ಆಧ್ಯಾತ್ಮಿಕ ಮಂದಿರವನ್ನು ನೀವು ನಿರ್ಮಿಸಿಕೊಳ್ಳುವಲ್ಲಿ ನೆರವಾಗಲು, ನಾನು ನನ್ನ ಸರಳ ಅಭಿಪ್ರಾಯಗಳನ್ನು ಕೆಲ ಶಬ್ದಗಳಲ್ಲಿ ನಿಮ್ಮ ಮುಂದಿಡುವುದಲ್ಲದೆ, ನನ್ನ ಹೃದಯವನ್ನೇ ನಿಮಗೆ ನೀಡಲು ನನಗೆ ಅತೀವ ಸಂತಸವೆನಿಸುತ್ತದೆ. ನಮ್ಮ “ಮಿಷನ್ನಿ ”ನ ಶಾಖೆಯ ರೂಪದಲ್ಲಿ ಇಲ್ಲಿ ಈಗಾಗಲೇ ಅದರ ತಳಪಾಯವನ್ನು ಹಾಕಲಾಗಿದೆ. ನಮ್ಮ ಅತ್ಯಂತ ಸಮರ್ಥ ಸೋದರರಲ್ಲೊಬ್ಬರಾದ ಶ್ರೀ ರಾಘವೇಂದ್ರರಾಯರು ಅದರ ನಿರ್ವಾಹಕರಾಗಿರುತ್ತಾರೆ ಮತ್ತು ಓರ್ವ ಪ್ರಶಿಕ್ಷಕ (Preceptor)ರಾಗಿಯೂ ಕೆಲಸಮಾಡುತ್ತಿದ್ದಾರೆ. ಇನ್ನು ಆ ಆಧ್ಯಾತ್ಮಿಕ ಮಂದಿರವನ್ನು ಕಟ್ಟಲು ಬೇಕಾದ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಹೊಣೆ ನಿಮ್ಮ ಮೇಲಿದೆ. ಸಾಧನ ಸಾಮಗ್ರಿಯೆಂದರೆ, ಅದು ಕೇವಲ ಕೆಲವು ನಿರ್ದಿಷ್ಟ ಸಂಗತಿ ಹಾಗೂ ಸಿದ್ದಾಂತಗಳ ಕಾಲ್ಪನಿಕ ಜ್ಞಾನವನ್ನೊಳಗೊಂಡದ್ದಲ್ಲ, ಪರಂತು, ಅದು ಪ್ರಯೋಗಸಿದ್ದ ವ್ಯಕ್ತಿಗತ ಅನುಭವವನ್ನೊಳಗೊಂಡದ್ದು. ಯಾರೊಬ್ಬರ ಒತ್ತಾಯಕ್ಕೆ ಒಲಿದು ವಿಷಯಗಳನ್ನು ಒಪ್ಪಿಕೊಳ್ಳುವುದನ್ನು ಯಾವ ರೀತಿಯಿಂದಲೂ ಪರಿಗಣಿಸಲು ಬಾರದು. ಒಂದು ವಿಷಯದ ಯೋಗ್ಯತೆಯು ಪ್ರತ್ಯಕ್ಷ ಅನುಭವದಿಂದ ಮಾತ್ರ ಸರಿಯಾಗಿ ನಿರ್ಣಯಿಸಲ್ಪಡಬಲ್ಲುದು. ಆದುದರಿಂದ, ಜೀವನದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೇವಲ ಅನುಷ್ಠಾನನಿರತ ಜೀವನದ ಅಗತ್ಯವಿದೆ.

