(ಸೆಪ್ಟೆಂಬರ ೧೯೬)

ಇಡೀ ಮಾನವಕುಲದ ಕಲ್ಯಾಣಕ್ಕಾಗಿ ನನ್ನ ಗುರುಗಳ ಸಂದೇಶವನ್ನು ಬಿತ್ತರಿಸಲು ನನಗೆ ತುಂಬ ಸಂತೋಷವಾಗುತ್ತಿದೆ. ಅವರ ಶುಭನಾಮ ಸಮರ್ಥಗುರು ಮಹಾತ್ಮಾ ರಾಮಚಂದ್ರಜಿ. ಅವರು ಫತೇಹ್ಗಡದವರು. ಅವರು ನಮ್ಮ ಸಂಸ್ಥೆಯ ಆದಿಗುರುಗಳು. ಅವರು ತಮ್ಮ ಜೀವನವನ್ನೆಲ್ಲ ಮಾನವತೆಸೇವೆಯಲ್ಲಿಯೇ ಸವೆಸಿದರು. ಜನರು ಸಾಮಾನ್ಯವಾಗಿ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಗಳಿಸುವುದು ಕಠಿಣವಷ್ಟೇ ಅಲ್ಲ, ಅಶಕ್ಯವೆಂದು ತಿಳಿಯುವರು. ಈ ಭಾವನೆ ತಪ್ಪು. ಮುಕ್ತಿಯ ಕಡೆಗೆ ಕೊಂಡೊಯ್ಯಲು ಈ ಜನ್ಮವೇ ಕೊನೆಯದೇಕಾಗಿರಬಾರದು ? ನೀವು ನಿಜವಾಗಿಯೂ ದಕ್ಕಾಗಿ ಹಂಬಲಿಸುತ್ತಿದ್ದು, ಸೌಭಾಗ್ಯ ವಶದಿಂದ ಯೋಗ್ಯ ಮಾರ್ಗದರ್ಶಿಯು ದೊರೆತುದಾದರೆ, ಇದೇ ಜನ್ಮದಲ್ಲೇಕೆ, ಅದರ ಒಂದು ಭಾಗಾಂಶದಲ್ಲಿ ಸಹ ಮುಕ್ತಿ ಪಡೆಯಲು ಸಾಧ್ಯವೆಂದು ನಮ್ಮ ಗುರುಗಳು ದಿಟ್ಟತನದಿಂದ ಹೇಳಿದ್ದಾರೆ. ಇದನ್ನು ಅವರು ಅನೇಕ ನಿದರ್ಶನಗಳಲ್ಲಿ ಪ್ರತ್ಯಕ್ಷ ತೋರಿಸಿದ್ದಾರೆ. ಆದರೆ ನೇರವಾದ ಅನುಭವವೇ ಅದಕ್ಕೆ ಸಾಕ್ಷಿಯಾಗಬಲ್ಲುದು.

ಹೃದಯದ ಮೇಲೆ ಧ್ಯಾನ ಮಾಡುವುದೇ ತೀರ ಸರಳ ಪದ್ಧತಿಯೆಂದು ಅವರು ಬೋಧಿಸಿದರು. ನಮ್ಮ ಸಂಸ್ಥೆಯಲ್ಲಿ ಅದನ್ನೇ ಅನುಸರಿಸಲಾಗುತ್ತಿದೆ. ಬೇರೆ ಕಡೆಗೆ ಸಲಹೆ ಕೊಡಲಾಗುವಂತೆ ನಾಸಿಕಾಗ್ರದ ಮೇಲಾಗಲಿ, ಭೂಮಧ್ಯದ ಬಿಂದುವಿನ ಮೇಲಾಗಲಿ ಧ್ಯಾನ ಮಾಡುವುದೂ ಕೆಲಮಟ್ಟಿಗೆ ಸಾಧುವಾಗಿರಬಹುದು. ಆದರೆ ನನ್ನ ಅಭಿಪ್ರಾಯದಲ್ಲಿ ಹೃದಯದ ಮೇಲಿನ ಧ್ಯಾನವು ಅತ್ಯಂತ ಸರಳವೂ, ತುಂಬ ಪರಿಣಾಮಕಾರಿಯೂ ಆಗಿದೆ. ರಾಜಯೋಗದ ಪ್ರಭಾವ” ಎಂಬ ಪುಸ್ತಕದಲ್ಲಿ ಇದನ್ನು ಕುರಿತು ಸಾಕಷ್ಟು ಹೇಳಿದ್ದೇನೆ. ಉದ್ದೇಶವೇನೆಂದರೆ, ಇದುವರೆಗೂ ನಾವು ಬಹಿರ್ಮುಖಿಗಳಾಗಿದ್ದೇವೆ. ಈಗ ಮನಸ್ಸನ್ನು ಬಾಹ್ಯಪ್ರಪಂಚದಿಂದ ಒಳಗಡೆಗೆ ತಿರುಗಿಸಿ ಅಂತರ್ಮುಖಿಗಳಾಗಬೇಕು. ಈ ಪ್ರಯತ್ನದಲ್ಲಿ ಯಶಸ್ವಿಗಳಾದಾಗ ನಾವು ಸಹಜವಾಗಿಯೇ ಆಧ್ಯಾತ್ಮಿಕ ಅನುಭವಗಳನ್ನು ಪಡೆಯತೊಡಗುವೆವು. ಆಗ ಅಧ್ಯಾತ್ಮ ಮಾರ್ಗದಲ್ಲಿ ನಮ್ಮ ಮುನ್ನಡೆಯು ಅಡ್ಡಿ ಆತಂಕಗಳಿಲ್ಲದೆ ಸಾಗುವುದು. ಸಾಧನೆಯ ಬೇರೆ ವಿಧಾನಗಳು ಕೂಡ ಕೆಲಮಟ್ಟಿಗೆ ಸಹಾಯಕವಾಗಬಹುದು. ದರೆ ಎಲ್ಲಿಯವರೆಗೆ ನಾವು ಬಹಿರ್ಮುಖಿಗಳಾಗಿರುವೆವೋ ಅಲ್ಲಿಯವರೆಗೆ ನಮ್ಮ ದೃಷ್ಟಿಯು ಒಳಗಡೆಗೆ ತಿರುಗಲಾರದು. ಆದುದರಿಂದ ಅತ್ಯಂತ ಸಹಾಯಕಾರಿಗಳಾದ ವಿಧಾನಗಳೆಂದರೆ, ತೀರ ಸಹಜವೂ, ಸರಳವೂ, ಸ್ಥೂಲ ಪರಿಣಾಮಗಳಿಂದ ದೂರವಾದುವೂ ಆಗಿರಬೇಕು. ಸೂಕ್ಷ್ಮಕ್ಕಿಂತ ಸೂಕ್ಷ್ಮವಾದ ಆ ವಸ್ತುವನ್ನು ಪಡೆಯಬೇಕಾದರೆ ನಮ್ಮನ್ನು ಹಗುರ ಹಾಗೂ ಸೂಕ್ಷ್ಮಗೊಳಿಸುವ ವಿಧಾನಗಳು ಸ್ವಾಭಾವಿಕವಾಗಿಯೆ ನಮ್ಮ ದೃಷ್ಟಿ ಹರಿಯಬೇಕು. ಮಗುವಿನೊಂದಿಗೆ ಹುಡುಗಾಟ ಮಾಡುವಾಗ ನಾವು ಹೇಗೆ ಮುಗ್ಧರಂತೆ ವರ್ತಿಸುವೆವೋ ಅದೇ ಪ್ರಕಾರ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ನಾವು ದೇವರಂತೆಯೇ ಆಗಬೇಕು.

