಗಳೇ ನಂತರದ ಬದಲಾವಣೆಗೆ ಮೂಲವಾಗುತ್ತವೆ. ಅಶುದ್ಧತೆಯು ಕ್ಷೀಣಿಸಿದಂತೆ ಶುದ್ಧತೆಯ ಸ್ಥರ ಹೆಚ್ಚಿದಂತೆ ದೃಷ್ಟಿ ಮತ್ತು ದಾರಿ ಸ್ಪಷ್ಟವಾಗುತ್ತಾ ಹೋಗುವದು. ಶುದ್ಧತೆಯ ಅಂತಿಮ ಸ್ವರೂಪವು ಅನಿಸಿಕೆಯ ಸ್ಥಿತಿಯೇ ಆಗಿರುತ್ತದೆ.

ಗಂತವ್ಯ ಹಾಗು ಶುದ್ಧತೆ :-

ಗಂತವ್ಯ (ಗುರಿ) ಅಂತಿಮ ಸತ್ಯದ ಸ್ಥಿತಿಯ ಕುರಿತು ಹೇಳುತ್ತದೆ. ಇದು ಯಾವುದೇ ವ್ಯಾಖ್ಯಾನಕ್ಕೆ ಅತೀತವಾಗಿದೆ. ಇದು ಮಾನವ ಜೀವನದ ಗುರಿಯಾಗಿದೆ. ನಮ್ಮ ಸದ್ಗುರುಗಳು ಅದನ್ನು ಸಾಧಿಸಲೆಂದೇ ಈ ಪದ್ಧತಿಯನ್ನು ನಮಗೆ ಕೊಟ್ಟಿದ್ದಾರೆ. ಶುದ್ಧತೆ ಮತ್ತು ಮಾನವ ಗಂತವ್ಯಗಳ ನಡುವೆ ನಿರ್ಧಿಷ್ಟವಾದ ಸಂಬಂಧವಿದೆ. ಈ ಸಂಬಂಧದ ಕಾರಣ ಅವುಗಳನ್ನು ಬೇರ್ಪಡಿಸಲಾಗದು. ಶುದ್ಧತೆಯನ್ನು ವಿರೋಧಾಭಾಸದ ಆಧಾರದ ಮೇಲೆ ಗುರುತಿಸುವ ಕಾರಣದಿಂದ ಅದಕ್ಕೆ ಭಿನ್ನತೆಯಿದೆ. ಶುದ್ಧತೆಯ ಅಭಾವದಿಂದಾಗಿ ಗಂತವ್ಯ ನಮ್ಮಿಂದ ದೂರವಿದೆ. ಅರ್ಥಾತ್ ಸಂಪೂರ್ಣ ಶುದ್ಧತೆ ಗುರಿಯನ್ನು ಪಡೆಯಲು ಪೂರ್ವಾಗತ್ಯವಾಗಿರುತ್ತದೆ. ಸಾಧನೆಯ ಪ್ರಾಯೋಗಿಕ ದೃಷ್ಟಿಯಿಂದ ಎಲ್ಲ ಅಶುದ್ಧತೆಗಳನ್ನು ನಿರ್ಮೂಲನಗೊಳಿಸಿ ಅವು ಪುನಃ ನಮ್ಮಲ್ಲಿ ಪ್ರವೇಶಿಸದಂತೆ ರಕ್ಷಿಸಿಕೊಳ್ಳುವದು ಅನಿವಾರ್ಯ. ಸಾಯಂಕಾಲದ ಶುದ್ದೀಕರಣ ಮತ್ತು ನಿರಂತರ ಸ್ಮರಣೆಯು ಅಮೂಲ್ಯವಾದವುಗಳು. ಈ ದೃಷ್ಟಿಯಿಂದ ಪ್ರಾಣಾಹುತಿಯಂತೂ ಅತಿ ಮಹತ್ವವಾದುದು.

ಅದೃಷ್ಟ ಮತ್ತು ಶುದ್ಧತೆ :-

ವಿಧಿಯು ಅದೃಷ್ಟಕ್ಕೆ ಸಂಬಂಧಿಸಿದೆ. ಪ್ರತಿಯೊಬ್ಬನು ಅದೃಷ್ಟದೊಂದಿಗೆಯೇ ಜನ್ಮ ತಾಳುತ್ತಾನೆ. ಅದು ಜೀವನ ಪರ್ಯಂತ ಅನಿಶ್ಚಿತ ಮತ್ತು ರಹಸ್ಯಾತ್ಮಕವಾಗಿ ಉಳಿಯುತ್ತದೆ. ಹಿಂದಿನ ಮತ್ತು ಇಂದಿನ ಜನ್ಮಗಳ ಮೊದಲ ದಿನದಿಂದಲೇ ಕಾರಣ-ಪರಿಣಾಮ ತತ್ವವು ಅದೃಷ್ಟವನ್ನು ನಿರ್ಧರಿಸುತ್ತದೆ. ಆಯಾ ಜನ್ಮದ ಶುದ್ಧತೆಯ ಮಟ್ಟ ಅದೃಷ್ಟದ ಗುಣಧರ್ಮದ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಪದ್ಧತಿಯಲ್ಲಿ ಸಾಧನೆಯನ್ನು, ಗಂತವ್ಯವನ್ನು ತಲುಪಲೆಂದು ಕೈಗೊಳ್ಳಲಾಗುತ್ತದೆ. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ ಅದೃಷ್ಟವೇ ಗಂತವ್ಯವಾಗಿ (ಗುರಿ) ಪರಿವರ್ತಿತವಾಗುತ್ತದೆ.

