ಪ್ರವೇಶಿಕೆ

ದರ್ಶನದ ಪರಿಕಲ್ಪನೆ

‘ದರ್ಶನ’ ಅಥವಾ ತತ್ವಸಾಕ್ಷಾತ್ಕಾರವು ತರ್ಕವನ್ನಾಶ್ರಯಿಸಿದ ವಿಷಯವಲ್ಲ. ಅದು ಆಶ್ರಯಿಸಿರುವುದು ಅಂತರ್ದೃಷ್ಟಿ (ಅಂತರ್ಬೋಧೆ)ಯನ್ನು. ಬಹುತೇಕ ತತ್ವಜ್ಞಾನಿಗಳು ನಂಬುವಂತೆ ಅದು ಸಂಶಯದಿಂದ ಪ್ರಾರಂಭವಾಗುವುದಿಲ್ಲ ಬದಲಿಗೆ, ಅದು ಪ್ರಾರಂಭವಾಗುವುದು ‘ಆಶ್ಚರ್ಯ’ದಿಂದ. ಸಾಮಾನ್ಯವಾಗಿ ತತ್ವಜ್ಞಾನಿಗಳು ಪ್ರತ್ಯಕ್ಷ ಅನುಷ್ಠಾನದ ಜೀವನವನ್ನು ಅಂಗೀಕರಿಸಿ ಅನುಸರಿಸು ವದಕ್ಕೆ ಮುಂಚೆಯೇ ವಿಷಯಗಳ ವಿಶದೀಕರಣದ ಪಯತ್ನ ಮಾಡಿದ್ದಾರೆ. ಪಾಶ್ಚಿಮಾತ್ಯ ತತ್ವಜ್ಞಾನಿಗಳು ಸಾಮಾನ್ಯವಾಗಿ ಮಾಡಿರುವುದು ಹೀಗೆಯೇ. ಒಬ್ಬನು ತತ್ವಜ್ಞಾನಿಯಾದ ಮಾತ್ರಕ್ಕೆ ಭ್ರಷ್ಟನಾಗಲಾರ ಅಥವಾ ಪತಿತನಾಗಲಾರನೆಂಬುದು ನಿಶ್ಚಿತವಲ್ಲವೆಂದು ನಾನು ಹೇಳಿಯೇನು. ಆದರೆ, ಪ್ರಾಯೋಗಿಕ ಜೀವನವನ್ನು ನಡೆಸುವ ಮೂಲಕ ಅವನು ವಸ್ತು-ವಿಷಯಗಳನ್ನು ಅರಿತು ಕೊಂಡವನಾಗಿದ್ದರೆ, ಅಂಥವನು ಭ್ರಷ್ಟ ನಾಗುವಸಂಭವವಿಲ್ಲ. ಭಾರತದಲ್ಲಿ ಋಷಿಗಳು ಮೊದಲಿಗೆ ಪ್ರಾಯೋಗಿಕ ಅನುಷ್ಠಾನದ, ಜೀವನವನ್ನು ನಡೆಸಿ, ಅನಂತರವಷ್ಟೆ ತತ್ವವಿವೇಚನೆ ಮಾಡಲು ತೊಡಗಿದರು. ತಮ್ಮ ತಮ್ಮ ಪ್ರಗತಿಯ ಮಟ್ಟದಲ್ಲಿ, ತಮ್ಮ ಕೈಗೆಟುಕಿದ ಮಟ್ಟಿಗೆ ಅವರು ಅಸ್ತಿತ್ವದಲ್ಲಿರುವ ವಸ್ತುಗಳ ರಹಸ್ಯವನ್ನು ತೆರೆದಿಟ್ಟರು. ತತ್ಫಲವಾಗಿ ವಿವಿಧ ವರ್ಣಗಳನ್ನುಳ್ಳ ಷಡ್ದದರ್ಶನಗಳು ಬಂದವು. ನಮ್ಮ ಅಭ್ಯಾಸ ಅಥವಾ ಸಾಧನೆ ಪೂರ್ಣಗೊಂಡ ನಂತರವಷ್ಟೇ ನಾವು ವಿಷಯ ವಿವರಣೆಗೆ ಕೈಹಾಕಬೇಕು. ವಿಷಯ ವಿವೇಚನೆಯಲ್ಲಿ ನಿಕ್ರೃಷ್ಟತೆ, (ದೋಷರಾಹಿತ್ಯ) ಸಾಧಿಸಬೇಕಿದ್ದರೆ, ತತ್ವಜ್ಞಾನಿಯು ಲಕ್ಷದಲ್ಲಿಟ್ಟಿರಬೇಕಾದ ಸೂತ್ರವಾಕ್ಯ ಇದೆ ಆಗಿದೆ.

