ಜೀವನವೆಂದರೆ ದೇಹ, ಆತ್ಮ, ಹೃದಯ, ಮನಸ್ಸು ಮತ್ತು ಇಂದ್ರಿಯಗಳಿಂದ ಕೂಡಿದ ಒಂದು ಸಂಮಿಶ್ರಣ. ಮುಖ್ಯವಾಗಿ, ಪ್ರಾಣಶಕ್ತಿಯೇ ಇದರ ಬುನಾದಿ. ಆತ್ಮಕ್ಕೆ ಇರುವಿಕೆಯ ಭಾವ ಬಂದಾಗಲೇ ಅದು ಜೀವವಾಗುವುದು. ಜೀವದಿಂದಾಗಿದ್ದ ದೇಹ, ಮನಸ್ಸು ಮತ್ತು ಸರ್ವ ಅಂಗಾಂಗಗಳಿಗೆ ಒಂದು ನಿರ್ಧಿಷ್ಟವಾದ ಕಾಲಮಿತಿ ಇದೆ. ಈ ಕಾಲಮಿತಿಯು ಪ್ರತಿಯೊಬ್ಬರಿಗೂ ಬೇರೆ ಬೇರೆ ಆಗಿರುತ್ತದೆ. ಇದು ಮುಗಿಯುವ ಮುಂಚೆಯೇ ನಾವು ನಮ್ಮ ಜೀವನ ಗುರಿಯನ್ನು ಒಬ್ಬ ಸಮರ್ಥ ಸದ್ಗುರುವಿನ ಸಹಾಯದಿಂದ ಸಾಧಿಸಿಕೊಳ್ಳಬೇಕಾಗಿದೆ. ಈ ಜೀವನವೆನ್ನುವುದು ಭಗವಂತನು ಕೊಟ್ಟ ಒಂದು ದೇಣಿಗೆ, ಶಾಸ್ತ್ರಗಳಲ್ಲಿ ತಿಳಿಸಿರುವಂತೆ 84 ಲಕ್ಷ ಯೋನಿಗಳಲ್ಲಿ ಜನ್ಮ ತಾಳಿದ ಮೇಲೆ ಬರುವಂತಹದ್ದು, ಈ ಮನುಷ್ಯ ಜನ್ಮ, ಈ ಜೀವನದೊಂದಿಗೆ ಕೆಲವರಿಗೆ ಮಾತ್ರ ಭಗವಂತನು ಮೂರು ವರದಾನಗಳನ್ನು ದಯಪಾಲಿಸುವನು.

  1. ಮನುಷ್ಯ ಜನ್ಮ
  2. ಆಧ್ಯಾತ್ಮದಲ್ಲಿ ಅಭಿರುಚಿ
  3. ಒಬ್ಬ ಮಹಾತ್ಮನ ಸತ್ಸಂಗ

ಇಂತಹ ಜೀವನವಿದ್ದವರೇ ತಮ್ಮ ಜೀವನದ ಗುರಿಯ ಬಗ್ಗೆ ಕಳಕಳಿಯಿಂದ ಗಮನಹರಿಸುವರು ಮತ್ತು ಅದನ್ನು ಸಾಧಿಸಲು ಪ್ರಯತ್ನಿಸುವರು. ಅಂತಹವರಿಗೆ ಸುದೈವದಿಂದ ಒಬ್ಬ ಸಮರ್ಥ ಗುರುವಿನ ಸತ್ಸಂಗ ಸಿಗಬೇಕು. ಅವರು ಆತನಲ್ಲಿ ಪೂರ್ಣ ವಿಶ್ವಾಸವಿಟ್ಟು ಆತನು ಹೇಳಿಕೊಟ್ಟ ಮಾರ್ಗವನ್ನು ಅನುಸರಿಸಿ ಸಾಧನೆಯನ್ನು ಪ್ರಾರಂಭಿಸಬೇಕು.
ಯಾರ ಮೇಲೆ ಗುರುವು ತನ್ನ ಅನುಕಂಪ ತೋರಿಸಿ ಸಹಾಯ ಮಾಡುವನೋ ಅವರಿಗೆ ಜೀವನದ ಗುರಿಯ ಬಗ್ಗೆ ಸಾಕಷ್ಟು ತಿಳುವಳಿಕೆ ಹುಟ್ಟುವುದು. ಅದರಿಂದಾಗಿ ಅವರು ಸಾಧನೆಯನ್ನು ಸರಿಯಾಗಿ ಮಾಡಲು ಪ್ರಾರಂಭಿಸುವರು. ಸ್ವಲ್ಪ ಕಾಲದಲ್ಲಿಯೇ ಸಾಧಕರು ತಮ್ಮ ಸದ್ಗುರುವಿನ ಸ್ವರೂಪವನ್ನು ಅನುಭವಿಸತೊಡಗುವರು. ಆಗ ಗುರು ಮತ್ತು ಗುರಿ ಒಂದೇ ಆಗುವುದು. ಅವರು ತಮ್ಮ ಜೀವನವನ್ನು ಸದ್ಗುರುವಿನ ಜೀವನದ ಹಾಗೆ ಮಾಡಿಕೊಳ್ಳಲು ಪ್ರಯತ್ನಿಸುವರು. ಆತನ ಜೀವನದ ಎಲ್ಲ ಗುಣಗಳನ್ನು ಅಂದರೆ ಮನ, ಬುದ್ದಿ, ಅಹಂಕಾರ, ಜೀವನದ ಶೈಲಿ, ನಡೆ-ನುಡಿ, ನಡುವಳಿಕೆ, ವ್ಯವಹಾರ ಎಲ್ಲವುಗಳನ್ನು ಅಳವಡಿಸಿಕೊಂಡು ತದ್ರೂಪ ಆತನಂತೆಯೇ ಆಗಿ ಆತನಲ್ಲಿ ಒಂದಾಗಬೇಕೆನ್ನುವ ಅಥವಾ ಆತನಲ್ಲಿ ಪೂರ್ತಿಯಾಗಿ ಲಯ ಹೊಂದುವುದೇ ಅವರ ನಿಜವಾದ ಗುರಿಯಾಗುವುದು.

