ನಮ್ಮ ಮನಸ್ಸಿನಲ್ಲಿದ್ದ ಒಂದು ನಿರ್ದಿಷ್ಟವಾದ ಗುರಿ ಅಥವಾ ಲಕ್ಷದ ಮೇಲೆ ನಮ್ಮ ವಿಚಾರವನ್ನು ನೆಲೆಸಿರುವಂತೆ ಮಾಡುವ ಪ್ರಕ್ರಿಯವೇ ಧ್ಯಾನ.

ವಿಚಾರಗಳನ್ನು ನಾವು ಮಾಡುವೆವೋ ಅಥವಾ ಅವು ತಾವಾಗಿಯೇ ನಮ್ಮಲ್ಲಿ ಬರುತ್ತವೆಯೋ? ಒಂದು ವೇಳೆ ನಾವು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವಿಚಾರಗಳು ಹೆಚ್ಚಾಗಿ ತಾವಾಗಿಯೇ ಬರುವವು ಎಂದು ತಿಳಿಯುವದು. ನಾವು ಏನನ್ನೂ ಮಾಡಲಿಕ್ಕೆ ಹೋಗುವುದಿಲ್ಲ. ನಾವು ಯಾವಾಗಲೂ ಅವುಗಳ ಸಿಲುಕಿನಲ್ಲಿ ಸಿಕ್ಕು ಅವುಗಳನ್ನೇ ಹಿಂಬಾಲಿಸುತ್ತಾ ಹೋಗಿ ನಮ್ಮದೇ ಆದ ವೈಚಾರಿಕ ಸರಣಿಯನ್ನು ನಿರ್ಮಿಸುತ್ತೇವೆ.

ವಿಚಾರ ಬರಲಿಕ್ಕೆ ಮುಖ್ಯ ಕಾರಣವೆಂದರೆ ನಮ್ಮ ಇಚ್ಛೆಗಳು. ಆದುದರಿಂದ ನಾವು ಪುನಃ ಪುನಃ ಹೆಚ್ಚಿನ ಅಭಿರುಚಿಯಿಂದ ನಮ್ಮ ಗುರಿಯ ಕಡೆಗೆ ಹೆಚ್ಚು ಗಮನವನ್ನು ಹರಿಸಿ ಧ್ಯಾನ ಮಾಡುವದಾದರೆ ಕಾಲಕ್ರಮದಲ್ಲಿ ನಮ್ಮ ಧ್ಯಾನವು ಸ್ವಾಭಾವಿಕವಾಗುವದು ಮತ್ತು ಆಗ ಅದಕ್ಕೆ ನಮ್ಮ ಸ್ವಪ್ರಯತ್ನದ ಅವಶ್ಯಕತೆ ಬೀಳುವದಿಲ್ಲ.

ಉದಾಹರಣೆಯಾಗಿ ನಾವು ಯಾವುದಾದರೊಂದು ಕೆಲಸ ಮಾಡಬೇಕೆಂದಾಗ ಮಾಡುವ ಅಥವಾ ಉದ್ದೇಶಿತ ಕೆಲಸವನ್ನು ಬಿಟ್ಟು ಬೇರೆ ವಿಚಾರಗಳೇ ನಮ್ಮ ಮನಸ್ಸಿನಲ್ಲಿ ಬರುತ್ತವೆ ಮತ್ತು ಅವುಗಳ ಸಂಬಂಧ ಉದ್ದೇಶಿತ ಕೆಲಸದೊಂದಿಗೆ ಏನೂ ಇರುವದಿಲ್ಲ. ಕಾರಣ ಉದ್ದೇಶಿತ ಕೆಲಸದಲ್ಲಿ ನಮ್ಮ ವಿಚಾರ ನೆಲೆಸಿರುವದಿಲ್ಲ. ಏಕೆಂದರೆ ಅದರಲ್ಲಿ ನಮ್ಮ ಅಭಿರುಚಿ ಮತ್ತು ಗಂಭೀರತೆ ಇರುವದಿಲ್ಲ. ಇಂತಹ ಪರಿಸ್ಥಿತಿಯು ನಮ್ಮ ಧ್ಯಾನದಲ್ಲಿ ಬರಕೂಡದು. ನಮ್ಮ ವಿಚಾರವನ್ನು ಗುರಿಯಲ್ಲಿ ಕೇಂದ್ರೀಕೃತ ಮಾಡಿ ಅದರ ಮೇಲೆಯೆ ನೆಲೆಸಿರುವಂತೆ ಮಾಡಿ ಸಾಕಷ್ಟು ಸಮಯ ಕೂಡುವದೇ ಧ್ಯಾನ. ಆ ಸಮಯದಲ್ಲಿ ನಮ್ಮ ಹೃದಯ ಪ್ರೇಮ, ಭಕ್ತಿ, ಮತ್ತು ಶ್ರದ್ಧೆಗಳಿಂದ ಕೂಡಿದ್ದರೆ ಬಂಗಾರಕ್ಕೆ ಪುಟವಿಟ್ಟಂತಾಗುತ್ತದೆ.

ನಾವು ನಮ್ಮ ಜೀವನದಲ್ಲಿ ಗುರು ಮಹರಾಜರು ಹೇಳಿ ಕೊಟ್ಟಿರುವ ಅತ್ಯುಚ್ಚವಾದ ಗುರಿಯನ್ನು ಇಟ್ಟುಕೊಂಡಿದ್ದೇವೆ. ಅದನ್ನು ರಾಜಯೋಗದ ಪದ್ಧತಿಯ ಪ್ರಕಾರ ಸಾಧಿಸಬೇಕಾಗಿದೆ. ಇಲ್ಲಿ ವಿಚಾರ ಶಕ್ತಿಯದೇ ಮುಖ್ಯ ಪಾತ್ರ. ಸಹಜ ಮಾರ್ಗದ ಸಾಧನಾ ಪದ್ಧತಿಯು ರಾಜಯೋಗದ ಪದ್ಧತಿಯೇ ಆಗಿದ್ದು ಅದರಲ್ಲಿ ಕೆಲವು ಸುಧಾರಣೆಗಳನ್ನು ನಮ್ಮ ಗುರುಗಳು ಮಾಡಿದ್ದಾರೆ. ಈ ಪದ್ಧತಿಯ ವಿಶೇಷತೆ ಎನೆಂದರೆ ನಮ್ಮ ಗುರುಗಳ ಪ್ರಾಣಾಹುತಿ ಶಕ್ತಿ.

ನಮ್ಮ ಧ್ಯಾನದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೊಟ್ಟಿದ್ದಾರೆ. ಅದು ಹೀಗಿದೆ :

ಬೆಳಗು ಮುಂಜಾನೆ ಏಳಿರಿ, ಸಂದ್ಯೋಪಾಸನೆಯನ್ನು ನಿಯಮಿತ ಸಮಯಕ್ಕೆ ಮುಗಿಸಿರಿ. ಸೂರ್ಯೋದಯಕ್ಕಿಂತ ಮುಂಚಿತವಾದರೆ ಬಹಳ ಒಳಿತು. ಪೂಜೆಗಾಗಿ ಪ್ರತ್ಯೇಕವಾದ ಸ್ಥಳವನ್ನು, ಆಸನವನ್ನು ಇರಿಸಿಕೊಳ್ಳಿರಿ. ಆದಷ್ಟು ಮಟ್ಟಿಗೆ ಒಂದೇ ಆಸನದಲ್ಲಿ ಕುಳಿತುಕೊಳ್ಳುವ ರೂಢಿಯನ್ನು ಹಾಕಿಕೊಳ್ಳಿರಿ. ಶಾರೀರಿಕ ಹಾಗೂ ಮಾನಸಿಕ ಪವಿತ್ರತೆಯ ಕಡೆಗೆ ವಿಶೇಷ ಲಕ್ಷವಿರಲಿ.

