ಸಾಕ್ಷಾತ್ಕಾರದ ಮಾರ್ಗದಲ್ಲಿಯ ಹಂತಗಳು

ಜೀವನದ  ಚರಮ ಧ್ಯೇಯ ಅಥವಾ ಗಂತವ್ಯದ ಅಂತಿಮ ಬಿಂದು. ಸಂಪೂರ್ಣ ಲಯಾವಸ್ಥೆ, ಆತ್ಮನಿರಸನ ಅಥವಾ ಶೂನ್ಯತೆ. ಅದನ್ನೇ ನಾನು  ಈ ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ.

ಕೇಂದ್ರದ  ಸುತ್ತಲೂ ಇರುವ ಏಕೇಂದ್ರೀಯ ವೃತ್ತಗಳು  ನಮ್ಮ ಪ್ರಗತಿ ಮಾರ್ಗದಲ್ಲಿ ಹಾದು ಹೋಗಬೇಕಾದ ವಿವಿಧ ಆಧ್ಯಾತ್ಮಿಕ ವಲಯಗಳನ್ನು ಸ್ಥೂಲವಾಗಿ ಸೂಚಿಸುತ್ತವೆ. ಅತ್ಯಂತ ಹೊರಗಿರುವ ವೃತ್ತದಿಂದ  ನಮ್ಮ  ಪ್ರಯಾಣವನ್ನಾರಂಭಿಸಿ ಒಂದೊಂದೇ  ವೃತ್ತವನ್ನು ದಾಟಿ  ಮುಂದಿನ ಹಂತ ತಲುಪುತ್ತ ನಾವು ಕೇಂದ್ರದತ್ತ  ಸಾಗುತ್ತೇವೆ. ಅದು ಅಪಾರ ವಿಸ್ತಾರದ ಪ್ರದೇಶ.

ಜೀವ ಕೇಂದ್ರವಾದ ಹೃದಯದಿಂದ  ನಾವು ಧ್ಯಾನವನ್ನು ಆರಂಭಿಸಿ ಗುರಿ ಮುಟ್ಟುವವರೆಗೂ ಮುಂದುವರಿಯುತ್ತೇವೆ. ನಮ್ಮ ಯಾತ್ರಾ ಕಾಲದಲ್ಲಿ ಹಾದು ಹೋಗಬೇಕಾದ  ಐದು ಬಿಂದುಗಳು ಅಥವಾ ಉಪಕೇಂದ್ರಗಳು ಈ ಹೃದಯ ಮಂಡಲದಲ್ಲಿವೆ. ಪ್ರತಿಯೊಂದು ಬಿಂದುವಿನಲ್ಲಿಯೂ ಕೆಳಗೆ ಕೊಡಲಾದ , ನಾಲ್ಕು ಸ್ಥಿತಿಗಳು, ಈ ಕ್ರಮದಲ್ಲಿ ಅನುಭವಕ್ಕೆ ಬರುತ್ತವೆ.

  1. ಎಲ್ಲೆಲ್ಲೂ ವಿಚಿತ್ರ ಸ್ಥಿತಿ, ದೈವೀ ಶಕ್ತಿಯು ಎಲ್ಲೆಡೆ ವ್ಯಾಪಿಸಿರುವುದರ ಅರಿವು ಮನಸ್ಸಿನಲ್ಲಿ ಜಾಗ್ರತವಾಗುವುದು.
  2. ಅದರ ಸ್ಮರಣೆಯಲ್ಲಿಯೇ ಮಗ್ನವಾದ ದೈವೀ ಸ್ಥಿತಿ ಸರ್ವತ್ರ ವ್ಯಾಪಿಸಿದಂತಿರುವುದು‌.
  3. ದೈವೀ ಶಕ್ತಿಯ  ಅನುಭವವೂ ಇಲ್ಲ‌ ಸ್ಮರಣೆಯೂ ಇಲ್ಲ, ಆದರೆ ಒಂದು ರೀತಿಯ ಶೂನ್ಯಾನುಭವ ಮಾತ್ರ.
  4. ಎಲ್ಲವೂ ಮರೆಯಾಗಿ ಹೋದಂತೆ. ಹೃದಯದ ಮೇಲೆ ಯಾವ ಸಂಸ್ಕಾರವೂ ಇಲ್ಲ ,ಅಸ್ತಿತ್ವದ್ದೂ ಕೂಡ ಇಲ್ಲ.

