ಸೃಷ್ಟಿಯ ನಿರ್ಮಾಣದ ಕಾಲಕ್ಕೆ ಒಂದು ತರಹದ ಕೋಭೆ ಅಂದರೆ ವೈಚಾರಿಕ ಮಂಥನವುಂಟಾಯಿತು. ಆ ವಿಚಾರದಲ್ಲಿ ಒಂದು ಶಕ್ತಿಯು ಅದರಲ್ಲಿ ಚೇತನವನ್ನುಂಟು ಮಾಡಿತು. ಆ ಚೇತನದಿಂದ ಅದರಲ್ಲಿ ಒಂದು ತರಹದ ಗತಿ ಬಂದಿತು (Motionless Motion) ಇದರಿಂದ ಅದರಲ್ಲಿ ಶಾಖ (Heat) ಉತ್ಪನ್ನವಾಯಿತು ಮತ್ತು ಈ ಶಾಖದಿಂದ ಅದು ಪಸರಿಸತೊಡಗಿತು. ಈ ಕ್ರಿಯೆಯಿಂದ ಅಗಣಿತ ಕಣಗಳು ಅದರಿಂದ ಹೊರ ಹೊಮ್ಮಿದವು. ಆ ಶಕ್ತಿಯ ವಿಚಾರ ಶಕ್ತಿಯಾಗಿತ್ತು. ಸಾಕಷ್ಟು ಕಾಲದ ನಂತರ ಪ್ರತಿಯೊಂದು ಕಣವು ತನ್ನ ಇರುವಿಕೆಯ ಅರಿವನ್ನು ಹೊಂದತೊಡಗಿತು. ಆ ಅರಿವಿಕೆಯೇ ನಾನು ಎಂದಾಯಿತು. ಆ ಮೂಲ ಕೇಂದ್ರದಿಂದ ಬೇರೆಯಾದುದರ ಅರಿವಿನಿಂದಾಗಿ ಆ ಕಣಗಳಲ್ಲಿ ಒಂದು ತರಹದ ನೋವುಂಟಾಯಿತು. ಆ ನೋವಿನಿಂದ ಪ್ರತಿಯೊಂದು ಕಣವು ಶಾಂತಿಗಾಗಿ ತೊಳಲಾಡತೊಡಗಿತು. ಆಗ ಆ ಕಣಗಳು ಮೂಲ ಕೇಂದ್ರದ ಕಡೆಗೆ ಗಮನ ಹರಿಸದೇ ಬೇರೆ ಕಡೆ (ಮೂಲದಿಂದ ಹೊರಗೆ) ಗಮನಕೊಡಲು ಪ್ರಾರಂಬಿಸಿದವು. ಅಲ್ಲಿ ಮೂಲ ಕೇಂದ್ರದ ಪ್ರತಿಬಿಂಬವನ್ನು ನೋಡಲು ಪ್ರಾರಂಬಿಸಿದವು ಮತ್ತು ಅದರಲ್ಲಿಯೆ ಅಭಿರುಚಿ ಹುಟ್ಟಿ ಬಹಿರ್ಮುಖಿಯಾದವು. ಅಲ್ಲಿಂದ ಇಂದ್ರಿಯಗಳ ಜನನವಾಗಿ ಮತ್ತು ಪಂಚೇಂದ್ರಿಯಗಳ ಮೂಲಕ ಹೊರ ವಸ್ತುಗಳೊಡನೆ ಒಂದು ಪ್ರಕಾರದ ಜೋಡಣೆ ನಿರ್ಮಾಣವಾಗಿ ಅವುಗಳನ್ನು ಅನುಭವಿಸಿ ಒಂದು ತರಹದ ಆನಂದವನ್ನು ಪಡೆಯಲಾರಂಬಿಸಿದವು.

