ಈ ಆಧುನಿಕ ಯುಗದಲ್ಲಿ ಯೋಗವೆಂದರೆ ಕೇವಲ ಆಸನಗಳನ್ನು ಹಾಕುವದು ಮತ್ತು ಪ್ರಾಣಾಯಾಮ ಮಾಡಿ ಕೆಲವು ರೋಗ ರುಜಿನಗಳನ್ನು ಗುಣಪಡಿಸುವದು ಹಾಗು ದೇಹವನ್ನು ಆರೊಗ್ಯವನ್ನಾಗಿ ಮಾಡುವದು ಅಷ್ಟೇ ಎಂದು ತಿಳಿಯಲಾಗಿದೆ. ಇದೇ ನಮ್ಮ ಟಿವಿಗಳಲ್ಲಿ ಮತ್ತು ಆರೋಗ್ಯ ಶಿಬಿರಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಬಹಳ ಪ್ರಚಲಿತವಾಗಿ ಇನ್ನೂ ಹೆಚ್ಚು ಹೆಸರು ಪಡೆಯುತ್ತಲಿದೆ. ಪರದೇಶಗಳಲ್ಲಿ ಕೂಡಾ ಇಂತಹ ಯೋಗ ಸಾಕಷ್ಟು ಪ್ರಚಾರಗೊಂಡಿದೆ.

ಈ ಲೇಖನದ ಮುಖ್ಯ ಉದ್ದೇಶವೆಂದರೆ ಜನಸಾಮಾನ್ಯರಿಗೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ನೀಡಿ ಅವರನ್ನು ವಿಚಾರವಂತರನ್ನಾಗಿ ಮಾಡುವದಾಗಿದೆ ಮತ್ತು ಯೋಗದಿಂದ ಸರಿಯಾದ ಲಾಭ ಪಡೆಯಬೇಕೆಂಬುದೇ ಬಯಕೆಯಾಗಿದೆ.

ಧಾರ್ಮಿಕ ಜನರಲ್ಲಿ ಯೋಗವೆಂದರೆ ಕೇವಲ ಭಗವಂತನಲ್ಲಿ ಒಂದಾಗುವ ಸಾಧನ ಅಥವಾ ವಿಧಾನವಾಗಿದೆ. ಈ ಯೋಗ ಅಥವಾ ಸಂಯೋಗ ಒಮ್ಮೆ ಸಾಧಿಸಿದರೆ ಅದು ಒಂದು ಸ್ಥಿತಿಯೇ ಅಥವಾ ಭಗವಂತನ ಜೊತೆ ಒಂದು ಸಂಬಂಧವೇ ಮತ್ತು ಅದು ಕ್ಷಣಿಕವೋ ಅಥವಾ ಶಾಶ್ವತವೋ ಎಂದು ಸರಿಯಾಗಿ ತಿಳಿದಿಲ್ಲ. ನಿಜವಾದ ಯೋಗವೆಂದರೆ ಪ್ರತಿ ಆತ್ಮದ (ಮನುಷ್ಯನ) ಗುರಿಯು ಭಗವಂತನಲ್ಲಿ ಶಾಶ್ವತವಾಗಿ ಒಂದಾಗುವದಾಗಿದೆ. ಈ ಸಂಯೋಗವು ಹಲವಾರು ಮಜಲಿನದ್ದಾಗಿದೆ; ಸಾಮಿಪ್ಯ-ನಿಕಟವಾಗಿರುವದು, ಸಾರೂಪ್ಯ-ತದ್ರೂಪತೆ ಮತ್ತು ಬೆಳಕು, ಸಾಲೋಕ್ಯ-ಒಂದೇ ಸ್ಥರ, ಒಂದೇ ಜಗತ್ತು, ಒಂದೇ ದೃಷ್ಟಿ ಮತ್ತು ಸಾಯುಜ್ಯ-ಭಗವಂತನಲ್ಲಿ ಪೂರ್ಣ ಲಯ ಹೊಂದಿ ಆತ್ಮ ಮತ್ತು ಪರಮಾತ್ಮ ಎರಡೂ ಪರಸ್ಪರ ಶಾಶ್ವತವಾಗಿ ಒಂದಾಗುವದು. ನಮ್ಮ ಸಾಧನೆಯು ಅಂತಿಮ ಸತ್ಯದೊಡನೆ ಸಂಪರ್ಕ ಸಾಧಿಸುವದಾಗಿದೆ. ಸಂಪರ್ಕ ಕೂಡಾ ಎಂತಹದ್ದು? ಸಮಗ್ರವಾಗಿ ಮತ್ತು ಶಾಶ್ವತವಾಗಿ ಲಯಹೊಂದುವುದಾಗಿದೆ. ಇದೇ ಯೋಗ

ಕೆಲವು ದೃಷ್ಟಾರರ ಪ್ರಕಾರ ಯೋಗ ಸಾಧನೆಯು ಈ ನಾಲ್ಕು ಹಂತಗಳಿಗೆ ಸೀಮಿತವಾಗಿಲ್ಲ. ಒಟ್ಟಾರೆ ಭಗವಂತನನ್ನು ಪಡೆದು ಆತನ ಪ್ರಕಟಿತ ಸೃಷ್ಟಿಯಲ್ಲಿ, ದಿವ್ಯಲೀಲೆಯ ಉದ್ದೇಶಕ್ಕಾಗಿ ಒಂದಾಗಬೇಕಾಗಿದೆ. ಅಲ್ಲಿ ಭದ್ರವಾಗಿ ನೆಲೆಯೂರಿ ಆತನ ಸಹವಾಸದಲ್ಲಿ ಮತ್ತು ಆತನ ಸಾಮ್ರಾಜ್ಯದಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಸೃಷ್ಟಿಯಲ್ಲಿ ಪೂರ್ಣಗೊಳಿಸುವ ಮತ್ತು ಉಪಭೋಗ ಮಾಡುವದಾಗಿದೆ.