ಸತ್ಸಂಗ ಹಾಗೂ ಶುದ್ಧತೆ :-

ನಮ್ಮ ಪದ್ಧತಿಯು ಕ್ರಿಯಾಶೀಲವೂ, ದೋಷಮುಕ್ತವು ಆಗಿದೆ. ಅದು ಚರಮ ಸತ್ಯದಿಂದ ಬಂದುದರಿಂದ ಅದರ ಶುದ್ಧತೆ ದಿಟವಾದುದು ಮತ್ತು ತನ್ನ ಪರಿಶುದ್ಧತೆಯನ್ನು ತಾನೇ ಕಾಯ್ದುಕೊಳ್ಳುವದು. ಈ ಪದ್ಧತಿಯ ಪ್ರಕಾರ ಸಾಧನೆ ಮಾಡುವವರ ಅವರವರ ನಂಬುಗೆ ಮತ್ತು ಸ೦ಕಲ್ಪಾನುಸಾರ ಕಾಲ ಕ್ರಮದಲ್ಲಿ ಶುದ್ಧತೆಯನ್ನು ಅಭಿವೃದ್ಧಿಪಡಿಸಿಕೊಳ್ಳುವರು. ಅಭ್ಯಾಸಿಗಳಲ್ಲಿ ಬೇರೆ ಬೇರೆ ಮಟ್ಟದಲ್ಲಿ ಅದು ಪ್ರವರ್ತಿಸುವದನ್ನು ಗಮನಿಸಬಹುದಾಗಿದೆ. ಶುದ್ಧತೆಯನ್ನು ಬೆಳಸಿಕೊಂಡ ಆಧಾರದ ಮೇಲೆ ವ್ಯಕ್ತಿಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.

ವರ್ಗ-1 : (ಜನಸಾಮಾನ್ಯ)ಯಾವುದೇ ಪದ್ಧತಿಯನ್ನು ಅನುಸರಿಸಲಾರದವರು ಅಭ್ಯಾಸಿಯ ಶುದ್ಧತೆಗೆ ಹೋಲಿಸಿದಾಗ ಅತೀ ಕೆಳಮಟ್ಟದಲ್ಲಿರುವರು.

ವರ್ಗ- 2 : (ಅನುಯಾಯಿಗಳು) ತತ್ವ ಮತ್ತು ಬೋಧನೆಯನ್ನು ಅರಿಯದೇ ನಮ್ಮ ಪದ್ಧತಿಯನ್ನು ಅನುಸರಿಸುವ ಸಾಧಕರ ಶುದ್ಧತೆ ನಿಶ್ಚಿತವಾಗಿಯೂ ಸಾಮಾನ್ಯರಿಗಿಂತ ಹೆಚ್ಚಿನ ಮಟ್ಟದಲ್ಲಿರುವದು.

ವರ್ಗ- 3 : (ಆಕಾಂಕ್ಷೆಯುಳ್ಳವರು)ಪದ್ಧತಿಯನ್ನು ತಿಳಿದುಕೊಂಡಾಗಿಯೂ ಪರಿವರ್ತನೆಗಾಗಿ ಪರಿತಪಿಸಿದಸಾಧಕರ ಶುದ್ಧತೆ ಅನುಯಾಯಿಗಳಿಗಿಂತ ಮೇಲ್ಮಟ್ಟದಲ್ಲಿರುವದು.

ವರ್ಗ – 4: (ಜಿಜ್ಞಾಸು) ನಿಯಮಿತತನದಿಂದ, ವಿಧೇಯನಾಗಿ ಸಾಧನೆ ಮಾಡುತ್ತಿದ್ದು ಪರಿವರ್ತನೆಗಾಗಿ ಶ್ರಮಿಸುವ ಸಾಧಕನ ಶುದ್ಧತೆ ಉಳಿದ ವರ್ಗಗಳವರಿಗಿಂತ ಹೆಚ್ಚು ಪರಿಪಕ್ವವಾಗಿರುತ್ತದೆ.

