ಗುರು ಬಂಧುಗಳಾದ ಶ್ರೀ ರಾಘವೇಂದ್ರ ರಾವ್, ರಾಯಚೂರ, ಅವರು ರಚಿಸಿದ “Call of the Fellow Traveller” ಎಂಬ ಇಂಗ್ಲೀಷ ಗ್ರಂಥವು ೧೯೯೯ ರ ಎಪ್ರಿಲ್ ೩೦ ರಂದು ನಮ್ಮ ಪೂಜ್ಯ ಗುರುಗಳಾದ ಮಹಾತ್ಮಾ ಶ್ರೀ ರಾಮಚಂದ್ರಜೀ ಷಹಜಹಾನಪುರ (ಉತ್ತರ ಪ್ರದೇಶ) ಅವರ ಜನ್ಮ ಶತಮಾನೋತ್ಸವದ ಶುಭಸಂದರ್ಭದಲ್ಲಿ ಧಾರವಾಡದಲ್ಲಿ ಬಿಡುಗಡೆಯಾಯಿತು. ಈ ಗ್ರಂಥದ ಕೆಲವು ಓದುಗರು ಅದರ ಮಹತ್ವ ಹಾಗೂ ಪ್ರಯೋಜನೆಯನ್ನು ಮನಗಂಡು, ಇಂಗ್ಲೀಷ ಬಾರದ ಹಾಗೂ ಇಂಗ್ಲೀಷಿನ ಅಲ್ಪ ಜ್ಞಾನವುಳ್ಳವರಿಗಾಗಿ ಈ ಗ್ರಂಥದ ಕನ್ನಡ ಅನುವಾದವನ್ನು ಅಪೇಕ್ಷಿಸಿದರು. ಕನ್ನಡದ “ಸಹಪಥಿಕನ ಕರೆ” ಎಂಬ ಈ ಗ್ರಂಥವೇ ಅದರ ಫಲಶ್ರುತಿಯಾಗಿದ್ದು, ಈ ಕಾರ್ಯಕ್ಕೆ ನನಗೆ ಅನುಮತಿ ನೀಡಿದ್ದಕ್ಕಾಗಿ ಬಂಧು ಶ್ರೀ ರಾಘವೇಂದ್ರ ರಾವ ಅವರಿಗೆ ನಾನು ಹೃತ್ತೂರ್ವಕ ವಂದನೆ ಸಲ್ಲಿಸುವೆ.
ಮೂಲ ಇಂಗ್ಲಿಷ್ ಗ್ರಂಥದುದ್ದಕ್ಕೂ ಗ್ರಂಥಕರ್ತರು ತಮ್ಮ ಅಪಾರ ಹಾಗೂ ಅಮೂಲ್ಯ ಅನುಭವಗಳನ್ನು ಹೃದಯ ಬಿಚ್ಚಿ ಬಹಳ ಕಳಕಳಿಯಿಂದ ಎಲ್ಲರಿಗೂ ಉಪಯುಕ್ತವಾಗುವಂತೆ ದೃಷ್ಟಾಂತಗಳ ಮೂಲಕ ವ್ಯಕ್ತಗೊಳಿಸಿದ್ದಾರೆ. ಆದರೆ, ಗ್ರಂಥಕರ್ತನ “ಅರಸನಿಂದ ಅರಿಶಿಣ” ವರೆಗಿನ ಜ್ಞಾನಭಂಡಾರ ಇಂಗ್ಲೀಷ್ ಭಾಷೆಯಲ್ಲಿ ಅಸ್ಖಲಿತವಾಗಿ ಹರಿದಿದ್ದು, ಅವರ ಆಧ್ಯಾತ್ಮಿಕ ಅನುಭವಗಳ ವೈವಿಧ್ಯಪೂರ್ಣ ಅಭಿವ್ಯಕ್ತತೆಯ ಸೂಕ್ಷ್ಮಾತಿಸೂಕ್ಷ್ಮಗಳನ್ನು ಕನ್ನಡ ಭಾಷೆಗೆ ಯಥಾವತ್ತಾಗಿ ತರಲು ಅವಶ್ಯಕವಾದ ಜ್ಞಾನವಾಗಲೀ ಭಾಷೆಯ ಪಾಂಡಿತ್ಯವಾಗಲಿ ನನ್ನಲ್ಲಿರಲಿಲ್ಲ. ಆದಾಗ್ಯೂ, ಆಧ್ಯಾತ್ಮಿಕ ಜ್ಞಾನವು ಹೃದಯಕ್ಕೆ ಸಂಬಂಧಿಸಿದ ವಿಷಯ ವಸ್ತುವಾಗಿದ್ದು ಇದರಲ್ಲಿಯ ನನ್ನ ಅಲ್ಪ ಅನುಭವ ಹಾಗೂ ಮೂಲ ಲೇಖಕರ ಸುಯೋಗ್ಯ ತಿದ್ದುಪಡಿಗಳು ಮತ್ತು ಸದ್ಗುರುಗಳ ಕೃಪೆ, ನನ್ನನ್ನು ಕೊನೆಯವರೆಗೂ ಪ್ರೇರೇಪಿಸಿದವು. “ಮತ್ತೆ ಮತ್ತೆ ಓದುವದರಿಂದ ಗ್ರಂಥಗಳು ತಮ್ಮ ರಹಸ್ಯಗಳನ್ನು ಬಿಟ್ಟುಕೊಡುವವು” ಎಂಬ ಪೂಜ್ಯ ಗುರುಗಳ ಉಕ್ತಿಯು ಪ್ರತ್ಯಕ್ಷವಾಗಿ ಅನುಭವಕ್ಕೆ . ಬಂದಿತಲ್ಲದೇ, ಇದೇ ರೀತಿ ಮತ್ತೆ ಮತ್ತೆ ಪ್ರಯತ್ನಿಸಿದ್ದಾದರೆ, ನಮ್ಮ ಅಸ್ತಿತ್ವದ ನೈಜತೆಯೂ ಕರಗತವಾಗುವದೆಂದು ಸಂಪೂರ್ಣ ಮನವರಿಕೆಯಾಯಿತು.