ಈ ಮುಂಚೆ ಅಹಂಕಾರವು ಬಹಳ ಸೂಕ್ಷ್ಮ ರೂಪದಲ್ಲಿದ್ದಿತು. ಬರಬರುತ್ತಾ ಅದು ಸ್ಕೂಲ ರೂಪವನ್ನು ಹೊಂದಿತು. ಇದರಿಂದಾಗಿ ತನ್ನದೇ ಆದ ನಿರ್ಮಾಣವನ್ನು ಪ್ರಾರಂಭಿಸಿತು. ಇವೆಲ್ಲದಕ್ಕೂ ಆ ಮೂಲ ಶಕ್ತಿಯೇ ಕಾರಣ. ಬರಬರುತ್ತಾ ತನ್ನದೇ ಆದ ಸವಿರುಚಿ, ಇಚ್ಛೆ, ವಾತಾವರಣ ಮತ್ತು ಸಂಗತಿಗಳಿಂದ ತನ್ನದೇ ಆದ ಜಗತ್ತನ್ನು ಸೃಷ್ಟಿಸಲು ಪ್ರಾರಂಭಿಸಿತು. ನಿರ್ಮಾಣಕ್ಕನುಗುಣವಾಗಿ ತನ್ನದೇ ಆದ ರೀತಿಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾರಂಭಿಸಿತು. ಆಗ ಒಳ್ಳೆಯದು-ಕೆಟ್ಟದ್ದು, ಬೇಕು-ಬೇಡ, ನಾನು-ನನ್ನದು, ನನ್ನವರು-ಬೇರೆಯವರು, ಸುಖ-ದುಃಖ, ನೋವು-ನಲಿವು ಇತ್ಯಾದಿಗಳಿಂದ ದಿನೇ ದಿನೇ ಅಧೋಮುಖವಾಗಿ ಬೆಳೆಯಲಾರಂಭಿಸಿತು. ಹೀಗೆ ಒಂದು ಮಾಯಾಲೋಕವನ್ನೇ ಸೃಷ್ಟಿಸಿಕೊಂಡಿತು.

ಒಂದು ವಿಶೇಷತೆಯೆಂದರೆ ಮೂಲ ಕೇಂದ್ರದಿಂದ ಹೊರ ಹೊಮ್ಮಿದ ಎಲ್ಲ ಕಣಗಳಲ್ಲಿಯೂ ಅದೇ ಮೂಲ ಕೇಂದ್ರದಲ್ಲಿದ್ದ ಶಕ್ತಿ ಸಾಮರ್ಥ್ಯಗಳಿದ್ದವು. ಆ ಶಕ್ತಿಯ ಧಾರೆಯು ಮೇಲಿನಿಂದ ಕೆಳಗಿನ ದಿಶೆಯಲ್ಲಿ ಇದ್ದಿತು. ಆದರೆ ಕಣಗಳು ಅದರ ವಿರುದ್ದ ದಿಶೆಯನ್ನು ತೆಗೆದುಕೊಂಡವು ಮತ್ತು ಆ ದಿಶೆಯಲ್ಲಿಯೇ ಪ್ರಗತಿ ಹೊಂದತೊಡಗಿದವು. ಎಲ್ಲಾ ಕಣಗಳ ದಿಕ್ಕು ಬೇರೆ ಬೇರೆಯಾಗಿದ್ದು ತಮ್ಮ ತಮ್ಮ ಮಾರ್ಗವೇ ಸರಿಯೆಂದು ಕಲ್ಪಿಸಿ ಕ್ಷಣಿಕ ಆನಂದದ ಮಾರ್ಗದಲ್ಲಿ ಸಾಗತೊಡಗಿದವು. ಅದರಿಂದಾಗಿ ಅವು ದೈವತ್ವವನ್ನು ಬಿಟ್ಟು ಮಾನವತ್ವದ ಕಡೆಗೆ ಸಾಗುತ್ತಾ ತಾವೇ ನಿರ್ಮಿಸಿಕೊಂಡ ಜಾಲದಲ್ಲಿ ಸುರುಳಿಕೊಂಡವು. ಆ ಮೂಲ ಕೇಂದ್ರದ ಮತ್ತು ಕಣಗಳ ವೈಖರಿ, ಶಕ್ತಿ ಸಾಮರ್ಥ್ಯಗಳು ಒಂದೇ ಆಗಿದ್ದರೂ ದಿಕ್ಕು ಮಾತ್ರ ಬೇರೆ ಬೇರೆ ಆಗಿತ್ತು.