ಶುದ್ದೀಕರಣವೆಂದರೇನು?

ಸಾಮಾನ್ಯವಾಗಿ ಶುದ್ದೀಕರಣವೆಂದರೆ ಕೊಳೆಯ ನಿರ್ಮೂಲನೆ ಎಂದು ಅರ್ಥೈಸಲಾಗುತ್ತದೆ. ಪ್ರತಿಯೊಂದು ಧರ್ಮವು ಪ್ರಾರ್ಥನೆ ಅಥವಾ ಪೂಜೆಗೆ ಮೊದಲು ಇದನ್ನು ಪ್ರತಿಪಾದಿಸುತ್ತದೆ. ಶುದ್ದೀಕರಣ ವಿಧಾನದಲ್ಲಿ ಎರಡು ಪ್ರಕಾರಗಳಿವೆ. ಅವೆಂದರೆ ಬಾಹ್ಯ ಮತ್ತು ಅಂತರಂಗ ಶುದ್ದೀಕರಣ. ಸಾಧನೆಯಲ್ಲಿ ಇವೆರಡನ್ನೂ ಕಡ್ಡಾಯಗೊಳಿಸಲಾಗಿದೆ. ಆಧುನಿಕ ಸಂಸ್ಕೃತಿಯಲ್ಲಿ ಅಂತರಂಗ ಶುದ್ದೀಕರಣದ ಬದಲಾಗಿ ಬಹಿರಂಗ ಶುದ್ದೀಕರಣಕ್ಕೆ ಹೆಚ್ಚು ಮಹತ್ವ ಕೊಡಲಾಗಿದೆ. ವಾಸ್ತವಿಕವಾಗಿ ಹೆಚ್ಚು ಮಹತ್ವ ಕೊಡಬೇಕಾದದ್ದು ಮೊದಲನೆಯದಕ್ಕೆ ಮಾತ್ರ.

ಸಹಜ ಮಾರ್ಗ ಸಾಧನಾ ಪದ್ಧತಿಯಲ್ಲಿ ಅಂತರಂಗ ಶುದ್ದೀಕರಣವು ತನ್ನದೇ ಆದ ಅರ್ಥ ಮತ್ತು ಮಹತ್ವ ಹೊಂದಿದೆ. ಶುದ್ಧತೆ, ಸೂಕ್ಷ್ಮತೆ, ಸರಳತೆ ಹಾಗೂ ಸ್ಥಿರತೆಗಳು ಜಿಜ್ಞಾಸುವಿಗೆ ಪೂರ್ವಾಗತ್ಯ ಗುಣಧರ್ಮಗಳೆಂದು ನಮ್ಮ ಗುರುಮಹಾರಾಜರು ಹೇಳಿದ್ದಾರೆ. ಇವು ಸೃಷ್ಟಿಯಲ್ಲಿಯ ಬೆರೆತುಗೊಂಡ ಸಹಜ ಗುಣಧರ್ಮಗಳು, ನಾವು ಇದನ್ನೇ ವ್ಯತಿರಿಕ್ತವಾಗಿ ನೋಡಿ ಅದರ ಮಹತ್ವ ಗಮನಿಸೊಣ. ಸಂದೇಶವಂತೂ ಸ್ಪಷ್ಟವಿದೆ – ನಾವು ಅಶುದ್ಧತೆಯಿಂದ ಸಂಕೀರ್ಣ ಮತ್ತು ಸ್ಕೂಲರಾಗಿದ್ದೇವೆ. ಸಾಧನೆಯಲ್ಲಿ ಬಾಧಕಗಳಾದ ಇವುಗಳ ನಿರ್ಮೂಲನೆಯೇ ಅಂತರಂಗ ಶುದೀಕರಣ.

