ಜ್ಞಾನ ಮತ್ತು ಅದರ ಸ್ವರೂಪ
ಜ್ಞಾನ, ಅಜ್ಞಾನ, ಸಂಪೂರ್ಣ ಅಜ್ಞಾನ
ಸಾಮಾನ್ಯ ಅರ್ಥದಲ್ಲಿ ‘ಜ್ಞಾನ’ ಎಂದರೆ ತಿಳುವಳಿಕೆ. ಅದು ದೈಹಿಕ, ಮಾನಸಿಕ (ಬೌದ್ಧಿಕ), ಭೌತಿಕ ಅಥವಾ ಆಧ್ಯಾತ್ಮಿಕ ಎಂದು ವಿವಿಧ ರೀತಿಯದಿರಬಹುದು. ‘ಆಧ್ಯಾತ್ಮಿಕ’ವೆಂಬಲ್ಲಿ ಅದು ಅದೆಷ್ಟು ಅಸ್ಪಷ್ಟ ರೀತಿಯಲ್ಲಿ ಬಳಕೆಯಾಗುತ್ತಿದೆಯೆಂದರೆ ಅದರಿಂದ ಸೂಚಿತವಾಗುವ ನಿಜವಾದ ಅರ್ಥವನ್ನು ಅರಿಯುವುದು ಕಷ್ಟವಾಗುತ್ತದೆ. ಸಾಮಾನ್ಯ ತಿಳುವಳಿಕೆಯ ನಿಮ್ನ ಸ್ತರದಿಂದ ಹಿಡಿದು ಆಂತರಿಕ ಪ್ರಜ್ಞೆಯ ಉನ್ನತ ಮಟ್ಟದವರೆಗೂ ಅದರ ವ್ಯಾಪ್ತಿ ಹಬ್ಬಿದೆ. ಇದು ಬಹಳ ಗೊಂದಲಕ್ಕೂ, ಅಪಾರ್ಥಕ್ಕೂ ಎಡೆಮಾಡಿಕೊಡುತ್ತದೆ. ಕೆಲವೊಂದು ಶಾಸ್ತ್ರಗ್ರಂಥಗಳನ್ನು ಕಲಿತವನೂ, ಇನ್ನೊಬ್ಬ, ಪ್ರತಿಕ್ಷಣವೂ ‘ಅಹಂ ಬ್ರಹ್ಮಾಸ್ಮಿ’ಎಂ ಬಂಥ ರೂಢ ವಾಕ್ಯಗಳನ್ನು ಉಚ್ಚರಿಸುವವನೂ ತಾನು ಜ್ಞಾನಿ ಅಥವಾ ಪ್ರಬುದ್ಧನೆಂದು ಹೇಳಿಕೊಳ್ಳಬಯಸುತ್ತಾನೆ. ಆತನ ಆಂತರಿಕ ಮಟ್ಟವೇನೆ ಇರಲಿ , ಜನರೂ ಆತನನ್ನು ಅಂತೆಯೇ ಒಪ್ಪಿಕೊಳ್ಳುತ್ತಾರೆ. ನಿಜವಾದ ಅರ್ಥದಲ್ಲಿ ತನ್ನ (ಆಧ್ಯಾತ್ಮಿಕ) ಸಾಧನೆಯ ಯಾತ್ರಾಕಾಲದಲ್ಲಿ ಅಭ್ಯಾಸಿಯು ಬೇರೆ ಬೇರೆ ಗ್ರಂಥಿಗಳಲ್ಲಿಯ ಆಧ್ಯಾತ್ಮಿಕ ಸ್ಥಿತಿಗಳ ಮೂಲಕ ಹಾದು ಹೋಗುವಾಗ ಅಭ್ಯಾಸಿಯಲ್ಲಿ ವಿಕಾಸಗೊಳ್ಳುವ ಅಂತರಿಕ ಮಾನಸಿಕ ಸ್ಥಿತಿಗೆ ‘ಜ್ಞಾನ’ ಎಂಬ ಶಬ್ದ ಅನ್ವಯಿಸುತ್ತದೆ. ವಾಸ್ತವವಾಗಿ, ‘ಜ್ಞಾನ’ ಎಂದರೆ, ಪ್ರತಿಯೊಂದು ಗ್ರಂಥಿಯಲ್ಲಿಯೂ ಇರುವ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳುವದಾಗಿದೆ. ಗ್ರಂಥಿಗಳು ಅಸಂಖ್ಯೇವಾಗಿರುವದರಿಂದ ಅಭ್ಯಾಸಿಯು ಮುಟ್ಟಿದ ಮಟ್ಟಕ್ಕೆ ಅನುಗುಣವಾಗಿ ಅವನು ಪಡೆದುಕೊಂಡ ಜ್ಞಾನವು ಭಿನ್ನವಾಗಿರುತ್ತದೆ. ಹಾಗೆ, ಒಬ್ಬನು ಮುಟ್ಟಿರುವ ಮಟ್ಟವನ್ನು ಅಥವಾ ಕಂಡುಕೊಂಡ ಜ್ಞಾನದ ಪರಿಮಿತಿಯನ್ನು ಖಚಿತವಾಗಿ ಹೇಳದೆ ಯಾರನ್ನಾಗಲಿ ಜ್ಞಾನಿಯೆಂದು ಕರೆಯುವುದು ಅರ್ಥಹೀನವೇ ಸೈ. ಜ್ಞಾನವು ಪ್ರಕಾಶಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ನಾವು ಪ್ರವೇಶ ಹೊಂದಿ, ಅದರ ಪರಿಣಾಮವನ್ನು ಅರಗಿಸಿಕೊಂಡು ಅದರಲ್ಲಿ ಲಯಹೊಂದಿದಾಗಲೇ ನಿಜವಾದ ಜ್ಞಾನದ ಸ್ಥಿತಿ ಉಂಟಾಗುತ್ತದೆ. ನಾವು ಈ ಸ್ಥಿತಿಯನ್ನು ಬೆಳೆಸಿಕೊಂಡು ಅದರ ಅರಿವಿನಲ್ಲಿ ಲಯಹೊಂದಿದಾಗ ಅದನ್ನು ಕುರಿತು ಎಲ್ಲವೂ ನಮಗೆ ತಿಳಿದುಬರುತ್ತದೆ ಹಾಗೂ ನಾವು ಜ್ಞಾನಿಗಳಾಗುತ್ತೇವೆ. ಅಂದರೆ, ಆ ಹಂತದ ಮಟ್ಟಿಗೆ ನಾವು ಜ್ಞಾನ ಪ್ರಾಪ್ತರಾಗುತೇವೆ. ನಮ್ಮ ವಿಚಾರಶಕ್ತಿಯನ್ನು ಪ್ರಯೋಗಿಸಿ ಜ್ಞಾನ ಸಂಪಾದಿಸಲು ಅದು ಕೃತಕವಾಗಿರುತ್ತದೆಯೇ ಹೊರತು ನೈಜವೂ ಯಥಾರ್ಥವೂ ಆಗಿರುವುದಿಲ್ಲ. ಒಂದು ಸ್ಥಿತಿಯ ನಿಜವಾದ ಜ್ಞಾನವೆಂದರೆ ನಾವು ಲಯಹೊಂದಿದ ಸ್ಥಿತಿಯಲ್ಲಿ ಸಮಗ್ರ ಏಕರೂಪತೆ. ವಿವಿಧ ಸ್ಥಿತಿಗಳಲ್ಲಿಯ ಜ್ಞಾನವು ನಮಗೆ ನೀಡುವ ಸಹಾಯವೆಂದರೆ, ‘ಪರತ್ತ್ವ’ದ(ಪರಮಾತ್ಮನ) ಅನ್ವೇಷಣೆಗಾಗಿ ಅದು ನಮ್ಮಲ್ಲಿ ಉತ್ಕಟ ಹಂಬಲವನ್ನು ತುಂಬುವುದೇ ಆಗಿದೆ.
