ಅಂದಾಜು 35 ವರುಷಗಳ ಹಿಂದೆ ಈ ಲೇಖಕನು ಭಾರತದ ಮಹಾನ್ ವ್ಯಕ್ತಿಯು ಬರೆದ ಅದ್ವಿತೀಯ ಮತ್ತು ಚಕಿತಗೊಳಿಸುವ ಸಾಲುಗಳನ್ನು ಓದಿದನು. ಅದು ಹೀಗಿತ್ತು. “ಅಸ್ತಿ-ಭಸ್ಮಗಳ ಮೇಲೆ ಮುಂಬರುವ ಜಗತ್ತಿನ ರಚನೆಯಾಗುವದು. ಭಾರತದಲ್ಲಿ ಆಧ್ಯಾತ್ಮದ ತಳಹದಿಯ ಮೇಲೆ ಒಂದು ವಿಧದ ನಾಗರಿಕತೆಯು ಬೆಳೆದು, ಕ್ರಮೇಣ ಅದು ಪ್ರಪಂಚದ ನಾಗರಿಕತೆಯಾಗುವದು. ಆಧ್ಯಾತ್ಮದ ತಳಹದಿ ಇಲ್ಲದೆ ಯಾವುದೇ ದೇಶವಾಗಲಿ ರಾಷ್ಟ್ರವಾಗಲಿ ಬದುಕಲಾರದು. ತನ್ನ ಅಸ್ತಿತ್ವವನ್ನು ಉಳಿಸಬೇಕಾದರೆ ಪ್ರತಿಯೊಂದು ರಾಷ್ಟ್ರವು ಇಂದಿಲ್ಲ ನಾಳೆ ಆ ದಾರಿಗೆ (ಸತ್ಯೋದಯ-ಭವಿಷ್ಯವಾಣಿ-ಪ-108). ಬರಲೇಬೇಕಾಗುವದು.

ಈ ಹೇಳಿಕೆಯು ಮನದಾಳದಲ್ಲಿ ಬಹಳ ದಿನಗಳವರೆಗೆ ಸುಳಿಯುತ್ತಲೇ ಇತ್ತು. ಪರಿಣಾಮವಾಗಿ ಅದು ಹಲವಾರು ಅವಲೋಕನಗಳಿಗೆ ದಾರಿ ಮಾಡಿತು. ನಂಬಿರಿ ಅಥವಾ ಬಿಡಿರಿ ಅದರ ಫಲವಾಗಿ ಈ ಪ್ರಬಂಧ ಹೊರಹೊಮ್ಮಿದೆ.

ನಾಗರೀಕತೆಯ ಪಯಣ :

ಸಾಮಾನ್ಯವಾಗಿ ಹೇಳುವದಾದರೆ ಒಂದು ನಿರ್ದಿಷ್ಟವಾದ ಪ್ರಾಂತದ ನಾಗರಿಕತೆಯೆಂದರೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಐಕ್ಯತೆಗಳನ್ನೊ- ಳಗೊಂಡ ಸಮಾಜದ ಒಂದು ವಿಕಸಿತ ಸ್ಥಿತಿಯು. ಈ ಪ್ರಾಂತದ ವಿಕಾಸವು ಅಭಿವೃದ್ಧಿಪಡಿಸುವ ಉಚ್ಚ ವ್ಯವಸ್ಥೆಯ ಮೂಲಕ ಆಗುತ್ತದೆ. ನಾಗರಿಕತೆಯು ಆ ಸಮಾಜದ ಉಚ್ಚ ಸಾಂಸ್ಕೃತಿಯ ನಿರ್ಮಾಣದ ಕ್ರಮಬದ್ಧ ವಿಧಾನವನ್ನು ಉಲ್ಲೇಖಿಸುತ್ತದೆ. ಈ ಲೇಖನದಲ್ಲಿ ಅದು ಸಾಮೂಹಿಕ ಅರ್ಥವನ್ನು ವ್ಯಕ್ತಪಡಿಸುತ್ತದೆ. ನಾಗರಿಕತೆ ಭವಿಷ್ಯತ್ತಿನ ಸಂಕೇತ. ಆದುದರಿಂದ ಅದಕ್ಕೆ ಎರಡು ದೃಷ್ಟಿಕೋನಗಳಿರುವವೆಂಬ ವಿಚಾರ ಕೊಡುತ್ತದೆ. ಮೊದಲನೇಯದು ಸುಸ್ಪಷ್ಟವಿದ್ದರೆ ಮತ್ತೊಂದು ಅಸ್ಪಷ್ಟವಾದುದು.

ಸುಸ್ಪಷ್ಟ ನೋಟವು ಭವಿಷ್ಯತ್ತಿನ ನಾಗರಿಕತೆಯ ಬಗ್ಗೆ ಒಂದು ದಿಟ್ಟ ಹೇಳಿಕೆಯನ್ನು ಕೊಡುತ್ತದೆ. ಇದು ಒಂದು ಭವಿಷ್ಯವಾಣಿ ಎನಿಸಬಹುದು. ಇದು ಮುಂದಿನ ಸಂಭವನೀಯ ಘಟನೆಗಳನ್ನು ಸೂಚಿಸಬಹುದು. ಇದು ಮಾನವೀಯ ಮನಸ್ಸಿಗೆ ನಿಲುಕಬಹುದು, ನಿಲುಕದೇ ಇರಬಹುದು. ಆದಾಗ್ಯೂ ಸಂದೇಶವು ಸತ್ಯವೂ, ಖಚಿತವೂ ಆಗಿದೆ. ಅದು ಬರಲಿರುವ ಅಮೂಲಾಗ್ರ ಬದಲಾವಣೆಯ ಸಂಕೇತ- ವಾಗಿರುತ್ತದೆ. ಅಮೂಲಾಗ್ರ ಬದಲಾವಣೆಯೆಂದರೆ ಆಧ್ಯಾತ್ಮದ ಮೌಲ್ಯಾಧಾರಗಳ ಮೇಲೆ ಸಮಾಜದ ಸಂಪೂರ್ಣ ಪುನರ್ನಿ- ರ್ಮಾಣವೆಂದೇ ಅರ್ಥ.

