1. ದರ್ಶನ (ಸಾಕ್ಷಾತ್ಕಾರ)ವೆಂದರೆ ಸಾಮಾನ್ಯವಾಗಿ ಜನರು ನಾಲ್ಕು ಕೈಯುಳ್ಳ, ಶಂಖ, ಚಕ್ರ, ಗದಾಪದ್ಮಧಾರಿಯಾದ ವಿಷ್ಣುವಿನ ಆಕಾರದ ಮಾನಸಿಕ ದರ್ಶನವೆಂದು ಭಾವಿಸುತ್ತಾರೆ. ಆದರೆ ನನ್ನ ಅಭಿಪ್ರಾಯದಲ್ಲಿ ಅಂತಹ ಒಂದು ರೀತಿಯ ದರ್ಶನವು ಆರಾಧಕರ ಸ್ಥೂಲ ಮನಸ್ಥಿತಿಯ ಪರಿಣಾಮವಾಗಿದೆ, ಏಕೆಂದರೆ ತನ್ನದೇ ಆದ ಸೂಕ್ಷ್ಮ ಶರೀರವು ಅವನಿಗೆ ಆ ರೂಪದಲ್ಲಿ ಗೋಚರಿಸುತ್ತದೆ, ಏಕೆಂದರೆ ಅವನು ಆ ರೂಪವನ್ನು ಧ್ಯಾನಕ್ಕಾಗಿ ತೆಗೆದುಕೊಂಡಿದ್ದನು. ಆದರೆ, ರಾಜ ಯೋಗದಲ್ಲಿ ಸಾಧನದ ಪರಿಣಾಮವಾಗಿ ಬೆಳೆದುಬರುವಮನ:ಸ್ಥಿತಿತೀರ ಭಿನ್ನವಾಗಿರುತ್ತದೆ. ಆ ಅವಸ್ಥೆಯಲ್ಲಿ ಆತನು ಎಲ್ಲಕಡೆಗೂ ಮತ್ತು ಎಲ್ಲ ವಸ್ತುಗಳಲ್ಲಿಯೂ ದೈವಿ ಶಕ್ತಿಯ ಅವಿರ್ಭಾವವನ್ನು ಅನುಭವಿಸುತ್ತಾನೆ. ಅದು ಆತನಲ್ಲಿಸಮಾಧಿಯ ಸ್ಥಿತಿಯನ್ನುಂಟುಮಾಡುತ್ತದೆ. ದಿವ್ಯದರ್ಶನದ ನಿಜ ಸ್ಥಿತಿಹೀಗಿದೆ.ಜನರು ಅದರ ಕಡೆಗೆ ದೃಷ್ಟಿ ಹರಿಸಿ ಸ್ವತಃ ಅನುಭವ ಪಡೆಯಲಿ. ದರ್ಶನದ ಸ್ಥಿತಿ ಪಡೆಯುವದೆಂದರೆ ಪರಿಪೂರ್ಣತೆಯಲ್ಲ. ಅದು ಈಶ್ವರನ ಕಡೆಗಿನ ಮೊದಲ ಹೆಜ್ಜೆ. ನಾವು ಇನ್ನೂ ಎಷ್ಟುನಡೆಯಬೇಕು, ಎಷ್ಟೆಷ್ಟು ಅವಸ್ಥೆಗಳ ಒಳಗಿಂದ ಹಾಯ್ದುಹೋಗಬೇಕು, ಎನ್ನುವುದನ್ನುನಿರ್ದಿಷ್ಟವಾಗಿ ಹೇಳಲುಬರುವುದಿಲ್ಲ. ಭೂಮಾ ಅಥವಾ ಕೈವಲ್ಯದಲ್ಲಿ ಲೀನವಾಗುವುದು, ನಮ್ಮ ಅಂತಿಮ ಗುರಿಯೆಂದಿಟ್ಟುಕೊಂಡಾಗ ಈ ದರ್ಶನದ ಸ್ಥಿತಿಯು ಕೊನೆಯದೆಂದು ಎಷ್ಟುಮಟ್ಟಿಗೂ ಭಾವಿಸಲುಬರುವುದಿಲ್ಲ.
  2. ಪ್ರತಿಯೊಬ್ಬ ಮನುಷ್ಯನೂ ತನ್ನ ಧ್ಯೇಯವನ್ನು ಪಡೆಯಲು ಮೊದಲೇ ಧೃಢ ಸಂಕಲ್ಪನಾಗುವುದು ಅವನ ಕರ್ತವ್ಯ. ಅದರಿಂದ ಆತನ ಇಚ್ಛೆಗೆ ಬಲ ದೊರೆತು ಅಲ್ಲಿಯವರೆಗೆ ತಲುಪಲು ದಾರಿಯಾಗುವುದು.
  3. ತೀವ್ರ ಹಂಬಲ ಅಥವಾ ಅಶಾಂತಿಯು ಗಂತವ್ಯವನ್ನು ತಲುಪಲು ತುಂಬ ಸಹಾಯವಾಗುವುದೆಂಬುದು ಅನುಭವದಿಂದ ಸಿದ್ಧವಾಗುವುದು. ಸೃಷ್ಟಿಯ ಸಮಯ ಬಂದಾಗ ಸುಪ್ತಚಲನವು ಹಾದಿಮಾಡಿಕೊಳ್ಳಲು ತವಕಪಡುತ್ತಿತ್ತು. ಅದರ ಕ್ಷೋಭವೇ ಅದಕ್ಕೆ ಹಾದಿ ಮಾಡಿಕೊಟ್ಟಿತು. ಅದರಂತೆಯೇ ನಮ್ಮ ಈ ಅಶಾಂತಿ ನಮಗೆ ಗುರಿಯನ್ನು ತಲುಪಲು ಹಾದಿಮಾಡುಕೊಡುವುದು.
  4. ನಾವು ಇಂಥ ದೊಡ್ಡ ಶಕ್ತಿಯೊಂದಿಗೆ ಆಕರ್ಷಣೆ ಮತ್ತು ಪ್ರೇಮಭಾವನೆಗಳಿಂದ ನಮ್ಮ ಸಂಬಂಧವನ್ನು ಸ್ಥಾಪಿಸಿಕೊಳ್ಳಬೇಕು. ಆತನನ್ನು ಕುರಿತು ಮನಸ್ಸಿನಲ್ಲಿ ಯಾವ ಭಾವನೆಯನ್ನು ತಾಳಿರುವೆವೆಂಬುದು ಅಷ್ಟು ಮುಖ್ಯವಲ್ಲ. ನಮ್ಮ ಗೆಳೆಯನೆಂದೋ, ಗುರುವೆಂದೋ, ಸೇವಕನೆಂದೋ ಅಥವಾ ನಮಗೆ ಇಷ್ಟವಾದ ಇನ್ನಾವುದಾದರೂ ರೀತಿಯಿಂದ ಆತನನ್ನು ಕರೆಯಬಹುದು. ಆದರೆ ಯಾವ ಸ್ಥಿತಿಯಲ್ಲಿಯೂ ಆತನು ಸಾಮಾನ್ಯವಾಗಿ ಕರೆಯಲಾಗುವಂತೆ, ನಮ್ಮ ಮಾರ್ಗದರ್ಶಿಯಾಗಿ ಅಥವಾ ಗುರುವಾಗಿಯೇ ಉಳಿಯುವನು.
  5. ನಾನು ನನ್ನ ಓಡೆಯನ ಬಳಿಗೆ ಹೋಗುತ್ತಿದ್ದಾಗ, ಜನರು ಸಾಕ್ಷಾತ್ಕಾರಕ್ಕಾಗಿ ಆತನ ಬಳಿಗೆ ಬರುತ್ತಿದ್ದರು. ಈಗ ನನ್ನ ಬಳಿಗೆ ಬರುವ ಹೆಚ್ಚಿನವರು ಶಾಂತಿಯನ್ನು ಮಾತ್ರ ಬಯಸುತ್ತಾರೆ. ಸಮಯವು ಎಂತಹ ಬದಲಾವಣೆಯನ್ನು ತಂದಿದೆ.