ಪದ್ಧತಿ :-

ಹೃದಯದಲ್ಲಿ ಈಶ್ವರೀಯ ಪ್ರಕಾಶವಿದೆಯೆಂದು ಕಲ್ಪಿಸಿ ಧ್ಯಾನ ಮಾಡಬೇಕು. ಮನಸ್ಸನ್ನು ಕಷ್ಟಪಟ್ಟು ಎಳೆದು ತರುವ ಪ್ರಯತ್ನ ಮಾಡಬಾರದು. ಏಕಾಗ್ರತೆಗಾಗಿ ಪ್ರಯತ್ನಿಸದಿರಿ. ಪ್ರಕಾಶ ಕಾಣಿಸಲಿ ಅಥವಾ ಕಾಣಿಸದೆ ಇರಲಿ ಚಿಂತೆ ಮಾಡಬಾರದು. ಈ ಪ್ರಕಾಶವು ಸೂರ್ಯ, ಚಂದ್ರ, ನಕ್ಷತ್ರ ಅಥವಾ ಲೈಟು, ಕ್ಯಾಂಡಲ್‌ಗಳಿಂದ ಬರುವಂತಹದ್ದಲ್ಲ. ಕೇವಲ ಪ್ರಭೆ ಇಲ್ಲದಿರುವ ಪ್ರಕಾಶವೆಂದು ಕಲ್ಪಿಸಬೇಕು. ಸುಮಾರು ಒಂದು ಗಂಟೆ ಕಾಲ ಕೂಡಲು ಪ್ರಯತ್ನಿಸಬೇಕು.

ಈ ಪ್ರಕಾಶವು ನಮ್ಮ ಇಂದ್ರಿಯಗಳಿಗೆ ನಿಲುಕಲಾರದಂತದ್ದು ಆಗಿದೆ (ಒಂದು ಭ್ರಮೆ ಮಾತ್ರ). ಇದರ ವಿಶೇಷತೆಯೆಂದರೆ ನಾವು ಮಾಡುವ ವಿಚಾರಗಳು ಯಾವಾಗಲೂ ನಮ್ಮ ಇಚ್ಛೆಗಳ ಅನುಗುಣವಾಗಿ ಇಂದ್ರಿಯಗಳಿಗೆ ಸಂಬಂಧಿಸಿರುವ ವಿಷಯಗಳ ಮೇಲೆ ಆಧಾರಿತ- ವಾಗಿರುತ್ತವೆ. ಇದರಿಂದ ನಮ್ಮ ಮನಸ್ಸು ಇಂದ್ರಿಯಗಳ ವಶವಾಗಿ ಆನಂದ ಪಡೆಯುತ್ತಿದೆ. ಈ ಗುಲಾಮಗಿರಿಯಿಂದ ಪಾರು ಮಾಡಲು ನಮ್ಮ ಮನಸ್ಸನ್ನು ಇಂದ್ರಿಯಗಳ ವಶದಿಂದ ದೂರ ಸರಿಸಿ ಅದರ ನೈಜ ಸ್ಥಿತಿಗೆ ತರುವ ಸಾಧನೆಯೇ ಧ್ಯಾನ. ಅಧ್ಯಾತ್ಮಿಕ ಕ್ಷೇತ್ರದಲ್ಲಿ ಇಂದ್ರಿಯಾತೀತ ಮಾಹಿತಿಯನ್ನೇ ಹೆಚ್ಚಿಗೆ ತಿಳಿಯಬೇಕಾಗಿದೆ.

ಯಾರು ಧ್ಯಾನ ಮಾಡಲು ಇಚ್ಚಿಸುವರು :-

ಧ್ಯಾನ ಮಾಡಲು ಎಲ್ಲರೂ ಇಚ್ಛಿಸುವದಿಲ್ಲ. ಇದು ಎಲ್ಲರಿಗೂ ಲಭ್ಯವಾಗಿದ್ದರೂ ಕೇವಲ ಕೆಲವೇ ಜನರು ಇದರ ಬಗ್ಗೆ ಅಭಿರುಚಿಯನ್ನು

ತೋರಿಸುವರು. ಅಂತವರೆಂದರೆ,

    1. ಭಗವಂತನ ಇರುವಿಕೆಯಲ್ಲಿ ವಿಶ್ವಾಸವಿರುವವರು.
    2. ತಮ್ಮ ಧರ್ಮಾನುಸಾರ ಸಾಕಷ್ಟು ಸಮಯ ದೇವರ ಪೂಜೆ ಮಾಡಿದಾಗ್ಯೂ ನಿಜವಾದ ಲಾಭವೇನೂ ದೊರಕಿಲ್ಲ ಎಂದುಕೊಂಡವರು.
    3. ಭಗವಂತನಿಂದ ಏನೂ ಭೌತಿಕ ಇಚ್ಛೆಗಳನ್ನು ಬಯಸದೆ ಕೇವಲ ಆತನ ಸಾಕ್ಷಾತ್ಕಾರಕ್ಕಾಗಿ ಹುಡುಕಾಟದಲ್ಲಿರುವವರು.
    4. ಇಡೀ ಜೀವನದಲ್ಲಿ ನಾಸ್ತಿಕರಾಗಿದ್ದು, ಒಂದು ಸತ್ಯ ಅಥವಾ ಒಂದು ಅದ್ಭುತ ಶಕ್ತಿಯ ಮೇಲೆ ವಿಶ್ವಾಸವಿಟ್ಟು ಅದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ಇರುವವರು.
    5. ಕೆಲವರು ಎಲ್ಲಾ ಕಡೆಗೆ ತಿರುಗಾಡಿ ಬೇರೆ ಬೇರೆ ಧಾರ್ಮಿಕ ಸಾಧನೆಗಳನ್ನು ಕೈಗೊಂಡು ಸಾಕಷ್ಟು ಕಾಲ ಶ್ರಮಿಸಿ ನಿರಾಶರಾದವರು.
    6. ಏನೂ ತಿಳಿಯಲಾರದವರು ಮತ್ತು ಯಾರಿಗೂ ತಿಳಿಸದ ಒಂದು ಚಿಂತೆ ಆವರಿಸಿದ್ದು ಯಾವದೇ ಭೌತಿಕ ವಸ್ತುಗಳು, ಯಾವದೇ * ಸೌಲಭ್ಯಗಳು, ಯಾವುದೇ ಪುಸ್ತಕಗಳು, ನಿಯಮಗಳು ಅವರನ್ನು ಸಮಾಧಾನಪಡಿಸುವದಿಲ್ಲವೋ ಅಂತಹವರಲ್ಲಿ ಏನೋ ಒಂದು ಜಿಜ್ಞಾಸೆ ಹುಟ್ಟಿ, ಅವರಿಗೆ ಅದು ಧ್ಯಾನ ಮಾಡಲು ಪ್ರೇರೆಪಿಸುವದು.

