ನಿಮ್ಮ ಜೀವನವು ನಿಸರ್ಗದೊಡನೆ ಸಮರಸವಾಗುವಂತೆ ಸಾಧಾರಣವಾಗಿರಲಿ.
ಈ ನಿಯಮದಲ್ಲಿ ಅಡಕವಾದ ವಿಷಯ ತುಂಬ ಗಹನವಾದುದು. ಸರಳತೆ ನಿಸರ್ಗದ ಜೀವಾಳ, ಅದು ಪರತತ್ತ್ವದಲ್ಲಿ ಸುಪ್ತವಾಗಿದ್ದ ಸ್ಥಿತಿಯ ಛಾಯೆ, ಬೆಳವಣಿಗೆಗೆ ಅದೇ ಕಾರಣ. ಅದನ್ನು ಆತ್ಮದ ಸಾರಸರ್ವಸ್ವವೆಂದರೆ ಹೆಚ್ಚು ಸಮಂಜಸವಾದೀತು. ವಾಸ್ತವವಾಗಿ ಇದು ನಿಸರ್ಗದ ಜೀವಸತ್ತ್ವ, ಇಲ್ಲಿಂದಲೇ ಎಲ್ಲ ಕ್ರಿಯೆಯೂ ಆರಂಭವಾಗುವುದು.’ ಇದೇ ನಿಜತತ್ತ್ವ, ಇಲ್ಲಿಂದ ಮುಂದೆ ಮಾಯೆ ವಲಯವಿದೆ. ಸಾಮಾನ್ಯವಾಗಿ ಜನರು ಮಾಯೆಯ ಕ್ಷೇತ್ರದಲ್ಲಿಯೇ ಇದ್ದು ಅದರಂತೆ ಕಾರ್ಯ ಮಾಡುವರು. ಮಾಯೆಯು ಸೃಷ್ಟಿಯ ನಾಮ-ರೂಪಗಳಿಗೆ ಕಾರಣವಾಯಿತೆನ್ನಬಹುದು. ಇದು ಮನುಷ್ಯನಲ್ಲಿಯೂ ಬೆಳೆದು ಗ್ರಂಥಿಗಳ ರೂಪತಾಳಿ ಬಿಚ್ಚಲು ಕಠಿಣ ವಾಯಿತು. ಅದನ್ನು ಬಿಡಿಸಲು ವಿಶಿಷ್ಟ ಇಚ್ಛಾಶಕ್ತಿಯೆ ಬೇಕು. ಇದರಲ್ಲಿ ಸಿಲುಕಿ ಮನುಷ್ಯನು ಮೇಲುನೋಟಕ್ಕೆ ಒಂದು ಸ್ಥೂಲರೂಪವನ್ನು ಪಡೆದನು. ಬಾಹ್ಯ ಪರಿಸರವೂ ಅವನ ಮೇಲೆ ತನ್ನ ಪ್ರಭಾವ ಬೀರಲಾರಂಭಿಸುವುದು. ಕ್ರಿಯೆ-ಪ್ರತಿಕ್ರಿಯೆಗಳುಂಟಾಗಿ ಪರಿಸ್ಥಿತಿ ಕೆಡುತ್ತ ಹೋಗುವುದು. ಇದರ ಪರಿಣಾಮವಾಗಿ ಸರಳತೆಯು ಅದರಲ್ಲಿ ಪೂರ್ಣ ಮರೆಯಾಗುವುದು. ಹೀಗೆ ಇವೆಲ್ಲ ಒಂದು ರೀತಿಯ ಜಾಲಗಳಾಗಿ ಪರಿಣಮಿಸಿ ಮನುಷ್ಯನು ಅವುಗಳಲ್ಲಿ ಸಿಕ್ಕಿ ಬೀಳುವನು.
ಸೃಷ್ಟಿಗೆ ಮುಂಚೆ ಎಲ್ಲೆಲ್ಲೂ ಆವರಿಸಿದ್ದ ಶಾಂತಿಯು ಕೋಭದಿಂದ ಕದಡಿತು. ರೂಪಗಳು ಕಾಣಿಸಿಕೊಂಡವು. ಎಲ್ಲ ವಸ್ತುಗಳೂ ತಮ್ಮ ಮೂಲ ಶಕ್ತಿಯ ಛಾಯೆಯನ್ನು ತಮ್ಮೊಡನೆ ತಂದುವಾದ ಕಾರಣ ಕ್ಷೇಭದಿಂದಾಗಿ ಗತಿಶೀಲತೆಯನ್ನು ಪಡೆದ ವಿಶ್ವಶಕ್ತಿಗಳಂತೆಯೇ ಅವುಗಳ ಕಾರ್ಯವೂ ಆಗಿದೆ. ಈ ರೀತಿ ಒಂದು ಜೇಡದ ಬಲೆಯಂತೆ ನಿರ್ಮಾಣವಾಗತೊಡಗಿತು. ಆದರ ಒಂದೊಂದು ಎಳೆಯ ಪ್ರತಿಯೊಂದು ಕಣವೂ ಶಕ್ತಿಯನ್ನು ಪಡೆದಿದೆ. ಅವೆಲ್ಲ ಮೂಲಕ್ಕೆ ತಿರುಗಿಹೋಗುವವರೆಗೂ ಅದರ ರೂಪ ಹಾಗೆಯೇ ಇರುವುದು. ಮನುಷ್ಯನ ಸೃಷ್ಟಿಯಾದಾಗ ಆತನ ಸ್ಥಿತಿಯು ಸುಪ್ತ ರೂಪದಲ್ಲಿದ್ದಿತು. ಆತನು ತಂದಿದ್ದ ಎಲ್ಲ ಘಟಕಗಳು ಇನ್ನೂ ಪ್ರಕಟವಾಗಿರಲಿಲ್ಲ. ಸಾವಕಾಶ ವಾಗಿ ಆತನಲ್ಲಿದ್ದ ಶಕ್ತಿಗಳು ವಿಕಾಸಗೊಳ್ಳಲಾರಂಭಿಸಿದುವು. ಆತನ ಸೃಷ್ಟಿಗೆ ಮುಂಚೆ, ಪ್ರಥಮ ಕ್ಷೋಭವನ್ನು ಹುಟ್ಟಿಸಿದ ಅದೇ ಮೂಲ ಕಲ್ಪನೆಯೆ ಆತನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಿತು. ದೈವೀ ಕಾರ್ಯಗಳಂತೆಯೇ ಅದರ ಕಾರ್ಯಗಳೂ ನಡೆದುವು. ಆದರೆ ದೈವೀ ಇಚ್ಛೆಯು ಕೆಳಮೊಗವಾಗಿದ್ದುದ್ದರಿಂದ ಮನುಷ್ಯನ ಕಲ್ಪನೆಯು ಮೂಲಸ್ಥಿತಿಯ ಅಥವಾ ಅತ್ಯುನ್ನತ ಸ್ಥಿತಿಯ ವಿರುದ್ಧ ದಿಶೆಯನ್ನು ಹಿಡಿದು ತನ್ನದೇ ಆದ ಸೃಷ್ಟಿಯನ್ನು ನಿರ್ಮಿಸಿತು. ವಿರುದ್ಧ ದಿಶೆಯನ್ನು ಹಿಡಿದುದರಿಂದ ಆತನ ಎಲ್ಲ ಕಾರ್ಯಗಳೂ ನಿಸರ್ಗದ ವಿರುದ್ಧವಾಗಿಯೆ ನಡೆದುವು. ಇದರಿಂದ ವೈಯಕ್ತಿಕ ಜಾಲವೂ ಆತನಲ್ಲಿ ರಚಿತವಾಯಿತು. ಇವೆರಡರ ಕಾರ್ಯಗಳೂ ಒಂದೇ ತೆರನಾಗಿದ್ದರೂ ಶುದ್ಧತೆಯಲ್ಲಿ ಮಾತ್ರ ಮನುಷ್ಯನಲ್ಲಿದ್ದುದು ದೈವೀಕಲ್ಪನೆಗಿಂತ ಕೆಳಮಟ್ಟದ್ದಾಗಿದ್ದಿತು. ದೈವೀ ಕಲ್ಪನೆಯು ತಾನು ಇಟ್ಟುಕೊಂಡಿದ್ದ ಕಾಲಪರಿಮಿತಿಯು ಮುಗಿದಾಗಲೇ ಈಶ ಸೃಷ್ಟಿಯ ಸಂಹಾರವಾಗುವುದು. ಅಂತೆಯೇ ಮನುಷ್ಯನಾದರೂ ತನ್ನ ಸೃಷ್ಟಿ ಜಾಲವನ್ನು ನಿರ್ಮಿಸಲು ಕಾರಣವಾದ ಕಂಪನಗಳನ್ನು ಕೊನೆಗೊಳಿಸಿದಾಗಲೇ ಆತನ ಸೃಷ್ಟಿಯು ಕೊನೆಗೊಳ್ಳುವುದು. ಮನುಷ್ಯನು ನಿರ್ಮಿಸಿದ ಕಂಪನಗಳು ಮೂಲಸ್ಥಿತಿಗೆ ವಿರದ್ಧವಾಗಿದ್ದ ಕಾರಣ ಮೂಲಕಂಪನಗಳ ಸ್ಥೂಲರೂಪವು ಆತನಲ್ಲಿಳಿದು ಬಂದಿತು. ಮೂಲ ಕಂಪನಗಳಾದರೋ ಸೂಕ್ಷ್ಮತರವಾಗಿದ್ದುದರಿಂದ ತಮ್ಮ ಮೂಲಗುಣವನ್ನು ಕಾಯ್ದುಕೊಂಡುವು. ಇವೆರಡು ವಿಧದ ಕಂಪನಗಳಲ್ಲಿರುವ ವ್ಯತ್ಯಾಸವೇನೆಂದರೆ, ಮಾನವೀಯ ಕಂಪನಗಳು ತಲೆಕೆಳಗಾಗಿವೆ; ಮೂಲಕಂಪನಗಳು ಮೊದಲಿದ್ದಂತೆಯೇ ಇವೆ. ಮೂಲದಲ್ಲಿದ್ದ ಎಲ್ಲ ಶಕ್ತಿಗಳೂ ಮನುಷ್ಯನಲ್ಲಿವೆ. ಏಕೆಂದರೆ, ಪ್ರಥಮ ಕ್ಷೋಭದಲ್ಲಿದ್ದ ಎಲ್ಲ ಕಣಗಳೂ ಆತನ ಕಲ್ಪನಾಶಕ್ತಿಯಲ್ಲಿದ್ದುವು. ಆದರೆ ಇದರಲ್ಲಿ ಅಧೋಮುಖತೆ ಇದ್ದುದರಿಂದ ಇದರ ಕಾರ್ಯಗಳು ವೈಪರೀತ್ಯ ಹೊಂದಿ ಶಕ್ತಿಗಳ ಉಪಯೋಗವು ವಿರುದ್ದ ದಿಶೆಯಲ್ಲಾಯಿತು. ಇವೆಲ್ಲವೂ ಕೂಡಿ ಜಟಿಲತೆಯ ಬೆಳವಣಿಗೆಗೆ ಕಾರಣವಾದುವು. ಅದರ ಪ್ರತಿಯೊಂದು ಕಣವೂ ಈಶಸೃಷ್ಟಿಯಿಂದ ಶಕ್ತಿಯುತವಾಯಿತು. ಈ ರೀತಿ ಮನುಷ್ಯನು ತನ್ನದೇ ಆದ ಸೃಷ್ಟಿಯೊಂದನ್ನು ತನ್ನಲ್ಲಿ ನಿರ್ಮಿಸಿಕೊಂಡನು. ಆತನ ಪ್ರತಿಯೊಂದು ಅಂತರಿಂದ್ರಿಯವೂ ಒಂದು ಸಜೀವಪ್ರಾಣಿಯಂತೆ ಚಲನಹೊಂದಿ ಬಲಗೊಂಡು ಪ್ರತಿಭಟಿಸತೊಡಗಿತು. ಜೊತೆಗೆ ವಿಚಾರ, ಮನಸ್ಸುಗಳು ಸಹಕರಿಸತೊಡಗಿದುವು. ಇದರ ಪರಿಣಾಮವಾಗಿ ಆತನಲ್ಲಿ ವಿಚಾರಗಳ ಜಗತ್ತೇ ನಿರ್ಮಾಣವಾಯಿತು. ಸಮತೆಯು ಕದಡಿಹೋಗಿ ದ್ವಂದ್ವವು ಆರಂಭವಾಯಿತು. ಒಂದು ವಿಚಾರವು ಬಯಲಿನಲ್ಲಿ ತಿರುಗಾಡಲು ಹೋಗಬೇಕೆಂದು ಪ್ರೇರಿಸುವುದು. ಇನ್ನೊಂದು, ಚಳಿಯು ಬಹಳವಿದ್ದುದರಿಂದ ಶೀತವಾದೀತೆಂದು ತಡೆಗಟ್ಟುವುದು, ಮೂರನೆಯದು ಮತ್ತೊಂದು ಮಾತನ್ನು ಹೇಳಿದರೆ ನಾಲ್ಕನೆಯದು ಮಗದೊಂದನ್ನು ಹೇಳುವುದು, ಐದನೆಯದು ಹಣಗಳಿಸಲು ಹೇಳಿದರೆ ಆರನೆಯದು ದುಡಿಯಲು ಸೂಚಿಸುವುದು, ಏಳನೆಯದು ಪರಿಶ್ರಮ ಮಾಡದಿರಲು ಬೋಧಿಸುವುದು, ಎಂಟನೆಯದು, ಯಾವನಾದರೊಬ್ಬ ಶ್ರೀಮಂತನ ಗೆಳೆತನ ಕಟ್ಟಿ ಆತನ ಮನವೊಲಿಸಿ ಎಲ್ಲ ಹಣ ಪಡೆಯುವಂತೆ ಹೇಳುವುದು. ಮತ್ತೊಂದು, ಮದುವೆಯಾಗಿ ಮಕ್ಕಳನ್ನು ಪಡೆಯುವವರೆಗೆ ಎಲ್ಲವೂ ವ್ಯರ್ಥವೆಂದು ಅಭಿಪ್ರಾಯಕೊಡುವುದು. ಸರಿ, ಈಗ ಮದುವೆಯ ಚಿಂತೆಗೆ ಮೊದಲಾಯಿತು. ಮದುವೆಯೂ ಆಯಿತು. ಮಕ್ಕಳಾದರು. ಅವರ ವಿದ್ಯಾಭ್ಯಾಸದ ಚಿಂತೆ ಹತ್ತಿತು. ಮಕ್ಕಳು ದೊಡ್ಡವರಾದರು. ಯಾವಳೋ ಜಮೀಲಾ ಎಂಬುವವಳು ಸೊಗಸಾಗಿ ನರ್ತಿಸುವಳೆಂಬುದನ್ನು ಕೇಳಿ ನಾಟ್ಯ ಮಂದಿರಕ್ಕೆ ಹೋಗುವ ಆಸೆಯಾಯಿತು. ಹೋಗಿ ನರ್ತನ ನೋಡಿಯ ಆಯಿತು. ಒಮ್ಮೆ ಅಲ್ಲ, ಹಲವಾರು ಬಾರಿ ಹೋಗಿ ಬಂದುದಾಯಿತು. ಜಮೀಲಾಳ ಅಂಗಚಲನಗಳು ನರ್ತನವನ್ನು ಮತ್ತೆ ಮತ್ತೆ ನೋಡಲು ವಿವಶಗೊಳಿಸಿದುವು. ಜಮೀಲಾಳ ಪ್ರತಿಯೊಂದು ಚಲನವಲನವೂ ಆತನ ಮನಸ್ಸನ್ನು ಸೆಳೆದುವು. ಪ್ರೇಮ ಅಂಕುರಿಸಿತು. ಈಗ ಯಾವಾಗಲೂ ಅದೇ ವಿಚಾರ. ಇದರಿಂದ ಆ ಸ್ಥಿತಿಗೆ ಪುಷ್ಟಿ ದೊರೆಯಿತು. ಅವಳ ಬಗೆಗಿನ ವಿಚಾರವೇ ಆತನ ಚಟವಾಯಿತು. ಹೀಗೆ ಈ ಜಾಲವು ಬಲವತ್ತರವಾಯಿತು. ಆತನ ಸುತ್ತುಮುತ್ತಲಿದ್ದ ಪ್ರತಿಯೊಂದು ವಸ್ತುವಿನಲ್ಲೂ ಜಮೀಲಾಳ ರೂಪವೇ ಕಾಣಿಸತೊಡಗಿತು. ಇದರ ಪರಿಣಾಮವಾಗಿ ಯಾವಾಗಲೂ ಜಮೀಲಾಳ ಚಿಂತೆಯೇ ಆವರಿಸಿತು. ಅವಳನ್ನು ಪಡೆಯುವ ಇಚ್ಛೆಯಾಯಿತು. ಹಣವಿಲ್ಲದೆ ಈ ಕೆಲಸ ಸಾಧ್ಯವಿಲ್ಲವಷ್ಟೆ ! ಆದರೆ ಅಷ್ಟು ಹಣ ಗಳಿಸಲು ಜಮೀಲಾಳ ವಿಚಾರದಿಂದ ಬಿಡುವೆಲ್ಲಿ? ಆದುದರಿಂದ ಎಲ್ಲಿಂದಾದರೂ ಎತ್ತಿಹಾಕುವ ಬುದ್ದಿಯಾಯಿತು. ಒಡನೆಯೆ ಕಾರಾಗೃಹವಾಸ ಹಾಗು ಮೊಕದ್ದಮೆಗಳ ವಿಚಾರವೂ ಬಂದುಹೋಯಿತು. ಸ್ವಲ್ಪ ಹಿಂಜರಿದ. ಆದರೆ ಜಮೀಲಾಳ ಬಗೆಗಿನ ವಿಚಾರಗಳು ಆತನ ತಲೆಯಲ್ಲಿ ಆಳವಾಗಿ ಬೇರುಬಿಟ್ಟಿದ್ದರಿಂದ ಕೊನೆಗೊಮ್ಮೆ, ಕಳವು ಮಾಡಿ ಅನ್ಯಾಯದ ಸಂಪಾದನೆಗೆ ಕೈಹಾಕಿದ. ಮೊದಲು ಏನಿದ್ದ, ಈಗ ಏನಾಗಿಬಿಟ್ಟ ! ಆತನ ವಿಚಾರಗಳ ಪರಿಣಾಮವು ಎಂಥ ದುರವಸ್ಥೆಗೆ ಗುರಿಮಾಡಿತೆಂಬುದನ್ನು ಯೋಚಿಸಿ, ಮಾನವನು ತಾನು ನಿರ್ಮಿಸಿದ ಬಲೆಯಲ್ಲಿ ಹೇಗೆ ಸಿಲುಕಿರುವನೆಂಬುದಕ್ಕೆ ಇದೊಂದು ಉದಾಹರಣೆ, ಅಷ್ಟೆ. ಇಂಥ ವಿಚಾರಗಳಿಂದ ಉಷ್ಣತೆ ಹುಟ್ಟಿತು. ಈ ಉಷ್ಣತೆಯಿಂದ ವಿಚಾರಗಳು ಮತ್ತಷ್ಟು ಗಟ್ಟಿಯಾದವು. ಸ್ಥೂಲತೆ ಹೆಚ್ಚುತ್ತ ಹೋಯಿತು. ಬಲೆಯು ದೃಢತರವಾಯಿತು. ಯಾವ ಎಳೆಗಳಲ್ಲಿ ತನ್ನನ್ನು ಬಂಧಿಸಿಕೊಂಡಿದ್ದನೋ ಅವು ಹೊಸ ಹೊಸ ರೂಪದಲ್ಲಿ ಕಾಣಿಸಿಕೊಂಡುವು. ಉಷ್ಣತೆಯು ಒಮ್ಮೆ ಕ್ರೋಧದ ರೂಪತಾಳಿತು; ಮತ್ತೊಮ್ಮೆ ಕಾಮವಿಕಾರವಾಯಿತು. ಸ್ವಲ್ಪದರಲ್ಲಿ ಹೇಳುವುದಾದರೆ, ಒಂದು ರಸಾಯನವೇ ಸಿದ್ಧವಾಯಿತು. ಈಗ ಅವನ್ನು ಮರಳಿ ಪಡೆಯಬೇಕಾದರೆ ಸಂಸ್ಕಾರಗಳ ರೂಪದಲ್ಲಿ ತಾನು ತೆಗೆದು ಕೊಂಡಿದ್ದ ಎಲ್ಲವನ್ನೂ ಎಸೆದು, ಮೂಲಸ್ಥಿತಿಯುಂಟಾಗಲು ಅವಕಾಶಮಾಡಿ ತಲೆ ಕೆಳಗಾಗಿದ್ದ ವಿಚಾರವನ್ನು ಸರಿಯಾದ ದಾರಿಗೆ ತಿರುಗಿಸಿ ಊರ್ಧ್ವಮುಖ ಮಾಡಿ ಅದನ್ನು ಬಲಪಡಿಸಬೇಕು.