ಸಹಜ ಮಾರ್ಗ ಸಾಧನೆಯ ಗುರಿಯು ಕೂಡ ಆ ಅಂತಿಮ ಸತ್ಯದೊಂದಿಗೆ ಒಂದಾಗುವದಾಗಿದೆ ಮತ್ತು ಅದೇ ಅದರ ದರ್ಶನವಾಗಿದೆ. ಎಲ್ಲ ಶ್ರೇಷ್ಠ ದಾರ್ಶನಿಕರು ಅದನ್ನು ಕಾಣಲು ಶಕ್ಯವಿದೆ, ಅದನ್ನೇ ಆತ್ಮ ಅಥವಾ ಬ್ರಹ್ಮ ಎಂದು ಕರೆದ್ದಿದ್ದಾರೆ ಮತ್ತು ಅದನ್ನು ಪ್ರೋತವ್ಯ- ಶ್ರವಣ, ಮಂತ್ರವ್ಯ-ಊಹೆ ಮತ್ತು ಭಾವನೆ, ಹಾಗು ನಿಧಿದ್ಯಾಸಿತವ್ಯ- ಧ್ಯಾನ. ಈ ಮೂರು ಹಂತಗಳಲ್ಲಿ ಅಂತಿಮ ಸತ್ಯವನ್ನು ಪಡೆಯಬಹುದಾಗಿದೆ. ಹೀಗೆ ನಮ್ಮ ನಿಜವಾದ ಗುರಿ ಅಂತಿಮ ಸತ್ಯದ ದಿವ್ಯತ್ವವನ್ನು ಹೊಂದಿ ನಮ್ಮನ್ನು ಸುತ್ತಿಕೊಂಡಿರುವ ಅಜ್ಞಾನ, ಬಂಧನಗಳ ವಿಮೋಚನೆಯೊಂದಿಗೆ ನಿಕಟ ಸಂಬಂಧವುಳ್ಳದ್ದಾಗಿದೆ. ಆತ್ಮದ ಮೂಲವನ್ನು ತಿಳಿದು ಪ್ರಕೃತಿಯೊಡನೆ ಇದ್ದ ಬಾಂಧವ್ಯವು ನಮ್ಮನ್ನು ಕಷ್ಟಗಳಿಂದ, ಅವಿದ್ಯೆಯಿಂದ, ನಿರ್ಬಲತೆಯಿಂದ, ಮರಣ ಮತ್ತು ಅದರ ಭಯದಿಂದ ಮುಕ್ತಗೊಳಿಸಿ ನಿಜವಾದ ಆನಂದವನ್ನು ಪಡೆಯುವದು. ಇಂತಹ ಆನಂದವು ಮತ್ತು ವಿವೇಕವು ಕಷ್ಟಕಾರ್ಪಣ್ಯಗಳನ್ನು, ಬಂಧನಗಳನ್ನು, ಹುಟ್ಟು ಸಾವಿನ ಚಕ್ರಗಳಿಂದ ಮುಕ್ತಿಯನ್ನು ದಯಪಾಲಿಸುವುದಾಗಿ ನಮ್ಮ ಶಾಸ್ತ್ರಗಳು ಭರವಸೆ ಕೊಡುತ್ತವೆ. ಈ ಆನಂದವೇ ನಮಗೆ ಅಸ್ತಿತ್ವದಲ್ಲಿ ಸಾಮರಸ್ಯ ಹಾಗು ಸಾಕ್ಷಾತ್ಕಾರದ ನಿಜವಾದ ಅರ್ಥವನ್ನು ಅನುಗ್ರಹಿಸುತ್ತದೆ.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ ಪ್ರಕಾರ ಕೇವಲ ಅಪರಿಮಿತವಾದ ಪೂರ್ಣ ಮತ್ತು ನಿರಪೇಕ್ಷ ಭಕ್ತಿಯಿಂದಲೇ ಪರಮ ಸತ್ಯವನ್ನು ತಿಳಿದು ಕಾಣಬಹುದು ಮತ್ತು ಅದರಲ್ಲಿ ಪ್ರವೇಶಿಸಬಹುದು ಇದೇ ರೀತಿ ಸಾಧನೆಯನ್ನು ಮುಂದುವರಿಸಿದರೆ, ತಿಳಿಯುವುದೇ ಜ್ಞಾನ, ನೋಡುವುದೇ ದರ್ಶನ ಮತ್ತು ಕೂಡುವುದೇ ಅಧ್ಯಾತ್ಮ, ಅಂದರೆ ಯಾವನು ಎಲ್ಲಡೆಯೂ ಒಳಗು ಹೊರಗು ಆವರಸಿಕೊಂಡಿದ್ದಾನೆಯೋ ಆತನೊಡನೆ ಒಂದಾಗುವುದೇ ದೈವತ್ವ ಭಾರತದಲ್ಲಿ ಸಾಕಷ್ಟು ದರ್ಶನಗಳಿದ್ದು ತತ್ವಜ್ಞಾನಿಗಳು ಅವುಗಳನ್ನು ತಿಳಿದುಕೊಳ್ಳುವುದೇ ಆ ಸತ್ಯವನ್ನು ಪಡೆಯುವ ಸಾಧನೆಗಳೆಂದು ಪ್ರತಿಪಾದಿಸುತ್ತಾರೆ. ಅದಕ್ಕಾಗಿ ಆ ದರ್ಶನಗಳಲ್ಲಿ ನೋಡುವ ಮಟ್ಟದ ವಿಚಾರಗಳಿಲ್ಲ. ಆದಾಗಿಯೂ ಅವುಗಳನ್ನು ಜ್ಞಾನಿಗಳು ಸಿದ್ಧಾಂತಗಳೆಂದು ಪರಿಗಣಿಸಿದ್ದಾರೆ. ಆದರೆ ಪ್ರತಿ ವೈಚಾರಿಕ ಸಿದ್ಧಾಂತವು ಅಸ್ತಿತ್ವದಲ್ಲಿ ಬರುವ ತೊಡಕುಗಳ ವಿಷಯವಾಗಿ ತನ್ನ ಕೊನೆಯ ಹಕ್ಕು ಸಾಧಿಸುತ್ತವೆ. ಆ ಅಂತಿಮ ಸತ್ಯದ ದೃಷ್ಟಿಯ ಬಗ್ಗೆ ಪ್ರತಿಪಾದಿಸುತ್ತವೆ. ನಿಜವಾಗಿ ಅವು ಕ್ರಮಗಳ ವಿಭಜನೆ, ಅಥವಾ ಪ್ರಕೃತಿ ಮತ್ತು ಪುರುಷ ಈ ದ್ವಿರೂಪದ ಬಗ್ಗೆ, ಮತ್ತು ಶಾಸ್ತ್ರಗಳ ಜ್ಞಾನದ ಪ್ರಕಾರ ಆ ದೃಷ್ಟಿಯನ್ನು ಪಡೆಯಲು ಹೇಗೆ ಸಹಾಯವಾಗುವದೆಂಬುದನ್ನು ವಿಸ್ತರಿಸಿಲ್ಲ.

