“ವಸ್ತುತಃ ನಿಜವಾದ ಗುರುವು ಆತನ ಅಂತರಾತ್ಮವೇ ವಿನಃ ಬಾಹ್ಯ ಸ್ವರೂಪವಲ್ಲ. ಆದರೂ ರೂಪವನ್ನು ಸಂಪೂರ್ಣವಾಗಿ ದುರ್ಲಕ್ಷಿಸುವದು ಸಾಧ್ಯವಿಲ್ಲ. ಆದರೆ ಯಾರು ಭೌತಿಕ ರೂಪವೇ ಗುರುವೆಂಬ ಕಲ್ಪನೆಗೆ ಅಂಟಿಕೊಳ್ಳುವರೋ ಅವರು ಸ್ಕೂಲತೆಯ ಜಾಲದಲ್ಲಿ ಸಿಕ್ಕು ಗೊಂದಲದಲ್ಲಿ ಬೀಳುವರು”. ಸತ್ಯೋದಯ-ಪ-82

ಪದ್ಧತಿಯ ಕಾರ್ಯ ವಿಧಾನ :-

ಈ ಪದ್ಧತಿಯು ಜೀವನದ ಗುರಿಗೆ ಪ್ರಾಮುಖ್ಯತೆಯನ್ನು ಕೊಡುತ್ತದೆಂಬುದನ್ನು ನಾವು ನೆನೆಪಿನಲ್ಲಿಟ್ಟುಕೊಳ್ಳುವದು ಮಹತ್ವವಾದುದು. ಗುರುವನ್ನು ಹೃದಯದ ಅಂತರಾಳದಲ್ಲಿ ಸಾಕ್ಷಾತ್ಕರಿಸಿಕೊಳ್ಳುವದೇ ಜೀವನದ ಗುರಿಯಾಗಿದೆ. ಅಂತಿಮ ಸತ್ಯದ ತತ್ವವು ವ್ಯಾಖ್ಯಾನಕ್ಕೆ ಮೀರಿದುದಾಗಿದೆ. ಇದು ಹೇಗಿದೆಯೋ ಹಾಗಿದೆ. ನಮ್ಮ ತಿಳುವಳಿಕೆಗಾಗಿ ಮತ್ತು ಸಾಧನೆಯ ಪ್ರಾಯೋಗಿಕದೃಷ್ಟಿಯಿಂದ ಅದನ್ನು ಸೃಷ್ಟಿಯ ಮುಂಚಿನ ಸ್ಥಿತಿಯೆಂಬ ಆದರ್ಶವೇ ಸೂಕ್ತವಾದುದು. ಸೃಷ್ಟಿಯ ಸಮಯದಲ್ಲಿ ಉಂಟಾದ ಕೋಭೆಯೇ ಮೊದಲಿನ ಮನಸ್ಸು. ಮಾನವನಲ್ಲಿರುವ ಮನಸ್ಸೇ ಅದರ ಪ್ರಕಟಣೆಯಾಗಿದೆ. ಈ ಪದ್ಧತಿಯಲ್ಲಿ ಮನಸ್ಸಿನ ಮಾಧ್ಯಮದ ಮೂಲಕವೇ ಸಾಧನೆಯು ಮುಂದುವರೆಯುತ್ತದೆ. ಆದ ಕಾರಣ ಸಾಧನೆ ಒಂದು ವಿಧಾನವೇ ಹೊರತು, ಅದೇ ಗುರಿಯಲ್ಲ. ಅಭ್ಯಾಸಿಯು ವಿಧೇಯನಾಗಿ ನಿಯಮಿತತನದಿಂದ ಸಾಧನೆ ಮುಂದುವರೆಸಿದಾಗ ಗುರಿ ಮತ್ತು ಗುರು ಒಂದೇ ಎಂಬ ಭಾವನೆಯನ್ನು ಅನುಭವಿಸುವನು. ಈ ಭಾವನೆಯನ್ನೇ ಅಡಿಪಾಯವನ್ನಾಗಿ ಮಾಡಿಕೊಂಡು ಮುಂದಿನ ಪಯಣವನ್ನು ಬೆಳೆಸಬೇಕು. ಇದೇ ನಿಜವಾದ ನಿರಂತರ ಸ್ಮರಣೆಯಾಗುವದು. ಇದು ಧ್ಯಾನದ ಸ್ವಾಭಾವಿಕ ಪರಿಣಾಮವಾಗಿದೆ. ಈ ಬದಲಾವಣೆ ತನ್ನ ಸ್ವಪ್ರಯತ್ನದ ಫಲವೆಂದೆ ಕೆಲವು ಸಲ ತಪ್ಪಾಗಿ ಭಾವಿಸುವ ಸಂಭವವಿದೆ. ಇದರ ಹಿಂದೆ ಗುರುಗಳ ಅದೃಶ್ಯ ಕೈ ಕೆಲಸ ಮಾಡುತ್ತಿದೆಯೆಂಬುದನ್ನು ಮರೆಯುತ್ತಾನೆ.