ಈ ಬಾಧಕಗಳು ನಿರ್ಮಾಣವಾದದ್ದಾದರೂ ಹೇಗೆ? ಇವುಗಳಿಗೆ ಕಾರಣೀಭೂತರಾರು? ಒಬ್ಬ ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಸಹಜ ಮಾರ್ಗದ ಪದ್ಧತಿಯ ಪ್ರಕಾರ ಸಾಧನೆ ಕೈಗೊಂಡಾಗ ಈ ಎಲ್ಲ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ದೊರಕುವದು. ಬಾಧಕಗಳ ನಿರ್ಮಾಣದಲ್ಲಿ ಕಾರಣೀಭೂತವಾದದ್ದೆಂದರೆ ಮನುಷ್ಯನ ವಿಚಾರ ಮತ್ತು ಅದಕ್ಕಿರುವ ಶಕ್ತಿ. ಪ್ರತಿಯೊಂದು ವಿಚಾರಕ್ಕೆ ಅದರದೇ ಆದ ಶಕ್ತಿ ಇರುತ್ತದೆ. ವಿಚಾರವೇ ಒಂದು ಕಾರಣವಾಗಿ ಅದರ ಪರಿಣಾಮ ಬೀರುತ್ತದೆ. ಹೀಗೆ ಕಾರ್ಯಕಾರಣಗಳ ತತ್ವ (Cause and Effect theory) ಆರಂಭವಾಗುತ್ತದೆ. ಅಧ್ಯಾತ್ಮಿಕ ಪ್ರಗತಿ ಹೊಂದಲು ಪರಸ್ಪರ ಪೂರಕಗಳಾದ ಇವುಗಳನ್ನು ನಿಲ್ಲಿಸಬೇಕಾಗುತ್ತದೆ. ಹತ್ತು ನಿಯಮಗಳ ವ್ಯಾಖ್ಯಾನದ ನಾಲ್ಕನೇಯ ನಿಯಮದಡಿಯಲ್ಲಿ ಜಮಿಲಾಳ ಹಿಂದೆ ಸುತ್ತಾಡುವನೊಬ್ಬನ ಉದಾಹರಣೆಯಲ್ಲಿ ಕಾರಣ ಪರಿಣಾಮಗಳ ತತ್ವವಡಗಿರುವದನ್ನು ಪುಷ್ಟಿಕರಿಸುತ್ತದೆ. ನಮ್ಮ ಮನಸ್ಸಿನ ಪ್ರವೃತ್ತಿ ಹಾಗೂ ಅದು ನಿರ್ಮಿಸಿಕೊಡಿರುವ ಚೌಕಟ್ಟಿನಿಂದ ಹುಟ್ಟುವ ಅನಾವಶ್ಯಕ ವಿಷಯಗಳ ವಿಚಾರ ಮತ್ತು ಆಸೆ ಆಕಾಂಕ್ಷೆಗಳಿಂದಾಗಿ ನಮ್ಮೊಳಗೆ ನಾವೇ ನಮ್ಮದೇ ಆದ ಪುಟ್ಟ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ.

ಅಭ್ಯಾಸಿಯು ತಾನೆ ಸೃಷ್ಟಿಸಿಕೊಂಡಿರುವ ತೊಡಕುಗಳ ಸ್ಪಷ್ಟಿಕರಣವನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

  1. ಸ್ಕೂಲತೆ : ಜೀವನದ ಗುರಿ, ಅಂತಿಮ ಸತ್ಯ, ಗುರು ಇವುಗಳನ್ನು ಹೊರತುಪಡಿಸಿ ಅನ್ಯ ವಿಷಯಗಳ ಚಿಂತನೆ ಮಾಡುವದರಿಂದ.
  2. ಸಂಕೀರ್ಣತೆ : ಒಂದೇ ವಿಷಯದ ಬಗ್ಗೆ ಪರಸ್ಪರ ವಿರೋಧಿ ಅರ್ಥಾತ್ ದ್ವಂದ್ವ ವಿಚಾರಗಳು, ಆಂತರಿಕ ತೊಡಕು ಅಥವಾ ಸಂಕೀರ್ಣತೆಯನ್ನು ಹುಟ್ಟಿಸುತ್ತವೆ. ಉದಾಹರಣೆಗೆ ಒಳ್ಳೆಯದ್ದು-ಕೆಟ್ಟದ್ದು, ನೋವು-ನಲಿವು, ಆಕರ್ಷಣೆ-ನಿರಾಕರಣೆ, ಸುಖ-ದುಃಖ ಇತ್ಯಾದಿ.
  3. ಬಂಧನ : ಯಾವುದೇ ವಿಷಯಕ್ಕೆ ಅನಾವಶ್ಯವಾಗಿ ಮಿತಿಮೀರಿ ಅಂಟಿಕೊಂಡಾಗ ಅದು ಬಂಧನವಾಗುತ್ತದೆ. ಸಾಮಾನ್ಯವಾಗಿ ನಾವು ಅತಿಯಾಗಿ ಹಚ್ಚಿಕೊಂಡಿರುವ ವ್ಯಕ್ತಿ ನಿಷ್ಠೆ ಮತ್ತು ವಸ್ತು ನಿಷ್ಠೆಯ ಚಿಂತನೆಯಲ್ಲಿಯೇ ನಮ್ಮ ಹೆಚ್ಚಿನ ವೇಳೆಯನ್ನು ಕಳೆಯತ್ತೇವೆ. ಉದಾಹರಣೆಗೆ, ಹೆಂಡತಿ-ಮಕ್ಕಳು, ತಂದೆ-ತಾಯಿ, ಬಂಧು-ಬಳಗ, ಸ್ನೇಹಿತರು, ಸಂಪತ್ತು, ಅಂತಸ್ತು, ಹಣ, ಉದ್ಯೋಗ ಇತ್ಯಾದಿ.
