ಸಾಕ್ಷಾತ್ಕಾರಕ್ಕೆ  ಮಾರ್ಗ(ಮಾರ್ಗದರ್ಶಿಯ  ಪಾತ್ರ)

ಗುರು ಮತ್ತು ಅವನ ಕಾರ್ಯ

ಸಾಕ್ಷಾತ್ಕಾರವನ್ನು ಕೇವಲ ಅಭ್ಯಾಸದಿಂದ ಪಡೆಯಲಾಗುವುದಿಲ್ಲ. ಯಾಕೆಂದರೆ ಉನ್ನತ ಹಂತಗಳಲ್ಲಿ ಸ್ಥಿತಿಗಳು ಎಂಥವಿರುತ್ತವೆಯೆಂದರೆ, ಸ್ವಪ್ರಯತ್ನದಿಂದ  ಮನುಷ್ಯನು ಕೊಂಚ ಮೇಲೇರಿದರೂ, ಮೇಲಿನಿಂದ ಇರುವ ಬಲವಾದ ಒತ್ತಡದಿಂದಾಗಿ ಅವನು ಬೇಗ ಕೆಳಕ್ಕೆ ಜಾರುತ್ತಾನೆ. ಆದುದರಿಂದ, ಉನ್ನತ ವಲಯಗಳಿಗೆ ನಾವು ಪ್ರವೇಶ ಪಡೆಯುವ ವಿಷಯದಲ್ಲಿ ಗುರುವಿನ ಸಹಾಯ ಅನಿವಾರ್ಯ. ಪ್ರಾಯೋಗಿಕವಾದ  ಸಾಧನಾಭ್ಯಾಸದ ಮಟ್ಟಿಗೆ ಕೂಡಾ, ಪ್ರತಿಯೊಬ್ಬರೂ ಆಧ್ಯಾತ್ಮಿಕ ಶಿಕ್ಷಣದ ಪ್ರಾಯೋಗಿಕ ಕ್ರಮವನ್ನು ಅನುಸರಿಸಬೇಕಾದುದು ಅತಿ ಮುಖ್ಯವಾದ್ದರಿಂದ ನಾವು ಸರಿಯಾದ ಮಾರ್ಗದರ್ಶನವನ್ನು ಪಡೆಯಬೇಕು. ನೇರವಾಗಿ ದೇವರಿಗೆ ಶರಣಾಗತರಾಗಿ, ಕೇವಲ ಸ್ವಪ್ರಯತ್ನದಿಂದಲೇ ಪರಿಪೂರ್ಣತೆಯನ್ನು ಪಡೆದ ಮಹಾತ್ಮರೂ(ಸಂತರೂ)ಇದ್ದರೆಂದರೂ, ಅಂಥ  ಉದಾಹರಣೆಗಳು ವಿರಳ. ಅದು ಬಹಳ ಕಷ್ಟದ ದಾರಿ. ಅಸಾಧಾರಣ ಪ್ರತಿಭಾಸಾಮರ್ಥ್ಯವನ್ನು ದೈವದತ್ತವಾಗಿ ಪಡೆದ ವ್ಯಕ್ತಿಗಳು ಮಾತ್ರ ಅದನ್ನು ಅನುಸರಿಸಲು ಸಾಧ್ಯ. ಗುರುವು ದೇವರು ಮತ್ತು ಮನುಷ್ಯನನ್ನು ಜೋಡಿಸುವ ಕೊಂಡಿ. ಅವನ ಮುಖಾಂತರವೇ ನಾವು ದೇವರನ್ನು ತಲಪಬಲ್ಲೆವು. ಮಾರ್ಗದಲ್ಲಿಯ ತೊಡಕುಗಳಿಂದ ನಮ್ಮನ್ನು ಹೊರತರುವ ಶಕ್ತಿ ಆತನೊಬ್ಬನೇ.

ನಾವು ಆರಿಸಿಕೊಳ್ಳುವ ಮಾರ್ಗದರ್ಶಕನು ಅತ್ಯುನ್ನತ ಸಾಮರ್ಥ್ಯವುಳ್ಳವನಾಗಿರಬೇಕಾದುದು ಅವಶ್ಯ.  ತನ್ನ ಅಸಾಧಾರಣ ಶಕ್ತಿ ಮೂಲಕ, ಎಲ್ಲ ತೊಡಕುಗಳನ್ನೂ ದೃಷ್ಟಿ ಮಾತ್ರದಿಂದ ಹರಿದೊಗೆಯಲು ಆತನು ಸಮರ್ಥನಿರಬೇಕು. ಪರಿಪೂರ್ಣತೆಯನ್ನು ಪಡೆದವನೂ ಮತ್ತು ಸಂಪೂರ್ಣ ಆತ್ಮನಿರಸನ ಮಾಡಿಕೊಂಡವನೂ ಆಗಿರುವವನೇ ಗುರುವಾಗಬಲ್ಲನು.

ಅಂಥ ಮಹಾ ಶಕ್ತಿಯೊಂದಿಗೆ ಪ್ರೇಮಾಕರ್ಷಣೆಗಳ ಭಾವನೆಯ ಮೂಲಕ ನಮ್ಮ ಸಂಬಂಧವನ್ನು ಸ್ಥಾಪಿಸಿಕೊಳ್ಳಬೇಕು.   ಅವನ ಬಗ್ಗೆ ನಾವು ನಮ್ಮ ಮನಸ್ಸಿನಲ್ಲಿ ಯಾವ ಕಲ್ಪನೆಯನ್ನು ಇಟ್ಟುಕೊಂಡಿದ್ದೇವೆಂಬುದು ಮುಖ್ಯವಲ್ಲ. ಆತನನ್ನು ಮಿತ್ರನೆಂದು, ಪ್ರಭುವೆಂದು ಸೇವಕನೆಂದು ಅಥವಾ ನಮಗೆ ಮೆಚ್ಚುಗೆಯಾಗುವ ಇನ್ನಾವುದೋ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದು. ಹೇಗೆ ಇದ್ದರೂ ಆತನು, ಸಾಮಾನ್ಯವಾಗಿ ಕರೆಯಲ್ಪಡುವಂತೆ, ಒಟ್ಟಿನಲ್ಲಿ, ಗುರು ಅಥವಾ ಮಾರ್ಗದರ್ಶಿಯಾಗಿಯೇ ಉಳಿಯುತ್ತಾನೆ. ನನ್ನ ಅಭಿಪ್ರಾಯದಲ್ಲಿ, ಗುರುವನ್ನು ತಾಯಿಯಂತೆ ಭಾವಿಸುವುದು ಅಭ್ಯಾಸಿಗೆ  ಅತ್ಯಂತ ಯೋಗ್ಯವೂ, ಲಾಭಕರವೂ ಆಗಿದೆ. ತಾಯಿಯು ಪ್ರೇಮ, ಮಮತೆಗಳ ಸಾಕಾರಮೂರ್ತಿ. ತಾಯಿಯ ಹೃದಯವು ಮಗನಿಂದುಂಟಾಗುವ ಎಲ್ಲ ತೊಂದರೆ, ಕಷ್ಟಗಳನ್ನು ತಾಳ್ಮೆಯಿಂದ ಸಹಿಸಿಕೊಂಡು, ಸದಾ ತನ್ನ ಮಗನಿಗೆ ಸುಖ ಸಂತೋಷಗಳನ್ನೊದಗಿಸುವ ವಿಚಾರದಲ್ಲಿಯೇ ಇರುತ್ತದೆ. ಶಿಷ್ಯನ ಆಧ್ಯಾತ್ಮಿಕ ಮಾತೆಯಾದ ಗುರುವಿನ ಸ್ಥಾನವೂ ಅದೇ ಇರುತ್ತದೆ. ಅಂತೆಯೇ, ತನ್ನ ಶಿಶುರೂಪಿಯಾದ ಶಿಷ್ಯನ ಆಧ್ಯಾತ್ಮಿಕ ಕಲ್ಯಾಣವನ್ನೇ ಗುರುವು ಸದಾ ಬಯಸುತ್ತಿರುತ್ತಾನೆ.  ಶಿಷ್ಯನನ್ನು ಕುರಿತು ಗುರುವು ವಾತ್ಸಲ್ಯಪೂರ್ಣ ಸಂಬಂಧ ಹೊಂದಿರುವದರಿಂದಲೇ, ಆ ಆಧ್ಯಾತ್ಮಿಕ ಮಾತೆಯು(ಗುರುವಿನ) ನಿಕಟ ಸಂಬಂಧ ಹೊಂದಿದ ಆ ಪರಮ ಪಿತನ(ಪರಮಾತ್ಮನ)ಗಮನವು ಶಿಷ್ಯನ ಕಡೆಗೆ ತಿರುಗುತ್ತದೆ. ತಾಯಿಯ ಹಾಗೂ ನಿಜವಾದ ಗುರುವಿನ ಕಾರ್ಯಗಳು ಅತ್ಯಂತ ಸದೃಶವಾಗಿರುತ್ತವೆ. ತಾಯಿ ತನ್ನ ಗರ್ಭದಲ್ಲಿ ಶಿಶುವನ್ನು ಕೆಲ ಕಾಲ ಧರಿಸುತ್ತಾಳೆ.  ಗುರು ಕೂಡ, ಶಿಷ್ಯನನ್ನು ತನ್ನ ಮನೋವಲಯದಲ್ಲಿ ಕೆಲ ಕಾಲ ಧರಿಸುತ್ತಾನೆ. ಈ ಅವಧಿಯಲ್ಲಿ, ಶಿಷ್ಯನು, ಗರ್ಭಸ್ಥ ಶಿಶುವಿನಂತೆ, ಗುರುವಿನ ಆಧ್ಯಾತ್ಮಿಕ ವಿಚಾರ ತರಂಗಗಳಿಂದ ಶಕ್ತಿಯನ್ನು ಹೀರಿ ಪುಷ್ಟಿ ಹೊಂದುತ್ತಾನೆ. ಪಕ್ವ ಕಾಲದಲ್ಲಿ, ಆತನು ದಿವ್ಯ ಲೋಕದಲ್ಲಿ ಜನಿಸುತ್ತಾನೆ. ಮತ್ತು ಅಲ್ಲಿಂದ ತನ್ನದೇ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸುತ್ತಾನೆ. ಶಿಷ್ಯನು ತನ್ನದೆನ್ನುವುದೆಲ್ಲವನ್ನೂ ಗುರುವಿಗೆ ಸಮರ್ಪಣೆ ಮಾಡಿ, ಅವನ ಮನೋವಲಯವನ್ನು  ಪ್ರವೇಶಿಸಿದನೆಂದರೆ ಆತನನ್ನು ದಿವ್ಯ ಲೋಕದಲ್ಲಿ ಪ್ರಸವಿಸಲು ಗುರುವಿಗೆ ಏಳೇ ತಿಂಗಳು ಸಾಕು. ಆದರೆ ಈ ಪ್ರಕ್ರಿಯೆಯು ಸಾಮಾನ್ಯವಾಗಿ  ಸಾಕಷ್ಟು ಕಾಲ ತಡವಾಗುತ್ತದೆ. ಯಾಕೆಂದರೆ , ಗುರುವಿನ ಮನೋವಲಯದಲ್ಲಿ ವಾಸಿಸುವಾಗ ಶಿಷ್ಯನು ತನ್ನ ವಿಚಾರಗಳ ಮತ್ತು ಸಂವೇದನಾನುಭವಗಳ ಅರಿವನ್ನು ಉಳಿಸಿಕೊಂಡಿರುತ್ತಾನೆ. ಹೀಗೆ, ಗುರುವಿನ ಮತ್ತು ತಾಯಿಯ ಕಾರ್ಯ ಒಂದೇ ಎಂಬುದನ್ನು ನಾವು ಕಾಣುತ್ತೇವೆ. ಗುರುವನ್ನು ಆಧ್ಯಾತ್ಮಿಕ ಮಾತೆಯೆಂಬ ಭಾವನೆಯು ನಮ್ಮಲ್ಲಿ ಪ್ರೇಮ, ಗೌರವ ಮತ್ತು ಸಮರ್ಪಣೆಯ ಭಾವಗಳನ್ನು ವರ್ಧಿಸುತ್ತದೆ; ಅವೇ ಆಧ್ಯಾತ್ಮಿಕ ಜೀವನದ ಮುಖ್ಯ ಘಟಕಗಳು.

