1. ಧ್ಯಾನವು ಆಧ್ಯಾತ್ಮದ ಅಡಿಗಲ್ಲು . ನಿಮ್ಮ ನಿಜವಾದ ಗುರಿಯನ್ನು ಎದುರಿಗಿಟ್ಟುಕೊಂಡು ಧ್ಯಾನ ಮಾಡಿದುದಾದರೆ ನೀವು ನಿಶ್ಚಯವಾಗಿ ಧ್ಯೇಯವನ್ನು ತಲುಪುವಿರಿ.
  2. ರಾಜಯೋಗದ ಅಂಗವಾದ ಧ್ಯಾನವೊಂದೇ ನಿಮ್ಮನ್ನು ಮುಖ್ಯ ಗುರಿಯ ಕಡೆಗೆ ಒಯ್ಯುತ್ತಿದೆ. ಕೇಂದ್ರವನ್ನು ತಲುಪಲು ಬೇರೆ ಯಾವ ಸಾಧನವೂ ಇಲ್ಲ. ಕೇಂದ್ರದೊಳಗಿನಿಂದ ಉದ್ಭವಿಸಿದ ಒಂದು ಸಂಕಲ್ಪವು ಇಷ್ಟು ದೊಡ್ಡ ವಿಶ್ವವನ್ನು ಹುಟ್ಟಿಸಿತೆಂಬುದನ್ನು ನಾವು ನೋಡಿದೆವು. ನಮ್ಮ ಅಕಾರ್ಯಗಳಿಂದ ವಿಕೃತವಾಗಿದ್ದರೂ ಅದೇ ಶಕ್ತಿಯನ್ನೇ ನಾವು ಉಪಯೋಗಿಸುವೆವು. ಧ್ಯಾನದ ಮೂಲಕ ನಾವು ಅದೇ ಶಕ್ತಿಯಿಂದಲೇ ಕೆಲಸ ತೆಗೆದುಕೊಳ್ಳುವೆವು.
  3. ಸಾಮಾನ್ಯವಾಗಿ ನಾವು ಧ್ಯಾನಕ್ಕಾಗಿ ಹೃದಯವನ್ನು ತೆಗೆದುಕೊಳ್ಳುತ್ತೇವೆ. ಹೃದಯವು ರಕ್ತವನ್ನು ಪೂರೈಸುವ ಕೇಂದ್ರ ಸ್ಥಾನವಾಗಿದೆ. ಅದು ರಕ್ತವನ್ನು ಶುದ್ಧಗೊಳಿಸಿ ದೇಹದ ಬೇರೆ ಬೇರೆ ನರಗಳಿಗೂ ಜೀವಕೋಶಗಳಿಗೂ ಮುಟ್ಟಿಸುವುದು. ಈಗ ನಾವು ಹೃದಯವನ್ನು ಧ್ಯಾನದ ಕೇಂದ್ರವನ್ನಾಗಿ ತೆಗೆದುಕೊಂಡುದರಿಂದ ನಮ್ಮ ಶರೀರದೊಳಗೆಲ್ಲ ಹರಿಯುವ ರಕ್ತದ ಮೇಲೆ ಪರಿಣಾಮವಾಗುವುದು. ನಮ್ಮವೇ ಆದ ವಿಚಾರಗಳ ಹಾಗೂ ಕೃತಿಗಳ ಪರಿಣಾಮ ಸ್ವರೂಪವಾಗಿ ಉಂಟಾದ ಸ್ಥೂಲತೆಯು ಕರಗಲಾರಂಭಿಸುವುದು. ಈ ಪದ್ಧತಿಯಂತೆ ಹೃದಯದ ಮೇಲೆ ಧ್ಯಾನ ಮಾಡತೊಡಗಿದ ಮೊದಲದಿನದಿಂದಲೇ ನಮಗೆ ಈ ಲಾಭವು ದೊರೆಯಲಾರಂಭಿಸುವುದು.
