ಮುನ್ನುಡಿ

ಪ್ರಪಂಚವು ಈಗ ಹೊಸ ಜನನದ ವೇದನಾನುಭವದಲ್ಲಿದೆ. ಒಂದು ಹೊಸ ಮಾದರಿಯ ಸಂಸ್ಕೃತಿ ರೂಪುಗೊಳ್ಳುತ್ತಿದೆ. ವಿಜ್ಞಾನದ ಮಾರ್ಗಗಳು ಮಾನವನ ಗೊತ್ತು-ಗುರಿಗಳಿಗೆ ಒಂದು ಹೊಸ ಮೌಲ್ಯವನ್ನು ನಿರ್ಧರಿಸಲು ದಾರಿಮಾಡಿಕೊಟ್ಟಿವೆ. ಜನರು, ಸದ್ಯ ಎಲ್ಲರಿಗಾಗಿ ಜೀವನದ ಒಳ್ಳೆಯ ಉಪಾಯಗಳನ್ನು ಕುರಿತು ಯೋಚಿಸುತ್ತಿದ್ದಾರೆ; ಜೀವನವು ತಮಗಾಗಿ ಅಥವಾ ಕೆಲವರಿಗಾಗಿ ಮಾತ್ರ ಅಲ್ಲ, ಅದು ಎಲ್ಲರಿಗಾಗಿ ಎಂಬುದನ್ನು ಮನಗಾಣಲು ವಿವಶರಾಗಿದ್ದಾರೆ. ಆದರೂ ಆ ಗುರಿಯನ್ನು ತಲುಪಲು ಅಥವಾ ಕಲ್ಯಾಣ ರಾಜ್ಯವನ್ನು ಸ್ಥಾಪಿಸಲು ಅವರು ಅನುಸರಿಸಿರುವ ಸಾಧನ-ಗಳು ತೃಪ್ತಿಕರವಾಗಿಲ್ಲ. ತನ್ನ ವಿಕಾಸಕ್ಕಾಗಿ ಕೊಡಲಾಗಿದ್ದ ವಿವೇಕವನ್ನು ಮಾನವನು ಮಲಿನಗೊಳಿಸುತ್ತಾನೆ. ಇಷ್ಟಾದರೂ, ಮನುಷ್ಯನು ಸುಖವನ್ನರಸುತ್ತಿರುವನೆಂಬ ಮಾತು ಸತ್ಯವಾದುದು. ಈ ಸುಖಕ್ಕೂ ಮನಃಶಾಂತಿಗೂ ತೀರ ಹತ್ತಿರದ ಸಂಬಂಧವಿರುವಂತೆ ತೋರುತ್ತದೆ. ಮಾನವನು ತಾನು ಕೇವಲ ಮಾನವಕೋಟಿಯ ಈ ಬೃಹತ್‌ ಪ್ರಪಂಚಕ್ಕಷ್ಟೇ ಅಲ್ಲದೆ ಬೇರೆ ವಿಧವಾದ ಜೀವನ ಹಾಗು ಪ್ರಪಂಚಗಳಿಗೂ ಸಂಬಂಧಿಸಿರುವನೆಂಬುದನ್ನು ಮನಗಾಣಬೇಕು. ವಿಜ್ಞಾನವು ಅತ್ಯಂತ ವಿಶಾಲದಿಶೆಗಳು ನಮ್ಮ ಜ್ಞಾನದ ಮೇರೆಗಳನ್ನು ವಿಸ್ತರಿಸುತ್ತಿದೆ. ನಾವು ಬಹುಮಟ್ಟಿಗೆ ವಿಶಾಲತರವಾದ ಪ್ರಪಂಚವನ್ನು ಪ್ರವೇಶಿಸಲಾರಂಭಿಸಿದ್ದೇವೆ. ಆದರೆ ನಮ್ಮ ಮನಸ್ಸು ಅದಕ್ಕೆ ತಕ್ಕ ಪ್ರಮಾಣದಲ್ಲಿ ಆಲೋಚಿಸಲು ಅಸಮರ್ಥವಾಗಿದೆ. ಈ ಮರ್ತ್ಯಜಗತ್ತಿನೊಂದಿಗೂ ಅದು ನಮಗೆ ನೀಡುತ್ತಿರುವ ಆಶ್ವಾಸನಗಳೊಂದಿಗೂ ನಾವು ಹೊಂದಿಕೊಳ್ಳಲು ಅಶಕ್ತರಾಗಿದ್ದೇವೆ.

