ತಮ್ಮ ಮಮತೆಯ ಮಗನ ಮರಣದ ಸಮಯ ಸನ್ನಿಹಿತವಾಗುತ್ತಿರುವ ಭವಿಷ್ಯವಾಣಿಯಿಂದ ಬಾಲಕ ಮಾರ್ಕಂಡೇಯನ ತಂದೆ ತಾಯಿಗಳು ದುಃಖಕ್ಕೀಡಾಗಿದ್ದರು. ಈ ಬಾಲಕನು ಆಗಲೇ ಸರ್ವಶ್ರೇಷ್ಠನಾದ ಒಡೆಯನ ಪೂಜೆಗಾಗಿ ಹೋಗಿದ್ದನು. ಮೃತ್ಯುದೇವತೆ ಬಾಲಕನ ಬಳಿ ಹೋಗಿದ್ದನಾದರೂ, ಪರಮಾತ್ಮನ ಕರುಣೆಯಿಂದ ಆಚ್ಛಾದಿತನಾದ ಆತನನ್ನು ಮುಟ್ಟಲೂ ಸಹ ಆಗಲಿಲ್ಲ. ಮೃತ್ಯು ದೇವತೆ ಬರಿಗೈಯಿಂದ ಹಿಂದಿರುಗಬೇಕಾಯಿತು.

ಮೃತ್ಯುದೇವತೆ ಸತ್ಯವಾನನ ಜೀವನ- ಅಪಹರಿಸಿಯಾಗಿತ್ತು. ಭಕ್ತಿ ಪರಾಯಣೆಯಾದ ಆತನ ಪತ್ನಿ ಸಾವಿತ್ರಿ, ತನ್ನ ಪತಿಯನ್ನು ಹಿಂತಿರುಗಿ ಪಡೆಯುವದಕ್ಕಾಗಿ ಮೃತ್ಯು ದೇವತೆಯನ್ನು ಹಿಂಬಾಲಿಸಿದಳು. ದಾರಿಯಲ್ಲಿಯ ಎಲ್ಲ ಅಪಾಯಗಳನ್ನೂ ಕಷ್ಟಗಳನ್ನೂ ದಿಟ್ಟತನದಿಂದ ಎದುರಿಸಿ. ಅವಳು ಮೃತ್ಯು ದೇವತೆಯನ್ನು ಹಿಂಬಾಲಿಸಿದಳು. ಮೃತ್ಯು ದೇವರು ಅವಳನ್ನು ಅನೇಕ ಸಲ ಅಡ್ಡಿಪಡಿಸಿದಾಗಲೂ ಅವಳು ಕಿವಿಗೊಡಲಿಲ್ಲ. ಅಂತಿಮವಾಗಿ ಬಯಸಿದ ಯಾವುದೇ ವರವನ್ನು ನೀಡಲು ದೇವರು ಒಪ್ಪಿದನು. ತನಗೆ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ದಯಪಾಲಿಸುವಂತೆ ಅವಳು ದೇವರನ್ನು ಒಪ್ಪಿಸಿದಳು. ಅವಳು ದೇವಭಕ್ತನ ಹೆಂಡತಿಯಾದ್ದರಿಂದ, ಅವಳ ಪತಿಗೆ ಭೌತಿಕ ಜೀವನ ಮರಳಿ ಬಂದಿತು.

ಬಾಲಕ ನಚಿಕೇತನು ಮೃತ್ಯು ದೇವತೆಯ ಬಳಿಗೆ ಹೋದನು ಮತ್ತು ಆಹಾರವಿಲ್ಲದೆ ಅವನಿಗಾಗಿ ಮೂರು ದಿನ ಕಾಯ್ದನು. ದೇವನು ಬಾಲಕನ ಬಗ್ಗೆ ಸಂತುಷ್ಟನಾಗಿ ಮೂರು ವರಗಳನ್ನು ದಯಪಾಲಿಸಲು ವಚನವಿತ್ತನು. ಅತ್ಯಂತ ಜಾಣನೂ, ಚತುರನೂ ಆದ ಈ ಬಾಲಕ. ಯಾವುದೇ ಆಮಿಷಕ್ಕೆ ಬಲಿಯಾಗಲಾರದವನಾಗಿದ್ದು, ತನಗೆ ಅಸ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳುವುದೆ ಅಂತಿಮ ವರವಾಗಿ ಬೇಕೆಂದು ಹಾಗೂ ಮರಣದೇವತೆಯ ಹೊರತು ಇಂಥ ಜ್ಞಾನವನ್ನು ನೀಡಲು ಯಾರೂ ಹೆಚ್ಚು ಅರ್ಹರಲ್ಲ ಎಂದು ತಿಳಿಸಿದನು. ಹೀಗೆ ನಚಿಕೇತನು ಮೃತ್ಯುವಿನ ಹೊಸ್ತಿಲನ್ನು ದಾಟುವದಲ್ಲದೇ, ದೇವರ ದಯೆಯಿಂದ ಆತ್ಮಸಾಕ್ಷಾತ್ಕಾರದ ಮೂಲಕ ಅಮೃತತ್ವವನ್ನು ಹೊಂದಿದನು.