ಇನ್ನೊಂದು ಮುಖ(ಅಸ್ಪಷ್ಟ ನೋಟ) ಸೂಕ್ಷ್ಮವಾಗಿ ಹಲವು ಪ್ರಶ್ನೆಗಳನ್ನೆತ್ತುವದು. ಹಿಂದಿನ ಸಂಸ್ಕೃತಿ ಹೇಗಿತ್ತು? ಇಂದಿನ ಸಂಸ್ಕೃತಿ ಹೇಗಿದೆ? ಹಿಂದಿನದಂತೂ ಇತಿಹಾಸ ಪುಟ ಸೇರಿದೆ. ಪ್ರಸ್ತುತ ಸಂಸ್ಕೃತಿಯ ಪ್ರಶ್ನೆ ಮಹತ್ವದ್ದಾಗಿದೆ. ಇದಕ್ಕೆ ಉತ್ತರ ಮತ್ತು ವಿವರಣೆಗಳೆರಡರ ಅಗತ್ಯವಿದೆ. ಅದಕ್ಕಾಗಿ ನಾವು ಬೇರೆಡೆ ಹೋಗುವ ಅಗತ್ಯವಿಲ್ಲ. ವರ್ತಮಾನ ಸಮಾಜವನ್ನೇ ಅವಲೋಕಿಸೋಣ. ಚಿತ್ರವು ಸ್ಪಷ್ಟವಿದೆ. ನಮಗೆ ಕಾಣುವದು ಕೇವಲ ಧಾರ್ಮಿಕ ಸಿದ್ಧಾಂತಗಳು ಮಾತ್ರ. ಅದು ದುರಾಸೆ ಮತ್ತು ಸ್ವಾರ್ಥತೆಗಳಿಂದ ತುಂಬಿಹೋಗಿದೆ. ಅಹಂಕಾರ ಮತ್ತು ಪೂರ್ವಾಗ್ರಹ ಮನೋವೃತ್ತಿಗಳು ಪ್ರಮುಖ ಸ್ಥಾನವನ್ನೇ ಪಡೆದಿವೆ. ಅದು ಗೊಡ್ಡು ಸಂಪ್ರದಾಯದಲ್ಲಿ ತೊಳಲಾಡುತ್ತಿದೆ. ಸಂಕಷ್ಟಗಳನ್ನು ಅನುಭವಿ ಸುತ್ತಿರುವದು ಸಮಾಜವೋ, ಧರ್ಮವೋ ಎಂದು ಹೇಳಲು ಸಾಧ್ಯವಾಗದು.

ಗತಕಾಲದ ಕೊಡುಗೆ :

ಮಹಾನ್ ಸಾಮರ್ಥ್ಯವುಳ್ಳ ಅನೇಕ ಮಹಾತ್ಮರು ಈ ಜಗತ್ತಿನಲ್ಲಿ ಸಂದರ್ಭಾನುಸಾರವಾಗಿ ಅವತರಿಸಿದರು. ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡರು. ಅವರಿಗೆ ಭಗವಂತನ ಬಗ್ಗೆ ತಮ್ಮದೇ ಆದ ಕಲ್ಪನೆ ಮತ್ತು ಗ್ರಹಿಕೆಗಳಿದ್ದವು. ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಅವರಿಗೆ ಭಗವಂತನ ಬಗ್ಗೆ ಇಂದ್ರಿಯಾತೀತ ದೃಷ್ಟಿ ಹೊಂದಬಲ್ಲವರಾಗಿದ್ದರು. ಭಗವಂತನ ಬಗ್ಗೆ ಅವರಿಗೆ ತಮ್ಮದೇ ಆದ ವೈಯಕ್ತಿಕ ಅನಿಸಿಕೆಗಳನ್ನು ಹೊಂದಿದ್ದರು. ಕೆಲವರು ಇದನ್ನು ಜ್ಞಾನೋದಯವೆಂದು ಕರೆದರು. ಅವರ ಸಾಧನೆ ಮತ್ತು ವೈಯಕ್ತಿಕ ಅನಿಸಿಕೆಗಳು ಸಾಕ್ಷಾತ್ಕಾರ ಮಾರ್ಗದಲ್ಲಿ ನಿರಂತರವಾಗಿ ಮುನ್ನಡೆಸುತ್ತಿದ್ದವು. ಜೀವನಪರ್ಯಂತ ಅವಿರತ ಶ್ರಮದಿಂದ ಸಾಧಿಸಿದ ಉನ್ನತ ಸಿದ್ಧಿಗಳಿಂದಾಗಿ ಜನರು ಈಶ್ವರ ಸಾಕ್ಷಾತ್ಕಾರಕ್ಕಾಗಿ ಅವರ ಮಾರ್ಗದರ್ಶನ ಮತ್ತು ಭೋಧನೆಗಳಿಗಾಗಿ ಅಂತಹ ಮಹಾತ್ಮರನ್ನು ಸುತ್ತುವರೆಯುತ್ತಿದ್ದರು. ಅವರಿಗೆ ನಾವು ಅಬ್ದಾಲ್, ಕುತುಬ್, ಅವತಾರ್, ವಲಿ, ನಬಿ, ಸಾಧು, ಸಂತ, ಸವಾಭಿತ್‌ ಇತ್ಯಾದಿ ಹೆಸರು ಕೊಟ್ಟೆವು.

ವಿವಿಧ ಧರ್ಮ ಸಂಸ್ಥಾಪಕರು ನಿಸ್ಸಂದೇಹವಾಗಿ ಮಹಾತ್ಮರಾಗಿದ್ದು, ಮಾನವ ಜನಾಂಗದ ಉದ್ಧಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರು ದೈವೀ ಪ್ರವಾಹ/ಸಂದೇಶಗಳನ್ನು ಕಂಪನಗಳ ಮೂಲಕ ಅನುಭವಿಸಬಲ್ಲವರಾಗಿದ್ದರು. ಆ ಕಂಪನಗಳನ್ನು ತಮಗೆ ಗೊತ್ತಿರುವ ಭಾಷೆಯಲ್ಲಿ ಪರಿವರ್ತಿಸಿ ಅರ್ಥೈಸಬಲ್ಲವರಾಗಿದ್ದರು. ಅದು ಅವರ ರಹಸ್ಯ ವಿದ್ಯೆಯಾಗಿತ್ತು. ಎಲ್ಲ ಕಂಪನಗಳ ಮೂಲ ಒಂದೇ ಎಂಬುದರ ಪೂರ್ಣ ಅರಿವು ಅವರಿಗಿದ್ದಿತು. ಅದಕ್ಕಾಗಿಯೇ ಅವರು ದೇವನೊಬ್ಬನೇ ಎಂಬ ತತ್ವದಲ್ಲಿ ನಂಬಿಕೆಯುಳ್ಳವರಾಗಿದ್ದರು. ಅದುವೇ ಹಿಂದಿನ ಕಾಲದಲ್ಲಿ ಪ್ರಚಲಿತ ನಂಬಿಕೆಯಾಗಿತ್ತು.