ಅಧ್ಯಾತ್ಮಕ್ಕೆ ಅಗತ್ಯವಾದ ಇನ್ನೊಂದು ಅಂಶವೆಂದರೆ ಮಿತತ್ವ. ಈ ಶಬ್ದಕ್ಕೆ ವಿಶಾಲವಾದ ಅರ್ಥವಿದೆ. ಮಿತತ್ವವೆಂದರೆ ಕೇವಲ ಎರಡನೆಯವರಿಗೆ ಪ್ರಿಯವಾಗುವಂತೆ ನಮ್ಮ ಜೀವನದ ಬಾಹ್ಯ ರೀತಿಗಳನ್ನು ತಿದ್ದಿಕೊಳ್ಳುವುದಷ್ಟೇ ಲ್ಲ. ಅದು ನಮ್ಮ ಎಲ್ಲ ಶಾರೀರಿಕ ಹಾಗೂ ಮಾನಸಿಕ ಕ್ರಿಯೆಗಳ ವಲಯವನ್ನು ಒಳಗೊಳ್ಳುತ್ತದೆ. ಯಾರೇ ಆಗಲಿ, ಎಷ್ಟೇ ಉನ್ನತ ಸಿದ್ದಿಗಳನ್ನು ಹೊಂದಿದ್ದರೂ ಮಿತತ್ವದ ವಿಷಯದಲ್ಲಿ ಸ್ವಲ್ಪವಾದರೂ ಕೊರತೆ ಇದ್ದರೆ ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕಾಲಿರಿಸಿಲ್ಲ ವೆಂದೇ ತಿಳಿಯಬೇಕೆಂದು ನಮ್ಮ ಪೂಜ್ಯ ಗುರುಗಳ ಅಭಿಪ್ರಾಯವಾಗಿದ್ದಿತು. ನಿಜವಾಗಿಯೂ ಮಿತತ್ವವೆಂದರೆ ನಮ್ಮ ಅಶಾಂತ ಮನಸ್ಸಿನ ವೃತ್ತಿಗಳು ಶಾಂತವಾಗುವ ಮಂಡಲದಲ್ಲಿ ನಾವು ಪ್ರವೇಶ ಪಡೆದಿದ್ದೇವೆಂದು ಅರ್ಥ. ಮಿಕ್ಕುದೆಲ್ಲ ನಾವು ಪರಿಭ್ರಮಿಸುತ್ತಿರುವ ಕ್ಷೇತ್ರದ ಅವಸ್ಥೆಗೆ ಸಂಬಂಧಪಟ್ಟುದೆಂದೇ ಭಾವಿಸಬೇಕು.

ಎಲ್ಲ ಮಂಡಲಗಳಲ್ಲಿಯೂ ಕೆಲವು ಗ್ರಂಥಿಗಳಿವೆ. ಸೃಷ್ಟಿಯನ್ನು ನಿರ್ಮಿಸಲು ಮೂಲದಿಂದ ಧಾರೆಗಳು ಪ್ರವಹಿಸಿದಾಗ ಆ ಸೆಳೆತಗಳು ಶಕ್ತಿಯ  ಕೇಂದ್ರಗಳಾದ ಗ್ರಂಥಿಗಳನ್ನು ನಿರ್ಮಿಸಿದುವು. ನಾವು ಈ ಧಾರೆಗಳನ್ನು ಎದುರಿಸಿ ಮೇಲೆ ಈಜುವಾಗ ಧ್ಯಾನ ಬಲದಿಂದ ಗ್ರಂಥಿಗಳು ಬಿಚ್ಚುತ್ತ ಹೋಗಿ ನಮ್ಮ ಮುನ್ನಡೆಯನ್ನು ಸುಗಮಗೊಳಿಸುವುವು. ಮುಂದೆ ಗ್ರಂಥಿಗಳ ಪ್ರಭಾವವು ಕಡಿಮೆಯಾಗಿರುವ ವಿಶುದ್ಧ ಕ್ಷೇತ್ರವನ್ನು ನಾವು ಪ್ರವೇಶಿಸುವೆವು. ಈ ರೀತಿ ನಾವು ಹಂತ ಹಂತವಾಗಿ ಮುಂದೆ ಹೋಗಿ ಮಾಯೆಯು ಸಂಪೂರ್ಣ ಇಲ್ಲದಂತಾದ ಬಿಂದುವನ್ನು ತಲುಪುವೆವು. ದೊಡ್ಡ ದೊಡ್ಡ ಋಷಿಗಳು ಸಾಮಾನ್ಯವಾಗಿ ಈ ಬಿಂದುವಿನವರೆಗೆ ಮಾತ್ರ ತಲುಪಿದ್ದಾರೆ. ಆದರೆ ಮುಂದೆ ಇನ್ನೂ ಬಹಳ ಇದೆ. ಆಧ್ಯಾತ್ಮಿಕ ದೃಷ್ಟಿಯಿಂದ ಹೇಳುವುದಾದರೆ ನಾವು ಕೇವಲ ಐದನೆಯ ವೃತ್ತವನ್ನು ಮಾತ್ರ ಕ್ರಮಿಸಿದ್ದೇವೆ (ಸತ್ಯೋದಯದಲ್ಲಿ ಕೊಟ್ಟ ರೇಖಾ ಚಿತ್ರ ; ಪುಟ ೧೯) ಮುಂದೆ ಇನ್ನೂ ಹನ್ನೊಂದು ವೃತ್ತಗಳು ಉಳಿದುವು. ಆ ಎಲ್ಲ ಹದಿನಾರು ವೃತ್ತಗಳನ್ನು ದಾಟಿದಾಗ ‘ರಾಜಯೋಗದ ಪ್ರಭಾವ’ದಲ್ಲಿ ಹೇಳಿದಂತೆ, ನಾವು ಕೇಂದ್ರ ಮಂಡಲವನ್ನು ಪ್ರವೇಶಿಸುವೆವು. ಇಲ್ಲಿಯವರೆಗೆ ಈ ಮಂಡಲದಲ್ಲಿ ಶರೀರ ಸಹಿತವಾಗಿ ಪ್ರವೇಶ ಪಡೆಯುವುದು ಸಾಧ್ಯವಿದ್ದಿಲ್ಲ. ಆದರೆ ನಮ್ಮ ಗುರುಗಳ ಅದ್ಭುತ ಸಂಶೋಧನದಿಂದಾಗಿ ಈಗ ಅದು ಸಾಧ್ಯವಾಗಿದೆ. ಜನರು ಇದನ್ನು ನಂಬಲಿಕ್ಕಿಲ್ಲ. ಆದರೆ, ಪ್ರಯತ್ನ ಪಟ್ಟರೆ ಈ ಅವಸ್ಥೆಯನ್ನು ಪ್ರತ್ಯಕ್ಷ ಅನುಭವಿಸಬಹುದು. ಅದಕ್ಕಾಗಿ ಪ್ರಾಣಾಹುತಿಯ ಬಲದಿಂದ ಕ್ಷಣಕಾಲವಾದರೂ ಈ ಅವಸ್ಥೆಯ ದರ್ಶನವನ್ನು ಮಾಡಿಸುವ ನಿಜವಾದ ಯೋಗ್ಯತೆಯ ಗುರುವಿನ ಸಹಾಯ ಮಾತ್ರ ಅಗತ್ಯವಾಗಿ ಬೇಕು.

