(ಡಿಸೆಂಬರ ೧೯೬೫ ರಲ್ಲಿ ಮೈಸೂರಿನಲ್ಲಿ ನೀಡಿದ ಸಂದೇಶ)

ಸಾಕ್ಷಾತ್ಕಾರ ಹಾಗೂ ಮುಕ್ತಿಗಾಗಿ ತೀವ್ರಾಸಕ್ತಿಯಿಂದ ಹಂಬಲಿಸುವವರು ನಮ್ಮಲ್ಲಿ ಅನೇಕರಿದ್ದಾರೆ. ಮತ್ತು ಅದು ಅವರ ಕರ್ತವ್ಯವೆಂದು ಭಾವಿಸುತ್ತಾರೆ. ಆದರೆ ಕರ್ತವ್ಯವನ್ನು ಕುರಿತು ಮಾತನಾಡಿದಾಗ ನಾವು ಒಂದು ಬಗೆಯ ಪರಿಮಿತಿಗೊಳಪಟ್ಟಿರುವುದನ್ನು ಕಾಣುತ್ತೇವೆ. ಆ ಪರಿಮಿತಿ ಯಾವುದು ? ಅದು, ಆಲೋಚನೆ ಮತ್ತು ವಿವೇಕಗಳ ಸಂಕುಚಿತ ವಲಯವೇ ಆಗಿದೆ. ನಮ್ಮ ಸದ್ಯದ ಮಟ್ಟದ ಮಟ್ಟಿಗೆ ಹೇಳುವುದಾದರೆ ಅದೂ ಪರಿಮಿತಿಯದೇ, ಅದರಿಂದ ನಾವು ತಪ್ಪಿಸಿಕೊಳ್ಳಲಾಗುವುದಿಲ್ಲ. ಅದರಿಂದಲೇ ನಾವು ವಿಸ್ತಾರವಾದ ದೃಶ್ಯದತ್ತ ಅರ್ಥಾತ್, ಕೇವಲ ಸತ್ಯದ ದರ್ಶನ ಕ್ಷೇತ್ರಕ್ಕೆ ಮುಂದುವರಿಯುವುದು. ಆದರೆ ಅದು ಈ ಉದ್ದೇಶಕ್ಕೋಸ್ಕರ ಪ್ರಯೋಗಿಸುವ ಸಾಧನ ಮತ್ತು ಪದ್ಧತಿಗಳನ್ನು ಮುಖ್ಯವಾಗಿ ಅವಲಂಬಿಸಿದೆ. ಅಕಸ್ಮಾತ್ತಾಗಿ, ನಮ್ಮ ಪರಿಮಿತಿ ಮತ್ತು ಬಂಧನಗಳನ್ನು ಹೆಚ್ಚಿಸುವ ಸಾಧನಗಳಿಗೆ ನಾವು ಬೇಸ್ತು ಬಿದ್ದರೆ (ಎಡವಿದರೆ), ಆಗ “ಕೇವಲಸತ್ಯ’ದ ದರ್ಶನದಿಂದ ದೂರ ಉಳಿಯುತ್ತೇವೆ. ಕೆಲವು ನಿರ್ದಿಷ್ಟ ವ್ಯಕ್ತಿಗಳ ಮನೋಧರ್ಮಕ್ಕೆ ಹೊಂದುವಂಥ ಪದ್ದತಿಗಳಿರಬಹುದು. ಅವು ಮೂಲದಲ್ಲಿಯೇ ತಪ್ಪಾಗಿ ಇರಬಹುದು, ಅಥವಾ, ಬೇರೆ ರೀತಿಯಲ್ಲಿ ಅಸಮರ್ಥವಾಗಿರಬಹುದು, ಹಾಗೂ, ತಾತ್ಕಾಲಿಕವಾಗಿ ಸಾಂತ್ವನಗೊಳಿಸಲಿಕ್ಕೆ ಮಗುವಿಗೆ ಕೊಡಮಾಡುವ ಒಂದು ಆಟಿಗೆಯಷ್ಟೇ ಆಗಿ ಸಲ್ಲಬಹುದು ; ಹಾಗೆಯೇ ಅವು ಹೆಚ್ಚು ಹೆಚ್ಚು ಸುಖಸಂತೋಷಗಳನ್ನು ಸವಿಯಲು ಮತ್ತೂ ಹೆಚ್ಚಿನ ಪ್ರಲೋಭನಗಳತ್ತ ಒಯ್ಯಬಹುದು. ಪ್ರಾಯಶಃ ಸುಖಾನುಭೋಗದ ಹಾದಿಯಲ್ಲಿ ಪ್ರೇರೇಪಿಸುವ ಮೋಡಿಯಾಗಲೂಬಹುದು. ಆದರೆ ಎಲ್ಲಿಯವರೆಗೆ ಅವನು ಅದರ ಆಕರ್ಷಣೆಯ ಹಿಡಿತದಲ್ಲಿದ್ದಾನೋ ಅಲ್ಲಿಯವರೆಗೂ ಅವನ ಪ್ರಗತಿಯು ಕುಂಠಿತವಾಗಿಬಿಡುವುದು. ಅವನನ್ನು ಬಾವಿಯೊಳಗಿನ ಕಪ್ಪೆಗೆ ಹೋಲಿಸಬಹುದು ; ಅದು ತನ್ನ ಸಂಕುಚಿತ ಕ್ಷೇತ್ರವೇ ಇಡೀ ಜಗತ್ತು ಎಂದು ಭಾವಿಸುತ್ತದೆ. ಆದರೆ,

ನಮ್ಮ ಪ್ರಸಕ್ತ ಮಟ್ಟವು ನಮ್ಮೊಳಗೆ, ಅಪರಿಮಿತದ ಗುಣಲಕ್ಷಣವನ್ನುಳ್ಳ ಆನಂದದ ಪ್ರಜ್ಞೆಯನ್ನು ಪ್ರಚೋದಿಸಿದರೆ, ನಾವು ಸೀಮಾತೀತ ಕ್ಷೇತ್ರವನ್ನು ಪ್ರವೇಶಿಸಲು ಮುಂದೆ ಹೋಗಬೇಕೆಂಬ ಕಲ್ಪನೆಗೆ ಎಚ್ಚರಗೊಳ್ಳಬಹುದು. ಅದಕ್ಕೇ, “ಒಂದು ಹನಿ ಜ್ಞಾನಕ್ಕೆ ಅದರ ಹತ್ತರಷ್ಟು ಹೆಚ್ಚು ವಿವೇಕ ಬೇಕು” ಎಂದು ಹೇಳುವುದು. ಅಷ್ಟರಮಟ್ಟಿನ ವಿವೇಕವಿದ್ದರೆ, ಗುರಿಯು ಖಂಡಿತವಾಗಿ ನಮ್ಮ ಕಣ್ಮುಂದೆ ಇದ್ದು, ನಾವು ಪರಮಸತ್ಯದ ವಲಯದಲ್ಲಿ ಮುನ್ನಡೆಯಲು ಹೆಚ್ಚು ಹೆಚ್ಚು ಪ್ರೇರಿತರಾಗುವೆವು. ಆದರೆ, ನಮ್ಮ ಪ್ರಗತಿಗೆ ಬಳಸುವ ಸಾಧನ-ಸಂಪತ್ತಿಗಳಿಂದಲೇ ತಡೆಯುಂಟಾದಾಗ ತೊಂದರೆ ಉದ್ಭವಿಸುತ್ತದೆ. ಹಾಗಾದಾಗ ಬಿಡುಗಡೆಯ (ಮುಕ್ತಿಯ) ಕಲ್ಪನೆಯೂ ನಮ್ಮ ಮನಸ್ಸಿನಲ್ಲಿ ಮೂಡಲಾರದು. ನಿಜವಾಗಿ ಅದು ನಮ್ಮದೇ ದುರ್ದಶೆಯ ಕತೆ. ಅಂಥ ಜನರು ತಮ್ಮ ವಿಚಾರ ಮತ್ತು ಆಚಾರದ ಮೇಲೆ ಒಂದಾದಮೇಲೊಂದು ತೆರೆಯನ್ನೆಳೆಯುವ ತಮ್ಮ ಯೋಚನೆಗಳಿಗೇ ಬಲಿಪಶುವಾಗಿ ಬಿಡುತ್ತಾರೆ. (ಬಲಿಪಶುವಾಗಿಯೇ ಉಳಿಯುತ್ತಾರೆ.) ಒಟ್ಟಿನಲ್ಲಿ, ಅವರನ್ನು ಈ ಬಲೆಗಳಿಂದ ಹೊರಕ್ಕೆಳೆಯಲು ಸೂಚಿಸಲಾಗುವ ಯಾವ ವಿಧಾನಗಳಿಗೂ ಕಿವಿಗೊಡದಷ್ಟು ಅವರು ತಮ್ಮದೇ ರೀತಿಗಳಿಗೆ ಬಲವಾಗಿ ಬಿಗಿದುಕೊಂಡಿರುತ್ತಾರೆ.