ಮನುಷ್ಯನು ತಾನು ನಿಜವಾಗಿಯೂ ಜೀವಿಗಳಲ್ಲಿ ಶ್ರೇಷ್ಠನೆಂದು ಭಾವಿಸಿದ್ದಾನೆ. ಕನಿಷ್ಠಪಕ್ಷ, ಈ ಜಗತ್ತಿನಲ್ಲಿ ತನ್ನನ್ನು ತಾನು ಕಂಡುಕೊಂಡು ತನ್ನ ಶರೀರ-ಪ್ರಾಣ-ಮನಸ್ಸುಗಳ ಬೇಡಿಕೆಗಳನ್ನು ಪೂರ್ಣಗೊಳಿಸುವುದರ-ಲ್ಲಾದರೂ ಸಮರ್ಥನೆಂದು ತಿಳಿದಿದ್ದಾನೆ. ಈ ದಿಶೆಯಲ್ಲಿ ಆತನ ಪ್ರಯತ್ನಗಳು ಸತತವಾಗಿ ನಡೆದೇ ಇದ್ದು ಅಭಿವೃದ್ಧಿಯ ಹೋರಾಟ, ಜೀವನದ ಸಂಘರ್ಷ ಹಾಗು ಶಾರೀರಿಕ ಬೇಡಿಕೆಗಳ ರೂಪದಲ್ಲಿ ಸುಖಪಡೆಯುವುದು ಇವುಗಳಿಗಾಗಿ ಮಿತಿಮೀರಿ ಶ್ರಮಿಸುತ್ತಿದ್ದಾನೆ. ಜಗತ್ತನ್ನು ತನ್ನ ಆವಶ್ಯಕತೆ ಗಳಿಗನುಸಾರವಾಗಿ ಪರಿವರ್ತಿಸಿಕೊಳ್ಳುತ್ತ ನಡೆದಿರುವ ಈಯೆಲ್ಲ ಸುಖಾನ್ವೇಷಣವು ಅಪ್ರಯೋಜಕವೆಂದೂ, ಈ ಸುಖಸಾಧನೆಯ ಅಸ್ಥಿರತೆಯನ್ನು ಇನ್ನೂ ಅರಿತುಕೊಳ್ಳಬೇಕಾಗಿದೆಯೆಂದೂ ಕೆಲ ಮಹಾಪುರುಷರು ಅಭಿಪ್ರಾಯಪಟ್ಟಿರುವುದು ನಿಜವಿದೆ. ಅಲ್ಲದೆ, ಕ್ಷಣಿಕಸುಖವು ನಿಜವಾದ ಸುಖವಲ್ಲವೆಂದು ಉಪದೇಶಿಸಿರುವುದೂ ಸತ್ಯವೇ. ಎಲ್ಲ ಸುಖದ ಕ್ಷಣಿಕತ್ವವೇ ಮಾಯೆಯೆಂದು ಅವರು ವ್ಯಾಖ್ಯಾನಮಾಡಿರುವುದೂ ನಿಜ. ಅನಂತವಾದ ಶಾಶ್ವತ ಸುಖದ ಶೋಧವೇ ನಿಜವಾದ ಶೋಧ. ಇದಕ್ಕಾಗಿ ಕ್ಷಣಿಕಸುಖದ ಅಥವಾ ಕ್ಷಣಿಕ ಯಶಸ್ಸಿನ ಶೋಧವನ್ನು ಬಿಟ್ಟುಕೊಡಬೇಕಾಗುವುದು. ಆದರೆ ಮನುಷ್ಯನು, ತಾನು ತಿಳಿದುಕೊಂಡಂತೆ ಅತಿ ದೂರದ ಶಾಶ್ವತಸುಖಕ್ಕಾಗಿ ಕೈಯಲ್ಲಿದ್ದ ಕ್ಷಣಿಕ ಸುಖದ ಶೋಧವನ್ನು ತ್ಯಜಿಸಲು ಸಿದ್ಧನಿಲ್ಲ. ಶಾಶ್ವತ ಸ್ವಾತಂತ್ರ್ಯಕ್ಕಾಗಿ ಸದ್ಯದ ಬಂಧನವನ್ನು ತ್ಯಜಿಸುವುದಕ್ಕಿಂತ, ಸಂತೋಷಕರವಾಗಿದ್ದ ಈ ಬಂಧನವೇ ಲೇಸು. ಅದರಂತೆ, ಅನಂತದ ಪ್ರಾಪ್ತಿಯ ಆಸೆಗಾಗಿ ವೈಯಕ್ತಿಕ ಪರಿಮಿತಿಯನ್ನು ಬಿಟ್ಟುಕೊಡುವುದು ಅಶಕ್ಯವೇ ಆಗಿದೆ.

ಜನರು ಖಂಡಿತವಾಗಿ ಇಷ್ಟ ಪ್ರಾಪ್ತಿಯ ಬೇರೆ ಉಪಾಯವನ್ನು ಕಂಡುಕೊಂಡಿದ್ದಾರೆ. ಉಭಯಲೋಕಗಳಿಗೂ ಅಗತ್ಯವಿರುವ ಮಾನವ ಸ್ವಭಾವದ ಇಬ್ಬಗೆಯ ಬೇಡಿಕೆಯಿಂದಾಗಿ ಲೌಕಿಕದಲ್ಲಿ ಶಾಶ್ವತತೆಯನ್ನು, ಸಾಂತದಲ್ಲಿ ಅನಂತವನ್ನು, ಸಸೀಮದಲ್ಲಿ ಅಸೀಮವನ್ನು, ಜಡತ್ವದ ಗರ್ಭದಲ್ಲಿ ಚೈತನ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಹವಣಿಸುತ್ತಾರೆ. ಮನುಷ್ಯನ ಐಹಿಕ ಹಾಗು ಆಮುತ್ಮಿಕ ಅಭಿಲಾಷೆ ಅಥವಾ ಇಚ್ಛೆಗಳಿಗೆ ನ್ಯಾಯದಾನಮಾಡುವ ಹಲವಾರು ವರ್ಶನಗಳು ಬೆಳೆದುಬಂದಿವೆ. ಇಂಥ ಇಚ್ಛೆ ಅಥವಾ ಅಭಿಲಾಷೆಗಳಿಗಧೀನವಾಗಿಯೆ ದರ್ಶನಗಳು ರೂಪಗೊಂಡಿವೆಯೆಂಬ ಸಂಗತಿ ಅವುಗಳ ವಿಚಾರಸರಣಿಯ ಮನೋವೈಜ್ಞಾನಿಕ ಮೂಲಗಳನ್ನು ಪ್ರಕಟಗೊಳಿಸುತ್ತದೆ. ಲೌಕಿಕವೇ ಆಗಲಿ ಶಾಶ್ವತವೇ ಆಗಲಿ, ಎಲ್ಲ ಸುಖಾಧಿಕಾರವನ್ನು ಬಿಟ್ಟ ಹೊರತು ಸತ್ಯವು (Reality) ಧೈಯವಾಗಲಾರದೆಂಬುದನ್ನು ಒಪ್ಪಿ ಕೊಂಡರೂ, ಇಂಥ ವಿಚಾರಪ್ರಣಾಲಿಯು ಧೈಯಾಭಿಮುಖವಾದ ಪ್ರೇರಣೆಯಿಂದ ಸ್ವತಃ ಮುಕ್ತವಾಗಿಲ್ಲವೆಂಬುದು ನಿಜವಾಗಿದೆ. ಸುಖ, ಸಂತೋಷ, ಅಥವಾ ಶಕ್ತಿ – ಈ ಯಾವ ಉದ್ದೇಶಗಳಿಗಾಗಿಯೂ ಪರಿಮಿತವಾದ ಹಾಗು ದೂಷಿತಗೊಂಡ ಆಕಾಂಕ್ಷೆಗಳಿಲ್ಲದೆ ಸತ್ಯವನ್ನು ತಿಳಿಯಬೇಕು. ಅದನ್ನು ಅದಕ್ಕೋಸ್ಕರವಾಗಿಯೇ ಅದು ಇದ್ದ ಸ್ಥಿತಿಯಲ್ಲಿಯೇ ಅರಿತುಕೊಳ್ಳಬೇಕು. ಅದೇ ತನ್ನ ನಿಜವಾದ ಇರವಿನ ಹಾಗು ಸತ್-ತತ್ತ್ವದ ನಿಯಮ. ಮನುಷ್ಯನು ತನ್ನ ಸತ್ಯವೇ ಅತ್ಯಂತ ಮಹತ್ವದ್ದೆಂದು ಬಗೆಯುವನು; ಮತ್ತು ಆ ಸತ್ಯದ ಸಾಕ್ಷಾತ್ಕಾರವೇ ಆತನ ಅಸ್ತಿತ್ವದ ಮೂಲ ಪ್ರೇರಣೆ- ಯಾಗಿದೆ. ಸುಖ, ಸಂತೋಷ, ಶಕ್ತಿ ಮುಂತಾದುವೆಲ್ಲ ತನ್ನ ಸತ್ಯ ಸಾಕ್ಷಾತ್ಕಾ ರದ ಮುನ್ನಡೆಯಲ್ಲಿ ಸಾಧನಗಳೆಂದು ಪರಿಗಣಿತವಾಗಿ ಸಮರ್ಪಣ ಹೊಂದುವುವು.