ಅವರ ನಿಯಮ ಮತ್ತು ಭೋಧನೆಗಳು ಸತ್ಯವಂತರಾಗಿರಿ, ಪ್ರಾಮಾಣಿಕರಾಗಿರಿ, ಧರ್ಮಪಾರಾಯಣರಾಗಿರಿ, ಇನ್ನೊಬ್ಬರ ಭಾವನೆಗಳನ್ನು ನೋಯಿಸದಿರಿ, ಕಳವು ಮಾಡದಿರಿ, ಸ್ತ್ರೀಯರಿಗೆ ಗೌರವ ಕೊಡಿರಿ ಇದೆಲ್ಲಕ್ಕಿಂತ ಮಿಗಿಲಾಗಿ ಭಗವಂತನಲ್ಲಿ ಶೃದ್ಧೆಯಿಡಿರಿ ಎಂಬ ಸಾಮಾನ್ಯ ಅಂಶಗಳನ್ನೇ ಹೊಂದಿದ್ದವು. ತತ್ಪರಿಣಾಮವಾಗಿ ಸಮಾಜದಲ್ಲಿ ಸಾಮರಸ್ಯತೆಯಿತ್ತು. ಅವರಲ್ಲಿ ಪರಸ್ಪರ ಗೌರವ ಭಾವನೆಗಳಿದ್ದವು. ಕಾಲ ಕಳೆದಂತೆ ಪರಿಸ್ಥಿತಿ ಬೇರೆ ರೂಪ ತಾಳಿತು. ಹಿಂದಿನ ಮಹಾತ್ಮರು ಭಗವಂತನ ಬಗ್ಗೆ ತಮಗಿರುವ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಿದರು. ಭಗವಂತನ ಕುರಿತು ಅವರಿಗೆ ಬೆಳಕು ಕಂಡಾಗ ಆಶ್ಚರ್ಯಚಕಿತರಾಗಿ ಮೂಕಸ್ಮಿತರಾದರು. ಭಾವನೆಗಳು ಇಂದ್ರಿಯಾತೀತ- ವಾದುದರಿಂದ ಅವರ ಹೇಳಿಕೆಗಳು ಶಬ್ದಗಳಿಗೆ ನಿಲುಕದಾದವು. ದೇವರ ಬಗ್ಗೆ ಜನರಿಗೆ ಅರಿವು ಮೂಡಿಸುವದಷ್ಟೇ ಏಕಮೇವ ಉದ್ದೇಶವಾಗಿತ್ತು. ಅವರ ಅನುಯಾಯಿಗಳು ಬಹುಶಃ ಅವರ ಹೇಳಿಕೆಗಳನ್ನು ತಪ್ಪಾಗಿ ಗ್ರಹಿಸಿ, ತಮ್ಮ ಸ್ವಂತಿಕೆಯನ್ನೊಂದಿಷ್ಟು ಬೆರೆಸಿ ಅದನ್ನೇ ಸತ್ಯವೆಂದು ಸಾರಿದರು. ಇದು ಜಾರುವಿಕೆಯ ಮೊದಲನೆಯ ಹಂತವಾಗಿ ಅವರ

ಪ್ರಯತ್ನ ವಿಫಲವಾಯಿತು. ತಮ್ಮದೇ ಆದ ದೃಷ್ಟಿಕೋನ ಮತ್ತು ವಿಚಾರಕ್ಕೆ ತಕ್ಕಂತೆ ಭಗವಂತನನ್ನು ಲಾಂಛನೆಗೊಳಪಡಿಸಿದರು. ಅವರ ನಿಯಮಗಳು ಮತ್ತು ಭೋಧನೆಗಳು ಬರಹದಲ್ಲಿ ದಾಖಲೆಯಿಲ್ಲದ ಕಾರಣ ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿಯೇ ವರ್ಗಾಯಿಸಲಾಯಿತು. ಈ ಪದ್ಧತಿಯು ತಲೆತಲಾಂತರವಾಗಿ ಸಾಗಿತು. ಈ ಅವಧಿಯಲ್ಲಿ ಸಮಯಕ್ಕೆ ತಕ್ಕಂತೆ ಅನೇಕ ವಿಷಯಾಂತರಗಳಾದವು. ಮೂಲ ಧರ್ಮ ಸಂಸ್ಥಾಪಕರ ಅನುಯಾಯಿಗಳು ಜನರ ಮೇಲೆ ಶಾಶ್ವತ ಪ್ರಭಾವ ಮೂಡಿಸಲು ಬೋಧನೆಗಳಿಗೆ ಅನೇಕ ಕಥೆಗಳನ್ನು ಸೇರ್ಪಡೆ ಮಾಡಿದರು. ಅವರು ಕೆಲವು ಮಾನವ ಗುಣ ವಿಶೇಷಗಳನ್ನು ಭಗವಂತನಿಗೆ ಹಚ್ಚಿ ಆಕರ್ಷಕವಾಗುವಂತೆ ಮಾಡಿದರು. ಅವರು ಭಗವಂತನನ್ನು ದೇಹ ಮನಸ್ಸುಗಳನ್ನು ಹೊಂದಿದ ಸರ್ವಶ್ರೇಷ್ಟ ಅತಿಮಾನುಷ ವ್ಯಕ್ತಿಯೆಂದು ಭಾವಿಸಿದರು. ಅದರ ಪರಿಣಾಮವಾಗಿ ಸಂಪರ್ಕದ ಅಭಾವದಿಂದಾಗಿ ಈ ಅಂತರ ಹೆಚ್ಚಾಗುತ್ತಾ ಹೋಯಿತು.