ಭಾರತವು ಆಧ್ಯಾತ್ಮದ ತವರುಮನೆ. ಅಂತೆಯೇ, ಇಲ್ಲಿ ಎಲ್ಲ ಯುಗಗಳಲ್ಲಿಯೂ ಸತ್ಯಾನ್ವೇಷಣೆ ಕ್ರಿಯಾಶೀಲವಾಗಿದೆ. ಆಧ್ಯಾತ್ಮ ವಿದ್ಯೆಯು ಮೂಲ ಭಂಡಾರದಿಂದ ಪ್ರವಹಿಸುವ ಶಕ್ತಿಗಳಿಗೆ ಸಂಬಂಧಿತವಾದ ಶಾಸ್ತ್ರ ಅಥವಾ ವಿಜ್ಞಾನ. ಗ್ರಂಥಿಗಳ ರೂಪ ದಲ್ಲಿರುವ ಆ ಶಕ್ತಿಗಳಿಗೆ ಸೃಜನಾತ್ಮಕ ಹಾಗೂ ವಿನಾಶಾತ್ಮಕ ಎರಡೂ ಸಾಮರ್ಥ್ಯಗಳುಂಟು. ಭಾರತದಲ್ಲಿ ಋಷಿಗಳು ಸೃಜನಾತ್ಮಕ(ರಚನಾತ್ಮಕ)ಶಕ್ತಿಯನ್ನು ಮಾನವತೆಯ ಸುಧಾರಣೆಗೋಸ್ಕರ ವಿನಿಯೋಗಿಸಿದ್ದಾರೆ. ಹೋಲಿಕೆಯಲ್ಲಿ ಅಣುಬಾಂಬಿನ ಶಕ್ತಿಯೂ ಎನೂ ಅಲ್ಲವೆಂದೆನಿಸುವಷ್ಟು ವಿಪುಲ ವಿನಾಶಾತ್ಮಕ ಶಕ್ತಿಯೂ ಇದೆ. ದೈವೀ ಆದೇಶಕ್ಕನುಸಾರ, ತನ್ನ ಸಂಕಲ್ಪಶಕ್ತಿಗೆ ಅನುಗುಣವಾಗಿ ಯೋಗಿಯಾದವನು ಇವುಗಳನ್ನು ಉಪಯೋಗಿಸುತ್ತಾನೆ. ವರ್ತಮಾನ ಕಾಲದಲ್ಲಿಯೂ ಈ ಶಕ್ತಿಯು ಉಪ ಯೋಗಿಸಲ್ಪಡುತ್ತಿದ್ದು, ಒಂದು ಹೊಸ ಪ್ರಪಂಚ ರೂಪಿಸಲ್ಪಡುತ್ತಿದೆ. ಆಧ್ಯಾತ್ಮಿಕ ಪುನರುತ್ಥಾನ ಅವಶ್ಯ ಘಟಿಸಲೇ ಬೇಕಿದೆ, ಮತ್ತು ಭಾರತವೇ ಮತ್ತೆ ಜಗತ್ತಿಗೆ ಮಾರ್ಗದರ್ಶನವಿತ್ತು ಮುನ್ನಡೆಸುವುದು; ಅದಕ್ಕೆ ಎಷ್ಟು ದೀರ್ಘಕಾಲ ತೆಗೆದುಕೊಂಡರೂ ಸರಿಯೆ. ಯಾವ ದೇಶವೂ ಆಧ್ಯಾತ್ಮಿಕತೆಯಿಲ್ಲದೆ ಉಳಿಯಲು ಸಾಧ್ಯವಾಗದೆಂಬುದನ್ನು, ಇತರ ದೇಶಗಳೂ, ಮನಗಾಣಲು ಪ್ರಾರಂಭಿಸಿವೆ ರಾಜಕೀಯ ಮುತ್ಸದ್ದಿತನ, ವ್ಯೂಹ ಯುಕ್ತಿಗಳ ಕಾಲ ಶೀಘ್ರ ಸರಿಹೋಗುತ್ತಿವೆ. ಈ ಶತಮಾನ ಕೊನೆಗೊಳ್ಳುವ ಹೊತ್ತಿಗೆ ಒಂದು ಮಹಾ ಪರಿವರ್ತನೆ ಸಂಭವಿಸುವುದು ಖಂಡಿತ. ಆಗಲಿಕ್ಕಿರುವುದನ್ನು ಪ್ರತಿಯೋರ್ವನೂ ಸಂತೋಷದಿಂದ ಸ್ವಾಗತಿಸಿ, ಆಧ್ಯಾತ್ಮಿಕತೆಯ ಪಥಕ್ಕೆ ಬರಲೇಬೇಕು. ಅದರಿಂದಲೇ ಆತನ ಶ್ರೇಯಸ್ಸು ವರ್ಧಿಸುವುದು. ಅತ್ಯುನ್ನತ ದರ್ಶನವನ್ನು ನಾನು ಬಹಿರಂಗಪಡಿಸುತ್ತಿದ್ದೇನೆ. ಜನರು ಮೊದ ಮೊದಲು ಅದನ್ನು ಗ್ರಹಿಸಲೂ ಬಹುದು, ಗ್ರಹಿಸದಿರಲೂ ಬಹುದು; ಆದರೆ ಕಾಲಕ್ರಮೇಣ ಅವರು ಅದನ್ನು ಮನಗಾಣಲು ಪ್ರಾರಂಭಿಸುವರು.

ಸಹಜ ಮಾರ್ಗದ ಚಾರಿತ್ರಿಕ ಹಿನ್ನಲೆ

ಮಹಾತ್ಮರು ಜನ್ಮತಾಳುವುದು ಆಕಸ್ಮಿಕವಾಗಿ ಅಲ್ಲ. ಜಗತ್ತು ಅವರ ಕಾತರದ ಪ್ರತೀಕ್ಷೆ ಮಾಡಿದಾಗ ಅವರು ಜನ್ಮತಳೆಯುತ್ತಾರೆ. ಪ್ರಕೃತಿಯ ನಿಯಮವಿರುವುದೇ ಹೀಗೆ. ಆಧ್ಯಾತ್ಮ ವಿದ್ಯೆಯ ಮೂಲ ನೆಲೆಯಾದ ಭಾರತವು ಪುರಾತನ ಯೋಗಪದ್ದತಿಯನ್ನು ಸಂಪೂರ್ಣವಾಗಿ ಮರೆತು ಕತ್ತಲೆಯಲ್ಲಿ ತಡಕಾಡುತ್ತಿತ್ತು. ಸೂಕ್ಷ್ಮ ಆಧ್ಯಾತ್ಮದ ಸ್ಥಾನದಲ್ಲಿ ಸ್ಥೂಲ(ಜಡ) ಭೌತಿಕವಾದವು ಆಕ್ರಮಿಸಿ ಕುಳಿತ್ತಿತ್ತು. ಅಜ್ಞಾನದ ಕಾರ್ಮೋಡಗಳು ಎಲ್ಲ ಕಡೆಗೂ ಮುಸುಕುತ್ತಿದ್ದವು. ‘ಯೌಗಿಕ ಪ್ರಾಣಾಹುತಿ’ ಹಿಂದುಗಳಿಗೆ ಪರಕೀಯವಾಗಿಬಿಟ್ಟಿತು. ಆಧ್ಯಾತ್ಮ ವಿದ್ಯೆಯು ಅಸಹಾಯಕತೆಯಿಂದ ತತ್ತರಿಸುತ್ತಿದ್ದ ಈ ಸಂದರ್ಭದಲ್ಲಿ ಮಾನವತೆಯ ಉದ್ಧಾರಕ್ಕೋಸ್ಕರ ಎಲ್ಲವನ್ನೂ ಸರಿಪಡಿಸಲು ಓರ್ವ ಮಹಾತ್ಮನ ಆಗಮನದ ತುರ್ತು ಅವಶ್ಯಕತೆಯಿತ್ತು.