ಇದು ಹೇಗೆ ಸಾಧ್ಯ ?

ಸೃಷ್ಟಿಯ ನಿರ್ಮಾಣದ ಕಾಲಕ್ಕೆ ಒಂದು ತರಹದ ‘ಕೋಭ’ದಿಂದಾಗಿ ಮೂಲ ಕೇಂದ್ರದಿಂದ ಅಗಣಿತ ಕಣಗಳು ಹೊರ ಹೊಮ್ಮಿದವು. ಸಾಕಷ್ಟು ಕಾಲದ ನಂತರ ಪ್ರತಿಯೊಂದು ಕಣವು ತನ್ನ ಇರುವಿಕೆಯ ಅರಿವನ್ನು ಹೊಂದಿತು. ಮೂಲ ಕೇಂದ್ರದಿಂದ ಬೇರೆಯಾದುದರ ಕಾರಣದಿಂದಾಗಿ ಅದರಲ್ಲಿ ಒಂದು ತರಹದ ನೋವು ಉಂಟಾಯಿತು. ಆ ನೋವು ಇಂದಿಗೂ ಮುಂದುವರೆದಿದ್ದ ಕಾರಣ ಪ್ರತಿಯೊಬ್ಬರು ಮನಃ ಶಾಂತಿಗಾಗಿ ತೊಳಲಾಡುತ್ತಿದ್ದಾರೆ. ಇಂದಿಗೂ ಅವರ ಪ್ರಯತ್ನ ಬೇರೆ ಬೇರೆ ರೀತಿಗಳಲ್ಲಿ ನಡೆದಿದೆ. ಜನರು ಐಶ್ವರ್ಯ, ಹೆಸರು, ಕೀರ್ತಿ, ಪಾಂಡಿತ್ಯ, ಸೇವೆ. ಪ್ರೇಮ, ಸೌಹಾರ್ದತೆ ಇತ್ಯಾದಿಗಳಿಂದ ಪಡೆಯಲು ಯತ್ನಿಸುತ್ತಿದ್ದಾರೆ.ಆದರೆ ಇವಾವುಗಳಿಂದ ಮನಸ್ಸಿಗೆ ನೆಮ್ಮದಿ ಅಥವಾ ಶಾಂತಿ ದೊರಕಲಾರದೆಂದು ಅನುಭವಗಳು ತಿಳಿಸಿಕೊಡುತ್ತವೆ. ಈ ನೋವನ್ನು ಹೋಗಲಾಡಿಸಲು ಮೂಲ ಸ್ಥಾನವನ್ನು ಬಿಟ್ಟು ಅದರಂತೆ ಇರುವ ಅದರ ಪ್ರತಿಬಿಂಬದ ಕಡೆಗೆ ಗಮನ ಹರಿಸಿತು. ಅದರಲ್ಲಿಯೇ ಅಭಿರುಚಿ ಹುಟ್ಟಿ ಬಹಿರ್ಮುಖವಾಯಿತು. ಆಗ ‘ನಾನು’ ಎಂಬುದರ ಅರಿವಾಯಿತು. ಆ ನಂತರ ಇಂದ್ರಿಯಗಳ ಮೂಲಕ ಹೊರಗಿನ ವಸ್ತುಗಳೊಡನೆ ಒಂದು ಪ್ರಕಾರದ ಜೋಡಣೆಯುಂಟಾಯಿತು. ಇದರಿಂದಾಗಿ ತನ್ನದೇ ಆದ ನಿರ್ಣಯ ತೆಗೆದುಕೊಳ್ಳಲಾರಂಬಿಸಿತು ಮತ್ತು ಇದರೊಡನೆ ಅಹಂಕಾರ ಬೆಳೆಯತೊಡಗಿತು. ಇದು ಹೇಗೆ ಸಾಧ್ಯವಾಯಿತೆಂದರೆ ಮೂಲ ಕೇಂದ್ರದಲ್ಲಿರುವ ಎಲ್ಲ ಶಕ್ತಿ ಸಾಮರ್ಥ್ಯಗಳು (ವಿಚಾರ ಶಕ್ತಿ) ಇದರಲ್ಲಿದ್ದವು. ಆಗ ಮೂಲ ಕೇಂದ್ರ ಸೃಷ್ಟಿಸಿದ ಸೃಷ್ಟಿಯಂತೆಯೇ ಅದೇ ವಿಚಾರ ಶಕ್ತಿಯಿಂದ ತನ್ನದೇ ಆದ ರೀತಿಯಲ್ಲಿ ಸೃಷ್ಟಿಯನ್ನು ನಿರ್ಮಿಸಲು ಪ್ರಾರಂಭಿಸಿತು. ಬರಬರುತ್ತಾ ತನ್ನ ಸವಿರುಚಿಗಳಿಂದ, ಇಚ್ಛೆಗಳಿಂದ, ಸಂಗತಿಗಳಿಂದ ಮತ್ತು ವಾತಾ-ವರಣದಿಂದ ತನ್ನದೇ ಆದ ಒಂದು ಜಗತ್ತನ್ನು ನಿರ್ಮಿಸಿಕೊಂಡಿತು. ಈ ನಿರ್ಮಾಣದ ಅನುಗುಣವಾಗಿ ತನ್ನದೇ ಆದ ರೀತಿಯಲ್ಲಿ ಒಳ್ಳೆಯದು-ಕೆಟ್ಟದ್ದು, ಬೇಕು-ಬೇಡ, ನಾನು- ನನ್ನದು, ನನ್ನವರು-ಬೇರೆಯವರು, ಸುಖ-ದುಃಖ, ನೋವು-ನಲಿವು ಇಂತಹ ಎಲ್ಲವುಗಳ ನಿರ್ಮಾಣದಿಂದಾಗಿ ದಿನೇ ದಿನೇ ಅಧೋಮುಖವಾಗಿ ಬೆಳೆಯಲಾರಂಬಿಸಿತು. ಅದರಿಂದಾಗಿ ತಾನು ಬಂದಿರುವ ಮೂಲ ಕೇಂದ್ರವನ್ನು ಪೂರ್ತಿಯಾಗಿ ಮರೆತು, ತನ್ನಿಂದ ನಿರ್ಮಾಣವಾದ ಜಗತ್ತಿನಲ್ಲಿಯೇ ಸುಖ-ದುಃಖಗಳ ಜೀವನವನ್ನು ಸಾಗಿಸತೊಡಗಿತು.ಒಪ್ಪುಗಳಿಂದ ಈ ವರ್ತಮಾನ ಸ್ಥಿತಿಗೆ ನಮ್ಮ ಜೀವನವನ್ನು ತಂದಿದ್ದೇವೆ. ಈಗ ಸಮರ್ಥ ಗುರುವಿನ ಸಹಾಯದಿಂದಲೇ ನಮ್ಮ ಕರ್ತವ್ಯದ ಬಗ್ಗೆ ನಮಗೆ ಅರಿವು ಆಗಿದೆ. ನಾವು ನಮ್ಮಿಂದ ಮಾಡಿಕೊಂಡಿರುವ ಸೃಷ್ಟಿಯನ್ನು ಪೂರ್ತಿಯಾಗಿ ಪ್ರಳಯ/ಧ್ವಂಸ ಮಾಡಿ ಮೂಲ ಸ್ಥಿತಿಗೆ ಅಂದರೆ (ಸೃಷ್ಟಿಯ ನಿರ್ಮಾಣವಾದ ಕಾಲಕ್ಕೆ ಇದ್ದಂತೆ) ತಲುಪುವುದು ಮತ್ತು ಇನ್ನು ಮುಂದೆ ಯಾವ ತರಹದ ವೈಯಕ್ತಿಕ ಸೃಷ್ಟಿಯ ನಿರ್ಮಾಣಕ್ಕೆ ಆಸ್ಪದ ಕೊಡದೆ ಜೀವನ ಮಾಡುವುದೇ ನಮ್ಮ ಏಕೈಕ ಸಾಧನೆ. ಇವೆರಡರ ಸ್ಥಿತಿಯನ್ನು ಶಾಶ್ವತವಾಗಿಡಲು ಸದ್ಗುರುವಿನ ಸಹಾಯವೇ ಅಗತ್ಯ. ಇಂತಹ ಸಹಾಯ ಪ್ರತಿ ಹೆಜ್ಜೆ ಹೆಜ್ಜೆಗೂ ಮತ್ತು ಪ್ರತಿ ಕ್ಷಣ ಕ್ಷಣಕ್ಕೂ ಆ ಸದ್ಗುರುವಿನ ಕಡೆಯಿಂದ ಸಿಕ್ಕರೆ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಅದಕ್ಕೋಸ್ಕರ ನಮ್ಮೆಲ್ಲರ ಪ್ರಯತ್ನವನ್ನು ಆ ಮಟ್ಟಕ್ಕೆ ಅಂದರೆ ಸಹಾಯ ಸಿಗುವ ಮಟ್ಟಕ್ಕೆ ಒಯ್ದು ಆತನ ಸಹಾಯದಿಂದಾಗಿಯೇ ಆತನಲ್ಲಿ ಒಂದಾಗುವದೇ ನಮ್ಮ ಜೀವನದ ಗುರಿ.