ಧ್ಯಾನ ಮಾಡುವದರಿಂದ ಆಗುವ ಪರಿವರ್ತನೆಗಳು :-

ಸಹಜ ಮಾರ್ಗದ ಪದ್ಧತಿಯ ಪ್ರಕಾರ ಪರಮ ಸದ್ಗುರು ಹೇಳಿಕೊಟ್ಟ ಪ್ರಕಾರ ಗುರಿಯ ಪ್ರಾಪ್ತಿಗೋಸ್ಕರ ಸರಿಯಾಗಿ ಧ್ಯಾನವನ್ನು ಕೈಗೊಂಡರೆ ಕೆಲವೇ ದಿನಗಳ ಬಳಿಕ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಶ್ರೀ ಬಾಬೂಜಿಯವರ ಪ್ರಾಣಾಹುತಿಯಿಂದಾಗಿ ಕೆಳಗೆ ಕಾಣಿಸಿದ ಪರಿವರ್ತನೆಗಳು ಕಂಡು ಬರುವವು. ಒಂದು ವೇಳೆ ಇಂತಹ ಪರಿವರ್ತನೆಗಳು ಅನುಭವದಲ್ಲಿ ಬರದಿದ್ದರೆ ಪ್ರಶಿಕ್ಷಕರನ್ನು ಕಾಣತಕ್ಕದ್ದು.

      1. ಹೃದಯ ಮನಸ್ಸುಗಳೆರಡೂ ಹಗುರಾಗಿ ಆಲಸ್ಯ ಕಡಿಮೆಯಾಗುವುದು.
      2. ಧ್ಯಾನದಲ್ಲಿ ಅಭಿರುಚಿ ಹುಟ್ಟುವುದು.
      3. ಧ್ಯಾನದಲ್ಲಿ ಏನಾಗುವದು ಎಂಬುದರ ಬಗ್ಗೆ ಉತ್ಸುಕತೆ.
      4. ಒಂದು ತರಹದ ದೇವರ ಬಗ್ಗೆ ಕುತೂಹಲಪೂರಿತ ವಿಚಾರ. ದಿನ ದಿನ ವಿವೇಕ ಬೆಳೆಯುವುದು.
      5. ವೈರಾಗ್ಯದ ಕಲ್ಪನೆ ಮತ್ತು ಅದರ ಬೆಳವಣೆಗೆ
      6. ಅನಾವಶ್ಯಕ ಕೆಲಸ ಮಾಡುವ ಹಂಬಲ ಕಡಿಮೆ ಆಗುವುದು.
      7. ಇಂದ್ರಿಯಗಳ ಸಂತೋಷಕ್ಕಾಗಿ ಮನದ ಅಲೆದಾಟ ಕಡಿಮೆ
      8. ಇಚ್ಛೆಗಳ ಒತ್ತಡ ಕಡಿಮೆ ಆಗುವದು.
      9. ಒಂದು ತರಹದ ಮನಃ ಶಾಂತಿ ಮತ್ತು ಸಮಾಧಾನ ದೊರಕಿದಂತಾಗುವುದು.
      10. ಎಂತಹ ಒತ್ತಡ ಪರಿಸ್ಥಿತಿಯಲ್ಲಿಯೂ ನಿರುತ್ಸಾಹ ಅಥವಾ ಖಿನ್ನತೆ ಇಲ್ಲದಿರುವದು.
      11. ಲೌಕಿಕ ಆಗು-ಹೋಗುಗಳು ಮಹತ್ವ ಕಳೆದುಕೊಳ್ಳುವವು.
    1. ಸುಮಾರು ಕಾಲದ ನಂತರ :-

      1. ಗುರಿಯ ಕಲ್ಪನೆ ಮತ್ತು ಅದನ್ನು ಪಡೆಯುವ ಹಂಬಲ ತೀವ್ರವಾಗುವದು.
      2. ವೈರಾಗ್ಯ ಪ್ರವೃತ್ತಿಯು ಹೆಚ್ಚುವದು.
      3. ಎಲ್ಲದರಲ್ಲಿ ದೈವಿಕತೆಯ ಅರಿವು ಮೂಡಿ ಮೋಹ, ಲೋಭ, ಮದ-ಮತ್ಸರಗಳು ಕಡಿಮೆ ಆಗಿ ಕಾಮ ಮತ್ತು ಕ್ರೋಧಗಳ ಈ ಪ್ರಮಾಣ ನಿಯಂತ್ರಿತಗೊಳ್ಳುವವು.
      4. ವ್ಯವಹಾರ, ಜೀವನದ ಶೈಲಿ, ನಡುವಳಿಕೆ, ಮಾತನಾಡುವದು ಇವುಗಳಲ್ಲಿ ಮೃದುತ್ವ ಬಂದು ಬದಲಾವಣೆಯಾಗುವವು.
      5. ದೇವರ ಸಾಕ್ಷಾತ್ಕಾರದ ಕಲ್ಪನೆಯೇ ಗುರುವಿನ ಸಾಕ್ಷಾತ್ಕಾರವೆಂಬ ವಿಚಾರ ಮೂಡಿ ಗುರುವೇ ನಮ್ಮ ಜಿಜ್ಞಾಸೆಯ ಕೇಂದ್ರಬಿಂದು ಆಗುವನು.
      6. ಗುರಿ ಮತ್ತು ಗುರು ಒಂದೇ ಆಗುವವು.

ಬಹಳ ಕಾಲದ ನಂತರ:-

      1. ಸೃಷ್ಟಿಕರ್ತನ ಜೊತೆಗೆ ಆತನ ಸೃಷ್ಟಿಯೊಂದಿಗೆಯೂ ಪ್ರೇಮ ಬೆಳೆಯುವದು.
      2. ಹೃದಯ ಮತ್ತು ಮನಸ್ಸು ವಿಶಾಲವಾಗುವವು.
      3. ನನ್ನದು ಎಂಬುದರ ಬಗ್ಗೆ ಕಲ್ಪನೆ ಕಡಿಮೆ ಆಗುವದು.
      4. ವಿಚಾರಗಳು ಹೆಚ್ಚಾಗಿ ಗುರಿಯನ್ನು ಹೇಗೆ ಬೇಗನೆ ತಲುಪಬೇಕೆಂಬ ಹಂಬಲ ಹೆಚ್ಚಾಗಿ ಅದರಿಂದ ಒಂದು ತರಹದ ನೋವುಂಟಾಗಿ ಗುರಿಯನ್ನು ಬಿಟ್ಟು ಬೇರೆ ಏನಾದರೂ ವಿಚಾರಗಳು ಬಂದರೆ ಬೇಜಾರು ಆಗುವದು.
      5. ಎಲ್ಲ ಆಸೆಗಳ ಸಮಾಪ್ತಿಯಾಗಿ ವೈರಾಗ್ಯ ಪೂರ್ತಿಯಾಗಿ ನೆಲೆಯೂರುವದು
      6. ಬುದ್ಧಿ ಸಾಕಷ್ಟುಬೆಳೆದು ಒಳ್ಳೆಯದು/ಕೆಟ್ಟದರ ಬಗ್ಗೆ ಸ್ಪಷ್ಟ ಪರಿಚಯವಾಗಿ ವಿವೇಕ ಬೆಳೆಯುವದು.
      7. ಅನ್ಯ ಎಲ್ಲ ಹವ್ಯಾಸಗಳು ಮೊದಲು ಹತೋಟಿಯಲ್ಲಿ ಬಂದು ನಂತರ ಇಲ್ಲದಂತಾಗುವವು.
      8. ಮನಸ್ಸು ಯಾವಾಗಲೂ ಹಗುರವಾಗಿದ್ದು ಜೀವನದಲ್ಲಿ ಬರುವ ಸುಖ ದುಃಖ, ಕಷ್ಟ-ನಷ್ಟಗಳ ಮತ್ತು ಇತರ ಯಾವುದೇ ಸಂದರ್ಭಗಳು ಪರಿಣಾಮ ಬೀರುವದಿಲ್ಲ. ಮನಸ್ಸು ಕೆಸರಿನಲ್ಲಿದ್ದ ಕಮಲದಂತೆ ಶಾಂತವಾಗಿದ್ದು ಯಾವುದಕ್ಕೂ ಅಂಟಿಕೊಳ್ಳದೆ ಇರುವುದು.
      9. ಜೀವನ ಸರಳ ಮತ್ತು ನೈಸರ್ಗಿಕವಾಗುವದು.
      10. ಯಾರ ಮೇಲೂ ದ್ವೇಷ ಅಥವಾ ಸೇಡು ತೀರಿಸಿಕೊಳ್ಳುವ  ಭಾವನೆಯೇ ಬರುವದಿಲ್ಲ.
      11. ಯಾವಾಗಲೂ ಗುರಿಯ ಚಿಂತನೆಯಲ್ಲಿರುವುದು.
      12. ಕೊನೆಯದಾಗಿ, ಆತನ ಇಚ್ಛೆಗೆ ಸಂಪೂರ್ಣ ಶರಣು ಹೋಗಿ- – ಬಿಡುತ್ತಾನೆ. ಆಗ ಯಾರಾದರೂ ಕೆಡುಕು ಮಾಡಿದರೆ ಪ್ರೀತಿಯಿಂದ – ಧನ್ಯವಾದಗಳನ್ನು ಅರ್ಪಿಸುವನು. ಆಗ ಆವನಲ್ಲಿ ತಾತ್ಸಾರ, ಸಿಟ್ಟು, ಅಹಂಕಾರ, ಸೇಡು, ದೊಡ್ಡಸ್ಥಿಕೆ ಇರದೆ ಏನೂ ತಿಳಿಯದ ಮುಗ್ಧ ಮಗುವಿನಂತೆ ಇರುತ್ತಾನೆ.
      1. ಪ್ರತಿ ಕ್ಷಣ ಗುರುವಿನ ಕೃಪೆ ಇದ್ದೇ ಇರುತ್ತದೆ. ಸಹಾಯ ಪಡೆಯುವದು ನಮ್ಮ ಕರ್ತವ್ಯ.