ಕಾಲಕ್ರಮೇಣ ಭಾಷೆ ಬೆಳವಣಿಗೆ ಹೊಂದಿ ಬೋಧನೆಗಳು ಬರಹದಲ್ಲಿಡಲು ಅನುವಾಯಿತು. ಪರಿಸ್ಥಿತಿಯು ಅನುಕೂಲಕರವಾಗಿರಲಿಲ್ಲ. ದೃಷ್ಟಿಕೋನಗಳು ವಿಭಿನ್ನವಾಗಿದ್ದವು. ಅಭಿಪ್ರಾಯವು ಪರಸ್ಪರ ವಿರೋಧಾಭಾಸವಾಗಿದ್ದವು. ಗೊಂದಲಮಯ ಧ್ವನಿಗಳು ಕೇಳತೊಡಗಿದವು. ಉಳಿದವರಿಗಿಂತ ತಾವು ಹೆಚ್ಚು ಬಲ್ಲವರೆಂದು ಹೇಳಿಕೊಳ್ಳತೊಡಗಿದರು. ತಮ್ಮ ತಿಳುವಳಿಕೆಯ ಮಟ್ಟದ ಪ್ರಕಾರ ಬೋಧನೆ ಮತ್ತು ಆಚರಣೆಯ ಬಗ್ಗೆ ಬರೆಯಲು ಪ್ರಾರಂಭಿಸಿ, ತಮ್ಮ ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಯ್ದುಕೊಂಡರು. ಹೀಗೆ ಧಾರ್ಮಿಕ ಸಾಹಿತ್ಯ ಹುಟ್ಟಿಕೊಂಡಿತು. ಇದನ್ನು ಮೂಲ ಸ್ವರೂಪದ್ದೆಂದು ಬಿಂಬಿಸಲು, ಜನಸಾಮಾನ್ಯರಿಗೆ ಅರ್ಥವಾಗದ ಭಾಷೆಗಳಲ್ಲಿ ಬರೆಯಲಾಯಿತು. ಇವು ರಾಜರ ಹಿತಾಸಕ್ತಿಗಳನ್ನು ಕಾಪಾಡುತ್ತಿದ್ದುದರಿಂದ, ರಾಜಕುಟುಂಬಗಳಿಂದ ಅಪಾರ ಸಹಾಯ ಸಿಗುತ್ತಿತ್ತು. ಯಾರು ಇದನ್ನು ವಿರೋಧಿಸಿದರೋ ಅವರು ತಮ್ಮದೇ ಆದ ಕೆಲವು ಸೇರ್ಪಡೆ-ವಿನಾಯತಿಗಳನ್ನು ಮಾಡಿದರು. ಹೀಗೆ ವಿಷಚಕ್ರ ಪ್ರವೇಶಿಸಿತು. ಪ್ರತಿಯೊಬ್ಬನೂ ತನ್ನದೇ ಆದ ಪ್ರಚಾರಣೆಯನ್ನು ತಂದು ಅದಕ್ಕೆ ವಿಶಿಷ್ಟವಾದ ಹೆಸರನ್ನು ಕೊಟ್ಟು ತನ್ನ ಅಧಿಕಾರವಾಣಿಯನ್ನು ಪ್ರತಿಪಾದಿಸಿದನು. ಕಾಲಕ್ರಮೇಣ ವಿವಿಧ ನಾಮಫಲಕಗಳ ಮಹಾಪೂರವೇ ಸಮಾಜದಲ್ಲಿ ತಲೆದೋರಿತು. ಪ್ರತಿಯೊಬ್ಬರು ತಮ್ಮದೇ ಆದ ವಿಶಿಷ್ಟ ಪ್ರಕಟಣೆಯನ್ನು ಹೊಂದಿದ್ದರು.

ಇವೆಲ್ಲ ಘಟನೆಗಳಿಂದ ಜನಸಾಮಾನ್ಯರು ಗೊಂದಲ ಮತ್ತು ಸಂದಿಗ್ಧತೆಗೆ ಬಲಿಯಾದರು. ವಿವಿಧ ನಾಮಫಲಕಧಾರಿಗಳ ನಡುವಿನ ಹಗೆತನ ಮತ್ತು ಘರ್ಷಣೆಗಳು ನಿತ್ಯದ ಘಟನೆಗಳಾದವು. ಇದು ಗತಕಾಲದ ಸೈದ್ಧಾಂತಿಕ ಘಟನೆಗಳ ಸಂಕ್ಷಿಪ್ತ ವಿವರಣೆ.

ವರ್ತಮಾನ ಸ್ಥಿತಿ :

ಇಂದಿನ ನಾಗರಿಕತೆಯು ಗತಕಾಲದಿಂದ ಆನುವಂಶಿಕವಾಗಿ ಪಡೆದುಕೊಂಡ ಬಳುವಳಿಯಾಗಿದೆ. ಅದು ಹಿಂದಿನದನ್ನು ಛಲದಿಂದ ಮುಂದುವರೆಸಿ ಕಾಪಾಡಿಕೊಳ್ಳುವದಲ್ಲದೆ ಅದನ್ನು ವೈಭವೀಕರಿಸಲಾಗುತ್ತದೆ. ಈ ಹಟಮಾರಿತನದ ಪರಿಣಾಮಗಳಿಂದಾಗಿಯೇ ಇಂದಿನ ಸಮಾಜವು ತತ್ತರಿಸುತ್ತಿದೆ. ಸೂರ್ಯನು ಪೂರ್ವ ದಿಕ್ಕಿನಲ್ಲಿ ಹುಟ್ಟುವಷ್ಟೇ ಇದು ಸ್ಪಷ್ಟವಾಗಿದೆ. ಬಹುಶಃ ಧರ್ಮಾಂಧತೆ ಮತ್ತು ಪರಧರ್ಮ ದ್ವೇಷಗಳು ಧಾರ್ಮಿಕ ನಂಬಿಕೆಯ ಪರ್ಯಾಯ ಶಬ್ದಗಳಾಗಿವೆ. ಧಾರ್ಮಿಕ ವಿಧಿ- ವಿಧಾನಗಳು ಬೋಧನೆಗಳಿಗಿಂತಲೂ ವ್ಯವಸ್ಥಿತವಾಗಿ ಪ್ರಾಮುಖ್ಯತೆ ಪಡೆದುಕೊಂಡವು. ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆಗಳು ಸರಾಗವಾಗಿ ಮುಂದುವರಿಯಲ್ಪಟ್ಟವು. ಸಮಾಜದಲ್ಲಿ ಅವುಗಳನ್ನೇ ಪ್ರಗತಿಯ ಸಂಕೇತವೆಂದು ಸ್ವೀಕರಿಸಲಾಯಿತು. ಇಂತಹ ಪ್ರಗತಿ ಆತೋನ್ನತಿಯೋ, ಆತ್ಮಘಾತಕವೋ ಎಂಬ ಚಿಂತನೆಯನ್ನು ಮಾಡಲೇ ಇಲ್ಲ. ಧರ್ಮದ ಹೆಸರಿನಲ್ಲಿ ಅನುಯಾಯಿಗಳಿಗೆ ಸ್ವರ್ಗ, ಆರೋಗ್ಯ, ಸಂಪತ್ತು, ಸುಖ-ದುಃಖಗಳ ಆಮಿಷವನ್ನು ತೋರಿಸಲಾಯಿತು. ಇಂದು ಅವುಗಳನ್ನೇ ನಾವು ಧಾರ್ಮಿಕ ಪುನರುತ್ಥಾನ, ಧಾರ್ಮಿಕ ಹೋರಾಟ, ಧರ್ಮ ಯುದ್ಧ, ಜನಾಂಗೀಯ ನಿರ್ಮೂಲನೆಗಳಂತಹ ಬೇರೆ ವೇಷಗಳಲ್ಲಿ ಕಾಣುತ್ತೇವೆ. ನೈತಿಕ ಆಧಾರದ ಮೇಲೆ ಬಲವಾದ ವಿರೋಧ ಬಂದಾಗ, ಧಾರ್ಮಿಕ ಮುಖಂಡರು ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ ತಮ್ಮ ಕೃತಿಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಶಾಶ್ವತವಾಗಿ ಪ್ರತಿರೋಧ ಧ್ವನಿಯನ್ನು ಹತ್ತಿಕ್ಕಲಾಗಿದೆ. ಈ ತರಹದ ಧಾರ್ಮಿಕ ಪ್ರವೃತ್ತಿಯು ಯಾವುದೇ ವಿರೋಧವಿಲ್ಲದೆ ದಿನಂಪ್ರತಿ ತೀವ್ರಗೊಳ್ಳುತ್ತಿದೆ. ತತ್ಪರಿಣಾಮವಾಗಿ ವಿನಾಶಕಾರಿ ಮತ್ತು ಹಿಂಸಾ ಪ್ರವೃತ್ತಿಗಳು ಮನುಷ್ಯನ ಮನಸ್ಸಿನಲ್ಲಿ ನುಸುಳುತ್ತಿವೆ. ಪುರಾತನ ಸಂತರ ಮತ್ತು ಋಷಿಗಳ ಮೂಲ ಬೋಧನೆಗಳನ್ನು ನಮ್ಮ ಇಂದಿನ ಧೋರಣೆ ಹಾಗೂ ಕಾರ್ಯ- ವೈಖರಿಯನ್ನು ಸಮರ್ಥಿಸಿಕೊಳ್ಳಲು ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾ- ನಿಸಲಾಗುತ್ತಿದೆ. ಇದಕ್ಕೆ ದೇವರು ಸಹ ಹೊರತಾಗಿಲ್ಲ. ಅವನಿಗೆ ನಮಗಿಷ್ಟ ಬಂದ ರೂಪ ಮತ್ತು ಆಕಾರಗಳನ್ನು ಕೊಟ್ಟು ಅವನ ಮೇಲೆ ನಮ್ಮ ಸ್ವಾಮಿತ್ವವನ್ನು ಸ್ಥಾಪಿಸಿದ್ದೇವೆ.

