(ಮೈಸೂರಿನಲ್ಲಿ, ೨-೧೨-೧೯೬೪ ರಂದು ನೀಡಿದ ಸಂದೇಶ)

ಮಹಾತ್ಮರು ಜನಿಸುವುದು ಆಕಸ್ಮಿಕವಾಗಿ ಅಲ್ಲ. ಜಗತ್ತು ಅವರಿಗಾಗಿ ಉತ್ಕಟ ನಿರೀಕ್ಷೆಯಿಂದ ಕಾದಿರುವಾಗ ಅವರು ಜನ್ಮ ತಳೆಯುತ್ತಾರೆ. ಪ್ರಕೃತಿಯ ನಿಯಮವೇ ಹೀಗಿದೆ. ಮಾನವ ಜೀವನದಲ್ಲಿ, ಸ್ಥೂಲ ಭೌತಿಕತೆಯು ಅಧ್ಯಾತ್ಮದ ಸ್ಥಾನವನ್ನಾಕ್ರಮಿಸಿಕೊಂಡು, ಯೌಗಿಕ ಪ್ರಾಣಾಹುತಿಯು ಬಳಕೆಯಿಂದ ಬಹುತೇಕ ಮರೆಯಾಗಿಹೋಗಿ, ಅಧ್ಯಾತ್ಮವು ದಿಕ್ಕೆಟ್ಟು ತತ್ತರಿಸುತ್ತಿದ್ದ ಸಮಯದಲ್ಲಿ, ನನ್ನ ಗುರುಗಳ ದಿವ್ಯ ಚೇತನವು, ಫತೇಹ್ಗಡ (ಉ.ಪ್ರ.)ದ, ಸಮರ್ಥ ಸದ್ಗುರು ಮಹಾತ್ಮಾ ರಾಮಚಂದ್ರಜಿಯವರ ರೂಪದಲ್ಲಿ ಧರೆಗಿಳಿದು ಬಂದಿತು. ಈ ಆಧ್ಯಾತ್ಮಿಕ ಪ್ರತಿಭಾಶಾಲಿಯು ೧೮೭೩ ನೇ ಇಸವಿಯ ಫೆಬ್ರುವರಿ ೨ ನೇ ದಿನಾಂಕ, ವಸಂತ ಪಂಚಮಿಯ ದಿನ ಜನಿಸಿದರು. ಅವರ ಆಗಮನವು ಅಧ್ಯಾತ್ಮದ ಹೊಸ ಯುಗದ ಆಗಮನವನ್ನು ಸಂಕೇತಿಸುತ್ತದೆ. ಅವರು ಪ್ರಕೃತಿಯ ಒಂದು ಅದ್ಭುತ ಸೃಷ್ಟಿಯಾಗಿದ್ದರು, ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಅವರ ಕಾರ್ಯವು ಸಾಮಾನ್ಯ ಕಲ್ಪನೆಗೆ ಮೀರಿದ್ದು. ಅವರು, ಕಾಲದ ಆವಶ್ಯಕತೆಗೆ ತಕ್ಕಂತೆ, ಸಾಮಾನ್ಯ ಜನರ ಸಾಮರ್ಥ್ಯಕ್ಕೆ ಅನುಗುಣವಾಗಿ, ರಾಜಯೋಗವನ್ನು ಅನುಷ್ಠಾನ ಯೋಗ್ಯವಾಗುವಂತೆ ಮಾರ್ಪಡಿಸಿದ್ದಾರೆ. ಅವರು ಈ (ರಾಜಯೋಗ) ಶಾಸ್ತ್ರದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿದ್ದಾರೆ, ಮತ್ತು ಮನುಷ್ಯನು ತಲುಪಬಹುದಾದ ಅತ್ಯಂತ ಪರಾಕಾಷ್ಠೆಯ ನೆಲೆಯನ್ನು, ಅತ್ಯಲ್ಪ ಸಮಯದಲ್ಲಿಯೇ ಕಾರ್ಯತಃ ಸಾಧಿಸಿ ಪಡೆಯಲು ಶಕ್ಯಗೊಳಿಸಿದ್ದಾರೆ. ಅವರು ಸಂಪೂರ್ಣ ಕ್ರಿಯಾಶೀಲರಾಗಿದ್ದರು, ಎಷ್ಟೆಂದರೆ, ತತ್ಪರಿಣಾಮವಾಗಿ, ಅವರ ಅನುಯಾಯಿಗಳಲ್ಲದವರೂ ಸಹ, ಅವರಿಂದ ಸದಾ ಹೊರಸೂಸುತ್ತಿದ್ದ ಪ್ರಭಾವದ ಕ್ರಿಯೆಯಿಂದ ಪರಿವರ್ತನೆ ಹೊಂದುತ್ತಿದ್ದರು.

