ಪ್ರತಿಯೊಂದು ಧರ್ಮದಲ್ಲಿ ಭಗವಂತನನ್ನು ಪ್ರೀತಿಸುವ ವಿಧಾನವೆಂದರೆ ಪ್ರಾರ್ಥನೆ. ಅದರಲ್ಲಿ ಆತನ ಸ್ತುತಿ ಮತ್ತು ಬೇಡಿಕೆಗಳು ಕೂಡಿರುತ್ತವೆ. ಕೆಲವು ಧರ್ಮಗಳಲ್ಲಿ ಕೇವಲ ಪ್ರಾರ್ಥನೆಯೊಂದೇ ಇರುವದು, ಆದರೆ ಪೂಜೆ ಇರುವದಿಲ್ಲ. ಸಾಮಾನ್ಯವಾಗಿ ಜನರು ಪ್ರಾರ್ಥನೆಯಲ್ಲಿ ಭಗವಂತನ ಸಮ್ಮುಖ ತಮ್ಮ ಇಚ್ಛೆಗಳನ್ನು ಬೇಡಿಕೆಗಳ ರೂಪದಲ್ಲಿ ಇಡುತ್ತಾರೆ. ಇಂತಹ ಬೇಡಿಕೆಗಳಲ್ಲಿ ಆಯುಷ್ಯ, ಆರೋಗ್ಯ, ಸಮೃದ್ಧಿ, ಸಂಪತ್ತು, ಐಶ್ವರ್ಯ, ಮಕ್ಕಳು, ಕೆಲಸಗಳ ಆಗುವಿಕೆ ಮತ್ತು ಇನ್ನಿತರ ಬೇಡಿಕೆಗಳೊಂದಿಗೆ ಮನಃ ಶಾಂತಿಕೂಡ ಕೆಲವೊಮ್ಮೆ ಇರುತ್ತದೆ. ಇದರಿಂದಾಗಿ ಇಂದಿನವರೆಗೆ ಎಷ್ಟು ಜನರಿಗೆ ಒಳ್ಳೆಯದಾಗಿದೆ ಅಥವಾ ಬೇಡಿಕೆಗಳು ಈಡೇರಿವೆ ಎಂಬುದು ನೋಡಿದರೆ ವಿಚಾರವಂತರಿಗೆ ಎಲ್ಲವೂ ಅರ್ಥವಾಗುವುದು. ಆದಾಗ್ಯೂ ಈಗ ಪ್ರಾರ್ಥನೆ ಎಂಬುದು ಒಂದು ಸಂಪ್ರದಾಯವಾಗಿದೆ.

ಸಂಸಾರದಲ್ಲಿ ಏರು-ಇಳಿತ, ಸುಖ-ದುಃಖಗಳಿರುವದು ಸರ್ವೆ ಸಾಮಾನ್ಯ. ಇದು ನಿಸರ್ಗದ ನಿಯಮ. ಇವೆಲ್ಲವುಗಳು ನಮ್ಮಿಂದಲೇ ನಿರ್ಮಾಣಗೊಂಡಿರುತ್ತವೆ. ಆದ್ದರಿಂದ ಇಂತಹ ಕ್ಷುಲ್ಲಕ ಕಾರಣಗಳಿಗಾಗಿ ಪ್ರಾರ್ಥನೆ ಮಾಡುವದು ಸಾಮಾನ್ಯ ಜನರಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ವಿಚಾರವಂತರಿಗಲ್ಲ.