ಸಮರ್ಥ ಗುರುವನ್ನು ಆರಿಸಿಕೊಳ್ಳುವುದು ಅತಿ ಕಷ್ಟದ ಕೆಲಸವೆಂಬುದು ನಿಃಸಂದೇಹ. ಆಯ್ಕೆಯ ಸುಲಭ ನಿರ್ಣಯದ ವಿಧಾನವನ್ನು, ನನ್ನ ವೈಯಕ್ತಿಕ ಅನುಭವದ ಆಧಾರದ ಮೇಲೆ, ನಾನು ವಿವರಿಸಬಹುದು. ನೀವು ಯಾರಾದರೊಬ್ಬರ ಸಂಪರ್ಕದಲ್ಲಿ ಬಂದಾಗ, ಆ ಸಾಹರ್ಚಯವು ತತ್ಕಾಲದ ಮಟ್ಟಿಗಾದರೂ, ನಿಮ್ಮ ಮನಸ್ಸಿನ ಮೇಲೆ ಯಾವ ಭಾರವನ್ನಾಗಲಿ, ಪರಿಣಾಮವನ್ನಾಗಲಿ ಉಂಟು ಮಾಡದೆ, ಅದರ ಅಶಾಂತ ಪ್ರವೃತ್ತಿಗಳನ್ನು ಶಮನಗೊಳಿಸಿ, ಶಾಂತಿ, ಸಮಾಧಾನಗಳ ಭಾವನೆಯನ್ನು ಉದ್ದೀಪಿಸುವುದೇ ಎಂದು ಅರಿತುಕೊಳ್ಳಲು ಪ್ರಯತ್ನಿಸಿರಿ. ಅದು ಹಾಗಿದ್ದರೆ, ಆತನು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಯೋಗ್ಯನೆಂಬ ತೀರ್ಮಾನಕ್ಕೆ  ಬರಬಹುದು. ಮತ್ತೊಂದು ತೊಂದರೆಯೂ ಇದೆ.ಅಂಥ ಗುರುವೊಬ್ಬನು ದೊರೆತು, ಅವನು ಗಮ್ಯನಾಗಿದ್ದರೂ, ಅವನು ದೊಡ್ಡ ಪವಾಡವನ್ನು ತೋರಿಸಿದ ಹೊರತು ಅವನನ್ನು(ಜನರು)ನಂಬುವುದಿಲ್ಲ. ಪ್ರಾಣಾಹುತಿಯನ್ನು ನೀಡಬಲ್ಲ ರಾಜ ಯೋಗಿಯೋರ್ವನು ನಿಃಸಂದೇಹವಾಗಿ ಪವಾಡಗಳನ್ನು ತೋರಿಸಬಲ್ಲನು; ಆದರೆ ಅದನ್ನು ಎಂದೂ ತೋರಿಸಲು ಬಯಸುವುದಿಲ್ಲ. ಯಾಕೆಂದರೆ ಅದು ಅವನ ನಿಜವಾದ ಸ್ಥಿತಿಗೆ ಅಗೌರವ ಪ್ರಾಯವಾಗುತ್ತದೆ. ತನ್ನ ಜೀವನದಲ್ಲಿ ಪವಾಡಗಳನ್ನು ತೋರಿಸಿದ ಕ್ರಿಸ್ತನ ಉದಾಹರಣೆ ನಮ್ಮೆದುರಿಗಿದೆ. ಅಷ್ಟಾದರೂ ಅವನಿಗೆ ಹನ್ನೆರಡು ಜನ ಶಿಷ್ಯರು ಮಾತ್ರ ದೊರೆತರು; ಅದರಲ್ಲಿಯೂ ಒಬ್ಬನು, ಅನಂತರ ಅವನನ್ನು ಶಿಲುಬೆಗೇರಿಸಲು ಕಾರಣನಾದನು. ಅವನ ಪವಾಡಗಳು ಜನರಲ್ಲಿ ಶ್ರದ್ಧೆಯನ್ನು ಹುಟ್ಟಿಸಲು ಉಪಯುಕ್ತವಾಗಲಿಲ್ಲವೆಂಬುದನ್ನು ಇದು ತೋರಿಸುತ್ತದೆ. ನಂತರದ ಕಾಲದಲ್ಲಿ, ಅವನಿಗೆ ಅಷ್ಟು ದೊಡ್ಡ ಅನುಯಾಯಿಗಳ ಸಮೂಹವನ್ನು ದೊರಕಿಸಿ ಕೊಟ್ಟಿರುವುದು, ವಾಸ್ತವದಲ್ಲಿ, ಅವನ ಉದಾತ್ತವಾದ ಉಪದೇಶಗಳೇ. ಪವಾಡಗಳಿಗಿಂತ ಸತ್ಯದ ಮೇಲೆ ನಮ್ಮ ದೃಷ್ಟಿಯನ್ನು ನೆಟ್ಟಿರಬೇಕು. ಅದೇ ನಮ್ಮ ಉದ್ದೇಶಕ್ಕೆ ಅತ್ಯುತ್ತಮವಾದುದು. ಪವಾಡಗಳು ತೀರ ಕ್ಷುಲ್ಲಕ ವಿಷಯಗಳು. ಅವುಗಳನ್ನು ಇನ್ನೂ ಕಡಿಮೆ ಮಟ್ಟದ ಸಿದ್ಧಿ, ಕೌಶಲಗಳುಳ್ಳವನೂ ಪ್ರದರ್ಶಿಸಬಹದು. ಪವಾಡಗಳು ಒಬ್ಬ ಸಂತನ ಅಥವಾ ಯೋಗಿಯ ಒರೆಗಲ್ಲಾಗದು ಏತದ್ವಿರುದ್ದವಾಗಿ, ಚಾಣಾಕ್ಷ ರಾದ ಗುರುಗಳು ದುರ್ಬಲರೂ ಮತ್ತು ಮುಗ್ಧರೂ ಆದ ಜನರನ್ನು ತಮ್ಮ ಗುರುತ್ವದ ಬಲೆಗೆ ಎಳ್ಳುದುಕೊಳ್ಳಲು, ಬುದ್ಧಿಪೂರ್ವಕ ಮಾಡುವ ಮೋಸವೇ ಸರಿ. ಅಂತಿಮ ಆಯ್ಕೆಯ ತೀರ್ಮಾನ ತೆಗೆದುಕೊಳ್ಳುವ ಮುನ್ನ, ಆತನ(ಗುರುವಿನ)ಯೋಗ್ಯತೆ ಮತ್ತು ಶಕ್ತಿಗಳ ಬಗ್ಗೆ, ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ಆತನ ಪ್ರಾಯೋಗಿಕ ಸಿದ್ಧಿಗಳ ಬಗ್ಗೆ ಸಂಪೂರ್ಣ ಮನದಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಅವರೊಡನೆ ಸಂತತ ಸಹವಾಸ ಬೇಕು. ಆಗಲೇ, ಪ್ರಾಯೋಗಿಕ ಅನುಭವ ಮತ್ತು ಅನಿಸಿಕೆಗಳ ಮೂಲಕ ನಿರ್ಣಯಕ್ಕೆ ಬರಬಹುದು. ಹೀಗೆ ಮನದಟ್ಟು ಮಾಡಿಕೊಂಡ ಮೇಲೆ, ಆತನ ಮೇಲೆ ಪೂರ್ಣ ವಿಶ್ವಾಸದಿಂದ  ಭರವಸೆಯಿಡಬೇಕು ಮತ್ತು, ದೃಢವಾಗಿ ಅವನನ್ನು ಅವಲಂಬಿಸಬೇಕು. ಸಾಧನೆಯ ಯಶಸ್ಸಿಗೆ ಇದು ಅಗತ್ಯವಾದುದು.

ಅಗತ್ಯವಿರಬಹುದಾದ ಯಾರಿಗಾದರೂ ಸಹಾಯಮಾಡಲು ನನ್ನ ಹೃದಯ ಸದಾ ಸಿದ್ಧವಾಗಿದೆ. ಮಾನವ ಜಾತಿಯ ನಮ್ರ ಸೇವಕನಂತೆ ನಾನು ಈ ಕೆಲಸವನ್ನು ಕೈಗೊಳ್ಳುತ್ತೇನೆ. ತಮ್ಮ ಕಾಲದಲ್ಲಿ, ಯಜಮಾನನಂತೆ ಕೆಲಸ ಮಾಡಿದ, ಮಾಡುತ್ತಿರುವ ಗುರುಗಳು ಇರುತ್ತಾರೆ ಮತ್ತು ಇದ್ದಾರೆ. ಆದರೆ ನಾನು ಸಾಮಾನ್ಯವಾಗಿ  ಜನರ ಹಿತಕ್ಕಾಗಿ ಒಬ್ಬ ಸೇವಕನಂತೆ ಇದ್ದು ಕೆಲಸ ಮಾಡಲು ಬಯಸುತ್ತೇನೆ. ನಿಮಗೆ ಹೇಳಿದಂತೆ ಮಾಡಿರಿ ಮತ್ತು ನಿಮ್ಮ ದೈನಂದಿನ ಪ್ರಗತಿಯನ್ನೂ, ಮತ್ತು ತೊಂದರೆಗಳೇನಾದರೂ ಇದ್ದರೆ ಅವನ್ನೂ ತಿಳಿಸುತ್ತ ಇರಿ. ನಿರಂತರ ಸ್ಮರಣೆಯೊಂದಿಗೆ ಪಟ್ಟು ಹಿಡಿದು ನೀವು ಮುಂದುವರಿದರೆ ನೀವು ಬಹುಸುಲಭವಾಗಿ ಗುರಿಯನ್ನು ಮುಟ್ಟಬಲ್ಲಿರೆಂದು ನಾನು ಭರವಸೆ ಕೊಡಬಲ್ಲೆ.

ಪಂಡಿತರಾದ ಧರ್ಮಗುರುಗಳು ಸಾಮಾನ್ಯವಾಗಿ  ದೇವ-ದೆವತೆಗಳನ್ನು ಪೂಜಿಸಲು ಪ್ರೋತ್ಸಾಹಿಸುತ್ತಾರೆ.   ಅಂತಿಮ‌ ಬಿಂದುವಿನವರೆಗೆ ಮಾರ್ಗಕ್ರಮಣವನ್ನು ಪೂರೈಸಿದವನೊಬ್ಬನೇ ಯಶಸ್ವಿಯಾಗಿ ಮಾರ್ಗದರ್ಶನ ನೀಡಬಲ್ಲನು. ವಿದ್ವದ್ಗುರುಗಳು ಬಹುತೇಕ, ರಸ್ತೆಯು ಎಲ್ಲಿಗೆ ಕೊಂಡೊಯ್ಯುವುದನ್ನು ತಿಳಿಸುವ ಕೈಮರಗಳಂತೆ ಇರುತ್ತಾರೆ. ಅವರಿಂದಾಗುವ ಪ್ರಯೋಜನವು ಅಷ್ಟೇ ಸರಿ. ಭೌತಿಕತೆಯಿಂದ ಬಿಡುಗಡೆಯಾಗುವುದನ್ನೇ ಗುರಿಯಾಗಿಟ್ಟುಕೊಂಡವನೋರ್ವನು ಭೌತಿಕ ರೂಪಗಳನ್ನೂ ಸ್ಥೂಲಕಲ್ಪನೆಗಳನ್ನೂ ಆಶ್ರಯಿಸುವುದೆಂದರೆ  ಬಹಳ ವಿಚಿತ್ರವೇ  ಸರಿ.