ಹೀಗೆ, ಯಾವುದರೊಂದಿಗೆ ನಾವು ಪ್ರಾರಂಭಿಸಿದೆವೋ, ಅದೇ ನಮ್ಮ ಪ್ರಗತಿಯ ಮಾರ್ಗದಲ್ಲಿ ಅಡ್ಡಿಯಾಗಿಬಿಡುತ್ತದೆ. ಮಾನವನ ಆತ್ಮದ ಪ್ರಗತಿಗೆ ಒಂದು ಸರ್ವೋಚ್ಚ ಚಿಹ್ನೆಯೆಂಬುದು ಇರಲು ಸಾಧ್ಯವಿಲ್ಲ ; ಯಾಕೆಂದರೆ ಕೊನೆಯಲ್ಲಿ ಪ್ರವೇಶಿಸಬೇಕಾದುದು ಅನಂತದಲ್ಲಿ, ಹೇಗಾದರೂ ಮಾಡಿ, ಮಾನವನ (ಪ್ರಗತಿಯ) ಅಂತಿಮ ನೆಲೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳಲು ಸಾಧ್ಯವಾದರೆ, ಆರಂಭದಲ್ಲಿ ನಾವು ತೆಗೆದುಕೊಂಡ ವಸ್ತುವೇ ನಮ್ಮನ್ನು ದಾರಿಗುಂಟ ಮುನ್ನಡೆಸುವುದು, ಮತ್ತು, ಭಗವಂತನೇ ನಮ್ಮನ್ನು ಕೇವಲ ಅವ್ಯಕ್ತ’ದ ಯಥಾರ್ಥ ದರ್ಶನದ ವರೆಗೆ ಒಯ್ಯಬಲ್ಲಂತಹ ‘ಗುರು’ವನ್ನು ದೊರಕಿಸಿಕೊಡುತ್ತಾನೆ. ಏತದ್ವಿರುದ್ಧವಾಗಿ, ವ್ಯಕ್ತಿಯೋರ್ವನು ನೈಜಸತ್ಯದ ಕಲ್ಪನೆಯನ್ನು ಗ್ರಹಿಸಿಲ್ಲವಾದರೆ, ಈ ಉದ್ದೇಶಕ್ಕೆ ಅವನು ಕೈಗೊಳ್ಳುವ ಸಾಧನೋಪಾಯಗಳು ಅವನ ಪ್ರಗತಿಗೆ ವಿರುದ್ಧವಾದ ಬಂಧನಗಳಾಗುತ್ತವೆ. ಆದುದರಿಂದ, ನಮ್ಮ ಯಶಸ್ಸಿಗೆ ಬೇಕಾದ ಏಕೈಕ ಸಂಗತಿಯೆಂದರೆ, ಗುರಿಯನ್ನು ಸಾಧಿಸಲು ತೀವ್ರವಾದ ಉತ್ಕಂಠ. ಅದೇ, ನಿಜವಾದ ಗುರುವನ್ನು ನಿಮ್ಮ ಮನೆಬಾಗಿಲಿಗೆ ಕರೆತರುತ್ತದೆ.

ಪರಮಸತ್ಯದೊಳಕ್ಕೆ ಕೊನೆಯ ಪಕ್ಷ ಒಂದು ಇಣುಕು ನೋಟವನ್ನಾದರೂ ಪಡೆಯಬೇಕೆಂದು ಬಯಸುವವರಿಗೆ, ನನ್ನ ಅಭಿಪ್ರಾಯದಲ್ಲಿ, ಸಮಂಜಸವಾದ ವಿಧಾನವು ಹೇಗಿರಬೇಕೆಂದರೆ, ಅದು ಹೃದಯಾಂತರಾಳವನ್ನು ತಟ್ಟುವಂತಿರಬೇಕು. ಸಾಮಾನ್ಯವಾಗಿ ಈ ಉದ್ದೇಶಕ್ಕೆ ಅನುಸರಿಸಲಾಗುವ ಬಾಹ್ಯಸಾಧನಗಳು ನಿಜವಾಗಿಯೂ ಯಾವ ಪ್ರಯೋಜನಕ್ಕೂ ಬಾರವು, ಮತ್ತು ಸಾಧಕನನ್ನು ಗುರಿಯತ್ತ ನಡೆಸುವುದೂ ಇಲ್ಲ.