  1. ಜಾಲ : ಒಂದೇ ವಿಷಯದ ಬಗ್ಗೆ ನಿರಂತರವಾಗಿ ಚಿಂತನೆ ಮಾಡಿದಾಗ ಕೆಲವು ಕಾಲದ ನಂತರ ಅವುಗಳ ಪ್ರಭಾವವು ನಮ್ಮ ಸುತ್ತಲೂ ಜಾಲವನ್ನೇ ಹೆಣೆಯುತ್ತವೆ. ಈ ಕ್ರಿಯೆಯು ಮುಂದುವರೆದರೆ ಅದು ವೈಯುಕ್ತಿಕ ಜಾಲವಾಗಿ ಮಾರ್ಪಾಡಾಗುತ್ತದೆ.
  2. ಆವರಣ : ಹೀಗೆಯೇ ಜಾಲ ನಿರ್ಮಾಣದ ಕ್ರಿಯೆಯು ಬಹಳ ಕಾಲದವರೆಗೆ ಮುಂದುವರಿದರೆ ಅದೇ ಸಾಂದ್ರ-ಘನ ಸಂಸ್ಕಾರವಾಗಿ ಪರಿವರ್ತನೆಗೊಂಡು ಇಡೀ ಆತ್ಮವನ್ನೇ ಆವರಿಸಿಕೊಳ್ಳುತ್ತದೆ. ಸಂಸ್ಕಾರಗಳ ಇರುವಿಕೆಯಿಂದಲೇ ಪುನರ್ಜನ್ಮವಾಗುವದೆಂದು ಪೂರ್ತಿಯಾಗಿ ಮನವರಿಕೆಯಾದ ವಿಷಯ. ಎಲ್ಲ ಸಂಸ್ಕಾರಗಳನ್ನು ಭೋಗದಿಂದ ಹೋಗಲಾಡಿಸಿದಾಗ ಉಂಟಾಗುವ ಪರಿಣಾಮವೇ ಮುಕ್ತಿ, ಚಂಚಲ ವಿಚಾರ ಪ್ರವೃತ್ತಿಯಿಂದ ಉಂಟಾದ ಯಾವುದೇ ತರಹದ ತೊಡಕುಗಳೆ ಇರಲಿ, ಅವುಗಳ ಸ್ವರೂಪ ಏನೇ ಆಗಿರಲಿ, ಅವುಗಳನ್ನು ಅವಶ್ಯವಾಗಿ ತಿಳಿದು ಶುದ್ಧಗೊಳಿಸಬೇಕಾಗಿದೆ. ವಿಚಾರ ಶಕ್ತಿಗಳು ವಿಧಿ ವೃತ್ತವನ್ನುಂಟುಮಾಡದಂತೆ ತೊಡಕುಗಳ ಶುದ್ದೀಕರಣದ ಅಗತ್ಯವಿದೆ. ಸ್ಕೂಲತೆಯ ವಿಷಯವನ್ನೇ ತೆಗೆದುಕೊಳ್ಳೋಣ. ಈ ತೊಡಕು ಮೊದಲು ಜಾಲವಾಗಿ ಪರಿವರ್ತನೆ ಹೊಂದಿ ಬರಬರುತ್ತಾ ದಟ್ಟವಾಗಿ ಕೊನೆಗೆ ಘನವಸ್ತುವಾಗಿ ಹೊರಹೊಮ್ಮುತ್ತದೆ. ಹೇಗೆ ಶಕ್ತಿಯು ಬರಬರುತ್ತಾ ಜಡವಸ್ತುವಾಗಿ ಪರಿವರ್ತನೆ ಹೊಂದುತ್ತದೆನ್ನುವುದಕ್ಕೆ ಇದೊಂದು ನಿದರ್ಶನ. ಇವುಗಳ ಪರಿಣಾಮ ಅರಿವಿಗೆ ಬಾರದಂತೆ ಸ್ಕೂಲತೆ, ಮಾನಸಿಕ ತಳಮಳ, ಸಿಡಿಮಿಡಿಗೊಳ್ಳುವಿಕೆ, ಮುಂಗೋಪಿತನ ಇತ್ಯಾದಿಗಳು ಅಭ್ಯಾಸಿಯಲ್ಲಿ ಬರತೊಡಗಿ ವಿವೇಕವನ್ನು ಕಳೆದುಕೊಳ್ಳುವನು. ನಮ್ಮ ಚಿಕ್ಕದೊಂದು ವಿಚಾರ ಎಂತಹ ಅನಾಹುತ ಸೃಷ್ಟಿಸಿತೆಂಬುದನ್ನು ನೋಡಿರಿ.

