ಮಲಗುವಾಗ ದೇವರು ಎದುರಿನಲ್ಲಿರುವನೆಂದು ತಿಳಿದು, ಮಾಡಿದ ಅಪರಾಧಗಳಿಗಾಗಿ ಪಶ್ಚಾತ್ತಾಪ ಪಡುತ್ತ ದೈನ್ಯದಿಂದ ಕ್ಷಮೆ ಬೇಡಿರಿ. ಮುಂದೆ ಎಂದಿಗೂ ಅಂಥ ಅಪರಾಧ ಮಾಡದಂತೆ ನಿರ್ಧರಿಸಿ ಪ್ರಾರ್ಥನೆ ಮಾಡಿರಿ.

ದೇವರನ್ನು ಒಡೆಯನೆಂದೂ ತನ್ನನ್ನು ಆತನ ಸೇವಕನೆಂದೂ ಭಾವಿಸಿ ಯಾವಾಗಲೂ ಆತನ ಸೇವೆ ಮಾಡುತ್ತಿರುವುದರಲ್ಲಿಯೇ ಮಾನವನ ಸೌಜನ್ಯವಿದೆ. ಹೀಗೆ ಮಾಡುವುದರಿಂದ ಮನುಷ್ಯನಲ್ಲಿ ಲಯಾವಸ್ಥೆಯುಂಟಾಗಿ ಆತನ ಕಡೆಗೆ ಭಗವಂತನ ಲಕ್ಷವು ನೇರವಾಗಿ ಹರಿಯುವುದು. ಇಬ್ಬರಲ್ಲಿಯೂ ಸಂಬಂಧವು ಸ್ಥಾಪಿತವಾಗುವುದು. ಹೀಗಿರುವಾಗ ಈ ಸಂಬಂಧಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಸೇವಕನ ಕರ್ತವ್ಯವಾಗಿಬಿಡುತ್ತದೆ. ಇದರಿಂದ ಒಡೆಯನ ಮಹಿಮೆಯು ಆತನ ಹೃದಯದಲ್ಲಿ ಬಿಂಬಿಸಿ ಭಗವಂತನ ನೇರವಾದ ಕೃಪಾ ದೃಷ್ಟಿಗೆ ಆತನು ಪಾತ್ರನಾಗುವನು.