ಈ ಸತ್ಯಪ್ರಜ್ಞೆಯನ್ನು ಪಡೆಯುವ ವಿಧಾನಗಳು ತೀರ ಪ್ರಾಚೀನ-ವಾಗಿದ್ದು ಮನುಷ್ಯನ ಇಬ್ಬಗೆಯ ಗುರಿಗಳಿಂದಾಗಿ ಅವುಗಳ ಫಲಗಳೂ ಬೇರೆ ಬೇರೆಯಾಗಿದ್ದುವು. ತನ್ನನ್ನು ತಾನು ಅರಸಿದಾಗಲೇ ತನ್ನ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಏತದ್ವಿರುದ್ಧವಾಗಿ, ತನ್ನನ್ನು ಪ್ರಪಂಚ-ದಲ್ಲಿಯೂ ಪ್ರಪಂಚವನ್ನು ತನ್ನಲ್ಲಿಯೂ ಸಾಕ್ಷಾತ್ಕರಿಸಿಕೊಳ್ಳಲು ಪ್ರಪಂಚದ ಕಡೆಗೆ ತಿರುಗಿದಾಗ ಇದು ಸಾಧ್ಯವಾಗಲಾರದು. ಹಲವಾರು ದರ್ಶನಗಳು ತಮ್ಮ ತಮ್ಮ ಪದ್ಧತಿಗಳನ್ನು ರೂಪಿಸಿಕೊಂಡಿದ್ದರೂ ಅವು ಸತ್ಯಪ್ರಜ್ಞೆಯ ಕಡೆಗೆ ದಾರಿತೋರುವುದರಲ್ಲಿ ವಿಫಲವಾಗಿವೆ. ಅವುಗಳ ಸಹಾಯದಿಂದ ಮುಕ್ತಿ ಪಡೆಯುವುದೂ ಸಾಧ್ಯವಾಗಲಿಲ್ಲ.

ಅನಂತದ ವೈಯಕ್ತಿಕ ಅನುಭವವನ್ನೇ ಮತ್ತೆ ಅರಸಿಬರುವುದು ತುಂಬ ಅಗತ್ಯವಾಗಿದೆ. ಸಿದ್ದಾಂತ, ತರ್ಕ, ಪ್ರಮಾಣಾದಿಗಳಿ೦ದ ಬೇಸತ್ತ ಬಹುಜನರು, ಅಸ್ತಿತ್ವದ ಜೀವಾಳವನ್ನು ಸಾಕ್ಷಾತ್ಕರಿಸಿಕೊಟ್ಟು ಅನುಭವ ಮತ್ತು ಅಂತರ್ಜ್ಞಾನವನ್ನು ತಂದುಕೊಡುವ ಪದ್ಧತಿಯ ಕಡೆಗೆ ತಿರುಗಹತ್ತಿ-ದ್ದಾರೆ. ಅನುಭವವು ಯಾವ ಸಮಸ್ಯೆಯನ್ನೂ ಬಿಡಿಸಲಾರದೆಂದೂ, ಸಿದ್ಧಾಂತಗಳ ಸಾಧನ ಅಥವಾ ಪದ್ಧತಿಗಳಲ್ಲಿ ಬರಿಯ ನಂಬುಗೆಯೆ ಸಾಕಾಗುವುದೆಂದೂ, ವೈಯಕ್ತಿಕ ಅನುಭವವು ಕೇವಲ ಮೃಗಜಲವೆಂದೂ ತಿಳಿಯುವವರು ಕೆಲವರಿದ್ದಾರೆ. ಹೀಗೆ ಭಾವಿಸುವವರೊಂದಿಗೆ ನಾವು ಸಮ್ಮತಿಸುವುದಿಲ್ಲ; ಮತ್ತು ಮನುಷ್ಯನು ಎಂದಿನಿಂದಲೂ ಸಮ್ಮತಿಸಿಲ್ಲ. ಈ ವೈಯಕ್ತಿಕ ಅನುಭವವು ಅತ್ಯುನ್ನತ ಮಟ್ಟದ್ದಿದ್ದು ಸತ್ಯವಾಗಿರಬೇಕು; ಚಿತ್ರಭ್ರಮಣೆಯ ಪರಿಣಾಮವಾಗಲಿ ಮನಸ್ಸಿನ ಪ್ರಕ್ಷೇಪಗಳಾಗಲಿ ಆಗಿರಕೂಡದೆಂಬುದು ಮಾತ್ರ ನಿಜ. ಚಿತ್ತಭ್ರಮವು ಯಥಾರ್ಥಾನುಭವವನ್ನಾಕ್ರಮಿಸುವ ಒಂದು ಬಗೆಯ ಮಾಯಾನುಭೂತಿಯೇ ಸರಿ.