ವರ್ಗ – 5 : (ಅಭ್ಯಾಸಿ) ಇಲ್ಲಿ ಅಭ್ಯಾಸಿಯು ಪದ್ಧತಿಯನ್ನು ವಿಶ್ವಾಸದಿಂದ ಅಳವಡಿಸಿಕೊಂಡು ಹಾಗು ತನ್ನ ಸ್ಥಾನವನ್ನು ವ್ಯಕ್ತಪಡಿಸುತ್ತಾ ಅನುಸರಿಸುತ್ತಾನೆ.

ನಮ್ಮ ಗುರುಗಳ ಶಿಫಾರಿಸಿನ ಮೇರೆಗೆ ವಾರದ ಸತ್ಸಂಗ ಮತ್ತು ಇತರ ಸಮಾರಂಭಗಳನ್ನು ಏರ್ಪಡಿಲಾಗುವದು. ಸತ್ಸಂಗವು ಒಂದೇ ಗುರಿ ಹೊಂದಿರುವ ಅಭ್ಯಾಸಿಗಳ ಸಮೂಹವಾಗಿದೆ. ಇದು ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶಗಳನ್ನು ಒದಗಿಸಿ, ತನ್ಮೂಲಕ ಅಭ್ಯಾಸಿಗಳಲ್ಲಿ ಬಂಧುತ್ವ ಮತ್ತು ವಿಚಾರ ಪ್ರವೃತ್ತಿಯನ್ನು ಬೆಳೆಸುತ್ತದೆ. ವಿವಿಧ ಹಿನ್ನೆಲೆ ಮತ್ತು ಮೇಲ್ಕಾಣಿಸಿದ ವರ್ಗಗಳ ಶುದ್ಧತೆ ಇವು ಭಿನ್ನ ಮಟ್ಟದವರಿರುವದರಿಂದ, ಈ ಗುಂಪು ಅನೇಕ ಸಲ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಹಾಗು ವಾದ ವಿವಾದಗಳನ್ನು ಎದುರಿಸುವ ಪ್ರಸಂಗಗಳು ಬರುತ್ತವೆ. ಅವುಗಳನ್ನು ಹಾಗೆಯೇ ಮುಂದುವರಿಯಲು ಬಿಟ್ಟರೆ ಸಾಮರಸ್ಯ ಮತ್ತು ಸುಗಮ ನಿರ್ವಹಣೆಗೆ ಹಿನ್ನಡೆಯಾಗುತ್ತದೆ. ಅದನ್ನು ಮೊಗ್ಗಿನ ಅವಸ್ಥೆಯಲ್ಲಿಯೇ ಚಿವುಟಿ ಹಾಕುವದು ಅವಶ್ಯಕ. ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ ಅದು ಸತ್ಸಂಗದ ಪವಿತ್ರತೆಯ ಮತ್ತು ಸಮೂಹಗಳ ಶುದ್ಧತೆಗಳ ನಡುವಿನ ನೇರ ಹಣಾಹಣಿಯಾಗಿದೆ.

ಸರಿಪಡಿಸುವಿಕೆ:-

ನಮ್ಮ ಪದ್ಧತಿಯಲ್ಲಿ ಇಂತಹದನ್ನು ನೋಡಿದಾಗ ಸಾಮಾನ್ಯ ಮನುಷ್ಯನು ಧಿಗ್ಧಮೆಗೊಳ್ಳುತ್ತಾನೆ ಅಭ್ಯಾಸಿಗಳ ವ್ಯವಹಾರ, ವರ್ತನೆ ಮತ್ತು ಚಾರಿತ್ರ್ಯಗಳನ್ನು ಅವನು ಗಮನಿಸುತ್ತಾನೆ. ಅಭ್ಯಾಸಿಗೆ ಯೋಗ್ಯವಲ್ಲದ ವರ್ತನೆಯನ್ನು ಕಂಡಾಗ ಎಲ್ಲಿಯೋ ಲೋಪವಿದೆಯೆಂದು ಭಾವಿಸುವನು. ಕಾರಣ ಹುಡುಕಲು ವಿಫಲನಾದಾಗ ಪದ್ಧತಿಯಲ್ಲಿಯೇ ದೋಷವಿರುವದೆಂದು ಆರೋಪಿಸುವನು. ತಪ್ಪು ಅಭ್ಯಾಸಿಯದೇ ಆದರೂ ಆರೋಪ ಮಾತ್ರ ಪದ್ದತಿ ಹೊರಬೇಕಾಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ಪ್ರತಿಯೊಬ್ಬ ಅಭ್ಯಾಸಿಯು ಇಂತಹ ಬೆಳವಣಿಗೆಗೆ ಅವಕಾಶವಿಲ್ಲದಂತೆ ಕಾಳಜಿ ವಹಿಸಬೇಕು. ಬೆಂಗಳೂರಿನಲ್ಲಿ ನಡೆದ ಒಂದು ಸಮಾರಂಬದಲ್ಲಿ ಪೂಜ್ಯ ಭಾಯಿ ಸಾಹೇಬರು ಪದ್ಧತಿಯಲ್ಲಿಯ ಶುದ್ಧತೆಯನ್ನು ಕಾಯ್ದುಕೊಳ್ಳಲು ನಮಗೆ ಸೂಚಿಸಿದ್ದಾರೆ. 1977ರ ಹಿಂದೆಯೇ ನಮ್ಮ ಸದ್ಗುರುಗಳು “ಸಮುದ್ರವನ್ನು ಕಳೆದುಕೊಂಡರು” ಎಚ್ಚರಿಕೆಯ ಸಂಕೇತವನ್ನು ನೀಡಿದ್ದಾರೆ. ಆದಾಗ್ಯೂ ಗಮನಾರ್ಹವಾದ ಬದಲಾವಣೆ ಕಂಡು ಬರುತ್ತಿಲ್ಲ. ನಮ್ಮ ಸಾಧನೆಯಲ್ಲಿ ನಾವು ಕ್ರಿಯಾಶೀಲತೆಯನ್ನು ಕಳೆದುಕೊಂಡಿದ್ದೇವೆಂದು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳೋಣ.