೧೮೭೩ನೆಯ ಫೆಬ್ರುವರಿ ೨ರ ಬಸಂತಪಂಚಮಿಯ ಶುಭದಿನದಂದು, ಫರೂಕಾಬಾದ (ಉ.ಪ್ರ) ಜಿಲ್ಲೆಯ ಫತೇಹಗಡದಲ್ಲಿ, ಪ್ರಕೃತಿಯ ಶಕ್ತಿಯು, ‘ಸಮರ್ಥ ಗುರು ಮಹಾತ್ಮಾ ರಾಮಚಂದ್ರಜಿ ಮಹಾರಾಜ’ರೆಂಬ ಮಾನವ ಸ್ವರೂಪದಲ್ಲಿ ಅವತರಿಸಿತು. ವರ್ಷದ ಅತಿ ಆಹ್ಲಾದಕರ ಋತುವಿನೊಂದಿಗೆ ಆಷ್ಟು ಸುಂದರವಾಗಿ ಸಂಗತವಾದ ಆ ಶುಭದಿನವು ಪ್ರತಿಯೊಬ್ಬರ ಹೃದಯದಲ್ಲಿಯೂ ವಸಂತೋದಯದ. ನವಚೈತನ್ಯವನ್ನು. ಸಂಚರಣ ಗೊಳಿಸಿತು.

ಅವರ ಆಗಮನದಿಂದ ಸೂಚಿತವಾದ ಆ ಆನಂದಮಯ ಕ್ಷಣವು ಆಧ್ಯಾತ್ಮಿಕ ಜಾಗ್ರತಿಯ ನವಯುಗವೊಂದನ್ನು ಆರಂಭಿಸಿತು; ಇದು ಮಾನವ ಜೀವನದ (ಅಸ್ತಿತ್ವದ) ಸಮಸ್ಯೆಗೆ ಒಂದು ಅನುಷ್ಠಾನ ಸಾಧ್ಯವಾದ ಪರಿಹಾರವನ್ನೀಯುವ ಭರವಸೆ ಕೊಡುತ್ತದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರು ಉಂಟುಮಾಡಿದ ಭವ್ಯ ಪುನರುತ್ಥಾನವನ್ನು ನಾವು ನೆನಪಿಸಿಕೊಂಡರೆ ಸಾಕು, ನಮಗೆ ಗೌರವ ಮತ್ತು ಆನಂದಭರಿತ ಆಶ್ಚರ್ಯಾಘಾತವಾಗುತ್ತದೆ. ಅತಿದೊಡ್ಡ ಋಷಿಗಳಿಗೂ ಎಂದಿಗೂ ದಿಗ್ಭ್ರಮೆಗೊಳಿಸುತ್ತಿದ್ದ ಅಸ್ತಿತ್ವದ ಸಮಸ್ಯೆಗೆ ಸುಲಭ ಪರಿಹಾರವನ್ನು ಅವರು ನೀಡುತ್ತಾರೆ.
ಈ ದಿವ್ಯಪುರುಷರು ಒಂದು ಗೌರವಾರ್ಹ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರ ತಾಯಿ ಉದಾರ ಮನಸ್ಸಿನ ಸರಳಜೀವಿಯಾಗಿದ್ದು, ಹೆಚ್ಚಿನ ಸಮಯವನ್ನು ಭಕ್ತಿ-ಪೂಜೆಗಳಲ್ಲಿ ಕಳೆಯುತ್ತಿದ್ದರು;ಅವರ ಬಾಲ್ಯವು ತಾಯಿಯಿಂದ ತುಂಬ ಪ್ರಭಾವಿತವಾಗಿತ್ತು. ಅತ್ಯಂತ ಎಳೆವಯಸ್ಸಿನಲ್ಲಿಯೇ ಅವರಿಗೆ ಸ್ಪೂರ್ತಿಯುಂಟಾದುದು ಅವರ ಪ್ರಭಾವದಿಂದಲೇ. ಒಂದಾನೊಂದು ದಿನ ಅವರು ತಮ್ಮ ಜೊತೆಗಾರರೊಂದಿಗೆ ಆಟವಾಡುತ್ತಿರುವಾಗ ಯಾವುದೋ ದೈವೀಶಕ್ತಿಯೊಂದು ‘ತಾನು(ಹುಟ್ಟಿ) ಬಂದಿರುವುದು ತಾನೀಗ ತೊಡಗಿದ್ದ ಕೆಲಸಕ್ಕಾಗಿ ಅಲ್ಲ’, ಎಂಬ ಭಾವನೆಯನ್ನು ಜಾಗ್ರತಗೊಳಿಸಿತು. ಅವರು ಆತ್ಮ ಸಾಕ್ಷಾತ್ಕಾರ ಪಡೆದು, ಮುಂದಿನ ಮಹಾಕಾರ್ಯಕ್ಕೆ ಸಿದ್ಧಗೊಳ್ಳಬೇಕಿತ್ತು. ಅವರ ಆತ್ಮವು ಜಾಗ್ರತಗೊಂಡಿತು. ಮತ್ತು ಅವರು ಅದಕ್ಕೆ ಮನಃಪೂರ್ವಕ ಒಗ್ಗಿಕೊಂಡರು ಕೇವಲ ಎಳು ತಿಂಗಳಲ್ಲಿಯೇ ಅವರು ಪರಿ‌ಪೂರ್ಣತೆಯನ್ನು ಹೊಂದಿದರು. ಇದು ನಿಜವಾಗಿಯೂ ಒಂದು ಅಸದೃಶ ಉದಾಹರಣೆ. ಆಗಿನಿಂದ ಅವರು ತಮ್ಮ ಸಂಪೂರ್ಣ ಜೀವಮಾನವನ್ನು ಆಧ್ಯಾತ್ಮಿಕ ಉದ್ದೇಶಕ್ಕೆ ಮಿಸಲಾಗಿ ಅರ್ಪಿಸಿಕೊಂಡರು. ಅವರೇ ನಮ್ಮಸಂಸ್ಥೆಯ ಆದಿಗುರು.‌