ಪ್ರಾರ್ಥನೆಯ ಅರ್ಥವೆಂದರೆ ನಮ್ಮನ್ನು ನಾವು ಇದ್ದಂತೆ ಇದ್ದ ಹಾಗೆ ಭಗವಂತನ ಮುಂದೆ ಪ್ರಸ್ತುತಗೊಳಿಸುವದು. ಉದಾಹರಣೆಗೆ: ಒಂದುವೇಳೆ ನಮಗೆ ನೀರಡಿಕೆ ಆದರೆ ಎದುರಿಗೆ ಇದ್ದವರನ್ನು ಒಂದು ಲೋಟ ನೀರು ಕೇಳುತ್ತೇವೆ. ಇದು ಆದೇಶವಾಗುವದು. ಭಗವಂತನಿಗೆ ಹೀಗೆ ಆದೇಶ ಮಾಡುವದು ಮನುಷ್ಯ ಧರ್ಮವಲ್ಲ. ಕೆಲವು ಶಬ್ದಗಳ ಜೋಡಣೆಯಿಂದ ಅಂದರೆ ದಯಮಾಡಿ ಒಂದು ಲೋಟ ನೀರು ಕೊಡುವಿರಾ ಎಂದು ಕೇಳಿದರೆ ಇದೂ ಕೂಡಾ ಒಂದು ರೀತಿಯ ಆದೇಶವೇ ಆಗುವದು. ಆದರೆ ಪ್ರಾರ್ಥನೆಯ ರೂಪ ಎಂದರೆ ಇದ್ದ ಸ್ಥಿತಿಯನ್ನು ಇದ್ದಂತೆ ನಿವೇದಿಸುವುದು. ಆಗ ಕೇವಲ ನೀರಡಿಕೆಯ ಅನಿಸಿಕೆಯನ್ನು ಸೂಚಿಸುವದು. ಸ್ವಲ್ಪ ಸಮಯ ಕಾಯುವದೇ ಪೂಜೆ ಮತ್ತು ಅನಿಸಿಕೆಯನ್ನು ಮಂಡಿಸುವದೇ ಪ್ರಾರ್ಥನೆ. ಆಗ ಭಗವಂತನು ನೀರಡಿಕೆಯನ್ನು ತಣಿಸಲು ಏನಾದರೂ ಕೊಡಬಹುದು. ನೀರು, ಹಾಲು, ಅಮೃತ ಏನಾದರು ದೊರಕಿದಾಗ ನೀರಡಿಕೆಯಾಗಿರುವದು ಸತ್ಯವೆಂದು ತಿಳಿಯತಕ್ಕದ್ದು. ಏನೂ ದೊರಕದೆ ಹೋದರೆ ನೀರಡಿಕೆಯ ಅನಿಸಿಕೆ ಅಸತ್ಯವೆಂದು ತಿಳಿಯತಕ್ಕದ್ದು. ಯಾವುದೇ ಪ್ರಾರ್ಥನೆಯ ವಿಶೇಷತೆಯೆಂದರೆ ಅದರ ಆರಾಧ್ಯ ಮತ್ತು ಆರಾಧಕನ ನಡುವೆ ಒಂದು ಸಂಪರ್ಕ ಸ್ಥಾಪಿತವಾಗಬೇಕು. ಇದರಲ್ಲಿ ನಾಲ್ಕು ಮುಖ್ಯವಾದ ತತ್ವಗಳು ಅಡಗಿರುತ್ತವೆ. ಅವು

  1. ಧೈಯದ ಸ್ಪಷ್ಟನೆ.
  2. ಸ್ವದಶೆಯ ಸ್ಪಷ್ಟನೆ.
  3. ಆರಾಧ್ಯನ ಬಗ್ಗೆ ಪೂರ್ಣ ಸಮರ್ಪಣೆ.
  4. ಆರಾಧನ ಮಹತ್ವ.

ಪ್ರಾರ್ಥಿಸುವವನ ಮುಂದೆ ಧೈಯದ ಬಗ್ಗೆ ಪೂರ್ಣ ಕಲ್ಪನೆ ಇರಬೇಕೆನ್ನುವದು ಬಹು ಮುಖ್ಯವಾಗಿದೆ. ಒಂದು ವೇಳೆ ನಮ್ಮ ಧೈಯದ ಕಲ್ಪನೆ ಸ್ಪಷ್ಟವಾಗಿರದಿದ್ದರೆ ನಾವು ಸಾಧನೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಅಷ್ಟೆ ಅಲ್ಲ ಪತನದ ಕಡೆಗೆ ಹೋಗುವ ಸಂಭವ ಕೂಡಾ ಇರುವದು. ಪ್ರಾರ್ಥನೆಯು ಭಕ್ತಿಯ ಒಂದು ಅತ್ಯುತ್ತಮವಾದ ಪ್ರಾರಂಭ. ಏಕೆಂದರೆ ಭಗವಂತನ ಬಗ್ಗೆ ನಮ್ಮ ಹೃದಯದಲ್ಲಿ ಪ್ರೇಮ. ಭಕ್ತಿ ಮತ್ತು ಶ್ರದ್ದೆ ಬೆಳೆಯಬೇಕೆಂಬ ಆಸೆ ಇರುತ್ತದೆ.