ಭರತಖಂಡದಲ್ಲಿ ಬಹುಮಟ್ಟಿಗೆ ಎಲ್ಲ ಕಾಲಗಳಲ್ಲಿಯೂ ಅತ್ಯುನ್ನತ ಯೋಗ್ಯತೆಯುಳ್ಳ ಸಂತರು ಆಗಿ ಹೋಗಿದ್ದಾರೆ. ಅವರು ತಮ್ಮ ಬೋಧನೆ ಹಾಗೂ ತತ್ವೋಪದೇಶಗಳಿಂದ ಮಾರ್ಗದರ್ಶನ ನೀಡಿ, ಜನತೆಯನ್ನು ಉನ್ನತ ಪ್ರಜ್ಞೆಯ ಮಟ್ಟಕ್ಕೆ ಎತ್ತಲು ಪ್ರಯತ್ನಿಸಿದ್ದಾರೆ. ಆದರೆ, ಅವರೆಲ್ಲರಲ್ಲಿ, ತನ್ನ ಅಂತಶ್ಯಕ್ತಿಯಿಂದ ಪ್ರಚೋದಿಸಲು ಬಲ್ಲವನೇ ಆಧ್ಯಾತ್ಮ ಸಾಧನೆಯಲ್ಲಿ ಅತ್ಯುತ್ತಮ ಮಾರ್ಗದರ್ಶಿಯಾಗಬಲ್ಲನು. ನಮ್ಮ ಆಂತರಿಕ ತೊಡಕುಗಳನ್ನು ಗ್ರಹಿಸಿ, ನಮ್ಮ ವಾಸ್ತವಿಕ ಆವಶ್ಯಕತೆಗಳನ್ನು ಅರಿತು, ದಾರಿಯುದ್ದಕ್ಕೂ ಮಾರ್ಗದರ್ಶನ ನೀಡಿ ಅಂತಿಮಗುರಿಯವರೆಗೆ ಮುಟ್ಟಿಸಲು ಗೊತ್ತಿರುವ ಏಕೈಕ ವ್ಯಕ್ತಿಯೆಂದರೆ ಆತನೇ. ಆತನು ಅದಕ್ಕೋಸ್ಕರ ಬಳಸುವ ಮುಖ್ಯ ಪರಿಕರವೆಂದರೆ, ಯೌಗಿಕ ಪ್ರಾಣಾಹುತಿ. ನಮ್ಮ ಮನಸ್ಸಿನ ಅಂತಃಪ್ರವೃತ್ತಿಗಳನ್ನು ನೇರ್ಪಡಿಸಿ, ಕ್ಷಿಪ್ರವಾಗಿ ಬದಲಾವಣೆಯನ್ನುಂಟುಮಾಡಿ, ಕ್ರಮಶಃ ಪರಿವರ್ತನೆಯನ್ನು ಸಾಧಿಸಲು ಇರುವ ಪರಿಣಾಮಕಾರೀ ಪ್ರಕ್ರಿಯೆಯೆಂದರೆ ಇದೊಂದೇ. ಪ್ರಸ್ತುತ ಪರಿಸ್ಥಿತಿಯಲ್ಲಿ ವಿಷಪೂರಿತ ಪರಿಣಾಮವು ಇಡೀ ವಿಶ್ವವನ್ನು ಕವಿದು, ಪ್ರತಿಯೊಬ್ಬರ ಮನಸ್ಸನ್ನು ಆಕ್ರಮಿಸಿ, ಅದನ್ನು ಸತತ ಗೊಂದಲ ಹಾಗೂ ಅಸ್ತವ್ಯಸ್ತ ಸ್ಥಿತಿಗೆ ತಂದುಬಿಟ್ಟಿದೆ ; ಇಂದ್ರಿಯಗಳೆಲ್ಲವೂ ಹತೋಟಿ ಮೀರಿವೆ, ವ್ಯಕ್ತಿಗತ ಮನಸ್ಸು ಪ್ರತಿಕ್ಷಣವೂ ಹಾರಾಡಲುಪಕ್ರಮಿಸಿದೆ. ಇಂಥ ಇಂದಿನ ಪರಿಸ್ಥಿತಿಯಲ್ಲಿ, ತನ್ನ ಉತ್ಕೃಷ್ಟ ಶಕ್ತಿಗಳ ಆಸರೆಯನ್ನು ನೀಡಿ, ನಮ್ಮನ್ನು ಮುನ್ನಡೆಸಿಕೊಂಡುಹೋಗಲು, ಅಂತಹ ಮಹಿಮಾನ್ವಿತ ವ್ಯಕ್ತಿಯೊಬ್ಬರ ತೀವ್ರ ಆವಶ್ಯಕತೆ ನಮಗಿದೆ.