ಅವರು ಮಿತತ್ವ, ಸಹಿಷ್ಣುತೆ ಮತ್ತು ಭಕ್ತಿಗಳೇ ಮೈವೆತ್ತಂತಿದ್ದರು. ಯೌಗಿಕ ಪ್ರಾಣಾಹುತಿಯ ಮೂಲಕ ಯೋಗಶಿಕ್ಷಣವನ್ನು ನೀಡುವ ಹೊಸಯುಗ ಅವರೊಡನೆ ಉದಯವಾಯಿತು. ಅದರ ಮೇಲೆ ಅವರು ಆ ಕಾಲದಲ್ಲಿ ಪರಮಾಧಿಕಾರ ಪಡೆದವರಾಗಿದ್ದರು. ಗ್ರಹಸ್ಥ ಜೀವನವನ್ನು ನಡೆಸುತ್ತಿದ್ದರೂ ಕೂಡ, ಒಂದೇ ಜನ್ಮದಲ್ಲಿ ಮಾನವನು ಪರಿಪೂರ್ಣತೆ ಹೊಂದುವಂತೆ ಮಾಡುವ ಮಾರ್ಗವನ್ನು ಅವರು ತೋರಿಸಿದರು. ಗ್ರಹಸ್ಥ ಜೀವನದ ಕಷ್ಟ-ಕಾರ್ಪಣ್ಯಗಳು ಆಧ್ಯಾತ್ಮಿಕ ಸಿದ್ದಿಗೆ ಸಲ್ಲುವ ತ್ಯಾಗ ಮತ್ತು ತಪಸ್ಸುಗಳೆಂದು ಅವರು ಹೇಳುತ್ತಿದ್ದರು. ಆಧ್ಯಾತ್ಮಿಕ ತರಬೇತಿಯ ವಿಧಾನವನ್ನು ಅವರು ಬಹಳಷ್ಟು ಸರಳಗೊಳಿಸಿ, ನಮ್ಮ ಕಾಲದ ಅವಶ್ಯಕತೆಗೆ ಅನುಗುಣವಾಗಿ ಹೊಂದಿಸಿದ್ದರು. ಉನ್ನತ ಮಟ್ಟದ ಸಾಮರ್ಥ್ಯ ಮತ್ತು ಆಧ್ಯಾತ್ಮಿಕ ಘನತೆ ಹೊಂದಿದ, ದೈವೀ ತೇಜಸ್ಸೇ ಆದ ನಮ್ಮ ಮಹಾಗುರುಗಳು ತಮ್ಮ ಜೀವಮಾನದ ಪ್ರತಿಕ್ಷಣವನ್ನು ಮಾನವನ ಉದ್ಧಾರಕ್ಕೆ ಮುಡುಪಿಟ್ಟಿದ್ದರು. ಅವರು ನಿಜಕ್ಕೂ ಪ್ರಕೃತಿಯ ಅದ್ಬುತ ಪವಾಡಸದೃಶ ಮೂರ್ತಿ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅವರು ಗೈದ ಕಾರ್ಯವು ಸಾಮಾನ್ಯರ ಕಲ್ಪನೆಗೆ ಮೀರಿದುದು. ಈ ಆಧ್ಯಾತ್ಮವಿಜ್ಞಾನ ಕ್ಷೇತ್ರದಲ್ಲಿ ಅವರು ಮಾಡಿರುವ ಸಂಶೋಧನೆಗಳು ಅತ್ಯಲ್ಪಕಾಲದಲ್ಲಿಯೇ ಮಾನವನು ಅತ್ಯುನ್ನತ ಮಟ್ಟವನ್ನು ತಲುಪುವದು ಸಾದ್ಯವಾಗುವಂತೆ ಮಾಡಿವೆ. ಅವು ಸುಲಭಸಾಧ್ಯವೂ ಪ್ರಾಯೋಗಿಕವೂ ಆಗಿವೆ. ಅವರು ರಾಜಯೋಗದ ಪರಿಷ್ಕೃತ ಪದ್ಧತಿಯನ್ನು ಜಾರಿಗೆ ತಂದರು. ಅದೇ, ಅನಂತರ ‘ಸಹಜಮಾರ್ಗ’ ವೆಂದು ಹೆಸರಾಗಿದೆ. ಸುಮಾರು ೩೬ ವರ್ಷಕಾಲ ಮಾನವತೆಗೆ ಸೇವೆ ಸಲ್ಲಿಸಿ, ೧೯೩೧ ಅಗಸ್ಟ ೧೪ ರಂದು ತಮ್ಮ ೫೮ನೆಯ ವಯಸ್ಸಿನಲ್ಲಿ ಈ ಆಧ್ಯಾತ್ಮಿಕ ವಿಭೂತಿಯು ದೇಹತ್ಯಾಗ ಮಾಡಿದರು. ಅವರು ತಮ್ಮ ಜೀವನಕಾಲದಲ್ಲಿ ಮಾಡಿದ ಕಾರ್ಯ ಕಲ್ಪನಾತೀತವಾದುದು. ಮುಂಬರುವ ಪೀಳಿಗೆ ಅದರ ಮಹತ್ವವನ್ನು ಕಾಲಕ್ರಮೇಣ ಮನಗಂಡೀತು.
೧೯೪೫ನೆಯ ಇಸವಿ, ಮಾರ್ಚ ೩೧ ರಂದು ಷಹಜಾನಪುರ(ಉ.ಪ್ರ)ದಲ್ಲಿ ಅವರ ಉತ್ತರಾಧಿಕಾರಿಯಾದ ನನ್ನಿಂದ, ಅವರ ಕೃಪೆಯಿಂದ, ಆ ಮಹಾತ್ಮರ ಹೆಸರಿನಲ್ಲಿಯೇ ‘ಶ್ರೀ ರಾಮಚಂದ್ರಮಿಷನ್’ ಸ್ಥಾಪಿಸಲ್ಪಟ್ಟಿತು. ಆ ಸಂಸ್ಥೆ ಎಲ್ಲಡೆಯಿಂದಲೂ ಸತ್ಯಾನ್ವೇಷಿಗಳನ್ನು ಸಾವಕಾಶವಾಗಿ ಆಕರ್ಷಿಸುತ್ತಿದೆ. ಈ ದಿಶೆಯಲ್ಲಿ ಗುರುಕೃಪೆ ಕೆಲಸ ಮಾಡುತ್ತಿದೆ. ಅದರಿಂದ ಲಾಭಾನ್ವಿತರಾಗಲು ಆಕರ್ಷಿತರಾಗುತ್ತಿರುವುದು ಸಂತೋಷಕರ.