ನಮ್ಮ ಗುರು ಮಹಾರಾಜರು ಕೊಟ್ಟ ಸಂದೇಶ ಪ್ರಾರ್ಥನೆ ರೂಪದಲ್ಲಿದ್ದರೂ ಸಾಮಾನ್ಯವಾದ ಪ್ರಚಲಿತ ಅರ್ಥದಲ್ಲಿ ಪ್ರಾರ್ಥನೆಯೇ ಅಲ್ಲ. ಇದು ಒಂದು ಸತ್ಯಾಂಶದ ಹೇಳಿಕೆಯಾಗಿದೆ. ಇಂತಹ ನಿಜ ಸ್ಥಿತಿಯ ಹೇಳಿಕೆಗಳನ್ನು ಪ್ರಾರ್ಥನೆ ರೂಪದಲ್ಲಿ ಜಗತ್ತಿನ ಅನೇಕ ಸಂತರು, ಮಹಾತ್ಮರು ಹಿಂದೆ ಕೊಟ್ಟಿದ್ದಾರೆ. ಅವುಗಳು ಒಂದೊಂದು ರೀತಿಯಲ್ಲಿ ಭಗವಂತನೊಂದಿಗೆ ನಮ್ಮ ಸಂಬಂಧ ಸ್ಥಾಪಿಸುವಲ್ಲಿ ಅಪೂರ್ಣವಾಗಿವೆ ಎಂದು ವಿಚಾರವಂತರು ತಿಳಿಯುತ್ತಾರೆ.

ನಾವು ಮಾಡುವ ಪ್ರಾರ್ಥನೆಯು ಸಾಮಾನ್ಯವಾದುದಲ್ಲ. ಎಲ್ಲ ಮಾನವ ಜಾತಿಯ ಏಳಿಗೆ ಮತ್ತು ಉನ್ನತಿಗಾಗಿ ಮತ್ತು ಮಾನವತ್ವದಿಂದ ದೈವತ್ವದ ಕಡೆಗೆ ಹೋಗುವ ದಾರಿಯನ್ನು ತೋರಿಸುವದಾಗಿದೆ. ಬಹಳ ಕಾಲದಿಂದ ಸತತವಾಗಿ ಮತ್ತು ಆಳವಾಗಿ ವಿಚಾರ ಮಾಡಿದಾಗ ಅತ್ಯುಚ್ಚ ಅರಿವಿಕೆಯ ಸ್ಥಿತಿಯಲ್ಲಿ (Highest State of Super Consciousness) ಹೃದಯಕ್ಕೆ ಸ್ಪಂದನಗಳ ಮೂಲಕ ತಲುಪಿದಾಗ ಇದ್ದಕ್ಕಿದ್ದ ಹಾಗೆ ಕೆಲವು ಶಬ್ದಗಳು ಹೊರಬಂದವು. ನಮ್ಮ ಗುರು ಮಹಾರಾಜರು ಅವುಗಳನ್ನು ಸರಿಯಾಗಿ ಜೋಡಿಸಿ ಮತ್ತು ಹೊಂದಿಸಿ ಪ್ರಾರ್ಥನೆಯ ರೂಪದಲ್ಲಿ ನಮಗೆ ಕೊಟ್ಟಿದ್ದಾರೆ.

ಓ ನಾಥ !

” ನೀನೆ ಮಾನವ ಜೀವನದ ಗುರಿ

ನಮ್ಮ ಇಚ್ಛೆಗಳು ನಮ್ಮ ಆತ್ಮೊನ್ನತಿಯಲ್ಲಿ ಬಾಧಕಗಳಾಗಿವೆ.