ಈ ನಾಲ್ಕು ಸ್ಥಿತಿಗಳು ಪ್ರತಿಯೊಂದು ಮಂಡಲದಲ್ಲಿಯೂ, ಪ್ರತಿಯೊಂದು ಬಿಂದುವಿನಲ್ಲಿಯೂ ಅನುಭವಕ್ಕೆ ಬರುತ್ತವೆ. ಸಹಜಮಾರ್ಗ ಪದ್ಧತಿಯ ಆಧ್ಯಾತ್ಮಿಕ ಶಿಕ್ಷಣದಲ್ಲಿ  ಪ್ರತಿಯೊಬ್ಬನೂ  ಅವುಗಳನ್ನು ಹಾದು ಹೋಗುತ್ತಾನೆ. ಆದರೆ, ಬಹುಶಃ ಹೆಚ್ಚು ಸೂಕ್ಷ್ಮ ಗ್ರಾಹಿಗಳು ಮಾತ್ರ ಎಲ್ಲ ಸ್ಥಿತಿಗಳನ್ನು ವಿವರವಾಗಿ ಅನುಭವಪಡಲು ಶಕ್ತರಾಗುತ್ತಾರೆ. ಅತ್ಯಂತ ಕೆಳಗಿನ ಬಿಂದುವಿನಿಂದ, ಅತ್ಯುಚ್ಚ ಬಿಂದುವಿನವರೆಗೆ, ನಾವು ಬೇರೆ ಬೇರೆ ಬಿಂದುಗಳನ್ನು ಹಾದು ಮುಂದುವರಿದಂತೆಲ್ಲ ಈ ಸ್ಥಿತಿಗಳು ಹೆಚ್ಚು ಹೆಚ್ಚು ಸೂಕ್ಷ್ಮ ತರವಾಗುತ್ತ ಹೋಗುತ್ತವೆ.

ನಾವು ಐದನೆಯ ಬಿಂದುವನ್ನು ದಾಟಿದಾಗ ಆಜ್ಞಾ ಚಕ್ರದತ್ತ ನಮ್ಮ ದಾರಿ ನೇರವಾಗುತ್ತದೆ. ಈ ಬಿಂದುವಿನಲ್ಲಿಯ ಸ್ಥಿತಿ ವಿಚಿತ್ರವಾಗಿದೆ. ನಾವು ಹೀರಿಕೊಳ್ಳುವ ಶಕ್ತಿ ಈ ಬಿಂದುವಿನಿಂದ ಕೆಳಗಿನ  ವಲಯಗಳತ್ತ ಹೊರಳಿಸಲ್ಪಡುತ್ತದೆ. ಯಾತ್ರೆಯಲ್ಲಿ ಈ ಬಿಂದುವಿನಲ್ಲಿ ಬರುವ ಸಮಯದಲ್ಲಿ ಮಸಕು ಮಸಕಾದ ಕತ್ತಲೆಯಂಥ ಏನೋ ಒಂದು ಸ್ಥಿತಿ ಅಭ್ಯಾಸಿಯ ಅನುಭವಕ್ಕೆ ಬರುತ್ತದೆ. ಇದು ನಾವು ಅಂತಿಮವಾಗಿ ಬೆಳಕನ್ನೂ ದಾಟಿ ಆಚೆಗೆ ಹೋಗಬೇಕೆಂದು ತೋರಿಸುವ ಸುಳುಹು ಮಾತ್ರ ,ಅದರ ನಿಜವಾದ ಸ್ವರೂಪವು  ಬೆಳಕಿಗಾಗಲಿ, ಕತ್ತಲೆಗಾಗಲಿ ಸಂಬಂಧಿಸಿದೆ, ಉಷಃ ಕಾಲವರ್ಣದಂತಹುದಕ್ಕೆ ಸಂಬಂಧಿಸಿದೆ.