ನೀವು ನಿಜವಾಗಿಯೂ ಒಳ್ಳೆಯ ಶ್ರದ್ದೆಯಿಂದ ಪರತತ್ವವನ್ನು ಪಡೆಯಲು ಹಂಬಲಿಸುವುದಾದರೆ ನೀವು ಮಾಡಬೇಕಾದುದು ಇಷ್ಟೇ : ನಿಮ್ಮನ್ನು ನೀವು ಏಕೈಕ ಅಂತಿಮಸತ್ಯದೊಂದಿಗೆ ಅತ್ಯಂತ ಸಾಮೀಪ್ಯದಿಂದ ಜೋಡಿಸಿಕೊಂಡು, ಪೂರ್ಣ ಪ್ರಾಮಾಣಿಕವಾದ ಹೃದಯದೊಂದಿಗೆ ನಿಮ್ಮ ಗಮನವನ್ನು ಆ ಕಡೆಗೆ ತಿರುಗಿಸಿರಿ. ಆ ಕೂಡಲೇ ದೈವಿಕತೆಯ ಪ್ರವಾಹವು ನಿಮ್ಮ ಅಸ್ತಿತ್ವದ ಪ್ರತಿಯೊಂದು ನರನಾಡಿಗಳಲ್ಲಿ ಹರಿಯಲಾರಂಭಿಸಿ, ನೈಜ ಪ್ರೇಮ ಹಾಗೂ ಭಕ್ತಿಗಳನ್ನು ನಿಮ್ಮ ಹೃದಯದಲ್ಲಿ ಹೊತ್ತಿ ಬೆಳಗುವಂತೆ ಮಾಡುತ್ತದೆ.

ದೇವರು ಅತ್ಯಂತ ಸರಳವೂ, ಸೂಕ್ಷ್ಮನೂ ಆಗಿದ್ದಾನೆ. ಈ ಸೂಕ್ಷ್ಮತಮ ಸತ್ತೆಯನ್ನು (ಪರತತ್ವವನ್ನು) ಸಾಕ್ಷಾತ್ಕರಿಸಿಕೊಳ್ಳಲು, ನಾವು ಅಂಗೀಕರಿಸಿಕೊಳ್ಳ ಬೇಕಾದ ಸಾಧನಗಳೂ ಅಷ್ಟೇ ಶುದ್ಧವೂ ಸೂಕ್ಷ್ಮವೂ ಆಗಿರಬೇಕು. ಸರಳ ಸಮಸ್ಯೆಯನ್ನು ಬಿಡಿಸಲು, ಜಟಿಲವಾದ ಕ್ರಮಗಳನ್ನು ಅನುಸರಿಸಿದಾಗ ಕಷ್ಟವುಂಟಾಗುವುದು. ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಒಂದು ಸಣ್ಣ ಸೂಜಿಯನ್ನು ಎತ್ತಲು ಅವರು ಭಾರವೆತ್ತುವ ದೊಡ್ಡ ಯಂತ್ರವನ್ನು (crane) ಬಳಸುತ್ತಾರೆ.

ಸ್ಥೂಲ ಹಾಗೂ ಅಪಾರದರ್ಶಕ ಪೊರೆಗಳನ್ನು ಹೊಂದಿದ, ನಮ್ಮದೇ ಆದ ಪುಟ್ಟ ಸೃಷ್ಟಿಯನ್ನು ನಾವು ನಮ್ಮ ಭೌತಿಕ ಅಸ್ತಿತ್ವದ ರೂಪದಲ್ಲಿ ನಿರ್ಮಿಸಿಕೊಂಡಿದ್ದೇವೆ. ಈ ಅಪಾರದರ್ಶಕ (Opaque) ಪರದೆಗಳನ್ನು ಒಂದೊಂದಾಗಿ ಹರಿದೊಗೆದು, (ಜಗತ್ತಿನ) ಸೃಷ್ಟಿಯ ಸಮಯದಲ್ಲಿ ನಾವು ಹೊಂದಿದ್ದಂತಹ ಪರಿಪೂರ್ಣಾವಸ್ಥೆಯನ್ನು (ಶುದ್ಧಾವಸ್ಥೆಯನ್ನು) ಪುನಃ ತಾಳುವುದೇ ನಾವೀಗ ಮಾಡಬೇಕಾದದ್ದು, ಇದೇ ‘ಸಹಜಮಾರ್ಗ’ವೆಂದು ಕರೆಯಲಾದ, ನಮ್ಮ ಪದ್ದತಿಯ ತತ್ವದ ಸಾರ. ಅಂದರೆ, ನಮ್ಮದೇ ಆದ ಈ ಪುಟ್ಟ ಸೃಷ್ಟಿಯನ್ನು ನಾವು ಪ್ರಲಯಗೊಳಿಸಬೇಕು, ಅರ್ಥಾತ್, ನಮ್ಮನ್ನು ನಾವು ಬಿಚ್ಚಿಕೊಳ್ಳಬೇಕು.