ಮಿಷನ್ನಿನಲ್ಲಿ ಅನುಸರಿಸಲಾಗುತ್ತಿರುವ ಸಹಜಮಾರ್ಗ ಸಾಧನ ಪದ್ದತಿಯು ಪರವಸ್ತುವನ್ನು ಪಡೆದುಕೊಳ್ಳುವ ಸುಲಭವೂ ಸಹಜವೂ ಆದ ಮಾರ್ಗವೊಂದನ್ನು ಪ್ರಸ್ತುತ ಪಡಿಸುತ್ತಿದೆ. ಮನುಷ್ಯನ ನಿತ್ಯ ಜೀವನದಲ್ಲಿ ಅನುಸರಿಸಲು ಅಸಾಧ್ಯವೆನಿಸುವ ಒರಟು ವಿಧಾನ ಗಳನ್ನು ಸಹಜಮಾರ್ಗವು ಸೂಚಿಸುವುದಿಲ್ಲ. ಸಹಜಮಾರ್ಗ ಪದ್ಧತಿಯ ಆಧ್ಯಾತ್ಮಿಕ ಶಿಕ್ಷಣದಲ್ಲಿ ಇಂದ್ರಿಯಗಳು ತಮ್ಮ ಸಹಜ ಮೂಲ ಸ್ಥಿತಿಯನ್ನು ಪಡೆಯುವಂತೆ ಅವುಗಳಕಾರ್ಯಗಳು ಕ್ರಮಗೊಳಿಸಲ್ಪಡುತ್ತವೆ. ಅಂದರೆ ಮೊಟ್ಟಮೊದಲಿಗೆ ಮಾನವರೂಪವನ್ನು ಪಡೆದಾಗ ಅವು ಇದ್ದ ಸ್ಥಿತಿಗೆ ನೇರ್ಪಡಿಸಲ್ಪಡುತ್ತವೆ ಎಂದು ಅರ್ಥ, ಅಷ್ಟೇ ಅಲ್ಲ ತಮಗೆ ತಾವೇ ನಿರಂಕುಶವಾಗಿ ವರ್ತಿಸುತ್ತಿರುವ ನಿಮ್ನ ವೃತ್ತಿಗಳು ಉನ್ನತ ಪ್ರಜ್ಞಾನಕ್ಕೆ ಅಧೀನಗೊಳಿಸಲ್ಪಡುತ್ತವೆ. ಆ ಮೂಲಕ ಅವುಗಳ ವಿಕೃತ ವೈಪರೀತ್ಯದ ಕ್ರಿಯೆಗಳು ನಿಲ್ಲಿಸಲ್ಪಡುತ್ತವೆ. ಎಲ್ಲ ಉಚ್ಚಸ್ತರದ ಕೇಂದ್ರಗಳು ದೈವೀ ಕೇಂದ್ರಗಳ ಅಧೀನದಲ್ಲಿ ಬರುತ್ತವೆ. ಮತ್ತು ಈ ರೀತಿಯಲ್ಲಿ ವ್ಯಷ್ಟಿ ಸತ್ತೆಯ ಇಡೀ ಮಂಡಲವು ದೈವೀಕರಣಗೊಳ್ಳಲಾರಂಭಿಸುತ್ತದೆ.

ಸಹಜಮಾರ್ಗದ ವಿಶೇಷ ಲಕ್ಷಣಗಳು

ಶಂಕರ, ರಾಮಾನುಜ ಅಥವಾ ಇತರರು ತಮ್ಮ ಅನುಭವ ಕುರಿತು ಅದೇನೇ ಹೇಳಿದ್ದರೂ ಸರಿಯೆ; ನಾನು ಹೇಳುವದೆಲ್ಲ, ಬರೆಯುವದೆಲ್ಲ ನನ್ನ ಅನುಭವದ ಮೇಲೆ ಆಧರಿಸಿದೆ. ಈ ಜಗತ್ತಿನಲ್ಲಿ ಪ್ರತಿಯೋರ್ವನೂ ಶಾಂತಿಯನ್ನು ಬಯಸುತ್ತಾನೆ. ಅಂದರೆ ಸಾಕ್ಷಾತ್ಕಾರ ಅವರ ಉದ್ದೇಶವಲ್ಲ. ಹಾಗಿರುವಾಗ, ಅವರಿಗೆ ಶಾಂತಿ ಲಭಿಸೀತೇ ಹೊರತು ಸಾಕ್ಷಾತ್ಕಾರವಲ್ಲ. ಆದರೆ ಸಾಕ್ಷಾತ್ಕಾರವು ಉದ್ದೇಶವಾಗಿದ್ದರೆ, ಅದರ ಬೆನ್ನಿಗೆ ಶಾಂತಿ ತಾನಾಗಿಯೇ ಬರುತ್ತದೆ. ‘ಸಾಕ್ಷಾತ್ಕಾರ ‘ ಎಂದರೇ ನೆಂದು ನಾವು ಕೇವಲ ತಿಳಿದುಕೊಳ್ಳುವುದರ ಹಿಂದೆ ಬೀಳಬಾರದು ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು.
ಇದೇ ಜನ್ಮದಲ್ಲಿ ಮುಕ್ತಿಯನ್ನು ಪಡೆಯುವುದು ಕಷ್ಟ. ಅಷ್ಟೇಕೆ, ಅದು ತೀರ ಅಸಾಧ್ಯವೆಂದು ಜನರು ಭಾವಿಸುತ್ತಾರೆ. ಆದರೆ, ಇದೊಂದು ತಪ್ಪುಕಲ್ಪನೆ. ಬಹುಶಃ ಇದೇ ಜನ್ಮವೇ ನಮನ್ನು ಮುಕ್ತಿಗೆ ಕೊಂಡೊಯ್ಯುವ ಕೊನೆಯ ಜನ್ಮವಾಗಿರಲೂ ಬಹುದು; ಯಾರಿಗೆ ಗೊತ್ತು? ಸಾಧಕನು ಇದೇ ಒಂದೇ ಜನ್ಮದಲ್ಲಿಯೇ ಮುಕ್ತಿಯನ್ನು ಪಡೆಯಬಲ್ಲ. ಅಷ್ಟೇ ಅಲ್ಲ, ಆತನು ತತ್ಪರ ಸಾಧನಾ ನಿಷ್ಠನಾಗಿದ್ದರೆ ಮತ್ತು ಒಬ್ಬ ನಿಜವಾದ ಮಾರ್ಗದರ್ಶಿ ದೊರೆತರೆ, ಇನ್ನೂ ಕಡಿಮೆ ಅವಧಿಯಲ್ಲಿಯೇ ಅಂಥ ಸ್ಥಿತಿಯನ್ನು ಪಡೆಯಬಹುದು ಎಂದು ನಮ್ಮ ಗುರುಗಳು ಸಾರಿ ಹೇಳಿದ್ದಾರೆ. ಇದನ್ನು ಅವರು ಸಿದ್ಧಮಾಡಿಯೂ ತೋರಿಸಿದರು. ಆದರೆ, ಶಬ್ದಗಳಲ್ಲಿ ಅದಕ್ಕೆ ನಿದರ್ಶನ ಕೊಡುವುದು ಸಾಧ್ಯವಿಲ್ಲ. ನಮ್ಮ ಅನುಭವವೊಂದೇ ಅದನ್ನು ತೋರಿಸಿಕೊಡಬಲ್ಲದು.

