ಪ್ರಿಯ ಸೋದರ, ಸೋದರಿಯರೆ,
ನಮ್ಮ ಧ್ಯಾನ ಹಾಗೂ ಧ್ಯಾನದ ಉದ್ದೇಶದ ಬಗೆಗೆ ಕೆಲವು ಅಂಶಗಳನ್ನು ನಿಮ್ಮ ಪರಿಶೀಲನೆಗಾಗಿ ನಿಮ್ಮೆದುರು ಇಡಯಸುತ್ತೇನೆ. ಯಾವಾಗ ಏತಕ್ಕಾಗಿ ಧ್ಯಾನ ಮಾಡುವಿರಿ ಅಂತ ನಾನು ಅವರನ್ನು ಕೇಳಿದಾಗ, ಉತ್ತರಕ್ಕಾಗಿ ಆಲೋಚಿಸುವ ಹಾಗೂ ತಾವು ಉತ್ತರಿಸಲು ಅಶಕ್ತರು ಅಂತ ತಿಳಿದುಕೊಳ್ಳುವ ಅನೇಕ ಅಭ್ಯಾಸಿಗಳನ್ನು ನಾನು ಭೆಟ್ಟಿಯಾಗಿರುವೆ. ಹಾಗೂ ಕೆಲವು ಬಗೆಯ ಯೋಗಗಳ ಅಭ್ಯಾಸ ಮಾಡುವ ಬೇರೆ ಕೆಲವರನ್ನೂ ಭೆಟ್ಟಿಯಾಗಿರುವೆ. ಯಾವಾಗ ನೀವು ಏಕೆ ಅಭ್ಯಾಸ ಮಾಡುವಿರಿ ಅಂತ ಪ್ರಶ್ನಿಸಿದಾಗ ಅವರು ಕೆಲವು ಅಸ್ಪಷ್ಟ ಉತ್ತರ ಮುಂದೊಡ್ಡುತ್ತಾರೆ. ಧ್ಯಾನದ ಉದ್ದೇಶವನ್ನು ತಿಳಿದುಕೊಳ್ಳುವದು ಪರಮಾವಶ್ಯಕವಾಗಿದೆ. ಅತ್ಯುಚ್ಚ ಸ್ಥಿತಿ ನಮ್ಮ ದೃಷ್ಟಿಯಲ್ಲಿರದಿದ್ದರೆ, ನಮ್ಮ ಎಲ್ಲ ಯತ್ನಗಳೂ ವ್ಯರ್ಥವಾಗುವವು. ಅಥವಾ ಯತ್ನಗಳು ಸುಖವನ್ನರಸುವ ಕ್ರಿಯೆಗಳಾಗಿದ್ದರೆ, ಅವು ಹೆಚ್ಚು ಸ್ಥೂಲತೆಯನ್ನುಂಟು ಮಾಡುವವು. ಅದಕ್ಕಾಗಿ, ದಯವಿಟ್ಟು ಆಳವಾಗಿ ಆಲೋಚಿಸಿರಿ ಹಾಗೂ ನಾವು ಏಕೆ ಧ್ಯಾನಮಾಡುತ್ತಿರುವೆವು ಅಂತ ಆಲೋಚಿಸಿರಿ.
ನಮ್ಮೆದುರಿಗೆ ಪ್ರಾರ್ಥನೆಯಿದೆ. ಈ ಪ್ರಾರ್ಥನೆಯಲ್ಲಿ ಗುರಿಯ ಬಗೆಗೆ ಸ್ಪಷ್ಟವಾಗಿ ಹೇಳಲಾಗಿದೆ. ಆತಂಕಗಳ ಬಗೆಗೂ, ಅದರಂತೆಯೇ ಅಂತಿಮ ಮೂಲದ ಹಾಗೂ ಸಹಾಯದ ಬಗೆಗೂ ಪ್ರಸ್ತಾಪಿಸಲಾಗಿದೆ. ಅದಕ್ಕೆ ಪ್ರಾರ್ಥನೆಯೊಂದಿಗೆ ಧ್ಯಾನವನ್ನು ಪ್ರಾರಂಭಿಸುವದನ್ನು ಮುಖ್ಯ ವಿಷಯವಾಗಿ ಪರಿಗಣಿಸಿರಿ. ಆಗಲೇ ನೀವು ಸ್ಪಷ್ಟವಾಗಿ ತಿಳಿಯುವಿರಿ ಹಾಗೂ ನಿಮ್ಮ ಗ್ರಹಣಶಕ್ತಿ ಬೆಳೆಯುವದು.
