ಸೃಷ್ಟಿ ನಿರ್ಮಾಣವಾದದ್ದು ಸೃಷ್ಟಿಕರ್ತನಿಂದ. ಆತನಿಗೆ ದೇವರು, ಭಗವಂತ ಅಥವಾ ಮಾಸ್ಟರ್ ಎಂದು ಕರೆಯುವರು. ಸೃಷ್ಟಿ ಎಂದರೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಬಂದಾಗ ನಮಗೆ ಹೊಳೆಯುವದೇನೆಂದರೆ, ಇಡೀ ಜಗತ್ತು, ನಮ್ಮ ಇಂದ್ರಿಯಗಳಿಗೆ ಗೋಚರವಾಗುವ ಭೂಮಿ, ಆಕಾಶ, ನೀರು, ಖಂಡಗಳು, ದೇಶಗಳು ಮತ್ತು ಅವುಗಳಲ್ಲಿರುವ ಜನ, ಪ್ರಾಣಿಗಳು, ಗಿಡಮರಗಳು, ಸಸ್ಯಗಳು, ಕಾಡುಗಳು, ನದಿಗುಡ್ಡಗಳು, ಇದರ ಆಚೆಗೆ ಸೂರ್ಯ, ಚಂದ್ರ, ನಕ್ಷತ್ರಗಳು ಇತ್ಯಾದಿ ಮಾತ್ರ ನಮಗೆ ತಿಳಿದಿರುವ ದೇವರು ಸೃಷ್ಟಿಸಿದ ಸೃಷ್ಟಿ. ಆದರೆ ನಮ್ಮ ಪಂಚೇಂದ್ರಿಯಗಳಿಗೆ ನಿಲುಕದೆ ಇರುವ ಮತ್ತು ಕಲ್ಪನೆಗೆ ಬಾರದೆ ಇರುವ ಸೃಷ್ಟಿ ಸಾಕಷ್ಟು ಇದ್ದು, ಅವುಗಳಿಗೆ ಬೇರೆ ಬೇರೆ ಲೋಕಗಳೆಂದು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ನಾವು ಅವುಗಳನ್ನು ನೋಡದೆ ಇದ್ದರೂ ಅವುಗಳನ್ನು ನಂಬುತ್ತೇವೆ. ಶಾಸ್ತ್ರಗಳ ಪ್ರಕಾರ ಪೃಥ್ವಿಯಂತೆ ಇನ್ನೂ 13 ಲೋಕಗಳಿವೆ ಅವುಗಳೆಂದರೆ,

  1. ಬ್ರಹ್ಮ ಲೋಕ.
  2. ವೈಕುಂಠಲೋಕ,
  3. ದೇವಲೋಕ.
  4. ನಕ್ಷತ್ರ ಲೋಕ.
  5. ವಿದ್ಯಾಧರ ಲೋಕ.
  6. ಸಿದ್ಧಲೋಕ.
  7. ಕಾರಣ ಲೋಕ.
  8. ಗಂಧರ್ವಲೋಕ.
  9. ಅಪ್ಪರ ಲೋಕ.
  10. ಕಿನ್ನರ ಲೋಕ.
  11. ಉಗ್ರಲೋಕ.
  12. ಪಾತಾಳಲೋಕ.
  13. ನಾಗ ಲೋಕ.
  14. ಮೃತ್ಯುಲೋಕ. (ನಮ್ಮಲೋಕ)