ಈಗ, ವಿಚಾರಗಳಿಗೆ ಊರ್ಧ್ವಗತಿಯನ್ನು ಕೊಡುವುದು ಸಾಮಾನ್ಯ ಮನುಷ್ಯನಿಗೆ ಶಕ್ಯವಿಲ್ಲವಾದ್ದರಿಂದ, ಪತನದ ಸಾಧ್ಯತೆಯಿಲ್ಲದಂತೆ ಸರ್ವೋಚ್ಚ ಸ್ಥಿತಿಯಲ್ಲಿ ನೆಲೆಸಿದ ಒಬ್ಬ ಮಹಾಪುರುಷನನ್ನು ಆಶ್ರಯಿಸುವೆವು. ವಿಚಾರಗಳ ಅಧೋಮುಖತೆಯು, ಕೆಳಗಿನ ಸ್ತರಕ್ಕೆ ಇಳಿದು ಸ್ಥೂಲತೆಯನ್ನು ಪಡೆದುದರ ಕುರುಹಾಗಿದೆ. ಇಂಥ ಸಂದರ್ಭಗಳಲ್ಲಿ ಮೇಲಕ್ಕೇರ ಬಯಸುವ ಪ್ರತಿಯೊ ಬ್ಬನೂ ಉನ್ನತಸ್ಥಿತಿಯಲ್ಲಿರುವ ಸಹಬಾಂಧವನೊಂದಿಗೆ ಶ್ರದ್ಧೆ-ಭಕ್ತಿಗಳಿಂದ ಹೊಂದಿಕೊಳ್ಳಬೇಕು. ಆತನ ಪ್ರಭಾವದಿಂದ ಕೆಳಮಟ್ಟದ ವಿಚಾರಗಳು ಪರಿಶುದ್ಧವಾಗುವುವು. ಸಾಧಕನು ಆಕರ್ಷಣ-ವಿಕರ್ಷಣಗಳಿಂದ ಮುಕ್ತನಾಗು ವನು. ಜೊತೆಗೆ, ದುಷ್ಟಜಾಲವನ್ನು ಕತ್ತರಿಸಲು ಸಹಾಯಕವಾಗುವಂಥ ಸದಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಉದಾಹರಣೆಗಾಗಿ, ಕಿವಿಗಳಿಂದ ಒಳ್ಳೆಯ ಮಾತುಗಳನ್ನು ಕೇಳಬೇಕು. ಕಣ್ಣುಗಳಿಂದ ಒಳ್ಳೆಯದನ್ನೇ ನೋಡ ಬೇಕು. ಮನಸ್ಸನ್ನು ಸತ್ಕಾರ್ಯಮಾಡಲು ಒಲಿಸಬೇಕು. ಇದೇರೀತಿ ಅನೇಕ ಸಂಗತಿಗಳು, ಮಾಡುವುದರಿಂದ ತಾವಾಗಿಯೆ ಗೊತ್ತಾಗುವುವು. ಇದಲ್ಲದೆ, ಈ ಜಾಲವನ್ನು ಛೇದಿಸಲು ತಾನೂ ಹಾರ್ದಿಕ ಪ್ರಯತ್ನ ಮಾಡಬೇಕು. ಇದಕ್ಕಾಗಿ ಪ್ರತಿಯೊಂದು ಘಟ್ಟದಲ್ಲಿಯೂ ಬೇರೆ ಬೇರೆ ಅಭ್ಯಾಸಗಳು, ಧ್ಯಾನವಿಧಿಗಳು ಇವೆಯಾದರೂ ಅವುಗಳ ಜೊತೆಗೆ ಶ್ರದ್ಧೆ ಹಾಗು ಇಚ್ಛಾಶಕ್ತಿಗಳು ಅವಶ್ಯ- ವಾಗಿವೆ. ಈ ಜಾಲದ ಬೇರೆ ಬೇರೆ ಚಕ್ರಗಳಲ್ಲಿ ಬಗೆ ಬಗೆಯ ಗ್ರಂಥಿಗಳು ನಿರ್ಮಾಣವಾಗಿವೆ, ಆಗುತ್ತಲಿವೆ. ಅವುಗಳನ್ನೆಲ್ಲ ಕತ್ತರಿಸಿದ ಮಹಾಪುರುಷನಿಂದ ಈ ಛೇದನಕಾರ್ಯದಲ್ಲಿ ತುಂಬ ಸಹಾಯವಾಗುವುದು.
