ಯಾರಾದರೂ ಕೇಡು ಮಾಡಿದರೆ ಸೇಡು ಬಗೆಯಬೇಡಿರಿ. ಬದಲು, ದೈವೀ ಕೃಪೆಯೆಂದು ತಿಳಿದು ಧನ್ಯವಾದಗಳನ್ನರ್ಪಿಸಿರಿ.

ಆಗುವುದೆಲ್ಲವೂ ನಮ್ಮ ಕರ್ಮಗಳ ಫಲವೆಂದು ಜಗತ್ತಿನ ಸಕಲ ಧರ್ಮಗಳೂ ಸಾರುತ್ತಿವೆ. ಈ ಸಿದ್ಧಾಂತಕ್ಕೆ ವಿರುದ್ಧವಾದ ಫಲವು ಯಾರಿಗೂ ಸಿಗುವುದಿಲ್ಲ. ಹೀಗಿರುವಾಗ, ಘಟಿಸುವುದೆಲ್ಲವೂ ವಾಸ್ತವವಾಗಿ ನಾವೇ ನಿರ್ಮಿಸಿರುವ ದೈವದ ಆಟವೆಂದು ಏಕೆ ತಿಳಿಯಬಾರದು? ನಿಜವಾಗಿಯೂ ನಮ್ಮ ದೈವದ ಆಟವೆಂದು ಏಕೆ ತಿಳಿಯಬಾರದು? ನಿಜವಾಗಿಯೂ ನಮ್ಮ ದೈವವನ್ನು ನಾವೇ ನಿರ್ಮಿಸಿಕೊಂಡಿದ್ದೇವೆ. ಹೇಗೆಂದರೆ, ಯಾವುದಾದರೊಂದು ಕಾರ್ಯವನ್ನು ನಮ್ಮ ಹೃದಯ ಮತ್ತು ಬುದ್ದಿಪೂರ್ವಕವಾಗಿ ಮಾಡಿದಾಗ ಅಡಿಯಲ್ಲಿ ಅದರ ಸಂಸ್ಕಾರಗಳುಂಟಾಗುವುವು. ಭೋಗ-ದಿಂದ ಅವುಗಳ ಪರಿಣಾಮ ಕ್ಷಯವಾಗುವವರೆಗೆ ಅವು ಬೀಜರೂಪದಲ್ಲಿ ಅಲ್ಲಿಯೆ ನೆಲೆಸಿರುವುವು. ಈ ಪ್ರಕಾರ ಭೋಗವು ಆವಶ್ಯಕವಾಗಿದೆ. ಸೃಷ್ಟಿಯ ಆದಿಯಲ್ಲಿದ್ದಂತೆ ಪ್ರತಿಯೊಂದು ವಸ್ತುವೂ ಶುದ್ಧರೂಪದಲ್ಲಿರಬೇಕೆಂಬುದು ನಿಸರ್ಗದ ಅನಿವಾರ್ಯ ನಿಯಮವಾಗಿದೆ. ಅದರ ಮೇಲೆ ಕಿಂಚಿತ್ ಮಲಿನತೆಯಾದರೂ ಕೂಡ ಅದರ ಪ್ರಕಾಶವನ್ನು ಮಂದಗೊಳಿಸುತ್ತದೆ. ಇದು ಸ್ವಯಂ ಒಂದು ಶಕ್ತಿಯಾದ ಕಾರಣ ಒಂದು ತರದ ಜೀವನವನ್ನು ತಳೆದು ಕರ್ಮಗಳೊಡನೆ ಸಂಬಂಧ ಪಡೆಯುತ್ತದೆ. ಇಷ್ಟೆಲ್ಲ ಏಕೆ೦ದರೆ, ನಾವು ನಮ್ಮನ್ನು ಕರ್ತೃಗಳೆಂದು ತಿಳಿದೆವು. ಈ ಕಲ್ಪನೆಯ ಬಲದಿಂದಲೇ ಸಂಸ್ಕಾರಗಳುಂಟಾದುದು. ಕಲ್ಪನೆಯೊಳಗಿನ ಉಷ್ಣತೆಯು ಚೇತನತೆಯನ್ನು ಹೆಚ್ಚಿಸಿ ಅದರಲ್ಲಿ ಒಂದು ತರದ ಕುದಿಯುವ ಕ್ರಿಯೆಯನ್ನುಂಟು ಮಾಡಿತು. ಯಾವ ವಸ್ತುವು ಎಲ್ಲಿಂದ ಬಂದಿರುವುದೋ ಅಲ್ಲಿಗೆ ಮರಳಿ ಹೋಗಲು ಯತ್ನಿಸುವುದು ಪ್ರಕೃತಿ ನಿಯಮವಾಗಿದೆ. ಉಷ್ಣತೆಯ ಸತತ ಸಂಪರ್ಕದಿಂದ ಅದರ ಭಾರವು ಹೆಚ್ಚಿ ಅಸಹನೀಯವಾದಾಗ ಭಾರವನ್ನಿಳುಹಲು ಮತ್ತೆ ತನ್ನ ಉಗಮಸ್ಥಾನಕ್ಕೆ ಹೋಗಬಯಸುವುದು ಸ್ವಾಭಾವಿಕವಾಗಿದೆ. ಸಣ್ಣ ವಸ್ತುವಿನಿಂದ ಉತ್ಪನ್ನವಾದ ವಸ್ತುಗಳು ಕೂಡ ಅವಕಾಶವೊದಗಿದಾಗ ವಿಸ್ತಾರಹೊಂದುತ್ತವೆ. ವಿಸ್ತಾರವು ಅವುಗಳ ಗಾತ್ರಕ್ಕನುಗುಣವಾಗಿ ಸಾಕಷ್ಟು ಬಲಯುತವಾಗಿರುತ್ತದೆ. ಏಕೆಂದರೆ, ಉತ್ಪನ್ನವಸ್ತುಗಳಲ್ಲಿ ಬಲವಿರುವುದು ಸಹಜ. ಹೀಗಿರುವಾಗ ಅದರ ಸ್ವರೂಪವು ಈಗ ಬೇರೆಯಾಗತೊಡಗುವುದು. ಅದು ತನಗೆ ಸಿಕ್ಕ ಅವಕಾಶವನ್ನೆಲ್ಲ ವ್ಯಾಪಿಸಿ ಭೋಗಕ್ಕಾಗಿ ಮೀಸಲಾದ ಸ್ತರಗಳಲ್ಲಿಯೂ ಪ್ರವೇಶಿಸುವುದು. ಇದರಿಂದ ಕಷ್ಟಾನುಭವ ಪ್ರಾರಂಭವಾಗುವುದು. ಇದರೊಳಗಿನ ಪ್ರತಿಯೊಂದು ಅಂಶವನ್ನು ಸ್ವತಂತ್ರವಾಗಿ ವಿವರಿಸಲು ಸಾಧ್ಯವಿದ್ದರೂ ನಾನು ತೀರ ಸಂಕ್ಷೇಪವಾಗಿ ಇದನ್ನು ಹೇಳಿದ್ದೇನೆ. ಭೋಗಕ್ಕಾಗಿ ಒದಗುವ ಪರಿಸ್ಥಿತಿಗಳು ಆಂತರಿಕ ಕಾರಣಗಳಿಂದಾಗಲಿ ಬಾಹ್ಯ ಕಾರಣಗಳಿಂದಾಗಲಿ ನಿರ್ಮಾಣ ವಾಗಬಹುದು. ಪರರಿಂದೊದಗುವ ಕಷ್ಟಗಳೇ ಬಾಹ್ಯ ಪರಿಸ್ಥಿತಿಗಳು. ಜನರು ತಮ್ಮ ಅಜ್ಞಾನದಿಂದ, ಕಷ್ಟ ಕೊಟ್ಟ ಪರರ ಬಗೆಗೆ ತಮ್ಮ ಭಾವನೆಗಳನ್ನು ಕಲುಷಿತಗೊಳಿಸಿಕೊಳ್ಳುವರು. ಇದು ಯೋಗ್ಯವಲ್ಲ. ಏಕೆಂದರೆ, ಅವರು ನಮ್ಮ ಭೋಗಕ್ಕೆ ಅವಕಾಶ ಕಲ್ಪಿಸಿಕೊಟ್ಟು ನಿಜವಾಗಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡುತ್ತಾರೆ. ಈ ಪ್ರಕಾರ ಬಾಹ್ಯ ಪರಿಸ್ಥಿತಿಯಿಂದಾದ ಕಾರ್ಯವು ನಮ್ಮ ನಮ್ಮ ಅಂತಃಕರಣಶುದ್ದಿಗೆ ಕಾರಣವಾದ ಮಿತ್ರಕಾರ್ಯವೇ ಆಗಿದೆ. ಜನಸಾಮಾನ್ಯರ ಬುದ್ಧಿಗೆ ಈ ತತ್ತ್ವಜ್ಞಾನವು ನಿಲುಕುವುದಿಲ್ಲವಾದ್ದರಿಂದ ಈ ವಿವರಣೆಯು ಹೊಸತೆನಿಸಬಹುದು. ಈ ಕಾರಣದಿಂದಲೇ ಪ್ರತಿಯೊಂದನ್ನೂ ಭಗವಂತನಿಂದ ಬಂದ ವರವೆಂದು ತಿಳಿದು ಯಾರೊಂದಿಗೂ ದ್ವೇಷಭಾವನೆ ಬೆಳೆಸಬಾರದೆಂಬ ಸರ್ವಸಾಮಾನ್ಯ ಉಪದೇಶ ಮಾಡಲಾಯಿತು. ಇದರಿಂದ ಮನುಷ್ಯನ ಸೌಜನ್ಯಕ್ಕೂ ಕುಂದುಬರುವುದಿಲ್ಲ. ನಮ್ಮ ಹಿತಕ್ಕಾಗಿ ಯಾರಿಂದ ಏನೇ ಘಟಿಸಿದರೂ ಅದು ನಮ್ಮಲ್ಲಿ ಸಂತೋಷ ಹಾಗು ಕೃತಜ್ಞತಾಭಾವವನ್ನು ಹುಟ್ಟಿಸಬೇಕು.