ಮಾನವ

ಬ್ರಹ್ಮಾಂಡದಲ್ಲಿ ಅವನ ಸ್ಥಾನ ಮತ್ತು ಗತಿ

ವಿಶ್ವವು ಹೇಗೆ ಅಸ್ತಿತ್ವದಲ್ಲಿ ಬಂದಿತೆಂದು ಯೋಚಿಸುತ್ತ ಹೋಗುವದರ ಬದಲಿಗೆ, ಅದನ್ನು ಅಸ್ತಿತ್ವದಲ್ಲಿ ತಂದ ‘ಪರತತ್ವ’ವನ್ನು(ಅಥವಾ ಸತ್ತೆಯನ್ನು) ನಾವು ಸ್ತುತಿಸಬೇಕೆಂದು ನಾನು ಸಲಹೆ ಮಾಡಬಹುದು. ಸ್ಥೂಲತೆ ಮತ್ತು  ಜಡತೆಗಳ   ಪದರುಗಳ ಆವರಣಗಳನ್ನು ಒಂದಾದ ಮೇಲೊಂದರಂತೆ ಹೊಂದಿದ ನಮ್ಮದೇ ಪ್ರತ್ಯೇಕ ಭೌತಿಕ ಅಸ್ತಿತ್ವವನ್ನುಳ್ಳ ಪುಟ್ಟ ಸೃಷ್ಟಿಯೊಂದನ್ನು ನಾವು ನಿರ್ಮಿಸಿಕೊಂಡಿದ್ದೇವೆ. ಈಗ ನಾವು ಮಾಡತಕ್ಕದ್ದೇನೆಂದರೆ ಒಂದೊಂದಾಗಿ ಆ ಜಡತೆಯ  ಪದರುಗಳನ್ನು ಛಿನ್ನ ವಿಛಿನ್ನಗೊಳಿಸುವುದು ಮತ್ತು  ಸೃಷ್ಟಿಯ ಆದಿಯಲ್ಲಿದ್ದ ಕೈವಲ್ಯಸ್ಥಿತಿಯನ್ನು ಹೊಂದುವುದು.

ಸದ್ಯದ ನಮ್ಮ ಸ್ಥೂಲತಮ ರೂಪದಲ್ಲಿರುವ ಅಸ್ತಿತ್ವವು ಒಮ್ಮಿಂದೊಮ್ಮೆಲೆ  ಅಥವಾ   ಆಕಸ್ಮಿಕವೆಂಬಂತೆ ಆದುದಲ್ಲ. ಅದು ನಿಧಾನವಾಗಿ ನಡೆದ ವಿಕಾಸಕ್ರಮದ ಫಲವಾಗಿದೆ. ವಿಶ್ವದ  ರಚನೆಗೆ  ಕಾರಣವಾದ  ಸುಪ್ತ ಚಲನವನ್ನುಸರ್ವಶಕ್ತನ ಆದಿ  ಸಂಕಲ್ಪ(ಆದಿ ಮನ) ಎಂದು ಕರೆಯಬಹುದು. ನಾವು ಯಾವುದನ್ನು ಆದಿ ಮನಸ್ಸೆಂದು ಕರೆಯುತ್ತೇವೆಯೋ ಅದೇ  ನಮ್ಮ ಅಸ್ತಿತ್ವಕ್ಕೆ ಮೂಲವಾಗಿದೆ. ಆ ಮನಸ್ಸಿನ ಹಿಂದೆ ಕೇಂದ್ರ ಅಥವಾ ‘ತಮ’ ಎಂಬ ಸ್ಥಿತಿ ಇದೆ. ಜೀವಾತ್ಮದ ಅಸ್ತಿತ್ವದ ಜಾಡುಹಿಡಿದು ಹೊರಟರೆ, ಅದು ಸೃಷ್ಟ್ಯುದ್ಭವದ ಸಮಯದಷ್ಟು ಹಿಂದಕ್ಕೆ ಹೋಗುತ್ತದೆ.  ಆಗ  ಅದು ತನ್ನ ನಿರಾವೃತರೂಪದಲ್ಲಿ ಒಂದು ಪೃಥಕ್ ವಸ್ತುವಾಗಿ ಅಸ್ತಿತ್ವದಲ್ಲಿತ್ತು. ಅತ್ಯಂತ ಸೂಕ್ಷರೂಪದಲ್ಲಿದ್ದ ಜೀವಾತ್ಮದ ಆದಿಮ  ಸ್ಥಿತಿಯಿಂದ  ನಾವು ಅಸ್ಥಿತ್ವದ ಸ್ಥೂಲತರ ರೂಪಗಳತ್ತ ಸಾಗಿದೆವು. ಇವುಗಳನ್ನು ಜೀವಾತ್ಮನ ಸುತ್ತ ಇರುವ ಆವರಣಗಳೆಂದು ಕರೆಯಬಹುದು. ಮೊದಲ ಮೊದಲಿನ ಆವರಣಗಳು ಅತ್ಯಂತ ಸೂಕ್ಷ್ಮ(ನವುರಾದ ರೂಪದವಾಗಿದ್ದುವು ಮತ್ತು ಅವುಗಳೊಂದಿಗೆ  ನಾವು ನಮ್ಮ ತವರು ನೆಲೆಯಾದ ಭಗವದ್ವಲಯದಲ್ಲಿ ಇದ್ದೆವು. ಅಹಂಕಾರದ ಆವರಣಗಳು ಹೆಚ್ಚು ಹೆಚ್ಚು ಸೇರಿಕೊಳ್ಳುವುದು ಮುಂದುವರಿಯಿತು. ಮತ್ತು  ರೂಪದಲ್ಲಿರುವ ಅನಂತರ ಮನಸ್ಸು(psyche), ಚಿತ್ತ(ಚೇತನ,ಪ್ರಜ್ಞೆ), ಬುದ್ಧಿ(Intellect) ಮತ್ತು ಅಹಂಕಾರಗಳು ನಮ್ಮ ಸ್ಥೂಲತೆಯು ಬೆಳೆಯುವದಕ್ಕೆ   ಕಾರಣವಾದುವು. ಕಾಲಕ್ರಮದಲ್ಲಿ  ಸಂಸ್ಕಾರಗಳುಂಟಾಗುವುದು ಪ್ರಾರಂಭವಾಯಿತು. ಅವುಗಳ ಪರಿಣಾಮಸ್ವರೂಪದ  ಫಲಗ‌ಳೂ ಬಂದವು. ಸದ್ಗುಣ-ದುರ್ಗುಣಗಳು ಮೈದೋರಿದವು. ಸಾವಕಾಶವಾಗಿ ನಮ್ಮ ಅಸ್ತಿತ್ವವು ಅತೀವ ಸಾಂದ್ರತಮ ರೂಪವನ್ನು  ತಳೆಯಿತು. ಸುಖ, ದುಃ.ಖ, ಸಂತೋಷ-ವ್ಯಸನಗಳ  ಸಂವೇದನೆಗಳು   ಪ್ರಾರಂಭವಾಗುವುದು ಸಂಸ್ಕಾರಗಳ   ಪರಿಣಾಮ ರೂಪವಾಗಿಯೇ.  ಸುಖ-ಸಂತೋಷಗಳಲ್ಲಿ    ಅನುರಕ್ತಿ   ಮತ್ತು   ದುಃಖ, ಅಸಂತೋಷಗಳನ್ನು  ಕುರಿತ  ಅಸಹ್ಯ  ಭಾವನೆಗಳು ಹೆಚ್ಚು ಹೆಚ್ಚು ತೊಡಕುಗಳನ್ನು ಉಂಟುಮಾಡಿದವು. ಇದರ ಪರಿಣಾಮವಾಗಿ ನಾವು ಕಷ್ಟ, ನೋವುಗಳಿಂದ ಸುತ್ತುವರಿಯಲ್ಪಟ್ಟಿರುವದು  ಅನುಭವಕ್ಕೆ  ಬರುತ್ತದೆ. ಮತ್ತು ಅವುಗಳಿಂದ ಬಿಡುಗಡೆ ಹೊಂದುವದೇ ನಮ್ಮ ಮುಖ್ಯ ಧ್ಯೇಯವೆಂದು  ಭಾವಿಸುತ್ತೇವೆ.‌