ಈ ಪದ್ಧತಿಯಲ್ಲಿ ಗುರುವೇ ‘ಕೇಂದ್ರ ಬಿಂದು’ ಎಂಬುದನ್ನು ಸದಾ ನಂಬುವದು ಮುಖ್ಯವಾಗಿದೆ. ಒಂದು ರೀತಿಯಲ್ಲಿ ಇದು ‘ವ್ಯಕ್ತಿ ಪೂಜೆ’ಯೆನ್ನಬಹುದು. ತಿಳುವಳಿಕೆಗೋಸ್ಕರ (ಭೌತಿಕ) ವ್ಯಕ್ತಿಯಿಲ್ಲದ ವ್ಯಕ್ತಿತ್ವವೆಂದು ವರ್ಣಿಸಬಹುದು. ಮತ್ತೊಂದು ವಿಧದಲ್ಲಿ ಇದು ಪ್ರಭೆಯಿಲ್ಲದ ಪ್ರಕಾಶ. ಆ ವ್ಯಕ್ತಿತ್ವವು ಮಾನವ ಮಾಧ್ಯಮದ ಮುಖಾಂತರ ಕೆಲಸ ಮಾಡುತ್ತದೆ. ತನ್ನದೇ ಆದ ತತ್ವ ಪ್ರಣಾಲಿಕೆ ಮತ್ತು ಮಾನದಂಡದ ಪ್ರಕಾರ ಕೆಲಸ ನಿರ್ದೇಶಿಸಲ್ಪಡುತ್ತದೆ. ವ್ಯಕ್ತಿತ್ವವು ಅವುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವದಿಲ್ಲ. ಎಲ್ಲಾ ಪರಿಸ್ಥಿತಿಗಳಲ್ಲಿ ಅದರ ಪರಿಶುದ್ಧತೆ ಶಿಥಿಲಗೊಳ್ಳುವದಿಲ್ಲ. ಪರಿಣಾಮವಾಗಿ ತಾನು ಯಾವ ಮಾನವ ಮನಸ್ಸಿನ ಮಾಧ್ಯಮದ ಮೂಲಕ ಕೆಲಸ ಕೈಗೊಳ್ಳಬೇಕಿದೆಯೋ ಅದನ್ನು ವ್ಯಕ್ತಿತ್ವವು ಶುದ್ಧತೆಯ ಉನ್ನತ ಮಟ್ಟಕ್ಕೆ ತಂದು ತನ್ನಂತೆಯೇ ಮಾಡುತ್ತದೆ. ವೈಯಕ್ತಿಕ ಮನಸ್ಸು ತನ್ನ ಪ್ರತಿಬಿಂಬವನ್ನು ಪ್ರಥಮ ಮನಸ್ಸಿನ ಮೇಲೆ ಬೀರುತ್ತದೆ. ಈ ಸ್ಥಿತಿಯುಂಟಾದಾಗ ವ್ಯಕ್ತಿತ್ವವು ಇಂತಹ ಮಾನವ ಮಾಧ್ಯಮದ ಮೂಲಕ ಪ್ರಕಟಗೊಳ್ಳುತ್ತದೆ. ಪೂಜ್ಯ ಶ್ರೀ ರಾಘವೇಂದ್ರ ರಾಯರು ಇಂತಹ ಅಪೂರ್ವ ವಿದ್ಯಮಾನಕ್ಕೆ ನಿದರ್ಶನವಾಗಿದ್ದರು. ಅವರು ಹತ್ತು ನಿಯಮಗಳ ಸಾಕಾರ ಮೂರ್ತಿಯಾಗಿದ್ದರು. ಆದ್ದರಿಂದ ಈ ಪದ್ಧತಿಯಲ್ಲಿ ತರಬೇತಿ ಮತ್ತು ಅದರ ಪ್ರಭಾವ ಒಂದೇ ಆಗಿರುತ್ತದೆ. ಅವುಗಳಲ್ಲಿ ಅಂತರವೇನಾದರು ಇದ್ದರೆ ಅದು ಕೇವಲ ಕಾರ್ಯವಿಧಾನ ಮತ್ತು ವಿವರಣೆಗಳಲ್ಲಿ ಮಾತ್ರ.

ನಿಯಮಗಳ ಆರ್ಥ :-

ನಮ್ಮದು ಆಧ್ಯಾತ್ಮಿಕ ಪದ್ಧತಿ, ವಿಧಾನ ಸರಳ ಮತ್ತು ಸೂಕ್ಷ್ಮವಾಗಿದೆ. ಗುರಿಯ ಸಾಧನೆಯಲ್ಲಿ ಇಂದ್ರಿಯಗಳ ಪಾತ್ರ ಅಮುಖ್ಯ(ಗೌಣ). ಸಾಧನೆಯು ಮನಸ್ಸಿನ ಮಾಧ್ಯಮದ ಮೂಲಕ ನೆರವೇರುತ್ತದೆ. ಎಲ್ಲಾ ನಿಯಮಗಳ ಪೈಕಿ ನಿರಂತರ ಸ್ಮರಣೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದೆ.ನಮ್ಮ ಗುರುಗಳ ಪ್ರಕಾರ ಇದು Mother Tincture ಆಗಿದೆ. ನಿರಂತರ ಧ್ಯಾನದಲ್ಲಿ, ನೆನಪಿನಲ್ಲಿರುವದನ್ನು ಮರುಕಳಿಸಲಾಗುತ್ತದೆ. ಆದರೆ ನಮ್ಮ ಮನಸ್ಸು ಬಹಳಷ್ಟು ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೊಂಡಿದೆ. ಅಷ್ಟೂ ಸಾಲದೆಂಬಂತೆ ಅಲೆದಾಡುವ ಅಭ್ಯಾಸ ಬೇರೆ ಇದೆ. ಧ್ಯಾನವು ಈ ನಿಟ್ಟಿನಲ್ಲಿ ಸಹಾಯಕಾರಿಯಾಗಿದೆ. ದೈವೀ ಪ್ರಕಾಶದ ಮೇಲಿನ ಧ್ಯಾನವು ಒಂದು ಭ್ರಮೆ ಮಾತ್ರ.