ಜಗತ್ತಿನಲ್ಲಿ ಪ್ರತಿಯೊಂದು ಪಂಥವು ದೇವರ ಅಸ್ತಿತ್ವವನ್ನು ಬೋಧಿಸುತ್ತದೆ ಎಂಬುದನ್ನು ನಾನಿಲ್ಲಿ ಒತ್ತಿ ಹೇಳಬಯಸುತ್ತೇನೆ. ಅದು ತನ್ನದೇ ಆದ ವಿಶಿಷ್ಟ ರೀತಿಯ ಸಾಧನಾ ಪದ್ಧತಿಯನ್ನು ಪ್ರತಿಪಾದಿಸುತ್ತದೆ. ಅನಾದಿಕಾಲದಿಂದ ವಿಧಿಸಲಾದ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ. ಪರಿಣಾಮಗಳು ಪ್ರೋತ್ಸಾಹದಾಯಕವಾಗಿಲ್ಲ. ಏಕೆಂದರೆ ಭಗವಂತನ ಸಾಕ್ಷಾತ್ಕಾರ ದೂರದ ಮಾತಾಗಿದೆ. ಈ ಅನುಯಾಯಿ ಅಥವಾ ಭಕ್ತರಿಗೆ ಈ ವಿಷಯದಲ್ಲಿ ಸ್ವಾತಂತ್ರ ನಿರಾಕರಿಸಲಾಗಿದೆ. ಸಮಾಜದಲ್ಲಿಯ ಒಂದು ಸಾಮಾನ್ಯ ಅನುಭವವನ್ನೇ ಪರಿಶೀಲಿಸೋಣ. ಒಬ್ಬ ಗಣಿತ ಶಿಕ್ಷಕನು ಸರಿಯಾಗಿ ಕಲಿಸದ ಕಾರಣ ವಿಧ್ಯಾರ್ಥಿಯು ವಿಫಲನಾದರೆ ನಾವು ಬೇರೊಬ್ಬ ಗಣಿತ ಶಿಕ್ಷಕನನ್ನು ಹುಡುಕುತ್ತೇವೆ. ಈ ವಿಷಯದಲ್ಲಿ ಇರುವ ಸ್ವಾತಂತ್ರ್ಯ ಧರ್ಮದ ವಿಷಯದಲ್ಲಿಲ್ಲ. ಆತ್ಮಾವಲೋಕನ ಮತ್ತು ವಿಶ್ಲೇಷಣೆಗಳಿಗೆ ಗುರಿಪಡಿಸಿಕೊಂಡಾಗ ಮೇಲಿನ ಸಂದೇಶವು ಸ್ಪಷ್ಟ- ವಾಗುವದು. ಜೀವನದ ಗುರಿಯನ್ನು ನಿರ್ಧರಿಸಿ, ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದವರಿಗೆ ಸಾಕ್ಷಾತ್ಕಾರವು ಕನಸಿನ ಮಾತೇ ಆಗಿ ಉಳಿಯುವದು.

ಭವಿಷ್ಯದ ಕರೆ :

ಮೂಲಭೂತ ಬದಲಾವಣೆಗಾಗಿ ಈಗಾಗಲೇ ಕರೆ ನೀಡಲಾಗಿದೆ. ಬದಲಾವಣೆ ನಿಶ್ಚಿತವಾದುದು. ಸಮಾಜವು ಇಂದಿನದನ್ನು ಅಥವಾ ಹಿಂದಿನದಕ್ಕೆ ವಿದಾಯ ಹೇಳಲು ಅನಿವಾರ್ಯವಾದುದು. ಬದಲಾವಣೆಯು ಕಾಲದ ಅಡೆ-ತಡೆಗೆ ಮೀರಿದುದು. ಇದು ಯಾವುದೇ ಶ್ರದ್ದೆಯ ಫಲಕವನ್ನು ಹೊಂದಿರುವದಿಲ್ಲ. ಇದು ಆಧ್ಯಾತ್ಮಿಕ ಮೌಲ್ಯಗಳ ಅಳವಡಿಕೆಯನ್ನು ಅಪೇಕ್ಷಿಸುತ್ತದೆ. ಆ ಮೌಲ್ಯಗಳ ಸಾರಾಂಶ ಹೀಗಿದೆ.