ಅದಕ್ಕೆ ಯೋಗ್ಯವಾದ ಪದ್ಧತಿಗಳನ್ನು ಕಂಡುಹಿಡಿಯಬೇಕಾದರೆ, ಇಡೀ ಸೃಷ್ಟಿಯನ್ನು ಅಂತಿಮವಾಗಿ ತಂದ ಕಾರಣವನ್ನು ನಾವು ಗಣನೆಗೆ ತೆಗೆದುಕೊಳ್ಳಬೇಕು. ಈ ಉದ್ದೇಶಕ್ಕೆ (ಸೃಷ್ಟಿಗೆ ನಿಶ್ಚಿತವಾಗಿ ಒಂದು ಶಕ್ತಿಯು ಕಾರ್ಯಪ್ರವೃತ್ತವಾಗಿರಲಿಕ್ಕೇ ಬೇಕು. ಅದೇನಿದ್ದಿತು ? ಅದು ‘ಸೃಷ್ಟಿ’ಯ ಕಲ್ಪನೆಯನ್ನೊಳಗೊಂಡ ‘ಸಂಕಲ್ಪ’ವೇ ಆಗಿದ್ದಿತು ; ಅದರ ಹಿನ್ನೆಲೆಯಲ್ಲಿ ಸ್ಥಿತಿ ಲಯ’ಗಳ ಕಲ್ಪನೆಯೂ ಇದ್ದಿತು. ಅದೇ ‘ಸಂಕಲ್ಪ’ ಶಕ್ತಿಯೇ ಕೆಳಗಿಳಿದು ಮನುಷ್ಯನಲ್ಲಿಯೂ ಬಂದು, ಅವನ ಅಸ್ತಿತ್ವದ ಅವಿಭಾಜ್ಯ ಭಾಗವೇ ಆಯಿತು. ನಾವು ನಮ್ಮಲ್ಲಿರುವ ಈ ಶಕ್ತಿಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಿಕೊಂಡರೆ ಸಮಸ್ಯೆ ಬಗೆಹರಿದಂತೆಯೇ. ‘ಸಂಕಲ್ಪ’ಕ್ಕೆ ಅದೇ ಶಕ್ತಿಯಿದೆ. ಆದರೆ ಮಾನವನಲ್ಲಿ ಅದು ಆ ಮಟ್ಟದ ವ್ಯಾಪ್ತಿಗನುಗುಣವಾಗಿ ಪರಿಮಿತಿಗೊಳಪಟ್ಟಿದೆ. ನಾವು ಬೆಳೆದಂತೆಲ್ಲ ಅದರ ಕಾರ್ಯಸಾಧ್ಯತೆಯೂ ವೃದ್ಧಿ ಹೊಂದುತ್ತದೆ. ಮತ್ತು ನಾವು ಗುರಿಯತ್ತ ಪಯಣಿಸುವಾಗ ಹಾದುಹೋಗಬೇಕಾದ ಅಸ್ತಿತ್ವದ ವಿವಿಧ ವಲಯ ಮತ್ತು ಮಂಡಲಗಳನ್ನು ಆವರಿಸುತ್ತದೆ. ಇವುಗಳನ್ನು ಬಂಧನಗಳೆಂದೇ ಬಗೆಯಬಹುದು. ಅವು ಒಂದು ತೆರೆಯಂತಾಗಿ, ಸತ್ಯದೊಳಕ್ಕೆ ಇಣುಕಿ ನೋಡಲೂ ಬಿಡುವುದಿಲ್ಲ. ಅರ್ಹನಾದ ಸಮರ್ಥ ಗುರುವೊಬ್ಬನು ನಮ್ಮ ಸಹಾಯಕ್ಕೆ ಮುಂದಾಗಿ ಬಂದರೆ ಮಾತ್ರವೇ ನಾವು ಅವುಗಳನ್ನೆಲ್ಲ ಹರಿದೊಗೆದು, “ಕೇವಲ ಪರತತ್ವದೆಡೆಗೆ ಸಾಗುವ ನಮ್ಮ ಪಯಣವನ್ನು ಸುಗಮವಾಗಿಯೂ, ಸುಲಭವಾಗಿಯೂ ಮಾಡಿಕೊಳ್ಳಲು ಶಕ್ತರಾಗಬಲ್ಲೆವು. ಪ್ರಾರಂಭಿಕ ಹಂತಗಳಲ್ಲಿ ನಮ್ಮ ಪ್ರಗತಿಗೆ ಅಡ್ಡಿಯಾಗಿ ಬರುವ ಗ್ರಂಥಿಗಳು, ಬಿಂದುಗಳು ಮತ್ತು ಉಪಬಿಂದುಗಳೂ ಉಂಟು. ಸತ್ಯದ ಅನ್ವೇಷಣೆಯ ನಮ್ಮ ದಾರಿಯಲ್ಲಿ ನಾವು ಇವುಗಳ ಮೂಲಕ ಹಾದುಹೋಗಬೇಕಾಗುವುದು. ನಮ್ಮ ತಪ್ಪು ವಿಚಾರ, ಮತ್ತು