  4. ಧ್ಯಾನದಿಂದ ನಾವು ನಮ್ಮ ಮನಸ್ಸಿನಲ್ಲಿ ತಾತ್ಪೂರ್ತಿಕ ವಿರಾಮವನ್ನುಂಟು ಮಾಡುವುದರಿಂದ ನಾವು ದೈವೀಶಕ್ತಿಯ  ಸಂಪರ್ಕದಲ್ಲಿರುವಷ್ಟು ಕಾಲ ಶಾಂತಿಯು ನೆಲೆಸಿರುವುದು.
  5. ಆದುದರಿಂದ ಆಧ್ಯಾತ್ಮಿಕ ಲಾಭ-ಆನಂದಗಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಪಡೆಯಬೇಕೆನ್ನುವವರು ಸರಳವಾಗಿ ಸುಖಾಸನದಲ್ಲಿ ಕುಳಿತುಕೊಳ್ಳಬೇಕು.
  6. ನಮ್ಮ ವಿಚಾರದ ವಿದ್ಯುತ್ತನ್ನು ಬಹಳಷ್ಟು ಅದರಲ್ಲಿ ವ್ಯಯಿಸುವೆವು. ಇದರಿಂದ ಆ ಸ್ಥಳದಲ್ಲಿ ಪವಿತ್ರತೆಯ ಭಾವನೆಯುಂಟಾಗತೊಡಗುವುದು. ಆ ಸ್ಥಳವು ಅದೇ ಪರಿಣಾಮಗಳನ್ನು ಹೊಂದುವುದಾದ ಕಾರಣ ನಮಗೆ ಆ ಕಾರ್ಯದಲ್ಲಿ ಸಹಾಯ ದೊರೆಯುವುದು.
  7. ಪ್ರತಿಯೊಂದು ಕೆಲಸಕ್ಕೂ ಒಂದು ವಿಶಿಷ್ಟ ಸ್ಥಳ ಅಗತ್ಯವೆಂಬ ಮಾತಿಗೆ ಮಹಾತ್ಮರು ಬಹಳ ಮಹತ್ವ ಕೊಟ್ಟಿದ್ದಾರೆ. ಏಕೆಂದರೆ, ಅಲ್ಲಿ ಹೋದ ಕೂಡಲೇ ಆಯಾ ಕೆಲಸಕ್ಕಾಗಿಯೆ ಮೀಸಲಾಗಿದ್ದ ವಿಚಾರಗಳು ನಮ್ಮಲ್ಲಿ ಸುಳಿಯಬೇಕು.
  8. ಸೂರ್ಯೊದಯಕ್ಕಿಂತ ಮುಂಚೆ ಸಂಧ್ಯೆಯನ್ನು ಮುಗಿಸಬೇಕೆಂದು ಹೇಳಿದುದರ ಉದ್ದೇಶವಿಷ್ಟೇ: ಶರೀರದಿಂದ ಹೊರಗೆ ಹೋದ ಉಷ್ಣತೆ ಅಥವಾ ತೊಲಗಿ ಹೋದ ದುಷ್ಪರಿಣಾಮಗಳು ಬಿಸಿಲಿನ ಪ್ರಭಾವದಿಂದ ಮತ್ತೆ ಉಂಟಾಗಿ ನಾವು ಸಮಯದ ಲಾಭ ಪಡೆಯದಂತಾಗಬಾರದು.