ಶುದ್ಧಿಕರಣದ ಅವಶ್ಯಕತೆ ಏನು ?

ಮನುಷ್ಯನು ತಾನು ಜೈವಿಕ ರಚನೆಯಿಂದಾಗಿ ಜೀವಿಸುತ್ತಿರುದಾಗಿ ಹೇಳಿಕೊಳುತ್ತಾನೆ. ಆತನಿಗೆ ಪ್ರಾಣಶಕ್ತಿಯ ಅರಿವೇ ಬಾರದಾಗಿದೆ. ಆತನ ವ್ಯಕ್ತ ರಚನೆಯನ್ನು ಜೀವಿತವಾಗಿ ಇಟ್ಟಿರುವದು ಈ ಪ್ರಾಣಶಕ್ತಿ ಮಾತ್ರ. ಈ ಪ್ರಾಣಶಕ್ತಿಯು ಮಾನವನ ಕ್ರಿಯಾಶೀಲತೆಯನ್ನು ನಿರ್ದೇಶಿಸಿ ಮಾರ್ಗದರ್ಶನ ಮಾಡುತ್ತಿರುವದು. ಪ್ರತಿಯೊಂದು ಜೀವಕೊಶವು ಸಚೇತನವಾಗಿದ್ದು ಮೂಲದೇಹ ರಚನೆಯ ಪುಟ್ಟ ಪ್ರತಿಯಾಗಿದೆ. ಹೃದಯವು ಅ೦ತರ್ಮುಖಿ ಹಾಗೂ ಮನ ಸ ಬಹಿರ್ಮುಖಿಯೆಂಬುದನ್ನು ಅನುಭವ ಹೇಳುತ್ತದೆ. ಈ ಸಹಜ ಗುಣಧರ್ಮದಿಂದಾಗಿಯೇ ಮನಸ್ಸು ವಿಚಾರ ಮಾಡುತ್ತದೆ ಮತ್ತು ಹೃದಯ ಸಂಗ್ರಹಿಸುತ್ತದೆ. ನಮ್ಮ ಜೀವನ ಪಥದಲ್ಲಿ ಮನಸ್ಸು ತನ್ನ ಬಹಿರ್ಮುಖ ಪ್ರವೃತ್ತಿಯಿಂದ ಇಂದ್ರಿಯಗಳ ಮೇಲೆ ಅವಲಂಬಿತವಾಗಿದೆ, ಅದು (ಮನಸ್ಸು) ಹೃದಯದ ಅಂತರ್ಮುಖಿ ಪ್ರವೃತ್ತಿಯನ್ನು ಮುಸುಕು ಹಾಕಿದೆ.

ಹೃದಯ ಪ್ರದೇಶವು ಅಡಿಯಿಂದ ಮುಡಿಯವರೆಗೆ ಆವರಿಸಿದ್ದರಿಂದ ಅದು ಅಗಣಿತ ತೊಡಕುಗಳನ್ನು ಸಂಗ್ರಹಿಸುವ ಸಾಮರ್ಥ್ಯವುಳ್ಳದ್ದಾಗಿದೆ. ಈಗ ನಾವು ಮಾನವ ದೇಹದ ವ್ಯವಸ್ಥೆಯನ್ನು ಅದರ ರಚನೆ ಮತ್ತು ಕಾರ್ಯವಿಧಾನತೆಯ ದೃಷ್ಟಿಯಿಂದ ಪರಿಶೀಲಿಸೋಣ. ಅನೇಕ ಪ್ರಚೋದನೆ ಹಾಗೂ ಆಸೆಗಳಿಗೆ ಮನುಷ್ಯನು ತಿಳಿದೋ-ತಿಳಿಯದೆಯೋ ಹೇಗೆ ಬಲಿ ಬೀಳುತ್ತಾನೆಂಬದು ಅವನಿಗೆ ಗೊತ್ತಾಗುವದಿಲ್ಲ. ಹೀಗೆ ಅವನು ತಾನಾಗಿಯೇ ಅವನತಿಯ ದಾರಿಯನ್ನು ಹಿಡಿಯುತ್ತಾನೆ. ಬಾಬೂಜಿ ಮಹಾರಾಜರು