(೧೨೧೯೬೪ ರಂದು ಬೆಂಗಳೂರಿನಲ್ಲಿ ನೀಡಿದ ಸಂದೇಶ

ಪ್ರಕೃತಿಯ ಗೂಢತೆಯನ್ನು ಅನಾವರಣಗೊಳಿಸುವುದು ಮಾನವನ ನಿರಂತರ ಪ್ರಯತ್ನವಾಗಿದ್ದು, ಅದು ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿದೆ. ಈ ರೀತಿ, ಪ್ರಕೃತಿಯಲ್ಲಿ ಗೋಚರಿಸುವ ಎಲ್ಲದರಲ್ಲಿಯೂ ಅವನ ಅನ್ವೇಷಣೆ ಮುಂದುವರೆದಿದೆ. ನಾವು ಏನನ್ನಾದರೂ ಅರಸತೊಡಗಿದರೆ, ನಮ್ಮ ಚಿಂತನೆಗೆ ಏನಾದರೊಂದು ವಿಷಯವು ದೊರೆಯುವುದು. ನಾವು ಅದರಾಚೆಗೆ ಮುಂದುವರಿದಾಗ, ಆ ಗೂಢದ ಹಿಂದಿರುವ ರಹಸ್ಯವನ್ನು ಕಾಣುತ್ತೇವೆ. ಚಿಂತನೆಯು ಮತ್ತೂ ವಿಕಸನಗೊಂಡಾಗ, ಅದು, ಎಲ್ಲದರ ಹಿಂದೆ ಏನಿದೆಯೋ ಅಲ್ಲಿಗೆ ನಮ್ಮನ್ನು ಕೊಂಡೊಯ್ಯುತ್ತದೆ. ನಮ್ಮ ಪೂರ್ವಜರು ಅದರಲ್ಲಿ ಇಣುಕಿ ನೋಡಿದಾಗ, ನೇರವಾಗಿ, ಜಗತ್ತಿನ ಅಂತಿಮ ಮೂಲಕಾರಣ, ಜೀವೇಶ್ವರ ಸಂಬಂಧ, ಮತ್ತು ಪ್ರಕೃತಿಯನ್ನು ಪ್ರತಿನಿಧಿಸುವ ಜಡ ಹಾಗೂ ಚೇತನಾತ್ಮಕ ಮೌಲ್ಯಗಳನ್ನು ಕಂಡುಹಿಡಿಯಲು ಮುನ್ನಡೆದರು. ನಾವು ನಿಜವಾಗಿ ಅದರೊಳಕ್ಕೆ ಇಣುಕಿದರೆ, ರಚನಾತ್ಮಕ ಹಾಗೂ ವಿನಾಶಕಾರಕ ಶಕ್ತಿಗಳು, ಅಣು ಮತ್ತು ಕೋಶಗಳ ರೂಪದಲ್ಲಿರುವುದು ಕಾಣಸಿಗುತ್ತದೆ. ಶಕ್ತಿಚಾಪಗಳೂ ಅಲ್ಲಿವೆ. ಧನಾತ್ಮಕ ಮತ್ತು ಋಣಾತ್ಮಕ ಕೋಶಗಳೂ ತಮ್ಮ ಅಸ್ತಿತ್ವದ ಪೂರ್ಣವಿವರಗಳೊಂದಿಗೆ ಅಲ್ಲಿವೆ. ಗಹನವಾಗಿ ತೋರುವ ಈ ಎಲ್ಲ ಶಕ್ತಿಗಳನ್ನು ಸೃಜನಾತ್ಮಕ ಕಾರ್ಯದಲ್ಲಿ ವಿನಿಯೋಗಿಸುವುದು ತಮ್ಮ ಹೊಣೆಯೆಂದು ನಮ್ಮ ಋಷಿಗಳು ಭಾವಿಸಿದರು. ಅವರು ಸಕಲವಸ್ತುಗಳ ಆಚೆಗೂ ಮುನ್ನಡೆದರು. ತತ್ಪರಿಣಾಮವಾಗಿ ಎಲ್ಲ ಅಸ್ತಿತ್ವಕ್ಕೂ ಕೆಲವು ಚಲನವಲನಗಳು ಕಾರಣವೆಂಬುದು ಬೆಳಕಿಗೆ ಬಂದಿತು. ನಾವು ಈ ಹಂತದವರೆಗೆ ಮುಂದುವರೆದಾಗ ಕೇಂದ್ರ ಮತ್ತು