ಹೃದಯ ಮಂಡಲದ ಐದನೆಯ  ವೃತ್ತವನ್ನು ದಾಟಿದ ಮೇಲೆ ಅಭ್ಯಾಸಿಯು ಮನೋಮಂಡಲವನ್ನು ಪ್ರವೇಶಿಸುತ್ತಾನೆ. ಈ ಮಂಡಲದ  ಹನ್ನೊಂದು ವೃತ್ತಗಳು ಅಹಂಕಾರದ ವಿವಿಧ ಸ್ತರಗಳನ್ನು ಚಿತ್ರಿಸುತ್ತವೆ. ಅವುಗಳ ಮೂಲಕ ಮುಂದುವರಿದಂತೆಲ್ಲ, ಸ್ಥಿತಿಯು ಸೂಕ್ಷ್ಮವೂ ,ನವುರೂ ಆಗಿರುತ್ತದೆ. ಈ ಪ್ರತಿಯೊಂದು ವೃತ್ತದಲ್ಲಿಯೂ ಅಸಂಖ್ಯ ಬಿಂದುಗಳು ಮತ್ತು ಗ್ರಂಥಿಗಳು ಇವೆ. ಈ ಅದ್ಭುತ ಪ್ರಾಣಾಹುತಿಯ ಯೌಗಿಕ ಪ್ರಕ್ರಿಯೆಯೊಂದಿಲ್ಲದಿದ್ದರೆ, ಒಂದು ಬಿಂದುವಿನಿಂದ ಇನ್ನೊಂದಕ್ಕೆ ಸಾಗಲು ಇಡೀ ಜೀವಮಾನವೇ ಬೇಕಾಗುತ್ತದೆ.

ನಾವು ಹದಿನಾರನೆಯ ವೃತ್ತವನ್ನು ತಲುಪುವ ಹೊತ್ತಿಗೆ, ಅಹಂಕಾರದಿಂದ ಬಹುತೇಕ ಬಿಡುಗಡೆ ಪಡೆದಂತಾಗುವುದು‌. ದೊಡ್ಡ -ದೊಡ್ಡ ಋಷಿಗಳಲ್ಲಿಯೂ  ಈ ಸ್ಥಿತಿ ಯನ್ನು ಪಡೆದವರು ಅಪರೂಪವೇ ಸರಿ. ಮಾನವ ಪಡೆಯಬಹುದಾದ ಎಲ್ಲೆಯ ಆಚೆಯ ಹಂತವನ್ನು ಮುಟ್ಟಿದ ನಮ್ಮ ಗುರು ಮಹಾರಾಜ(ಲಾಲಾಜಿ)ರನ್ನು ಬಿಟ್ಟರೆ, ಹದಿನಾರನೆಯ ವೃತ್ತವನ್ನು ಮುಟ್ಟಿರ ಬಹುದಾದವರಲ್ಲಿ ಕಬೀರನ ಹೊರತು ಇನ್ನಾರನ್ನೂ ನಾನು ಕಾಣೆ. ಈ ವೃತ್ತದ ನಂತರ, ಇನ್ನೂ ಸ್ಥೂಲ ರೂಪದಲ್ಲಿರುವ ಸಾರೂಪ್ಯತೆ ಮಾತ್ರವೇ ಉಳಿಯುವುದು.

ಈ  ಬಿಂದುವಿಗೆ ತಲುಪುವ  ಮೊದಲು ನಾವು ಸಹಸ್ರದಳ  ಕಮಲದ  ವಿರಾಟ್  ಮಂಡಲವನ್ನು ಹಾದು ಹೋಗುತ್ತೇವೆ.  ಮಹಾಭಾರತ ಯುದ್ಧದ ಸಮಯದಲ್ಲಿ, ವಿರಾಟ್ ರೂಪವು ಅರ್ಜುನನಿಗೆ ಗೋಚರವಾಗುವಂತೆ ಮಾಡಿರುವುದು ಈ ಮಂಡಲದಿಂದಲೇ. ಅದು ಬ್ರಹ್ಮಾಂಡ. ಇಲ್ಲಿ ನಾವು ಸ್ವಲ್ಪ ಮಟ್ಟಿಗೆ ಬ್ರಹ್ಮಗತಿ ಅಥವಾ ದೈವೀಸ್ತರವೆಂದು ಕರೆಯಬಹುದಾದ ಅಪರಿವರ್ತನೀಯ ಸ್ಥಿತಿಯನ್ನು ಅನುಭವಪಡಲಾರಂಭಿಸುತ್ತೇವೆ. ಈ ಯಾತ್ರೆಯ  ಅವಧಿಯಲ್ಲಿ ವಿಶಿಷ್ಟ ಸ್ಥಿತಿಗಳಿರುವ  ವಿವಿಧ ಕೇಂದ್ರ ಗಳನ್ನು ಹಾದು ಹೋಗುತ್ತೇವೆ.

