ಸಾಕ್ಷಾತ್ಕಾರಕ್ಕೆ ಮಾರ್ಗ(ಅಭ್ಯಾಸಿಯ ಪಾತ್ರ)
ವೈರಾಗ್ಯ(ವಿರಕ್ತಿ)
ನಾವು ವೈರಾಗ್ಯವನ್ನು ರೂಢಿಸಿಕೊಂಡ ಹೊರತು ಮಾಯೆಯಿಂದ ಎಂದಿಗೂ ಬಿಡುಗಡೆ ಹೊಂದಲು ಸಾಧ್ಯವಿಲ್ಲವೆಂಬುದು ನಿಜ. ಆದರೆ ಮನೆ, ಕುಟುಂಬ ಮತ್ತು ಪ್ರಾಪಂಚಿಕ ಬಾಧ್ಯತೆಗಳನ್ನು ಕಡಿದುಕೊಂಡು ಧಾರ್ಮಿಕ ಸನ್ಯಾಸಿಯಾಗಬೇಕೆಂದು ಅದರ ಅರ್ಥವಲ್ಲ ಮನೆಯಿಂದ, ಮತ್ತು ಸಂಸಾರದಿಂದ ದೂರವಾಗಿ, ಎಲ್ಲ ಪ್ರಾಪಂಚಿಕ ಸಂಬಂಧಗಳನ್ನು ತ್ಯಜಿಸಿ ಒಂದು ನಿರ್ಜನ ಮೂಲೆಗೆ ಹೋಗಿ ಸೇರಿಕೊಳ್ಳುವುದು ವೈರಾಗ್ಯವನ್ನು ರೂಢಿಸಿಕೊಳ್ಳುವ ಏಕ ಮಾತ್ರ ಉಪಾಯವೆಂಬ ಅಭಿಪ್ರಾಯ ಹೊಂದಿದವರೊಡನೆ ನಾನು ಸಹಮತನಾಗುವದಿಲ್ಲ. ಅಂಥ ಒತ್ತಾಯದ ಸಾಧನಗಳಿಂದ, ಪರಿಣಾಮದಿಂದ ಬಂದ ವೈರಾಗ್ಯವು ನೈಜವಾಗಿರುವುದು ಇಲ್ಲವೆನ್ನುವಷ್ಟು ಅಪರೂಪವೇ ಸರಿ. ಯಾಕೆಂದರೆ, ಸಂಸಾರದಿಂದ (ಪ್ರಪಂಚದಿಂದ), ಬಲಾತ್ಕಾರ ಪೂರ್ವಕ ಅವರು ಸಂಬಂಧ ಕಡಿದುಕೊಂಡಂತೆ ಕಂಡರೂ, ಆಂತರಿಕವಾಗಿ ಅವರು ಅದಕ್ಕೆ ಇನ್ನೂ ಅಂಟಿಕೊಂಡಿರುವುದು ಸಾಧ್ಯ. ಗೃಹಸ್ಥರಾಗಿ ನಾವು ಅನೇಕ ಸಂಗತಿಗಳ ಕಾಳಜಿ ತೆಗೆದುಕೊಳ್ಳಬೇಕೆಂಬುದರಲ್ಲಿ ಸಂದೇಹವಿಲ್ಲ. ನಾವು ನಮ್ಮಸಂಸಾರಕ್ಕೆ ಆಶ್ರಯವೊದಗಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು; ಅವರ ಬೇಡಿಕೆಗಳನ್ನು ನೋಡಿಕೊಳ್ಳಬೇಕು, ಅವರನ್ನು ಶೀತೋಷ್ಣಗಳಿಂದ ರಕ್ಷಿಸಬೇಕು, ಇತ್ಯಾದಿ. ಈ ಅವಶ್ಯಕತೆಗಳ ಸಲುವಾಗಿ ನಾವು ಹಣ, ಆಸ್ತಿಗಳನ್ನು ಗಳಿಸಿಡುತ್ತೇವೆ. ನಮಗೆ ಸಂಬಂದಿಸಿದ ವಸ್ತುಗಳ ಜೊತೆಗೆ ಅನುಚಿತ ಆಸಕ್ತಿ ಹೊಂದಿರುವುದು ನಿಜವಾದ ಕೇಡು. ಇದೇ ನಮ್ಮ ದುಃಖಗಳಿಗೆ ಮುಖ್ಯ ಕಾರಣ. ಆದರೆ, ಯಾವುದೇ ಆಕರ್ಷಣೆ-ವಿಕರ್ಷಣೆಗಳ ಭಾವನೆಯಿಲ್ಲದೆ, ಜೀವನದ ಎಲ್ಲ ಕೆಲಸಗಳನ್ನು ಕರ್ತವ್ಯವೆಂದು ಭಾವಿಸಿ ನಾವು ಮಾಡಲು ಶಕ್ತರಾದೆವೆಂದಾದರೆ ನಾವು ಅನೇಕ ವಸ್ತುಗಳನ್ನು ಹೊಂದಿ, ಅವುಗಳನ್ನುಪಯೋಗಿಸುತ್ತಿದ್ದರೂ, ಒಂದು ಅರ್ಥದಲ್ಲಿ ನಾವು ಪ್ರಾಪಂಚಿಕ ಬಂಧನಗಳಿಂದ ಮುಕ್ತರಾಗಿದ್ದಂತೆಯೇ; ಮತ್ತು ನಿಜವಾದ ಅರ್ಥದಲ್ಲಿ ಪ್ರಪಂಚವನ್ನು ತ್ಯಜಿಸಿ ದಂತಾಯಿತು. ಆಗ, ನಮ್ಮಲ್ಲಿರುವದಲ್ಲ ಸರ್ವೇಶನಿಂದ (ಗುರುವಿನಿಂದ) ನಮಗೆ ವಹಿಸಲ್ಪಟ್ಟ ಕರ್ತವ್ಯವನ್ನು ನೆರವೇರಿಸಲು ನಮ್ಮಲ್ಲಿ ಇರಿಸಲ್ಪಟ್ಟ ಪವಿತ್ರ’ನ್ಯಾಸ’ ಎಂಬಂತೆ ತೋರಿ ಬರುತ್ತದೆ. ವೈರಾಗ್ಯದ ನಿಜವಾದ ಅರ್ಥ ಪ್ರಾಪಂಚಿಕ ವಸ್ತುಗಳ ಬಗ್ಗೆ ಮೋಹವಿಲ್ಲದಿರುವುದೇ ಹೊರತು, ಅವುಗಳನ್ನು ಹೊಂದದಿರುವದಲ್ಲ. ಹೀಗೆ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಮತ್ತು ಪ್ರಾಪಂಚಿಕ ಸಂಬಂಧಗಳು ಅನಿವಾರ್ಯವಾಗಿರುವ ಗ್ರಹಸ್ಥಾಶ್ರಮವು ವೈರಾಗ್ಯಕ್ಕೆ ಮತ್ತು ತನ್ಮೂಲಕ ಸಾಕ್ಷಾತ್ಕಾರಕ್ಕೆ ಬಾಧಕವಾಗುವುದಿಲ್ಲ. ಆದರೆ ನಮಗೆ ಸಂಬಂಧಪಟ್ಟ ವಸ್ತುಗಳಿಗೆ ಅನುಚಿತವಾಗಿ ಅಂಟಿ ಕೊಂಡಿರಬಾರದು. ಉದ್ದಕ್ಕೂ ಗ್ರಹಸ್ಥ ಜೀವನ ನಡೆಸುತ್ತ ಅತ್ಯುನ್ನತ ಮಟ್ಟದ ಪರಿಪೂರ್ಣತೆಯನ್ನು ಪಡೆದ ಅನೇಕ ಸಂತರ ಉದಾಹರಣೆಗಳಿವೆ. ನಿಜಕ್ಕೂ ವೈರಾಗ್ಯ ವೆಂದರೆ, ವಸ್ತುಗಳ ಕ್ಷಣಿಕತೆಯನ್ನು ಮತ್ತು ಪರಿವರ್ತನ ಶೀಲತೆಯನ್ನು ಮನಗಾಣಿಸಿ, ಅಂಥವುಗಳೊಡನೆ ನಿರ್ಲಿಪ್ತತೆಯ ಭಾವವನ್ನುಉಂಟು ಮಾಡುವ ಒಂದು ಆಂತರಿಕ ಮನಃಸ್ಥಿತಿ. ಆತನ ದೃಷ್ಟಿಯು, ಅಪರಿವರ್ತನೀಯ ಶಾಶ್ವತ ಸತ್ಯದ ಮೇಲೆ ಪ್ರತಿಕ್ಷಣವೂ ನೆಟ್ಟಿದ್ದು, ಅವನು ಮೋಹ-ಜಿಗುಪ್ಸೆಗಳ ಭಾವನೆಯಿಂದ ಮುಕ್ತನಿರುತ್ತಾನೆ. ಇದೇ ‘ವೈರಾಗ್ಯ’ ಎಂಬ ಪದದ ನಿಜವಾದ ಅರ್ಥ. ಈ ಮಾನಸಿಕ ಸ್ಥಿತಿಯನ್ನು ಪಡೆದಾಗ ನಾವು ಇಚ್ಛೆಗಳಿಂದ (ಬಯಕೆಗಳಿಂದ)ಬಿಡುಗಡೆ ಹೊಂದಿರುತ್ತೇವೆ. ನಮಗೆ ಲಭ್ಯವಾದುದಷ್ಟರಲ್ಲಿಯೇ ತೃಪ್ತಿ ಪಡುತ್ತೇವೆ. ಇಚ್ಛಾ ಸಮಾಪ್ತಿಯೇ ಸಂಸ್ಕಾರಗಳುಂಟಾಗುವುದನ್ನು ನಿಲ್ಲಿಸುವುದು. ನಮ್ಮ ಜೀವಿತ ಕಾಲದಲ್ಲಿ ಕ್ಷಯಿಸಿ ಹೋಗಬೇಕಿದ್ದ ನಮ್ಮ ಹಿಂದಿನ , ಸಂಸ್ಕಾರಗಳ ಭೋಗವು ಮಾತ್ರ ಉಳಿದಿರುತ್ತದೆ. ನಮ್ಮ ವಿಚಾರ ಮತ್ತು ಕ್ರಿಯೆಗಳಿಂದುಂಟಾದ ಸಂಸ್ಕಾರಗಳನ್ನು ನಮ್ಮ ಕಾರಣ ಶರೀರದಿಂದ ತೆಗೆದುಹಾಕುವ ಸಲುವಾಗಿ ಬೇಕಾದ ಭೋಗಕ್ಕೆ ಕ್ಷೇತ್ರವನ್ನು ನಿರ್ಮಿಸಿ ಕೊಡುವ ಕಾರ್ಯದಲ್ಲಿ ಪ್ರಕೃತಿಯೂ ನಮಗೆ ಸಹಾಯಮಾಡುತ್ತದೆ. ಆ ಆವರಣಗಳು ಕರಗಿ ಹೋದ ಮೇಲೆ ನಾವು ಅಸ್ತಿತ್ವದ ಸೂಕ್ಷ್ಮ ರೂಪಗಳನ್ನು ಹೊಂದಲಾರಂಭಿಸುತ್ತೇವೆ.
ಈ ಪ್ರಪಂಚದಲ್ಲಿ ಹುಟ್ಟಿ ಬಂದ ಮನುಷ್ಯನು ದುಃಖಗಳನ್ನು ಅನುಭವಿಸುವುದು ಖಂಡಿತ. ಅದನ್ನು ಯಾರೂ ತಪ್ಷಿಸಿ ಕೊಳ್ಳಲಾರರು. ಪ್ರಪಂಚವನ್ನು ನೋಡಿದರೆ, ಅದು, ತುಂಬ ಕಷ್ಟಕರವೆಂಬುದು ನನಗೆ ಕಂಡು ಬರುತ್ತದೆ. ಕೆಲವರು ನೋವಿನಿಂದ ನರಳುತ್ತಿದ್ದಾರೆ. ಕೆಲವರು ತಮ್ಮ ಪ್ರಿಯರ ವಿಯೋಗದಿಂದ ದುಃಖಪಡುತ್ತಿದ್ದಾರೆ ಮತ್ತು ಬಹಳಷ್ಟು ಜನರು ಹೆಜ್ಜೆ ಹೆಜ್ಜೆಗೂ ಯಶಸ್ಸು ಗಳಿಸಲು ಕಾತರರಾಗಿದ್ದಾರೆ. ನಾವು ತಪಸ್ಸನ್ನಾಚರಿಸಿ ಇವುಗಳಿಂದ ಬಿಡುಗಡೆ ಹೊಂದಲು ಪ್ರಯತ್ನಿತ್ತೇವೆ. ಋಷಿಗಳು ಪೂರ್ಣವಾಗಿ ಅದಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಮೋಹದಿಂದ ಹುಟ್ಟಿದುದೆಲ್ಲವೂ ದುಃಖವೇ. ನೋವು ನಲಿವುಗಳೆರಡೂ ದುಃಖಕ್ಕೆ ಕಾರಣಗಳೇ. ಅತ್ಯಂತ ಶುದ್ಧ ರೂಪದ ದೈವೀ ವಿಚಾರಗಳಿಗೆ ನಮ್ಮನ್ನು ಅರ್ಪಿಸಿಕೊಳ್ಳುವುದರ ಹೊರತು ಕಷ್ಟಗಳಿಂದ ಪಾರಾಗುವ ಬೇರೆ ಉಪಾಯವಿಲ್ಲ.
ನಾವು ಪ್ರಪಂಚವನ್ನು ತ್ಯಜಿಸಿ ಕಾಡಿಗೆ ಹೋಗುವ ಅಗತ್ಯವಿಲ್ಲ. ಭೌತಿಕ ಪ್ರಪಂಚ ಮತ್ತು ಆಧ್ಯಾತ್ಮಿಕ ಪ್ರಪಂಚಗಳು ಜತೆ ಜತೆಯಾಗಿ, ಸರಿ ಸಮಾನವಾಗಿ ಬೆಳಗುತ್ತ ನಡೆಯಲಿ. ತನ್ನ ಗೃಹಸ್ಥ ಕರ್ತವ್ಯಗಳನ್ನು ನೆರವೇರಿಸುತ್ತ, ಪರಮಾತ್ಮನ ಸಾಕ್ಷಾತ್ಕಾರದ ಮಟ್ಟದವರೆಗೂ ಏರಿದರೆ, ಮನುಷ್ಯನು ಯಾವ ರೀತಿಯಿಂದಲೂ ನಷ್ಟ ಹೊಂದಿದಂತಾವುದಿಲ್ಲ. ನಾವು ಯಶಸ್ಸು ಪಡೆಯಬಯಸುವುದಾದರೆ ಎರಡೂ ರೆಕ್ಕೆಗಳಿಂದ ಹಾರಬೇಕು. ದೇವರನ್ನು ಅರಣ್ಯದಲ್ಲಿ ಹುಡುಕಬೇಕೆಂಬುದು ಜನರಲ್ಲಿ ಸಾಮಾನ್ಯವಾಗಿ ಇರುವ ಅಸ್ಪಷ್ಟ ಭಾವನೆ. ಹೃದಯದಲ್ಲಿ ಅವನನ್ನು ಹುಡುಕಬೇಕೆಂಬುದು ನನ್ನ ಅಭಿಪ್ರಾಯ. ಗೃಹಸ್ಥ ಕರ್ತವ್ಯಗಳನ್ನು ನೆರವೇರಿಸುತ್ತಲೇ, ಅದೇ ಸಮಯದಲ್ಲಿ ಮನುಷ್ಯನು ದೈವಭಕ್ತಿ ನಿರತನಾಗಿರುತ್ತಾನೆ. ಇವೆರಡೂ ಒಂದಕ್ಕೊಂದು ಹೊಂದಿಕೆಯಿಲ್ಲದವೆಂದೂ, ಪರಸ್ಪರ ವಿರುದ್ಧವಾದವುಗಳೆಂದೂ ನೀವು ಹೇಳಬಹುದು, ಆದರೆ ಅದು ಹಾಗಿಲ್ಲ. ಕಾಲ ಕಳೆದಂತೆಲ್ಲ, ದೈವೀ ಪ್ರಜ್ಞೆಯು ಕೆಲಸ ಮಾಡಲಾರಂಭಿಸಿ, ಮನುಷ್ಯನು ಮನಸ್ಸಿಗೆ ಅತೀತನಾಗಿ ನಿಂತು, ಕರ್ತವ್ಯಗಳನ್ನು ಮಾಡುತ್ತಾನೆ.