ಒಂದು ವೇಳೆ ಸದ್ಗುರುವಿನ ಕೃಪೆಯಾದರೆ ಆತನು ಕೊಟ್ಟ ಎಲ್ಲ ನಿಯಮಗಳನ್ನು ಅಳವಡಿಸಿಕೊಂಡು ಆತನಂತೆಯೇ ತದ್ರೂಪವಾಗಿ ಆತನಲ್ಲಿ ಲಯ ಹೊಂದಲು ಸಾಧ್ಯವಾಗುತ್ತದೆ.

ಧ್ಯಾನ ಮಾಡುವಾಗ ಗಮನಿಸಬೇಕಾದ ಕೆಲವು ವಿಷಯಗಳು :-

      1. ಧ್ಯಾನ ಮಾಡುವಾಗ ಕಣ್ಣುಗಳನ್ನು ಮುಚ್ಚುತ್ತೇವೆ. ಏಕೆಂದರೆ ಕಣ್ಣು ತೆರೆದರೆ ನಾವು ಭಗವಂತನ ಸೃಷ್ಟಿಯನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದರೆ ನಾವು ನಿರ್ಮಿಸಿದ ಸೃಷ್ಟಿಯನ್ನು ನೋಡುತ್ತೇವೆ.
      2. ಮೊದಮೊದಲು ಧ್ಯಾನ ಮಾಡುವಾಗ ಸಾಕಷ್ಟು ಬೇರೆ ವಿಚಾರಗಳು ಬಂದಾಗ ನಮ್ಮ ಧ್ಯಾನ ಸರಿ ಇಲ್ಲವೆಂದು ತಿಳಿಯುವೆವು. ಆದರೆ ಅಂತಹ ವಿಚಾರಗಳಿಗೆ ಆಸ್ಪದ ಕೊಡದೆ ನಾವು ನಮ್ಮ ಧ್ಯಾನವನ್ನು ಮುಂದುವರೆಸಬೇಕು ಮತ್ತು ಬೇರೆ ವಿಚಾರಗಳಿಗೆ ಕರೆಯದೆ ಬಂದ ಅತಿಥಿಗಳೆಂದು ಭಾವಿಸಿ ಮುನ್ನುಗ್ಗಬೇಕು. ವಿಶೇಷವಾಗಿ ಅಂತಹ ವಿಚಾರಗಳು ನಮ್ಮ ಇಚ್ಛೆಗಳಿಗೆ ಸಂಬಂಧಪಟ್ಟಿರುವ ದಾಗಿರುತ್ತವೆ. ಕಾಲಾನುಸಾರ ನಮ್ಮ ಧ್ಯಾನ ನಿರ್ವಿಘ್ನವಾಗುವದರಲ್ಲಿ ಸಂದೇಹವೇ ಇಲ್ಲ. ಮನಸ್ಸು ಮೊದಮೊದಲು ಒಂದಡೆ ಇರಲು ಸಹಕರಿಸುವದಿಲ್ಲ. ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಬೇಕಾಗುವುದು. ಯಾವ ವಿಚಾರಗಳಿಲ್ಲದೆ ಪೂರ್ತಿಯಾಗಿ ನಮ್ಮ ಗುರಿಯ ಬಗ್ಗೆ ವಿಚಾರ ಸ್ವಾಭಾವಿಕವಾಗಿ ಸ್ಥಾಯಿರೂಪ ಹೊಂದಿದಾಗಲೇ ಮಾತ್ರ ಅದಕ್ಕೆ ಸರಿಯಾದ ಧ್ಯಾನವೆನ್ನುವರು ಮತ್ತು ಆಗಿನಿಂದಲೇ ನಮ್ಮ ಅಭ್ಯಾಸ ಪ್ರಾರಂಭವಾಗುವುದು.
      3. ಸರಿಯಾದ ಧ್ಯಾನದ ಸಂಕೇತವೆಂದರೆ ನಮ್ಮಲ್ಲಿ ವಿವೇಕ ಮತ್ತು ವೈರಾಗ್ಯ ಬೆಳೆಯಬೇಕು. ನಮ್ಮ ಹೃದಯ ಮತ್ತು ಮನಸ್ಸುಗಳು ವಿಕಸಿತಗೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ದುರಾಸೆ, ದ್ವೇಷ, ಅಸೂಯೆ ಇತ್ಯಾದಿಗಳಿಲ್ಲದಾಗಿ ಸರ್ವರೊಂದಿಗೆ ಪ್ರೇಮಪೂರ್ವಕ ಬಂಧುತ್ವ ಬೆಳೆಯುವದು. ಒಂದು ವೇಳೆ ಇವು ಬರದಿದ್ದರೆ ನಮ್ಮ ಸಾಧನೆಯಲ್ಲಿ ಏನೋ ತಪ್ಪು ಆಗುತ್ತಿದೆ ಎಂದು ಪ್ರಶಿಕ್ಷಕರನ್ನು ಕಾಣಬೇಕು. ಧ್ಯಾನದಲ್ಲಿ ಸಾಕಷ್ಟು ಅನಿಸಿಕೆ ಮತ್ತು ಅನುಭವಗಳು ಕಾಣಿಸಿಕೊಳ್ಳುವವು. ಇದು ಸರಿಯಾದ ಧ್ಯಾನದ ಸರಿಯಾದ ಫಲಿತಾಂಶ. ಇದರಿಂದ ನಮ್ಮ ವಿಶ್ವಾಸ ಇನ್ನೂ ಧೃಡ ಮಾಡಿಕೊಂಡು ಇನ್ನೂ ಮುಂದೆ ಸಾಗಬೇಕು. ಧ್ಯಾನದಲ್ಲಿ ಬರುವ ಅನಿಸಿಕೆ ಮತ್ತು ಅನುಭವಗಳನ್ನು ಕೇವಲ ಪ್ರಶಿಕ್ಷಕರಿಗೆ ಮಾತ್ರ ಹೇಳಬೇಕು. ಬೇರೆಯವರಿಗೆ ಹೇಳಿದರೆ ಸ್ವಪ್ರತಿಷ್ಠೆ ಬೆಳೆಯುವ ಸಾಧ್ಯತೆ ಇರುವದು.