ಉನ್ನತಸ್ತರದ ಪ್ರಜ್ಞೆ ಅಥವಾ ಸತ್ಯದಲ್ಲಿ ಮನುಷ್ಯನ ವಿಕಾಸವಾಗ-ಬೇಕೆಂಬುದೇ ನಮ್ಮ ಪ್ರಯತ್ನವಾಗಿದೆ. ಈ ವಿಕಾಸವು ಮನುಷ್ಯನನ್ನೊಳಗೊಂಡ ಕೆಳಮಟ್ಟದ ಜೀವಜಾತಿಗಳಿಗೆ ಯೋಗ್ಯವಾದ ಹಳೆಯ ವಿಧಾನಗಳಿಂದ ಪ್ರಾಪ್ತವಾಗಲಾರದೆಂಬುದು ಸ್ಪಷ್ಟವಾಗಿದೆ. ಖಂಡಶಃ ಗ್ರಹಿಸುವುದಕ್ಕಿಂತ ಎಲ್ಲವನ್ನೂ ಪ್ರಜ್ಞೆಯ ಒಂದೇ ವ್ಯೂಹದಲ್ಲಿ ಅಖಂಡವಾಗಿ ಗ್ರಹಿಸಬಲ್ಲ ವಿಶ್ವ- ಪ್ರಜ್ಞೆಯ ಅಥವಾ ಅಂತರ್ಜ್ಞಾನದ ವಿಕಾಸವಾಗಲಿ, ಎಲ್ಲ ಜ್ಞಾನವನ್ನು ಸಮನ್ವಯಗೊಳಿಸಿ ಸತ್ಯವನ್ನು ಇಡಿಯಾಗಿ ಕಾಣುವ ದೃಷ್ಟಿಯ ವಿಕಾಸವಾಗಲಿ ದೈವೀ ವರವಾಗಿದ್ದು ಅದನ್ನು ಕೇವಲ ಅಭೀಷ್ಟೆಯ ಸಹಜೋಪಾಯಗಳಿಂದ ಪಡೆಯಲಾಗುವುದಿಲ್ಲ. ತನ್ನ ಆವಶ್ಯಕತೆಗಳಿಗನುಸಾರವಾಗಿ ಪರಿಸರವನ್ನು ಹೊಂದಿಸಿಕೊಳ್ಳಬಲ್ಲ ಮನುಷ್ಯನ ಅಪರಿಮಿತ ಸಾಮರ್ಥ್ಯದ ಮೂಲಕ-ವಾಗಿಯೂ, ಒಂದು ವಿಧದಿಂದ ಸುಪ್ತವಾಗಿದ್ದ ತನ್ನ ಶಕ್ತಿ-ಸಾಮರ್ಥ್ಯಗಳನ್ನು ವಿಚಾರಪರತೆ, ಬುದ್ಧಿಶಕ್ತಿ, ಪ್ರವೃತ್ತಿ, ಸಮೀಹೆ, ಚೇತನತೆ, ಸೃಜನಾತ್ಮಕ ಕಲ್ಪನೆ, ಸಹಕಾರವೃತ್ತಿ ಹಾಗು ಸಾಮಾಜಿಕ ಐಕ್ಯ ಮುಂತಾದವುಗಳನ್ನು ಈಗಾಗಲೇ ಮಾಡಿದಂತೆ ಜಾಗೃತಗೊಳಿಸುವುದರ ಮೂಲಕವಾಗಿಯೂ ನೈಸರ್ಗಿಕ ವಿಕಾಸದಿಂದಲೇ ಸಾಧಿಸಬೇಕೆಂದು ವಿಜ್ಞಾನವು ಅಪೇಕ್ಷಿಸುತ್ತದೆ. ಆದರೆ ಜೀವನದ ಉತ್ಮಮಣವಾದರೋ ವಿರಾಮಗಳಿಂದ ಕೂಡಿದೆ. ಈ ವಿರಾಮ ಅಥವಾ ಜಿಗಿತಗಳು ಜೀವನವನ್ನು ಮೇಲಕ್ಕೆತ್ತಲು ಅದರ ಕಡೆಗೆ ವಾಲಿದ ಊರ್ಧ್ವಶಕ್ತಿಯ ಅಥವಾ ಸ್ವಪ್ರೇರಕಶಕ್ತಿಯ ಮೂಲಕ ಉಂಟಾಗಿ- ವೆಯೋ ಹೇಗೆಂದು ಆಶ್ಚರ್ಯಪಡಬಹುದಾಗಿದೆ. ಮನುಷ್ಯನ ಧಾರ್ಮಿಕ ಅನುಭವವು ಅದರೆಡೆಗಿನ ವಿಶ್ವಪ್ರಜ್ಞೆಯ ಅಥವಾ ಅಚಿಂತ್ಯ ದೈವೀಕೃಪಾ ಪ್ರಜ್ಞೆಯ ಈ ಒಲವನ್ನು ತೋರಿಸಿಕೊಡುತ್ತದೆ. ಈ ಪ್ರಕಾರ, ವಿಕಾಸಕ್ರಮದಲ್ಲಿ ಈ ದೈವಿಕತೆ ಮತ್ತು ಮಾನವೀಯತೆಯ ಸಂಮಿಲನವನ್ನು ಮೊಟ್ಟೆ – ಮೊದಲಬಾರಿಗೆ ಮಾನವನಲ್ಲಿ ಶಕ್ಯಗೊಳಿಸಬೇಕಾಗಿದೆ. ಆದರೆ ಅಂತಿಮಪ್ರಜ್ಞೆ ಅಥವಾ ಅಂತಿಮ ಅಸ್ತಿತ್ವದೆಡೆಗೆ ಜಿಗಿಯಬೇಕಾದರೆ ತುಂಬ ದಾರಿಯನ್ನು ಕ್ರಮಿಸಬೇಕು. ಮನುಷ್ಯನ ನೈಸರ್ಗಿಕ ವಿಕಾಸವು ಆತನ ಜೀವನದಲ್ಲಿ ತನಗಿಂತ ಬಹಳ ಶ್ರೇಷ್ಠವಾದ ಹಾಗು ವಿಶಾಲವಾದ ಶಕ್ತಿಯೊಂದು ತನ್ನ ಕೈಹಿಡಿಯುವುದೆಂಬುದನ್ನು ಸ್ಪಷ್ಟಗೊಳಿಸುತ್ತದೆ. ಇದೇ ಆಧ್ಯಾತ್ಮದ ಆರಂಭ. ಅಂತಿಮ ಸತ್ಯದೆಡೆಗಿನ ತನ್ನ ಈ ಪ್ರೇರೇಪಣೆಯನ್ನು ಆತ್ಮವು ಬಲವಾದ ಪ್ರೇರಣೆ- ಯೆಂದು ಅದಕ್ಕೆ ಸಂಮುಖವಾಗಿ ನಿಂತಿದೆ. ಇದರ ಹೊರತು ಆತ್ಮಕ್ಕೆ ಯಾವ ಭವಿಷ್ಯವೂ ಇಲ್ಲ; ರಕ್ಷಣೆಯೂ ಇಲ್ಲ.

