ಶ್ರೀ ರಾಮಚಂದ್ರ ಮಿಶನ್ ಸೇರಿದ ಸ್ವಲ್ಪ ಸಮಯದ ನಂತರ ಸಮಾಜದ ನನ್ನ ಚಿಕ್ಕ ವಲಯದಲ್ಲಿ ನಾನೊಂದು ವಿಶಿಷ್ಟ ಸನ್ನಿವೇಶವನ್ನು ಎದುರಿಸಬೇಕಾಯಿತು. ನಮ್ಮ ಎಲ್ಲ ಸಂಗಡಿಗರಲ್ಲಿ, ನಾನು ಮಾತ್ರ ಒಂದು ಆಧ್ಯಾತ್ಮಿಕ ಸಂಸ್ಥೆಯನ್ನು ಸೇರಿದೆ ಎಂದು ಅರಿತು, ನನ್ನ ಕೆಲವು ಮಿತ್ರರು ಆಶ್ಚರ್ಯ ಚಕಿತರಾದರು. ಒಂದಲ್ಲ ಒಂದು ಸಲ ನಾನು ಇಂಥ ಒಂದು ದುಡುಕಿನ ಕೆಲಸವನ್ನು ಮಾಡುವೆನೆಂದು ಈ ವರೆಗೂ ಆಲೋಚಿಸುತ್ತ ಇನ್ನೂ ಕೆಲವರು ಅದರ ಬಗೆಗೆ ಗುಣಗುಣಿಸುತ್ತಿದ್ದರು. ಅವರಲ್ಲಿ ಬಹಳಷ್ಟು ಜನರು ಧರ್ಮದ ಬಗ್ಗೆ ತೆಗಳಿಕೆ ಅಥವಾ ತಿರಸ್ಕಾರ ಹಾಗೂ ನನ್ನ ಬಗ್ಗೆ ಅನುಕಂಪ ಹೊಂದಿದ್ದರು. ನನ್ನ ಎಲ್ಲ ಮಿತ್ರರು ಕಲೆ, ವಿಜ್ಞಾನ, ತಾಂತ್ರಿಕ ಅಥವಾ ಕಾನೂನು ವಿಷಯಗಳಲ್ಲಿ ವಿಶ್ವವಿದ್ಯಾಲಯದ ಪದವೀಧರರೆಂಬುದು ನಿಜವಾಗಿತ್ತು. ಕೆಲವರು ನೌಕರಿಯಲ್ಲಿದ್ದವರು ಹಾಗೂ ಕೆಲವರು ಉತ್ತಮ ಅವಕಾಶಗಳಿಗಾಗಿ ಕಾಯುವವರು ಆಗಿದ್ದರು. ನಾನು ತಾಂತ್ರಿಕ ವಿಜ್ಞಾನದಲ್ಲಿ ಶಿಕ್ಷಕನಾಗಿ ಸೇವೆಗೆ ಸೇರಿದ್ದೆನು.
ವರುಷಗಳು ಗತಿಸಿದವು. ಗುರುಗಳು, ಆಧ್ಯಾತ್ಮದಲ್ಲಿ ನನ್ನ ವಿಧಿಯುಕ್ತವಾದ ತರಬೇತಿ ಬಹಳಷ್ಟು ಮುಗಿದಂತಾಯಿತು, ಅಂತ ಘೋಷಿಸಿದರು. ನನ್ನ ತೆಗಳಿಕೆ ಅಥವಾ ತಿರಸ್ಕಾರದಿಂದ ಆಗಿರದೇ, ಅದರದೇ ಆದ ಗಂಭೀರತೆಯಿಂದಾಗಿ ಪೂಜೆ ಅನ್ನುವದು ನನ್ನಿಂದ ಕಳಚಿಹೋಯಿತು. ನನಗೆ ಆಗಾಗ್ಯೆ ನನ್ನ ಹಳೆಯ ಆತ್ಮೀಯ ಗೆಳೆಯರನ್ನು ಕಾಣಬೇಕಾಗುತ್ತಿತ್ತು. ಅವರೆಲ್ಲರೂ ಈಗ ಮೊದಲಿನ ನಿಶ್ಚಿಂತ ಭಾವನೆಯ ಹಾಗೂ ಸ್ವತಂತ್ರ ವಿಚಾರದ ತರುಣ ಪದವೀಧರರಾಗಿರಲಿಲ್ಲ. ಅವರ ಈಗಿನ ಧರ್ಮಪರಾಯಣತೆಯನ್ನು ತಿರಸ್ಕಾರ ಅಥವಾ ತೆಗಳಿಕೆ ಅಥವಾ ಕರುಣಾಭಾವದಿಂದ ಅಲ್ಲದಿದ್ದರೂ, ಕೇವಲ ಅವರ ಆಧ್ಯಾತ್ಮಿಕ ಅಭ್ಯುದಯದ ದೃಷ್ಟಿಯಿಂದ ಅವರನ್ನು ಕೆಣಕುವದು ಈಗ ನನ್ನ ಸರದಿಯಾಗಿತ್ತು.