ಈ ಸಿದ್ದಾಂತವು ಲಕ್ಷ್ಯಪೂರ್ವಕ ಅಭ್ಯಾಸಮಾಡಲು ಯೋಗ್ಯವಾಗಿದೆ. ಇವು ಇಂದಿನವರೆಗೆ ರಹಸ್ಯಗಳಾಗಿಯೇ ಉಳಿದಿದ್ದುವು. ಜನರು ಗಮನಕ್ಕೆ ತಂದುಕೊಂಡು ಅಭ್ಯಾಸ ಮಾಡಲೆಂಬ ದೃಷ್ಟಿಯಿಂದ ಅದನ್ನು ವಿವರಿಸಲಾಗಿದೆ. ಈ ವಿವೇಚನೆಯ ನಂತರ ನೀವು ಸ್ವಯಂ ನಿರ್ಮಿಸಿದ ಜಾಲವನ್ನು ಛೇದಿಸಿ ನಿಸರ್ಗದ ಜೀವಾಳದಂತಿದ್ದ ಆ ಗುಪ್ತಶಕ್ತಿಯನ್ನು ಮತ್ತೆ ಪಡೆಯಲು ಪ್ರಯತ್ನಿಸಬೇಕೆಂದು ನನ್ನ ವಿನಮ್ರ ಪ್ರಾರ್ಥನೆ. ಪ್ರತಿಯೊಬ್ಬನೂ ಆಳವಾಗಿ ವಿಚಾರಿಸಿ, ಅತ್ಯಂತ ಸರಳತೆಯ ದೃಷ್ಟಾಂತವನ್ನು ಆದರ್ಶವಾಗಿಟ್ಟುಕೊಂಡು ಗುರಿಯನ್ನು ಮುಟ್ಟಲು ಯತ್ನಿಸಬೇಕು. ನಮ್ಮ ಎಲ್ಲ ಇಂದ್ರಿಯಗಳೂ ಅದರಲ್ಲಿ ಲಯಹೊಂದಿ ತಮ್ಮ ಪೂರ್ವ ಸಂಸ್ಕಾರಗಳನ್ನು ಕಳೆದುಕೊಂಡು ಅದರೊಂದಿಗೆ ಸಾಮರಸ್ಯ ಹೊಂದುವಂತಾಗಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ನೀವು ಧೈಯದ ಕಡೆಗೆ ತಿರುಗಿದಂತೆ.
ಮೇಲೆ ವಿವರಿಸಲಾದ ಪದ್ಧತಿಯೇ ಅದಕ್ಕೆ ತಕ್ಕ ಉಪಾಯ. ಅರ್ಥಾತ್ ನಮ್ಮ ಎಲ್ಲ ಉದ್ವೇಗ-ಆವೇಗಗಳನ್ನು ಕಡಿಮೆ ಮಾಡುತ್ತ, ಆಧ್ಯತೆ-ಆಡಂಬರಗಳನ್ನು ತ್ಯಜಿಸುತ್ತ, ನಮ್ಮ ಅಸ್ತಿತ್ವದಲ್ಲಿ ಸೇರಿದ ಅನಾವಶ್ಯಕ ಅಂಶಗಳನ್ನು ಬಿಸುಡುತ್ತ ನಡೆಯಬೇಕು. ಆಗ ಏನಾಗುವುದು? ನೀವೇ ಹೆಣೆದಿದ್ದ ಬಲೆಯು ಕತ್ತರಿಸುತ್ತ ಹೋಗುವುದು. ನೀವು ಕೊನೆಗೆ ಮುಟ್ಟಬೇಕಾಗಿದ್ದ ಶುದ್ಧ ಸ್ಥಿತಿಯನ್ನು ನಿರಾಯಾಸವಾಗಿ ಹೊಂದುವಿರಿ, ಇಲ್ಲಿಯವರೆಗೆ ಹೇಳಲಾದಂತೆ, ಯಾರು ಈ ಬಲೆಯನ್ನು ಈಗಾಗಲೇ ಛೇದಿಸಿ ಅನಂತದಲ್ಲಿ ಸಾಕಷ್ಟು ಈಜಿರುವರೋ ಅಂಥವರ ಸಹಾಯ ಪಡೆದಾಗಲೆ ಇದು ಸಾಧ್ಯವಾಗುವುದು.