ಈ ಉದ್ದೇಶವನ್ನು ಸಾಧಿಸಲು ಅತ್ಯಂತ ಸುಲಭವೂ, ನಿಶ್ಚಿತವೂ ಆದ ಸಾಧನವೆಂದರೆ, ನೀವು ನಿಮ್ಮನ್ನು ಪರಮ ಸದ್ಗುರುವಿಗೆ, ನಿಜಾರ್ಥದಲ್ಲಿ ಸಮರ್ಪಿಸಿಕೊಂಡು, ‘ಜೀವನ್ ಮೃತ’ರಾಗುವುದು. ಈ ಸಮರ್ಪಣಾಭಾವವನ್ನು ಬಲಪೂರ್ವಕವಾಗಿ, ಇಲ್ಲವೆ, ಯಾಂತ್ರಿಕವಾಗಿ ರೂಢಿಸಿಕೊಂಡರೆ, ಅದು ಎಂದಿಗೂ ನೈಜವಾಗಲಾರದು. ಅದು, ಮನಸ್ಸಿನ ಮೇಲೆ ಸ್ವಲ್ಪವೂ ಕೂಡ ಒತ್ತಡ ಅಥವಾ ಶ್ರಮವಿಲ್ಲದ ರೀತಿಯಲ್ಲಿ ತನ್ನಿಂದ ತಾನೇ ರೂಪುಗೊಳ್ಳಬೇಕು. ಅದರ (ಸಮರ್ಪಣ ಸ್ಥಿತಿಯ) ಅರಿವು ಉಳಿದಿದ್ದರೂ ಸಹ, ಅದು ನಿಜವಾದ ಸಮರ್ಪಣಾಭಾವ ವಾಗಲಾರದು. ನೀವು ನಿಮ್ಮನ್ನು ನಿಜಾರ್ಥದಲ್ಲಿ ಸಮರ್ಪಿಸಿಕೊಂಡಿದ್ದಾದರೆ, ಮಾಡುವುದಕ್ಕೆ ಉಳಿಯುವುದಾದರೂ ಏನು ? ಏನೂ ಇಲ್ಲವೆಂದೇ ನನ್ನ ನಂಬುಗೆ. ಈ ಸ್ಥಿತಿಯಲ್ಲಿ, ಸದಾ ನೀವು ಸತ್ಯದ ಗಾಢವಾದ ಸಂಪರ್ಕದಲ್ಲಿಯೇ ಇರುವಿರಿ, ಹಾಗೂ, ದೈವೀ ಪ್ರಭೆಯ ಪ್ರವಾಹವು ಎಡೆಬಿಡದೆ ಹರಿದುಬರುತ್ತಲೇ ಇರುವುದು.

ನಿಮ್ಮ ಜೀವನದ ಸಮಸ್ಯೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ, ಸುಲಭವಾಗಿ ಹಾಗೂ ಸಮರ್ಥವಾಗಿ ಪರಿಹರಿಸಿಕೊಳ್ಳಲು ನಿಮಗೆ ಸಾಧ್ಯವಾಗಿಸಲು ನಾನಿದೆಲ್ಲವನ್ನೂ ನಿಮ್ಮ ಮನಸ್ಸಿಗೆ ಮುಟ್ಟುವಂತೆ ಮುಂದಿಡಬಯಸುತ್ತೇನೆ. ಈ ದಿಶೆಯಲ್ಲಿ ನಿಮ್ಮ ಯಶಸ್ಸಿಗೋಸ್ಕರ ನಾನು ಪ್ರಾರ್ಥಿಸುತ್ತೇನೆ. ಶುಭವಾಗಲಿ.

** *