ಇದು ಆತ್ಮಜ್ಞಾನಕ್ಕೆ, ಪರಿಪೂರ್ಣತೆಗೆ, ಸಿದ್ಧಿಗೆ ಮತ್ತು ಅಂತಿಮಸುಖ ಹಾಗು ಆನಂದಕ್ಕೆ ಆಹ್ವಾನವಾಗಿದೆ. ಎಲ್ಲಕ್ಕೂ ಮಿಗಿಲಾಗಿ ತನ್ನ ಮೂಲ ಸ್ವಭಾವದಲ್ಲಿ ಜಾರುವಂತೆ ತೋರುತ್ತಿರುವ ಆತ್ಮದ ಅಥವಾ ಸತ್ಯದ ಸಾಕ್ಷಾತ್ಕಾರ ಮತ್ತು ಅನುಭವಗಳಿಗೆ ಕರೆಯಾಗಿದೆ.

ಪ್ರಜ್ಞೆಯ ಉನ್ನತ ಸ್ತರಗಳಾದ ಪ್ರಜ್ಞಾನ ಹಾಗು ಕೇವಲ ಚೈತನ್ಯದ ಅನುಭವಘಟ್ಟಕ್ಕೆ ಮನುಷ್ಯನನ್ನು ಎತ್ತುವುದರಲ್ಲಿ ಪರಮಾತ್ಮನ ಸಹಾಯ ಅಗತ್ಯವೆಂಬುದನ್ನು ಭಾರತದ ದೃಷ್ಟಾರರು ಬಹುಕಾಲದ ಹಿಂದೆಯೇ ಮನಗಂಡಿದ್ದರು. ಪರಾಮನಸ್ಸು ಮಾನವೀಯ ಮನ ಹಾಗು ಊರ್ಧ್ವ ಮನಕ್ಕಿಂತಲೂ ತುಂಬ ಮೇಲಿನ ಘಟ್ಟಗಳಿಗೆ ಸೇರಿದ್ದು, ಪಿಂಡ, ಬ್ರಹ್ಮಾಂಡ ಮತ್ತು ಪರಬ್ರಹ್ಮಾಂಡಗಳೆಂಬ ಅಸ್ತಿತ್ವದ ಸ್ತರಗಳಿವೆ. ಇವುಗಳನ್ನೆಲ್ಲ ಮೀರಿ ಆಚೆಗಿರುವುದನ್ನು ಷಾಹಜಹಾನ್‌ಪೂರದ ಶ್ರೀ ರಾಮಚಂದ್ರಜಿ ಮಹಾರಾಜರು ಕೇಂದ್ರ ಹಾಗು ಕೇಂದ್ರಮಂಡಲವೆಂದು ಕರೆದಿದ್ದಾರೆ. ಇದಕ್ಕೂ ಭೂಃ, ಭವಃ, ಸ್ವಃ, ಮಹಃ, ಜನಃ, ತಪಃ ವತ್ತು ಸತ್ಯಂ ಎಂದು ವರ್ಣಿತವಾದ ಲೋಕಗಳಿಗೂ ನಾವು ಸಾಮ್ಯವನ್ನು ಕಲ್ಪಿಸಬಹುದು. ಪ್ರತಿಯೊಂದು ಸ್ತರದಲ್ಲಿಯೂ ಆಯಾ ಸ್ತರಕ್ಕೆ ತಕ್ಕಂತೆ ಪ್ರಜ್ಞೆಯು ಉನ್ನತಮಟ್ಟದ್ದಿರುತ್ತದೆ; ಮತ್ತು ಕೆಳಗಿಳಿದಂತೆಲ್ಲ ಅದು ರೂಪಾಂತರ ಅಥವಾ ತಿರುವುಗಳನ್ನು ಹೊಂದಿ ಪರಿಮಿತಿಯನ್ನು ಪಡೆಯುತ್ತದೆ. ಈ ಪ್ರಕಾರ, ಅದು ಹಲವಾರು ಗ್ರಂಥಿ ಅಥವಾ ಚಕ್ರಗಳನ್ನು ನಿರ್ಮಿಸುತ್ತದೆ. ಕೇಂದ್ರವು ರಚನೆಯಾದಂತೆಲ್ಲ ಆಯಾ ಕೇಂದ್ರ-ಗಳ ನಿಯಮಗಳಿಗನುಸಾರವಾಗಿ ಚೈತನ್ಯಶಕ್ತಿಯ ಹಂಚಿಕೆಯಾಗುತ್ತದೆ.