ನಮ್ಮ ಸಾಧನೆಯ ತತ್ವಗಳ ಬಗ್ಗೆ ಸಂದೇಹವಿದೆಯೆಂದು ಇದರ ಅರ್ಥವಲ್ಲ. ನಮ್ಮಲ್ಲಿಯ ಪ್ರತಿಯೊಬ್ಬರು ಸಾಧನೆಗೆ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ನಿಯಮಿತತನವು ಇದೆ. ರವಿವಾರದ ಸತ್ಸಂಗಕ್ಕೆ ನಮ್ಮಲ್ಲಿಯ ಹೆಚ್ಚಿನ ಜನರು ಹಾಜರಾಗುವ ಮೂಲಕ ನಮ್ಮಲ್ಲಿಯ ನಿಯಮಿತತನದ ಅರ್ಹತೆ ಪಡೆದುಕೊಂಡಿದ್ದಾರೆ. ಅನುಕೂಲಕರವಾಗಿ ನಮ್ಮ ವೈಯುಕ್ತಿಕ ಮುಂಜಾನೆಯ ಧ್ಯಾನವನ್ನು ಯಾವುದಾದರೊಂದು ನೆಪದಿಂದ ತಪ್ಪಿಸುತ್ತೇವೆ. ಅದರಂತೆ ಹೆಚ್ಚಿನ ಕೇಂದ್ರಗಳು ವಾರದ ಬೇರೆ ದಿನಗಳಲ್ಲಿ ಸಂಜೆಯ ಸಂಗಗಳನ್ನೇರ್ಪಡಿಸುತ್ತಾರೆ. ಆ ದಿನಗಳಲ್ಲಿ ಅಭ್ಯಾಸಿಗಳು ಸಾಯಂಕಾಲದ ಶುದ್ದೀಕರಣವನ್ನು ನಿರ್ಲಕ್ಷಿಸುತ್ತಾರೆ. ಸಮಾರಂಭಗಳಲ್ಲಿ ಮುಂಜಾನೆ ಮತ್ತು ಸಾಯಂಕಾಲ ಎರಡೂ ಸಮಯಗಳಲ್ಲಿ ಧ್ಯಾನದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರತಿಯೊಬ್ಬರು ನಿಗದಿತ ವೇಳೆಯಲ್ಲಿ ತಪ್ಪದೇ ಉಪಸ್ಥಿತರಿರುತ್ತಾರೆ. ಅವೆರಡೂ ಕಾರ್ಯಕ್ರಮದ ಮಧ್ಯದ ಅವಧಿಗಳಲ್ಲಿ ತಾನು ಮಾಡುತ್ತಿರುವದೇನೆಂದು ಯಾರು ಪ್ರಶ್ನಿಸಿಕೊಳ್ಳುವದಿಲ್ಲ. ಹೆಚ್ಚಿನ ವೇಳೆ ಹರಟೆ ಅಥವಾ ವ್ಯವಹಾರಿಕ ಮಾತುಗಳಲ್ಲಿ ಕಳೆದು ಹೋಗುತ್ತದೆ. ಇದೊಂದು ಶಿಷ್ಟಾಚಾರವಾಗಿ ಪರಿಣಮಿಸಿದೆ. ನಾವು ಸಮಾರಂಭಗಳಲ್ಲಿ ಪಾಲ್ಗೊಳ್ಳುವದು ಸಾಮಾಜಿಕ ಹಾಗು ಮಾನವೀಯ ಶಿಷ್ಟಾಚಾರಗಳನ್ನು ಪಾಲಿಸುವದಕ್ಕೋಸ್ಕರವೇ? ಎಂಬ ಪ್ರಶ್ನೆ ಉದ್ಭವಿಸುವದು. ಉತ್ತರಕ್ಕಾಗಿ ಮುಕ್ತ ಚರ್ಚೆಗೆ ಅವಕಾಶವಿದೆ.