ಹೀಗೆ ಮಾನವನು ಸಂಪೂರ್ಣವಾಗಿ ದೇವರ ಕಡೆಗೆ ತಿರುಗಿದಾಗ ಮಾತ್ರ ವೈರಾಗ್ಯ ಸಿದ್ಧಿಸಲು ಸಾಧ್ಯ. ಹಾಗೆ ಆದಾಗ, , ಮನುಷ್ಯನು ಸ್ವಾಭಾವಿಕವಾಗಿ ತನ್ನ ಸ್ವಂತದಲ್ಲಿಯೂ, ಅದಕ್ಕೆ ಸಂಬಂಧಿಸಿದ ಎಲ್ಲವುಗಳಲ್ಲಿಯೂ ವಿರಕ್ತನಾಗುತ್ತಾನೆ. ಹೀಗೆ, ಆತನು ದೇಹ ಪ್ರಜ್ಞೆಯನ್ನು ಮಾತ್ರವಲ್ಲದೆ, ಅನಂತರ, ತನ್ನ ಆತ್ಮಪ್ರಜ್ಞೆಯನ್ನೂ ಕಳೆದುಕೊಳ್ಳುತ್ತಾನೆ. ಆಗ ಉಳಿಯುವುದು ‘ನಿಷ್ಕ್ರಿಯಾವಸ್ಥೆ’ ಅಥವಾ ‘ಸಜೀವ ನಿಷ್ಕ್ರಿಯಾವಸ್ಥೆ’ಯಲ್ಲದೆ ಬೇರೇನೂ ಅಲ್ಲ.
ಧ್ಯಾನ
ಸಹಜಮಾರ್ಗ ಶಿಕ್ಷಣ ಪದ್ಧತಿಯಲ್ಲಿ ಪಾತಂಜಲ ಯೋಗದ ಏಳನೆಯ ಮೆಟ್ಟಲಾದ ಧ್ಯಾನದಿಂದ ಪ್ರಾರಂಭಿಸುತ್ತೇವೆ. ಧ್ಯಾನದ ಅಭ್ಯಾಸದ ಸಲುವಾಗಿ ಒಂದು ಬಿಂದುವಿನ ಮೇಲೆ ಮನಸ್ಸನ್ನು ಸ್ಥಿರಗೊಳಿಸುತ್ತೇವೆ. ಹಿಂದಿನ ಮೆಟ್ಟಲುಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದಿಲ್ಲ, ಆದರೆ ನಾವು ಧ್ಯಾನದಲ್ಲಿ ಮುಂದುವರಿದಂತೆಲ್ಲ ಅವು ಸ್ವಾಭಾವಿಕವಾಗಿಯೇ (ತಾವಾಗಿಯೇ) ಮೈಗೂಡಿ ಬರುತ್ತವೆ. ಹೀಗೆ ನಮ್ಮ ಸಮಯ ಮತ್ತು ಶ್ರಮದ ಬಹುಭಾಗ ಉಳಿತಾಯವಾಗುತ್ತದೆ. ಕೆಲವೊಂದು ಸಂಸ್ಥೆಗಳಲ್ಲಿ ಅಭ್ಯಾಸದ ನಿತ್ಯ ಕ್ರಮವನ್ನು ಗೌಪ್ಯವಾಗಿಡಲಾಗುತ್ತದೆ. ಅವುಗಳನ್ನು ವಿಧಿಪೂರ್ವಕ ಸೇರಲು ತಯಾರಾಗಿರುವವರಿಗೆ ಮಾತ್ರವೇ ಅದನ್ನು ಬಹಿರಂಗ ಪಡಿಸಲಾಗುತ್ತದೆ. ಇದರಡಿಯಲ್ಲಿರುವ ಉದ್ದೇಶವೇನೆಂಬುದು ಅರ್ಥವಾಗುವುದಿಲ್ಲ. ಪ್ರಕೃತಿಯಲ್ಲಿ ಯಾವ ರಹಸ್ಯಗಳೂ ಇಲ್ಲ; ಮತ್ತು ದೈವೀ ಮಾರ್ಗವನ್ನು ಅನುಸರಿಸುತ್ತೇವೆಂದು ಹೇಳಿಕೊಳ್ಳುವವನಿಗೂ ಅಂಥದೊಂದು ಇರಕೂಡದೆಂಬುದು ನನ್ನ ಅಭಿಪ್ರಾಯ.
ನಮ್ಮ ಮಿಷನ್ನಿನಲ್ಲಿ ಅನುಸರಿಸಲಾಗುವ ಅಭ್ಯಾಸವೆಂದರೆ ಹೃದಯದ ಮೇಲೆ ಧ್ಯಾನ. ಅದೇ ವಿಧಾನವು ಪತಂಜಲಿಯಿಂದಲೂ ನಿರೂಪಿಸಲ್ಪಟ್ಟಿದೆ. ಅದರ ಹಿಂದೆ ಒಂದು ದೊಡ್ಡ ತತ್ವ ಅಡಗಿದೆ. ನಾವು ಸದಾಕಾಲ ಪ್ರಾಪಂಚಿಕ ವಿಷಯಗಳಲ್ಲಿ ನಿರತರಾಗಿರುತ್ತೇವೆ ನಾವು ಏನನ್ನೂ ಮಾಡದಿರುತ್ತಿದ್ದರೆ, ನಮ್ಮ ವಿಚಾರಗಳಿಗೆ ರೆಕ್ಕೆ ಬಂದಿರುವಂತೆ ತೋರುತ್ತದೆ. ಯಾವಾಗಲೂ ನಾವು ತಳಮಳ ಮತ್ತು ಅವ್ಯವಸ್ಥೆಯಲ್ಲಿ ಇರುತ್ತೇವೆ. ನಮ್ಮ ವ್ಯಷ್ಟಿ ಮನಸ್ಸು ಅಂಥ ಚಟುವಟಿಕೆಗಳಿಗೆ ಒಗ್ಗಿಕೊಂಡು ಬಿಟ್ಟಿದೆ. ಹೀಗೆ ನಾವು ಎಲ್ಲವನ್ನೂ ತಲೆ ಕೆಳಗು ಮಾಡಿದ್ದೇವೆ. ನಾವು ಮಾಡುವ ತಪ್ಪು ಕೆಲಸಗಳಲ್ಲಿ ನಮ್ಮ ಕ್ರಿಯೆಗಳೂ ವಿಚಾರಗಳೂ ಮಹತ್ವದ ಪಾತ್ರ ವಹಿಸುತ್ತವೆ. ನಾವು ವಿಧವಿಧವಾದ ವಿಚಾರ ಮತ್ತು ಕಲ್ಪನೆಗಳ ಸಂಪರ್ಕದಲ್ಲಿ ಇರುವಾಗ ನಮ್ಮ ಭಾವನಾತ್ಮಕ ಸಂವೇದನೆಗಳ(ಅನಿಸಿಕೆಗಳ) ಮತ್ತು ಇಂದ್ರಿಯಗಳ ಮೇಲೆ ಅವು ಸಂಸ್ಕಾರವನ್ನು ಉಂಟು ಮಾಡುತ್ತವೆ. ನಮ್ಮ ಇಂದ್ರಿಯಗಳು ಕೆಟ್ಟು ಹೋಗಿ, ತಪ್ಪು ದಾರಿ ಹಿಡಿಯುತ್ತವೆ. ಹೀಗೆ ನಾವು ನಮ್ಮ ಇಂದ್ರಿಯಗಳ ಮೇಲೆ ಮಾಡುವ ಗುರುತುಗಳು, ಅವುಗಳನ್ನು ಬೋಧ ಅಥವಾ ವಿವೇಕವೇ ಇಲ್ಲದ ಬಂಡೆಯಂತೆ ಜಡಗೊಳಿಸಿ ಬಿಡುತ್ತವೆ. ಆತ್ಮದ ಮೇಲೆ ಯಾವ ಕ್ರಿಯೆಯೂ ವರ್ತಿಸುವುದಿಲ್ಲ(ಪ್ರಭಾವಿಸುವದಿಲ್ಲ) ಎಂಬುದು ನಿಃಸಂದೇಹ. ಆದರೆ, ನಾವು ಎಂಥ ಅಡೆತಡೆಗಳನ್ನು ಮತ್ತು ಆವರಣಗಳನ್ನು ನಿರ್ಮಿಸುತ್ತೇವೆಂದರೆ, ಅವು ಆತ್ಮದ ಸುತ್ತಲೂ ರೇಷ್ಮೆಗೂಡಿನಂತೆ ಸುತ್ತುಗಟ್ಟಿ ಮುಚ್ಚಿ ಹಾಕಿಬಿಡುತ್ತವೆ. ಸಾಕ್ಷಾತ್ಕರಿಸಿಕೊಳ್ಳುವುದು ಹಾಗಿರಲಿ, ಆತ್ಮವನ್ನು ನಾವು ಇಣುಕಿ ನೋಡುವುದೂ ಸಾಧ್ಯವಿಲ್ಲ. ವಿಷಪೂರಿತ ವಿಚಾರಗಳಿಂದ ಮತ್ತು ಕ್ರಿಯೆಗಳ ಪರಿಣಾಮವಾಗಿ ನಾವು ನಮ್ಮ ವಿವೇಕ ಶಕ್ತಿಯನ್ನೂ, ಯಥಾರ್ಥ ಗ್ರಹಣ ಶಕ್ತಿಯನ್ನೂ ಕೆಡಿಸಿಕೊಳ್ಳುತ್ತೇವೆ. ಇಷ್ಟು ಸ್ಥೂಲದೆಶೆಗೆ ಮುಟ್ಟಿದವರು ರಾಜಯೋಗ ಶಿಕ್ಷಣ ಕ್ರಮದ ಅಡಿಯಲ್ಲಿ ಬರಲು ಒಪ್ಪುವದಿಲ್ಲ. ನಾವು ಹೇಳುವದರ ಕಡೆಗೆ ಜನರು ಕಿವುಡಾಗಿರುವುದು(ಗಮನಕೊಡದಿರಲು)ಇದೇ ಕಾರಣ. ಹಠಯೋಗದ ರೀತ್ಯಾ ಅದೆಷ್ಟೇ ಅಭ್ಯಾಸ(ಸಾಧನೆ) ಮಾಡಿದರೂ, ಅದು ನಿಜವಾದ ಸಾಕ್ಷಾತ್ಕಾರ ಸ್ಥಿತಿಯನ್ನು ತರಲಾರದು; ಯಾಕೆಂದರೆ ಆಜ್ಞಾಚಕ್ರದ ನಂತರ ಅದು ವಿಫಲವಾಗುತ್ತದೆ. ಅದರ ನಂತರ ಹಾದು ಹೋಗಬೇಕಾದ ಅನೇಕ ಸ್ಥಿತಿಗಳು ಇನ್ನೂ ಉಳಿದುಬಿಡುತ್ತವೆ. ಆದುದರಿಂದ ಕೊನೆಯವರೆಗೂ ನಮ್ಮನ್ನು ಕೊಂಡೊಯ್ಯಬಲ್ಲುದಾದದ್ದು ರಾಜಯೋಗವೊಂದೇ. ಕೇಂದ್ರವನ್ನು ತಲುಪಲು ಬೇರೆ ಉಪಾಯವಿಲ್ಲ. ನಮ್ಮ ತಪ್ಪು ಕೆಲಸಗಳಿಂದ ವಿರೂಪಗೊಂಡಿದ್ದಾದರೂ, ಅದೇ ಕೇಂದ್ರದ ಶಕ್ತಿ ನಮ್ಮೊಳಗಿದೆ. ನಾವು ಧ್ಯಾನದಲ್ಲಿ ಅದೇ ಶಕ್ತಿಯಿಂದ ಕೆಲಸ ತೆಗೆದುಕೊಳ್ಳುತ್ತೇವೆ. ಹಾಗೆನ್ನುವದಾದರೆ, ಪ್ರಕೃತಿಯ ಶಕ್ತಿಯಿಂದಲೇ ಸಹಜವಾಗಿ ಮುಂದುವರಿಯುವ ರೀತಿ ಇದೇ. ನಾವು ಧ್ಯಾನ ಮಾಡುವಾಗ ನಮ್ಮಲ್ಲಿರುವ ಕೇಂದ್ರಶಕ್ತಿ ಕಾರ್ಯನಿರತವಾಗಿರುತ್ತದೆ. ಅದರ ಶಕ್ತಿಯಿಂದ ಬಡಿದೆಬ್ಬಿಸಲ್ಷಟ್ಟ, ತಡೆಯಲಸಾಧ್ಯವಾದ ಮೋಡಗಳನ್ನು ಅದು ಚದುರಿಸಿ ದೂರ ಮಾಡುತ್ತದೆ. ಅದನ್ನು ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲ; ಅಭ್ಯಾಸಿ ಮಾತ್ರ ಅದನ್ನು ಅನುಭವಿಸಬಲ್ಲನು. ಇದನ್ನು ಪ್ರಾಯೋಗಿಕವಾಗಿ ಮಾತ್ರ ಅರಿಯಬಹುದು. ಶಾಶ್ವತ ಶಾಂತಿ, ಸಂತೋಷಗಳಲ್ಲಿ ನೀವು ಈಜಾಡುತ್ತಿರುವುದನ್ನು ಕ್ಷಿಪ್ರದಲ್ಲಿಯೇ ಕಂಡುಕೊಳ್ಳುವಿರಿ. ಎಲ್ಲವೂ ಇಲ್ಲಿ ಕೊನೆಗೊಳ್ಳುವುದು. ಪ್ರಪಂಚದೊಡನೆ ಯಾವ ಮೋಹವೂ ಉಳಿಯುವುದಿಲ್ಲ. ಮನಸ್ಸು ಸುಶಿಕ್ಷಿತವಾಗಿ, ತನ್ನಿಂದತಾನೇ ನಿಯಂತ್ರಣಗೊಳ್ಳುತ್ತದೆ. ಇಂದ್ರಿಯಗಳು ನಿಮ್ಮ ಹತೋಟಿಯಲ್ಲಿ ಬರಲು ಪ್ರಾರಂಭಿಸಿ, ನೀವು ಅವುಗಳ ಮೇಲೆ ಸಂಪೂರ್ಣ ಸ್ವಾಮ್ಯವನ್ನು ಪಡೆಯುವಿರಿ. ನಿಮ್ಮ ಮೇಲೆ ನೀವು ಪ್ರಭುತ್ವ ಹೊಂದುವುದೆಂದರೆ ಪ್ರಕೃತಿಯ ಮೇಲೆ ಪ್ರಭುತ್ವ ಹೊಂದುವುದು. ದಾರಿಯು ಸುಗಮವಾದಾಗ, ನೀವು ಸ್ವತಃ ಕೆಲಸ ಮಾಡುವದಕ್ಕಿಂತ ಹೆಚ್ಚಾಗಿ ನಿಮ್ಮ ಪರಿಮಿತಿಯ ಸೀಮೆಯಲ್ಲಿ ಪ್ರಕೃತಿಯೇ ಕೆಲಸ ಮಾಡುವುದನ್ನು ಕಂಡುಕೊಳ್ಳುವಿರಿ. ನಮ್ಮ ಪದ್ಧತಿಯಲ್ಲಿ ದೈವೀ ಪ್ರಕಾಶವು ಹೃದಯದಲ್ಲಿರುವುದೆಂದು ಭಾವಿಸಿ ಧ್ಯಾನ ಮಾಡುವಂತೆ ಅಭ್ಯಾಸಿಗೆ ಸಲಹೆ ನೀಡಲಾಗುತ್ತದೆ. ಆದರೆ, ಪ್ರಕಾಶವನ್ನು ವಿದ್ಯುತ್ ಬಲ್ಬಿನ ಅಥವಾ ಮೇಣಬತ್ತಿಯ ದೀಪದ ಅಥವಾ ಇನ್ನಾವುದೋ ರೂಪ ಅಥವಾ ಆಕಾರದಲ್ಲಿ ಕಲ್ಪಿಸಕೂಡದೆಂದು ನಿರ್ದೇಶಿಸಲಾಗುತ್ತದೆ. ಹಾಗಿದ್ದ ಪಕ್ಷದಲ್ಲಿ, ಅಲ್ಲಿ ತೋರಿ ಬರುವಂತಿರುವ ಪ್ರಕಾಶವು ನಿಜವಾದುದಾಗಿರದೆ, ಅವನ ಸ್ರಜನಾತ್ಮಕ ಊಹೆಯಿಂದ ಪ್ರಕ್ಷಿಪ್ತವಾದುದಾಗಿರುತ್ತದೆ. ಅಭ್ಯಾಸಿಯು ದೈವಿಕತೆಯ ವಿಚಾರವನ್ನು ಮೂಲವಾಗಿಟ್ಟುಕೊಂಡು, ಪ್ರಕಾಶದ ಭಾವಮಾತ್ರದೊಂದಿಗೆ ಮುಂದುವರಿಯಬೇಕೆಂದು ಸಲಹೆ ಮಾಡಲಾಗುತ್ತದೆ. ಆಗ ಏನಾಗುತ್ತದೆಯೆಂದರೆ, ನಾವು ಪಡೆಯಬೇಕಾಗಿರುವ ಸೂಕ್ಷ್ಮತಮ ವಸ್ತುವಿನ ಮೇಲೆ ನಾವು ಧ್ಯಾನಿಸಿದಂತಾಗುತ್ತದೆ.