ಧರ್ಮ ಮುಂತಾದವುಗಳಲ್ಲಿ ನನಗೆ ಬಹಳಷ್ಟು ಪ್ರಾರ್ಥನೆಗಳ ಪರಿಚಯವಾಗಿದೆ. ನೀವು ಲಕ್ಷಗೊಟ್ಟು ಪರೀಕ್ಷಿಸಿದ್ದಾದರೆ, ಅವುಗಳೆಲ್ಲವೂ ಲೌಕಿಕ ಲಾಭ ಅಥವಾ ದುಃಖ ನಿವಾರಣೆ ಮುಂತಾದ ಪರಿಮಿತ ಉದ್ದೇಶ ಹೊಂದಿರುವವು. ಸಹಜಮಾರ್ಗದಲ್ಲಿ ನಮ್ಮ ಧ್ಯೇಯವು ಅತ್ಯಂತ ಸ್ಪಷ್ಟವಾಗಿದೆ. ಹಾಗೂ ಅಂತಿಮ ಸತ್ಯದೊಂದಿಗೆ ಶಾಶ್ವತವಾಗಿ ಸಂಬಂಧ ಹೊಂದಿರುವ ವ್ಯಕ್ತಿ
ನಮ್ಮ ಸಮ್ಮುಖದಲ್ಲಿದ್ದಾಗ, ಅವನನ್ನು ನಮ್ಮ ಗುರಿಯನ್ನಾಗಿ ಮಾಡಿಕೊಂಡರೆ ಹಾಗೂ ಆವನೊಂದಿಗೆ ನಮ್ಮನ್ನು ನಾವು ಜೋಡಿಸಿಕೊಂಡರೆ, ನಾವು ಆಧ್ಯಾತ್ಮಿಕ ಪ್ರಗತಿ ಹೊಂದುವ ಆಶೆಯುಳ್ಳವರಾಗಬಹುದು. ಇಲ್ಲದಿದ್ದಲ್ಲಿ, ಈ ಧ್ಯಾನವೇ ಅದರ ಉದ್ದೇಶವನ್ನು ನಾಶ ಮಾಡುವದು ಹಾಗೂ (ನಿವಾರಿಸುವ ಬದಲು) ಕೆಲವು ಬೇಡವಾದ ವಸ್ತುಗಳನ್ನೊಳಗೊಂಡು ಕ್ಲಿಷ್ಟತೆಯನ್ನು ಸೃಷ್ಟಿಸಬಹುದು. ಪ್ರಾರ್ಥನೆಯು ನಿಮಗೊಂದು ವಿಚಾರ ಒದಗಿಸಬಹುದು. ಅದು ಗುರಿಯ ಬಗ್ಗೆ ವಿಚಾರವನ್ನೊದಗಿಸುವದು. ಇದಕ್ಕಾಗಿ ಅರ್ಥದ ಮೇಲೆ ಆಳವಾಗಿ ಯೋಚಿಸಬೇಕಾಗುವದು ಹಾಗೂ ಪ್ರಾರ್ಥನೆಯ ಸ್ಥಿತಿಯನ್ನು ಅಭಿವೃದ್ಧಿಗೊಳಿಸಲು ಅದರ ಅರ್ಥವನ್ನು ಮರೆಯಬೇಕು. ವಿಶ್ರಾಂತಿಗಾಗಿ ಮಲಗಲು ಹೋದಾಗ ಅನುಸರಿಸಲು ವಿಧಿಸಲ್ಪಟ್ಟ ಪದ್ಧತಿ ಇದು. ಯಾಚನೆಯ ಪ್ರಕ್ರಿಯೆಯು ಕೂಡ ಅನುಸರಿಸುವದು. ನಿದ್ರೆಯ ಪಶುಪ್ರವೃತ್ತಿಗಳು ಪರಿವರ್ತನಗೊಳ್ಳುವವು ಹಾಗೂ ಪ್ರಾರ್ಥನೆಯ ಉದಾತ್ತ ಸ್ಥಿತಿ ಹೊಂದುವವು. ಆ ಪ್ರಾರ್ಥನೆಯ ಸ್ಥಿತಿ ನಿಮ್ಮ ಗ್ರಹಣ ಶಕ್ತಿಯನ್ನು ಅಭಿವೃದ್ಧಿಗೊಳಿಸುವದು. ಹಾಗೂ ಪ್ರಾರ್ಥನೆಯ ಸ್ಥಿತಿಯನ್ನು ಬೆಳೆಯಿಸಿಕೊಂಡರೆ, ನೀವು ಆಧ್ಯಾತ್ಮದಲ್ಲಿ ಅತ್ಯಂತ ತೀವ್ರಗತಿಯಿಂದ ಪ್ರಗತಿ ಹೊಂದಿಯೇ ಹೊಂದುತ್ತೀರಿ.