ಮಾನವನು  ಎರಡು  ದ್ರುವಗಳುಳ್ಳ  ಒಂದು  ಸತ್ತೆ (ಜೀವಿ).ಅದರ  ಬೇರು ಮೂಲ   ಆಧಾರಕ್ಕೆ ಅತಿ ನಿಕಟವಾಗಿದೆ ಮತ್ತು  ಇನ್ನೊಂದು  ತುದಿ ಪ್ರಪಂಚದ ಕಡೆಗಿದೆ. ಹೇಗಾದರೂ ಮಾಡಿ ವ್ಯಷ್ಟಿಮನಸ್ಸು  ಅದರ ವೈಶ್ವಿಕ  ಮನಸ್ಸಿಗೆ  ಅಭಿಮುಖವಾಗಿ  ರೂಪುಗೊಳ್ಳತೊಡಗಿದರೆ ಅದು ತನ್ನ ನೈಜ(ವರ್ಣದಲ್ಲಿ) ರೂಪದಲ್ಲಿ ಕಾಣಲಾರಂಭಿಸುತ್ತಿದೆ. ವಾಸ್ತವ  ಸಂಗತಿಯೇನೆಂದರೆ, ಸೃಷ್ಟಿಯನ್ನು ಅಸ್ತಿತ್ವದಲ್ಲಿ ತರಲು ಪ್ರಕೃತಿಯ ಶಕ್ತಿಯನ್ನು ಚಲನೆಯಲ್ಲಿ  ಉದ್ಯುಕ್ತಗೊಳಿಸಿದ   ಕ್ಷೋಭದ  ಪ್ರತಿಚ್ಛಾಯೆಯೇ ಮಾನವನ ಮನಸ್ಸು. ಹೀಗೆ  ವ್ಯಷ್ಟಿ ಮನಸ್ಸು ದೈವೀಮನಸ್ಸಿನ (ಕ್ಷೋಭದ) ಒಂದು  ಅಂಶ. ನಾವು ಹೇಗಾದರೂ ಮಾಡಿ  ಅದರ ಅಧೋಮುಖಿ ಪ್ರವೃತ್ತಿಯನ್ನು ಮೂಲದ ಕಡೆಗೆ  ತಿರುಗಿಸಿದರೆ ಅದು ಸ್ತಬ್ದವಾಗಿ, ಮೌನವಾಗಿ, ಶಾಂತವಾಗಿ ಇರುತ್ತದೆ. ನನ್ನ ವೈಯಕ್ತಿಕ  ಅನುಭವದ  ಪ್ರಕಾರ  ಒಬ್ಬ  ಸಮರ್ಥ ಮಹಾತ್ಮನ ಸಹಾಯವು  ಮಾತ್ರ  ಅದನ್ನು ಮೂಲದ ಕಡೆಗೆ ತಿರುಗಿಸಬಲ್ಲದು. ಅಂಥ ಮಹಾತ್ಮನ ಶಕ್ತಿ ಮತ್ತು ಸಂಕಲ್ಪಗಳು ಮಾತ್ರ ಈ ವಿಷಯದಲ್ಲಿ ಗಣನಾರ್ಹವಾಗಬಲ್ಲವು. ಓದು-ಬರೆಹಗಳು ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಶ್ರದ್ಧೆ , ಭಕ್ತಿ ಮತ್ತು  ಆತ್ಮವಿಶ್ವಾಸವುಳ್ಳ ಮನುಷ್ಯನು  ಯಶಸ್ವಿಯಾಗುತ್ತಾನೆ.

ಮಾನವನು  ಪ್ರಕೃತಿಯ  ಒಂದು   ಉಪಕರಣ. ಅವನಲ್ಲಿ ಅಗಾಧ ಶಕ್ತಿ  ಹುದುಗಿದೆ, ಆ ಶಕ್ತಿಯನ್ನು ಉಪಯೋಗಿಸಲು  ಬೇಕಾಗುವ   ಸಲಕರಣೆಗಳೂ ಅವನಲ್ಲಿವೆ. ಆ ಅದ್ಭುತ  ಸಲಕರಣವೆಂದರೆ  ಅವನ ಮನಸ್ಸೇ.  ಅದು  ಸಂಪೂರ್ಣವಾಗಿ ಮಾನವನ ಆಸ್ತಿಯಾಗಿದೆ ಕೂಡ. ಪೂಜಾರ್ಹನೆಂದು ತಿಳಿಯಲಾದ ದೇವರಿಗೆ ಕೂಡ ಮನಸ್ಸು ಇಲ್ಲ. ಪ್ರಾಣಿಗಳಿಗೆ ಮನಸ್ಸು ಇದೆಯೆಂದೆನ್ನುವುದೇನೋ ಸರಿ; ಆದರೆ ಅದು ಬೇರೆ ಗುಣಸ್ವಭಾವವುಳ್ಳದ್ದು. ಹಾಗೆನ್ನುವುದಾದರೆ ಚೈತನ್ಯ ಮತ್ತು ಕ್ರಿಯಾಶೀಲತೆಯುಳ್ಳ  ಮಾನವನ  ಮನಸ್ಸಿಗೆ ಹೋಲಿಸಿದರೆ  ಅದು ಜಡಸ್ಥಿತಿಯಲ್ಲಿದೆ ಎನ್ನಬಹುದು. ಸ್ರಷ್ಟ್ಯುದ್ಭವಕ್ಕೆ   ಕಾರಣವಾದ   ಭಗವದಿಚ್ಛೆಯಿಂದ ಪರಿಣಮಿಸಿದ ಪ್ರಥಮ ಕ್ಷೋಭವೇ ಮನಸ್ಸಿನ ಉಗಮಸ್ಥಾನ. ಮಾನವನ ಮನಸ್ಸಿನ ಸ್ವರೂಪವು ಇಂತಿರುವಾಗ ಮನಸ್ಸು  ಮಾನವನ  ಅತ್ಯಂತ  ಕೆಟ್ಟ  ಶತ್ರುವೆಂದು  ಹೀನ  ಶಬ್ದಗಳಿಂದ   ಮಹಾತ್ಮರೆಂದು  ಹೇಳಿಕೊಳ್ಳುವವರು ತೆಗಳುವುದು ತೀರ ತಪ್ಪು, ಅದರ ನಿಜವಾದ ಮೌಲ್ಯವನ್ನೂ, ಗುಣವನ್ನೂ ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನಿಜಕ್ಕೂ, ಸಂಗತಿಗಳನ್ನು. (ವಸ್ತುಗಳನ್ನು)ಕ್ರಿಯಾರೂಪಕ್ಕೆ  ತರುವ  ಏಕೈಕ  ಸಾಧನ ಅದೇ  ಆಗಿದೆ. ಮಾನವನ ಪುಟ್ಟ ಸೃಷ್ಟಿಯನ್ನು ಅಸ್ತಿತ್ವಕ್ಕೆ ತಂದ ಅದು ಮೂಲ  ವೈಶ್ವಿಕ  ಶಕ್ತಿಯ  ಸಂಕ್ಷಿಪ್ತ ರೂಪವಾಗಿದೆ. ಪ್ರತಿಯೊಂದು ವಸ್ತುವಿನ ಮೂಲದಲ್ಲಿರುವ ಕ್ರಿಯಾಶೀಲ ಶಕ್ತಿಯೇ ಅದು. ಅದು ಯಾರ  ಶಕ್ತಿ? ಅದು ಖಂಡಿತವಾಗಿಯೂ  ಮಾನವನದೇ.  ಯಾಕೆಂದರೆ, ದೇವರು ಮನಸ್ಸನ್ನೇ  ಹೊಂದಿರುವದಿಲ್ಲ.  ದೇವರಿಗೆ ಮನಸ್ಸು ಇದ್ದಿದ್ದರೆ ಅವನೂ  ಸಂಸ್ಕಾರಗಳ  ಪರಿಣಾಮಗಳಿಗೆ ಈಡಾಗುತ್ತಿದ್ದನು. ಹಾಗಿದ್ದ ಮೇಲೆ ಮೂಲದಲ್ಲಿ  ಕೆಲಸ ಮಾಡುವುದು  ಮಾನವ  ಮನಸ್ಸೇ   ಆಗಿರಬೇಕು.