ಹೃದಯದ ಮೇಲೆ ಧ್ಯಾನ ಮಾಡುವ ವಿಧಾನವೆಂದರೆ ನಮ್ಮೊಳಗೆ ದೈವೀ(ಈಶ್ವರೀಯ) ಪ್ರಕಾಶವಿರುವುದೆಂದು ಭಾವಿಸುವುದು. ಈ ರೀತಿಯಲ್ಲಿ ನೀವು ಧ್ಯಾನ ಮಾಡಲು ಪ್ರಾರಂಬಿಸಿದಾಗ, ಒಳಗಿನ ದೈವೀ ಪ್ರಕಾಶವು ನಿಮ್ಮನ್ನು ಆಕರ್ಷಿಸುತ್ತಿದೆ(ಸೆಳೆಯುತ್ತಿದೆ) ಎಂದು ಭಾವಿಸಿರಿ. ಧ್ಯಾನ ಸಮಯದಲ್ಲಿ ಬಾಹ್ಯ ವಿಚಾರಗಳು ಬಂದರೆ ಲೆಕ್ಕಿಸಬೇಡಿರಿ. ಅವು ಬಂದರೆ ಬರಲಿ, ನಿಮ್ಮ ಕೆಲಸವನ್ನು ನೀವು ಮುಂದುವರಿಸಿರಿ. ಆಗಲೂ ಅವು ನಿಮಗೆ ತೊಂದರೆ ಉಂಟು ಮಾಡಿದರೆ ಅವು ನಿಮ್ಮವಲ್ಲ, ನಿಮ್ಮ ಗುರುಗಳವು ಎಂದು ತಿಳಿಯಿರಿ. ಧ್ಯಾನದ ಈ ಕ್ರಮವು ಬಹಳೇ ಪರಿಣಾಮಕಾರಿ ಮತ್ತು ಇಚ್ಛಿತ ಫಲವನ್ನು ಕೊಡುವದರಲ್ಲಿ ಎಂದಿಗೂ ಚ್ಯುತಿಯಾಗುವದಿಲ್ಲ. ಬೆಳಿಗ್ಗೆ ಒಂದು ಗಂಟೆ ಕಾಲ, ಸ್ವಾಭಾವಿಕವಾದ ರೀತಿಯಲ್ಲಿ, ಸುಲಭವೆನಿಸಿದ ಆಸನದಲ್ಲಿ(ಭಂಗಿಯಲ್ಲಿ) ಕುಳಿತುಕೊಳ್ಳಿರಿ. ನೀವು ಕೇವಲ ಧ್ಯಾನವನ್ನು ಮಾತ್ರ ಮಾಡಬೇಕು. ಧ್ಯಾನ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಬರುವ ನಿಮ್ಮ ವಿಚಾರಗಳೊಡನೆ ಹೋರಾಡಬಾರದು. ಧ್ಯಾನದಿಂದ ಏಕಾಗ್ರತೆಯು ತಾನಾಗಿಯೇ ಬರುವುದು. ಧ್ಯಾನದ ಬದಲು ಏಕಾಗ್ರತೆಗೆ ಒತ್ತುಕೊಟ್ಟು ಅದಕ್ಕೊಸ್ಕರ ಮನಸ್ಸನ್ನು ಬಲಾತ್ಕರಿಸುವವರು ಸಾಮಾನ್ಯವಾಗಿ ವಿಫಲರಾಗುತ್ತಾರೆ.
ಮತ್ತೆ, ಸಾಯಂಕಾಲ ಕನಿಷ್ಠ ಅರ್ಧ ಘಂಟೆ ಕಾಲ ಅದೇ ಭಂಗಿಯಲ್ಲಿ ಕುಳಿತುಕೊಂಡು, ನಿಮ್ಮ ಶರೀರ ಸಂಸ್ಥಾಯದಲ್ಲಿರುವ ಸ್ಥೂಲತೆ ಅಥವಾ ಜಡತೆಯೂ ಜಟಿಲತೆಗಳೂ, ನಿಮ್ಮ ಹಿಂದಿನ ವಿಚಾರಗಳ ಜಾಲವೂ ಕರಗಿ ಹೋಗುತ್ತಿವೆಯೆಂದು, ಹಿಂಭಾಗದಿಂದ ಹೊಗೆಯ ರೂಪದಲ್ಲಿ ಆವಿಯಾಗಿ ಹೋಗುತ್ತವೆ ಎಂದೂ ಯೋಚಿಸಿರಿ. ಅದರಿಂದ ನಿಮ್ಮ ಮನಸ್ಸು ಶುದ್ಧಗೊಂಡು, ನಮ್ಮ ಸಮರ್ಥ ಗುರುವಿನ ಪರಿಣಾಮಕಾರಿ ಪ್ರಭಾವವನ್ನು ಸ್ವಿಕರಿಸಲು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತದೆ. ನೀವು ಪರಕೀಯ ವಸ್ತುವಿನಿಂದ ಬಿಡುಗಡೆ ಹೊಂದಿರುವಿರೆಂದು ನನಗೆ ಕಂಡು ಬಂದ ಕೂಡಲೆ, ನಾನು ಅದನ್ನು ಬೇರೆ ವಿಧದಲ್ಲಿ ಬದಲಾಯಿಸುತ್ತೇನೆ, ಅಥವಾ ನೀವು ಅದನ್ನು ನಿಲ್ಲಿಸುವಂತೆ ಈ ರೀತಿಯಲ್ಲಿ ಚಕ್ರಗಳನ್ನೂ ಅವುಗಳ ಉಪಬಿಂದುಗಳನ್ನೂ ಶುದ್ಧಗೊಳಸಿ ಮತ್ತು ಜಾಗೃತಗೊಳಿಸಿ ಬಹಳ ಮೇಲೇರುತ್ತೇವೆ; ಕುಂಡಲಿನಿಯನ್ನು ಕೊನೆಯಲ್ಲಿ ತೆಗೆದುಕೊಳ್ಳಲಾಗುವುದು ಅದನ್ನು ಕುರಿತು ಅಭ್ಯಾಸಿಯು ಸ್ವತಃ ಏನನ್ನೂ ಮಾಡುವುದು ಬೇಕಾಗಿಲ್ಲ. ಅದು ಸಂಪೂರ್ಣವಾಗಿ ಗುರುವಿನ ಹೊಣೆ. ಆದರೆ ಈ ಅಭ್ಯಾಸ ಕ್ರಮಗಳನ್ನು ಅನುಸರಿಸುವಾಗ ಮನಸ್ಸನ್ನು (ಅಭ್ಯಾಸಿಯು) ಬಲಾತ್ಕರಿಸಬಾರದು ಮತ್ತು ಸಹಜ ಸಾಮಾನ್ಯ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕೆಂಬುದನ್ನು ನೆನಪಿನಲ್ಲಿಡತಕ್ಕದ್ದು. ಬೆಳಿಗ್ಗೆ ಧ್ಯಾನ ಮಾಡುವ ಪೂರ್ವದಲ್ಲಿಯೂ ಐದು ನಿಮಿಷಗಳ ಕಾಲ ಈ ವಿಧಾನಗಳನ್ನು ಪ್ರತ್ಯೇಕ ಅಭ್ಯಾಸಿಯ ಅವಶ್ಯಕತೆಗೆತಕ್ಕಂತೆ ಸಲಹೆ ಮಾಡಬಹುದು ಅವುಗಳನ್ನು ಇಲ್ಲಿ ವಿವರವಾಗಿ ಹೇಳುವುದು ಬೇಕಿಲ್ಲ. ಈ ಶುದ್ಧೀಕರಣ ಪ್ರಕ್ರಿಯೆಯಲ್ಲಿ, ವ್ಯಷ್ಟಿಗತ ಜೀವಾತ್ಮವನ್ನು, ಸಾರೂಪ್ಯತೆಯ ಅತಿ ಸೂಕ್ಷ್ಮ ಸಾರವನ್ನು ಸಾಕ್ಷಾತ್ಕರಿಸಿಕೊಳ್ಳುವ ಕಡಿದಾದ, ಮತ್ತು ಜಾರಿಕೆಯುಳ್ಳ ದಾರಿಯಲ್ಲಿ ಮೇಲೇರಲು ಶಕ್ತಗೊಳಿಸಲು, ಮಾನವ ಸಂಕಲ್ಪ ರೂಪದಲ್ಲಿರುವ ಆದಿ ಸಂಕಲ್ಪ ಶಕ್ತಿಯನ್ನೇ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರೆ ಸಾಕು.
ಪ್ರತಿಯೊಬ್ಬ ಸಂತನೂ ‘ಪ್ರಕಾಶ’ ಎಂಬ ಪದವನ್ನು ಉಪಯೋಗಿಸಿದ್ದಾನೆ. ನಾನೂಕೂಡ ಅದನ್ನು ತಪ್ಪಿಸಲಾರೆ. ಯಾಕೆಂದರೆ, ಅದು ‘ಸತ್ಯ’ವನ್ನು ಸೂಚಿಸುವ ಅತ್ಯುತ್ತಮ ಅಭಿವ್ಯಕ್ತಿ. ಆದರೆ, ಅದು ಕೆಲವು ತೊಡಕುಗಳನ್ನು ಉಂಟು ಮಾಡುತ್ತದೆ. ಯಾಕೆಂದರೆ, ನಾವು ಪ್ರಕಾಶದ ಬಗ್ಗೆ ಮಾತನಾಡಿದಾಗ ಪ್ರಭೆಯ ಭಾವನೆ ಪ್ರಮುಖವಾಗಿ ಅದನ್ನು ಹೊಳೆಯುತ್ತಿರುವಂತೆ ಇರುವುದೆಂದು ತಿಳಿಯುತ್ತೇವೆ. ನಿಜವಾದ ‘ಪ್ರಕಾಶ’ದಲ್ಲಿ ಅಂಥ ಯಾವ ಭಾವನೆಯೂ ಒಳಗೊಂಡಿಲ್ಲ. ನಮ್ಮ ಪದ್ಧತಿಯಲ್ಲಿ ಅಭ್ಯಾಸಿಯು ಕೆಲವೊಮ್ಮೆ ಬೆಳಕನ್ನು ಕಾಣುತ್ತಾನೆ ಎಂಬುದೇನೋ ನಿಃಸಂಶಯ. ಆದರೆ ಅದು ಕಾಣುವುದು ಆರಂಭ ಕಾಲದಲ್ಲಿ; ಜಡ ವಸ್ತುವು ಶಕ್ತಿ ಸಂಪರ್ಕದಲ್ಲಿ ಬಂದಾಗ. ಬೇರೆ ಮಾತಿನಲ್ಲಿ ಹೇಳುವುದಾದರೆ ಶಕ್ತಿಯು ತನ್ನ ಕಾರ್ಯಾರಂಭ ಮಾಡಿದೆಯೆಂಬುದರ ಸೂಚನೆ ಅದೆಂದು ಮಾತ್ರ ಹೇಳಬಹುದು. ನಿಜವಾದ ಪ್ರಕಾಶವು ಉಷಃ ಕಾಲದವರ್ಣವುಳ್ಳದ್ದು ಅಥವಾ ವರ್ಣರಾಹಿತ್ಯದ ಒಂದು ಮಸಕು ಪ್ರತಿಬಿಂಬ. ಆ ವಸ್ತುವನ್ನು ಬೆಳಕು ಎಂದೆನ್ನುವುದು ಸರಿಯಾದ ಪದ ಪ್ರಯೋಗವಾಗಲಾರದು. ಯಾಕೆಂದರೆ ಬೆಳಕು ಆ ವಸ್ತುವಿಗಿಂತಲೂ ಹೆಚ್ಚು ಸ್ಥೂಲವಾದುದು. ಗ್ರಹಿಕೆಗೋಸ್ಕರ ಅದನ್ನು ಹಾಗೆ ವ್ಯಕ್ತಮಾಡಲಾಗುವುದು, ಅಷ್ಟೆ. ಅಭ್ಯಾಸಿಯು ಹೆಚ್ಚು ಹೆಚ್ಚು ಲಘುತ್ವವನ್ನು(ಹಗುರಾದಂತೆ)ಅನುಭವ ಮಾಡಿದರೆ, ಅವನು ಪ್ರಗತಿ ಹೊಂದುತ್ತಿರುವನೆಂದು ಅರ್ಥ. ಯಾಕೆಂದರೆ, ಹಾಗಾದ ಪಕ್ಷದಲ್ಲಿ ದೇವರು ಯಾವ ಸ್ಥಿತಿಯಲ್ಲಿ ಇರುವನೋ ಆ ಸ್ಥಿತಿಯಲ್ಲಿ ಅವನು ಪ್ರವೇಶಿಸುತ್ತಿದ್ದಾನೆ. ‘ಲಘುತ್ವ’ ಎಂದರೆ, ಮನುಷ್ಯನು ತನ್ನ ವಿಚಾರಗಳ ಭಾರವನ್ನು ಕಳೆದುಕೊಳ್ಳುವುದು. ಹೀಗೆ, ನಿಜವಾದ ಪ್ರಕಾಶವು ಸತ್ಯವಸ್ತುವನ್ನು ಸೂಚಿಸುತ್ತದೆ ಅಥವಾ, ವಸ್ತುರಹಿತ ವಸ್ತುವನ್ನು ಸೂಚಿಸುತ್ತದೆ ಎಂದರೆ ಹೆಚ್ಚು ಸಮರ್ಪಕವಾಗುವುದು.