ಈ ರೀತಿಯಾಗಿ ಪ್ರಾರ್ಥನೆ ಇಬ್ಬಗೆಯ ಉದ್ದೇಶ ಹೊಂದಿದೆ. ಅದು ನೀವು ಸಾಧಿಸಬೇಕಾದ ನಿಮ್ಮ ಗುರಿಯ ಅಥವಾ ನಿಮ್ಮ ಧ್ಯೇಯದ ಸ್ಮರಣೆ ಮಾಡಿಕೊಡುವದು. ಹಾಗೂ ಯಾವಾಗಲೂ ನಿಮಗೆ ಗುರುವನ್ನು ತೋರಿಸಿಕೊಡುವದು ಅಥವಾ ನೆನಪು ಮಾಡಿಕೊಡುವದು. ಅದೇ ಕಾಲಕ್ಕೆ, ಪ್ರಾರ್ಥನೆಯ ಸ್ಥಿತಿಯನ್ನು ಬೆಳೆಯಿಸಿಕೊಳ್ಳಬಹುದು ಹಾಗೂ ನಿಮ್ಮ ಎಲ್ಲ ಸ್ಥೂಲತೆ ನಿವಾರಿಸಲ್ಪಡುವದು.
ನಿಮ್ಮಲ್ಲಿ ಪ್ರತಿಯೊಬ್ಬನೂ ಧ್ಯಾನದಲ್ಲಿ ನಿಜಕ್ಕೂ ಏನಾಗುವದೆಂಬುದನ್ನು ಅವಲೋಕಿಸಿರಬಹುದು. ಆಂತರಿಕವಾಗಿ ಅದುಮಲ್ಪಟ್ಟ ವಿಚಾರಗಳು, ಇಚ್ಛೆಗಳು ಹಾಗೂ ಅನ್ಯ ಅನೇಕ ಜಟಿಲತೆಗಳು ಅರಿವಿಗೆ ಬರುವವು. ಅವು ಧ್ಯಾನದ ಸಮಯದಲ್ಲಿ ನಿಮ್ಮ ಅರಿವಿಗೆ ಬರುವವು ಹಾಗೂ ನಿವಾರಿಸಲ್ಪಡುವವು. ಈ ಕ್ರಮ ಕೆಲ ಸಮಯದವರೆಗೆ ಮುಂದುವರಿಯುವದು. ಅದು ನಿಜಕ್ಕೂ ಶುದ್ದೀಕರಣವಾಗಿದೆ. ಧ್ಯಾನಸಮಯದ ವಿಚಾರಗಳೊಡನೆ ನೀವು ಹೋರಾಡಬೇಕಾಗಿಲ್ಲ. ಹಾಗೂ ಒಂದು ವೇಳೆ ವಿಚಾರಗಳಿದ್ದರೆ, ನೀವು ನಿರುತ್ಸಾಹಗೊಳ್ಳಬೇಕಾಗಿಲ್ಲ. ಧ್ಯಾನದ ನಂತರ ನೀವು ಎಲ್ಲ ವಿಚಾರಗಳನ್ನು ಸ್ಮರಿಸಿಕೊಳ್ಳಲು ಯತ್ನಿಸಿದರೆ ಕ್ವಚಿತ್ತಾಗಿ ಒಂದೆರಡು ಮಾತ್ರ ನೆನಪಿಗೆ ಬರಬಹುದು. ವಿಚಾರಗಳ ಸುಗ್ಗಿ, ಶುದ್ದೀಕರಣದ ಉದ್ದೇಶಕ್ಕಾಗಿ ಇತ್ತು ಅನ್ನುವದಕ್ಕೆ ಇದು ಪ್ರಮಾಣವಾಗಿದೆ.