ಸೂರ್ಯವಂಶದ ದಶರಥ ಮಹಾರಾಜನಿಗಿಂತ 72 ತಲೆಮಾರುಗಳ ಹಿಂದೆ ಪತಂಜಲಿ ಋಷಿ ಭಗವತ್ ಸಾಕ್ಷಾತ್ಕಾರಕ್ಕಾಗಿ ಒಂದು ಸಾಧನಾ ಪದ್ಧತಿಯನ್ನು ಪ್ರಸ್ತುತಪಡಿಸಿದ್ದಾನೆ. ಅದೇ ರಾಜಯೋಗದ ಅಷ್ಟಾಂಗ ಯೋಗವಾಗಿದೆ. ಅದರಲ್ಲಿ ಎಂಟು ಮಜಲುಗಳಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ. ಈ ಪದ್ಧತಿಯು ಬಹಳ ಧೀರ್ಘ ಕಾಲದ ಸಾಧನೆಯಾಗಿದ್ದು, ಪ್ರತಿಯೊಂದು ಮಜಲುಗಳನ್ನು ದಾಟಲು ಎಷ್ಟೋ ವರ್ಷಗಳ ಕಾಲ ಬೇಕಾಗುತ್ತಿತ್ತು ಮತ್ತು ಅಲ್ಲಿ ಒಬ್ಬ ಸಮರ್ಥ ಗುರುವಿನ ಸಹಾಯ ಕೂಡಾ ಅವಶ್ಯಕವಾಗಿದ್ದಿತು. ಆದ ಕಾರಣ ಇದು ಅಷ್ಟು ಸುಲಭ ಸಾಧ್ಯವಲ್ಲ. ಈ ಅಷ್ಟಾಂಗ ಯೋಗದ ಕೇವಲ ಎರಡು ಮಜಲು ಅಂದರೆ ಆಸನ ಮತ್ತು ಪ್ರಾಣಾಯಾಮಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟು ಇದೇ ಯೋಗವೆಂದು ಈ ಅಧುನಿಕ ಕಾಲದ ಇಂದಿನವರು ಎಲ್ಲ ಕಡೆಗೆ ಪರಿಗಣಿಸುತ್ತಿದ್ದಾರೆ. ಇದು ಭಗವತ್ ಸಾಕ್ಷಾತ್ಕಾರಕ್ಕೆ ಅಪೂರ್ಣ ಯೋಗವೆಂದೆನಿಸುವದು.

ಬುದ್ಧ ಮತ್ತು ಮಹಾವೀರರ ಅವೈದಿಕ ಪದ್ಧತಿಯ ಪ್ರಕಾರ ಶಾಸ್ತ್ರಗಳಲ್ಲಿ ತೋರಿಸಿದ ಧ್ಯಾನ ಅಥವಾ ವಿಚಾರ ಮಾಡುವದಕ್ಕಿಂತ ಮೀರಿ ವೈಯಕ್ತಿಕ ದರ್ಶನಕ್ಕಾಗಿ ಹೋಗಬೇಕಾಗಿದೆ. ಅವುಗಳು ಈಗ ಕೇವಲ ವೈಚಾರಿಕ ಪ್ರಯೋಗ ಅಥವಾ ವೈಚಾರಿಕ ನಿಗ್ರಹ ಮತ್ತು ದೈಹಿಕ ತರಬೇತಿ ಮತ್ತು ನೀತಿ ಧರ್ಮಗಳಾಗಿ ಉಳಿದಿವೆ. ಆದುದರಿಂದ ದರ್ಶನಗಳು ಮತ್ತು ತತ್ವಜ್ಞಾನ ಸಂಸ್ಥೆಗಳು ಅಧ್ಯಾತ್ಮಿಕ ಜಿಜ್ಞಾಸುಗಳಿಗೆ ಪ್ರಾಯೋಗಿಕ ಸಾಧನಾ ಪದ್ಧತಿಗಳ ಅನುಸಂಧಾನವನ್ನು ಒದಗಿಸುದಿಲ್ಲದರ ಕಾರಣ ಭಗವತ್ ದರ್ಶನಕ್ಕೆ ಪರಿಹಾರ ಸೂಚಿಸಲು ಅಸಮರ್ಥವಾಗಿವೆ. ವೇದಾಂತ ಮಾತ್ರವೇ ಸಾಧನೆಗೆ ಬೇಕಾದ ಅಂಶಗಳನ್ನು ದರ್ಶನಗಳಿಂದ ಅಳವಡಿಸಿಕೊಂಡು ಅವಶ್ಯಕವಾದ ಪ್ರಾಯೋಗಿಕ ಸಾಧನೆಯನ್ನು ಕೊಟ್ಟಿದೆ. ಆದುದರಿಂದ ಈಗ ವೇದಾಂತವೇ ಒಂದು ದರ್ಶನವಾಗಿದೆ. ಅದು ಅವೈದಿಕ ಸಿದ್ಧಾಂತಗಳನ್ನು ಕೂಡಾ ಹೀರಿಕೊಂಡಿದೆ. ವೇದಾಂತ ಕೂಡಾ ಸಾಧನೆಯ ಮೇಲಿದ್ದ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಏಕೆಂದರೆ ಅದರ ಪ್ರಕಾರ ಮುಂಚೆ ಮನಸ್ಸನ್ನು ಶಾಸ್ತ್ರಗಳ ಶ್ರವಣದಿಂದಾಗಿ, ಅದೈತದ ಮಹಾ ವಾಕ್ಯಗಳನ್ನು, ವಿಶಿಷ್ಟಾದ್ವತದ ಘಟಕ ಶ್ರುತಿಗಳನ್ನು, ದೈತದ ಭೇದಗಳನ್ನು ಒಂದುಗೂಡಿಸುವ ಕ್ರಮದಲ್ಲಿ ತೊಡಗಿಸುವದು ಮುಖ್ಯವಾಗಿದೆ. ಇದರಿಂದಾಗಿ ದರ್ಶನವೆಂಬುದು ಶ್ರವಣವೆಂದರಿತು ಪರಿಣಾಮಕಾರಿಯಾಗಲಿಲ್ಲ. ಎಲ್ಲವೂ ಹಿಂದೆ ಬಿದ್ದವು. ಕಾರಣವೇನೆಂದರೆ ಯೋಗ ಸಾಧನೆಗೆ ಯಾವುದೇ ಮೌಲಿಕವಾದ ಪದ್ಧತಿ ಸಿಗಲಿಲ್ಲ. ಆದ ಕಾರಣ ಸಾಧನೆಯಿಂದ ದರ್ಶನ ಸಾಧಿಸುವ ಆ ಯೋಗದ ಯಥಾ ಸ್ಥಾಪನೆಯಾದರೆ ಆ ಯೋಗದ ಪುನರುಜ್ಜಿವನ ಪ್ರಾರಂಭವಾಗುವದು. ಇದನ್ನೇ ಶ್ರೀ ಅರವಿಂದರು ತಮ್ಮ ಬರಹಗಳಲ್ಲಿ ಒತ್ತಿ ಹೇಳಿದ್ದಾರೆ. ಇದೇ ಅವರ ಮಂತ್ರವಾಗಿದೆ.

ಜಗತ್ತಿನಲ್ಲಿ ಆಗಾಗ ಈ ವಿಷಯದ ವಿಕಾಸದ ಮಾರ್ಗದಲ್ಲಿ ಬಹಳಷ್ಟು ಉತ್ಕಾಂತಿಗಳಾದವು. ಆಗ ಆಶ್ಚರ್ಯಕರವಾಗಿ ಆ ಪರಮ ಸತ್ಯದ ವೈಯಕ್ತಿಕ ಅನುಭವಕ್ಕೆ ಕರೆ ಕೊಡುವದೊಂದು ಛಲವಾಗಿತ್ತು. ಆದರೆ ವೈಯಕ್ತಿಕ ಅನುಭವಗಳು ಕೇವಲ ಇಂದ್ರಿಯಗಳ ವೈಚಾರಿಕ, ಕನಸಿನ ಆಸೆ ಆಕಾಂಕ್ಷೆಗಳು ಆಗಿದ್ದು ಆ ಪರಮ ಸತ್ಯದವು ಆಗಿರಲಿಲ್ಲ. ಏಕೆಂದರೆ ನಿಜಾರ್ಥದಲ್ಲಿ ಆ ಪರಮ ಸತ್ಯದ ಅನುಭವ ಯಥಾರ್ಥ ದರ್ಶನ ಅಥವಾ ಜ್ಞಾನ ದರ್ಶನಗಳು ಇಂದ್ರಿಯಾತೀತವಾಗಿರುವವು. ಇಂದ್ರಿಯಗಳಿಗೆ ಗೋಚರಿಸುವ ಜ್ಞಾನ ಮತ್ತು ಮನಸ್ಸಿನ ಅನುಭವಕ್ಕೆ ಬರುವ ಜ್ಞಾನಗಳ ನಡುವೆ ಸಾಮ್ಯತೆ ಇರದ ಕಾರಣ, ಇದರ ಬದಲಾಗಿ ಇವೆರಡಕ್ಕೂ ಅನುಭವವಾಗುವಂತಹ ಜ್ಞಾನದ ಕಡೆಗೆ ಹೋಗುವ ವ್ಯಕ್ತಿಯ ಒತ್ತಡ ಹೆಚ್ಚಾಗತೊಡಗಿತು. ಇದೇ ಆ ಪರಮ ಸತ್ಯದ ಕಡೆ ಇರುವ ದೃಷ್ಟಿ ಅಂತರ್ಮುಖಿಯಾಗಿ ನಮ್ಮ ತತ್ವಜ್ಞಾನದ ವಿಜ್ಞಾನವಾಗಿ, ದರ್ಶನ ಮತ್ತು ಅಧ್ಯಾತ್ಮದ ಅರಿವಿಕೆ ತಂದು ಮನಸ್ಸಿನ ಪರಿಪೂರ್ಣತೆಯ ಕಡೆಗೆ ಸಾಗುವಂತೆ ಮಾಡಿತು.

ಸಹಜಮಾರ್ಗ ಸಾಧನೆಯು ಆ ಪರಮ ಸತ್ಯದಲ್ಲಿ ಒಂದಾಗುವದು ಮತ್ತು ಅದೇ ಜೀವನದ ಗುರಿಯಾಗಿದೆ. ಅದರಿಂದಾಗಿ ತಿಳಿಯುವದು ಆನಂತರ ನೋಡುವದು ಮತ್ತು ನೋಡಿ ತಿಳಿಯುವದೆಂದು ಅಭಿಪ್ರಾಯವಾಗಿದೆ. ಅಧ್ಯಾತ್ಮ ಸಾಕ್ಷಾತ್ಕಾರದಲ್ಲಿ ಕಾರ್ಯಕ್ಷೇತ್ರವೆಂದರೆ ಇಂದ್ರಿಯಾತೀತ ತಿಳಿವಳಿಕೆಯ ಧ್ಯಾನದ ಕ್ಷೇತ್ರ ಈ ಕ್ಷೇತ್ರವು ಸರ್ವರಿಗೆ ಲಭ್ಯವಿದ್ದರೂ ಅಧ್ಯಾತ್ಮಿಕ ಮತ್ತು ಸತ್ಯದ ಅನ್ವೇಷಕರಿಗೆ ಮಾತ್ರ ಸೀಮಿತವಾಗಿದೆ. ಯಾರೂ ತಮ್ಮ ಜೀವನದಲ್ಲಿ ತಮ್ಮ ಚರಮ ಸತ್ಯವನ್ನು ತಮ್ಮಲ್ಲಿಯೇ ಪಡೆಯುವ ಹಂಬಲವಿಲ್ಲದವರಾಗಿದ್ದಾರೆಯೋ ಅಂತಹವರು ಈ ಪಥದ ಕಡೆಗೆ ಬರುವದು ವಿರಳ. ಉಪನಿಷತ್ತುಗಳ ಹೇಳಿಕೆಯ ಪ್ರಕಾರ ಯಾರು ದುರಾಚಾರವನ್ನು ತ್ಯಜಿಸಲಾರದವರಾಗಿದ್ದಾರೋ ಅಂತಹವರು ಈ ಪಥದ ಕಡೆಗೆ ನೋಡುವದೇ ಇಲ್ಲ ಮತ್ತು ಸೇರುವ ಪ್ರಶ್ನೆಯೇ ಬರುವದಿಲ್ಲ. ಸಹಜ ಮಾರ್ಗವು ಜಿಜ್ಞಾಸುಗಳಿಗೆ ಅಧ್ಯಾತ್ಮ ಕ್ಷೇತ್ರಕ್ಕೆ ಕರೆದು ಅನುಭವದ ದೃಷ್ಟಿಯನ್ನು ಕೊಟ್ಟು ನೋಡುವ ಮತ್ತು ತಿಳಿಯುವ ಶಕ್ತಿಯನ್ನು ದಯಪಾಲಿಸುತ್ತಾ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಉನ್ನತಿಯ ಕಡೆಗೆ ಒಯ್ಯುವದು. ಅನಂತದ ಪ್ರಕೃತಿಯೇ ಅಧ್ಯಾತ್ಮಿಕ ಜೀವನವಾಗಿ ಇರುವಿಕೆಯು ಕೂಡಾ ಅದರಂತೆ ಆಗಿ ಮಾನಸಿಕ ಹಾಗೂ ಇಂದ್ರಿಯಗಳ ಕ್ಷೇತ್ರಕ್ಕಿಂತ ಮೇಲಕ್ಕೆ ಹೋಗುವದಾಗಿದೆ.