ಕೇಂದ್ರ ಮಂಡಲದ ಏಳು ಜ್ಯೋತಿರ್ಮಯ ವೃತ್ತಗಳನ್ನು ದಾಟಿದ ಮೇಲೆ ’ಅನಂತ’ದ ವಿಶಾಲ ಅಸೀಮ ವಿಸ್ತಾರದಲ್ಲಿ ಪ್ರವೇಶಿಸಿ, ನಾವು ಅದರಲ್ಲಿ ಈಜಾಡಲು ಪ್ರಾರಂಭಿಸುತ್ತೇವೆ. ಇಲ್ಲಿ, ಗುರುವಿನ ಸಹಾಯ ಇನ್ನೂ ಅಗತ್ಯವಿದೆ. ಯಾಕೆಂದರೆ ,ಈಜುವವನ ಬಿರುಸಾದ ಈಜುವ ಕ್ರಿಯೆಯು ಉಂಟು ಮಾಡುವ ಶಕ್ತಿ ತರಂಗಗಳು ಪ್ರಗತಿಗೆ ಅಡ್ಡಿಯಾಗಿ ನಿಲ್ಲುತ್ತವೆ. ಅನುಭವಿಕ ,ಸಮರ್ಥ ಮತ್ತು ಜಾಗರೂಕನಾದ ಗುರು ಮಾತ್ರ ಈ ತೆರೆಗಳನ್ನು ಶಮನಗೊಳಿಸಲಿಕ್ಕೆ ಮತ್ತು ಈಜುವವನಿಗೆ ಲಘುವಾಗಿ ಈಜುವ ಕಲೆಯನ್ನು ಕಲಿಸುವುದಕ್ಕೆ, ಸಹಾಯ ಮಾಡುತ್ತಾನೆ. ತೇಲುವುದು ಎನ್ನುವುದಕ್ಕೆ ಬಹುಶಃ ಸದೃಶವಾದ, ಆದರೂ ತೇಲುವುದು ಎಂದೆನ್ನಲಾಗದ ಈ ಈಜುವಿಕೆಯು  ವಿರೋಧವುಂಟು ಮಾಡುವಂಥ ತೆರೆಗಳನ್ನು ಹುಟ್ಟಿಸುವುದಿಲ್ಲ. ಈ ಲಘುವಾದ ಈಜಿನ ಆನಂದಾನುಭವಕ್ಕೆ ಜಾರುವುದೂ ಪ್ರಗತಿಯನ್ನು ಕುಂಠಿತಗೊಳಿಸುವುದರಿಂದ, ಗುರುವು ಅಭ್ಯಾಸಿಯು ಹಾಗೆ ಜಾರದಂತೆ ರಕ್ಷಿಸಿ, ಅವನನ್ನು ಮುಂದಕ್ಕೊಯ್ಯುತ್ತಾನೆ.