ಇದೆಲ್ಲ ಹೇಗೆ ಆಯಿತು ? ಎಂಥ ತೀವ್ರಗತಿಯಿಂದ ಈ ಎಲ್ಲ ಪರಿವರ್ತನೆ ಉಂಟಾಯಿತು ? ನನ್ನ ಜೀವನ ವಿಧಾನವನ್ನು ಅವರದರೊಂದಿಗೆ ನಾನು ಹೋಲಿಸಬಹುದೇ ? ಅದರ ಅರ್ಥ ಅವರಿಗಿಂತ ನಾನು ಒಂದು ಇಂಚು ದೊಡ್ಡವನೆಂದು ಆಗುವದೇ ? ಇಲ್ಲ, ಎಂದಿಗೂ ಇಲ್ಲ. ನಾನು ಅವರನ್ನು ಈ ಮೊದಲು ಪ್ರೀತಿಸಿದ್ದಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿ ಈಗಲೂ ಪ್ರೀತಿಸುವೆ. ತಾವು ಆರಾಧಿಸುವ ದೇವತೆಗಳ ಬಗೆಗೆ, ತಮ್ಮ ಇಚ್ಛೆಗಳನ್ನು ಸಫಲಗೊಳಿಸಿದ ದೇವರ ಬಗೆಗೆ, ತಮ್ಮ ಅಪೇಕ್ಷೆಗಳ ಬಗೆಗೆ, ತಮ್ಮ ಅಂಜಿಕೆಗಳ ಬಗೆಗೆ ನನ್ನ ಮಿತ್ರರು ಹೇಳಿದಾಗ, ನಾನು ಬಹಳಷ್ಟು ಸಹಾನುಭೂತಿಯಿಂದ ಕೇಳುತ್ತೇನೆ. ದೇವರುಗಳು ಮತ್ತು ಧರ್ಮಗಳು, ಜಪಗಳು ಹಾಗೂ ಭಜನೆಗಳು, ಗುರುಗಳು ಹಾಗೂ ಭಗವಾನರ ಬಗ್ಗೆ ಬಹಳಷ್ಟು ಮುಕ್ತಮನಸ್ಸಿನಿಂದ ನಾನು ಸ್ಪಷ್ಟವಾಗಿ ಅವರ ಸಂದೇಹಗಳಿಗೆ ಉತ್ತರವಾಗಿ ಮಾತನಾಡಿದಾಗ, ಅವರು ಆಶ್ಚರ್ಯಚಕಿತರಾಗುತ್ತಾರೆ. ಇಂಥ ಪರಿಸ್ಥಿತಿಯ ನಿರ್ಮಾಣಕ್ಕೆ ಏನು ಕಾರಣವಾಯಿತು ?