ಭಕ್ತಿಯನ್ನು ಕುರಿತು ಹೇಳುವುದಾದರೆ, ಜನರು ಭಕ್ತಿಯೆಂದು ತಿಳಿದುಕೊಂಡುದು ನಿಜಾರ್ಥದಲ್ಲಿ ಕೇವಲ ಸುಳ್ಳು ಪ್ರಶಂಸೆ ವಸ್ತುತಃ ಭಕ್ತಿಯೆಂಬುದು ಮಿಥ್ಯಾಪ್ರಶಂಸೆಗಿಂತ ತೀರ ಭಿನ್ನವಾಗಿದೆ. ಅದು ಈಶ್ವರನನ್ನು ಕುರಿತಾದ ಅಚಲ ಹಾಗು ಅನನ್ಯ ಆಸಕ್ತಿ. ಕೆಲವರು ‘ಪ್ರೇಮ ಯಾತನೆ’ ಎಂದು ಕರೆಯಲಾಗುವ ವೇದನೆಯನ್ನು ಅನುಭವಿಸುವರು. ಇವರು ಮಿಥ್ಯಾಪ್ರಶಂಸೆಯ ಮಟ್ಟಕ್ಕಿಂತ ಸ್ವಲ್ಪ ಮೇಲೆ ಇರುವರೆಂಬುದು ನಿಜ. ಒಂದು ಹುಣ್ಣಿನ ಚುಚ್ಚುನೋವೆಂದು ಅದನ್ನು ವರ್ಣಿಸುವುದೇ ಯುಕ್ತವಾದೀತು. ಏಕೆಂದರೆ ಅದರಲ್ಲಿ ಭಗವಂತನ ಸ್ಮರಣೆ ಇರುವುದಿಲ್ಲ. ಎಂದಮೇಲೆ ನಮ್ಮ ಗವದ್ಭಕ್ತಿಯು ಅಪೇಕ್ಷಿತ ಮಟ್ಟದಲ್ಲಿ ಇಲ್ಲವೆಂದಾಯಿತು. ಇಂಥ ನೋವಿನ ನಿವಾರಣೋಪಾಯವೆಂದರೆ ವಿಷದ್ರವ್ಯವನ್ನೆಲ್ಲ ಹೊರಕ್ಕೆ ತರುವಂತಹ ಶಸ್ತ್ರಕ್ರಿಯೆ. ಇಲ್ಲದಿದ್ದರೆ, ಕಾಲ ಕಳೆದಂತೆ ಆ ಹುಣ್ಣು ಹಳೆಯದಾಗಿ ಎಲ್ಲ ಚಿಕಿತ್ಸೆಯನ್ನೂ ಮೀರಿ ನಿಲ್ಲುವ ಸಂಭವವಿದೆ. ಇಲ್ಲಿ ವಿಷದ್ರವ್ಯವೆಂದರೆ ದುಷ್ಟ ಸಂಸರ್ಗದಿಂದ ನಮ್ಮ ದೇಹದಲ್ಲಿ ಸೇರಿದ ದೈವಿಕತೆಗೆ ವಿರುದ್ಧವಾದ ಅಂಶಗಳು. ಒಟ್ಟು ತಾತ್ಪರ್ಯವೇನೆಂದರೆ ನಾವು ಪೂಜೆಗಾಗಲಿ, ಧ್ಯಾನಕ್ಕಾಗಲಿ ಕೈಕೊಳ್ಳುವ ಉಪಾಯಗಳು ನಮ್ಮ ಹೃದಯದಲ್ಲಿ ನಿಜವಾಗಿಯೂ ಈಶ್ವರಾನುರಾಗವನ್ನು ಹುಟ್ಟಿಸುವಂಥದ್ದಿರಬೇಕು.

ದೈವೀ ಭಕ್ತಿಯನ್ನು ಬೆಳೆಸಿಕೊಳ್ಳಲು ಅನೇಕ ಉಪಾಯಗಳಿವೆ. ಅದಕ್ಕಾಗಿ, ಸಖ್ಯಭಾವ, ವಾತ್ಸಲ್ಯಭಾವ, ಸ್ವಾಮಿ ಸೇವಕ ಭಾವ ಮುಂತಾದ ವಿವಿಧ ಭಾವನೆಗಳನ್ನು ಆಶ್ರಯಿಸಲಾಗುತ್ತದೆ. ಆದರೆ ನನ್ನ ಅಭಿಪ್ರಾಯದಲ್ಲಿ ದೇವರನ್ನು ಪ್ರಿಯತಮನೆಂದು ಭಾವಿಸುವುದು ಹೆಚ್ಚು ಒಳ್ಳೆಯದು, ಮತ್ತು ಅನುಕೂಲ. ನಮ್ಮನ್ನು ಪ್ರೇಮಿಯೆಂದೂ, ಮತ್ತು ದೇವರನ್ನು ಪ್ರಿಯತಮನೆಂದೂ ಭಾವಿಸಿ ಮುಂದುವರಿದದ್ದಾದರೆ, ತತ್ಪರಿಣಾಮವಾಗಿ ಕಾಲಕ್ರಮದಲ್ಲಿ ದೇವರೇ ಪ್ರೇಮಿಯಾಗಿ, ನಾವು ಪ್ರಿಯತಮರಾಗುವೆವು. ಇದು ಧ್ಯಾನದ ತುರೀಯಾವಸ್ಥೆ. ಆದರೆ ಈ ಅವಸ್ಥೆಯಲ್ಲಿ ನಾವು ಗುರಿಯನ್ನು ಮುಟ್ಟಿರುವೆವೆಂದು ಭಾವಿಸಿದರೆ ತಪ್ಪಾಗುವುದು. ಮುಂದೆ ಎಷ್ಟು ಉಳಿಯಿತೆಂಬುದನ್ನು ಶಬ್ದಗಳಿಂದ ವರ್ಣಿಸಲು ಶಕ್ಯವಿಲ್ಲ. ಅದನ್ನು ಪ್ರತ್ಯಕ್ಷವಾಗಿ ಅನುಭವಿಸಿಯೇ ಅರಿಯಬೇಕು. ಆಧ್ಯಾತ್ಮಿಕ ಪ್ರಗತಿಯಲ್ಲಿ ಅತ್ಯಂತ ಸಹಾಯಕವಾಗುವ ಸಂಗತಿಗಳನ್ನು ತಿಳಿಯಪಡಿಸಲೆಂದೇ ಇದನ್ನೆಲ್ಲ ಹೇಳುತ್ತಿದ್ದೇನೆ.