ಈಶ್ವರೀಯ ಪ್ರಕಾಶ :

ನಾವು ಧ್ಯಾನ ಪ್ರಾರಂಭ ಮಾಡಬೇಕಾದರೆ ನಮ್ಮ ಗುರು ಮಹರಾಜರು ಹೇಳಿಕೊಟ್ಟ ಹಾಗೆ ಹೃದಯದಲ್ಲಿ ಈಶ್ವರೀಯ ಪ್ರಕಾಶವಿದೆಯೆಂದು ಕಲ್ಪಿಸಿ ಅದರ ಕಡೆಗೆ ಪೂರ್ಣ ಗಮನ ಹರಿಸಿ ಕೂಡುತ್ತೇವೆ. ಆಗ ನಮಗೆ ಅಲ್ಲಿ ಯಾವುದೆ ತರಹದ ಪ್ರಕಾಶವೆಂಬುದು ಕಾಣಿಸುವದಿಲ್ಲವೆಂದು ನಾವು ನಿರಾಶೆಗೊಳ್ಳುತ್ತೇವೆ. ಹೃದಯದಲ್ಲಿ ಪ್ರಭೆಯಿಲ್ಲದ ಪ್ರಕಾಶವಿದೆ ಎಂದು ಕಲ್ಪಿಸಿರಿ ಎಂದು ನಮ್ಮ ಪ್ರಶಿಕ್ಷಕರು ಹೇಳುವರು ಮತ್ತು ಆಕಡೆಗೆ ಲಕ್ಷ್ಯಕೊಟ್ಟು ಕೂಡಬೇಕು ಎಂದು ಹೇಳುವರು. ಆಗ ನಾವು ಏನೂ ತಿಳಿಯದಿದ್ದರೂ ತಿಳಿಯಿತೆಂದು ಬರುತ್ತೇವೆ. ಇದನ್ನು ಸರಿಯಾಗಿ ತಿಳಿಯಲು ನಾನು ಒಂದು ಕಥೆಯನ್ನು ಹೇಳುವೆನು.

ಒಮ್ಮೆ ಒಬ್ಬ ಗುರುವು ತನ್ನ ನೆಚ್ಚಿನ ಶಿಷ್ಯನಿಗೆ ಆ ಊರಿನ ಒಂದು ದೊಡ್ಡ ಕೆರೆಯಲ್ಲಿ ಒಂದು ಅಮೂಲ್ಯವಾದ ವಜ್ರ ಬಿದ್ದಿದೆ, ಅದನ್ನು ನೀನು ಹುಡುಕಿದರೆ ಅದು ನಿನ್ನದೇ ಆಗುವದು ಎಂದು ಹೇಳಿದನು. ಶಿಷ್ಯನಿಗೆ ತನ್ನ ಗುರುವಿನ ಮೇಲೆ ಪೂರ್ಣ ವಿಶ್ವಾಸವಿದ್ದ ಕಾರಣ ಅವನು ತನ್ನ ಗುರುವಿನ ಪ್ರಸ್ತಾವನೆಯ ಬಗ್ಗೆ ಸುಮಾರು ಕಾಲ ವಿಚಾರ ಮಾಡಿ ಕೊನೆಗೆ ತನ್ನ ಕಷ್ಟಗಳನ್ನು ನಿವಾರಿಸಲು ಕೆರೆಯಲ್ಲಿಯ ವಜ್ರವನ್ನು ಹುಡುಕಬೇಕೆಂದು ನಿರ್ಧರಿಸಿದನು. ಮರುದಿನದಿಂದ ಜನಸಂದಣಿ ಕಡಿಮೆಯಿದ್ದ ಕಾಲಕ್ಕೆ ಜನರನ್ನು ತಪ್ಪಿಸಿ ಕೆರೆಯದಂಡೆಗೆ ಹೋಗಿ ಕೆಲ ಕಾಲ ಹುಡುಕಲಾರಂಬಿಸಿದನು. ಸ್ವಲ್ಪ ಸಮಯದ ನಂತರ ಜನರು ನೋಡಿ ಆ ಶಿಷ್ಯನನ್ನು ಗೇಲಿ ಮಾಡಹತ್ತಿದರು. ತನ್ನ ಗುರುವಿನಲ್ಲಿದ್ದ ಶ್ರದ್ಧೆಯಿಂದಾಗಿ ಶಿಷ್ಯನು ಜನರ ಮಾತುಗಳಿಗೆ ಲಕ್ಷ್ಯ ಕೊಡದೆ ತನ್ನ ಕೆಲಸವನ್ನು ಮುಂದುವರಿಸಿದನು. ಹುಡುಕಾಟದಲ್ಲಿ ಸಮಯ ಕಳೆದಂತೆ, ಅವನಲ್ಲಿ ನಾಚಿಕೆ ಮತ್ತು ಸ್ವಪ್ರತಿಷ್ಠೆ ಹೊರಟು ಹೋದವು. ಜನರ ಕಡೆಗೆ ನೋಡುವುದು ಮತ್ತು ಗಮನ ಹರಿಸುವದೂ ಕೂಡ ಮರೆತು ಹೋದ. ಕೆರೆಯ ಆಳದಲ್ಲಿ ಮುಳುಗಿ ವಜ್ರವನ್ನು ಹುಡುಕಲು ಪ್ರಯತ್ನಿಸತೊಡಗಿದ. ನಂತರ ಕುತೂಹಲ ಹೆಚ್ಚಿದಂತೆಲ್ಲ ಸಾಕಷ್ಟು ಸಮಯವನ್ನು ಕೊಡಲಾರಂಭಿಸಿದನು. ತನ್ನ ಹುಡುಕಾಟದಲ್ಲಿ ಅವನಿಗೆ ಸಮಯದ ಅರಿವೇ ಇಲ್ಲದಂತಾಯಿತು. ಅದರಿಂದಾಗಿ ಹಸಿವು ಮತ್ತು ನೀರಡಿಕೆಯ ಅರಿವು ಕೂಡ ಇಲ್ಲದಂತಾಯಿತು. ಸಾಕಷ್ಟು ಕಾಲ ಮುಳುಗಿರಲು ಬೇರೆ ಬೇರೆ ಸಾಧನೆಗಳನ್ನು ಹುಡುಕುತ್ತಾ ತಲ್ಲೀನನಾಗಿ ಅವನಿಗೆ ವಾರ, ತಿಂಗಳು ಮತ್ತು ವರ್ಷಗಳ ಅರಿವೇ ಇಲ್ಲವಾದಂತೆ ಆದವು. ಏಕೆಂದರೆ ದಿನೇ ದಿನೇ ಆತನ ಗುರುಗಳ ಮೇಲಿನ ಶ್ರದ್ಧೆ ಮತ್ತು ವಿಶ್ವಾಸ ಧೃಡವಾಗತೊಡಗಿತು ಮತ್ತು ಪ್ರಯತ್ನ ಹೆಚ್ಚೆಚ್ಚು ಆಗ ತೊಡಗಿತು.