ಸಾಧನೆಯು ಮುಂದುವರಿದಂತೆ ನಮಗೆ ಕೆಲವು ಅನುಭವಗಳಾಗುವವು. ಕೆಲವೊಮ್ಮೆ ಅವು ಅಂತಿಮ ಸತ್ಯದ ಮಿಂಚಿನ ಗೋಚರದಂತೆ ಆಗುವ ಸಂಭವವೂ ಉಂಟು. ಗುರುಗಳು ತಮ್ಮ ರೂಪವನ್ನು ಪ್ರಕಟಿಸುತ್ತಾರೆಂಬ ನಿಷ್ಕರ್ಷೆಗೆ ನಾವು ಬರಬಹುದು. ಇದು ಸ್ಥಿರವಾದುದಲ್ಲ. ಅದು ಗತಿಶೀಲವಾದುದು. ಇದು ಬದಲಾವಣೆ ಹೊಂದುತ್ತಿರುತ್ತದೆ. ಇದು ಅಲ್ಲಿಂದಲೇ ಬಂದದ್ದು. ಇದು ಸ್ವಯಂ ಪ್ರೇರಿತವಾದುದು. ಕಾಣಲು ಪ್ರಯತ್ನಿಸಿದರೆ, ರೂಪವು ಉಳಿಯುವಂತಹದ್ದಲ್ಲ. ಧ್ಯಾನವನ್ನು ಮುಂದುವರಿಸಿದಂತೆ ರೂಪವು ಕಾಣದಂತಾಗುವದು. ಅನಿಸಿಕೆಯೂ ಸಹಾ ಇಲ್ಲದಂತಾಗುವದು ಇದನ್ನು ನಾವು ನೀರವತೆ, ಅಕ್ಷರ ಇತ್ಯಾದಿಯಾಗಿ ಕರೆಯಬಹುದು. ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ ಎಂದು ಪರಿಗಣಿಸಬಹುದು. ಮನಸ್ಸು ನಿಯಂತ್ರಣದಲ್ಲಿ ಬಂದು ತನ್ನ ಅಲೆಮಾರಿತನ ಕಳೆದುಕೊಳ್ಳತೊಡಗುವದು. ಧ್ಯಾನದ ಒಂದೇ ವಿಷಯ ಆರ್ಥಾತ್ ಜೀವನದ ಗುರಿಯ ಮೇಲೆ ನೆಲೆಗೊಳ್ಳುವದು. ಸತತವಾಗಿ ಚಿಂತನಾ ಶೀಲರಾಗಬೇಕೆಂದೆನಿಸುವದು. ಒಂದು ರೀತಿಯಲ್ಲಿ ಸತ್ಯದ ಸಂಪರ್ಕದಲ್ಲಿಯೇ ಇರುತ್ತೇವೆಂದೆನಬಹುದು. ವಸ್ತುತಃ ಇದುವೇ ನಿರಂತರ ಸ್ಮರಣೆ. ಅದು ಗುರಿಯಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಿ ಉಳಿದ ವಿಷಯಗಳಲ್ಲಿ ತೊಡಗಿಸುವದನ್ನು ಕಡಿಮೆ ಮಾಡುತ್ತದೆ. ಮನಸ್ಸು ವಿಕಾಸಗೊಳ್ಳುವದು. ನಿರಂತರ ಸ್ಮರಣೆ ವಿವಿಧ ಛಾಯೆಗಳನ್ನು ಅನುಭವಿಸುವದು. ನಿರಂತರ ಸ್ಮರಣೆಯು ‘ಸ್ಮರಣೆಯಿಲ್ಲದ ಸ್ಮರಣೆ’ಯ ಘಟ್ಟವನ್ನು ತಲುಪಬೇಕೆಂದು ನಮ್ಮ ಗುರುಗಳು ಸೂಚಿಸಿದ್ದಾರೆ.