ನೀನೆ ನಮ್ಮ ಏಕ ಮಾತ್ರ ಸ್ವಾಮಿ ಮತ್ತು ಇಷ್ಟ ದೈವ.

ನಿನ್ನ ಸಹಾಯವಿಲ್ಲದೆ ನಿನ್ನ ಪ್ರಾಪ್ತಿ ಅಸಂಭವ.

ಈ ಪ್ರಾರ್ಥನೆಯು ಕೇವಲ ನಾಲ್ಕು ಸಾಲುಗಳಿಂದ ಆಗಿದೆ. ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಪ್ರಾರ್ಥಿಸುವಲ್ಲಿ ಆತ್ಮೋದ್ಧಾರದ ರಹಸ್ಯವೇ ಅಡಗಿದೆ. ಒಂದು ವೇಳೆ ಗುರುಗಳ ಕೃಪೆಯಾದರೆ ಮಾತ್ರ ಇದರ ಅರ್ಥ ತಿಳಿಯುವುದು.

ಈ ಪ್ರಾರ್ಥನೆಯಲ್ಲಿ ವಿಚಾರ ಮಾಡುವಂತಹದ್ದು ಮತ್ತು ತಿಳಿದುಕೊಳ್ಳುವುದು ಏನಿದೆ ಎಂದು ಕೆಲವು ಜನರಲ್ಲಿ ಪ್ರಶ್ನೆ ಉದ್ಭವಿಸಬಹುದು. ನೋಡಲು ಇದು ಬಹಳ ಸುಲಭವಾಗಿ ಮತ್ತು ಸಾಮಾನ್ಯವಾಗಿ ಕಾಣಿಸುವುದು. ಇದರ ವಿಶೇಷತೆ ಎಂದರೆ ಇದರ ಒಂದೊಂದು ಶಬ್ದಗಳ ಮೇಲೆ ವಿಚಾರ ಮಾಡಿದಷ್ಟು ನಮ್ಮ ಯಾವುದೇ ವಿಚಾರವು ನಿಲುಕಲಾರದಷ್ಟು ಮುಂದೆ ಹೋಗಿ ನಿಷ್ಕರ್ಷಕ್ಕೆ ಬಾರದೆ ಇರುವುದು.

