ಪ್ರತಿಯೊಬ್ಬನೂ ಭಗವಂತನನ್ನು ತಲುಪಿ ಆತನಲ್ಲಿ ಲಯ ಹೊಂದಿ ಶಾಶ್ವತವಾಗಿ ನೆಲೆಸಬೇಕೆಂಬ ಧೈಯವನ್ನಿಟ್ಟುಕೊಳ್ಳಬೇಕು, ಧೈಯವು ಪ್ರಾಪ್ತವಾಗುವವರೆಗೆ ಸಮಾಧಾನ ಹೊಂದಬಾರದು.
ಪ್ರತಿಯೊಬ್ಬ ಮನುಷ್ಯನೂ ತನ್ನ ಧೈಯವನ್ನು ಪಡೆಯಲು ಮೊದಲೇ ದೃಢಸಂಕಲ್ಪನಾಗುವುದು ಆವನ ಕರ್ತವ್ಯ. ಅದರಿಂದ ಆತನ ಇಚ್ಛೆಗೆ ಬಲ ದೊರೆತು ಅಲ್ಲಿಯ ವರೆಗೆ ತಲುಪಲು ದಾರಿಯಾಗುವುದು. ಈಶ್ವರನ ವಿಷಯದಲ್ಲಿ ಯಾರು ಅತ್ಯುನ್ನತವಾದ ಸ್ಥಿತಿಯನ್ನು ತಮ್ಮ ಗುರಿಯಾಗಿಟ್ಟು- ಕೊಂಡಿಲ್ಲವೋ ಅವರು ಆ ಅಮೂಲ್ಯ ಆಧ್ಯಾತ್ಮ ಸಂಪತ್ತಿನಿಂದ ವಂಚಿತರಾಗಿ ಉಳಿದರೆಂದು ಸರ್ವಸಾಮಾನ್ಯವಾಗಿ ಕಂಡುಬಂದಿದೆ. ಏಕೆಂದರೆ, ಅಲ್ಲಿಗೆ ಮುಟ್ಟುವ ಮೊದಲು, ನಡುದಾರಿಯಲ್ಲಿ ತಮಗೆ ಸಿಕ್ಕ ವಸ್ತುವನ್ನೇ ಕೊನೆಯದೆಂದು ತಿಳಿದು ಅಲ್ಲಿಯೇ ನಿಂತುಬಿಟ್ಟರು. ಅದನ್ನೇ ಸರ್ವಸ್ವವೆಂದು ಭಾವಿಸಿದರು. ಗುರಿಯನ್ನು ನಿಶ್ಚಿತಗೊಳಿಸಲಾರದ ಕಾರಣ ಅದೆಷ್ಟು ಹಾನಿಯಾಯಿತು, ನೋಡಿ, ಲೌಕಿಕವಿಷಯಗಳಲ್ಲಾದರೂ ಎಲ್ಲಿಯವರೆಗೆ ಮನುಷ್ಯನು ತನ್ನ ಧೈಯವನ್ನು ಎದುರಿಗಿಟ್ಟುಕೊಳ್ಳುವುದಿಲ್ಲವೋ ಅಲ್ಲಿಯ ವರೆಗೆ ಅದರ ಪ್ರಾಪ್ತಿಗಾಗಿ ಹಾರ್ದಿಕ ಪ್ರಯತ್ನ ನಡೆಯಲಾರದು. ದೋಣಿ-ಯಲ್ಲಿ ಚುಕ್ಕಾಣಿಯಿಲ್ಲದಿದ್ದರೆ ಅದು ಅಭೀಷ್ಟದಿಶೆಯಲ್ಲಿ ಚಲಿಸಲಾರದೆಂಬುದು ಎಲ್ಲರಿಗೂ ತಿಳಿದ ಮಾತು, ನಮ್ಮ ಶರೀರವನ್ನು ದೋಣಿಯೆಂದು ತಿಳಿದು ಅದು ಚಲಿಸುವ ಸ್ಥಳವನ್ನು ಆಧ್ಯಾತ್ಮವೆಂಬ ನದಿಗೆ ಹೋಲಿಸಿದರೆ, ನದಿಯಲ್ಲಿ ದೋಣಿಯನ್ನು ಸಾಗಿಸಿಕೊಂಡು ಹೋಗಲು ಚುಕ್ಕಾಣಿ ಬೇಕೇ ಬೇಕು. ಅಧ್ಯಾತ್ಮಮಾರ್ಗದಲ್ಲಿ ನಮ್ಮ ಇಚ್ಛಾಶಕ್ತಿಯೆ ಚುಕ್ಕಾಣಿ. ಅದೇ ನಮ್ಮನ್ನು ಗುರಿಯವರೆಗೆ ಒಯ್ಯಲು