ಆಚರಣೆಗಳಿಂದಲೂ ತೊಡಕುಗಳುಂಟಾಗುವುದು. ಅವುಗಳನ್ನು ನಾವು ಶುದ್ದೀಕರಣ ಕ್ರಿಯೆಯಿಂದ ಪರಿಹರಿಸಿಕೊಳ್ಳಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಡೀ ದೂರವನ್ನು ಸ್ವತಃ ಕ್ರಮಿಸಿ, ತನ್ನಲ್ಲಿ ದೈವೀಶಕ್ತಿಯನ್ನು ವರ್ಧಿಸಿಕೊಂಡಿರುವ ಗುರುವಿನ ಸಹಾಯವು ಈ ಕಾರಣಕ್ಕಾಗಿಯೇ ಅತ್ಯಂತ ಬೆಲೆಯುಳ್ಳದ್ದು. ಆಗ ಮಾತ್ರ ದೈವೀ ಕೇಂದ್ರಗಳಿಂದ ದೈವೀಶಕ್ತಿಯು ಅಭ್ಯಾಸಿಯೊಳಗೆ ಹರಿದು ಬರುವುದಕ್ಕಾರಂಭಿಸುವುದು. ಈ ಸೂಕ್ಷ್ಮ ಶಕ್ತಿಯು ಅತ್ಯಂತ ಪ್ರಬಲವಾದದ್ದು. ಎಷ್ಟೆಂದರೆ, ಉನ್ನತ ಮಂಡಲಗಳಲ್ಲಿ, ಅಭ್ಯಾಸಿಯು ಮೇಲೆ ಹೋಗಲು ಯತ್ನಿಸಿದರೂ, ಅವನು, ಈ ಶಕ್ತಿಯ ಬಲವತ್ತಾದ ಧಾರೆಯ ಪರಿಣಾಮದಿಂದ ಕೆಳಕ್ಕೆ ದೂಡಲ್ಪಡುತ್ತಾನೆ. ಅಂಥ ಪರಿಸ್ಥಿತಿಯಲ್ಲಿ, ಕೇವಲ ಗುರುವಿನ ಕ್ರಿಯಾಶೀಲ ಶಕ್ತಿಯೊಂದೇ ಅವನನ್ನು ಆ ಧಾರೆಯಿಂದ ಮೇಲಕ್ಕೆತ್ತಿ, ಅವನು ಸತ್ಯದರ್ಶನ ಮಾಡಲು ಸಾಧ್ಯವಾಗುವಂತೆ ಮಾಡುತ್ತದೆ.

ಆದರೆ ಅಭ್ಯಾಸಿಗೆ ಅತ್ಯಮೂಲ್ಯವಾದದ್ದು ಇನ್ನೂ ಒಂದಿದೆ. ಮೊತ್ತಮೊದಲಿಗೆ, ಅವನಿಗೆ ಗುರುವಿನಲ್ಲಿ ಸಂಪೂರ್ಣ ಭರವಸೆಯಿರಬೇಕು, ಹಾಗೂ ಅವನು ಗುರುವಿನೊಂದಿಗೆ ಎಲ್ಲ ವಿಧದಲ್ಲಿಯೂ ಸಂಪೂರ್ಣವಾಗಿ ಸಹಕರಿಸಬೇಕು. ಹಾಗಿದ್ದಲ್ಲಿ ಅವನು ನಿಶ್ಚಿತವಾಗಿ ದಿನದಿನಕ್ಕೆ ಪ್ರಗತಿ ಹೊಂದುತ್ತ ಹೋಗುವನು ಮತ್ತು ತನ್ನಲ್ಲಿ ಬದಲಾವಣೆಯುಂಟಾಗಿ ತಾನು ಪರಿವರ್ತನೆ ಹೊಂದುತ್ತಿರುವುದನ್ನು ಅನುಭವಿಸತೊಡಗುವನು. ಅವನ ನಿಮ್ಮ ಸ್ತರದ ಜಾಗ್ರತ ಪ್ರಜ್ಞೆಯಲ್ಲಿ ಪರಿವರ್ತನೆಯುಂಟಾಗಿ, ಅವನ ಪಯಣವು ಉನ್ನತ ಪ್ರಜ್ಞಾವಸ್ಥೆಗಳಲ್ಲಿ ಆರಂಭವಾಗುತ್ತದೆ. ಸಾಮಾನ್ಯವಾಗಿ ಪ್ರಜ್ಞೆಯಲ್ಲಿ ಮೂರು ಹಂತಗಳಿವೆಯೆಂದು ಹೇಳಲಾಗುತ್ತದೆ- ಜಾಗ್ರತಪ್ರಜ್ಞೆ, ಸುಪ್ತಪ್ರಜ್ಞೆ ಮತ್ತು ಪರಾಪ್ರಜ್ಞೆ ಎಂದು. ಹೇಗೂ, ಇವು ಸ್ಕೂಲವಾಗಿ ವಿಂಗಡಿಸಿದ ವಿಭಾಗಗಳೇ ಹೊರತು, ಅದರ ಅಸಂಖ್ಯಾತ ಹಂತಗಳು ಪ್ರತಿಯೊಂದರಲ್ಲಿಯೂ ಇವೆ. ಕೆಳಹಂತದ ಪ್ರಜ್ಞೆಯ ಕಾರ್ಯಗಳ ಪರಿಣಾಮವು ಸುಪ್ತಮನಸ್ಸಿನ ಮೇಲೆ ನೆಲಸುತ್ತದೆ. ಅದೇ ನಮ್ಮ ವಿಧಿ (ಪ್ರಾರಬ್ದ)ವನ್ನು ರೂಪಿಸುವುದು. ಹಾಗಾಗಿ, ಕೈಗೊಳ್ಳಬೇಕಾದ ಮೊತ್ತಮೊದಲ ಕಾರ್ಯವೆಂದರೆ ಕೆಳಹಂತದ ಪ್ರಜ್ಞೆಯನ್ನು ಯೋಗ್ಯ ಚಿಂತನೆ ಮತ್ತು ಅಭ್ಯಾಸಗಳ ಮೂಲಕ ಸರಿಪಡಿಸುವುದು. ಅದರಿಂದ ಅದೇ ಒಂದು ಶಕ್ತಿಯಾಗಿ ಮಾರ್ಪಟ್ಟು, ಸುಪ್ತಪ್ರಜ್ಞೆಯನ್ನು ದೀಪ್ತವಾದ ಸ್ಥಿತಿಗೆ ತರುವುದು. ಇದು ನಮ್ಮನ್ನು ಪರಾಪ್ರಜ್ಞೆಯ ಸ್ಥಿತಿಗೆ ಒಯ್ಯುವುದು. ‘ಪರಾಪ್ರಜ್ಞೆ’ ಎಂಬ ಶಬ್ದವನ್ನು ‘ಸುಪ್ತಪರಾಪ್ರಜ್ಞೆ’ ಎಂದು ಬದಲಿಸಿದರೆ, ಅದರ ಉತ್ತರೋತ್ತರ ಪರಿಣಾಮಗಳನ್ನು ಗ್ರಹಿಸುವುದು ಸುಲಭವೆಂದು ನನ್ನೆಣಿಕೆ. ಹೇಗಾದರೂ ಗುರುವಿನ ಅನುಗ್ರಹದಿಂದ ನಾವು ಇಲ್ಲಿಯವರೆಗೆ ಬಂದುದಾದರೆ, ನಮಗೆ ಮತ್ತೊಂದು ಸಂಗತಿ ಅನಾವರಣಗೊಳ್ಳುತ್ತದೆ. ಒಂದು ರೀತಿಯಲ್ಲಿ ಅದಕ್ಕಿಂತ ಉನ್ನತವಾದ ದೃಶ್ಯಗಳ ಅವಲೋಕನಕ್ಕೋಸ್ಕರ, ನಾವು ಆ ಪರಾಪ್ರಜ್ಞೆಯಲ್ಲಿ ಲೀನರಾಗಿಬಿಡುತ್ತೇವೆ. ಇಲ್ಲಿ “ಉನ್ನತ” ಎಂಬ ಶಬ್ದವು ಪರಾಪ್ರಜ್ಞೆಯ (ದಿವ್ಯ ಪ್ರಜ್ಞೆಯ) ವಿರಲಗೊಂಡ ಸ್ಥಿತಿಗೇ ಅನ್ವಯಿಸುತ್ತದೆ ; ಮತ್ತು ಈ ಸಂಬಂಧದಲ್ಲಿ ವ್ಯಕ್ತಪಡಿಸಿದ ಆಧ್ಯಾತ್ಮಿಕ ವಲಯ ಹಾಗೂ ಪ್ರದೇಶ (ಕ್ಷೇತ್ರಗಳಿಗೂ ಅದೇ ಅರ್ಥದಲ್ಲಿ ಬಳಸಲಾಗಿದೆ. ಸಂಕ್ಷಿಪ್ತವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳು ಒಂದಾದಮೇಲೊಂದರಂತೆ, ನಮ್ಮನ್ನು ತ್ತ್ರೈತ (Trinity) ದ ಆಚೆಗೆ, ಅಷ್ಟೇ ಅಲ್ಲ, ಸತ್ ಸ್ಥಿತಿಯ ಆಚೆಗೂ ಕೊಂಡೊಯ್ಯುತ್ತವೆ. ಮುಕ್ತಿಯ ಸ್ಥಿತಿಯು ಆರಂಭವಾಗುವುದು ಆವಾಗ. ಆದರೆ ಅದಾಗುವುದು ಸಾಕಷ್ಟು ಶ್ರಮಪೂರ್ಣ ಪಯಣದ ನಂತರವೇ ಸೈ. ಮುಕ್ತಿಯ ಉಷೋದಯವಾಗುತ್ತಲೇ ಯಾತ್ರೆಯ ದಣಿವು ಕೊನೆಗೊಂಡು, ಅದರ ಭಾರದ ಅನುಭವವೂ ಇರುವುದಿಲ್ಲ.

