ಪ್ರಸ್ತಾವನೆ

ಜಗತ್ತಿನಲ್ಲಿ ಪ್ರತಿಯೊಂದು ಸಂಸ್ಥೆಗೂ ತನ್ನದೇ ಆದ ಒಂದು ವೈಶಿಷ್ಟ್ಯವಿದ್ದು ಅದೇ ವಿ ಚಾ ರ ಗ ಳ ಕೇಂದ್ರವಾಗಿರುತ್ತದೆ. ಒಬ್ಬ ಮಹಾಪುರುಷನೇ ಇಂಥ ಸಂಸ್ಥೆಯ ಸ್ಥಾಪಕನಾಗುತ್ತಾನೆ. ಆತನು ಇದೇ ಕಾರ್ಯಕ್ಕಾಗಿ ಪ್ರಪಂಚದಲ್ಲಿ ಅವತರಿಸಿ ಭಗವದಾದೇಶದಂತೆ ಕೆಲಸ ಮಾಡುವನು, ಪ್ರಪಂಚವನ್ನು ಬೇರೆ ಬೇರೆ ರೀತಿಗಳಲ್ಲಿ ಸುವ್ಯವಸ್ಥಿತಗೊಳಿಸುವುದಕ್ಕಾಗಿ ಮಹಾತ್ಮರ ಜನ್ಮವಾಗುವುದು. ಜಗತ್ತಿನಲ್ಲಿ ಅಂಧಕಾರ ಹೆಚ್ಚಿದಾಗೆಲ್ಲ ಅಂಥ ಮಹಾಪುರುಷನೊಬ್ಬನು ಅವಶ್ಯವಾಗಿ ಹುಟ್ಟಿ ಅಂಧಕಾರದ ಆವರಣವನ್ನು ದೂರಮಾಡುತ್ತಾನೆ.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹಿಂದುಗಳು ತಮ್ಮ ಕರ್ತವ್ಯವನ್ನು ಮರೆತು ಅದರಿಂದ ದೂರವಾದರು. ಅದು ಇವರ ಕೈಬಿಟ್ಟು ಅನ್ಯರ ವಶಕ್ಕೆ ಹೋಯಿತು. ಇದರ ಪರಿಣಾಮವಾಗಿ ಅವರು ಸತ್ಯವನ್ನು ಸಂಪೂರ್ಣವಾಗಿ ದುರ್ಲಕ್ಷಿಸಿದರು. ಆದುದರಿಂದ ನಿಸರ್ಗವು ಫತೆನ್‌ಗಡದ ಮಹಾತ್ಮಾ ರಾಮಚಂದ್ರಜಿಯವರಂಥ ಸಮರ್ಥ ಗುರುಗಳನ್ನು ಜಗತ್ತಿನ ಸುಧಾರಣೆಗಾಗಿ ಕಳಿಸಬೇಕಾಯಿತು. ೧೮೭೩ ನೆಯ ಇಸ್ವಿಯ ೨ ನೆಯ ಫೆಬ್ರುವರಿ, ವಸಂತ ಪಂಚಮಿಯ ದಿನ ಇವರ ಜನ್ಮವಾಯಿತು. ಅವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮ ಕರ್ತವ್ಯವನ್ನು ಪೂರಯಿಸಿ ಭೌತಿಕಪ್ರಪಂಚವನ್ನು ಬಿಟ್ಟು ಹೋದರು. ಅವರ ತರುವಾಯ ಈ ಕಾರ್ಯವು ಅವರ ಸರ್ವಶ್ರೇಷ್ಠ ಶಿಷ್ಯರಾದ ಷಾಹಜಹಾನ್‌ಪುರದ ಮಹಾತ್ಮಾ ರಾಮಚಂದ್ರಜಿಯವರ ಪಾಲಿಗೆ ಬಂದಿತು. ಅವರ ಜೀವಿತಕಾಲದಲ್ಲಿಯೇ ಇವರಿಗೆ ಆಧ್ಯಾತ್ಮಿಕ ಪ್ರಗತಿಗೆ ಅವಶ್ಯವಾದ ಅತ್ಯುಚ್ಚಸಿದ್ಧಿಗಳು ಪ್ರಾಪ್ತವಾಗತೊಡಗಿದ್ದವು. ಕಟ್ಟ ಕಡೆಗೆ ಅವರು ದೈವಾಧೀನರಾದ ಹನ್ನೆರಡು ವರ್ಷಗಳ ತರುವಾಯ ಅವರ ಸಂಕಲ್ಪವು ಕಾರ್ಯರೂಪಕ್ಕೆ ಬಂದಿತು. ಪೂರ್ವಕಾಲದ ಮಹಾನುಭಾವರ ಬಗೆಗೂ ಹೀಗೆಯೆ ಆದದ್ದುಂಟು, ಮತ್ತು ಇಂಥ ಅನೇಕ ಉದಾಹರಣೆಗಳೂ ನಮಗೆ ದೊರೆಯುತ್ತವೆ. ಭಗವದಾದೇಶದಂತೆ ಬೇಕಾದ ಬದಲಾವಣೆಯನ್ನುಂಟು ಮಾಡುವುದು ಇಂಥ ಮಹಾಪುರುಷನನ್ನೇ ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಸಮರ್ಥಗುರು ತನ್ನ ಶಿಷ್ಯರಲ್ಲಿ ಅತ್ಯುತ್ತಮನಾದ ಹಾಗು ತನ್ನ ಪ್ರತಿನಿಧಿಯಂತೆ ಕೆಲಸಮಾಡಲು ಯೋಗ್ಯನಾದವನಲ್ಲಿ ತಾದಾತ್ಮ ಹೊಂದ ಬಹುದು. ಅಂತೆಯೆ, ಕ್ರಿ. ಶ. ೧೯೨೮ ರಲ್ಲಿ ಪರಮಪೂಜ್ಯ ಗುರುಗಳು ತಮ್ಮ ಒಬ್ಬ ಉತ್ತಮ ಶಿಷ್ಯರೂ ಷಾಹಜಹಾನ್ ಪೂರ್ ಸತ್ಸಂಗದ ಸಂಚಾಲಕರೂ ಆದ ಮುನ್ಸಿ ಮದನಮೋಹನಲಾಲರ ಮುಂದೆ, “ರಾಮಚಂದ್ರನು ಕುಲದೀಪಕನಾಗುವನೆಂದು ಹೇಳಿದ್ದರು. ಈ ಮಾತನ್ನು ಆ ಕಾಲದ ಇತರ ಅಂತರಂಗದ ಸತ್ಸಂಗಿ ಬಾಂಧವರಿಗೂ ತಿಳಿಸಲಾಗಿದ್ದಿತು.

ಯಾವನೊಬ್ಬ ಮನುಷ್ಯನನ್ನು ತಮ್ಮಂತೆ ಮಾಡುವುದು ಪೂಜ್ಯ ಲಾಲಾಜಿಯಂಥ ಮಹಾತ್ಮರಿಗೆ ಹೊಸ ಸಂಗತಿಯೇನೂ ಆಗಿರಲಿಲ್ಲ. ಕೇವಲ ದೃಷ್ಟಿಮಾತ್ರದಿಂದ ಕಾಲಕ್ಕೆ ತಕ್ಕಂತೆ ಮನುಷ್ಯನನ್ನು ಪರಿವರ್ತಿಸುವ ಅದ್ಭುತ ಶಕ್ತಿಯು ಅವರಲ್ಲಿದ್ದಿತೆಂಬ ಮಾತು ಅವರ ಅನುಯಾಯಿಗಳಲ್ಲಿ ಪ್ರತಿ- ಯೊಬ್ಬನಿಗೂ ಗೊತ್ತಿದೆ. ಅವರ ಮಹಾಸಾಮರ್ಥ್ಯದ ಕಲ್ಪನೆ ಮಾಡಲು