  9. ಈ ಹೊರಗಿನ ಉಷ್ಣತೆಯ ಕಡಿಮೆಯಾಗುವ ಸಮಯವನ್ನು ಮಹಾತ್ಮರು ಗಣನೆಗೆ ತೆಗೆದುಕೊಂಡರು. ಈ ಉಷ್ಣತೆಯು  ನಾಶವಾಗತೊಡಗಿದಾಗ ತಂಪಿನ ಪರಿಣಾಮ ತಲೆದೋರಲಾರಂಭಿಸುವುದು.. ಇವೆರಡೂ ಕೂಡುವ ವೇಳೆಗೆ ಸಂಧಿಗತಿಯೆನ್ನುವರು. ಈ ಸಂಧಿಗತಿಯಲ್ಲಿ ಪೂಜೆ-ಉಪಾಸನೆಗಳನ್ನು ಮಾಡುವುದು ಕರ್ತವ್ಯವೆಂದು ಮಹಾತ್ಮರು ವಿಧಿಸಿದ್ದಾರೆ.
  10. ಅದರ ಹಿಂದೆ ಒಂದು  ದೊಡ್ಡ  ತತ್ವ ಅಡಗಿದೆ. ನಾವು ಸದಾಕಾಲ ಪ್ರಾಪಂಚಿಕ ವಿಷಯಗಳಲ್ಲಿ ನಿರತರಾಗಿರುತ್ತೇವೆ ನಾವು ಏನನ್ನೂ ಮಾಡದಿರುತ್ತಿದ್ದರೆ, ನಮ್ಮ ವಿಚಾರಗಳಿಗೆ ರೆಕ್ಕೆ ಬಂದಿರುವಂತೆ  ತೋರುತ್ತದೆ. ಯಾವಾಗಲೂ ನಾವು ತಳಮಳ ಮತ್ತು ಅವ್ಯವಸ್ಥೆಯಲ್ಲಿ ಇರುತ್ತೇವೆ. ನಮ್ಮ ವ್ಯಷ್ಟಿ ಮನಸ್ಸು ಅಂಥ ಚಟುವಟಿಕೆಗಳಿಗೆ ಒಗ್ಗಿಕೊಂಡು ಬಿಟ್ಟಿದೆ. ಹೀಗೆ ನಾವು ಎಲ್ಲವನ್ನೂ ತಲೆ ಕೆಳಗು ಮಾಡಿದ್ದೇವೆ. ನಾವು ಮಾಡುವ ತಪ್ಪು ಕೆಲಸಗಳಲ್ಲಿ ನಮ್ಮ ಕ್ರಿಯೆಗಳೂ ವಿಚಾರಗಳೂ ಮಹತ್ವದ ಪಾತ್ರ ವಹಿಸುತ್ತವೆ. ನಾವು ವಿಧವಿಧವಾದ ವಿಚಾರ ಮತ್ತು  ಕಲ್ಪನೆಗಳ ಸಂಪರ್ಕದಲ್ಲಿ ಇರುವಾಗ ನಮ್ಮ ಭಾವನಾತ್ಮಕ ಸಂವೇದನೆಗಳ(ಅನಿಸಿಕೆಗಳ) ಮತ್ತು ಇಂದ್ರಿಯಗಳ ಮೇಲೆ ಅವು ಸಂಸ್ಕಾರವನ್ನು ಉಂಟು ಮಾಡುತ್ತವೆ. ನಮ್ಮ ಇಂದ್ರಿಯಗಳು ಕೆಟ್ಟು  ಹೋಗಿ, ತಪ್ಪು  ದಾರಿ ಹಿಡಿಯುತ್ತವೆ. ಹೀಗೆ  ನಾವು  ನಮ್ಮ ಇಂದ್ರಿಯಗಳ ಮೇಲೆ ಮಾಡುವ ಗುರುತುಗಳು, ಅವುಗಳನ್ನು ಬೋಧ ಅಥವಾ ವಿವೇಕವೇ ಇಲ್ಲದ ಬಂಡೆಯಂತೆ ಜಡಗೊಳಿಸಿ ಬಿಡುತ್ತವೆ. ಆತ್ಮದ ಮೇಲೆ ಯಾವ ಕ್ರಿಯೆಯೂ ವರ್ತಿಸುವುದಿಲ್ಲ(ಪ್ರಭಾವಿಸುವದಿಲ್ಲ)  ಎಂಬುದು ನಿಃಸಂದೇಹ. ಆದರೆ, ನಾವು ಎಂಥ ಅಡೆತಡೆಗಳನ್ನು ಮತ್ತು ಆವರಣಗಳನ್ನು ನಿರ್ಮಿಸುತ್ತೇವೆಂದರೆ, ಅವು ಆತ್ಮದ ಸುತ್ತಲೂ   ರೇಷ್ಮೆಗೂಡಿನಂತೆ  ಸುತ್ತುಗಟ್ಟಿ ಮುಚ್ಚಿ  ಹಾಕಿಬಿಡುತ್ತವೆ. ಸಾಕ್ಷಾತ್ಕರಿಸಿಕೊಳ್ಳುವುದು ಹಾಗಿರಲಿ, ಆತ್ಮವನ್ನು ನಾವು ಇಣುಕಿ ನೋಡುವುದೂ ಸಾಧ್ಯವಿಲ್ಲ. ವಿಷಪೂರಿತ  ವಿಚಾರಗಳಿಂದ ಮತ್ತು ಕ್ರಿಯೆಗಳ ಪರಿಣಾಮವಾಗಿ ನಾವು ನಮ್ಮ ವಿವೇಕ ಶಕ್ತಿಯನ್ನೂ, ಯಥಾರ್ಥ ಗ್ರಹಣ ಶಕ್ತಿಯನ್ನೂ  ಕೆಡಿಸಿಕೊಳ್ಳುತ್ತೇವೆ.  ಇಷ್ಟು  ಸ್ಥೂಲದೆಶೆಗೆ ಮುಟ್ಟಿದವರು ರಾಜಯೋಗ  ಶಿಕ್ಷಣ ಕ್ರಮದ ಅಡಿಯಲ್ಲಿ ಬರಲು ಒಪ್ಪುವದಿಲ್ಲ. ನಾವು  ಹೇಳುವದರ  ಕಡೆಗೆ  ಜನರು ಕಿವುಡಾಗಿರುವುದು(ಗಮನಕೊಡದಿರಲು)ಇದೇ ಕಾರಣ.
  11. ಧ್ಯಾನದಲ್ಲಿ ಒಂದು ವಸ್ತುವಿನ, ಅರ್ಥಾತ್ ದೇವರ , ಪ್ರತೀಕ್ಷೆಯಿರುತ್ತದೆ. ಪ್ರತೀಕ್ಷೆಯಲ್ಲಿ ಸತತ ಪ್ರಯತ್ನವಿರುವುದರಿಂದ ಅದು ಸಹಜವಾಗಿ ಒಂದು ಬಗೆಯ ಆಕರ್ಷಣೆಯನ್ನುಂಟು ಮಾಡುವುದು. ಈ ಆಕರ್ಷಣೆಯು ಎಷ್ಟುಮಟ್ಟಿಗೆ ಬೆಳೆಯುವುದೆಂದರೆ, ನೀವು ನಿಮ್ಮ ಬಳಿಗೆ ಒಂದು ಆತ್ಮವನ್ನು ಕೂಡ ಕರೆಯಬಹುದು. ಅದು ಪರಾಕಾಷ್ಠೆಯನ್ನು ಮುಟ್ಟಿದಾಗ ಮಹಾನ್ ಆತ್ಮವು ಕೂಡ ಬರಲು ನಿರಾಕರಿಸಲಾರದು.
  12. ಅಭ್ಯಾಸಿಯು ಪ್ರಕಾಶವನ್ನು ಕಾಣಲು ಪ್ರಯತ್ನಿಸಬಾರದು; ಆದರೆ , ಅದು ಅಲ್ಲಿದೆಯೆಂದು ಭಾವಿಸಬೇಕು. ನನಗಾದರೋ ಎಷ್ಟುಮಟ್ಟಿಗೆ ಅಸಹ್ಯವಾಗಿದೆಯೆಂದರೆ, ನಾನು ಅದರಿಂದ ದೂರವಿರಲು ಯತ್ನಿಸುವೆನೆಂದು ಹೇಳಬಲ್ಲೆ. ವಸ್ತುತ: ಜ್ಯೋತಿಯು ಸತ್ಯದ ಛಾಯೆಯೆ ಹೊರತು ಸ್ವಯಂ ಸತ್ಯವಲ್ಲ. ನಾವು ನಿಜವಾದ ಸತ್ಯವನ್ನು ಹೊಂದಬೇಕಾಗಿದೆ. ಜ್ಯೋತಿಯು ಅದರ ಭೌತಿಕ ಅಭಿವ್ಯಕ್ತಿ ಮಾತ್ರ.  ಅಭ್ಯಾಸ ಕಾಲದಲ್ಲಿ ಅದರ ಅನುಭವವಾಗುವುದು. ಆದರೆ ಅದು ಅನಾವಶ್ಯಕವೆಂದು ನಾವು ಅದನ್ನು ಲಕ್ಷಿಸುವುದಿಲ್ಲ. ನಿಜವಾಗಿ. ಬೆಳಕಾಗಲಿ ಕತ್ತಲೆಯಾಗಲಿ ಇಲ್ಲದ ಸ್ಥಾನಕ್ಕೇ ನಾವು ಕೊನೆಗೆ ಬರಬೇಕಾಗಿದೆ.
  13. ಬೆಳಕಿಗಾಗಿ ಆಕ್ರೋಶ ಮಾಡುವುದೆಂದರೆ, ತನ್ನದೇ ಆದ ಥಳಕನ್ನು ವ್ಯಕ್ತಪಡಿಸುವ ಹುಚ್ಚು ಲಹರಿಯಲ್ಲದೆ ಮತ್ತೇನೂ ಅಲ್ಲ.
  14. ಧ್ಯಾನ ಸಮಯದಲ್ಲಿ ವಸ್ತುತ: ಕೇವಲ ಶಾಂತಿ-ಸರಳತೆಯಗಳನ್ನನುಭವಿಸುವೆವು. ಆದರೆ ಸಾಧಕನು ಸಾಮಾನ್ಯವಾಗಿ ಇದನ್ನು ತಿಳಿದುಕೊಳ್ಳಲು ಸಮರ್ಥನಾಗುವುದಿಲ್ಲ. ಏಕೆಂದರೆ ಆರಂಭದ ಹಂತಗಳಲ್ಲಿ ಇದು ಆತನ ಕಲ್ಪನೆಯನ್ನು ಮೀರಿರುವುದು. ಈ ರೀತಿ ಪರಿಣಾಮವು ಕಾಣದಿರುವುದರಿಂದ ಆತನು ಧ್ಯಾನ ಸಮಯದಲ್ಲಿ ತನಗೇನೂ ಅನುಭವವಾಗುವುದಿಲ್ಲವೆಂದು ದೂರುತ್ತಾನೆ. ಇದು ಮುಖ್ಯವಾಗಿ ಅಭ್ಯಾಸದ ಕೆಲವು ನಿಮಿಷಗಳವರೆಗೆ ಮಾತ್ರ ಆತನು ದೈವೀಶಕ್ತಿಯ ಸಂಪರ್ಕದಲ್ಲಿರುವುದರ ಫಲವಾಗಿದೆ.
  15. ಆ ಗುರಿ ಮುಟ್ಟಲು ಧ್ಯಾನವು ಒಂದು ಸಾಧನ ಮಾತ್ರ. ಏಕಾಗ್ರತೆಯು ಕಾಲಕ್ರಮದಲ್ಲಿಯ ಅದರ ಸಹಜ ಪರಿಣಾಮ. ಧ್ಯಾನ ಸಮಯದಲ್ಲಿ ನಮ್ಮ ಮನಸ್ಸಿನಲ್ಲಿ ಸುಳಿಯುವ ಬೇರೆ ವಿಚಾರಗಳನ್ನು ಲಕ್ಷೀಸದೆ ಕೊನೆಯವರೆಗೂ ಧ್ಯಾನ ಮಾಡುವುದೇ ಸರಿಯಾದ ಕ್ರಮ.