ಅದರ ವಲಯಗಳು ತಮ್ಮ ಅಸ್ತಿತ್ವದ ಅರಿವನ್ನು ಕೊಡುವವು. ನಾವು ಇನ್ನೂ ಮುಂದುವರಿಯೋಣ. ಆ ಕೇಂದ್ರದ ಮೇಲಕ್ಕೆ ಹಾಗೂ ಕೆಳಗೆ ಇರುವುದು ಏನು ? ಎಲ್ಲವೂ ಕೇಂದ್ರಾಭಿಮುಖವಾಗಿರುವುದನ್ನೂ ಹಾಗೂ ಕೇಂದ್ರವು ತನ್ನ ಪರಿಧಿಯತ್ತ ಹರಡಿ ವಿಸ್ತರಿಸುತ್ತಿರುವುದನ್ನೂ ಕಾಣುತ್ತೇವೆ. ನಮ್ಮ ಈ ಸಾಹಸ ಯಾತ್ರೆಯ ನಂತರ, ನಮ್ಮ ಅಸ್ತಿತ್ವದ ಮೌಲ್ಯ (ಅರ್ಥ)ವನ್ನು ಕಂಡುಕೊಳ್ಳಲಾರಂಭಿಸಿದೆವು. ಮತ್ತು ನಮ್ಮ ಸುತ್ತಲೂ ಇರುವ ಅತ್ಯುಚ್ಚ ಶಕ್ತಿಯ ಸಹಕಾರವೂ ಅನುಭವಕ್ಕೆ ಬಂದಿತು. ಈಗ, ಇದೇ ನಮ್ಮ ಚಿಂತನೆಯ ಪ್ರಧಾನ ಪ್ರವಾಹವಾಗಿದ್ದಿತು, ಮತ್ತು, ನಡೆಯುತ್ತಿರುವ ಲೀಲೆಯ ಪ್ರಮುಖ ವಿಷಯದ ಕಡೆಗೆ ನಮ್ಮ ಗಮನವನ್ನು ತಿರುಗಿಸಿದುದೂ ಅದೇ. ಕ್ರಮೇಣ, ಮಾನವ ಶರೀರದಲ್ಲಿ ಚಲನೆಯ ಕಾರ್ಯವೇನೆಂಬುದನ್ನರಿಯಬಲ್ಲವರಾದೆವು. ಕೇಂದ್ರ ಮಂಡಲದವರೆಗೂ ಕೊಂಡೊಯ್ಯುವ ದಾರಿಯು ತೆರೆಯಲ್ಪಟ್ಟಿತು.

ನನ್ನ ಅಭಿಪ್ರಾಯದಲ್ಲಿ, ಹೇಗಾದರೂ ಮಾಡಿ ನಾವು ನಮ್ಮ ಜೀವನದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಲ್ಲೆವಾದರೆ, ರಹಸ್ಯವನ್ನು ಭೇದಿಸಿದಂತೆಯೇ. ನಾವು ನಮ್ಮನ್ನು ಅವಲೋಕಿಸಿಕೊಂಡಾಗ, “ಮನುಷ್ಯನು ವಿಶ್ವದ ಸಂಕ್ಷಿಪ್ತ ರೂಪ’ವೆಂಬುದನ್ನು ಕಂಡುಕೊಂಡೆವು. ಇದು ನಮ್ಮ ಮುನ್ನಡೆಗೆ ಬಲಕೊಟ್ಟಿತು. ಮತ್ತು ನಾವು ನಮ್ಮವೇ ಕೇಂದ್ರಗಳ ಚಲನೆ, ಚಟುವಟಿಕೆಗಳನ್ನೂ, ಮನುಷ್ಯನ ಶರೀರ, ಮನಸ್ಸುಗಳ ಸ್ವಾಭಾವಿಕ ಕಾರ್ಯವಿಧಾನವನ್ನೂ ಅಭ್ಯಸಿಸತೊಡಗಿದೆವು. ನಮ್ಮಲ್ಲಿರುವ ಶಕ್ತಿಗಳನ್ನು ನಾವು ವಿನಾಶಕಾರ್ಯಕ್ಕೂ ಬಳಸಬಹುದು. ಆದರೆ, ನಾವು ನಮ್ಮ ಪೂರ್ವಜರ ಪವಿತ್ರ ಪ್ರತಿಜ್ಞೆಯಿಂದಾಗಿ ಹಾಗೆ ಮಾಡುವುದನ್ನು ತ್ಯಜಿಸಿ, ಅವನ್ನು ಮನುಷ್ಯನ ಪರಿವರ್ತನೆಗೋಸ್ಕರ ಉಪಯೋಗಿಸುತ್ತೇವೆ. ನಾವು ರಚನಾತ್ಮಕ ಪಾರ್ಶ್ವದಲ್ಲಿ ನಿಜವಾಗಿಯೂ ಇಣುಕಿದರೆ, ಅದರ ಪಕ್ಕದಲ್ಲಿಯೇ ವಿನಾಶಕಾರೀ ವಸ್ತುಗಳನ್ನೂ ಕಾಣುತ್ತೇವೆ. ಅಲ್ಲದೆ, ತಟಸ್ಥ ವಸ್ತುಗಳೂ ಅಲ್ಲಿವೆ. ಅವನ್ನು ವಿಜ್ಞಾನಿಗಳು ಇನ್ನೂ ಅನ್ವೇಷಿಸಬೇಕಿದೆ. ಇವು ನಮಗೆ ಸಂಬಂಧಿಸಿಲ್ಲವಾದ್ದರಿಂದ, ನಾವು ಅವನ್ನು ಬಿಟ್ಟು ಬಿಟ್ಟು, ರಚನಾತ್ಮಕ ಪಕ್ಕವನ್ನು ಮಾತ್ರ ತೆಗೆದುಕೊಳ್ಳುತ್ತೇವೆ. ಈ ಭಾವನೆಯೊಂದಿಗೆ ನಾವು ನಮ್ಮೊಳಕ್ಕೆ ಇಣುಕಿದರೆ, ಊರ್ಧ್ವಕೇಂದ್ರಗಳು ನಮ್ಮೊಳಗಿನ ಕೇಂದ್ರಗಳತ್ತ ಕೇಂದ್ರೀಕೃತಗೊಳ್ಳುವುದನ್ನು ಕಾಣುತ್ತೇವೆ. ಆದರೆ ನಮ್ಮ ತಪ್ಪು ಕಲ್ಪನೆ ಮತ್ತು ಕೃತಿಗಳಿಂದಾಗಿ, ಪರಿಣಾಮವು ಲೇಶಮಾತ್ರವೂ ಉಂಟಾಗುತ್ತಿಲ್ಲ. ಸ್ಥೂಲತೆಯ ದಪ್ಪ ಪದರು ಆ ಬಿಂದುಗಳ ಮೇಲೆ, ಅವುಗಳನ್ನು ಭೇದಿಸಲಾಗದಷ್ಟು ಗಟ್ಟಿಯಾಗಿ ನೆಲೆಗೊಂಡಿದೆ. ಆಧ್ಯಾತ್ಮಿಕವಾಗಿಯೂ, ಭೌತಿಕವಾಗಿಯೂ ಕೆಲಸಮಾಡಲು ಬೇಕಾದ ಅನೇಕ ಬಿಂದುಗಳು ಮಾನವ ಶರೀರದಲ್ಲಿವೆ. ಮಾನವಕುಲದ ಒಳಿತಿಗಾಗಿ, ಇವೆಲ್ಲವುಗಳನ್ನು ಅರಿಯಲು ಸಂಶೋಧನೆಯ ಅಗತ್ಯವಿದೆ. ಈ ವಿಷಯಗಳು, ಮಾನವಕುಲದ ಒಳಿತಿಗೆ ತಮ್ಮ ಶಕ್ತಿಯನ್ನು ನಿರ್ದೇಶಿಸಿ, ಹೆಚ್ಚು ಕೆಲಸ ಮಾಡಲೊಲ್ಲದ ದುರ್ಬಲರಿಗೆ ಮಾತ್ರ ಎಂದು ಹೇಳಲಾಗುತ್ತದೆ. ಹೀಗೆ, ನಮ್ಮಲ್ಲಿಯೇ ಹಲವರಿಂದ ಆಧ್ಯಾತ್ಮಿಕತೆಯ ಮೇಲೆ ದಾಳಿ ನಡೆದಿದೆ. ಅದಕ್ಕೆ, ಅವರು ಪ್ರಸಕ್ತ ನಾಗರಿಕತೆಯ ಮತ್ತು ಭೌತಿಕತೆಯತ್ತ ದಾಪುಗಾಲು ಹಾಕಿ ಮುನ್ನಡೆದವರ ಉದಾಹರಣೆಗಳನ್ನು ಕೊಡುತ್ತಾರೆ. ಅದು ಅವರನ್ನು ಮತ್ತೂ ಪರಿಮಿತಿಗಳಲ್ಲಿ ಸಿಕ್ಕಿ ಬೀಳುವಂತೆ ಮಾಡುತ್ತದೆ, ಯಾಕೆಂದರೆ, ಅವರು ಪ್ರಯತ್ನಿಸುತ್ತಿರುವುದು