ವಿಧಾತನನ್ನುಳಿದು ಬೇರೆಯವರಿಗೆ ಶಕ್ಯವಿಲ್ಲ. ಈ ನಿಯಮಗಳೂ ಇವುಗಳ ವ್ಯಾಖ್ಯಾನರೂಪದ ತಾತ್ವಿಕ ಸಮಾಲೋಚನೆಯೂ ಅವರ ಅಪರಿಮಿತ ಶಕ್ತಿ-ಸಾಮರ್ಥ್ಯಗಳ ದ್ಯೋತಕವಾಗಿವೆ. ಈ ಆಧ್ಯಾತ್ಮಿಕ ತತ್ತ್ವಜ್ಞಾನವು, ಇದನ್ನು ಲಕ್ಷ್ಯಗೊಟ್ಟು ಓದಿ ತಿಳಿದುಕೊಳ್ಳಬಲ್ಲ ಜನರಿಗೆ ಆಶ್ಚರ್ಯವನ್ನುಂಟು ಮಾಡದಿರದು. ಜನರು ಷಾಹಜಹಾನ್‌ಪುರದ ಮಹಾತ್ಮಾ ರಾಮಚಂದ್ರಜಿಯವರ ಯೌಗಿಕ ಸಾಮರ್ಥ್ಯವನ್ನು ಅವರ ಹೃದಯದಿಂದ ಹೊರಹೊರಡುವ ತರಂಗಗಳಿಂದ ಅಳೆಯಬಹುದು. ಮಾನವ ಜೀವನದ ಸಮಸ್ಯೆಯನ್ನು ಬಿಡಿಸಲು ಅವರು ‘ಸಹಜಮಾರ್ಗ’ವನ್ನು ಪ್ರಚುರಗೊಳಿಸಿದರು. ಈ ಹೆಸರು ಅವರಿಗೆ ನೇರವಾಗಿ ಮೇಲಿನಿಂದ ಸ್ಪುರಿಸಿದೆ. ಜನರು ನಂಬಲಿ ಅಥವಾ ಬಿಡಲಿ, ನಿಸರ್ಗವು ಆ ಕಡೆಗೇ ಸಾಗಿದೆ. ಈ ಬಗ್ಗೆ ಭಿನ್ನಾಭಿಪ್ರಾಯ- ಗಳಿರಬಹುದು. ಪ್ರಾಯಃ ಹಿಂದಿನಿಂದಲೂ ಹೀಗಾಗುತ್ತಲೇ ಬಂದಿದೆ.

ಮಹಾಪುರುಷರ ಜೀವನದಲ್ಲಿ, ಜನತೆಯು ಅವರನ್ನು ಎಲ್ಲ ರೀತಿಯಿಂದಲೂ ಅವಹೇಳನ ಮಾಡಿದ ಘಟನೆಗಳು ಸಂಭವಿಸಿದ್ದುಂಟು. ಶ್ರೀಕೃಷ್ಣನೂ ಇತರ ಸಂತರೂ ಇದಕ್ಕೆ ಉದಾಹರಣೆಯಾಗಿದ್ದಾರೆ. ಒಂದು ದೊಡ್ಡ ತೊಂದರೆ- ಯೆಂದರೆ, ಜನರು ಪ್ರತ್ಯಕ್ಷಾನುಭವ ಪಡೆಯದೆಯೇ ಯಾವನಾದರೊಬ್ಬ ಮಹಾಪುರುಷನ ಯೋಗ್ಯತೆಯನ್ನು ನಿರ್ಣಯಿಸಿ ಬಿಡುತ್ತಾರೆ. ನಿಸರ್ಗದತ್ತ- ವಾದ ಸ್ವತಂತ್ರ ಮನೋಭಾವವು ಇಂಥ ಮಹಾಪುರುಷನನ್ನು ಲೋಕಹಿತದ ಉಪಾಯಗಳಲ್ಲಿ ತೊಡಗಿಸುತ್ತದೆ. ಇದಕ್ಕಾಗಿ ಆವಶ್ಯಕವಾದ ಶಕ್ತಿಯು ನಿಸರ್ಗದಿಂದಲೇ ಅವನಿಗೆ ದೊರೆಯುವುದು. ನಿಸರ್ಗವು ಅವನಿಂದ ಏನನ್ನೂ ಬಚ್ಚಿಟ್ಟುಕೊಳ್ಳುವುದಿಲ್ಲ. ದೈವೀ ಸಂಕಲ್ಪದ ಮೇರೆಗೆ ಕಾಲಕ್ಕೆ ತಕ್ಕಂತೆ ಮಾನವತೆಯ ಆಧ್ಯಾತ್ಮಿಕ ಉನ್ನತಿಗಾಗಿ ಅವಶ್ಯವಾದ ಸಾಧನಗಳನ್ನು ಅವನು ಬಳಸುವನು. ಜಗತ್ತಿನ ಪರಿವರ್ತನೆಗೆ ಸಹಾಯಕವಾಗುವಂತೆ, ಇತರ ಸಂಗತಿಗಳ ಹಾಗು ಅವುಗಳ ಪರಿಣಾಮಗಳ ಕಡೆಗೆ ಗಮನಕೊಡದೆ, ಬೇಕಾದ ರೀತಿಯಲ್ಲಿ ಕಾರ್ಯಮಾಡುವ ಸ್ವಾತಂತ್ರ್ಯ ಅವನಿಗಿರುತ್ತದೆ. ಒಟ್ಟಾರೆ ಮಾನವತೆಯ ಹಿತಕ್ಕಾಗಿ ಆತನು ಕೈಕೊಂಡ ಕಾರ್ಯಗಳಲ್ಲೆಲ್ಲ ನಿಸರ್ಗವು ಅವನಿಗೆ ಸಹಾಯಕವಾಗುತ್ತದೆ. ಇದು ನಿಸರ್ಗದ ಅಪರಿಹಾರ್ಯ ನಿಯಮ. ಆತನಿಗೆ ಯಾವಾಗಲೂ ಮೂಲ ಭಂಡಾರದಿಂದಲೇ ಆದೇಶಗಳು ಬರುವುವು. ಅವುಗಳಿಗನುಸಾರವಾಗಿ ತನ್ನ ಇಷ್ಟದಂತೆ ಕಾರ್ಯಮಾಡಲು ಆತನು ಸ್ವತಂತ್ರನಾಗಿರುವನು. ಅದರಂತೆ ‘ಸಹಜ ಮಾರ್ಗ’ದ ಸಂಸ್ಥಾಪಕನಾದರೂ ಈ ದಿಶೆಯಲ್ಲಿ ಸ್ವತಂತ್ರನಿದ್ದು ಮಾನವತೆಯ ಆಧ್ಯಾತ್ಮಿಕ ಪ್ರಗತಿಗಾಗಿ ಕಾರ್ಯಪರನಾಗಿದ್ದಾನೆ. ಪ್ರಾಚೀನ ಪದ್ಧತಿಯನ್ನೇ ದೈವೀ ನಿರ್ದೇಶಗಳ ಮೇರೆಗೆ ಸಂಸ್ಕಾರಗೊಳಿಸಲಾಗಿದೆ. ನಿಯಮಗಳನ್ನು ರಚಿಸಿ ಅವುಗಳ ತಳದಲ್ಲಿರುವ ತತ್ತ್ವಜ್ಞಾನದ ಮೇಲೆ ಬೆಳಕುಬೀರಲಾಗಿದೆ. ಇದನ್ನೋದುವುದರಿಂದ ಇದರ ಪ್ರವರ್ತಕನ ಯೋಗ್ಯತೆಯ ಕಲ್ಪನೆ ತಕ್ಕಮಟ್ಟಿಗಾದರೂ ಆಗಬಹುದು. ಇದರಡಿಯಲ್ಲಡಗಿದ ವಿಜ್ಞಾನದ ಕಡೆಗೆ ಇದುವರೆಗೆ ಯಾರ ದೃಷ್ಟಿಯೂ ಬಿದ್ದಿಲ್ಲ. ಮನುಷ್ಯ ಹಾಗು ಪರಮಾತ್ಮರ ನಡುವಿರುವ ಸಂಬಂಧಗಳ ಇಲ್ಲಿಯ ವಿವರಣೆಯು ಜಗತ್ತಿನ ದೊಡ್ಡದೊಡ್ಡ ತತ್ತ್ವಜ್ಞಾನಿ- ಗಳಿಗೆ ಗಂಭೀರವಾಗಿ ವಿಚಾರ ಮಾಡಲು