‘ಮಹಾತ್ಮ’ ಶಬ್ದದ ವ್ಯಾಖ್ಯೆಯನ್ನು ಅನೇಕ ರೀತಿಗಳಲ್ಲಿ ಕೊಡಲಾಗಿದೆ: ಬಹುಶಃ ಅದಕ್ಕೆ ಸಕಾರಣ ಆಧಾರವಿಲ್ಲದೆ ಇಲ್ಲ. ಆ ಶಬ್ದಕ್ಕೆ ನಾನು ಕೊಡುವ ವ್ಯಾಖ್ಯೆ ‘ವ್ಯಕ್ತಿತ್ವರಹಿತ ವ್ಯಕ್ತಿ’ ಎಂದು. ಅದು ವಿಲಕ್ಷಣವಾಗಿ ತೋರುವುದಾಧರೂ ಅರ್ಥವತ್ತಾಗಿದೆ. ಆಧ್ಯಾತ್ಮದಿಂದ ದೂರವಿರುವವನಿಗೂ ಅನ್ವಯಿಸುವಂತೆ ಅದನ್ನು ಅರ್ಥೈಸಬಹುದು‌. ಆದರೆ ಅದು ಆಧ್ಯಾತ್ಮವನ್ನು ಬಯಸುವವರಿಗೆ ಒಪ್ಪಿಗೆಯಾಗದು. ಆದರೆ ಅದರ ನಿಜವಾದ ಅಂತರ್ಥವನ್ನು ನಾನು ವಿವರಿಸುವಷ್ಟು ಆಳಕ್ಕೆ ಹೋದರೆ, ಅದು ಗ್ರಹಿಕೆಗೆ ನಿಲಕದು ಎಂಬ ಅಳುಕು ನನಗಿದೆ. ಆದ್ದರಿಂದ ಆ ವಿಷಯವನ್ನು  ಇಷ್ಟಕ್ಕೇ ಕೈಬಿಡುತ್ತೇನೆ. ರಾಜನ ವೇಷಭೂಷಣಗಳಷ್ಟೇ ಓರ್ವನನ್ನು ರಾಜನನ್ನಾಗಿ ಮಾಡುವುದಿಲ್ಲವೆಂಬುದು ನಮಗೆ ಗೊತ್ತು. ಅಂತೆಯೇ ಬಾಹ್ಯರೂಪ ಮತ್ತು ವೇಷಗಳೇ ಓರ್ವನನ್ನು ಸಂತನನ್ನಾಗಿ ಅಥವಾ ಯೋಗಿಯನ್ನಾಗಿ ಮಾಡಲಾರವು. ಬಾಹ್ಯ ಲಕ್ಷಣಗಳು ಅಂತಹೃದಯದ ಖಚಿತ ಸೂಚಕಗಳಲ್ಲ.

ಆಧುನಿಕ ಗುರುಗಳನ್ನು, ಅನುಕೂಲಕ್ಕೆಂಬಂತೆ, ಈ ಕೆಳಗೆ ಹೇಳಿದಂತೆ ವರ್ಗೀಕರಿಸಬಹುದು:

  1. ಕಪಟಿಗಳು: ಮರಗಳು, ಪ್ರಾಣಿಗಳು, ಕೀಟಗಳು, ರೋಗಗಳು, ದೆವ್ವಗಳು ಮತ್ತು ದೇಹ ಬಿಟ್ಟ ಆತ್ಮಗಳು ಇವುಗಳನ್ನು ಪೂಜೆ ಮಾಡುತ್ತ, ಅದನ್ನೇ ಇತರರಿಗೂ ಬೋಧಿಸುತ್ತ ಇರುವವರು.
  2. ಪುಸ್ತಕ ಕೀಟಗಳು: ತಾವು ಪುಸ್ತಕ ಓದಿ ತಿಳಿದ ಪದ್ಧತಿಗಳನ್ನೂ, ಅನುಷ್ಠಾನ ಕ್ರಮಗಳನ್ನೂ ಇತರರಿಗೆ ಹೇಳುವವರು.
  3. ಸಾಧಕ ಗುರುಗಳು: ಗುಣಾವಗುಣಗಳನ್ನು ಗಣಿಸದೆ, ತಾವು ಮಾಡುವ ಅಥವಾ ಮಾಡಿದುದನ್ನೇ ಇತರರಿಗೆ ಉಪದೇಶ ಮಾಡುವವರು.
  4. ಅಂತಃಸ್ಪುರಣೆಯುಳ್ಳ ಗುರುಗಳು: ( Inspired Teachers)ತಮ್ಮ ಅಂತಃಸ್ಪುರಣೆಯ  ಆಧಾರದ ಮೇಲೆ ಜನರಿಗೆ ಮಾರ್ಗದರ್ಶನ ಮಾಡುವವರು.
  5. ಅಂತಃಸ್ಪುರಣೆಯುಳ್ಳ, ಅನುಭವ ಪಡೆದ ಗುರುಗಳು: ಉನ್ನತವಾದ ಅತಃಸ್ಪುರಣೆಯ ಸಹಾಯ ಪಡೆದ ಮತ್ತು ಸ್ವಾನುಭವದ ಆಧಾರದ ಮೇಲೆ ಮಾರ್ಗದರ್ಶನ ಮಾಡುವವರು.

                ಇದೇ     ರೀತಿಯಲ್ಲಿ    ಶಿಷ್ಯರನ್ನೂ    ಈ   ಕೆಳಗೆ  ತೋರಿಸಿದಂತೆ  ವರ್ಗಿಕರಿಸಬಹುದು:

  1. ಸ್ವಾರ್ಥಿಗಳು: ತಮ್ಮ   ಐಂದ್ರಿಯಕ  ಬಯಕೆಗಳನ್ನು ನೆರವೇರಿಸಿಕೊಳ್ಳಲು  ಸಾಧನೆಯನ್ನು   ಕೈಗೊಳ್ಳುವವರು.
  2. ಕಾಲಕ್ಷೇಪಕರು: ಸಾಧನೆಯನ್ನು  ಒಂದು  ವಿನೋದ  ಕ್ರೀಡೆಯೆಂದು  ಕೈಗೊಳ್ಳುವವರು.
  3. ಅನುಯಾಯಿಗಳು: ಗುರುವಿನ  ನಿರ್ದೇಶನಗಳನ್ನು ಅನುಸರಿಸಲು ಪ್ರಯತ್ನಿಸುವವರು‌.
  4. ಶ್ರದ್ಧಾವಂತ ಶಿಷ್ಯರು: ಗುರುವಿನ  ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಅವನನ್ನು ಅನುಸರಿಸಲು  ಪ್ರಯತ್ನಿಸುವವರು.
  5. ಭಕ್ತಿ- ಶ್ರದ್ಧಾ ಸಂಪನ್ನ  ಶಿಷ್ಯರು: ಗುರುವಿನ( ಅನುಗ್ರಹ) ದೃಷ್ಟಿಗೆ ಕೇಂದ್ರ ಗಳಾಗಿ   ಸಲ್ಲುವವರು.

ತಮ್ಮ ಆಧ್ಯಾತ್ಮಿಕ ಲಾಭದ ಅಭೀಪ್ಸೆಯನ್ನು ಪೂರೈಸಲು ಒಬ್ಬ ಗುರುವನ್ನು ಪಡೆಯುವುದು ಅತಿ ಅಗತ್ಯವೆಂದು ಪ್ರತಿಯೊಬ್ಬ ಶ್ರದ್ಧಾವಂತ ಹಿಂದುವೂ ನಂಬುವನಾದರೂ, ಈಗಿನ ಕಾಲದಲ್ಲಿ ದುರ್ದೈವದಿಂದ ಯೋಗ್ಯ ಗುರುವಿನ ಆಯ್ಕೆಯು ಅಲಕ್ಷಿಸಲ್ಪಟ್ಟಿದೆ. ಸಾಮಾನ್ಯವಾಗಿ ಯಾರನ್ನಾದರೂ, ಅವನ ಯೋಗ್ಯತೆ ಮತ್ತು ಸಾಮರ್ಥ್ಯಗಳನ್ನು ಗಣಿಸದೆ, ಈ ಉದ್ದೇಶಕ್ಕೆ ಆರಿಸಿಕೊಳ್ಳುತ್ತಾರೆ. ಅಜ್ಞಾನಿ ಜನತೆಯನ್ನು ಆಕರ್ಷಿಸಲು ತಥಾಕಥಿತ ಗುರುಗಳು ಪ್ರದರ್ಶಿಸುವ ಪವಾಡಗಳಿಂದಲೋ ಅಥವಾ ಯಾರೊಬ್ಬರ  ಯತ್ನದಿಂದಲೂ ಬಹುಮಟ್ಟಿಗೆ ಅವರು ಹಾಗೆ ಮಾಡಲು ಪ್ರೇರೇಪಿಸಲ್ಪಟ್ಟಿರುತ್ತಾರೆ. ಶಿಷ್ಯಾರ್ಥಿಗಳಿಗೆ ಏನೂ ಕೊರತೆಯಿಲ್ಲ; ಅವರು ಮರದ ಎಲೆಗಳಷ್ಟು ಅಸಂಖ್ಯಾತರಾಗಿದ್ದಾರೆ. ಅವರಲ್ಲಿ ಬಹುಮಂದಿಗೆ, ಗುರು ಪದವಿಯು ಅಪಾರ ಆದಾಯ ತರುವ ಲಾಭದಾಯಕ ವೃತ್ತಿಯಾಗಿದೆ. ಬೇರಾವ ರೀತಿಯಿಂದಲೂ ಅದನ್ನು ಅವರು ಸಂಪಾದಿಸಲಾರರು. ಅದಲ್ಲದೆ, ಅವರು ತಮ್ಮ ಶಿಷ್ಯರಿಂದ ಉನ್ನತ ಗೌರವವನ್ನು ಮತ್ತು ವೈಯಕ್ತಿಕ ಸೇವೆಯನ್ನು ಅಧಿಕಾರ ಪೂರ್ವಕ ಪಡೆಯುತ್ತಾರೆ. ಈ ಸ್ವಾರ್ಥಿಗಳಾದ ವೃತ್ತಿಪರರ ಬಲೆಗೆ ಅಜ್ಞಾನಿ ಜನತೆ ಸುಲಭವಾಗಿ ಬಲಿ ಬೀಳುತ್ತದೆ. ಒಂದು ಪುಟ್ಟ ಪವಾಡ, ಅಥವಾ ಆಕರ್ಷಣೀಯವಾದ ಏನಾದರೊಂದರ ಪ್ರದರ್ಶನ ಇಂಥ ನೂರಾರು ಅಜ್ಞಾನಿ ಕುರಿಗಳನ್ನು ತಮ್ಮ ಗುರುತ್ವದ ತೆಕ್ಕೆಗೆ ಸೆಳೆಯಲು ಸಾಕು. ತಮ್ಮನ್ನು ಅಸಂತುಷ್ಟಗೊಳಿಸುವವರಿಗೆ ಅವರು ತೋರಿಸುವ ಒಂದು ಶಾಪದ ಭಯ, ಸಾವಿರಾರು ಜನರನ್ನು ದೀನ ಶರಣಾಗತಿಗೆ ತಳ್ಳಬಹುದು. ಇಷ್ಟೇ ಅಲ್ಲ, ತಮ್ಮ ವೃತ್ತಿಯ ಏಕಸ್ವಾಮ್ಯವನ್ನು ದೃಢಪಡಿಸಿಕೊಳ್ಳಲು, ಗೃಹಸ್ಥನಾಗಲಿ, ಸಂನ್ಯಾಸಿಯಾಗಲಿ, ತಮ್ಮ ವಿಶಿಷ್ಟ ಜಾತಿಯವನು ಮಾತ್ರವೇ ಗುರುವಾಗುವ ಹಕ್ಕು ಉಳ್ಳವನೆಂದು ಸಾರುತ್ತಾರೆ. ತಮ್ಮ ಸಾಮರ್ಥ್ಯ ಯೋಗ್ಯತೆಗಳು ಏನೇ ಇರಲಿ, ತಮ್ಮ ಜನ್ಮಸಿದ್ಧ ಹಕ್ಕಿನಿಂದಲೇ ತಾವು ಜಗದ್ಗುರು ಗಳೆಂದು ಸಾಧಿಸುತ್ತಾರೆ‌. ಮಹಾತ್ಮರೆಂದು, ತಮಗೆ ತಾವೇ ಹೇಳಿಕೊಳ್ಳುತ್ತಿರುವ ಸಂನ್ಯಾಸಿಗಳನ್ನು ಈ ಕಾಲದಲ್ಲಿ ನೀವು ಗುಂಪು ಗುಂಪಾಗಿ ಕಾಣಬಲ್ಲಿರಿ, ತಮ್ಮ ಸ್ವಾರ್ಥ ಸಾಧನೆಗೋಸ್ಕರ ಅಜ್ಞರನ್ನು ವಂಚಿಸುತ್ತ, ಯಾವ ದಂಡ ಭೀತಿಯಿಲ್ಲದೆ ತಿರುಗಾಡುತ್ತ, ದೇಶಕ್ಕೂ ಧರ್ಮಕ್ಕೂ ನಾಚಿಕೆಯನ್ನುಂಟುಮಾಡುವ ಈ ವೃತ್ತಿಶೀಲ ವಂಚಕರು ಕಾಣ ಸಿಗುವುದು ಶೋಚನೀಯವಲ್ಲವೆ?

ಅಂಥವರಿಂದ ಎಂಥ ಅನಾಹುತ ಸಂಭವಿಸಿದೆಯೆಂದು ನೋಡಲು ಜನತೆ ಕಣ್ಣು ತೆರೆಯುವ ಕಾಲ ಸನ್ನಿಹಿತವಾಗಿದೆ. ಗುರುತ್ವದ ಅಧಿಕಾರವು ವಿಶಿಷ್ಟ ಸವಲತ್ತು ಪಡೆದ ವರ್ಗದ ಏಕಸ್ವಾಮ್ಯವೆಂಬುದು ಅರ್ಥಹೀನವಾದುದು, ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ‘ಗುರು’ಗಳೆಂದೆನಿಸಿಕೊಂಡವರು ಪ್ರಚಾರ ಮಾಡಿದುದು. ಶಿಷ್ಯನಾದವನು ತನ್ನ ಗುರುವಿನ ಸಂಬಂಧವನ್ನು ಯಾವ ಸಂನಿವೇಶದಲ್ಲಿಯೇ ಆಗಲಿ ಕಿತ್ತೊಗೆಯಲಾರನೆಂಬ, ಜನಜನಿತವಾಗಿ ನಂಬಲಾದ ನಿಯಮವು, ತಮ್ಮ ಸ್ಥಾನ ಭದ್ರತೆಗೋಸ್ಕರ ಠಕ್ಕ ಗುರುಗಳು ತಾವೇ ಅನ್ವಯಿಸಿದ ಕುಯುಕ್ತಿಯ ತಂತ್ರವಾಗಿದೆ. ಅದು ಮೋಸವಲ್ಲದೆ ಬೇರೆ ಅಲ್ಲ. ಅನೇಕ ಆಧುನಿಕ ವೃತ್ತಿಶೀಲ ಗುರುಗಳಿಂದ. ಶಿಷ್ಯನಿಗೆ ’ದೀಕ್ಷೆ’ ಕೊಡುವ ಪರಿಪಾಠವೂ ದುರುಪಯೋಗಕ್ಕೆ ಒಳಗಾಗಿದೆ; ಅವರಿಗೆ ಅದರ(ದೀಕ್ಷೆಯ) ನಿಜವಾದ ಮರ್ಮದ ಅರಿವಿಲ್ಲ. ಗುರುವಾಗಿ ಅವರು ಮಾಡುವ ಒಂದೇ ಒಂದು ಕೆಲಸವೆಂದರೆ, ದೀಕ್ಷಾ ಕಾಲದಲ್ಲಿ ಶಿಷ್ಯನ ಕಿವಿಯಲ್ಲಿ ಕೆಲವು ರಹಸ್ಯ ಮಂತ್ರಗಳನ್ನು ಉಸುರಿ, ಪೂಜಾರೂಪದಲ್ಲಿ ಕೆಲವು ಆಡಂಬರದ ಅನುಷ್ಠಾನಗಳನ್ನು ಅನುಸರಿಸುವಂತೆ ಹೇಳುವುದು. ಶಿಷ್ಯನ ಬಗೆಗಿನ ಅವರ ಕರ್ತವ್ಯ ಅಲ್ಲಿಗೆ ಮುಗಿದು ಹೋಗುತ್ತದೆ;  ಪ್ರತಿ ವರ್ಷವೂ ಅವನಿಗೆ ದರ್ಶನ ಕೊಡುವುದು ಮತ್ತು ವಾರ್ಷಿಕ ಕಪ್ಪು ಕಾಣಿಕೆಯನ್ನು ವಸೂಲು ಮಾಡುವುದನ್ನು ಹೊರತುಪಡಿಸಿದರೆ, ಶಿಷ್ಯನ ಪ್ರಗತಿಗಾಗಿ ಅವರು ಮತ್ತೇನೂ ಮಾಡುವುದಿಲ್ಲ. ನಿಜವಾದ ಶ್ರದ್ಧೆ ಶಿಷ್ಯನಲ್ಲಿ ಇದ್ದಾಗ ಮತ್ತು ಅವನ ಹೃದಯದಲ್ಲಿ ದೈವೀ ಪ್ರೇಮವು ಪ್ರಧಾನವಾಗಿ ಬೇರೂರಿದಾಗ ಮಾತ್ರ ಶಿಷ್ಯನಿಗೆ ವಿಧಿಪೂರ್ವಕ ದೀಕ್ಷೆ ಕೊಡಬೇಕು. ’ದೀಕ್ಷೆ’ ಎಂದರೆ ಶಿಷ್ಯನ ಸಂಬಂಧದ ಕೊಂಡಿಯು ಪರಾತ್ಪರ ಶಕ್ತಿಯೊಡನೆ ಜೋಡಿಸಲ್ಪಟ್ಟಿದೆಯೆಂದು ಅರ್ಥ. ಆಗ ಶಿಷ್ಯನು ತನ್ನೊಳಗೆ ಹೀರಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಂಡ ಪ್ರಮಾಣದಲ್ಲಿ  ಆಧ್ಯಾತ್ಮಿಕ ಶಕ್ತಿಯು ಅವನೆಡೆಗೆ ತನ್ನಷ್ಟಕ್ಕೆ ತಾನೇ ಪ್ರವಹಿಸಲು ತೊಡಗುತ್ತದೆ. ಈ ಯೋಗ್ಯ ದೃಢ ಸಂಬಂಧವನ್ನು ಸ್ಥಾಪಿಸುವದು ಗುರುವಿನ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅವಲಂಬಿಸಿದೆ; ಅದಕ್ಕೆ ಅತ್ಯುನ್ನತ ಮಟ್ಟದ ಯೋಗ್ಯತೆಯು ಆವಶ್ಯಕ. ಒಮ್ಮೆ ಈ ದೃಢ ಸಂಬಂಧ ಸ್ಥಾಪಿತವಾಯಿತೆಂದರೆ, ಶಿಷ್ಯನು  ಮುಕ್ತಿ ಸಂಪಾದಿಸುವವರೆಗೂ ಅದು ಮುಂದುವರಿಯುತ್ತದೆ. ಇಂಥ ಸಂದರ್ಭದಲ್ಲಿ ಮುಕ್ತಿಯೆಂಬುದು ಅನೇಕ ಜನ್ಮಗಳ ನಂತರ ಸಿದ್ಧಿಸುವ ದೂರದ ವಿಷಯವಾಗಿ ಉಳಿಯುವುದಿಲ್ಲ. ಮೇಲೆ ಹೇಳಿದಂತೆ, ಉಚ್ಚ ಯೋಗ್ಯತೆಯುಳ್ಳ ಗುರುವಿನಿಂದ ಶಿಷ್ಯನು ನಿಜವಾದ ಅರ್ಥದಲ್ಲಿ  ‘ದೀಕ್ಷೆ’ಹೊಂದಿದ್ದಾದರೆ, ಅದೆಂದಿಗೂ ಕಡಿದುಹೋಗುವ ಪ್ರಶ್ನೆಯೇ ಏಳುವುದಿಲ್ಲ. ಆದರೆ ತಮ್ಮ ಸ್ವಾರ್ಥೋದ್ದೇಶಕ್ಕೊಸ್ಕರ ನಕಲಿ ದೀಕ್ಷೆ ಕೊಡುವ ವೃತ್ತಿಶೀಲ ಗುರುಗಳಿಗೆ ಅದು (ಸಂಬಂಧ ಭಂಗವು)ಒಂದು ನಿರಂತರ ಕಳವಳವಾಗಿರುತ್ತದೆ. ಆದ್ದರಿಂದ, ಶಿಷ್ಯನನ್ನು  ಶಾಶ್ವತವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು, ತಮ್ಮನ್ನು ಬಿಟ್ಟು ಹೋಗುವ ಯೋಚನೆಯನ್ನು ಎಂದಾದರೂ ಮಾಡಿದರೆ ನರಕದ ಸಂಕಟಗಳಿಗೆ ಭಾಜನನಾಗುವನೆಂಬುದು ದೈವಾಜ್ಞೆ ಎಂದು ಅವರು ಘೋಷಿಸುತ್ತಾರೆ. ಅಜ್ಞರು, ತಮ್ಮ ಗುರುಗಳಿಗೆ ಅಸಂತೋಷವುಂಟು ಮಾಡಬಹುದಾದ ಏನನ್ನಾದರೂ ತಾವು ಮಾಡುವೆವೆಂಬ ಯೋಚನೆ ಬಂದ ಮಾತ್ರಕ್ಕೆ ಭಯಕಂಪಿತರಾಗಿ, ಅಂಥ ಘೋಷಣೆಯನ್ನು ವೇದವಾಕ್ಯವೆಂದು ಸ್ವೀಕರಿಸುತ್ತಾರೆ. ಹೀಗೆ, ಅಂಥ ವಿಧೇಯತೆಯಲ್ಲಿ ಅವರ ಎಲ್ಲ ಅಮಾನವೀಯ ಕೃತ್ಯಗಳನ್ನು ತೆಪ್ಪಗೆ ಸಹಿಸಿಕೊಳ್ಳಲು ಹೆಣಗಾಡುತ್ತಾರೆ. ಶಾಸ್ತ್ರಗಳಲ್ಲಿ ಈ ಅರ್ಥ ಕೊಡುವ ಸೂಚನೆ ಎಳ್ಳಷ್ಟಾದರೂ ಇಲ್ಲವೆಂದು ನನಗೆ ಖಾತ್ರಿ ಇದೆ‌. ಅದು ಈ ಧಾರ್ಮಿಕ ಗುರುಗಳ ಚತುರತೆಯಷ್ಟೆ. ತಾನು ಗುರುವಿನ ಆಯ್ಕೆಯನ್ನು ತಪ್ಪಾಗಿ ಮಾಡಿದನೆಂದು ಅಥವಾ ಗುರುವಿನ ಶಕ್ತಿ ಸಾಮರ್ಥ್ಯಗಳನ್ನು ತಪ್ಪಾಗಿ ನಿರ್ಣಯಿಸಿದನೆಂದು ಕಂಡು ಬಂದರೆ, ಯಾವುದೇ ಸಮಯದಲ್ಲಿ ಅಂಥ ಗುರುವನ್ನು ಬಿಟ್ಟುಹೋಗುವುದು ಪ್ರತಿಯೊಬ್ಬನ ಆ ಜನ್ಮ ಹಕ್ಕು ಎಂಬುದು ನನ್ನ ನಿಲುವು‌.ತಾನು ಈಗಾಗಲೇ ಸಂಪಾದಿಸಿರುವ ಸ್ಥಿತಿಗಿಂತ ಆಚೆಗೆ ಕರೆದೊಯ್ಯುವ ಶಕ್ತಿ ತನ್ನ ಗುರುವಿಗೆ ಇಲ್ಲವೆಂದು ಯಾವುದೇ ಹಂತದಲ್ಲಿ ಕಂಡುಬಂದರೆ, ಅವನು ಮತ್ತೊಬ್ಬ ಗುರುವನ್ನು ಹುಡುಕಲು ಸ್ವತಂತ್ರನಿದ್ದಾನೆ. ಇದಕ್ಕೆ ಪ್ರತಿಯಾಗಿ, ಇಂಥ ಸಂದರ್ಭದಲ್ಲಿ, ಶಿಷ್ಯನ ಪ್ರಗತಿ ಕುಂಠಿತವಾಗಬಾರದೆಂದು, ತನಗಿಂತ ಹೆಚ್ಚಿನ ಯೋಗ್ಯತೆಯುಳ್ಳ ಹೆಚ್ಚಿನ ಪ್ರಗತಿ ಸಾಧಿಸಿದ ಗುರುವನ್ನು ಹುಡುಕುವಂತೆ, ಆತ್ಮಸಾಕ್ಷಿ ನಿಷ್ಟನಾದ ಗುರುವು ಶಿಷ್ಯನಿಗೆ ತಾನೇ ನಿರ್ದೇಶಿಸಬೇಕು. ಇದು ನಿಜವಾದ, ನಿಸ್ವಾರ್ಥಿಯಾದ ಗುರುವಿನ ಪವಿತ್ರ ಕರ್ತವ್ಯ. ಶಿಷ್ಯನು ಗುರುವನ್ನು ಬಿಟ್ಟು ಹೋಗಲು ಅನುಮತಿ ಕೇಳಿದಾಗ, ಗುರುವು ತನ್ನ ಸ್ವಾರ್ಥದ ಉದ್ದೇಶಕ್ಕೋಸ್ಕರ ಹೇಗೋ ನಿರಾಕರಿಸಿದರೆ, ಆಗ ಶಿಷ್ಯನು ತತ್ ಕ್ಷಣವೇ ಅವನನ್ನು ಬಿಟ್ಟು, ಬೇರೊಬ್ಬ ಗುರುವನ್ನು ಹುಡುಕಲು ಸ್ವತಂತ್ರ ನಿದ್ದಾನೆ. ಯಾವ ನೈತಿಕ, ಅಥವಾ ಧಾರ್ಮಿಕ ನಿಯಮವೂ ಅವನು ಹಾಗೆ ಮಾಡುವುದನ್ನು ನಿಷೇಧಿಸಲಾರದು.