ಸಾಧನೆಯ ವಿಷಯದಲ್ಲಿ ಗಮನಿಸಬೇಕಾದ ಒಂದು ಕುತೂಹಲಕರ ಅಂಶವೆಂದರೆ ನಮ್ಮ ಅಭ್ಯಾಸದಲ್ಲಿ ಕ್ರಮಬದ್ಧತೆ ಮತ್ತು ಮನೋಭಾವದಲ್ಲಿ ನಿರೀಕ್ಷಿತ ಮಟ್ಟದ ಬದಲಾವಣೆಯಾಗಿದೆಯೇ ? ಅಥವಾ ಸಾಧನೆಯು ಸರಿಯಾದ ರೀತಿಯಲ್ಲಿ ಸಾಗುತ್ತಿರುವದೆಯೇ ? ಎಂಬುವದರ ಬಗ್ಗೆ ನಮಗೆ ಲಕ್ಷ್ಯವಿಲ್ಲದಿರುವದು ತನ್ನಲ್ಲಿ ಯಾವುದೇ ಬದಲಾವಣೆ ಅಥವಾ ಏನೂ ಬದಲಾವಣೆಯಾಗದೆ ಇರುವದನ್ನು ಪ್ರಶಿಕ್ಷರೊಡನೆ ಅಭ್ಯಾಸಿಯು ವಿಚಾರ ವಿನಿಮಯ ಮಾಡುವದು ಅವಶ್ಯ. ಬದಲಾವಣೆಯ ಕಡೆಗೆ ಗಮನವಿರದೆ ಸಾಧನೆ ಮಾಡಿದರೆ ಅದು ಕೇವಲ ನಿಮಿತ್ಯ ಮಾತ್ರವಾಗುತ್ತದೆ. ಇದು ಸಂಪ್ರದಾಯಕತೆಗಿಂತ ಮಿಗಿಲಾದುದೇನು ಅಲ್ಲ. ಇದು ನಮ್ಮ ಪದ್ಧತಿಯಲ್ಲಿಯ ನಿಯಮಗಳ ತಿರುಳೇ ಅಲ್ಲ. ನಮ್ಮ ನಿಯಮಗಳಿಗೆ ತಮ್ಮದೇ ಆದ ಮಹತ್ವವಿದೆ. ನಾವು ನಿರೀಕ್ಷಿಸಿದ ಪರಿಣಾಮ ಬೇಕಾದಲ್ಲಿ ಹಾಗೂ ನಮ್ಮ ಹಿತಾಸಕ್ತಿಯ ದೃಷ್ಟಿಯಿಂದ ನಾವು ಪುನಃ ಅವುಗಳನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ. ಸುಧಾರಣೆಯಾಗಬೇಕಾಗಿದ್ದು ವೈಯುಕ್ತಿಕ ಮಟ್ಟದಲ್ಲಿಯ ನಮ್ಮ ವಿಚಾರಣೆ ಶೈಲಿ ಅದನ್ನು ಕೆಳಗೆ ನಮೂದಿಸಿದ ಮಾರ್ಗಸೂಚಿ ಈ ನಿಟ್ಟಿನಲ್ಲಿ ಸಹಾಯಕಾರಿಯಾಗಬಲ್ಲವು.