ಯಾರ ಮೇಲಾದರೂ ಸಮರ್ಥ ಗುರುವಿನ ಕೃಪೆಯಾದರೆ ಅವರಿಗೆ ಮೂರು ವರದಾನಗಳು ಲಭಿಸುವವು. ಅವುಗಳಿಂದ ಸಾಧಕನ ಪ್ರಗತಿಯಲ್ಲಿ ಹೆಚ್ಚೆಚ್ಚು ಸಹಾಯ ಸಿಗುವುದು.

  1. ಧನದ ಅಭಾವ.
  2. ಸಮಾಜದಲ್ಲಿ ಅಗೌರವ.
  3. ಒಂದು ರೀತಿಯ ದೈಹಿಕ ಕಷ್ಟ/ಬೇನೆ (ಅದರಿಂದ ಜೀವನಕ್ಕೆ ಯಾವ ತರಹದ ತೊಂದರೆ ಇರಲಾರದು)

ಈ ವರದಾನಗಳೆಲ್ಲವೂ ತನ್ನ ಗುರುವಿನ ಕೃಪೆ ಮತ್ತು ಪಾರಿತೋಷಕಗಳೆಂದು ತಿಳಿದು, ಸಾಧಕನು ಶ್ರದ್ದೆಯಿಂದ ಸಾಧನೆಯನ್ನು ಮುಂದುವರೆಸಿದರೆ ಆಗ ತಿಳಿಯುವದೇನೆಂದರೆ ಪ್ರಾಣ, ಆತ್ಮ, ದೇಹ, ಮನಸ್ಸು, ಬುದ್ಧಿ, ಅಹಂಕಾರ, ಪಂಚೇಂದ್ರಿಯ ಮತ್ತು ಜ್ಞಾನೇಂದ್ರಿಯಗಳು ಎಲ್ಲಾ ಆತನಿಂದಲೇ ಬಂದಿರುವವು ಮತ್ತು ತನ್ನದು ಎಂಬುದು ಏನೂ ಇಲ್ಲ.

ನಮ್ಮ ಮನಸ್ಸು, ಬುದ್ಧಿ, ಇಂದ್ರಿಯ ಇತ್ಯಾದಿಗಳೆಲ್ಲವನ್ನು ಆತನಿಗೆ ಸಮರ್ಪಿಸಿ (Complete Resignation to His will ) ನಾವು Living Dead ಆಗಿ ಆತನ ದಾಸ್ಯತ್ವವನ್ನು ಸ್ವೀಕರಿಸಿ ಮತ್ತು ಆತನಲ್ಲಿ ಪೂರ್ತಿ ಅವಲಂಬಿತ ದಾಸನಾಗಿಯೇ ಇಡೀ ಜೀವನ ಅಂತರ್ಮುಖಿಯಾಗಿ ಸಾಗಿಸುವುದೇ ನಮ್ಮ ಆದ್ಯ ಕರ್ತವ್ಯವಾಗುವುದು. ಅಂದರೆ ಆತನ ಎಲ್ಲ ವಸ್ತುಗಳನ್ನು ಆತನಿಗೆ ಸಮರ್ಪಿಸಿ ನಮ್ಮನ್ನು ನಾವು ಪೂರ್ತಿಯಾಗಿ ಬರಿದು ಮಾಡಿಕೊಂಡು ಆತನ ಒಂದು ಉಪಕರಣವಾಗಿರುವುದೇ ನಮ್ಮ ಗುರಿಯಾಗಬೇಕು.