ತಮ್ಮ ಶಾಸ್ತ್ರ ಗಳ ಮತ್ತಿತರ ಧರ್ಮ ಗ್ರಂಥಗಳ ಜ್ಞಾನದ ಆಧಾರದ ಮೇಲಿಂದ ಉಪದೇಶ ಮಾಡುವವರು ಗುರುವರ್ಗಗಳಲ್ಲಿ ಸ್ವಲ್ಪ ಪ್ರಗತಿ ಹೊಂದಿದವರೆಂದು ಗಣಿಸಲಾಗುತ್ತದೆ. ಅವರು ಸಂಸ್ಥೆಗಳನ್ನು ಆಶ್ರಮಗಳನ್ನೂ ಸ್ಥಾಪಿಸಿ, ಅಲ್ಲಿ ತಮ್ಮ ಅನುಯಾಯಿಗಳ ಮಧ್ಯದಲ್ಲಿ ರಾಜ ಪದವಿಯನ್ನು ಅನುಭವಿಸುತ್ತಾರೆ. ದೊಡ್ಡ ದೊಡ್ಡ ಸಭೆಗಳಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಜನರಿಗೆ ಹೇಳುತ್ತಾರೆ. ಮಾಯೆ, ಜೀವ, ಮತ್ತು ಬ್ರಹ್ಮ ಮುಂತಾದವುಗಳನ್ನು ಕುರಿತ ಸಮಸ್ಸೆಗಳನ್ನು ವಿವರಿಸುತ್ತಾರೆ. ಜನರು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಅವರನ್ನು ಮುತ್ತುತ್ತಾರೆ; ಅವರ ಉನ್ನತ ವಿಚಾರಗಳನ್ನು, ವಿಸ್ತಾರವಾದ ಜ್ಞಾನವನ್ನು ಶ್ಲಾಘಿಸುತ್ತಾರೆ. ಅವರನ್ನು ಮಹಾತ್ಮರೆಂದು ಅಥವಾ ಸಂತರೆಂದು ಗೌರವಿಸುತ್ತಾರೆ. ಅವರು ಅನೇಕ ಜಟಿಲ ಪ್ರಶ್ನೆ ಗಳನ್ನು ಕೇಳುತ್ತಾರೆ. ಅವರು ತಮ್ಮ ಶಾಸ್ತ್ರಜ್ಞಾನದಿಂದ ಅದನ್ನು ಉತ್ತರಿಸಲು ಶಕ್ತರಾದರೆ ಅವರ ‘ಮಹಾತ್ಮ’ರೆಂಬ  ಹಿರಿಮೆ ಜನರ ಮನಸ್ಸಿನಲ್ಲಿ ಸುಸ್ಥಾಪಿತವಾಗುತ್ತದೆ. ಹಾಗೂ ಅವರನ್ನು ಗುರುಗಳೆಂದು ಒಪ್ಪಿಕೊಳ್ಳಲು ಜನರು ಪ್ರೇರೇಪಿತರಾಗುತ್ತಾರೆ. ಆದರೆ ಜನರು ಅವರ ವಿದ್ವತ್ತೆಯನ್ನು ಒರೆಗೆ  ಹಚ್ಚಿದಂತಾಯಿತೇ ಹೊರತು ಅವರ ನಿಜವಾದ ಯೋಗ್ಯತೆಯನ್ನಲ್ಲ. ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುವುದು ಅವರ ವಿದ್ಯೆ ಅಥವಾ ಶಾಸ್ತ್ರ ಜ್ಞಾನವಲ್ಲ. ನಿಜವಾದ ಅರ್ಥದ ಸಾಕ್ಷಾತ್ಕಾರವೊಂದೇ ನಿಜವಾದ ಯೋಗಿಯನ್ನು ಅಥವಾ ಸಂತನನ್ನು ಮಾಡುವುದೆಂಬುದನ್ನು ಚೆನ್ನಾಗಿ ನೆನಪಿನಲ್ಲಿಡಬೇಕು. ಬಾಹ್ಯವೇಷ, ವಿದ್ಯೆ ಅಥವಾ ವಾಗ್ಮಿತೆಯಿಂದ ನಿಮ್ಮನ್ನು ಪ್ರಭಾವಿತಗೊಳಿಸಿದವನು ಪ್ರಾಯೋಗಿಕ ಸಾಧನೆಯ ದೃಷ್ಟಿಯಿಂದ ಅತಿ ಕೆಳಗಿನ ಮಟ್ಟದಲ್ಲಿರಬಹುದು. ಆದ್ದರಿಂದ,  ಜ್ಞಾನವು ನಿಜವಾದ ಮಹಾತ್ಮ ಅಥವಾ ಯೋಗಿಯ  ಒರೆಗಲ್ಲಾಗುವುದಿಲ್ಲ. ಅಂತೆಯೇ ನಿಜವಾದ ಮಹಾತ್ಮನ ಅಥವಾ ಸಂತನ ಪರೀಕ್ಷೆ ಸಾಕ್ಷಾತ್ಕಾರದ ಮಾರ್ಗದಲ್ಲಿಯ ಅವನ ಅನುಭವಗಳೇ ಆಗಬಹುದು‌, ಹೊರತು ಪವಾಡಗಳಲ್ಲ. ದೊಡ್ಡ ವ್ಯಕ್ತಿಯೇ ಮಹಾತ್ಮನೆಂಬ ಜನಪ್ರಿಯ ಅರ್ಥವು ನನ್ನ ಮನಸ್ಸಿಗೆ ಮುಟ್ಟುವುದಿಲ್ಲ. ಮಹಾತ್ಮನೆಂದರೆ, ಸಂಪೂರ್ಣ ಆತ್ಮನಿರಸನದ ಸ್ಥಿತಿಯಲ್ಲಿ ಸದಾಕಾಲ ನೆಲೆಸಿದ್ದು, ದೊಡ್ಡ ತನ, ಜಂಬ, ಅಹಂಕಾರಗಳ ಭಾವನೆಯನ್ನು ಮೀರಿ ನಿಂತ, ಅತ್ಯಂತ ನಗಣ್ಯ ಅಥವಾ ಉಪೇಕ್ಷಿತ(ಕಣ್ಣಿಗೆ ಬೀಳದ)ವ್ಯಕ್ತಿ ಯೆಂದು ನಾನು ವ್ಯಾಖ್ಯೆ ಮಾಡಿಯೇನು.

