ಬಿನ್ನಹ
ಇದುವರೆಗೂ ಹೃದಯದಿಂದ ಹೃದಯಕ್ಕೆ ವೇದ್ಯವಾಗುತ್ತ ಬಂದಿದ್ದ ಆಧ್ಯಾತ್ಮಿಕ ರಹಸ್ಯಗಳನ್ನು ಶಬ್ದಗಳಲ್ಲಿ ಹಿಡಿದಿಟ್ಟು ಪುಸ್ತಕ ರೂಪದಲ್ಲಿ ತರಲು ಯತ್ನಿಸಿದ್ದೇನೆ. ಆದರೆ ಈ ವಿಷಯಗಳು ನಿಸರ್ಗದ ಅವಲೋಕನವನ್ನು ಅವಲಂಬಿಸಿರುವ ಅನುಭವಕ್ಕೆ ಸಂಬಂಧಪಟ್ಟಿವೆ. ಅಂಥ ಅನುಭವವಾದರೋ ಸ್ಪಂದನಗಳ ಮೂಲಕ ಗೋಚರಿಸುವುದು. ಆದುದರಿಂದ ಶಬ್ದಗಳ ಮೂಲಕ ಇವುಗಳ ಅಭಿವ್ಯಕ್ತಿ ಕೇವಲ ಕಠಿಣವಷ್ಟೇ ಅಲ್ಲ, ಹಲವು ಸಲ ಅಶಕ್ಯವಾಗುವುದು.
ಶಬ್ದ – ಅರ್ಥಗಳಲ್ಲಿ ಪ್ರೇಮವ ಬಣ್ಣಿಸಲು ಅದು ನಿಲುಕದು; ಇಂಥ ಸತ್ಯವಿದೊಂದು, ಬಗೆವೊಡೆ ಹೇಳಲೇನೂ ಬಾರದು.
ಈ ದೃಷ್ಟಿಯಿಂದ ಅಭಿಮಾನಿಗಳು ಇದರಲ್ಲಿಯ ಶಬ್ದ ವಿನ್ಯಾಸ ಹಾಗು ವಾಕ್ಯರಚನೆಯ ದೋಷಗಳನ್ನು ಕಡೆಗಣಿಸಿ ಮೂಲಾರ್ಥವನ್ನು ತಿಳಿಯಲು ಪ್ರಯತ್ನಿಸುವುದೊಳಿತು. ಅದರಿಂದ ಸ್ವತಃ ಲಾಭ ಹೊಂದಿ ಅನ್ಯರಿಗೂ ಲಾಭ ಮಾಡಿಕೊಡಬೇಕು.
೮-೧೨-೧೯೪೬
ರಾಮಚಂದ್ರ