ಅಜ್ಞಾನ ಮತ್ತು ಜ್ಞಾನ ಒಂದೇ ವಸ್ತುವಿನ ಎರಡು ತುದಿಗಳು. ಒಂದು ನಿರ್ದಿಷ್ಟ ದೂರದವರೆಗೆ ಅದು ಅಜ್ಞಾನ ಎಂದು ಕರೆಯಲ್ಪಡುತ್ತದೆ. ಅನಂತರ ಅದೇ ಜ್ಞಾನವಾಗಿ ಮಾರ್ಪಡುತ್ತದೆ. ಅವು ಚುಂಬಕದ ಎರಡು ದ್ರುವಗಳಂತೆ ಇವೆ. ಹೀಗೆ ವಿದ್ಯೆ(ಜ್ಞಾನ) ಇಲ್ಲದೆ ಅವಿದ್ಯಗೆ(ಅಜ್ಞಾನಕ್ಕೆ) ಅಸ್ತಿತ್ವವಿಲ್ಲ, ಅಥವಾ ಅವಿದ್ಯೆಯಿಲ್ಲದೆ ವಿದ್ಯೆಗೆ ಅಸ್ತಿತ್ವವಿರುವದಿಲ್ಲ. ಒಂದು ಇದೆಯೆಂದರೆ ಇನ್ನೊಂದೂ ಇರಲೇಬೇಕು. ಅದರ ಅರ್ಥವೇನೆಂದರೆ, ಅವಿದ್ಯೆಯತೆರೆ ಹರಿದುಹೋದ ಮೇಲೆ ವಿದ್ಯೆ-ಅವಿದ್ಯೆಗಳೆರಡೂ ಹೊರಟುಹೋಗುತ್ತವೆ. ವಿದ್ಯೆ-ಅವಿದ್ಯೆಗಳಲ್ಲಿ ಸೇರಿರುವ ಸಮಗ್ರ ಮಂಡಲವು ಅವಿದ್ಯೆಯಲ್ಲಿ ಅಡಕಗೊಂಡಿದೆ. ಇವೆರಡಕ್ಕೂ ಆಚೆ ಇರುವ ‘ತಮ’ ಎಂಬುದರ ಸ್ಥಿತಿಯೇ ಅದು. ಅದು ಸಾಕ್ಷಾತ್ಕಾರದ ನಿಜವಾದ ಸ್ಥಿತಿ; ಅಲ್ಲಿ ವಿದ್ಯೆಯೂ ಇಲ್ಲ. ಅವಿದ್ಯೆಯೂ ಇಲ್ಲ. ಹಾಗಾದರೆ ಅಲ್ಲಿರುವದಾದರೂ ಏನು? ಇವೆರಡಂತೂ ಅಲ್ಲ. ಅಲ್ಲಿರುವುದು ಸಂಪೂರ್ಣ ಅವ್ಯಕ್ತತೆಯ ಸ್ಥಿತಿ; ಅದು ತಿಳಿಯಲಾರದಿರುವಿಕೆಯೂ ಅಲ್ಲ, ಸಂಪೂರ್ಣ ಜ್ಞಾನರಹಿತ ಸ್ಥಿತಿಯೂ ಅಲ್ಲ. ಅಲ್ಲಿರುವುದನ್ನು ಇರುವುದನ್ನು ಶೈಶವದಲ್ಲಿರುವ ಸ್ಥಿತಿಯಂತೆ ಸ್ಥೂಲವಾಗಿ, ಅಜ್ಞಾನತ ಸ್ಥಿತಿಯೆಂದು ಸೂಚಿಸಬಹುದು. ನಿಜಕ್ಕೂ ‘ಅಜ್ಞಾನ’ವೇ ಜ್ಞಾನದ ಅತ್ಯುನ್ನತ ಸ್ತರವಾಗಿದೆ. ಇದರಿಂದ ಹೊರಡುವ ಅರ್ಥವೇನೆಂದರೆ, ನಾವು ಅವಿದ್ಯೆಯ ಮಟ್ಟದಿಂದ ಪ್ರಾರಂಭಿಸುತ್ತೇವೆ. ಮತ್ತು ಅಂತಿಮವಾಗಿ ಉನ್ನತಮಟ್ಟದ ಅಜ್ಞಾನದಲ್ಲಿ(ಅಥವಾ) ನಾನು ಕರೆಯುವಂತೆ ‘ಸಂಪೂರ್ಣ ಅಜ್ಞಾನ’ (Complete Ignorance) ಕೊನೆಗೊಳ್ಳುತ್ತೇವೆ. ವಿದ್ಯೆಯ(ಆ ಶಬ್ದದ ಸಾಮಾನ್ಯ ಅರ್ಥದಲ್ಲಿ)ಮಂಡಲವು ಒಂದು ಮಧ್ಯಾಂತರದ ಸ್ಥಿತಿ ಮಾತ್ರ, ಜ್ಞಾನದ ಮಂಡಲವೆನಿಸಿಕೊಳ್ಳುವುದೆಲ್ಲವೂ ವಾಸ್ತವಿಕವಾಗಿ, ನೈಜ ಅರ್ಥದ ಅಜ್ಞಾನವೇ ಆಗಿದೆ.
ಅಜ್ಞಾನದ ತೆರೆ ಹರಿದಮೇಲೆ ಉದಯವಾಗುವದನ್ನು ‘ಜ್ಞಾನ’ ಎಂದು ಎಂದಾದರೂ ಕರೆಯಬಹುದೆ?ಎರಡು ವಿರುದ್ಧವಸ್ತುಗಳನ್ನು ದೃಷ್ಟಿಯಲ್ಲಿರಿಸಿ, ಬಾಹ್ಯಾರ್ಥದಲ್ಲಿ ಹಾಗೆ ಹೇಳುವುದಾರೂ, ಅದು ಖಂಡಿತವಾಗಿ ಸರಿಯಲ್ಲ, ಅದು ‘ಜ್ಞಾನ’ದ ಭಾವವನ್ನು ಒಳಗೊಳ್ಳುವುದೋ? ಇಲ್ಲ. ‘ಜ್ಞಾನ’ ಎಂಬುದು ತನಗಿಂತ ಆಚೆಗೆ ಇರುವುದರ ಅರಿವನ್ನು ಸೂಚಿಸುತ್ತದೆ. ಸಾಕ್ಷಾತ್ಕಾರವೆಂದರೆ ತನ್ನ ತನವನ್ನು ಪರತತ್ವದಲ್ಲಿ ಲಯಗೊಳಿಸುವದಾಗಿದೆ. ಹಾಗಿದ್ದ ಮೇಲೆ, ಜ್ಞಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂದ ಮೇಲೆ ಅದನ್ನು ಏನೆಂದು ಕರೆಯುವುದು? ‘ವಿದ್ಯೆ’ಯ ಅಭಾವ ಸ್ಥಿತಿಯೆಂದೆ? ತಿಳಿಯದಿರುವಿಕೆಯೆಂದೆ? ಅಜ್ಞಾನದ ಅಥವಾ ಇನ್ನೇನೊ ಎಂದೆ? ಅದನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯವಾದರೂ, ಅದು ಅಂಥ ಎನೋ ಒಂದು ಎಂದು ಸಂಕ್ಷೇಪವಾಗಿ ಹೇಳಬಹುದು. ನಾನು ಅಭಿವ್ಯಕ್ತಗೊಳಿಸಿದಂತ ‘ಸಂಪೂರ್ಣ ಅಜ್ಞಾನ’ ಎಂಬುದು ಬಹುಶಃ ಸಮರ್ಪಕವೆನಿಸಬಹುದಾದ ಅಭಿವ್ಯಕ್ತಿಗೆ ಅತಿ ಹತ್ತಿರದ್ದಾದೀತು.