ಅದಕ್ಕಾಗಿ ಧ್ಯಾನದ ಕ್ರಮಬದ್ದ ಅಭ್ಯಾಸ ಅತ್ಯಂತ ಆವಶ್ಯಕವಾಗಿದೆ. ಸಹಜ ಮಾರ್ಗದಲ್ಲಿ ವಿಧಿಸಲಾದಂತೆ ಅದು ಅತಿ ಸರಳವಾಗಿದೆ. ಸಾಧನೆಯ ಅನ್ಯ ಅಭ್ಯಾಸಗಳಿಂದಾಗಿ ನಾವೇ ಅದನ್ನು ಕ್ಲಿಷ್ಟಗೊಳಿಸುವೆವು. ಧ್ಯಾನದ ಬಗೆಗೆ ನಾವು ಹಲವಾರು ಕಲ್ಪನೆಗಳನ್ನು ಹೊಂದಿದ್ದೇವೆ ಹಾಗೂ ನಾವು ಕ್ಲಿಷ್ಟತೆಗಳನ್ನು ನಿರ್ಮಿಸುವೆವು. ನಮ್ಮ ಧ್ಯಾನವನ್ನು ಆ ಕಲ್ಪನೆಗಳಿಗೆ ಅನುರೂಪವಾಗಿ ಮಾಡಬಯಸುತ್ತೇವೆ ಹಾಗೂ ಸತ್ಯವನ್ನು ಮರೆಯುವೆವು. ಸತ್ಯವು ನಮ್ಮ ಪೂರ್ವಗ್ರಹಿಕೆಗಳಿಂದ ಹಾಗೂ ಜಟಿಲತೆಗಳಿಂದ ಆಚ್ಛಾದಿತವಾಗಿದೆ. ಅದಕ್ಕಾಗಿ ಸತ್ಯವನ್ನು ಹೊಂದಬೇಕಾಗಿದ್ದರೆ, ನಾವು ಧೈರ್ಯವಂತರಾಗಬೇಕು. ನಂತರ ಈ ಅಭ್ಯಾಸದಿಂದ ಅತ್ಯಲ್ಪ ಸಮಯದಲ್ಲಿ ನೀವು ಅದನ್ನು ಬಹುಬೇಗ ಅರಿಯುವಿರಿ.