ಇಲ್ಲಿ ಒಂದು ಶಬ್ದದ ವಿವರಣೆಯನ್ನು ಕೊಡಲು ಪ್ರಯತ್ನಿಸುವೆನು. ನಾಥ ಎಂದರೆ ಸಾಮಾನ್ಯವಾಗಿ ದೇವರು ಎಂದರ್ಥ. ಆದರೆ ಯಾವ ದೇವರು? ನಮ್ಮ ದೇಶದಲ್ಲಿ ಸಾಕಷ್ಟು ದೇವರಿದ್ದಾರೆ. ಬ್ರಹ್ಮ, ವಿಷ್ಣು, ಮಹೇಶ ಮತ್ತು ಇನ್ನಿತರ ದೇವರುಗಳಾದರೆ ಇದಕ್ಕೂ ಮುಂದೆ ಹೋಗಿ ಪರಬ್ರಹ್ಮ ಎನ್ನಬಹುದು. ಹಾಗೆಂದರೆ ಅವನು ಯಾರು? ಯಾರು ಈ ದೇವರುಗಳೆಲ್ಲರಿಗೆ ಆದೇಶವನ್ನು ಕೊಟ್ಟು ಮಾನವ ಕಲ್ಯಾಣಕ್ಕಾಗಿ ಮತ್ತು ಧರ್ಮ ರಕ್ಷಣೆಗಾಗಿ ಮಾನವ ರೂಪದಲ್ಲಿ ಪೃಥ್ವಿಯ ಮೇಲೆ ಕಳುಹಿಸುವವನೋ ಅವನು. ಇದಕ್ಕೆ ಸಮಂಜಸವಾದ ಉತ್ತರ ಸಿಗಬಹುದು ಅಥವಾ ಸಿಕ್ಕದೇ ಇರಬಹುದು. ಒಂದು ವೇಳೆ ಸಿಕ್ಕರೆ ಅದನ್ನು ಒಂದು ಶಕ್ತಿ ಅಥವಾ ಪರಮಕೇಂದ್ರ, ಅಂತಿಮಸತ್ಯ ಅಥವಾ ಇನ್ನೇನೋ ಸಂಜ್ಞೆಯಿಂದ ಕರೆಯಬಹುದು. ನಮ್ಮ ಪ್ರಾರ್ಥನೆ ಅಂಥಹವನಿಗೆ ಮುಟ್ಟುವುದೇ? ಅಂಥಹವನಿಗೆ ದೇಹ ಮತ್ತು ಮನಸ್ಸು ಎಂಬುವುದು ಇದೆಯೇ ಎಂಬ ಪ್ರಶ್ನೆಗಳು ಕಾಡಿಸುವವು. ಇಂತಹ ಸಂಶಯಗಳು ಬಂದಾಗ ಅಥವಾ ನಮಗೇನು ತೋಚದಿದ್ದಾಗ ಏನೇನೋ ಹುಡುಕುವೆವು. ಈ ಸನ್ನಿವೇಶದಲ್ಲಿ ಭಗವದ್ಗೀತೆಯ ಸಹಾಯದಿಂದ ಅರ್ಥ ಮಾಡಿಕೊಳ್ಳಬಹುದು. ಭಗವದ್ಗೀತೆಯಲ್ಲಿ ಅರ್ಜುನನ ಪ್ರಶ್ನೆಗೆ ಶ್ರೀ ಕೃಷ್ಣನು ಹೀಗೆ ಉತ್ತರಿಸುವನು. “ಚರಮ ಸತ್ಯ ಅಥವಾ ಪರಮ ಶಕ್ತಿಗಳಿಗೆ ಶರಣು ಹೋಗುವದಕ್ಕಿಂತ ನನ್ನನ್ನು ಶರಣು ಹೋಗು” ಇದರ ಅರ್ಥ ಇಷ್ಟೆ. ಆ ಶಕ್ತಿಯ ಮೇಲೆ ಪ್ರಭುತ್ವ ಪಡೆದ ಮಾನವನೇ ಶ್ರೇಷ್ಠ ಪುರುಷನು. ಆತನಿಗಿಂತ ಬೇರೆ ಯಾರು ಶ್ರೇಷ್ಠರಲ್ಲ. ಅಂತಹವನು ಯಾರೆಂದರೆ ಯಾವನು ತನ್ನ ಸಂಪೂರ್ಣ ವ್ಯಕ್ತಿತ್ವವನ್ನು ಪ್ರಳಯ ಮಾಡಿ ಆ ಪೂರ್ಣತೆಯಲ್ಲಿ ಲಯ ಹೊಂದಿರುವನೋ ಮತ್ತು ಆ ಸ್ಥಿತಿಯಲ್ಲಿರುವನೋ ಆತನೇ ಮಾನವ ರೂಪದಲ್ಲಿರುವ ಆ ಪರಮಶಕ್ತನು. ಆತನಿಂದಲೇ ಸರ್ವ ಸೃಷ್ಟಿ ನಿರ್ಮಾಣವಾಯಿತು ಹಾಗೂ ಅದನ್ನು ನಿಯಂತ್ರಿಸಲು ಮಾಡಿದ ನಿಯಮಗಳನ್ನು ಕಾಲ ಕಾಲಕ್ಕೆ ಸಮಯಾನುಸಾರವಾಗಿ ಬದಲಿಸ ಬಲ್ಲನೋ ಅವನೇ ನಾಥ. ಆತನೇ ಪೂಜೆಗೆ ಯೋಗ್ಯನು ಆತನಿಗೆಯೇ ನಮ್ಮ ಪ್ರಾರ್ಥನೆ, ಅನ್ಯರಿಗಲ್ಲ. ಆತನೆ ನಮ್ಮ ಸದ್ಗುರುಗಳಾದ ಶ್ರೀ ಬಾಬೂಜಿ ಮಹಾರಾಜರು.