ಮೇಲೆ ವಿವರಿಸಿದ ಪ್ರಾಸಂಗಿಕ ಕಥೆಗಳಿಂದ ಭಾರತ ದೇಶದ ತಾತ್ವಿಕ ವಿಚಾರ ಬಹಳಷ್ಟು ಶ್ರೀಮಂತಗೊಂಡಿದೆ. ಉನ್ನತ ಮಟ್ಟದ ರೂಪಕ, ಉತ್ಕೃಷ್ಟ ಪ್ರಣಯ ಹಾಗೂ ಪರಮತತ್ವ ವಿಚಾರ ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಯ ಪ್ರತ್ಯೇಕ ರಂಗವನ್ನು ಪ್ರಭಾವಿತಗೊಳಿಸಿವೆ. ಕಲೆ, ಸಾಹಿತ್ಯ, ಕವನ ಹಾಗೂ ತತ್ವಜ್ಞಾನಗಳು ತಮ್ಮ ಆವಶ್ಯಕ ಸತ್ವವನ್ನು ಇವುಗಳಿಂದ ಯಥೇಷ್ಟವಾಗಿ ಪಡೆದಿವೆ. ಮಾರ್ಕಂಡೇಯ, ಸಾವಿತ್ರಿ ಅಥವಾ ನಚಿಕೇತನ ಹೆಸರನ್ನು ಉಚ್ಚರಿಸಿದ ಮಾತ್ರಕ್ಕೆ ಅನುಭಾವಿಗಳು ಕೂಡಾ ಆನಂದಾತಿರೇಕದಿಂದ ಪರವಶರಾಗುತ್ತಾರೆ.

ಜೀವದ ಮೋಹ ಪ್ರತಿಯೊಬ್ಬ ಮಾನವ ಜೀವಿಯ ಅವಶ್ಯಕ ಗುಣಧರ್ಮವಾಗಿದೆ. ನೈಜ ವ್ಯಕ್ತಿತ್ವದೊಂದಿಗಿನ ವಿಶಿಷ್ಟ ರೂಪಧಾರಣೆಯನ್ನು ಸ್ಥಿರಗೊಳಿಸುವ ವಿಚಾರ ಗೊಂದಲವು. ಜೀವರಾಶಿಗಳಲ್ಲಿ ಮರಣಭಯವನ್ನುಂಟು ಮಾಡುವದು. ಈ ಗೊಂದಲವನ್ನು ನಿರ್ಜೀವ ಭೌತಿಕ ರೂಪಗಳಲ್ಲಿಯೂ ಕಾಣಬಹುದಾಗಿದೆ. ತತ್ಪರಿಣಾಮವಾಗಿ ಆಕಾರಗಳ ಅಳಿವು ನಿರ್ಬಂಧಿತ ಶಕ್ತಿಯನ್ನು ಕ್ರಿಯೆಯಾಗಿ ಪ್ರಕಟಗೊಳಿಸುವದು. ಒಂದು ವೇಳೆ ಹೇಗಾದರೂ ಮಾಡಿ, ಈ ಜೀವದ ವ್ಯಾಮೋಹವನ್ನು, ಅದರ ಮಹತ್ವವನ್ನು ಒಂದು ವೈಯಕ್ತಿಕ ರೂಪದಿಂದ ಅಸ್ತಿತ್ವದ ಏಕತೆಯ ಕಡೆಗೆ, ಸ್ಥಳಾಂತರಿಸುವ ಮೂಲಕ ನೈಜ ಜೀವನದೆಡೆ ಸರಿಯಾಗಿ ನಿರ್ದೇಶಿಸಿದ್ದಾದರೆ, ಮೃತ್ಯುಭಯವು ಒಬ್ಬನ ಜೀವನದಲ್ಲಿ ಮತ್ತೆ ಉಳಿಯಲಾರದು. ಒಬ್ಬ ವ್ಯಕ್ತಿಯ ಆಕಾರಕ್ಕಿರುವ ಎಲ್ಲ ಬೆದರಿಕೆಗಳು ತಮ್ಮ ಮಹತ್ವ ಹಾಗೂ ಅರ್ಥವನ್ನು ಕಳೆದುಕೊಳ್ಳುವವು. ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ ಏತಕ್ಕಾಗಿ ಇಷ್ಟೊಂದು ಆಸಕ್ತನಾಗಿರುತ್ತಾನೆ ? ಪ್ರಾಚೀನ ಕಾಲದ ಋಷಿಗಳು ಪ್ರಜ್ಞೆಯ ವಿವಿಧ ಶಕ್ತಿಗಳನ್ನು ಕಂಡರು ಹಾಗೂ ಅವನ್ನು ದೇವತೆಗಳು ಎಂದು ಕರೆದರು. ಈ ದೇವತೆಗಳು, ಆ ಶಕ್ತಿಗಳ ಛಲ ಪ್ರಾಪ್ತಿಗಾಗಿ ಅಥವಾ ಅವುಗಳನ್ನು ಕಾಪಾಡಿಕೊಂಡು ಹೋಗುವದಕ್ಕಾಗಿ, ತಾವು ಜೀವಿಸುತ್ತಿರುವ ರೀತಿಯಲ್ಲಿಯೇ ಮಾನವರಿಗೆ ಸಹಾಯಮಾಡಲು ಯಾವಾಗಲೂ ಪ್ರಯತ್ನಿಸುವರು. ಈ ದಿಶೆಯಲ್ಲಿ ಮಾನವರು ದೇವತೆಗಳಿಗೆ ಆಹಾರ ಒದಗಿಸಿದರು. ಹಾಗೂ ದೇವತೆಗಳು ಮನುಷ್ಯರಿಗೆ ಆಹಾರ ಒದಗಿಸಿದರು. ಹೀಗೆ ಸ್ವರ್ಗ ಹಾಗೂ ಭೂಮಿ ಒಂದುಗೂಡಿದವು.