ನ ಮೇಲೆ ತಿಳಿಸಿದ ಗುರುಮಹಾರಾಜರ ದಿವ್ಯವ್ಯಕ್ತಿತ್ವದಲ್ಲಿ ಇದೇ ಇದ್ದಿತು. ಅವರು ರಾಜಯೋಗ ಪದ್ದತಿಯನ್ನು ಪರಿಷ್ಕರಿಸಿ ಬಳಕೆಗೆ ತಂದರು. ಅದು, ಮುಂದೆ, ಸಹಜಮಾರ್ಗ’ ಎಂದು ಬೆಳಕಿಗೆ ಬಂದಿತು. ಈಗ, ನಮ್ಮ ಮಿಷನ್ನಿನಲ್ಲಿ ಅನುಸರಿಸಲಾದ ಪದ್ಧತಿಯು ಅಂತಿಮಗುರಿಯನ್ನು ಸಾಧಿಸುವ, ಸಹಜವೂ, ಸುಲಭವೂ ಆದ ಮಾರ್ಗವನ್ನು ಪ್ರಸ್ತುತಪಡಿಸುತ್ತದೆ. ಅಂಕೆ ಮೀರಿದ, ಇಂದ್ರಿಯಗಳ ಅನಿಯಂತ್ರಿತ ಕ್ರಿಯೆಗಳೇ, (ಆಧ್ಯಾತ್ಮಿಕ) ಮಾರ್ಗದಲ್ಲಿ ಬರುವ ದೊಡ್ಡ ತೊಡಕು. ಇದಕ್ಕೆ, ಅವುಗಳನ್ನು ಅದುಮಿಡಲು, ಇಲ್ಲವೆ ಹತ್ತಿಕ್ಕಿಡಲು ಉಪದೇಶಿಸಲಾದ ಪ್ರಾಚೀನ ಪದ್ಧತಿಗಳು ಅಷ್ಟು ಉಪಯೋಗಕ್ಕೆ ಬರಲಾರವು. ವಾಸ್ತವಿಕವಾಗಿ, ಸಮಸ್ಯೆಯ ಪರಿಹಾರವು ಅವುಗಳ (ಇಂದ್ರಿಯಗಳ) ಕ್ರಿಯೆಗಳ ಸೂಕ್ತ ನಿಯಂತ್ರಣದಿಂದಲೇ ಹೊರತು, ಅವನ್ನು ಅದುಮಿಡುವದರಿಂದ, ಅಥವಾ ಬಲವಂತವಾಗಿ ನಿಲ್ಲಿಸುವುದರಿಂದಲ್ಲ. ಮನುಷ್ಯನ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಅಸಾಧ್ಯವಾದ ಅಂಥ ಒರಟು ಕ್ರಮಗಳನ್ನು ‘ಸಹಜಮಾರ್ಗವು ಸೂಚಿಸುವುದಿಲ್ಲ. ಸಹಜಮಾರ್ಗ ಪದ್ಧತಿಯಲ್ಲಿ ನೀಡಲಾಗುವ ಆಧ್ಯಾತ್ಮಿಕ ಶಿಕ್ಷಣದಲ್ಲಿ, ಇಂದ್ರಿಯಗಳು ಸಹಜವಾಗಿ ತಮ್ಮ ಮೂಲಸ್ಥಿತಿಗೆ ಬರುವಂತೆ, ಅಂದರೆ, ನಾವು ಮೊತ್ತಮೊದಲ ಬಾರಿಗೆ ಮಾನವ ರೂಪವನ್ನು ತಳೆದಾಗ ಇದ್ದಾಗಿನ ಸ್ಥಿತಿಗೆ ಸ್ವಾಭಾವಿಕವಾಗಿ ಬರುವಂತೆ ಅವುಗಳ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತದೆ. ಅಷ್ಟೇ ಅಲ್ಲ, ತಮ್ಮಷ್ಟಕ್ಕೆ ತಾವೇ ಕೆಲಸ ಮಾಡುತ್ತಿರುವ ನಿಮ್ಮ ವೃತ್ತಿಗಳನ್ನು, ಪ್ರಜ್ಞಾನದ ಉನ್ನತ ಕೇಂದ್ರಗಳ ಹತೋಟಿಯಲ್ಲಿ ತರಲಾಗುತ್ತದೆ. ಹೀಗೆ, ಅವುಗಳ ವ್ಯತಿರಿಕ್ತ ಚಟುವಟಿಕೆಗಳನ್ನು ನಿಲ್ಲಿಸಲಾಗುತ್ತದೆ. ಮತ್ತು, ಉನ್ನತ ಕೇಂದ್ರಗಳು, ಅಂತೆಯೇ, ದೈವೀ ಕೇಂದ್ರಗಳ ಅಧೀನದಲ್ಲಿ ಬರುತ್ತವೆ. ಹೀಗೆ, ಇಡೀ ಜೀವಮಂಡಲವು ದೈವೀಕರಣಗೊಳ್ಳಲು ಆರಂಭಿಸುತ್ತದೆ.

ಮತ್ತೊಂದು ಮಾತೆಂದರೆ, ಧರ್ಮ ಗ್ರಂಥಗಳಲ್ಲಿ, ಸರ್ವೇಸಾಮಾನ್ಯವಾಗಿ ಮಾನವನ ಪ್ರಗತಿಪಥದಲ್ಲಿ ಅಪಾಯಕಾರಿ ಅಡಚಣೆಗಳೆಂದು ಹೇಳಲಾದ ಕಾಮ, ಕ್ರೋಧ, ಲೋಭ, ಮೋಹ ಮತ್ತು ಅಹಂಕಾರಗಳೆಂಬ “ಪಂಚ ವಿಕಾರ”ಗಳ ಕೂಡ ಬಹಳ ತಪ್ಪಾಗಿ ಗ್ರಹಿಸಲ್ಪಟ್ಟಿವೆ.

ಇವುಗಳಲ್ಲಿ, ಮೊದಲಿನವೆರಡು, ಅಂದರೆ ಕಾಮ ಮತ್ತು ಕ್ರೋಧಗಳು ದೇವರಿಂದಲೇ ನಮಗೆ ಬಂದವುಗಳು, ಮತ್ತು ಲೋಭ, ಮೋಹಗಳು ನಾವೇ ಸೃಷ್ಟಿಸಿಕೊಂಡಂಥವು. ದೇವರಿಂದ ಬಂದುದನ್ನು ನಾವು ತ್ಯಜಿಸಲಾಗುವುದಿಲ್ಲ. ಆದರೆ, ದೈವೀ ಜೀವನಕ್ಕೆ ತಕ್ಕುದಾಗುವಂತೆ, ಸೂಕ್ತ ತಹಬಂದಿಯಲ್ಲಿ ಬರುವಂತೆ ಮಾರ್ಪಡಿಸಿಕೊಳ್ಳಬಹುದು. ನಾನಿಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬಹುದು : ಹೇಗಾದರೂ ಮಾಡಿ ಒಂದು ವೇಳೆ ಕಾಮವು ನಾಶವಾಯಿತೆನ್ನಿ, ಆಗ “ಬುದ್ದಿ ‘ಯೂ ಪೂರ್ತಿಯಾಗಿ ನಶಿಸಿಹೋಗುತ್ತದೆ. ಯಾಕೆಂದರೆ, ಕಾಮವು ‘ಬುದ್ದಿ ‘ಗೆ ಸಂಬಂಧಿಸಿದ ಕೇಂದ್ರದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕ್ರೋಧವು ನಾಶಗೊಳಿಸಲ್ಪಟ್ಟರೆ, ಮನುಷ್ಯನು ದೇವರ ಕಡೆಗಾಗಲಿ, ಅಥವಾ ಪ್ರಾಪಂಚಿಕತೆಯ ಕಡೆಗಾಗಲೀ ಮುನ್ನಡೆಯಲು ಸಮರ್ಥನಾಗಲಾರ. ನಿಜವಾಗಿ ಕ್ರಿಯೆಗಳನ್ನು ಉತ್ತೇಜಿಸುವುದು ‘ ಕ್ರೋಧ’ವೇ. ಅದರಿಂದಾಗಿ ದೇಹಧಾರಿಯಾದ ಜೀವಾತ್ಮನಿಗೆ ಅದೊಂದು ಅಗತ್ಯ ವಸ್ತು. ‘ಅಹಂಕಾರ’ದ ವಿಷಯವೂ ಹಾಗೆಯೇ, ಸಾಮಾನ್ಯವಾಗಿ ವ್ಯಕ್ತಿವಿಶೇಷ’ಕ್ಕೆ ಉಪಯೋಗಿಸಲಾದ “ಅಹಂ” (ನಾನು) ಶಬ್ದವನ್ನು ‘ಶರೀರ’ದೊಂದಿಗೆ ಒಂದಾಗಿ ಗುರುತಿಸಲಾಗುತ್ತದೆ. ಹಾಗಿದ್ದಾಗ್ಯೂ, ಅದು ತೆರೆಯಮರೆಯಲ್ಲಿ ಕೆಲಸಮಾಡುತ್ತ, ಹಿಂದಿರುವ ‘ಜೀವಂತ’ ಶಕ್ತಿಯನ್ನು (ಅದನ್ನು ಬೇಕಾದರೆ ಆತ್ಮ ಅಥವಾ ಚೇತನವೆನ್ನಿರಿ.) ಜತೆಜತೆಗೇ ಸೂಚಿಸುತ್ತದೆ. ಹೇಗಾದರೂ ಮಾಡಿ, ದೇಹದ, ಅಥವಾ ‘ಜೀವಾತ್ಮದ ಭಾವದಿಂದ ಕೂಡ ಓರ್ವನು ಬಿಡುಗಡೆ ಹೊಂದಿದರೆ, ಆಗ ತಾನು ಹುಡುಕುತ್ತಿರುವ ವಸ್ತುವಿಗೆ ಅತ್ಯಂತ ಸಮೀಪ ಸಾಗುತ್ತಾನೆ. ಇವಾವುದೂ ತಾವಾಗಿಯೇ ಕೆಟ್ಟದ್ದೂ ಅಥವಾ ಹಾನಿಕಾರಕವೂ ಅಲ್ಲ. ಅವನ್ನು ತಪ್ಪು ರೀತಿಯಲ್ಲಿ ಬಳಸಿ, ದೈವತ್ವದ ಕಡೆಗಿನ ನಮ್ಮ ಪ್ರಯಾಣದಲ್ಲಿ ಅವು ಅಡ್ಡಿಗಳಾಗುವಂತೆ ಮಾಡಿಕೊಂಡವರು ನಾವೇ. ಅವುಗಳ ಪರಿಶುದ್ಧ ಸ್ಥಿತಿಯಲ್ಲಿ ಅವು ನಮಗೆ ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿಯೂ- ಅದು ಪ್ರಾಪಂಚಿಕವಿರಲಿ, ಅಥವಾ ಪಾರಮಾರ್ಥಿಕವಿರಲಿ ತುಂಬಾ ಸಹಾಯಕಾರಿಯಾಗಿವೆ. (ಹಾಗಾಗಿ ನಾವು ಅವುಗಳನ್ನು ತುಚ್ಛೀಕರಿಸಿ, ತುಳಿಯಬೇಕಾಗಿಲ್ಲ, ಅವುಗಳನ್ನು ಶುದ್ಧಗೊಳಿಸಿ, ಅವುಗಳ ಚಟುವಟಿಕೆಗಳನ್ನು ಸರಿದಾರಿಯಲ್ಲಿ ತರಬೇಕಷ್ಟೇ.