ಪರಿಮಿತವಾದವುಗಳಿಗಾಗಿ ಮಾತ್ರ. ಅವು ಅನಂತರ ಬಿದ್ದು ಹೋಗಲೇ ಬೇಕು. ಪರಿಮಿತಿಯಿಂದ ಅನಂತದತ್ತ ಮುಂದುವರಿಯುವುದು ನಮ್ಮ ಧೈಯವಾಗಿರಬೇಕು. ಪರಿಮಿತವಾದುದು ಅನಂತದಲ್ಲಿ ಲೀನವಾಗುವಂತೆ ಮಾಡುವುದು ನಮ್ಮ ಲಕ್ಷ್ಯವಾಗಿರಬೇಕು. ಬೇರೆ ಮಾತಿನಲ್ಲಿ ಹೇಳಬೇಕೆಂದರೆ, ಪರಿಮಿತಿಯು ಮೊದಲು ಉಜ್ವಲವಾಗಲಿ, ಆಗ ನಾವು ‘ಮೂಲ’ದತ್ತ ಮುಂದುವರಿಯುವುದು ಸಾಧ್ಯ. ಇಷ್ಟಾಗಿ, “ಪರಿಮಿತಿ’ಯೆಂದರೇನು ? ನಮ್ಮೊಳಗಿನ ಕೇಂದ್ರಗಳು ಅಪರಿಮಿತ” (ಅನಂತ)ವಾದುದನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡಿವೆ. ಸಹಜಮಾರ್ಗ ಪದ್ಧತಿಯು, ಪರಿಮಿತಿಯ ಆವಶ್ಯಕತೆಗೆ ತಕ್ಕಂತೆ ನಾವು ನಮ್ಮ ಕರ್ತವ್ಯವನ್ನು ಪಾಲಿಸುತ್ತ ಅನಂತದೆಡೆಗೆ ಮುಂದುವರಿಯುವುದನ್ನು ಸಾಧ್ಯಗೊಳಿಸುವುದಕ್ಕಾಗಿಯೇ ಇದೆ. ನಮ್ಮ ಕರ್ತವ್ಯವು ಪ್ರಥಮ ಆದ್ಯತೆಯೆಂಬುದನ್ನು ಅದು ನಮಗೆ ತೋರಿಸಿಕೊಡುತ್ತದೆ. ಅಂತೆಯೇ, ನಾವು ಇವೆರಡನ್ನೂ (ಆಧ್ಯಾತ್ಮಿಕತೆ ಹಾಗೂ ಪ್ರಾಪಂಚಿಕತೆ) ಸರಿಪಡಿಸಿಕೊಳ್ಳಬೇಕು, ಅಂದರೆ ನಾವು ಎರಡೂ ರೆಕ್ಕೆಗಳಿಂದ ಹಾರಬೇಕು. ನಾವು “ಪರಿಮಿತವಾದುದಕ್ಕೆ ಮಾತ್ರವೇ ಪ್ರಯತ್ನಿಸಿದರೆ, ಅಭದ್ರಬುನಾದಿಯೊಂದಿಗೆ ಮುಂದುವರಿದಂತೆ ಆಯಿತು.

ನಾವು ‘ಅಪರಿಮಿತವಾದುದನ್ನು ಪಡೆಯಲೋಸುಗ, “ಪರಿಮಿತವಾದುದನ್ನು ಗೆಲ್ಲಲು ಪ್ರಯತ್ನಿಸಬೇಕು. ಇದಕ್ಕೆ ಕ್ರಾಂತಿಕಾರಿಯಾದ (ಗತಿಶೀಲ) ಪದ್ಧತಿಗಳನ್ನು ಅಂಗೀಕರಿಸಬೇಕಾಗುವುದು. ಮತ್ತೆ, ಅಂಥ ಸಾಧನಗಳು ಏನಿರಬಲ್ಲುವು ? ಎಂದರೆ, ಆರಂಭದಿಂದಲೇ ಅನಂತದ ಗುಣಲಕ್ಷಣಗಳನ್ನು ಆವಾಹಿಸತಕ್ಕಂಥವಾಗಿರಬೇಕು. ಈ ವಾಕ್ಯವನ್ನು ಕುರಿತು ಜನರು ತುಸು ಪರ್ಯಾಲೋಚಿಸಿದರೆ ನಾನು ಕೃತಜ್ಞನಾಗುವೆ.

