ಶ್ರೀ ಬಾಬೂಜಿ ಮಹರಾಜರ ಹೇಳಿಕೆಯ ಪ್ರಕಾರ “ಯಾವುದೇ ಸಂಸ್ಥೆಯಲ್ಲಿ ವೈಮನಸ್ಸು ಉಂಟಾದರೆ ಹಾಲಿನಲ್ಲಿ ಹುಳಿ ಹಾಕಿದಂತೆ” ಆಧ್ಯಾತ್ಮ ಜೀವನದಲ್ಲಿ ವೈಮನಸ್ಸು ಎಂಬುವದು ಒಂದು ವಿಷಕಾರಿ ಅನಿಲದಂತೆ. ಅದು ಒಬ್ಬನ ಪ್ರಗತಿಯ ಪಥವನ್ನು ತಡೆಯುವದಲ್ಲದೆ, ಪೂರ್ಣ ಕೇಂದ್ರದ ವಾತಾವರಣವನ್ನೇ ಕಲುಷಿತಗೊಳಿಸಿ, ಎಲ್ಲ ಆಧ್ಯಾತ್ಮಿಕ ಸೌಂದರ್ಯವನ್ನು ಕೆಡಿಸುತ್ತದೆ. ವಾಸ್ತವವಾಗಿ, ಶುದ್ಧತೆಯಲ್ಲಿ ಒಂದು ಸಣ್ಣ ಧಬ್ಬೆಯು ಕೂಡಾ ಒಂದು ದೊಡ್ಡ ಬಿರುಕು ಉಂಟುಮಾಡುತ್ತದೆ. ಇದು ಹೇಗೆ ಸಾಧ್ಯ? ಒಬ್ಬ ಸಾಧನೆ ಮಾಡುವ ಅಭ್ಯಾಸಿಯಲ್ಲಿ ಒಂದು ಸಣ್ಣ ವೈಮನಸ್ಸಿನ ವಿಚಾರ ಬಂದರೆ ಸಾಮಾನ್ಯವಾಗಿ ಅಭ್ಯಾಸಿಯಲ್ಲಿರುವಂತಹ ಆಧ್ಯಾತ್ಮಿಕ ಶಕ್ತಿಯು ಅದನ್ನು ಹೊರಗೆ ಎಸೆಯುತ್ತದೆ ಮತ್ತು ಮುಂದೆ ಅದು ಪಸರಿಸುವದು. ಇದರಿಂದಾಗಿ ವೈಚಾರಿಕ ವೈಮನಸ್ಸು ವ್ಯವಹಾರದಲ್ಲಿ ಬರುವದು. ಇದರ ಕಡೆ ನಮ್ಮ ಗಮನವೇ ಇರುವದಿಲ್ಲ. ಕಾರಣ ನಮ್ಮ ಪ್ರಗತಿ ಕುಂಠಿತವಾಗುವದಲ್ಲದೆ ಪ್ರಗತಿ ಹೊಂದಿದ ಸ್ಥರಗಳ ಮೇಲೂ ಇದರ ಪರಿಣಾಮವಾಗಿ ಅಧೋಗತಿಯ ಕಡೆಗೆ ಒಯ್ಯುವದು.

