ಆದರೆ ಬಂಧು, ಇದೂ ಕೊನೆಯಲ್ಲ. ನಮಗೆ ಇದಕ್ಕಿಂತ ಮುಂದೆ ಹೋಗಬೇಕಾಗಿದೆ. ಆದರೀಗ ಜ್ಞಾನದ ಆಸರೆ ತಪ್ಪಿ ಹೋಗಿದೆ, ಈಗಂತೂ ನಾನು ಯಾವುದನ್ನು ಅಜ್ಞಾನ*ವೆಂದು ಕರೆದಿರುವೆನೋ ಅದೇ ನಮ್ಮದಾಗಿದೆ. ಅದೇ ದಶೆಯು ಪರಿವರ್ತನೆ ಹೊಂದಿ ನಮ್ಮನ್ನು ಗುರಿಗೆ ಮುಟ್ಟಿಸುವುದು. ಬೇರೆ ಯಾವುದೂ ಸಹಾಯಕವಾಗಲಾರದು. ಇಲ್ಲಿ ಸಾಲೋಕ್ಯತೆ, ಸಾಯುಜ್ಯತೆ ಮುಂತಾದ ಎಲ್ಲ ದಶೆಗಳೂ ಮುಗಿದು ಹೋಗಿವೆ, ಈಗ ನಮ್ಮಲ್ಲಿ ಅಜ್ಞಾನವುಂಟಾಗಿದೆ; ಮತ್ತು ಇದು ಯೋಗ್ಯವೂ ಆಗಿದೆ. ಯಾವ ಮನುಷ್ಯನಿಗೆ ಸಾಗರದ ಪರಿಚಯವಿಲ್ಲವೋ ಅವನೇ ತನ್ನನ್ನು ಅದರಲ್ಲಿ ಎಸೆಯಲು ಸಿದ್ಧನಾಗುವನು. ತಿಳಿವಳಿಕೆಯುಳ್ಳವನು ಸಮುದ್ರದಲ್ಲಿ ಕಾಲನ್ನೇ ಇಡಲಾರ, ಏಕೆಂದರೆ ಆತನಿಗೆ ಅದರ ಪರಿಣಾಮ ತಿಳಿದಿದೆ. ಅದರಲ್ಲಿ ಕಾಲಿಟ್ಟುದೇ ಆದರೆ ಜೀವನ ಮುಗಿದಂತೆಯೇ ಎಂಬುದರ ಅರಿವಿದೆ. ಅರ್ಥಾತ್ ಆತನಲ್ಲಿ ತಿಳುವಳಿಕೆ ಇನ್ನೂ ಉಳಿದಿದೆ. ಈಗ ನಮ್ಮ ಅಜ್ಞಾನವು ಕೊನೆಗೆ ನಮ್ಮನ್ನು ಆ ಆಗಾಧ ಸಮುದ್ರದಲ್ಲಿ ಇಳಿಸಿಯೇ ಬಿಟ್ಟಿತು, ನಾವು ಅದರಲ್ಲಿ ಬಿದ್ದ ಮೇಲೆ ನಮಗೆ ಅದರ ದಂಡೆಯನ್ನು ಸೇರುವ ಚಿಂತೆಯಾಯಿತು. ಆದುದರಿಂದ ಈಗ ನಾವು ಇದೇ ಚಿಂತೆಯಲ್ಲಿ ಮುಂದುವರಿಯ ಹತ್ತಿದ್ದೇವೆ. ನಾವೆಯ ಪತ್ತೆಯೇ ಇಲ್ಲ; ಏಕೆಂದರೆ, ಅದಂತೂ ಇಲ್ಲಿಗೆ ಬರುವುದಕ್ಕಿಂತ ಮುಂಚೆಯೇ ಮುಳುಗಿ ಬಿಟ್ಟದ್ದಿತು. ಈಗ ಹೇಗೋ ಸಾಗಬೇಕಾಗಿದ್ದು, ಈಜುತ್ತ ನಡೆದಿದ್ದೇವೆ. ಹೀಗೆಯೇ ಎಷ್ಟೋ ಹರದಾರಿ ಮುಂದೆಹೋದೆವು. ನಮಗೆ ಯಾತ್ರೆಯಲ್ಲಿ ನಾನಾ ತರಂಗಗಳೂ, ಏರಿಳಿತಗಳೂ, ತಿರುವುಗಳೂ ದೊರೆತುವಾದರೂ ಅವೆಲ್ಲ ಮೌನವಾಗಿದ್ದುವು. ಅವುಗಳ ಇರುವಿಕೆಯ ಅನುಮಾನ ಮಾತ್ರ ಇದ್ದಿತು. ಇದೇ ಅನುಮಾನದಲ್ಲಿಯೇ ನಾವು ಮುಂದುವರಿದಿದ್ದೇವೆ. ಕೊನೆಗೆ ಆ ಅನುಮಾನವೂ ಇಲ್ಲದಾಯಿತು. ಈಗ ಸಮನಾದ ಪಾತಳಿ ದೊರೆಯುವುದು, ತರಂಗಗಳಾಗಲೀ, ಏರಿಳಿತಗಳಾಗಲೀ, ಇಲ್ಲ. ಇದನ್ನು ತಿಳಿಸಲು ನಾನು ‘ಸತ್ಯೋದಯ’ದಲ್ಲಿ ಏಳು ವೃತ್ತಗಳನ್ನು ತೋರಿಸಿದ್ದೇನೆ. ಬಂಧು, ಅನುಮಾನವಾದರೂ ಎಲ್ಲಿಯವರೆಗೆ?