ಇಷ್ಟಾದರೂ ನಮ್ಮ ಪಯಣವಿನ್ನೂ ಮುಗಿದಿಲ್ಲ. ಸಾಕ್ಷಾತ್ಕಾರವು ತನ್ನ ಮೂಲಸ್ವರೂಪವನ್ನು ಎಲ್ಲಿ ತಾಳುವುದೋ ಆ ಮೂಲನೆಲೆಯತ್ತ ನಾವು ಸಾಗುತ್ತಲೇ ಇರುತ್ತೇವೆ. ವರ್ಣಮಯ ದರ್ಶನಗಳು ಮುಗಿದು, ಸಂಗಡವೇ ಕೈವಲ್ಯ (Absolute) ಅರ್ಥಾತ್ ಪರತತ್ವದ ದರ್ಶನವು ತನ್ನ ನಿಜರೂಪದಲ್ಲಿ ಆರಂಭವಾಗುತ್ತದೆ. ಆದರೂ ಯಾತ್ರೆಯನ್ನೂ ಮುಗಿದಿಲ್ಲ. ಅನಿರ್ವಚನೀಯವಾದದ್ದು ಒಂದು ಏನೋ ಇನ್ನೂ ಇದೆ. ಮುಕ್ತಿಯ ಭಾವನೆ ಕೂಡ ಅಲ್ಲಿದೆ, ಎಲ್ಲಿಯತನಕ, ಅದಿದೆಯೋ, ಅಲ್ಲಿಯವರೆಗೆ, ನಮ್ಮ ಯಾತ್ರೆಯು ಮುಕ್ತಾಯ ಹಂತಕ್ಕೆ ಬಂದಿರಬಹುದಾದರೂ, ಅದೂ ಒಂದು ಬಂಧನವೇ ಸೈ. ಅಲ್ಲಿ, ಅದಕ್ಕೂ ಮುಂದೆ, ನಮ್ಮನ್ನು ಪರಮಪ್ರಭುವಿನ ಸಹಾಯವೊಂದೇ ಕೊಂಡೊಯ್ಯಬಲ್ಲುದು. – ಆದರೆ ಅದು ಯಾವಾಗ ? – ನಾವು ಸಂಪೂರ್ಣ ಮರವೆಯ ಸ್ಥಿತಿಯನ್ನು ಹೊಂದಿದಾಗ ಮಾತ್ರ. ಆ ಅರ್ಥದಲ್ಲಿ, ನಾನು ಜನರನ್ನು “ತಮ್ಮನ್ನು ತಾವು ಅರಿಯಲಿಕ್ಕಿಲ್ಲ, ಹೊರತಾಗಿ, ತಮ್ಮನ್ನು ತಾವು ಮರೆಯಲು” ಪ್ರೇರೇಪಿಸಿಯೇನು.