ಸಹಜಮಾರ್ಗ ಪದ್ಧತಿಯಲ್ಲಿ, ವ್ಯಕ್ತಿಯ ಅಸ್ತಿತ್ವದಲ್ಲಿನ ಈ ಎಲ್ಲ ಬದಲಾವಣೆಗಳು ಪ್ರಾಣಾಹುತಿಯ ಪ್ರಕ್ರಿಯೆಯ ಮೂಲಕ ಅತ್ಯಂತ ಸ್ವಾಭಾವಿಕ ರೀತಿಯಲ್ಲಿ ಉಂಟಾಗುತ್ತದೆ. ವಾಸ್ತವದಲ್ಲಿ ಅಭ್ಯಾಸಿಯ ಮನಸ್ಸಿನ ನಿಯಂತ್ರಣವು ಗುರುವಿನ ಕೆಲಸವಾಗಿದೆಯೇ ಹೊರತು ಅಭ್ಯಾಸಿಯದಲ್ಲ. ವ್ಯಷ್ಟಿ ಮನಸ್ಸನ್ನು ಬ್ರಹ್ಮಾಂಡ ಮಾನಸದ ಅವಸ್ಥೆಯ ಹಂತಕ್ಕೆ ತಂದಾಗ ಅದು ತನ್ನ ನಿಜರೂಪವನ್ನು ತಳೆದು ಸರಿಯಾದ ಮಾರ್ಗದರ್ಶನವನ್ನು ಕೊಡಲಾರಂಭಿಸುತ್ತದೆ. ಮಾನವನು ಎರಡು ಧ್ರುವಗಳನ್ನುಳ್ಳ ಜೀವಿ. ಅದರ ಬೇರು ”ಮೂಲ ಸ್ಥಾನದ ಸಮೀಪವಿದೆ, ಅದರ ಮತ್ತೊಂದು ಕೊನೆಯು ಪ್ರಪಂಚದ ಕಡೆಗಿದೆ. ಹೇಗಾದರೂ ಮಾಡಿ, ವ್ಯಷ್ಟಿ ಮನಸ್ಸನ್ನು ಬ್ರಹ್ಮಾಂಡ ಮನದ ಕಡೆಗೆ ತಿರುಗಿಸಿದರೆ, ಅದು ತನ್ನ ನಿಜವಾದ ಬಣ್ಣದಲ್ಲಿ ಗೋಚರಿಸತೊಡಗುತ್ತದೆ. ವಸ್ತುತಃ ಪ್ರಕೃತಿಯ ಶಕ್ತಿಗಳ ಚಲನೆಯನ್ನುಂಟುಮಾಡಿ, ಸೃಷ್ಟಿಯನ್ನು ಅಸ್ತಿತ್ವಕ್ಕೆ ತಂದ ‘ ಕ್ಷೋಭ’ದ ಪ್ರತಿಬಿಂಬವೇ ಮಾನವ ಜೀವಿಯ ಮನಸ್ಸು’ ಆಗಿದೆ. ಸೃಷ್ಟಿಯ ಚಲನೆಯು ಪ್ರದಕ್ಷಿಣಾಕಾರದಲ್ಲಿ ಆರಂಭಗೊಂಡಿತು. ಅಂತೆಯೇ, ನಾವು ಪ್ರಕೃತಿಯಲ್ಲಿ ಪ್ರತಿಯೊಂದೂ ಗೋಲಾಕಾರದಲ್ಲಿರುವುದನ್ನು ಕಾಣುತ್ತೇವೆ. ಹೀಗೆ, ವ್ಯಷ್ಟಿ ಮನಸ್ಸು, ದೈವೀಮನಸ್ಸಿನ, ಅಂದರೆ ಕ್ಲೋಭದ ಒಂದಂಶವೇ ಆಗಿದೆ. ಹೇಗಾದರೂ ಮಾಡಿ, ನಾವು ವ್ಯಷ್ಟಿ ಮನಸ್ಸಿನ ಅಧೋಮುಖೀ ಪ್ರವೃತ್ತಿಯನ್ನು ಮೂಲದ ಕಡೆಗೆ ತಿರುಗಿಸಿದರೆ ಅದು ಸಂಪೂರ್ಣ ಶಾಂತ ಹಾಗೂ ನೆಮ್ಮದಿಯ ಸ್ಥಿತಿಗೆ ಬರುತ್ತದೆ. ಆದರೆ ನನ್ನ ಸ್ವಂತ ಅನುಭವದ ಮೇರೆಗೆ ಹೇಳುವುದಾದರೆ, ವ್ಯಷ್ಟಿ ಮನಸ್ಸನ್ನು ಕ್ರಿಯಾಶೀಲ ವ್ಯಕ್ತಿಯೋರ್ವನ (Dynamic Personality) ಸಹಾಯ ಮಾತ್ರವೇ ಮೂಲಸ್ಥಾನದ ಕಡೆಗೆ ತಿರುಗಿಸಬಲ್ಲದು. ಅಂತಹ ವ್ಯಕ್ತಿಯ ಸತ್ವ ಮತ್ತು ಸಂಕಲ್ಪ ಶಕ್ತಿ ಮಾತ್ರವೇ ಈ ವಿಷಯದಲ್ಲಿ ಮಹತ್ವಪೂರ್ಣವಾಗುವುದು.

ಮಾನವನ ಅತ್ಯುನ್ನತ ಗತಿಯನ್ನು ಕುರಿತು ಹೇಳುವುದಾದರೆ, ಭಗವಂತನ ಅನುಗ್ರಹದಿಂದ ಕೇಂದ್ರಮಂಡಲವನ್ನು ಪ್ರವೇಶಿಸಿ, ಎಲ್ಲ ಪ್ರಭಾವಲಯಗಳನ್ನು ದಾಟಿದಾಗ, ನಮ್ಮ ಶರೀರದ ಅಣುರೇಣುಗಳೆಲ್ಲವೂ ಶಕ್ತಿಯಾಗಿ ಮಾರ್ಪಡಲಾರಂಭಿಸುತ್ತವೆ ; ತದನಂತರ, ಶಕ್ತಿಯು ‘ಚರಮಸ್ಥಿತಿ’ಯಾಗಿ ಪರಿವರ್ತಿತವಾಗುತ್ತದೆ. ಇದು ಕೇವಲ ಅಭ್ಯಾಸ ಹಾಗೂ ಸ್ವಪ್ರಯತ್ನದಿಂದ ಸಾಧ್ಯವಾಗುವುದಿಲ್ಲ. ಉನ್ನತ ಸ್ತರಗಳಲ್ಲಿನ ಸ್ಥಿತಿಗಳು ಹೇಗಿರುತ್ತವೆಯೆಂದರೆ, ಯಾರಾದರೂ ಸ್ವಪ್ರಯತ್ನದಿಂದ ಕೊಂಚ ಮೇಲೇರಿದರೂ, ಮೇಲಿನಿಂದಿರುವ ಒತ್ತಡದಿಂದಾಗಿ ಕೆಳಕ್ಕೆ ಜಾರುತ್ತಾನೆ. ಹಾಗಾಗಿ, ಉನ್ನತ ವಲಯಗಳನ್ನು ಪ್ರವೇಶಿಸಲು ಗುರುವಿನ ನೆರವು ಅನಿವಾರ್ಯವಾಗಿದೆ. ಸಹಜಮಾರ್ಗ, ಮತ್ತು ಜಗತ್ತಿಗೆ ಅದರ ಕೊಡುಗೆಯನ್ನು ಕುರಿತ ಸಂಕ್ಷೇಪವಾದ ವಿವರಣೆಯಿದು. ಇದನ್ನು ಸ್ವತಃ ಪರೀಕ್ಷಿಸಿ, ಪ್ರಯೋಗಸಿದ್ದ ಅನುಭವವನ್ನು ಪಡೆಯಲು ಪ್ರತಿಯೊಬ್ಬನಿಗೂ ಸ್ವಾಗತವಿದೆ.