ಅವಕಾಶವನ್ನೊದಗಿಸಿದೆ. ಇದರಿಂದ ಎರಡು ಉದ್ದೇಶ ಗಳು ಫಲಿಸುವುವು : ಮೊದಲನೆಯದಾಗಿ, ಅವುಗಳನ್ನು ದೈನಂದಿನ ಜೀವನದಲ್ಲಿ ಆಚರಣೆಗೆ ತರುವುದರಿಂದ ಮನುಷ್ಯನು ನಿಜವಾಗಿಯೂ ಮನುಷ್ಯನಾಗುವನು. ಎರಡನೆಯದಾಗಿ ಆಧ್ಯಾತ್ಮದ ತತ್ತ್ವಜ್ಞಾನವನ್ನು ತಿಳಿಯಲಪೇಕ್ಷಿಸುವವರು ಇದನ್ನೋದಿ ಬೌದ್ಧಿಕ ಆನಂದ ವನ್ನು ಪಡೆಯಬಲ್ಲರು. ಆದರೆ ಕೇವಲ ಇದರ ಪ್ರಾಯೋಗಿಕ ಭಾಗವೇ ಮನುಷ್ಯನ ಭವಿಷ್ಯವನ್ನು ರೂಪಿಸಬಲ್ಲುದು; ಮತ್ತು ಜಿಜ್ಞಾಸು ಸ್ವತಃ ಆ ಆಧ್ಯಾತ್ಮಿಕ ತತ್ತ್ವಶೋಧಕನ ಸಂಪರ್ಕದಲ್ಲಿ ಬಂದಾಗಲೇ ಇದು ಸಾಧ್ಯ- ಈ ಪುಸ್ತಕದ ಆಳವಾದ ಅಧ್ಯಯನವು ಓದುಗರನ್ನು ಬೆರಗುಗೊಳಿಸುವುದು.

ಇದರಲ್ಲಿ ಬರುವ ಸಂಗತಿಗಳನ್ನು ಅಂತರ್ದೃಷ್ಟಿಯಿಂದ ನೋಡಬೇಕೆಂದು ಓದುಗರನ್ನು ಪ್ರಾರ್ಥಿಸುವೆನು. ಈ ರೀತಿ ಸತ್ಯದೃಷ್ಟಿಯು ವಿಕಾಸಹೊಂದುವುದು. ನಿಸರ್ಗದ ರಹಸ್ಯಗಳು ಯೋಗಿಗಳ ಹೃದಯಗಳಲ್ಲಿ ಅಡಗಿವೆ. ಅವರ ಹೃದಯಗಳನ್ನು ಲಕ್ಷಿಸಿ ಅಧ್ಯಾತ್ಮಶಾಸ್ತ್ರವನ್ನು ಪ್ರವೇಶಿಸಬಹುದು. ಯೋಗಿಯ ಉಪದೇಶಗಳ ಮೇರೆಗೆ ಆಚರಣೆಮಾಡಿದಾಗ ಮಾತ್ರ ಇದು ಶಕ್ಯವಾಗುವುದು. ಸಾಮಾನ್ಯವಾಗಿ, ಇದು ಬಹಳ ತೊಡಕಿನದೆಂದು ಜನರು ಭಾವಿಸುವರು. ಆದರೆ ಅದು ನಡುವಿರುವ ಒಂದು ತೆರೆ ಮಾತ್ರ. ಸರಳವಾದ ವಸ್ತುವನ್ನು ಪಡೆಯಲು ಸರಳವಾದ ಉಪಾಯವೇ ಬೇಕು. ಈ ಪುಸ್ತಕದ ಪ್ರತಿಯೊಂದು ವಾಕ್ಯವೂ ಅರ್ಥಪೂರ್ಣವಾಗಿದೆ. ಇದರ ಅಧ್ಯಯನವು ಬೌದ್ಧಿಕ ಆನಂದವನ್ನು ನೀಡುವುದು; ಪ್ರಯೋಗವು ಅನುಭವವನ್ನು ಒದಗಿಸುವುದು.

ಕುರುಣಾಶಂಕರ ಪೂರಣಪೂ‌ ಪಿಲಿಭಿತ್ ಜಿಲ್ಲೆ