ಈಗ ನಾವು ವೈಮನಸ್ಸಿನ ಕಾರಣವನ್ನು ಹುಡುಕೋಣ. ಇದರ ಮೂಲ ಕಾರಣವೆಂದರೆ ನಮ್ಮಲ್ಲಿರುವ ಸ್ವಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಇಚ್ಛೆ ಮಾತ್ರ. ನಮ್ಮಲ್ಲಿ ಯಾವಾಗ ಅಹಂಕಾರ ಬೆಳೆದಿದೆ ಎಂಬುದು ಗೊತ್ತಾದ ಮೇಲೆ ಇದರ ಪಾತ್ರ ಹೆಚ್ಚುವದು. ಸ್ತುತಿ ಮತ್ತು ಮರ್ಯಾದೆ ನಮ್ಮೆಲ್ಲರಿಗೂ ಪ್ರಿಯವಾದುದು. ಬೇರೆಯವರಿಗೆ ನಾವು ಯಾವಾಗಲೂ ಮಾನ ಮರ್ಯಾದೆ ಕೊಡುತ್ತಾ ಹೋದರೆ ನಮಗೆ ಆಗುವ ನಷ್ಟವೇನೂ ಇಲ್ಲ. ಕೇವಲ ಒಂದು ತರಹದ ಆನಂದವೇ ಆಗುವದು. ಇಂತಹದನ್ನು ಕೆಲವು ಕಾಲ ಮಾಡಿದರೆ ಮಾತ್ರ ತಿಳಿಯುವದು. ಆಧ್ಯಾತ್ಮ ಸಾಧಕನಲ್ಲಿ ಈ ಗುಣ ಸ್ವಭಾವದಲ್ಲಿಯೇ ಅಳವಡಿಸಿಕೊಳ್ಳಬೇಕು ಇದರಿಂದಾಗಿ ಎಲ್ಲರ ಪ್ರತಿ ಆದರ ಪ್ರೇಮ ಹುಟ್ಟುವದು, ಮತ್ತು ನಮ್ಮ ಸ್ವಭಾವವು ನಮಗೆ ಅರಿವಿಲ್ಲದಂತೆಯೇ ಮಾರ್ಪಾಟು ಹೊಂದುವದು. ಇದೇ ನಮ್ಮಲ್ಲಿ ಪ್ರೇಮ ಮತ್ತು ಬಂಧುತ್ವ ಬೆಳೆಯಲು ಅನುಕೂಲ ಮಾಡುವದು. ವಿಚಾರ ಮಾಡುವದು ನಮ್ಮ ಕೈಯಲ್ಲಿ ಇದೆ. ವೈಮನಸ್ಸು ಕೇವಲ ಮನಸ್ಸಿನ ಒಂದು ವಿಕಾರ ಮಾತ್ರ. ಯಾವಾಗಲಾದರೂ ಬೇರೆಯವರ ಬಗ್ಗೆ ಒಂದು ಕೆಟ್ಟ ವಿಚಾರ ಬಂದಾಗ ಅದು ವೈಮನಸ್ಸಾಗುವದು. ನಮ್ಮ ವಿಚಾರಕ್ಕೆ ಅದರದ್ದೇ ಆದ ಶಕ್ತಿ ಇರುವದರಿಂದ ವಿಕಾರವಾಗುವದು. ಅದರ ಮೇಲೆಯೆ ವಿಚಾರ ಮಾಡುತ್ತ ಹೋದರೆ ವಿಕಾರಗಳಾಗಿ ಪರಿಣಾಮಿಸುವವು. ಅವುಗಳ ಪರಿಣಾಮ ಹೃದಯದ ಮೇಲಾಗಿ ವ್ಯವಹಾರವನ್ನು ಕೆಡಿಸಲು ಪ್ರಾರಂಭವಾಗುವದು. (ನಡೆ, ನುಡಿ, ಆಚರಣೆ) ಈ ವೈಮನಸ್ಸಿಗೆ ಹೋಗಲಾಡಿಸಲು ಅದರ ವಿಪರೀತ ವಿಚಾರಗಳನ್ನು ಮಾಡುವ ಪ್ರಯತ್ನ ಮಾಡಬೇಕು. ಒಂದು ವೇಳೆ ಹೀಗಾಗದಿದ್ದರೆ ಸಂಸಾರ ಮತ್ತು ಆಧ್ಯಾತ್ಮಿಕತೆಯಲ್ಲಿ ಭೇದವೇ ಇಲ್ಲದಂತಾಗುವದು. ವಿಕಾರವನ್ನು ತೆಗೆದರೆ ಮಾತ್ರ ಸತ್ಯತೆಯೇ ಉಳಿಯುವದು. ಇದು ನಿರಂತರ ಸ್ಮರಣೆಯಿಂದಲೇ ಸಾಧ್ಯ. ಇದರಿಂದ ಸಂಚಿತವಾದ ವಿಕಾರಗಳು ಕೂಡಾ ಕಡಿಮೆಯಾಗುತ್ತಾ ಬರುವವು ಮತ್ತು ದೈವತ್ವದ ಗುಣಗಳು ಬರಲಾರಂಭಿಸುವವು.