ಜ್ಞಾನವು ಸಾಕ್ಷಾತ್ಕಾರದ  ಪೂರ್ವ ಸ್ಥಿತಿಯಾದುದರಿಂದ ಅದು ಅಗತ್ಯ ಮತ್ತು ಅಪರಿಹಾರ್ಯವೆಂಬ ಅಭಿಮತ ಹೊಂದಿದವರೂ ಕೆಲವರಿದ್ದಾರೆ. ನಾನು ಅವರೊಡನೆ ಸಮ್ಮತಿಸುವುದಿಲ್ಲ ,ಯಾಕೆಂದರೆ  ಜ್ಞಾನವು ಮಸ್ತಿಷ್ಕದ ಸಿದ್ಧಿ, ಆದರೆ ಸಾಕ್ಷಾತ್ಕಾರವು ಆತ್ಮದ ಜಾಗೃತಿ, ಆದುದರಿಂದ ಜ್ಞಾನದ ಕ್ಷೇತ್ರವನ್ನೂ ಮೀರಿದುದು. ಹಾಗಿರುವುದರಿಂದ, ಧಾರ್ಮಿಕ ಸಿದ್ಧಾಂತಗಳ ಸಿಂಧುತ್ವವನ್ನು  ವಿವರಿಸಬಲ್ಲವನು ಮತ್ತು ವಿಧಿ-ನಿಷೇಧಗಳನ್ನು ಆದೇಶಿಸಬಲ್ಲವನು, ಅಷ್ಟಕ್ಕೇ, ನಿಜವಾದ ಗುರುವೆಂದೆನಿಸಲಾರನು. ನಮಗೆ ಗುರುವಿನಿಂದ ಬೇಕಾದುದು ಆತ್ಮವನ್ನು ಜಾಗ್ರತಗೊಳಿಸಬಲ್ಲ ನಿಜವಾದ ಶಕ್ತಿಯ ಪ್ರೇರಣೆ ಮತ್ತು ಸಾಕ್ಷಾತ್ಕಾರದ ಮಾರ್ಗದಲ್ಲಿ ನಾವು ಕ್ರಮಣ ಮಾಡುವಾಗ ಆತನ ನೇರವಾದ ನೆರವಿನ ಆಧಾರ. ನಾವು ಯಶಸ್ಸಿಗೆ ಗುರಿಯಿಡುವುದಾದರೆ, ಅಂಥ ಮನುಷ್ಯನನ್ನು(ಗುರುವನ್ನು) ನಾವು ಹುಡುಕಬೇಕು. ಯಾರನ್ನಾದರೂ ನಮ್ಮ ಗುರುವೆಂದು ನಿರ್ಣಯಿಸಬೇಕಾದರೆ, ನಾವು ಅವನ ವಿದ್ವತ್ತೆಯನ್ನಲ್ಲ, ಅದರ ಬದಲಿಗೆ, ಸಾಕ್ಷಾತ್ಕಾರದ ಕ್ಷೇತ್ರದಲ್ಲಿ ಅವನ ಪ್ರಾಯೋಗಿಕ ಅನುಭವ, ಸಿದ್ಧಿಗಳನ್ನು ಗಣನೆಗೆ ತೆಗೆದುಕೊಳ್ಳತಕ್ಕದ್ದು ಎಂಬುದು ಇದರಿಂದ ಸ್ಪಷ್ಟ ವಾಗುತ್ತದೆ. ತಾನು ಸ್ವತಃ ಮುಕ್ತನಾಗಿರುವವನೇ ನಿಮ್ಮನ್ನು ಶಾಶ್ವತ ಬಂಧನದಿಂದ ಬಿಡುಗಡೆ ಮಾಡಬಲ್ಲನು. ಸಂಸ್ಕಾರಗಳಿಂದ, ಮಾಯೆ, ಅಹಂಕಾರಗಳಿಂದ ನಿಮ್ಮ ಗುರು ಬಿಡುಗಡೆ ಹೊಂದಿರದಿದ್ದರೆ, ನಿಮ್ಮನ್ನು ಆತನು ಬಂಧನಗಳಿಂದ ಬಿಡುಗಡೆ ಮಾಡುವುದು ಸಾಧ್ಯವಿಲ್ಲ‌.

ಪ್ರಾಣಾಹುತಿ

ನನ್ನ ಗುರುಗಳ ಕೃಪೆಯಿಂದ ನಾನು ಒಂದು ದೊಡ್ಡ ರಹಸ್ಯವನ್ನು ಪ್ರಕಾಶಕ್ಕೆ ತರುವ ಪ್ರಯತ್ನ ಮಾಡುತ್ತೇನೆ;ಆ ರಹಸ್ಯ ಸಾಮಾನ್ಯ ಜನರಿಗೆ ಗೊತ್ತಿಲ್ಲ. ಭಗವಾನ್ ಕೃಷ್ಣ, ಸ್ವಾಮಿ ವಿವೇಕಾನಂದ, ಅಥವಾ ನನ್ನ ಗುರುಗಳಂಥ ಮಹಾವ್ಯಕ್ತಿಯೊಬ್ಬರು ಮಾನವ ಜೀವನದ ಮಾರ್ಗವನ್ನೇ ಸಂಪೂರ್ಣ ಬದಲಾಯಿಸಿದಾಗ ,ಒಂದು ಮಹದಾಶ್ಚರ್ಯವೆನಿಸುತ್ತದೆ. ತನ್ನ ಸಾಮರ್ಥ್ಯದಿಂದ ನಮ್ಮನ್ನು ಮತ್ತೂ ಮೇಲಕ್ಕೆ ಎತ್ತಬಲ್ಲ ಗುರುವನ್ನು ಕಂಡುಕೊಳ್ಳುವುದು ಅತ್ಯಗತ್ಯ. ಈ ರಹಸ್ಯವೇ ‘ಪ್ರಾಣಾಹುತಿ’ ಎಂದು ಕರೆಯಲಾದ ‘ಪ್ರಾಣ ಸಂವಹನ ಶಕ್ತಿ’. ಈ ಶಕ್ತಿಯು ಶುದ್ಧ ಮನಸ್ಸಿನ ಕಾಲುವೆಗಳ ಮೂಲಕ ಕೆಲಸ ಮಾಡುತ್ತದೆ. ಇಚ್ಛಾಶಕ್ತಿ(ಸಂಕಲ್ಪ ಶಕ್ತಿ)ಯ ಮೂಲಕ ಅದನ್ನು ಪ್ರಯೋಗಿಸಲಾಗುತ್ತದೆ; ಅದರ ಪರಿಣಾಮಕಾರಿತ್ವ ಚ್ಯುತಿಯಾಗದಂಥದು. ಆಧ್ಯಾತ್ಮಿಕ ಶಿಕ್ಷಕನು ಅಭ್ಯಾಸಿಯ ಮನಸ್ಸನ್ನು ರೂಪಿಸಲು ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸಿದರೆ ಅದು ಪ್ರಭಾವಶಾಲಿಯಾಗಿರುತ್ತದೆ ಮತ್ತು ಅತ್ಯುತ್ತಮ ಫಲ ನೀಡುತ್ತದೆ. ತಾವು ಕಾವಿ ಬಟ್ಟೆಯನ್ನು ಧರಿಸಿದ ಕೂಡಲೇ ಗುರುವೃತ್ತಿಯನ್ನು ಪ್ರಾರಂಭಿಸುವ ಅನೇಕ ಸ್ವಾಮಿಗಳು ತಮ್ಮ ಶಿಷ್ಯರು ತಮ್ಮ ಉಪದೇಶವನ್ನು ಆಸಕ್ತಿ ಯಿಂದ ಕೇಳಿದರೂ,ನಂತರ ನಾಯಿಯ ಬಾಲದಂತೆ ವಕ್ರವಾಗಿಯೇ ಇರುತ್ತಾರೆಂದು ದೂರುತ್ತಾರೆ. ಕಾರಣ ಸುಸ್ಪಷ್ಟವಿದೆ. ಒಂದೋ ಆ ಸ್ವಾಮಿ ತನ್ನ ಸಂಕಲ್ಪ ಶಕ್ತಿಯನ್ನು ಪ್ರಯೋಗಿಸುವುದಿಲ್ಲ, ಅಥವಾ ಅವನಿಗೆ ಆ ಸಾಮರ್ಥ್ಯವಿಲ್ಲ. ಮೆದುಳಿಗೆ ಕಷ್ಟಕರವಾದ ಅಭ್ಯಾಸಗಳನ್ನು ಶಿಷ್ಯರಿಗೆ ವಿಧಿಸಿ, ಅವರನ್ನು ತಮ್ಮ ಹಣೆಬರಹಕ್ಕೆ ಬಿಟ್ಟುಬಿಡುತ್ತಾರೆ. ಈ  ಅಭ್ಯಾಸಗಳ ಫಲಿತಾಂಶವು ಗುರುವಿಗೂ ಗೊತ್ತಾಗುವುದಿಲ್ಲ. ಶಿಷ್ಯನೂ ತನ್ನ ವಿವೇಕವನ್ನು ಉಪಯೋಗಿಸುವ ಗೋಜಿಗೆ ಹೋಗುವುದಿಲ್ಲ.ಇದರ ಫಲವಾಗಿ, ಶಿಷ್ಯನಲ್ಲಿ ಸ್ಥೂಲತೆ ಮತ್ತು ಭೌದ್ಧಿಕ ಮೌಢ್ಯ ಉಂಟಾಗುತ್ತದೆ. ಮತ್ತು ಉಪದೇಶ ಮಾಡುವ ತಮ್ಮ ಹಕ್ಕಿನ ಅಭಿಮಾನ ಮಾತ್ರ ಹೊಂದಿ, ತಮ್ಮ ಕರ್ತವ್ಯ ,ಬಾ ಧ್ಯತೆಗಳ ಬಗ್ಗೆ ಗಮನವಿಲ್ಲದ ಗುರುಗಳಲ್ಲಿ ಭ್ರಷ್ಟತನ, ಅಧಃಪತನ ಮತ್ತು ನೈತಿಕ ಕ್ಷುದ್ರತೆಗಳು ಬೆಳೆಯುತ್ತವೆ.