ಹೀಗೆಯೇ ಹಲವು ವರ್ಷಗಳೇ ಉರುಳಿದವು. ತಾನು ಏನನ್ನೋ ಹುಡುಕುತ್ತಿದ್ದೇನೆ ಎಂಬ ಅರಿವೇ ಅವನಿಗೆ ಇಲ್ಲದಂತಾಯಿತು. ಆದಾಗ್ಯೂ ಆತನ ಹುಡುಕಾಟ ಜೀವನದ ಒಂದು ಮುಖ್ಯ ಭಾಗವಾಯಿತು. ಬಹಳಷ್ಟು ವರ್ಷಗಳನಂತರ ಒಂದು ದಿನ ಆತನಿಗೆ ಗುರುಗಳ ದರ್ಶನವಾಯಿತು. ಗುರುಗಳು ಶಿಷ್ಯನನ್ನು ಕುರಿತು ಊರ ಕೆರೆಯಲ್ಲಿ ಏನನ್ನು ಹುಡುಕುತ್ತಿರುವೆ ಎಂದು ಕೇಳಿದಾಗ ಶಿಷ್ಯನಿಗೆ ತಾನು ಏನು ಹೇಳಬೇಕೆಂಬುದೆ ಮರೆತು ಹೋಗಿತ್ತು. ಏನೂ ಹೇಳಲು ಆಗಲಿಲ್ಲ. ಏಕೆಂದರೆ ಆ ಶಿಷ್ಯನೇ ಒಂದು ವಜ್ರವಾಗಿದ್ದ (ವಜ್ರವು ವಜ್ರವನ್ನು ಹುಡುಕುವದಿಲ್ಲ). ಆಗ ಗುರುವು ನಕ್ಕು ಮುಂದೆ ಸಾಗಿದನು. ಇದೇ ನಮ್ಮ ಈಶ್ವರೀಯ ಪ್ರಕಾಶದ ಮೇಲೆ ಧ್ಯಾನ ಮಾಡುವ ಸಾಧನೆಯ ಮಹತ್ವ

ಸಮಸ್ಯೆಗಳು :-

ಧ್ಯಾನ ಮಾಡುವಾಗ ನಮಗೆ ಬಹಳಷ್ಟು ಅನುಭವಗಳು ಆಗುತ್ತವೆ. ಕೆಲವು ಒಳ್ಳೆಯವು ಇದ್ದು ಕೆಲವು ಕೆಟ್ಟದ್ದು ಇರುತ್ತವೆ. ಕೆಲವೊಂದು ಸಲ ನಾವು ಬಹಳಷ್ಟು ಪ್ರಗತಿ ಮಾಡುತ್ತಿದ್ದೇವೆ ಎಂದು ಮತ್ತೆ ಕೆಲವೊಮ್ಮೆ ಪ್ರಗತಿ ಕುಂಠಿತವಾಗಿದೆಯೆಂಬ ಭಾವನೆಗಳು ಕಾಡಿಸುತ್ತವೆ. ಇನ್ನೂ ಕೆಟ್ಟದ್ದೆಂದರೆ ಬೇರೆಯವರ ಬಗ್ಗೆ ತಾತ್ಸಾರ, ಸಿಟ್ಟು ಮತ್ತು ಕೆಡುಕುಬುದ್ಧಿಯ ವಿಚಾರಗಳು. ಇಂತಹ ವಿಚಾರಗಳು ಬಂದರೆ, ಅವುಗಳನ್ನು ಹೋಗಲಾಡಿಸಲು ನಮ್ಮ ಗುರುಗಳನ್ನೇ ಪ್ರಾರ್ಥಿಸಬೇಕು.

ಉದಾಹರಣೆಗೆ :- ಒಂದು ಆಲದ ಮರಕ್ಕೆ ಬಹಳಷ್ಟು ಎಲೆಗಳು ಇರುತ್ತವೆ. ಅವುಗಳಲ್ಲಿ ಒಂದು ಚಿಗುರೆಲೆಯು ಹಣ್ಣಾದ ಎಲೆಯನ್ನು ನೋಡಿ ಗೇಲಿ ಮಾಡುತ್ತದೆ. ಚಿಗುರೆಲೆಯು ತನ್ನ ಮನಸ್ಸಿನಲ್ಲಿ ಆ ಹಣ್ಣೆಲೆ ಇನ್ನು ಕೆಲವೇ ದಿನಗಳಲ್ಲಿ ಕಡಿದು ನೆಲದ ಮೇಲೆ ಬಿದ್ದು ಸಾಯುತ್ತದೆಂದು ವಿಚಾರಮಾಡಿ ನಗುತ್ತಿರುತ್ತದೆ. ನನ್ನ ಜೀವನ ಇನ್ನು ಬಹಳಷ್ಟು ದಿನಗಳಿವೆ ಮತ್ತು ಜಗತ್ತಿನ ಆಗು ಹೋಗುಗಳನ್ನು ನೋಡುತ್ತೇನೆಂದು ಜಂಭ ಕೊಚ್ಚಿಕೊಳ್ಳಬಾರದು ಮತ್ತು ಅದಕ್ಕೆ ಆಸ್ಪದ ಕೂಡಾ ಕೊಡಬಾರದು. ಎಲ್ಲ ಎಲೆಗಳ ಆಧಾರ ಆ ಗಿಡವೇ ಆಗಿದೆ. ಯಾವ ಎಲೆ ಯಾವಾಗ ಬೀಳಬೇಕೆಂಬುದು ಆ ಗಿಡದ ನಿರ್ಣಯಕ್ಕೆ ಬಿಟ್ಟದ್ದು. ಆದ ಕಾರಣ ನಮ್ಮೆಲ್ಲ ಸಾಧಕರಿಗೆ ಕೇವಲ ಗುರುವೇ ಮುಖ್ಯ. ನಮ್ಮ ಈ ಗುರಿಯನ್ನು ಹೊರತುಪಡಿಸಿ ಬೇರೆ ವಿಚಾರಗಳಿಗೆ ಆಸ್ಪದವೇ ಕೊಡಕೂಡದು.

ನಮ್ಮ ಗುರಿಯನ್ನು ತಲುಪಲು ಇಂದ್ರಿಯಗಳು ಸಹಾಯಕವಾಗುವವೇ?

ನಮ್ಮ ಅಂತಿಮ ಗುರಿಯು ಆ ಪರಮ ಕೇಂದ್ರದಲ್ಲಿ ಲಯ ಹೊಂದುವುದಾಗಿದೆ ಮತ್ತು ಅಲ್ಲಿಯ ಸ್ಥಿತಿಯು ಇಂದ್ರಿಯಾತೀತವಾಗಿದ್ದು, ಅದನ್ನು ಅನಿಸಿಕೆಯಿಂದಲೆ ತಲುಪಬೇಕಾಗಿದೆ. ನಮ್ಮ ಪಂಚೇಂದ್ರಿಯಗಳಿಂದ ತಿಳಿಯಲು ಅಥವಾ ತಲುಪಲು ಸಾಧ್ಯವಿಲ್ಲ.

ನಮ್ಮ ಇಂದ್ರಿಯಗಳನ್ನು ಗುರಿ ತಲುಪಲು ಹೇಗೆ ಉಪಯೋಗಿಸಬೇಕು ?