ಆದರೆ, ದುರ್ದೈವದಿಂದ ಚರಮಗುರಿಯ ಮಟ್ಟ ಇಂದು ತೀರ ಕೆಳಗೆ ಕುಸಿದಿದೆ. ಭಕ್ತಿಯು ಅಗ್ಗವಾಗಿ ತನ್ನ ನಿಜವಾದ ಮೂಲ್ಯವನ್ನು ಕಳೆದುಕೊಂಡಿದೆ. ಕಣ್ಣುಗಳನ್ನು ವಿಶಿಷ್ಟ ರೀತಿಯಲ್ಲಿ ಹೊರಳಿಸುವುದೇ ಭಕ್ತಿಯೆಂದೂ, ಅದರ ನುಭವವೇ ಸರ್ವೋಚ್ಛ ಸಿದ್ದಿಯೆಂದೂ ಭಾವಿಸಲಾಗುತ್ತಿದೆ. ನನಗೆ ತಿಳಿದ ಮಟ್ಟಿಗೆ ಈ ಕಾಲದಲ್ಲಿ ಗುರುವಾಗಲು ಇಷ್ಟು ಸಾಕು. ಕಾಲ ಕೆಟ್ಟುಹೋಗಿದೆ, ಅದರಂತೆ ನಾವೂ ಕೆಟ್ಟಿದ್ದೇವೆ. ಅಧಃಪತನವು ಆರಂಭವಾಗಿ ಜನರ ಮನಸ್ಸನ್ನು ಸನ್ಮಾರ್ಗದಿಂದ ವಿಮುಖಗೊಳಿಸುತ್ತಿದೆ. ಅವರ ಮನಸ್ಸು ಯಾವಾಗ ಕಲುಷಿತಗೊಂಡಿತೋ ಗ ಪತನದ ಕಲ್ಪನೆಯು ಅವರ ಮನಸ್ಸನ್ನು ಆಕ್ರಮಿಸಿತು. ಆದರೆ ಪತನ ಹೊಂದಿದ ಸ್ಥಿತಿಯಲ್ಲಿ ಅವರು ತಪ್ಪಾದುದನ್ನೇ ಸರಿಯೆಂದು ಭಾವಿಸುತ್ತ ನಡೆದರು. ಜೀವನದ ಸಮಸ್ಯೆಗಳನ್ನು ಬಿಡಿಸಲು ಅದೇ ಸರಿಯಾದ ಉಪಾಯವೆಂದು ಬಗೆದರು. ಅದಕ್ಕೆ ಬಣ್ಣ ಕೊಟ್ಟು ಜನಕ್ಕೆ ಬೋಧಿಸಿದರು. ಅದನ್ನೇ ಒಪ್ಪಿಕೊಂಡು ಅನುಸರಿಸುವಂತೆ ಒತ್ತಾಯಪಡಿಸಿದರು. ಅಂಥವರಲ್ಲಿ ಒಬ್ಬರಲ್ಲಾದರೂ ಒಂದು ಬೆಳಕಿನ ರೇಖೆ ಕೂಡ ಕಾಣಬರಲಿಲ್ಲ. ನೀತಿಯ ಪ್ರಜ್ಞೆಯು ಎಷ್ಟರ ಮಟ್ಟಿಗೆ ಕ್ಷಯಿಸಿಹೋಯಿತೆಂದರೆ ಸಾರಾಸಾರ ವಿವೇಕವು ಹೊರಟುಹೋಯಿತು. ಅಸೂಯೆ ಪ್ರಬಲವಾಗಿ ಪರಸ್ಪರ ಕಲಹಗಳು ತಲೆಯೆತ್ತಿವೆ. ದೊಂಬಿಯನ್ನೆಬ್ಬಿಸುವುದೇ ಧರ್ಮವೆಂದು ಪರಿಗಣಿಸಲಾಗುತ್ತಿದೆ. ಎಲ್ಲ ಕಡೆಗೂ ಇದಕ್ಕೆ ಬೇಕಾದಷ್ಟು ನಿದರ್ಶನಗಳು ದೊರೆಯುತ್ತವೆ. ಕೆಲವರು ದೇವರು ಸಾಕಾರನೆಂಬ ವಿಚಾರವನ್ನು ಪ್ರತಿಪಾದಿಸುತ್ತಾರೆ. ಮತ್ತೆ ಕೆಲವರು ನಿರಾಕಾರದ ಬಗ್ಗೆ ಹೇಳುತ್ತಾರೆ. ಇನ್ನೂ ಕೆಲವರು ಸಗುಣ ಅಥವಾ ನಿರ್ಗುಣನೆಂದು ವಾದಿಸುತ್ತಾರೆ. ಈ ವಿಷಯವನ್ನು ಕುರಿತು ತೀಕ್ಷ್ಯ ಚರ್ಚೆಗಳು ನಡೆದು ಪರಸ್ಪರ ಹಗೆತನದ ಭಾವನೆಗಳನ್ನು ಹುಟ್ಟಿಸುವುದರಲ್ಲಿ ಕೊನೆಗೊಳ್ಳುತ್ತವೆ. ಅದರ ಪರಿಣಾಮವಾಗಿ ವಿದ್ವೇಷ ಹುಟ್ಟಿಕೊಳ್ಳುತ್ತದೆ. ನನ್ನ ಅಭಿಪ್ರಾಯದಂತೆ ಸಗುಣ ಹಾಗು ನಿರ್ಗುಣ ಇವೆರಡೂ ವಿಚಾರಗಳನ್ನು ಪ್ರತಿಪಾದಿಸುವವರು ಪರಸ್ಪರ ಎಷ್ಟೇ ಸ್ಪರ್ಧಿಸಿದರೂ ಅವರಿಬ್ಬರ ದೃಷ್ಟಿಗಳೂ ದೋಷಯುಕ್ತವಾಗಿವೆ. ಅವರಲ್ಲಿ ಒಬ್ಬರಾದರೂ ಧೈಯಸಿದ್ದಿಯನ್ನು ಪಡೆದಿಲ್ಲ. ನಿಜವಾಗಿ ಅವು ಸಾಕ್ಷಾತ್ಕಾರವೆಂಬ ಒಂದೇ ಗುರಿಯ ಎರಡು ಮಾರ್ಗಗಳು. ಅಂತರ ಕೇವಲ ಇಷ್ಟೆ : ಸಗುಣಕ್ಕೆ ಬಲವಾಗಿ ಅಂಟಿಕೊಂಡು ಅನುಸರಿಸುವವರ ದೃಷ್ಟಿಗೆ ಅನಂತವು ಎಂದಿಗೂ ಗೋಚರವಾಗಲಾರದು. ಒಂದು ರೀತಿಯಲ್ಲಿ ಅವರು ವಾಯುವಿನ ತೇವವನ್ನು ಘನೀಕರಿಸಿ ಮಂಜುಗಡ್ಡೆಯನ್ನಾಗಿ ಮಾಡಿದ್ದಾರೆನ್ನಬಹುದು. ಈಗ ಈ ಮಂಜುಗಡ್ಡೆಯು ಸಮುದ್ರದಲ್ಲಿ ಜಾರಿಹೋದರೆ, ಹಡಗುಗಳು ಅದಕ್ಕೆ ಅಪ್ಪಳಿಸಿ ಮುಳುಗಿಹೋಗಬಹುದು. ಇದೇ ರೀತಿ ನಿರ್ಗುಣವೇ ಸರ್ವೋಪಯುಕ್ತವೆಂದು ಭಾವಿಸಿ ಕೊನೆಯವರೆಗೂ ಅದಕ್ಕೇ ಅಂಟಿಕೊಳ್ಳುವವರ ಸ್ಥಿತಿಯೂ ಅಷ್ಟೇ ಆಗುವುದು. ಅವರ ಬಂಡೆಗಲ್ಲು ಸ್ವಲ್ಪ ಮುಂದಕ್ಕೆ ಹೋಗಿರಬಹುದು, ಅಷ್ಟೇ ವ್ಯತ್ಯಾಸ, ನಿಜಹೇಳುವುದಾದರೆ ದೇವರು ಸಗುಣನೂ ಅಲ್ಲ, ನಿರ್ಗುಣನೂ ಅಲ್ಲ. ಇವೆರಡರ ಆಚೆಗಿದ್ದಾನೆ. ಅವನು ಏನಿದ್ದಾನೋ ಇದ್ದಾನೆ. ಹಾಗಾದರೆ ಈ ರಹಸ್ಯವನ್ನು ಭೇದಿಸುವ ಉಪಾಯವೇನು ? ನಮ್ಮ ದೃಷ್ಟಿಯನ್ನು ಪರಬ್ರಹ್ಮದ ಮೇಲೆ ನಿಶ್ಚಲವಾಗಿ ನಿಲ್ಲಿಸುವುದೊಂದೇ ಅದಕ್ಕೆ ಸರಿಯಾದ ಪರಿಹಾರ. ಅದು ಸಗುಣವಿರಲಿ, ನಿರ್ಗುಣವಿರಲಿ, ಅವೆರಡೂ ಅಲ್ಲದಿರಲಿ ; ಅದರ ಬಗ್ಗೆ ಪ್ರೇಮವನ್ನು ಬೆಳೆಸಿಕೊಳ್ಳಬೇಕು.