ಸಹಜಮಾರ್ಗದ ಸಾಧನಾ ಪದ್ಧತಿಯಲ್ಲಿ ಪ್ರಾಣಾಹುತಿ ಅಥವಾ ಆತ್ಮಶಕ್ತಿ ಅಥವಾ ಉಚ್ಚ ವಿವೇಚನಾ ಶಕ್ತಿಯನ್ನು, ಜಿಜ್ಞಾಸುವಿನ ತೆರೆದಿಟ್ಟ ಮನಸ್ಸಿನ ಭೌತಿಕ ಮತ್ತು ಜೈವಿಕ ಕ್ಷೇತ್ರಗಳ ಮೇಲೆ ಉಪಯೋಗಿಸಲ್ಪಡುವದು. ಇದು ಜಿಜ್ಞಾಸುವಿನ ಜೈವಿಕ ಇರುವಿಕೆಯನ್ನು ಆ ಮೂಲ ಕೇಂದ್ರದ ಇರುವಿಕೆಯೊಂದಿಗೆ ಜೋಡಿಸಲ್ಪಡುವದರಿಂದ ಆಗುತ್ತದೆ. ಇದು ಯಾವ ವಿಚಾರ, ಸಂಕಲ್ಪ ಅಥವಾ ಇಚ್ಛೆಯಿಂದ ದೊರುಕುವಂತಹದ್ದಲ್ಲ, ಓದುವುದರಿಂದಾಗಲಿ, ಕೇಳುವದರಿಂದಾಗಲಿ, ದೀರ್ಘ ವಿಚಾರದಿಂದಾಗಲಿ ಅಥವಾ ಬುದ್ಧಿಯ ಕಸರತ್ತುಗಳಿಂದಾಗಲಿ ಹಾಗು ಸಂಯೋಗದ ವಿಶ್ಲೇಷಣೆಗಳಿಂದಾಗಲಿ ಸಿಗುವದಿಲ್ಲ. ಕೇವಲ ಉಚ್ಚತಮ ಕೃಪೆಯ ಸಹಾಯದಿಂದ ಮಾತ್ರ ಸಾಧ್ಯ. ಇದು ಒಂದು ಉಚ್ಚಕೋಟಿ ಸದ್ಗುರುವಿನ ಕೆಲಸ. ಇಲ್ಲಿ ಒಂದು ಎಚ್ಚರಿಕೆಯನ್ನು ನೀಡಬೇಕೆಂದಿರುವೆನು, ಅದೇನೆಂದರೆ ಈ ಯುಗದಲ್ಲಿ ಅಸಮರ್ಥ ಗುರುಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದ್ದು ಅಧ್ಯಾತ್ಮ ಕ್ಷೇತ್ರದಲ್ಲಿ ತಾವು ಬಹಳ ಮುಂದುವರೆದಿರುವರೆಂದು, ಜಗದ್ಗುರುಗಳು ಘೋಷಿಸುವರು. ಅಂತಹವರು ತತ್ವಜ್ಞಾನಿಗಳು, ಬುದ್ಧಿಜೀವಿಗಳು, ಪಂಡಿತರು, ಭಾವಾವೇಷ ಭಕ್ತರೂ, ಉದ್ರೇಕಗೊಳಿಸುವವರು, ಚಮತ್ಕಾರಗಳನ್ನು ತೋರಿಸುವವರು ಮತ್ತು ಇಂದ್ರಜಾಲವನ್ನು ತೋರಿಸುವವರಾಗಿದ್ದು, ಜನರನ್ನು ಭ್ರಮೆಗೊಳಿಸಿ ತಾವೂ ಭ್ರಮೆಯಲ್ಲಿರುವರು. ಇಂತಹವರಿಂದ ಜಾಗರೂಕವಾಗಿರುವುದು ಒಳ್ಳೆಯದು.

ಪರಮ ಸತ್ಯದ ನೇರ ಸಂಪರ್ಕವೇ ಅಥವಾ ಪ್ರವೇಶವೇ ಮಾತ್ರ ಅಂತದೃಷ್ಟಿಯನ್ನು ಒದಗಿಸಬಲ್ಲದು. ಅದರ ದೃಷ್ಟಿಯನ್ನು ಬೇರೆ ರೀತಿಯಲ್ಲಿಯೇ ಸೂಕ್ಷ್ಮವಾಗಿ ಗ್ರಹಿಸಬೇಕಾಗುತ್ತದೆ. ಇಂತಹ ಪರಮಸತ್ಯದ ನೋಟಕ್ಕೆ ಕೊಡುವ ತರಬೇತಿ ನಿಜಕ್ಕೂ ಬೇರೆ ತರಹದ್ದಾಗಿರುತ್ತದೆ. ಅದು ಸಾಮಾನ್ಯ ವಿಜ್ಞಾನಿಗಳಿಗೆ ನೋಡಲು ಕೊಡುವಂತಹದು ಅಲ್ಲ. ಏಕೆಂದರೆ ಇದು ಭೌತಿಕತೆಯ ಅನುಭವದ್ದು ಆಗಿರುವದಿಲ್ಲ ಮತ್ತು ಎಷ್ಟೇ ಶಕ್ತಿಯುತ ಸೂಕ್ಷ್ಮದರ್ಶಕಗಳಿಂದಾಗಲಿ, ದೂರದರ್ಶಕಗಳಿಂದಾಗಲಿ ನೋಡಲು ಸಾಧ್ಯವಿಲ್ಲ. ಆದುದರಿಂದ ಇದನ್ನು ತಿಳಿಯಲು ವ್ಯಕ್ತಿಯು ಬೇರೆ ತರಹದ ಸೂಕ್ಷ್ಮತೆ ಅಥವಾ ಸಂವೇದನಾಶೀಲತೆ ಬೆಳೆಸಿಕೊಳ್ಳಬೇಕಾಗುತ್ತದೆ. ಕಾರಣವಿಷ್ಟೆ ಇದರ ನೋಟ ಇಂದ್ರಿಯಾತೀತವಾಗಿರುವದು.