ಈಗ ನಾವು ಸುಪ್ತವಾಗಿರುವ ಕೇಂದ್ರದ ವಲಯವನ್ನು ತಲುಪುತ್ತೇವೆ. ಅದೂ ಕೂಡ ಉಂಗುರದಂತಹ  ಏನೋ ಒಂದು ವಸ್ತುವಿನಿಂದ ಸುತ್ತುವರಿದಿರುವಂತೆ ತೋರುತ್ತದೆ, ಅದೇ ಕೊನೆಯದು. ಪ್ರಯೋಗಕೋಸ್ಕರ ಮತ್ತು ಅಭಿವ್ಯಕ್ತಗೊಳಿಸಲು ಅನುವಾಗುವುದಕ್ಕೆ ನಾನು ಅದರೊಳಕ್ಕೆ ಪ್ರವೇಶಿಸಲು ಒಮ್ಮೆ ಪ್ರಯತ್ನ ಮಾಡಿದೆನು. ನಾನು ಅದರೊಳಗಿನ ಕ್ಷಣ ಮಾತ್ರದ ಇಣುಕು ನೋಟವನ್ನು ನೋಡಲು ಶಕ್ತನಾದೆನೆಂದರೂ, ಥಟ್ಟನೆ, ಒಂದು ಬಲವಾದ  ರಭಸದ ಆಘಾತವು ನನ್ನನ್ನು ಹಿಂದಕ್ಕೆ ತಳ್ಳಿತು. ಇದೇ ಬಹುಶಃ ಮಾನವನಿಗೆ ಸಾಧ್ಯವಾಗಬಹುದಾಧ  ಚರಮ ಸೀಮೆಯೆಂಬ ತೀರ್ಮಾನಕ್ಕೆ ನಾನು ಬಂದೆ ಪ್ರತಿಯೊಬ್ಬನೂ ಅಲ್ಲಿಯವರೆಗೆಗೂ , ಸಾಧ್ಯವಾದರೆ ಅದಕ್ಕೂ ಆಚೆಗೆ ಮುಂದಕ್ಕೆ ಹೋಗಲಿ ಎಂದು ನಾನು ಆಶಿಸುತ್ತೇನೆ. ’ಸ್ಥೂಲ ಸಾರೂಪ್ಯತೆ’ ಎಂದು ನಾನು ಹೇಳಿರುವಂಥದು, ಕೊನೆಯ ಪರಿಮಿತಿಯವರೆಗೂ, ಉತ್ತರೋತ್ತರ ಸೂಕ್ಷ್ಮ ತರವಾಗುತ್ತ ಹೋಗುತ್ತದೆ. ನಾವೀಗ ಕೇಂದ್ರಕ್ಕೆ ನಿಕಟತಮವಾದ ಸ್ಥಾನವನ್ನು ಪಡೆದಂತಾಯಿತು. ಮಾನವನಿಗೆ ಸಾಧ್ಯವಾದ ಅತ್ಯುನ್ನತ ನಿಲುಕು ಅದೇ ಆಗಿದೆ .ಇಲ್ಲಿ ನಾವು ’ಸತ್ಯ’ ಸ್ಥಿತಿಯೇ ಆಗಿರುವುದರೊಂದಿಗೆ ನಿಕಟ ಸಮರಸತೆಯಲ್ಲಿರುತ್ತೇವೆ. ಮಾನವನು, ’ಭೂಮ’  ‘ಚರಮಸ್ಥಿತಿ’  ‘ಪರಮಾತ್ಮ ‘ ಅಥವಾ ’ ಕೈವಲ್ಯ ‘ ಎಂಬುದರ ಸಮೀಪತಮ ಸಂಪರ್ಕದಲ್ಲಿ ಬಂದಾಗ, ತಾನು ಏನಿದ್ದೇನೆ, ಎಲ್ಲಿದ್ದೇನೆ, ಎಂಬುದು ಅವನ ಅರಿವಿಗೆ ಅತೀತವಾಗಿರುತ್ತದೆ. ಕೇಂದ್ರದಲ್ಲಿ ಅಥವಾ ಸರ್ವಶಕ್ತನಲ್ಲಿ ಸಂಪೂರ್ಣ ಲಯ ಹೊಂದುವುದು ಸಾಧ್ಯವಿಲ್ಲವೆನ್ನಬಹುದು; ಏಕೆಂದರೆ ದೇವರಿಗೂ, ಜೀವಾತ್ಮಕ್ಕೂ ನಾಮ ಮಾತ್ರ ಅಂತರವಿರಬೇಕಾದುದು ಅಗತ್ಯ.