  1. ದೇವರು ಒಬ್ಬನೇ.
  2. ಭಗವಂತನಲ್ಲಿ ಪ್ರೇಮ ಭಕ್ತಿ.
  3. ಭಗವತ್‌ ಚಿಂತನೆ.
  4. ಭಗವಂತನಲ್ಲಿ ಸಂಪೂರ್ಣವಾಗಿ ಒಂದಾಗುವದೇ ಜೀವನದ ಗುರಿಯೆಂಬ ನಿರ್ಧಾರ.
  5. ಸಮಾಜದಲ್ಲಿ ಪರಸ್ಪರ ಪ್ರೇಮ ಮತ್ತು ಸೌಹಾರ್ದತೆ.
  6. ಭಗವಂತನಿಂದ ದೊರೆತುದರಲ್ಲಿಯೇ ತೃಪ್ತಿ.
  7. ಸತ್ಯವನ್ನೇ ಹೇಳುವದು.
  8. ಸರಳ ಮತ್ತು ನಿರಾಡಂಬರ ಜೀವನ.
  9. ಪ್ರತಿಕಾರ ರಹಿತ ಪ್ರವೃತ್ತಿ.
  10. ಭಗವಂತನ ಸ್ಮರಣೆಯಲ್ಲಿರುವದು ಹಾಗೂ ಇತರರಲ್ಲಿ ಪ್ರೇಮ ಮತ್ತು ಪವಿತ್ರ ಭಾವನೆಗಳನ್ನು ಮೂಡಿಸುವದು.

ಈಗ ಭಗವತ್ ಚಿಂತನೆಯ ಹೆಚ್ಚಿನ ವಿವರಣೆಗಾಗಿ ಅವಲೋಕನ ಮಾಡೋಣ. ಇದೊಂದೇ ಸತ್ಯ. ಅಸ್ತಿತ್ವದಲ್ಲಿರುವದು ಇದೊಂದೇ. ಅದು ಇಂದ್ರಿಯಾತೀತವಾಗಿದ್ದು ಅದನ್ನು ಮೂಲ ತತ್ವವೆಂದೇ ಪರಿಗಣಿಸಲಾಗಿದೆ. ಅದು ಏನು ಇದೆಯೋ ಅದೇ. ಅದರ ಚೈತನ್ಯ ಕಂಪನಗಳ ರೂಪದಲ್ಲಿ ದೈವೀ ಪ್ರವಾಹವಾಗಿ ಪ್ರಕಟಗೊಂಡಿದೆ. ಹಿಂದಿನ ಕಾಲದ ಮಹಾತ್ಮರು ಇವುಗಳನ್ನು ಗ್ರಹಿಸುವ ಸಾಮರ್ಥ್ಯವುಳ್ಳವರಾಗಿದ್ದರು. ಇಂದಿಗೂ ಆ ಕಂಪನಗಳಿವೆ. ಸಾಮರ್ಥ್ಯ ಬೆಳೆಸಿಕೊಂಡವರು ಅವುಗಳನ್ನು ಈಗಲೂ ಗ್ರಹಿಸಬಹುದಾಗಿದೆ. ಕಂಪನಗಳನ್ನು ಗ್ರಹಿಸುವದು ಮತ್ತು ಅವುಗಳನ್ನು ಅರ್ಥೈಸುವದು ವ್ಯಕ್ತಿಗತ ಸಾಧನೆಯನ್ನು ಅವಲಂಬಿಸಿದೆ. ಇದೊಂದು ಸಚೇತನ. ವೈಶಿಷ್ಟಮಯವಾದುದರಿಂದ ವಿವರಿಸಲು ಸಾಧ್ಯವಾಗದು. ಅವುಗಳನ್ನು ವಿವರಿಸಲು ಪ್ರಯತ್ನಿಸಿದಾಗ ಸಚೇತನ ವೈಶಿಷ್ಟ್ಯಗಳು ತುಂಡರಿಸಲ್ಪಟ್ಟು ವಿವರಣೆಗಳು ಅಪೂರ್ಣಗೊಳ್ಳುವವು. ಇದರ ಪರಿಣಾಮವಾಗಿ ವಿವರಣೆಗಳು ಇಂದ್ರಿಯ ಮಟ್ಟಕ್ಕೆ ಅವನತಿ ಹೊಂದುತ್ತವೆ. ಈ ವಿಷಯದಲ್ಲಿ ಭಗವಂತನನ್ನು ವ್ಯಾಖ್ಯಾನಿಸಲು ಪ್ರಯತ್ನಿಸಿದ ನಮ್ಮ ಹಿರಿಯರನ್ನು ಅನುಸರಿಸುವದು ಬೇಡ. ಆಧ್ಯಾತ್ಮಿಕ ಮೌಲ್ಯಗಳು ತಮ್ಮಷ್ಟಕ್ಕೆ ತಾವೇ ಬರುವದಿಲ್ಲ. ಅವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಹಾಗು ಅಭಿವೃದ್ಧಿಗೊಳಿಸಬೇಕು. ಸಾಹಿತ್ಯವು ಏನೂ ಸಹಾಯ ಮಾಡಲಾರದು. ಒಬ್ಬ ನುರಿತ ಮಾರ್ಗದರ್ಶಕನ ಅಡಿಯಲ್ಲಿ ವಿಧೇಯ ಮತ್ತು ನಿಯಮಿತತನದಿಂದ ಪ್ರೇಮ, ಭಕ್ತಿ ಮತ್ತು ಶ್ರದ್ಧೆಗಳಿಂದ ಸಾಧನೆ ಮಾಡುವ ಮೂಲಕ ಇವುಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಪರಿಣಿತ ಮಾರ್ಗದರ್ಶನವು ವ್ಯಕ್ತಿಗತ ಸ್ಥರದಲ್ಲಿರುವದರಿಂದ ಅವನ ಪ್ರಯತ್ನ ನಿಷ್ಠಾಪೂರ್ವಕವಾಗಿರುವದು ಅತ್ಯವಶ್ಯಕ. ಭಾರತದ ಹೊರತಾಗಿ ಜಗತ್ತಿನ ಯಾವುದೇ ರಾಷ್ಟ್ರದಿಂದ ಈ ಉದ್ದೇಶಕ್ಕೆ ಸಹಾಯವಾಗುವದಿಲ್ಲ. ಪರಿಹಾರ ಮತ್ತು ಮಾರ್ಗದರ್ಶನ ಭಾರತದಿಂದ ಮಾತ್ರ ಸಾಧ್ಯ. ವಿಚಾರ ಸ್ವಾತಂತ್ರ್ಯ ಮತ್ತು ಕಾರ್ಯಾಚರಣೆಯ ಸ್ವಾತಂತ್ರ್ಯ ಇಲ್ಲಿ ಮಾತ್ರ ಇರುವದು. ಈ ದೃಷ್ಟಿಯಲ್ಲಿ ಭಾರತವು ಬಲಾಡ್ಯವಾದುದು. ಅವಶ್ಯಕತೆಗನುಸಾರವಾಗಿ ತನ್ನ ಸಾಮರ್ಥ್ಯವನ್ನು ಸ್ಥಾಪಿಸಬಲ್ಲದು. ಭಾರತವು ವಿಶಾಲ ದೇಶವಾಗಿದ್ದು ವಿವಿಧ ಶ್ರದ್ಧೆಗಳನ್ನುಳ್ಳ ಅಪಾರ ಜನಸಮೂಹ ಹೊಂದಿದೆ.