ನಿಜವಾದ ಭಕ್ತನಾಗಿ, ಭಗವಂತನ ಅರ್ಥಾತ್ ಜಗದಾದಿಗುರುವಿನ ಅನುಗ್ರಹದ ಪ್ರಭೆಯಲ್ಲಿ ಮಿಂದು, ಆತನ ಇಚ್ಛೆಗೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಂಡಾಗ, ಅದು ನಿಜವಾಗಿ ‘ಆತ್ಮ’ ಸಮರ್ಪಣೆಯ ಸ್ಥಿತಿಯೆನಿಸುವುದು. ಅದುವೇ ‘ಗುರು’ ಮತ್ತು ‘ಭಕ್ತ’ ಇವರ ನಡುವಣ ಸಂಬಂಧ ಅದನ್ನು ಸಾದ್ಯಂತವಾಗಿ ಕಾಯ್ದು ಕೊಳ್ಳಬೇಕು. ಏಕೆಂದರೆ ಅದೇ ಸಂಬಂಧವೇ ನಮ್ಮನ್ನು ಅಂತಿಮವಾಗಿ ದಿವ್ಯಪ್ರಜ್ಞೆಯ ಉನ್ನತೋನ್ನತಮಟ್ಟಕ್ಕೆ ತಂದದ್ದು. ಇಲ್ಲಿಯೇ ನಮ್ಮ ನಿಜವಾದ ಅಸ್ತಿತ್ವದ ಗುಣಲಕ್ಷಣವು ಬೆಳಕಿಗೆ ಬರುವುದು. ಆದರೆ ಮುಕ್ತಿಯ ಕಲ್ಪನೆಯು ಇನ್ನೂ ಅಂಟಿಕೊಂಡಿದ್ದರೆ, ಅಥವಾ ಅವನು ಅದರ ಯಾವುದೇ ರೀತಿಯ ಸಂವೇದನೆಯನ್ನು ಹೊಂದಿದ್ದರೆ, ಅವನು ಬಂಧನಗಳಿಂದ ಇನ್ನೂ ಮುಕ್ತನಾಗಿಲ್ಲ ವೆಂದರ್ಥ. ಮುಕ್ತಿಯ ಪ್ರಜ್ಞೆಯು ಸಹ ಹೊರಟುಹೋದಾಗ ಸಾಧಕನು ಆಶ್ಚರ್ಯ, ವಿಸ್ಮಯಗಳ ವ್ಯೂಹದಲ್ಲಿ ಮುಳುಗಿ ಹೋಗುತ್ತಾನೆ.

ಸತ್ಯದ ಕಲ್ಪನೆಯೂ ಸಹ ಅಲ್ಲಿರುವುದಿಲ್ಲ. ತಾನು ಅನಂತತೆಯೊಡನೆ ಸರಿಜೋಡಿಯಾಗಿ ಮುನ್ನಡೆಯಲಾಗದ ಸ್ಥಿತಿಯನ್ನು ಅನುಭವಿಸುತ್ತಾನೆ. ಈ ಸ್ಥಿತಿಯನ್ನು ಅನಂತದಲ್ಲಿ ನಾವು ಸಂಪೂರ್ಣವಾಗಿ ಕರಗಿ ಹೋದ ಸ್ಥಿತಿ” ಅಥವಾ “ಅನಂತವೇ ನಮ್ಮೊಳಕ್ಕೆ ಸಂಪೂರ್ಣವಾಗಿ ಸುರಿಯಲ್ಪಟ್ಟ ಸ್ಥಿತಿ” ಎಂದು ಕರೆಯುವುದು ಹೆಚ್ಚು ಸೂಕ್ತವಾದೀತು. ಎಲ್ಲವೂ ವಿಲೀನಗೊಂಡಾಗ, “ತಾನು ಯಾವ ರೀತಿಯಿಂದಲೂ ಇಲ್ಲವೆಂಬಂತೆ ಸಾಧಕನು ಅನುಭವಿಸುತ್ತಾನೆ. ಈಗ ಬ್ರಹ್ಮದಲ್ಲಿ ಲಯವಾಗುವುದು ಪ್ರಾರಂಭವಾಗುತ್ತದೆ. ಆದರೂ, ಮಾನವನಿಗೆ ಮೀಸಲಾದ ಅಂತಿಮ ಘಟ್ಟವನ್ನು ತಲುಪಲು ನಾವು ಮುನ್ನುಗ್ಗುತ್ತಾ ಇರುತ್ತೇವೆ.

ಮಾನವ ಜೀವನದ ಭಾಗ ಮಾತ್ರದಷ್ಟು ಕ್ಷಿಪ್ರಕಾಲದಲ್ಲಿಯೇ ಇಂತಹ ಪರಮೋಚ್ಚ ಫಲವನ್ನು ಕೊಡುವ ಸಾಧನ ಮಾರ್ಗವಾಗಲಿ, ಉಪಾಸನಾ ಕ್ರಮಗಳಾಗಲೀ, ಸಹಜಮಾರ್ಗದ ಹೊರತಾಗಿ ಬೇರಿಲ್ಲವೆಂದು ನಾನು  ಧೈರ್ಯದಿಂದ ಹೇಳುತ್ತೇನೆ. “ಸಹಜಮಾರ್ಗ’ವಿರುವುದೇ ಇದಕ್ಕಾಗಿ,