ಸಹಾಯ ಮಾಡುವುದು. ನಿಸ್ಸಂದೇಹವಾಗಿ ದಾರಿಯಲ್ಲಿ ಅಸಂಖ್ಯ ಸುಳಿಗಳಿವೆಯಾದರೂ ನಮ್ಮ ಇಚ್ಛಾಶಕ್ತಿ ಹಾಗೂ ವಿಶ್ವಾಸದ ಬಲದಿಂದ ಅವೆಲ್ಲವನ್ನೂ ದಾಟಿ ಸರಿಯಾದ ಮಾರ್ಗದಲ್ಲಿ ಗುರಿಯ ಕಡೆಗೆ ಸಾಗುವೆವು. ನಮ್ಮ ದೃಷ್ಟಿಯು ಆಧ್ಯಾತ್ಮದ ಮೇಲೆ ನೆಲೆಸಿರುವುದರಿಂದ ನಾವು ಅತ್ಯುನ್ನತ ಗುರಿಯನ್ನು ಇರಿಸಿಕೊಳ್ಳುವೆವು. ಅಂಥ ಗುರಿ ಪರಮಾತ್ಮ ತತ್ತ್ವಸೂಚಕವೇ ಆಗಬಲ್ಲುದು. ಅಲ್ಲಿಯವರೆಗೆ ತಲುಪಲು ಯತ್ನಿಸುವುದು ಮನುಷ್ಯನ ಕರ್ತವ್ಯವಾಗಿದೆ. ಈ ಗುರಿಯು ವಿಚಾರದಲ್ಲಿ ದೃಢವಾಗಿ ನೆಲೆಗೊಳ್ಳುವವರೆಗೆ ಮಾರ್ಗ ಕ್ರಮಣವು ಅತ್ಯಂತ ಕಠಿಣವಾಗುವುದು. ಭಕ್ತನು ತನ್ನ ಕಡೆಗೆ ಬರುವ ಪ್ರಯತ್ನ ನಡೆಸಿರುವನೆಂದು ಭಗವಂತನಿಗೆ ಮನದಟ್ಟಾದಾಗಲೇ ಆತನ ಸಹಾಯ ಬಂದೊದಗುವುದು. ಪರಮಾತ್ಮನಲ್ಲಿ ಒಂದು ತರಹದ ಕ್ಷೋಭವುಂಟಾಗುವುದೇ ನಿಮ್ಮ ಚಿತ್ರವನ್ನು ಅವನಲ್ಲಿ ಪ್ರತಿಷ್ಠಿಸಿದ್ದೀರೆಂಬುದರ ಸೂಚನೆ. ಇನ್ನೊಂದು ಉಪಮೆಯನ್ನು ಕೊಡಬಹುದು. ಭಗವಂತನು ಪ್ರಿಯತಮ, ಭಕ್ತನು ಪ್ರೇಮಿ. ಇವರಿಬ್ಬರ ನಡುವಿನ ಅಂತರ ಕಡಮೆಯಾಗತೊಡಗಿ ದೂರವೆಂದು ಭಾಸವಾಗುತ್ತಿದ್ದ ಇಬ್ಬರ ಸಂಬಂಧವು ಸಮೀಪತರವಾಗುತ್ತ ನಡೆಯಿತು. ಬರಬರುತ್ತ ಈ ವಿಚಾರವಾದರೂ ಮರೆತು ಹೋಯಿತು. ಭೇದಭಾವ ಸಂಪೂರ್ಣವಾಗಿ ಅಳಿಯಿತು. ಆತನಲ್ಲಿ ನಾವು ಐಕ್ಯರಾಗಿದ್ದೇವೆಂದು ತೋರತೊಡಗಿತು. ಕ್ರಮೇಣ ಈ ಭಾವನೆಯ ಕರಗಿಹೋಗಿ ಸೃಷ್ಟಿಯ ಆರಂಭದಲ್ಲಿದ್ದ ಗುಪ್ತ ಚಲನದ ರೂಪ ತಾಳಿತು. ಅದರಲ್ಲಿ ನಾವು ಸಂಪೂರ್ಣ ವಿಸ್ತಾರಹೊಂದಿದೆವು. ಈ ರೀತಿ ನಮ್ಮ ಲಯವು ಅದರಲ್ಲಿ ಶಾಶ್ವತವಾಯಿತು. ಅನಂತ ಸಾಗರದಲ್ಲಿ ನಮ್ಮ ಈಜು ಪ್ರಾರಂಭ ವಾಯಿತು. ನಮ್ಮಲ್ಲಿ ಹೊಸ ಜೀವನ ಮೂಡಿತು. ನಾವು ಈಜುತ್ತಿರುವ ಸಾಗರದ ಪ್ರಭಾವವೇ ಈ ಹೊಸ ಜೀವನ. ನಮ್ಮ ಇಚ್ಛೆಯ ದೃಢತೆ ಹಾಗು ಗುರಿಯನ್ನು ಮುಟ್ಟಬೇಕೆಂಬ ಅಚಲ ನಿರ್ಧಾರ ಇವು ನಮಗೆ ಸಹಾಯಕವಾದುವು. ಇದರಿಂದಾಗಿ ನಾವು ಅಂತಿಮಸ್ಥಿತಿಯಲ್ಲಿ ಸ್ಥಿರವಾಗಿ ನೆಲೆಸಿದೆವು. ಈ ಪ್ರೇಮವು ಅದೆಷ್ಟು ಕಠಿಣವಾಗಿದ್ದಿತು ! ಕೇವಲ ಸರಿಯಾದ ಗುರಿಯನ್ನಿಟ್ಟುಕೊಳ್ಳುವುದು ಮತ್ತು ದೃಢನಿರ್ಧಾರದೊಂದಿಗೆ ಅದರ ಕಡೆಗೆ ಮುಂದುವರಿಯುವುದು- ಇವೇ ಇದನ್ನು ಸುಲಭಗೊಳಿಸಿದುವು. ಗುರಿಯು ಯಾವಾಗಲೂ ದೃಷ್ಟಿಪಥದಲ್ಲಿದ್ದುದರಿಂದ ಅದರ ಕಡೆಗೆ ಸಾಗಬೇಕೆಂಬ ಆಸಕ್ತಿಯುಂಟಾಯಿತು. ಅದರಂತೆ ನಮ್ಮ ಪ್ರಯತ್ನ ನಡೆಯಿತು. ಯಾವುದೇ ಕೆಲಸದಲ್ಲಿ ಆಸಕ್ತಿಯುಂಟಾದರೆ ಅದನ್ನು ಮತ್ತೆ ಮತ್ತೆ ಮಾಡಬೇಕೆನ್ನಿಸುವುದು. ಈ ಅಭ್ಯಾಸವು ಬಲಿತಮೇಲೆ ಅದೊಂದು ಚಟವಾಗಿ ಪರಿಣಮಿಸಿ ಅದನ್ನು ಮಾಡದೆ ಶಾಂತಿ ದೊರೆಯುವುದಿಲ್ಲ. ಅಭ್ಯಾಸ ಮಾಡುತ್ತ ಮಾಡುತ್ತ ನಮ್ಮ ಅಂತಃಕರಣವು ಅದರಲ್ಲಿ ಸಂಪೂರ್ಣವಾಗಿ ಆಸಕ್ತವಾಗುವುದು. ನಮ್ಮ ಸಮಗ್ರ ಚೈತನ್ಯವನ್ನೂ ಅದರಲ್ಲಿ ತೊಡಗಿಸಿ ಮನಸ್ಸಿನ ಎಲ್ಲ ವೃತ್ತಿಗಳನ್ನೂ ಅದರತ್ತ ಹೊರಳಿಸಿದೆವು. ಅದನ್ನು ಪಡೆಯುವ ಹಂಬಲ ಹೆಚ್ಚುತ್ತ ಹೋಯಿತು. ಇದೇ ಅಶಾಂತಿಯೆಂಬ ಹೆಸರನ್ನು ಪಡೆಯಿತು. ಹೀಗೆ, ತೀವ್ರ ಹಂಬಲ ಅಥವಾ ಅಶಾಂತಿಯು ಗಂತವ್ಯವನ್ನು ತಲುಪಲು ತುಂಬ ಸಹಾಯಕವಾಗುವು-ದೆಂಬುದು ಅನುಭವದಿಂದ ಸಿದ್ಧವಾಗುವುದು. ಸೃಷ್ಟಿಯ ಸಮಯ ಬಂದಾಗ ಆ ಸುಪ್ತಚಲನವು ತನಗೋಸ್ಕರ ಹಾದಿಮಾಡಿಕೊಳ್ಳಲು ತವಕಪಡುತ್ತಿತ್ತು. ಅದರ ಕ್ಷೋಭವೇ ಅದಕ್ಕೆ ಹಾದಿಮಾಡಿಕೊಟ್ಟಿತು. ಅದರಂತೆಯೇ ನಮ್ಮ ಈ ಅಶಾಂತಿ ನಮಗೆ ಗುರಿಯನ್ನು ತಲುಪಲು ದಾರಿಮಾಡಿಕೊಡುವುದು.