ಇವೆಲ್ಲಾ ಲೋಕಗಳು ಬೇರೆ ಬೇರೆಯಾಗಿದ್ದು ಅವುಗಳ ನಿಯಮಗಳು ಕೂಡಾ ಬೇರೆ ಬೇರೆಯಾಗಿವೆ. ಇವಲ್ಲದೆ ಇನ್ನೂ ಹೆಚ್ಚು ಲೋಕಗಳು ಇರಬಹುದು ಮತ್ತು ಇವೆಲ್ಲವುಗಳನ್ನು ಕಾಲ್ಪನಿಕ ಲೋಕಗಳೆಂದು ಕರೆಯಬಹುದು. ಆದರೆ ನಮ್ಮ ಪೂರ್ವಜರು ಹಾಗೂ ಗಣ್ಯ ಸಂತರು ಇವುಗಳನ್ನು ನೋಡಿ ಅನುಭವಿಸಿದ್ದಾರೆ. ಇವೆಲ್ಲಾ ಲೋಕಗಳನ್ನು ಬೇರೆ ಬೇರೆಯವರು ನೋಡಿಕೊಳ್ಳುತ್ತಾರೆ ಹಾಗೂ ಅವರನ್ನು ದೇವ ದೇವತೆಯೆನ್ನುವರು. ಈ ಎಲ್ಲವುಗಳ ನಿರ್ಮಾಣ ಮಾಡಿದವನೇ ಆ ಒಡೆಯ ಮತ್ತು ಆತನೇ ಸೃಷ್ಟಿಕರ್ತ. ಆ ಸೃಷ್ಟಿಕರ್ತನೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನಲ್ಲದೆ ಸೂರ್ಯ, ಚಂದ್ರ, ನಕ್ಷತ್ರಗಳನ್ನು ನಿರ್ಮಿಸಿದವನು. ಆತನನ್ನು ಸರ್ವಸ್ವ, ಸಂಪೂರ್ಣ, ಅಕ್ಷರ, ಅವಿನಾಶಿ ಮತ್ತು ಚಿರಂತನ ಎಂದು ತಿಳಿಯತ್ತಾರೆ. ಎಲ್ಲವೂ ಆತನಿಂದಲೇ ಇವೆ. ಎಲ್ಲವೂ ಆತನಲ್ಲಿವೆ ಮತ್ತು ಆತನು ಎಲ್ಲದರಲ್ಲೂ ಇದ್ದಾನೆ. ಆತನೇ ಎಲ್ಲದರ ಒಡೆಯ. ಎಲ್ಲವೂ ಆತನ ಅಧೀನದಲ್ಲಿರುತ್ತವೆ. ಎಲ್ಲ ದೇವ ದೇವತೆಗಳು ಆತನ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುತ್ತಾರೆ.

ಸೃಷ್ಟಿಕರ್ತನು ಮಾನವನಿಗೆ ಮಾತ್ರ ವಿಶೇಷವಾದ ಅನುಕಂಪದಿಂದ ಕೆಲವು ಅನುದಾನಗಳನ್ನು ದಯಪಾಲಿಸಿದ್ದಾನೆ. ಅವು ದೇವ ದೇವತೆಗಳಿಗೂ ಕೂಡಾ ಲಭ್ಯವಾಗಿಲ್ಲ. ಅವುಗಳೆಂದರೆ ಸರಿಯಾದ ದೇಹ, ಜಾಗೃತ ಸ್ಥಿತಿಯಲ್ಲಿರುವ ಪಂಚೇಂದ್ರಿಯಗಳು ಮತ್ತು ಉನ್ನತ ಮಟ್ಟದ ಚಿತ್ತ, ಬುದ್ಧಿ, ಮನ, ಅಹಂಕಾರಗಳು. ಇವುಗಳ ವೈಶಿಷ್ಟ್ಯತೆಯನ್ನು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಂಡು ನಮ್ಮ ಜೀವನದ ಗುರಿಯನ್ನು ತಿಳಿದು ಆತನ ಕೃಪೆಯಾದರೆ ಅದನ್ನು ತಲುಪಬಹುದು. ಈ ಸಾಧನೆಯಲ್ಲಿ ಯಾವಾಗಲಾದರೂ ಬೇಸರವೆಂದನಿಸಿದರೆ ಇವುಗಳ ಮೂಲಕ ಆನಂದ (ದೈಹಿಕ, ಮಾನಸಿಕ ಹಾಗೂ ಲೈಂಗಿಕ) ಮತ್ತು ಮನೋರಂಜನೆಗಳಿಗಾಗಿ ಉಪಯೋಗಿಸಿ ಪುನಃ ನಮ್ಮ ಸಾಧನೆಯ ಮಾರ್ಗದಲ್ಲಿ ಮುಂದುವರೆಯಬೇಕು. ಇಲ್ಲಿ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ ಸಾಧನೆ ವಸ್ತುಗಳು ಆತನ ದೇಣಿಗೆ ಮಾತ್ರ. ಅವೆಲ್ಲವುಗಳನ್ನು ಸಾಧಕರು ತಮ್ಮ ಸ್ವತ್ತೆಂದು ಹೇಳಲು ಸಾಧ್ಯವಿಲ್ಲ. ಇದನ್ನು ಬಹಳ ಜಾಗರೂಕತೆಯಿಂದ ನೆನಪಿನಲ್ಲಿಟ್ಟುಕೊಂಡು ಅವಶ್ಯಕತೆಯಿದ್ದಲ್ಲಿ ಮಾತ್ರ ಆತನ ಕೊಡುಗೆಗಳೆಂದು ತಿಳಿದು ಕ್ಷಣಿಕವಾಗಿ ಉಪಭೋಗಿಸತಕ್ಕದ್ದು. ಅವುಗಳಿಗೆ ಅಂಟಿಕೊಳ್ಳಬಾರದು. ಏಕೆಂದರೆ ಆತನೇ ಏಕಮಾತ್ರ ಸ್ವಾಮಿ ಮತ್ತು ಇಷ್ಟದೈವ. ಅಂದರೆ ಆತನೇ ಎಲ್ಲ ಪೂಜೆಗಳಿಗೆ ಅರ್ಹನು ಮತ್ತು ಆತನನ್ನು ಬಿಟ್ಟರೆ ಯಾರೂ ಪೂಜೆಗೆ ಯೋಗ್ಯರಲ್ಲ. ಇದರ ಸಂಕ್ಷಿಪ್ತ ಉಲ್ಲೇಖ ಗೋವರ್ಧನ ಪರ್ವತವನ್ನೆತ್ತಿದ ಶ್ರೀ ಕೃಷ್ಣನಿಗೆ ಸಲ್ಲುತ್ತದೆ.