ಮಾನವ ಶರೀರದ ಪ್ರತಿಯೊಂದು ಕಣದಲ್ಲಿಯೂ ಅಗಾಧ ಶಕ್ತಿ ಇದೆ. ಇಡೀ ವಿಶ್ವವು ಅದರೊಡನೆ ಅತಿನಿಕಟವಾಗಿ ಸಂಬಂಧಿತವಾಗಿದೆ.   ಬೆನ್ನೆಲುಬಿನ ಪ್ರತಿಯೊಂದು ಬಿಂದುವೂ  ಅತ್ಯಂತ ದೊಡ್ಡ  ಶಕ್ತಿಯಿಂದ ತುಂಬಿದೆ. ಆದರೆ ಇದುವರೆಗೆ ಯಾರೂ ಅದಕ್ಕೆ   ಲಕ್ಷ್ಯಕೊಟ್ಟಿಲ್ಲ  ಜನರು  ಕುಂಡಲಿನಿಯನ್ನು  ಜಾಗ್ರತಗೊಳಿಸುವ  ಹುಚ್ಚಿ ನಿಂದ ಅದರ ಬೆನ್ನುಹತ್ತಿ ಅದಕ್ಕಾಗಿಯೇ ಕೂಗುತ್ತಿದ್ದಾರೆ.  ಮೆದುಳಿನ   ಪ್ರತಿಯೊಂದು  ಕೋಶದ    ಕೇಂದ್ರದ  ರಚನೆಯಲ್ಲಿ ಅದರದೇ  ಆದ  ಬಲವಾದ ಶಕ್ತಿ ಇದೆ.  ಆ  ಶಕ್ತಿ  ಕುಂಡಲಿನಿಯನ್ನು ಮೀರಿಸುವಂಥದಾಗಿದೆ. ಆದರೆ ಯಾರೂ ಅದನ್ನು ಮಾನವರ ಕಲ್ಯಾಣಕ್ಕಾಗಿ ಉಪಯೋಗಿಸಲು ‌ಪ್ರಯತ್ನಿಸಿಲ್ಲ.ನನ್ನ ಈ ಅಭಿಪ್ರಾಯವು ಅನೇಕ ಜ್ಞಾನಿಗಳಿಗೆ ಅಂಗೀಕಾರಾರ್ಹವೆನಿಸದಿರಬಹುದು. ಮತ್ತು  ಒಂದು ವೇಳೆ ಅದನ್ನು ಅವರಿಗೆ ಪ್ರದರ್ಶಿಸಿ ತೋರಿಸಿದರೂ ಕೂಡ  ಅದನ್ನು ಮನಗಾಣುವಷ್ಟು ಅವರು  ಸೂಕ್ಷ್ಮಗ್ರಾಹಿಗಳಾಗಿರಲಿಕ್ಕಿಲ್ಲ.ಆದರೆ,  ಅಂಥ ಒಂದು ಕಾಲ ಬಂದೇ  ಬರಲಿಕ್ಕೆ  ಇತ್ತೆಂಬಂತೆ, ಜನರು ಅದನ್ನು  ಅರಿತು ಮನಗಾಣುವ ಕಾಲಸನ್ನಿಹಿತವಾಗಿದೆ.

ಮಾನವತೆ ಮತ್ತು ದೈವತ್ವಗಳ ನಡುವಣ ಸಮಾನಾಂತರತೆಯ ಅಳಿವು

ದೇವರು ಮಾನವನನ್ನು ತನ್ನದೇ ರೂಪದಲ್ಲಿ ಸೃಷ್ಟಿಸಿದನೆಂಬುದು  ಸಾಮಾನ್ಯವಾಗಿ   ನಂಬಲಾಗಿರುವುದು. ಪ್ರಪಂಚದ  ಎಲ್ಲ  ಮತಧರ್ಮಗಳೂ ತತ್ವಶಾಸ್ತ್ರಗಳೂ, ವಿಜ್ಞಾನಶಾಸ್ತ್ರಗಳೂ  ಈ ಅಂಶದಲ್ಲಿ ಹೆಚ್ಚು  ಕಡಿಮೆ ಒಮ್ಮತ ಹೊಂದಿವೆ. ದೇವರ ದೈಹಿಕ ರೂಪವು ಕೈಕಾಲು, ಅವಯವಗಳಿಂದ ಕೂಡಿ, ಮಾಂಸ, ಮೂಳೆ, ಚರ್ಮಗಳಿಂದ ಆಗಿರುವ ಮನುಷ್ಯರೂಪದಂತೆ ಇದೆಯೆಂದು  ಇದರ  ಅರ್ಥವಲ್ಲ. ಪ್ರಕೃತಿಯಲ್ಲಿರುವ  ಸಕಲ ಶಕ್ತಿ-ಸಾಮರ್ಥ್ಯ ಮತ್ತು ಊರ್ಜೆಗಳನ್ನು ಮಾನವನು ಅದೇ ಕ್ರಮದಲ್ಲಿ   ಹೊಂದಿದ್ದಾನೆ   ಅಥವಾ  ಅಂತೆಯೇ ಮಾನವನ ಸಂರಚನೆ  ಅವುಗಳಿಂದಾಗಿದೆ  ಎಂಬುದೇ  ಇದರ ನಿಜವಾದ ಅರ್ಥ.

ಮಾನವನ ಸಂರಚನೆಯು ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ವಿಶ್ವದ  ರಚನೆಯಂತೆಯೇ ಇದೆ. ಸ್ಥೂಲವಾದ ಬಾಹ್ಯ ವಿಶ್ವದ ಹಿಂದೆ  ಅಸಂಖ್ಯಾತ  ಸೂಕ್ಷ್ಮ ಮತ್ತು ಇನ್ನೂ ಸೂಕ್ಷತರ  ರೂಪಗಳು  ಇರುವಂತೆಯೇ  ಮಾನವನ ಸ್ಥೂಲಭೌತಿಕ ರೂಪದ ಹಿಂದೆ ಸೂಕ್ಷ್ಮ ಮತ್ತು ಸೂಕ್ಷತರ ಅಸ್ತಿತ್ವರೂಪಗಳಿವೆ. ಅತ್ಯಂತ  ಬಾಹ್ಯರೂಪವೇ  ಸ್ಥೂಲಶರೀರ. ಈ ಮೂರು ಹೊರರೂಪಗಳಲ್ಲದೆ, ಜೊತೆಗೆ ಸೂಕ್ಷ್ಮವಾದ ಮತ್ತು ತೆಳುವಾದ ಅಸಂಖ್ಯ ರೂಪಗಳಿವೆ; ಜ್ಞಾನಿಗಳು  ಅವುಗಳನ್ನು  ಶರೀರಗಳೆಂದು ಕರೆಯದೆ, ಆತ್ಮದ ಸೂತ್ತಲೂ  ಇರುವ   ತೆಳುವಾದ   ಆವರಣಳೆಂದು ಕರೆಯುತ್ತಾರೆ. ಅಸಂಖ್ಯೇಯವಾದ ಇವುಗಳಿಗೆ ಹೆಸರು  ಕೊಡುತ್ತ  ಹೋಗುವುದು ನಿಜವಾಗಿ ಬಹಳ ಕಷ್ಟ.  ಅತಿಸೂಕ್ಷ್ಮದಿಂದ  ಹಿಡಿದು ಅತಿಸ್ಥೂಲದವರೆಗೆ ಇರುವ ಅಸಂಖ್ಯಾತ  ರೂಪಗಳೊಂದಿಗೆ ಮನುಷ್ಯನು ವಿಶ್ವದ ಯಥಾವತ್ ಪ್ರತಿಕೃತಿಯಂತೆ, ದೇವರು ಮಾಡಿದ  ಇದೇ  ವಿಶ್ವಾಭಿವ್ಯಕ್ತಿಯ ಪ್ರತಿಕೃತಿಯಂತೆ, ಈ ಭೌತಿಕ  ಪ್ರಪಂಚದಲ್ಲಿ  ಇದ್ದಾನೆ.  ಅತ್ಯಂತ ಹೊರಗಿನ  ವೃತ್ತ ಪರಿಧಿಯಿಂದ  ಅತ್ಯಂತ ಒಳಗಿರುವ ಕೇಂದ್ರ ಅಥವಾ ‘ಶೂನ್ಯ’ವನ್ನೊಳಗೊಂಡ  ಒಂದು ವೃತ್ತದಿಂದ   ಪ್ರತಿನಿಧಿಸಲ್ಪಟ್ಟಂತೆ, ಮಾನವನ  ಅಸ್ತಿತ್ವವೂ  ದೇವರ  ಸೃಷ್ಟ್ಯಭಿವ್ಯಕ್ತಿಯೂ  ನಿಜಕ್ಕೂ  ಒಂದೇ  ತೆರನಾಗಿವೆ. ಇದಕ್ಕಾಗಿಯೇ  ದೇವರ   ಸಾಕ್ಷಾತ್ಕಾರವೆಂದರೆ  ಆತ್ಮಸಾಕ್ಷಾತ್ಕಾರ,    ಆತ್ಮಸಾಕ್ಷಾತ್ಕಾರವೆಂದರೆ   ದೇವರ ಸಾಕ್ಷಾತ್ಕಾರ  ಎಂದು  ಅರ್ಥ.  ಶೂನ್ಯವೆಂಬ  ಅದೇ ಬಿಂದುವಿನಿಂದ ಸಮಗ್ರ ವಿಶ್ವವು ವಿಕಾಸಕ್ರಮದಿಂದ ಅಸ್ತಿತ್ವಕ್ಕೆ  ಬಂದಿದೆ. ಅದೇ  ರೀತಿಯಲ್ಲಿ  ಮಾನವನ ಅಸ್ತಿತ್ವವೂ ಅದೇ ಬಿಂದುವಿನಿಂದ  ವಿಸ್ತರಣೆಗೊಂಡು ಬಂದಿದೆ.