ಸಹಜಮಾರ್ಗವು ಇದುವರೆಗೆ ತಿಳಿಯದ ಅತಿರೇಕಗಳಿಲ್ಲದ, ವಿಶಾಲವಾದ ಮಾನಸಿಕ ಕ್ಷೇತ್ರವನ್ನು ತೆರೆಯುವದು ಮತ್ತು ಇದು ಯಾರಾದರೊಬ್ಬ ಜಿಜ್ಞಾಸುವಿಗೆ ಮಾತ್ರ ತೆರೆಯುವದೆಂದು ಹೇಳಲಾಗಿದೆ. ಅಲ್ಲದೆ ಇದನ್ನು ಸಿದ್ಧಿಸಿಕೊಳ್ಳಬೇಕಾಗುತ್ತದೆ. ಸಂಕಲ್ಪ ಮತ್ತು ಬುದ್ಧಿಗಳಿಂದ ಕೆಳಮಟ್ಟದ ಜ್ಞಾನ ಪಡೆಯಬಹುದು. ಆತ್ಮ ಮತ್ತು ಅದರ ಪರಿಸರ ಶುದ್ಧವಾದಾಗ ಸತ್ಯವನ್ನು ನೇರವಾಗಿ ದೃಷ್ಟಿಸಬಹುದು. ಅಲ್ಲದೆ ಕರ್ತೃ ಸಂಬಂಧವುಳ್ಳ ಮತ್ತು ಚಿತ್ತಕ್ಕೆ ಗೋಚರಿಸುವ ವಿಶ್ವಪ್ರಕೃತಿಯನ್ನು ಕಾಣಬಹುದು. ಇದೇ ಸಾಕ್ಷಾತ್ಕಾರ ನೋಡುವವನ ಸಾಕ್ಷಿ ದೃಷ್ಟಿಯಿಂದ ಸಂಗ್ರಹಿಸಲಾಗುವದು. ಸಾಮಾನ್ಯವಾಗಿ ಸಾಕ್ಷಿ ಎಂಬ ಶಬ್ದವನ್ನು ಕೇವಲ ನೋಡುವವನಿಗಾಗಿ ಹೇಳಲಾಗಿದೆ. ಅಧ್ಯಾತ್ಮದ ಕ್ರಿಯಾತ್ಮಕ ದೃಷ್ಟಿಯಲ್ಲಿ ನಿಜವಾದ ಕ್ರಿಯೆಯಿದೆ. ಈ ಕ್ರಿಯೆಯು ಸ್ವತಂತ್ರವಾದ, ನಿರ್ಭಯವಾದ, ನಿರ್ಭಂಧ ಮತ್ತು ಪ್ರತಿಕ್ರಿಯೆಯಿಲ್ಲದ ಕ್ರಿಯೆಯಾಗಿದೆ. ಯಾವುದನ್ನು ಇದು ತಲುಪುವದೋ ಅದು ಮುಕ್ತಗೊಳ್ಳುತ್ತದೆ. ಇದನ್ನು ಕ್ರಿಯೆಯಿಲ್ಲದ ಕ್ರಿಯೆ ಅಥವಾ ಅಕ್ರಿಯಾತ್ಮಕ ಕ್ರಿಯೆ ಎನ್ನುವರು. ಇದಕ್ಕೆ ಶಾಂತಿ ಎಂದು ಹೇಳುವರು. ಇದರಿಂದ ಶಾಂತಾಕಾರವನ್ನು ಅನುಭವಿಸುತ್ತಾರೆ. ಇದು ಎಂದೂ ಭಂಗವಾಗುವದಿಲ್ಲ. ಏಕೆಂದರೆ ಇದೇ ಎಲ್ಲದರ ತಳಹದಿ. ಯೋಗದಲ್ಲಿ ಇದೇ ಪ್ರಥಮ ಮತ್ತು ಅಂತಿಮ ಮೆಟ್ಟಿಲು. ಇದೇ ಭಗವಂತನ ಮೊಟ್ಟ ಮೊದಲಿನ ಸಂಪರ್ಕ. ಇದೇ ಪ್ರಥಮ ದರ್ಶನ ಅಥವಾ ಅರಿವು. ಈ ಸ್ಥಿತಿಯೇ ಮುಂದೆ ಸಾಗಿ ಗುರುವಿನ ಕೃಪೆಯಾದಂತೆ ವಿಶಾಲ ಅರಿವಿನ ಕಡೆಗೆ ಒಯ್ದು ಹೆಚ್ಚಿನ ಅನುಭವದಿಂದಾಗಿ ಶಾಂತಿಯನ್ನು ಪಡೆದು ತಿಳುವಳಿಕೆ ಮತ್ತು ವಿಶ್ಲೇಷಣೆಯಿಂದ ದಾಟಿ ಸತ್ಯತೆಯ ವಿಶಾಲತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವದೇ ಆಗಿದೆ. ಕೇವಲ ಆಂತರಿಕ ಅನಿಸಿಕೆ/ಅನುಭವದಿಂದ ತಿಳಿದು ಕೊಳ್ಳುವದಾಗಿದೆ.

ಮನುಷ್ಯನು ಒಂದು ನಿರ್ದಿಷ್ಟ ಪ್ರದೇಶ(ಪಿಂಡ)ಕ್ಕೆ ಬಂಧಿತನಾಗಿದ್ದಾನೆ. ಇದೇ ಅವನ ಜಗತ್ತು. ಈ ಸಣ್ಣ ಇಂದ್ರಿಯಾನುಭವದ ಜಗತ್ತಿನ ಆಚೆ ವಿಶಾಲವಾದ ಬಯಲು ಇದೆ ಎನ್ನುವ ಅರಿವು ಅವನಿಗಿದೆ. ಅದನ್ನು ಪಡೆಯುವ ಹಂಬಲವು ಅವನಿಗಿದೆ. ಈ ಅರಿವಿನಿಂದಾಗಿಯೇ ಬಂಧನದ ಒದ್ದಾಟದಿಂದ ಹೊರ ಬರಬೇಕೆನ್ನುವ ಉತ್ಕಟತೆ ಅವನಲ್ಲಿದೆ. ಈ ಉದ್ದೇಶಕ್ಕಾಗಿ ಅವನು ಹೊಸ ಸಾಮರ್ಥ್ಯ ಮತ್ತು ಶಕ್ತಿಯನ್ನು ಜಾಗೃತಗೊಳಿಸಿ ಆ ಬಯಲಿನ ಅರಿವನ್ನು ಗ್ರಹಿಸಲು ಹೊಸದೊಂದು ಮಾಧ್ಯಮವನ್ನೇ ಸೃಷ್ಟಿಸಬೇಕಾಗಿದೆ. ಈ ವಿಕಾಸದಲ್ಲಿ ಇಂದ್ರಿಯಗಳು ಪ್ರಾಣಶಕ್ತಿಯಿಂದ ಅತೀತಗೊಂಡು ಮನಸ್ಸಿನ ಉಚ್ಚಾಯ ಸ್ಥಿತಿಯಲ್ಲಿ ಪರಿವರ್ತನಗೊಳ್ಳುತ್ತವೆ. ಮಾನವನಲ್ಲಿಯ ಮನಸ್ಸನ್ನು ಬುದ್ಧಿ, ಅಹಂಕಾರ ಮತ್ತು ನಿಜವಾದ ವ್ಯಕ್ತಿಗತವಲ್ಲದ ಅರಿವಿನಿಂದ ಅತೀತಗೊಳಿಸಬೇಕಾಗಿದೆ. ಇದರ ಆಚೆ ಗುರಿ ಇದೆ. ಇದು ಆಂತರಿಕ ಅನುಭವದಿಂದ ಮತ್ತು ಅಸ್ತಿತ್ವದಿಂದಲೇ ತಿಳಿಯಬೇಕಾಗಿದೆ. ಉಪನಿಷತ್ತುಗಳ ಪ್ರಕಾರ ಬ್ರಹ್ಮನನ್ನು ಕಂಡವನೇ ಬ್ರಹ್ಮ. ಇದು ಅಕ್ಷರಶಃ ಸತ್ಯ. ಈ ದರ್ಶನದ ಸ್ಥರದವರೆಗೆ ಒಯ್ಯುವ ವಿಚಾರವೆಂದರೆ ಯಾವುದು? ತನ್ನಷ್ಟಕ್ಕೆ ತಾನೇ ತನ್ನ ಮೂಲ ಸ್ಥರಕ್ಕೆ ಯಾವುದು ಮರಳಿ ಬಂದಿದೆಯೋ ಅದು. ಇದು ಸಾಮಾನ್ಯ ವಿಚಾರವಲ್ಲ.