ದೇವರನ್ನು ಅರಣ್ಯ ಮಧ್ಯದಲ್ಲಿಯೇ ಹುಡುಕಬೇಕು ಎಂಬ ಸಾಮಾನ್ಯ ನಂಬಿಕೆ ವ್ಯರ್ಥ ಹಾಗೂ ಅಸಂಬಧ್ಧ; ಅವನು ವನವಾಸಿಯೋ ಎಂಬಂತಿದೆ ಈ ಭಾವನೆ. ನಮ್ಮ ಹೃದಯ ಕುಹರದಲ್ಲಿಯೇ ಅವನನ್ನು ಅರಸುವುದು ಹೆಚ್ಚು ಲೇಸು ಎಂದು ನಾನು ನಂಬುತ್ತೇನೆ. ಆದರೆ, ಆ ಉದ್ದೇಶ ಸಾಧನೆಗೆ ಯೋಧರಿಗೆ ಇರುವಂಥ ಧೃತಿ ಇರಬೇಕಾದುದು ಅಗತ್ಯ.

ತನ್ನ ಪ್ರಾಪಂಚಿಕ ಕರ್ತವ್ಯಗಳನ್ನು ಸಂಪೂರ್ಣ ಕಡೆಗಣಿಸಿ, ಮನೆ ಬಿಟ್ಟು ಪಲಾಯನಮಾಡಿ, ಯಾವ ನಿರ್ದಿಷ್ಟ ಗುರಿ ಅಥವಾ ಉದ್ದೇಶವಿಲ್ಲದೆ ತಿರುಗುವುದು ಯಾರ ಮಟ್ಟಿಗೂ, ಎಳ್ಳಷ್ಟೂ ಸಮರ್ಥನೀಯವಲ್ಲ. ನಿಜಾಂಶವೇನೆಂದರೆ, ಆ ತೆರನಾದ ವೈರಾಗ್ಯ ಸ್ಥಿತಿಯಲ್ಲಿಯೂ ಅವನು ಪ್ರಾಪಂಚಿಕ ಭಾವನೆಗಳಿಂದ ಬಿಡುಗಡೆಹೊಂದಿದ್ದಾನೆ ಎಂಬುದು, ಕ್ವಚಿತ್ತಾಗಿಯೇ ಇದೆ, ಇಲ್ಲವೇ ಇಲ್ಲ ಎಂದರೂ ಸರಿಯೆ. ಸಾಮಾನ್ಯ ಮನುಷ್ಯನ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳುಳ್ಳ ಜೀವನದೊಂದಿಗೆ, ಅವುಗಳಿಗೆ ಯುಕ್ತವಾದ ಗಮನವನ್ನೀಯುತ್ತ, ಸಮನ್ವಯ ಸಾಧಿಸಿಕೊಂಡು ಮುಂದುವರಿಯುವುದು ಈ ಸಾಧನ ಪದ್ಧತಿಯ ಅತ್ಯಂತ ಮುಖ್ಯಲಕ್ಷಣ. ಅದರಿಂದ ಇಹ-ಪರ (ಪ್ರಾಪಂಚಿಕ-ಆಧ್ಯಾತ್ಮಿಕ)ಗಳೆಂಬ ಜೀವನದ ಎರಡೂ ಮುಖಗಳೂ ಸಮಾನ ಪ್ರಭೆಯಿಂದ ವೃದ್ಧಿಗೊಳ್ಳುವಂತಾಗುತ್ತದೆ. ಈ ವಿಚಾರಗಳನ್ನು ಕೇವಲ ಉಪದೇಶ ಮಾಡುವದಾಗಲಿ, ಪ್ರಚಾರಮಾಡುವದಾಗಲಿ ನಮ್ಮ ಅರ್ಥವಲ್ಲ. ಬದಲಿಗೆ, ಅಭ್ಯಾಸಮಾಡಿ, ಪ್ರತ್ಯಕ್ಷ ಅನುಷ್ಠಾನಕ್ಕೆ ತರುವುದಾಗಿದೆ.