ಧರ್ಮ ಹಾಗೂ ಧಾರ್ಮಿಕ ಪದ್ಧತಿಯ ಬಗೆಗೆ ಆಧುನಿಕ ಶಿಕ್ಷಣವು, ಬುದ್ದಿವಂತ ಹಾಗೂ ಪ್ರಜ್ಞಾವಂತ ಜನರ ಶ್ರದ್ಧೆಯನ್ನು ವಿಚಲಿತಗೊಳಿಸಿದ್ದು, ಅದಕ್ಕೆ ಪರ್ಯಾಯವಾಗಿ, ಆಧ್ಯಾತ್ಮದ ಉಚ್ಚ ಮಟ್ಟದ ಕಾರ್ಯಶಕ್ತಿಯನ್ನು ಒದಗಿಸಲಿಲ್ಲ. ಮನಸ್ಸು ಬಹಳಷ್ಟು ಅನಿಯಂತ್ರಿತವಾಗಿ ಉಳಿಯುವದು. ಕಾಲಕ್ರಮದಲ್ಲಿ ಇಚ್ಛೆಗಳು, ಆವಶ್ಯಕತೆಗಳು ಹಾಗೂ ನಿಸರ್ಗದ ಒದೆತಗಳು ಅವನ್ನೆಲ್ಲ ಮರೆಮಾಡುವವು. ಅವರ ಬುದ್ದಿ ಕುಂಠಿತಗೊಳ್ಳುವದು ಹಾಗೂ ಅಂಧಃಕಾರ ಅವರ ಅಸ್ತಿತ್ವದಲ್ಲಿ ಸೇರಿಕೊಳ್ಳುವದು. ತತ್ಪಲವಾದ ಕಲಹ ಹಾಗೂ ಹೋರಾಟಗಳು ನೆರವಿಗಾಗಿ ದೇವರ ಹಾಗೂ ಧರ್ಮದ ಮೊರೆ ಹೋಗಲು ಅವರನ್ನು ಒತ್ತಾಯಿಸುವವು. ದೇವರ ಹಾಗೂ ಧರ್ಮದ ವ್ಯಾಪಾರಿಗಳು ಅವರಿಗೆ ನೆರವಾಗಲು ಸದಾಸಿದ್ಧರಿರುವರು. ವಿಭಿನ್ನ ರೂಪಗಳಲ್ಲಿ ಸ್ವಾರ್ಥಪರ ಬಳಕೆ ಮುಂದುವರಿಯುವದು.
ಎಲ್ಲ ತೊಂದರೆಯು, ತಪ್ಪು ವಿಧಾನಗಳಿಂದ, ತಪ್ಪು ಮಾರ್ಗದರ್ಶನದಿಂದ. ಹಾಗೂ ದೋಷಪೂರಿತ ಧ್ಯೇಯಗಳಿಂದ ಉಂಟಾಗುವದು. ಗುರುವನ್ನು ಕಂಡನಂತರ ಈ ಮೂರನ್ನು ನಾನು ಅವುಗಳ ನೈಜ ರೂಪದಲ್ಲಿ ಪೂರ್ಣವಾಗಿ ಗ್ರಹಿಸಿದೆ. ಈ ಗುರಿಯನ್ನು ಸರಿಯಾಗಿ ನಿರ್ದೇಶಿಸಲಾಯಿತು. ಸಹಜಮಾರ್ಗ ಎಂಬ ಹೆಸರಿನ ಪರಿಪೂರ್ಣ ಗುರುವಿನ ಉತ್ಕೃಷ್ಟ ಹಾಗೂ ಪರಿಣಾಮಕಾರಿಯಾದ ಏಕೈಕ ಪದ್ಧತಿಯನ್ನು ನನಗೆ ನೀಡಲಾಯಿತು. “ಪ್ರಾಣಾಹುತಿ” ಎಂಬ ವಿಶೇಷ ಪದ್ದತಿಯ ಮೂಲಕ ಸಮಸ್ತ ತರಬೇತಿ ಪೂರ್ಣಗೊಂಡಿತು. ಅಂಧಃಕಾರವೆಲ್ಲವೂ ಕಳೆಯಿತು. ಸ್ಥೂಲತೆಯೆಲ್ಲವೂ ಕರಗಿ ಹರಿದು ಹೋಯಿತು ಹಾಗೂ ಗುರುವಿನಿಂದಾಗಿ ಸಮಗ್ರ ಜೀವನವು ಉದಾತ್ತಗೊಂಡಿತು.
ಗುರುಕೃಪೆಯಿಂದಾಗಿ ನನ್ನ ಎಲ್ಲ ಮಿತ್ರರು ಈ ಅಮೃತವನ್ನು ಸವಿಯಲಿ ಹಾಗೂ ತಮ್ಮ ಮೂಲ ಸ್ಥಿತಿಯನ್ನು ಮತ್ತೆ ಪಡೆದುಕೊಳ್ಳಲಿ.
(ಸಹಜಮಾರ್ಗ ಪತ್ರಿಕೆ, ಜನೇವರಿ ೧೯೬೦)