ನಮ್ಮ ವಿಚಾರವನ್ನು ದುರುಪಯೋಗಮಾಡಿ ನಾವು ಜಟಿಲತೆಗಳನ್ನು ನಿರ್ಮಿಸುವೆವು. ಆದರೆ ಅದೇ ವಿಚಾರವನ್ನು ಸರಿಯಾಗಿ ಉಪಯೋಗಿಸುವದರಿಂದ, ಜಟಿಲತೆಗಳನ್ನು ನಿವಾರಿಸಬಹುದು. ಪ್ರಾಣಾಹುತಿಶಕ್ತಿ ಚಿಂತನದಿಂದ ನಿರ್ಮಿತವಾಗುವದು ಹಾಗೂ ನಮ್ಮ ಆಧ್ಯಾತ್ಮಿಕ ಅಭಿವೃದ್ಧಿ, ವಿಚಾರ ಶಕ್ತಿಯಿಂದ ನೆರವೇರುವದು. ಅಭ್ಯಾಸದ ಸಂಪೂರ್ಣ ಪದ್ಧತಿಯು, ಚಿಂತನೆಯನ್ನು ಮಾತ್ರ ಆಧರಿಸಿದೆ. ಹಾಗೂ ಸುದೈವದಿಂದ ಆ ಶಕ್ತಿಯ ಮೇಲೆ ಪ್ರಭುತ್ವ ಹೊಂದಿರುವ ವ್ಯಕ್ತಿ ನಮ್ಮೊಂದಿಗಿದ್ದಾರೆ. ಅವರು ಅಂತಿಮ ಸತ್ಯದೊಂದಿಗೆ ಸಂಪರ್ಕ ಹೊಂದಿದ್ದು, ಎಲ್ಲ ಬಗೆಯ ಸ್ಥೂಲತೆ ಹಾಗೂ ಜಡತ್ವಗಳಿಂದ ಮುಕ್ತರಾಗಿದ್ದರೆ, ನಮ್ಮ ಆಲೋಚನೆಯನ್ನು ಅವರೊಂದಿಗೆ ಅಥವಾ ಅವರ ವ್ಯಕ್ತಿತ್ವದೊಂದಿಗೆ ಜೋಡಿಸಿದ್ದಾದರೆ, ಅಡೆತಡೆಗಳನ್ನು ನಿವಾರಿಸುವದು ಅತಿ ಸುಲಭವಾಗುವದು. ತದನಂತರ ನೀವು ಸೂಕ್ಷ್ಮತೆಯ ವಿವಿಧ ಮಜಲುಗಳ ಮೂಲಕ ಸಾಗುವಿರಿ ಹಾಗೂ ಇನ್ನೂ ಸೂಕ್ಷ್ಮಸ್ಥಿತಿಗಳು ಉದಯಿಸುವವು.
ನಮ್ಮ ಮೂಲ ಸ್ಥಿತಿಯು ದೈವತ್ವದೊಂದಿಗೆ ಒಂದಾಗಿತ್ತು ಹಾಗೂ ನಮ್ಮ ಇಂದ್ರಿಯಗಳನ್ನು, ಇಚ್ಛೆಗಳನ್ನು ಅಡ್ಡಾತಿಡ್ಡಿಯಾದ ರೀತಿಯಲ್ಲಿ ಹರಿದಾಡಲು ಬಿಟ್ಟು ನಾವು ಈ ಎಲ್ಲ ಜಟಿಲತೆಗಳನ್ನು ನಿರ್ಮಿಸಿದೆವು. ಅದರಿಂದಾಗಿ, ಎಲ್ಲ ಇಂದ್ರಿಯಗಳು ಪ್ರಜ್ಞೆಯನ್ನು ಕಳೆದುಕೊಂಡವು. ಮನುಷ್ಯ ಈಗ ಮನುಷ್ಯನಾಗಿ ಉಳಿಯಲಿಲ್ಲ, ಕೇವಲ ಪ್ರಾಣಿಯಾದನು. ನಾವು ಆಂತರಿಕ ಬಂಧನಗಳನ್ನು ನಿರ್ಮಿಸಿ ಅವುಗಳಿಂದ ಹೊರಗೆ ಬರಲಾರದಂತಾಗಿದ್ದೇವೆ. ನಾವು