ಎಲ್ಲ ರೀತಿಯ ಕೃತಕತೆಯೂ, ಅಭ್ಯಾಸಿಯ ಸ್ವಂತದ ಇಚ್ಛೆ(ವಾಂಛೆ) ಮತ್ತು ಪೂರ್ವಗ್ರಹೀತ ಅಭಿಪ್ರಾಯಗಳಿಂದ ತಪ್ಪಾಗಿ ನಿರ್ದೇಶಿಸಲ್ಪಟ್ಟ ಪ್ರಾಶಸ್ತ್ಯವೂ, ಅಪಾಯಕಾರಿಯಾಗಿರುತ್ತವೆ; ಅನೇಕ ವೇಳೆ ಅದು ಸರಿಪಡಿಸಲಾರದಂತಿರುತ್ತದೆ. ಹಾಗಿರುವದರಿಂದ, ಪ್ರಕಾಶದ ದರ್ಶನ ಮುಂತಾದವುಗಳನ್ನು ಕೃತಕವಾಗಿ ಸೃಷ್ಟಿಸಿಕೊಳ್ಳಬಾರದು ಅಥವಾ ಅವುಗಳಿಗಾಗಿ ಒತ್ತಾಯಿಸಬಾರದು. ಅವು ಉಂಟಾದುದೇ ಆದರೆ, ಯಾವ ವೈಯಕ್ತಿಕ ಆಸಕ್ತಿಯನ್ನೂ ಅವುಗಳ ಬಗ್ಗೆ ಹೊಂದಿರದೆ, ಕೇವಲ ಗಮನಿಸಿದರೆ ಸಾಕು. ಸಾಕ್ಷಾತ್ಕಾರ ಅಥವಾ ಅಂತಿಮ ಗುರಿಯೊಂದೇ ನಮ್ಮ ವೈಯಕ್ತಿಕ ಆಸಕ್ತಿಯ ವಸ್ತುವಾಗಬೇಕು. ಅದನ್ನು ಉದ್ದಕ್ಕೂ ದೃಷ್ಟಿಯಲ್ಲಿ ಸ್ಥಿರವಾಗಿ ಇಟ್ಟುಕೊಂಡಿರಬೇಕು. ಅಸಂಬದ್ಧವಾದ ಮತ್ತು ಅಡ್ಡದಾರಿಗೆಳೆಯುವ ಪ್ರತಿಯೊಂದರ ವಿರುದ್ಧವಾಗಿ ಅತ್ಯಂತ ನಂಬಲರ್ಹ ರಕ್ಷಣೆಯನ್ನು ಒದಗಿಸಿಕೊಳ್ಳುವುದಕ್ಕೆ ಬೇಕಾದುದು ಇದೇ ಆಗಿದೆ. ಅನೇಕ ರಾಜಯೋಗದ ಅಭ್ಯಾಸಿಗಳು, ಪ್ರತಿಯೊಂದು ಸಾರೆ ಧ್ಯಾನಕ್ಕೆ ಕುಳಿತಾಗಲೂ, ಚಿತ್ತೈಕಾಗ್ರತೆಯನ್ನು ಆತುರದಿಂದ ಪ್ರತೀಕ್ಷಿಸುತ್ತ, ಅದಕ್ಕೆ ಒತ್ತಾಯಪಟ್ಟುಕೊಳ್ಳುವುದು, ಆಗಲೇ ಹೇಳಿದಂತೆ, ಅಪಾಯಕರವಾದ, ತಪ್ಪಾಗಿ ನಿರ್ದೇಶಿತವಾದ ಪ್ರಾಶಸ್ತ್ಯದ ಒಂದು ಉದಾಹರಣೆ. ಭಾರತದಲ್ಲಿಯೂ, ಇತರ ಕಡೆಗಳಲ್ಲಿಯೂ, ಯೋಗ ಸಾಧನೆಯ ಇತಿಹಾಸದಲ್ಲಿ ಇದು ಭಾರಿ ಅನಾಹುತವನ್ನುಂಟು ಮಾಡಿದೆ. ಮನಸ್ಸನ್ನು ನಿಯಂತ್ರಣದಲ್ಲಿ ತರಲೋಸುಗ ಸಾಧಾರಣವಾಗಿ ಅನುಸರಿಸಲಾಗುವ ಸನ್ಯಾಸದ ನಿಯಮಾಚರಣೆಗಳೂ, ತಪಸ್ಸೂ, ದೇಹದಂಡನೆಗಳೂ ತಪ್ಪಾಗಿ ನಿರ್ದೇಶಿತವಾದ ಮನಃ ಪ್ರವ್ರತ್ತಿಗಳಿಂದ ಬಿಡುಗಡೆ ಮಾಡಲಾರವು. ಅದರ ಬದಲಾಗಿ, ಅವು ಕೆಡುಕನ್ನು ಒಳಗೆ ಅದುಮಿ ಅಡಗಿಸಲ್ಪಡುವಂತೆ ಮಾಡುತ್ತವೆ; ಮತ್ತು ಒಂದು ವೇಳೆ ಸಂಯಮ ಸಡಿಲವಾದಾಗ ಅವು ಎಂದಾದರೂ ಸಿಡಿದು ಹೊರಹೊಮ್ಮುವುದು. ನಿಜವಾದ ಪರಿಹಾರವಿರುವುದು, ಕೃತ್ರಿಮವಾಗಿ ಮನಸ್ಸನ್ನು ಅದುಮಿ ತಹ ಬಂದಿಯಲ್ಲಿಡುವುದರಲ್ಲಾಗಲಿ, ನಿರೋಧಿಸುವುದರಲ್ಲಾಗಲಿ ಅಥವಾ ದೇಹದಂಡನೆಯಲ್ಲಾಗಲಿ ಅಲ್ಲ. ತಪ್ಪು ದಾರಿಗಳೆಯಲ್ಪಟ್ಟ ಪ್ರವೃತ್ತಿಗಳಿಂದ ಮನಸ್ಸನ್ನು ಬಿಡುಗಡೆಗೊಳಿಸಿ ಕ್ರಮಶಃ ರೂಪಿಸುವುದರಲ್ಲಿ ಅದರ ಪರಿಹಾರವಿದೆ. ಒಬ್ಬ ಪ್ರಾಮಾಣಿಕ ವಿದ್ಯಾರ್ಥಿಯ ಮನೋವ್ವತ್ತಿಯಿಂದ, ಎಲ್ಲವನ್ನೂ ಅರ್ಥ ಮಾಡಿಕೊಂಡು ಸಹಜ ರೀತಿಯಲ್ಲಿ ಕೆಲಸ ಮಾಡಲೂ ವಿಕಾಸ ಹೊಂದಲೂ ಅನುವು ಮಾಡಿ ಕೊಡುವುದೇ ಈ ವಿಷಯದಲ್ಲಾಗಲಿ, ಇನ್ನಿತರ ವಿಷಯಗಳಲ್ಲಾಗಲೀ, ಶೀಘ್ರ ಪ್ರಗತಿಯನ್ನು ಖಾತ್ರಿಪಡಿಸಬಲ್ಲದು.
ಸಾಮಾನ್ಯವಾಗಿ ಹೃದಯದ ಮಿಡಿತವು ಅನುಭವಕ್ಕೆ ಬರುವ ಬಿಂದುವಿನ ಮೇಲೆ ಧ್ಯಾನ ಮಾಡಬೇಕೆಂದು ನಾನು ಸಲಹೆ ಮಾಡುತ್ತೇನೆ. ಮೂಗಿನ ತುದಿಯ ಮೇಲೆ, ಹುಬ್ಬುಗಳ ಮಧ್ಯದ ಮೇಲೆ, ಇತ್ಯಾದಿ ಇತರ ಬಿಂದುವಿನ ಮೇಲೆ, ಲಕ್ಷ್ಯವಿಡುವ ಧ್ಯಾನವನ್ನೂ ಮಾಡಬಹುದು. ಆದರೆ ನನ್ನ ಅಭಿಪ್ರಾಯದಲ್ಲಿ , ಹೃದಯದ ಮೇಲೆ ಧ್ಯಾನ ಮಾಡುವುದು ಅತ್ಯಂತ ಸುಲಭವೂ ಮತ್ತು ಶ್ರೇಯಸ್ಕರವೂ ಆಗಿದೆ. ಹೃದಯದ ಮೇಲೆ ಧ್ಯಾನ ಮಾಡಬೇಕೆಂಬುದರ ಹಿಂದೆ ಒಂದು ದೊಡ್ಡ ತತ್ತ್ವವೇ ಅಡಗಿದೆ. ಹೃದಯವು ರಕ್ತ ಪರಿಚಲನೆಯ ಕೇಂದ್ರ, ಶರೀರದ ಎಲ್ಲ ಭಾಗಗಳಿಗೂ ಅತಿ ಸಣ್ಣ ಕೋಶಗಳಿಗೂ ಹೃದಯವು ಶುದ್ಧ ರಕ್ತವನ್ನು ಹರಿಸುತ್ತದೆ. ಈಗ ಹೃದಯವನ್ನು ನಾವು ಧ್ಯಾನದ ಕೇಂದ್ರವಾಗಿ ತೆಗೆದುಕೊಂಡೆವು. ಅಂದರೆ ನಮ್ಮ ಶರೀರದಲ್ಲಿ ಹರಿಯುವ ರಕ್ತದ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ನಮ್ಮ ವಿಚಾರ ಮತ್ತು ಕ್ರಿಯೆಗಳಿಂದ ಉಂಟಾದ ಸ್ಥೂಲತೆ ಕರಗಿ ಹೋಗಲಾರಂಭಿಸುತ್ತದೆ. ಹೃದಯದ ಮೇಲೆ ಧ್ಯಾನ ಮಾಡುವ ಈ ಪದ್ಧತಿಯ ಪ್ರಥಮ ದಿನದಿಂದಲೇ ನಾವು ಮೊದಲಿಗೆ ಪಡೆಯುವ ಲಾಭವಿದು. ಇದು ಕೇಂದ್ರ ಬಿಂದು. ಇದು ಯಾವ ಕಡೆಗೆ ಮುಖ ಮಾಡಿದರೂ, ಅಲ್ಲಿ ಸ್ಪಂದನಯುಕ್ತ ಚಲನೆಯನ್ನು ಉಂಟು ಮಾಡುತ್ತದೆ. ಇದೇ ನಮ್ಮ ಮನಸ್ಸಿನ ಕಾರ್ಯ ಕ್ಷೇತ್ರ ಮತ್ತು ಇದೇ ನಮ್ಮ ವಿವೇಕ ಶಕ್ತಿಯನ್ನು ಬೆಳೆಸುವ ಸಾಧನ. ದೈವಿ ಶಕ್ತಿಯ ಅವತರಣಕ್ಕೋಸ್ಕರ ಈ ಸ್ಥಳದಲ್ಲಿ ಸೂಕ್ಷ್ಮ ಶಕ್ತಿಯು ಕೆಲಸ ಮಾಡುತ್ತದೆ. ಹೇಗಾದರೂ ಮಾಡಿ ನಮ್ಮ ವಿಚಾರವು ಅದರೊಂದಿಗೆ ಜೊತೆಗೂಡಿದರೆ, ಅಥವಾ ಸಮರ್ಪಕ ವಸ್ತುವಿನಲ್ಲಿ ಅದು ಸೇರಿ ಪಸರಿಸುವಂತೆ ಅದಕ್ಕೆ ಶಿಕ್ಷಣ(ತರಬೇತು) ಕೊಟ್ಟು ಸತ್ಯದ ಕಡೆಗೆ ತಿರುಗಿಸಿದರೆ, ನಮ್ಮ ಸಮಸ್ಯೆ ಪರಿಹಾರವಾದಂತೆಯೇ. ಧ್ಯಾನದ ಮೂಲಕವೇ ಏಕೆ ಮುಂದುವರಿಯಬೇಕೆಂದು ಜನರು ಕೇಳಬಹುದು. ಉತ್ತರ ಅತಿ ಸರಳ ಹಾಗೂ ಸ್ಪಷ್ಟವಾಗಿದೆ-ಮನಸ್ಸು ತನಗೆ ರೂಢಿಯಾಗಿರುವ ಅತ್ತಿತ್ತ ಅಲೆದಾಡುವ ಅಭ್ಯಾಸವನ್ನು ಬಿಟ್ಟು ಬಿಡುವಂತೆ, ಧ್ಯಾನದ ಮೂಲಕ ನಾವು ನಮ್ಮನ್ನು ಒಂದು ಬಿಂದುವಿನಲ್ಲಿ ಒಗ್ಗೂಡಿಸಿ ಕೊಳ್ಳುತ್ತೇವೆ. ಈ ಅಭ್ಯಾಸದಿಂದ, ನಮ್ಮ ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ಹಚ್ಚುತ್ತೇವೆ; ಯಾಕೆಂದರೆ, ಅದು ತನ್ನ ರೂಢಿಗತ ಚಾಳಿಗಳನ್ನು ರೂಪಾಂತರಿಸಿಕೊಳ್ಳುತ್ತಿದೆ. ಅದು ನೆರವೇರಿತೆಂದರೆ, ಸಹಜವಾಗಿಯೇ, ನಮ್ಮ ವಿಚಾರಗಳು ಅತ್ತಿತ್ತ ದಾರಿ ತಪ್ಪಿ ಹೋಗುವುದಿಲ್ಲ. ಜಡ ಮತ್ತು ಚೇತನಗಳನ್ನು ಜೋಡಿಸುವ ಕೊಂಡಿಯು ಅತ್ಯಂತ ಹೆಚ್ಚು ಸ್ಪಷ್ಟವಾಗಿ ಅನುಭವಕ್ಕೆ ಬರುವ ಸ್ಥಳವೆಂದರೆ ಹೃದಯ ಬಿಂದುವೊಂದೇ. ಈ ಕಾರಣದಿಂದಲೇ ಹೃದಯದ ಮೇಲೆ ಧ್ಯಾನ ಮಾಡುವುದು ಅತ್ಯಂತ ಹೆಚ್ಚು ಪ್ರಯೋಜನಕಾರಿಯೆಂಬುದು. ಇದಲ್ಲದೆ, ಹೃದಯವು ಮನಸ್ಸಿನ ಕಾರ್ಯಕ್ಷೇತ್ರ, ಮನಸ್ಸು ಯಾವಾಗಲೂ ತಾನಿರುವಂತೆಯೇ ಇರುತ್ತದೆ. ಸರಿಪಡಿಸಬೇಕಾದುದೆಂದರೆ, ಮನಸ್ಸಿನ ಕಾರ್ಯಕ್ಷೇತ್ರವಾದ ಹೃದಯವನ್ನು. ಹೀಗಿರುವದರಿಂದ, ಶಕ್ತಿ ಪ್ರವಾಹವು, ಮೇಲಕ್ಕಾಗಲಿ ಕೆಳಕ್ಕಾಗಲಿ ಯಾವ ಬಿಂದುವಿನಿಂದ ಹರಿಯುತ್ತದೆಯೋ ಆ ಬಿಂದುವೇ ಧ್ಯಾನಮಾಡಲು ಯೋಗ್ಯ ಬಿಂದುವಾಗಬಲ್ಲದು. ಅದು ಹೃದಯ ಮಾತ್ರ ಆಗಬಲ್ಲದೇ ಹೊರತು ಬೇರಾವುದೂ ಅಲ್ಲ. ಈ ಉದ್ದೇಶಕ್ಕೆ ತ್ರಿಕುಟಿಯನ್ನು(ಭ್ರೂಮಧ್ಯ) ತೆಗೆದುಕೊಳ್ಳಬಹುದು. ಆದರೆ ಅದಕ್ಕೆ ಅಭ್ಯಾಸಿಯು ಹೆಚ್ಚು ಶ್ರಮ ತೆಗೆದುಕೊಳ್ಳಬೇಕಾಗುವುದಾದ್ದರಿಂದ, ಸಾಮಾನ್ಯರಿಗೆ ಸುಲಭದ ಕೆಲಸವಾಗುವುದಿಲ್ಲ ಮತ್ತು ಅಭ್ಯಾಸಿಯು ಧ್ಯಾನವನ್ನು ಸರಿಯಾಗಿ ಮಾಡದಿದ್ದರೆ, ಕಾಲಕ್ರಮೇಣ ಅನೇಕ ತೊಡಕುಗಳು ಹುಟ್ಟಿಕೊಳ್ಳಬಹುದು. ನಾಭಿ ಬಿಂದುವಿನ ಮೇಲೆ ಧ್ಯಾನಮಾಡುವದರಿಂದ, ಒಂದು ಬಗೆಯ ಕಚಗುಳಿಯ ಅನುಭವವುಂಟಾಗಿ, ಅಂತಿಮವಾಗಿ ಮನಸ್ಸು ಮತ್ತು ಮನೋವಿಕಾರಗಳು ಹೆಚ್ಚು ಬಲವತ್ತರವಾಗುವುವೇ ಹೊರತು, ಅದರಿಂದ ಯಾವ ಆಧ್ಯಾತ್ಮಿಕ ಪ್ರಯೋಜನವೂ ಇಲ್ಲ.