ಶ್ರೀ ರಾಘವೇಂದ್ರ ರಾಯರಿಗೆ 30-08-1955 ರ ಪತ್ರದಲ್ಲಿ ಬರೆದಂತೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ “ದಾರಿಯಲ್ಲಿ ಬಿದ್ದಿರುವ ಯಾವುದೇ ಕಲ್ಲು ಕಟ್ಟಡಕ್ಕೆ ಯೋಗ್ಯವಿರುವದು ವಿರಳ”. ಸಾಮಾನ್ಯವಾಗಿ ಆಧ್ಯಾತ್ಮಿಕ ಉನ್ನತಿಗಾಗಿ ಯತ್ನಿಸುವವರ ಬಗ್ಗೆ ಧಾರ್ಮಿಕರು ಹೇಳುವ ಮಾತೆಂದರೆ “ಆತ್ಮ-ಪರಮಾತ್ಮನಲ್ಲಿ ಹಾಗೂ ಬಿಂದು ಸಾಗರದಲ್ಲಿ ಒಂದಾಗುವದು. ಯಾವುದೇ ಸಾಧನೆ ಮಾಡದೆ ಅನುಭವವಿಲ್ಲದವರ ವಿವರಣೆ ಇದು. ಆದರೆ ವಾಸ್ತವಿಕತೆ ಇದಲ್ಲ. ಆತ್ಮವು ಪರಮಾತ್ಮನಲ್ಲಿ ಲಯ ಹೊಂದುವದಕ್ಕೆ ಮೊದಲು ಪರಮಾತ್ಮನ ತದ್ರೂಪವೇ ಆಗಬೇಕಾಗುತ್ತದೆ. ಅದರಂತೆ ಬಿಂದು ಸಾಗರದಲ್ಲಿ ಒಂದಾಗಲು ಅದು ಸಾಗರದ ನೀರಿನ ಎಲ್ಲ ಗುಣಧರ್ಮಗಳನ್ನು ಹೊಂದಬೇಕು. ಈ ದೃಷ್ಟಾಂತ ಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬ ಸಾಧಕನು ಶುದ್ದೀಕರಣವನ್ನು ತ್ರಿಕರಣ ಪೂರ್ವಕವಾಗಿ ಮಾಡಿ ತನ್ನನ್ನು ಸಂಪೂರ್ಣವಾಗಿ ಪರಿವರ್ತನೆಗೊಳಿಸಬೇಕು. ಇದು ಸ್ವಪ್ರಯತ್ನ ಮತ್ತು ಗುರು ಮಹಾರಾಜರ ದಯೆಯಿಂದ ಮಾತ್ರ ಸಾಧ್ಯ. ತಾತ್ಪರ್ಯವಿಷ್ಟೆ, ಅಧ್ಯಾತ್ಮಿಕ ಪ್ರಗತಿಗಾಗಿ ಶುದ್ದೀಕರಣ ಅನಿವಾರ್ಯ. ಸಹಜ ಮಾರ್ಗ ಪದ್ಧತಿಯ ಸಾಧನೆಯಲ್ಲಿ ಮಾತ್ರ ಶುದ್ದೀಕರಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ.

ಶುದ್ದೀಕರಣ ಹೇಗೆ ಮಾಡಲಾಗುತ್ತದೆ?

ಶುದ್ದೀಕರಣ ವಿಧಾನ ಕೆಳಗೆ ವಿವರಿಸಲಾದಂತೆ ಅನುಸರಿಸಲಾಗುತ್ತದೆ.