  1. ಗುರಿಯ ಸ್ಪಷ್ಟನೆ :- ಅಂತಿಮ ಸತ್ಯದ ನಮ್ಮ ಇರುವಿಕೆಯ ಅರಿವಿಕೆಯೇ ನಮ್ಮ ಗುರಿಯೆಂಬುದನ್ನು ಪ್ರತಿಯೊಬ್ಬ ಅಭ್ಯಾಸಿಯು ಅರಿತಿದ್ದಾನೆ. ಇದರ ಅರ್ಥವನ್ನು ವಿವರಿಸುವ ಸಮಯ ಬಂದಾಗ ತಡವರಿಸುತ್ತಾನೆ. ಗುರಿಯ ಬಗ್ಗೆ ಸ್ಪಷ್ಟತೆಯಿಲ್ಲದಿರುವದೇ ಇದಕ್ಕೆ ಕಾರಣ. ಆರಂಭದಲ್ಲಿಯೇ ಈ ವಿಷಯದ ಬಗ್ಗೆ ಕಲ್ಪನೆ ಇರಬೇಕು. ಗುರಿಯೆನ್ನುವದು ಸೃಷ್ಟಿಯಲ್ಲಿಯ ವಸ್ತುವೇ? ಅದು ನಮ್ಮಿಂದ ಹೊರಗೆ ನೆಲೆಸಿರುವಂತಹದ್ದೆ? ಇಂದ್ರಿಯಗಳಿಗೆ ಗೋಚರವಾಗುವಂತಹದ್ದೇ? ಎಂಬ ಪ್ರಶ್ನೆಗಳು ಉತ್ತರವನ್ನು ಅಪೇಕ್ಷಿಸುತ್ತವೆ. ಅವುಗಳನ್ನು ಆರಂಭಿಕ ವಿಚಾರಗಳೆಂದು ಪರಿಗಣಿಸಬೇಕು. ಅದೇ ಮೊದಲ ಆಧಾರವಾಗುವದು. ಹೀಗೆಯೇ ಹಂತ ಹಂತವಾಗಿ ಮುಂದುವರೆದಾಗ ಪಕ್ವತೆಯ ಸ್ಥಿತಿಗೆ ಬರಲಾಗುತ್ತದೆ. ಒಂದು ವೇಳೆ ಬದಲಾವಣೆಯ ಸ್ಪಷ್ಟತೆ ಗಮನಿಸಲಾರದಾಗ ಪ್ರಶಿಕ್ಷಕರೆದುರು ಮಾರ್ಗದರ್ಶನಕ್ಕಾಗಿ ಸಮಸ್ಯೆಯನ್ನು ಹೇಳಬೇಕು. ಸ್ಪಷ್ಟತೆಯು ಒಂದು ಮಾನಸಿಕ ಬೆಳವಣಿಗೆ ಎಂಬುದು ಇಲ್ಲಿ ಪ್ರಸ್ತುತವಾಗಿದ್ದು, ವಿಚಾರ ಶಕ್ತಿಯು ಕ್ರಿಯಾತ್ಮಕವಾದುದನ್ನು ಅದು ಸೂಚಿಸುತ್ತದೆ. ಇದು ಜೀವನದ ಗುರಿಯನ್ನು ಸಾಧಿಸಲಾಗಿದೆ ಎಂಬ ಸೂಚನೆಯ ಅರ್ಥವಲ್ಲ. ಇದು ಸ್ಪಷ್ಟತೆಯ ಉತ್ತೇಜನವಾಗಿದ್ದು ಅಭ್ಯಾಸಿಯನ್ನು ಗತಿಶೀಲನನ್ನಾಗಿ ಮಾಡುತ್ತದೆ.
  1. ಮಾರ್ಗದರ್ಶಕ ಮತ್ತು ಗುರಿ :- ಅಂತಿಮ ಸತ್ಯದ ಸಾಕ್ಷಾತ್ಕಾರವೇ ತನ್ನ ಜೀವನದ ಗುರಿ ಹಾಗೂ ಗುರುಗಳ ಸಹಾಯಕ್ಕಾಗಿ ಹಂಬಲಿಸುತ್ತಿದ್ದೇನೆಂದು ಒಬ್ಬ ಅಭ್ಯಾಸಿ ಹೇಳಿದನೆಂದು ಕಲ್ಪಿಸಿಕೊಳ್ಳಿರಿ. ವಿಶ್ಲೇಷಣೆಯಿಂದ ಗೊತ್ತಾಗುವದು ಇಷ್ಟೆ, ಗುರಿ ಮತ್ತು ಗುರುವಿನ ಸಹಾಯ ಬೇರೆ ಬೇರೆ ಎಂದು ತಿಳಿದುಕೊಂಡಿದ್ದಾನೆ. ಎಲ್ಲಿಯವರೆಗೆ ಅವು ಭಿನ್ನವಾದವುಗಳೆಂದು ತಿಳಿದುಕೊಂಡಿದ್ದಾನೋ ಅಲ್ಲಿಯವರೆಗೆ ಅವನ ಸಾಧನೆಗೆ ಅರ್ಥವಿರುವದಿಲ್ಲ. ನಿಜಾರ್ಥಲ್ಲಿ ಅವು ಸಮಾನಾರ್ಥ ಪದಗಳು, ಅವನ ಗ್ರಹಿಕೆಯಲ್ಲಿ ಬದಲಾವಣೆಯ ಅವಶ್ಯವಿರುತ್ತದೆ. ಆಗ ಮಾತ್ರ ಅಪೇಕ್ಷಿತ ಪರಿಣಾಮ ಅವನಿಗೆ ಸಾಧ್ಯವಾಗುವದು.