  16. ಅದರಲ್ಲಿ ಪವಿತ್ರತೆ ತಾನೇ ತಾನಾಗಿದೆ. ಇಂತು ನಾವು ಪವಿತ್ರತೆಯ ಆದರ್ಶವನ್ನಿರಿಸಿಕೊಂಡೆವು. ಅದೂ ಎಂಥ ಪವಿತ್ರತೆ? ಮಲ, ವಿಕ್ಷೇಪ ಮತ್ತು ಆವರಣರಹಿತವಾದಂಥದು!
  17. ಧ್ಯಾನದಲ್ಲಿ , ನೀವಲ್ಲ , ನಿಮ್ಮ ಗುರುವೇ ತನ್ನ ರೂಪದ ಮೇಲೆ ಧ್ಯಾನಿಸುವೆನೆಂದು ತಿಳಿದರೆ ಅದು ಅತ್ಯುತ್ತಮ ಫಲವನ್ನು ಕೊಡುವುದು.
  18. ಆತ್ಮವು ವಿಶ್ವದಾದ್ಯಂತ ವ್ಯಾಪಿಸಿದಂತೆ ಮನುಷ್ಯನಲ್ಲಿಯೂ ವ್ಯಾಪಿಸಿದೆ. ಆಕುಂಚನವು ಆರಂಭವಾದಾಗ ಪ್ರಳಯದ ಸ್ಥಿತಿಯುಂಟಾಗುವುದು. ಈಗ ಮನುಷ್ಯನಲ್ಲಿಯೂ ಇಂಥ ಆಕುಂಚನದ ಸ್ಥಿತಿಯುಂಟಾದರೆ ವೈಯಕ್ತಿಕ ಪ್ರಳಯವು ಆರಂಭವಾಗುವುದು. ಅರ್ಥಾತ್ ಸ್ಥೂಲತೆಯ ಸ್ಥಿತಿಯಿಂದ ಅವನು ಮೂಲ ಸ್ಥಿತಿಯಲ್ಲಿ ಜಿಗಿಯತೊಡಗುವನು. ಮನುಷ್ಯನಲ್ಲಿ ಈ ಸಂಕೋಚ ಅಥವಾ ಸಂಹಾರದ ಸ್ಥಿತಿ ಹೇಗಿರುವುದು? ಪಸರಿಸಿದ ತನ್ನ ಶರೀರವನ್ನು ಹೇಗಾದರೂ ಮುದುಡಿಕೊಳ್ಳುವುದೇ ಇಂಥ ಸಂಹಾರವಾಗಬಲ್ಲದು. ಆಕುಂಚನ ಯಾವಾಗಲೂ ಕೆಳಗಿನಿಂದ ಪ್ರಾರಂಭವಾಗಿ ಕ್ರಮೇಣ ಮೇಲಕ್ಕೆ ಹಬ್ಬುವುದು. ಏಕೆಂದರೆ ಅದಕ್ಕೆ ಮೇಲುಗಡೆ ಹೋಗಬೇಕಾಗಿದೆ. ಮನುಷ್ಯನಾದರೂ ಕೆಳಗಿನಿಂದ ತನ್ನ ಸಂಕೋಚವನ್ನಾರಂಭಿಸಿದರೆ ಆತನ ಸ್ಥಿತಿಯೂ ಅದೇ ಆಗುವುದು.ಎಂದರೆ , ತನ್ನ ಕಾಲುಗಳನ್ನೂ ಇತರ ಅವಯವಗಳನ್ನೂ ಒಂದು ಅವಸ್ಥೆಯಲ್ಲಿರಿಸಿ ಶರೀರವನ್ನು ನಿಶ್ಚಲಗೊಳಿಸಬೇಕು. ಇದನ್ನೂ ಆತನು ಹೇಗಾದರೂ ಮಾಡಬಹುದು; ಆದರೆ ಕೊನೆಗೆ ಆಗುವುದು ಆಸನದ ಆಕೃತಿಯೆ.