ಯಾರು ತಮ್ಮ ಕೇಂದ್ರಗಳಲ್ಲಿ, ನೈಜಗುಣಲಕ್ಷಣಗಳನ್ನು ಅಂತರ್ಗತ ಮಾಡಿಕೊಂಡಿರುವರೋ, ಯಾರು ಉನ್ನತ ಕೇಂದ್ರಗಳಿಂದ ನಿಮ್ನ ಕೇಂದ್ರಗಳಿಗೆ ಶಕ್ತಿ  ಮತ್ತು ಪಾವಿತ್ರ್ಯಗಳನ್ನು ಸೆಳೆಯಲು ಬಲ್ಲರೋ, ಯಾರು ಅದರ ಪರಿಣಾಮವನ್ನು ಪ್ರಾಣಾಹುತಿಯ ಮೂಲಕ ನೀಡಿ, ಅವರು ಅದೇ ಗುಣವೈಶಿಷ್ಟ್ಯಗಳನ್ನು ಹೊಂದುವಂತೆ ಮಾಡಬಲ್ಲರೋ, ಅವರೇ ಇದನ್ನು (ಈ ಪದ್ದತಿ/ಪ್ರಕ್ರಿಯೆ) ಅತ್ಯುತ್ತಮ ರೀತಿಯಲ್ಲಿ ಪ್ರಚುರಪಡಿಸುವುದಕ್ಕೆ ಶಕ್ತರು. ಇದಕ್ಕೆ ಅತ್ಯಂತ ಪ್ರಬಲ ಮತ್ತು ಕ್ರಿಯಾಶೀಲನಾದ ವ್ಯಕ್ತಿಯು ಅಗತ್ಯ. ನಮ್ಮ ಕೇಂದ್ರಗಳಲ್ಲಿ ನೆಲೆಯೂರಿದ ಸ್ಥೂಲತೆಯನ್ನು ಎಲ್ಲಿಯತನಕ ನಾವು ದೂರ ಬಿಸುಟುವದಿಲ್ಲವೋ ಅಲ್ಲಿಯವರೆಗೆ ನಾವೇ ನಿರ್ಮಿಸಿಕೊಂಡ ಸ್ಥೂಲತೆ ಮತ್ತು ತೊಡಕುಗಳಿಂದಾಗಿ, ದೈವೀಕೃಪೆ ಅಥವಾ ಉನ್ನತ ಬಿಂದುಗಳ ಪರಿಣಾಮಗಳು ದೂರವೇ ಉಳಿಯುತ್ತವೆ. ನಮ್ಮ ಸಹಜಮಾರ್ಗವು ಕೇಂದ್ರಗಳನ್ನು ಶುದ್ದೀಕರಿಸಿಕೊಳ್ಳುವ ವಿಧಾನವನ್ನು ಸೂಚಿಸುತ್ತದೆ. ಮತ್ತು ಗುರುವು ಪ್ರಾಣಾಹುತಿಯ ಪ್ರಕ್ರಿಯೆಯ ಮೂಲಕ ಸ್ವತಃ ಅದನ್ನು ನೆರವೇರಿಸುತ್ತಾನೆ. ಅಭ್ಯಾಸಿಯು ಭಗವದನುಗ್ರಹವನ್ನು ಸ್ವತಃ ತಾನೇ ಪಡೆಯಲು ಶಕ್ತನಾಗುವವರೆಗೆ, ಗುರುವು ತನ್ನೊಳಕ್ಕೆ ನೇರವಾಗಿ ಹರಿದುಬರುವ ಅನುಗ್ರಹವನ್ನು ಅಭ್ಯಾಸಿಯ ಕಡೆಗೆ ತಿರುಗಿಸುತ್ತಾನೆ.