ತನ್ನನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಬಯಸುವ ವ್ಯಕ್ತಿಯೇ ಅದಕ್ಕೆ ಕಾರಣನೇ ಹೊರತು ಗುರುವಲ್ಲ, ಗುರುವು ಹೆಸರಿಗೆ ಮಾತ್ರ ಎಂದು ಕೆಲವು ಸಂಶಯಿಗಳು ಹೇಳಬಹುದು. ಭಗವಾನ್ ಕೃಷ್ಣ ನಿಗೆ ಆ ಶಕ್ತಿ ಇದ್ದಿದ್ದರೆ, ಕುರುಕ್ಷೇತ್ರ ಯುದ್ಧ ಕ್ಕೆ ಬದಲಾಗಿ ದುರ್ಯೋದನನ ಹೃದಯ ಪರಿವರ್ತನೆಯನ್ನೇಕೆ ಮಾಡಲಿಲ್ಲ?(ಎಂದೂ ಕೇಳಬಹುದು). ಒಬ್ಬ ಯೋಗ್ಯನನ್ನೋ, ಜಡವಸ್ತುವನ್ನೋ ಗುರುವಾಗಿ ಸ್ವೀಕರಿಸಿ ಮಹಾತ್ಮರಾದವರ ಅನೇಕ ಕಥೆಗಳನ್ನೂ ಅವರು ಉದಾಹರಿಸಬಹುದು. ಆದರೆ ಸತ್ಯವನ್ನು ಕಂಡುಕೊಳ್ಳುವಲ್ಲಿ ನಮಗೆ ಇದು ಬಾಧಕವಾಗುವುದಿಲ್ಲ; ಯಾಕೆಂದರೆ, ದೇವರ ಕಾರ್ಯ ರೀತಿಗಳು ಗಹನವಾಗಿವೆ. ಕೆಲವರು ತಮ್ಮ ಸ್ವಂತ ವಿಚಾರಗಳಿಂದ ಭ್ರಮೆಗೊಳಗಾಗುತ್ತಾರೆ; ಮತ್ತೆ ಕೆಲವರು ದೈವೀಕೃಪೆಯಿಂದ ಬೆಳಕನ್ನು ಪಡೆಯುತ್ತಾರೆ.  ಯೋಗ್ಯನಾದ ಶಿಕ್ಷಕನು, ತನ್ನ ಯೌಗಿಕ ಪ್ರಾಣಾಹುತಿ ಶಕ್ತಿಯಿಂದ ಅಭ್ಯಾಸಿಯ ಮನಸ್ಸಿನ  ಹೀನ ಪ್ರವೃತ್ತಿಗಳನ್ನು ದುರ್ಬಲ ಗೊಳಿಸುತ್ತಾನೆ ಮತ್ತು ಅವನ ಹೃದಯದ ಅಂತರಾಳದಲ್ಲಿ ಪ್ರಕಾಶದ ಬೀಜಾರೋಪಣೆ ಮಾಡುತ್ತಾನೆ. ಈ ಪ್ರಕ್ರಿಯೆಯಲ್ಲಿ ಶಿಕ್ಷಕನು ,ಅನಂತ ದೈವಿಕತೆಯ ಬೆಂಬಲ ಹೊಂದಿದ ತನ್ನ ಸಂಕಲ್ಪ ಶಕ್ತಿಯನ್ನು ಉಪಯೋಗಿಸುತ್ತಾನೆ.  ಒಂದು ರೀತಿಯಲ್ಲಿ, ಅದರ (ಅನಂತವಾದ ದೈವತ್ವದ) ಅರಿವು ಹೊಂದಿದ್ದು, ತನ್ನ ಸತ್ ಸಂಕಲ್ಪದ ಮಸೂರದ(lens) ದ್ವಾರಾ ಅಭ್ಯಾಸಿಯ ಹೃದಯದ ಮೇಲೆ ಕೇಂದ್ರಿತಗೊಳಿಸುತ್ತಾನೆ. ಅಭ್ಯಾಸಿಗೆ ಮೊದ ಮೊದಲು ಏನೂ ಭಾಸವಾಗಲಿಕ್ಕಿಲ್ಲ. ಪ್ರತಿಯೊಂದನ್ನೂ ಇಂದ್ರಿಯಗಳ ಮೂಲಕವೇ ತಿಳಿಯುವುದು ಅವನಿಗೆ ರೂಢಿಗತವಾಗಿರುವುದೇ ಇದಕ್ಕೆ ಕಾರಣ. ಆದರೂ, ಕೆಲ ಕಾಲಾನಂತರ ಅವನಿಗೆ ಪ್ರಾಣಾಹುತಿಯ  ಪರಿಣಾಮಗಳು ಅನುಭವಕ್ಕೆ ಬರಬಹುದು; ಅವು ಅವನ ಚಿತ್ತ ವೃತ್ತಿಗಳ ಮತ್ತು ಪ್ರಾಣಮಯ ಭಾಗ(ಅಂಗ)ಗಳ ಕಾರ್ಯ ರೀತಿಗಳಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳ ಸ್ವರೂಪದ್ದಾಗಿರುತ್ತವೆ.

 

ನಮ್ಮ ಪ್ರಾಚೀನ ಋಷಿಗಳಿಂದ  ಪ್ರಾರಂಭಿಸಲ್ಪಟ್ಟು, ವ್ಯಾಪಕವಾಗಿ ಬಳಕೆಯಲ್ಲಿದ್ದ ಈ ಪ್ರಾಣಾಹುತಿ ಪದ್ಧತಿ ಈಗ, ತಾನು ಹುಟ್ಟಿದ ದೇಶದಲ್ಲಿಯೇ ಸಂಪೂರ್ಣವಾಗಿ ಮರೆವಿನಲ್ಲಿ ಸಂದು ಹೋಗಿದೆ; ಕೇವಲ ಕೆಲವೇ ಜನರು ಇದನ್ನು ನಂಬುವ ಒಲವು ತೋರಿಸುತ್ತಾರೆ ಎಂಬುದು ಬಹಳೇ ವಿಷಾದನೀಯ ಮತ್ತು ಮರುಕ ಹುಟ್ಟಿಸುವ ಸಂಗತಿಯಾಗಿದೆ. ಕೆಲವರು‌ ಇದು ಸಮ್ಮೋಹನ ವಿದ್ಯೆ ಅಥವಾ ವಶೀಕರಣ ವಿದ್ಯೆಯಲ್ಲದೆ ಬೇರೇನೂ ಅಲ್ಲವೆಂದು ತಪ್ಪಾಗಿ ಅರ್ಥೈಸಿ ಅಪಹಾಸ್ಯ ಮಾಡಲು ಪ್ರಯತ್ನಿಸುತ್ತಾರೆ. ವಶೀಕರಣ ಅಥವಾ ಸಮೋಹನ ವಿದ್ಯೆಯ ಪರಿಣಾಮ ಪ್ರಾಣಾಹುತಿಯದಕ್ಕೆ ವಿರುದ್ಧವಾದುದು. ಆ ಕ್ಷುದ್ರ ವಿದ್ಯೆಗಳಲ್ಲಿ ಸಂಮೋಹನ ಮಾಡುವವನು ಭೌತಿಕ ಶಕ್ತಿಯ ಬೆಂಬಲದಿಂದ ತನ್ನ ಇಚ್ಛಾಶಕ್ತಿ ಯನ್ನು ಉಪಯೋಗಿಸುತ್ತಾನೆ.  ಸಂಮೋಹನದ ಪರವಶತೆಯಿಂದ  ಎಚ್ಚತ್ತ ಮೇಲೆ , ಅದಕ್ಕೊಳಗಾದ ವ್ಯಕ್ತಿಯ ಸಂಕಲ್ಪ ಶಕ್ತಿಯು ದುರ್ಬಲಗೊಳ್ಳುತ್ತದೆ. ಮತ್ತು, ಮಂಕಾಗಿ, ಹೃದಯದಲ್ಲಿ ಭಾರವನ್ನು ಅನುಭವಿಸುತ್ತಾನೆ. ಒಂದು ರೋಗವನ್ನೋ ಅಥವಾ ಒಂದು ಅಲ್ಪ ಮನಃಪ್ರವೃತ್ತಿಯನ್ನೋ ಕೆಲಮಟ್ಟಿಗೆ ಅದುಮಿಡಬಹುದು; ಅದು ಸಂಮೋಹನ ಮಾಡುವವನ ಶಕ್ತಿ ಯನ್ನೂ ಮತ್ತು ಅದಕ್ಕೊಳಗಾಗುವವನು ತನ್ನನ್ನು ಒಪ್ಪಿಸಿಕೊಳ್ಳುವ ನಮ್ಯತೆಯನ್ನು ಅವಲಂಬಿಸಿದೆ. ಆದರೆ ಅದರ ಪರಿಣಾಮ ಬಹಳ ಕಾಲ ಉಳಿಯುವುದಿಲ್ಲ. ಚಿತ್ತೈಕಾಗ್ರತೆಯನ್ನು ಭೌತಿಕ ವಸ್ತು ಅಥವಾ ಮಾನಸಿಕ ಪ್ರತಿಮೆಗಳನ್ನು ಉಪಯೋಗಿಸಿ, ತೀವ್ರ ಮಾನಸಿಕ ಮತ್ತು ದೈಹಿಕ ಅಭ್ಯಾಸ ಮಾಡುವದರಿಂದ ಸಂಮೋಹನ ಶಕ್ತಿಯು ವೃದ್ಧಿ ಹೊಂದುತ್ತದೆ. ಈ ಅಭ್ಯಾಸಗಳು ಹೆಚ್ಚು ವೇಳೆ,  ಮಾನಸಿಕ ವಿಕಾರ ಅಥವಾ ಚಿತ್ತಭ್ರಮಣೆಗೆ ದಾರಿಯಾಗುತ್ತವೆ; ಕೆಲವೊಮ್ಮೆ ದೈಹಿಕ ವಿಕಾರದಲ್ಲೂ ಪರಿಣಮಿಸುತ್ತದೆ. ಇದರ ಯಶಸ್ವೀ ಅಭ್ಯಾಸವು ಹೆಚ್ಚೆಂದರೆ, ಯಾವುದೋ ಭೌತಿಕ ಶಕ್ತಿ ಯ ಪ್ರಾಪ್ತಿಯಲ್ಲಿ ಫಲಿಸಬಹುದು. ಅದು ಇರುವವರೆಗೆ ಮಾತ್ರ ಕೆಲವೊಂದು ತರದ ಇಚ್ಛಾ ಸಂತೃಪ್ತಿಗಷ್ಟೇ ಉಪಯುಕ್ತ ವಾಗಿರುವುದು ಮತ್ತು ಅಷ್ಟಕ್ಕೆ ಪರಿಮಿತವಾಗಿರುವುದು.