“ಆದಿ ವಿಚಾರದಲ್ಲಿಯ ಶಕ್ತಿಯೇ ನಮ್ಮ ವಿಚಾರದಲ್ಲಿರುವದು. ಆದುದರಿಂದ ಯಾವುದಾದರೊಂದು ವೈಮನಸ್ಸಿನ ವಿಚಾರ ನಮ್ಮಲ್ಲಿ ಬಂದು ಉಳಿದರೆ ಅದಕ್ಕೆ ಶಕ್ತಿ ದೊರೆತು ಅನಾಹುತವನ್ನು ಉಂಟುಮಾಡುವದು ಗಮನಕ್ಕೆ ಬರುವದು. ಆಗ ವೈಮನಸ್ಸಿನ ವಿಚಾರವನ್ನು ತೆಗೆದು ಹಾಕಲು ನಾವು ಪ್ರಯತ್ನಿಸುತ್ತೇವೆ ಮತ್ತು ಆಧ್ಯಾತ್ಮದ ಸೌಂದರ್ಯ ಬೆಳೆದು ಉನ್ನತಿಗೆ ಅಡೆ ತಡೆಗಳುಂಟಾಗದಂತೆ ಪರಿಸ್ಥಿತಿ ನಿರ್ಮಾಣವಾಗುವದು. ಹೀಗೆಯೆ ನಾವು ಬೇರೆ ವಿಚಾರಗಳಿಗೆ ಆಸ್ಪದವನ್ನು ಕೊಡದೆ ನಿರ್ಧರಿಸಿದ ಗುರಿಯನ್ನು ಬೇಗ ತಲುಪುವ ಸಂಕಲ್ಪ ಮಾಡಿದರೆ ನಮ್ಮ ಸಾಧನೆಯು ಸುಗಮವಾಗುವದು. ಎಲ್ಲಾ ಆಶುದ್ಧತೆ ಕರಗಿ ಶುದ್ಧವಾಗುವದು ಮತ್ತು ಯಾವುದೇ ತರಹದ ಬಾಧೆಗಳಿಗೆ ಆಸ್ಪದ ಸಿಗುವದಿಲ್ಲ. ಒಂದೇ ವಿಚಾರದಲ್ಲಿರುವಾಗ ಶ್ರೀ ಬಾಬೂಜಿ ಮಹರಾಜರು ಬೇರೆ, ನಾನು ಬೇರೆ ಎಂಬುವ ಪ್ರಶ್ನೆಯೇ ಏಳುವದಿಲ್ಲ. ಅದರಲ್ಲಿಯೇ ಸ್ಥಾಯಿಯಾಗಿ ಬಿಡುವೆವು. ನಮಗೆ ದೊಡ್ಡಸ್ತಿಕೆ ಸಿಗದೇ ಹೋದರೆ ತೊಂದರೆ ಇಲ್ಲ. ಯಾರೂ ಅದನ್ನು ನಮಗೆ ಕೊಡಬೇಕಾಗಿಲ್ಲ. ಎಕೆಂದರೆ ಮೊದಲಿಂದಲೂ ನಾವು ದೊಡ್ಡವರೇ ಇದ್ದೇವೆ. ಆದರೆ ದೊಡ್ಡಸ್ಥಿಕೆಯ ಬಯಕೆಯೆ ಒಂದು ಆವರಣವಾಗಿ ನಮ್ಮನ್ನು ಈ ಪರಿಸ್ಥಿತಿಗೆ ತಂದಿದೆ. ಈ ಕೆಳಕಂಡವುಗಳು ಸಾಧಕನಲ್ಲಿ ಮನೆ ಮಾಡಬಾರದು.

  1. ಸ್ವಪ್ರತಿಷ್ಠೆ :- ತಮ್ಮನ್ನು ತಾವು ದೊಡ್ಡವರೆಂದು ತೋರಿಸಿಕೊಂಡು ಮಾತನಾಡುವದು, ಇಂತಹ ಚಟ ಜನಸಾಮಾನ್ಯರಲ್ಲಿರುವದು ಸ್ವಾಭಾವಿಕ. ಸಾಮಾನ್ಯವಾಗಿ ಏನೂ ತಿಳಿಯದವರಲ್ಲಿ, ಕಡಿಮೆ ತಿಳಿದವರಲ್ಲಿ ಈ ಗುಣವಿರುವದು ವಿಶೇಷ. “ತುಂಬಿದ ಕೊಡ ತುಳುಕುವದಿಲ್ಲ” ಎಂಬ ಗಾದೆ ಮಾತು ಇಂತಹವರಿಗೆ ಸರಿ ಹೊಂದುತ್ತದೆ. ಇಂತಹ ಸ್ವಭಾವವು ನಮ್ಮ ಸಾಧನೆಯಲ್ಲಿ ವಿಷಕಾರಿ ಕೆಲಸ ಮಾಡುತ್ತದೆ. ಫಲಸ್ವರೂಪ ಪ್ರಗತಿಯಲ್ಲಿ ತಡೆ.