  19. ಮನಸ್ಸು ವಿಚಾರ ಮಾಡುವುದು . ಅದು ಸರಿಯೆಂದು ಹೃದಯವು ಒಪ್ಪಿಗೆಯನ್ನು ಸೂಚಿಸುವುದು. ಹೃದಯವು ನಾನಾ ಬಗೆಯ ಸೂಚನೆಗಳನ್ನು ಕೊಡುವುದು. ಅದನ್ನು ತಿಳಿದುಕೊಳ್ಳುವುದು ಸ್ವಲ್ಪ ಕಠಿಣ. ಈ ವಿಷಯವನ್ನು ಸಮರ್ಪಕವಾಗಿ ತಿಳಿಸಲು ಇದುವರೆಗೆ ನನಗೆ ಶಬ್ದಗಳು ದೊರೆತಿಲ್ಲ. ಆದರೆ, ಅದೇ, ಯಾರಾದರೂ ಅಭ್ಯಾಸ ಕೈಕೊಂಡುದಾದರೆ ಅದರ ಸ್ವಭಾವ ತಿಳಿದುಬರುವುದು. ದೇಹದ ಒಂದೊಂದು ಸಜೀವಾಂಗದ ಮೇಲೆಯೂ ಏಕಾಗ್ರಗೊಳಿಸಿದಾಗ ಅದು ಮಾತನಾಡುವುದೆಂದು ನನ್ನ ಅನುಭವಕ್ಕೆ ಬಂದಿದೆ. ಏಕಾಗ್ರತೆಯು ಕೇವಲ ಪ್ರಕಾಶನದ ಸಾಧನೆಗಳಲ್ಲಿ ಒಂದು. ಏಕಾಗ್ರತೆಯಿಂದ ನಿಮಗೆ ದೇವರು ದೊರಕಲಾರ. ಏಕಾಗ್ರತೆಯಲ್ಲಿ ನೀವು ಒಂದು ವಸ್ತುವಿನ ಬಗೆಗೆ ಏಕತಾನತೆ ಹೊಂದಿರುವಿರಿ. ಆದರೆ ಧ್ಯಾನದಲ್ಲಿ ನಿಮ್ಮ ಸುಪ್ತಚೇತನವು ಯಾವುದೋ ಒಂದು ವಸ್ತುವಿನ ನೀರೀಕ್ಷೆಯಲ್ಲಿ ಮಾತ್ರ ಇರುವುದು. ನಿಮ್ಮ ವಿಚಾರವು ದೈವಿಕತೆಯನ್ನು ಕುರಿತು ಇರುವುದಾದ ಕಾರಣ ನೀವು ದೈವಿಕತೆಯ ನಿರೀಕ್ಷಣೆಯಲ್ಲಿರುವಿರಿ.
  20. ಒಂದು ಸಂಗತಿ ಮಾತ್ರ ಯಾವಾಗಲೂ ಅನುಭವಕ್ಕೆ ಬರುತ್ತಿದೆ; ಅದೆಂದರೆ, ಗುರುಗಳ ಸ್ಥಿತಿಯ ಪರಿಣಾಮವು ನನ್ನ ಅಂತರ್ಯದಲ್ಲಿ ವ್ಯಾಪಿಸಿದ್ದು ಅದು ಪ್ರಾಣಾಹುತಿಯಿಂದ ಭಿನ್ನವಾಗಿದೆ.