ಮಾರ್ಗಸೂಚಿ ಮತ್ತು ಮಜಲು :

ಪರಿಣಿತ ಮಾರ್ಗದರ್ಶನಕ್ಕಾಗಿ ಒಬ್ಬ ಸಮರ್ಥ ಮಾರ್ಗದರ್ಶಕನನ್ನು ಹುಡುಕುವ ಪ್ರಯತ್ನ ಮಾಡಬೇಕಾಗುತ್ತದೆ. ಒಮ್ಮೆ ಅಂತಹ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ತನ್ನ ಯೋಗ್ಯತಾನುಸಾರ, ಸಾಧ್ಯವಿದ್ದ ಎಲ್ಲ ದೃಷ್ಟಿಕೋನಗಳಿಂದ ಅವನನ್ನು ಪರೀಕ್ಷೆಗೊಳಪಡಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಇದು ಅತ್ಯಂತ ಮಹತ್ವವಾದುದು. ಏಕೆಂದರೆ ತಾವು ಜಗದ್ಗುರುಗಳೆಂದು ಬಹಳಷ್ಟು ಜನರು ಹೇಳಿಕೊಳ್ಳುತ್ತಿದ್ದಾರೆ. ಶೋಧಕನಿಗೆ ಒಂದು ಸಲಹೆ/ಎಚ್ಚರಿಕೆಯೆಂದರೆ ಒಬ್ಬ ಯೋಗ್ಯ ಮಾರ್ಗದರ್ಶಕನ ಸಂಪರ್ಕದಲ್ಲಿ ಬಂದಾಗ ಶುದ್ಧ ವಾತಾವರಣದ ಅನುಭವ, ಹೃದಯದಲ್ಲಿ ಲಘುತ್ವ, ಮಾನಸಿಕ ಶಾಂತಿ, ಒಂದು ತರಹದ ಸ್ವಚ್ಛತೆ, ಚಂಚಲ ರಹಿತ ಸ್ಥಿತಿಯನ್ನು ಅನುಭವಿಸುವನು. ಇನ್ನೊಂದು ಎಚ್ಚರಿಕೆಯ ಮಾತೆಂದರೆ ಮಾನವ ರೂಪದಲ್ಲಿ ಭಗವಂತನೊಬ್ಬನೇ ಅಂತಹ ಮಾರ್ಗದರ್ಶಕನಾಗಬಲ್ಲನೇ ಹೊರತು ಅನ್ಯರು ಯಾರು ಅಲ್ಲ. ಒಂದು ವೇಳೆ ಶೋಧಕನಿಗೆ ನಿರಾಡಂಬರನಾದ ಮಾರ್ಗದರ್ಶಕನ ಯೋಗ್ಯತೆ ಹಾಗೂ ಸಾಮರ್ಥ್ಯಗಳ ಬಗ್ಗೆ ಮನದಟ್ಟಾದರೆ ಅಂಥವನನ್ನು ಹೃತ್ತೂರ್ವಕವಾಗಿ ಮಾರ್ಗದರ್ಶಕನೆಂದು ಸ್ವೀಕರಿಸಬೇಕು. ಅವನು ಹಾಕಿಕೊಟ್ಟ ನಿಯಮಗಳನ್ನು ಅವನ ಮೇಲ್ವಿಚಾರಣೆಯಲ್ಲಿ ವಿಧೇಯನಾಗಿ ನಿಯಮಿತತನದಿಂದ ಪಾಲಿಸಬೇಕು.

ಒಮ್ಮೆ ಮಾರ್ಗದರ್ಶನ ಕ್ರಿಯೆಯನ್ನು ಆಸಕ್ತಿ ವಹಿಸಿ ಪ್ರಾರಂಭಿಸಿದ ಮೇಲೆ ಪರಿವರ್ತನೆಯು ಆರಂಭವಾಗುವದು. ಪರಿವರ್ತನೆಯನ್ನು ಅವಲೋಕಿಸುತ್ತಿರಬೇಕು. ಸಾಧನೆಯು ಅಲ್ಪ ಸಮಯದಲ್ಲಿಯೇ ತನ್ನಲ್ಲಿ ನೆಲೆಗೊಂಡಿದ್ದ ಆಲಸ್ಯ ತೊಲಗುತ್ತಿರುವದನ್ನು, ಜೀವನಕ್ಕೆ ಒಂದು ಉದ್ದೇಶವಿರುವದನ್ನು, ಶಿಸ್ತು, ಸಂಯಮ, ಸತ್ಯತೆ, ಸಹಬಾಂಧವ್ಯ, ನಿರ್ಭಯತೆಗಳು ನೆಲೆಗೊಳ್ಳುತ್ತಿರುವದನ್ನು, ಸರಿ-ತಪ್ಪುಗಳ ತಾರತಮ್ಯತೆ ಮತ್ತು ವೈರಾಗ್ಯಗಳನ್ನು ಅನುಭವಿಸತೊಡಗುತ್ತಾನೆ. ಕಾಲಾನುಕ್ರಮದಲ್ಲಿ ಮೇಲ್ಕಾಣಿಸಿದ ಎಲ್ಲ ಮೌಲ್ಯಗಳನ್ನು ಸಹಜವಾಗಿ ಹಾಗೂ ತನಗರಿವಿಲ್ಲದಂತೆ ಅವನ ಜೀವನದ ಅವಿಭಾಜ್ಯ ಅಂಗಗಳಾಗುವವು. ನಂತರ ಸಾಧಕನು ತನ್ನಲ್ಲಿ ಮತ್ತು ಇತರರಲ್ಲಿ ಭಗವಂತನ ಇರುವಿಕೆಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ಸಾಕ್ಷಾತ್ಕಾರಗೊಳ್ಳುತ್ತದೆ. ದೇವರ ಸೃಷ್ಟಿಯ ಬಗ್ಗೆ ಪ್ರೇಮ ಬೆಳೆಸಿಕೊಳ್ಳುತ್ತಾನೆ. ಕಾಲಕ್ರಮದಲ್ಲಿ ಜಾತಿ, ಮತ, ಬಣ್ಣ ಹಾಗೂ ರಾಷ್ಟ್ರೀಯತೆಯ ಭೇದ ಭಾವಗಳಿಲ್ಲದೆ ಎಲ್ಲಾ ಜೀವಿಗಳಲ್ಲಿ ತನ್ನನ್ನು ಕಾಣುವ ಉನ್ನತ ಸ್ಥಿತಿ ಭಕ್ತನಲ್ಲಿ ಬರಲಾರಂಭಿಸುತ್ತದೆ. ಅಧೋಮುಖ ಹಾಗು ಹಿಮ್ಮುಖ ಪ್ರವೃತ್ತಿಗಳು ಊರ್ಧ್ವಮುಖ ಹಾಗು ಮುನ್ನಡೆಯ ಪ್ರವೃತ್ತಿಗಳಾಗಿ ಮಾರ್ಪಾಡಾಗುತ್ತವೆ. ಅವನ ಮನಸ್ಸು ಶಾಂತ ಹಾಗು ನಿಶ್ಚಲವಾಗಿ ಉಳಿಯುವದು. ಒಂದು ತರಹದ ಹಗುರತೆ ಮತ್ತು ನೀರವತೆಗಳು ಅನುಭವಕ್ಕೆ ಬರುವವು. ಸಾಧಕನಲ್ಲಿ ಪರಿವರ್ತನೆ ಬರತೊಡಗಿದಾಗ ವೈಯಕ್ತಿಕ ಸಾಮರಸ್ಯತೆ- ಯುಂಟಾಗುವದು. ಸಮಾಜದ ಪ್ರತಿಯೊಂದು ಘಟಕದಲ್ಲಿ ಪರಿವರ್ತನೆ ಬರತೊಡಗಿದಾಗ ಸಾಮಾಜಿಕ ಸಾಮರಸ್ಯತೆ ಅಭಿವೃದ್ಧಿಗೊಳ್ಳುವದು. ರಾಷ್ಟ್ರದ ಪ್ರತಿಯೊಂದು ಸಮಾಜ ಮತ್ತು ವಿಶ್ವದ ಪ್ರತಿಯೊಂದು ರಾಷ್ಟ್ರ ಹೀಗೆ ಪರಿವರ್ತನೆಗೊಂಡಾಗ ಅವುಗಳಲ್ಲಿ ಸಾಮರಸ್ಯತೆ ಅನುಭವಿಸತೊಡಗುವವು. ಇದುವೇ ಭವಿಷ್ಯದಲ್ಲಿಯ ಶುದ್ಧ ಆಧ್ಯಾತ್ಮಿಕ ಮೌಲ್ಯಾಧಾರಿತ ನಾಗರಿಕತೆಯಾಗುವದು.

ಸಾಮಾನ್ಯವಾಗಿ ಸಮಾಜದಲ್ಲಿ ಒಬ್ಬ ಸಾಧಾರಣ ಮಾನವನು ಗ್ರಹಸ್ಥನಾಗಿದ್ದಾನೆ ಅವನಿಗೆ ಉಪಜೀವನದ ಕಾಳಜಿಯಿರಲಿ, ಇದು ಅವನ ಜೀವನದ ಕ್ರಮವಾಗಿರುವದು. ಇದು ಅವನ ಪ್ರಥಮ ಆದ್ಯತೆ. ಇದರಷ್ಟೆ ಪ್ರಾಮುಖ್ಯವಾದುದೆಂದರೆ, ಅವನ ಆಧ್ಯಾತ್ಮಿಕ ಜೀವನ ಆಧ್ಯಾತ್ಮಿಕ ಜೀವನಕ್ಕೆ ದ್ವಿತೀಯ ಪ್ರಾಶಸ್ತ್ರವಿರಬಹುದು, ಅಥವಾ ಯಾವುದೇ ಪ್ರಾಶಸ್ತ್ರವಿರದೇ ಇರಬಹುದು. ಈಗ ಎಲ್ಲವನ್ನು ಪರಿಷ್ಕರಿಸುವ ಸಮಯ ಬಂದಿದೆ. ತನ್ನ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದರೆ ತನ್ನೆಲ್ಲ ಪ್ರಾಶಸ್ತ್ರಗಳನ್ನು ಹೊಸದಾಗಿ ವ್ಯವಸ್ಥಿತವಾಗಿ ಹೊಂದಾಣಿಕೆ ಮಾಡಬೇಕಾಗಿದೆ. ಒಬ್ಬ ಪರಿಣಿತ ಹಾಗು ಸಮರ್ಥ ಮಾರ್ಗದರ್ಶಕನ ಸೇವೆಯೆಂದರೆ ಸಾಮಾನ್ಯ ಮನುಷ್ಯನು ತನ್ನ ದೈವೀ ಶಕ್ತಿಯ ಪ್ರಕಾರ ಅವನ ನಿಯಮಗಳನ್ನು ಅಳವಡಿಸಿಕೊಂಡು ಜೀವನದ ಉದ್ದೇಶ ಮತ್ತು ಗುರಿಗಳನ್ನು ಸಾಕ್ಷಾತ್ಕರಿಸುವಂತೆ ಪ್ರೇರೇಪಿಸುವದು.

ಸೃಷ್ಟಿಯು ಯುದ್ಧ, ಭೂಕಂಪ, ಮಹಾಪೂರ, ಬರಗಾಲ, ಸಾಂಕ್ರಾಮಿಕ ರೋಗಗಳ ರೂಪದಲ್ಲಿ ಎಚ್ಚರಿಕೆಯ ಸೂಚನೆಗಳನ್ನು ಕೊಡುತ್ತಲೇ ಇರುತ್ತದೆ. ಇದು “ತಿದ್ದಿಕೊಳ್ಳು, ಇಲ್ಲವೇ ಅವಸಾನ ಹೊಂದು” ಎಂಬ ನಿಯಮವಾಗಿರುತ್ತದೆ. ಮೌಲ್ಯರಹಿತ ಸಮಾಜವು ಪ್ರಪಾತದೆಡೆಗೆ ಧುಮುಕುತ್ತದೆ. ಆದರೂ ಇನ್ನೂ ಆಶಾಕಿರಣವಿದೆ. ತಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆನ್ನುವರು ಈ ವಿಷಯದ ಮೇಲೆ ಆಳವಾದ ಚಿಂತನೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿ. ಇಲ್ಲವಾದಲ್ಲಿ ಸೃಷ್ಟಿಯು ತನ್ನದೇ ಆದ ಕ್ರಮ ಕೈಗೊಳ್ಳುವದು.