ಮಾನವನ ಸಿದ್ಧಿಯ ಸಾಧ್ಯತೆಯ  ವಿಸ್ತಾರ ಇಂತಹುದು. ಸಾಕ್ಷಾತ್ಕಾರ ಪಥದಲ್ಲಿ ಮಹತ್ತಮ ಪ್ರಗತಿಯನ್ನು ಸಾಧಿಸಲು ಬಯಸಿದರೆ, ಆರಂಭದಿಂದಲೂ ಅದರ ಮೇಲೆ  ದೃಷ್ಟಿ ಯನ್ನು ನೆಟ್ಟಿರಬೇಕು. ‌ ಸಂತರಲ್ಲಿ ಯೋಗಿಗಳಲ್ಲಿ ಕೆಲವರಿಗೂ ಕೂಡ ಇದರ ಕಲ್ಪನೆ ಇದ್ದಿರಲಿಕ್ಕಿಲ್ಲವೇನೊ! ಬಹುತೇಕ ಸಂದರ್ಭಗಳಲ್ಲಿ, ಇದ್ದ ಅತಿ ದೂರವೆನ್ನಬಹುದಾದ  ನಿಲುಕು ಎರಡನೆಯ ಅಥವಾ ಮೂರನೆಯ ವೃತ್ತದವರೆಗೆ ಮಾತ್ರ. ಈ ಪ್ರಾರಂಭಿಕ ಹಂತವನ್ನೇ  ಅವರು ಅತಿ ದೊಡ್ಡ ಸ್ಥಿತಿಯೆಂದು ಕೆಲವು ಸಾರೆ ಭಾವಿಸಿದರೆಂಬುದು ದುರ್ದೈವದ  ಸಂಗತಿ. ದೈವ ವಿದ್ಯಾ ಪ್ರವೀಣರೆನಿಸಿಕೊಂಡವರ ಯೋಗ್ಯತೆಯನ್ನು  ನಿರ್ಣಯಿಸಲು ಜನರಿಗೆ ಸಾಧ್ಯವಾಗಲೆಂದು ನಾನು  ಇದನ್ನೆಲ್ಲ  ಹೇಳಿದ್ದೇನಷ್ಟೆ. ಯಾಕೆಂದರೆ, ತಾವು  ಪರಿಪೂರ್ಣತೆ ಪಡೆದವರೆಂದು ಅವರು ಭಾವಿಸುತ್ತಾರೆ. ಮತ್ತು ಅವರ ಬಾಹ್ಯ ಸ್ವರೂಪ ,ಮತ್ತು ಸೊಬಗುಗಳಿಂದಷ್ಟೇ ನಿರ್ಣಯಿಸಿ, ಅಜ್ಞ   ಜನರು ಅವರನ್ನು ಹಾಗೆಂದು ಪರಿಗಣಿಸುತ್ತಾರೆ.

ಪ್ರಾರ್ಥನೆ

ಓ ನಾಥ! ನೀನೇ ಮಾನವ ಜೀವನದ ಗುರಿ

ನಮ್ಮ ಇಚ್ಛೆಗಳು ನಮ್ಮ ಆತ್ಮೋನ್ನತಿಯಲ್ಲಿ ಬಾಧಕಗಳಾಗಿವೆ.

ನೀನೇ ನಮ್ಮ ಏಕಮಾತ್ರ ಸ್ವಾಮಿ ಹಾಗೂ ಇಷ್ಟದೈವ

ನಿನ್ನ ಸಹಾಯವಿಲ್ಲದೆ ನಿನ್ನ ಪ್ರಾಪ್ತಿಯು ಅಸಂಭವ.