ಮಾನವರಿಗೆ ಸಹಾಯ ನೀಡಲು ದೇವತೆಗಳು ಇರುವಂತೆ ರಾಕ್ಷಸರೂ ಇದ್ದು ಅವರು ಜೀವಿಸುವದಕ್ಕಾಗಿ ಅಂಧಃಕಾರಮಯ ಮತ್ತು ನಿಮ್ನ ತರಗತಿಯ ಪ್ರಜ್ಞೆಯನ್ನು ಉಪಯೋಗಿಸುವರು ಮತ್ತು ಮಾನವರು ನೀಡುವ ತಮ್ಮ ಪಾಲಿನ ಆಹಾರಕ್ಕಾಗಿ ನಿರಂತರವಾಗಿ ಬೇಡುತ್ತಿರುತ್ತಾರೆ. ದೇವತೆಗಳು ಹಾಗೂ ದಾನವರು ನಿಜವಾಗಲೂ ರಕ್ತಸಂಬಂಧದ ಬಂಧುಗಳಾಗಿದ್ದು, ಒಂದೇ ಪ್ರಜ್ಞೆಯ ಪರಸ್ಪರ ವಿರುದ್ಧ ಬಗೆಯ ಶಕ್ತಿಗಳಾಗಿವೆ.
ದೇವತೆಗಳು ಹಾಗೂ ದಾನವರು ಅಂಜಿಕೆಯಿಂದ ಮುಕ್ತರಾಗಿಲ್ಲವೆಂದು ಪ್ರಾಚೀನ ಋಷಿಗಳು ಕಂಡುಕೊಂಡರು. ತಮ್ಮ ಭೌತಿಕ ಅಸ್ತಿತ್ವದ ಅವಧಿ ಮುಗಿದನಂತರ, ಮನುಷ್ಯರು ದೇವತೆಗಳ ಲೋಕದಲ್ಲಾಗಲೀ
ದಾನವರ ಲೋಕದಲ್ಲಾಗಲೀ ಯಾವದಾದರೂ ಒಂದರಲ್ಲಿ ಪ್ರವೇಶಿಸುತ್ತಾರೆ. ದೇವ ಲೋಕವನ್ನು ಬಯಸುವದು ಮನುಷ್ಯ ಮಾತ್ರರಿಗೆ ಸ್ವಾಭಾವಿಕವಾಗಿದೆ. ಹಿಂದಿನ ಕಾಲದ ಋಷಿಗಳಿಗೆ ದೇವ ಲೋಕವು ಅಂತಿಮ ವಾಸಸ್ಥಾನವಲ್ಲ ಎಂಬುದು ದೀರ್ಘ ಚಿಂತನೆಯ ಮೂಲಕ ಸ್ಪಷ್ಟವಾಗಿ ತಿಳಿಯಿತು. ಅದರಿಂದಾಗಿ, ಅಸ್ತಿತ್ವದ ಇನ್ನೂ ಉನ್ನತ ವಲಯಗಳ ಬಗ್ಗೆ ಅವರು ಸೂಚಿಸಿದರು. ಹಾಗೂ ಪ್ರಕಾಶಮಯ ಲೋಕಗಳನ್ನು ದಾಟುತ್ತ ಅಂತಿಮ ಮುಕ್ತಿಯನ್ನು ಪಡೆಯುವ ಪದ್ಧತಿಗಳ ಬಗ್ಗೆಯೂ ಸೂಚಿಸಿದರು. ಅದಕ್ಕಾಗಿ ಪ್ರಪ್ರಥಮ ಕರಾರು ಏನೆಂದರೆ, ಅದರ ಪ್ರಾಪ್ತಿಗಾಗಿ ತೀವ್ರ ಹಂಬಲ ಹೊಂದುವದು ಹಾಗೂ ಪ್ರತಿಯೊಂದು ಆಮಿಷ ಅಥವಾ ಆಕರ್ಷಣೆಯಿಂದ ಮುಕ್ತರಾಗುವದು.