ದೈವೀ ಪಥದಲ್ಲಿ ಸಾಗುವವರು ಕತ್ತಲಿನಿಂದ ಬೆಳಕಿನ ಕಡೆಗೆ ಹೋಗುತ್ತಿರುವರೆಂದು ಕಲ್ಪಿಸಲಾಗುತ್ತದೆ. ಕತ್ತಲೆ ಎಂದರೆ(ಅದು ಸಾಮಾನ್ಯವಾಗಿ ಪ್ರತಿನಿಧಿಸುವಂತೆ)’ ‘ಅವಿದ್ಯೆ’, ‘ಪ್ರಕಾಶ’ ಎಂದರೆ ‘ವಿದ್ಯೆ’ ಎಂದಿಟ್ಟುಕೊಳ್ಳೋಣ. ‘ಬೆಳಕ’ನ್ನು ಸಹಜಮಾರ್ಗವು ಗುರಿಯೆಂದಿಟ್ಟು ಕೊಂಡಿಲ್ಲ. ಅದು(ಪ್ರಕಾಶವು) ಪರಬ್ರಹ್ಮದತ್ತ ನಮ್ಮ ಪಯಣದಲ್ಲಿ ಒಂದು ಮಧ್ಯಾಂತರದ ಸ್ಥಿತಿ ಮಾತ್ರ ಅದನ್ನು ದಾಟಿ ಕತ್ತಲೂ ಅಲ್ಲದ, ಪ್ರಕಾಶವೂ ಅಲ್ಲದ ಅದರಾಚೆಗಿರುವ ಪರತತ್ವದತ್ತ ನಮ್ಮ ಪಯಣ. ಹೀಗೆ ನಾವು ‘ಅವಿದ್ಯೆ'(ಅಜ್ಞಾನ)ಯಿಂದ ಪ್ರಾರಂಭಮಾಡಿ ವಿದ್ಯೆಯ(ಜ್ಞಾನದ) ಮೂಲಕ ಹಾಯ್ದು, ಯಾವುದು ವಿದ್ಯೆ ಮತ್ತು ಅವಿದ್ಯೆಗಳ ಆಚೆಗೆ ಇದೆಯೋ ಅದರೆಡೆಗೆ ಸಾಗುತ್ತೇವೆ. ಕತ್ತಲೆಯೂ, ಬೆಳಕು ಅಲ್ಲದ, ವಿದ್ಯೆ-ಅವಿದ್ಯೆಗಳೆರಡೂ ಅಲ್ಲದ ಅದರ ನಿಜವಾದ ಭಾವವನ್ನು ಯಾವ ಶಬ್ದ ಸೂಚಿಸಬಲ್ಲದು? ವಿಶ್ವದ ಯಾವ ಶಬ್ದಕೋಶದಲ್ಲಿ ಎಲ್ಲಾದರೂ ಅಂಥ ಯಾವುದೇ ಪದವಿದೆಯೇ? ಖಂಡಿತವಾಗಿಯೂ ಯಾವುದೂ ಇಲ್ಲ. ಹಾಗಿರುವರಿಂದ ನಾನು ಹೇಳಿದಂತೆ ಅಪರಿಷ್ಕ್ರತವಾದ ಪ್ರಾರಂಭಿಕ ಅಜ್ಞಾನಕ್ಕಿಂತ ಭಿನ್ನವಾದ, ‘ಸಂಪೂರ್ಣ ಅಜ್ಞಾನ’ವೆಂಬ ಪದವೇ ಸೂಕ್ತ.
