(೧೯, ಡಿಸೆಂಬರ, ೧೯೬೫ ರಂದು ತಿರುಪತಿಯ ಯೋಗಾಶ್ರಮದ ಉದ್ಘಾಟನಾ  ಸಂದರ್ಭದಲ್ಲಿ ನೀಡಿದ ಸಂದೇಶ)

ಹೃದಯಾಂತರಾಳದ ಭಾವನೆಗಳೊಂದಿಗೆ, ಪವಿತ್ರ ಭೂಮಿಯಾದ ತಿರುಪತಿಯಲ್ಲಿ, ಶ್ರೀರಾಮಚಂದ್ರ ಮಿಷನ್ನಿನ ಆಶ್ರಮದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲು ನಾವೆಲ್ಲ ಸೇರಿದ್ದೇವೆ. ನಮ್ಮ ಅಭ್ಯಾಸಿಗಳ ಮತ್ತು ಹಿತೈಷಿಗಳ ಸಕ್ರಿಯ ಸಹಕಾರ ಹಾಗೂ ನೆರವಿನಿಂದ ಅದು, ಶೀಘ್ರವಾಗಿ ವೃದ್ಧಿಗೊಂಡು, ಜನರ ಆಧ್ಯಾತ್ಮಿಕ ಉತ್ಥಾನಕ್ಕೋಸ್ಕರ ಪೂರ್ಣಪ್ರಮಾಣದಲ್ಲಿ ಕಾರ್ಯಗೈಯುವ ಸ್ಥಿತಿಯನ್ನು ತಲುಪುವುದೆಂದು ನಾವು ಆಶಿಸುತ್ತೇವೆ.

ನಮ್ಮ ಮಿಷನ್ನು ಪ್ರಚುರಪಡಿಸಿದ ಸಾಧನಾ ಪದ್ಧತಿಯು “ಸಹಜಮಾರ್ಗ” ಅರ್ಥಾತ್, “ಏಕೈಕ ಅಂತಿಮ ಸತ್ಯದ ಸಾಕ್ಷಾತ್ಕಾರದ ಸಹಜ ಪಥವೆಂದು ಹೆಸರಿಗೆ ಬಂದಿದೆ. ಕೈವಲ್ಯ ಅಥವಾ ಪರತತ್ವದ ಸಾಕ್ಷಾತ್ಕಾರವು ಇದುವರೆಗೆ, ಅತಿ ಕಷ್ಟಕರ ಕಾರ್ಯ, ಅಷ್ಟೇಕೆ, ಸಾಮಾನ್ಯ ಮನುಷ್ಯರ ಅಳವಿಗೆ ಮೀರಿದ್ದೆಂದು ತಿಳಿಯಲಾಗಿರುವುದು ದುರ್ದೈವವೇ ಸರಿ, ಧಾರ್ಮಿಕ ಮುಂದಾಳುಗಳೆಂದು ಹೇಳಿಕೊಳ್ಳುವವರ ಅಸಂಗತ ಬೋಧನೆ ಮತ್ತು ಪ್ರವನಗಳಿಂದ ಚೋದಿಸಲ್ಪಟ್ಟ ಈ ತಪ್ಪು ಗ್ರಹಿಕೆಯು ಬಹುತೇಕ ಪ್ರತಿಯೋರ್ವನ ಹೃಯದಲ್ಲಿ ಎಷ್ಟು ಆಳವಾಗಿ ಬೇರೂರಿ ನೆಲಸಿದೆಯೆಂದರೆ, ಉಚ್ಚತರದ ಅಭೀಷ್ಟೆಗಳೇ ಅವರ ಹೃದಯಗಳಿಂದ ಬತ್ತಿಹೋದಂತೆ ತೋರುತ್ತದೆ.

ಭಗವಂತನು ಅತ್ಯಂತ ಸರಳವಾಗಿದ್ದು, ಸರಳ ಪ್ರಧಾನಗಳಿಂದಲೇ ಸಾಧ್ಯನು. “ಸಹಜಮಾರ್ಗ’ವು ಇರುವುದು ಇದಕ್ಕಾಗಿಯೇ, ಮತ್ತು ಜಗತ್ತಿಗೆ ಇದನ್ನು ಪ್ರಸ್ತುತಪಡಿಸಲಿಕ್ಕಾಗಿಯೇ. ಜನರು ಈ ಸರಳ ಸತ್ಯವನ್ನು ಮನದಟ್ಟು ಮಾಡಿಕೊಳ್ಳಲು ತೊಡಗಿ, ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಿಕೊಂಡರೆ, “ಆಶ್ರಮ”ದ ಉದ್ದೇಶವು ಸಫಲವಾದಂತೆ. ವಾಸ್ತವಿಕವಾಗಿ, ನಿಸರ್ಗದ ಸರಳತೆಯೇ ಒಂದು ಪರದೆಯಾಗಿ ನಮ್ಮ ಪ್ರಗತಿಯ ಮಾರ್ಗದಲ್ಲಿ ಒಂದು ಅಡಚಣೆಯಾಗಿ ಬಿಡುತ್ತದೆ. ಸಹಜಮಾರ್ಗ ಪದ್ಧತಿಯಲ್ಲಿ ‘ಪ್ರಾಣಾಹುತಿ’ ಯೆಂಯೌಗಿಕ ಪ್ರಕ್ರಿಯೆಯ ದ್ವಾರಾ ನೀಡಲಾಗುವ ಪ್ರಶಿಕ್ಷಕರ ಆಸರೆ ಮತ್ತು ನೆರವಿನಿಂದ ಈ ಶ್ರಮದಾಯಕ ಕಾರ್ಯವು (ಸಾಕ್ಷಾತ್ಕಾರವು) ಸುಲಭ ಸಾಧ್ಯವಾಗುತ್ತದೆ. ನಮ್ಮ ವಿಚಾರ ಮತ್ತು ಕರ್ಮಗಳಿಂದ ಉಂಟಾಗುವ ಸಂಸ್ಕಾರಗಳು ನಮ್ಮ ಮನಸ್ಸಿನಿಂದ ಅಳಿಸಿಹೋಗಲು ಪ್ರಾರಂಭವಾದಾಗ, ‘ಯೋಗ’ವು ನೆಲೆಗೊಳ್ಳಲು ಆರಂಭವಾಗುತ್ತದೆ. ‘ಸಹಜಮಾರ್ಗ’ವು ಮೊದಲ ದಿನದಿಂದಲೇ ಇಲ್ಲಿಂದ ಆರಂಭಗೊಂಡು ಮುನ್ನಡೆಯುತ್ತದೆ.

ಕೊನೆಯಲ್ಲಿ, ಈ ಆಶ್ರಮದ ಕಾರ್ಯದಲ್ಲಿ ಸಕ್ರಿಯವಾಗಿ ಸಹಕಾರ ನೀಡಿದ ಮತ್ತು ನೆರವಾದ ಎಲ್ಲ ಉದಾರಹೃದಯಿಗಳಿಗೆ ನನ್ನ ಕೃತಜ್ಞತೆಗಳು.