ಒಡೆಯನ ದೃಷ್ಟಿ ಯಾವಾಗಲೂ ತನ್ನ ಕಡೆಗೆ ಇದ್ದು ತಾನು ಆತನ ಸಾಮೀಪ್ಯ ಹೊಂದಬೇಕೆಂಬುದೇ ಭಕ್ತನ ಏಕಮಾತ್ರ ಉದ್ದೇಶ. ಸಜ್ಜನಿಕೆಯು ಈಗ ಬೇರೆ ರೂಪ ತಾಳುವುದು. ನಾವು ಭಗವಂತನನ್ನು ನಮ್ಮ ಸ್ವಾಮಿ ಯೆಂದು ತಿಳಿದಮೇಲೆ, ಅರಿತಾಗಲಿ ಅರಿಯದೆ ಆಗಲಿ ನಾವು ಮಾಡಿದ ತಪ್ಪುಗಳನ್ನು ಅಪರಾಧಿಯಂತೆ ಆತನೆದುರಿಗೆ ಇಡತಕ್ಕದ್ದು. ಇದರಿಂದ ನಮ್ಮ ದೈನ್ಯವು ಸೂಚಿತವಾಗುವುದು, ಒಡೆಯನ ಮನಸ್ಸಿನಲ್ಲಿಯೂ ಭಕ್ತನ ಅಪರಾಧವು ಕ್ಷಮ್ಯವೆಂಬ ಭಾವನೆ ಬರುವುದು, ಏಕೆಂದರೆ, ಭಕ್ತನು ತಾನು ದೀನನೆಂದು ಭಾವಿಸಿ ತಾನೆ ಅದನ್ನು ಒಡೆಯನ ಮುಂದೆ ಇಟ್ಟುದು ! ಇದರಲ್ಲಿರುವ ಮಾರ್ದವತೆಯನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಎಂತಲೇ ಭಕ್ತನ ಅಸಹಾಯಸ್ಥಿತಿಯ ಬಗ್ಗೆ ಭಗವಂತನಿಗೆ ವಿಶ್ವಾಸ ಹುಟ್ಟುತ್ತದೆ. ಭಕ್ತನು ತನ್ನಲ್ಲಿರುವ ಅಡ್ಡಿ ಆತಂಕಗಳನ್ನು ದೂರ ಮಾಡಿ ಭಾರವನ್ನು ಇಳಿಸಿ ಬಿಟ್ಟಿರುವನೆಂದು ಇದರರ್ಥ. ಈಗ ಆತನು ಮಲ, ವಿಕ್ಷೇಪ, ಆವರಣ ರಹಿತನಾಗಿ ನಿಸರ್ಗದ ಧಾರೆಗಳಂತೆ ಪವಿತ್ರ ರೂಪದಲ್ಲಿರುವನು. ಭಕ್ತಿಯ ಒಂದು ಸಂಬಂಧದಿಂದಲೇ ಇಷ್ಟೆಲ್ಲ ಪವಿತ್ರತೆ ಬಂದಿತು. ಇದರಿಂದ ನಿಸರ್ಗದ ಜೀವಾಳವಾದ ಸರಳತೆಯ ಭಾವನೆಯೂ ಬರುವುದು. ಬರಬರುತ್ತ ನಾವು ಅದರಲ್ಲಿ ಸಂಪೂರ್ಣ ಆವೃತರಾಗಿ ಲಯ ಹೊಂದತೊಡಗುವೆವು. ಯಾವ ಅಪರಾಧಗಳಿಂದ ಭಕ್ತನು ಎಂದಿಗೂ ಮುಕ್ತನಾಗಲಾರನೋ ಅಂಥ ಅಪರಾಧಗಳು ಸಹ ಈ ಅವಸ್ಥೆಯಲ್ಲಿ ನಿಸ್ಸತ್ವವಾಗುವುವು. ಈ ಸಂಬಂಧವು ಸ್ಥಾಪಿತವಾಗುವುದಕ್ಕಿಂತ ಮುಂಚೆ ಭಕ್ತನು ದೊಡ್ಡ ದೊಡ್ಡ ತಪ್ಪುಗಳನ್ನು ಮಾಡಿರುವ ಸಂಭವವುಂಟು. ಆದರೆ ಇನ್ನು ಮೇಲೆ ಕ್ರಮೇಣ ಅವು ಕಡಿಮೆಯಾಗುತ್ತ ಹೋಗಿ ಕೊನೆಗೆ ಅವುಗಳ ಅಸ್ತಿತ್ವವೇ ಇಲ್ಲದಂತಾಗುವುದು. ಆತನ ಇಚ್ಛಾಶಕ್ತಿಯ ಆಘಾತದಿಂದಾಗಿ ಅವು ಪಶ್ಚಾತ್ತಾಪದ ರೂಪ ತಾಳಿವೆ. ಪಶ್ಚಾತ್ತಾಪವೆಂದರೆ ಮತ್ತೇನೂ ಅಲ್ಲ ತನ್ನಲ್ಲಿಯ ವಿಚಾರತರಂಗಗಳನ್ನು ಆಘಾತದಿಂದ ಸ್ವಚ್ಛಗೊಳಿಸಿ ನಿರ್ವಾತ ಪ್ರದೇಶವನ್ನು ನಿರ್ಮಿಸಿಕೊಳ್ಳುವುದು. ಆಗ ಮೇಲಿನಿಂದ ಇಳಿದು ಬರುವ ಪ್ರವಾಹವು ಆ ಕಡೆಗೆ ತಿರುಗಿ ನಿಸರ್ಗದ ಸಮಾನತೆಯನ್ನು ಕಾಪಾಡುವುದು. ಇದರಿಂದ ‘ಪೂರ್ವಸಂಸ್ಕಾರವೆಲ್ಲ ತೊಳೆದುಹೋಗುವುದು. ಇದೇ ಪಶ್ಚಾತಾಪದ ನಿಜಸ್ವರೂಪ.

ಯಾವುದನ್ನು ನಾನು ಅಸಹಾಯಸ್ಥಿತಿಯೆಂದು ಕರೆದಿರುವೆನೋ ಅದನ್ನುಂಟು ಮಾಡಿಕೊಳ್ಳುವುದು ದೀನತೆಯ ಸ್ಥಿತಿಯೆನಿಸುವುದು. ಇದನ್ನು ಹೊಂದಿದವನು ಸರ್ವಸ್ವವನ್ನೂ ಹೊಂದಿದಂತೆಯೆ, ಹೊರಗೆ ಹಾಗೆ ಕಾಣದಿದ್ದರೂ ಈ ಸ್ಥಿತಿಯು ಪಾಪರಹಿತವೂ ಮುಗ್ಧವೂ ಆಗಿದೆ. ಇಷ್ಟಾದರೆ ಆ ಅಪರಾಧವು ನಿಜಕ್ಕೂ ಅಪರಾಧವಾಗಿ ಉಳಿಯುವುದಿಲ್ಲ. ಏಕೆಂದರೆ, ಅವನು ಅದನ್ನು ಸಂಪೂರ್ಣವಾಗಿ ತೊಳೆದುಬಿಟ್ಟಿದ್ದಾನೆ.