ಸಾಧನೆಯ ಮಾರ್ಗ :-

ನಾವೆಲ್ಲ ಬಹಳಷ್ಟು ವರ್ಷಗಳಿಂದ ಸಾಧನೆಯನ್ನು ಮಾಡುತ್ತಲಿದ್ದೇವೆ. ನಾವು ನಿಯಮಿತತನದಿಂದ ಬೆಳಗಿನ ಧ್ಯಾನ, ಸಾಯಂಕಾಲದ ಶುದ್ದೀಕರಣ ಮತ್ತು ಮಲಗುವ ಮುಂಚೆ ಪ್ರಾರ್ಥನೆ ಮಾಡುತ್ತಲಿದ್ದೇವೆ. ಪ್ರತಿ ವಾರ ಸತ್ಸಂಗಕ್ಕೆ ಹೋಗುವೆವು. ವಿವಿಧ ಕೇಂದ್ರಗಳಲ್ಲೇರ್ಪಡಿಸುವ ಸಂಸ್ಥಾಪನಾ ದಿನಾಚರಣೆ, ಬಸಂತ ಪಂಚಮಿ ಗುರುಗಳ ಜನ್ಮ ದಿನಾಚರಣಾ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೇವೆ. ಈ ಚಟುವಟಿಕೆಗಳು ಸಾಧನೆಯಲ್ಲಿರುವ ನಮ್ಮ ನಿರ್ಧಿಷ್ಟ ಆಸಕ್ತಿಯನ್ನು ತೋರಿಸುತ್ತದೆ. ಇವುಗಳ ಜೊತೆಗೆ ಪ್ರತಿಯೊಬ್ಬನು ಗುರಿಯ ನಿರಂತರ ಸ್ಮರಣೆಯನ್ನು ಕೈಗೊಳ್ಳುತ್ತಾನೆ. ನಮ್ಮಲ್ಲಿ ಹೆಚ್ಚಿನ ಜನರು ಹಿರಿಯ ಅಭ್ಯಾಸಿಗಳಾಗಿದ್ದು ಗುರುಗಳ ಭೌತಿಕ ರೂಪವನ್ನು ನೋಡಿದ್ದಾರೆ. ಅವರಿಗೆಲ್ಲ ಗುರುಗಳ ಗಡ್ಡ, ಟೋಪಿ, ಮಧುರ ಧ್ವನಿ, ಆಕರ್ಶಕ ಮುಖ ಮತ್ತು ಹುಕ್ಕಾಗಳಂತಹ ರೂಪರೇಶೆಗಳನ್ನು ನೆನೆಪಿಸಿಕೊಳ್ಳುವದೇ ನಿರಂತರ ಸ್ಮರಣೆಯಾಗಿದೆ. ಗುರುಗಳು ಭೌತಿಕ ದೇಹ ತ್ಯಜಿಸಿದ ಮೇಲೆ ನಿರಂತರ ಸ್ಮರಣೆಯು ಅವರ ಅವತರಣಿಕೆಗಳು, ಘಟನೆಗಳು ಮತ್ತು ಹೇಳಿಕೆಗಳೆಡೆಗೆ ವರ್ಗಾಯಿಸಲ್ಪಟ್ಟಿತು. ಇದರ ಬದಲಾವಣೆ ಮುಂದುವರಿದು ಅವರು ಬರೆದ ಪುಸ್ತಕ ಸಂದೇಶ, ಪ್ರಬಂಧಗಳನ್ನು ಮತ್ತು ಅವರ ನುಡಿಮುತ್ತುಗಳನ್ನು ಓದುವದು ನಿರಂತರ ಸ್ಮರಣೆಯಾಗಿ ಮಾರ್ಪಾಡಾಯಿತು. ಇಂದಿನ ಈ ನಿರಂತರ ಸ್ಮರಣೆಯು ಪರಿವರ್ತಿತ ಸ್ಥಿತಿಯಾಗಿದೆ. ಈ ಕಥೆ ಇಲ್ಲಿಗೆ ಮುಗಿಯುವದಿಲ್ಲ. ಹತ್ತು -ಹದಿನೈದು ಅಭ್ಯಾಸಿಗಳು ಒಂದೆಡೆ ಸೇರಿದಾಗ ನಿರಂತರ ಸ್ಮರಣೆಯೆಂದರೇನು ಎಂಬ ಪ್ರಶ್ನೆ ಕೇಳಿದಾಗ ಎಷ್ಟು ಅಭ್ಯಾಸಿಗಳಿರುವರೋ ಅಷ್ಟು ಬೇರೆ ಬೇರೆ ಉತ್ತರಗಳು ಸಿಗುತ್ತವೆ. ವೈಯಕ್ತಿಕ ನಿರೀಕ್ಷಣೆಯ ಆಧಾರದ ಮೇಲೆ ಇದನ್ನು ಇಲ್ಲಿ ಹೇಳಲಾಗಿದೆ. ಇದು ಕೇವಲ ಕಲ್ಪನೆಯಲ್ಲ. ವಿಶ್ಲೇಷಣೆ ಮಾಡಿದಾಗ ಎರಡು ಪ್ರಕಾರದ ವಿವರಣೆಗಳ ಸಾಧ್ಯತೆಯಿದೆ

1. ಗುರುಗಳ ಭೌತಿಕತೆ ಆಧಾರದ ಮೇಲಿನ ನಿರಂತರ ಸ್ಮರಣೆ

2. ಅಭ್ಯಾಸಿಯು ಸಾಧನೆಯನ್ನು ದೈಹಿಕ ಚಟುವಟಿಕೆಯೆಂದು ಭಾವಿಸುವದು.

ಪ್ರತಿಬಂಧಕ ಇರುವದೆಲ್ಲಿ ?