ನಾನು ಈಗಾಗಲೇ ಪ್ರಕೃತಿಯ ಶಕ್ತಿಗಳನ್ನು ಮತ್ತು ಶಕ್ತಿ ಚಾಪಗಳನ್ನು ಕುರಿತು ಪ್ರಸ್ತಾಪಿಸಿದ್ದೇನೆ. ಮನುಷ್ಯನಲ್ಲಿ ಪರಿವರ್ತನೆಯನ್ನುಂಟು ಮಾಡಲು ಆವಶ್ಯಕತೆಗೆ ಅನುಸಾರವಾಗಿ ಅವುಗಳನ್ನು ಉಪಯೋಗಿಸಲಾಗುತ್ತದೆ. ನಾವು ಹೃದಯದ ಮೇಲೆ, ಅದರೊಳಗೆ ದೈವೀಪ್ರಕಾಶವಿದೆಯೆಂಬ ಭಾವನೆಯೊಂದಿಗೆ ಧ್ಯಾನ ಮಾಡುತ್ತೇವೆ. ಹಾಗೆ ಮಾಡುವುದರಿಂದ ಕ್ರಮೇಣ ಮೇಲೇರಲು ಪ್ರಾರಂಭಿಸುತ್ತೇವೆ, ಅಥವಾ, ಇನ್ನೂ ವಿಶದಪಡಿಸುವುದಾದರೆ- ಅಂತಃಪ್ರಜ್ಞೆಯ ಆಳಕ್ಕೆ ಮುಳುಗಲಾರಂಭಿಸುತ್ತೇವೆ. ಇದರ ಪರಿಣಾಮವಾಗಿ, ಅಭ್ಯಾಸಿಯು ವ್ಯಾಪಕತೆಯನ್ನು ಅನುಭವಿಸತೊಡಗುತ್ತಾನೆ. ಇದು ಮೊದಲ ಹಂತ. ಅಂದರೆ ನಾವು ಅನಂತತೆಯ ಬೀಜಾರೋಪಣ ಮಾಡಿದೆವೆಂದಾಯಿತು. ಅಥವಾ, ನಮ್ಮ ದೃಷ್ಟಿಯಿಂದ ಜಾರಿಹೋದ ವಸ್ತುವನ್ನು ಪುನಶ್ವೇತನಗೊಳಿಸಿದೆವು ಎಂದೂ ಹೇಳಬಹುದು.

ಈಗ ಎರಡನೆಯ ಮಜಲು ನಮ್ಮ ದೃಷ್ಟಿಗೆ ತೆರೆದುಕೊಳ್ಳುತ್ತದೆ. ಪ್ರತಿಯೊಂದು ಸಜೀವ ವಸ್ತುವಿನಲ್ಲಿಯೂ ಭಗವಂತನ ಇರುವಿಕೆಯನ್ನು ಸಾಧಕನು ಅನುಭವಿಸುತ್ತಾನೆ. ಈ ಸ್ಥಿತಿಯು ಬದಲಾವಣೆಯನ್ನು ಹೊಂದುವ ಲಕ್ಷಣ ತೋರುವುದೇ ನಮ್ಮ ಮೂರನೆಯ ಅನುಭವ. ಇದು ಬದಲಾವಣೆ ಹೊಂದಿದಾಗ, “ಎಲ್ಲವೂ ಭಗವಂತನಿಂದಲೇ ಬಂದದ್ದು”, ಮತ್ತು ಎಲ್ಲವೂ ಅವನದೇ ವ್ಯಕ್ತ ರೂಪ” ಎಂಬ ಭಾವನೆ ಬರುತ್ತದೆ. ನಾಲ್ಕನೆಯ ಮಜಲು ಆತ್ಮನಿರಸನದ ಸ್ಥಿತಿಯನ್ನು ತರುತ್ತದೆ- ಅದೇನಾವು ಅಂತಿಮವಾಗಿ ಹೊಂದಬೇಕಾದದ್ದು. ನಾವು ಅಣುರೇಣುವಿನಲ್ಲಿಯೂ ಮತ್ತು ಎಲ್ಲ ವಸ್ತುವಿನಲ್ಲಿಯೂ ಏಕರೂಪತೆಯನ್ನು ಕಾಣುತ್ತೇವೆ. ಅನುಸರಿಸುತ್ತಿರುವ ಪದ್ಧತಿಯು ಸರಿಯಾಗಿದ್ದು, ಮಾರ್ಗದರ್ಶಿಯೂ ಪರಿಪೂರ್ಣನಾಗಿದ್ದರೆ ಪ್ರತಿಯೋರ್ವನೂ ಈ ನಿಟ್ಟಿನಲ್ಲಿಯೇ ಸಾಗುತ್ತಾನೆ. ನಾವು ಮುಂದಿನ ವಲಯಕ್ಕೆ ಸಾಗಿದಂತೆ, ಬ್ರಹ್ಮಾಂಡ ಮಂಡಲವನ್ನು ತಲುಪುವ ವರೆಗೆ ಈ ವಿಷಯಗಳು ಸೂಕ್ಷ್ಮರೂಪವನ್ನು ತಾಳುತ್ತವೆ. ಅಲ್ಲಿಯೂ ಕೂಡ ಈ ಸಂಗತಿಗಳು ಮುಂದುವರಿಯುತ್ತವೆ. ಆದರೆ ಅವು ಸೂಕ್ಷ್ಮವರ್ಣಗಳಲ್ಲಿ ಮಾತ್ರ ಗ್ರಹಿಸಲು ಬರುವಂಥವು. ಗುರುವು ಪರಿಪೂರ್ಣತೆಯನ್ನು ಹೊಂದಿದವನಾಗಿರದಿದ್ದರೆ, ಆಧ್ಯಾತ್ಮಿಕತೆಗೆ ಸಂಬಂಧಿಸಿರದ ಸಿದ್ದಿಗಳಲ್ಲಿಯೇ ಮಗ್ನರಾಗಿಹೋಗುವ ಅಪಾಯವಿದೆ. ಅಂತಿಮ ಘಟ್ಟದವರೆಗೂ ಗುರುವಿನ ಕೆಲಸವು ಎಡೆಬಿಡದೆ ನಡೆದೇ ಇರುತ್ತದೆ. ನಾನು ಅಭ್ಯಾಸಿ ಮತ್ತು ಗುರುವು ಮಾಡಬೇಕಾದ ಕಾರ್ಯ-ಚಟುವಟಿಕೆಗಳ ಬಗ್ಗೆ ವಿವೇಚಿಸಿದ್ದೇನೆ. ಆದರೆ, ಮಾನವಕುಲವನ್ನು ಉನ್ನತ ಗುರಿಯವರೆಗೆ ತಲುಪಿಸಲು ಗುರುವು ಕೈಗೊಳ್ಳುವ ಪದ್ಧತಿಯ ಕಾರ್ಯತಂತ್ರವನ್ನಾಗಲಿ, ಅವನು ಹೃದಯದ ಯಾವ ಯಾವ ಬಿಂದುಗಳ ಮೂಲಕ ಕಾರ್ಯ ಮಾಡುವನೋ ಆ ಬಿಂದುಗಳ ಕುರಿತಾಗಲಿ, ಮತ್ತು ಮನಸ್ಸು ಹಾಗೂ ಇಂದ್ರಿಯಗಳನ್ನು ಸರಿದಾರಿಗೆ ತರಲು ಉಪಯೋಗಿಸುವ ವಿಧಾನವನ್ನು ಕುರಿತಾಗಲಿ ಪ್ರಸ್ತಾಪಿಸಿಲ್ಲ. ಅಭ್ಯಾಸಿಯ ಕರ್ತವ್ಯವೆಂದರೆ, ಗುರುವಿಗೆ ಸಂಪೂರ್ಣವಾಗಿ ವಿಧೇಯನಾಗಿರುವುದು. ನಾನು ಹೇಳುವುದರ ಅರ್ಥವೇನೆಂದರೆ, ಅವನು ಗುರುವಿನಲ್ಲಿ ಶ್ರದ್ದೆಯನ್ನಿಟ್ಟು, ಕೊನೆಯ ಪಕ್ಷ ಭರವಸೆಯನ್ನು ಇಟ್ಟುಕೊಂಡು ಗುರುವು ಗೊತ್ತುಪಡಿಸಿದ ಆದೇಶಗಳನ್ನು ಅನುಸರಿಸಬೇಕು. ಅಂತಿಮ ಗುರಿಯವರೆಗೆ ತಲುಪಿರುವಂತಹ ಗುರುವನ್ನು ನಾವು ಹುಡುಕಬೇಕು. ಅಂಥ ಗುರುವನ್ನು ಕಂಡುಕೊಳ್ಳುವುದು ಕಷ್ಟ ಸಾಧ್ಯವೇ ಸರಿ, ಮತ್ತು ಉಪನಿಷತ್ತಿನಲ್ಲಿ ಹೇಳಿರುವಂತೆ, ನಿಜವಾದ ಶಿಷ್ಯನನ್ನು ಪತ್ತೆ ಹಚ್ಚುವುದು ಕೂಡ ಅಷ್ಟೇ ಕಷ್ಟ. ಆದರೆ ಸತ್ಯದ ಸಾಕ್ಷಾತ್ಕಾರಕ್ಕಾಗಿ ಜ್ವಲಂತ ಆಕಾಂಕ್ಷೆಯಿದ್ದರೆ, ಗುರುವೇ ತನ್ನನ್ನು ಅರಸುತ್ತಿರುವವನ ಮನೆ ಬಾಗಿಲಿಗೆ ಬರುತ್ತಾನೆ. ನಂಬಿಕೆ ಮತ್ತು ಅಪನಂಬಿಕೆ – ಇವು ಎರಡೂ ಬೇರೆ ಬೇರೆ, ಆದರೂ ಅವೆರಡೂ ಅವಶ್ಯವಾದವುಗಳು. ಆದರೆ ನಾವು ಎಲ್ಲಿ ಅಪನಂಬಿಕೆಯನ್ನಿಡಬೇಕಿದೆಯೋ ಅಲ್ಲಿ ನಂಬುಗೆಯಿಡುತ್ತೇವೆ, ಎಲ್ಲಿ ನಂಬಬೇಕೋ ಅಲ್ಲಿ ನಂಬುವುದಿಲ್ಲ.

ಕೊನೆಯಲ್ಲಿ, ನಾನು ಒತ್ತಾಯಪೂರ್ವಕವಾಗಿ ಹೇಳುವುದಿಷ್ಟೆ : ಯಾರಿಗೆ ತೀವ್ರವಾದ ಅಭೀಷ್ಟೆಯಿದೆಯೋ, ಅಂಥವರಿಗೆ, ಸಾಕ್ಷಾತ್ಕಾರವು ಏನೇನೂ ಕಷ್ಟಕರವಲ್ಲ. ತೀವ್ರ ಹಂಬಲವಿರುವವರು ಶೀಘ್ರದಲ್ಲಿಯೇ, ಸಾಕ್ಷಾತ್ಕಾರವನ್ನು ಸಾಧಿಸಬಹುದಾದ ನಿಜವಾದ ಪಥಕ್ಕೆ ಬಂದೇ ಬರುತ್ತಾರೆ. ಅವನನ್ನು, ನಿಜವಾದ ಹಂಬಲವು ನಿರಂತರ ತಳಮಳದ ಸ್ಥಿತಿಯಲ್ಲಿಟ್ಟಿರುತ್ತದೆ. ಅವನು ನಿಜವಾದ ಗುರಿಯನ್ನು ಪಡೆಯಲೋಸುಗವೇ ಕಾರ್ಯತತ್ಪರನಾಗಿರುತ್ತಾನೆ. ನಮ್ಮಲ್ಲಿ ಅನೇಕರು ದೇವರ ಪೂಜೆಯನ್ನೇನೋ ಮಾಡುತ್ತಾರೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಆದರೆ ಅದು ಒಂದು ದಿನಚರಿಯ ರೀತಿಯಲ್ಲಷ್ಟೆ ! ಅದು ಅವರ ಇಂದ್ರಿಯಗಳ ತೃಪ್ತಿಗೋಸ್ಕರ ಮಾತ್ರವಾಗಿರುತ್ತದೆ. ಈ ಅವಸ್ಥೆಯಲ್ಲಿ ಮಾನಸಿಕ ಸಂತೋಷವಿದೆ, ಇಂದ್ರಿಯಗಳ ಸುಖವಿದೆ ಮತ್ತು ಅವರು (ಇಂಥ) ಎಷ್ಟೋ ಸುಖಾನುಭವಗಳಲ್ಲಿಯೇ ಸಿಕ್ಕಿಬೀಳುತ್ತಾರೆ. ಅವು ಅವರನ್ನು , ಸಾಕ್ಷಾತ್ಕಾರದ ಉದ್ದೇಶಕ್ಕಾಗಿಯೇ ಇರುವ ಜೀವನದ ಒಳಕ್ಕೆ ಇಣುಕಿ ನೋಡಲೂ ಬಿಡದೆ ತಡೆಯೊಡ್ಡುತ್ತವೆ.