ಧಾರ್ಮಿಕ ಚೈತನ್ಯವು ಒಂದಿಲ್ಲೊಂದು ರೂಪದಲ್ಲಿ ಸದಾ ಪ್ರವಹಿಸುತ್ತಿರುವ ದೇಶಕ್ಕೆ  ಸೇರಿದವರು ನಾವು. ನಾವು  ಯಾವ ‘ಸತ್ಯ’ದಿಂದ ಉದ್ಭವಿಸಿ ಬಂದೆವೋ ಅದರೊಂದಿಗೆ ಸಾಯುಜ್ಯ ಹೊಂದಲೋಸುಗವೇ ನಾವು ಪಾಲಿಸಲ್ಪಟ್ಟಿದ್ದೇವೆ. ಅನಂತದ  ಸಾರವನ್ನೇ  ನಾವು ನಮ್ಮೊಡನೆ  ತಂದಿದ್ದೇವೆ.  ದೇವರು   ಮನುಷ್ಯನಲ್ಲಿ ಇದ್ದಾನೆಂದು  ಹೇಳುತ್ತಾರೆ. ಈ ರೀತಿ ನಾವು ದೇವತ್ವ ದೊಂದಿಗೆ ಒಟ್ಟಿಗೆ ಸಾಗುತ್ತ ಹೋದಾಗ ಮತ್ತು ಅದನ್ನು ಮಾನವತೆಯ ರೇಖೆ(ಪಥ)ಯೊಂದಿಗೆ ಜೋಡಿಸಿದಾಗ ನಮ್ಮ ಅಂತಿಮ ಉದ್ದೇಶವು ನೆರವೇರಬಲ್ಲದು. ನಾನು ಈ ಮುಂಚೆ ಹೇಳಿರುವಂತೆ ಸೃಷ್ಟಿಯ ಮೂಲದಲ್ಲಿ ಮಾನವತೆಯು ದೇವತ್ವಕ್ಕೆ  ಸದೃಶವಾಗಿತ್ತು. ವಿಕಾಸದ ಪಥದಲ್ಲಿ ಕ್ರಿಯೆ-ಪ್ರತಿಕ್ರಿಯೆಗಳಿಂದುಂಟಾದ ಅಘಾತಗಳ ಪರಿಣಾಮವಾಗಿ ಅದು ಸ್ಥೂಲತರ   ರೂಪವನ್ನು ತಳೆಯಿತು.  ದೈವತ್ವದೊಂದಿಗೆ  ನಮ್ಮ  ಸಂಬಂಧದ ಕೊಂಡಿಯನ್ನು ಕಾಯ್ದುಕೊಂಡು ಹೋಗಲು ಮಾನವನ ಅಸ್ತಿತ್ವ ರಚನೆಯ ಎಲ್ಲ ಘಟಕಾಂಶಗಳನ್ನೂ ಅವುಗಳ ಆದಿಯಲ್ಲಿದ್ದ  ಸಮತ್ವ  ಮತ್ತು  ಶಾಂತಿಯ ಸ್ಥಿತಿಗೆ ತರಬೇಕಿದೆ. ಅವುಗಳಲ್ಲಿ ಯೋಗ್ಯ ಮಿತತ್ವವನ್ನುಉಂಟು ಮಾಡುವುದರಿಂದ  ಅದು ಸಾಧಿಸಲ್ಪಡುವುದು;  ನಾವು ಸಹಜಮಾರ್ಗದಲ್ಲಿ  ಮಾಡುವುದು  ಇದನ್ನೇ. ನಮ್ಮ ಸಂಕಲ್ಪಶಕ್ತಿಯ ಕ್ರಿಯೆಯ ಮೂಲಕ ಮಿತತ್ವವಿಲ್ಲದಿರುವಿಕೆಯನ್ನು ಹೋಗಲಾಡಿಸಿ ಸಮತ್ವವನ್ನುಕಾಯ್ದುಕೊಂಡು ಹೋಗುವುದೇ  ನಮ್ಮ  ದೈನಂದಿನ  ಧ್ಯಾನಾಭ್ಯಾಸದ ಉದ್ದೇಶ. ಈ ರೀತಿಯಲ್ಲಿ ನಮ್ಮಲ್ಲಿರುವ ಮಾನವತೆಯು ದೈವತ್ವದಲ್ಲಿ  ರೂಪಾಂತರಗೊಳ್ಳಲು ಪ್ರಾರಂಭಿಸುತ್ತದೆ. ‘ಮಾನವನ ದೈವೀಕರಣ’ವೆಂಬ ಪದದ  ನಿಜವಾದ ಅರ್ಥವು ಇದೇ ಆಗಿದೆ. ಸಾಧಿಸಿದಾಗ ನಿಜಕ್ಕೂ ದೈವತ್ವಗಳ ನಡುವಣ  ಸಮಾನಾಂತರತೆಯು ಕಣ್ಮರೆಯಾಗಿ ಹೋಗಿ ಅವೆರಡೂ ಹೆಚ್ಚು ಕಡಿಮೆ ಒಂದೇ ಆಗುತ್ತವೆ. ಅದು ಹೇಗೇ ಇರಲಿ,  ಶರೀರವಿರುವತನಕವೂ ಮಾನವತೆಯು ಸಂಪೂರ್ಣ ಲುಪ್ತವಾಗಿ ಹೋಗಲಾರದು. ಹೀಗೆ ಸಹಜಮಾರ್ಗ ಪದ್ಧತಿಯಂತೆ ಧ್ಯಾನಮಾಡುವದರ ಪರಿಣಾಮವಾಗಿ  ಮಾನವತೆಯ ರೇಖೆಯಲ್ಲಿ  ಕೆಲಸ ಮಾಡುತ್ತಿರುವ ಶಕ್ತಿಗಳ ತೀರ್ವತೆಯನ್ನು ನಾವು ಕಡಿಮೆ ಮಾಡುತ್ತ ಹೋಗುತ್ತೇವೆ. ಹೀಗೆ ದೈವತ್ವವು ನೆಲೆಯೂರುತ್ತ ಹೋಗಿ ಸಮಾನಾಂತರತೆಯು   ಕಡಿಮೆಯಾಗುತ್ತ ಹೋಗುತ್ತದೆ.  ಬೇರೆ  ಶಬ್ಧಗಳಲ್ಲಿ  ಹೇಳುವದಾದರೆ, ದೈವತ್ವದ ಶಕ್ತಿಯಿಂದ ಮಾನವತೆಯು  ಚೈತನ್ಯಭರಿತವಾಗುತ್ತ ಹೋಗಿ  ಕ್ರಮೇಣ  ಅದೇ ಎಲ್ಲೆಲ್ಲೂ  ತಾನೇ ತಾನಾಗಿ  ನೆಲೆಗೊಳ್ಳಲಾರಂಭಿಸುತ್ತದೆ.  ಈ  ಸ್ಥಿತಿಗಳು ಸಂಪೂರ್ಣ  ಸ್ಥಿರಗೊಂಡಾಗ  ಸಮಾನಾಂತರತೆ ಲುಪ್ತವಾಗುತ್ತದೆ, ಮತ್ತು  ಮಾನವತೆಯು ಮತ್ತು ಅದರ ಸೃಷ್ಟಿ-ಶಕ್ತಿಯು   ಲುಪ್ತವಾಯಿತೆನ್ನುವಷ್ಟು   ಕಡಿಮೆಯಾಗುತ್ತದೆ(ನಗಣ್ಯವಾಗಿ ಬಿಡುತ್ತದೆ). ಈ ರೀತಿಯಲ್ಲಿ ದೇವರು ಅನಂತನಾಗಿರುವಂತೆ, ಅತ್ಯುನ್ನತ ಮಟ್ಟವನ್ನು ತಲುಪಿದ ಮಾನವನೂ ಕೂಡ ಮಾನವತೆಯ ಮಂಡಲದಲ್ಲಿ(ಪರಿಧಿಯೊಳಗೆ) ಅದಕ್ಕೆ ಸದ್ರಶ್ಯನಾಗಿ ಇರುತ್ತಾನೆ. ಮಾನವತೆಯ ಪರಿಮಿತಿಗಳು ಹೊರಟು ಹೋದಮೇಲೆ ಆತ್ಮದ ವಿಸ್ತಾರವು ಅಪರಿಮಿತವಾಗಿ ಸಮಸ್ತ ವಿಶ್ವವು ಆತ್ಮನಲ್ಲಿ ಅಡಕಗೊಂಡಿರುವಂತೆ ಕಾಣುತ್ತದೆ. ವಿಶ್ವದಲ್ಲಿ ಎಲ್ಲಿಯಾದರೂ ಏನೇ ತುಡಿತವಾದರೆ, ಅವನ ಹೃದಯದಲ್ಲಿ ಮಾರ್ದನಿಗೊಳ್ಳುತ್ತದೆ. ಆಗ ಪ್ರಕೃತಿಯಲ್ಲಿ ಇರುವುದೆಲ್ಲವೂ ಅವನ ಗ್ರಹಿಕೆಯ ಜ್ಞಾನದ ಅಳಿವಿನೊಳಗಿರುತ್ತದೆ.