ಜ್ಞಾನ ಸಾಧನಗಳು: ತರ್ಕ, ಶ್ರುತಿ ಮತ್ತು ಆನುಭವ
ಸಾಮಾನ್ಯವಾಗಿ ತತ್ತ್ವಶಾಸ್ತ್ರಜ್ಞರು ವಸ್ತುಗಳ ಅಂತರಾಳದ ತಿರುಳನ್ನು ಮುಟ್ಟಲು ತರ್ಕದ ಮೂಲಕ ಪ್ರಯತ್ನಪಟ್ಟಿದ್ದಾರೆಯೇಹೊರತು ಅಂತರರ್ದೃಷ್ಟಿಯ ಮೂಲಕವಲ್ಲ. ತರ್ಕವು ಅದರ ಸಾಮಾನ್ಯಾರ್ಥದಲ್ಲಿ ತೆಗೆದುಕೊಂಡರೆ, ದೋಷಯುಕ್ತವಾಗಿರಬಹುದು ಮತ್ತು ನಮ್ಮನ್ನು ಕೈಬಿಡಬಹುದು. ಆದರೆ, ಅನಾವಶ್ಯಕವಾದ ತರ್ಕದ ಮಾದ್ಯಮವಿಲ್ಲದೆ, ಅಂತರ್ಬೋಧೆಯುಳ್ಳ ಅಂತರ್ದೃಷ್ಟಿಯ ಮೂಲಕ ವಸ್ತುವನ್ನು ವೀಕ್ಷಿಸಿದರೆ, ಅದು ಯಾವ ದೋಷ ಅಥವಾ ತಪ್ಪುಗಳಿಲ್ಲದೆ, ತನ್ನ ಮೂಲರೂಪದಲ್ಲಿ ಗೋಚರವಾಗುವುದು. ಗ್ರಂಥಿಗಳು ತಾವಾಗಿಯೇ ತೆರೆದುಕೊಳ್ಳಲು ಪ್ರಾರಂಭಿಸಿದಾಗ ನಾವು ವಸ್ತುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಬೇಕು.
ಪುಸ್ತಕಗಳಿಂದ ಹುಡುಕಿ ಪಡೆಯಲ್ಪಡುವ ಮಾರ್ಗದರ್ಶನವು ಅಷ್ಟು ಪ್ರಯೋಜನಕ್ಕೆ ಬರುವುದಿಲ್ಲ ಯಾಕೆಂದರೆ, ಅವು ಹೆಚ್ಚು ಪಕ್ಷ ತಪ್ಪುದಾರಿಗೆಳೆಯುವಂಥವೂ, ಕೆಲವೊಮ್ಮೆ ಅಪಾಯಕಾರಿಯೂ ಆಗಿರುತ್ತವೆ. ಪುಸ್ತಕಗಳಲ್ಲಿ ಸೂಚಿಸಲಾದ ವಿಧಾನಗಳು ಬಾಹ್ಯ ಮುಖಗಳನ್ನಷ್ಟೇ ಸ್ಪರ್ಶಿಸುವದರಿಂದ ಸಾಮಾನ್ಯವಾಗಿ ಗೊಂದಲವನ್ನುಂಟುಮಾಡುತ್ತವೆ. ಔಷಧಗಳ ಹೆಸರು, ಗುಣಸ್ವಭಾವಗಳನ್ನು ಸುಮ್ಮನೆ ಓದುವದರಿಂದ ಯಾರೂ ವೈದ್ಯನಾಗಲಾರರು. ಮಾವಿನ ಹಣ್ಣಿನ ರುಚಿಯ ವರ್ಣನೆಯನ್ನು ಪುಸ್ತಕದಲ್ಲಿ ಓದುವುದರಿಂದ ಆ ರುಚಿಯನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ‘ಕಡುಬಿನ(ರುಚಿಯ)ಪುರಾವೆ ಅದನ್ನು ತಿನ್ನುವದರಲ್ಲಿದೆ’ ಎಂಬುದು ಪ್ರಸಿದ್ಧವಾದ ಒಂದು ಹೇಳಿಕೆ. ಮೇಲು ನೋಟಕ್ಕೆ ವೇದದಲ್ಲಿಯೂ ವಿರೋಧಾಭಾಸಗಳು ಕಂಡುಬರುತ್ತವೆ. ಅದರ ಪರಿಣಾಮವಾಗಿ ಆರುದರ್ಶನಗಳು ಹುಟ್ಟಿವೆ. ತನ್ನ ನಿಲುಕಿಗೆ ಅನುಸಾರ ಪ್ರತಿಯೋರ್ವನೂ ಏನನ್ನಾದರೂ ಹೇಳುತ್ತಾನೆ. ಯಾವುದರಿಂದ ಅವ್ಯಯವಾದುದನ್ನು ಸಾಕ್ಷಾತ್ಕರಿಸಿಕೊಳ್ಳುವೆವೋ ಅದೇ ನಿಜವಾದ ಸ್ವಾಧ್ಯಾಯ. ಆದರೆ ಅದನ್ನು ಪ್ರಜ್ಞಾನದ ದೃಷ್ಟಿಯಿಂದ ಗ್ರಹಿಸಬೇಕಲ್ಲದೆ, ಓದುವದರ, ನಂಬುವುದರ ಅಥವಾ ತರ್ಕದ ಮೂಲಕ ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಯಾವ ಗ್ರಂಥಗಳನ್ನು ವ್ಯಾಸಂಗಮಾಡಿಲ್ಲವೆಂದು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತೇನೆ. ಅವು ಪ್ರಯೋಜನಕಾರಿಯೆಂದು ನನಗೆ ಅನ್ನಿಸಲಿಲ್ಲ. ನಾನು ‘ಸತ್ಯ’ವೊಂದನ್ನೇ ಲಕ್ಷವಾಗಿರಿಸಿಕೊಂಡೆ, ಮತ್ತು ಪಡೆಯಲು ಯೋಗ್ಯವಾದ ವಸ್ತುವೆಂದರೆ ಅದೊಂದೇ ಎಂದು ತಿಳಿದೆ; ಹಾಗೂ ಪುಸ್ತಕ ವ್ಯಸಂಗವನ್ನು ವಿದ್ವಾಂಸರ, ಪಂಡಿತರ ಪಾಲಿಗೆ ಬಿಟ್ಟುಕೊಟ್ಟೆ. ಶಂಕರ, ರಾಮಾನುಜ . ಅಥವಾ ಇತರರು ತಮ್ಮ ತಮ್ಮ ಅನುಭವ ಕುರಿತು ಅದೇನೆ ಹೇಳಿರಲಿ, ನಾನು ಹೇಳುವುದು, ಬರೆಯುವುದು ಎಲ್ಲವೂ, ಸಾಕ್ಷತ್ಕಾರದ ಮಾರ್ಗದಲ್ಲಿ ನನ್ನ ಅನುಭವ ಆಧಾರದ ಮೇಲೆಯೇ ಆಗಿದೆ. ಈಗೀಗ ಕೆಲವೊಮ್ಮೆ ನಾನು ಓದುವುದೂ ಉಂಟು, ಆದರೆ ಅದು ಮನೋವಿಶ್ರಾಂತಿಗಾಗಿ; ಮತ್ತು ನನ್ನ ಅಭಿಪ್ರಾಯಗಳ ಸುಲಭ ಅಭಿವ್ಯಕ್ತಿಗೋಸ್ಕರ, ಸಾಧ್ಯ ವಿರುವಷ್ಟನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಶಂಕರಾಚಾರ್ಯರ ‘ವಿವೇಕಚೂಡಾಮಣಿ’ಯಲ್ಲಿ ನಾನು ಓದಿದ ಒಂದು ಮಾತು ನೆನಪಿದೆ. ಅದರ ಅರ್ಥವೇನೆಂದರೆ “ಗ್ರಂಥಗಳು ಸಾಕ್ಷಾತ್ಕಾರಕ್ಕೆ ನಮಗೆ ಸಹಾಯಮಾಡುವದಿಲ್ಲ ಹಾಗೂ ಸಾಕ್ಷಾತ್ಕಾರವಾದ ಮೇಲೆ ಗ್ರಂಥಗಳು ನಿಷ್ಪ್ರಯೋಜಕ”.