ಈಗ ಸಾಕ್ಷಾತ್ಕಾರದ ಸಮಸ್ಯೆಯೊಂದೇ ಉಳಿಯಿತು. ಸಾಕ್ಷಾತ್ಕಾರವೆಂದರೆ ಸಾಮಾನ್ಯವಾಗಿ ಜನರು ಶಂ, ಚಕ್ರ, ಗದಾ, ಪದ್ಮಧಾರಿಯಾದ ವಿಷ್ಣುವಿನ ಆಕಾರದ ಮಾನಸಿಕ ದರ್ಶನವೆಂದು ಭಾವಿಸುತ್ತಾರೆ. ಆದರೆ, ನನಗೆನಿಸುವ ಮಟ್ಟಿಗೆ ಇಂತಹ ದರ್ಶನವು ಪೂಜಕನ ಸ್ಕೂಲ ಮನೋವೃತ್ತಿಯ ಪರಿಣಾಮವಾಗಿದೆ. ಆತನ ಸೂಕ್ಷ್ಮ ಶರೀರವೇ ಆತನಿಗೆ ಆ ರೂಪದಲ್ಲಿ ಕಾಣಿಸುತ್ತದೆ. ಏಕೆಂದರೆ, ಧ್ಯಾನಕ್ಕಾಗಿ ಆತನು ಅದೇ ರೂಪವನ್ನೇ ಕಲ್ಪಿಸಿಕೊಂಡಿದ್ದನು. ಆದರೆ ರಾಜಯೋಗದಲ್ಲಿ ಸಾಧನೆಯ ಪರಿಣಾಮವಾಗಿ ಬೆಳೆದು ಬರುವ ಮನಃಸ್ಥಿತಿ ತೀರ ಭಿನ್ನವಾಗಿರುತ್ತದೆ. ಆ ಅವಸ್ಥೆಯಲ್ಲಿ ಆತನು ಎಲ್ಲ ಕಡೆಗೂ ಎಲ್ಲ ವಸ್ತುಗಳಲ್ಲಿಯೂ ದೈವೀಶಕ್ತಿಯ ವಿರ್ಭಾವವನ್ನು ಅನುಭವಿಸುತ್ತಾನೆ. ಅದು ಆತನಲ್ಲಿ ಸಮಾಧಿಯ ಸ್ಥಿತಿಯನ್ನು ಉಂಟುಮಾಡುತ್ತದೆ. ದಿವ್ಯದರ್ಶನದ ನಿಜ ಸ್ಥಿತಿ ಹೀಗಿದೆ. ಜನರು ಅದರ ಕಡೆಗೆ ದೃಷ್ಟಿ ಹರಿಸಿ ಸ್ವತಃ ಅನುಭವ ಪಡೆಯಲಿ.

ದರ್ಶನದ ಸ್ಥಿತಿಯನ್ನು ಪಡೆಯುವುದೆಂದರೆ ಪರಿಪೂರ್ಣತೆ ಅಲ್ಲ. ಅದು ಈಶ್ವರನ ಕಡೆಗಿನ ಮೊದಲನೆಯ ಹೆಜ್ಜೆ. ನಾವು ಮುಂದೆ ಎಷ್ಟು ನಡೆಯಬೇಕು, ಎಷ್ಟೆಷ್ಟು ಅವಸ್ಥೆಳೊಳಗಿಂದ ಹಾಯ್ದು ಹೋಗಬೇಕು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ‘ಭೂಮಾ’ದಲ್ಲಿ ಅಥವಾ ಕೈವಲ್ಯದಲ್ಲಿ ಲೀನವಾಗುವುದು ನಮ್ಮ ಅಂತಿಮಗುರಿಯೆಂದಿಟ್ಟುಕೊಂಡಾಗ, ಈ ದರ್ಶನದ ಸ್ಥಿತಿಯು ಕೊನೆಯದೆಂದು ಎಷ್ಟರ ಮಟ್ಟಿಗೂ ಭಾವಿಸಲು ಬರುವುದಿಲ್ಲ. ಒಂದು ರೀತಿಯಲ್ಲಿ ನಾವಿನ್ನೂ ಮನರಂಜನೆಯ ಸ್ಥಿತಿಯಲ್ಲಿದ್ದೇವೆ. ಮಗು ತನ್ನ ಹೊಸ ಆಟಿಕೆಗಳೊಂದಿಗೆ ಹೇಗೆ ಮಗ್ನವಾಗುವುದೋ ಹಾಗೆ ಆ ಅವಸ್ಥೆಯ ಪರಿಣಾಮಗಳನ್ನು ಸವಿಯುತ್ತ ಸಂತೋಷಪಡುವುದರಲ್ಲಿಯೇ ಇದ್ದೇವೆ. ನಿಮ್ಮ ಹೃಯದ ದೃಷ್ಟಿಯಿಂದ ಆ ಕಡೆಗೆ ನೋಡಿದ್ದಾದರೆ, ನಿಮಗೆ ಸುಲಭವಾಗಿ ಅದರ ಸತ್ಯತೆಯ ಅರಿವಾಗಬಹುದು. ನಾನು ಅದನ್ನು ಮನರಂಜನೆ’ಯೆಂದು ಕರೆಯಲು ಕಾರಣವೆಂದರೆ, ಅಭ್ಯಾಸಿಯು ಒಂದು ಕ್ಷಣವೇ ಆಗಲಿ, ಅದರಿಂದ ದೂರವಾಗಿದ್ದರೂ ಅಸಮಾಧಾನವನ್ನನುಭವಿಸುವನು. ನಮ್ಮಲ್ಲಿ ಅನೇಕರು ಮಾಡುವ ಪೂಜೆಯ ಹಿಂದೆಲ್ಲ ಸುಖಾನುಭವದ ಭಾವನೆ ಇರುತ್ತದೆ. ಎಂದಮೇಲೆ ಅದು ಕೌತುಕವೇ ಹೊರತು ಬೇರೆ ಏನೂ ಅಲ್ಲ. ಮನರಂಜನೆಯ ಮೂಲಗಳು ಬೇರೆ ಬೇರೆ ಆಗಿವೆ. ಮಗುವಿಗೆ ಆಟಿಕೆಗಳು ; ಪಂಡಿತರಿಗೆ ಅಧ್ಯಯನ ; ಪೂಜಕನಿಗೆ ಅಭ್ಯಾಸ ಮತ್ತು ಸಾಧನೆ ; ಭಕ್ತನಿಗೆ ಭಾವಾವೇಶದ ಪ್ರೇಮ, ಸಾಕ್ಷಾತ್ಕಾರ ಹೊಂದಿದವನಿಗೆ ಸಾಕ್ಷಾತ್ಕಾರ ಮತ್ತು ಲಯ ; ಹಾಗೂ ಪರಿಪೂರ್ಣತೆಯನ್ನು ಹೊಂದಿದವನಿಗೆ ಆತನ ‘ಅಜ್ಞಾನ’ದ ಸ್ಥಿತಿ. ಆದರೆ, ಇಲ್ಲಿಯವರೆಗೆ ಇವೆಲ್ಲವೂ ಉದ್ದೇಶರಹಿತವಾದ ಕೌತುಕಕ್ಕಾಗಿಯೇ ಇವೆ. ಸತ್ಯವು ಇನ್ನೂ ಇವುಗಳ ಆಚೆಗಿದೆ. ನಾವು ಈ ಸ್ಥಿತಿಗಳನ್ನೆಲ್ಲ ದಾಟಿ ಹೋಗಬೇಕು. ಜನರು ಈ ಕೌತುಕಗಳನ್ನೇ ಸತ್ಯವೆಂದು ಭಾವಿಸಿ ಅವುಗಳಲ್ಲಿ ಸಿಕ್ಕಿಬಿದ್ದು ಸಾಧನೆಯನ್ನು ನಿಲ್ಲಿಸುವುದು ಶೋಚನೀಯ. ಇದು ಅರಿಷಿಣದ ಬೇರು ಸಿಕ್ಕಿದಾಕ್ಷಣ ತಾನು ದೊಡ್ಡ ಗಂದಿಗೆಯ ವ್ಯಾಪಾರಿಯೆಂದು ತಿಳಿದುಕೊಂಡಂತೆ.