ಸಾಕ್ಷಾತ್ಕಾರ ಮತ್ತು ಅದರ ಸಾಧನೋಪಾಯಗಳು

ಪ್ರಾಚೀನ  ಕಾಲದಿಂದಲೂ ವಿಶೇಷವಾಗಿ ಭಾರತ ದೇಶದಲ್ಲಿ   ಈಶ್ವರ   ಸಾಕ್ಷಾತ್ಕಾರವು  ಮಾನವನ ಪ್ರಯತ್ನಗಳ, ಅವನ ಅಸ್ತಿತ್ವದ ಧ್ಯೇಯ(ಪುರುಷಾರ್ಥ) ಎಂದು ಘೋಷಿಸಲ್ಪಟ್ಟಿದೆ. ಆದರೆ ದೇವರು(ಅರ್ಥಾತ್ ‘ಪರಮಸತ್ಯ’)ಎಂಬ ಕಲ್ಪನೆಯು  ಇದ್ದಂತೆ  ಈಶ್ವರ ಸಾಕ್ಷಾತ್ಕಾರದ  ಕಲ್ಪನೆಯೂ  ಗೂಢತೆಯ  ಆವರಣಗಳಿಂದ   ಮುಚ್ಚಿಹೋಗಿ,  ಓರ್ವ   ವಿಚಾರವಂತ, ವೈಜ್ಞಾನಿಕ  ಬುದ್ಧಿಯುಳ್ಳ  ಪ್ರಾಮಾಣಿಕ  ವ್ಯಕ್ತಿಗೆ ಈ ಪದವನ್ನು ಉಚ್ಚರಿಸಿದ   ಮಾತ್ರಕ್ಕೆ  ಜಿಗುಪ್ಸೆ ಹುಟ್ಟು ವಂತಾಗಿದೆ.

ಅನೇಕ   ವಿದ್ವಾಂಸ  ಸಂತರು  ಸಾಕ್ಷಾತ್ಕಾರದ ಸ್ಥಿತಿಯನ್ನು  ಅನೇಕ  ವಿಲಕ್ಷಣ  ರೀತಿಯಲ್ಲಿ  ಅರ್ಥ ನಿಷ್ಕರ್ಷೆ ಮಾಡಿದ್ದಾರೆ; ಆದರೆ  ಎಲ್ಲಿಯವರೆಗೆ ಅದನ್ನು ವ್ಯಾಖ್ಯೆಗೆ ಅಳವಡಿಸಲ್ಪಡಬಹುದೋ   ಅಲ್ಲಿಯವರೆಗೆ ಅದು  ಸಾಕ್ಷಾತ್ಕಾರವಲ್ಲ ಎಂದು ನನಗೆ  ತೋರುತ್ತದೆ. ನಿಜವಾಗಿಯೂ ಅದೊಂದು ಅಭಿವ್ಯಕ್ತಿಯನ್ನು ಮೀರಿದ ಮೂಕಸ್ಥಿತಿ. ಅಂತರ್ಬಾಹ್ಯದಲ್ಲಿ ಎಲ್ಲೇ ಆಗಲಿ ಪ್ರಕಾಶವನ್ನು ಕಾಣುವುದು ಅಥವಾ ಅನುಭವ ಹೊಂದುವುದು ಸಾಕ್ಷಾತ್ಕಾರವಲ್ಲವೇ ಅಲ್ಲ. ನನ್ನ ಅಭ್ಯಾಸದ ಪ್ರಾರಂಭ ಕಾಲದಲ್ಲಿ ನನಗೆ ಅನೇಕ  ಸಲ ಪ್ರಕಾಶದ ಅನುಭವ ಮತ್ತು ದರ್ಶನವಾಯಿತು. ಆದರೆ ಅದು  ನನ್ನ  ಗುರಿಯಾಗಿರಲಿಲ್ಲವಾದ್ದರಿಂದ  ನಾನು   ನನ್ನ  ಗುರುಗಳ  ಕಣ್ಗಾವಲಿನ ಸಹಾಯದಿಂದ ಮುಂದುವರಿದೆ. ನಿಜವಾಗಿಯೂ ಅದು(ಸಾಕ್ಷಾತ್ಕಾರ) ರುಚಿರಹಿತವಾದ ಬದಲಾವಣೆಯಿಲ್ಲದ ಸ್ಥಿರ(ನಿರಂತರ)ಸ್ಥಿತಿ.  ಅದರಲ್ಲಿ ಯಾವ ಮೋಹಕತೆಯಿಲ್ಲ, ಆಕರ್ಷಣೆಯಿಲ್ಲ; ಸಾಮಾನ್ಯವಾಗಿ ಜನಜನಿತ ಅರ್ಥದ ಆನಂದವೂ ಇಲ್ಲ. ಅದನ್ನು ‘ಸಂಗ್-ಎ-ಬೇ-ನಮಕ್’ ಅಂದರೆ ‘ಉಪ್ಪಿನ ರುಚಿ ಕಳೆದು ಕೊಂಡ ಉಪ್ಪಿನಹರಳು’ ಎಂದು ವರ್ಣಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಓರ್ವನು  ಸಾಕ್ಷಾತ್ಕಾರ  ಹೊಂದಿದನೆಂದರೆ,  ಆಧ್ಯಾತ್ಮಿಕ  ಕ್ಷೇತ್ರದಲ್ಲಿ  ಚ್ಯುತಿಯಿಲ್ಲದಂಥ ಸಂಕಲ್ಪಶಕ್ತಿಯನ್ನು ಅವನು ಬೆಳೆಸಿಕೊಂಡಿರುತ್ತಾನೆ.