ಸೃಷ್ಟಿಕರ್ತನು ಶಕ್ತಿಯ ಮೂಲ ಸ್ವರೂಪ. ಅಂತಹ ಶಕ್ತಿಯನ್ನು ಮತ್ತು ಅದರ ಸ್ವಾಮಿತ್ವವನ್ನು ಪಡೆದವನು ಮಾನವ ರೂಪದಲ್ಲಿ ಬಂದು ಮಾನವ ಜಾತಿಯನ್ನು ದೈವತ್ವದೆಡೆಗೆ ಮಾರ್ಗದರ್ಶನ ಮಾಡುವವನು ಮತ್ತು ಇಡೀ ವಿಶ್ವದ ವಾತಾವರಣವನ್ನು ಶುದ್ಧಗೊಳಿಸಿ ಆಧ್ಯಾತ್ಮಿಕ ಮೌಲ್ಯಾಧಾರಿತ ನಾಗರೀಕತೆಯನ್ನು ನಿರ್ಮಿಸಲು ಬಂದ ವಿಭೂತಿ ಪುರುಷ. ಆ ವ್ಯಕ್ತಿಯ ವಿಶೇಷತೆಯೆಂದರೆ ಆತನು ತನ್ನ ಸ್ವಂತ ಮನಸ್ಸನ್ನು ಪೂರ್ತಿಯಾಗಿ ಪ್ರಳಯ ಮಾಡಿ ಅಂದರೆ ಸ್ವಂತದೆನ್ನುವುದು ಏನೂ ಇರದಂತಹ ಅಲೌಕಿಕ ಮನಸ್ಸನ್ನು ಹೊಂದಿದವನು. ಎಲ್ಲಾ ಶಕ್ತಿಗಳು ಆತನ ಅಧೀನವಾಗಿರುತ್ತವೆ. ನಿಸರ್ಗದ ಎಲ್ಲಾ ನಿಯಮಗಳನ್ನು ಆತನೇ ಮಾಡಿರುತ್ತಾನೆ. ಸಮಯಕ್ಕನುಸಾರವಾಗಿ ಆ ನಿಯಮಗಳನ್ನು ಬದಲಾಯಿಸುವ ಸಾಮರ್ಥ್ಯವನ್ನೂ ಕೂಡಾ ಹೊಂದಿರುತ್ತಾನೆ. ಆತನ ವಿಚಾರ ಮತ್ತು ಅದರನುಗುಣವಾಗಿ ಆಗುವ ಕೆಲಸಗಳಲ್ಲಿ ಸಮಯದ ಪಾತ್ರವೇನೂ ಇರುವದಿಲ್ಲ. ಯಾವಾಗ ಯಾವ ಕೆಲಸ ಆಗಬೇಕೆಂಬುದು ಅವನೇ ನಿರ್ಧರಿಸುವನು. ಅದರೊಂದಿಗೆ ಕಾಲ ಕಾಲಕ್ಕೆ ಸಂದರ್ಭಗಳು ಕೂಡಾ ಬರುವವು/ಹುಟ್ಟುವವು ಮತ್ತು ಬದಲಾಗುವವು. ಆತನ ವಿಶೇಷತೆಯೆಂದರೆ ಯಾವದನ್ನೂ ಕೂಡಾ ತಾನು ಮಾಡಿರುವ ಕೆಲಸವೆಂದು ತೋರಿಸಿಕೊಡುವದಿಲ್ಲ. ಆತನಿಗೆ ಅಸಾಧ್ಯವೆಂಬುದು ಯಾವದೂ ಇರುವದಿಲ್ಲ. ಎಲ್ಲದರಲ್ಲಿಯೂ ನಿಸ್ಸಿಮನಾಗಿರುತ್ತಾನೆ.