  6. ಪ್ರತಿಯೊಬ್ಬರೂ ಶಾಂತಿಗಾಗಿ ಹಂಬಲಿಸುವರು, ಆದರೆ ತೊಂದರೆಯೆನೆಂದರೆ ಶಾಂತಿಯೆಂದರೆ ಎನೆಂದು ಯಾರಿಗೂ ತಿಳಿಯದು.
  7. ಜನರು , ತೃಪ್ತಿಯನ್ನೇ ಶಾಂತಿಯೆಂದು ಭಾವಿಸುವರಾದುದರಿಂದ ಅವರು ತೃಪ್ತರಾಗಿರುವರೇ ಹೊರತು ಶಾಂತರಾಗಿಲ್ಲ.
  8. ಶಾಂತಿಯು ಸುಪ್ತವಾಗಿದ್ದರೆ, ತೃಪ್ತಿಯ ಸ್ಥಿತಿಯು ಕ್ರೀಯಾಶೀಲವಾಗಿರುತ್ತದೆ. ಅಂತಿಮ ಸ್ಥಿತಿಯಲ್ಲಿ ಶಾಂತಿಯು ಅಶಾಂತ-ಶಾಂತಿಯಾಗುವುದು; ಮತ್ತು ತೃಪ್ತಿಯು ತನ್ನ ಚರಮಾವಸ್ಥೆಯಲ್ಲಿ ಸ್ಥೂಲವೂ ಭಾರವೂ ಆಗುವುದು.
  9. ಆರಂಭಕ್ಕಿಂತ ಮೂದಲು ಇದ್ದ ಸ್ಥಿತಿಯೆ ಈಗಲೂ ಅನುಭವಕ್ಕೆ ಬರುತ್ತಿದೆಯೆಂದು ಬರೆದಿರುವಿರಿ. ‘ ಆದಿಯೂ ಅವನೇ , ಅಂತ್ಯವೂ ಅವನೇ’ ಎಂಬುದರ ಪ್ರತೀತಿಯಿದು. ಆತ್ಮವು ತಾನು ಹೊರಟಿದ್ದ ಸ್ಥಾನಕ್ಕೆ ಮರಳಿ ಬಂದಿದೆ. ಇದನ್ನು ವಿಸ್ತಾರವಾಗಿ ವರ್ಣಿಸಲು ಒಂದು ಗ್ರಂಥವೇ ಬೇಕು.
  10. ಪ್ರತಿಯೊಂದು ಕಲ್ಪನೆಯ ಮೂಲವೂ ಸತ್ತತ್ತ್ವವೇ. ನಾವು ಬೇಡಿದುದಕ್ಕೆಲ್ಲ ಅದೇ ಬಲವನ್ನೊದಗಿಸುವುದು.
  11. ಜನರು ಜೀವನದ ಅರ್ಥವನ್ನು ಕುರಿತು ಪ್ರಶ್ನಿಸುತ್ತಾರೆ. ಜೀವನವು ಅರ್ಥಹೀನವೆಂದು ಕೆಲವರ ಮನಸ್ಸಿನಲ್ಲಿದೆ- ಇದು ಆತ್ಮಘಾತಕ ಕಲ್ಪನೆ. ಜೀವನಕ್ಕೆ ತನ್ನದೇ ಆದ ಅರ್ಥವಿದೆ; ಏಕೆಂದರೆ, ಅದರೊಂದಿಗೆ ಒಂದು ಶಕ್ತಿಯೂ ಸಹಬರುತ್ತದೆ. ಆ ಶಕ್ತಿಯು , ‘ ಯಾವುದೋ ಒಂದ’ನ್ನು ಅನರ್ಘ್ಯವೆಂದು ತಮ್ಮೊಳಗೆ ಜೋಪಾನವಾಗಿಟ್ಟು ಕೊಳ್ಳಬಯಸುವವರಿಗೆ, ಅದರ ನೆನಪನ್ನು ತರುತ್ತದೆ. ಆಧ್ಯಾತ್ಮಿಕ ಜೀವನದ ಕಡೆಗೆ ತಿರುಗುವುದೇ ನಿಜವಾದ ಜೀವನದ ಆರಂಭವೆಂದೂ, ಮತ್ತು ಜೀವನದೊಳಗೇ ಹುದುಗಿರುವ “ಜೀವನದೊಳಗಣ ಜೀವನ” ವು ಅದರ ಉತ್ತುಂಗ ಸ್ಥಿತಿಯೆಂದೂ ಒಪ್ಪಿಕೊಂಡೆವೆಂದರೆ, ನಾವು ಪ್ರವೇಶಿಸಲೇಬೇಕಾದ ಆ ಜೀವನವನ್ನು ಪಡೆಯಲು ಮುಂದಾಗಬೇಕು. ನಮ್ಮ ‘ಅಭ್ಯಾಸ’ವೆಲ್ಲ ನಮ್ಮನ್ನು ಆಜೀವನದ ಕಡೆಗೆ ಒಯ್ಯುತ್ತದೆ.