  1. ದಿನನಿತ್ಯ ಸಂಜೆಯ ಶುದ್ಧಿಕರಣ : ಇದು ಸಹಜಮಾರ್ಗ ಪದ್ಧತಿಯಲ್ಲಿ ಸೂಚಿಸಲಾದ ನಿಯಮಗಳಲ್ಲೊಂದಾಗಿದೆ. ಇದು ಅಭ್ಯಾಸಿಗೆ ದಯಪಾಲಿಸಲಾದ ಶಕ್ತಿಯುತ ಅಸ್ತ್ರ. ಪ್ರತಿನಿತ್ಯ ಸಂಜೆಯ ಶುದ್ಧಿಕರಣ ಮಾಡಲು, ಬಾಧಕಗಳಿಗೆ ಕಾರಣೀಭೂತವಾದ ಚಿಂತನೆಗೆ ಇರುವ ಶಕ್ತಿಯನ್ನೇ ಸ್ವಯಂ ಸಲಹೆ (Auto sugestion) ರೂಪದಲ್ಲಿ ಉಪಯೋಗ ಮಾಡಲಾಗುತ್ತದೆ. ಸ್ವಯಂ ಸಲಹೆ(Auto suggestion)ಗೆ ಗುರುಮಹಾರಾಜರ ಬೆಂಬಲದ ಲಾಭವಿದೆ. ನಮ್ಮ ಚಂಚಲ ಪ್ರವೃತ್ತಿಯ ವಿಚಾರಗಳಿಂದ ನಿರ್ಮಿತವಾದ ಸ್ಕೂಲತೆ, ಜಾಲ(Network)ಗಳಂತಹ ಬಾಧಕಗಳನ್ನು, ಸ್ವಯಂ ಸಲಹೆಯಿಂದ ತೆಗೆದು ಹಾಕಬಹುದಾಗಿದೆ. ಒಂದುವೇಳೆ ಅಭ್ಯಾಸಿಯ ಪ್ರಯತ್ನದಿಂದ ಇದು ಸಾಧ್ಯವಾಗದಿದ್ದರೆ ಪ್ರಶಿಕ್ಷಕರನ್ನು ಸಂಪರ್ಕಿಸಬೇಕು. ಪ್ರಶಿಕ್ಷಕರು ಗುರುಮಹಾರಾಜರ ಶಕ್ತಿಯನ್ನುಪಯೋಗಿಸಿ ಬಾಧಕಗಳ ನಿವಾರಣೆಯನ್ನು ಮಾಡುತ್ತಾರೆ. ಆದ ಕಾರಣ ಅಭ್ಯಾಸಿಗಳಲ್ಲಿ ಸ್ಕೂಲತೆಯು ಸಾಂದ್ರ ಹಾಗೂ ಘನವಾಗುವ ಪ್ರಶ್ನೆ ಉದ್ಭವಿಸುವದೇ ಇಲ್ಲ.
  1. ಭೋಗಿಸುವದರಿಂದ : ನಾವೇ ನಮ್ಮ ಅದೃಷ್ಟದ ಶಿಲ್ಪಿಗಳೆಂದು ಗುರುಮಹಾರಾಜರು ಹೇಳಿದ್ದಾರೆ. ನಮ್ಮ ಬುದ್ದಿ ಮತ್ತು ಹೃದಯಗಳನ್ನು ವಿನಿಯೋಗಿಸಿ ಏನನ್ನಾದರೂ ಮಾಡಿದಾಗ ಪ್ರತಿಯೊಂದಕ್ಕೂ ಆಧಾರವಾದ ಆ ಮೂಲಸ್ಥಿತಿಯಲ್ಲಿ ಸಂಸ್ಕಾರ ಮಾಡುತ್ತೇವೆ. ಈ ಸಂಸ್ಕಾರ (ಸುಖ- ದುಃಖ)ಗಳನ್ನು ನಾವು ಭೋಗಿಸಿ ಅಳಿಸುವವರೆಗೂ ಬೀಜ ರೂಪದಲ್ಲಿ ಇರುತ್ತವೆ. ಭೋಗಿಸಿದ ನಂತರವೇ ಅವು ಶುದ್ದೀಕರಣವಾಗುವದರಿಂದ ಭೋಗ ಕಡ್ಡಾಯವಾಗಿದೆ. ಹತ್ತು ನಿಯಮಗಳ ವ್ಯಾಖ್ಯಾನದ ಏಳನೇ ನಿಯಮದ ಪ್ರಕಾರ ಸೃಷ್ಟಿಯು ಪ್ರತಿಯೊಂದನ್ನು ಆರಂಭಿಕ ಸ್ಥಿತಿಯಲ್ಲಿದ್ದಂತೆ ಅತ್ಯಂತ ಶುದ್ಧ, ಸರಳ ಮತ್ತು ಸ್ಪಟಿಕದಷ್ಟು ಸ್ವಚ್ಛವಾಗಿಡಲು ಬಯಸುತ್ತದೆ. ಇಡೀ ಶುದ್ದೀಕರಣ ಪದ್ಧತಿಯು ಮರಳಿ ಆ ಮೂಲ ಸ್ಥಿತಿಗೆ ತರುವ ಉದ್ದೇಶವುಳ್ಳದ್ದಾಗಿದೆ.