ಶ್ರದ್ಧೆಯು ಒಂದು ಮಟ್ಟದವರೆಗೆ ಅಭ್ಯಾಸಿಯಲ್ಲಿ ವೃದ್ಧಿಗೊಂಡಾಗ ನಾವು ಸಾಮಾನ್ಯವಾಗಿ ಮಾನವ ಆಕಾರದ ಮೇಲೆ ಧ್ಯಾನ ಮಾಡುವಂತೆ ಒತ್ತಿ ಹೇಳುತ್ತೇವೆ. ಆಧ್ಯಾತ್ಮಿಕ ಪ್ರಗತಿಗೆ ಇದು ಆತ್ಮಾಘಾತಕವೆಂದು ಟೀಕಾಕಾರರು ಭಾವಿಸಬಹುದು. ಅದು ಹಾಗಿಲ್ಲ; ಆದರೆ, ನಾವು ಯಾರ ಮೇಲೆ ಧ್ಯಾನ ಮಾಡುತ್ತೇವೆಯೋ ಆತನು ವಿಶೇಷ ಸಾಮರ್ಥ್ಯವುಳ್ಳವನಾಗಿದ್ದು, ಆಧ್ಯಾತ್ಮಿಕ ಶಿಕ್ಷಣ ನೀಡುವುದಕ್ಕೊಸ್ಕರ ನಿರ್ಗುಣ ಪರತತ್ವದಿಂದ ಇಳಿದು ಬಂದವನಾಗಿದ್ದರೆ, ಅಥವಾ ಮಹಾ ಪರಿಶ್ರಮದಿಂದ ಅವಶ್ಯಕ ಆಧ್ಯಾತ್ಮಿಕ ವಿಕಾಸದ ಮಟ್ಟವನ್ನು ಸಾಧಿಸಿಕೊಂಡವನಾಗಿದ್ದರೆ ಅಡ್ಡಿ ಇಲ್ಲ.
ಧ್ಯಾನಕ್ಕೆ ಪೂರ್ವಸಿದ್ಧತೆಗಳು
ಮೂಲಕ್ಕೆ ಹಿಂದಿರುಗಿ ಹೋಗಬೇಕೆಂಬ ವಿಚಾರವು ಮಾನವನಲ್ಲಿ ಉದ್ಬುಬ್ಧವಾದಾಗ, ಅವನಿಗೆ ತನ್ನಲ್ಲಿ ಉದ್ಭವಿಸಿದ ಕ್ರಿಯೆಯನ್ನು ಸಾಧ್ಯವಾಗುವಷ್ಟು ಸುಪ್ತಾವಸ್ಥೆಗೆ ತಂದುಕೊಳ್ಳುವುದು ಅಗತ್ಯವಾಯಿತು. ಅವನು ಅದಕ್ಕೆ ಸಾಧನೋಪಾಯವನ್ನು ಅರಸಲು ಆರಂಭಿಸಿದನು. ಸುಪ್ತ ಚಲನೆಯು ತನಗೆ ಸಂಬಂಧ ಹೊಂದಿದ ‘ಕೇವಲ’ ತತ್ತ್ವಕ್ಕೆ(Absolute ಅಥವಾ ಪರವಸ್ತು) ಹೋಲಿಸಿದಾಗ ಸ್ಥೂಲತರವಾಗಿ ಹೇಗೆ ಕಂಡಿತೋ, ಹಾಗೆಯೇ ಅಪೇಕ್ಷಿತ ಆದರ್ಶವಾದ ಸತ್ಯವನ್ನು ಪಡೆಯಲು ಸ್ಥೂಲತರವಾದ ಯಾವುದೋ ಒಂದು ವಸ್ತುವನ್ನು ತೆಗೆದುಕೊಳ್ಳಬೇಕೆಂಬುದು ಅವನ ಅರಿವಿಗೆ ಬಂದಿತು. ಇದು ಪ್ರಳಯ ಕಾಲದಲ್ಲಿರುವಂಥ ಸಂಕೊಚನ ಅಥವಾ ಸಂಹೃತಿಯ(ಒಳಗೆಳೆದುಕೊಳ್ಳುವ) ಸ್ಥಿತಿಯನ್ನು ತನ್ನಲ್ಲಿ ಉಂಟು ಮಾಡಿಕೊಳ್ಳಬೇಕೆಂಬ ನಿಷ್ಕರ್ಷೆಗೆ ಅವನು ತಲುಪುವಂತೆ ಮಾಡಿತು. ವಿಶ್ವವನ್ನು ಸಮಷ್ಟಿಯ ಅರ್ಥದಲ್ಲಿ ತೆಗೆದುಕೊಂಡರೆ, ಆತ್ಮವು ಅದರ ತುಂಬೆಲ್ಲ ವ್ಯಾಪಿಸಿರುವಂತೆ ಮನುಷ್ಯನಲ್ಲಿಯೂ ವ್ಯಾಪಿಸಿದೆ. ಸಂಕೋಚನವಾಗಲು ಪ್ರಾರಂಭವಾದಾಗ ಪ್ರಳಯದ ಸ್ಥಿತಿಯೂ ಬರುತ್ತದೆ. ಅಂಥ ಸಂಕೋಚನವು ಮನುಷ್ಯನಲ್ಲಿ ಉಂಟಾದಾಗ ಅದು ಅವನನ್ನು ವೈಯಕ್ತಿಕ ಪ್ರಳಯಕ್ಕೆ ಒಯ್ಯುತ್ತದೆ; ಅಂದರೆ, ಅವನ ಸ್ಥೂಲ ಸ್ಥಿತಿಯಿಂದ ನಿಜ ಸ್ಥಿತಿಗೆ ಮುಂದುವರಿಯಲು ಪ್ರಾರಂಭಿಸಿದ್ದಾನೆಂದು ಅರ್ಥ. ಸಂಕೋಚನವು ಯಾವಾಗಲೂ ಕೆಳಗಿನಿಂದ ಆರಂಭಗೊಂಡು ಕ್ರಮವಾಗಿ ಮೇಲಕ್ಕೆ ಸಾಗುತ್ತದೆ; ಅದರ ಊರ್ಧ್ವಮುಖಿ ಪ್ರವೃತ್ತಿಯೇ ಅದಕ್ಕೆ ಕಾರಣ. ಆದುದರಿಂದ, ಮೇಲಕ್ಕೆ ಹೋಗಲು ಅವನು ಕೆಳಗಿನಿಂದ ಪ್ರಾರಂಭಿಸಬೇಕು. ಕಾಲುಗಳನ್ನು ಮತ್ತು ಸಂಬಂಧಿಸಿದ ಅಂಗಗಳನ್ನು ಒಂದು ಭಂಗಿಗೆ ತಂದು, ಸ್ಥಿರವಾಗಿರಿಸುವುದು ಸಂಕೋಚನದ ಒಂದು ರೂಪವಾಗಬಹುದು. ಅದನ್ನು ಯಾವ ರೀತಿಯಲ್ಲಿಯೇ ಮಾಡಲಿ, ಕೊನೆಯದಾಗಿ ಅದರ ಸ್ವರೂಪವು ಆಸನದ್ದೇ ಆಗುತ್ತದೆ. ಅದು ಪರತತ್ತ್ವಕ್ಕೆ ಸಾಗುವ ದಾರಿಯನ್ನು ನಮಗೆ ರೂಪಿಸಿ ಕೊಡುತ್ತದೆಯಾದ್ದರಿಂದ, ಅದು ಅವಶ್ಯ. ಈ ಭಂಗಿ ಯಾವಾಗಲೂ ಒಂದೇ ಆಗಿರಬೇಕು. ಈ ರೀತಿಯಲ್ಲಿ ಮಹಾಶಕ್ತಿಯೊಂದಿಗೆ ಸಂಬಂಧವನ್ನು ದೊರಕಿಸಿಕೊಳ್ಳುತ್ತಾನೆಂಬುದೇ ಇದಕ್ಕೆ ಕಾರಣ. ತನ್ನ ವಿಶಿಷ್ಟ ಉದ್ದೇಶವನ್ನು ಸಾಧಿಸಲು ಆ ಮಹಾಶಕ್ತಿಯನ್ನು ಆರಂಭದಲ್ಲಿಯೇ ತೆಗೆದುಕೊಂಡಂತಾಗುವುದು. ಹೀಗೆ, ಸತ್ಯದೊಂದಿಗೆ ಸಂಬಂಧಿಸಿದ ರೂಪವು(ಆಸನದ ಸ್ವರೂಪವು) ಅವನ ಪ್ರಾಥಮಿಕ ಉಪಕ್ರಮದಲ್ಲಿ ಬಹಳೇ ಸಹಾಯಮಾಡುತ್ತದೆ.
ಧ್ಯಾನ ಕಾಲದಲ್ಲಿ, ಬೆನ್ನುಹುರಿ, ಕುತ್ತಿಗೆ ಮತ್ತು ತಲೆ ಇವು ನೇರವಾದ ಸರಳ ರೇಖೆಯಲ್ಲಿದ್ದರೆ ಹೆಚ್ಚು ಉಪಯುಕ್ತವೆಂದು ಪುರಾತನ ಕಾಲದಿಂದಲೂ ಭಾವಿಸಲಾಗಿದೆ. ಯಾಕೆಂದರೆ, ಆ ಭಂಗಿಯಲ್ಲಿರುವಾಗ ದೈವೀ ಕೃಪೆಯು ನೇರವಾಗಿ ಅಭ್ಯಾಸಿಯ ಮೇಲೆ ಇಳಿದು ಬರುವುದೆಂದು ನಂಬಲಾಗಿದೆ. ನಮ್ಮ ಅಭ್ಯಾಸ ಪದ್ಧತಿಯಲ್ಲಿ, ಹೇಗೂ, ಅದನ್ನು ಒತ್ತಾಯಪಡಿಸುವುದಿಲ್ಲ. ಸಹಜ, ಸುಲಭ ಭಂಗಿಯಲ್ಲಿ ಕುಳಿತುಕೊಳ್ಳಬೇಕೆಂದು ನಾನು ಅಭ್ಯಾಸಿಗಳಿಗೆ ಸಲಹೆ ಮಾಡುತ್ತೇನೆ. ಅದೂ ಅಲ್ಲದೆ, ದೃಢವಾಗಿ, ನೇರವಾದ ಭಂಗಿಯನ್ನು ಅನುಸರಿಸುವವರೂ, ಆನಂದಮಯ ಲೀನ ಅವಸ್ಥೆಯುಂಟಾದಾಗ ತಮ್ಮಷ್ಟಕ್ಕೆ ತಾವೇ ವಿನಮ್ರ ಭಾವದಿಂದ ತುಸು ಮುಂದೆ ಬಾಗುವುದು ಕಂಡುಬರುತ್ತದೆ. ಹಾಗಿರುವುದರಿಂದ, ಪ್ರಜ್ಞೆಯ ಉನ್ನತ ಸ್ತರಗಳಿಗೆ ಏರಲು ಅದು ಸಹಜವಾದ ಸ್ಥಿತಿಯೆಂದು ಪರಿಗಣಿಸಬಹುದು. ನಿಜಕ್ಕೂ, ಹೋಲಿಸಿ ನೋಡಿದರೆ ಇದು ಕಡಿಮೆ ಮಹತ್ತ್ವವುಳ್ಳ ವಿಷಯವಾದ್ದರಿಂದ, ಇದರ ಬಗ್ಗೆ ವಿವಾದವು ಅಸಂಬದ್ಧವೆಂದು ಕಾಣುತ್ತದೆ.
ಅರುಣೋದಯದಲ್ಲಿಯೇ ಧ್ಯಾನಕ್ಕೆ ಕುಳಿತುಕೊಳ್ಳುವುದು ಹೆಚ್ಚು ಒಳಿತು. ಅದು ಸಾಧ್ಯವಾಗದಿರುವಾಗ, ಅಭ್ಯಾಸಿಗೆ ಅನುಕೂಲವಾದ ನಿರ್ದಿಷ್ಟ ಸಮಯದಲ್ಲಿ ಕುಳಿತುಕೊಳ್ಳಬೇಕು. ಬಾಹ್ಯ ವಿಷಯಗಳಿಂದ ವಿಚಲಿತರಾಗಬೇಡಿರಿ, ಅವು ನಿಮ್ಮ ಅಭ್ಯಾಸದಲ್ಲಿ ನೀವು ಹೆಚ್ಚು ಮಗ್ನರಾಗುವ ಅವಶ್ಯಕತೆಯನ್ನು ಮನಗಾಣಲು ಸಹಾಯ ಮಾಡುತ್ತವೆಯೆಂದು ತಿಳಿದು ನಿಮ್ಮ ಕೆಲಸದಲ್ಲಿ ನಿರತರಾಗಿರಿ.
ಪ್ರಾರ್ಥನೆ
ಅಭ್ಯಾಸದಲ್ಲಿ, ಮತ್ತೊಂದು ಮಾತೆಂದರೆ, ಮಲಗುವ ಸಮಯದಲ್ಲಿ, ಅತ್ಯಂತ ವಿನಮ್ರ ಭಾವದಿಂದ, ದೈವೀ ಪ್ರೇಮವು ತುಂಬಿ ತುಳುಕುವ ಹೃದಯದಿಂದ, ದಿನಾಲೂ, ಒಂದು ಪುಟ್ಟ ಪ್ರಾರ್ಥನೆಯನ್ನು (ಓ ನಾಥ…..) ಸಲ್ಲಿಸುವುದು. ಒಂದೆರಡು ಸಲ ಮನಸ್ಸಿನಲ್ಲಿಯೇ ಪ್ರಾರ್ಥನೆಯನ್ನು ಉಚ್ಚರಿಸಿರಿ ಮತ್ತು ಅದರ ಮೇಲೆ ಕೆಲವು ಕ್ಷಣ ಧ್ಯಾನ ಮಾಡಲು ಪ್ರಾರಂಭಿಸಿರಿ. ಅತಿ ದುಃಖಿತನಾದ ಮನುಷ್ಯನೊಬ್ಬನು ಕಡುನೊಂದ ಹೃದಯದಿಂದ ಪರಮ ಪ್ರಭುವಿನ ಮುಂದೆ, ಅವನ ಕರುಣೆಗೆ ಮತ್ತು ಕೃಪೆಗಳಿಗಾಗಿ ಯಾಚಿಸುತ್ತ ತನ್ನ ದುಃಖಗಳನ್ನು ತೊಡಿಕೊಳ್ಳುವನೋ ಎಂಬಂತೆ, ಪ್ರಾರ್ಥನೆ ಸಲ್ಲಿಸಬೇಕು. ಆಗ ಮಾತ್ರವೇ ಅವನು ಓರ್ವ ಯೋಗ್ಯ ಭಕ್ತನಾಗಬಲ್ಲ. ದೇವರನ್ನು ಪ್ರೀತಿಸುವ ಅನೇಕ ವಿಧಾನಗಳಿವೆ; ಮತ್ತು ಪಿತೃಭಾವ, ಸಖ್ಯಭಾವ ಮುಂತಾದ ಅನೇಕ ಭಾವಗಳು ಇವೆ. ನನ್ನ ಅಭಿಮತದಲ್ಲಿ, ಪ್ರೇಮಿ-ಪ್ರಿಯತಮ ಭಾವಕ್ಕಿಂತ ಉತ್ತಮ ಭಾವ ಬೇರೆ ಇರಲಾರದು. ಅಭ್ಯಾಸಿಯು ತಾನೇ ಪ್ರೇಮಿಯೆಂದೂ, ದೇವರು ಪ್ರಿಯತಮನೆಂದೂ ಭಾವಿಸಿಕೊಂಡು ಮುಂದುವರಿದರೆ, ಕಾಲಕ್ರಮದಲ್ಲಿ ಅದರ ಫಲ ಎಂತಾಗುವುದೆಂದರೆ, ದೇವರೇ ಪ್ರೇಮಿಯಾಗಿ, ಅಭ್ಯಾಸಿಯೇ ಪ್ರಿಯತಮನಾಗಿ ಬಿಡುವನು. ಆದರೆ, ಯಾರೇ ಆಗಲಿ ಈ ಹಂತದಲ್ಲಿ ತನ್ನ ಗುರಿಯನ್ನು ಸಾಕ್ಷಾತ್ಕರಿಸಿಕೊಂಡನೆಂದು ಭಾವಿಸಿದರೆ ಅದೊಂದು ಗಂಭೀರ ಪ್ರಮಾದವೇ ಸರಿ. ಮುಂದೆ ಉಳಿದಿರುವದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಅದು ಅಭ್ಯಾಸಾನುಭವಕ್ಕೆ ಮಾತ್ರವೇ ಸಂಬಂಧಪಟ್ಟಿದ್ದಾಗಿದೆ.