ಸತ್ಯವು ಏನಿರಬಹುದೆಂಬುದನ್ನು ಶಬ್ದಗಳಿಂದ ವರ್ಣಿಸುವುದು ಬಹಳ ಕಠಿಣ, ತಿಳಿವಳಿಕೆಗಾಗಿ, ಅದು ಎಲ್ಲ ಆಧ್ಯಾತ್ಮಿಕ ಅವಸ್ಥೆಗಳ ಕೊನೆಯೆಂದು ಹೇಳಬಹುದು. ಆಗಲೂ ಅದು ಸತ್ಯದ ಆರಂಭ ಮಾತ್ರ. ಮುಂದೆ ದೂ ಇಲ್ಲದಂತಾಗಿ ಅದರ ಸ್ಮರಣೆಯೂ ಹಿಂದಕ್ಕೆ ಸರಿಯುವುದು. ಆಗ ನಾವು ಕೊನೆಯಿಲ್ಲದೆ ಈಜುತ್ತ ಹೋಗುವ ಘಟ್ಟವನ್ನು ತಲುಪುವೆವು. ಆ ಅನಂತದ ಅವಸ್ಥೆಯನ್ನು ಅನುವಿಸಲು ಉತ್ಸುಕರಾಗಿರುವವರು ತಮ್ಮ ಎಲ್ಲ ಭಾವನೆಗಳ ಪರಿಣಾಮಗಳನ್ನೂ ಬದಿಗಿರಿಸಿ ಅದರಲ್ಲಿ ಕಾಲಿರಿಸಬೇಕೆಂದು ನಾನು ಸೂಚಿಸುತ್ತೇನೆ.

ಮೇಲೆ ಹೇಳಿದುದನ್ನೆಲ್ಲ ಸ್ವಪ್ರಯತ್ನದಿಂದ ಸಾಧಿಸುವುದು ಬಹಳ ಕಠಿಣ. ಏಕೆಂದರೆ, ನಾವು ಮೇಲೆ ಮೇಲೆ ಹೋದಂತೆಲ್ಲ ನಿಸರ್ಗದ ಶಕ್ತಿಯು ಸೂಕ್ಷ್ಮವಾಗುತ್ತಹೋಗುವುದು. ದುದರಿಂದ ಸ್ವಪ್ರಯತ್ನದಿಂದ ಆರೋಹಣವು ಬಹಳ ಕಠಿಣವಾಗುವುದು. ಈ ಸ್ಥಿತಿಯಲ್ಲಿ ತನ್ನ ಸ್ವಂತ ಶಕ್ತಿಯಿಂದ ಅಭ್ಯಾಸಿಯನ್ನು ಮೇಲಕ್ಕೆ ತಳ್ಳಬಲ್ಲ ಯೋಗ್ಯ ಗುರುವಿನ ಆಸರೆ ಅಗತ್ಯವಾಗಿ ಬೇಕು. ಆದರೆ ನನ್ನ ಅಭಿಪ್ರಾಯದಲ್ಲಿ, ಗುರುವಿನ ಶಕ್ತಿಯಿಂದ ಮೇಲಕ್ಕೆ ತಳ್ಳಲ್ಪಟ್ಟಾಗಲೂ, ತನ್ನ ನಿಲುಗಡೆಗಾಗಿ ಶಕ್ತಿಯನ್ನು ಉಪಯೋಗಿಸದಿದ್ದ ಪಕ್ಷದಲ್ಲಿ ಆತನು ಜಾರಿ ಬೀಳುವ ಭಯವಿರುತ್ತದೆ. ಒಮ್ಮೆ ನಾನು ನನ್ನ ಜೊತೆಗಾರನೊಬ್ಬನನ್ನು ಮೇಲಕ್ಕೆಳೆದು ಬಹ್ಮಾಂಡಮಂಡಲದ ನಾಲ್ಕನೆಯ ಅವಸ್ಥೆಯನ್ನು ದಾಟಿಸಿ, ನಾನೇ ಆ ಸ್ಥಿತಿಯಲ್ಲಿ ಹೋಗಿ ಪ್ರಯೋಗದ ಮೂಲಕ ಪರೀಕ್ಷಿಸಿದೆ. ಸ್ವಪ್ರಯತ್ನದಿಂದ ಅದರ ಮುಂದಿನ ಸ್ಥಿತಿಯನ್ನು ಹೊಂದಲು ಒಂದು ಸಾವಿರ ವರ್ಷಗಳು ಬೇಕಾಗುವುದೆಂದು ತಿಳಿದು ಬಂತು, ಮತ್ತು ಅದಕ್ಕೂ ಆಚೆಗೆ ಹೋಗಲು ಐದು ಸಾವಿರ ವರ್ಷಗಳು ಬೇಕಾಗುವುವು ! ಆಧ್ಯಾತ್ಮಿಕ ಸ್ಥಿತಿಗಳು ಅಗಣಿತವಾಗಿರುವುದರಿಂದ ಅವುಗಳನ್ನು ದಾಟಲು ಸಮಯವಾದರೂ ಅಪರಿಮಿತವಾಗಿ ಬೇಕಾಗುವುದು. ಈ ಅವಧಿಯನ್ನು ಕಡಿಮೆ ಮಾಡಿ, ಸಾವಿರಾರು ವರ್ಷಗಳ ಮಾರ್ಗವನ್ನು ಒಂದೇ ಜೀವಮಾನದಲ್ಲಿ ಕ್ರಮಿಸಲು ಪ್ರಾಣಾಹುತಿಯ ಬಲದಿಂದ ಮಾತ್ರ ಸಾಧ್ಯ. ಆದರೆ ಅಂತಿಮ ಯಶಸ್ಸನ್ನು ನಿಶ್ಚಿತಗೊಳಿಸಲು ಕೊನೆಯ ಗುರಿಯು ಯಾವಾಗಲೂ ಕಣ್ಣೆದುರಿಗೆ ಇರಬೇಕು.