  12. ನಾವು ನಮ್ಮೊಡನೆ ‘ಅನಂತ’ದ ಸಾರವನ್ನೇ ತಂದಿದ್ದೇವೆ. ನಮ್ಮ ಆಲೋಚನೆಯು ಅನಂತದಲ್ಲಿ ಲೀನವಾಗಲು, ಅದನ್ನು ಮುಕ್ತವಾಗಿಡಲೋಸುಗ, ಆ ‘ಸಾರ’ದ ಸಂರ್ಪಕದಲ್ಲಿ(ಅತ್ಯಂತಸಮೀಪವಾಗಿ) ಇರಲು ಪ್ರಯತ್ನಿಸಬೇಕು. ನಾವಿದನ್ನು ಅಲಕ್ಷಿಸಿದರೆ ,ನಾವು ಆಲೋಚನೆಗಳ ಚಟುವಟಿಕೆಗಳಿಗೇ ಬದ್ಧರಾಗಿಬಿಡುತ್ತೇವೆಯೇ ಹೊರತು ಮೂಲದಲ್ಲಿರುವ ಅಪರಿಮಿತವಾದ ಸತ್ಯಕ್ಕಲ್ಲ.
  13. ಜನರು ತಮ್ಮನ್ನು ತಾವು ಮರೆತು ಅನೈಚ್ಛಿಕವಾಗಿಯೆ ಕಾಲದ ವಿನಾಶಕಾರಿ ಗುಣದ ಪ್ರಭಾವದಿಂದ ಪ್ರಪಂಚದ ಕಡೆಗೆ ಆಕೃಷ್ಟರಾಗುತ್ತಿರುವುದನ್ನು ಕಂಡು ಕನಿಕರಪಡುತ್ತೇನೆ.
  14. ಒಂದುವೇಳೆ ,ಆಧ್ಯಾತ್ಮಿಕ ಪಾರ್ಶ್ವವು ಪರಿಪೂರ್ಣವಾಗಿದ್ದು ಪ್ರಾಪಂಚಿಕ ಜೀವನ ಅಪೂರ್ಣವಾಗಿದ್ದರೆ ಅದನ್ನು ನಾನು ಪಂಗುಪರಿಪೂರ್ಣತೆಯೆಂದು ಕರೆಯುವೆನು. ಮನುಷ್ಯನು ಪರಿಪೂರ್ಣ ಮಾನವನಾಗಲು ಯತ್ನಿಸಬೇಕೆ ಹೊರತು ದೇವರಾಗಲು ಅಲ್ಲ.
  15. ನಾವು ಜೀವಿಸುತ್ತಿರುವ ಜೀವನವು ನಿಜವಾದ ಜೀವನವಲ್ಲ. ಇದರಾಚೆಗೆ, ಇನ್ನೂ ಮುಂದಕ್ಕೆ ಏನೋ ಒಂದಿದೆ. ನೀವೆಲ್ಲ ಆತನಿಗೆ ,ಅಷ್ಟೇ ಅಲ್ಲ, ಆತನೋಬ್ಬನಿಗೇ ಅನನ್ಯ ನಿಷ್ಠರಾಗಿದ್ದರೆ ಸುದಿನಗಳನ್ನು ಕಾಣುವಿರೆಂದು ನಾನು ಆಶಿಸುತ್ತೇನೆ.