ಪ್ರಾರ್ಥನೆ ಅತೀವ ಮುಖ್ಯವಾದುದು; ಚ್ಯುತಿಗೊಳ್ಳದ ಯಶಸ್ಸಿನ ಉಪಾಯವು ಅದೇ ಆಗಿದೆ. ಅದರ ಮೂಲಕ ಪವಿತ್ರ ದೈವತ್ವ(ಪರತತ್ವ)ದೊಂದಿಗೆ ನಾವು ಸಂಬಂಧ ಸ್ಥಾಪಿಸಿದ್ದೇವೆ. ಪ್ರಾರ್ಥನೆಯನ್ನು ಪ್ರೇಮ ಮತ್ತು ಭಕ್ತಿ ತುಂಬಿದ ಹೃದಯದಿಂದ ಸಲ್ಲಿಸಬೇಕೆಂಬುದು ಕಾರಣವೇನೆಂದರೆ, ತನ್ನತ್ತ ದೈವೀ ಕೃಪೆಯು ಹರಿದು ಬರುವಂತಾಗಲು ತನ್ನಲ್ಲಿ ಶೂನ್ಯತೆಯನ್ನು ಉಂಟು ಮಾಡಿಕೊಳ್ಳಬೇಕಿದೆ. ವಿಶ್ವವು ಈಗಿನ ರೂಪಕ್ಕೆ ಬರುವಾಗಲೇ ಕೇಂದ್ರ ಬಿಂದುವು ಎಲ್ಲ ಜೀವಿಗಳಲ್ಲಿ ಆಳವಾಗಿ ಬೇರೂರಿತ್ತು. ನಮ್ಮೊಳಗೆ ಬೇರೂರಿದ ಕೇಂದ್ರ ಬಿಂದುವು ಪರತತ್ವದ ಅಂಶವಾದ್ದರಿಂದ, ಅದು ಮೂಲದತ್ತ ನಮ್ಮ ಗಮನವನ್ನು ತಿರುಗಿಸುತ್ತಿದೆ. ಪ್ರಾರ್ಥನೆಯಲ್ಲಿ ಅದೇ ಕೇಂದ್ರಬಿಂದುವಿನವರೆಗೆ ನಾವು ತಲುಪಲು ಪ್ರಯತ್ನಿಸುತ್ತೇವೆ. ಅಂಥದೇ ಸ್ಥಿತಿಯನ್ನು ನಮ್ಮೊಳಗೆ ಉಂಟು ಮಾಡಿಕೊಂಡಾಗ ಮಾತ್ರವೇ ಅದು ಸಾಧ್ಯ. ಇದಕ್ಕೆ ಅಭ್ಯಾಸ ಬೇಕು. ಅತ್ಯಂತ ಸರಳವೂ, ಶಾಂತವೂ ಆದ ದೈವೇಚ್ಛೆಗೆ ನಮ್ಮನ್ನು ನಾವು ಅಧೀನಪಡಿಸಿಕೊಳ್ಳುವದರ ಮೂಲಕವಾಗಿ ಮಾತ್ರ ನಾವು ಅದನ್ನು ಸಾಧಿಸಬಹುದು. ಮೇಲುನೋಟಕ್ಕೆ ಇದು ಬಹಳ ಕಠಿಣವೆಂದು ತೋರುತ್ತದೆ, ಆದರೆ ವಾಸ್ತವದಲ್ಲಿ ಹಾಗಿಲ್ಲ. ಆದರೆ ಅದು,ಅದಕ್ಕಾಗಿ ಅಭೀಪ್ಸೆ ಪಡುವವರಿಗಷ್ಟೇ ಎಂಬುದೆನೋ ಸರಿಯೆ. ಪರವಸ್ತುವಿಗಾಗಿ ಬಲವಾದ ಹಂಬಲವನ್ನು ಹುಟ್ಟಿಸಿಕೊಂಡವನು ನಿಜವಾಗಿಯೂ ಪ್ರಾರ್ಥನೆಯ ಸ್ಥಿತಿಯಲ್ಲಿ ಇರುತ್ತಾನೆ. ಅದಕ್ಕಾಗಿ ಹೆಣಗಾಡುವುದು ಪ್ರತಿಯೊಬ್ಬನಿಗೂ ಬಿಟ್ಟದ್ದು. ಒಂದು ಕ್ಷಣ ಮಾತ್ರವೇ ಆದರೂ ಸರಿಯೆ, ಮಾನವನು ಆ ಸ್ಥಿತಿಯಲ್ಲಿ ಪ್ರವೇಶ ಮಾಡಿದರೆ, ಅವನ ಪ್ರಾರ್ಥನೆ ಮನ್ನಿಸಲ್ಪಡುವುದು. ಆದರೆ ಅದನ್ನು ಸಾಧಿಸಲು ನಿರಂತರ ಅಭ್ಯಾಸ ಬೇಕು. ಅಂಥ ರೀತಿಯ ಪ್ರಾರ್ಥನೆ ಸಲ್ಲಿಸುವಂತೆ ಜನರಿಗೆ ಉಪದೇಶಿಸಬೇಕು. ಮನುಷ್ಯನು ಇದನ್ನು ಸಾಧಿಸಿ ಅದರಲ್ಲಿ ನೆಲೆಸಿದನೆಂದರೆ, ಸ್ಮರಣೆಯೊಂದನ್ನುಳಿದು ಅವನು ಮಾಡಬೇಕಾದುದು ಉಳಿಯುವದಾದರೂ ಏನು? ಅದನ್ನಾದರೂ ಯಾವ ರೀತಿಯಲ್ಲಿ ಮಾಡಬೇಕೆಂದರೆ ಅದೂ ಸಹ ತನ್ನ ಅರಿವಿಗೂ ಬರದ ಹಾಗೆ.
ನಿರಂತರ ಸ್ಮರಣೆ
ಆಧ್ಯಾತ್ಮಿಕ ವಿದ್ಯೆಯಲ್ಲಿ ದೇವರ ನಿರಂತರ ಸ್ಮರಣೆ ಒಂದು ವಿಶೇಷ ಲಕ್ಷಣ. ನೀವು ಕಛೇರಿಯಲ್ಲಿ ಇರಲಿ, ಮನೆಯಲ್ಲಿರಲಿ, ಬೀದಿಯಲ್ಲಾಗಲಿ, ಪೇಟೆಯಲ್ಲಾಗಲಿ ಇರಲಿ, ನಿಮಗೆ ಬಿಡುವಿದ್ದಾಗ ದೇವರು ಎಲ್ಲೆಲ್ಲೂ ವ್ಯಾಪಿಸಿದ್ದಾನೆಂದು, ದೃಢ ವಿಶ್ವಾಸದಿಂದ ದೇವರನ್ನು ಕುರಿತು ಯೋಚಿಸುವುದು, ನಿರಂತರ ಸ್ಮರಣೆಯನ್ನು ಬೆಳೆಸಿಕೊಳ್ಳುವ ಪದ್ಧತಿ, ಸಾಧ್ಯವಿದ್ದಷ್ಟು ದೀರ್ಘ ಕಾಲ ಅದೇ ವಿಚಾರದಲ್ಲಿ ಇರಲು ಪ್ರಯತ್ನಿಸಿರಿ.
ಜನರ ಮನಸ್ಸು ಪ್ರತಿ ಕ್ಷಣದಲ್ಲೂ ತಮ್ಮ ಭೌತಿಕ ಜೀವನದ ವಿವಿಧ ಸಮಸ್ಸೆಗಳನ್ನು ಕುರಿತು ಯೋಚಿಸುವುದರಲ್ಲಿ ಮಗ್ನವಾಗಿರುತ್ತದೆ. ಅವರು ಬಹಳ ಸಂಕಟ ಅಥವಾ ದುಃಖದಲ್ಲಿ ಇದ್ದಾಗಿನ ಸಮಯವನ್ನು ಬಿಟ್ಟರೆ, ಅವರ ಗಮನವು ದೇವರ ಕಡೆಗೆ ಹೊರಳುವುದು ಅಪರೂಪ. ಅದಕ್ಕೆ ಕಾರಣವೆಂದರೆ, ಅವರು ತಮ್ಮ ದೃಷ್ಟಿಯಲ್ಲಿ ಸಂತತವೂ ಇರುವ ಪ್ರಾಪಂಚಿಕ ಆಸಕ್ತಿಗಳಿಗೆ ಮಾತ್ರವೇ ಪ್ರಾಮುಖ್ಯವನ್ನು ಕೊಡುತ್ತಾರೆ. ಹೀಗೆ ಅವರು ಯಾವ ಸ್ಥಿತಿಯಲ್ಲಿಯೂ ಹೊರಬರುವ ಯೋಚನೆಯೇ ಇಲ್ಲದಂತೆ ಮಾಯೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ.
ಕಾಲ ಕಾಲಕ್ಕೆ ದೇವರನ್ನು ನೆನೆಸುವುದು ಬಹಳ ಸಹಾಯಕಾರಿಯೇನೋ ಸರಿಯೆ, ಆದರೆ ಸಾಕ್ಷಾತ್ಕಾರದಲ್ಲಿ ಅಂತಿಮ ಯಶಸ್ಸಿಗೆ ಅಷ್ಟೇ ಸಾಲದು. ಯಾವುದೇ ಮುಖ್ಯ ಕೆಲಸವನ್ನು ಯಾವಾಗಲೂ ದೇವರ ಹೆಸರಿನಲ್ಲಿ ಪ್ರಾರಂಭಿಸುತ್ತೇವೆ. ಮತ್ತು, ಹೀಗೆ ಮಾಡೂವುದು ಎಲ್ಲ ಧರ್ಮಗಳಲ್ಲಿ ಇರುವ ಪದ್ಧತಿ. ಆದರೆ ಅದು ಕೇವಲ ಔಪಚಾರಿಕವಾಗಿ ಬಿಟ್ಟಿದೆ; ಅದಕ್ಕೆ ಯಾವ ಮಹತ್ವವೂ ಇಲ್ಲ. ನಾವು, ನಿಜವಾದ ಅರ್ಥದಲ್ಲಿ ಅದನ್ನು ದೇವರಿಗೆ ಎಂದೂ ಸಮರ್ಪಿಸುವುದಿಲ್ಲ, ಹಾಗೂ, ಹೃದಯದಲ್ಲಿ ನಾವು ಪರಮಾತ್ಮನ ಭಾವನೆಯಿಂದ ಸಾಕಷ್ಟು ದೂರವೇ ಉಳಿದಿರುತ್ತೇವೆ. ಆ ಪದ್ಧತಿಯ ನಿಜವಾದ ಅಂತರರ್ಥವೆಂದರೆ, ನಮ್ಮ ಮಾನಸಿಕ ಮತ್ತು ದೈಹಿಕ ಕಾರ್ಯಗಳ ಎಲ್ಲ ಅವಸ್ಥೆಗಳಲ್ಲಿಯೂ ಪರಮಾತ್ಮನ ವಿಚಾರದೊಂದಿಗೆ ಸಂಪರ್ಕದಿಂದಿರಬೇಕೆಂಬುದೇ ಆಗಿದೆ. ನಮ್ಮ ಎಲ್ಲ ಚಟುವಟಿಕೆಗಳುದ್ದಕ್ಕೂ ಅವಿಚ್ಛಿನ್ನ ವಿಚಾರ ಸರಣಿಯಿಂದ, ಪ್ರತಿಕ್ಷಣವೂ, ಆ ಪರಾಶಕ್ತಿಯೊಂದಿಗೆ ಸಂಲಗ್ನರಾಗಿರುವೆವೆಂದು ಭಾವಿಸಬೇಕು. ನಮ್ಮ ಎಲ್ಲ ಕೆಲಸ-ಕಾರ್ಯಗಳೂ, ನಾವು ಶಕ್ತಿಮೀರಿ ಸೇವಿಸಬೇಕಿರುವ ಪ್ರಭು, ಸದ್ಗುರುವೇ ನಮಗೆ ವಹಿಸಿದ ದಿವ್ಯ ಕರ್ತವ್ಯವೆಂದು ನಾವು ವ್ಯವಹರಿಸಿದರೆ, ಅದನ್ನು ಸುಲಭವಾಗಿ ಸಾಧಿಸಬಹುದು. ಜೀವನದಲ್ಲಿ ಮನುಷ್ಯನು ಪ್ರಾಪಂಚಿಕ ಸಂಬಂಧ ಮತ್ತು ಹೊಣೆಗಾರಿಕೆಗಳಿಂದ ಉಂಟಾದ ಅನೇಕ ಕಳವಳ ಮತ್ತು ವ್ಯಥೆಗಳಿಂದ ಸುತ್ತುವರಿಯಲ್ಪಟ್ಟಿರುವಾಗ ನಿರಂತರ ಸ್ಮರಣೆಯಾಗಲಿ, ಅಷ್ಟೇಕೆ, ಆಗಾಗ ಬಾರಿ ಬಾರಿ ಸ್ಮರಣೆ ಮಾಡುವುದು ಕೂಡ ಕಾರ್ಯ ಸಾಧ್ಯವಲ್ಲ ಎಂದು ಕೆಲವರು ತಿಳಿಯುತ್ತಾರೆ. ಆದರೆ, ಅದು ಅತಿ ಸುಲಭದ ಕೆಲಸ ಎಂಬುದನ್ನು, ಅಭ್ಯಾಸ ಮತ್ತು ಅನುಭವಗಳು ಅವರಿಗೆ ಸಿದ್ಧಮಾಡಿ ತೋರಿಸುತ್ತವೆ; ಮತ್ತು, ಯಾರಾದರಾಗಲಿ, ಪ್ರತಿಯೊಬ್ಬನೂ, ವ್ಯಥೆಗಳು ಮತ್ತು ನಿಗದಿತ ಕಾರ್ಯಭಾರಗಳು ಇದ್ದಾಗ್ಯೂ, ಅದನ್ನು ಅನುಸರಿಸಬಹುದು. ಹಾಗಾಗುವುದು, ಜನರು ತಮ್ಮ ಗಮನವನ್ನು ದೇವರತ್ತ ತಿರುಗಿಸುವುದನ್ನು ಕಲಿತರೆ ಮಾತ್ರ.
ಗುರುವು ಸಾಕ್ಷಾತ್ಕಾರದ ಅಂತಿಮ ಸ್ಥಿತಿಯಲ್ಲಿ ಲಯ ಹೊಂದಿದವನಾಗಿದ್ದರೆ, ಗುರುವೇ ಪರಮ ಶಕ್ತಿ ಯೆಂದು ಭಾವಿಸುವುದು ಆಧ್ಯಾತ್ಮಿಕ ಸಾಧನೆಯಲ್ಲಿ ಬಹಳೇ ಸಹಾಯಕವಾಗುತ್ತದೆ. ಅವನನ್ನು ಪುರುಷೊತ್ತಮನೆಂದು ಭಾವಿಸುತ್ತ, ಅವನ ಮಾರ್ಗದರ್ಶನವನ್ನೇ ಅವಲಂಬಿಸುತ್ತೀರಿ.