ಗುರುಮಹಾರಾಜರು ಪ್ರಚುರಪಡಿಸಿ ಮುಂದಿಟ್ಟಿರುವ ಧ್ಯೇಯ ಆದರ್ಶಗಳನ್ನು ಹೊಸದಾಗಿ ಪರಿಚಯಿಸಲಾದ ಸಹಜಮಾರ್ಗ ಪದ್ಧತಿಯ ಮೂಲಕ ಪ್ರಸಾರಮಾಡುವುದು, ಮತ್ತು ದೈವೀಪ್ರಜ್ಞೆ ಕುರಿತು ನಿದ್ರಿಸುತ್ತಿರುವ ಜನತೆಯನ್ನು ಎಚ್ಚರಗೊಳಿಸಿ ಪ್ರಗತಿಪಥದಲ್ಲಿ ಸರಿಯಾಗಿ ನಡೆಯುವಂತೆ ಮಾಡುವುದು ಮಿಷನ್ನಿನ ಉದ್ದೇಶಗಳು. ಈ ಉದ್ದೇಶ ಸಾಧನೆಗೋಸ್ಕರ, ಇಂದಿನ ಜೀವನಕ್ರಮಕ್ಕೆ ಅತ್ಯಂತ ಅಸಂಗತವೆನಿಸುವಂಥ ಬಲಾತ್ಕಾರದ ದೇಹದಂಡನೆ, ತಪಸ್ಸುಗಳನ್ನು ಒಳಗೊಂಡ ಹಳೆಯ ಯಾಂತ್ರಿಕ ವಿಧಾನಗಳನ್ನು ಬದಿಗಿರಿಸಿ, ಅವುಗಳ ಬದಲಿಗೆ ಸರಳವೂ ಸ್ವಾಭಾವಿಕವೂ ಆದ ಸಾಧನೋಪಾಯಗಳನ್ನು ಅಂಗೀಕರಿಸುವುದು ಅವಶ್ಯಕ.

ಸಂಪೂರ್ಣ ಸ್ವಾತಂತ್ರ್ಯ ಅಥವಾ ಮುಕ್ತಿಯ ವಿಷಯದಲ್ಲಿ ಬಹುತೇಕ ಎಲ್ಲ ಪ್ರಾಚೀನ ಮತ್ತು ಅರ್ವಾಚೀನ ಋಷಿಗಳೆಲ್ಲರೂ ಒಮ್ಮತಗೊಂಡ ಮಾತೆಂದರೆ, ಮಾನವನು ತಲುಪಬಹುದಾದ ಅಂತಿಮ ಮೇರೆಗೆ ಯಶಸ್ವಿಯಾಗಿ ಕೊಂಡೊಯ್ಯುವ ಏಕೈಕ ಮಾರ್ಗ ರಾಜಯೋಗವೊಂದೆ ಎಂಬುದು. ಸಂಪೂರ್ಣ ಸ್ವಾತಂತ್ರ್ಯ ಅರ್ಥಾತ್ ಸಾಕ್ಷಾತ್ಕಾರ ಪಡೆಯಬೇಕೆಂದಿದ್ದ ಪ್ರತಿಯೋರ್ವನೂ ಒಂದಿಲ್ಲೊಂದು ದಿನ ಆ ದಾರಿಗೆ ಬರಲೇಬೇಕು. ಸಹಜಮಾರ್ಗವು ಬಹುಮಟ್ಟಿಗೆ ‘ರಾಜಯೋಗ’ದಗುಂಟ ನಿಕಟವಾಗಿ ಮುಂದುವರಿಯುತ್ತದೆ. ಆದರೆ ಆ ಪದ್ಧತಿಯ ಬಾಹ್ಯಾಚರಣೆಯ ಅತಿರೇಕಗಳನ್ನು ತೆಗೆದುಹಾಕಿ ಕೆಲವೊಂದು ಬದಲಾವಣೆಗಳನ್ನು ಮತ್ತು ತಿದ್ದುಪಡಿಗಳನ್ನು ಮಾಡಲಾಗಿದೆ.

ಗುರುಗಳ ಸಹಾಯ ಸಹಜಮಾರ್ಗ ಸಾಧನಾ ಪದ್ದತಿಯ ಒಂದು ವಿಶೇಷ ಲಕ್ಷಣ. ಹಾಗಿರುವದರಿಂದ, ‘ಪ್ರಾಣಾಹುತಿ’ ಯೆಂಬ ಯೌಗಿಕ ಪ್ರಕ್ರಿಯೆಯ ಮೂಲಕ ಯೋಗ ಶಕ್ತಿಯನ್ನು ಸಂವಹನಗೊಳಿಸಿ ತನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಮರ್ಥನಾದ ಗುರುವನ್ನು ಆರಿಸಿಕೊಳ್ಳಬೇಕಾದದ್ದು ಅಗತ್ಯವಾಗುತ್ತದೆ. ಗುರುವು ತನ್ನ ಅಂತಃಶಕ್ತಿಯನ್ನು ಪ್ರಯೋಗಿಸಿ ಅಭ್ಯಾಸಿಯಲ್ಲಿ ಸುಪ್ತವಾಗಿರುವ ಶಕ್ತಿಗಳನ್ನು ಜಾಗ್ರತಗೊಳಿಸಿ, ತೀರ್ವ ಕ್ರಿಯಾಶೀಲಗೊಳಿಸಿ, ಅವನ ಹೃದಯದ ಕಡೆಗೆ ದೈವೀ ಶಕ್ತಿಯ ಪ್ರವಾಹವನ್ನು ಪ್ರಾಣಾಹುತಿಯ ದ್ವಾರಾ ಹರಿಯುವಂತೆ ಮಾಡುತ್ತಾನೆ. ಅದರ ಪರಿಣಾಮವಾಗಿ ಅಭ್ಯಾಸಿಯು ಹೆಚ್ಚು ಹೆಚ್ಚು ಆನಂದಾನುಭವ ಹೊಂದುತ್ತ ಆಧ್ಯಾತ್ಮಿಕ ಪ್ರಗತಿ ಹೊಂದಲಾರಂಭಿಸುತ್ತಾನೆ. ಅಭ್ಯಾಸಿ ಅದನ್ನು ಸ್ವೀಕರಿಸಲು ಸಿದ್ದನಾಗಬೇಕು ಅಷ್ಟೇ. ಅಂದರೆ, ಅದನ್ನು ಸ್ವೀಕರಿಸಲು ಸಮರ್ಥನೂ ಅರ್ಹನೂ ಆಗಬೇಕು. ಈ ರೀತಿಯಲ್ಲಿ, ಈ ಹಿಂದೆ ಯಾವುದಕ್ಕೆ ಸಂತತ ಪರಿಶ್ರಮ ಮತ್ತು ಕಷ್ಗಗಳನ್ನು ಎದುರಿಸುವದು ಅವಶ್ಯಕವಾಗಿತ್ತೋ, ಅದನ್ನು. ಅತ್ಯಂತ ಕಡಿಮೆ ಪರಿಶ್ರಮದಿಂದ, ತೀರ ಅಲ್ಪಕಾಲದಲ್ಲಿಯೇ ಸಾಧಿಸಬಹುದು. ಆದರೆ ಅದೆಲ್ಲ ಪ್ರಯೋಗಾತ್ಮಕವಾದುದು, ಮಾತಿನಲ್ಲಿ ವಿವರಿಸಲಾಗುವುದಿಲ್ಲ. ಪ್ರಾಯೋಗಿಕ ಅನುಭವ ಮಾತ್ರವೇ ಅದರ ಲಾಭಗಳನ್ನು ಪ್ರಕಾಶ ಪಡಿಸಬಲ್ಲದು.