ಈ ಕೊನೆಯ ಗುರಿಯನ್ನು ದೃಷ್ಟಿಯಲ್ಲಿಟ್ಟುಕೊಳ್ಳದೆ, ನಾವು ಸಾಧನೆ ಮಾಡುತ್ತ ಹೋದರೆ, ಗಮ್ಯಸ್ಥಾನದ ಕಲ್ಪನೆ ಇಲ್ಲದೆ ದಾರಿ ನಡೆಯುವ ಪಥಿಕನಂತೆ ನಮ್ಮ ಸ್ಥಿತಿಯಾಗುತ್ತದೆ. ಮುಟ್ಟಬೇಕಾದ ನೆಲೆಯನ್ನು ಯಾವಾಗಲೂ ಕಣ್ಣೆದುರಿನಲ್ಲಿ ಇಟ್ಟುಕೊಳ್ಳುವುದರಿಂದಲೇ ಅಧ್ಯಾತ್ಮಮಾರ್ಗದ ಜ್ಞಾನ ಉಂಟಾಗುವುದು.

ಇನ್ನು ಮಾರ್ಗದ ಮೇಲೆ ನಮ್ಮನ್ನು ದೃಢಗೊಳಿಸುವ ಸಂಗತಿ ಯಾವುದು ? ನಮ್ಮನ್ನು ಮುಂದಕ್ಕೆ ತಳ್ಳಿ ಕೊನೆಯವರೆಗೂ ನಮಗೆ ಸಹಾಯ ಮಾಡುತ್ತ ಮಾರ್ಗದರ್ಶನ ಮಾಡುವ ಶಕ್ತಿ ಯಾವುದು ? ಅದು, ನಾವು ಕೆಟ್ಟುದೆಂದೂ, ನೀಚವೆಂದೂ ಕರೆಯುವ ನಮ್ಮ ಮನಸ್ಸೇ. ಅದನ್ನು ತಿ ಕ್ರಿಯಾಶೀಲ, ಅಸ್ಥಿರ ಹಾಗು ಚಂಚಲವನ್ನಾಗಿ ಮಾಡಿ ನಾವೇ ಕೆಡಿಸಿದ್ದೇವೆ. ಅದಲ್ಲದಿದ್ದರೆ, ಉನ್ನತ ಅವಸ್ಥೆಗಳ ಎಲ್ಲ ಸೂಕ್ಷಾನುಭವಗಳನ್ನೂ ನಮಗೆ ಒದಗಿಸಿ ದೈವೀ ಆಜ್ಞೆಗಳನ್ನು ತಿಳಿಯಪಡಿಸುವ ಸಾಧನ ಅದೊಂದೇ ನಮ್ಮಲ್ಲಿರುವುದು. ವಿಕೃತ ಸ್ಥಿತಿಯಲ್ಲಿ ಅದು ಚಿತ್ತಭ್ರಮೆಗಳನ್ನು ಹುಟ್ಟಿಸುವುದೆಂಬುದೇನೋ ನಿಜ. ಅವನ್ನೇ ಪ್ರಗತಿಯ ಅವಸ್ಥೆಗಳೆಂದು ತಪ್ಪಾಗಿ ಭಾವಿಸಲಾಗುತ್ತದೆ. ಇಂಥ ದುರ್ದಶೆ ಹೊಂದಿದ ಕೆಲವರನ್ನು ನಾನು ಕಂಡಿದ್ದೇನೆ. ಅಕಸ್ಮಾತ್ತಾಗಿ ಅವರಲ್ಲಿ ಯಾರಿಗಾದರೂ ಅಧ್ಯಾತ್ಮದಲ್ಲಿ ಆಸ್ಥೆಯಿದ್ದರೆ ಸಾಕು, ಅವರ ಮನಸ್ಸಿನ ಅಗಡತನಕ್ಕೆ ಮಿತಿಯೇ ಉಳಿಯುವುದಿಲ್ಲ. ಏಕೆಂದರೆ ಅಂಥ ಚಿತ್ತಭ್ರಮೆಗಳನ್ನು, ಅದು ಉನ್ನತಾತ್ಮರೊಂದಿಗಿನ ಅಥವಾ ದೇವತೆಗಳೊಂದಿಗಿನ ಸಂಪರ್ಕವೆಂದು ಭಾವಿಸಿ ದೈವೀ ಆಜ್ಞೆಗಳನ್ನು ಪಡೆಯುತ್ತಿರುವುದಾಗಿ ಪ್ರತಿಪಾದಿಸಬಹುದು. ಆದರೆ ಮನಸ್ಸನ್ನು ಪರಿಶುದ್ದ ಸ್ಥಿತಿಗೆ ತಂದುದಾದರೆ ಈ ರೀತಿ ದಾರಿ ತಪ್ಪಲು ಎಂದಿಗೂ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ, ಮಾನವನ ಮನಸ್ಸಿನ ಉತ್ಪತ್ತಿಯ ಬಗ್ಗೆ ನನ್ನದೇ ಆದ ಸಂಶೋಧನೆಯನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.

ಸೃಷ್ಟಿ ನಿರ್ಮಾಣದ ಸಮಯ ಬರಲು ಕೇಂದ್ರದ ಕೆಳಗಿನ ವಲಯದಲ್ಲಿ ಒಂದು ಕ್ಲೋಭವುಂಟಾಯಿತು. ಅದೇ ಸೃಷ್ಟಿಗೆ ಬುನಾದಿಯಾಯಿತು. ಅದು ಆಗ ಪರಿಪೂರ್ಣ ಸ್ಥಿತಿಯಲ್ಲಿದ್ದಿತು. ಏಕೆಂದರೆ ದೇವರ ನಂತರದ ವಸ್ತು ಅದೊಂದೇ ಆಗಿದ್ದಿತು. ಅದೇ ವಸ್ತುವೇ ಮನುಷ್ಯನಲ್ಲಿ ಮನಸ್ಸೆಂಬ ಸಂಜ್ಞೆ ಪಡೆದು ಕಾಣಿಸಿಕೊಂಡಿತು. ಅದರ ಆಚೆಗೆ ಇರುವ ವಸ್ತುವೆಂದರೆ ದೇವರೊಬ್ಬನೇ. ಅದನ್ನು ನಾನು ‘ರಾಜಯೋಗದ ಪ್ರಭಾವ’ದಲ್ಲಿ ಕೇಂದ್ರವೆಂದು ಕರೆದಿದ್ದೇನೆ. ಈಗ, ಮನಸ್ಸು ಅದರ ವರ್ತಮಾನ ಸ್ಥಿತಿಯಲ್ಲಿ ಎಷ್ಟರಮಟ್ಟಿಗೆ ಕೆಟ್ಟು ಹೋಗಿದೆಯೆಂಬುದನ್ನು ಕ್ಷಣಕಾಲ ಊಹಿಸಿರಿ. ಅದನ್ನು ಮತ್ತೆ ಶುದ್ಧಗೊಳಿಸಿ ಅದರ ಮೂಲಸ್ಥಿತಿಗೆ ತಂದುದಾದರೆ ಅದು ಸರಿಯಾದುದನ್ನೇ ತೋರಿಸಿಕೊಡುವುದು. ಸುದೈವದಿಂದ ಉನ್ನತಮಟ್ಟದ ಗುರು ದೊರೆತರೆ ಪ್ರಾಣಾಹುತಿಯ ಮೂಲಕ ಮನಸ್ಸನ್ನು ಕ್ಷಣಮಾತ್ರದಲ್ಲಿಯೇ ಅದರ ಮೂಲಸ್ಥಿತಿಗೆ ತರಬಹುದು. ಆದರೆ ಅಭ್ಯಾಸಿಯು ಪ್ರಾಣಾಹುತಿಯ ಶಕ್ತಿಯನ್ನು ತಡೆದುಕೊಳ್ಳಲು ಸಮರ್ಥನಿರಬೇಕು.