  16. ‘ಕರ್ತವ್ಯಕ್ಕಾಗಿಕರ್ತವ್ಯ’ವು ನಿಸ್ಸಂದೇಹವಾಗಿ ನಿಷ್ಕಾಮ ಕರ್ಮವಾಗಿದೆ; ಹಾಗೂ ನಮ್ಮ ಜೀವನದ ಗುರಿಯನ್ನು ಸಾಧಿಸುವುದು ನಮ್ಮಅತ್ಯಾವಶ್ಯಕ ಕರ್ತವ್ಯವಾಗಿದೆ.
  17. ಇದೆಲ್ಲಕ್ಕೂ ಒಂದು ಸಣ್ಣ ಉಪಾಯವೆಂದರೆ, “ ಈ ಕಡೆಯಿಂದ ಛೇದಿಸು, ಆ ಕಡೆ ಜೋಡಿಸು.”
  18. ಆಗ ನೀವು ಅರಸುತ್ತಿರುವ ವಸ್ತು ನಿಮಗೆ ಅತಿ ಸಮೀಪವರ್ತಿಯಾಗುವುದು. ಅಲ್ಲ ನಿಮ್ಮೊಡನೆಯೇ ಇರುವುದು. ಯಾವುದನ್ನು ಅರಸುತ್ತಿರುವಿರೋ ಅದೇ ನೀವಾಗಬಹುದು. ಅದಕ್ಕಾಗಿ ದಾರಿಯಲ್ಲಿರುವ ಕಳೆಗಳನ್ನೂ ,ಮೆಳೆಗಳನ್ನೂ ಸುಟ್ಟುಹಾಕುವ ಒಂದು ಜ್ವಾಲೆ ಮಾತ್ರ ನಿಮ್ಮ ಹೃದಯದಲ್ಲಿರಬೇಕು.
  19. ಪರರ ಹಿತ ಸಾಧನೆಗಾಗಿ ದುಡಿಯುವುದು ಒಳ್ಳೆಯದೆಂಬುದರಲ್ಲಿ ಸಂದೇಹವಿಲ್ಲ. ಆದರೆ ಮೊದಲು ಸ್ವಂತದ ನೈತಿಕ ಉನ್ನತಿಯನ್ನು ನೋಡಿಕೊಳ್ಳುವುದು ಮತ್ತಷ್ಟು ಒಳ್ಳೆಯದು.
  20. ಒಬ್ಬನು ಸ್ತ್ರೀಯೂ ಅಲ್ಲದ ,ಪುರುಷನೂ ಅಲ್ಲದ ಒಬ್ಬನೊಡನೆ ಅಚಲ ಸಂಬಂಧ ಹೊಂದಿದಾಗ ತಾನೇ ಆತನಂತಾಗುತ್ತಾನೆ.
  21. ನಾವು ನಮ್ಮ ಪರಿಮಿತಿ ಹಾಗೂ ಬಂಧನಗಳನ್ನು ಹರಿದು ಹಾಕುವವರೆಗೆ ನಮ್ಮ ಸಂಕಲ್ಪವು ದೈವೀ ಸಂಕಲ್ಪದಂತೆ ಆಗುವುದೆಂದು ಹೇಳಲಾಗುವುದಿಲ್ಲ. ಇದು ನಮ್ಮ ನಿಜವಾದ ಪ್ರಯತ್ನವಾಗಿದ್ದು ನಾವು ಪರತತ್ವದಲ್ಲಿ ಲಯ ಹೊಂದಲು ಇದನ್ನು ಕೈಗೊಳ್ಳುತ್ತೇವೆ.
  22. ನಾವು ಗುರಿಯನ್ನು ಸಮೀಪಿಸುತ್ತಿರುವುದನ್ನು ಸೂಚಿಸುವ ಮೂರು ಲಕ್ಷಣಗಳಿವೆ.
    ದೈವಿಕ್ರಿಯೆ
    ದೈವಿಜಾಣ್ಮೆ
    ದೈವಿವಿಚಾರಗಳು.