ಭಕ್ತಿಯ ಮುಂದಿನ ಘಟ್ಟವೆಂದರೆ, ಒಮ್ಮೆ ಮಾಡಿದ ತಪ್ಪನ್ನು ತಿರುಗಿ ಮಾಡದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಭಗವಂತನ ಸಂಮುಖದಲ್ಲಿ ದೈನ್ಯಭಾವದಿಂದ ಅಪರಾಧದ ಪುನರಾವೃತ್ತಿಯಾಗದ ಹಾಗೆ ಸ್ಥೈರ್ಯವನ್ನು ದಯಪಾಲಿಸುವಂತೆ ಪ್ರಾರ್ಥಿಸಬೇಕು. ನಾವು ಯಾಚಕರ ಸ್ಥಿತಿಯಲ್ಲಿ ಈ ವಲಯವನ್ನು ಪ್ರವೇಶಿಸುವೆವಾದ ಕಾರಣ ಪ್ರಕೃತಿ ನಿಯಮಗಳ ವಿರುದ್ಧ ಏನನ್ನೂ ಮಾಡದಂತೆ ಜಾಗ್ರತೆ ವಹಿಸುತ್ತ ನಮ್ಮ ಕರ್ತವ್ಯಪಾಲನೆ ಮಾಡಬೇಕು, ಒಡೆಯ ಹಾಗು ಸೇವಕ ಇವರಿಬ್ಬರ ನಡುವಿನ ಅಂತರವನ್ನು ಕಡಿಮೆಮಾಡುತ್ತ ಹೋಗುವುದರಿಂದ ಇದು ಸುಲಭ ಸಾಧ್ಯವಾಗುವುದು. ನಮ್ಮ ಮನಸ್ಸಿನಲ್ಲಿ ಆತನ ಸಾನ್ನಿಧ್ಯ ಭಾವನೆಯನ್ನು ಯಾವಾಗಲೂ ತಂದು ಕೊಳ್ಳುವುದೇ ಇದನ್ನು ಸಾಧಿಸುವ ಉತ್ತಮ ಉಪಾಯ.

ಮಲಗುವಾಗ ಹೀಗೆ ಮಾಡುವುದು ಒಳ್ಳೆಯದೆಂದು ಭಾವಿಸಲಾದ ಕಾರಣವೇನೆಂದರೆ ನಾವು ಆ ವೇಳೆಯಲ್ಲಿ ನಮ್ಮ ಎಲ್ಲ ಜಂಜಾಟಗಳಿಂದ ಬಿಡುಗಡೆ ಹೊಂದಿರುವೆವು. ವಿಶ್ರಾಂತಿ ಪಡೆಯುವುದರ ಹೊರತು ಮತ್ತೇನೂ ಮಾಡ ಬೇಕಾಗಿರುವುದಿಲ್ಲ. ನಾವು ಎಲ್ಲ ರೀತಿಯಿಂದಲೂ ಸ್ವತಂತ್ರರಾಗಿರುವೆವು. ಈ ಸ್ವಾತಂತ್ರ್ಯವು ಸ್ಥೆರ್ಯದ ಸ್ಥಿತಿಯೆಂದು ಹೇಳಬಹುದು. ಈ ಪ್ರಕಾರ ನಾವು ಪ್ರಕೃತಿಯ ಒಂದು ಭಾಗದೊಂದಿಗೆ ಸಾಮರಸ್ಯ ಹೊಂದುವೆವು. ಆದುದರಿಂದಲೇ ಆ ಸಮಯದಲ್ಲಿ ಮಾಡಲಾದ ಪ್ರಾರ್ಥನೆಗೂ ಇತರ ಕಾರ್ಯಗಳಿಗೂ ಹೆಚ್ಚಿನ ಬಲ ಬರುವುದು. ಆ ವೇಳೆಯ ಲಾಭವನ್ನು ನಾವು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪಡೆಯಬೇಕಲ್ಲದೆ ಈ ಸಮಯದಲ್ಲಿ ನಿಯತವಾದ ಕಾರ್ಯಗಳನ್ನು ಅಗತ್ಯವಾಗಿ ಮಾಡಬೇಕು.

|| ಓಂ ಶಾಂತಿಃ ಶಾಂತಿಃ ಶಾಂತಿಃ ||