ಹಾಗಾದರೆ, ಆತ್ಮಸಾಕ್ಷಾತ್ಕಾದ ಯೋಗವು ಅಸ್ತಿತ್ವದ ಮತ್ತು ಚೈತನ್ಯದ ಎಲ್ಲ ಸ್ತರಗಳ ಆಚೆಗಿರುವ ಅತ್ಯುನ್ನತಸ್ಥಿತಿಯನ್ನು ಪಡೆಯಬೇಕೆ೦ದು ಅಪೇಕ್ಷಿಸುತ್ತದೆ ಎಂದಂತಾಯಿತು. ಇದು ಸಾಧ್ಯವೋ ಹೇಗೆಂಬ ಪ್ರಶ್ನೆ ಬರುವುದು. ಮನುಷ್ಯನು ಮುಂದುವರಿಯುತ್ತ ಮಾನವನ ಸ್ವರದಿಂದ ಪರಾಮನಸ್ಸಿನ ಅತಿಮಾನವಸ್ತರಕ್ಕೇರಿ ಅತ್ಯುನ್ನತ ಘಟ್ಟವನ್ನು ಮುಟ್ಟುವ ಆರೋಹಣಕ್ರಮದ ಪದ್ಧತಿ ಇದಲ್ಲವೆ – ಎಂಬುದು ಎರಡನೆಯ ಪ್ರಶ್ನೆ. – ಕ್ರಮವಿಕಾಸತತ್ತ್ವದ ಪರವಾಗಿ ಬೇಕಾದಷ್ಟು ಹೇಳಬಹುದು. ಅತ್ಯುನ್ನತ ಘಟ್ಟದ ಅಸ್ತಿತ್ವ ಹಾಗು ಅದನ್ನು ತಲುಪುವ ಅವಶ್ಯಕತೆ – ಇವನ್ನು ಮನಗಂಡದ್ದಾದರೆ ಮನುಷ್ಯನ ಆತ್ಮವು ತತ್ಕಾಲವೇ ಅಲ್ಲಿ ಪ್ರವೇಶ ಪಡೆಯಲು ಸಾಧ್ಯವೆಂದು ಶ್ರೀ ರಾಮಚಂದ್ರಜಿ ಮಹಾರಾಜರು ಭರವಸೆ ನೀಡುತ್ತಾರೆ. ಅಂತಿಮವಾದ ಕೇಂದ್ರಸತ್ಯವನ್ನು ಸಾಕ್ಷಾತ್ಕರಿಸಿಕೊಂಡವರ ಮಾರ್ಗದರ್ಶನದಲ್ಲಿ ಕೈಕೊಳ್ಳುವ ಯೋಗಾಭ್ಯಾಸದಿಂದ ಇದು ಮತ್ತಷ್ಟು ಸುಲಭವಾಗುವುದು. ವ್ಯಕ್ತಿಯ ವಿಕಾಸವು ತ್ವರಿತಗತಿಯಿಂದಾಗುವುದಲ್ಲದೆ ಆ ಉನ್ನತಮಟ್ಟದ ಪ್ರಜ್ಞೆಯಿಂದ ಶುದ್ದಿ ಹೊಂದಿ ಪ್ರತಿಯೊಂದು ಕಣವೂ ರೂಪಾಂತರಗೊಂಡ ಇದೇ ಮನುಷ್ಯ ದೇಹದಲ್ಲಿಯೆ ಅದು ಸಾಧ್ಯವಾಗುವುದು.

ಹೀಗೆ, ಪರಾಶಕ್ತಿಯು ಮಾನವ ಹೃದಯದಲ್ಲಿ ಅವತರಿಸಿ ಅದನ್ನು ಶುದ್ಧಗೊಳಿಸಿ ಆತ್ಯುನ್ನತಸ್ಥಿತಿಯಲ್ಲಿ ಅದನ್ನು ನೆಲೆಗೊಳಿಸಬಲ್ಲುದು. ಮಾನವ ದೇಹದಲ್ಲಿಯ ಕೆಲ ಕೇಂದ್ರಗಳು ಬ್ರಹ್ಮಾಂಡ ಹಾಗು ಪರಬ್ರಹ್ಮಾಂಡ ಮಂಡಲಕ್ಕೆ ಸರಿಸಮಾನವಾಗಿದ್ದು ಅವು ದೈವೀಶಕ್ತಿಯ ಪ್ರಾಣಾಹುತಿಯನ್ನು ಗ್ರಹಿಸುವಂತೆ ರಚಿತವಾಗಿವೆ. ಮಾನವದೇಹವು ನರಮಂಡಲ, ರಕ್ತಪರಿಚಲನ ಹಾಗು ಇತರ ವ್ಯೂಹಗಳಲ್ಲಿ ಶುದ್ಧತೆಗೊಂಡು ಇದೇ ದೇಹದಲ್ಲಿಯೇ ಶಾಂತಿಯನ್ನೂ ಶಕ್ತಿಯನ್ನೂ ಇವೆಲ್ಲಕ್ಕೂ ಆತೀತವಾದುದನ್ನೂ ಅನುಭವಿಸಬಲ್ಲುದು. ಆದರೆ ಈ ರಾಜಯೋಗಮಾರ್ಗದಲ್ಲಿ ಪ್ರವೀಣನಾದವನಿಂದ ತರಬೇತಿ ಮಾತ್ರ ಅಗತ್ಯ ಬೇಕು.

ಶ್ರೀ ರಾಮಚಂದ್ರಜಿಯವರು ‘ಸಹಜಮಾರ್ಗದ ಹತ್ತು ನಿಯಮಗಳ ವ್ಯಾಖ್ಯಾನ’ವೆಂಬ ಈ ಪುಸ್ತಕದಲ್ಲಿ ಅಂತಿಮ ಸಾಕ್ಷಾತ್ಕಾರಕ್ಕೆ ಬೇಕಾಗುವ ನಿಯಮ ನಿಬಂಧನೆಗಳನ್ನು ವಿವರಿಸಿದ್ದಾರೆ. ಈ ನಿಯಮಗಳನ್ನು ಪ್ರತಿಯೊಬ್ಬನೂ ಹಾರ್ದಿಕವಾಗಿ ಆಚರಿಸಬೇಕು. ಅವು ಕೇವಲ ಸ್ಟೇಚ್ಛೆಯಿಂದ ಕೊಟ್ಟ ಆಜ್ಞೆಗಳಲ್ಲ; ಮುಟ್ಟಬೇಕಾದ ಗುರಿಯನ್ನು ಕುರಿತು ಸ್ಪಷ್ಟವಾದ ಹಾಗೂ ಸಯುಕ್ತಿಕವಾದ ವಿವರಣೆಯೂ ಅವುಗಳಲ್ಲಿದೆ. ಅಂತಿಮ ಧ್ಯೇಯರವನ್ನು ತಲುಪುವ ಕಳಕಳಿಯಿದ್ದರೆ ಮಾತ್ರ ಅವನ್ನು ಆಚರಣೆಯಲ್ಲಿ ತರುವುದು ಸುಲಭ.