ಒಬ್ಬನು ಅಸುರೀ ಜಗತ್ತನ್ನು ಎದುರಿಸಬೇಕು ಮತ್ತು ಅದನ್ನು ನಿಸ್ಸಂದೇಹವಾಗಿ ಗೆಲ್ಲಬೇಕು. ಕತ್ತಲುಮಯ ಜಗತ್ತಿನ ಜೀವಿಗಳು ಸ್ವಭಾವತಃ ಎಲ್ಲ ಬಗೆಯ ಉತ್ತಮವಾದುದನ್ನು ಹಾಗೂ ಪ್ರಕಾಶಮಯವಾದುದನ್ನು ನಾಶಗೊಳಿಸುವರಾಗಿದ್ದು, ಅವರು ಸಾಧಕರನ್ನು ಭಯಗೊಳಿಸುವರು, ಬೆದರಿಸುವರು, ಹಾಗೂ ಅವರ ಮೇಲೆ ಆಕ್ರಮಣ ಕೂಡ ಮಾಡುವರು. ಯಾರು ತಮ್ಮ ಗುರಿಯನ್ನು ಸೇರಿ ತಮ್ಮ ಅನುಚರರಿಗೆ ಸಹಾಯಮಾಡುವದಕ್ಕಾಗಿ ಹಾಗೂ ತನ್ನ ಪ್ರೀತಿ ಪಾತ್ರರಿಗಾಗಿ ಭೌತಿಕ ರೂಪದಲ್ಲಿ ಉಳಿದಿರುವರೋ ಅಂಥವರ ಮೇಲೆ ದಾಳಿಮಾಡಲು ಸಹ ಅವರು ಹಿಂಜರಿಯುವದಿಲ್ಲ. ಆದರೆ, ಇಂಥ ಪ್ರಸಂಗಗಳಲ್ಲಿ ಆ ಅಸುರರು ವಿನಾಶ ಹೊಂದುವರು. ಆದಾಗ್ಯೂ, ಶರೀರಕ್ಕೆ ಭೌತಿಕ ರೂಪದಲ್ಲಿ ಅಲ್ಪ ನೋವು ಉಂಟಾಗುವದು ಹಾಗೂ ಕೇವಲ ತೀವ್ರ ಪ್ರೇಮ ಹಾಗೂ ಪ್ರಾರ್ಥನೆಯ ಶಕ್ತಿಯಿಂದ ಈ ನೋವಿನ ಚಿಕಿತ್ಸೆ ಮಾಡಬಹುದು.