  1. ವಿಚಾರದಲ್ಲಿ ಮರುಹೊಂದಾಣಿಕೆ :- ಮನುಷ್ಯನು ಸ್ವಭಾವತಃ ಯಾವಾಗಲೂ ಭೌತಿಕ ದೃಷ್ಟಿಯಿಂದ ವಿಚಾರಿಸುವ ಪ್ರವೃತ್ತಿಯುಳ್ಳವನಾಗಿದ್ದಾನೆ. ಆದ್ದರಿಂದ ಅವನ ವಿಚಾರ ಬಹಿರ್ಮುಖವಾಗಿದೆ. ಅದನ್ನು ಅಂತರ್ಮುಖಿಯನ್ನಾಗಿ ಮಾಡುವದೇ ದಿಶಾ ಬದಲಾವಣೆ ಅಥವಾ ಮರುಹೊಂದಾಣಿಕೆಯಾಗಿರುತ್ತದೆ. ಆ ಉದ್ದೇಶಕ್ಕಾಗಿ ಅಭ್ಯಾಸಿಯು ತನ್ನ ಮನಸ್ಸನ್ನು ತೊಡಗಿಸಬೇಕು. ತನ್ನ ನಿತ್ಯದ ಧ್ಯಾನದ ಅಭ್ಯಾಸದಲ್ಲಿ ಅವನಿಗೆ ಅನಿಸಿಕೆಗಳಾಗುವವು. ಅದಕ್ಕೆ ಅನುಭವವೆಂದು ಅವನು ಕರೆಯುತ್ತಾನೆ. ಇದನ್ನು ನಿರ್ಧಿಷ್ಟವಾಗಿ ವಿವರಿಸುವದು ಕಷ್ಟಕರ. ಸಾಮಾನ್ಯವಾಗಿ ಇದನ್ನು ಹಗುರತೆ, ನೀರವತೆ, ಶಾಂತತೆ, ಎಲ್ಲೊ ತಮ್ಮನ್ನು ತಾವು ಕಳೆದುಕೊಂಡವರಂತೆನಿಸುವದು. ಇತ್ಯಾದಿ ಶಬ್ದಗಳಲ್ಲಿ ವಿವರಣೆ ಕೊಡಲಾಗುತ್ತದೆ. ಮತ್ತೊಂದು ಅನುಭವವಾಗುವವರೆಗೆ ಮೇಲಿನ ಅನಿಸಿಕೆಗಳಲ್ಲಿಯೇ ತಲ್ಲೀನನಾಗಿರುತ್ತಾನೆ. ಹೊಸ ಅನಿಸಿಕೆಗಾಗಿ ಚಿಂತನಾಶೀಲವಾಗಿರುತ್ತಾನೆ. ಈ ಅಭ್ಯಾಸ ಕಾಲಕ್ರಮೇಣ ಬಹಿರ್ಮುಖತೆಯಿಂದ ಅಂತರ್ಮುಖತೆಯಾಗಿ ಪರಿವರ್ತನೆ ಹೊಂದುತ್ತದೆ. ಯಾವಾಗಲೂ ಪ್ರಶಿಕ್ಷಕರೊಡನೆ ಈ ವಿಷಯಗಳನ್ನು ಮಾರ್ಗದರ್ಶನ ಮತ್ತು ಸ್ಪಷ್ಟಿಕರಣಕ್ಕಾಗಿ ಚರ್ಚಿಸುವದು ಅವಶ್ಯಕವಾಗಿರುತ್ತದೆ.
  1. ವಿಚಾರಶಕ್ತಿ :- ಯೋಚನೆಗಳು ಬರುವದು ಒಂದು ಸಾಮಾನ್ಯ ಕ್ರಿಯೆಯೆಂದು ಅಭ್ಯಾಸಿಯು ಭಾವಿಸಿ ಅದನ್ನು ಉಪೇಕ್ಷಿಸುತ್ತಾನೆ. ಇದು ನಮ್ಮ ಯೋಚನೆಯ ಸಾಮರ್ಥ್ಯದ ಬಗ್ಗೆ ನಮಗಿರುವ ಸಾಮಾನ್ಯ ಪ್ರವೃತ್ತಿ, ವಾಸ್ತವಿಕವಾಗಿ ನಮ್ಮ ಸಾಧನೆಗೆ ಅದುವೇ ಆಧಾರ, ಪ್ರತಿಯೊಂದು ವಿಚಾರಕ್ಕೆ ಅದರದ್ದೇ ಆದ ಶಕ್ತಿ ಇರುತ್ತದೆ. ಅವನು ಯೋಚನಾ (ವಿಚಾರ) ಶಕ್ತಿಯನ್ನು ಗುರುತಿಸುವ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು. ಆರಂಭದಲ್ಲಿ ಅವನಿಗೆ ಏನೂ ಅನಿಸದೇ ಇರಬಹುದು. ಆದರೆ ಸತತ ಪ್ರಯತ್ನದಿಂದ ವಿಚಾರ ಶಕ್ತಿ ಇದೇ ಎಂಬುದು ಮನಗಾಣುವನು. ಕೆಳಗಿನ ಕೆಲವು ಉದಾಹಣೆಗಳು ಅದರ ಬಗ್ಗೆ ಬೆಳಕು ಬೀರುತ್ತವೆ. 1. ಮಗುವಿಗೆ ಉಣಿಸುವಾಗ ಅಪರಿಚಿತರು ನೋಡದಂತೆ ಅನುಭವಿ ಹೆಣ್ಣುಮಕ್ಕಳು ಎಚ್ಚರಿಕೆ ವಹಿಸುತ್ತಾರೆ. ಅವಶ್ಯವೆನಿಸಿದರೆ ಮಗುವನ್ನು ಒಳಗೆ ಒಯ್ಯಲಾಗುವದು. ಇದರ ಉದ್ದೇಶ ಅಪರಿಚಿತರ ‘ದೃಷ್ಟಿ’ ಮಗುವಿಗೆ ತಗಲಬಾರದೆಂದು ಇರುತ್ತದೆ. ಇದರಲ್ಲಿ ನೋಟದ ಮೂಲಕ ಅನಪೇಕ್ಷಿತ ವಿಚಾರ ಪಸರಿಸ ಬಹುದೆಂಬ ಸಂದೇಶವಿರುತ್ತದೆ.
  1. ಯಾವುದೇ ಕಾರಣವಿಲ್ಲದೆ ಮಗು ಅಳಲಾರಂಭಿಸಿದಾಗ ಗೃಹಿಣಿಯು ‘ದೃಷ್ಟಿ’ ಯಾಗಿದೆಂಬ ಸಂಶಯದಿಂದ ಕೆಲವು ಸಾಂಪ್ರದಾಯಿಕತೆಗಳಿಂದ ಅದನ್ನು ಹೋಗಲಾಡಿಸುತ್ತಾಳೆ. ನಂತರ ಮಗು ಶಾಂತವಾಗುತ್ತದೆ.