ಅನುಭವ ಜ್ಞಾನವೇ  ಸತ್ಯವಾದುದು. ಸಾಮಾನ್ಯವಾಗಿ ಪಂಡಿತರು  ಸಾಕ್ಷಾತ್ಕಾರವನ್ನು ಅಥವಾ ಅದರ  ಸ್ಥಿತಿಗಳನ್ನು ಕುರಿತು ತಮ್ಮವಿದ್ವತ್ತಿನ ಆಧಾರದ ಮೇಲೆ ತಮ್ಮ ಅಭಿಪ್ರಾಯಗಳನ್ನು  ವ್ಯಕ್ತಮಾಡುತ್ತಾರೆಯೇ ಹೊರತು  ತಮ್ಮ ಪ್ರಾಯೋಗಿಕ ಅನುಭವದ ಆಧಾರದ ಮೇಲಲ್ಲ. ಆ ಕಾರಣ ಇಂದಿನ ಕಾಲದಲ್ಲಿ ‘ಸಾಕ್ಷಾತ್ಕಾರ’ವೆಂಬುದು ಒಂದು ಚಾತುರ್ಯದ ಮಾತಾಗಿಬಿಟ್ಟಿದೆಯೆಂದು ನಾನು ವಿಷಾದದಿಂದ ಹೇಳುತ್ತೇನೆ. ನಿಜವಾಗಿ ಹೇಳುವದಾದರೆ ‘ಸತ್ಯ’ವು ತನ್ನ ವರ್ಣಗಳನ್ನು ಅವರವರ  ಮನಸ್ಸಿನ ರುಚಿ,  ಕೌಶಲಗಳಿಗೆ ಬಿಟ್ಟುಕೊಟ್ಟು  ತಾನು ಆಳದಲ್ಲಿ ಮುಳುಗಿಕೊಂಡಿದೆ.  ಅದರ  ಫಲವಾಗಿ ಜನರು ಆ ವರ್ಣಮಯ ಚಿತ್ರಗಳ ಮೇಲೆ ತಮ್ಮ ಗಮನವನ್ನು ನೆಟ್ಟಿರುತ್ತಾರೆ, ಅದರೊಳಗೆ  ಸಿಕ್ಕಿಕೊಳ್ಳುತ್ತಾರೆ. ಎಷ್ಟರಮಟ್ಟಿಗೆ ಎಂದರೆ ಅದು  ಆಧ್ಯಾತ್ಮಿಕತೆಯೂ ಅಲ್ಲ, ಸತ್ಯವೂ ಅಲ್ಲ. ದೈವೀಜ್ಞಾನವನ್ನು  ಜಾಗ್ರತಗೊಳಿಸುವ, ನೈಜ ಅರ್ಥದ ಸಾಕ್ಷಾತ್ಕಾರವನ್ನು ಪಡೆಯದೆ, ಆ ವಿಷಯವನ್ನು ಮುಟ್ಟಲು ಯಾರಿಗೂ ಅಧಿಕಾರವಿರಬಾರದೆಂದು ನಾನು ನಂಬುತ್ತೇನೆ. ಈ  ಸಮಸ್ಯೆಯ ಪರಿಹಾರಕ್ಕೆ ಸಾಧನಾಮಯ ಜೀವನವೇ ಬೇಕು.

ಸಾಕ್ಷಾತ್ಕಾರವನ್ನು ಒಂದು ಅವ್ಯಾಕ್ರತ,(ಅವ್ಯಯ,ಬದಲಾವಣೆಯಿಲ್ಲದ) ಸ್ಥಿತಿಯೆಂದು ವ್ಯಾಖ್ಯೆ ನೀಡುವುದು  ಉಚಿತವಾದೀತು. ಸಾವಿರಾರು ವರ್ಷಗಳಲ್ಲಿ  ಯಾವನೋ ಒಬ್ಬನಿಗಾದರೂ  ಕ್ವಚಿತ್ತಾಗಿಯೇ ಅನುಗ್ರಹಿಸಲ್ಪಡುವಂಥ ಸ್ಥಿತಿ ಅದು. ಆದರೆ  ಯಾವನಿಗಾದರೂ ಅದನ್ನು  ಸಂಪೂರ್ಣವಾಗಿ  ಪಡೆದ ಗುರುವೊಬ್ಬನು ದೊರೆತರೆ, ಮತ್ತು ಆ ಅಭ್ಯಾಸಿಯು ತೀವ್ರ  ಆಸಕ್ತಿ ಹೊಂದಿ, ಅದರ ಬಗ್ಗೆ  ಕಾತರತೆಯುಳ್ಳವನಾಗಿದ್ದರೆ, ಅದು ಬಹಳ ಸುಲಭ ಸಾಧ್ಯವಾಗುತ್ತದೆ. ಆದರೆ ‘ಇದೆ’ ಎಂಬ ಭಾವನೆ (ಅಸ್ತಿತ್ವದ ಕಲ್ಪನೆ) ಇರುವವರೆಗೂ, ಅದು ಸಂಪೂರ್ಣ ಸಾಕ್ಷಾತ್ಕಾರವಲ್ಲ. ‘ಆನಂದ’  ಕೂಡ ಒಂದು ನ್ಯೂನತೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲ.

ಸಾಕ್ಷಾತ್ಕಾರವೆಂದರೇನೆಂದು ನಾನು ಜನರಿಗೆ ತಿಳಿಸಬೇಕೆಂದೂ, ಮತ್ತು ಅನಂತರ ಅವರು ಪೂಜೆಯನ್ನು ಪ್ರಾರಂಭಿಸುವರೆಂದೂ ಜನರು ಅನೇಕ ಬಾರಿ ನನ್ನನ್ನು ಕೇಳುತ್ತಾರೆ.  ಈ  ಮಾತು  ಹೇಗಿದೆಯೆಂದರೆ “ನಾನು  ಶೇಕ್ಸಪಿಯರ್, ಮಿಲ್ಟನ್ನರ  ವಿಚಾರಗಳನ್ನು  ಮೊದಲು ಅರ್ಥ  ಮಾಡಿಕೊಳ್ಳುತ್ತೇನೆ, ಮತ್ತು ಅನಂತರ ವರ್ಣಮಾಲೆಯನ್ನು ಕಲಿಯಲು ಪ್ರಾರಂಭಿಸುವೆ” ಎಂದಂತಿದೆ. ಅಭ್ಯಾಸಿಯು ‘ನಾನು ಮೊದಲು ದೇವರನ್ನು ಸಾಕ್ಷಾತ್ಕರಿಸಿಕೊಂಡು ಆನಂತರ ಅವನನ್ನು ಪೂಜಿಸಲು ಪ್ರಾರಂಭಿಸುತ್ತೇನೆ’ ಎಂದು  ಹೇಳುವುದೂ  ಹಾಗೆಯೇ ಆಯಿತು. ನೀವು  ಅರಸುತ್ತಿರುವ  ವಸ್ತುವೇ ಕೈಗೆ ಸಿಕ್ಕ ಮೇಲೆ,  ಮತ್ತೆ  ಪೂಜೆಯನ್ನೇಕೆ ಮಾಡಬೇಕು? ತಾನು ಕೆಳಮಟ್ಟದಲ್ಲಿದ್ದೇನೆ ಎಂಬ ಅರಿವನ್ನು ತನ್ನಲ್ಲಿ ಉಂಟು ಮಾಡಿ  ಕೊಂಡಿರುವವನೇ  ಎತ್ತರಕ್ಕೆ   ಏರಬಲ್ಲನು. ಆಧ್ಯಾತ್ಮಿಕ ಅತೃಪ್ತಿಯು  ತತ್ತ್ವಾನ್ವೇಷಣೆಯ ಸಾಹಸ ಯತ್ನದ ಆರಂಭದ  ಬಿಂದು ಎಂದು  ಭಾರತೀಯ ದರ್ಶನ  ಸಂಪ್ರದಾಯದಲ್ಲಿ  ಮಾನ್ಯ ಮಾಡಿರುವುದು ಯುಕ್ತವೇ ಇದೆ.