ಎಲ್ಲವನ್ನೂ ನಿಮ್ಮ ಗುರುವಿಗೆ ಸಮರ್ಪಿಸುತ್ತ, ನಿಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತ ಹೋದರೆ, ಕಾಲಕ್ರಮದಲ್ಲಿ ಅದೆಷ್ಟು ಒಳಿತನ್ನುಂಟು ಮಾಡೀತು ಎಂಬುದನ್ನು ನೀವೇ ಊಹಿಸಿಕೊಳ್ಳಿರಿ. ಯಾವುದೊಂದು ಕೆಲಸ ಮಾಡುತ್ತಿರುವಾಗ, ಅದನ್ನು ನಿಮಗೋಸ್ಕರ ಮಾಡುತ್ತಿಲ್ಲ, ಬದಲಿಗೆ, ನಿಮ್ಮ ಗುರುವಿಗೋಸ್ಕರ ಮಾಡುತ್ತಿರುವನೆಂದು ಭಾವಿಸಿರಿ. ಬೆಳಗಿನ ಉಪಾಹಾರ ಸಮಯದಲ್ಲಿ , ನಿಮ್ಮ ಗುರುವೇ ಉಪಾಹಾರ ತೆಗೆದುಕೊಳ್ಳುವನೆಂದು ತಿಳಿಯಬೇಕು. ನೀವು ನಿಮ್ಮ ಕಛೇರಿಗೆ ಹೋದಾಗ ಗುರುವೇ ಎಲ್ಲ ಕೆಲಸಗಳನ್ನು ಮಾಡುತ್ತಿರುವನೆಂದು ಭಾವಿಸಿರಿ. ಕಛೇರಿಯಿಂದ ನೀವು ಹಿಂದಿರುಗಿ ಬರುವಾಗ ದಾರಿಯಲ್ಲಿ ನೀವು ಒಂದು ಮೋಹಕ ನೃತ್ಯವನ್ನು ನೋಡಿದಿರೆಂದು ಊಹಿಸಿಕೊಳ್ಳಿ; ಆಗ ಆ ನರ್ತಕಿಯ ಮೋಹಕ ರೂಪವು ನಿಮ್ಮ ಕಣ್ಣನ್ನು ಸೆರೆ ಹಿಡಿಯುತ್ತದೆ. ಆಗ ಕೂಡ, ನೀವೆಲ್ಲ, ನಿಮ್ಮ ಗುರುವೇ ನೃತ್ಯವನ್ನು ನೋಡುತ್ತಿರುವನೆಂದು ತಿಳಿಯಿರಿ. ತತ್ ಕ್ಷಣವೇ, ಅದರ ಬಗೆಗಿನ ನಿಮ್ಮ ಆಸಕ್ತಿ ಕಳೆದುಹೋಗುತ್ತದೆ, ಯಾಕೆಂದರೆ ಗುರುವಿನ ಶಕ್ತಿ ನಿಮ್ಮಲ್ಲಿ ಪ್ರವಹಿಸಿ, ನಿಮ್ಮನ್ನು ಆ ಆಮಿಷದಿಂದ ಬಿಡುಗಡೆಗೊಳಿಸುತ್ತದೆ. ನೀವು ಕಛೇರಿಯಿಂದ ಮರಳಿಬಂದಾಗ , ನಿಮ್ಮ ಮಕ್ಕಳು ಅನೇಕ ಗಂಟೆಗಳಾದ ಮೇಲೆ ನಿಮ್ಮನ್ನು ನೋಡಿ ಕುಣಿದಾಡುತ್ತಾರೆ. ಮಕ್ಕಳ ಕುಣಿದಾಟದಿಂದ ನಿಮಗೂ ಸಂತಸವಾಗುತ್ತದೆ; ಅದು ಸಹಜವೇ ಸರಿ ಕೆಲ ಕಾಲ ನಿಮ್ಮ ಗಮನವು ಅವರತ್ತ ಹರಿದು, ಕೆಲ ಹೊತ್ತು ನೀವು ಪವಿತ್ರ ವಿಚಾರದಿಂದ ಸ್ವಲ್ಪ ದೂರ ಸರಿದಂತೆ ಕಾಣುತ್ತದೆ. ಆಗ ನೀವು ಮಾಡಬೇಕಾದುದೆಂದರೆ, ನಿಮ್ಮೊಳಗಿರುವ ಗುರುವೇ ಆ ಸಂತೋಷವನ್ನು ಪಡುತ್ತಿದ್ದಾನೆಂದು ಭಾವಿಸಿಕೊಳ್ಳುವುದು. ಆಗ, ಮತ್ತೆ ನೀವು ಪವಿತ್ರ ವಿಚಾರದ ಸಂಪರ್ಕದಲ್ಲಿ ಬರುವಿರಿ. ನೀವು ನಿಮ್ಮ ಮಿತ್ರನೊಡನೆ ಹರಟುತ್ತಿದ್ದರೆ, ನೀವಲ್ಲ, ನಿಮ್ಮ ಗುರು ಮಾತನಾಡುತ್ತಿದ್ದಾನೆಂದು ಯೋಚಿಸಿರಿ. ನಡೆಯುತ್ತಿರುವಾಗಲೂ ಗುರುವೇ ನಡೆಯುತ್ತಿದ್ದಾನೆಂದು ತಿಳಿಯಿರಿ. ಧ್ಯಾನ ಮಾಡುವ ಸಮಯದಲ್ಲೂ, ನೀವಲ್ಲ, ನಿಮ್ಮ ಗುರುವೇ ತನ್ನ ರೂಪದಮೇಲೆ ಧ್ಯಾನ ಮಾಡುತ್ತಿದ್ದಾನೆಂಬ ಭಾವನೆಯಿಂದ ಮಾಡಿದರೆ, ಅದು ಉತ್ಕ್ರಷ್ಟ ಫಲ ಕೊಡುತ್ತದೆ. ಇದೇ ರೀತಿಯಲ್ಲಿ ನೀವು ನಿಮ್ಮ ದೈನಂದಿನ ಕೆಲಸದಲ್ಲಿ ನಿಮ್ಮನ್ನು ಸರಿಪಡಿಸಿಕೊಳ್ಳಬಹುದು. ನೀವು ಈ ಭಾವನೆಯನ್ನು ರೂಢಿಸಿಕೊಂಡು, ನಿಮ್ಮ ಬದಲಿಗೆ ಗುರುವೇ ಎಲ್ಲವನ್ನೂ ಮಾಡುತ್ತಾನೆಂಬ ಭಾವನೆ ಇಟ್ಟುಕೊಂಡರೆ, ನೀವು ಯಾವಾಗಲೂ ನಿರಂತರ ಸ್ಮರಣೆಯಲ್ಲಿರುವಿರಿ, ಮಾತ್ರವಲ್ಲ, ನಿಮ್ಮ ಕ್ರಿಯೆಗಳು ಯಾವ ಸಂಸ್ಕಾರವನ್ನೂ ಉಂಟು ಮಾಡುವದಿಲ್ಲವಾದ್ದರಿಂದ, ನಿಮಗೆ ಮುಂದೆ ಸಂಸ್ಕಾರಗಳಾಗುವುದು ನಿಂತು ಹೋಗುತ್ತದೆ.
ಭಕ್ತಿ
ವಸ್ತುತಃ ನಿರಂತರ ಸ್ಮರಣೆಯು ಧ್ಯಾನಾಭ್ಯಾಸದ ಸಹಜ ವಿಕಾಸ. ಧ್ಯೇಯ ವಸ್ತುವಿಗೆ ಅಥವಾ ನಿರಂತರ ಸ್ಮರಣೆಗೆ ಅಭ್ಯಾಸಿಯು ನಿಷ್ಠೆ(ಭಕ್ತಿ)ಯುಳ್ಳವನಾದಾಗ ಅದಕ್ಕೆ ಹೆಚ್ಚಿನ ಸಾಮರ್ಥ್ಯ ಪ್ರಾಪ್ತವಾಗುತ್ತದೆ. ಆಗ ಅದು ಶುಷ್ಕ ಅಭ್ಯಾಸವಾಗಿರದೆ, ಮಧುರವಾದ ಸಂಪೂರ್ಣ ನಿಮಗ್ನಗೊಳಿಸುವ ಪ್ರವರ್ತನೆಯಾಗುತ್ತದೆ. ಪ್ರೇಮ, ಭಕ್ತಿಗಳ ಬೆಂಕಿ ಮಾತ್ರವೇ ತುಚ್ಛ ಕಸಗಳನೆಲ್ಲ ಸುಟ್ಟು ಹಾಕಿ, ಬಂಗಾರವನ್ನು ಕಸದಿಂದ ಬೇರ್ಪಡಿಸಿ ದೊರಕಿಸಿ ಕೊಡುತ್ತದೆ. ಪ್ರೇಮಾಗ್ನಿಗೆ ಮೂರು ಹಂತಗಳು ಇರಬಹುದು. ಮೊದಲನೆಯದು ಅದುಮಿ ಇಟಂತಿದ್ದು ದಟ್ಟ ಹೊಗೆಯನ್ನು ಹೊರ ಬಿಡುವುದು; ಎರಡನೇ ಹಂತದಲ್ಲಿ ಆಗಾಗ ಕಿಡಿಯಾಗುತ್ತದೆ ಮತ್ತು ಕೊನೆಯದರಲ್ಲಿ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಸುಟ್ಟು ಬೂದಿ ಮಾಡಲು ಶಕ್ತವಾದ ಪ್ರಕಾಶಮಾನವಾದ ಜ್ವಾಲೆಯನ್ನು ಹೊಮ್ಮಿಸುತ್ತದೆ. ಮೊದಲ ಎರಡು ಹಂತಗಳಲ್ಲಿ ಗಾಳಿಯಲ್ಲಿರುವ ದಹ್ಯ ವಸ್ತುವಿನ ಸಂಪರ್ಕವೇರ್ಪಡುವುದು ಅಗತ್ಯ. ಆಂತರಿಕ ಉಷ್ಣತೆಯ ಪರಿಣಾಮವಾಗಿ ದಹನ ಕ್ರಿಯೆಯನ್ನು ತಡೆಯುವ ಸ್ಥೂಲತೆಯು ತೆಗೆದು ಹಾಕಲ್ಪಟ್ಟಾಗ, ಅಂತಿಮ ಕ್ರಿಯೆ ಪೂರ್ಣ ಶಕ್ತಿಯುತವಾಗಿ ಆರಂಭವಾಗುತ್ತದೆ ಆದರೆ, ವಿದ್ಯುದಗ್ನಿ ಎಂಬುದೂ ಉಂಟು. ಅದು ಮೊದಲ ಎರಡು ಹಂತಗಳನ್ನು ಮೀರಿ ಜಿಗಿಯುತ್ತದೆ. ಅದು ಹೊಗೆ, ಹಬೆಗಳಿಲ್ಲದ ಅಂತಿಮ ಸ್ಥಿತಿಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ನಿಮ್ಮೊಳಗೆ ನೀವು ಅಂಥ ಅಗ್ನಿ ಯನ್ನು ಹೊತ್ತಿಸಿಕೊಂಡರೆ ನಿಮ್ಮ ಪ್ರಗತಿಯು ನಾಗಾಲೋಟದಿಂದ ವೇಗವಾಗಿ ಮುಂದುವರಿಯುತ್ತದೆ.
ಭಕ್ತಿ ಮತ್ತು ಪ್ರೇಮಗಳು ಸರಳವಾಗಿವೆ ಎಂದೆನಿಸುವುದೇನೋ ಸರಿ, ಆದರೆ, ಅದೇ ಹೊತ್ತಿನಲ್ಲಿ, ಅವುಗಳನ್ನು ಸಾಧಿಸುವುದು ಬಹಳ ಕಠಿಣವಾಗಿರುವುದೂ ಹೌದು. ನಿಜವಾದ ಭಕ್ತಿಯಲ್ಲಿ ಸೋಗಿನ ಲವಕೇಶವೂ ಇರುವುದಿಲ್ಲ, ಮತ್ತು ಅದು ಜ್ಞಾನ ಪ್ರಕಾಶನದ ಜೊತೆ ಜೊತೆಯಾಗಿಯೇ ಇರುತ್ತದೆ. ಪ್ರಾರಂಭಿಕ ಹಂತದಲ್ಲಿ ತನ್ನ ಪ್ರೇಮದ ವಸ್ತುವಿನ ಕುರಿತ ತನ್ನ ಭಾವನೆಯ ಅರಿವು ಭಕ್ತನಿಗೆ ಇರಬಹುದು, ಆದರೆ ಉನ್ನತ ಸ್ತರಗಳಲ್ಲಿ ಅದರ ಬುರುಗು, ಉಬ್ಬರಗಳು ತಗ್ಗಿ ಹೋಗಿ, ಅಂತಿಮ ಹಂತದಲ್ಲಿ ಅರಿವು ಬಹುತೇಕವಾಗಿ ಸಂಪೂರ್ಣ ಲುಪ್ತವಾಗಿ ಬಿಡುತ್ತದೆ. ಭಕ್ತಿಯ ಸೂಕ್ಷ್ಮತಮ ದಶೆಯೆಂದರೆ, ಸಂಪೂರ್ಣ ಸಮರ್ಪಣೆಯೆಂದು ಹೇಳಬಹುದು. ಅದರಲ್ಲಿ(ಸಂಪೂರ್ಣ ಸಮರ್ಪಣೆಯಲ್ಲಿ)ಸಮರ್ಥ ಸದ್ಗುರುವಿನ ಅನುಗ್ರಹದಿಂದ, ಸಮರ್ಪಣೆಯ ಅರಿವು ಕೂಡ ಸಂಪೂರ್ಣವಾಗಿ ಹಿಂದೆ ಸರಿದಿರುತ್ತದೆ.
ಭಕ್ತಿ, ಸಮರ್ಪಣೆ ಮುಂತಾದವುಗಳನ್ನು ಸಹಜ ರೀತಿಯಲ್ಲಿ ಅಭ್ಯಾಸಮಾಡುವುದು ಹೇಗೆಂಬ ಸಮಸ್ಯೆಯೊಂದಿದೆ. ಈ ಉದ್ದೇಶಕ್ಕೆ ಮಾನವನೊಬ್ಬನು ಮಾನವ ವರ್ಗಕ್ಕೆ ಸೇರಿದ ವ್ಯಕ್ತಿಯನ್ನು ಅತ್ಯಂತ ಹೆಚ್ಚು ಪ್ರೀತಿಸಬಲ್ಲನೆಂದು ಹೇಳಲಾಗುತ್ತದೆ. ಆದುದರಿಂದ ಗುರುವನ್ನು ಪರತತ್ವದ ಮೂರ್ತರೂಪವೆಂದು ಪರಿಗಣಿಸಲಾಗುವುದು. ನನ್ನ ಮಟ್ಟಿಗೆ, ನನ್ನ ಗುರುಗಳು ನನ್ನ ಪ್ರೇಮದ ಏಕಮಾತ್ರ ವಸ್ತುವಾಗಿದ್ದರು. ನಾನು ಕೇವಲ ಅವರನ್ನು, ಅವರನ್ನೊಬ್ಬರನ್ನೇ ಪ್ರೀತಿಸುವವನಾಗಿದ್ದೇನೇ ಹೊರತು, ಸ್ವಾತಂತ್ರ್ಯ ವನ್ನಾಗಲಿ, ಶಾಂತೀಯನ್ನಾಗಲಿ, ಪರಿಪೂರ್ಣತೆಯನ್ನಾಗಲಿ, ಅಥವಾ ಇನ್ನಾವುದನ್ನಾಗಲಿ ಪ್ರೀತಿಸುವವನಾಗಿರಲಿಲ್ಲ. ಅವರ ಮೇಲೆ ಧ್ಯಾನ ಮಾಡಲಿಕ್ಕೆ ಮತ್ತು ಭಕ್ತಿ ನಿಷ್ಠರಾಗಿರಲಿಕ್ಕೆ, ಅತ್ಯಂತ ಯೋಗ್ಯ ವ್ಯಕ್ತಿಯಾಗಿದ್ದ ಅವರು, ನಾನು ಅವರನ್ನು ಹಾಗೆ ಪ್ರೇಮಿಸಲು ನಿಃಸಂದೇಹವಾಗಿ ಅರ್ಹರಾಗಿದ್ದರು. ಅಹಂಕಾರದ ಭಾವನೆಗಳಿಂದಲೂ, ಆಶೆಗಳಿಂದಲೂ, ಪ್ರಾಪಂಚಿಕ ಲೇಪಗಳಿಂದಲೂ ಸಂಪೂರ್ಣ ಮುಕ್ತರಾಗಿದ್ದ ಅವರು ಕೇವಲ ಆತ್ಮನಿಷ್ಠರಾಗಿದ್ದರು. ಈ ಮಾತು ಮಾನವನಿಗೆ ಸಾಮಾನ್ಯವಾಗಿ ದಯಪಾಲಿಸಲಾಗಿರದಂಥ ಉನ್ನತ ಮಟ್ಟದ ಆಧ್ಯಾತ್ಮಿಕ ಸ್ಥಿತಿಗೆ ಅನ್ವಯಿಸುತ್ತದೆ. ಆ ಕಾರಣದಿಂದಲೇ ನಾನು ಅವರನ್ನು ನನ್ನ ಸಾಮರ್ಥ್ಯವಿದ್ದಷ್ಟು ಹೆಚ್ಚು ಪ್ರೀತಿಸುತ್ತಿದ್ದೆ. ಮತ್ತು ಅದೇ ನನಗೆ ಜೀವನದ ಧ್ಯೇಯಾನ್ವೇಷಣೆಯಾಗಿತ್ತು. ಅಸಾಮಾನ್ಯರೂ, ಅಸದೃಶರೂ ಆದ ಗುರುಗಳು ನನಗೆ ದೊರಕಿದ್ದುದೇ ಇದಕ್ಕೆ ಕಾರಣ. ಅದರಿಂದ ಪಡೆದ ಫಲವನ್ನು ವರ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರು ಅನಂತ ಕೃಪಾಸಾಗರವೇ ಆಗಿದ್ದರು; ಆ ಸಾಗರದಲ್ಲಿಯೇ ನಾವೆಲ್ಲರೂ ಲಯ ಹೊಂದಬೇಕು. ತೀವ್ರಾಸಕ್ತಿಯುಳ್ಳ ಎಲ್ಲ ಸತ್ಯಾನ್ವೇಷಕರಿಗೂ ಅದು ಲಭ್ಯವಾಗಲಿ.