ಆವಶ್ಯಕವೆನಿಸಿದ ಕೆಲವೇ ಅಂಗಳನ್ನು ನಾನಿಲ್ಲಿ ವಿವರಿಸಿದ್ದೇನೆ ; ಹಾಗು ಪ್ರಾಣಾಹುತಿಯ ಮಹತ್ವವನ್ನು ಕುರಿತು ಹೆಜ್ಜೆ ಹೆಜ್ಜೆಗೂ ಒತ್ತಿ ಹೇಳಿದ್ದೇನೆ. ಕಾರಣವೆಂದರೆ, ಇದುವರೆಗೂ ಅದಕ್ಕಿಂತ ಉತ್ತಮ ಮಾರ್ಗವನ್ನು ನಾನು ಕಂಡಿಲ್ಲ. ಗುರುವಿನ ಶ್ರೇಷ್ಠ ಶಕ್ತಿಯು ಅಭ್ಯಾಸಿಯು ಸ್ವಪ್ರಯತ್ನದೊಂದಿಗೆ ಕೂಡಿ ಪ್ರಗತಿಯನ್ನು ಇಮ್ಮಡಿಗೊಳಿಸುತ್ತದೆ. ಅಲ್ಲದೆ ಸ್ವಪ್ರಯತ್ನದ ಬಗೆಗಿನ ಅತಿಯಾದ ಪ್ರಜ್ಞೆಯು ನಿಗ್ರಹಿಸಲ್ಪಡುವುದರಿಂದ ಅಹಂಕಾರಕ್ಕೆ ಎಡೆಯಾಗುವುದಿಲ್ಲ. ಇಂಥ ಹಂಕಾರವು ಯಾಂತ್ರಿಕವಾದ ಸ್ಫೂಲ ಸಾಧನಗಳನ್ನು ಅನುಸರಿಸುವವರಲ್ಲಿ ಅನೇಕ ವೇಳೆ ಕಂಡುಬರುತ್ತದೆ. ಈಗ ಕಾಲ ಬದಲಾಗಿರುವುದರಿಂದ, ನಾನು ರಾಜಯೋಗದ ಪ್ರಭಾವದಲ್ಲಿ ಉಲ್ಲೇಖಿಸಿದಂತೆ ನನ್ನ ಪೂಜ್ಯ ಗುರುಗಳಾದ ಮಹಾತ್ಮಾ ರಾಮಚಂದ್ರಜಿ ಮಹಾರಾಜರು ಪ್ರಚುರಗೊಳಿಸಿದ ಸಾಧನಗಳಷ್ಟೇ ಪ್ರಪಂಚದಾದ್ಯಂತ ಬಳಕೆಗೆ ಬರುವುವು.

ಈಶ್ವರೀಯ ಜ್ಞಾನವು ಒಂದು ಶಾಸ್ತ್ರವಾಗಿದೆ. ಮೂಲ ಭಾಂಡಾರದಿಂದ ಗ್ರಂಥಿಗಳ ರೂಪದಲ್ಲಿ ಪ್ರವಹಿಸುವ ನಿಸರ್ಗದ ಶಕ್ತಿಯು ನಿರ್ಮಾಣ ಹಾಗು ವಿನಾಶ, ಎರಡರ ಸಾಮರ್ಥ್ಯವನ್ನೂ ಹೊಂದಿದೆ. ಅದನ್ನು ಭಾರತದ ಋಷಿಗಳು ಯಾವಾಗಲೂ ಮಾನವತೆಯ ಕಲ್ಯಾಣಕ್ಕಾಗಿ ಬಳಸಿದರು. ವಿಪುಲವಾಗಿರುವ ವಿಧ್ವಂಸಕ ಶಕ್ತಿಯಾದರೂ ಎಷ್ಟು ಪ್ರಬಲವಾಗಿದೆಯೆಂದರೆ, ಅಣುಬಾಂಬು ಕೂಡ ಅದನ್ನು ಸರಿಗಟ್ಟಲಾರದು. ಈ ಶಕ್ತಿಯನ್ನು ಕೂಡ ವರ್ತಮಾನ ಜಗತ್ತಿನ ಸ್ಥಾನದಲ್ಲಿ ಒಂದು ಹೊಸ ಪ್ರಪಂಚದ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. ಆಧ್ಯಾತ್ಮಿಕ ಪುನರುಜ್ಜಿವನವು ಆರಂಭವಾಗಿದೆ. ಎಷ್ಟೇ ಕಾಲ ಹಿಡಿಯಲಿ, ಭಾರತವೇ ಮತ್ತೊಮ್ಮೆ ಜಗತ್ತಿಗೆ ದಾರಿತೋರುವುದು. ಅಧ್ಯಾತ್ಮದ ತಳಹದಿಯಿಲ್ಲದೆ ಯಾವ ರಾಷ್ಟ್ರವೂ ಭೂಮಿಯ ಮೇಲೆ ಬದುಕಲಾರದೆಂಬುದನ್ನು ಪ್ರಪಂಚವು ಶೀಘ್ರದಲ್ಲಿಯೇ ಮನಗಾಣುವುದು. ಅಂತಾರಾಷ್ಟ್ರೀಯ ವ್ಯವಹಾರ ಚತುರತೆ. ಮತ್ತು ಕುಯುಕ್ತಿಗಳ ಕಾಲ ಶೀಘ್ರವಾಗಿ ಕೊನೆಗೊಳ್ಳುತ್ತಿದೆ. ಈ ಶತಮಾನವು ಕೊನೆಗೊಳ್ಳುವ ಹೊತ್ತಿಗೆ ಅದ್ಭುತ ಬದಲಾವಣೆಗಳು ತಲೆದೋರುವುದು ನಿಶ್ಚಿತ. ಮುಂದೆ ಬರಲಿರುವುದನ್ನು ಸಂತೋಷದಿಂದ ಸ್ವಾಗತಿಸಲು ಪ್ರತಿಯೊಬ್ಬನೂ ಸಿದ್ದನಾಗಬೇಕು. ತನ್ನ ಕಲ್ಯಾಣವನ್ನು ಸುನಿಶ್ಚಿತಗೊಳಿಸುವ ಏಕಮಾತ್ರ ಸಾಧನವಾದ ಅಧ್ಯಾತ್ಮ ಮಾರ್ಗಕ್ಕೆ ಬರಬೇಕು. ಈ ದಿಶೆಯಲ್ಲಿ ತಮ್ಮ ಸೇವೆಯನ್ನು ಮಾಡಲು ಜನರು ನನಗೆ ಅವಕಾಶ ಕೊಟ್ಟಿಲ್ಲ. ಆದರೂ ಅವರಿಗೆ ಗೊತ್ತಿಲ್ಲದಂತೆ ಕೆಲಮಟ್ಟಿಗೆ ಸೇವೆ ಮಾಡುತ್ತಲೇ ಇದ್ದೇನೆ.

ಮೇಲೆ ಹೇಳಿದುದೆಲ್ಲ ನನ್ನ ಗುರುಗಳು ಪ್ರಪಂಚಕ್ಕೆ ನೀಡಿದ ಸಂದೇಶ.

ನರ್ಗಿಸ್ ಹೂ ಕಂಗಾಣದೆ ಅಳುತಿದೆ

ಸಾಸಿರ ವರುಷಗಳಿಂದ;

ಅದರ ಸೊಬಗ ನೋಡುವ ರಸಿಕನು,

ಉಪ ವನದಲಿ ಜನಿಸುವುದತಿ ವಿರಳ

***