ದಿವ್ಯ  ಪುರುಷನ  ಸಾನಿಧ್ಯವಿರುವದರಿಂದ,  ಇಂದು ಸಾಕ್ಷಾತ್ಕರವು ಅತ್ಯಂತ ಸುಲಭ ಸಾಧ್ಯವಾಗಿದೆ. ಜನರ  ಚಿಂತನೆಯು ಸಾಮಾನ್ಯವಾಗಿ  ಮುಕ್ತಿಯ  ಬಿಂದುವಿಗಿಂತ ಆಚೆಗೆ ಹೋಗುವದಿಲ್ಲ. ಅದುವೇ ಮಾನವನು ತಲುಪಬಹುದಾದ  ಆತ್ಯಂತಿಕ   ಸೀಮೆ  ಎಂದು  ಅವರು ಭಾವಿಸಿದ್ದಾರೆ.  ಆದರೆ  ಅದು  ತಪ್ಪು ವಾಸ್ತವವಾಗಿ, ಮುಕ್ತಿ ದೈವಿ ಪಥದಲ್ಲಿ ಬಹಳ ಕೆಳಮಟ್ಟದ ಸಿದ್ಧಿಗಳಲ್ಲಿ ಒಂದು.  ಹಾಗೆ, ಅದು  ಮಗುವಿನ ಆಟದ  ಆಟಿಕೆಯಂತಿದೆ,  ಅಷ್ಟೇ ಅದರಾಚೆಗೆ  ಇನ್ನೂ ಸಾಧಿಸಬಹು ದಾದುದು ಬಹಳಷ್ಟು ಇದೆ. ಅನಂತ ಸಾಗರವು ಇನ್ನೂ  ಮುಂದೆ ಇದೆ. ಅದೊಂದು  ಅಪರಿಮಿತ   ವಿಸ್ತಾರ. ನಿಮ್ಮ ದೃಷ್ಟಿಯನ್ನು ಅದರ ಮೇಲೆ, ಕೇವಲ  ಅದರ ಮೇಲೆ, ಅವಿಚಲಿತವಾಗಿ ನೆಟ್ಟು, ಮುಂದೆ ಸಾಗುತ್ತ  ಹೋಗಿ ಕಂಡುಕೊಳ್ಳಿರಿ.

ನಿರ್ವಿಕಲ್ಪ ಸಮಾಧಿಯೂ ಒಂದು ಯೌಗಿಕ ಸಿದ್ಧಿ, ಆದರೆ ಅದು ಸಮಸ್ಯೆಯ ಪರಿಹಾರ ನೀಡಲಾರದು. ಪ್ರಾಪಂಚಿಕ ಕೆಲಸ, ಕರ್ತವ್ಯಗಳಲ್ಲಿ ಎಷ್ಟೇ ನಿರತರಾಗಿದ್ದರೂ ಸರಿಯೆ, ನಾವು ಶುದ್ಧವೂ, ಸರಳವೂ ಆದ ‘ಪರಮಸತ್ಯ’ದೊಂದಿಗೆ ಅಂಟಿಕೊಂಡಿರುವುದೇ ಸಮಾಧಿಯ ನೈಜ ಸ್ಥಿತಿ. ಇದಕ್ಕೆ ‘ಸಹಜ ಸಮಾಧಿ’ ಎಂದು  ಕರೆಯಲಾಗಿದೆ.  ಇದು ಅತ್ಯುನ್ನತ  ಸಿದ್ಧಿಗಳಲ್ಲಿ ಒಂದು, ಮತ್ತು  ನಿರ್ವಾಣದ ಆಧಾರವೇ ಇದು. ಅದರ ಶ್ರೇಷ್ಠತೆಯನ್ನು  ಶಬ್ದಗಳಲ್ಲಿ ವಿವರಿಸುವುದು ಸಾಧ್ಯವಿಲ್ಲ. ಅದರಲ್ಲಿಯೇ ನೆಲೆಗೊಂಡವನು  ಅದನ್ನು  ಮನಗಾಣಬಲ್ಲನು. ಅದರ ಹೆಸರು ಸೂಚಿಸುವಷ್ಟು ಸುಲಭದ್ದಲ್ಲ ಅದು. ಅದನ್ನು  ಕುರಿತು ಸಂತ ಕಬೀರನು  ಬಹಳೇ  ಹೊಗಳಿದ್ದಾನೆ. ನಿಜಕ್ಕೂ, ಹೊಂದಲು ಯೋಗ್ಯವಾದ ವಸ್ತು ಅದೇ.

ಸಾಕ್ಷಾತ್ಕಾರಕ್ಕೆ ಅನೇಕ ಸಾಧನಗಳೂ, ಸಾಧನಾಭ್ಯಾಸಗಳೂ ವಿಧಿಸಲ್ಪಟ್ಟಿವೆ. ಅವುಗಳಲ್ಲಿ, ಶೀಘ್ರ ಯಶಸ್ಸಿನ  ಭರವಸೆ ಕೊಡುವಂಥದ್ದನ್ನು  ನಾವು ಆರಿಸಿಕೊಳ್ಳಬೇಕು. ಈಗ, ಅದು  ಯಾವುದೆಂಬುದನ್ನು  ಪ್ರತಿಯೊಬ್ಬನೂ ತಾನೇ ಸ್ವತಃ ನಿರ್ಣಯಿಸಿಕೊಳ್ಳಲಿ. ಈ ವಿಷಯದಲ್ಲಿ ಸ್ವಾಮಿ ವಿವೇಕಾನಂದರ ವಿವೇಚನಾಯುಕ್ತ ಅಭಿಪ್ರಾಯವನ್ನು ನಾನು  ಒಂದು ಸುಳುಹು ಎಂದು  ಸ್ವೀಕರಿಸುತ್ತೇನೆ-“ಮಾನವನನ್ನು ಅತ್ಯುನ್ನತ ಸ್ಥಿತಿಯವರೆಗೆ ಕೊಂಡೊಯ್ಯಬಲ್ಲುದು ರಾಜಯೋಗ ಮಾತ್ರ, ತನ್ನದೇ ಆಂತರಿಕ ಶಕ್ತಿಯನ್ನು ಪ್ರಾಣಾಹುತಿಯ ಮೂಲಕ ಉಪಯೋಗಿಸುವ ಸಾಮರ್ಥ್ಯವುಳ್ಳವನಲ್ಲದೆ  ಮತ್ತಾರೂ  ಗುರುವಾಗಲು ಅಥವಾ   ಮಾರ್ಗದರ್ಶಕನಾಗಲು  ಸಮರ್ಥರಲ್ಲ.” ಹಠಯೋಗದ  ಮೂಲಕ  ಆಜ್ಞಾ  ಚಕ್ರದ  ಆಚೆಗೆ ಹೋಗಲು   ಸಾಧ್ಯವಿಲ್ಲವೆಂದು   ನಾನು   ನಿಮಗೆ ಖಂಡಿತವಾಗಿ   ಸೂಚಿಸಬಲ್ಲೆ. ಅದಲ್ಲದೆ  ಅದರಲ್ಲಿ ಮತ್ತೊಂದು ಗಂಭೀರ ದೋಷವಿದೆ. ನಾವು ಹಠಯೋಗದ ಶಾರೀರಿಕ  ಅಭ್ಯಾಸಗಳಿಂದ  ಪ್ರಾರಃಭಿಸಿದಾಗ, ದೈಹಿಕ ಪ್ರಯತ್ನಗಳ ಮತ್ತು ಅದರೊಟ್ಟಿಗೆ ಅಹಂತೆಯ ಅರಿವು ಉದ್ದಕ್ಕೂ  ಅದರ  ಹಿನ್ನೆಲೆಯಲ್ಲಿ  ಇರುತ್ತದೆ. ಹೀಗೆ ಅಹಂಕಾರವು ಕ್ಷೀಣಗೊಳ್ಳುತ್ತ ಹೋಗುವದರ ಬದಲಾಗಿ, ಹೆಚ್ಚುತ್ತ ಹೋಗುತ್ತದೆ. ಆದರೆ ರಾಜಯೋಗದಲ್ಲಿ ಹೀಗಲ್ಲ. ಅದರಲ್ಲಿ, ಮನಸ್ಸಿನ ಸತತ-ಕ್ರಿಯಾತ್ಮಕ ಪ್ರವೃತ್ತಿಗಳನ್ನು ಶಮನಗೊಳಿಸಲು ಸೂಕ್ಷ್ಮ ಉಪಾಯಗಳಿಂದ  ಮುಂದುವರಿಯುತ್ತಾನೆ. ಜೊತೆಗೆ, ಇದನ್ನು ಅಭ್ಯಾಸ ಮಾಡುವಾಗ ಅತಿಸೂಕ್ಷ  ವಸ್ತುವಿನ ಮೇಲೆ ಲಕ್ಷ್ಯವನ್ನು  ನೆಟ್ಟಿರುವದರಿಂದ, ಯಾವಾಗಲೂ ದೇಹಭಾವದಿಂದ ದೂರವಿರುತ್ತಾನೆ.