  2. ಗುರುವಿನ ನಿರಂತರ ಸ್ಮರಣೆ : ನಾವು ನಮ್ಮ ವಿಚಾರ ಶಕ್ತಿಯನ್ನು ಅತ್ಯುಚ್ಚ ಅಂತಿಮ ಸ್ಥಿತಿ ಅಥವಾ ಗುರುವಿನ ಸ್ಥಿತಿಯೊಂದಿಗೆ ಜೋಡಿಸಿದಾಗ ನಮ್ಮ ಮನಸ್ಸು ಭೌತಿಕ ವಿಷಯ ರಹಿತವಾಗಿ ಮುಂದಿನ ಪರಿಣಾಮಕ್ಕೆ ಕಾರಣವಾಗುವದನ್ನು ತಡೆಯುತ್ತದೆ. ಇದರ ಫಲವಾಗಿ ಹೊಸ ಬಾಧಕಗಳ ನಿರ್ಮಾಣವಾಗುವದಾಗಲಿ ಅಥವಾ ಮೊದಲಿನವುಗಳನ್ನು ಕೂಡಿಕೊಳ್ಳುವದಾಗಲಿ ಆಗುವದಿಲ್ಲ. ಬೆಳಕು ಕತ್ತಲೆಯನ್ನು ಓಡಿಸುವಂತೆ, ಕೇವಲ ನಮ್ಮ ಗುರುಗಳ ಸ್ಮರಣೆಯು ಎಲ್ಲ ಅಶುದ್ಧತೆಗಳನ್ನು ಹೋಗಲಾಡಿಸುವದು. ಒಂದು ವೇಳೆ ನಮ್ಮ ಗುರುವಿನ ಕುರಿತಾದ ವಿಚಾರವು ಇನ್ನೊಂದು ಸಂಸ್ಕಾರವಾಗಲು ಕಾರಣವಾಗುವದನ್ನು ನಿಲ್ಲಿಸದಿದ್ದರೂ ಅದು (ಮೂಲ ಸ್ಥಿತಿಗೆ ಒಯ್ಯಲು) ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಈ ಪರಿಣಾಮ ಸಹ ಸ್ವಾಗತಾರ್ಹವಾದುದೆ. ಇದನ್ನೇ ಅಭ್ಯಾಸಿಯು ಹಂಬಲಿಸುತ್ತಿರುವದು. ಈ ಹಂಬಲಿಕೆಯ ಮುಂದುವರಿದ ಪರಿಣಾಮದಿಂದಲೇ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆಯಾಗುತ್ತದೆ. ಇದೇ ವಸ್ತುತಃ ಗುರಿಯು. ಹೀಗೆ ನಾವು ನಿರಂತರ ಸ್ಮರಣೆಯಿಂದ ಗುರುವಿನ ಸಾನ್ನಿಧ್ಯದಲ್ಲಿರುವದರ ಜೊತೆಗೆ ನಮ್ಮ ಸ್ಕೂಲತೆಗಳಿಂದ ಬಿಡುಗಡೆ ಹೊಂದಲು ಪ್ರಯತ್ನಿಸುತ್ತಿರುತ್ತೇವೆ.
  3. ಗುರುವಿನ ಪ್ರಾಣಾಹುತಿ : ಆವರಣ ಮತ್ತು ಸಂಸ್ಕಾರಗಳು ನಿರ್ಮೂಲನೆಗೊಂಡು, ಅವುಗಳ ಸಾಂದ್ರತೆ ಮತ್ತು ಘನತ್ವ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತವೆ. ಈ ಶಕ್ತಿ ದೇಹವನ್ನೆಲ್ಲಾ ಆವರಿಸಿ ಅಗತ್ಯವಿರುವ ಲಭ್ಯ ಸ್ಥಳಗಳಲ್ಲಿ ಶೇಖರಗೊಳ್ಳುತ್ತವೆ. ಭೋಗಕ್ಕಾಗಿ ಕಾಯ್ದಿರಿಸಿದ ಸ್ಥಳಗಳಲ್ಲಿ ಮತ್ತು ಪದರುಗಳಲ್ಲಿ ಪರಿಣಾಮ ಬೀರಿ ಭೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