ಸೃಷ್ಟಿಕರ್ತನ ಎಲ್ಲ ಗುಣಗಳನ್ನು ಹೊಂದಿ ಮಾನವ ರೂಪವನ್ನು ತಾಳಿ ಜಗತ್ತಿನ ಮಾನವರನ್ನು ಉದ್ಧಾರ ಮಾಡಲು, ಅಂದರೆ ಮಾನವತ್ವದಿಂದ ದೈವತ್ವದ ಸ್ಥರಕ್ಕೆ ಒಯ್ಯಲು ಬಂದ ಮಹಾತ್ಮ, ಆ ಮಹಾತ್ಮನೆಂದರೆ ನಮ್ಮ ಪೂಜ್ಯ ಗುರುಗಳಾದ ಶ್ರೀ ಬಾಬೂಜಿ ಮಹಾರಾಜರು. ಇಂತಹವರಿಗೆ ಪ್ರಾರಂಭ ಮತ್ತು ಅಂತ್ಯವೆನ್ನುವದು ಇರುವದಿಲ್ಲ. ತಮ್ಮ ಸ್ವಂತ ಸಂಕಲ್ಪದಿಂದಲೇ ಎಲ್ಲ ಲೋಕಗಳ ಆಡಳಿತವನ್ನು ನಿರ್ವಹಿಸುತ್ತಿರುತ್ತಾರೆ.

ಇಂತಹ ಸತ್ಪುರುಷನ ಸತ್ಸಂಗದಿಂದ ಲಾಭ ಪಡೆಯುವದೆಂದರೆ, ಅದು ನಮ್ಮ ಸೌಬಾಗ್ಯ ನಮ್ಮ ಪ್ರೀತಿ, ಭಕ್ತಿ ಮತ್ತು ಶ್ರದ್ಧೆಗಳಿಂದ ಆತನನ್ನು ನಮ್ಮವನನ್ನಾಗಿ ಮಾಡಿಕೊಂಡು ನಮ್ಮ ಮುಂದಿನ ಜೀವನವನ್ನು ಸರಿಪಡಿಸಿಕೊಳ್ಳಬಹುದು. ಆತನೇ ಕೊಟ್ಟ ಶಕ್ತಿಗಳಿಂದ ಮತ್ತು ಆತನ ಸಹಾಯದಿಂದ ನಾವು ನಿರ್ಮಿಸಿಕೊಂಡಿರುವ ಪ್ರಪಂಚವನ್ನು ಪ್ರಳಯ ಮಾಡಿಕೊಳ್ಳಬಹುದು. ಆತನ ಪೂರ್ಣ ಸೃಷ್ಟಿಯನ್ನು ನಾವು ಪಂಚೇಂದ್ರಿಯಗಳಿಂದ ನೋಡಲು ಸಾಧ್ಯವಿಲ್ಲದ ಕಾರಣ ಆತನ ಕೃಪೆಯಾದಾಗ ಕೇವಲ ಅನಿಸಿಕೆ ಮತ್ತು ಅನುಭವಗಳಿಂದ ತಿಳಿದುಕೊಳ್ಳಬಹುದು.

ಸಾಧನೆ ಮಾಡುವದು ನಮ್ಮ ಪ್ರಯತ್ನ ಮಾತ್ರ ಅದರಿಂದ ಏನೂ ಫಲ ಸಿಗಲಿಕ್ಕಿಲ್ಲ. ನಮ್ಮ ಪ್ರಯತ್ನಕ್ಕೆ ಆತನ ಕೃಪೆ ದೊರಕಿದರೆ ಮಾತ್ರ ನಮ್ಮ ಜೀವನದ ಗುರಿಯನ್ನು ತಲುಪಲು ಸಾಧ್ಯ.

ಆದುದರಿಂದ ನಮ್ಮ ಗುರುವೇ ನಮಗೆ ಏಕಮಾತ್ರ ಸ್ವಾಮಿ ಮತ್ತು ಇಷ್ಟ ದೈವ.