ಸಹಜಮಾರ್ಗದ ಹತ್ತು ನಿಯಮಗಳು

  1. ಬೆಳಗು ಮುಂಜಾನೆ ಏಳಿರಿ. ಸಂಧ್ಯೋಪಾಸನೆಯನ್ನು ನಿಯಮಿತ ಸಮಯಕ್ಕೆ ಸೂರ್ಯೋದಯಕ್ಕೆ ಮುಂಚಿತವಾದರೆ ಒಳಿತು,-ಮುಗಿಸಿರಿ. ಪೂಜೆಗಾಗಿ ಪ್ರತ್ಯೇಕ ಸ್ಥಳವನ್ನು ಆಸನವನ್ನೂ ಇರಿಸಿಕೊಳ್ಳಿರಿ.  ಶಾರೀರಿಕ    ಮತ್ತು ಮಾನಸಿಕ ಪವಿತ್ರತೆಯ ಕಡೆಗೆ ವಿಶೇಷ ಲಕ್ಷವಿರಲಿ.
  2. ನಿಮ್ಮ ಪೂಜೆಯನ್ನು ಆತ್ಮೋನ್ನತಿಯ ಪ್ರಾರ್ಥನೆಯೊಂದಿಗೆ ಆರಂಭಿಸಿರಿ. ಹೃದಯವು   ಪ್ರೇಮ   ಭಕ್ತಿ ಗಳಿಂದ  ತುಂಬಿರಲಿ.
  3. ದೇವರಲ್ಲಿ ಪೂರ್ಣ ಸಮರಸವಾಗುವುದೇ ನಿಮ್ಮ ಧ್ಯೇಯವಾಗಿರಲಿ. ಧ್ಯೇಯವು ಪ್ರಾಪ್ತವಾಗುವವರೆಗೆ ನಿಲ್ಲಬೇಡಿರಿ.
  4. ನಿಮ್ಮ ಜೀವನವು  ನಿಸರ್ಗದ ಹಾಗೆ  ಸರಳ ಹಾಗೂ ಸಾಧಾರಣವಾಗಿರಲಿ.
  5. ಸತ್ಯವಂತರಾಗಿರಿ ಕಷ್ಟಗಳು  ನಿಮ್ಮ ಹಿತಕ್ಕಾಗಿಯೇ   ಬಂದ  ದೈವೀ  ಕೃಪೆಯೆಂದು ತಿಳಿದು  ಕೃತಜ್ಞರಾಗಿರಿ.
  6. ಎಲ್ಲರನ್ನೂ ಸಹೋದರರೆಂದು  ತಿಳಿದು  ಹಾಗೆ  ವರ್ತಿಸಿರಿ.
  7. ಯಾರಾದರೂ ಕೇಡು ಮಾಡಿದರೆ ಸೇಡು ಬಗೆಯ ಬೇಡಿರಿ. ಬದಲು ದೈವೀ ಸಂಪತ್ತೆಂದು  ತಿಳಿದು   ಧನ್ಯವಾದಗಳನ್ನರ್ಪಿಸಿರಿ.
  8. ಊಟ ಮಾಡುವಾಗ ದೇವರನ್ನು  ನೆನೆಯುತ್ತ ದೊರೆತದ್ದನ್ನು ಪ್ರಸನ್ನತೆಯಿಂದ  ಸ್ವೀಕರಿಸಿರಿ. ಶುದ್ಧ  ಹಾಗೂ  ಪವಿತ್ರಗಳಿಕೆಯ  ಕಡೆಗೆ  ಲಕ್ಷ್ರವಿರಲಿ.
  9. ಜನರಲ್ಲಿ ಪ್ರೇಮ  ಹಾಗೂ  ಪವಿತ್ರ  ಭಾವನೆಗಳನ್ನು  ಮೂಡಿಸುವ  ಹಾಗೆ. ನಿಮ್ಮ  ಜೀವನವನ್ನುರೂಪಿಸಿಕೊಳ್ಳಿರಿ.
  10. ಮಲಗುವಾಗ ದೇವರು ನಿಮ್ಮ ಎದುರಿನಲ್ಲಿರುವನೆಂದು ತಿಳಿದು ಮಾಡಿದ ಅಪರಾಧಗಳಿಗಾಗಿ ಪಶ್ಚಾತ್ತಾಪ ಪಡುತ್ತ ದೈನ್ಯದಿಂದ ಕ್ಷಮೆ ಬೇಡಿರಿ. ಮುಂದೆ ಎಂದಿಗೂ ಅಂಥ ಅಪರಾಧ ಮಾಡದಂತೆ ನಿರ್ಧರಿಸಿ ಪ್ರಾರ್ಥನೆ ಮಾಡಿರಿ.