ಸಮರ್ಪಣೆ
ಗುರಿಯನ್ನು ಸಾಧಿಸುವುದಕ್ಕೆ, ನಿಮ್ಮನ್ನು ಗುರುವಿಗೆ ಸಮರ್ಪಣೆ ಮಾಡಿಕೊಂಡು, ನೀವು ಸ್ವತಃ ’ ಜೀವನ್ ಮೃತ’ ರಾಗುವುದೇ ಅತ್ಯಂತ ಸುಲಭವಾದ ಮತ್ತು ನಿಶ್ಚಿತವಾಗಿ ನೆಚ್ಚಬಹುದಾದ ಉಪಾಯ. ಈ ಸಮರ್ಪಣೆಯ ಭಾವವನ್ನು ಯಾಂತ್ರಿಕವಾದ ಅಥವಾ ಬಲವಂತಪಡಿಸುವ ಉಪಾಯಗಳಿಂದ ಬೆಳೆಸಿದರೆ ಅದು ನೈಜವಾಗುವುದು ಅಪರೂಪವೇ ಸರಿ. ಅದು ನಿಮ್ಮ ಅಂತರ್ಯದಲ್ಲಿ ಸ್ವಲ್ಪವೂ ಆಯಾಸ ಅಥವಾ ಒತ್ತಡವಿಲ್ಲದೆ ತನ್ನಷ್ಟಕ್ಕೆ ತಾನೇ ವಿಕಾಸವಾಗಬೇಕು. ತಾನೆಂಬ ಅರಿವು ಉಳಿದರೆ, ಆಗ ಕೂಡ ಅದು ನಿಜವಾದ ಸಮರ್ಪಣೆಯೆಂದಾಗುವುದಿಲ್ಲ. ನೀವು ನಿಮ್ಮನ್ನು ನಿಜವಾದ ಅರ್ಥದಲ್ಲಿ ಸಮರ್ಪಿಸಿಕೊಂಡಾಗ, ಮಾಡುವುದು ಉಳಿಯುವುದಾದರೂ ಏನು? ಏನೂ ಇಲ್ಲ. ಈ ಸ್ಥಿತಿಯಲ್ಲಿ ಅಭ್ಯಾಸಿಯು ಸದಾ ಸತ್ಯದ ನಿಕಟ ಸಂಪರ್ಕದಲ್ಲಿರುತ್ತಾನೆ. ಮತ್ತು ದಿವ್ಯ ಪ್ರಕಾಶದ ಪ್ರವಾಹವು ಅವನಲ್ಲಿಗೆ ಅವಿಚ್ಛಿನ್ನವಾಗಿ ಹರಿಯುತ್ತಿರುವುದೆಂದು ನಾನು ನಂಬುತ್ತೇನೆ. ಈ ರೀತಿಯಲ್ಲಿ ನೀವು ನಿಮ್ಮ ಜೀವನದ ಸಮಸ್ಯೆಯನ್ನು ಅತ್ಯಂತ ಸುಲಭವಾಗಿ ಮತ್ತು ಸಮರ್ಥವಾಗಿ ಬಗೆಹರಿಸಿಕೊಳ್ಳಬಹುದು. ಆದುದರಿಂದ, ಓರ್ವನು ತನ್ನ ಹೃದಯವನ್ನು ಮಾರಿಕೊಳ್ಳಲು ಅರ್ಥಾತ್, ದಿವ್ಯ ಸದ್ಗುರುವಿಗೆ ಕಾಣಿಕೆಯಾಗಿ ಅರ್ಪಿಸಬಲ್ಲನೆಂದಾದರೆ, ಮಾಡಲು ಉಳಿಯುವುದು ಏನೂ ಇಲ್ಲವೆಂದು ಹೇಳಬಹುದು. ಇದು ಸಹಜವಾಗಿಯೇ ಅವನಿಗೆ ಪರಮಸತ್ಯದಲ್ಲಿ ಲಯಾವಸ್ಥೆಯನ್ನು ಉಂಟು ಮಾಡುವುದು. ಈ ಸರಳವೂ ಸುಲಭವೂ ಆದ ತಂತ್ರವನ್ನು ಅನುಸರಿಸುವುದರಿಂದ, ಪ್ರಾರಂಭವೇ ಕೊನೆಯೂ ಆಗುತ್ತದೆ. ನಮ್ಮ ಜೀವನದ ಅತ್ಯಂತ ಪ್ರಿಯವಸ್ತುವಿನ ಪ್ರಾಪ್ತಿಗೆ, ನಮ್ಮ ಹೃದಯದ ಹೊರತು ಇನ್ನೇನು ತಾನೆ ಅತ್ಯಂತ ಸೂಕ್ತ ಕಾಣಿಕೆಯಾಗಬಲ್ಲದು?
ಇನ್ನೊಂದು ಮಾತು, ಅತಿ ಸುಲಭವಾದ ಹೃದಯವನ್ನು ಅರ್ಪಣೆಮಾಡಲು ಬೇಕಾದುದು ‘ಸಂಕಲ್ಪ’ದ ಒಂದು ಕ್ರಿಯೆ ಮಾತ್ರ ಅಲ್ಲದೆ, ಸಂಕಲ್ಪವು ಹಗುರವೂ ಸೂಕ್ಷವೂ ಆದಂತೆಲ್ಲ ಅದರ ಕಾರ್ಯವು ಹೆಚ್ಚು ಪರಿಣಾಮ ಕಾರಿಯಾಗುತ್ತದೆ. ಈ ವಿಧಾನವನ್ನು ಅನುಸರಿಸಿದರೆ, ಮೊತ್ತ ಮೊದಲ ದಿನದಿಂದಲೇ ವೈರಾಗ್ಯದ ಮನಃಪ್ರವೃತ್ತಿಯನ್ನು ತರುವುದು ನಿಶ್ಚಿತ. ಈ ಉದ್ದೇಶಕ್ಕೆ, ಧೈರ್ಯದಿಂದ ಮುಂದಡಿಯಿಡುವುದೊಂದೇ(ಪ್ರಾರಂಭ ಮಾಡುವುದೊಂದೇ) ಬೇಕಾಗಿರುವುದು.
ಆತ್ಮ ಸಮರ್ಪಣೆಯೆಂದರೆ, ಸ್ವಂತದ ಪರಿವೆಯು ಸ್ವಲ್ಪವೂ ಇಲ್ಲದಂತೆ, ಗುರುವಿನ ಇಚ್ಛೆಗೆ ಸಂಪೂರ್ಣ ವಾಗಿ ತನ್ನನ್ನು ಒಪ್ಪಿಸಿ ಬಿಡುವುದಲ್ಲದೆ ಬೇರೇನೂ ಅಲ್ಲ. ಈ ಸ್ಥಿತಿ ಯಲ್ಲಿ ಸ್ಥಿರವಾಗಿ ನೆಲೆಗೊಂಡು ನಿಂತರೆ, ಅದು ಆತ್ಮನಿರಸನದ ಸ್ಥಿತಿಯು ಪ್ರಾರಂಭಕ್ಕೆ ಒಯ್ಯುತ್ತದೆ. ಸಮರ್ಥ ಸದ್ಗುರುವಿಗೆ ನಾವು ಶರಣಾಗತರಾದಾಗ ಆತನಿಂದ ದಿವ್ಯ ಶಕ್ತಿಯ ನಿರಂತರ ಪ್ರವಾಹವನ್ನು ಸೆಳೆಯಲಾರಂಭಿಸುತ್ತೇವೆ. ಈ ಸ್ಥಿತಿಯಲ್ಲಿ, ಮನುಷ್ಯನು ಮಾಡುವುದು ,ಯೋಚಿಸುವದು ಎಲ್ಲವೂ ಕೇವಲ ಗುರುವಿನ ಅಪ್ಪಣೆಯ ಪ್ರಕಾರವೇ ಆಗಿರುತ್ತದೆ. ಪ್ರಪಂಚದಲ್ಲಿ ತನಗೆ ಸೇರಿದ್ದುದು ಏನೂ ಇಲ್ಲವೆಂದೂ, ಎಲ್ಲವೂ ಗುರುವಿನಿಂದ ಅವನಿಗೆ ವಹಿಸಲ್ಪಟ್ಟ ಪವಿತ್ರ ನ್ಯಾಸವೆಂದೂ ತಿಳಿಯುತ್ತಾನೆ ಮತ್ತು ಎಲ್ಲವನ್ನೂ ಗುರುವಿನ ಆದೇಶವೆಂದು ತಿಳಿದು ಮಾಡುತ್ತಾನೆ. ಆತನ ಇಚ್ಛೆಯು ಗುರುವಿನ ಇಚ್ಛೆಗೆ ಸಂಪೂರ್ಣ ಅಧೀನವಾಗಿರುತ್ತದೆ. ಶರಣಾಗತಿಯೆಂಬುದು ಸುಲಭಸಾಧ್ಯವಾದ ಸಾಮಾನ್ಯ ಮಾತಲ್ಲ. ಎಲ್ಲ ಇಂದ್ರಿಯಗಳೂ, ಸ್ವಶಕ್ತಿಗಳೂ ಸಂಪೂರ್ಣ ನಿರಸನಗೊಂಡ ನಂತರವಷ್ಟೆ ಅದು ಆರಂಭವಾಗುವುದು. ಅದಕ್ಕೋಸ್ಕರ ಭಕ್ತಿಯ ಪ್ರಾಥಮಿಕ ನಿಯಮಗಳ ಮೂಲಕ ಮುಂದುವರಿಯುತ್ತೇವೆ. ಗುರುವನ್ನು ಅತಿಮಾನವನೆಂದು ತಿಳಿದು ಆತನಿಗೆ ಒಪ್ಪಿಸಿಕೊಂಡು ಬಿಡುತ್ತೇವೆ. ಭಕ್ತಿ, ಶ್ರದ್ಧೆ ಮತ್ತು ಗೌರವಗಳಿಂದ ಆತನನ್ನು ಪ್ರೀತಿಸುತ್ತೇವೆ. ಎಲ್ಲ ಉಪಾಯಗಳಿಂದಲೂ ಆತನ ಗಮನವನ್ನು ಮತ್ತು ಕೃಪೆಯನ್ನು ಆಕರ್ಷಿಸಲು ಪ್ರಯತ್ನಿಸುತ್ತೇವೆ.
ಶಿಷ್ಯರನ್ನು ‘ಮನ್ಮತ’ ಮತ್ತು ‘ಗುರುಮತ’ ಎಂದು ಎರಡು ಗುಂಪುಗಳಾಗಿ ಸಂತರು ವರ್ಗೀಕರಿಸಿದ್ದಾರೆ. ಮೊದಲನೆಯವರು, ಸಂಪತ್ತಿನ ಆಶೆ, ಕಷ್ಟ ಪರಿಹಾರ ಮುಂತಾದ ಪ್ರಾಪಂಚಿಕ ಉದ್ದೇಶವನ್ನು ದೃಷ್ಟಿಯಲ್ಲಿರಿಸಿಕೊಂಡು ಗುರುವಿನ ಬಳಿಗೆ ಹೋಗುವವರು. ತಮ್ಮ ಆಶೆಗಳು ತೃಪ್ತರಾಗುವವೆಂಬ ಭರವಸೆ ಇರುವವರೆಗೂ ಅವರು ಗುರುವಿಗೆ ವಿಧೇಯರಾಗಿರುತ್ತಾರೆ. ಅವರು ನಿರಾಶೆ ಹೊಂದಿದರೆ, ಆ ಪ್ರಸಕ್ತಿಯಿಂದ, ಅವರು ದೂರ ಸರಿಯುತ್ತಾರೆ. ಅಂಥ ಶಿಷ್ಯರ ವಿಷಯದಲ್ಲಿ ವಿಧೇಯತೆ, ಅಧೀನತೆಗಳ ಪ್ರಶ್ನೆ ಏಳುವುದಿಲ್ಲ; ಇನ್ನು ಆತ್ಮಸಮರ್ಪಣೆ ಅಥವಾ ಶರಣಾಗತಿಯನ್ನು ಕುರಿತು ಹೇಳುವುದೇನು? ’ಗುರುಮತ’ದ ಶಿಷ್ಯರು ಎಲ್ಲ ವಿಷಯಗಳಲ್ಲಿಯೂ ಗುರುವಿನ ಆದೇಶಗಳನ್ನು ವಿಧೇಯತೆಯಿಂದ ಪಾಲಿಸುತ್ತಾರೆ. ಅರ್ಪಣೆಯು ವಿಧೇಯತೆಯಿಂದ ಮೊದಲಾಗುತ್ತದೆ. ಆಧ್ಯಾತ್ಮಿಕ ವಿದ್ಯೆಯಲ್ಲಿ ಉನ್ನತ ಸಿದ್ಧಿಗಳನ್ನು ಪಡೆದಿರುವ ಗುರುವಿನ ಘನವಾದ ಮಹಿಮೆ(ಶಕ್ತಿ)ಗಳಿಂದ ಆಳವಾಗಿ ಪ್ರಭಾವಿತರಾದಾಗ ನಾವು ಆತನ ಆದೇಶಗಳನ್ನು ಪಾಲಿಸಲು ಆಂತರಿಕ ವಾಗಿ ಒಲವುಳ್ಳವರಾಗುತ್ತೇವೆ.
ಆತ್ಮಸಮರ್ಪಣೆಯ ಸುಂದರ ಉದಾಹರಣೆಯಾಗಿ ‘ಭರತ’ ನಮ್ಮ ಮುಂದೆ ಇದ್ದಾನೆ. ರಾಮನನ್ನು ಹಿಂದೆ ಬರುವಂತೆ ಮನವೊಲಿಸಲು ಅಯೋಧ್ಯೆಯ ಜನರನ್ನೊಡಗೂಡಿ ಕಾಡಿಗೆ ಹೋದಾಗ, ಜನರ ಬಿನ್ನಹಕ್ಕೆ ಪ್ರತ್ಯುತ್ತರವಾಗಿ ರಾಮನು, ಒಂದು ವೇಳೆ ರಾಜಧಾನಿಗೆ ಮರಳಬೇಕೆಂದು ಭರತನು ಹೇಳಿದರೆ, ಹಾಗೆ ಮಾಡಲು ಒಲ್ಲೆ ಎನ್ನುವುದಿಲ್ಲ ಎಂದು ಹೇಳುತ್ತಾನೆ. ಎಲ್ಲರ ದೃಷ್ಟಿಯೂ ಭರತನತ್ತ ತಿರುಗಿತು; ಅವನೂ ರಾಮನನ್ನು ಮನವೊಲಿಸಲು ಬಂದಿದ್ದನಷ್ಟೆ, ಆದರೆ ಅವನು, “ನಾನು ಅಪ್ಪಣೆ ಕೊಡುವವನಲ್ಲ, ಅನುಸರಿಸುವವನು ಮಾತ್ರ” ಎಂದು ಶಾಂತವಾಗಿ ಉತ್ತರಿಸಿದನು.
ಹೀಗೆ, ಆತ್ಮಸಮರ್ಪಣೆಯು ಧ್ಯೇಯ ಸಾಧನೆಯಲ್ಲಿ ಅಭ್ಯಾಸಿಗೆ ಬಹಳೇ ಮಹತ್ತ್ವಪೂರ್ಣವಾದುದು.