ಮಾಡಿಕೊಂಡ ತಪ್ಪು ಕಲ್ಪನೆಗಳ ಅನುಸರಣೆಯಿಂದ ಹಾಗೂ ಇನ್ನಷ್ಟು ಜಟಿಲತೆಗಳನ್ನು ಮಾಡಿಕೊಂಡದ್ದರಿಂದ ಉಂಟಾದ ಆಂತರಿಕ ಬಂಧನಗಳಿಂದ ಮುಕ್ತರಾಗಬೇಕು. ಅತ್ಯುತ್ತಮ ಉಪಾಯವೆಂದರೆ, ಯಾರು ಎಲ್ಲ ಬಂಧನಗಳಿಂದ ಮುಕ್ತರಾಗಿರುವರೋ ಅವರೊಂದಿಗೆ ನಮ್ಮನ್ನು ಜೋಡಿಸಿಕೊಳ್ಳುವದು. ಆಂತರಿಕ ಬಂಧನಗಳಿಂದ ನೀವು ಯಾವಾಗ ಮುಕ್ತಿ ಪಡೆಯುವಿರೋ ಆಗ ನಿಜಕ್ಕೂ ನೀವು ಮುಕ್ತ ಮಾನವನಾಗುವಿರಿ. ಇದು ಅತ್ಯಂತ ಸುಲಭವಾಗಿದೆ. “ನೀವು ಅದಕ್ಕಾಗಿ ಸಂಕಲ್ಪ ಮಾಡಲಬಲ್ಲಿರಾದರೆ, ಅದನ್ನು ಸುಲಭವಾಗಿ ಹೊಂದಬಹುದು” ಅನ್ನುವ ಮಾತನ್ನೇ ಗುರುಗಳು ಹೇಳುತ್ತಾರೆ. ನೀವು ಆಂತರಿಕ ಸ್ಥೂಲತೆ ಮುಂತಾದವುಗಳಿಂದ ಮುಕ್ತರಾಗಲೇಬೇಕು ಹಾಗೂ ಸುಖವನ್ನರಿಸುವ ಪ್ರವೃತ್ತಿಗಳ ಸೆಳವಿಗೆ ಸಿಗದೇ ಇರುವೆವು ಎಂಬ ದೃಢ ಸಂಕಲ್ಪ ಮಾಡಬೇಕು. ಅತಿ ಸುಲಭವಾದ ಹಾಗೂ ಯಾವುದೇ ವ್ಯಕ್ತಿ ಅನುಸರಿಸಬಹುದಾದ ಗುರುಗಳ ಬೋಧನೆಯನ್ನು ನೀವು ಸ್ವೀಕರಿಸಿರಿ ಹಾಗೂ ದೃಢ ಸಂಕಲ್ಪ ಮಾಡಿರಿ. ಒಂದು ವೇಳೆ ಆ ಆದರ್ಶವನ್ನು ನಿಶ್ಚಿತಗೊಳಿಸಿದ್ದಾದರೆ ಪ್ರಗತಿಯನ್ನು ಸುಲಭವಾಗಿ ಸಂಪಾದಿಸಬಹುದು.
“ಎಲ್ಲರ ಶೀಘ್ರ ಪ್ರಗತಿಗಾಗಿ ಗುರುಗಳು ಆಶೀರ್ವದಿಸಲಿ”
(ಫೆಬ್ರುವರಿ ೧, ೧೯೭೯ ರಂದು ಶಾಹಜಹಾನಪುರದಲ್ಲಿ ಬಸಂತ ಪಂಚಮಿಯ ಆಚರಣೆಯ ಸಂಬರ್ಧದಲ್ಲಿ ಮಾಡಿದ ಭಾಷಣ.)
ಗ್ರಂಥಗಳು ಸಾಕ್ಷಾತ್ಕಾರಕ್ಕಾಗಿ ಸಹಾಯ ಮಾಡುವದಿಲ್ಲ. ಹಾಗೂ ಯಾವಾಗ ಸಾಕ್ಷಾತ್ಕಾರದ ಪ್ರಾಪ್ತಿಯಾಗುವದೋ ಆಗ, ಗ್ರಂಥಗಳು ನಿರುಪಯುಕ್ತವಾಗುವವು
.
-ಬಾಬೂಜಿ