      1. ಬಾಬೂಜಿ ಮಹರಾಜರು ಬರೆದ ಪುಸ್ತಕಗಳನ್ನು ಓದಿ ಅವುಗಳಲ್ಲಿ ಅವರು ನಮಗೆ ಏನನ್ನು ತಿಳಿಸಬೇಕೆಂದಿರುವರೋ ಅದನ್ನು ಸರಿಯಾಗಿ ತಿಳಿದುಕೊಂಡು, ನಮಗೆ ಏನನ್ನು ಮಾಡಬೇಕಾಗಿದೆಯೋ ಅವೆಲ್ಲವನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಾವು ಅವರ ಪ್ರೀತಿಗೆ ಪಾತ್ರರಾಗುವದರಲ್ಲಿ ಎಳ್ಳಷ್ಟು ಸಂದೇಹವೇ ಇಲ್ಲ. ಅವು ನಮಗೆ ನಮ್ಮ ಗುರಿ ತಲುಪಲು ಉಪಯೋಗವಾಗುವವು.
      2. ಪ್ರತಿ ಸತ್ಸಂಗದಲ್ಲಿ ನಾವು ಶಾಂತವಾಗಿ ಕೂತು ನಮ್ಮ ಹಿರಿಯ ಭಾಷಣಕಾರರು ಏನೇನು ಹೇಳುವರೆಂದು ಗಮನವಿಟ್ಟು ಕೇಳಿ ನಾವು ನಮ್ಮನ್ನು ಸರಿಪಡಿಸಿಕೊಳ್ಳಬೇಕು. ಆದಷ್ಟು ನಮ್ಮ ಲಕ್ಷ ಅವರು ಆಡುವ ಮಾತಿನ ಮೇಲೆ ಇರಬೇಕು ಮತ್ತು ಅವುಗಳಲ್ಲಿ ನಮಗೆ ಏನು ಸಂದೇಶ ಮತ್ತೆ ಸಂಕೇತವಿದೆ ಎಂದು ತಿಳಿಯಬೇಕು.
      3. ಎಲ್ ಸತ್ಸಂಗಗಳಲ್ಲಿ ನಾವು ನಮ್ಮ ಇಂದ್ರಿಯಗಳನ್ನು ಬಹಿರ್ಮುಖವಾಗಿ ಇಡದೆ, ಅಂತರ್ಮುಖಿಯಾಗಿ ಇಟ್ಟು ನಮ್ಮ ಹೃದಯದ ಕಡೆ ಲಕ್ಷ್ಯಗೊಟ್ಟು ಅಲ್ಲಿಯ ಆಗು ಹೋಗುಗಳನ್ನು ಕೂಲಂಕಷವಾಗಿ ನೋಡುತ್ತಿರಬೇಕು. ಇತರ ಅಭ್ಯಾಸಿಗಳೊಂದಿಗೆ ಮಾತನಾಡುವಾಗ ಬೇರೆ ವಿಷಯಗಳ ಬಗ್ಗೆ ಮಹತ್ವ ಕೊಡದೆ * ಅಲ್ಲಿ ಯಾವ ಕಾರಣಕ್ಕಾಗಿ ಸೇರಿರುವಿರೆಂದು ಗಮನದಲ್ಲಿಟ್ಟು ಮಾತನಾಡಬೇಕು. ಇದರಿಂದ ನಾವು ಶುದ್ಧಗೊಳ್ಳುವೆವು ಮತ್ತು ಅಲ್ಲಿಯ ವಾತಾವರಣ ಕೂಡಾ ಕಲುಷಿತಗೊಳ್ಳುವದಿಲ್ಲ. ಅಲ್ಲಿ ಬಂದವರಲ್ಲಿ ಏನು ವಿಶೇಷತೆ ಮತ್ತು ಏನು ಸಮಾನ್ಯತೆ ಇದೆ ಎಂದು ನೋಡುವ ಪ್ರಯತ್ನ ಮಾಡಬೇಕು.
      4. ಈ ಎಲ್ಲವುಗಳನ್ನು ಇಂದ್ರಿಯಗಳಿಂದ ಗ್ರಹಿಸಿ ನಾವು ಅದರಂತೆ ಆಗಲು ಪ್ರಯತ್ನಿಸಬೇಕು. ಅದಕ್ಕೆ ಯಾವಾಗಲೂ ನಮ್ಮ ಗುರುಮಹರಾಜರ ಸಹಾಯವನ್ನು ಕೋರಬೇಕು. ಕೊನೆಯದಾಗಿ * ಹತ್ತು ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವೇ ನಮ್ಮ ಪ್ರಗತಿಯ ಅಳತೆಗೋಲುಗಳು.

ನಮ್ಮ ಧ್ಯಾನ ಯಾವ ಸಂದರ್ಭದಲ್ಲಿ ಧ್ಯಾನವೆನಿಸುವದಿಲ್ಲ?

ಯಾವಾಗ ನಮ್ಮ ಜೀವನದ ಗುರಿ ಮನಸ್ಸಿನ ಅಂತರಾಳದಲ್ಲಿ ಇರದೇ ಹೋದಾಗ ನಾವು ಮಾಡುವ ಧ್ಯಾನವು ಧ್ಯಾನವೆಂದೆನಿಸುವದಿಲ್ಲ.

ನಮ್ಮ ಕೆಲ ಬಂಧುಮಿತ್ರರು ಬಾಬೂಜಿ ಮಹರಾಜರ ಪುಸ್ತಕಗಳನ್ನೋದಿ ಹೆಚ್ಚು ಲಾಭ ಪಡೆಯಲು ಬಾಬೂಜಿ ಮಹರಾಜರ ಆಕಾರದ ಮೇಲೆ ಧ್ಯಾನ ಮಾಡಲು ಪ್ರಾರಂಭಿಸುವರು. ಇದರಿಂದ ಅವರ ಯಾವುದಾದರೊಂದು ಚಿತ್ರವನ್ನು ಗಮನದಲ್ಲಿರಿಸಿ (ಯಾರು ಬಾಬೂಜಿ ಮಹರಾಜರನ್ನು ನೋಡಿಲ್ಲವೋ ಅಂತವರು) ಆ ಚಿತ್ರದ ಮೇಲೆ ಧ್ಯಾನ ಮಾಡುವರು. ಆದರೆ ಅವರು (ಬಾಬೂಜಿ ಮಹರಾಜರು) ಪುಸ್ತಕಗಳಲ್ಲಿ ಸದ್ಗುರುವಿನ ರೂಪದ ಮೇಲೆ ಧ್ಯಾನ ಮಾಡಬೇಕೆಂದು ಬರೆದಿರುವರು ಆಕಾರದ ಮೇಲೆ ಅಲ್ಲ. ಇದನ್ನು ಸರಿಯಾಗಿ ತಿಳಿದುಕೊಳ್ಳಬೇಕು.