ಉನ್ನತ ಸ್ಥಿತಿಗಳನ್ನು ಪಡೆದುಕೊಳ್ಳುವ ಆಧ್ಯಾತ್ಮಿಕ ಶಿಕ್ಷಣವು ಪ್ರಾಣಾಹುತಿಯ ಮೂಲಕ ಮಾತ್ರವೇ ಸಾಧ್ಯವೆಂದೂ, ಇನ್ನಾವೂದೇ ಉಪಾಯದ ಮೂಲಕ ಸಾಧ್ಯವಿಲ್ಲವೆಂದೂ ನಾನು ನಿಮಗೆ ಖಂಡಿತವಾಗಿ ಹೇಳಬಲ್ಲೆ. ಆಧುನಿಕ  ವಿದ್ಯಾವಂತರ ಸಮಾಜದಲ್ಲಿ, ಆಗಾಗ್ಗೆ ಈ ಪದ್ಧತಿಯ ಪ್ರಸ್ತಾಪ ಬಂದು, ಕೆಲವು ಧಾರ್ಮಿಕ ಗುರುಗಳು ಈ ದಿಶೆಯಲ್ಲಿ ತಮ್ಮ ಅಸಾಮರ್ಥ್ಯವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ, ಪ್ರಾಣಾಹುತಿಯಲ್ಲಿ ವಿಶೇಷವೇನೂ ಇಲ್ಲವೆಂದು ವ್ಯಾಖ್ಯಾನ ಮಾಡುವುದಕ್ಕೆ ಎಡೆ ಮಾಡಿಕೊಟ್ಟಿದೆ. ನೀವು ಒಬ್ಬ ಮಹಾತ್ಮ ಅಥವಾ ಸಂತನ ಸಹವಾಸದಲ್ಲಿದ್ದಾಗ, ಸಾಮಾನ್ಯವಾಗಿ ನಿಮ್ಮನ್ನು ಕದಡುವ ವಿಚಾರಗಳಿಂದ ಬಿಡುಗಡೆಯನ್ನೂ, ಕೆಲ ಕಾಲ ಶಾಂತಿಯನ್ನೂ ಅನುಭವಿಸುತ್ತೀರಿ. ಇದು ಆ ಮಹಾತ್ಮನ ಪ್ರಾಣಾಹುತಿಯ ಪರಿಣಾಮವೆಂದು ಅವರು ಸಾಧಿಸುತ್ತಾರೆ. ತಮ್ಮ ಅಸಾಮರ್ಥ್ಯವನ್ನು ಮುಚ್ಚಿ ಕೊಳ್ಳುವ ಉದ್ದೇಶದಿಂದ ಈ ರೀತಿ ವಿವರಣೆಯನ್ನು ಕೊಡುವವರು ಜನತೆಯನ್ನು ಮೋಸ ಮಾಡುತ್ತಿರುವರೆಂದೇ ಅರ್ಥ. ಅವರು ಪ್ರಾಣಾಹುತಿ ಎಂದು  ವಿವರಿಸುವ ವಸ್ತು ನಿಜವಾಗಿ ಆ ಮಹಾತ್ಮನಿಂದಾಗಿಗುವ   ಪವಿತ್ರ ಪರಮಾಣು(ಕಣ)ಗಳ ಸ್ವಯಂ ವಿಕಿರಣ. ಅದು ಅಲ್ಲಿ ಪರಿಣಾಮವಾಗಿ, ಅವರು ಅಲ್ಲಿರುವವರೆಗೆ ಶಾಂತತೆ ಪರಿಸುವಂತೆ ಮಾಡುತ್ತದೆ. ಇದೊಂದು ಸ್ವಾಭಾವಿಕ ಕ್ರಿಯೆ. ಇದಕ್ಕೂ ಪ್ರಾಣಾಹುತಿಗೂ ಸಂಬಂಧವಿಲ್ಲ. ಹಾಗೆ, ಪರಮಾಣುಗಳು ವಿಕಿರಣಗೊಳ್ಳುವುದು ಕೇವಲ ಸಂತ ಅಥವಾ  ಮಹಾತ್ಮರಿಂದಷ್ಟೇ ಅಲ್ಲ, ಧಾರ್ಮಿಕ ನಿರಲಿ, ದುಷ್ಟ ನಿರಲಿ, ಸಂತನಿರಲಿ ,ಅಸುರನಂತಿರಲಿ, ಯಾರೊಬ್ಬರಿಂದಲೂ ಪಸರಿಸುತ್ತವೆ. ಆ ಧಾರ್ಮಿಕ ಅಥವಾ ನೈತಿಕ ಅಧಃಪತನ ಹೊಂದಿದ  ಮನುಷ್ಯನ  ಸಂಗಡ ಕೆಲ ಕಾಲವಿದ್ದರೆ, ಅವನಿಂದ ದುಷ್ಟ ಪರಮಾಣುಗಳು ಪಸರಿಸಿ ನಿಮ್ಮ ಮೇಲೆ ಪ್ರಭಾವ  ಬೀರುವುದನ್ನು ನೀವು ಕಾಣುವಿರಿ; ಅದರ ಪರಿಣಾಮವಾಗಿ ,ಕೆಲ ಕಾಲ ನಿಮ್ಮ ವಿಚಾರಗಳೂ   ಅದೇ ಜಾಡಿನಲ್ಲಿ ಹರಿಯುತ್ತವೆ. ಇಂಥ ವಿಕಿರಣದ ಪರಿಣಾಮ ಅಲ್ಪ ಕಾಲವಿದ್ದು, ನೀವು ಅಲ್ಲಿಂದ ದೂರವಾದಾಗ ಮಾಯವಾಗುತ್ತದೆ. ತಾವು ಉಪದೇಶಿಸುವುದನ್ನು  ಜನರು ಅನುಸರಿಸಲು  ಉದಾಸೀನ  ಮಾಡುತ್ತಾರೆಂದು  ಧಾರ್ಮಿಕ ಗುರುಗಳು  ಗೊಣಗುವುದಕ್ಕೆ ಇದೇ ಕಾರಣ. ತಮ್ಮ ಉಪದೇಶವನ್ನು  ಕೇಳಿದ ನಂತರ ಹಿಂದುರಿಗಿ ಹೋಗುವಾಗ  ಅದನ್ನು ಜನರು  ಆಗಲೇ ಎಸೆದು ಬಿಟ್ಟು, ತಮ್ಮ ಮನಸ್ಸಿನಲ್ಲಿ ಏನನ್ನೂ ಉಳಿಸಿಕೊಳ್ಳುವುದೇ ಇಲ್ಲ ಎಂದು ಅವರು ಹೇಳುತ್ತಾರೆ. ಈ ವಿಷಯದಲ್ಲಿ ದೂಷಿಸಬೇಕಾಗಿರುವುದು ಜನರನ್ನಲ್ಲ, ಆ ಉಪದೇಶಕರನ್ನು ಎಂದು ನನಗೆ ಅನಿಸುತ್ತಿದೆ. ಯಾಕೆಂದರೆ ತಾವು ವೇದಿಕೆಯ ಮೇಲಿಂದ ಮಾಡುವ ಉಪದೇಶವನ್ನು ಜನರಿಗೆ ಪ್ರಾಣಾಹುತಿಯ ಮೂಲಕ  ಮುಟ್ಟಿಸಲು ಅವರಿಗೆ ಶಕ್ತಿಯಿಲ್ಲ. ಆದರೆ , ಪ್ರಾಣಾಹುತಿ ಶಕ್ತಿಯು ಉನ್ನತ ಮಟ್ಟದ ಯೌಗಿಕ ಸಿದ್ಧಿ. ಇದರ ಮೂಲಕ, ಯೋಗಿಯಾದವನು ತನ್ನ ಸಂಕಲ್ಪ ಶಕ್ತಿ ಯ ಮೂಲಕ  ಯಾರಲ್ಲಿಯೇ ಆಗಲಿ ಯೋಗಶಕ್ತಿ ಯನ್ನು ಅಥವಾ ದೈವೀ ಪ್ರಭೆಯನ್ನು ತುಂಬಬಹುದು, ಮತ್ತು ಆಧ್ಯಾತ್ಮಿಕ ಪ್ರಗತಿಗೆ ಹಾನಿಕಾರಕವಾದುದನ್ನು ಅಥವಾ ಅನಿಷ್ಟವಾದುದನ್ನು ತೆಗೆದು ಹಾಕಬಹುದು. ಅವನು ಈ ಶಕ್ತಿಯನ್ನು  ತನ್ನ ಸುತ್ತ ಸೇರಿರುವವರ ಮೇಲಷ್ಟೇ ಅಲ್ಲ, ದೂರದಲ್ಲಿರುವವರ ಮೇಲೆಯೂ ಬೀರಬಲ್ಲನು. ಯಾವಾಗಲೇ ಆಗಲಿ,ಯಾವ ರೀತಿಯಲ್ಲಿಯೇ ಆಗಲಿ ಈ ಶಕ್ತಿಯನ್ನು ಉಪಯೋಗಿಸಬಹುದು‌. ಈ ಶಕ್ತಿಯ ಮೇಲೆ ಪ್ರಭುತ್ವ ಪಡೆದವನು, ತನ್ನ ಒಂದು ಕಟಾಕ್ಷದಿಂದ, ಅಭ್ಯಾಸಿಯು ಸದ್ಯ ಇರುವ ಸ್ಥಿತಿಗಿಂತಲೂ ಬಹಳ ಮುಂದಿನ ಸ್ಥಿತಿಯನ್ನು  ತಾತ್ಕಾಲಿಕವಾಗಿಯಾಗಲಿ, ಶಾಶ್ವತವಾಗಿಯಾಗಲಿ ಉಂಟಾಗುವಂತೆ  ಮಾಡಬಲ್ಲನು. ಈ ರೀತಿಯಲ್ಲಲ್ಲದೆ, ಬೇರೆ ರೀತಿಯಲ್ಲಿ ಅದನ್ನು ಸಾಧಿಸಲು  ಇಡೀ ಜೀವಮಾನ ಸಾಲುತ್ತಿರಲಿಲ್ಲ. ಇದು ಜಂಬದ ಮಾತಲ್ಲ; ನಗ್ನ ಸತ್ಯ. ಮತ್ತು, ಯಾರೇ ಆಗಲಿ, ಹಾಗೆ ಬಯಸುವುದಾದರೆ, ಪ್ರತ್ಯಕ್ಷ ಪ್ರಯೋಗದ  ಮೂಲಕ ಪರೀಕ್ಷಿಸಿ ದೃಢಪಡಿಸಿಕೊಳ್ಳಬಹುದು. ಪ್ರಾಣಾಹುತಿ ಶಕ್ತಿಯ ಮೂಲಕ ಅನೇಕ ವೇಳೆ ಸಂತರು ದೃಷ್ಟಿ ಮಾತ್ರದಿಂದ ಮನುಷ್ಯನ ಸಂಪೂರ್ಣ ಸ್ವಭಾವವನ್ನು ಪರಿವರ್ತನೆ ಮಾಡಿರುತ್ತಾರೆ. ನನ್ನ ಗುರುಗಳಾದ ಫತೇಗಡದ ಸಮರ್ಥ ಗುರು ಮಹಾತ್ಮಾ ರಾಮಚಂದ್ರಜೀ ಮಹಾರಾಜ, ಸ್ವಾಮಿ ವಿವೇಕಾನಂದ ಮುಂತಾದ ಸಂತರ ಆಶ್ಚರ್ಯಕರ  ಉದಾಹರಣೆಗಳು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ನೀಡುತ್ತವೆ‌.

ನಾನು ಅನೇಕ ಸಂಸ್ಥೆಗಳ ಮುಖ್ಯಸ್ಥರನ್ನು  ಭೇಟಿ ಮಾಡಿದ್ದೇನೆ. ಆ ಎಲ್ಲ ಕಡೆಗಳಲ್ಲಿಯೂ ‘ಪ್ರಾಣಾಹುತಿ’ಯು ಇಲ್ಲದಿರುವುದನ್ನು ಕಂಡಿದ್ದೇನೆ; ಎಷ್ಟರಮಟ್ಟಿಗೆಂದರೆ, ಅವರಲ್ಲಿ ಅನೇಕರಿಗೆ ಅದು ತೀರ ಪರಕೀಯ (ಅಪರಿಚಿತ)ವಾಗಿದೆ. ಸ್ವಾಮಿವಿವೇಕಾನಂದರಿಗೆ ನಿಃಸಂಶಯವಾಗಿ ಆ ಶಕ್ತಿಯಿತ್ತು. ಆದರೆ ಅಂಥ ವ್ಯಕ್ತಿಗಳು ಯಾವಾಗಲೂ ವಿರಳ. ನನ್ನ ಪೂಜ್ಯ ಗುರುವಿನಂಥ  ವ್ಯಕ್ತಿಗಳು ಆಕಸ್ಮಿಕವಾಗಿ ಜನಿಸಿ ಬರುವಂಥವರಲ್ಲ.

ನಿಜಕ್ಕೂ ನಾವೆಲ್ಲರೂ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದು ಗುರುವಿನ ಮನೆಯ ಮುಂದೆ ನಿಂತ  ಭಿಕ್ಷುಕರಂತಿದ್ದೇವೆ. ಅದನ್ನು ಗುರುವು ಶೀಘ್ರ ತುಂಬಿ ಕೊಡುತ್ತಾನೆ. ಆದರೆ ಆಧ್ಯಾತ್ಮಿಕ ವಿಷಯಗಳಿಗೆ ವ್ಯತಿರಿಕ್ತವಾದ ವಸ್ತುಗಳಿಂದಲೇ ಆ ಪಾತ್ರೆ ತುಂಬಿರುವಾಗ ಆತನಿಂದ ಏನನ್ನಾದರೂ ಪಡೆಯುವ ಪ್ರಶ್ನೆಯೇ ಏಳುವುದಿಲ್ಲ; ಯಾಕೆಂದರೆ, ಏನನ್ನಾದರೂ ಸುರಿದರೆ, ಅದು ಕೂಡಲೇ ಹೊರಕ್ಕೆ ಚೆಲ್ಲುತ್ತದೆ. ಆದುದರಿಂದ, ಭಿಕ್ಷಾ ಪಾತ್ರೆಯು ಗುರು ಕೃಪೆಯಿಂದ ತುಂಬಿಕೊಳ್ಳುವಂತಾಗಲು, ಅದನ್ನು ಬರಿದು ಮಾಡಿಕೊಳ್ಳುವುದು ನಾವು ಮಾಡತಕ್ಕ ಪ್ರಾಥಮಿಕ ಕಾರ್ಯ.