  4. ಶುದ್ದೀಕರಣದ ವ್ಯಾಪ್ತಿ : ನಿಃಸಂಶಯವಾಗಿ ಅಭ್ಯಾಸಿಗಳು ಶುದ್ದೀಕರಣದ ವಿಷಯವಾಗಿ ನಿಯಮಿತರಾಗಿದ್ದಾರೆ. ಸಾಮಾನ್ಯವಾಗಿ ಅವರು ಹೃದಯವೆಂದರೆ ಶರೀರದ ಒಂದು ಅವಯವ (ಅಂಗ)ವೆಂದು ಮತ್ತು ಅವರ ಹೃದಯದ ಶುದ್ದೀಕರಣದ ವಿಚಾರವು ಹೃದಯಕ್ಕೆ ಮಾತ್ರ ಸೀಮಿತಗೊಂಡಿರುವದೆಂದು ಅವರ ಜೊತೆಗಿನ ಚರ್ಚೆಯಿಂದ ವ್ಯಕ್ತವಾಗುತ್ತದೆ. ವಾಸ್ತವಿಕವಾಗಿ ಹೃದಯ ಪ್ರದೇಶವು ಅಡಿಯಿಂದ ಮುಡಿಯವರೆಗೆ ವಿಸ್ತಾರವಾಗಿ ಹರಡಿದೆ. ಆದುದರಿಂದ ಇಡೀ ದೇಹ ಮತ್ತು ಅದರ ವ್ಯವಸ್ಥೆಯಲ್ಲಿಯ ಪ್ರತಿ ರಂಧ್ರ, ಜೀವಕಣಗಳು ಸಮರ್ಪಕವಾಗಿ ಮತ್ತು ಸಂಪೂರ್ಣವಾಗಿ ಶುದ್ದೀಕರಣವಾಗುವದು ಅತೀ ಅವಶ್ಯಕವಾಗಿದೆ. ನಂತರ ವಿವೇಕದ ಸಹಾಯದಿಂದ ಪ್ರತಿಯೊಂದನ್ನು ನಿಯಮಿತಗೊಳಿಸಿ ಸಂಘಟಿಸಬೇಕಾಗುತ್ತದೆ.ಇದು ನಿರಂತರವಾಗಿ ಸಾಗುವ ವಿಧಾನ. ಈ ವಿಧಾನ ಹೃದಯ ಮತ್ತು ಮನಸ್ಸುಗಳು ಮೂಲ ಸ್ಥಿತಿಯಲ್ಲಿದ್ದಂತೆ ಪರಿವರ್ತನೆಗೊಳ್ಳುವವರೆಗೂ ಮುಂದುವರೆಸಿಕೊಂಡು ಹೋಗಬೇಕಾಗುವಂತಹದು. ಇದು ಸತತವಾಗಿ ನಡೆಯುವ ಪ್ರಕ್ರಿಯೆ.

ಶುದ್ದೀಕರಣ ಯಾವಾಗ ಪರಿಣಾಮಕಾರಿಯಾಗುವದು ?

ಸಾಮಾನ್ಯವಾಗಿ ಸಾಧನೆಯ ಪಥದಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಲು ಶುದ್ದೀಕರಣ ಸಹಾಯ ಮಾಡುತ್ತದೆ. ಶುದ್ಧಿಕರಣವು ಸಾಧನೆಗಾಗಿ ಹಂಬಲಿಸುವವನ ಯೋಗ್ಯತಾ ಸಾಮರ್ಥ್ಯವನ್ನು ವೃದ್ಧಿಸುವದಲ್ಲದೆ ಗುರುವಿನ ಲಕ್ಷ್ಯವನ್ನು ಆಕರ್ಷಿಸುತ್ತದೆ. ಶುದ್ದೀಕರಣ ವಿಧಾನ ಹೃದಯ ಮತ್ತು ಮನಸ್ಸುಗಳ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸುತ್ತದೆ. ಇದರ ಪರಿಣಾಮವಾಗಿ ಮನಸ್ಸಿನ ವಿಷಯಗಳ ಗುಲಾಮಗಿರಿ ಹಾಗೂ ಐಹಿಕ ಪ್ರವೃತ್ತಿಯನ್ನು ನೀಗಿಸುತ್ತದೆ. ಶುದ್ದೀಕರಣದಿಂದ ದೇಹದ ಪ್ರತಿಯೊಂದು ಜೀವಕಣದಲ್ಲಿ ಶೂನ್ಯತೆಯನ್ನುಂಟು ಮಾಡಿ ಅಧ್ಯಾತ್ಮಿಕ ಪ್ರಗತಿಗೆ ಅವಶ್ಯವಿರುವ ದೈವೀ ಶುದ್ಧತೆ, ಸೂಕ್ಷ್ಮತೆ, ಸರಳತೆ ಹಾಗು ಶಾಂತತೆಗಳಂತಹ ಪೂರ್ವಾಗತ್ಯಗಳನ್ನು ಹೊಂದಲು ಸಹಾಯವಾಗುತ್ತದೆ. ಸ್ವಪ್ರಯತ್ನಶೀಲತೆ, ಹಾಗು ಗುರುವಿನ ಕೃಪೆಯಿಂದ ಮಾತ್ರ ಇದು ಸಾಧ್ಯವಾಗುವುದು.

ಪೂಜ್ಯ ಗುರು ಮಹಾರಾಜರು ನಮ್ಮೆಲ್ಲರಿಗೂ ಅಂತಹ ಸ್ಥಿತಿಯನ್ನು ಕರುಣಿಸಿ ನಮ್ಮನ್ನು ತನ್ನಡೆಗೆ ಆಕರ್ಷಿಸಲೆಂದು ನಾನು ಪ್ರಾರ್ಥಿಸುತ್ತೇನೆ.