ಪ್ರಾರ್ಥನೆಯ ಸರಳ ಸೂತ್ರವು ನಮ್ಮ ಈ ಶೋಧದಲ್ಲಿಯ ಉದ್ದೇಶ- ವನ್ನು ತಿಳಿಸಿಕೊಡುತ್ತದೆ. ಏಕಮಾತ್ರ ಸ್ವಾಮಿಯಾದ ದೇವರೇ ನಮ್ಮ ಗುರಿ. ಆತನೇ ನಮ್ಮನ್ನು ಧ್ಯೇಯದತ್ತ ನಡೆಸಬಲ್ಲನು. ನಮ್ಮ ಇಚ್ಛೆಗಳು ಉದ್ದೇಶ ಪ್ರಾಪ್ತಿಯಲ್ಲಿ ಆತಂಕವನ್ನು ಒಡ್ಡಿ ವಿರೋಧಿಗಳಾಗಿ ನಿಲ್ಲುತ್ತವೆ. ಸರ್ವಶಕ್ತನಾದ ಭಗವಂತನಿಗೆ ಅನನ್ಯವಾಗಿ ಶರಣುಹೋಗುವುದು ತೀರ ಅಗತ್ಯವಾಗಿದೆ. ಏಕೆಂದರೆ ಆತನು ಉಪಾಯ ಹಾಗೂ ಉಪೇಯ ಎರಡೂ ಆಗಿರುವನು. ನಮ್ಮನ್ನು ಮುನ್ನಡೆಸುವ ಗುರು ಪರಮಾತ್ಮನಲ್ಲಿ ಎಷ್ಟು ಮಟ್ಟಿಗೆ ಲೀನನಾಗಿರುವನೆಂದರೆ, ಸಹಾಯಕ್ಕಾಗಿ ಕೈನೀಡಿ ಒದ್ದಾಡುತ್ತಿರುವ ಜೀವಕ್ಕೆ ಆತನು ಪರಮಾತ್ಮನ ಅವತಾರವೇ ಹೊರತು ಬೇರೆ ಅಲ್ಲ.

ಸಾಧನದ ಪ್ರಾಚೀನಪದ್ಧತಿಗಳನ್ನು ಸುಂದರವಾಗಿ ತಿಳಿಸಿಕೊಟ್ಟು ಪ್ರಾತಃ ಕಾಲ, ಹಾಗು ಮಧ್ಯಾಹ್ನ ಹಾಗು ಸಾಯಂ ಸಂಧ್ಯೆಗಳಲ್ಲಿ ಪೂಜೆ ಹಾಗು ಧ್ಯಾನದ ಅಗತ್ಯವನ್ನು ತರ್ಕಬದ್ಧವಾಗಿ ತೋರಿಸಿಕೊಡಲಾಗಿದೆ. ಯೋಗದ ಅಂಗಗಳನ್ನು ತಿಳಿಯಾಗಿ ನಿರೂಪಿಸಲಾಗಿದ್ದು ಸಹಜವಾದ ಆಧಾತ್ಮಿಕ ಸಾಧನಗಳನ್ನು ಗುರಿಯೊಂದಿಗೆ ಹೇಗೆ ಹೊಂದಿಸಿಕೊಳ್ಳಬೇಕೆಂಬುದನ್ನು ಸರಳವಾಗಿ ಹಾಗು ನೇರವಾಗಿ ಹೇಳಲಾಗಿದೆ. ಗುರುವಿನ ಪ್ರಾಣಾಹುತಿಯಿಂದುಂಟಾಗುವ ಅಂತಃಕರಣ ಶುದ್ದಿಯು ಇತ್ತೀಚಿನ ಕಾಲದ ಆಧ್ಯಾತ್ಮಿಕ ಇತಿಹಾಸದಲ್ಲಿಯೆ ಕಾಣಸಿಗದ ಸಿದ್ಧಿಯಾಗಿದೆ. ದೇವರಿಗಾಗಿ ದೇವರಿಂದ, ದೇವರಲ್ಲಿ ಜೀವಿಸುವುದು ಸಹಜಮಾರ್ಗಸಾಧನೆಯ ಪಲ್ಲವಿಯಾಗಿದೆ. ಇದು ಸಹಜವಾಗಿಯೆ ದೇವರಿಗಾಗಿ ದೇವರಲ್ಲಿ ತನ್ನ ಸತ್ಯದ ಸಾಕ್ಷಾತ್ಕಾರಕ್ಕೆ ದಾರಿಮಾಡಿ ಕೊಡುವುದು. ಅದರಂತೆ ಸಾಧಕನು ಯಾವ ಭೇದಭಾವವೂ ಇಲ್ಲದೆ ಎಲ್ಲರೊಂದಿಗೂ ಸಮರಸವಾಗುವನು. ದೇವರಿಗಾಗಿಯೇ ದೇವರಲ್ಲಿ ಜೀವಿಸುವವನಿಗೆ ಊರ್ಧ್ವಲೋಕಗಳು ಮುಕ್ತದ್ವಾರವಾಗಿವೆ. ಆಧ್ಯಾತ್ಮವು ಮತಧರ್ಮದಂತೆ ಕೇವಲ ಒಂದು ಪೂಜಾ ವಿಧಾನವಾಗಲಿ ಆಚಾರಗಳ ತಂತ್ರವಾಗಲಿ ಅಲ್ಲ. ದೇವರ ಅರಿವಿನಲ್ಲಿ ಹಾಗು ಆತನ ಸತ್ಯದಲ್ಲಿ ಜೀವಿಸುವುದೇ ಅಧ್ಯಾತ್ಮ.