ಸಹಜಮಾರ್ಗವು ಭೌತಿಕವಾಗಿ ಮಾಡುವಂತಹ ಕೆಲಸವಲ್ಲ. ಪ್ರಾಯೋಗಿಕವಾಗಿ ಭಗವಂತನನ್ನು ಪಡೆಯುವದಾಗಿದ್ದು ಆತನ ಸತ್ಯತೆಯನ್ನು ನೇರವಾಗಿ ಆತ್ಮಸಮರ್ಪಣೆಯಿಂದ ಮತ್ತು ಕೇವಲ ಭಗವಂತನ ಅರಿವಿನ ಮಾರ್ಗದಿಂದಲೇ ಆ ಪರಮ ಕೇಂದ್ರದ ಸ್ಥಿತಿಯವರೆಗೆ ಒಯ್ದು ಪ್ರತಿಯೊಂದು ಸಂಗತಿಯ ವಾಸ್ತವಿಕತೆಯನ್ನು ಅರಿಯುವದಾಗಿದೆ. ಕೇವಲ ಶಾಸ್ತ್ರಾಧ್ಯಯನದಿಂದಾಗಲಿ, ಇಂದ್ರಿಯಜನ್ಯ ಜ್ಞಾನದಿಂದಾಗಲಿ ಆ ಪರಮ ಸತ್ಯವನ್ನು ತಿಳಿಯುವದು ಸಾಧ್ಯವಿಲ್ಲ. ಇದಕ್ಕಾಗಿ ಆ ಪರಮ ಸತ್ಯದ ನೇರ ಸಂಪರ್ಕದಿಂದ ಮತ್ತು ಸದ್ಗುರುವಿನ ಅಸೀಮ ಕೃಪೆಯಿಂದ ಮಾತ್ರ ಸಾಧ್ಯ. ಜಿಜ್ಞಾಸುವನ್ನು ಯಾವಾಗ ಒಬ್ಬ ಸಮರ್ಥ ಸದ್ಗುರು ಸ್ವೀಕರಿಸುತ್ತಾನೆಯೋ ಅದೇ ಕ್ಷಣದಿಂದ ಅವನಿಗೆ ಪವಿತ್ರವಾದ ಸತ್ಯದ ಕ್ಷೇತ್ರದಲ್ಲಿ ಪ್ರವೇಶ ದೊರಕುವದು. ಇದು ಪರತತ್ವದೊಂದಿಗೆ ನೇರ ಸಂಪರ್ಕ ಪಡೆದ ಸ್ಥಿತಿಯಾಗಿದೆ. ಇಂತಹ ಸಂಬಂಧಕ್ಕೆ ಮಾತ್ರ ದೀಕ್ಷೆ ಎನ್ನುವರು. ಇದರಿಂದಲೇ ಗುರುವಿನ ಮಾರ್ಗದರ್ಶನದಲ್ಲಿ ಕ್ರಮವಾದ ಗತಿ ಆರಂಭವಾಗಿ ಬಹಳಷ್ಟು ಸ್ಥರಗಳನ್ನು ದಾಟಿಸುತ್ತದೆ. ಆ ಸ್ಥರಗಳೆಂದರೆ ಪ್ರಕೃತಿಯಲ್ಲಿರುವ ಪದಾರ್ಥ, ಜೀವನ, ಮನಸ್ಸು, ಅಹಂಕಾರ, ಬುದ್ಧಿ ಮತ್ತು ಕರ್ತೃ ಮತ್ತು ಬಾಹ್ಯ ವಸ್ತುಗಳೊಡನೆ ಸಂಬಂಧವನ್ನು ದಾಟಿಸುತ್ತದೆ. ವಿಶಾಲ ಪ್ರಕೃತಿ ಮತ್ತು ವೈಯಕ್ತಿಕ ಆತ್ಮಗಳ ಆ ಪರಮ ಕೇಂದ್ರ ಸತ್ಯದಲ್ಲಿದ್ದಾಗ ಆ ಕೇಂದ್ರವೇ ಶೂನ್ಯವಾಗಿ ಕಾಣುವುದು. ಇನ್ನೊಂದು ಅರ್ಥದಲ್ಲಿ ಸರ್ವಕ್ಕೂ ಅದೇ ಗರ್ಭವಾಗಿ (ಎಲ್ಲವು ಬರುವದಕ್ಕಾಗಿ, ಬಂದಿರುವದಕ್ಕಾಗಿ ಮತ್ತು ಬರುವವರಿಗಾಗಿ) ಕಾಣುವುದು.

ಸಹಜಮಾರ್ಗ ಒಂದು ಅರ್ಥದಲ್ಲಿ ಕೇವಲ ದರ್ಶನಗಳಲ್ಲಿ ಒಂದು ಎಂದಾಗದೆ, ವಿಚಾರ, ತತ್ವಜ್ಞಾನ, ಬೌದ್ಧಿಕ ಅಥವಾ ಭಾವನಾತ್ಮಕವಾಗಿ ಸತ್ಯ ಪದದ ಅರ್ಥ ವಿವರಣೆಯನ್ನು ಮಾಡುವ ವಿಚಾರದ ಸಂಪ್ರದಾಯವಾಗಿದೆ. ಇದೇ ಸತ್ಯದ ಇರುವಿಕೆಯು ಮಾನವನ ಮುಖ್ಯ ಉದ್ದೇಶದಲ್ಲಿ ಅತ್ಯುನ್ನತ ಸ್ಥಿತಿಗಳಾದ ಭಗವಂತನ ದೈವತ್ವ, ಪರಿಪೂರ್ಣತೆಯ ಈಡೇರಿಕೆ, ನಿಜವಾದ ಬಿಡುಗಡೆ, ಆತ್ಮದ ಅಮರತ್ವದ ರಹಸ್ಯದ ಕಡೆಗೆ ಒಯ್ಯುವುದಾಗಿದೆ.