ಈ ಭಾಷಾಂತರ ಕಾರ್ಯದಲ್ಲಿ ಸಲಹೆ ನೀಡಿದ ಗುರುಬಂಧುಗಳಾದ ಗುಲ್ಬರ್ಗಾದ ಡಾ. ಎಸ್. ಬಿ. ಶ್ಯಾಮರಾವ ಹಾಗೂ ಶ್ರೀ ಪ್ರದೀಪ ಪುರಾಣಿಕ ಮತ್ತು ಹಸ್ತಪ್ರತಿ ತಯಾರಿಸಲು ನೆರವಾದ ಧಾರವಾಡದ ದಿ. ಶ್ರೀ ದತ್ತಾತ್ರೇಯ ಬಂಕಾಪುರ ಇವರಿಗೆ ಹಾಗೂ ಈ ಕಾರ್ಯದಲ್ಲಿ ಒಂದಿಲ್ಲೊಂದು ರೀತಿಯಿಂದ ನೆರವಾದ ಎಲ್ಲ ಬಂಧುಗಳಿಗೂ ನನ್ನ ಹೃತ್ತೂರ್ವಕ ವಂದನೆಗಳು.
ನಿರ್ಧಾರಿತ ಸಮಯದಲ್ಲಿ ಗ್ರಂಥವನ್ನು ಪ್ರಕಟಿಸಬೇಕಾದ್ದರಿಂದ ಗ್ರಂಥದಲ್ಲಿ ಕೆಲವು ಕಡೆ ವಾಕ್ಯರಚನೆ ಹಾಗೂ ಶಬ್ದ ವಿನ್ಯಾಸಗಳು ನನಗೆ ತೃಪ್ತಿ ನೀಡಿಲ್ಲ. ಭಾಷಾಂತರದ ಕಾರ್ಯವು ಎಂದಿಗೂ ಪೂರ್ಣಗೊಳ್ಳದ ಪ್ರಯತ್ನವಾಗಿದ್ದು, ಎಲ್ಲಿಯಾದರೂ ಸಂದಿಗ್ಧತೆ ಹಾಗೂ ಅಸ್ಪಷ್ಟ ವಿವರಣೆ ಮುಂತಾದವು ಕಾಣಿಸಿಕೊಂಡಿದ್ದರೆ, ಅವುಗಳ ಪರಿಹಾರಕ್ಕಾಗಿ ಓದುಗರು ಮೂಲ ಗ್ರಂಥ ಅಥವಾ ಗ್ರಂಥಕರ್ತನನ್ನು ಆಶ್ರಯಿಸಬೇಕು.
ಅಂತಿಮವಾಗಿ, ಯಾರ ಪ್ರಯೋಜನಕ್ಕಾಗಿ ಈ ಅನುವಾದವಿದೆಯೋ ಅವರು, ಸಹೃದಯದಿಂದ ಮೆಚ್ಚಿ, ರಸಗ್ರಾಹಿಗಳಾಗಿ ಆಧ್ಯಾತ್ಮಿಕ ಲಾಭ ಪಡೆಯಲೆಂದು ನಾನು ಆಶಿಸುವೆ.
“ಸಹಪಥಿಕನ ಕರೆ” ಈ ಗ್ರಂಥವನ್ನು ಅತ್ಯಂತ ಜಾಗರೂಕತೆಯಿಂದ, ಸಾಧ್ಯವಾದಷ್ಟು ಸುಂದರವಾಗಿ, ಯೋಗ್ಯವಾಗಿ ರೂಪಿಸುವಲ್ಲಿ ನನ್ನೊಡನೆ ಬಹಳಷ್ಟು ಸಮಯ ಕಳೆದು, ಶ್ರಮಪಟ್ಟ, ಹಾಗೂ ಮುದ್ರಣದ ಕಾರ್ಯವನ್ನು ನೈಜ ಅರ್ಥದಲ್ಲಿ ಮಾಡಿಕೊಟ್ಟಿರುವ ಮನೋಹರ ಪ್ರಿಂಟಿಂಗ್ ಪ್ರೆಸ್, ಧಾರವಾಡ ಇದರ ಶ್ರೀ ರವಿ ಆಕಳವಾಡಿಯವರಿಗೆ ಹಾಗೂ ಅವರ ಸಹಯೋಗಿಗಳಿಗೆ ನನ್ನ ಹಾರ್ದಿಕ ವಂದನೆಗಳು.
ಧಾರವಾಡ
9.0-9-3000
ಲಿಂಗರಾಜ ಯ. ಪಾಟೀಲ