  2. ನಿರುತ್ಸಾಹ :- ಬಯಸಿದ ಇಚ್ಛೆ ಈಡೇರದಿದ್ದರೆ ಪರಿಣಾಮ ನಿರುತ್ಸಾಹ, ಎರಡನೇಯವರಿಂದ ಆದರ ಆತಿಥ್ಯ ಮತ್ತು ಸೇವೆ ಬಯಸಿ ಅವು ನಮಗೆ ದೊರೆಯದಿದ್ದಾಗ ನಿರುತ್ಸಾಹರಾಗುತ್ತೇವೆ ಮತ್ತು ಬೇರೆಯವರ ಬಗ್ಗೆ ತಾತ್ಸಾರ ಭಾವದಿಂದ ವೈಮನಸ್ಸು ಉಂಟಾಗುವದು. ಏಕೆಂದರೆ ಇದರಲ್ಲಿ ಆಶಾ ಭಂಗವಾಗುವದು. ಆದ ಕಾರಣ ನಾವು ಪ್ರಾಮಾಣಿಕ ಮತ್ತು ನೈಜ ಅಭ್ಯಾಸಿಗಳಂತೆ ನಮ್ಮ ಸದ್ಗುರುಗಳನ್ನು ನಮ್ಮ ತಿಳುವಳಿಕೆಗೆ ತಿಳಿದಷ್ಟು ಅವರ ಪ್ರತಿಷ್ಠೆಯ ಬಗ್ಗೆ ಮಾತಾಡಬೇಕೆ ಹೊರತು ನಮ್ಮ ಪ್ರತಿಷ್ಠೆಯ ಬಗ್ಗೆ ಅಲ್ಲ.

ಶ್ರೀ ಬಾಬೂಜಿ ಮಹರಾಜರು ಹೇಳುವಂತೆ ಸಾಧಕರೆಲ್ಲರೂ ಆಭ್ಯಾಸಿಗಳೇ. ಇದರಲ್ಲಿ ಅಭ್ಯಾಸಿ ಹಾಗೂ ಪ್ರಶಿಕ್ಷಕ ಎನ್ನುವ ವಿಂಗಡಣೆ ಇಲ್ಲ. ಎಲ್ಲರೂ ಅಭ್ಯಾಸಿಗಳೇ. ಇದನ್ನು ಯಾರೂ ಮರೆಯತಕ್ಕದ್ದಲ್ಲ. ಪ್ರತಿಯೊಬ್ಬ ಅಭ್ಯಾಸಿಯು ಅಲ್ಪ, ತುಚ್ಛ, ನಿಕೃಷ್ಟ (insignificant), ಅಜ್ಞಾನಿ, ಅರುವಿಲ್ಲದವ (ignorant) ಮತ್ತು ವಿನಯ, ನಮ್ರತೆಯುಳ್ಳವ- ನಾಗಬೇಕೆಂದಿದ್ದಾರೆ. ಈ ಗುಣಗಳಿಂದ ನಾವು ನಮ್ಮ ಗುರುಗಳ ಆಪೇಕ್ಷೆಯಂತೆ ಪ್ರೇಮ, ಸೌಹಾರ್ಧತೆಯ ವಾತಾವರಣವನ್ನು ನಿರ್ಮಿಸಬಹುದು. ಹೀಗೆ ನಾವೆಲ್ಲರೂ ಸರಿಯಾದ ರೀತಿಯಲ್ಲಿ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳಬೇಕಾಗಿದೆ. ಆಗ ಮಾತ್ರ ಆಧ್ಯಾತ್ಮ ಲೋಕವನ್ನು ಬೆಳಗಿಸುವ ಭಾನುವಿನ ನಾವೆಲ್ಲರೂ ಕಿರಣಗಳಾಗುವೆವು.