ಬೇರೆಯವರು ತಮ್ಮಲ್ಲಿದ್ದುದ್ದನ್ನು ಪ್ರಕಟಿಸುತ್ತಾರೆ ಅದಕ್ಕೆ ರೂಪವೆನ್ನುತ್ತಾರೆ ಮತ್ತು ನಾವು ನೊಡಿದಾಗ ಏನು ಕಾಣಿಸುತ್ತದೋ ಅದಕ್ಕೆ ಆಕಾರವೆನ್ನುತ್ತಾರೆ. ಆಕಾರದ ಮೇಲೆ ಒಂದು ವೇಳೆ ಧ್ಯಾನ ಮಾಡಲು ಪ್ರಾರಂಭ ಮಾಡಿದರೆ ಅದು ಮೂರ್ತಿ ಪೂಜೆಯಾಗುವದು ಅಂತಹ ಪೂಜೆ ನಮ್ಮಲ್ಲಿ ವರ್ಜ, ಈಶ್ವರೀಯ ಪ್ರಕಾಶದ ಮೇಲೆ ಧ್ಯಾನ ಮಾಡುತ್ತಾ ಹೋದ ಹಾಗೆ ಕೆಲ ಸಮಯದ ನಂತರ ಗುರು ಮಹರಾಜರು ಧ್ಯಾನದಲ್ಲಿರುವಾಗಲೇ ತಮ್ಮ ಒಂದು ರೂಪವನ್ನು ತೋರಿಸುವರು. ಅದು ತಾನೇ ಬರುವದು. ಅದಕ್ಕೆ ಪ್ರಯತ್ನ ಮಾಡುವ ಅವಶ್ಯಕತೆ ಇಲ್ಲ. ಅದು ಸ್ಥಾಯಿ ರೂಪ ಹೊಂದಿದ ಮೇಲೆ ತಮ್ಮ ಇನ್ನೊಂದು ರೂಪವನ್ನು ಪ್ರಕಟಿಸುವರು. ಹೀಗೆ ಅಂತಹ ರೂಪಗಳ ಧ್ಯಾನ ಮಾಡುತ್ತಾ ಧ್ಯಾನದ ನಂತರವೂ ಕೂಡಾ ಅದನ್ನು ವಿಚಾರದಿಂದ ಯಾವಾಗಲೂ ಸ್ಮರಣೆಯಲ್ಲಿಟ್ಟಕೊಳ್ಳುವ ಪ್ರಯತ್ನ ಮಾಡಬೇಕು. ಅದೇ ಸತತ ಸ್ಮರಣೆಯಾಗುವದು

ನಾವು ಧ್ಯಾನವನ್ನು ಏಕೆ ಮಾಡಬೇಕು?

ನಾವು ಧ್ಯಾನ ಮಾಡುವದು ನಮ್ಮ ಉಚ್ಚತಮ ಗುರಿಯನ್ನು ಸಾಧಿಸುವದಕ್ಕಾಗಿ ಮಾತ್ರ ನಮ್ಮ ಗುರಿ ಏನು ಇರಬೇಕಾದುದ್ದು ಎಂಬುದು ನಮ್ಮ ಪ್ರಾರ್ಥನೆಯಲ್ಲಿ ಹೇಳಿಕೊಡಲಾಗಿದೆ. ಆ ಪ್ರಕಾರ ನಮ್ಮ ಗುರಿ ಸಾಧಿಸುವುದು ಮುಖ್ಯವಾಗಿದೆ. ಧ್ಯಾನವೆಂಬುದು ಸಾಧನೆಯ ಒಂದು ಅಂಗ ಮಾತ್ರ. ಆದರೆ ಗುರಿಯಲ್ಲ. ನಮ್ಮ ಪ್ರಾರ್ಥನೆಯಲ್ಲಿ ಗುರಿ, ಸಾಧನೆಯಲ್ಲಿ ಬರುವ ವಿಘ್ನಗಳು ಮತ್ತು ಅದನ್ನು ಕಳಚಿ ಹಾಕುವ ಸಾಮರ್ಥ್ಯವುಳ್ಳ ಗುರು ಇವೆಲ್ಲದರ ಉಲ್ಲೇಖವಿದೆ. ಆದ ಕಾರಣ ಯಾವಾಗಲೂ ಧ್ಯಾನಕ್ಕಿಂತ ಮುಂಚೆ ನಮ್ಮ ಪ್ರಾರ್ಥನೆಯನ್ನು ಮಾಡುವದು ಅತೀ ಮುಖ್ಯ. ಧ್ಯಾನದಲ್ಲಿ ನಾವು ನಿರ್ಮಿಸಿಕೊಂಡ ವಿಚಾರಗಳು. ಇಚ್ಛೆಗಳು ಮತ್ತು ಇತ್ಯಾದಿಗಳು ಹೋಗುವಾಗ ನಮ್ಮ ಅರಿವಿಗೆ ಬಂದು ಹೋಗುತ್ತವೆ. ಮುಂಚೆ ಮಾಡುವ ಧ್ಯಾನ ವು ಕೇವಲ ಶುದ್ದೀಕರಣದ್ದಾಗಿರುತ್ತದೆ. ಧ್ಯಾನ ಮಾಡುವಾಗ ಬರುವ ವಿಚಾರಗಳಿಂದಾಗಿ ನಾವು ನಿರಾಶರಾಗಬೇಕಾಗಿಲ್ಲ. ಧ್ಯಾನ ಮುಗಿದ ಮೇಲೆ ಏನೇನು ವಿಚಾರಗಳು ಬಂದವು ಎಂಬುದರ ಬಗ್ಗೆ ವಿಚಾರ ಮಾಡಿದರೆ ಅವು ಯಾವೂ ನಮಗೆ ನೆನಪಾಗುವದಿಲ್ಲ. ಅವು ಎಲ್ಲವೂ ಹೋದವು ಎಂದು ತಿಳಿಯಬೇಕು.

ಯಾವಾಗ ಇಂತಹ ವಿಚಾರಗಳು ಬರುವದಿಲ್ಲವೋ ಆಗ, ನಮ್ಮ ಹೃದಯ ಶುದ್ಧವಾಯಿತೆಂದು ತಿಳಿಯಬೇಕು. ಅನ್ಯಥಾ ಇಲ್ಲ. ಸತ್ಯತೆಯನ್ನು ಹುಡುಕಬೇಕಾದರೆ ಹೃದಯದ ಶುದ್ಧತೆ ಅವಶ್ಯ ಇವೆಲ್ಲವುಗಳು ನಮ್ಮ ವಿಚಾರ ಶಕ್ತಿಯಿಂದಲೇ ಸಾಧ್ಯ.

ಧ್ಯಾನವನ್ನು ಎಷ್ಟು ದಿವಸ ಮಾಡಬೇಕು ?

  1. ಯಾವಾಗ ಧ್ಯಾನವನ್ನು ಮಾಡಬೇಕೆಂಬುವ ಅರಿವೇ ಇರುವದಿಲ್ಲವೋ ಅಲ್ಲಿಯವರೆಗೆ ಧ್ಯಾನವನ್ನು ಮಾಡುತ್ತಿರಬೇಕು. ಅಭ್ಯಾಸಿಯ ಜೀವನ, ಇರುವಿಕೆಯಲ್ಲಿ ಅವನ ಮನಸ್ಸು ಅದರಲ್ಲಿ ಪೂರ್ತಿಯಾಗಿ ಧ್ಯಾನದ ಅರಿವೇ ಇಲ್ಲದಂತಾದಾಗ ಧ್ಯಾನವು ತನ್ನಷ್ಟಕ್ಕೆ ತಾನೆ ನಿಂತುಹೋಗುವುದು. ಆಗ ಅವನಿಗೆ ಅದರ ಅರಿವೇ ಇರುವುದಿಲ್ಲ.
  2. ಯಾವಾಗ ನಮ್ಮ ಗುರುಮಹಾರಾಜರು ಧ್ಯಾನಮಾಡುವ ಅವಶ್ಯಕತೆವಿಲ್ಲವೆಂದಾಗ ಮಾತ್ರ.