ಸೂಕ್ಷ್ಮ ವಸ್ತುವನ್ನು ಸಾಕ್ಷಾತ್ಕರಿಸಿಕೊಳ್ಳುವ ಸಲುವಾಗಿ ಅಷ್ಟೇ  ಸೂಕ್ಷ್ಮವಾಗಿಯೂ, ನವುರಾಗಿಯೂ  ಇರುವ ಸಾಧನಗಳನ್ನು  ಕೈಗೊಳ್ಳಬೇಕು. ಸರಳ  ಸಮಸ್ಯೆಯ ಪರಿಹಾರಕ್ಕಾಗಿ  ಜಟಿಲ  ಕ್ರಮಗಳನ್ನು ಅನುಸರಿಸದಾಗಲೇ ತೊಂದರೆಯುಂಟಾಗುವುದು. ಬೇರೆಮಾತಿನಲ್ಲಿ ಹೇಳುವದಾದರೆ, ಅವರು ಒಂದು ಸೂಜಿಯನ್ನು  ಎತ್ತಿಕೊಳ್ಳಲು ‘ಕ್ರೇನ್’ ಯಂತ್ರವನ್ನು ಉಪಯೋಗಿಸಿದಂತಾಗುತ್ತದೆ. ದೇವರು ಸರಳನು, ಮತ್ತು ಸರಳ ಸಾಧನಗಳ ಮೂಲಕ ಅವನನ್ನು ಪಡೆಯಬಹುದು. ಆದುದರಿಂದ, ಆತನನ್ನು ಸಾಕ್ಷಾತ್ಕರಿಸಿಕೊಳ್ಳಲು, ನಮ್ಮನ್ನು ನಮ್ಮದೇ ಸಂಕಲ್ಪ, ಕ್ರಿಯೆ  ಮತ್ತು  ಸುತ್ತಲಿನ  ಪರಿಸರದಿಂದ ಉಂಟಾದ  ವಸ್ತುಗಳಿಂದ  ಬಿಡುಗಡೆ  ಮಾಡಬಲ್ಲ ವಿಧಾನಗಳನ್ನು ಅನುಸರಿಸಬೇಕು. ನಮ್ಮ ಆಲೋಚನೆಗಳನ್ನು ವ್ಯವಸ್ಥಿತಗೊಳಿಸಬೇಕು ಮತ್ತು  ನಮ್ಮ ವ್ಯಷ್ಟಿಮನಸ್ಸು ಅದರ ಮೇಲಿರುವ ಹೊರೆಯಿಂದ ಬಿಡುಗಡೆ ಹೊಂದಬೇಕು. ನಾವು   ಹತ್ತಿಯಂತೆ  ಹಗುರವಾಗಿ, ಸಮರ್ಥ ಗುರುವಿನ ಒಂದೇ ಒಂದು ತಳ್ಳುವಿಕೆಯಿಂದ ಪರಮಾತ್ಮನ ಕಡೆಗಿನ ನಮ್ಮ  ಉಡ್ಡಯನ ಪ್ರಾರಂಭಗೊಳ್ಳುವಂತಾಗಬೇಕು. ನಮ್ಮ  ಸಂಸ್ಥೆಯಲ್ಲಿ ಸಂಕಲ್ಪದ ಮೊದಲು ಅಘಾತದಲ್ಲಿಯೇ ‘ಸತ್ಯ’ವು ಅಭ್ಯಾಸಿಯೊಳಗೆ ಎರೆಯಲ್ಪಡುತ್ತದೆ, ಅದುವೇ, ಕಾಲಕ್ರಮದಲ್ಲಿ  ಬೀಜದಂತೆ ಕೆಲಸ ಮಾಡುತ್ತದೆ. ಆ ಬೀಜವು ಸುಲಭವಾಗಿ ಬೆಳೆಯುವಂತೆ   ಮತ್ತು  ಉರಿಯುವ  ಗಾಳಿಯು ಅದನ್ನು ಸುಟ್ಟು ಹಾಕದಿರುವಂತೆ, ಗುರುವು ಸಾಮಾನ್ಯವಾಗಿ ಕಾರ್ಯ-ವಿಧಾನವನ್ನು (ಪ್ರಕ್ರಿಯೆಯನ್ನು)  ಪ್ರಾರಂಭಿಸುತ್ತಾನೆ. ಶಿಷ್ಯನು ‘ನಿರಂತರ ಸ್ಮರಣೆ’ಯಿಂದ  ಅದಕ್ಕೆ ನೀರೆರೆಯುತ್ತಾನೆ. ಸಾಕ್ಷಾತ್ಕಾರದ  ಪಥದಲ್ಲಿ  ಅಗತ್ಯ ವಾದುದು ಅದೊಂದೇ.

ಗ್ರಹಸ್ಥಾಶ್ರಮವು ಜೀವನದ ನಿಜವಾದ  ಧ್ಯೇಯವನ್ನು ಪಡೆಯಲು ಬಾಧಕವಲ್ಲ. ಉನ್ನತ ಮಟ್ಟವು  ಸುಲಭ ಸಾಧ್ಯವಾಗಲು ಇದೇ ಅತ್ಯುತ್ತಮ ಆಶ್ರಮವೆಂದು ನನಗೆ ತೋರುತ್ತದೆ. ನಾನು ಒಬ್ಬ ಗೃಹಸ್ಥ. ನನ್ನ  ಗುರುಗಳೂ ಗೃಹಸ್ಥರಾಗಿದ್ದರು. ಪರಿಪೂರ್ಣ ಯೋಗಿಯು ಈ ಆಶ್ರಮದಲ್ಲಿ ಮಾತ್ರವೇ  ಕಾಣಸಿಗಬಹುದೆಂದು ನಾನು ನಿಮಗೆ ಆಶ್ವಾಸನೆ ಕೊಡುತ್ತೇನೆ. ನಾವು ನಮ್ಮ ಕರ್ತವ್ಯಗಳನ್ನು ಪಾಲಿಸುತ್ತೇವೆ   ಮತ್ತು  ‘ಅವನನ್ನು’   ಅಂತಿಮ ಸತ್ಯವೆಂದು ಸ್ಮರಿಸುತ್ತೇವೆ.