ಪಾಪಿಗಳಿಗೋಸ್ಕರ ನರಕವಿದೆ, ಅಜ್ಞಾನಿಗಳಿಗೆ ಸ್ವರ್ಗವಿದೆ. ಮುಗ್ದರಿಗೆ ಬ್ರಹ್ಮಲೋಕವಿದೆ ಆದರೆ ಬುದ್ಧಿವಂತರಿಗೆ , ವಿದ್ವಾಂಸರಿಗೆ ತಾವೇ ನಿರ್ಮಿಸಿಕೊಂಡ ಕೃತಕ ಸ್ವರ್ಗವೂ ಇದೆ, ಮತ್ತು ಬಲಹೀನರಿಗೆ ಈ ಮರ್ತ್ಯಲೋಕವಿದೆ. ಆದರೆ ಬಲಹೀನರು ಯಾರಿರಬಹುದು ? ಆತ್ಮನಿರ್ಭರತೆ, ಆತ್ಮವಿಶ್ವಾಸವಿಲ್ಲದವರೇ ಬಲಹೀನರು. ಶಾಸ್ತ್ರಗಳು ಪರಸ್ಪರ ವಿರೋಧವುಳ್ಳವು, ಆದರೂ ಯೋಚಿಸಿ ಪರಿಹಾರೋಪಾಯವನ್ನು ಪಡೆಯುವ ಅವಕಾಶವನ್ನು ನಮಗೆ ಒದಗಿಸಿಕೊಡುವದರಿಂದ ಅವುಗಳಿಗೂ ಮಹತ್ವವಿದೆ. ಇದಲ್ಲದೆ ಅವುಗಳಿಗೆ ಇನ್ನೊಂದು ಮೌಲ್ಯವೂ ಉಂಟು. ಏನೆಂದರೆ ಪ್ರತಿಯೊಂದು ಬೇರೆ ಬೇರೆ ರುಚಿ, ಮನಃಸ್ಥಿತಿ, ಮತ್ತು ಮಾನಸಿಕ ಮಟ್ಟ ಇರುವವರಿಗೆ ಅವು ಆಧ್ಯಾತ್ಮಿಕ ಪ್ರಗತಿಯ ಸಾಧನೋಪಾಯ ಮತ್ತು ವಿಧಾನಗಳನ್ನು ಒದಗಿಸಿಕೊಡುತ್ತವೆ. ನಾನು ಗ್ರಂಥಗಳ ಮೂಲಕ ಸಾಕ್ಷಾತ್ಕಾರದ ಮಾರ್ಗದಲ್ಲಿ ಮುಂದುವರಿದಿದ್ದರೆ, ದೈವತ್ವದ (ಪರತತ್ವದ) ಮೂಲಗುಣವಾದ ‘ಅಜ್ಞಾನ’ದ ಮಟ್ಟದವರೆಗೆ ನಾನು ಬರಲು ಶಕ್ತನಾಗುತ್ತಿರಲಿಲ್ಲ. ಪ್ರಾಯೋಗಿಕ ಜೀವನವೊಂದೇ ನಡೆಸಲು ಯೋಗ್ಯವಾದುದು. ಸಾಕ್ಷಾತ್ಕಾರವೆಂದರೇನೆಂದು ನಾವು ತಿಳಿದುಕೊಂಡರಷ್ಟೇ ಸಾಲದು, ಅದನ್ನು ಪಡೆಯಲೂ ಪ್ರಯತ್ನಿಸಬೇಕು.