ಈಗ ನಾವು ಬ್ರಹ್ಮಾಂಡಮಂಡಲದ ಕಡೆಗೆ ಹೆಜ್ಜೆಯನ್ನಿಡುವೆವು. ನಮ್ಮ ಓಟವು ಈಗ ಆರನೆಯ ಗ್ರಂಥಿಯನ್ನು ತಲುಪಿತು. ಇಲ್ಲಿಂದಲೇ ಬ್ರಹ್ಮಾಂಡವು ಆರಂಭವಾಗುವುದು. ಇನ್ನೊಂದು ಮಾತನ್ನು ನಾನು ಬರೆದೇಬಿಡುವೆನು: ಪಿಂಡದೇಶದ ಈ ಅವಸ್ಥೆಯನ್ನು ತಲುಪಿದ ಅಭ್ಯಾಸಿಯು ಬ್ರಹ್ಮಾಂಡಮಂಡಲದಲ್ಲಿ ಕಾಲಿಟ್ಟಿದ್ದರೆ ಆತನು ಈ ಜಗತ್ತಿನಲ್ಲಿ ಪುನಃ ಜನಿಸುವುದಿಲ್ಲ. ಇದರ ಜ್ಞಾನದಿಂದ ಇಷ್ಟೇ ಲಾಭವಿದೆ. ಆರನೆಯ ಗ್ರಂಥಿಗೆ ಬರುತ್ತಲೇ ದಿವ್ಯ ಪ್ರಕಾಶದ ರೂಪವು ಬದಲಾಗುವುದು. ಮತ್ತು ಅದರಲ್ಲಿ ಪದಾರ್ಥದ ಪ್ರಭಾವ ಕಡಮೆ ಯಾಗುವುದು, ಇನ್ನೊಂದು ಮಾತು: ನಾವು ಆರನೆಯ ಗ್ರಂಥಿಯಲ್ಲಿ ಸ್ವಲ್ಪ ತಡೆದು ಮೊದಲಿನಂತೆ ಮುಂದುವರಿಯ ಬೇಕಾಗುವುದು, ಒಬ್ಬ ಒಳ್ಳೆಯ ಗುರು ದೊರೆತರೆ ಅತನು ಈ ಗ್ರಂಥಿಯಲ್ಲಿ ಬಹಳಕಾಲ ನಿಲ್ಲಗೊಡುವುದಿಲ್ಲ. ಅಲ್ಲಿಯ ದಶೆಯನ್ನು ಹುಟ್ಟಿಸಿ ಅಭ್ಯಾಸಿಯನ್ನು ಏಳನೆಯ ಗ್ರಂಥಿಗೆ ಒಯ್ದು ಬಿಡುವನು. ತಮ್ಮ ಪ್ರಯತ್ನದಿಂದ ಸಾಗುವವರು ಈ ಆರನೆಯ ಗ್ರಂಥಿಯ ಮೇಲೂ ಲಯ ಮತ್ತು ಸಾರೂಪ್ಯತೆಯನ್ನು ತಾವಾಗಿಯೇ ಪಡೆಯುವರು. ಪರಿಣಾಮವೇನಾಗುವುದೆಂದರೆ, ಅಲ್ಲಿಯ ಚಮತ್ಕಾರಗಳ ಹಾಗೂ ಪ್ರಕಾಶದ ಆಕರ್ಷಣೆಯನ್ನು ಮೀರಿ ಅಭ್ಯಾಸಿಯ ಮನಸ್ಸು ಏಳನೆಯ ಗ್ರಂಥಿಗೆ ಹೋಗಬಯಸುವುದಿಲ್ಲ. ಈ ಆರನೆಯ ಗ್ರಂಥಿಯಲ್ಲಿ ಸಾಕಷ್ಟು ಪ್ರಕಾಶವಿದೆ; ಸ್ವಲ್ಪ ಹೊಗೆ ಬಣ್ಣದ ಅನುಭವವೂ ಬರುವುದು, ಆದರೆ ನಾವು ಈ ಗ್ರಂಥಿಯ ಮೇಲಿನ ಸಾರೂಪ್ಯತೆಯ ದಶೆಯನ್ನು ಪಡೆದಾಗಲೇ ಹೊಗೆಬಣ್ಣದ ಆಭಾಸವು ಇಲ್ಲದಂತಾಗುವುದು, ಪ್ರಕಾಶವೇ ಎಲ್ಲೆಡೆಗಳೂ ಕಾಣತೊಡಗುವುದು. ವಾಸ್ತವವಾಗಿ ಶಕ್ತಿಯ ವಿತರಣ ಮಾಡುವ ಸ್ಥಾನವೇ ಇದಾಗಿದೆ. ಮೇಲಿನಿಂದ ಬಂದ ಶಕ್ತಿಯನ್ನು ಪಿಂಡದೊಳಗೆ ಮುಟ್ಟಿಸುವುದೂ ಇದೇ.