ಅನೇಕರು ‘ಶಾಂತಿ’ಯ ಸ್ಥಿತಿಯ ಸ್ವಾದವನ್ನು ಅನುಭವಿಸಿರಲಿಕ್ಕೆ ಸಾಕು. ವಾಸ್ತವವಾಗಿ, ನಿಜವಾದ ಶಾಂತಿ ಯೆಂದರೇನೆಂಬುದು ವಾಸ್ತವಿಕ ಸ್ಥಿತಿಯು, ಗ್ರಹಿಕೆಗೆ ಮೀರಿದುದು. ಅಲ್ಲಿ ಯಾವ ವಿರೋಧಕ್ಕೂ ಆಸ್ಪದವಿಲ್ಲ. ಅದು ಶಾಂತಿಯೂ ಅಲ್ಲ, ತಳಮಳವೂ ಅಲ್ಲ; ಸಂಯೋಗವೂ ಅಲ್ಲ, ವಿಯೋಗವೂ ಅಲ್ಲ; ಆನಂದವೂ ಅಲ್ಲ, ಅದರ ವಿರುದ್ಧವಾದುದೂ ಅಲ್ಲ. ನಿಜಕ್ಕೂ ನಾವು ಯಾವುದಕ್ಕೋಸ್ಕರ ನೋವನ್ನು ಬೆಳೆಸಿಕೊಂಡಿದ್ದೆವೋ ಅದೇ ಅದು. ನಿಮಗೆಲ್ಲರಿಗೂ ಆ ನೋವಿನ ಸ್ವಾದ ಸಿಗಲಿ. ಅದನ್ನು ಬೆಳೆಸಿಕೊಳ್ಳುವದೇನೂ ಕಷ್ಟವಲ್ಲ. ದೃಢಸಂಕಲ್ಪ ಮತ್ತು ಅವಿಚ್ಛಿನ್ನ ಲಕ್ಷಮಾತ್ರವೇ ಆ ಉದ್ದೇಶ ಸಾಧನೆಗೆ ಬೇಕಾದುದು. ಆಗ ನೀವು ಅರಸುತ್ತಿರುವದು ನಿಮ್ಮ ನಿಕಟದಲ್ಲಿಯೇ ನಿಮ್ಮೊಡನೆಯೇ ಇದೆ ಎಂಬುದು ಅರಿವು ಆಗುವುದು, ಅಷ್ಟೇಕೆ, ನೀವು ಯಾವುದನ್ನು ಅರಸುತ್ತಿ ರುವಿರೋ ಅದು ನೀವೇ ಆಗಿರಲೂಬಹುದು. ಅದಕ್ಕೆ, ದಾರಿಯಲ್ಲಿರುವ ಎಲ್ಲ ಕಳೆ-ಮೆಳೆಗಳನ್ನು ಸುಟ್ಟು ಹಾಕಬಹುದಾದಂಥ ಜ್ವಲಂತ ಸ್ಥಿತಿ ನಿಮ್ಮ ಹೃದಯದಲ್ಲಿ ಇರತಕ್ಕದ್ದು.

ಯಾವ ರೀತಿಯಲ್ಲಿಯೇ ಆಗಲಿ, ಕರ್ಮಠ ‘ಗುರುತ್ವ’ದ ಕಲ್ಪನೆಯನ್ನು ಪ್ರತಿಪಾದಿಸುವದು ನನ್ನ ಉದ್ದೇಶವಲ್ಲ. ನಮ್ಮ ಸಂಸ್ಥೆಯಲ್ಲಿ ಪರಸ್ಪರ ಅಗತ್ಯವಿರುವ ಸಹಾಯವನ್ನೊದಗಿಸುತ್ತ ಸೇವೆ ಮತ್ತು ತ್ಯಾಗದ ಭಾವದಿಂದ ಸಾಮಾನ್ಯ ಭಾತೃ ಭಾವವನ್ನು ನಾವು ಇಟ್ಟುಕೊಳ್ಳುತ್ತೇವೆ ಜಾತಿ, ಪಂಥ, ಲಿಂಗ, ವರ್ಣಗಳ ಭೇದವಿಲ್ಲದೆ, ಪ್ರತಿಯೊಬ್ಬರಿಗೂ ಸಹಜ ಮಾರ್ಗ ಪದ್ಧತಿಯ ಆಧ್ಯಾತ್ಮಿಕ ಸಾಧನಾನುಸರಣೆ ಹಾಗೂ ಶಿಕ್ಷಣ ಮುಕ್ತವಾಗಿ ಲಭ್ಯವಿದೆ. ಸತ್ಯಾನ್ವೇಷಕರು ‘ಅಭ್ಯಾಸ’ ಮಾಡಿ ಅನುಭವ ಪಡೆಯಲು ಮುಂದೆ ಬಂದು, ನನ್ನ ಗುರುಮಹಾರಾಜರ ಕೃಪೆಯಿಂದ ಶ್ರೇಷ್ಠತಮ ಲಾಭ ಹೊಂದಬಹುದು. ನನ್ನ ಗುರುಗಳು ಭಾರತೀಯ ದರ್ಶನಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ. ಆ ಪರಮ ಗುರುಗಳ ಕೃಪಾದೃಷ್ಟಿಯು ಎಲ್ಲರಿಗೂ ಅಂತಿಮ ಗುರಿಯ ಸಾಕ್ಷತ್ಕಾರಕ್ಕೆ ಮಾರ್ಗದರ್ಶನ ನೀಡಿ ಮಾನವನ ಜೀವನದ ಉದ್ದೇಶವು ಸಫಲಗೊಳ್ಳುವಂತೆ ಮಾಡಲಿ.