ಈ ಅನುಭವಗಳ ಪ್ರಾಪ್ತಿಯಾದರೆ ಅಂತಹ ಜೀವನಕ್ಕೆ ದೈವತ್ವದ ಜೀವನ, ವಿಕಸಿತಗೊಂಡ ಅತಿ ಮಾನವ ಜೀವನ, ಅನಂತತೆಯನ್ನು ಪಡೆದವನ ಜೀವನ ಅಥವಾ ನಿರ್ವಿಕಾರ ಅನಂದಮಯ ಜೀವನವೆಂದು ಕರೆಯುತ್ತಾರೆ. ಸಹಜಮಾರ್ಗ ಸಾಧಕರ ಜೀವನ ಇಂತಹ ಆನಂದದೊಂದಿಗೆ ಪ್ರಾರಂಭವಾಗಿ ಇದಕ್ಕೂ ಹೆಚ್ಚಿನ ಆನಂದದ ಕಡೆಗೆ ಹೋಗಿ ಅನಂತಾನಂದದ ಅರ್ಥವನ್ನು ಕೊಡುತ್ತದೆ. ಸಹಜಮಾರ್ಗದ ಬಹು ಮಖ್ಯವಾದ ವಿಶೇಷತೆ ಎಂದರೆ ಗುರುವಿನ ಸಕ್ರಿಯ ಸಹಾಯ. ಇದು ಸದ್ಗುರು ಕೊಡುವ ಅತ್ಯುನ್ನತ ಮಟ್ಟದ ವಿವೇಚನಾ ಶಕ್ತಿ, ಹೃದಯಕ್ಕೆ ತಗುಲಿ ಆತ್ಮದವರೆಗೂ ಹೋಗುವದಾಗಿದೆ ಅಥವಾ ಗುರಿಯನ್ನು ತಲುಪಲು ಸಮಗ್ರ ಮಾರ್ಗದಾದ್ಯಂತ ಸಾಧಕನನ್ನು ಶಕ್ತಿಯುತವಾಗಿ ಮಾಡುವದಾಗಿದೆ. ಹೀಗೆ ಆಂತರಿಕ ಆಕಾಂಕ್ಷೆ ಅಥವಾ ಊರ್ಧ್ವತೆ ಜಾಗೃತಗೊಳ್ಳುತ್ತದೆ. ಹಾಗು ಕೇಂದ್ರದ ಅತಿ ಮಾನುಷ ಪ್ರಜ್ಞೆಯಿಂದ ಪ್ರಜ್ವಲಗೊಂಡು ನಿರಂತರವಾಗಿ ಮುನ್ನಡೆಯುತ್ತದೆ. ಆರೋಹಣದ ಆಕಾಂಕ್ಷೆಯು ಮತ್ತು ಗುರುವಿನ ಕೃಪೆಯ ಅವರೋಹಣವು ಗುರುವಿನಿಂದ ದಯಪಾಲಿಸಿದ ಒಂದೇ ದಿವ್ಯಶಕ್ತಿಯ ವಿಭಿನ್ನ ಭಾಗಗಳು. ಇದರಿಂದ ಯೋಗವು ಸರಳ, ಶಿಘ್ರ, ಪರಿಣಾಮಕಾರಿ ಮತ್ತು ಉನ್ನತ ವಿಕಾಸದ ಸಾಧನೆಗೆ ಅತಿ ಕಡಿಮೆ ಸಮಯ ತೆಗೆದುಕೊಳ್ಳವಂತಹದಾಗಿದೆ. ಇದು ಶ್ರೀ ರಾಮಚಂದ್ರಜೀ ಮಹರಾಜರ ವಿಶಿಷ್ಟ ಸಂಶೋಧನೆಯಾಗಿದೆ. ಅಂತೆಯೇ ಸಹಜಮಾರ್ಗವು ಭಗವಂತನಲ್ಲಿ, ಭಗವಂತನಿಗಾಗಿ ಮತ್ತು ಭಗವಂತನಿಂದಲೇ ಆದ ಸ್ವಾಭಾವಿಕ ಜೀವನವನ್ನು ಪಡೆಯಲು ಅತ್ಯಂತ ಸರಳಗೊಳಿಸಿದ ನೇರ ಮಾರ್ಗವಾಗಿದೆ

ಕೊನೆಯದಾಗಿ ಹೇಳುವದೇನೆಂದರೆ ಯೋಗವೆನ್ನುವುದು ಕೇವಲ ಆಸನಗಳನ್ನು ಹಾಕುವುದು ಮತ್ತು ಪ್ರಾಣಾಯಮ ಮಾಡುವುದು ಆಗಿರದೆ ಕೇವಲ ಭಗವಂತನಲ್ಲಿ ಒಂದಾಗುವುದಾಗಿದೆ. ಅಂದರೆ ಸಾಧನೆಯಿಂದ ಶುದ್ಧ, ಸರಳ ಮತ್ತು ಸೂಕ್ಷ್ಮವಾಗಿ ಅಂತಿಮ ತತ್ವಕ್ಕೆ ತದ್ರೂಪವಾದ ಮೇಲೆ ಅದರಲ್ಲಿ ಒಂದಾಗುವದಾಗಿದೆ. ಈ ಹೇಳಿಕೆಯು ಯೋಗದ ನಿಜವಾದ ಅರ್ಥವಾಗಿದ್ದು ಬೇರೆ ಏನೂ ಅರ್ಥ ಕೊಡುವದಿಲ್ಲ. ಇದನ್ನು ಸಾಧಿಸಬೇಕಾದರೆ ಮೊದಲು ಅದರ ಸಂಕಲ್ಪ ಮಾಡುವುದು ಅವಶ್ಯವಾಗಿದ್ದು ಆಮೇಲೆ ಅಂತಹ ಅತ್ಯುಚ್ಚ ಮಟ್ಟದ ಗುರುವನ್ನು ಪಡೆದು ಆತನು ಹೇಳಿಕೊಟ್ಟ ಸಾಧನೆಯನ್ನು ಜೀವನದಲ್ಲಿ ಆದ್ಯತೆಯನ್ನು ಕೊಟ್ಟು ಮಾಡುವದಾಗಿದೆ. ಅದೇ ನಮ್ಮ ಕರ್ತವ್ಯ.