ನಮ್ಮ ಸಾಧನೆ ಯಥಾ ಪ್ರಕಾರ ನಡೆಯುತ್ತಿದೆ. ಹಲವಾರು ವರುಷಗಳು ಗತಿಸಿವೆ. ಭಾಷಣ, ವಿವರಣೆ, ವಿಚಾರ ಗೋಷ್ಟಿ, ಕಾರ್ಯಾಗಾರ ಇತ್ಯಾದಿಗಳನ್ನು ನಡೆಸಿಕೊಂಡು ಬರಲಾಗಿದೆ. ಆದರೆ ಪರಿಣಾಮ ಮಾತ್ರ ಉತ್ತೇಜನಕಾರಿಯಾಗಿಲ್ಲ. ಯಾರೊಬ್ಬರೂ ನಿರೀಕ್ಷಣೆಯ ಮಟ್ಟಕ್ಕೆ ಬರುತ್ತಿಲ್ಲ. ನಮ್ಮ ಸಾಧನೆಯೇ ನಮ್ಮನ್ನು ಕೆಳಗೆ ಜಗ್ಗುತ್ತಿದೆಯೇ ಎಂಬ ವಿಚಾರ ಬರುವದು. ಇದುವೇ ಕಾರಣ ಎಂಬ ಭಯವು ನನ್ನಲ್ಲುಂಟಾಗಿದೆ. ಈ ಸಾಧ್ಯತೆಯನ್ನು ಅಲ್ಲಗಳೆಯುವದು ಕಷ್ಟಕರ. ನಮ್ಮ ಪದ್ಧತಿಯು ಗತಿಶೀಲವಾಗಿದ್ದು, ಸಾಧನೆಯೂ ಅದಕ್ಕನುಗುಣವಾಗಿರುವದು ಅವಶ್ಯ. ಇದು ಮಾನಸಿಕ ಕ್ರಿಯಾಶೀಲತೆಯನ್ನು ಅಪೇಕ್ಷಿಸುತ್ತದೆ. ಅದರ ಕಾರ್ಯವಿಧಾನಕ್ಕೆ ವಿಚಾರ ಶಕ್ತಿಯೇ ಆಧಾರವಾಗಿರುವದು. ಭೌತಿಕತೆಗೆ ಅಥವಾ ದೈಹಿಕ ಕ್ರಿಯೆಗೆ ಅವಕಾಶವಿಲ್ಲ. ತಪ್ಪು ವಿಚಾರ/ಗ್ರಹಿಕೆಗಳು ನಮ್ಮ ಮಾರ್ಗದಲ್ಲಿ ಆತಂಕಗಳಾಗಿ ನಮ್ಮ ಅವನತಿಗೆ ಕಾರಣಗಳಾಗುತ್ತವೆ. ಪ್ರವೃತ್ತಿ ಆರಂಭವಾಗಿದೆ. ಅದು ಊರ್ಧ್ವಮುಖವಾಗುವದು ಅವಶ್ಯವಾಗಿದೆ. ಇದು ಹೇಗೆ ಸಾಧ್ಯ ? ಪರಿಹಾರ ಸರಳ ಮತ್ತು ನೇರವಾಗಿದೆ. ಅದೇ ವಿಚಾರ ಶಕ್ತಿಯನ್ನು ಉಪಯೋಗಿಸಬೇಕು. ನಮ್ಮ ಪದ್ಧತಿಯ ತತ್ವವನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವದು ಅವಶ್ಯ. ನಂತರ ಮನಸ್ಸನ್ನು ಶ್ರದ್ಧಾಪೂರಕವಾಗಿ ಸಾಧನೆಗೆ ಅಳವಡಿಸಬೇಕು.