“ಮನುಷ್ಯನನ್ನು ಅವನಿಗಿರುವ ಸಂಗಾತಿಗಳಿಂದ ಗುರುತಿಸಬಹುದು” ಎಂಬ ಪ್ರಸಿದ್ದ ಗಾದೆ ಮಾತಿದೆ. ಈ ಹೇಳಿಕೆಯು ಆ ಜನರ ಗುಂಪಿನಲ್ಲಿ ಅಡಗಿರುವ ವಿಚಾರ ಶಕ್ತಿ ವ್ಯಕ್ತಿಯನ್ನು ಪ್ರಭಾವಗೊಳಿಸುತ್ತದೆಂಬುದನ್ನು ಪುಷ್ಟಿಕರಿಸುತ್ತದೆ. ಏಕತೆಯ ಸ್ಥಿತಿಯ ಬಗ್ಗೆ ಹೇಳುವಾಗ ನಮ್ಮ ಗುರುಗಳು ಹಾಸ್ಯವಾಗಿ “ನೀವು ಹತ್ತು ಕತ್ತೆಗಳ ಗುಂಪಿನಲ್ಲಿದ್ದರೆ, ನೀವು ಹನ್ನೊಂದನೆಯವರಾಗುತ್ತೀರಿ” ಎಂದಿದ್ದಾರೆ. ಇದು ವಿಚಾರ ಶಕ್ತಿಯ ಬಗ್ಗೆ ವಿಡಂಬನಾತ್ಮಕ ಉಲ್ಲೇಖ. ನಿರಂತರ ಸ್ಮರಣೆಯ ಬಗ್ಗೆ ಅವರಿಂದ ದಿಟ್ಟವಾದ ಸೂಚನೆಯು ಇದೆ. ಏಳು ದಿನಗಳವರೆಗೆ ನಿರಂತರ ಸ್ಮರಣೆ ಮಾಡಿದರೆ ಎಂಟನೆಯ ದಿನ ಅದು ನಿಮ್ಮನ್ನು ಬಿಡದು. ಇದು ವಿಚಾರ ಶಕ್ತಿಗಿರುವ ಇನ್ನೊಂದು ಉದಾಹರಣೆ. ವ್ಯಕ್ತಿಯಲ್ಲಿ ವಿಚಾರ ಶಕ್ತಿಯಿದೆ, ಆದರೆ ಅದರ ಅರಿವೇ ಅವನಿಗಿಲ್ಲದಿರುವದು ದುರಂತವಾದುದು. ಇದು ಒಂದು ಮಗು ಅಣುಬಾಂಬಿನೊಂದಿಗೆ ಆಟವಾಡಿದಂತೆ.

ಕೊನೆಯದಾಗಿ ನಮ್ಮ ಪದ್ಧತಿಯು ಅಭ್ಯಾಸಿಯ ಎಲ್ಲ ಸ್ಥರಗಳಲ್ಲಿ ಅಂದರೆ ಮಾತು, ವಿಚಾರ ಹಾಗೂ ಆಚಾರಗಳಲ್ಲಿ ಶುದ್ಧತೆ ಹೊಂದಲು ಆಪೇಕ್ಷಿಸುತ್ತದೆ. ಆಗ ಮಾತ್ರ ಯಶಸ್ಸಿನ ಆಸೆ ಇರುವದು.