ಈ ಭೌತಿಕ ಶರೀರವನ್ನು ಅಮರಗೊಳಿಸುವದಕ್ಕೆ ಪ್ರಯತ್ನಿಸುವ ವಿಚಾರ ಭಾರತೀಯ ವಿಚಾರಧಾರೆಗೆ ಪರಕೀಯವಾಗಿದ್ದು, ಅದು ಹೇಗೋ ನಮ್ಮಲ್ಲಿಯೂ ಹರಿದುಬಂದು ಕೆಲವು ಉತ್ತಮ ಯೋಗಿಗಳಿಗೆ ಕೂಡ ದಾರಿತಪ್ಪಿಸಿದೆ. ಪ್ರತ್ಯೇಕ ಸ್ವರೂಪದ ಉಳಿವಿಗೆ ಅವಕಾಶವಾಗದಂತೆ, ಜೀವನ ಹಾಗೂ ಸಮಸ್ತ ಪ್ರಪಂಚವೆನ್ನುವದು ಒಂದು ಸಕ್ರಿಯ ಸಮಗ್ರತೆಯಾಗಿದೆ ಎಂದು ಪ್ರಾಚೀನ ಭಾರತೀಯ ತತ್ತ್ವಜ್ಞರ ಮೂಲಭೂತವಾದ ನಂಬಿಕೆ ಹಾಗೂ ಪ್ರಾಚೀನ ಋಷಿಗಳ ಅನುಭವದ ಸುಸ್ಪಷ್ಟ ಸಂಗತಿಯೂ ಆಗಿದೆಯೆಂಬುದನ್ನು, ಭಾರತೀಯ ಜೀವನ ಪದ್ದತಿಯಿಂದ ಪ್ರಮಾಣಿಸಿಕೊಳ್ಳಬಹುದು. ತ್ಯಾಗಮನೋಭಾವ ಹಾಗೂ ಐಹಿಕ ಅಥವಾ ಸ್ವರ್ಗಿಯ ಕಾಯಗಳ ಬಗ್ಗೆ ಆಂತರಿಕ ಅನಾಸಕ್ತಿ, ಇವು ಭಾರತೀಯ ಸಂಸ್ಕೃತಿಯ ಪ್ರಧಾನ ಅಂಶಗಳಾಗಿದ್ದವು. ನಮ್ಮ ಶಾಸ್ತ್ರಗಳಲ್ಲಿ ಹಲವಾರು ಸಲ ಪ್ರಸ್ತಾಪಿಸಲ್ಪಟ್ಟಿರುವ ‘ಅಮರತ್ವ ‘ವೆನ್ನುವದು, ದೈವೀಕೃಪೆಯ ಪ್ರಾಣಾಹುತಿಯ ಮೂಲಕ ಮಾತ್ರ ಲಭ್ಯವಿರುವದಾಗಿದ್ದು ಎಲ್ಲ ಬಂಧನಗಳಿಂದ ಸಂಪೂರ್ಣ ಮುಕ್ತಗೊಳಿಸುವ ಆತ್ಮಸಾಕ್ಷಾತ್ಕಾರದಿಂದ ಪುನಃ ಪಡೆಯುವದಾಗಿದೆ.

ಈ ಪ್ರಾಣಾಹುತಿ ಪದ್ಧತಿಯನ್ನು ಶೋಧಿಸಬೇಕಾದುದು ಒಬ್ಬ ಸಾಧಕನಿಗೆ ಮತ್ತೊಂದು ಮಹತ್ವದ ವಿಷಯ ಎಂದು ಹಿಂದಿನ ಕಾಲದ ಸಂತರು ಒತ್ತಿ ಹೇಳಿದ್ದಾರೆ. ಮಹಾನ್ ಯೋಗಿಗಳು, ತಮ್ಮ ಏಕಾಂತದಲ್ಲಿ ಇದನ್ನು ಅನುಷ್ಠಾನದಲ್ಲಿ ತಂದರು ಎಂದು ಕಾಣಿಸುತ್ತದೆ. ಕೇವಲ ಸಹಜ ಮಾರ್ಗ ಪದ್ಧತಿಯಲ್ಲಿ ಇದನ್ನು (ಪ್ರಾಣಾಹುತಿ ತಂತ್ರ) ಬಳಕೆಗೆ ತಂದು, ಪ್ರತಿಯೊಬ್ಬ ಪ್ರಾಮಾಣಿಕ ಸಾಧಕನಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಈಗ ಯಾರು ಬೇಕಾದರೂ ಯೌಗಿಕ ಪ್ರಾಣಾಹುತಿಯ ಕಲೆಯಲ್ಲಿ ಪರಿಣಿತನಾದವನನ್ನು ಸಂಪರ್ಕಿಸಬಲ್ಲನಾದರೆ ಸಾವಿತ್ರಿಯ ಸ್ಥಿತಿಯನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿಯಾಗಲೀ ಅಥವಾ ಒಬ್ಬ ನಚಿಕೇತನ ಅಥವಾ ಮಾರ್ಕಂಡೇಯನ ಸ್ಥಿತಿಯನ್ನು ಪಡೆದುಕೊಳ್ಳುವ ತನ್ನ ಇಚ್ಛೆಗಳನ್ನು ಸಫಲಗೊಳಿಸಬಹುದು.

(ಸಹಜ ಮಾರ್ಗ ಪತ್ರಿಕೆ, ಜುಲೈ ೧೯೭೦)