ತಿದ್ದಿಕೊಳ್ಳುವ ಕ್ರಮ :-

ನಮ್ಮಲ್ಲಿಯ ಪ್ರತಿಯೊಬ್ಬರು ‘ಜೀವನದ ನಿಜವಾದ ಗುರಿ’ಯ ಅರುವಿನ ಮಟ್ಟಕ್ಕೆ ಬರಲು ನಮ್ಮ ಪದ್ಧತಿ ಆಹ್ವಾನಿಸುತ್ತದೆ ಹಾಗು ನಿರೀಕ್ಷಿಸುತ್ತದೆ. ವೈಯಕ್ತಿಕ ಮಟ್ಟದಲ್ಲಿ ಕ್ರಮಬದ್ಧ ಸುಧಾರಣೆಯಾಗುವದು ಅತ್ಯಂತ ಅವಶ್ಯಕವಾದುದು. ನಮ್ಮ ಸಾಧನೆಗೆ ಸಂಬಂಧಿಸಿದಂತೆ ಭೌತಿಕತೆ ಮತ್ತು ದೈಹಿಕ ಕ್ರಿಯೆಗಳನ್ನು ಮಾನಸಿಕ ಕ್ರಿಯೆ ಹಾಗು ವಿಚಾರ ಶಕ್ತಿಗಳಿಂದ ಸ್ಥಾನಪಲ್ಲಟಗೊಳಿಸಬೇಕಾಗಿದೆ. ನಿಜಾರ್ಥದಲ್ಲಿ ಆಧ್ಯಾತ್ಮಿಕ ತರಬೇತಿಯಲ್ಲಿ ಸರಳತೆ, ಶುದ್ಧತೆ ಮತ್ತು ಸೂಕ್ಷ್ಮತೆಗಳನ್ನು ಅನುಸರಿಸುವದು ಪೂರ್ವಾಗತ್ಯವಾಗಿದೆ. ಸಾಕ್ಷಾತ್ಕಾರದ ಪ್ರಶ್ನೆ ನಂತರ ಬರುವದು. ಸಾಕ್ಷಾತ್ಕಾರವನ್ನು ಕೇವಲ ಓದುವದರಿಂದಲೇ ಸಾಧಿಸಲಾಗದು ಎಂಬುದನ್ನು ನಮ್ಮ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಮಗೆ ಸಹಾಯದ ಅವಶ್ಯಕತೆಯಿದೆ. ಆದ ಕಾರಣವೇ ಅನೇಕ ತರಬೇತಿಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಮಗೆ ಆಧಾರವೂ ಬೇಕು. ನಮ್ಮ ಆಧ್ಯಾತ್ಮದ ತೊಡಕುಗಳನ್ನು ಪರಿಹರಿಸಲು ಸಿದ್ದನಾದ, ಸುಲಭವಾಗಿ ಸಿಗುವ, ಶ್ರೇಷ್ಠ ಸಾಮರ್ಥ್ಯವುಳ್ಳ ಸಹಬಾಂಧವನೊಬ್ಬನ ಸಹಾಯವನ್ನು ನಾವು ಕೋರಬೇಕಾಗುತ್ತದೆ. ಕೆಳಗೆ ಕೊಟ್ಟ ಗಣಿತ ರೂಪದಲ್ಲಿಯ ವಿವರಣೆ ವಿಷಯವನ್ನು ಸ್ಪಷ್ಟಗೊಳಿಸುವದು.

ಸಾಧನೆ+ಸಹಾಯ = ಮಾನವ ಜೀವನದ ಗುರಿ

ಸಾಧನೆ-ಸಹಾಯ = ಮಾನವ ಜೀವನದ ಗುರಿಯಾದೀತೆ?……

ಮಾರ್ಗ ಸೂಚಿ :-

ನಮಗೆ ಮುಖಾ ಮುಖಿಯಾಗಿರುವ ಪರಿಸ್ಥಿತಿ ಹೀಗಿದೆ. ಗುರುಗಳು ಕೊಟ್ಟ ಪದ್ಧತಿಯನ್ನು ಅನುಸರಿಸುತ್ತೇವೆಂದು ಒಂದೆಡೆ ಹೇಳಿಕೊಳ್ಳುತ್ತೇವೆ. ಇನ್ನೊಂದೆಡೆ ನಾವು ಮಾಡುತ್ತಿರುವ ಸಾಧನೆ ತದ್ವಿರುದ್ಧವಾಗಿದೆ. ಸಾಧನೆಯ ನಿಜವಾದ ತಾತ್ಪರ್ಯವೇ ಸಂಪೂರ್ಣವಾಗಿ ಭಿನ್ನವಾಗಿದೆ. ಕೆಳಗೆ ನಮೂದಿಸಿದ ಸಿದ್ಧ ಕೈಪಿಡಿ ಎಲ್ಲವನ್ನು ಸಂಕ್ಷೇಪವಾಗಿ ವಿವರಿಸುವದು.

ಸೋಪಾನ 1 :

ಇಲ್ಲಿ ಧ್ಯಾನ, ಶುದ್ದೀಕರಣ ಮತ್ತು ಪ್ರಾರ್ಥನೆಗಳ ರೂಪದಲ್ಲಿರುವ ಸಾಧನೆ ಕೇವಲ ಆಚರಣೆಗಾಗಿ, ನಿರತಂತರ ಸ್ಮರಣೆ ಅತಿಥಿ ರೂಪದಲ್ಲಿ ಕಾಣಿಸಿಕೊಳ್ಳುವದು. ಇದು ಸಂಪ್ರದಾಯಕ್ಕಿಂತ ಮಿಗಿಲಾದುದೇನೂ ಅಲ್ಲ.