ಸಹಜಮಾರ್ಗದ ನಿಯಮಗಳನ್ನು ಪಾಲಿಸುವುದರಿಂದ ವ್ಯಕ್ತಿಯ ಆತ್ಮವು ಪ್ರಥಮ ಸಂಪರ್ಕದಲ್ಲಿಯೆ ತಿಳಿವನ್ನು ಮೀರಿದ ಶಾಂತಿಯನ್ನು ಅನುಭವಿಸಿ ಈ ಶಾಂತಿಯಲ್ಲಿ ಬೆಳೆಯುತ್ತ ಪರಾಕಾಷ್ಠೆಯನ್ನು ತಲುಪಲು ಹೇಗೆ ಸಾಧ್ಯವೆಂಬುದನ್ನು ಶ್ರೀ ರಾಮಚಂದ್ರಜಿಯವರು ತೋರಿಸಿಕೊಟ್ಟಿದ್ದಾರೆ. ಮೋಕ್ಷವೆಂಬುದು ಈ ಅಭ್ಯಾಸದ ಸಹಜ ಪರಿಣಾಮ. ದೈವೀ ಸಂಕೇತವಿದ್ದವ ರಿಗೆ ಪರಿಪೂರ್ಣತೆಯೂ ಲಭಿಸಬಲ್ಲುದು.

ಈ ವಿವರಣೆಯಲ್ಲಿ ಸ್ವಲ್ಪ ಭೌತ ವಿಜ್ಞಾನವೂ ಅಧ್ಯಾತ್ಮವೂ ಬಂದಿವೆ. ಅದನ್ನು ಕುರಿತು ಚರ್ಚಿಸುವುದು ಅಷ್ಟು ಮಹತ್ತ್ವದ್ದಲ್ಲ. ಅಭ್ಯಾಸದಲ್ಲಿ ಮುಂದುವರಿದಂತೆ ಅದು ತಾನಾಗಿಯೆ ಸ್ಪಷ್ಟವಾಗುವುದು.

ಮನುಷ್ಯನ ಸ್ವಭಾವವು ಸಂಪೂರ್ಣ ಪರಿವರ್ತನವಾಗಬೇಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆತನ ಸಿದ್ಧಿಯು ಹೆಚ್ಚು ಹೆಚ್ಚು ಸತ್ಯವೆಂದು ಅನುಭವಕ್ಕೆ ಬರಬೇಕಾದರೆ ಆತನು ವಿಶ್ವ ಹಾಗು ವಿಶ್ವಾತೀತ ಸತ್ಯದ ಮಾರ್ಗದರ್ಶನಕ್ಕೊಳಗಾಗಬೇಕು. ಕೇಂದ್ರ ಅಥವಾ ಅಂತಿಮ ಗುರಿಯನ್ನು ಸಮೀಪಿಸಿದಂತೆಲ್ಲ ಆತ್ಮಸತ್ಯವೂ ಹೆಚ್ಚುತ್ತ ಹೋಗಿ ಹಿಂದೆ ಗತಿಸಿಹೋದುದೆಲ್ಲ ಅಸತ್ಯವೆಂದು ತೋರುವುದು. ಆದರೂ ಕೇಂದ್ರವನ್ನು ಸಮೀಪಿಸಿದಂತೆಲ್ಲ ಕಾಣತೊಡಗುವ ಅತಿಶಯ ಸತ್ಯವನ್ನು ಅನುಭವಿಸುವುದೇ ಸಾಧಕನ ಉದ್ದೇಶ.

ಈ ಕ್ಷೇತ್ರದಲ್ಲಿ ಶ್ರೀ ರಾಮಚಂದ್ರಜಿಯವರ ಸಂಶೋಧನಗಳು ವಿಲಕ್ಷಣವಾಗಿ ಗತಿಶೀಲ ಹಾಗು ಅನುಷ್ಠಾನಯೋಗ್ಯವಾಗಿವೆ. ದೇವರು ನಮ್ಮಿಂದ ಎಲ್ಲೋ ದೂರದಲ್ಲಿಲ್ಲ. ಆತನು ತೀರ ಸಮೀಪದಲ್ಲಿಯೆ ಸಿದ್ಧೋಪಾಯ ನಾಗಿದ್ದಾನೆ. ಆತನ ಸಾನ್ನಿಧ್ಯವನ್ನೂ, ಪರಿವರ್ತನಗೊಳಿಸುವ ಆತನ ಶಕ್ತಿ ಯನ್ನೂ ಅನುಭವಿಸಲು ಮನುಷ್ಯನು ಆತನ ಕಡೆಗೆ ತಿರುಗಿದರೂ ಸಾಕು. ಈ ಅನುಭವವು ಎಲ್ಲರಿಗೂ ಸಾಧ್ಯವಾಗುವಂತೆ ಮಾಡಿದ ಫತೆಹೆಗಡದ ಮಹಾತ್ಮಾ ಶ್ರೀ ರಾಮಚಂದ್ರಜಿಯವರಿಗೂ ವಿಮೋಚನೆಯ ಹಾಗು ಪರಿವರ್ತನೆಯ ಈ ಸುವಾರ್ತೆಯನ್ನು ಹರಡುತ್ತ ತಮ್ಮ ಕಡೆಗೆ ಬಂದವರಿಗೆಲ್ಲ ಪ್ರತ್ಯಕ್ಷ ಪ್ರಯೋಗದ ಮೂಲಕ ತೋರಿಸಿಕೊಡುತ್ತಿರುವ ಷಾಹಜಹಾನ್- ಪರದ ಶ್ರೀ ರಾಮಚಂದ್ರಜಿಯವರಿಗೂ ನಾವು ಋಣಿಯಾಗಿದ್ದೇವೆ.

ಈ ಪುಸ್ತಕವು ಒಂದು ದೃಷ್ಟಿಯಿಂದ ಮುಂದುವರಿದ ಅಭ್ಯಾಸಿಗಳಿಗಾಗಿ ಇದ್ದರೂ ತುಂಬ ಉದ್ಭೋಧಕವಾಗಿದೆ. ಇದನ್ನು ಗುರುಗಳ ‘ಸತ್ಯೋದಯ’ ಹಾಗು ‘ರಾಜಯೋಗದ ಪ್ರಭಾವ’ಗಳ ಅಭ್ಯಾಸದ ಅನಂತರ ಓದಬೇಕು.

ತಿರುಪತಿ

ಕೆ. ಸಿ. ವರದಾಚಾರಿ

ಸೂಚನೆ : ಇದೇ ಪುಸ್ತಕದ ಇಂಗ್ಲಿಷ್ ಭಾಷಾಂತರಕ್ಕೆ ಬರೆದುದು,