ಸೋಪಾನ 2 :-

ಸಾಧನೆಯು ನಿತ್ಯ ಮತ್ತು ನಿಯಮಿತವಾಗಿರುತ್ತದೆ. ಚಿಂತನಾಶಕ್ತಿಯು ಪಾತ್ರ ನಿರ್ವಹಿಸುತ್ತದೆ. ಸಾಧಕನು ತತ್ವದ ಗ್ರಹಿಕೆ ಮತ್ತು ಸ್ಪಷ್ಟತೆಗಾಗಿ ಪ್ರಯತ್ನಿಸುತ್ತಾನೆ ಜೀವನಕ್ಕೆ ಅಪೂರ್ವವಾದ ಉದ್ದೇಶ, ದಶೆ ಮತ್ತು ಹೋರಾಟದಿಂದಿರುವದೆಂದು ಅನಿಸುವದು. ಒಂದು ರೀತಿಯಲ್ಲಿ ಇದು ಸಮವಸ್ತ್ರ ನಿಯಮವೆನ್ನಬಹುದು.

ಸೋಪಾನ 3:-

ಅಭ್ಯಾಸಿಯು ಮಾರ್ಗದರ್ಶನದ ಅವಶ್ಯಕತೆಯನ್ನು ಮನಗಾಣುವನು. ಪರಿಣಿತನೊಬ್ಬನ ಮಾನಸಿಕ ಸಂಬಂಧಕ್ಕಾಗಿ ಹುಡುಕುವನು. ಪರಿಶೀಲನೆ ಮತ್ತು ಪರಾಮರ್ಶೆಗಳು ಆರಂಭಗೊಳ್ಳುವವು. ಸರಳ ಶಬ್ದದಲ್ಲಿ ಹೇಳಬೇಕೆಂದರೆ ಇದು ‘ತಯಾರಿ’ಎಂದೆನಿಸಬಹುದು.

ಸೋಪಾನ 4:-

ಆಧ್ಯಾತ್ಮಿಕ ತರಬೇತಿ ಕೈಗೊಳ್ಳಲಾಗುವದು. ಇದು ಒಬ್ಬ ಪರಿಣಿತನ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ. ಇದು ಪರಿಪಕ್ವವಾಗುವವರೆಗೆ ಮುಂದುವರೆಯುತ್ತದೆ.

ಸೋಪಾನ 5:-

ಮಾನಸಿಕ ವಿಕಾಸವಾಗುತ್ತದೆ. ವಿಭಿನ್ನ ಜಾಗ್ರತಾವಸ್ಥೆಗಳನ್ನು ಅಭ್ಯಾಸಿಯು ದಾಟುವನು. ಎಲ್ಲಾ ಅನಿಸಿಕೆಗಳು, ಉದ್ವೇಗ ಮತ್ತು ಅನುಭವಗಳು ಕೊನೆಗೊಳ್ಳುವವು. ಅವನು ಆಶ್ಚರ್ಯಚಕಿತಗೊಳ್ಳುವನು. ಯಾತ್ರೆ ಮುಂದುವರೆಯುತ್ತದೆ.

ಇವೆಲ್ಲಾ ಸೋಪಾನಗಳ ನಂತರ ಗುರುವಿನ ಕೃಪೆಯಾದಲ್ಲಿ ನಿಜವಾದ ಅಭ್ಯಾಸದ ಉದಯವಾಗುತ್ತದೆ. ಅವನು ಕೇವಲ ಕೃಪೆಯ ನಿರೀಕ್ಷೆಯಲ್ಲಿರುವನು.

ಮೇಲ್ಕಾಣಿಸಿದ ಸೋಪಾನಗಳು ಕೇವಲ ಪ್ರಾಯೋಗಿಕವಾದವುಗಳು. ಒಂದು ತರಹದ ಅಂದಾಜು ನಿಯಮಗಳು. ಅವು ಸಾಧನೆಯಲ್ಲಾಗಲಿ, ಅನ್ವೇಷಣೆಯಲ್ಲಾಗಲಿ ಪುಷ್ಟಿಕರಿಸುವದಿಲ್ಲ. ಈ ಪ್ರಬಂದವು ಸಿದ್ಧಾಂತ ಮತ್ತು ಸಾಧನೆಗಳ ನಡುವಿನ ಘರ್ಷಣೆಯನ್ನು ಬಿಂಬಿಸುತ್ತದೆ. ಇದನ್ನು ಮುನ್ಸೂಚನೆಯ ಪರದೆಯೆಂದು ಪರಿಗಣಿಸಬಹುದೆ?